ಪೂರ್ವ-ಪಶ್ಚಿಮಗಳ ಮಿಲನ (EAST MEETS WEST) – ಡಾ. ಲಕ್ಷ್ಮೀನಾರಾಯಣ ಗುಡೂರ ಬರೆದ ವಿಶೇಷ ವರದಿ

ನವೆಂಬರ್ ೫ ರಂದು ಡಾರ್ಬಿಯಲ್ಲಿ ನಡೆದ ಕನ್ನಡ ಬಳಗ ಯು.ಕೆ. ಆಯೋಜಿತ ‘ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ’ ಸಮಾರಂಭದಲ್ಲಿ ಒಂದು ವಿಶೇಷವಿತ್ತು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ‘ಈಸ್ಟ್ ಮೀಟ್ಸ್ ವೆಸ್ಟ್’ ಅಥವಾ ‘ಪೂರ್ವ ಪಶ್ಚಿಮಗಳ ಮಿಲನ’ ಎಂಬ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕನ್ನಡ ವೇದಿಕೆಯ ‘ಅನಿವಾಸಿ’ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ ತಮ್ಮದೊಂದು ಕವನವನ್ನು ಸಹೃದಯ ಸಭಿಕರ ಮುಂದೆ ಓದಿ, ಅದರ ಅನುವಾದವನ್ನೂ ಪ್ರಚುರಪಡಿಸಬೇಕಿತ್ತು. ಅಥವಾ, ಅವರು ಆ ಎರಡು ಭಾಷೆಗಳಿಂದ ಒಂದು ಕವನವನ್ನು ಆರಿಸಿಕೊಂಡು ಅದನ್ನು, ಮತ್ತದರ ಭಾಷಾಂತರವನ್ನು ಓದಬಹುದಿತ್ತು.  ಆ ಕವನಗಳನ್ನು ಬರೆದ ಬಗೆ, ಜಾಗತಿಕ ಸಾಹಿತ್ಯದಿಂದ ಒಂದನ್ನು ಆಯ್ಕೆ ಮಾಡಿದ್ದರಲ್ಲಿ ಅಡಗಿದ್ದ ಜಾಣ್ಮೆ, ಮತ್ತು ತರ್ಜುಮೆ ಮಾಡಿದ ರೀತಿಯಲ್ಲಿದ್ದ ವಿಸ್ಮಯ, ಭಾಷಾ ಮತ್ತು ವಿಷಯ ಜ್ಞಾನ – ಇವೆಲ್ಲಾ ‘ಪೂರ್ವ ಪಶ್ಚಿಮಗಳ ಮಿಲನ’ದ ಹಿಂದಿದ್ದ ಆಶಯಗಳು.

ಜೊತೆಗೆ, ನಮ್ಮ ಕನ್ನಡ ಕಿರಿಯ ಕಣ್ಮಣಿಗಳು ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಿರುವ ಸಾಹಿತ್ಯವನ್ನು ಹಂಚಿಕೊಂಡು, ಅದರ ಅನುವಾದವನ್ನ ಪ್ರಸ್ತುತಪಡಿಸಿ, ಕಿರಿ-ಹಿರಿಯರ ‘ಭಾಷಾಮಿಲನ’ವನ್ನು ಕೂಡ ನೋಡುವುದು ಸಾಧ್ಯವಾಗುವುದೇ ಎಂಬ ಒಂದು ಪ್ರಶ್ನೆಯಿತ್ತು. ಇವೆಲ್ಲಾ ಈಡೇರಿದವೇ ಎನ್ನುವುದನ್ನು ಡಾ. ಲಕ್ಷ್ಮೀನಾರಾಯಣ ಗುಡೂರ ರವರು ತಮ್ಮ ಲೇಖನದಲ್ಲಿ ಗುರ್ತಿಸಿದ್ದಾರೆ. ಅವರ ಅಪರೂಪದ ಪ್ರತಿಭೆಯನ್ನು ಬಳಸಿ ಅವರೇ ಸಂದರ್ಭಸೂಚ್ಯ ಚಿತ್ರಗಳನ್ನು ಕೂಡ ರೇಖೆಗಳಲ್ಲಿ ಮೂಡಿಸಿದ್ದಾರೆ. ಲಕ್ಷ್ಮೀನಾರಾಯಣರ ಲೇಖನದ ಜೊತೆಗೆ ‘ಈಸ್ಟ್ ಮೀಟ್ಸ್ ವೆಸ್ಟ್’ ಕಾರ್ಯಕ್ರಮದಲ್ಲಿ ಓದಿದ ಇಬ್ಬರು ಕಿರಿಯರ ಕವನಗಳು, ಅವುಗಳ ಭಾವಾನುವಾದಗಳು ಈ ಶುಕ್ರವಾರ ನಿಮ್ಮ ಮುಂದೆ ಇದೆ. – ಸಂ.

thumbnail_20161105_130606
ಕಾರ್ಯಕ್ರಮದಲ್ಲಿ ಹಾಜರಿದ್ದ ಕನ್ನಡ ಬಳಗದ ಸದಸ್ಯರು              ಲೇಖಕರು ಬಲ ತುದಿಯಲ್ಲಿ

 

ಪೂರ್ವ-ಪಶ್ಚಿಮಗಳ ಮಿಲನ (EAST MEETS WEST) ಕಾರ್ಯಕ್ರಮದ ವಿಶೇಷ ವರದಿ – ಡಾ. ಲಕ್ಷ್ಮೀನಾರಾಯಣ ಗುಡೂರ

ಈ ವರ್ಷದ ಯು.ಕೆ. ಕನ್ನಡ ಬಳಗದ ದೀಪಾವಳಿ ಕಾರ್ಯಕ್ರಮಕ್ಕೆ ನಾನು ಹೋಗಲು ನಿರ್ಣಯಿಸಿದ್ದಕ್ಕೆ ಕೊಡಬಹುದಾದ ಕಾರಣಗಳಲ್ಲಿ ಒಂದು – ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ಯು.ಕೆ. (KSSVV UK) ಏರ್ಪಡಿಸಿದ್ದ ಕವಿಗೋಷ್ಠಿ. ಅದಕ್ಕವರು ಕೊಟ್ಟ East Meets West (“ಪೂರ್ವ-ಪಶ್ಚಿಮಗಳ ಮಿಲನ”) ಅನ್ನುವ ಹೆಸರು ಕೇಳಿಯೇ ಸ್ವಲ್ಪ ಕುತೂಹಲ ಉಂಟಾಗಿತ್ತು. ನಂತರ ಕಾರ್ಯಕ್ರಮ ಪಟ್ಟಿ ಬಂದಾಗ ಅದರಲ್ಲಿನ ಕಾರ್ಯಕ್ರಮದ  ವಿವರ, ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್ (Cathy Grindrod) ಅವರ ಹೆಸರು ನೋಡಿದ ಮೇಲಂತೂ ಸ್ವಲ್ಪ ಹೆಚ್ಚೇ ಆಸಕ್ತಿ ಮೂಡಿತ್ತೆನ್ನಬಹುದು.

