ಕವಿತೆಯೊಂದು ಬೇಕಿದೆ -ಮುರಳಿ ಹತ್ವಾರ್ ಅವರ ಕವಿತೆ

ಯಾವುದೇ ಸೃಜನಶೀಲ ಕಾರ್ಯವೇ ಆಗಲಿ ಅದು ಶ್ರಾವ್ಯ ಮಾಧ್ಯಮದಲ್ಲೇ ಇರಲಿ, ದೃಶ್ಯ ಅಗಲಿ ಅಥವಾ ಬರಹ/ಸಾಹಿತ್ಯಕಲೆಯೇ ಇರಲಿ ಅದಕ್ಕೆ ಎರಡು ಮೂಲ ಸಾಮಗ್ರಿಗಳು ಮೇಳೈಸಿರಬೇಕು. ಅವೇ ಏಳು ಸ್ವರಗಳು, ಅವೇ ಏಳು ಬಣ್ಣಗಳು, ಅದೇ ಪ್ರಕೃತಿ ಒಂದು ಕಡೆ; ಇನ್ನೊಂದು ಕಡೆ, ಇನ್ನೂ ಮುಖ್ಯವಾಗಿ ಕಲಾಕಾರನ ಕಿವಿ, ಕಣ್ಣು, ಎದೆ / ಮೆದುಳು. ನಾವು ದಿನ ನಿತ್ಯ ನೋಡುವ ಅದೇ ಸೂರ್ಯೋದಯ, ಸೂರ್ಯಾಸ್ತವೇ ಇರಲಿ, ಕೋಗಿಲೆಯ ಇಂಚರವೇ ಇರಲಿ  ಸುತ್ತಲಿನ ಬದುಕಿನ ಏರಿಳಿತಗಳು ಇವು ಆತನ ಅನುಭವ, ಕಲಾಕೌಶಲತೆಗನುಗುಣವಾಗಿ ಉತ್ತಮ, ಅತ್ಯುತ್ತಮ (ಅಥವಾ ವಿಕೃತ ಸಹ!) ರಾಗ, ಚಿತ್ರ, ಕವಿತೆ, ಕಥನ ಕೃತಿಗಳಾಗಿ ಹೊರಬೀಳುತ್ತವೆ. ವಿಮರ್ಶಕ ಬುದ್ಧಿಯ, ಸ್ಪಂದಿಸುವ ಕವಿಮನಸ್ಸು ಬೇಕು ಸುತ್ತಲಿನ ಜನಸಾಮಾನ್ಯರ ಆಗು ಹೋಗುಗಳು, ಅವರ ಜೀವನವನ್ನು ಕಂಡು ಕವಿತೆ ಕಟ್ಟಲು ಎನ್ನುವ ಮುರಳಿ ಹತ್ವಾರರ ಈ ಕವನ ನಿಮ್ಮನ್ನೂ ಸಹ ಯೋಚನೆಗೆ ಹಚ್ಚಿಸುವದರಲ್ಲಿ ಸಂದೇಹವಿಲ್ಲ! ಓದಿ ನಿಮ್ಮ ಪ್ರತಿಕ್ರಿಯೆಯನ್ನು ಬರೆಯಿರಿ ಇಲ್ಲಷ್ಟೇ ಅಲ್ಲ, ’ಅನಿವಾಸಿ’ಯ ಪುಟಗಳಲ್ಲಿ ಸಹ. ನಿಮ್ಮ ಕಮೆಂಟುಗಳನ್ನು ಎದುರುನೋಡುತ್ತೇವೆ. 

(Locum) ಸಂಪಾದಕ 

ಕವಿತೆಯೊಂದು ಬೇಕಿದೆ 
ನೋಡುವ ಕಣ್ಗಳಿಗೆ 
ಕವಿತೆಯೊಂದು ಬೇಕಿದೆ 
ಓದುವ ಮನಗಳಿಗೆ 
 
ಮೋಡದ ಕುರುಹಿಲ್ಲದ ಗಗನ 
ಸಿಡಿಲಾರ್ಭಟದ ಮುಗಿಲ ನರ್ತನ 
ಬೆವರೊರೆಸಿದ ಟವಲಿನ ವಾಸನೆ 
ಕೊಡೆಯಡಿಯ ಕೆಸರಿನ ಶೋಧನೆ 

ರೈಲಿಯ ಕಿಟಕಿಯಲ್ಲಿ ಕಾಣುವ ವಿಮಾನ 
ಮುಗಿಲೊಳಗಿನ ವಿಮಾನ ಯಾನ 
ಭರ್ರನೆ ಓಡುವ  ಸ್ಪೊರ್ಟು ಕಾರು 
ಫುಟ್-ಪಾತಲಿ ಉರುಳುವ ವೀಲುಚೇರು 

