ಈ ವಾರ ನಿಮ್ಮೆದುರು ಅನಿವಾಸಿಗಳಿಗೆ ಈಗಾಗಲೇ ಪರಿಚಯವಿರುವ ಇಬ್ಬರು ಕವಿಗಳ ಕವನಗಳು. ಇಬ್ಬರೂ ಪ್ರತಿಭಾವಂತರು, ಭಾವುಕರು. ಇವರ ಹೆಚ್ಚಿನ ಪರಿಚಯ ಅನಿವಾಸಿ ವೇದಿಕೆಯ ಓದುಗರಿಗೆ ಬೇಕಿಲ್ಲ. ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆಯಾಗಿ ಸುಮಾರು ನಾಲ್ಕು ವಾರಗಳಾದವು. ಯಾವುದೇ ದೃಷ್ಟಿಕೋನದಿಂದ ನೋಡಿದರೂ ಇದೊಂದು ಐತಿಹಾಸಿಕ ಘಟನೆ. ಅನಿವಾಸಿಯಲ್ಲಿ ಈ ಬಗ್ಗೆ ಯಾವುದೇ ಕವನ, ಲೇಖನ ಪ್ರಕಟಣೆಯಾಗಿಲ್ಲ. ಗುರುಪ್ರಸಾದ್ ಪಟ್ವಾಲ್ ನನಗೆ ಖಾಸಗಿಯಾಗಿ ಈ ವಿಷಯದ ಬಗ್ಗೆ ತಾವು ಬರೆದ ಕವನ ಹಂಚಿಕೊಂಡಿದ್ದರು. ಇದನ್ನು ಯಾವುದೇ ವಿಚಾರಧಾರೆಯ ದೃಷ್ಟಿಯಿಂದ ನೋಡದೆ, ಆಧ್ಯಾತ್ಮಿಕವಾಗಿ ಅವಲೋಕಿಸಿದಾಗ ಕವಿಯ ಒಳಮನಸ್ಸನ್ನು ಹೊಕ್ಕಲು ಸಾಧ್ಯವೆಂದೆಣಿಸುತ್ತೇನೆ. ಯಕ್ಷಗಾನ ಕಲಾವಿದರಾದ ಗುರು ಅವರ ಕವನದಲ್ಲೂ ನಾಟ್ಯದಂತೆ ಭಾವ, ಸಂಕೇತಗಳು, ಯಕ್ಷಗಾನದ ಪದಗಳಲ್ಲಿ ಬಳಸುವ ಶಬ್ದಗಳು ಪ್ರತಿಫಲಿಸುವುದು ವಿಶೇಷ.
ಭಣಭಣವಾಗಿರುವ ಮರ-ಗಿಡಗಳಲ್ಲಿ ಒಂದೆರಡು ವಾರಗಳಿಂದ ಏನೋ ಚೇತರಿಕೆ ಕಾಣುತ್ತಿದೆ. ಹೆಪ್ಪುಗಟ್ಟಿದ ಭೂಮಿಯೊಡೆದು ಕ್ರೋಕಸ್ ಹೂವುಗಳು ಅರಳುತ್ತಾ ಓಕುಳಿ ಆಟವನ್ನು ಪ್ರಾರಂಭಿಸಿವೆ. ಚಳಿಗಾಲದ ಖಿನ್ನತೆಯನ್ನು ನೀಗಲು ಮೃದು ಮನದ, ಬೆಚ್ಚನೆ ಹಿತ ಕೊಡುವ ಜೀವಗಳೊಡನೆ ಸಂಭಾಷಣೆಯ ಅವಕಾಶ ಅಗತ್ಯವಲ್ಲವೇ? ವಿಜಯನರಸಿಂಹ ತಮ್ಮ ಕವನದಲ್ಲಿ ಅರಳಿರುವ ಪುಷ್ಪಗಳೊಡನೆ ಸಂವಾದಿಸಿ, ಅದೆಷ್ಟೋ ವಿಷಯಗಳನ್ನು ಹಂಚಿ, ಮನ ಹಗುರ ಮಾಡಿಕೊಳ್ಳುವ ತವಕವನ್ನು ಮೌನವಾಗಿಯೇ ತೆರೆದಿಟ್ಟಿದ್ದಾರೆ.

