ನಿದ್ದೆಯೇ ಜೀವನದ ಹೆಗ್ಗುರಿ!

ಪ್ರಿಯ ಓದುಗರೆ
ಅನಿವಾಸಿಯ ಕಟ್ಟೆಯಲ್ಲಿ ಮತ್ತೊಮ್ಮೆ ಹರಟೆಯನ್ನು ಹೊಡೆಯುವ ಪ್ರಯತ್ನವನ್ನು ಮಾಡಿರುವೆ . ಕಟ್ಟೆ ಹಳೆಯದಾದರೇನು
ಹರಟೆಯ ವಿಷಯ ಮಾತ್ರ ಹೊಸದು . ರುಚಿಯಾದ ಊಟ , ಮಲಗಲು ಒಂದು ಹಾಸಿಗೆ , ಸವಿಯಾದ ನಿದ್ದೆ ಇದ್ದರೆ ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ - ಎಂದು ಸರ್ವಜ್ಞನು ಹೇಳಿರಬಹುದಾಗಿತ್ತೇನೋ ? ಇವು ಮೂರು ಯಾರಿಗೆ ಇಷ್ಟವಿಲ್ಲ? ಅದರಲ್ಲೂ
ಸವಿಯಾದ ನಿದ್ದೆಯಲ್ಲಿ ಸವಿಗನಸು ಕಾಣುವ ಮಜಾನೆ ಬೇರೆ . ನಿದ್ದೆಯ ಕುರಿತು ನನ್ನ ಪ್ರಾಥಮಿಕ ಶಾಲೆಯಿಂದ ಇಲ್ಲಿಯವರೆಗಿನ
ಅನುಭವಗಳು ವಿಶಿಷ್ಟವಾಗಿದ್ದು , ಆ ಘಟನೆಗಳ ನೆನಪುಗಳನ್ನು ಆಗಾಗ್ಗೆ ಮೆಲಕಿಸಿಕೊಂಡು , ನನ್ನಷ್ಟಕ್ಕೆ ನಾನೇ ಎಷ್ಟೋ ಸಲ
ನಕ್ಕಿದ್ದುಂಟು . ಆ ಮೆಲಕುಗಳನ್ನು ಹರಟೆಯ ರೂಪದಲ್ಲಿ ನಿಮ್ಮ ಮುಂದೆ ಇಡಲು ಪ್ರಯತ್ನಿಸಿರುವೆ .ಬನ್ನಿ ಸಾಧ್ಯವಾದರೆ ಓದಿ ,
ಹಾಗೆಯೇ ನಿಮ್ಮ ಅನಿಸಿಕೆಯನ್ನು ಗೀಚಲು ಮರೆಯದಿರಿ . ---- ಇಂತಿ ನಿಮ್ಮ ಸಂಪಾದಕ

“ಹೊಟ್ಟೆ ತುಂಬ ಊಟ ಮಾಡು , ಕಣ್ಣು ತುಂಬಾ ನಿದ್ದೆ ಮಾಡು ಆಯುಷ್ಯ ಘಟ್ಟಿಯಾಗುತ್ತೆ “ಎಂದು ವೈದ್ಯರು ಮತ್ತು ಹಿರಿಯರು
ಉಪದೇಶ ಮಾಡುವದು ಹೊಸದೇನು ಅಲ್ಲ . ಸರಿಯಾದ ಊಟ ಮತ್ತು ನಿದ್ದೆ ಉತ್ತಮ ಆರೋಗ್ಯಕ್ಕೆ ಮೂಲ ಮಂತ್ರ .ಆದರೆ
ಅವರವರ ಭಾವಕ್ಕೆ — ಅವರವರ ಮನಸಿಗೆ ತಕ್ಕಂತೆ , ಇದಕ್ಕೆ ತಮ್ಮದೇ ಆದ ಅರ್ಥವನ್ನು ಹುಡಿಕಿಕೊಂಡವರಿಗೆ ಏನೂ
ಕೊರತೆಯಿಲ್ಲ . ಕೆಲವರು ಬದುಕುವದಕ್ಕಾಗಿ ತಿನ್ನುವವರಿದ್ದರೆ ಇನ್ನು ಕೆಲವರು ತಿನ್ನುವದಕ್ಕಾಗಿಯೇ ಬದುಕುವದುಂಟು .
ಪರ್ಯಾಯವಾಗಿ ಕೆಲವರು ಬದಕುವದಕ್ಕಾಗಿ ನಿದ್ದೆ ಮಾಡಿದರೆ ಇನ್ನೂ ಕೆಲವರು ನಿದ್ದೆ ಮಾಡುವದಕ್ಕೆಂದೇ ಬದುಕುವದುಂಟು .
ಊಟ ಮಾಡುವ ಪರಿಯಲ್ಲಿ ಎಷ್ಟೊಂದು ವೈವಿಧ್ಯತೆ ಇದೆಯೋ ಹಾಗೆಯೇ ನಿದ್ದೆ ಮಾಡುವ ರೀತಿಯಲ್ಲೂ ವಿಭಿನ್ನ ವಿವಿಧತೆ ಉಂಟು .
ಮಲಗಿ ನಿದ್ದೆ ಮಾಡುವದು ಸಹಜವಾದರೂ , ಕೆಲವರು ಕುಳಿತಲ್ಲಿಯೇ ನಿದ್ದೆ ಮಾಡಿ ಖುಷಿ ಪಡುವದುಂಟು . ಇಷ್ಟೇ ಸಾಲದೆಂದು
ಇನ್ನು ಕೆಲವರು ನಿಂತು ನಿದ್ದೆ ಮಾಡಿದರೆ , ಕೆಲವರಂತೂ ಅಡ್ಡಾಡಿಕೊಂಡೇ ನಿದ್ದೆ ಮಾಡಿ ತಾವು ಎಲ್ಲರಿಗಿಂತಲೂ ವಿಭಿನ್ನವೆಂದು ತೋರಿಸುವದುಂಟು . ಒಟ್ಟಿನಲ್ಲಿ ನಾದಮಯಾ — ಅಲ್ಲಲ್ಲ ಕ್ಷಮಿಸಿ , ನಿದ್ದೆಮಯಾ —– ಈ ಲೋಕವೆಲ್ಲಾ .
ಅಚ್ಚು ಕಟ್ಟಾದ ಹಾಸಿಗೆಯ ಮೇಲೆ ತಮಗೆ ಅನುಕೂಲವಾದ ಭಂಗಿಯಲ್ಲಿ ಎಂದರೆ – ಅಡ್ಡಬಿದ್ದು , ಡಬ್ಬು ಬಿದ್ದು , ಚಿತ್ತ ಬಿದ್ದು
ಮಲಗುವವರು ಸಹಜವಾಗಿ ಸಿಗುತ್ತಾರೆ . ‘ಅಚ್ಚು ಕಟ್ಟಾದ ಹಾಸಿಗೆ’ ಯ ಪದವನ್ನು ಅವರವರ ಭಾವನೆಯಂತೆ
ಅರ್ಥೈಯ್ಯಿಸಬಹುದು . ಬಡವರಿಗೆ ನೆಲದ ಮೇಲಿನ ಚಾಪೆಯೇ ಅಚ್ಚು ಕಟ್ಟಾದರೆ , ಬಲ್ಲಿದರಿಗೆ ಅಲಂಕೃತ ಮಂಚ ಅಚ್ಚು
ಕಟ್ಟಾಗಬಹುದು . ದುರದೃಷ್ಟವಶಾತ್ ಕೆಲವು ಬಲ್ಲಿದರಿಗೆ ಮಂಚ ಇದ್ದರೂ ಬೊಜ್ಜಿನ ಬಾಧೆಯಿಂದಲೋ , ಸೊಂಟದ
ನೋವಿನಿಂದಲೋ ಚಾಪೆಯೇ ಗತಿಯಾಗುವದು ಬೇರೆ ವಿಷಯ ಬಿಡಿ . “ಹಲ್ಲಿದ್ದರೆ ಕಡಲೆ ಇಲ್ಲ , ಕಡಲೆಯಿದ್ದರೆ ಹಲ್ಲಿಲ್ಲ”
ಎಂಬುವದು ನಿಜ ತಾನೇ ?
ಕೆಲವರು ನಿಶ್ಚಿಂತೆಯಿಂದ ಶಾಂತವಾಗಿ ಮಲಗಿದರೆ ಇನ್ನೂ ಕೆಲವರು ಘೋರವಾದ ಗೊರಕೆಯನ್ನು ಹೊಡೆದು ಅಕ್ಕ ಪಕ್ಕದವರ ,
ಅಷ್ಟೇ ಏಕೆ ಮನೆ ಮಂದಿಯ ನಿದ್ದೆಯನ್ನೆಲ್ಲಾ ಹಾಳು ಮಾಡಿ ಸುಖ ಪಡುವದೂ ಉಂಟು . ಪತಿರಾಯನ ಗೊರಕೆಯ ಕಾಟವನ್ನು
ತಾಳದೆ , ಗೊರಕೆಯನ್ನು ತಡೆಯುವ ಎಲ್ಲ ಉಪಾಯಗಳು ವಿಫಲವಾದಾಗ , ‘ ಸಾಕಪ್ಪಾ ಈ ಮಹಾರಾಯಣ ಸಹವಾಸವೆಂದು
‘ವಿವಾಹ ವಿಚ್ಛೇದನೆಗೆ ಮೊರೆ ಹೋದ ಹೆಂಗಳೆಯರಿಗೇನೂ ಕಡಿಮೆಯಿಲ್ಲ .