ಫುಡ್ ಬ್ಯಾಂಕಿನ ಖಾಲಿ ಶೆಲ್ಪಿನ ಪಟ್ಟಿ 
ತುಂಬಿ ತುಳುಕುವ ಎಂಜಲು ತೊಟ್ಟಿ 
ಪ್ರೈವೇಟ್ ಸ್ಕೂಲಿನ ದುಬಾರಿ ಟೈ 
ಹಸಿದ ಮಕ್ಕಳ ಖಾಲಿ ಕೈ 

ಸಿಗರೇಟು ಹೊಗೆಯಲಿ ತೇಲುವ ಅಮ್ಮ 
ಮಗುವನ್ನು ಆಡಿಸುವ ಐಪ್ಯಾಡಮ್ಮ 
ತರತರದ ಆಲ್ಕೊಹಾಲು ಬಾಟಲು 
ಶವಾಗಾರದ ಐಸ್ ತುಂಬಿದ ಬಟ್ಟಲು 

ಎಲ್ಲವನ್ನೂ ತುಂಬಿ ಪದಗಳ ಕ್ಯಾನ್ವಾಸಿಗೆ 
ಅಕ್ಷರಗಳ ಕುಂಚಕ್ಕೆ ಭಾವಗಳ ಬಣ್ಣ ಹಚ್ಚಿ 
ನೋಡುವ ಕಣ್ಗಳು , ಓದುವ ಮನಗಳು 
ಕಟ್ಟುವ ಚೌಕಟ್ಟಲಿ ನಿಲ್ಲುವವವು ಕವಿತೆಯಾಗಿ

ಮುರಳಿ ಹತ್ವಾರ್

ನುಡಿದಂತೆ ನಡೆವುದು,,.  (ಕವನ)

ಒಬ್ಬ ಕವಿಯ ಕಥೆಗಾರನ ಲೇಖಕನ ಬರಹ ಅವನ ಬದುಕಿನ ವಿಸ್ತರಣೆಯಷ್ಟೆ. ಲೇಖಕನ ಬದುಕನ್ನು ಬರಹವನ್ನು ಬೇರ್ಪಡಿಸದೆ ಒಟ್ಟಾಗಿ ಗ್ರಹಿಸಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ಹೀಗಿರುವಾಗ ಆ ಲೇಖಕ 'ಹೇಳುವುದು ಆಚಾರ ಮಾಡುವುದು ಅನಾಚಾರವಾದಾಗ' ಅವನ ಲೇಖನ ತನ್ನ ಮೌಲ್ಯವನ್ನು ಕಳೆದುಕೊಂಡು ಬಿಡುತ್ತದೆ. ಫ್ಯಾಸಿಸ್ಟ್ ಆದ ಹಿಟ್ಲರ್ ತನ್ನ ಕಾಲದ ನಾಜೀ ಜರ್ಮನಿಯನ್ನು  ಕುರಿತು "ಸರ್ವ ಜನಾಂಗದ  ಶಾಂತಿಯ ತೋಟ" ಎಂದು ಕವನ ಬರೆದಿದ್ದರೆ ಅಥವಾ ಕೋಮು ಸೌಹಾರ್ದತೆಯ ಬಗ್ಗೆ ಇಲ್ಲ  ವಿಶ್ವ ಶಾಂತಿಯ ಬಗ್ಗೆ ಮಹಾ ಗ್ರಂಥವನ್ನು ಬರೆದಿದ್ದರೆ ಆ ಕೃತಿ ಸಾಹಿತ್ಯಿಕವಾಗಿ ಎಷ್ಟೇ ಉತ್ಕೃಷ್ಟವಾಗಿದ್ದರೂ ಅದು ಅಸಂಗತವೆಂದು ತಿರಸ್ಕಾರಗೊಳ್ಳುತ್ತಿತ್ತು ಮತ್ತು ಕಸದ ಬುಟ್ಟಿಗೆ ಲಾಯಕ್ಕಾಗುತ್ತಿತ್ತು. ಲೇಖಕನಿಗೆ ಒಂದು ನೈತಿಕ ಹೊಣೆಗಾರಿಕೆ ಇರುತ್ತದೆ. “Practice what you preach” ಎಂಬ ಪುರಾತನವಾದ ಲೋಕೋಕ್ತಿ ತಿಳಿಸುವಂತೆ ಒಬ್ಬ ಕವಿ, ಲೇಖಕ, ಬೋಧಕ, ಧಾರ್ಮಿಕ ಗುರು, ಜನ ನಾಯಕ, ಮತ್ತು  ಜನ ಸಾಮಾನ್ಯರ ನುಡಿ ಮತ್ತು ನಡೆಗಳಲ್ಲಿ ಸಾಮರಸ್ಯವಿರಬೇಕು, ಪ್ರಾಮಾಣಿಕತೆ ಇರಬೇಕು. ಒಂದು ಆದರ್ಶವಿರಬೇಕು ಅಷ್ಟೇ ಅಲ್ಲದೇ ಆ ಆದರ್ಶದ ಪರಿಪಾಲನೆಯಾಗಬೇಕು. ಬದುಕಿನುದ್ದಕ್ಕೂ ಈ ಆದರ್ಶ ಪರಿಪಾಲಿಸುವ ವ್ಯಕ್ತಿ ಮಹಾತ್ಮನಾಗುತ್ತಾನೆ. ಸಮಾಜದ  ನಿರೀಕ್ಷೆ, ಸಾಮಾಜಿಕ ಮೌಲ್ಯಗಳು ಕಾಲ ಕಾಲಕ್ಕೆ ಬದಲಾದರೂ ಮೂಲಭೂತ ಮಾನವೀಯ ಮೌಲ್ಯಗಳು ಬದಲಾಗುವುದಿಲ್ಲ, ಆ ಕಾರಣಕ್ಕಾಗಿಯೇ ಕ್ರಿಸ್ತ, ಬುದ್ಧ ಬಸವಣ್ಣ, ಗಾಂಧಿ ನಮಗೆ ಇಂದಿಗೂ ಪ್ರಸ್ತುತವಾಗಿರುತ್ತಾರೆ. ಬಸವಣ್ಣನವರು 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದಲ್ಲಿ "ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮ ದೇವನೆಂತು ಒಲಿಯುವನಯ್ಯಾ" ಎಂದು ಹೇಳಿರುವುದನ್ನು ಇಲ್ಲಿ ನೆನೆಯುವುದು ಸೂಕ್ತ. ಡಾ. ದಾಕ್ಷಾಯಿಣಿ  ಅವರ "ನುಡಿದಂತೆ ನಡೆವುದು" ಎಂಬ ಕವನ ಮೇಲಿನ ವಿಚಾರಗಳ ಬಗ್ಗೆ ಸಂಬಂಧಿಸಿದೆ. ಇತ್ತೀಚಿನ ಕವನಗಳಲ್ಲಿ  ಪ್ರಾಸ ವಿರಳವಾಗಿರುವಾಗ ಪ್ರಾಸತುಂಬಿದ ಈ ಕವಿತೆ ಓದುಗರಿಗೆ ವಿಶೇಷ ಅನುಭವ ನೀಡಿದೆ.   
-	ಸಂಪಾದಕ





