‘ಇಷ್ಟಕಾಮ್ಯ’ – ಡಾ.ಪ್ರೇಮಲತಾ ಬರೆದ ಸಿನಿಮಾ ವಿಮರ್ಶೆ

‘ಇಷ್ಟಕಾಮ್ಯ’ ಕನ್ನಡ ಚಲನಚಿತ್ರವನ್ನು ಅದರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಇತ್ತೀಚಿಗೆ ಬ್ರಿಟನ್ ನ ಕೆಲ ಊರುಗಳಲ್ಲಿ ಬಿಡುಗಡೆ ಮಾಡಿದ್ದರು. ‘ಅನಿವಾಸಿ’ ಬಳಗದ ಡಾ.ಪ್ರೇಮಲತಾರವರು ಚಂದ್ರಶೇಖರ್ ರ ಜೊತೆ ನಡೆಸಿದ ಸಂದರ್ಶನವನ್ನು ‘ಅನಿವಾಸಿ’ ಪ್ರಕಟಿಸಿತ್ತು- ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.. ಪ್ರೇಮಲತಾ ಬರೆದಿರುವ ‘ಇಷ್ಟಕಾಮ್ಯ’ ಚಲನಚಿತ್ರದ ವಿಮರ್ಶೆ ಇಲ್ಲಿದೆ.

ಸಿಂಗಪುರದ ಕನ್ನಡ ಸಂಘ ಏರ್ಪಡಿಸಿದ್ದ ಸಾಹಿತ್ಯ ಸ್ಪರ್ಧೆಯ ಅನಿವಾಸಿಗಳ ವಿಭಾಗದಲ್ಲಿ ಪ್ರೇಮಲತಾರ ಸಣ್ಣ ಕಥೆ ‘ಸ್ವಾತಂತ್ರ್ಯ’ ಕ್ಕೆ ಪ್ರಥಮ ಬಹುಮಾನ ದೊರಕಿದೆ. ಅವರಿಗೆ ‘ಅನಿವಾಸಿ’ಯ ಅಭಿನಂದನೆಗಳು.

ಮರೆಯುವ ಮುನ್ನ – ಈ ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

ಇಷ್ಟಕಾಮ್ಯ– ಸಿನಿಮಾ ವಿಮರ್ಶೆ

ಡಾ.ಪ್ರೇಮಲತಾ

ishtakaamya-poster-1

ಇಷ್ಟವಾದ ಕಾಮನೆಗಳೇ ಗಂಡು – ಹೆಣ್ಣಿನ ನಡುವಿನ ಪಾಸಿಟಿವ್ ಕೆಮಿಸ್ಟ್ರಿ!!

ಇವೇ ಸಂಬಂಧ/ಮದುವೆಯ ಮೂಲವಾಗಬಹುದು ಅಥವಾ ಪರಸ್ಪರರ ವ್ಯಕ್ತಿತ್ವಗಳ ಆಕರ್ಷಣೆ ಬೆಳೆದು ಸಾಂಗತ್ಯವನ್ನು ಮುಂದುವರೆಸುವ ಕಾರಣಕ್ಕೆ ಸಂಬಂಧ ಮುದ್ರೆಯ ಹೆಸರಲ್ಲಿ ಮದುವೆ ಸಂಭವಿಸಬಹುದು. ಮೇಲಿನೆರಡು ಸಂದರ್ಭಗಳಲ್ಲಿ ಹುಟ್ಟುವ ಕಾಮನೆಗಳು ಪರಸ್ಪರರಿಗೆ ಸಮ್ಮತವಾದವು. ಸಲಿಂಗ ಪ್ರೇಮದ  ಅಯಾಮವೂ ಇದೇ ವ್ಯಾಪ್ತಿಯಲ್ಲಿ ಬರುತ್ತದೆ. ಮದುವೆಯ ಹೊರತಾದ ಸಮ್ಮತಿ ಪೂರ್ಣ ಮಿಲನವೂ ಇದೇ ಹೆಸರಡಿ ಬರುವಂತವು. ಇಷ್ಟಕಾಮ್ಯಗಳು,

‘ಇಷ್ಟಕಾಮ್ಯ’ ಚಿತ್ರ ಡಾ. ದೊಡ್ಡೇರಿ ವೆಂಕಟಗಿರಿ ರಾವ್ ರ ಕಾದಂಬರಿಯನ್ನು ಆಧರಿಸಿದ  ಚಿತ್ರ. ’ಸುಧಾ’ ವಾರಪತ್ರಿಕೆಯಲ್ಲಿ ಇದು ಧಾರವಾಹಿಯಾಗಿ ಬಂದಿತ್ತು. ಡಾ. ಡಿ.ವಿ. ರಾವ್ ರ ಕಥೆಗಳ ವಿಶೇಷಣಗಳು ಹಲವು. ಅವರ ಕಾದಂಬರಿಗಳಿಗೆ ಬಹಳ ವಿರಳವಾಗಿ ಕೇಳಿಬರುವ ಹೆಸರುಗಳನ್ನು ಇಡುತ್ತಾರೆ. ಜೊತೆಗೆ, ಪಾತ್ರಗಳಿಗೂ. ಇವರ ಪಾತ್ರಗಳು ಓದಿದ, ಉತ್ತಮ ಮನೆತನದಿಂದ ಬಂದವು. ಪ್ರೌಢತೆಯನ್ನು ಬೆಳೆಸಿಕೊಂಡಂತವು.ಕಥೆಗಳು ನಡೆಯುವುದು ಪ್ರಕೃತಿಗೆ ಹೆಸರಾದ ಮಲೆನಾಡು, ಚಿಕ್ಕಮಗಳೂರು, ಶಿವಮೊಗ್ಗಗಳಂತ ಜಾಗಗಳಲ್ಲಿ.ಇವರು ಕಟ್ಟುವ ಪ್ರೀತಿ –ಪ್ರೇಮಕ್ಕೆ ರಮ್ಯವಾದ ಹಂದರಗಳಿರುತ್ತವೆ. ನಾಜೂಕಾದ ಮಾತುಗಳಲ್ಲಿ ಪ್ರೇಮ ಅರಳುತ್ತದೆ. ಇಲ್ಲಿ ಕ್ರೌರ್ಯ, ಕೊಲೆ, ಅತ್ಯಾಚಾರ,ಅತಿರೇಕಗಳಿಗೆ ಕಡಿಮೆ ಆದ್ಯತೆ.

ಸ್ವತಃ ಉತ್ತಮ ಬರಹಗಾರರಾದ,ತಮ್ಮ ಸೃಜನಶೀಲತೆಯಿಂದ ಚಿತ್ರೋದ್ಯಮದ ಗಮನ ಸೆಳೆದ, ಚಿತ್ರ ಕಥೆ-ಸಂಭಾಷಣೆ-ಹಾಡು-ನಿರ್ದೇಶನಕ್ಕೆ ಹಲವಾರಿ ಪ್ರಶಸ್ತಿ ಗಳಿಸಿರುವ ಡಾ. ನಾಗತಿಹಳ್ಳಿ ಚಂದ್ರಶೇಖರರ ಕಲಾವಿದ ಕಣ್ಣುಗಳಿಗೆ  ’ಇಷ್ಟಕಾಮ್ಯ’ ದ ಕಥೆ ಬಿದ್ದದ್ದು ಆಶ್ಚರ್ಯವೇನಿಲ್ಲ.ಇದನ್ನು ಆಧರಿಸಿ ಅದೇ ಹೆಸರಲ್ಲಿ ಸಿನಿಮಾ ಮಾಡುವಾಗ ಅವರು ರಿಸ್ಕ್ ತಗೊಂಡರೆನ್ನಬಹುದೇನೋ.

ಇಷ್ಟಕಾಮ್ಯ ಸಿನಿಮಾಕ್ಕೆ ನಾಗತಿಯವರ ಚಿತ್ರ ಕಥೆ, ಸಂಭಾಷಣೆ ಮತ್ತು ನಿರ್ದೇಶನ ದೊರೆತಿದೆ. ಸಿನಿಮಾಕ್ಕೆ ಬೇಕಾದಂತೆ ಕಥೆಯನ್ನು ಮುಂದುವರೆಸಿ ಬೆಳೆಸಲಾಗಿದೆ.

ಒಳ್ಳೆಯದು– ಕಣ್ತಣಿಸುವ  ಛಾಯಾಗ್ರಹಣ, ಮನಸ್ಸನ್ನು ಹದವಾಗಿ ಮೀಟುವ, ಉತ್ತಮ ಸಾಹಿತ್ಯವಿರುವ ಹಾಡುಗಳು, ಅರ್ಥಗರ್ಭಿತವಾದ ಸಂಭಾಷಣೆಗಳಿರುವ, ಸಭ್ಯ ಚಿತ್ರವಿದು. ಚಿತ್ರ ಕಥೆ ಮಲೆನಾಡಿನಲ್ಲಿ ನಡೆವಂತದ್ದು. ಅಂದಮೇಲೆ ಸೌಂದರ್ಯಕ್ಕೆ ಕೊರತೆಯೇ ಇಲ್ಲ.