ಮಲಗಿ ನಿದ್ದೆ ಮಾಡುವವರದು ಈ ಕಥೆಯಾದರೆ ಇನ್ನು ಕುಳಿತು ನಿದ್ದೆ ಮಾಡುವವರ ವಿಷಯವೇ ಬೇರೆ ಬಿಡಿ . ನಾನು ನಮ್ಮ ಹಳ್ಳಿಯ ಪ್ರಾಥಮಿಕ ಶಾಲೆಯ ಮೂರನೆಯ ಕ್ಲಾಸಿನಲ್ಲಿ ಓದುವಾಗ ‘ಮೂಲಿಮನಿ ‘ ಮಾಸ್ತರರು ಅಂತ ಇದ್ದರು (ಈಗಲೂ ಇದ್ದಾರೆ ). ಅಂಕಿ ಮಗ್ಗಿಯನ್ನೇನೋ ಚನ್ನಾಗಿ ಹೇಳಿಕೊಡುತ್ತಿದ್ದರು ಎನ್ನಿ ! ಆದರೆ , ಅಷ್ಟೇ ಚನ್ನಾಗಿ ತರಗತಿಯಲ್ಲಿ ನಿದ್ದೆಯನ್ನೂ ಹೊಡೆಯುತ್ತಿದ್ದರು ಎಂಬುವದು ವಿಶೇಷ ವಿಷಯ . ಅರ್ಧ ಘಂಟೆಯವರೆಗೂಒಂದರಿಂದ ಇಪ್ಪತ್ತರವರೆಗಿನ ಮಗ್ಗಿಗಳನ್ನು ನಮ್ಮೆಲ್ಲರ ಬಾಯಿಯಿಂದ ಸರತಿಯ ಮೇಲೆ ಒದರಿಸಿ , ಕೊನೆಯ ಹುಡುಗ ಇಪ್ಪತ್ತಇಪ್ಪತ್ತಲೇ ನಾಕನೂರೋ —- ಅಂತ ಮುಗಿಸುವದರೊಳಗೆನೇ ನಿದ್ದೆ ಹೋಗಿ ಬಿಡುತ್ತಿದ್ದರು . ಹಳ್ಳಿಯ ಶಾಲೆಗಳಲ್ಲಿ ಮಕ್ಕಳು ಮಗ್ಗಿಯನ್ನು ಹೇಳುವ ಪರಿ ರಾಗ ಹಚ್ಚಿ ಹಾಡು ಹೇಳಿದಂತೆ ಇರುತಿತ್ತು ( ಈಗ ಹೇಗಿದೆ ಎಂದು ಗೊತ್ತಿಲ್ಲ) . ಅದರ ಇಂಪಿಗೆನೇ ಇವರಿಗೆ ನಿದ್ದೆ ಬರುತಿತ್ತೇನೋ ? ಎಂಬುದು ನನ್ನ ಈಗಿನ ಒಂದು ಅನುಮಾನಿತ ಶಂಕೆ . ಮೂಲಿಮನಿ ಮಾಸ್ತರರು ಕುರ್ಚಿಯ ಮೇಲೆ ಕಾಲು ಮುದುರಿಸಿಕೊಂಡು ಕುಳಿತು ನಿದ್ದೆ ಹೊಡೆಯಲು ಪ್ರಾರಂಭಿಸಿದರೆ ಲಂಗು ಲಗಾಮು ಇಲ್ಲದ ನಮಗೆಲ್ಲಾ ಖುಷಿಯೋ ಖುಷಿ . ನಮ್ಮೆಲ್ಲರ ಗುದ್ದಾಟ , ಕಿರುಚಾಟ , ಪರಚಾಟ , ಜಗಳಾಟ ಮತ್ತು ಅಳಲಾಟ ಕುರುಕ್ಷೇತ್ರದ ಯುದ್ಧಕ್ಕಿಂತಲೂ ಭಯಂಕರವಾಗಿರುತಿತ್ತು . ಆದರೂ ಇದರ ಕಿಂಚಿತ್ತೂ ಪರಿವೆ ಇಲ್ಲದೆ ಮಾಸ್ತರರ ನಿದ್ದೆ ಮುಂದುವರೆಯುತ್ತಿತ್ತು .ಕುಂಭಕರ್ಣನನ್ನು ಎಬ್ಬಿಸಲು ಅವನ ಪ್ರಜೆಗಳೆಷ್ಟು ಹರಸಾಹಸ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯವೇ , ಆದರೆ ನಾವೆಲ್ಲಾ ಅವರೆಲ್ಲರಿಗಿಂತ ಬಹಳೇ ಮೇಲು ಇದ್ದಿದ್ದೀವಿ ಎನ್ನಿ . ನಮ್ಮ ನಿರಂತರ ಗಲಾಟೆಯಿಂದ ಒಂದರ್ಧ ಘಂಟೆಯಲ್ಲಿ ಮಾಸ್ತರರನ್ನು ಎಬ್ಬಿಸುವಲ್ಲಿ ಸಫಲವಾಗುತಿದ್ದೆವು ಎಂಬುದು ಹೆಮ್ಮೆಯ ವಿಷಯ . ನಿದ್ದೆಯಿಂದ ಎದ್ದ ಮಾಸ್ತರರು ಟೇಬಲ್ ಮೇಲೆ ಇರುತ್ತಿದ್ದ ಬಡಿಗೆಯನ್ನೊಮ್ಮೆ ಕುಟ್ಟಿ ಮತ್ತೆ ಮಗ್ಗಿಯ ಸರದಿಗೆ ಹೋಗುತ್ತಿದ್ದರು. ಕಳೆದ ಸಲ ನಮ್ಮೂರಿಗೆ ಹೋದಾಗ ಮಾಸ್ತರರನ್ನು ಮಾತಾಡಿಸಿಕೊಂಡು ಬರೋಣವೆಂದು ಅವರ ಮನೆಗೆ ಹೋಗಿದ್ದೆ . ಕುಶಲೋಪಹಾರಿ ಮಾತುಗಳೆಲ್ಲ ಮುಗಿದ ಮೇಲೆ ಅವರೆಂದರು. ” ಯಾಕೋ ಶಂಕ್ರಪ್ಪ , ನಿದ್ದೀನ ಬರವಲ್ಲದು ಯಾವುದಾದ್ರೂ ಗುಳಿಗಿಯಿದ್ದರ ಬರದಕೊಡ್ ” ಎಂದು .
ಅದಕ್ಕೆ ತಕ್ಷಣವೇ ನಾನಂದೆ ” ಗುರುಗೋಳ್ ಸಾಲ್ಯಾಗ ಇದ್ದಾಗ್ನ ನಿಮ್ಮ ಜನ್ಮ ಪೂರ್ತಿಯ ನಿದ್ದಿ ಮಾಡಿ ಮುಗಿಸಿ ಬಿಟ್ಟಿರಿ ಈಗ ಹ್ಯಾಂಗ್ ನಿದ್ದಿ ಬರಬೇಕು ?” ಎಂದು . ‘ ನಿನ್ನ ಕುಚೇಷ್ಟೆಯನ್ನು ಇನ್ನೂ ಬಿಟ್ಟಿಲ್ಲವೆಂದು’ ಬೈದುಕೊಂಡು ಹೋಗಿಬಿಟ್ಟರು .

