’ಅನಿವಾಸಿ’ (KSSVV) ನಡೆದು ಬಂದ ದಾರಿ ಭಾಗ -1 ಡಾ. ಶ್ರೀವತ್ಸ ದೇಸಾಯಿ ಬರೆದ ಲೇಖನ

ವಿನ್ಯಾಸ: ಉಮಾ ವೆಂಕಟೇಶ್

(ಕನ್ನಗಡಿಗರು ಹೊರದೇಶಕ್ಕೆ ಹೋಗುವಾಗ ತಮ್ಮ ಜೊತೆ ಹೊತ್ತೊಯ್ಯಲು ಸಾಧ್ಯವಾಗುವುದು ಕೆಲವೇ ವಸ್ತುಗಳನ್ನು.  ಆದರೆ ವಲಸೆ ಹೋದ ದೇಶಗಳಲ್ಲಿ ಮತ್ತೆ ಬದುಕನ್ನು ಕಟ್ಟಿಕೊಳ್ಳುವಾಗ ಅವರಿಗೆ ಅಂದುಕೊಂಡದ್ದಕ್ಕಿಂತ ಹೆಚ್ಚನ್ನು  ಹೊತ್ತು ತಂದಿರುವುದು ಅರಿವಾಗುತ್ತದೆ. ಅರಿವಿಲ್ಲದಂತೆಯೇ ಅವರೊಡನೆ ಬಂದ  ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ ಎಲ್ಲ ಅವರ ಗುರುತುಗಳಾಗುತ್ತವೆ. ವಿದೇಶಿ ನೆಲದಲ್ಲಿ ಈ ಮೌಲ್ಯಗಳು ಸ್ವದೇಶೀ ತುಣುಕುಗಳನ್ನು ಸೃಷ್ಟಿಸುತ್ತವೆ. ಈ ನೆಲದಲ್ಲಿ ಬೆರೆಯಲು ಸಮಾನ ಆಸಕ್ತಿಯಿರುವ ಮನಗಳು ತುಡಿಯುತ್ತವೆ. ಸಮುದಾಯಗಳು ಕಲೆಯುತ್ತವೆ. ಕನ್ನಡದ ಬದುಕು ಮತ್ತೆ  ಜೊತೆಯಾಗಿ ಮುಂದುವರೆಯುತ್ತದೆ.

 ಆದರೆ ಹಲವು ದಶಕಗಳ ಕಾಲ ಇಲ್ಲಿ ಸಾಹಿತ್ಯಕ್ಕಾಗಿ ಯಾವುದೇ ನಿಗಧಿತ ಗುಂಪಿರಲಿಲ್ಲ. ಆದರೆ ಸಾಹಿತ್ಯದಲ್ಲಿ ಆಸಕ್ತಿಯಿರುವ ಕೆಲವರು ಒತ್ತಟ್ಟಿಗೆ ಬಂದದ್ದು 2014 ರಲ್ಲಿ. ಕೇವಲ ನಾಲ್ಕು ತಿಂಗಳ ನಂತರ ಗುಂಪಿನ ಮೊದಲ ಅಧಿಕೃತ ಸಭೆ ನಡೆಯುವ ಹೊತ್ತಿಗೆ ಈ ಸಂಖ್ಯೆ ದ್ವಿಗುಣಗೊಂಡಿತ್ತು.ಇವರಲ್ಲಿ ಯಾರೂ ಕನ್ನಡವನ್ನೇ ಓದಿದವರಿರಲಿಲ್ಲ. ಪ್ರತಿಯೊಬ್ಬರೂ ಅತ್ಯಂತ ಬ್ಯುಸಿ ಎನ್ನುವ ಜೀವನ ಶೈಲಿಯ ವೃತ್ತಿಗಳಲ್ಲಿ ಇದ್ದವರೇ.

 ಯಾವುದೇ ಸಂಘ-ಸಂಸ್ಥೆಗಳ ಹಣಕಾಸಿನ ಸಹಾಯದ ಹಂಗಿಲ್ಲದಂತೆ ಅನಿವಾಸಿಯ ಕೆಲವರು ಸದಸ್ಯರು  ಸ್ವಯಂ ಪ್ರೇರಿತರಾಗಿ ದೇಣಿಗೆಯ ಮೂಲಕ ಅಂತರ್ಜಾಲದ ಸಾಹಿತ್ಯ ಜಗಲಿಯನ್ನು ನಿಭಾಯಿಸುತ್ತಿದ್ದಾರೆ. ಈ ಜಾಲ ತಾಣ ಐದು ವರ್ಷಕ್ಕೂ ಹೆಚ್ಚು ಕಾಲದಿಂದ ಪ್ರತಿ ಶುಕ್ರವಾರ ಈ ದೇಶದಲ್ಲಿರುವ ಕನ್ನಡ ಬರಹಗಾರರ ಒಂದು ಬರಹವನ್ನು ತಪ್ಪದೆ ಪ್ರಕಟಿಸುತ್ತ ಬಂದಿದೆ.

ಕನ್ನಡ ನಾಡಿನ ಸಮಸ್ತ ಜನಸ್ತೋಮಕ್ಕೆ ತೆರದ ಬಾಗಿಲಿನ ಪಾಲಿಸಿಯನ್ನು ಅನುಸರಿಸುವ ಹಲವು ಅಂತರ್ಜಾಲ ಸಾಹಿತ್ಯಕ ತಾಣಗಳು ಕೂಡ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಲು ಶ್ರಮಪಡುತ್ತವೆ. ಹಲವಾರು ತಾಣಗಳು ಮುಂದುವರೆಯಲಾಗದೆ ಮುಚ್ಚಿಹೋಗಿವೆ.ಅಂಥದ್ದರಲ್ಲಿ ದೂರದ್ದೊಂದು ಪುಟ್ಟ ದ್ವೀಪದ ಬಹಳ ಕಡಿಮೆ ಎನ್ನುವಷ್ಟು ಕನ್ನಡಿಗರಿರುವ ಯುನೈಟೆಡ್ ಕಿಂಗ್ಡಂ ನಲ್ಲಿ ಬೆರಳೆಣಿಕೆಯಷ್ಟು ಕನ್ನಡದಲ್ಲಿ ಸಾಹಿತ್ಯ ಬರೆಯುವ ಮತ್ತು ಓದುವ ಜನರು ನಡೆಸುತ್ತಿರುವ  ಅನಿವಾಸಿ ಸಾಹಿತ್ಯ ಜಗಲಿಯ ಸಾಧನೆ ದೊಡ್ಡದೇ. ಸಾಹಿತ್ಯದಲ್ಲಿ ತೊಡಗಿಕೊಂಡ ಈ ಗುಂಪಿನಲ್ಲಿ ಯಾರೂ ಮುಖಂಡರಲ್ಲ. ಯಾವುದೇ ಪದವಿಗಳಿಲ್ಲ. ಈ ಅನುಕ್ರಮದಲ್ಲಿ ಅನಿವಾಸಿ ಐದು ಮುಗಿಸಿ ಆರು ವರ್ಷಗಳನ್ನು ಸಮೀಪಿಸುತ್ತಿದೆ. ಈ ಸಮಯದಲ್ಲಿ  ಅನಿವಾಸಿ ನಡೆದು ಬಂದ ಹಾದಿಯ ಹಿನ್ನೋಟವೇ ಈ ಸರಣಿ ಮಾಲೆ.