ಯುವ ಜೋಡಿಗಳನ್ನು ಆಧರಿಸಿ ಮಾಡಿದ ತ್ರಿಕೋನ ಪ್ರೇಮಕಥೆಯಿರುವ ಕಾರಣ, ಸಣ್ಣವಯಸ್ಸಿನ  ಸುಂದರ ತಾರಾಗಣವಿದೆ. ಇವರಿಗೆ ಪೂರಕವಾಗಿ ಮನೋಜ್ಞ ಅಭಿನಯ ನೀಡಬಲ್ಲ ನುರಿತ ಕಲಾವಿದರ  ದೊಡ್ಡ ತಂಡವಿದೆ. ಒಂದಷ್ಟು ಹಾಸ್ಯ ಚಿತ್ರ ಕಥೆಯುದ್ದಕ್ಕೂ ಇದೆ. ಇವರಲ್ಲಿ ಕಾಲಕ್ಕೆ ತಕ್ಕಂತೆ ಪಾತ್ರ ಬದಲಾಯಿಸುವ ನಿಂಬೆಯ ಪಾತ್ರವಾಗಿ ಚಿಕ್ಕಣ್ಣ, ಮದುವೆಯ ಅಗತ್ಯವಿಲ್ಲದ ‘ಲಿವಿಂಗ್ ಟುಗೆದರ್’ ಸಂಬಂಧ ಪ್ರತಿಪಾದಕನಾಗಿ ಪ್ರಕಾಶ ಬೆಳವಾಡಿಯವರ, ಪಾತ್ರ ಗಮನ ಸೆಳೆಯುತ್ತವೆ. ’ಮದುವೆಯ ಅಜ್ಜಿ’ಯಾಗಿ ಕಾಣಿಸಿಕೊಂಡಿರುವ ಬಿ. ಜಯಶ್ರೀ, ಇಲ್ಲಿ ಸಾಂಕೇತಿಕ ಪಾತ್ರವಾಗಿ ಯುವ ಹೃದಯಗಳಲ್ಲಿ ಮದುವೆಯ ಸಂಭ್ರಮವನ್ನು ಹರಡುತ್ತಾಳೆ. ಮಿಕ್ಕರ್ಧದಲ್ಲಿ, ಇದೇ ಪಾತ್ರ ಸಾಂಕೇತಿಕವಾಗಿ ಜೀವನದ ಅನಿರೀಕ್ಷಿತ ಘಟನೆಗಳಿಕೆ ತಿರುವು ನೀಡುತ್ತದೆ. ಬದುಕಲ್ಲಿ ಅಂದು ಕೊಂಡಂತೆ ಎಲ್ಲ ಆಗುವುದಿಲ್ಲ ಎಂಬುದನ್ನು ಪ್ರತಿಪಾದಿಸುತ್ತದೆ.

ನಿರ್ದೇಶಕರಾಗಿ ನಾಗತಿಯವರು ಎಲ್ಲ ಪಾತ್ರಗಳಿಗೂ ಉತ್ತಮ ಸಂಭಾಷಣೆಯನ್ನು ನೀಡಿದ್ದಾರೆ. ಹಾಸ್ಯದ ಹೊರತಾಗಿ ಮಿಕ್ಕ ಎಲ್ಲ ಸಂಭಾಷಣೆಗಳು ಸಂದೇಶಗಳೇ. ವಿಚಾರಪರವೇ. ಹಾಗಾಗಿ ಕೇಳಿದ ನಂತರ, ಮರೆತುಹೋಗುವುದಿಲ್ಲ. ಮನಸ್ಸಲ್ಲಿ ಉಳಿಯುತ್ತವೆ. ವೀಕ್ಷಕರು ಯಾರೆಂಬುದರ ಮೇಲೆ ಇದು ನಿರ್ಧರಿತ!

ನಿರ್ದೇಶಕರು ಯುವಜನತೆಗೆ ಬೇಕಾದ ಪ್ರೀತಿಯ ಸಿಹಿಯನ್ನು ಮೊದಲರ್ಧ ಸಿನಿಮಾದ ಉದ್ದಕ್ಕೂ ಹಂಚಿದ್ದಾರೆ. ಆದರ್ಶಗಳನ್ನು ಹೊತ್ತ ಯುವ ವೈದ್ಯ ‘ಆಕರ್ಷ’ನಾಗಿ ವಿಜಯ್ ಸೂರಿಯ ಪಾತ್ರ, ಅವನ ಆಸಕ್ತಿಯನ್ನು ಗಮನಿಸಿ ಆಕರ್ಷಣೆಗೊಳಗಾಗಿ ಪ್ರೀತಿಗೆ ಬೀಳುವ, ಮದುವೆಯ ಕನಸು ಕಾಣುವ ಹುಡುಗಿಯಾಗಿ ಮಯೂರಿ ಕ್ಯಾತರಿ ‘ಅಚ್ಚರಿ’ಯಾಗಿ ಅಭಿನಯಿಸಿದ್ದಾರೆ. ishtakaamya-poster-2ಒಮ್ಮೆ ಈ ಯುವ ವೈದ್ಯ ಮೆಲ್ಲನೆ ಬಾಗಿ ಪ್ರೇಯಸಿಯ ಗಲ ಗಲಿಸುವ ಝುಮುಕಿಯನ್ನು ಸಣ್ಣಗೆ ಬಡಿಯುತ್ತಾನೆ. ಇಲ್ಲಿಯ ನವಿರು ಪ್ರೇಮದ ಪರಿ, ತಕದಿಮನೆ ಕುಣಿವ ಪ್ರೇಮದ ಹಲವು ಹಾಡುಗಳಿಗಿಂತ ಹೆಚ್ಚು ಬಲವಾಗಿ ಮನಸ್ಸುಗಳಲ್ಲಿ ನಿಲ್ಲುತ್ತದೆ. ಚಿತ್ರದ ಮೊದಲಲ್ಲೇ ಕಾಣಿಸಿಕೊಂಡರೂ, ನಂತರ ಈ ಆಕರ್ಷನ ಹೆಂಡತಿಯಾಗಿ ಬರುವ ’ಅದಿತಿ’ ಪಾತ್ರದಲ್ಲಿ   ಕಾವ್ಯ ಶೆಟ್ಟಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ತನ್ನ ದೈನಂದಿನ ವ್ಯಾಪಾರದ ನಡುವೆ ನಿಜವಲ್ಲದ ಬೊಗಳೆಯಲ್ಲಿ ಒಂದಷ್ಟು ಸುಖ ಕಾಣುವ ಪಾತ್ರದ ಮಾವನಾಗಿ ರಂಗಾಯಣದ ರಘು ಮಿಂಚಿದ್ದಾರೆ. ರೋಗಿಯಾಗಿ ಮಂಡ್ಯ ರಮೇಶ್ ಹಾಸ್ಯ ಪಾತ್ರಧಾರಿಯಾದರೆ ಮಿಮಿಕ್ರಿ ದಯಾನಂದ ’ವೈದ್ಯ’ ರಾಗಿದ್ದಾರೆ.

ಉಳಿದರ್ಧ ಭಾಗದಲ್ಲಿ ಅನಿರೀಕ್ಷಿತ ತಿರುವು ಕಾಣಿಸುತ್ತದೆ. ಇಲ್ಲಿ ಪ್ರೇಕ್ಷಕನಿಗೂ ಶಾಕ್ ! ಇಲ್ಲಿಯೇ ವಿವಾದಗಳೂ ಹುಟ್ಟುತ್ತವೆ. ಕೊನೆಗೆ ಇಬ್ಬರು ಹೆಣ್ಣು ಪ್ರೇಮಿಗಳಲ್ಲಿ ಒಬ್ಬರ ಸಾವಿನ ದುರಂತದ ಜೊತೆ ಅಂತ್ಯ. ಆದರೆ ನಾಯಕನ ಮುಂದಿನ ಬದುಕು ಪ್ರೇಕ್ಷಕ ಚಿತ್ರಿಸಬಹುದಾದ ಖಾಲಿ ಕ್ಯಾನ್ವಾಸ್ ಆಗುತ್ತದೆ! ಅಂದರೆ ಸಿನಿಮಾದಲ್ಲಿ ಈ ಬಗ್ಗೆ ಏನನ್ನೂ ತೋರಿಸದೆ ಪ್ರೇಕ್ಷಕನ ಊಹೆಗೆ ಇದನ್ನು ಬಿಡಲಾಗಿದೆ

ನಿರ್ದೇಶಕರಾಗಿ ನಾಗತಿಯವರು ಉದ್ದಕ್ಕೂ ಮದುವೆಯ ವಿವಿಧ ಮುಖಗಳನ್ನು ವಿಮರ್ಷೆಗೆ ಒಡ್ಡಿದ್ದಾರೆ. ಮಲೆನಾಡಿನ ದೀಪಾವಳಿ, ಟೀ ಎಸ್ಟೇಟಿನ ಕಾರುಭಾರುಗಳು, ಆಳು ಕಾಳುಗಳು, ಮದುವೆಯ ಜಾನಪದ ವರ್ಣನೆ, ಮಿಡಿಮಾವಿನ ಕಾಯಿ ಉಪ್ಪಿನ ಕಾಯಿಯ ಬಗ್ಗೆಗಿನ ದೃಶ್ಯಗಳಲ್ಲಿ , ಹವ್ಯಕ ಕನ್ನಡದ ಬಳಕೆಯಲ್ಲಿ ಸಂಪ್ರದಾಯಗಳಿಗೆ ಮೆರುಗುಕೊಟ್ಟಿದ್ದಾರೆ. ಉತ್ತಮ ಭಾಷೆಯನ್ನು ಬಳಸಿ ಕನ್ನಡವನ್ನು, ಅದರ ಸೌಂದರ್ಯ- ಸಂಸ್ಕೃತಿಯನ್ನು ಉಳಿಸಿ ಈ ಚಿತ್ರವನ್ನು ಸಂಭಾವಿತರು ಕೂತು ನೋಡುವಂತೆ ಮಾಡಿದ್ದಾರೆ.

ಕುವೆಂಪು ಬದುಕಿ ಬಾಳಿದ ಮನೆ, ಕವಿ ಶೈಲದ ದೃಶ್ಯದ ಬಳಕೆ, ಕವಿಸಮಾಧಿಯ ದರ್ಶನ ಮಾಡಿಸಿದ್ದಾರೆ. ಕುವೆಂಪು ಬರೆದ ಹಾಡಿನಲ್ಲಿ ಹೆಣ್ಣನ್ನು ಬಹುವಚನದಲ್ಲಿ ಸಂಬೋಧಿಸುವ ಮೂಲಕ ಮನುಕುಲದ ಉನ್ನತ ಸಂಸ್ಕೃತಿಯನ್ನು ಮತ್ತೆ ಕನ್ನಡ ಸಿನಿಮಾರಂಗಕ್ಕೆ ತಂದಿದ್ದಾರೆ!