ಇನ್ನು ಪ್ರಾಥಮಿಕ ಸಾಲಿ ಮುಗಿಸಿ ಮಾಧ್ಯಮಿಕ ಸಾಲಿಗೆ ಅಂತ ಬೈಲಹೊಂಗಲಕ್ಕೆ ಬಂದಾಗ ‘ಉಳ್ಳಾಗಡ್ಡಿ ‘ಅಂತ ಇಂಗ್ಲಿಷ್
ಮಾಸ್ತರರು ಸಿಕ್ಕಿದ್ದರು . ಅವರು ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿರಲಿಲ್ಲ ಬದಲು ಸ್ಟಾಫ್ ರೂಮಿನಲ್ಲಿ ಕುಳಿತು ಗಡದ್ದಾಗಿ ನಿದ್ದೆ
ಹೊಡೆಯುತ್ತಿದ್ದರು . ಸುಮಾರು ಸಲ ಅವರಿಗೆ ಕ್ಲಾಸ್ ಇದ್ದದ್ದೇ ಗೊತ್ತಿರುತ್ತಿರಲಿಲ್ಲ . ನಾವೇ ಹೋಗಿ ಸೂಕ್ಷ್ಮ ಪ್ರಯತ್ನ ಮಾಡಿ
ಎಬ್ಬಿಸಿಕೊಂಡು ಬರುತ್ತಿದ್ದೆವು . ಕಣ್ಣು ತಿಕ್ಕುತ್ತಾ ಬಂದರೂ , ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡಿ ಮಸ್ತ ಕ್ಲಾಸ್
ತೆಗೆದುಕೊಳ್ಳುತ್ತಿದ್ದರು . ಪಾಠ ಮುಗಿದ ಮೇಲೆ ನಮ್ಮನ್ನು ಕುರಿತು “ನಿಮಗೆಲ್ಲಾ ವಿದ್ಯೆಯೇ ಜೀವನದ ಹೆಗ್ಗುರಿಯಾಗಬೇಕು ” ಎಂದು
ಜೋರಾಗಿ ಹೇಳುತ್ತಿದ್ದರೆ , ಕಡೆಯ ಬೆಂಚಿನಲ್ಲಿ ಕುಳಿತ ಕಿಡಗೇಡಿಗಳು. ” ಸಾರ್ , ನಿದ್ದೆಯೇ ಜೀವನದ ಹೆಗ್ಗುರಿಯಾಗಬೇಕೆಂದು ” ಇನ್ನಷ್ಟು ಜೋರಾಗಿ ಕೂಗುತ್ತಿದ್ದರು .
ಇದೇನು ಬರೀ ಗುರುಗಳ ಬಗ್ಗೆ ಇಷ್ಟೊಂದು ಬರೆಯುತ್ತಿದ್ದೀನಿ ಅಂತ ಬೇಜಾರು ಮಾಡಿಕೊಳ್ಳಬೇಡಿ . ಶಿಷ್ಯರೂ ಯಾವುದರಲ್ಲು
ಕಡಿಮೆ ಇಲ್ಲ . ‘ ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ‘ ಅಂತ ದಾಸರು ಹೇಳಿಲ್ಲವೆ ? , ‘ಶಿಷ್ಯನು ಗುರುವನ್ನು
ಮೀರಿಸಬೇಕೆಂದು’ ಎಷ್ಟೋ ಕಥೆಗಳಲ್ಲಿ ಸಾರಿಲ್ಲವೆ ? ಇದನ್ನು ಕಾಯಾ , ವಾಚಾ , ಮನಸಾ ಅಂತ ಪೂರೈಸುವ ಶಿಷ್ಯರ
ಗುಂಪೂ ಬಹಳ ದೊಡ್ಡದುಂಟು .ಎಲ್ಲ ಕಾಲೇಜುಗಳ ಕೊಠಡಿಯ ಕೊನೆಯ ಬೆಂಚಿನಲ್ಲಿ ಈ ಗುಂಪು ಸಹಜವಾಗಿ ಸಿಗುವದುಂಟು .
ನಾನೂ ಒಬ್ಬ ಆ ಗುಂಪಿನ ಸದಸ್ಯನೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ( ನಿಜವಾಗಿಯೂ ?). ಕರ್ನಾಟಕ ಕಾಲೇಜಿನಲ್ಲಿ ಪಿ
ಯು ಸಿ ಓದುತ್ತಿರುವಾಗಿನ ಸಂದರ್ಭ . ಲಿಬರಲ್ ಹಾಸ್ಟೆಲಿನಲ್ಲಿದ್ದ ನಾವು ಎಂಟು ಜನ ಹುಡುಗರು ಬೆಳಿಗ್ಗೆ ಒಂಭತ್ತೂವರೆಗೆ ,
ಮೆಸ್ಸಿನಲ್ಲಿ ಹೊಟ್ಟೆತುಂಬ ತಿಂದು ಹತ್ತು ಘಂಟೆಗೆ ಕಾಲೇಜಿಗೆ ಹೋಗುತ್ತಿದ್ದೆವು . ಮೊದಲನೆಯದು ಇಂಗ್ಲಿಷ್ ಕ್ಲಾಸು . ಪ್ರೊಫೆಸರ್
ಮುಳಗುಂದ ಅವರು ‘ಚಾರ್ಲ್ಸ್ ಡಿಕ್ಷನ್ನ ‘ನ ‘ Great expectations’ ಕಾದಂಬರಿಯನ್ನು ಭಾವಪೂರ್ವಕವಾಗಿ ಚಿತ್ರಿಸುತ್ತಿದ್ದರೆ ,ಕೊನೆಯ ಬೆಂಚಿನಲ್ಲಿ ಕುಳಿತ ನಾವು ನಿದ್ರಾಲೋಕದಲ್ಲಿ ಮುಳುಗಿ ನಮ್ಮದೇ ಆದ ಹಗಲು ಕನಸು ಕಾಣುತ್ತಿದ್ದೆವು . ಕೊನೆಗೊಂದು
ದಿನ ಪ್ರೊಫೆಸ್ಸರ್ ನಮ್ಮನ್ನೆಲ್ಲ ತಮ್ಮ ಕಚೇರಿಗೆ ಕರೆದು ” ನೀವು ನಿದ್ದೆ ಮಾಡದೆ ನನ್ನ ಪಾಠವನ್ನು ಕೇಳುತ್ತೀರಿ ಎಂಬುದೇ ನನ್ನ
great expectations ಎಂದು ಛಿ ಮಾರಿ ಹಾಕಿ ಕಳುಹಿಸಿದ್ದರು .
‘ ತಿಂದ ತಕ್ಷಣವೇ ನಿದ್ದೆ ‘ ಎಂದಾಗ ನನ್ನ ಸ್ನಾತಕೋತರ ಪದವಿಯ ಗೆಳೆಯನೊಬ್ಬನದು ನೆನಪಾಯಿತು ನೋಡಿ . ನಾವು
ತರಬೇತಿಯಲ್ಲಿ ಇದ್ದಾಗ ಮಧ್ಯಾಹ್ನದಲ್ಲಿ ಊಟಕ್ಕೆಂದು ಅಬ್ಬಬ್ಬಾ ಎಂದರೆ ಅರ್ಧ ಘಂಟೆ ಸಮಯವಿರುತ್ತಿತ್ತು , ಸುಮಾರು ಐದು
ನಿಮಿಷಿನಲ್ಲಿ ಗಬಗಬನೆ ತಿಂದು , ಮಿಕ್ಕಿದ ಇಪ್ಪತ್ತು ನಿಮಿಷ ಅವನು ಎಲ್ಲೋ ಮಾಯವಾಗಿ ಬಿಡುತ್ತಿದ್ದ . ಕುತೂಹಲಕ್ಕೆಂದು
ಅವನನ್ನು ಹಿಂಬಾಲಿಸಿದಾಗ ಗೊತ್ತಾಗಿತ್ತು – ಅವನು ಪಕ್ಕದ ಕೋಣೆಯೊಂದರಲ್ಲಿ ಕುಳಿತು ಸಣ್ಣ ನಿದ್ದೆ ಮಾಡಿ ಬರುತ್ತಿದ್ದ .
ಇವರೇನೂ ಅಪರೂಪವಲ್ಲ ಬಿಡಿ , ಎಲ್ಲೆಲ್ಲೋ ಕಾಣಿಸುವವರೆ . ಇದನ್ನೇ ಇಂಗ್ಲೀಷಿನಲ್ಲಿ ಸ್ಟೈಲಿಶ್ ಆಗಿ ‘ ನ್ಯಾಪ್ ‘ ಅಂತ ಕರೆಯುವದುಂಟು ತಾನೆ ? ಪಾಪ ! ಹೊಟ್ಟೆಯ ತಪ್ಪೋ ಅಥವಾ ನಿದ್ಧೆಯ ತಪ್ಪೋ ಒಂದೂ ಗೊತ್ತಿಲ್ಲ .