ಮೊದಲಿಗೆ ಈ ಗುಂಪಿನ ಹಿರಿಯರಾದ ಶ್ರೀವತ್ಸ ದೇಸಾಯಿಯವರ ಬರಹ. ಹುಟ್ಟಿನಿಂದ ಈವರೆಗೆ ಅನಿವಾಸಿಯ  ಬಹುತೇಕ ಪ್ರತಿ ಸಭೆಯ ನಿಮಿಷಗಳನ್ನು ದಾಖಲಿಸಿ, ಎಲ್ಲ ಬರಹಗಳ ಕಡತವನ್ನು  ಕಾದಿರಿಸಿ, ಫೋಟೋಗಳ ಸಮೇತ ಜೋಪಾನವಾಗಿಟ್ಟು ಈ ಗುಂಪನ್ನು ಕಾದಿರುವ ದೇಸಾಯಿಯವರು ಅತ್ಯಂತ ಉತ್ಸಾಹದಿಂದ ಅನಿವಾಸಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಪ್ರತಿ ಬರಹಕ್ಕೆ ಸ್ಪಂದಿಸಿ ಉತ್ತೇಜನದ ಮಾತುಗಳನ್ನು ಆಡಿ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡಿದವರು. ಈ ಗುಂಪಿನಲ್ಲಿ ಒಂದು ವ್ಯವಸ್ಥೆಗೆ ಮಾರ್ಗದರ್ಶನವನ್ನು ನೀಡಿದವರು. ಹೀಗಾಗಿ ಅನಿವಾಸಿಯ ಇದುವರೆಗಿನ ಪಯಣದ ಬಗ್ಗೆ ಗುರುತರವಾದ ದಾಖಲೆಗಳ ಸಮೇತ  ಲೇಖನವನ್ನು ಬರೆದುಕೊಡಿ ಎಂದು ಕೋರಿದಾಗ ತಮ್ಮೆಲ್ಲ ಕಡತಗಳ ಮೇಲೆ ಕಣ್ಣು ಹಾಯಿಸಿ  ಅನಿವಾಸಿಗಾಗಿ  ಯಾವತ್ತಿಗೂ ಬೆಲೆಯುಳ್ಳ ಲೇಖನವನ್ನು ಬರೆದುಕೊಟ್ಟಿದ್ದಾರೆ. ಅನಿವಾಸಿ ನಡೆದು ಬಂದ  ದಾರಿಯ ಕಡೆ ಒಂದು ಸಮಗ್ರ ನೋಟವನ್ನು ಹರಿಸಿದ್ದಾರೆ.  ಅನಿವಾಸಿಯ ಜೊತೆಗಿನ ತಮ್ಮ ವಯಕ್ತಿಕ ಹಾದಿಯನ್ನೂ ಮೆಲುಕು ಹಾಕಿದ್ದಾರೆ.ಅದರ ಮೊದಲ ಕಂತಿದು.

ಸಮಸ್ತರಿಗೂ ದೀಪಾವಳಿಯ ಶುಭಾಶಗಳೊಂದಿಗೆ ಈ ಸರಣಿಯ ಆರಂಭ –ಡಾ.ಪ್ರೇಮಲತ ಬಿ. )

’ಅನಿವಾಸಿ’ಯ ಹುಟ್ಟು:

ಅದೊಂದು ಅಮೃತ ಘಳಿಗೆ!

(1) 19-10-2013, ಯೂಟೋಕ್ಸಿಟರ್ ಮೋಟರ್ವೇ ಸರ್ವಿಸ್ ಸ್ಟೇಷನ್ (A 50 Uttoxeter)

ಎಲ್ಲಿದೆ ಯೂಟೋಕ್ಸಿಟರ್? ’ಏನ ಕೇನ ಪ್ರಕಾರೇಣ…’ ಕೆಲವು ಊರುಗಳು ಪ್ರಸಿದ್ಧವಾಗುತ್ತವೆಯಲ್ಲವೆ? ಭೌಗೋಳಿಕವಾಗಿ ಇಂಗ್ಲೆಂಡಿನ ಮಧ್ಯವರ್ತಿ ಸ್ಥಳ ಈ ಊರು. ಕೆಲವು ಯು.ಕೆ. ವಾಸಿ ಸಾಹಿತ್ಯಾಸಕ್ತರು ಆ ದಿನ ಅಲ್ಲಿ ಕೂಡಿದಾಗ ಕ ಸಾ ಸಾಂ ವಿ ವೇ(KSSVV) ದ ಹುಟ್ಟು ಆಯಿತೆಂದು ಹೇಳಬಹುದು. ಆಗ ಕಾರ್ಡಿಫ್ ನಲ್ಲಿ ವಾಸಿಸುತ್ತಿದ್ದ ಡಾ.ಉಮಾ ವೆಂಕಟೇಶ್, ಮ್ಯಾಂಚಸ್ಟರ್ ಕಡೆಯಿಂದ ಡಾ ವತ್ಸಲಾ ರಾಮಮೂರ್ತಿ, ಡಾರ್ಬಿಯಿಂದ ಡಾ ಕೇಶವ ಕುಲಕರ್ಣಿ, ಸೌತ್ ಯಾರ್ಕ್ಶೈರ್ ನಿಂದ ಡಾ ಜಿ .ಎಸ್. ಶಿವಪ್ರಸಾದ್ ಮತ್ತು ಡೋಂಕಾಸ್ಟರಿನಿಂದ ಡಾ. ಶ್ರೀವತ್ಸ ದೇಸಾಯಿ ಆ ದಿನ ಬೆಳಿಗ್ಗೆ ಅಲ್ಲಿ ಕೂಡಿದ್ದರು.