ಟೀಕಿಸುವಂತದ್ದು–   ಈ ಚಿತ್ರದ ನಾಯಕ ಆದರ್ಶಗಳನ್ನು ಹೊತ್ತ ನವ ಯುವಕ. ಹಳ್ಳಿಯ ತನ್ನ ತಾತನ ನರ್ಸಿಂಗ್ ಹೋಂ ಅನ್ನು ನಡೆಸುತ್ತ ತನ್ನ ಮನೆತನದ ಆಸ್ತಿಯೊಡನೆ ಪ್ರೀತಿಯಿಂದ ಜನರ ಸೇವೆ ಮಾಡುತ್ತ ನಡೆವ ಮನೋಭಾವದವನು. ತನಗೆ ತಿಳಿಯದಾಗ ಬೇರೆಯವರೊಡನೆ ಸಲಹೆ-ಉತ್ತರಗಳನ್ನು ಕೇಳುವ-ಕಾಣುವಂತವನು. ಇಂತಹ ವಿಚಾರವಂತ, ತನ್ನ ಮೊದಲನೆಯ ಹೆಂಡತಿಯೊಡನೆ ವಿಚ್ಛೇದನವಿಲ್ಲದೆ ಇನ್ನೊಂದು ಜೀವಿಯೊಡನೆ ಸರಸ ಸಲ್ಲಾಪ ನಡೆಸುವಾಗ ಅವನ ಮನಸ್ಸಿನ ತಳಮಳಗಳನ್ನು ಇನ್ನಷ್ಟು ಗಾಢವಾಗಿ ಚಿತ್ರಿಸಬೇಕಿತ್ತು ಅನ್ನುವುದು ಈ ಚಿತ್ರದ ಮುಖ್ಯ ಕುಂದಾಗಿದೆ.

ತಪ್ಪೇ ಮಾಡದೆ, ಮದುವೆಯ ಸಹಜತೆಯಿಂದ ವಂಚಿತನಾಗುವ ಒಳ್ಳೆಯ ಮನಸ್ಸಿನ, ಸಲಹೆಗಳನ್ನು ಕೇಳುತ್ತ ನಡೆವ ನಾಯಕನ, ತನ್ನ ಬಡತನದ ಹಿನ್ನೆಲೆಯನ್ನು ಕಡೆಗಣಿಸಿ ಉಪಚರಿಸಿದ, ಸಹಾಯ ಮಾಡಿದ ವೈದ್ಯನ ಆಸಕ್ತಿಗೆ ನೀರೆರವ ಕನಸ ಕಂಗಳ ದುಡುಕಿನ ನಾಯಕಿ ಅಚ್ಚರಿಗೆ ಯಾವ ದೃಶ್ಯದಲ್ಲೂ ತನಗೆ ಈಗಾಗಲೇ ಮದುವೆಯಾಗಿರುವ ಬಗ್ಗೆ ಹೇಳುವುದೇ ಇಲ್ಲ. ನಿಂಬೆಯೂ ಕೂಡಿ, ಇಡೀ ಆಸ್ಪತ್ರೆಯೇ ಇವರ ಓಡಾಟವನ್ನು ಗಮನಿಸಿದರೂ ಯಾರೂ ಅಚ್ಚರಿಗೆ ವೈದ್ಯನಿಗೆ ಮದುವೆಯಾಗಿರುವ ಬಗ್ಗೆ ಹೇಳುವುದಿಲ್ಲ. ಯಾವ ಕಾರಣಕ್ಕೆ ಆಕರ್ಷ ಯಾರನ್ನೂ ಕರೆಯದೆ ಗುಟ್ಟಾಗಿ ಮದುವೆಯಾಗುವ ಬಗ್ಗೆ ಸಬಲ ಕಾರಣಗಳನ್ನು ಹೇಳಬೇಕಾಗಿತ್ತು. ಮಾನಸಿಕ ವ್ಯಾಧಿಗೆ ತುತ್ತಾದ ಅದಿತಿ ಪೂರ್ತಿ ’ಯು ಟರ್ನ್’ ತಗೊಳ್ಳಲು ಒಂದೆರಡು ಘಟನೆಗಳು ಮಾತ್ರ ಸಾಕಾದವೇ? ಒಬ್ಬ ವ್ಯಕ್ತಿ ತನ್ನವನು ಎನ್ನುವ ಅನ್ನುವ ಪೊಸೆಸಿವ್ ನೆಸ್ ಮತ್ತು ಈರ್ಷ್ಯೆ ಮಾತ್ರಕ್ಕೆ ಅವಳು ನಾಯಕನ ಬದುಕಿಗೆ ಹಿಂತಿರುಗುವ ಹೆಣ್ಣೇ?

ಸಂಭಾಷಣೆ ಚಿತ್ರದ ಜೀವಾಳ. ಆದರೆ ಮನೋಜ್ಞ ಅಭಿನಯದ ಮೌನ ಅದಕ್ಕಿಂತ ಪರಿಣಾಮಕಾರಿ. ಅಂತಹ ದೃಶ್ಯಗಳು ಕಡಿಮೆ. ಮಾನಸಿಕ ತುಡಿತಗಳನ್ನು, ತಾನು ಮಾಡುತ್ತಿರುವುದು ತಪ್ಪೇ, ಸರಿಯೇ ಅನ್ನುವ ತಾಕಲಾಟಗಳನ್ನು ಮೂರೂ ಪಾತ್ರಗಳಲ್ಲಿ ಮತ್ತಷ್ಟು ತರ ಬಹುದಿತ್ತು.

ಇತರೆ-ಪಾಶ್ಚಾತ್ಯ ಸಿನಿಮಾಗಳಲ್ಲಿ ಈ ಯಾವ ಕುಂದುಗಳೂ ದೊಡ್ಡವಾಗುತ್ತಿರಲಿಲ್ಲ. ಯಾಕೆಂದರೆ ಇಲ್ಲಿ ಪಾತ್ರಗಳಿಗಿಂತ ಸಂದೇಶ ಮುಖ್ಯವಾಗುತ್ತದೆ. ಆಧುನಿಕ ಜಗತ್ತಿನ ಲಿವಿಂಗ್ ಟುಗೆದರ್ ಆಗಲೀ, ಭಾರತ ಸರ್ಕಾರವೇ ಇನ್ನೂ ಗುರುತಿಸಿರದ ’ಗೇ’ಗಳ ಸಂಬಂಧವಾಗಲೀ, ಸಂಬಂಧದ ಹೆಸರಿನ ಅಗತ್ಯವಿಲ್ಲದ ಜೀವನ ಹಂಚಿಕೊಳ್ಳುವ ಪಾರ್ಟ್ನರ್ ಶಿಪ್ ನ ವೈಚಾರಿಕತೆಯನ್ನು ಈ ಸಿನಿಮಾ ಒರೆಗೆ ಹಚ್ಚುತ್ತದೆ. ಭಾರತೀಯ ಪರಂಪರೆಯ ಪುರಾತನ ಮದುವೆಯ ಮಿತಿಗಳನ್ನೂ ಇದು ಒರೆಗೆ ಹಚ್ಚುತ್ತದೆ. ಅದೇ ಜಾಡಿನಲ್ಲಿ ಬಡತನ, ಅದರ ಅರಿವನ್ನು ತಿಳಿಹೇಳುವ ಅಚ್ಚರಿಯ ತಾಯಿ, ಮಲೆನಾಡಿನ ತೋಟದ ಕೆಲಸಗಾರ್ತಿ, ಗಟ್ಟಿಗಿತ್ತಿ ಗೆಳತಿ ಎಲ್ಲ ಪಾತ್ರಗಳಲ್ಲಿ ನಾಗತಿಹಳ್ಳಿಯವರು ಕನ್ನಡ ಜನತೆಗೆ ನೂರಾರು ಸಂದೇಶಗಳನ್ನು, ತಾಕಲಾಟಗಳನ್ನು ಕೊಟ್ಟು ವಿಚಾರ ಮಾಡಲು ಕರೆಕೊಟ್ಟಿದ್ದಾರೆ. ಅದನ್ನು ಅತಿಯಾದ ಅತಿರೇಕಗಳ ಮೂಲಕ, ಉತ್ಪ್ರೇಕ್ಷೆಯಿಲ್ಲದೆ ಉಣಬಡಿಸಿದ್ದಾರೆ.

ಇತರೆ ಹಲವು ಸಿನಿಮಾ ನಿರ್ದೇಶಕರ ಸಿನಿಮಾದಲ್ಲಿ, ೫೦ ಜನ ಖದೀಮರನ್ನು ಐದು ನಿಮಿಷದಲ್ಲಿ ಸದೆ ಬಡಿವ ನಾಯಕನನ್ನು ತಂದದಕ್ಕೆ, ತಲೆ ಬುಡವಿಲ್ಲದ ಕಥೆ-ಸಂಭಾಷಣೆಗೆ, ದ್ವಂದ್ವಾರ್ಥದ ಹಾಸ್ಯಕ್ಕೆ ಯಾವ ಸಿನಿಮಾ ವಿಮರ್ಶಕನೂ ಚಕಾರ ವೆತ್ತದೆ ಸುಮ್ಮನಿರುತ್ತಿದ್ದರು. ಆದರೆ ನಾಗತಿಹಳ್ಳಿಯವರ ಸಿನಿಮಾ ಎಂದ ಕೂಡಲೆ ನಿರೀಕ್ಷೆ ಗಳು ಗರಿಗೆದರಿ ಬಿಡುತ್ತವೆ, ಸಿನಿಮಾ ವಿಮರ್ಶಕರು ನಾಲಿಗೆಯನ್ನು ಸಾಣೆ ಹಿಡಿಸಿಕೊಂಡು ಕಾಯುತ್ತಾರೆ. ಇವರು ಅರಿಯಬೇಕಾದ್ದು ಬಹಳ ಇದೆ. ಕಲಾತ್ಮಕ ನಿರ್ದೇಶಕನೊಬ್ಬ ಕಲಾವಂತಿಕೆಯನ್ನು, ಜೊತೆಗೆ ನಿರ್ಮಾಪಕರ ಹಣ ಹೂಡಿಕೆಗೆ ನ್ಯಾಯವನ್ನು ಎರಡನ್ನೂ ಕೂಡಿಸಿ ಒಂದು ಹೈಬ್ರಿಡ್ ತಳಿಯ ಸಿನಿಮಾ ವನ್ನು ಮಾಡಲು ಇಷ್ಟಕಾಮ್ಯದ ಮೂಲಕ ಪ್ರಯತ್ನ ಪಟ್ಟಿದ್ದಾರೆ.