ಇನ್ನು , ನಿಂತು ನಿದ್ದೆ ಮಾಡುವವರನ್ನು ನೀವು ಕಂಡಿರದೆ ಇರಬಹುದು . ಇಂಥವರು ಭರ್ಜರಿಯಾಗಿ ತುಂಬಿದ ಬಸ್ಸುಗಳಲ್ಲಿ
ಸಹಜವಾಗಿ ಸಿಗುವದುಂಟು . ನಮ್ಮೂರಿನಿಂದ ಪಟ್ಟಣಕ್ಕೆ ಸಂತೆಯ ದಿನದಂದು ಹೋಗುವ ಬಸ್ಸು ಯಾವಾಗಲೂ ಕಿಕ್ಕಿರಿದು ತುಂಬಿರುತ್ತಿತ್ತು . ನಮ್ಮ ಕಟುಕರ ಕಮಾಲಸಾಬನು ಖಾಯಮ್ ಪ್ರಯಾಣಿಕನಾಗಿದ್ದರೂ , ಧಡೂತಿ ಶರೀರವಿರುವದರಿಂದ ಬೇಗನೆ ಬಸ್ಸಿನಲ್ಲಿ ನುಗ್ಗಲಾರದೆ ಯಾವಾಗಲೂ ಕುಳಿತುಕೊಳ್ಳಲು ಸೀಟು ಸಿಗಲಾರದೆ ಒದ್ದಾಡುತ್ತಿದ್ದನು . ಪಾಪ !! ರಾತ್ರಿಯಲ್ಲ ಏನು
ಮಾಡಿರುತ್ತಿದ್ದನೋ ಕಾಣೆ , ಆದರೆ ಬಸ್ಸಿನಲ್ಲಿ ಏರಿದ ಮೇಲೆ ಮಾತ್ರ ನಿಂತುಕೊಂಡೆ ನಿದ್ದೆ ಹೊಡೆಯಲು ಪ್ರಾರಂಭಿಸುತ್ತಿದ್ದನು.
ತೂಗಾಡಿಕೆಯಲ್ಲಿ ಅವನ ಶರೀರದ ಮುಕ್ಕಾಲು ಭಾರ ಸೀಟಿನಲ್ಲಿ ಕುಳಿತವರ ಮೇಲೆ ಬೀಳುತ್ತಿತ್ತು . ಇವನ ಕಾಟವನ್ನು
ತಾಳಲಾರದೆ , ಬೈಯ್ಯಲೂ ಮನಸಿರಲಾರದೆ , ಕುಳಿತವರೆ ಎದ್ದು ಇವನಿಗೆ ತಮ್ಮ ಸೀಟು ಕೊಟ್ಟು ಕೃತಾರ್ಥರಾಗುತ್ತಿದ್ದರು .
ಅಂತು ಇಂತು ಕೊನೆಗೂ ಸೀಟು ಗಿಟ್ಟಿಸುತ್ತಿದ್ದ ಎನ್ನಿ .

ಇವರದೆಲ್ಲಾ ಒಂದು ಪಂಗಡವಾದರೆ ಇನ್ನೊಂದನ್ನು ವಿಭಿನ್ನ ಪಂಗಡವೆಂದೇ ಪರಿಗಣಿಸಬಹುದು , ಅದುವೇ ನಡೆದಾಡಿಕೊಂಡು
ನಿದ್ದೆ ಮಾಡುವವರ ಅಥವಾ ನಿದ್ದೆಯಲ್ಲಿ ನಡೆದಾಡುವವರ ಪಂಗಡ . ಈ ಪಂಗಡದ ಸದಸ್ಯರನ್ನು ಸ್ವತಃ ನೋಡಿರುವವರಕ್ಕಿಂತಲೂ ಅವರ ಬಗ್ಗೆ ಓದಿದವರೆ ಹೆಚ್ಚು ಇರಬಹುದು ಎಂಬುವದು ನನ್ನ ಅನಿಸಿಕೆ .
ನಾನು ಕೆಎಂಸಿ ಯಲ್ಲಿ ಕಲಿಯುತ್ತಿದ್ದಾಗ , ನನ್ನ ಖಾಸಾ ದೋಸ್ತ ‘ಮಂಜು’ ಹುಬ್ಬಳ್ಳಿಯ ಬಿ ವ್ಹಿ ಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್
ಓದುತ್ತಿದ್ದ . ಅವನು ನಿದ್ದೆಯಲ್ಲಿ ಅಡ್ಡಾಡುತ್ತಿದ್ದಾನೆ ಎಂದು ಹೆದರಿಕೊಂಡು ಅವನ ರೂಮ್ಮೇಟ್ ಕೊಠಡಿಯನ್ನು ಬದಲಿಸಿದ್ದು ತಿಳಿದು ನನಗೆ ಬೇಜಾರವು ಹಾಗೆಯೇ ಕುತೂಹಲವೂ ಆಗಿತ್ತು . ಅದೊಂದು ದಿನ ನೋಡಿಯೇ ಬಿಡೋಣವೆಂದು ನಿರ್ಧರಿಸಿ ,
ಧೈರ್ಯತುಂಬಿಕೊಂಡು ಅವನ ಕೊಠಡಿಯಲ್ಲಿ ಮಲಗಲು ಹೋಗಿದ್ದೆ . ವಿಷಯ ನನ್ನ ಬೇರೆ ದೋಸ್ತಗಳಿಗೆ ಗೊತ್ತಾಗಿ ” ಲೇ ಸುಮ್ಮ್ನ
ವಾಪಸ್ ಹೋಗಿ ಬಿಡು , ಇಲ್ಲಂದ್ರ ನಡು ರಾತ್ರ್ಯಾಗ ಓಡಿ ಹೋಗತಿ ನೋಡ್ ಮಗನ ” ಅಂತ ಬೆದರಿಕೆಯ ಮಾತುಗಳನ್ನು
ಆಡಿದ್ದರು . ಆದರೂ ಅವರ ಮಾತುಗಳಿಗೆ ಬೆಲೆ ಕೊಡದೆ ಅವನ ಕೊಠಡಿಯಲ್ಲಿ ಮಲಗುವ ಸಾಹಸವನ್ನು ಮಾಡಿ ಬಿಟ್ಟಿದ್ದೆ . ಗಾಢ ನಿದ್ದೆಯಲ್ಲಿದ್ದ ಮಂಜು , ನಡು ರಾತ್ರಿಯಲ್ಲಿ ಕೋಣೆಯ ಬಾಗಿಲು ತೆಗೆದು ಹೊರಗೆ ಹೊರಟೇ ಬಿಟ್ಟಿದ್ದ . ಭಯವಾದರೂ ಕುತೂಹಲದಿಂದ ಅವನನ್ನೆ ಹಿಂಬಾಲಿಸಿದ್ದೆ . ನಿದ್ದೆಯಲ್ಲಿ ನಡೆಯುತ್ತ ನಡೆಯುತ್ತಾ ಅವನು ಎದುರುಗಡೆಯಿದ್ದ ಸ್ಮಶಾನದ ಜಾಗವನ್ನು ಪ್ರವೇಶಿಸಿದಾಗ ನನಗೆ ಧೈರ್ಯಸಾಲದೆ ವಾಪಸು ಓಡಿ ಬಂದಿದ್ದೆ . ಮನುಷ್ಯನ ಮೆದಳು ನಿದ್ದೆಯಲ್ಲಿಯೂ
ಇಷ್ಟೊಂದು ಅಚ್ಚು ಕಟ್ಟಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದು ನನಗೆ ಇನ್ನೂ ಒಗಟಾಗಿರುವ ವಿಷಯ . ಮಂಜುನಾಥನ
ಆಶೀರ್ವಾದದಿಂದ ಮಂಜು ಈಗ ನಿದ್ದೆಯಲ್ಲಿ ನಡೆಯುವದನ್ನು ಬಿಟ್ಟಿದ್ದಾನೆಂದು ಅವನ ಶ್ರೀಮತಿಯವರಿಂದ ತಿಳಿದು
ಸಂತೋಸವಾಯಿತು ಎನ್ನಿ .