ನುಡಿದಂತೆ ನಡೆವುದು,,.  (ಕವನ)

ನುಡಿದಂತೆ ನಡೆಯುವುದು ಬಹು ಕಷ್ಟ,
ಬಾಳ್ವೆ, ಬದುಕು ನಡೆಸಿದರೆಡೆಗೆ, ಅದು ಅದೃಷ್ಟ.

ಕಣಿ ಹೇಳುವವರ ಸಂಖ್ಯೆ ಬಹಳ
ತಕ್ಕಂತೆ ಕುಣಿಯುವವರು ವಿರಳ.

ಕತೆಯಲ್ಲಿ ಬರೆಯಬಹುದು ಪೊಳ್ಳು,
ಬದುಕುವ ರೀತಿಯಲ್ಲಿದ್ದರೂ ಬಹು ಟೊಳ್ಳು.

ಕವನದ ಅಂಚಿಗೂ ಸಲ್ಲುವುದು ಕವಿಗಳ ನ್ಯಾಯ,
ನಡೆನುಡಿಯಲ್ಲಿ ತುಂಬಿದ್ದರೂ ಬರಿ ಅನ್ಯಾಯ.

ಸಿಹಿ, ಸಿಹಿ ನುಡಿಮುತ್ತುಗಳು ಕಾಗದದಲ್ಲಿ,
ಕಹಿ,ಕಹಿ ಕಷಾಯದ ಕಪ್ಪು ಮಾತುಗಳಲ್ಲಿ.

ಪ್ರೀತಿ,ವಿಶ್ವಾಸ, ವಿಧೇಯತೆಯ, ವೈಭವ ಬರಹದಲ್ಲಿ,
ಭೀತಿ, ಹಠ, ಅಸೂಯೆಯ ಆಳದ ಶಂಕೆಯಲ್ಲಿ.

ಅಕ್ಷರಗಳ ನಾಡಿನಲ್ಲಿ ಆದರ್ಶ ಸಾಧನೆಗೆ ಬಹು ಬಣ್ಣನೆ, 
ದೇವಾ ಬರೆದಂತೆ ಬದುಕುವ ಮಾನವನಿಗೆ ಸಿಗಲಿ ಎಲ್ಲಾ  ಮನ್ನಣೆ.

(ಕತೆಗಾರರ, ಕವಿವರ್ಯಯರ ಕ್ಷಮೆ ಕೋರಿ)

ದಾಕ್ಷಾಯಿಣಿ