daffodil-quest
ಹಾಸ್ಯಚಿತ್ರ ಕೃಪೆ: ಡಾ. ಲಕ್ಷ್ಮೀನಾರಾಯಣ ಗುಡೂರ್

ಶನಿವಾರ ೦೫.೧೧.೨೦೧೬ ರಂದು ಬೆಳಗ್ಗೆ ನಾವಿರುವ ಪ್ರೆಸ್ಟನ್ (Preston, UK) ಊರಿನಿಂದ ಹೊರಡುವ ವೇಳೆಗೆ ಬಿದ್ದಿದ್ದ ಬಿಸಿಲಿನಿಂದಲೇ ಅರ್ಧ ಮನಸ್ಸಿಗೆ ಖುಷಿ. ಕನ್ನಡ ಬಳಗ ಕಾರ್ಯಕ್ರಮ ನಡೆಯುವ ಸ್ಥಳ (venue) ‘ನದಿಬದಿಯ ಕೇಂದ್ರ’ (Riverside Centre) ಗೆ ಹೋಗಿ ಮುಟ್ಟಿದಾಗ ೧೦-೪೫. ಮುಖ್ಯ ಕಾರ್ಯಕ್ರಮದ ಸ್ವಾಗತ ಭಾಷಣ ಇತ್ಯಾದಿ ಮುಗಿದು ಪಕ್ಕದ ಚಿಕ್ಕ ಕಟ್ಟಡಕ್ಕೆ ಬಂದು ಕುಳಿತೆವು. ಸುತ್ತ ಕುಳಿತವರ ಕಡೆ ಕಣ್ಣು ಹಾಯಿಸಿದಾಗ ಕಂಡದ್ದು ಮಕ್ಕಳು-ದೊಡ್ಡವರ ಆಸಕ್ತ ಮುಖಗಳು. ಕಾರ್ಯಕ್ರಮ ಹೆಚ್ಚು ಕಡಿಮೆ ಸಮಯಕ್ಕೇ ಶುರುವಾಯ್ತು. ಡಾರ್ಬಿಶೈರಿನ ಮೊದಲ ರಾಜ ಕವಯಿತ್ರಿ (poet laureate 2005-7) ಕ್ಯಾಥಿ ಗ್ರಿಂಡ್ರಾಡ್, ಇಲ್ಲಿನ ರಿವಾಜಿನಂತೆ ವೇಳೆಗೆ ಸರಿಯಾಗಿ ಹಾಜರಿದ್ದರು. ಆಸ್ಟ್ರೇಲಿಯಾದಿಂದ ಬಂದು ಈಗ ಇಂಗ್ಲೆಂಡಿನಲ್ಲಿ ನೆಲೆಸಿರುವ, ‘ಅನಿವಾಸಿ’ ಯಾ ಸಂಪಾದಕಿ ವಿನತೆ ಶರ್ಮ ಕಾರ್ಯಕ್ರಮವನ್ನು ನಡೆಸಿ ಕೊಡುವ ಹೊಣೆ ಹೊತ್ತಿದ್ದರು. ಅವರೊಂದಿಗೆ ವೇದಿಕೆಯ ಮೇಲೆ ಕಸಾಸಾವಿವೇದಿಕೆಯ ಮಾನನೀಯ ಸದಸ್ಯರಾದ ಶ್ರೀ ಶ್ರೀವತ್ಸ ದೇಸಾಯಿ, ಜಿ ಎಸ್ ಶಿವಪ್ರಸಾದ್ ಹಾಗೂ ತಾಂತ್ರಿಕ ನಿರ್ವಾಹಕರ ಹೊಣೆಗಾರಿಕೆಯಲ್ಲಿ ರಾಮಶರಣ ಲಕ್ಷ್ಮೀನಾರಾಯಣ ಸಹ ಇದ್ದರು.thumbnail_20161105_132556

ಜಿ ಎಸ್ ಶಿವಪ್ರಸಾದ್ ಅವರು ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್ ಅವರ ಪರಿಚಯ ಮಾಡಿಕೊಡುವುದರೊಂದಿಗೆ ಕಾರ್ಯಕ್ರಮದ ಪ್ರಾರಂಭವನ್ನು ಘೋಷಿಸಿದರು. ಕಾರ್ಯಕ್ರಮದ ಸಾರಥ್ಯ ವಹಿಸಿದ್ದ ವಿನತೆ ಶರ್ಮ, ಕಲಾಪದ ರೂಪು-ರೇಷೆಗಳನ್ನು ಕೊಟ್ಟು, ಪ್ರತಿಯೊಬ್ಬ ಕವಿಯ ಸಮಯ ಪರಿಧಿಯನ್ನು ವಿವರಿಸಿದರು. ಎಂಟು ಕವನಗಳನ್ನು ಆರಿಸಲಾಗಿದ್ದು, ಆಯಾ ಕವಿಗಳು ಸ್ವತಃ ಕಾವ್ಯವಾಚನ ಮಾಡುವುದಾಗಿಯೂ, ಅದಕ್ಕೂ ಮುನ್ನ ತಾವು ಒಂದು ನಿಮಿಷದ ‘ಸಿಹಿ-ಹನಿ’ (short and sweet) ಕವಿಪರಿಚಯ ಮಾಡಿ ಕೊಡುವುದಾಗಿಯೂ ವಿನತೆ ಶರ್ಮ ಸಾರಿದರು. ಪ್ರತಿ ಕವಿಯ ಸರದಿಯ ಬಳಿಕ ಮುಖ್ಯ ಅತಿಥಿ ಕವನದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹೇಳುವವರಿದ್ದರು.

 ಮೊದಲಿನ ಎರಡು ಕವನಗಳು ಬಾಲಕವಿಗಳದ್ದು – ೧೩ ವರ್ಷ ವಯಸ್ಸಿನ ಅಮೋಘ ರಾಮಶರಣ್ (An ode to food) ಹಾಗೂ ೧೧ರ ಸಿಯಾ ಕುಲಕರ್ಣಿ (The Griff). ಅಮೋಘ ತನ್ನ ಕವನವನ್ನು ಊಟದಂಥ ಹಗುರ ವಿಷಯದಿಂದ ಶುರು ಮಾಡಿ, ಜಗತ್ತಿನ ಜನರ ಬಡತನದಂಥ ಗಂಭೀರ ವಿಷಯದೊಂದಿಗೆ ಮುಗಿಸುತ್ತಾನೆ – ಮನುಷ್ಯನಿಗೆ ಇರುವುದರಲ್ಲಿ ತೃಪ್ತಿ ಇರಬೇಕೆಂಬ ಸಂದೇಶದೊಂದಿಗೆ. ಈ ಕವನದ ಕನ್ನಡ ಅನುವಾದವನ್ನು ಅಮೋಘನ ತಂದೆ ಡಾ. ರಾಮಶರಣ ಲಕ್ಷ್ಮೀನಾರಾಯಣ ಓದಿದರು.

 ಸಿಯಾ ಕುಲ್ಕರ್ಣಿಯ ಕವನ ಗಹನವಾದ ವಿಷಯದೊಂದಿಗೆ ಶಬ್ದಗಳ ಮೂಲಕ ಆಟವಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಮಗುವಿನ ಕತ್ತಲೆಯ ಬಗೆಗಿನ ಭಯವೇ ಮುಖ್ಯ ವಿಚಾರವೆನಿಸಿದರೂ, ಅಲ್ಲಿರುವ ಭಾವನೆಗಳನ್ನು ವಯಸ್ಕ ಜೀವನದ ಯಾವುದೇ ಭಯಕ್ಕೂ ಹೊಂದಿಸಿ ನೋಡಬಹುದಾಗಿದೆ.

 ಕೇಶವ ಕುಲಕರ್ಣಿಯವರ ಯತ್ನ ಕನ್ನಡದ ಡಾ. ಜಿ ಎಸ್ ಶಿವರುದ್ರಪ್ಪನವರ “ಗೋಡೆಗಳು” ಕವನವನ್ನು ಇಂಗ್ಲಿಷಿಗೂ, ಇಂಗ್ಲಿಷಿನ “Instants” (ಸ್ಪ್ಯಾನಿಷ್ ಮೂಲ – ಹೋಹಿ ರುಇಸ್ ಬೋರ್ಗೆಸ್ ರ ರಚನೆ) ಅನ್ನು ಕನ್ನಡಕ್ಕೂ ತರುವುದು. ಮೊದಲನೇ ಕವನ “The Walls” ಇಬ್ಬರು ವ್ಯಕ್ತಿಗಳ ಸಂಬಂಧದಲ್ಲಿ ಒಮ್ಮೆಲೇ ಬೆಳೆದು ಅಡ್ಡ ನಿಲ್ಲುವ, ಸಂಬಂಧಗಳನ್ನು ಹಾಳುಗೆಡವುವ ಕಾಲ್ಪನಿಕ ಗೋಡೆಗಳ ಚಿತ್ರಣ ನೀಡುತ್ತದೆ. ಎರಡನೆಯದ್ದು, ಜೀವನವನ್ನು ಒಂದು ವೇಳೆ ರಿವೈಂಡ್ ಮಾಡುವ ಹಾಗಿದ್ದಿದ್ದರೆ ಏನೆಲ್ಲಾ ಮಾಡುತ್ತಿದ್ದೆ ಎನ್ನುವ ಕವಿಯ ಕಲ್ಪನೆಯ ಮೂಲಕ, ನಮ್ಮ-ನಿಮ್ಮ ಕನಸನ್ನು ಕೆದಕುತ್ತದೆ. ಆದರೆ, ಕೊನೆಗೆ ವಾಸ್ತವಿಕತೆಗೆ ತಂದು ನಿಲ್ಲಿಸುತ್ತದೆ.