ಈ ನಿದ್ದೆಯ ಪುರಾಣ ಇಷ್ಟಕ್ಕೆ ಮುಗಿಯುವದಿಲ್ಲ ಬಿಡಿ . ‘ ಅತಿ ‘ ಎಂಬುವದಕ್ಕೆ ‘ ಮಿತಿ ‘ ಅಂತ ವಿರುದ್ಧ ಪದವಿರುವದು ನಿಜ .
ಹಾಗೆಯೆ ಅತಿಯಾಗಿ ನಿದ್ದೆಮಾಡುವವರು ಒಂದೆಡೆ ಇದ್ದರೆ , ಇನ್ನು ನಿದ್ದೆ ಬರದೆ ಒದ್ದಾಡುವವರು ಇನ್ನೊಂದೆಡೆ ಇರಲೇಬೇಕಲ್ಲವೆ ? ನಿದ್ದೆ ಬಾರದೆ ಪರಿತಪಿಸುವ ಬಹು ಜನರು ಮನಬಂದಂತೆ ಪರಿಶೋಧನೆ ನಡೆಸಿ , ತಮಗೆ ತಕ್ಕ ಹವ್ಯಾಸಗಳನ್ನು
ಬೆಳೆಸಿಕೊಳ್ಳುವದು ಸಹಜ . ಹವ್ಯಾಸ ಒಳ್ಳೆಯದೊ ಕೆಟ್ಟದ್ದೊ ಬೇರೆ ವಿಷಯ ಬಿಡಿ .
ಅಂತೂ ‘ ಮನಸಿದ್ದರೆ ಮಾರ್ಗ ‘ಎಂದು ಅಂಬುವದರಲ್ಲಿ ಅವರಿಗೆ ನಂಬಿಕೆ ಇರುವದು ಶ್ಲಾಘನೀಯ . ನಿದ್ದೆ ಬರಲೆಂದು
ಸೋಮಾರಿಗಳು ಕೂಡ ತಾಸು ಗಂಟಲೇ ‘ ವಾಕಿಂಗ್ ‘ ಮಾಡುವದಕ್ಕೆ ಮತ್ತು ಪುಸ್ತಕಗಳ ಮುಖವನ್ನೇ ನೋಡದವರು
ಮೂಟೆಗಂಟಲೇ ಪುಸ್ತಕಗಳನ್ನು ಖರೀದಿಸಿ ಓದಲು ಪ್ರಾರಂಭಿಸುವದಕ್ಕೆ ಈ ನಿದ್ದೆರಾಯನೇ ಕಾರಣ ಎಂಬುದೊಂದು ನೆಮ್ಮದಿಯ
ಸಂಗತಿ . ಅದಕ್ಕಾದರೂ ಅವನಿಗೊಂದು ಧನ್ಯವಾದವನ್ನು ಹೇಳಲೇ ಬೇಕಲ್ಲವೆ ?
ಒಟ್ಟಿನಲ್ಲಿ ನನ್ನ ಮಾಧ್ಯಮಿಕ ಶಾಲೆಯ ಕಿಡಿಗೇಡಿ ಗೆಳೆಯರು ಹೇಳಿದಂತೆ , ಒಂದಿಲ್ಲ ಒಂದು ರೀತಿಯಲ್ಲಿ ಬಹು ಜನರಿಗೆ ‘ನಿದ್ದೆಯೇ ಜೀವನದ ಹೆಗ್ಗುರಿ ‘ ಯಾಗಿರುವದು ಮಾತ್ರ ನಿಜ ಸಂಗತಿ . ನೀವೇನು ಅನ್ನುತ್ತೀರಿ ?
ಹರಟೆಯ ನೆಪದಲ್ಲಿ ನನ್ನಿಂದ ಇಷ್ಟೊಂದು ಕೊರೆಯಿಸಿಕೊಂಡ ಮೇಲೆ , ತಾಳ್ಮೆಯಿಂದ ಓದಿದವರಿಗೆಲ್ಲ ಕಣ್ಣು ತುಂಬಾ ನಿದ್ದೆ ಬರುತ್ತದೆ ಎಂದು ಬಲವಾಗಿ ನಂಬಿರುವೆ.

—– ಶಿವಶಂಕರ ಮೇಟಿ

’ಲಂಡನ್ ಡೈರಿ’: ವೈದೃಶ್ಯಗಳ ನಡುವಿನ ಬೆರಗುಗಳು’ ಯೋಗೀಂದ್ರ ಮರವಂತೆಯವರ ಪುಸ್ತಕದ ವಿಮರ್ಶೆ – ಡಾ ಜಿ ಎಸ್ ಶಿವಪ್ರಸಾದ್