ಈ ಪ್ರಯತ್ನವನ್ನು ಗುರುತಿಸಿ, ಆದರಿಸಿ ನೋಡಿದರೆ ಈ ಸಿನಿಮಾ ಇತ್ತೀಚೆಗೆ ನೋಡಿದ ಒಂದು ಉತ್ತಮ ಕನ್ನಡ ಸಿನಿಮಾ ಅನ್ನಬಹುದು

 (ಎರಡೂ ಪೋಸ್ಟೆರ್ಗಳು ಕೃಪೆ-ಗೂಗಲ್)

ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.

ನಾಗತಿಹಳ್ಳಿ ಚಂದ್ರಶೇಖರ್ ಅಂದರೆ ತಕ್ಷಣವೇ ಅವರ ಚಲನಚಿತ್ರಗಳು ಕನ್ನಡಿಗರ ಕಣ್ಣ ಮುಂದೆ ಬರುತ್ತವೆ. ಕನ್ನಡ ಲೋಕಕ್ಕೆ ಸದಭಿರುಚಿಯ ಚಲನಚಿತ್ರಗಳನ್ನಷ್ಟೇ ಅಲ್ಲ ಅವರು ಕೊಡುತ್ತಿರುವುದು. ಅವರ ರೆಕ್ಕೆಗಳು ಸಾಹಿತ್ಯದ ಹಲವಾರು ವೈವಿಧ್ಯತೆಗಳನ್ನು, ಅವರ ಬೇರುಗಳು ಗಾಢವಾದ ಸಾಮಾಜಿಕ ಕಳಕಳಿಯನ್ನು ಅಪ್ಪಿಕೊಂಡಿವೆ. ಡಾ. ಚಂದ್ರಶೇಖರ್ ಅನಿವಾಸಿಬಳಗದ ಮುಂದೆ ಬಂದದ್ದು ಸೆಪ್ಟೆಂಬರ್ ೨೫ರ ಭಾನುವಾರದಂದು. ಆ ವಿಶೇಷ ಸಂದರ್ಭದ ಬಗ್ಗೆ ಅನಿವಾಸಿಸದಸ್ಯರಾದ ಡಾ. ಪ್ರೇಮಲತ ಬರೆಯುತ್ತಾ, ಅವರು ಡಾ. ಚಂದ್ರಶೇಖರ್ ರ ಜೊತೆ ನಡೆಸಿದ ಸಂವಾದವನ್ನೂ ಕೂಡ ಓದುಗರೊಡನೆ ಹಂಚಿಕೊಂಡಿದ್ದಾರೆ. ಬನ್ನಿ, ಈ ಶುಕ್ರವಾರದ ಲೇಖನವನ್ನು ಓದುತ್ತಾ ನಾಗತಿಹಳ್ಳಿ ಚಂದ್ರಶೇಖರ್ ರ ಲೋಕದಲ್ಲಿ ಇಣುಕೋಣ. – ಸಂ.

ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.

ಕನ್ನಡ ಚಿತ್ರರಂಗದಲ್ಲಿ ಈಗ ಉಳಿದಿರುವ ಕೆಲವೇ ಮಂದಿ ಪ್ರತಿಭಾವಂತ, ಸ್ರುಜನಶೀಲ ನಿರ್ದೇಶಕರಲ್ಲಿ ದೊಡ್ಡದಾದ ಹೆಸರು ಡಾ. ನಾಗತಿಹಳ್ಳಿ ಚಂದ್ರಶೇಖರದು.ಇವರು ಬರೇ ನಿರ್ದೇಶಕರಲ್ಲ. ಎಂ.ಎ. ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವ ವಿದ್ಯಾಲಯದಿಂದ ಚಿನ್ನದ ಪದಕಗಳೊಂದಿಗೆ ಪಡೆದವರು. ಕನ್ನಡ ಪ್ರಾಧ್ಯಾಪಕರಾಗಿ ದಶಕಕ್ಕೂ ಹೆಚ್ಚು ಕಾಲ ಕೆಲಸಮಾಡಿದವರು. ಹಾಗಂತಲೇ ಇವರನ್ನು ‘ಮೇಷ್ಟ್ರು’ ಅಂತ ಈಗಲೂ ಕರೆಯುವವರಿದ್ದಾರೆ.ಜೊತೆಗೆ ಬರಹಗಾರರು.  ಸರಳವಾಗಿ, ನೇರವಾಗಿ ಮಾತಾಡುವವರು.ಅಂಕಣಗಾರರು.

ಇಷ್ಟೆಲ್ಲ ಕಿಚ್ಚಿರುವ ಇವರು ಚಲನಚಿತ್ರ ರಂಗಕ್ಕೆ ಬಂದದ್ದು, ಇತ್ತೀಚೆಗೆ ನಿಧನರಾದ ಅಶೋಕ್ ಪೈ ಅವರ 1986 ರ  ‘ಕಾಡಿನಬೆಂಕಿ’ ಚಲನಚಿತ್ರದ ಮೂಲಕ. ಈ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಇವರು ಬರೆದಿದ್ದಾರೆ. ಇದಕ್ಕೆ best regional feature film ಅನ್ನೋ ರಾಷ್ಟ್ರ ಮನ್ನಣೆಯ  ಜೊತೆಗೆ ರಾಜ್ಯ ಪ್ರಶಸ್ತಿ ಬಂತು. ಇವರದೇ ಚೊಚ್ಚಲ ನಿರ್ದೇಶನದ ’ಉಂಡೂ ಹೋದ-ಕೊಂಡೂ ಹೋದ” ಚಿತ್ರವನ್ನು ಮಾಡಿದರು. ಇದರ ಚಿತ್ರಕಥೆ-ಸಂಭಾಷಣೆಗೆ ರಾಜ್ಯ ಪ್ರಶಸ್ತಿ ಬಂತು.ಇಲ್ಲಿಂದ ಮುಂದೆ ಇವರು ಮೇಲಿನ ಎಲ್ಲ ಮಾಧ್ಯಮಗಳೊಂದಗೆ ತಮ್ಮನ್ನು ಹಂಚಿಕೊಂಡಂತವರು. ಸಿನಿಮಾ, ದೂರ ದರ್ಶನ, ಪತ್ರಿಕೆಗಳು, ಪುಸ್ತಕಗಳು,ಮತ್ತು ಸಾಮಾಜಿಕವಾಗಿ ಮತ್ತ್ತಷ್ಟು ಬೆಳೆದವರು.’ನಾಗತಿಹಳ್ಳಿ ಟೆಂಟ್ ಸಿನಿಮಾ’ ಅನ್ನೋ ಹೆಸರಲ್ಲಿ ನಟನೆ ಮತ್ತು ಸಿನಿಮಾದ ಬರಹಗಳಿಗೆ ತರಭೇತಿ ಶಾಲೆಯನ್ನು ತೆರೆದು ಮತ್ತೆ”ಮೇಷ್ಟ್ರು’  ಆದವರು! ತನ್ನ ಬದುಕಿನ ಎಲ್ಲ ಆಸಕ್ತಿಗಳನ್ನು ಬಗಲಲ್ಲಿ ಇರಿಸಿಕೊಂಡೇ ಮುಂದುವರೆದಿರುವ ಇವರ ಬದುಕಿನಲ್ಲಿ ಈಗ ಅದೆಷ್ಟು ಸಣ್ಣ ಕಥೆಗಳಿಗಾಗುವಷ್ಟು ಸರಕಿದೆಯೋ  ಗೊತ್ತಿಲ್ಲ!!

ಯಾರಾದರೂ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯಲ್ಲಿ ಹುಟ್ಟಿ, ಯಾವ ವಶೀಲಿಯೂ ಇಲ್ಲದೆ, ಗಾಡ್ ಫಾದರ್ ಗಳ ಅಭಯವಿಲ್ಲದೆ   ಬೆಂಗಳೂರಿನಲ್ಲಿ ಹೆಸರುಮಾಡಬೇಂಕೆಂದರೆ ಅಪ್ಪಟ ಪ್ರತಿಭೆಯಿರಬೇಕು. ತಮ್ಮ ಸ್ಥಾನವನ್ನು ಗಳಿಸಲು ಅವಿರತ ಕೆಲಸ ಮಾಡಿರಬೇಕು.ಜೀವನದಲ್ಲಿ ಶಿಸ್ತಿರಬೇಕು. ಒಂದಷ್ಟು ವಿಶಷ್ಟ ಆದರ್ಶಗಳನ್ನು ಮೈ ಗೂಡಿಸಿಕೊಂಡಿರಬೇಕು. ಅಪಾಯಕರ ಸಾಹಸಗಳನ್ನು ಉಸಿರಿಡಿದು ಮಾಡಲು ತಯಾರಿರಬೇಕು.ನೂರು ಜನರ ನಡುವೆ ಕೆಲಸಮಾಡುವ ಹೊಂದಾಣಿಕೆಯ ಸ್ವಭಾವವನ್ನು ಹೊಂದಿರಬೇಕು.ಕಾರ್ಯನೈಪುಣ್ಯತೆಯನ್ನು ಉಳಿಸಿಕೊಳ್ಳಲು ಸಮಯದ ಜೊತೆ ಗುದ್ದಾಡುವ ಛಲವಿರಬೇಕು.ಫಲಿತಾಂಶವಾಗಿ ಸಿಗುವ ಅಮ್ರುತವನ್ನೂ, ಹಾಲಾಹಲವನ್ನೂ ನುಂಗಿ ತಡೆದುಕೊಳ್ಳುವ ತಾಕತ್ತಿರಬೇಕು. ಕಾಲಿಗೆ ಚಕ್ರ, ಕಣ್ಣಿಗೆ ಎಣ್ಣೆ,ಮಿದುಳಿನ ಅವಿರತ ಕೆಲಸ, ಹತ್ತು ಕೆಲಸಗಳ ಮಧ್ಯೆ ಅಪಾರ  ತಾಳ್ಮೆ  58 ರ ಹರೆಯದಲ್ಲೂ  ಇವರಲ್ಲಿ ಬೇಕಾದಷ್ಟಿದೆ!