ಡಾ. ಜಿ ಜಯರಾಂ ತಮ್ಮ ಕವನದ ಮೂಲಕ ವಿವಿಧ ಎಡೆಗಳಲ್ಲಿ ಶಾಂತಿಯನ್ನು ಹುಡುಕುವ ಯತ್ನ ಮಾಡುತ್ತಾರೆ. ನಮ್ಮ ಪ್ರಿಯರನ್ನು ಅಂತ್ಯದಲ್ಲಿ ಕೊನೆಯ ಬಾರಿಗೆ ಬೀಳ್ಕೊಡುವ ಸ್ಥಳದಲ್ಲಿ ಪರಮಶಾಂತಿಯಿದೆ ಎಂದು ಅಭಿಪ್ರಾಯಪಡುತ್ತಾರೆ.

ನಂತರ ಬಂದ ಡಾ. ಪ್ರಸಾದ್ ಎರಡು ಕವನಗಳನ್ನು ಪ್ರಸ್ತುತಪಡಿಸಿದರು – Let go, Mother let go ಹಾಗೂ Snowscape. ಡಾ. ಪ್ರಸಾದ್ Let go, Mother let go ಕವನದಲ್ಲಿ ತಾಯಿಯ ಪ್ರೀತಿಯನ್ನು ಅರಿವಿನಲ್ಲಿ ಇಟ್ಟುಕೊಂಡೇ, ಜೀವನದಲ್ಲಿ ಗುರಿ ಸಾಧಿಸುವ ಆಸೆಯಿಂದ ಗೂಡು ಬಿಟ್ಟು ಹಾರಲೇಬೇಕಾದ ಮಗುವಿನ ಕೋರಿಕೆಯನ್ನು ಚಿತ್ರಿಸುತ್ತಾರೆ. ಹೊರಗೆ ಹೋದರೂ ಮತ್ತೆ ತಾಯಿಯ ಬೆಚ್ಚನೆಯ ಪ್ರೀತಿಯ ಮಡಿಲಿಗೆ ಬಂದೇ ಬರುವ, ಜೊತೆಯಲ್ಲಿ ಯಶಸ್ಸಿನ ಗರ್ವವನ್ನು ತರುವ ಮಗುವಿನ ಆಸೆಯನ್ನು ವಿವರಿಸುತ್ತಾರೆ.  ಎರಡನೆಯ ಕವನ Snowscapeನಲ್ಲಿ ಚಳಿಗಾಲದ ಸೌಂದರ್ಯದ, ಹಿಮಮಾನವನ (snowman) ಜೀವನದ ಚಿತ್ರಣ ಕೊಡುತ್ತಾರೆ. ಚಳಿಗಾಲ ಕಳೆದು ಬಿಸಿಲು ಬಂದಂತೆ ಹಿಮಮಾನವ ಕರಗಿ ನೀರಾಗಿ ಹರಿದು ಹೋಗುವುದನ್ನು ಮಾನವನ ಕ್ಷಣಿಕ ಜೀವನಕ್ಕೆ ಹೋಲಿಸುತ್ತಾರೆ.

ಶ್ರೀವತ್ಸ ದೇಸಾಯಿ, ತಮ್ಮ ಬಾಲ್ಯದ ಪುಸ್ತಕದಲ್ಲಿದ್ದ ಡಾಫೋಡಿಲ್ ಹೂವನ್ನು ನೋಡುವ ಛಲದಿಂದ ರಾಣಿಯ ನಾಡಿಗೆ ಬಂದ ಕನಸಿನ ರಹಸ್ಯದ ಗಂಟನ್ನು ತಮ್ಮ “ಹೂವನ್ನರಸಿ” ಬಂದ ಕನಸುಗಾರನ ರೂಪದಲ್ಲಿ ಬಿಚ್ಚಿಡುತ್ತಾರೆ. ಒಮ್ಮೆ ಇಲ್ಲಿ ಬಂದ ಮೇಲೆ, ಇಲ್ಲಿಯ ಕರ್ಮಭೂಮಿಯಲ್ಲಿ ಉಳಿದು ಹೋದ ವಾಸ್ತವಿಕತೆಯಲ್ಲಿಯೂ ಇಲ್ಲೇ ಒಂದು ಸ್ವರ್ಗ ರಚಿಸಿಕೊಂಡಿರುವ ಆಸೆ ವ್ಯಕ್ತಪಡಿಸುತ್ತಾರೆ.

 “ದೀಪಗಳ ಸೇತು” ವಿನತೆ ಶರ್ಮ ಅವರ ರಚನೆ. ದೊಡ್ಡ ಮನೆಯಲ್ಲಿನ ಹಬ್ಬದ ಬೆಳಕು, ಪಟಾಕಿಯ ಸದ್ದು, ಗೆಜ್ಜೆಯ ನಾದ, ರೇಷ್ಮೆ ಲಂಗದ ಸರ ಸರ, ರಸ್ತೆಯಲ್ಲಿ ಹೋಗುವ ಪುಟ್ಟಿಯ, ಚಿಂದಿ ಚೀಲ ಹೊರುವ ಹುಡುಗನ ಕಣ್ಣುಗಳಲ್ಲಿ ಕನಸುಗಳನ್ನು, ಆಸೆಯನ್ನು ಬಡಿದೆಬ್ಬಿಸುತ್ತದೆ. ಆದರೆ, ದ್ವೀಪಗಳಂತಾಗಿರುವ ಮಾನವರ ಮಧ್ಯೆ ಬಿದ್ದು ಹೋಗಿರುವ ಸೇತುವೆಗಳ necessityಯನ್ನು ಎತ್ತಿ ತೋರುತ್ತದೆ. ಎಂದಾದರೂ ನಾವೇ ಈ ಸೇತುವೆಗಳಾಗಿ ಮತ್ತೆ ಮನುಷ್ಯರನ್ನು ಜೋಡಿಸಬಹುದೇ ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ ಕವಯಿತ್ರಿ ಶರ್ಮ.

boy-and-girl
ಹಾಸ್ಯಚಿತ್ರ ಕೃಪೆ: ಡಾ. ಲಕ್ಷ್ಮೀನಾರಾಯಣ ಗುಡೂರ್

ಇನ್ನು ಕೊನೆಯಲ್ಲಿ ಬಂದ ಅನ್ನಪೂರ್ಣ ಆನಂದ್ ಅವರು, ಇದುವರೆಗೆ ಕವನ ಓದಿದ ಕವಿ/ಕವಯಿತ್ರಿಯರಿಗಿಂತ ಭಿನ್ನವಾದದ್ದನ್ನು ಮಾಡುವರೆಂದು ಕಾರ್ಯನಿರ್ವಾಹಕಿ ವಿನತೆ ಶರ್ಮ ಘೋಷಿಸಿದರು. ಅನ್ನಪೂರ್ಣ ಅವರು ಆರಿಸಿಕೊಂಡಿದ್ದು ಟಿ ಪಿ ಕೈಲಾಸಂ ಅವರ “ತಿಪ್ಪಾರಳ್ಳಿ ಬಲು ದೂರ” ಕವನವನ್ನು. ಆ ಕವನದ ಹಿನ್ನೆಲೆ ಕೊಡುತ್ತ, ಅದರ ಇನ್ಸ್ಪಿರೇಷನ್ ಆದ “It’s a long way to Tipperary” ಹಾಡನ್ನು ಹಾಡಿದ್ದಲ್ಲದೇ, ಅದೇ ರಾಗದಲ್ಲಿ ಕೈಲಾಸಂ ಅವರ ರಚನೆಯನ್ನೂ ಹಾಡಿ ತೋರಿಸಿದರು.