ಅದಕ್ಕೂ ಮೊದಲು ಒಬ್ಬೊರಿಗೊಬ್ಬರು ಸಮಕ್ಷಮ ಭೇಟಿಯಾಗಿ ಕೆಲವರಷ್ಟೇ ಸ್ವಲ್ಪ ಪರಿಚಿತರಾಗಿದ್ದರೂ ಎಲ್ಲರೂ ಒಬ್ಬೊರನ್ನೊಬ್ಬರು ನೋಡಿರಲಿಲ್ಲ. ಉಮಾ ಅವರು ಪ್ರತ್ಯೇಕವಾಗಿ ಎಲ್ಲ್ರನ್ನು ಈ-ಮೇಲಿನ ಮುಖಾಂತರ ಈ ಮೊದಲೇ ಸಂಪರ್ಕಿಸಿದ್ದರು. ಕೆಲವರೊಡನೆ ಫೋನಿನಲ್ಲಿ ಮಾತಾಡಿದ್ದರು. ಯು ಕೆ ಕನ್ನಡಿಗರಲ್ಲಿ ಕನ್ನಡದ ”ವಿಚಾರ ವೇದಿಕೆ”ಯನ್ನು ಶುರು ಮಾಡಬೇಕೆಂಬ ಅದಮ್ಯ ಆಸೆ ಉಮಾ ಅವರಲ್ಲಿ ಬಹುದಿನಗಳಿಂದಲೂ ಜ್ವಲಂತವಾಗಿತ್ತು. ಹೇಗೆ ಪ್ರಾರಂಭ ಮಾಡಬೇಕು? ಯಾರನ್ನೆಲ್ಲ ಕೂಡಿಸಬೇಕು? ಯಾವ ಸ್ಥಳದಲ್ಲಿ? ಈ ಪ್ರಶ್ನೆಗಳು ಈಗ ಬಹು ಸುಲಭ ಅನಿಸಿದರೂ, ಆಗ ಅದೊಂದು ಕಠಿಣ ಸಮಸ್ಯೆಯೇ ಆಗಿತ್ತು.

1987 ರ ಸಂದೇಶ ’ಕೈಬರಹ’ ಸಂಚಿಕೆಗಳು

ಹಾಗೆ ನೋಡಿದರೆ ಯು.ಕೆ. ದಲ್ಲಿಯ ಕನ್ನಡಿಗರಲ್ಲಿ ಒಂದು ಕನ್ನಡದ ’ಪತ್ರಿಕೆ-ವೇದಿಕೆ’ ಪ್ರಾರಂಭ ಮಾಡುವ ವಿಚಾರ ಹೊಸದೇನೂ ಆಗಿರಲಿಲ್ಲ. ಕನ್ನಡವನ್ನು ಹೊರದೇಶದಲ್ಲಿ ವಾಸಿಸುವ ಕನ್ನಡಿಗರಲ್ಲಿ ಮತ್ತು ಅವರ ಮುಂದಿನ ಪೀಳಿಗೆಯಲ್ಲಿ

ಸಂದೇಶದ ಆಗಿನ ಸಂಪಾದಕರು

ಜೀವಂತ ಉಳಿಸಿ ಕೊಳ್ಳಬೇಕಾದರೆ ಇಂಥದೊಂದು ಮಾಧ್ಯಮದ ಅವಶ್ಯಕತೆಯಿದೆಯೆಂದಲೇ ಯು .ಕೆ. ಕನ್ನಡ ಬಳಗ ಆರಂಭದ ವರ್ಷಗಳಲ್ಲಿ ’ಸಂದೇಶ” ಎನ್ನುವ ’ಕೈಬರಹ”ದ ಪತ್ರಿಕೆಯನ್ನು 1984ರಲ್ಲಿ ಆರಂಭ ಮಾಡಿತ್ತು. ವತ್ಸಲಾ ಅವರಿಗೆ ಅದರ ಪ್ರತ್ಯಕ್ಷ ವೈಯಕ್ತಿಕ ಅನುಭವವಿತ್ತು ಸಹ.