ಇವರ ಇದುವರೆಗಿನ ಸಾಧನೆಗಳ ಅವಲೋಕನಕ್ಕೆ, ಸಂದಿರುವ ಪ್ರಶಸ್ತಿಗಳ ಪಟ್ಟಿಗೆ ಇವರದೇ ಹೆಸರಿನ ವೆಬ್ ಸೈಟಿಗೆ ಭೇಟಿ ನೀಡುವದೇ ಉಚಿತ. http://www.nagathihalli.com/

’ಇಷ್ಟಕಾಮ್ಯ’ ಚಿತ್ರದ ಜೊತೆ ಇವರನ್ನು ಇಂಗ್ಲೆಂಡಿಗೆ ಬರಮಾಡಿಕೊಂಡವರು, ಕನ್ನಡಿಗರು, ಯು.ಕೆ.  ಅಧ್ಯಕ್ಷರಾದ ಗಣಪತಿ ಭಟ್. ಜೂನ್ ತಿಂಗಳಲ್ಲಿ ನಾಗತಿಹಳ್ಳಿಯವರನ್ನು ಬರಮಾಡಿಕೊಂಡು, London, Bristol, Cardiff, Dorset ಗಳಲ್ಲಿ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಟ್ಟವರು.

ಈ ಕನ್ನಡ ಸಂಘ 2008 ರಲ್ಲೇ ನಾಗತಿಯವರ ’ಮಾತಾಡ್, ಮಾತಾಡ್ ಮಲ್ಲಿಗ” ಸಿನಿಮಾವನ್ನು Reading ನಲ್ಲಿ 200 ಜನರೆದುರು ಪ್ರದರ್ಶನ ಮಾಡಿತ್ತು. ಇದಕ್ಕು ಮೊದಲು ಇತರೆ 25 ಕ್ಕೂ ಹೆಚ್ಚು ಸಿನಿಮಾಗಳನ್ನು ತರಿಸಿ ಕನ್ನಡ ಸಮುದಾಯಕ್ಕೆ ಮನರಂಜನೆ ಒದಗಿಸಿದೆ.ಈಗ ಒಂದು ವರ್ಷ ದಿಂದ KUK Talkies ನ  ಬ್ಯಾನರಿನಡಿ  ಕನ್ನಡದ ಸಿನಿಮಾಗಳಿಗೆ ಮಾರುಕಟ್ಟೆ ಗಳಿಸುವಲ್ಲಿ ನಿರತರಾಗಿದ್ದಾರೆ.

ಮತ್ತೆ ಈ ಬಾರಿ ನಾಗತಿಯವರನ್ನು ಬರಮಾಡಿಕೊಂಡು, ಅವರ ಜೊತೆ  Cambridge, Doncaster ಮತ್ತು Newcastle ಗಳಿಗೆ ಓಡಾಡಿಸಿದವರು ಗಣಪತಿ ಭಟ್.’ಕನ್ನಡಿಗರು, ಯು.ಕೆ.’ ಯ  ಸಂಪರ್ಕಕ್ಕೆ ಬಂದವರು ಸುಮನ-ಗಿರೀಶ್ ದಂಪತಿಗಳು. ಸಾಂಸ್ಕ್ರಿತಿಕ ಕಾರ್ಯಕ್ರಮಗಳ ಬಗ್ಗೆ ಅಪಾರ ಆಸಕ್ತಿಯಿರುವ, ರಂಗಭೂಮಿಯ ಅನುಭವವಿರುವ ಸುಮನಾರಿಗೆ ಇಷ್ಟಕಾಮ್ಯ ಪ್ರದರ್ಶನವನ್ನು ನಡೆಸಲು ನಿರ್ಧಾರ ತೆಗೆದುಕೊಳ್ಳಲು ಅರ್ಧ ಗಂಟೆಯ ಸಮಯವಿತ್ತು! ಯಾವ ಬಳಗ-ಕೂಟಗಳ ಒತ್ತಾಸೆಯಿಲ್ಲದೆ ವಯಕ್ತಿಕವಾದ ನಿರ್ಧಾರವನ್ನು ತಗೊಂಡವರು ಸುಮನಾ. ಒತ್ತಾಸೆಯಾಗಿ ನಿಂತವರು ಪತಿ ಡಾ. ಗಿರೀಶ್ ವಸಿಷ್ಟ. Doncaster ರಿನ ಇವರ ಮನೆಗೆ ನಾಗತಿಯವರನ್ನು ಕರೆತಂದವರು ಗಣಪತಿ ಭಟ್. ರಾತ್ರಿ ಸುಮನಾರ ಆತಿಥ್ಯಕ್ಕೆ ರುಚಿ ಸೇರಿಸಿದವರು ರಂಗಭೂಮಿಯ ಅನುಭವವಿರುವ ಸುಮನಾರ ತಾಯಿ ಲೀಲ-ತಂದೆ ರಾಮಸ್ವಾಮಿ.

ರಾಮಸ್ವಾಮಿ, ಅಭಿಷೇಕ್, ನಾಗತಿಹಳ್ಳಿ ಚಂದ್ರಶೇಖರ್, ಕಾಜಲ್, ಡಾ, ಗಿರೀಶ್ ವಸಿಷ್ಟ, ಡಾನ್ಕ್ಯಸ್ಟೆರಿನ ಪ್ರದರ್ಶನಕ್ಕೆ ಕಾರಣರಾದ ಸುಮನ ಗಿರೀಶ್ ಮತ್ತು ಅವರ ತಾಯಿ ಶ್ರೀಮತಿ ಲೀಲ ರಾಮಸ್ವಾಮಿ. (ಚಿತ್ರ-ಸಂದರ್ಶಕಿಯದು)

ಬೆಳಗಿನ ತಿಂಡಿಯ ನಂತರ ಒಂದು ಸಣ್ಣ ಸಂದರ್ಶನಕ್ಕೆ ಅವಕಾಶ ಕೇಳಲಾಗಿತ್ತು. ಅದೇ ಊರಿನ ಹಿರಿಯ ವೈದ್ಯರಾದ ಡಾ, ಶ್ರೀವತ್ಸ ದೇಸಾಯಿಯವರು ಈ ಸಂದರ್ಶನದ ರೆಕಾರ್ಡಿಂಗ್ ಗೆ ಸಜ್ಜಾಗಿ ಬಂದರು. ಈ ರೆಕಾರ್ಡಿಂಗ್ ನ ಸಣ್ಣ ತುಣುಕನ್ನು ಯು-ಟ್ಯೂಬಿನಲ್ಲಿ ನೋಡಬಹುದು.

ಮೊದಲಿಗೆ ದಾ.ದೇಸಾಯಿಯವರು ತಮ್ಮ ಹಸ್ತಾಕ್ಷರ ವನ್ನು ಸೇರಿಸಿ  ’ಅನಿವಾಸಿಗಳ ಅಂಗಳದಿಂದ’ ಪುಸ್ತಕವನ್ನು ನಾಗತಿಯವರಿಗೆನೀಡಿದರು. ನಂತರವೇ ಸಂದರ್ಶನ ಶುರುವಾದದ್ದು!

ಸಂದರ್ಶಕಿ ಡಾ. ಪ್ರೇಮಲತ ಮತ್ತು ಅನಿವಾಸಿಗಳ ಚೊಚ್ಚಲ ಪುಸ್ತಕದ ಅವಲೋಕನದಲ್ಲಿರುವ ನಾಗತಿಹಳ್ಳಿಯವರು ಚಿತ್ರಕ್ರುಪೆ-ಗಣಪತಿ ಭಟ್

೧) ಸ್ರುಜನಾತ್ಮಕವಾದ ಚಲನಚಿತ್ರಗಳ ಮೂಲಕ ನೀವಿವತ್ತು ಮನೆ ಮನೆ ಮಾತಾಗಿದ್ದೀರ. ನಿಮಗೆ ಸಂತ್ರುಪ್ತಿಯನ್ನು ತಂದೊಕೊಟ್ಟಿರುವ ಚಿತ್ರ/ಚಿತ್ರಗಳು ಯಾವುವು?

ನನ್ನ ಚಿತ್ರ ಗಳ ಪಟ್ಟಿಯನ್ನು ಅವಲೋಕಿಸಿದಾಗ ಯವುದೂ ಇಲ್ಲ. ಯಾಕಂದ್ರೆ, ಪ್ರತಿ ಸಿನಿಮಾನ ಮತ್ತೆ ಮತ್ತೆ ನೋಡಿದಾಗ ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಅಂತ ಹಲವಾರು ಸಂದರ್ಭದಲ್ಲಿ ಅನ್ನಿಸಿದೆ. ಜನ ’ಅಮೆರಿಕಾ ಅಮೆರಿಕಾ’ ವನ್ನು, ’ಅಮ್ರುತಧಾರೆ”ಯನ್ನು ಉಲ್ಲೇಖಿಸ್ತಾರೆ.ಆದ್ರೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನ್ನೋ ಹೊಳಹುಗಳು ಬರ್ತಾ  ಇರುತ್ತವೆ, ಅತ್ರುಪ್ತಿ, ಸ್ರುಜನಶೀಲ ಮನಸ್ಸಿನ ಒಂದು ಭಾಗ.

೨) ನೀವು ಮೂಲತಃ ಬರಹಗಾರರು. ಕಥೆಗಳಲ್ಲಿನ ಪಾತ್ರ ಗಳಿಗೆ ಜೀವ ಕೊಟ್ಟು ನಡೆಸುವಾಗ ಇರೋ ತ್ರುಪ್ತಿ,ಚಲನಚಿತ್ರಗಳ ಪಾತ್ರಗಳನ್ನು ನಿರ್ದೇಶಿಸುವಾಗ ಸಿಗುತ್ತಾ?