ಇಲ್ಲಿಗೆ ಆರಿಸಿದ ಕವನಗಳ ಮುಕ್ತಾಯವಾಯಿತು. ಇದಾದ ಮೇಲೆ ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್ ಅವರ ಸಮಯ. ಅವರು, poet laureate ಆದಾಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.

thumbnail_20161105_130553
ಮುಖ್ಯ ಅತಿಥಿ ಕ್ಯಾಥಿ ಗ್ರಿಂಡ್ರಾಡ್

ಅಲ್ಲದೆ, ಕಾವ್ಯರಚನೆಯ ಉಪಯುಕ್ತ ಮುತ್ತುಗಳನ್ನು (pearls) ಹಂಚಿದರು. ತಮ್ಮ ಹಲವಾರು ಕವನಗಳನ್ನು ಓದಿದರು. ಕೇಳುಗರನ್ನು ಮೆದುವಾದ, ನಿಧಾನಗತಿಯ ಕವನದಿಂದ ಹಿಡಿದು ಕ್ಷಿಪ್ರಗತಿಯ ಹಾಡಿನವರೆಗೆ ವಿವಿಧ ವೇಗಗಳಲ್ಲಿ ರೋಲರ್ ಕೋಸ್ಟರ್ ಪ್ರಯಾಣ ಮಾಡಿಸಿದರು.  “Home” ಕವನದಲ್ಲಿಯ ಪುಸ್ತಕಪ್ರಿಯ ಹುಡುಗಿಯಿಂದ ಹಿಡಿದು, “Mr Hartley & sons” ನ ಹಾರ್ಡ್-ವರ್ಕಿಂಗ್ ಕುಟುಂಬದ ಹೊಲಿಗೆ ಅಂಗಡಿಯ ಮೂಲಕ, The Nailmakers ನ “work hard, party harder” ಕೆಲಸಗಾರರವರೆಗೆ ಸಮಾಜದ ವಿವಿಧ ಮುಖಗಳ ಪರಿಚಯ ಮಾಡಿಸಿದರು. ಒಟ್ಟಿನಲ್ಲಿ ಹೇಳುವುದಾದರೆ, East meets West ಕವಿಗೋಷ್ಟಿಯನ್ನು ಶೃಂಗಾರೋಹಣ ಮಾಡಿಸಿ ಮುಗಿಸಿದರು.

nailmakers
ಮುಖ್ಯ ಅತಿಥಿ, ಕವಿಯಿತ್ರಿ ಕ್ಯಾಥಿ ಗ್ರಿಂಡ್ರಾಡ್ ರ The Nailmakers ನ “work hard, party harder” – ಹಾಸ್ಯಚಿತ್ರ ಕೃಪೆ: ಡಾ. ಲಕ್ಷ್ಮೀನಾರಾಯಣ ಗುಡೂರ್

ಕೊನೆಯಲ್ಲಿ ಕ್ಯಾಥಿ ಗ್ರಿಂಡ್ರಾಡ್ ಅವರ ಕವನ ಸಂಕಲನ ಪುಸ್ತಕವನ್ನು ಕೊಳ್ಳುವ ಅವಕಾಶವೂ ಇತ್ತು. ಕೊಂಡವರಿಗೆ ಪುಸ್ತಕದಲ್ಲಿ ಅವರ ಹಸ್ತಾಕ್ಷರವೂ ದೊರೆಯಿತು.thumbnail_20161105_132538

ಕಾರ್ಯಕ್ರಮ ಶ್ರೀವತ್ಸ ದೇಸಾಯಿಯವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.

ಒಟ್ಟಿನಲ್ಲಿ ಹೇಳುವುದಾದರೆ, ಕಸಾಸಾವಿವೇ ಆಯೋಜಿಸಿದ East meets West (ಪೂರ್ವ-ಪಶ್ಚಿಮಗಳ ಮಿಲನ) ನಿರೀಕ್ಷೆಗೆ ತಕ್ಕಂತೆ ಒಳ್ಳೆಯ ಕಾರ್ಯಕ್ರಮವಾಗಿ ಮೂಡಿಬಂದಿತು.  ಎಲ್ಲರ ಕವನಗಳೂ ಕೇಳುಗರನ್ನು ಒಂದಲ್ಲ ಒಂದು ರೀತಿ ತೃಪ್ತಿ ಪಡಿಸಿದರೂ, ಮೊದಲಿಬ್ಬರು ಬಾಲಕವಿಗಳ ಪ್ರಯತ್ನಗಳು ಶ್ಲಾಘನೀಯವೆಂದೇ ಹೇಳಬೇಕು.  ಶ್ರೀ ಕೇಶವ ಕುಲಕರ್ಣಿ ಮಧ್ಯ ಹೇಳಿದಂತೆ “Poetry is lost in translation” ಅನ್ನುವ ಭಯವೇನೂ ಈ ಕಾರ್ಯಕ್ರಮದಲ್ಲಿ ಕಾಡಲಿಲ್ಲ.

-ಡಾ. ಲಕ್ಷ್ಮೀನಾರಾಯಣ ಗುಡೂರ

 

ಇಬ್ಬರು ಕಿರಿಯರ ಕವನಗಳು, ಅವುಗಳ ಭಾವಾನುವಾದ :

  1. An ode to food – ಅಮೋಘ ರಾಮಶರಣ್ / ಆಹಾರಕ್ಕೊಂದು ಹಾರ – ಡಾ. ರಾಮಶರಣ ಲಕ್ಷ್ಮೀನಾರಾಯಣ

An ode to food

Food is the best

Better than the rest

From fruit to cake

And bread that’s been baked

 

The variety is endless

And the taste can be fabulous

Things like noodles and rice

You won’t need to think twice

 

But let us remember about

Those who always have to sleep out

For they don’t have the luxury

To eat muffins or curry

 

So just be grateful too

Others don’t have it easy as you

And while you eat to your heart’s content

Remember they don’t have so much as a tent

-Amogha Ramasharan

ಆಹಾರಕ್ಕೊಂದು ಹಾರ

ಆಹಾರವೇ ಅತ್ತ್ಯುತ್ತಮ

ಅದೇ ಎಲ್ಲಕ್ಕಿಂತ ಗರಿಮ

ಹಣ್ಣಿಂದ ಕೇಕಿನವರೆಗೆ

ಹದವಾಗಿ ಸುಟ್ಟ ರೊಟ್ಟಿ ಉದರ ಸೇರುವವರೆಗೆ

 

ಅದೆಷ್ಟು ಬಗೆ! ಅದೆಷ್ಟು ರೀತಿ!

ಬಣ್ಣಿಸಲಾರದಷ್ಟು ರುಚಿ

ಶಾವಿಗೆಯೇನು! ಅನ್ನವೇನು!

ಯೋಚಿಸುತ್ತಲೇ ನಿಂತೆಯೇನು?

 

ಆದರೆ ನೆನಪಿನಲ್ಲಿಡು

ಯಾರಿಗಿಲ್ಲ ತಮ್ಮದೇ ಮಾಡು

ಇಲ್ಲ, ಆ ಅನಿವಾಸಿಗಳಿಗೆ ಐಷಾರಾಮ

ಚಾಪೆ ಚಪ್ಪರವಿಲ್ಲ, ದೂರ  ಕಜ್ಜಾಯ ಮೃಷ್ಠಾನ್ನ

 

ಸ್ಮರಿಸು ನೀಡಿದವರ ಋಣ

ಕೆಲವರ ಬಾಳಿನ್ನೂ ಕಠಿಣ

ಧನ್ಯನಾಗಿರುವಾಗ ಉಂಡು-ತೇಗಿ

ಮನದಲ್ಲಿರಲಿ ನೆಲೆಯಿರದ ಬೈರಾಗಿ!

ಡಾ. ರಾಮಶರಣ ಲಕ್ಷ್ಮೀನಾರಾಯಣ

 

2. The Griff – ಸಿಯ ಕುಲಕರ್ಣಿ / ಅಮಾನುಷ  (ಭೀಕರ) – ಡಾ. ಶ್ರೀವತ್ಸ ದೇಸಾಯಿ

The Griff

outstretched, long, spindly fingers reach out to grab me,

embrace me, envelope me, consume me.

 

The moon, a shimmering silver coin ripples in a sea of blue,

so harmless and fragile, so calm and peaceful.

 

A hazardous layer of gravelly pellets,

littered with stones, caked on moss, iced with danger.

 

The hazy sun sinks behind a solid wall of earth,

my last hope, fading behind an ancient barrier.

 

Darkness grows rapidly, seeping into every corner, every crevice,

it feeds off fear, my fear.

 

The little light left disappears,

quickly merging into a blatant gloom.

 

I’m suddenly blinded by the absence of light,

black spots dance in the corners of my eyes.

 

Murky silhouettes resolve into swirling shadows, they mock me, taunt me.

Blackness engulfs me.

Blackness immerses me.

Blackness.

  – Sia Kulkarni

 

ಅಮಾನುಷ  (ಭೀಕರ)

ಅದರ ಉದ್ದನೆಯ ಬೆರಳುಗಳು ನನ್ನತ್ತ ಬರುತ್ತಿವೆ

ನನ್ನ ಸುತ್ತುವರಿದು ನನ್ನನ್ನಪ್ಪಿ ಕಬಳಿಸುವಂತಿದೆ

ನೀಲಸಾಗರದಲ್ಲಿ ತೇಲುವ ಬೆಳ್ಳಿಕಾಸಿನ ಚಂದಮ

ಎಂಥ ಭಿದುರ, ಎಷ್ಟು ಶಾಂತಿ!