ಆ ಮಾತಿಗೆ ಈಗ ಮೂವತ್ತೈದು ವರ್ಷಗಳು ಸಂದಿವೆ. ಎಲ್ಲರಿಗೂ ’ಬರಹ’ ಎಂಬ ಕನ್ನಡದ ಗಣಕಯಂತ್ರ ತಂತ್ರಾಂಶವಾದ ಪರಿಚಯವಾಗಲು ಪ್ರಾರಂಭವಾಗಿತ್ತು. ಆಗ ತಾನೆ ಇಂಟರ್ನೆಟ್ ತುಂಬ ’ಬ್ಲಾಗ್’ ಗಳು ದಿನೇ ದಿನೇ ಹುಟ್ಟುತ್ತಿದ್ದವು. ಇತ್ತಿತ್ತಲಾಗಿ ಕೆಲವು ತಿಂಗಳುಗಳಿಂದಲೇ ಇಂಟರ್ನೆಟ್ಟಿನಲ್ಲಿ ಕನ್ನಡ ಬ್ಲಾಗ್ ಅಥವಾ ಮ್ಯಾಗಝಿನ್ ತೆಗೆಯ ಬೇಕು, ಯು .ಕೆ. ಕನ್ನಡಿಗರು ಅದರಲ್ಲಿ ಬರೆಯಲು ಅವಕಾಶವಿರಬೇಕೆಂದು ಉಮಾ ವೆಂಕಟೇಶ್ ಮತ್ತು ಡಾ ಜಿ ಎಸ್ ಎಸ್ ಪ್ರಸಾದರು ಕನ್ನಡ ಸಾಹಿತ್ಯಾಸಕ್ತರೊಂದಿಗೆ ಮಾತಾಡುತ್ತಿದ್ದರೆಂದು ತಿಳಿದು ಬಂದಿತ್ತು. ಅವರಿಬ್ಬರು ಕನ್ನಡ ಬಳಗದಲ್ಲಿ ಕಮಿಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅದಲ್ಲದೆ ಅವರು ಕನ್ನಡ ಬಳಗದಿಂದ ಹೊರಡುತ್ತಿದ್ದ ’ಸಂದೇಶ’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲೂ ಇದ್ದರು.(ಈಗಲೂ ಅದರ ಹಳೆಯ ಸಂಚಿಕೆಗಳು KBUK ವೆಬ್ ಸೈಟಿನಲ್ಲಿ ಓದಲು ಸಿಗುತ್ತವೆ). 1980ರ ದಶಕದಲ್ಲಿ ಈ ದೇಶದಲ್ಲಿ ವಾಸಿಸುತ್ತಿದ್ದ ಕನ್ನಡಿಗರೆಲ್ಲರೂ ಕನ್ನಡ ಬಳಗದ ಸದಸ್ಯರಾಗಿದ್ದಿಲ್ಲ, ಯು ಕೆ ದಲ್ಲಿ ದೂರದೂರದ ಊರುಗಳಲ್ಲಿ ಚದುರಿ ಹೋಗಿದ್ದ ಕನ್ನಡಿಗರಿಗೆ ಬಳಗದ ಎಲ್ಲ ಕಾರ್ಯಕ್ರಮಗಳಲ್ಲಿ ಸೇರುವ ಅವಕಾಶ ಕಾರಣಂತರಗಳಿಂದ ಒದಗಿ ಬರುತ್ತಿರಲಿಲ್ಲ. ಅಂದ ಮೇಲೆ ಕಥೆ, ಕವಿತೆ, ಬರೆಯುವದರಲ್ಲಿ ಪಳಗಿದ, ಬರೆಯುವ ಉತ್ಸಾಹವಿದ್ದವರನ್ನು ಹೇಗೆ ಪತ್ತೆ ಹಚ್ಚಿ ಅವರಿಂದ ಇಂಥ ಒಂದು ದಿಜಿಟಲ್ ಮೀಡಿಯಾದ ಮುಖಾಂತರ ಇದನ್ನು ಮುಂದುವರೆಸಬೇಕು ಅಂತ ತಮ್ಮತಮ್ಮೊಳಗೆ ಚರ್ಚೆ ನಡೆಸುತ್ತಿದ್ದರೇ ಹೊರತು ಅದು ಕನಸಾಗಿಯೇ ಉಳಿದಿತ್ತು. ಒಂದು ದಿನ ಹೇಗೋ ಯಾರೋ ಹೇಳಿದಂತೆ ಟೆಕ್ನಿಕಲ್ ವಿಷಯಗಳಲ್ಲಿ ಉಳಿದವರಿಗಿಂತ ಹೆಚ್ಚು ಪರಿಣಿತಿಯಿದ್ದ ಕೇಶವ ಕುಲಕರ್ಣಿಯವರನ್ನು ಸಂಪರ್ಕಿಸಿ ಆಸಕ್ತರೆಲ್ಲ ಕೂಡಿ ಚರ್ಚೆ ಮಾಡೋಣವೇ ಅಂತ ಕೇಳಿದಾಗ ಕೇಶವ ಅವರ ಪ್ರವಾದಿಯ ನ್ಯೂನೋಕ್ತಿಯಂಥ ಉತ್ತರ: ”ಯಾಕೆ ಕಣಿ ಕೇಳುತ್ತೀರಿ? ಶುರು ಮಾಡಿಬಿಡಿ!” ಹಾಗಾದರೆ ಕೂಡುವಾ ಅಂತ ನಿರ್ಧರಿಸಿದಾಗ ದೇಶದ ಮಧ್ಯದಲ್ಲಿಯ ಕೇಶವ ಅವರೇ ಹುಡುಕಿದ ’ವೆನ್ಯೂ’ ಆ ಯುಟೋಕ್ಸಿಟರ್! ನಮ್ಮವರಲ್ಲಿ ಯಾರೂ ಹೆಸರೇ ಕೇಳಿರದ ಆ ಊರು ಈಗ ಅನಿವಾಸಿಯ ಐತಿಹಾಸಿಕ ದಾಖಲೆಯಲ್ಲಿ ಚಿರಸ್ಮರಣೀಯ ಸ್ಥಾನ ಪಡೆದಿದೆ!

ಅಂದು ಕೂಡಿದ ಐವರು:

ಕೇಶವ ಕುಲಕರ್ಣಿ, ಉಮಾ ವೆಂಕಟೇಶ್, (ಜಿ ಎಸ್ ಎಸ್) ಗುಗ್ಗರಿ ಪ್ರಸಾದ, ವತ್ಸಲಾ ರಾಮಮೂರ್ತಿ, ಶ್ರೀವತ್ಸ ದೇಸಾಯಿ.

ಸಭೆಯ ಪೂರ್ವದಲ್ಲಿ ನಾನು ಮಾಡಿಟ್ಟುಕೊಂಡು ಒಯ್ದ ಟಿಪ್ಪಣಿಗಳು ಹೀಗಿವೆ:

ಪಪ್ರಥಮ ಮೀಟಿಂಗ್, ಯುಟೋಕ್ಸಿಟರ್: (L-R)ಉಮಾ, ವತ್ಸಲಾ, ಕೇಶವ, ಪ್ರಸಾದ್, ಶ್ರೀವತ್ಸ ಫೋಟೋ ಕೃಪೆ: ಕೇಶವ-ಶ್ರೀವತ್ಸ

To discuss;

  1. Mission statement
  2. Constitution:

Who will be members? How to admit? What is our commitment?

3, Communication; How, where to meet?

4, E- magazine? Blog (ಆಗ ತಾನೆ ನಮಗೆ ಬ್ಲಾಗ್ ದ ಕಲ್ಪನೆ ಬರುತ್ತಲಿತ್ತು) How to publish? ನಮಗಾರಿಗೂ ಅನುಭವವಿರಲಿಲ್ಲ. ಬಹುತೇಕ ಎಲ್ಲರಿಗೂ Baraha software ಉಪಯೋಗಿಸಿ ಗೊತ್ತಿತ್ತು. ಆದರೆ ಹೇಗೆ ಪ್ರಕಟಿಸುವದು, ಯಾರಿಗೂ ಗೊತ್ತಿರಲಿಲ್ಲ. (ಶಿಶುವಿನ ಅಂಬೆಗಾಲಿನ ಕ್ಷಣಗಳಿವು. ಈಗ ಇದೆಲ್ಲ ಅತಿ ಸುಲಭ ಅಥವಾ ಹಾಸ್ಯಾಸ್ಪದ ಅನಿಸಿದರೂ ಆಗ ಪ್ರತಿಯೊಂದು ಸಣ್ಣ mole hill ಸಹ ಮೇರುಪರ್ವತವಾಗಿ ಕಾಣುತ್ತಿತ್ತು!)