ಇದು ಮೂಲಭೂತವಾಗಿ ಕಾವ್ಯ ಮೀಮಾಂಸೆಗೆ ಸಂಬಂಧ ಪಟ್ಟ ಪ್ರಶ್ನೆ. ನಾನು ಎಲ್ಲ ಅರ್ಥಗಳಲ್ಲಿ ಅಲೆಮಾರಿ. ಜಾಗದಿಂದ ಜಾಗಕ್ಕೆ ,ಮಾಧ್ಯಮದಿಂದ ಮಾಧ್ಯಮಕ್ಕೆ ಸುತ್ತುತಾ ಇರ್ತೀನಿ. ಆಯಾ ಮಾಧ್ಯಮಕ್ಕೆ ಹೋದಾಗ ಅಲ್ಲಿನ ವ್ಯಾಕರಣವನ್ನು ಗ್ರಹಿಸಿ ನಿರ್ವಹಿಸಬೇಕಾಗುತ್ತೆ. ಎಲ್ಲಿ ಹೋದಾಗ ನಾನೇನು ಮಾಡಬಲ್ಲೆ ಅನ್ನೋ ಪ್ರಶ್ನೆ ಮಾತ್ರ ಉಳಿಯುತ್ತೆ. ವ್ಯಾವಹಾರಿಕವಾಗಿ ಚಿತ್ರರಂಗ ಹೆಚ್ಚು, ಸಾಹಿತ್ಯ ಕಡಿಮೆ ಅನ್ನೂ ಅರ್ಥ ನನ್ನ ವ್ಯಾಪ್ತಿಯಲ್ಲಿ ಬರೋಲ್ಲ. ಎರಡೂ ಕಡೆ ಪಾತ್ರಗಳನ್ನು ನಡೆಸೋ ಚಾಲೆಂಜ್, ಅದರ ಗುದ್ದಾಟ ನನ್ನಗೆ ಇಷ್ಟ.

೩) ಬರಹ-ಚಲನ ಚಿತ್ರ ನಿರ್ದೇಶನ ಎರಡನ್ನೂ ನಿಮ್ಮ ಮುಂದಿಟ್ಟು ಒಂದನ್ನು ಮಾತ್ರ ಆರಿಸಿಕೊಳ್ಳಿ ಅಂದ್ರೆ ನಿಮ್ಮ ವಯಕ್ತಿಕ ಆಯ್ಕೆ ಯಾವುದು? ಯಾಕೆ?

ನಿಸ್ಸಂಶಯವಾಗಿ ಸಾಹಿತ್ಯ.

ಕಾರಣ, ಸಾಹಿತ್ಯದಲ್ಲಿನ ಸ್ವಯಂಭು. ಇಲ್ಲಿ ನಾನು ಮತ್ತು ಓದುಗ ಅಷ್ಟೇ. ಸಿನಿಮಾದಲ್ಲಿ, ಹಲವು ಪರಿಣತರ ಪ್ರತಿಭೆಯನ್ನು ಹೊರ ಬರಿಸಿ ಅದರಿಂದ ಒಂದು ಪಾಕ ಸಿದ್ದಪಡಿಸಿ ಕ್ರುತಿಯನ್ನು ಸ್ರುಷ್ಟಿಸಬೇಕಾಗುತ್ತೆ. ಇದರಲ್ಲಿ ಸಂಮೋಹನ ಇದೆ.  ಸಂಕೀರ್ಣವಾದ ಮ್ಯಾನೇಜ್ ಮೆಂಟ್ ವಿಚಾರಗಳು, ಸೈಕಾಲೊಜಿ, ಈಗೋಸ್ ಎಲ್ಲ ಇರುತ್ತೆ. ಜೊತೆಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೆಗಲ ಮೇಲಿರೋದರಿಂದ ನನ್ನಂತ ಸೂಕ್ಶ್ಮ ಮನಸ್ಸಿನ ವ್ಯಕ್ತಿಗೆ ಯಾರ ಬಂಡವಾಳಕ್ಕೆ ಎಲ್ಲಿ ದಕ್ಕೆ ಆಗುತ್ತೋ ಅನ್ನೋ ಆತಂಕ ಸಹಜವಾಗಿರುತ್ತೆ.

ಇದು ಸಾಹಿತ್ಯದಲ್ಲಿಲ್ಲ. ಅಲ್ಲದೇ ನಾನು ಹೊರಟು ಬಂದ ಬಿಂದು, ತವರುಮನೆ ಸಾಹಿತ್ಯವೇ ಆದ್ದರಿಂದ ಸಾಹಿತ್ಯಕ್ಕೇ ನನ್ನ ಮೊದಲ ಆದ್ಯತೆ. ಸಿನಿಮಾದಲ್ಲೂ ನನ್ನಗೆ ಅಪಾರ ಅನುಭವ, ಪ್ರತಿಫಲಗಳು ದೊರೆತಿವೆ. ಅದರ ಬಗ್ಗೆ ನನ್ನಲ್ಲಿ ಕ್ರುತಘ್ನತೆ  ಖಂಡಿತಾ ಇದೆ.

ಸಾಹಿತ್ಯಕ್ಕೂ-ಸಿನಿಮಾಕ್ಕೂ ಇರೋ ಕಲಾತ್ಮಕತೆ ಮತ್ತು ಗಲ್ಲಾಪೆತ್ಟ್ಟಿಗೆಯ ಸೇತುವೆಯನ್ನು ಹಾದವರು ಇದ್ದಾರೆ. ಆದರೆ ಉಳಿದಿರುವ ಏಕಾಂಗಿ ನಾನು. ಆದ್ಯತೆಯ ಪ್ರಶ್ನೆ ಬಂದಾಗ ಸಾಹಿತ್ಯಕ್ಕೆ ಸದಾ ಮೊದಲ ಸ್ಥಾನ.

೪) ಇತ್ತೀಚೆಗೆ ಕನ್ನಡ ಚಲನ ಚಿತ್ರಗಳ ಗುಣ ಮಟ್ಟ ಕುಸಿತಾ ಇದೆ.ಇದಕ್ಕೆ ಕಾರಣ ಒಳ್ಳೆ ಚಿತ್ರಕ್ಕೆ ಇವತ್ತು ಮಾರುಕಟ್ಟೆ ಇಲ್ಲ ಇಲ್ದೇ ಇರೋದು.ಇದು  ಎಲ್ರಿಗೂ ಗೊತ್ತು.ಹಿಂದೆ ಇದ್ದಂತ ಮಾರುಕಟ್ಟೆ ಈಗ ತಟ್ಟಂತ ಕಣ್ಮರೆ ಆಗೋಕೆ ಏನು ಕಾರಣ?

ವೇಗದ ಮನೋಧರ್ಮ.ಕಾಲಕ್ಕೆ ಬಂದಿರೋ ವೇಗ. ಕಲೆಗೆ ತಗುಲಿರೋ ಶಾಪ!

ತಕ್ಷಣ ರೋಮಾಂಚನ ಬೇಕು ಅನ್ನೋ ಧಾವಂತ ಪ್ರೇಕ್ಷಕನಿಗೆ, ಅಹೋ ರಾತ್ರಿ ಕೋಟಿಗಟ್ಟಲೆ ಹಣ ಮಾಡಬೇಕು ಅನ್ನೋದು ಉದ್ಯಮದವರಿಗೆ . ಹಿಂದೆ ಚಲನಚಿತ್ರಗಳು   ವರ್ಷಗಟ್ಟಲೆ ಓಡ್ತಾ ಇದ್ದವು. ನೆನಪಿನಲ್ಲಿ ಉಳೀತಿದ್ದವು. ಈಗಿನ ಚಿತ್ರಗಳು ವಾರ  ಮಾತ್ರ ಓಡಿ, ತಟ್ಟಂತ  ಕಣ್ಮರೆಯಾಗಿ ಬಿಡ್ತಾವೆ. ಉಳಿಸಿ ಹೋಗೋದು ಏನೂ ಇಲ್ಲ. ಜೊತೆಗೆ ಸಿದ್ದ ಕತೆಗಳನ್ನು, ರೀಮೇಕ್ ಗಳನ್ನು ತಂದು ಸಿನಿಮಾ ಮಾಡ್ತಾರೆ. ವರ್ಶಕ್ಕೆ 200 ಸಿನಿಮಾ, ವಾರಕ್ಕೆ 6 ಸಿನಿಮ ಬಿಡುಗಡೆ ಆಗ್ತಿವೆ. ಇದರ ಬಗ್ಗೆ  ಯಾವ ನಿಯಂತ್ರಣವೂ ಇಲ್ಲ. ಕನ್ನಡದ ಅಸಲೀ ಚಿತ್ರ, ಅಸಲೀ ಪ್ರತಿಭೆಗಳ ಚಿತ್ರ ಮಾಡೋ ನಮ್ಮಂತವರು ಏಕಾಂಗಿಗಳು. ಆದರೆ ’ಆ ’ ಕಡೆಯವರಿಗೆ ಹೇಳುವಷ್ಟು ದೊಡ್ಡವನಲ್ಲ ನಾನು.

 ’ಇಷ್ಟಕಾಮ್ಯ  ಚಿತ್ರವನ್ನು ನೋಡಿ.ಪ್ರತಿಯೊಂದು ಸಂಭಾಷಣೆಯಲ್ಲಿ, ದ್ರುಶ್ಯಗಳಲ್ಲಿ ಆಳವಾದ ಚಿಂತನೆಗಳಿವೆ. ವರ್ಷಗಟ್ಟಲೆ ಚರ್ಚೆ ಮಾಡಿದ ವಿಚಾರಗಳಿವೆ. ಅದನ್ನು ನೋಡಿ ಅರ್ಥ ಮಾಡಿಕೊಳ್ಳೋಕೆ ವ್ಯವಧಾನ ಇರಬೇಕಷ್ಟೆ.

೫)ನೀವು ಒಬ್ಬ ಸಾಹಿತಿ. ಬರಹಗಾರರು. ಕನ್ನಡ ಭಾಷೆ ಮತ್ತು ಕನ್ನಡ ಚಿತ್ರೋದ್ಯಮವನ್ನು ಅರಿತಿರೋವ್ರು. ಅದಕ್ಕೇ ಈ ಪ್ರಶ್ನೆ.ಇತ್ತೀಚೆಗಿನ ಸಿನಿಮದಲ್ಲಿ ಉಪಯೋಗ್ಸೋ ಭಾಷೆ ಕೇಳೋಕೆ ಬೇಜಾರಾಗುತ್ತೆ.ಸಾಹಿತ್ಯಕ ಕನ್ನಡವಲ್ದಿದ್ದ್ರೂ ಸಾಧಾರಣ ಆಡು ಭಾಷೆಯನ್ನು ಉಪಯೋಗಿಸಿದ್ರೆ ಸಿನಿಮಾ ಮಾಧ್ಯಮ ಜನರಿಗೆ ತಲುಪಲ್ವಾ?