ಕುಸಿಯುವ ನೆಲದ ಮೇಲೆ ಹರಡಿವೆ ಹರಳು-ಕಲ್ಲುಗಳ

ಮೇಲೆ ಹೆಪ್ಪುಗಟ್ಟಿದ ಭೀತಿಯ ಪಾಚಿ
ಮಸುಕು ಸೂರ್ಯಾಸ್ತ ಗಟ್ಟಿಮಣ್ಣಗೋಡೆಯಾಚೆ

ಒಂದು ಪುರಾತನ ಭಿತ್ತಿಯ ಹಿಂದವನ ಅಸ್ತಮನ

ಮೂಲೆ-ಮೂಲೆಯಲಿ, ಬೆಟ್ಟ ಕೊರಕಲುಗಳಲ್ಲಿ ನುಸುಳುವ ದಟ್ಟ ಕತ್ತಲೆ

ನನ್ನದೇ ಅಂಜಿಕೆಗಳ ಕಬಳಿಸಿ ಕೊಬ್ಬಿ ಕೂತಿದೆ!

ಮಂದ ಬೆಳಕಿನ ಕೊನೆಯ ಕಿರಣಗಳೂ ಕಾಣೆ

ಕಾಣದ ಕಾಂತಿ ಮಂಕು ಹಿಡಿಸಿದೆ

ಬೆಳಕೆಲ್ಲ ನಂದಿ ಕುರುಡನಾದೆ.

ಕಣ್ಣಂಚಿನಲಿ ಕುಣಿಯುವ ಕಪ್ಪು ಚುಕ್ಕೆಗಳು

ಕತ್ತಲೆಯಲಿ ಸುತ್ತುವ ನೆರಳುಚಿತ್ರಗಳ

ರಿಂಗಣ ಹಂಗಿಸುತ್ತಿದೆ, ನನ್ನನ್ನು ರೇಗಿಸುತ್ತಿದೆ!

ನನ್ನ ಸುತ್ತ  ಕತ್ತಲೆ

ನಾನು ಮಿಂದ ಈ ಅಂಧಕಾರ

ಎತ್ತೆತ್ತಲೂ ಕತ್ತಲೆ,

ಕಗ್ಗತ್ತಲೆ!

  –  ಡಾ. ಶ್ರೀವತ್ಸ ದೇಸಾಯಿ

 

 

 

 

‘ಇಷ್ಟಕಾಮ್ಯ’ – ಡಾ.ಪ್ರೇಮಲತಾ ಬರೆದ ಸಿನಿಮಾ ವಿಮರ್ಶೆ

‘ಇಷ್ಟಕಾಮ್ಯ’ ಕನ್ನಡ ಚಲನಚಿತ್ರವನ್ನು ಅದರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಇತ್ತೀಚಿಗೆ ಬ್ರಿಟನ್ ನ ಕೆಲ ಊರುಗಳಲ್ಲಿ ಬಿಡುಗಡೆ ಮಾಡಿದ್ದರು. ‘ಅನಿವಾಸಿ’ ಬಳಗದ ಡಾ.ಪ್ರೇಮಲತಾರವರು ಚಂದ್ರಶೇಖರ್ ರ ಜೊತೆ ನಡೆಸಿದ ಸಂದರ್ಶನವನ್ನು ‘ಅನಿವಾಸಿ’ ಪ್ರಕಟಿಸಿತ್ತು- ಡಾ. ನಾಗತಿಹಳ್ಳಿ ಚಂದ್ರಶೇಖರ ರೊಡನೆ ಸಂದರ್ಶನ-ಡಾ. ಪ್ರೇಮಲತ ಬಿ.. ಪ್ರೇಮಲತಾ ಬರೆದಿರುವ ‘ಇಷ್ಟಕಾಮ್ಯ’ ಚಲನಚಿತ್ರದ ವಿಮರ್ಶೆ ಇಲ್ಲಿದೆ.

ಸಿಂಗಪುರದ ಕನ್ನಡ ಸಂಘ ಏರ್ಪಡಿಸಿದ್ದ ಸಾಹಿತ್ಯ ಸ್ಪರ್ಧೆಯ ಅನಿವಾಸಿಗಳ ವಿಭಾಗದಲ್ಲಿ ಪ್ರೇಮಲತಾರ ಸಣ್ಣ ಕಥೆ ‘ಸ್ವಾತಂತ್ರ್ಯ’ ಕ್ಕೆ ಪ್ರಥಮ ಬಹುಮಾನ ದೊರಕಿದೆ. ಅವರಿಗೆ ‘ಅನಿವಾಸಿ’ಯ ಅಭಿನಂದನೆಗಳು.

ಮರೆಯುವ ಮುನ್ನ – ಈ ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

ಇಷ್ಟಕಾಮ್ಯ– ಸಿನಿಮಾ ವಿಮರ್ಶೆ

ಡಾ.ಪ್ರೇಮಲತಾ

ishtakaamya-poster-1

ಇಷ್ಟವಾದ ಕಾಮನೆಗಳೇ ಗಂಡು – ಹೆಣ್ಣಿನ ನಡುವಿನ ಪಾಸಿಟಿವ್ ಕೆಮಿಸ್ಟ್ರಿ!!

ಇವೇ ಸಂಬಂಧ/ಮದುವೆಯ ಮೂಲವಾಗಬಹುದು ಅಥವಾ ಪರಸ್ಪರರ ವ್ಯಕ್ತಿತ್ವಗಳ ಆಕರ್ಷಣೆ ಬೆಳೆದು ಸಾಂಗತ್ಯವನ್ನು ಮುಂದುವರೆಸುವ ಕಾರಣಕ್ಕೆ ಸಂಬಂಧ ಮುದ್ರೆಯ ಹೆಸರಲ್ಲಿ ಮದುವೆ ಸಂಭವಿಸಬಹುದು. ಮೇಲಿನೆರಡು ಸಂದರ್ಭಗಳಲ್ಲಿ ಹುಟ್ಟುವ ಕಾಮನೆಗಳು ಪರಸ್ಪರರಿಗೆ ಸಮ್ಮತವಾದವು. ಸಲಿಂಗ ಪ್ರೇಮದ  ಅಯಾಮವೂ ಇದೇ ವ್ಯಾಪ್ತಿಯಲ್ಲಿ ಬರುತ್ತದೆ. ಮದುವೆಯ ಹೊರತಾದ ಸಮ್ಮತಿ ಪೂರ್ಣ ಮಿಲನವೂ ಇದೇ ಹೆಸರಡಿ ಬರುವಂತವು. ಇಷ್ಟಕಾಮ್ಯಗಳು,

‘ಇಷ್ಟಕಾಮ್ಯ’ ಚಿತ್ರ ಡಾ. ದೊಡ್ಡೇರಿ ವೆಂಕಟಗಿರಿ ರಾವ್ ರ ಕಾದಂಬರಿಯನ್ನು ಆಧರಿಸಿದ  ಚಿತ್ರ. ’ಸುಧಾ’ ವಾರಪತ್ರಿಕೆಯಲ್ಲಿ ಇದು ಧಾರವಾಹಿಯಾಗಿ ಬಂದಿತ್ತು. ಡಾ. ಡಿ.ವಿ. ರಾವ್ ರ ಕಥೆಗಳ ವಿಶೇಷಣಗಳು ಹಲವು. ಅವರ ಕಾದಂಬರಿಗಳಿಗೆ ಬಹಳ ವಿರಳವಾಗಿ ಕೇಳಿಬರುವ ಹೆಸರುಗಳನ್ನು ಇಡುತ್ತಾರೆ. ಜೊತೆಗೆ, ಪಾತ್ರಗಳಿಗೂ. ಇವರ ಪಾತ್ರಗಳು ಓದಿದ, ಉತ್ತಮ ಮನೆತನದಿಂದ ಬಂದವು. ಪ್ರೌಢತೆಯನ್ನು ಬೆಳೆಸಿಕೊಂಡಂತವು.ಕಥೆಗಳು ನಡೆಯುವುದು ಪ್ರಕೃತಿಗೆ ಹೆಸರಾದ ಮಲೆನಾಡು, ಚಿಕ್ಕಮಗಳೂರು, ಶಿವಮೊಗ್ಗಗಳಂತ ಜಾಗಗಳಲ್ಲಿ.ಇವರು ಕಟ್ಟುವ ಪ್ರೀತಿ –ಪ್ರೇಮಕ್ಕೆ ರಮ್ಯವಾದ ಹಂದರಗಳಿರುತ್ತವೆ. ನಾಜೂಕಾದ ಮಾತುಗಳಲ್ಲಿ ಪ್ರೇಮ ಅರಳುತ್ತದೆ. ಇಲ್ಲಿ ಕ್ರೌರ್ಯ, ಕೊಲೆ, ಅತ್ಯಾಚಾರ,ಅತಿರೇಕಗಳಿಗೆ ಕಡಿಮೆ ಆದ್ಯತೆ.