  1. Money?
  2. Membership: Who all can join? Resignation/termination (this was a very far sighted thought, or premonition because it was to haunt us 5 years later!) ಯಾಕಂದರೆ ನಾನು 20 ವರ್ಷಗಳಿಂದಲೂ ನಮ್ಮೂರಿನ ಒಂದು ವಿಡಿಯೋ ಕ್ಲಬ್ಬಿನ ಸದಸ್ಯನಾಗಿದ್ದೆ. ಅದರ Constitution ದಲ್ಲಿಯೂ ಆ ವಿಷಯದ ಪ್ರಸ್ತಾಪವಿತ್ತು!).

ಚೊಚ್ಚಲು ’ಸಭೆ’

ನಾವು ಕೂಡಿದ ಸ್ಥಳ ಒಂದು ಸಾಮಾನ್ಯ ಮೋಟರ್ವೇ ಸರ್ವಿಸಸ್ ಆಗಿತ್ತು. ನಿಗದಿತ ಸಮಯದಲ್ಲಿ ನಾವೆಲ್ಲ ಬಂದು ಕೂಡಿದೆವು. ಅದು ನಮ್ಮ ಮೊದಲ ಭೇಟಿ. ನಾವು ಒಂದು ರೂಮು ಸಹ ತೆಗೆದುಕೊಡಿರಲಿಲ್ಲ. ಲಭ್ಯವಿತ್ತೋ ಇಲ್ಲವೋ ಗೊತ್ತಿಲ್ಲ. ಒಂದು ಮೂಲೆಯ ಟೇಬಲ್ ಸುತ್ತ ಕುಳಿತು ಶುರುಮಾಡಿದೆವು. ಉಮಾ ಅವರು ತಮ್ಮ ಪೀಠಿಕೆಯಲ್ಲಿ ಮೇಲಿನ ವಿಚಾರಗಳ ಹಿನ್ನೆಲೆ ಕೊಟ್ಟಂತೆ ನೆನಪು.

ನಾಮಕರಣ: ನಮ್ಮ ವಿಚಾರ ವೇದಿಕೆಯನ್ನು ಏನೆಂದು ಕರೆಯುವದು? ಅದರಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಎರಡೂ ಪ್ರಮುಖವಾಗಿರಬೇಕು. ಉದ್ದವಾದರೂ, ಬಾಯಿ ತುಂಬಿದರೂ, ದೀರ್ಘ ಚರ್ಚೆಯಾದ ನಂತರ ಕೊನೆಗೆ ಎಲ್ಲರೂ ಒಪ್ಪಿದ್ದು: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ! ನಂತರ Mission statement ಮತ್ತು ಉದ್ದೇಶಗಳ ಬಗ್ಗೆ ಚರ್ಚೆಯಾಗಿತು. (ಅವನ್ನು ಕನ್ನಡದ ”ಅನಿವಾಸಿ’ ಬ್ಲಾಗ್ ನಲ್ಲಿ ಪ್ರಕಟಿಸಿದ್ದೇವೆ).

ಪ್ರಕಟಣೆ:

ತಾಂತ್ರಿಕ ಪಟು ಕೇಶವ ಅವರ ಸಲಹೆ ಇಲ್ಲಿ ಅಮೂಲ್ಯವಾಗಿತ್ತು. ಅವರಿಗೆ ತಮ್ಮದೇ ಒಂದು ಬ್ಲಾಗ್ ಕೆಲಕಾಲದಿಂದಲೂ ಸಂಭಾಳಿಸಿದ ಅನುಭವವಿತ್ತು. ನಮ್ಮ ಕಿಸೆಯಲ್ಲಿ ಮುಂಗಡ ಹಣ ಇಲ್ಲ. ಇಂಟರ್ನೆಟ್ ನಲ್ಲಿ ಫ್ರೀ ಪೋರ್ಟಲ್ ಗಳು ಬಹಳ ಇವೆ, ಉದಾ: ವರ್ಡ್ ಪ್ರೆಸ್. ಎಂದರು ಕೇಶವ. ಅವಧಿ ಇತ್ಯಾದಿ ಟೈಟಲ್ ಗಳ ಪರಿಚಯ ಮಾಡಿಸಿದರು. ಬರಹಗಳನ್ನು ಮೊದಲು ತಿಂಗಳಿಗೊಮ್ಮೆ ಪ್ರಕಟಿಸುವ ವಿಚಾರವಿತ್ತು. ಮ್ಯಾಗಝಿನ್ ”ಕಸಾಸಾಂವಿವೇ” KSSVV ಎನ್ನುವ ಹೆಸರಿನಲ್ಲೇ ಪ್ರಾರಂಭವಾಯಿತು.. ಮುಂದಿನ ಘಟ್ಟದಲ್ಲಿ ಬುಕ್ ಕ್ಲಬ್ ಸ್ಥಾಪಿಸುವ ವಿಚಾರ ಅಂದೇ ಸುಳಿದಿದ್ದರೂ ಆ ಯೋಜನೆ ಬಹುಸಮಯದ ವರೆಗೆ ಕೈಗೂಡಲಿಲ್ಲ.

ಸುಮಾರು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಚರ್ಚಿಸಿದ್ದಾಯಿತು. ಎಲ್ಲರಲ್ಲಿ ಒಂದು ಹೊಸ ಉತ್ಸಾಹ ತುಂಬಿ ತುಳುಕುತ್ತಿತ್ತು. ಏನೋ ಹೊಸ ದಾರಿಯ ನಾಂದಿ ಹಾಕಿದಂಥ ಅನುಭವ! ಎಲ್ಲರೂ ತಮ್ಮ ತಮ್ಮ ಈ-ಮೇಲ್ ವಿಳಾಸ, ಟೆಲಿಫೋನ್ ನಂಬರು ವಿನಿಮಯ ಮಾಡಿಕೊಂಡು ಆ ಭೇಟಿಯ ನೆನಪಿನಗಾಗಿ ಒಂದು ಗ್ರುಪ್ ಫೋಟೊ (Photo1)ತೆಗೆಸಿಕೊಂಡು ತಿಂಡಿ ತಿಂದು ಒಬ್ಬರನ್ನೊಬ್ಬರು ಬೀಳ್ಕೊಟ್ಟೆವು.