ಬ್ರಿಸ್ಟಲ್ ಏರ್ ಬಸ್ ಸಂಸ್ಥೆಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞರಾದ ಯೋಗಿಂದ್ರ ಮರವಂತೆ ಅನಿವಾಸಿ ಕನ್ನಡಿಗರಿಗೆ ಚಿರಪರಿಚಿತರು. ಹಲವಾರು ವರ್ಷಗಳಿಂದ ದಿನಪತ್ರಿಕೆಗಳಿಗೆ ಮತ್ತು ಅಂತರ್ಜಾಲ ತಾಣಗಳಿಗೆ ಅಂಕಣ ಬರೆಯುತ್ತ,  ಆಗೊಮ್ಮೆ ಈಗೊಮ್ಮೆ ಅನಿವಾಸಿ ತಾಣದಲ್ಲೂ ಕೆಲವು ಪ್ರಬಂಧಗಳನ್ನು ಬರೆಯುತ್ತ ನಮಗೆಲ್ಲ ಚಿರಪರಿಚಿತರಾಗಿದ್ದಾರೆ. ಅವರ ಲೇಖನಗಳು ನಮ್ಮ ಸಮಕಾಲೀನ ಬದುಕಿನ ಹಲವಾರು ವಿಷಯಗಳಿಗೆ ಸಂಬಂಧಿಸಿದ್ದು ಅವರ ಸೃಜನಾತ್ಮಕ  ಬರಹಗಳು ಅನೇಕ ಚಿಂತನೆಗಳಿಗೆ ಅನುವು ಮಾಡಿಕೊಟ್ಟಿದೆ. ಲಂಡನ್ ಡೈರಿ ಅವರ ಮೊದಲನೇ ಕೃತಿ. ಇದಲ್ಲದೆ ಅವರು 'ಮುರಿದು ಬಿದ್ದ ಸೈಕಲ್ ಮತ್ತು ಹೂಲ ಹೂಪ್ಸ್ ಹುಡುಗಿ’,'ನನ್ನ ಕಿಟಕಿ' ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಒಂದೆರಡು ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದ್ದಾರೆ. ಯೋಗಿಂದ್ರ ಮರವಂತೆ ಮತ್ತು ಇನ್ನೂ ಅನೇಕ ಅನಿವಾಸಿ ಕನ್ನಡಿಗರು ವಿದೇಶದಲ್ಲಿ ಕುಳಿತು ಉತ್ತಮವಾದ ಪುಸ್ತಕಗಳನ್ನು ಬರೆದಿದ್ದಾರೆ.  ಅವರ ಕೃತಿಗಳನ್ನು ಅನಿವಾಸಿ ಕನ್ನಡಿಗರು ಓದಬೇಕು ಮತ್ತು ಓದಿ ಅವರ ಅಭಿಪ್ರಾಯಗಳನ್ನು ದಾಖಲಿಸಿದರೆ ಲೇಖಕರಿಗೆ ಮುಂದಕ್ಕೆ ಬರೆಯಲು ಉತ್ತೇಜನ ದೊರೆಯುತ್ತದೆ ಎಂಬುದು ನನ್ನ ಅಭಿಪ್ರಾಯ. ಈ ಒಂದು ಹಿನ್ನೆಲೆಯಲ್ಲಿ ನಾನು ಯೋಗಿಂದ್ರ ಅವರ ಲಂಡನ್ ಡೈರಿ ಪುಸ್ತಕ ಪರಿಚಯದ ಪ್ರಯತ್ನ ಮಾಡಿದ್ದೇನೆ. ನನ್ನ ಒಂದು ಕಾದಂಬರಿ ಕೃತಿಯನ್ನು ಅನಿವಾಸಿ ಮಿತ್ರರು ಹಿಂದೆ ಓದಿ ಅದರ ವಿಮರ್ಶೆ ಒದಗಿಸಿದ್ದು ನನಗೆ ಓದುಗರ ದೃಷ್ಟಿಕೋನ ದೊರಕಿದಂತಾಯಿತು. ನನ್ನ ಸಾಮರ್ಥ್ಯಗಳ ಬಗ್ಗೆ ಒಂದು ಒಳನೋಟವೂ ದೊರಕಿತು. ಕನ್ನಡ ನೆಲದಿಂದ ದೂರವಿರುವ ನಮ್ಮಂಥ ಅನಿವಾಸಿ ಲೇಖಕರುಗಳು ಒಬ್ಬರು ಇನ್ನೊಬ್ಬರ ಕೃತಿಗಳನ್ನು ಓದಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಶ್ಯಕತೆ ನನಗೆ ಕಂಡಿದೆ. ಈ ಪ್ರಯತ್ನವನ್ನು ಮುಂದಕ್ಕೆ ನಡೆಸಿಕೊಡಲು ನಾನು ಪ್ರಯತ್ನಿಸುತ್ತೇನೆ.

ನಾವುಗಳು ಬರೆದ ಕನ್ನಡ ಪುಸ್ತಕಗಳು ಕರ್ನಾಟಕದಲ್ಲಿ ಪ್ರಕಟಗೊಂಡು ಅದನ್ನು ಇಂಗ್ಲೆಂಡಿನ ಕನ್ನಡ ಓದುಗರಿಗೆ ಒದಗಿಸುವುದು ಸ್ವಲ್ಪ ಕಷ್ಟದ ಕೆಲಸವೇ. ಪುಸ್ತಕದ ಬೆಲೆಗೆ ಸಾಗರದಾಚೆಗೆ ರವಾನಿಸುವ ಮತ್ತು ಅಂಚೆಯಲ್ಲಿ ವಿತರಿಸುವ ಬೆಲೆಯನ್ನು ಸೇರಿಸುವುದು ಅನಿವಾರ್ಯವಾಗುತ್ತದೆ. ಮುಂದಕ್ಕೆ ಯುಕೆ ಕನ್ನಡ ಬಳಗ ಮತ್ತು ಇತರ ಕನ್ನಡ ಸಂಘ ಸಮಾರಂಭದಲ್ಲಿ ಅನಿವಾಸಿ ಲೇಖಕರ ಪ್ರಕಟಿತ ಪುಸ್ತಕಗಳ ಬಗ್ಗೆ ಅರಿವು ಮೂಡಿಸಿ ಅದನ್ನು ಒಂದು ಕಡೆ ಮಾರಾಟ ಮಾಡುವ ಅವಕಾಶವನ್ನು ಈ ಸಂಘಗಳು ಕಲ್ಪಿಸಿ ಕೊಡಬೇಕಾಗಿದೆ. ಇದನ್ನು ಬರಿ ವಾಣಿಜ್ಯ ವಹಿವಾಟಾಗಿ ನೋಡದೆ ಕನ್ನಡ ಬೆಳೆಸುವ ಯತ್ನವೆಂದು ಪರಿಗಣಿಸಬೇಕು. ಅನಿವಾಸಿ ಲೇಖಕರು ತಾವು ಬರೆದ ಕೃತಿಗೆ ಅನಿವಾಸಿ ಓದುಗರ ಬೆಂಬಲವನ್ನು ನಿರೀಕ್ಷಿಸುವುದು ಸಹಜವೇ.  