ಸ್ವತಃ ಉತ್ತಮ ಬರಹಗಾರರಾದ,ತಮ್ಮ ಸೃಜನಶೀಲತೆಯಿಂದ ಚಿತ್ರೋದ್ಯಮದ ಗಮನ ಸೆಳೆದ, ಚಿತ್ರ ಕಥೆ-ಸಂಭಾಷಣೆ-ಹಾಡು-ನಿರ್ದೇಶನಕ್ಕೆ ಹಲವಾರಿ ಪ್ರಶಸ್ತಿ ಗಳಿಸಿರುವ ಡಾ. ನಾಗತಿಹಳ್ಳಿ ಚಂದ್ರಶೇಖರರ ಕಲಾವಿದ ಕಣ್ಣುಗಳಿಗೆ  ’ಇಷ್ಟಕಾಮ್ಯ’ ದ ಕಥೆ ಬಿದ್ದದ್ದು ಆಶ್ಚರ್ಯವೇನಿಲ್ಲ.ಇದನ್ನು ಆಧರಿಸಿ ಅದೇ ಹೆಸರಲ್ಲಿ ಸಿನಿಮಾ ಮಾಡುವಾಗ ಅವರು ರಿಸ್ಕ್ ತಗೊಂಡರೆನ್ನಬಹುದೇನೋ.

ಇಷ್ಟಕಾಮ್ಯ ಸಿನಿಮಾಕ್ಕೆ ನಾಗತಿಯವರ ಚಿತ್ರ ಕಥೆ, ಸಂಭಾಷಣೆ ಮತ್ತು ನಿರ್ದೇಶನ ದೊರೆತಿದೆ. ಸಿನಿಮಾಕ್ಕೆ ಬೇಕಾದಂತೆ ಕಥೆಯನ್ನು ಮುಂದುವರೆಸಿ ಬೆಳೆಸಲಾಗಿದೆ.

ಒಳ್ಳೆಯದು– ಕಣ್ತಣಿಸುವ  ಛಾಯಾಗ್ರಹಣ, ಮನಸ್ಸನ್ನು ಹದವಾಗಿ ಮೀಟುವ, ಉತ್ತಮ ಸಾಹಿತ್ಯವಿರುವ ಹಾಡುಗಳು, ಅರ್ಥಗರ್ಭಿತವಾದ ಸಂಭಾಷಣೆಗಳಿರುವ, ಸಭ್ಯ ಚಿತ್ರವಿದು. ಚಿತ್ರ ಕಥೆ ಮಲೆನಾಡಿನಲ್ಲಿ ನಡೆವಂತದ್ದು. ಅಂದಮೇಲೆ ಸೌಂದರ್ಯಕ್ಕೆ ಕೊರತೆಯೇ ಇಲ್ಲ.

ಯುವ ಜೋಡಿಗಳನ್ನು ಆಧರಿಸಿ ಮಾಡಿದ ತ್ರಿಕೋನ ಪ್ರೇಮಕಥೆಯಿರುವ ಕಾರಣ, ಸಣ್ಣವಯಸ್ಸಿನ  ಸುಂದರ ತಾರಾಗಣವಿದೆ. ಇವರಿಗೆ ಪೂರಕವಾಗಿ ಮನೋಜ್ಞ ಅಭಿನಯ ನೀಡಬಲ್ಲ ನುರಿತ ಕಲಾವಿದರ  ದೊಡ್ಡ ತಂಡವಿದೆ. ಒಂದಷ್ಟು ಹಾಸ್ಯ ಚಿತ್ರ ಕಥೆಯುದ್ದಕ್ಕೂ ಇದೆ. ಇವರಲ್ಲಿ ಕಾಲಕ್ಕೆ ತಕ್ಕಂತೆ ಪಾತ್ರ ಬದಲಾಯಿಸುವ ನಿಂಬೆಯ ಪಾತ್ರವಾಗಿ ಚಿಕ್ಕಣ್ಣ, ಮದುವೆಯ ಅಗತ್ಯವಿಲ್ಲದ ‘ಲಿವಿಂಗ್ ಟುಗೆದರ್’ ಸಂಬಂಧ ಪ್ರತಿಪಾದಕನಾಗಿ ಪ್ರಕಾಶ ಬೆಳವಾಡಿಯವರ, ಪಾತ್ರ ಗಮನ ಸೆಳೆಯುತ್ತವೆ. ’ಮದುವೆಯ ಅಜ್ಜಿ’ಯಾಗಿ ಕಾಣಿಸಿಕೊಂಡಿರುವ ಬಿ. ಜಯಶ್ರೀ, ಇಲ್ಲಿ ಸಾಂಕೇತಿಕ ಪಾತ್ರವಾಗಿ ಯುವ ಹೃದಯಗಳಲ್ಲಿ ಮದುವೆಯ ಸಂಭ್ರಮವನ್ನು ಹರಡುತ್ತಾಳೆ. ಮಿಕ್ಕರ್ಧದಲ್ಲಿ, ಇದೇ ಪಾತ್ರ ಸಾಂಕೇತಿಕವಾಗಿ ಜೀವನದ ಅನಿರೀಕ್ಷಿತ ಘಟನೆಗಳಿಕೆ ತಿರುವು ನೀಡುತ್ತದೆ. ಬದುಕಲ್ಲಿ ಅಂದು ಕೊಂಡಂತೆ ಎಲ್ಲ ಆಗುವುದಿಲ್ಲ ಎಂಬುದನ್ನು ಪ್ರತಿಪಾದಿಸುತ್ತದೆ.

ನಿರ್ದೇಶಕರಾಗಿ ನಾಗತಿಯವರು ಎಲ್ಲ ಪಾತ್ರಗಳಿಗೂ ಉತ್ತಮ ಸಂಭಾಷಣೆಯನ್ನು ನೀಡಿದ್ದಾರೆ. ಹಾಸ್ಯದ ಹೊರತಾಗಿ ಮಿಕ್ಕ ಎಲ್ಲ ಸಂಭಾಷಣೆಗಳು ಸಂದೇಶಗಳೇ. ವಿಚಾರಪರವೇ. ಹಾಗಾಗಿ ಕೇಳಿದ ನಂತರ, ಮರೆತುಹೋಗುವುದಿಲ್ಲ. ಮನಸ್ಸಲ್ಲಿ ಉಳಿಯುತ್ತವೆ. ವೀಕ್ಷಕರು ಯಾರೆಂಬುದರ ಮೇಲೆ ಇದು ನಿರ್ಧರಿತ!