’ಇಷ್ಟಕಾಮ್ಯ’ ದ ಉದಾಹರಣೆ ಮತ್ತೆ ಕೊಡ್ತಿದ್ದೀನಿ ಅಂತ ಮುಖಸ್ತುತಿ ಅಂದುಕೋ ಬೇಡಿ.ಅದರಲ್ಲಿನ ಸಂಭಾಷಣೆಯನ್ನು ಗಮನಿಸಿ.

ಸರಳ ಕನ್ನಡವನ್ನು ಬಯಸೋ ಜನ ಖಂಡಿತಾ ಇದ್ದಾರೆ.ಆದರೆ ಅವರ ಅಭಿರುಚಿಯನ್ನು ಸಂಪೂರ್ಣ ನಾಶಮಾಡಲಾಗಿದೆ. ಅದಕ್ಕೆ ಕಾರಣ ಚಿತ್ರರಂಗ ’ಅಕ್ಷರ ದ್ವೇಷಿ” ಗಳಾಗ್ತಿರೋದು. ಹಾಗಾಗಿ ಅಕ್ಷರ ದಾರಿದ್ರ್ಯ, ಸಾಂಸ್ಕ್ರುತಿಕ ದಾರಿದ್ರ್ಯ ಎದ್ದು ಕಾಣಿಸುತ್ತೆ. ಉದಾಹರಣೆಗೆ, ಒಂದು ಇಡೀ ತಲೆಮಾರಿನ  Icon, ರಾಜ್ ಕುಮಾರರನ್ನು ತಗೊಳ್ಳಿ. ಇವರಿಗೆ ರಂಗ ಭೂಮಿ ಅನುಭವ ಇತ್ತು. ಹಾಡು, ಉಚ್ಚಾರಣೆಗಳ ತರಭೇತಿ ಇತ್ತು. ಒಬ್ಬ ರಾಜಕುಮಾರನ ಹಿಂದೆ ಒಬ್ಬ ಚಿ. ಉದಯಶಂಕರ ಇದ್ರು. ಉತ್ತಮ ವಚನ, ಕೀರ್ತನೆ ಭಾವಗೀತೆಗಳನ್ನು ಉಣ ಬಡಿಸ್ತಿದ್ರು. ಈ ಹಿನ್ನೆಲೆ ಇವತ್ತು ತಪ್ಪಿ ಹೋಗಿದೆ.

ಇವತ್ತಿನ ನಟರು ಒಳ್ಳೆಯವರು, ಕನ್ನಡದ ಬಗ್ಗೆ ದೊಡ್ಡ ಮಾತಾಡ್ತಾರೆ. ಇವರಿಗೆ ಒಳ್ಳೇ ಸಿನಿಮ ಬೇಕು. ಜನರ ಪ್ರೀತಿ ಬೇಕು. ವಿವಾದ ಬಂದ್ರೆ ಕನ್ನಡಕ್ಕಾಗಿ ಬೀದಿಗಿಳೀತಾರೆ. ಆದರೆ ಅವರಿಗೆ ಸಾಂಸ್ಕ್ರುತಿಕ ಸ್ಪರ್ಶವೇ ಇಲ್ಲ. ಹೀಗೆ ಹೇಳಿದ್ರೆ Typical ಕನ್ನಡ ಮೇಷ್ಟ್ರು ಹೀಗೆ ಮಾತಾಡ್ತಾರೆ’ ಅಂತಾರೆ.ಅದಕ್ಕೂ- ಇದಕ್ಕು ಯಾವ ಸಂಭಂಧವೂ ಇಲ್ಲ. ಜನಜೀವನದಲ್ಲಿರೋ, ಸರಳ,ಸಾಧಾರಣ ನುಡಿಗಟ್ಟುಗಳನ್ನು ಸಮಯೊಚಿತವಾಗಿ ಬಳಸೋದು ಸಂಭಾಷಣೆ. ಸಿನಿಮಾ ಪ್ರಬಲ ಮಾಧ್ಯಮ. ಕನ್ನಡವನ್ನು ಸರಿಯಾಗಿ ಬಳಸದೇ ಇದ್ರೆ ಮುಂದೆ ಈಗಿನ ಕನ್ನಡವೇ ನಿಜವೇನೋ ಅನ್ನೋ ಅಪಾಯ ಖಂಡಿತ.

೬) ಚಲನಚಿತ್ರಗಳು ಭಾಷೆ ಜೊತೆ, ಸಂಸ್ಕ್ಕ್ರುತಿಯನ್ನು ಕೂಡ  ಪ್ರತಿಪಾದಿಸುತ್ತವೆ. ಇವತ್ತಿನ ಚಿತ್ರಗಳಲ್ಲಿ ನಾಯಕನೇ ಹಿಂಬಾಲಕರ ಕೆನ್ನೆಗೆ ಕಾರಣ ಇಲ್ಲದೇ ಹೊಡೆಯೋದು, ಪದೇ ಪದೇ ಪುನರಾವರ್ತಿಸಿ ಹೊಡೆಯೋದನ್ನು  ಹಾಸ್ಯದ ಹೆಸರಲ್ಲಿ ತೋರಿಸ್ತಿದ್ದಾರೆ. ಇದು ಇವತ್ತಿನ ಪೀಳಿಗೆಗೆ ನೀಡೋ ಸಂದೇಶವನ್ನು ಏನಂತ ಹೇಳ್ತೀರಿ?

ಇದು ಅಭಿರುಚಿಯ ಪ್ರಶ್ನೆ.ಅಭಿರುಚಿಯನ್ನು ಮಾಧ್ಯಮಗಳು ಯಾವಾಗ ಕಡೆಗಣಿಸ್ತಾವೋ ಆಗ ಅದು ಅತ್ಯಂತ ಅಪಾಯದ ಸ್ಥಿತಿಯನ್ನು ತಲುಪುತ್ತವೆ.ಪ್ರಬಲ ಮಾದ್ಯಮ ಸಿನಿಮಾಕ್ಕೆ ಒಳ್ಳೆಯ ಅಭಿರುಚಿಯನ್ನು ಉಳಿಸೋ ಗುರುತರ ಹೊಣೆ ಇದೆ. ಜಗತ್ತಿನಲ್ಲಿ ಇಲ್ದೇ ಇರೋ ಹಿಂಸೆ,  ಕೆಟ್ಟ ಸಂಭಾಷಣೆಯನ್ನು ಇವತ್ತು ಸಿನಿಮಾದಲ್ಲಿ ನೋಡ್ತೀವಿ.

ಕಲೆ ಅಂದಾಗ ಒಂದಿಷ್ಟು ವೈಭವೀಕರಣ,  ಉತ್ಪ್ರೇಕ್ಷೆ ಸಹಜ . ಆದರೆ ಅದನ್ನು ಕಲಾತ್ಮಕವಾಗಿ ಮುಂದಿಡಬೇಕು. ಆತಂಕದ ವಿಚಾರ ಅಂದ್ರೆ ಕೆಟ್ಟ ಸಿನಿಮಾ ಬಂದಾಗ ಜನ ಅದನ್ನು ತಿರಸ್ಕರಿಸ್ತಾ ಇಲ್ಲ. “ಅವರು ನೋಡ್ತಾರ್ರಿ ಅದಕ್ಕೆ ಮಾಡ್ತೀವಿ ಅಂತ ಇವರು, ಇವರು ಕೊಡ್ತಾರ್ರೀ ಅದಕ್ಕೆ ನೋಡ್ತೀವಿ” ಅಂತ ಅವರು ಹೇಳ್ತಾರೆ.

ಕೊನೆಗೆ ಇದು ಸಮಾಜದಲ್ಲಿನ ಜನರ ಹೊಣೆಗಾರಿಕೆಯ ಪ್ರಶ್ನೆ. ರಾಜಕಾರಣಿಗಳು, ಸಾಂಸ್ಕ್ರುತಿಕ ನಾಯಕರ ಸಾಕ್ಷಿ ಪ್ರಶ್ನೆ ವಿಚಾರ.

೭) ಭಾಷೆ ಸತ್ರೆ, ಅದಕ್ಕೆ ಸಂಭಂಧಿಸಿದ ಸಾಹಿತ್ಯ, ಚಿತ್ರೋದ್ಯಮ ಮತ್ತೆ ಇವೆರಡಕ್ಕೂ ಪೂರಕವಾಗಿರೋ ಉದ್ಯಮಗಳ ಅವನತಿ ಕಟ್ಟಿಟ್ಟ ಬುತ್ತಿ. ಹಾಗಾಗಿ ಕನ್ನಡ ಉಳಿಸೋಕೆ ಈ ಉದ್ಯಮಗಳು ಮಾಡ್ತಿರೋ ಕೆಲಸಗಳೇನು? ಮಾಡ ಬಹುದಾದ ಕೆಲಸಗಳೇನು?

ಕನ್ನದ ಕಟ್ಟೊ ವಿಚಾರ ಬಹಳ ಇದೆ. ಓದು, ಬರಹ, ನಾಟಕ, ಸಿನಿಮ , ಸಂಘ , ಸಂಸ್ಥೆಗಳು ಇವೆಲ್ಲ ಭಾಷೆ ಜೊತೆ ತಳುಕು ಹಾಕಿಕೊಂಡ ವಿಚಾರಗಳು. ಇವನ್ನೆಲ್ಲ ಮಾಡೋ ಅಂತ ಜನರಿದ್ದಾರೆ ಆದ್ರೆ ಅವರನ್ನು ಅನುಸರಿಸೋ ರಣ ಪಡೆಯಿಲ್ಲ.