 -ಸಂಪಾದಕ
ಯೋಗಿಂದ್ರ ಮರವಂತೆ ಅವರು ಅಂಕಣಕಾರರಾಗಿ ಉದಯವಾಣಿ, ಪ್ರಜಾವಾಣಿ, ಕೆಂಡ ಸಂಪಿಗೆ ಮುಂತಾದ ತಾಣಗಳಲ್ಲಿ ಬರೆದ ಪ್ರಬಂಧಗಳನ್ನು ಒಟ್ಟುಗೂಡಿಸಿ ‘ಲಂಡನ್ ಡೈರಿ’ (ಅನಿವಾಸಿಯ ಪುಟಗಳು) ಎಂಬ ಸಂಕಲನವನ್ನು ೨೦೧೯ರಲ್ಲಿ ಹೊರತಂದಿದ್ದು ಅದನ್ನು ಕರ್ನಾಟಕದ ಯಾಜಿ ಪ್ರಕಾಶನ ಪ್ರಕಟಿಸಿದೆ. ಈ ಪುಸ್ತಕವನ್ನು ಹಿಂದೆ ನಾನು ಕೊಂಡಿದ್ದು ಅದು ನನ್ನ ಇಂಡಿಯಾ ಪ್ರವಾಸದಲ್ಲಿ ಕಳೆದುಹೋಗಿ, ಇತ್ತೀಚಿಗೆ ಬೆಂಗಳೂರಿನ ನವಕರ್ನಾಟಕ ಪುಸ್ತಕ ಮಳಿಗೆಗೆ ಭೇಟಿ ನೀಡಿದಾಗ ಮತ್ತೆ ನನಗೆ ದಕ್ಕಿದೆ. ಇದೀಗ ಈ ಪುಸ್ತಕವನ್ನು ಓದಿ ಮುಗಿಸಿದ್ದೇನೆ. ಹಳೆಯ ಪುಸ್ತಕಕ್ಕೊಂದು ಹೊಸ ದೃಷ್ಟಿಕೋನವನ್ನು ಒದಗಿಸುವ ಪ್ರಯತ್ನ ನನ್ನದಾಗಿದೆ. "ಹಾಡು ಹಳೆಯದಾದರೇನು ಭಾವ ನವನವೀನ" ಎನ್ನುವ ಹಾಗೆ ಎಂದು ತಿಳಿಯಿರಿ. ಈ ಪುಸ್ತಕವನ್ನು ಎರಡೇ ಸಾಲುಗಳಲ್ಲಿ ಸಂಕ್ಷಿಪ್ತವಾಗಿ ಪರಿಚಯ ಮಾಡುವುದಾದರೆ  ಪುಸ್ತಕದ ಮೊದಲನೇ ಪುಟದಲ್ಲೇ ಲೇಖಕರೇ ತಿಳಿಸಿರುವಂತೆ; "ಮುಖಾಮುಖಿಗಳು ಹುಟ್ಟಿಸುವ ಬೆರಗು, ಕುತೂಹಲ, ತಳಮಳ, ವೈರುಧ್ಯಗಳ ನಡುವೆ ಅಲೆಯುತ್ತ ನೆನೆಯುತ್ತ ಕಾಲ ಘಟನೆಗಳಿಗೆ ಹೊಂದಿಸಿ ಮನಸ್ಸಿನಲ್ಲಿ ಅಕ್ಷರ ಪೋಣಿಸಿದರೆ, ಹಾಳೆಯ ಮೇಲೆ ಮೂಡಿಸಿದರೆ, ಮತ್ತು ಆ ಹಾಳೆಗಳನ್ನು ಪುಟಗಳಾಗಿ ಜೋಡಿಸಿದರೆ ಅದು ಲಂಡನ್ ಡೈರಿ". ಇದರಲ್ಲಿ ಒಂದು ಮುಖ ಇಂಗ್ಲೆಂಡ್, ಇನ್ನೊಂದು ಮುಖ ಭಾರತ. ಈ ಹೊತ್ತಿಗೆಗೆ ಬೆನ್ನುಡಿ ಬರೆದ ಖ್ಯಾತ ಲೇಖಕಿ ಪುಸ್ತಕದಲ್ಲಿನ ವೈವಿಧ್ಯತೆ ಮತ್ತು ಸೂಕ್ಷ್ಮ ವಿವರಗಳನ್ನು ಗಮನಿಸಿ ಯೋಗಿಂದ್ರ ಅವರಿಗೆ "ಕಾಣುವ ಕಣ್ಣುಗಳು" ಇವೆಯೆಂದು ಪ್ರಶಂಸಿಸಿದ್ದಾರೆ. ಇಂಗ್ಲೆಂಡಿನಲ್ಲಿ ವಾಸ ಮಾಡುತ್ತಿರುವ ಅನಿವಾಸಿಗಳಿಗೆ ಸಾಧಾರಣ ಎನಿಸುವ ದಿನ ನಿತ್ಯ ಬದುಕಿನ ಕ್ಷಣಗಳನ್ನು ಯೋಗಿಂದ್ರ ಅವರು ಗ್ರಹಿಸಿ ಆಳವಾಗಿ ಚಿಂತಿಸಿರುವುದರ ಬಗ್ಗೆ ಖ್ಯಾತ ಲೇಖಕ ಅಬ್ದುಲ್ ರಶೀದ್ ಅವರು ಬೆನ್ನುಡಿಯಲ್ಲಿ ಬರೆಯುತ್ತ “ಯೋಗಿಂದ್ರ ಅವರಿಗೆ ಪತ್ರಕರ್ತನ ಗುಣವಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಪುಸ್ತಕದ ಶೀರ್ಷಿಕೆ ‘ಲಂಡನ್ ಡೈರಿ’ ಎಂತಿದ್ದರೂ ಇದು ಲಂಡನ್ ನಗರವನ್ನೂ ದಾಟಿ ಇಂಗ್ಲೆಂಡಿನ ಬದುಕಿನ ಚಿತ್ರವಾಗಿದೆ. ಕರ್ನಾಟಕದ ಕನ್ನಡಿಗರು ಲಂಡನ್ ಮತ್ತು ಇಂಗ್ಲೆಂಡ್ ಎಂಬ ಹೆಸರಿನಲ್ಲಿ ನಿರ್ದಿಷ್ಟವಾದ ವ್ಯತಾಸವನ್ನು ಕಾಣದೆ ನಗರ ಮತ್ತು ದೇಶವನ್ನು ಒಂದೇ ಹೆಸರಿನಲ್ಲಿ ಸಂಬೋಧಿಸುವುದರಿಂದ ಈ ಶೀರ್ಷಿಕೆ ಇಂಗ್ಲೆಂಡನ್ನು ಕನ್ನಡಿಗರಿಗೆ ಪರಿಚಯಿಸುವ ದೃಷ್ಟಿಯಿಂದ ಸೂಕ್ತವಾಗಿದೆ. ಅಂದ ಹಾಗೆ ಈ ಹೊತ್ತಿಗೆಯ ಮುಖಪುಟವನ್ನು ಗಮನಿಸಿದರೆ ಇಲ್ಲಿ ಇರುವ ಲಂಡನ್ ಬಿಗ್ ಬೆನ್, ಜಿನುಗುತ್ತಿರುವ ಮಳೆ, ಮಬ್ಬು ಕವಿದ ಮೋಡಗಳು ಇಂಗ್ಲೆಂಡಿನ ಒಂದು ಪರಿಪೂರ್ಣ ಚಿತ್ರಾತ್ಮಕ ಸಂಕೇತದಂತೆ ತೋರುತ್ತದೆ. ಈ ಮುಖಪುಟವೇ ಈ ಹೊತ್ತಿಗೆಯ ಒಂದು ಕಿರುಪರಿಚಯ!