ನಿರ್ದೇಶಕರು ಯುವಜನತೆಗೆ ಬೇಕಾದ ಪ್ರೀತಿಯ ಸಿಹಿಯನ್ನು ಮೊದಲರ್ಧ ಸಿನಿಮಾದ ಉದ್ದಕ್ಕೂ ಹಂಚಿದ್ದಾರೆ. ಆದರ್ಶಗಳನ್ನು ಹೊತ್ತ ಯುವ ವೈದ್ಯ ‘ಆಕರ್ಷ’ನಾಗಿ ವಿಜಯ್ ಸೂರಿಯ ಪಾತ್ರ, ಅವನ ಆಸಕ್ತಿಯನ್ನು ಗಮನಿಸಿ ಆಕರ್ಷಣೆಗೊಳಗಾಗಿ ಪ್ರೀತಿಗೆ ಬೀಳುವ, ಮದುವೆಯ ಕನಸು ಕಾಣುವ ಹುಡುಗಿಯಾಗಿ ಮಯೂರಿ ಕ್ಯಾತರಿ ‘ಅಚ್ಚರಿ’ಯಾಗಿ ಅಭಿನಯಿಸಿದ್ದಾರೆ. ishtakaamya-poster-2ಒಮ್ಮೆ ಈ ಯುವ ವೈದ್ಯ ಮೆಲ್ಲನೆ ಬಾಗಿ ಪ್ರೇಯಸಿಯ ಗಲ ಗಲಿಸುವ ಝುಮುಕಿಯನ್ನು ಸಣ್ಣಗೆ ಬಡಿಯುತ್ತಾನೆ. ಇಲ್ಲಿಯ ನವಿರು ಪ್ರೇಮದ ಪರಿ, ತಕದಿಮನೆ ಕುಣಿವ ಪ್ರೇಮದ ಹಲವು ಹಾಡುಗಳಿಗಿಂತ ಹೆಚ್ಚು ಬಲವಾಗಿ ಮನಸ್ಸುಗಳಲ್ಲಿ ನಿಲ್ಲುತ್ತದೆ. ಚಿತ್ರದ ಮೊದಲಲ್ಲೇ ಕಾಣಿಸಿಕೊಂಡರೂ, ನಂತರ ಈ ಆಕರ್ಷನ ಹೆಂಡತಿಯಾಗಿ ಬರುವ ’ಅದಿತಿ’ ಪಾತ್ರದಲ್ಲಿ   ಕಾವ್ಯ ಶೆಟ್ಟಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ತನ್ನ ದೈನಂದಿನ ವ್ಯಾಪಾರದ ನಡುವೆ ನಿಜವಲ್ಲದ ಬೊಗಳೆಯಲ್ಲಿ ಒಂದಷ್ಟು ಸುಖ ಕಾಣುವ ಪಾತ್ರದ ಮಾವನಾಗಿ ರಂಗಾಯಣದ ರಘು ಮಿಂಚಿದ್ದಾರೆ. ರೋಗಿಯಾಗಿ ಮಂಡ್ಯ ರಮೇಶ್ ಹಾಸ್ಯ ಪಾತ್ರಧಾರಿಯಾದರೆ ಮಿಮಿಕ್ರಿ ದಯಾನಂದ ’ವೈದ್ಯ’ ರಾಗಿದ್ದಾರೆ.

ಉಳಿದರ್ಧ ಭಾಗದಲ್ಲಿ ಅನಿರೀಕ್ಷಿತ ತಿರುವು ಕಾಣಿಸುತ್ತದೆ. ಇಲ್ಲಿ ಪ್ರೇಕ್ಷಕನಿಗೂ ಶಾಕ್ ! ಇಲ್ಲಿಯೇ ವಿವಾದಗಳೂ ಹುಟ್ಟುತ್ತವೆ. ಕೊನೆಗೆ ಇಬ್ಬರು ಹೆಣ್ಣು ಪ್ರೇಮಿಗಳಲ್ಲಿ ಒಬ್ಬರ ಸಾವಿನ ದುರಂತದ ಜೊತೆ ಅಂತ್ಯ. ಆದರೆ ನಾಯಕನ ಮುಂದಿನ ಬದುಕು ಪ್ರೇಕ್ಷಕ ಚಿತ್ರಿಸಬಹುದಾದ ಖಾಲಿ ಕ್ಯಾನ್ವಾಸ್ ಆಗುತ್ತದೆ! ಅಂದರೆ ಸಿನಿಮಾದಲ್ಲಿ ಈ ಬಗ್ಗೆ ಏನನ್ನೂ ತೋರಿಸದೆ ಪ್ರೇಕ್ಷಕನ ಊಹೆಗೆ ಇದನ್ನು ಬಿಡಲಾಗಿದೆ

ನಿರ್ದೇಶಕರಾಗಿ ನಾಗತಿಯವರು ಉದ್ದಕ್ಕೂ ಮದುವೆಯ ವಿವಿಧ ಮುಖಗಳನ್ನು ವಿಮರ್ಷೆಗೆ ಒಡ್ಡಿದ್ದಾರೆ. ಮಲೆನಾಡಿನ ದೀಪಾವಳಿ, ಟೀ ಎಸ್ಟೇಟಿನ ಕಾರುಭಾರುಗಳು, ಆಳು ಕಾಳುಗಳು, ಮದುವೆಯ ಜಾನಪದ ವರ್ಣನೆ, ಮಿಡಿಮಾವಿನ ಕಾಯಿ ಉಪ್ಪಿನ ಕಾಯಿಯ ಬಗ್ಗೆಗಿನ ದೃಶ್ಯಗಳಲ್ಲಿ , ಹವ್ಯಕ ಕನ್ನಡದ ಬಳಕೆಯಲ್ಲಿ ಸಂಪ್ರದಾಯಗಳಿಗೆ ಮೆರುಗುಕೊಟ್ಟಿದ್ದಾರೆ. ಉತ್ತಮ ಭಾಷೆಯನ್ನು ಬಳಸಿ ಕನ್ನಡವನ್ನು, ಅದರ ಸೌಂದರ್ಯ- ಸಂಸ್ಕೃತಿಯನ್ನು ಉಳಿಸಿ ಈ ಚಿತ್ರವನ್ನು ಸಂಭಾವಿತರು ಕೂತು ನೋಡುವಂತೆ ಮಾಡಿದ್ದಾರೆ.

ಕುವೆಂಪು ಬದುಕಿ ಬಾಳಿದ ಮನೆ, ಕವಿ ಶೈಲದ ದೃಶ್ಯದ ಬಳಕೆ, ಕವಿಸಮಾಧಿಯ ದರ್ಶನ ಮಾಡಿಸಿದ್ದಾರೆ. ಕುವೆಂಪು ಬರೆದ ಹಾಡಿನಲ್ಲಿ ಹೆಣ್ಣನ್ನು ಬಹುವಚನದಲ್ಲಿ ಸಂಬೋಧಿಸುವ ಮೂಲಕ ಮನುಕುಲದ ಉನ್ನತ ಸಂಸ್ಕೃತಿಯನ್ನು ಮತ್ತೆ ಕನ್ನಡ ಸಿನಿಮಾರಂಗಕ್ಕೆ ತಂದಿದ್ದಾರೆ!

ಟೀಕಿಸುವಂತದ್ದು–   ಈ ಚಿತ್ರದ ನಾಯಕ ಆದರ್ಶಗಳನ್ನು ಹೊತ್ತ ನವ ಯುವಕ. ಹಳ್ಳಿಯ ತನ್ನ ತಾತನ ನರ್ಸಿಂಗ್ ಹೋಂ ಅನ್ನು ನಡೆಸುತ್ತ ತನ್ನ ಮನೆತನದ ಆಸ್ತಿಯೊಡನೆ ಪ್ರೀತಿಯಿಂದ ಜನರ ಸೇವೆ ಮಾಡುತ್ತ ನಡೆವ ಮನೋಭಾವದವನು. ತನಗೆ ತಿಳಿಯದಾಗ ಬೇರೆಯವರೊಡನೆ ಸಲಹೆ-ಉತ್ತರಗಳನ್ನು ಕೇಳುವ-ಕಾಣುವಂತವನು. ಇಂತಹ ವಿಚಾರವಂತ, ತನ್ನ ಮೊದಲನೆಯ ಹೆಂಡತಿಯೊಡನೆ ವಿಚ್ಛೇದನವಿಲ್ಲದೆ ಇನ್ನೊಂದು ಜೀವಿಯೊಡನೆ ಸರಸ ಸಲ್ಲಾಪ ನಡೆಸುವಾಗ ಅವನ ಮನಸ್ಸಿನ ತಳಮಳಗಳನ್ನು ಇನ್ನಷ್ಟು ಗಾಢವಾಗಿ ಚಿತ್ರಿಸಬೇಕಿತ್ತು ಅನ್ನುವುದು ಈ ಚಿತ್ರದ ಮುಖ್ಯ ಕುಂದಾಗಿದೆ.