ಬೇರೆ ಭಾಷೆಗಳಿಗೂ , ಕನ್ನಡಕ್ಕು ಇದೇ ವ್ಯತ್ಯಾಸ. ಕನ್ನಡಿಗ ಇವತ್ತು intellectual arrogance ಬೆಳೆಸಿಕೊಂಡು ಸಿನಿಮಾಕ್ಕೆ ಬರ್ತಾನೆ. ಆತನಲ್ಲಿ ಸಿನಿಕತೆ ಎದ್ದು ಕಾಣುತ್ತೆ. ’ಕನ್ನಡ ಸಿನಿಮಾ” ಅನ್ನೋ ಧೋರಣೆಯಿಂದ ಸಿನಿಮಾಕ್ಕೆ ಬರ್ತಾನೆ. ಬೇರೆ ಭಾಷೆಯ ಜನ ಭಾಷೆಗೆ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದಾರೆ. ಇದು ಇಲ್ದೇ ಇರೋದ್ರಿಂದ  ಕನ್ನಡದಲ್ಲಿ ಕೊಡುವವನ ಮತ್ತು ನೋಡುವವನ ನಡುವಿನ ಕಂದಕ ದೊಡ್ಡದಾಗಿದೆ.

೮) ಹೊರದೇಶದಲ್ಲಿರೋ ಕನ್ನಡಿಗರು ಇದಕ್ಕೆ ಯಾವ ರೀತಿ ಬೆಂಬಲ ಕೊಡಬಹುದು?

ಹೆಚ್ಚೇನೂ ನಿರೀಕ್ಷಿಸಲಾಗಲ್ಲ. ಭಾಷೆ- ಸಂಸ್ಕ್ರುತಿ ಎಲ್ಲ ಬಿಟ್ಟು ಬಂದ ಕಾರಣಕ್ಕೆ ಅನಿವಾಸಿಗಳಲ್ಲಿ ಒಂದು ಬಗೆಯ nostalgia ಇರುತ್ತೆ . ಅಲ್ಲಿಗೆ ಮರಳಿ ಹೋಗಲು ಆಗಲ್ಲ ಅನ್ನೋ ಕಾರಣಕ್ಕೆ ಕನ್ನಡ ಮಹತ್ವದ್ದು ಅನ್ನೋ ಭಾವನೆ ಇರುತ್ತೆ ಹಾಗಾಗಿ  ಒಳನಾಡಿನ ತುಡಿತಕ್ಕಿಂತ ಹೊರನಾಡಿನ ತುಡಿತ ತೀವ್ರವಾಗಿದೆ.

ನಾನು ನನ್ನ ಹಳ್ಳಿಯ, ನಾನು ಓದಿದ ಕನ್ನಡ  ಶಾಲೆಯನ್ನು ದತ್ತು ತಗೊಂಡಿದ್ದೀನೆ, ಕೈಲಾದ್ದು ಮಾಡ್ತಿದ್ದೀನಿ. ಆತಂಕದ ವಿಚಾರ ಅಂದ್ರೆ 200 ಇದ್ದ ವಿದ್ಯಾ ರ್ಥಿಗಳ ಸಂಖ್ಯೆ 30 ಕ್ಕೆ ಇಳಿದಿರೋದು!!! ಅನಿವಾಸಿಗಳಾಗಲೀ, ನಿವಾಸಿಗಳೇ ಆಗಲಿ , ಕನ್ನಡವನ್ನು ಏಕ ಪ್ರಕಾರವಾಗಿ ಪ್ರೀತಿಸ್ಬೇಕು. ಅದು ನಮ್ಮೆಲ್ಲರ ಹೊಣೆಗಾರಿಕೆ.

೯)  England  ಪ್ರವಾಸದ  high lights ಏನು?”

ಮಾತಾಡ್ ಮಾತಾಡ್ ಮಲ್ಲಿಗೆ’ ಪ್ರದರ್ಶನಕ್ಕೆ ಹಿಂದೆ ಬಂದಿದ್ದೆ.  ಆದರೆ ಈ ಬಾರಿ, ಕನ್ನಡಿಗರು, ಯು.ಕೆ.ಯ ಮಿತ್ರತ್ವದಿಂದ ಇಂಗ್ಲೆಂಡಿನ ನಾನ ಊರುಗಳಿಗೆ ಹೋಗಿ ಚಿತ್ರ ತೋರಿಸಿ, ಮಾತಾಡೋ ಸಂದರ್ಭ ಬಂದಿದೆ.ಇದು ದೊಡ್ಡ ವ್ಯವಹಾರವೇನಲ್ಲ. ಆದರೆ, ವ್ಯವಹಾರದ ಆಚೆಗಿನ ಪ್ರೀತಿ, ವಿಶ್ವಾಸದ ಅನುಭವ ಆಯ್ತು. ಬಸವಣ್ಣನ ಪ್ರತಿಮೆ ನೋಡಿದೆ.ಭಾರತೀಯ ವಿದ್ಯಾ ಭವನಕ್ಕೆ ಹೋಗಿದ್ದೆ. ನಂದ ಕುಮಾರ್ ಅವರು ಮಾಡ್ತಿರೋ ಕನ್ನಡ ಚಟುವಟಿಕೆಗಳನ್ನು  ನೋಡಿ ತುಂಬ ಸಂತೋಷವಾಗಿದೆ. ಕನ್ನಡದ  ಬಗ್ಗೆ ತುಡಿಯೋ ನೀವೆಲ್ಲ ಕನ್ನಡದ  ಆಶಾ ಕಿರಣಗಳೇ.

ಎಡ ತುದಿ-ವಿಡೀಯೋ ಮಾಡಿದ ಡಾ, ಶ್ರೀವತ್ಸ ದೇಸಾಯಿ, ಬಲತುದಿ- ಕನ್ನಡಿಗರು ಯುಕೆ ಯ ಅಧ್ಯಕ್ಷ ಶ್ರೀ ಗಣಪತಿ ಭಟ್

೧೧) ಕನ್ನಡ  ಚಿತ್ರ ರಂಗದ ಮುಂದಿನ ಭವಿಷ್ಯ ನಿಮ್ಮ ಊಹೆನಲ್ಲಿ ಏನು?

ನಾನು ಪ್ರವಾದಿ ತರ ಮಾತಾಡೊಲ್ಲ.

ಸದ್ಯಕ್ಕೆ ಸಂಖ್ಯೆ ಜಾಸ್ತಿ ಆಗಿದೆ. ಗುಣ ಮಟ್ಟ ಕಡಿಮೆ ಆಗಿದೆ. ನಿಧಾನವಾಗಿ ವಿಶ್ವ ಮಾರುಕಟ್ಟೆ ತೆರೆದು ಕೊಳ್ತಾ ಇದೆ.ಕನ್ನಡ ಮಾರಿಕಟ್ಟೆ  ಸೀಮಿತ ಮಾರುಕಟ್ಟೆ.  ವಿದೇಶಿ ಪ್ರದರ್ಶನಗಳು ಶೈಶವಾಸ್ಥೆ ಯಲ್ಲಿದೆ. ಇದಕ್ಕೊಂದು ಕ್ರಮ ಮತ್ತು ಗುಣ ಮಟ್ಟದ ಅಗತ್ಯವಿದೆ.

ಇವತ್ತಿನ ಕನ್ನಡ ಸಿನಿಮಾದಲ್ಲಿರೋ ಸಾಂಸ್ಕ್ರುತಿಕ ಶೂನ್ಯತೆ ಭಯ ತರೊ ಅಂತದ್ದು. ಆದ್ದರಿಂದ ಕಾಲ ಈ ಪ್ರಶ್ನೆಗೆ ಏನು ಉತ್ತರ ಕೊಡುತ್ತೆ ಅಂತ  ಕಾದು ನೋಡಬೇಕು.

೧೨)ಸಿನಿಮಾ, ಟಿ. ವಿ.,ನಿಮ್ಮ ತರಭೇತಿ ಶಾಲೆ, ಈ ರೀತಿಯ ಓಡಾಟದ ನಡುವೆ ನಿಮ್ಮಲ್ಲಿರೋ ಬರಹಗಾರನ ಆರೋಗ್ಯ ಹೇಗಿದೆ?

ಅದರ ಬಗ್ಗೆ ಆತಂಕ ಇದೆ. ಪ್ರಜಾವಾಣಿಗೆ ’ರೆಕ್ಕೆ ಬೇರು” ಅನ್ನೋ ಕಾಲಂ ಬರೀತಿದ್ದೆ.  ’ಇಷ್ಟಕಾಮ್ಯ’ ದ ಕಾರಣ ನಿಲ್ಲಿಸಿದೆ. ಈಗ ಈ ಕೆಲಸ ಮುಗಿದಿದೆ. ಸಿನಿಮಾ ದೈಹಿಕವಾಗಿ  ಹಿಂಡಿ ಹಿಪ್ಪೆ ಮಾಡೋ ಕಾರಣ ಬರಹಕ್ಕೆ ಬೇಕಾದ ಶಕ್ತಿ ಕಡಿಮೆಯಾಗಿದೆ. ಬರವಣಿಗೆಯನ್ನು ಮತ್ತೆ  ಶುರುಮಾಡಿ ನನ್ನ ನೆಚ್ಚಿನ ಸಣ್ಣಕಥೆ ಗಳ ಬರಹವನ್ನು ಮುಂದುವರಿಸಬೇಕು.

ನಿಮ್ಮ ಮಾಧ್ಯಮದ ಮೂಲಕ ಎಲ್ಲ ಕನ್ನಡದ ಮನಸ್ಸುಗಳಿಗೆ ಶರಣು ಶರಣಾರ್ಥಿ. ಸಾಹಿತ್ಯ, ಪ್ರಕಟನೆ, ಸಿನಿಮಾ ಈ ಯಾವುದರ ಬಗ್ಗೆ ಏನೇ ಸಹಾಯ ಬೇಕೆಂದರೂ ಕೇಳಿ. ನಿಮಗೆ ಸ್ಪಂದಿಸಲು ನಾನು ಯಾವಗಲೂ ತಯಾರಿದ್ದೇನೆ. ಕನ್ನಡ ಕಟ್ಟೋ ಕೆಲಸ ನಿರಂತರವಾಗಿ ನಡೆಯಲಿ. ಧನ್ಯವಾದ.

ಡಾ. ಪ್ರೇಮಲತ ಬಿ

ಈ ಸಂದರ್ಶನವನ್ನು ಕೆಳಗಿನ ಲಿಂಕ್ ಒತ್ತುವುದರ ಮೂಲಕ ನೋಡಬಹುದು.ಕ್ರುಪೆ-ಡಾ. ಶ್ರೀವತ್ಸ ದೇಸಾಯಿ 

https://www.youtube.com/watch?v=TSGa8sLV61A