PS: ಆಗ ತಾನೇ ಈ ದೇಶದಲ್ಲಿ ಪಾರ್ಕಿಂಗ್ ಮೇಲೆ ನಿಗಾ ಇಡಲು ಅಲ್ಲಲ್ಲಿ ಕ್ಯಾಮರಾಗಳ ಸ್ಥಾಪನೆಯಾಗಿತ್ತು. ನಮ್ಮ ಕೂಟ ಎರಡು ಗಂಟೆಯ ಗಡವು ದಾಟಿದ್ದರಿಂದ ಒಂದು ವಾರದ ನಂತರ ನನ್ನ ಮನೆಯ ಟಪಾಲಿನಲ್ಲಿ ತೊಂಬತ್ತು ಪೌಂಡಿಗಳ ಫೈನ್ ನೋಟಿಸ್ ಬಂದು ಬಿದ್ದಿತ್ತು. ಜಾಲಜಗುಲಿ ವರ್ರ್ಡ್ ಪ್ರೆಸ್ಸಿನ ಮೂರು ವರ್ಷಗಳ ಚಂದಾ ನಾನೇ ತೆತ್ತ ಲೆಕ್ಕ. ಆದರೂ ಮನಸ್ಸಿಗೆ ಏನೂ ಬೇಜಾರಾಗಲಿಲ್ಲ. ಇಂಥ ಶುಭಾರಂಭವಾದಮೇಲೆ ಅದೊಂದು ಬರೀ ದೃಷ್ಟಿ ಬೊಟ್ಟು ಅಂತ ಸಮಾಧಾನ ಪಟ್ಟುಕೊಂಡೆ!

ಲೇಖನ ಮತ್ತು ಚಿತ್ರಗಳು: ಶ್ರೀವತ್ಸ ದೇಸಾಯಿ

 (ಮುಂದಿನ ವಾರ -ಅನಿವಾಸಿ ನದೆದುಬಂದ ಹಾದಿ… ಭಾಗ ೨)

 

ಕವನ ಕೇಳಿ – ‘ಅನಿವಾಸಿ’ಯ ಹೊಸ ಪ್ರಯತ್ನ + ಬೋನಸ್!

ಬ್ರಿಟ್-ಕನ್ನಡಿಗರ ಕವನಗಳು: ತುಂಗೆ-ಟೆಮ್ಸ್ ನದಿಗಳ ನಡು ಸೇತುವೆ!

ಹೊಸ ಪ್ರಯತ್ನವಿದು. ‘ಅನಿವಾಸಿ’ಯ ಈ ಜಾಲಜಗುಲಿಯಲ್ಲಿ ಹೊಸ ಪ್ರಯತ್ನ – ಕವನ ವಾಚನವನ್ನು ನೇರ ನಿಮಗೆ ತಲುಪಿಸುವುದು.

ಕಳೆದ ವಾರ ಕೆಲ ಕವನಗಳನ್ನು ಪ್ರಕಟಿಸಿದ್ದೆವು. ಆಗ ಹೇಳಿದ್ದು – “ಕನ್ನಡದಿಂದ ಇಂಗ್ಲಿಷ್ ಗೆ ಭಾವಾನುವಾದ ಮಾಡಿದರು. ಇಂಗ್ಲಿಷ್ ನಿಂದ ಕನ್ನಡಕ್ಕೆ ಧಾರೆಯಿಳಿಸಿದರು. ಜೀವ ಕೊಟ್ಟರು, ತಮ್ಮ ಖಾಸಗಿ ಅನುಭವಗಳಿಗೆ, ಕ್ಷಣಗಳಿಗೆ, ಭಾವನೆಗಳಿಗೆ. ಮೆಚ್ಚಿದರು, ಯಾವುದೋ ದೇಶ ಭಾಷೆ ಸಂಸ್ಕೃತಿಗೆ ಸೇರಿದ ಕವನವನ್ನು, ಅದಕ್ಕೂ ಕನ್ನಡದ ಕಂಪನ್ನ ಹೊದಿಸಿದರು. ಕನ್ನಡದ ಮನಸ್ಸಿನಿಂದ ಹೊಮ್ಮಿದ ಕವನಗಳು ಇಂಗ್ಲಿಷ್ ನಲ್ಲಿ, ಇಂಗ್ಲೆಂಡಿನ ನೆಲದ ಮೇಲೆ ನೆಲೆ ನಿಂತವು.”

ಮೇಲೆ ಹೇಳಿದ ಮಾತಿಗೆ ಮತ್ತಷ್ಟು ಕಳೆ ತುಂಬುವ ಪ್ರಯತ್ನವಿದು. ಇಲ್ಲಿ ಕೇಶವ ಕುಲಕರ್ಣಿ ಬಹಳ ಪ್ರೀತಿಯಿಂದ ಮಾಡಿದ ಭಾವಾನುವಾದ ಅಷ್ಟೇ ಅಲ್ಲ, ಅವರದೇ ದನಿಯಲ್ಲಿ ಕ್ಷಣಗಳು ಕವನವನ್ನು ನಾವು ಕೇಳಬಹುದು. ನವೆಂಬರ್ ೫ರಂದು ಅಷ್ಟೇ ಪ್ರೀತಿ, ಅಭಿಮಾನದಿಂದ ಅನ್ನಪೂರ್ಣ ಆನಂದ್ ಹಾಡಿದರು. ಯಾವ ಹಾಡು? ಯಾರದ್ದು? ಟಿ. ಪಿ. ಕೈಲಾಸಂ ಅವರದ್ದು! ‘ನಮ್ಮ ತಿಪ್ಪಾರಳ್ಳಿ ಬಲು ದೂರ’ ಹಾಡೂ (ಕವನ) ಇಲ್ಲಿದೆ. ಅದರ ಜೊತೆಗೆ ಕನ್ನಡದ ಇಬ್ಬರು ಮಹನೀಯರ ದನಿ ಕೇಳುವ ಬೋನಸ್!!

ಕೇಳಿ; ಕವನಗಳನ್ನು ಓದಿ. ಹಂಚಿಕೊಳ್ಳಲು ಮರೆಯದಿರಿ. – ಸಂ.

ಕೆಳಗಿನ ವಿಡಿಯೋ ಚಿತ್ರದ ಮೇಲೆ (ತ್ರಿಕೋನ ಇರುವ ಕಡೆ) ಕ್ಲಿಕ್ಕಿಸಿ. ಆಡಿಯೋ ಬರುತ್ತದೆ.