ತಪ್ಪೇ ಮಾಡದೆ, ಮದುವೆಯ ಸಹಜತೆಯಿಂದ ವಂಚಿತನಾಗುವ ಒಳ್ಳೆಯ ಮನಸ್ಸಿನ, ಸಲಹೆಗಳನ್ನು ಕೇಳುತ್ತ ನಡೆವ ನಾಯಕನ, ತನ್ನ ಬಡತನದ ಹಿನ್ನೆಲೆಯನ್ನು ಕಡೆಗಣಿಸಿ ಉಪಚರಿಸಿದ, ಸಹಾಯ ಮಾಡಿದ ವೈದ್ಯನ ಆಸಕ್ತಿಗೆ ನೀರೆರವ ಕನಸ ಕಂಗಳ ದುಡುಕಿನ ನಾಯಕಿ ಅಚ್ಚರಿಗೆ ಯಾವ ದೃಶ್ಯದಲ್ಲೂ ತನಗೆ ಈಗಾಗಲೇ ಮದುವೆಯಾಗಿರುವ ಬಗ್ಗೆ ಹೇಳುವುದೇ ಇಲ್ಲ. ನಿಂಬೆಯೂ ಕೂಡಿ, ಇಡೀ ಆಸ್ಪತ್ರೆಯೇ ಇವರ ಓಡಾಟವನ್ನು ಗಮನಿಸಿದರೂ ಯಾರೂ ಅಚ್ಚರಿಗೆ ವೈದ್ಯನಿಗೆ ಮದುವೆಯಾಗಿರುವ ಬಗ್ಗೆ ಹೇಳುವುದಿಲ್ಲ. ಯಾವ ಕಾರಣಕ್ಕೆ ಆಕರ್ಷ ಯಾರನ್ನೂ ಕರೆಯದೆ ಗುಟ್ಟಾಗಿ ಮದುವೆಯಾಗುವ ಬಗ್ಗೆ ಸಬಲ ಕಾರಣಗಳನ್ನು ಹೇಳಬೇಕಾಗಿತ್ತು. ಮಾನಸಿಕ ವ್ಯಾಧಿಗೆ ತುತ್ತಾದ ಅದಿತಿ ಪೂರ್ತಿ ’ಯು ಟರ್ನ್’ ತಗೊಳ್ಳಲು ಒಂದೆರಡು ಘಟನೆಗಳು ಮಾತ್ರ ಸಾಕಾದವೇ? ಒಬ್ಬ ವ್ಯಕ್ತಿ ತನ್ನವನು ಎನ್ನುವ ಅನ್ನುವ ಪೊಸೆಸಿವ್ ನೆಸ್ ಮತ್ತು ಈರ್ಷ್ಯೆ ಮಾತ್ರಕ್ಕೆ ಅವಳು ನಾಯಕನ ಬದುಕಿಗೆ ಹಿಂತಿರುಗುವ ಹೆಣ್ಣೇ?

ಸಂಭಾಷಣೆ ಚಿತ್ರದ ಜೀವಾಳ. ಆದರೆ ಮನೋಜ್ಞ ಅಭಿನಯದ ಮೌನ ಅದಕ್ಕಿಂತ ಪರಿಣಾಮಕಾರಿ. ಅಂತಹ ದೃಶ್ಯಗಳು ಕಡಿಮೆ. ಮಾನಸಿಕ ತುಡಿತಗಳನ್ನು, ತಾನು ಮಾಡುತ್ತಿರುವುದು ತಪ್ಪೇ, ಸರಿಯೇ ಅನ್ನುವ ತಾಕಲಾಟಗಳನ್ನು ಮೂರೂ ಪಾತ್ರಗಳಲ್ಲಿ ಮತ್ತಷ್ಟು ತರ ಬಹುದಿತ್ತು.

ಇತರೆ-ಪಾಶ್ಚಾತ್ಯ ಸಿನಿಮಾಗಳಲ್ಲಿ ಈ ಯಾವ ಕುಂದುಗಳೂ ದೊಡ್ಡವಾಗುತ್ತಿರಲಿಲ್ಲ. ಯಾಕೆಂದರೆ ಇಲ್ಲಿ ಪಾತ್ರಗಳಿಗಿಂತ ಸಂದೇಶ ಮುಖ್ಯವಾಗುತ್ತದೆ. ಆಧುನಿಕ ಜಗತ್ತಿನ ಲಿವಿಂಗ್ ಟುಗೆದರ್ ಆಗಲೀ, ಭಾರತ ಸರ್ಕಾರವೇ ಇನ್ನೂ ಗುರುತಿಸಿರದ ’ಗೇ’ಗಳ ಸಂಬಂಧವಾಗಲೀ, ಸಂಬಂಧದ ಹೆಸರಿನ ಅಗತ್ಯವಿಲ್ಲದ ಜೀವನ ಹಂಚಿಕೊಳ್ಳುವ ಪಾರ್ಟ್ನರ್ ಶಿಪ್ ನ ವೈಚಾರಿಕತೆಯನ್ನು ಈ ಸಿನಿಮಾ ಒರೆಗೆ ಹಚ್ಚುತ್ತದೆ. ಭಾರತೀಯ ಪರಂಪರೆಯ ಪುರಾತನ ಮದುವೆಯ ಮಿತಿಗಳನ್ನೂ ಇದು ಒರೆಗೆ ಹಚ್ಚುತ್ತದೆ. ಅದೇ ಜಾಡಿನಲ್ಲಿ ಬಡತನ, ಅದರ ಅರಿವನ್ನು ತಿಳಿಹೇಳುವ ಅಚ್ಚರಿಯ ತಾಯಿ, ಮಲೆನಾಡಿನ ತೋಟದ ಕೆಲಸಗಾರ್ತಿ, ಗಟ್ಟಿಗಿತ್ತಿ ಗೆಳತಿ ಎಲ್ಲ ಪಾತ್ರಗಳಲ್ಲಿ ನಾಗತಿಹಳ್ಳಿಯವರು ಕನ್ನಡ ಜನತೆಗೆ ನೂರಾರು ಸಂದೇಶಗಳನ್ನು, ತಾಕಲಾಟಗಳನ್ನು ಕೊಟ್ಟು ವಿಚಾರ ಮಾಡಲು ಕರೆಕೊಟ್ಟಿದ್ದಾರೆ. ಅದನ್ನು ಅತಿಯಾದ ಅತಿರೇಕಗಳ ಮೂಲಕ, ಉತ್ಪ್ರೇಕ್ಷೆಯಿಲ್ಲದೆ ಉಣಬಡಿಸಿದ್ದಾರೆ.

ಇತರೆ ಹಲವು ಸಿನಿಮಾ ನಿರ್ದೇಶಕರ ಸಿನಿಮಾದಲ್ಲಿ, ೫೦ ಜನ ಖದೀಮರನ್ನು ಐದು ನಿಮಿಷದಲ್ಲಿ ಸದೆ ಬಡಿವ ನಾಯಕನನ್ನು ತಂದದಕ್ಕೆ, ತಲೆ ಬುಡವಿಲ್ಲದ ಕಥೆ-ಸಂಭಾಷಣೆಗೆ, ದ್ವಂದ್ವಾರ್ಥದ ಹಾಸ್ಯಕ್ಕೆ ಯಾವ ಸಿನಿಮಾ ವಿಮರ್ಶಕನೂ ಚಕಾರ ವೆತ್ತದೆ ಸುಮ್ಮನಿರುತ್ತಿದ್ದರು. ಆದರೆ ನಾಗತಿಹಳ್ಳಿಯವರ ಸಿನಿಮಾ ಎಂದ ಕೂಡಲೆ ನಿರೀಕ್ಷೆ ಗಳು ಗರಿಗೆದರಿ ಬಿಡುತ್ತವೆ, ಸಿನಿಮಾ ವಿಮರ್ಶಕರು ನಾಲಿಗೆಯನ್ನು ಸಾಣೆ ಹಿಡಿಸಿಕೊಂಡು ಕಾಯುತ್ತಾರೆ. ಇವರು ಅರಿಯಬೇಕಾದ್ದು ಬಹಳ ಇದೆ. ಕಲಾತ್ಮಕ ನಿರ್ದೇಶಕನೊಬ್ಬ ಕಲಾವಂತಿಕೆಯನ್ನು, ಜೊತೆಗೆ ನಿರ್ಮಾಪಕರ ಹಣ ಹೂಡಿಕೆಗೆ ನ್ಯಾಯವನ್ನು ಎರಡನ್ನೂ ಕೂಡಿಸಿ ಒಂದು ಹೈಬ್ರಿಡ್ ತಳಿಯ ಸಿನಿಮಾ ವನ್ನು ಮಾಡಲು ಇಷ್ಟಕಾಮ್ಯದ ಮೂಲಕ ಪ್ರಯತ್ನ ಪಟ್ಟಿದ್ದಾರೆ.

ಈ ಪ್ರಯತ್ನವನ್ನು ಗುರುತಿಸಿ, ಆದರಿಸಿ ನೋಡಿದರೆ ಈ ಸಿನಿಮಾ ಇತ್ತೀಚೆಗೆ ನೋಡಿದ ಒಂದು ಉತ್ತಮ ಕನ್ನಡ ಸಿನಿಮಾ ಅನ್ನಬಹುದು

 (ಎರಡೂ ಪೋಸ್ಟೆರ್ಗಳು ಕೃಪೆ-ಗೂಗಲ್)