ರಾಮ ರಾಮ
ಈ ಭವ್ಯ ರಾಮ ಮಂದಿರ
ಬೇಕೆಂದನೆ ಆ ದಿವ್ಯ ರಾಮ ಚಂದಿರ
ಮನೆ ಮನೆಯಲ್ಲೂ ನಾನಿರುವೆನೆಂದ
ಮನ ಮನದಲ್ಲೂ ನಾ ನಗುವೆನೆಂದ
ಮನೆಗೊಂದು ಇಟ್ಟಿಗೆ ಕಂಭ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ
ಅಮ್ಮ ನೊಂದ ಮಾತಿಗೆ ರಾಜ್ಯ ಕೊಟ್ಟ
ಅಗಸನೆಂದ ನೀತಿಗೆ ಹೆಂಡತಿ ಬಿಟ್ಟ
ರಹೀಮನಿಗೆಂದು ಬಿಟ್ಟ ಸ್ಥಾನ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ
ಕಾವಿ ಕೇಸರಿ ದರ್ಪದಿ ಆವನೆಂದೂ ಉಡಲಿಲ್ಲ
ಭಸ್ಮ ಕುಂಕುಮಾದಿ ಹಣೆಯಲ್ಲಿ ಧರಿಸಿಲ್ಲ
ಈ ವೇಷ ಈ ರೋಷ ಅವ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ
- ಡಾ. ಗುರುಪ್ರಸಾದ್ ಪಟ್ವಾಲ್
——————————————————————————————————————–
ಆನಂದದ ಬೇನೆ
ನನ್ನ ಕಣ್ ಹೃನ್ಮನಗಳನು ಸೂಜಿಗಲ್ಲಿನಂತೆ ಸೆಳೆಯುವ ಸುಂದರ ಸುಮಗಳೇ
ನಿಮ್ಮನು ದಿನವೂ ನೋಡುತಿರುವಾಸೆ
ನಿಮ್ಮೊಂದಿಗೆ ದಿನವೂ ಮಾತಾಡುವಾಸೆ
ನನ್ನ ನಿತ್ಯದ ಆಗು ಹೋಗುಗಳನು ನಿಮಗೆ ಹೇಳುವಾಸೆ
ನನ್ನ ಇಷ್ಟ ಕಷ್ಟಗಳನು ನಿಮಗೆ ತಿಳಿಸುವಾಸೆ
ನನ್ನ ಸುಖ ದುಃಖಗಳನು ಹಂಚಿಕೊಳುವಾಸೆ
ನನ್ನ ಪ್ರತಿಯೊಂದು ನಿರ್ಧಾರದ ಪರಿಣಾಮಗಳನು ಕಡೆಯುವಾಸೆ
ನನ್ನ ಚಿಂತೆಗಳ ಕಾರಣಗಳನು ನಿಮ್ಮೊಂದಿಗೆ ಮಂಥಿಸುವಾಸೆ
ನನ್ನ ಸುತ್ತಲಿನ ಜಗದ ಜನರ ಕುಟಿಲತೆಯನ್ನು ಕುಟುಕುವಾಸೆ
ನನ್ನೊಳಗಿನ ಎಲ್ಲ ಭಾವಗಳನು ತಿಳಿನೀರಿನ ಕೊಳದ ರೀತಿ ನಿಮಗೆ ತೋರುವಾಸೆ
ನನ್ನ ತಪ್ಪುಗಳನು ತಿದ್ದಿಕೊಳುವ ಬಗೆಗಳನು ನಿಮ್ಮಿಂದ ಕೇಳುವಾಸೆ
ನನ್ನ ಭೂತ, ವರ್ತಮಾನ, ಭವಿತವ್ಯಗಳನು ತೆರೆದಿಡುವಾಸೆ
ಆದರೆ ನಿಮ್ಮ ಸುಂದರ ನಗೆ ಮೊಗಗಳು ನನ್ನನ್ನು ಮೂಕನಾಗಿಸಿಬಿಡುತ್ತವೆ
ಆಗ ನೀವೂ ಮೂಕ , ನಾನೂ ಮೂಕ
ಇರಲಿ ಬಿಡಿ ಹೀಗೆ ನನ್ನ ನಿಮ್ಮ ನಡುವಿನ ಮೂಕ ಸಂವೇದನೆ
ಇದರ ಆನಂದವನು ನಾನು ಹೀಗೇ ಸವಿಯುವ ಬೇನೆ
🖋ವಿಜಯನರಸಿಂಹ