 

Instants: Jorge Luis Borges

 If I could live again my life,

In the next – I’ll try,

– to make more mistakes,

I won’t try to be so perfect,

I’ll be more relaxed,

I’ll be more full – than I am now,

 

 

In fact, I’ll take fewer things seriously,

I’ll be less hygenic,

I’ll take more trips,

I’ll watch more sunsets,

I’ll climb more mountains,

I’ll go to more places – I’ve never been,

I’ll eat more ice creams and less (lime) beans,

I’ll have more real problems – and less imaginary

Ones

 

I was one of those people who live

prudent and prolific lives –

each minute of his life,

Offcourse that I had moments of joy – but,

if I could go back I’ll try to have only good moments,

 

If you don’t know – thats what life is made of,

Don’t lose the now!

I was one of those who never goes anywhere

without a thermometer,

without a hot-water bottle,

and without an umberella and without a parachute,

If I could live again – I will travel light,

If I could live again – I’ll try to work bare feet

at the beginning of spring till

the end of autumn,

I’ll ride more carts,

I’ll watch more sunrises and play with more children

If I have the life to live

but now I am 85,

and I know that I am dying …

ಕ್ಷಣಗಳು: ಕೇಶವ ಕುಲಕರ್ಣಿ

ನಾ ಮತ್ತೆ ಬದುಕಬಲ್ಲೆನಾದರೆ

ನನ್ನ ಯತ್ನವೆಲ್ಲ ಆಗ

ಇನ್ನೂ ಹೆಚ್ಚು ತಪ್ಪು ಮಾಡುವುದು

ಈಗಿನಷ್ಟು ಒಳ್ಳೆಯವನಾಗದಿರುವುದು

ಇನ್ನೂ ಹೆಚ್ಚು ಆರಾಮವಾಗಿರುವುದು

ಈಗಿನಕ್ಕಿಂತ ಹೆಚ್ಚು ತುಂಬಿಕೊಂಡಿರುವುದು

 

ನಿಜಾಂದ್ರೆ, ಕಡಿಮೆ ಗಂಭೀರನಾಗಿರುವುದು

ಹೆಚ್ಚು ಕೊಳಕಾಗಿರುವುದು

ಹೆಚ್ಚು ಓಡಾಡುವುದು

ಹೆಚ್ಚೆಚ್ಚು ಸಂಜೆಬಾನು ನೋಡುತ್ತ ಕೂರುವುದು

ಹೆಚ್ಚೆಚ್ಚು ಬೆಟ್ಟ ಗುಡ್ಡ ಹತ್ತುವುದು

ಇನ್ನೂ ಕಂಡರಿಯದ ಜಾಗಕ್ಕೆ ಹೋಗುವುದು

ತುಂಬ ಐಸ್‍ಕ್ರೀಮು ತಿನ್ನುವುದು, ಕಡಿಮೆ ಬೀನ್ಸು ತಿನ್ನುವುದು

ಅಸಲಿ ಸಮಸ್ಯೆಗಳನ್ನು ಜಾಸ್ತಿ, ಕಾಲ್ಪನಿಕವಾದವುಗಳನ್ನು ಕಡಿಮೆ

ಮಾಡಿಕೊಳ್ಳುವುದು

 

ನಾನೊಬ್ಬ ದೂರದೄಷ್ಟಿಯ ಜಾಗರೂಕ ನಾಗರಿಕ

ಬದುಕಿನ ಪ್ರತಿ ನಿಮಿಷದಲ್ಲೂ!

ಹಾಗಂತ ಬದುಕಲ್ಲಿ ನಲಿವಿನ ಕ್ಷಣಗಳ ಕಂಡಿಲ್ಲ ಎಂದೇನಿಲ್ಲ

ಮರಳಿ ಹೋಗುವೆನಾದರೆ ನನಗಿನ್ನೂ ಅಂಥ ಕ್ಷಣಗಳೇ ಬೇಕು

 

ನಿನಗೆ ಗೊತ್ತಿಲ್ಲದಿದ್ದರೆ ಕೇಳು – ಬದುಕು ಎಂದರೆ ಅದೇ-

ಈಗನ್ನು ಕಳೆದುಕೊಳ್ಳಬೇಡ

 

ನಾನೀಗ ಎಲ್ಲಿಗೆ ಹೋದರೂ

ಜ್ವರ ಮಾಪಕ ಬೇಕು

ಬಿಸಿನೀರು ಇರಬೇಕು

ಕೊಡೆ ಬೇಕು, ಗಾಳಿಕೊಡೆ ಕೂಡ

 

ಮತ್ತೆ ಜೀವಿಸಬಲ್ಲೆನಾದರೆ ನನ್ನದು ಬೆಳಕಿನ ಪಯಣ

ಮತ್ತೆ ಬದುಕಬಲ್ಲೆನಾದರೆ ನನ್ನದು ಬರಿಗಾಲ ದುಡಿತ

ವಸಂತನಿಂದ ಹೇಮಂತ ಬರುವವರೆಗೂ.

ಬಂಡಿ ಓಡಿಸುತ್ತೇನೆ ತುಂಬ ಸಲ

ಮೂಡಲದಲ್ಲಿ ನೇಸರನಿಗಾಗಿ ಕಾಯುತ್ತೇನೆ ತುಂಬ ಸಲ

ಮತ್ತೆ ಮಕ್ಕಳೊಡನೆ ಆಡುತ್ತೇನೆ ತುಂಬ ಹೊತ್ತು

 

ಮತ್ತೆ ಬದುಕನ್ನು ಇನ್ನೊಂದು ಸಲ ಬದುಕಬಲ್ಲೆನಾದರೆ…

ಆದರೆ ನನಗೀಗ ವರ್ಷ ಎಂಬತ್ತೈದು

ಇನ್ನೆಷ್ಟು ದಿನ ನಾನು ಬದುಕಬಲ್ಲೆ?

 

ಕೆಳಗಿನ ವಿಡಿಯೋ ಚಿತ್ರದ ಮೇಲೆ (ತ್ರಿಕೋನ ಇರುವ ಕಡೆ) ಕ್ಲಿಕ್ಕಿಸಿ. ಆಡಿಯೋ ಬರುತ್ತದೆ.

 

It’s a long way to Tipperary… Jack Judge

Up to mighty London

Came an Irishman one day.

As the streets are paved with gold

Sure, everyone was gay,

Singing songs of Piccadilly,

Strand and Leicester Square,

Till Paddy got excited,

Then he shouted to them there:

It’s a long way to Tipperary,

It’s a long way to go.

It’s a long way to Tipperary

To the sweetest girl I know!

Goodbye, Piccadilly,

Farewell, Leicester Square!

It’s a long long way to Tipperary,

But my heart’s right there.

(repeat)

Paddy wrote a letter

To his Irish Molly-O,

Saying, “Should you not receive it,

Write and let me know!”

“If I make mistakes in spelling,

Molly, dear,” said he,

“Remember, it’s the pen that’s bad,

Don’t lay the blame on me!

It’s a long way to Tipperary,

It’s a long way to go.

It’s a long way to Tipperary

To the sweetest girl I know!

Goodbye, Piccadilly,

Farewell, Leicester Square!

It’s a long long way to Tipperary,

But my heart’s right there.

ತಿಪ್ಪಾರಳ್ಳಿ ಬಲು ದೂರಾ

ಟಿ. ಪಿ. ಕೈಲಾಸಂ

 

ನಮ್ ತಿಪ್ಪಾರಳ್ಳಿ ಬಲು ದೂರಾ,

ನಡೆಯಕ್ ಬಲು ದೂರಾ
ಅಲ್ಲಿ ನಡೆಯೋಳ್ ನಮ್ ಬಸ್ವಿ ॥

ಬೋರೇಗೌಡನೆಂಬ ಗೌಡ ಬಂದ ಬೆಂಗಳೂರ್ಗೆ, ಬಂದ ಬೆಂಗಳೂರ್ಗೆ
ಬಳೇಪೇಟೆಮೇಲೆ ಹತ್ತಿ ಬರುತಿದ್ದಾಗ, ಗೌಡ ಬರುತಿದ್ದಾಗ
ಪೌಡರ್ ಗೀಡರ್ ಹಚ್ಚಿಕೊಂಡಾ ಮನುಷ್ಯಳೊಬ್ಬ್ಳು
ಕಣ್ಣು ಗಿಣ್ಣು ಮಿಟುಕ್ಸಿ ಗಿಟುಕ್ಸಿ ನೋಡಿ ನಕ್ಕಾಗ
ಆಗ ಬೇಡವ್ವಾ ಬಳೇಪೇಟೇ
ನಮಸ್ಕಾರ ನಗರ್ ಪೇಟೇ
ನಮ್ ತಿಪ್ಪಾರಳ್ಳಿ ಬಲು ದೂರಾ ॥೧॥

 

ತಮಾಶಿ ನೋಡೋದಕ್ಕೆ ಬೋರಾ ಬಂದ ಲಾಲ್ಬಾಗ್ ತೋಟಕ್ಕೆ
ಬೋರಾ ಲಾಲ್ಬಾಗ್ ತೋಟಕ್ಕೆ
ಹುಲೀನ್ ನೋಡಿ ಬರೇಹಾಕಿದ್ ದೊಡ್ಬೆಕ್ ಅಂದ್ಕೊಂಡ್ ಬೋರಾ
ದೊಡ್ಬೆಕ್ ಅಂದ್ಕೊಂಡಾ
ಬೋರಾ ನುಗ್ಗಿ ಹುಲೀ ಬೆನ್ ಸವರ್ಸ್ತಾ ಪುಸ್ ಪುಸ್ ಅಂತಿದ್ದಾ
ಬೋರಾ ಪುಸ್ ಪುಸ್ ಅಂತಿದ್ದಾ
ಹುಲೀ ರೇಗ್ಕೊಂಡ್ ಬೋರನ್ ಕೆಡುವ್ಕೊಂಡ್ ಹಲ್ಗಳ್ ಬಿಟ್ಟಾಗ
ಬೋರಾ ಹೆದರ್ಕೊಂಡ್ ಕಣ್ಣೀರ್ ಸುರಿಸ್ತಾ ಕೈಮುಗಿದ್ ಕಿರಿಚ್ದಾಗ
ಬುಟ್ಬುಡಪ್ಪಾ ಬೆಕ್ಕಿನ್ರಾಯಾ ನಮಸ್ಕಾರ್ ನನ್ನೊಡೆಯಾ
ನಮ್ ತಿಪ್ಪಾರಳ್ಳಿ ಬಲು ದೂರಾ ॥ ೨ ॥

 

ಬಸ್ವೀನ್ ಕರ್ಕೊಂಡ್ ಬಂದಾ ಬೋರಾ ವಿಜಯದಶಮೀಗೆ
ಬೋರಾ ವಿಜಯದಶಮೀಗೆ
ಅರಮನೆ ಗೇಟ್ ಮುಂದೆ ಅಂಬಾರಿ ಕಟ್ಟಿದ್ ಆನೆ ನೋಡ್ದ
ಬೋರಾ ಆನೆ ನೋಡ್ದ
ಬಸ್ವೀನ್ ಮೆಟ್ಟಿಲ್ ಮೇಲೆ ಹತ್ತಿಸ್ಬಿಟ್ಟು ತಾನು ಬುರ್ ಬುರ್ ನಕ್ಬಿಟ್ಟಾ
ಬೋರಾ ಬುರ್ ಬುರ್ ನಕ್ಬಿಟ್ಟಾ
ಮಾವ್ತಾ ಮುದ್ಕಾ ಗುರೀಗುರ್ ಗುಮ್ಮಾ ಇಲಿಯಂತ್ ಕಿರಿಚ್ಬಿಟ್ಟಾ
ಆನೆ ಕೊರಳ್ನಾ ಓಡಿಸ್ತಾ ನಡಸ್ತಾ ಹತ್ರ ಹೋಗ್ತಿದ್ದಾ
ಬೋರಾ ಹತ್ರ ಹೋಗ್ತಿದ್ದಾ
ಮನೇಗ್ ಹೋಗ್ರೋ ಮಾವುತ್ ಸಾಬ್ರ ಗಂಟೆ ಉಳಿಸ್ಕೊಂಡ್ ಗುರಿಕಾರಾ

 

ನಮ್ ತಿಪ್ಪಾರಳ್ಳಿ ಬಲು ದೂರಾ,

ನಡೆಯಕ್ ಬಲು ದೂರಾ
ನಮ್ ತಿಪ್ಪಾರಳ್ಳಿ ಬಲು ದೂರಾ, ನಡೆಯಕ್ ಬಲು ದೂರಾ
ಆದ್ರೆ ಅಲ್ಲಿ ನಡೆಯೋಳ್ ನಮ್ ಬಸ್ವಿ ॥ ೩॥