ಈ ಪ್ರಬಂಧ ಸಂಕಲನದ ಮೂಲ ಉದ್ದೇಶ ಬ್ರಿಟನ್ನಿನ್ನ ನಿವಾಸಿ ಮತ್ತು ಅನಿವಾಸಿಗಳ ಬದುಕನ್ನು ಕನ್ನಡಿಗರಿಗೆ ಪರಿಚಯಿಸುವುದು ಎಂದು ಶುರಿವಿನಲ್ಲೇ ಪ್ರಸ್ತಾಪಿಸಿಸುವುದು ಉಚಿತ. ಓದುತ್ತ ಹೋದಂತೆ ಲೇಖಕರ ಮೂಲ ಆಶಯ ಮತ್ತು ಹಂಬಲ ತೆರೆದುಕೊಳ್ಳುತ್ತದೆ.  ನಾಲ್ಕೈದು ದಶಕಗಳ ಹಿಂದೆ ವಿದೇಶದಲ್ಲಿ ನೆಲೆಸಿದ್ದ ವೈದ್ಯರು ಮತ್ತು ಇಂಜಿನೀಯರ್ಗಳು ಕನ್ನಡದಲ್ಲಿ ಒಂದು ಲೇಖನವಿರಲಿ ಒಂದೆರಡು ಸಾಲುಗಳನ್ನು ಬರೆಯಲು ಹಿಂಜರಿಯುತ್ತಿದ್ದ ಕಾಲದಲ್ಲಿ ಶಿವರಾಮ ಕಾರಂತ, ಮೂರ್ತಿರಾಯರು, ಗೋರೂರ್, ಗೋಕಾಕ ಮತ್ತು ಜಿ.ಎಸ್.ಎಸ್ ಮುಂತಾದ ಸಾಹಿತಿಗಳು ವಿದೇಶ ಪರ್ಯಟನೆ ಮಾಡಿ ಮರಳಿದಾಗ ಅವರ ಪ್ರವಾಸದ  ಅಲ್ಪ ಸಮಯದಲ್ಲಿ ಕಂಡದ್ದನ್ನು ಕೇಳಿದ್ದನ್ನು ಅನುಭವಿಸಿದ್ದನು ಪ್ರವಾಸ ಕಥನವಾಗಿ ದಾಖಲಿಸಿ ಇಂಗ್ಲೆಂಡ್ ಮತ್ತು ಅಮೆರಿಕಗಳನ್ನು ಕನ್ನಡಿಗರಿಗೆ ಪರಿಚಯಿಸುತ್ತಿದ್ದರು. ಕವಿ- ಸಾಹಿತಿಗಳಾದ ಅವರು ಮಾಹಿತಿಗಳೊಡನೆ ತಮ್ಮ ವಿಶೇಷ ಒಳನೋಟವನ್ನು ಒದಗಿಸುತ್ತಿದ್ದರು. ಆದರೆ ಆ ಬರಹಗಳಲ್ಲಿ ಆಯಾ ದೇಶಗಳ ಜನ ಜೀವನದ ಪೂರ್ಣ ಪರಿಚಯ ಸಿಗುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಯೋಗಿಂದ್ರ ರೀತಿಯ ಅನೇಕ ಅನಿವಾಸಿ ಎಂಜಿನೀಯರ್ಗಳು, ವೈದ್ಯರು, ವೃತ್ತಿಪರರೂ, ಗೃಹಿಣಿಯರು ವಿದೇಶಗಳಲ್ಲಿ ದಶಕಗಳ ಕಾಲ ಬದುಕಿ ಇಲ್ಲಿಯ ಜನ ಜೀವನ, ಸಾಂಸ್ಕೃತಿಕ ವೈಶಿಷ್ಟ್ಯತೆ, ವಿಲಕ್ಷಣ, ದಿನ ನಿತ್ಯ ಆಗು-ಹೋಗುಗಳನ್ನು ಸವಿವರವಾಗಿ ಕೂಲಂಕುಷವಾಗಿ ಗಮನಿಸಿ ಪ್ರಬಂಧಗಳನ್ನು ಬರೆಯುತ್ತಿದ್ದಾರೆ. ಇನ್ನು ಅಮೇರಿಕಾದ ಅನಿವಾಸಿ ಕನ್ನಡಿಗ ಗುರುಪ್ರಸಾದ್ ಕಾಗಿನೆಲೆ ತಮ್ಮ ಕಥೆ ಕಾದಂಬರಿಗಳಲ್ಲಿ ವಿದೇಶದ ಬದುಕನ್ನೇ ಕಥೆಯ ಹಂದರದಲ್ಲಿ ಅಳವಡಿಸಿದ್ದಾರೆ. ಪ್ರವಾಸ ಕಥನ ಒದಗಿಸಲಾರದ ವಿಷಯ ವಿವರಗಳನ್ನು ಯೋಗಿಂದ್ರ ತಮ್ಮ ಪ್ರಬಂಧಗಳಲ್ಲಿ ವಿಶೇಷ ಒಳನೋಟಗಳ ಜೊತೆ ದಾಖಲಿಸಿದ್ದಾರೆ. ಕರ್ನಾಟಕದ ಅನೇಕ ಕನ್ನಡಿಗರಿಗೆ, ಟಿವಿ ಇನ್ನಿತರ ಮಾಧ್ಯಮಗಳ ಮೂಲಕ, ವಿದೇಶದಲ್ಲಿ ನೆಲೆಸಿರುವ ಬಂಧುಗಳ ಮೂಲಕ, ಬ್ರಿಟನ್ನಿನ್ನ ಬಗ್ಗೆ ಸಾಕಷ್ಟು ತಿಳುವಳಿಕೆ ಇರುತ್ತದೆ. ಆದರೂ ಅನಿವಾಸಿ ಕನ್ನಡಿಗರು ಹೇಗೆ ಬಾಳಿ ಬದುಕುತ್ತಿದ್ದಾರೆ ಎಂಬ ಕುತೂಹಲ ಅವರಿಗಿರುವುದು ಸಹಜವೇ. ಆ ಕೂತುಹಲವನ್ನು ತಣಿಸಲು ಲಂಡನ್ ಡೈರಿ ಒಂದು ಉತ್ತಮ ಪರಿಚಯ ಪ್ರವೇಶ ಎನ್ನಬಹುದು.  ಅಷ್ಟೇ ಏಕೆ ಬ್ರಿಟನ್ನಿನ್ನ ಸ್ವಾರಸ್ಯಕರವಾದ ವಿಚಾರಗಳು ಇಲ್ಲಿರುವುದರಿಂದ ಇಂಗ್ಲೆಂಡಿನಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೂ ಈ ಪುಸ್ತಕ ಪ್ರಸ್ತುತವಾಗಿದೆ.   

ಈ ಪ್ರಬಂಧವನ್ನು ಒಟ್ಟಾರೆ ನೋಡಿದಾಗ ಇಲ್ಲಿ ಎದ್ದು ಕಾಣುವ ವಿಷಯಗಳೆಂದರೆ; ಆಂಗ್ಲರ ದೃಷ್ಟಿಯಲ್ಲಿ ಭಾರತೀಯರು ಮತ್ತು ಭಾರತ, ಅನಿವಾಸಿ ದೃಷ್ಟಿಯಲ್ಲಿ ಆಂಗ್ಲರು ಮತ್ತು ಅವರ ಸಂಸ್ಕೃತಿ, ಕೊನೆಯದಾಗಿ ಈ ಎರಡೂ ದೃಷ್ಟಿಯಲ್ಲಿ ಇರುವ ಸಮಾನಾಂತರಗಳ, ವೈರುಧ್ಯಗಳ ಬಗ್ಗೆ ಇರುವ ತೌಲನಿಕ ಚಿಂತನೆಗಳು. ಇಲ್ಲಿ 'ಆಂಗ್ಲರ ಕನ್ನಡಕದಲ್ಲಿ ಭಾರತ' ಎಂಬ ಮೊದಲನೇ ಪ್ರಬಂಧದಲ್ಲಿ ಆಂಗ್ಲರು ನಮ್ಮನ್ನು ನೋಡುವಾಗ ವಸ್ತುನಿಷ್ಠವಾಗಿ ನಮನ್ನು ನೋಡುತ್ತಾರೆ, ಇಲ್ಲಿ ಹೊಗಳಿಕೆ ತೆಗಳಿಕೆ ಎರಡು ಅವರ ತಕ್ಕಡಿಯಲ್ಲಿ ಸಮಾನವಾಗಿ ತೂಗುತ್ತದೆ. ನಾವು ನಮ್ಮ ದೇಶ ಎಷ್ಟು ಶ್ರೇಷ್ಠ, ಎಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವಾಗ ಆಂಗ್ಲರು ಬಿಬಿಸಿ ಕಾರ್ಯಕ್ರಮದಲ್ಲಿ, ಬರಹಗಳಲ್ಲಿ ನಮ್ಮ ಹುಳುಕುಗಳನ್ನು ಎತ್ತಿ ತೋರಿಸಿ ಮುಖಕ್ಕೆ ಕನ್ನಡಿ ಹಿಡಿಯುತ್ತಾರೆ ಎಂದು ಹೇಳುವಲ್ಲಿ ಯೋಗಿಂದ್ರ ಹಿಂಜರಿಯುವುದಿಲ್ಲ, ಈ ಪ್ರಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ಆತ್ಮಶೋಧನೆಗಳಿವೆ. ಆಂಗ್ಲರು ನಮ್ಮ ಸಂಸ್ಕೃತಿಯನ್ನು ಮೆಚ್ಚಿಕೊಂಡಿರುವ ಉಲ್ಲೇಖಗಳೂ ಸಾಕಷ್ಟಿವೆ. ಇನ್ನು ಬ್ರಿಟನ್ ಬದುಕಿನ ವಿಶೇಷ ಮೌಲ್ಯಗಳು ಮತ್ತು ವಿಚಿತ್ರ ಎನ್ನಿಸುವ ವಿಚಾರಗಳು, ಇಲ್ಲಿಯ ರಾಜ ಮನೆತನ, ರಾಜಕೀಯ ವ್ಯವಸ್ಥೆ, ನಗರ ಮತ್ತು ಗ್ರಾಮೀಣ ಬದುಕು, ಅನಿಶ್ಚಿತವಾದ ಹವಮಾನ ಮತ್ತು ಸದಾ ಜಿನುಗುವ ಮಳೆ, ಇಂಗ್ಲಿಷ್ ಸಾಹಿತ್ಯ; ಹೀಗೆ ಅನೇಕ ವಿಚಾರಗಳ ಬಗ್ಗೆ ಪ್ರಬಂಧಗಳಿವೆ.  

ನನಗೆ ಈ ಕೃತಿಯಲ್ಲಿ ವಿಶೇಷವಾಗಿ ಕಂಡ ಒಂದೆರಡು ಲೇಖನದ ಬಗ್ಗೆ ಪ್ರತ್ಯೇಕವಾಗಿ ಹೇಳಬಯಸುತ್ತೇನೆ. ‘ಮಲೆನಾಡ ಮಳೆದಿನದ ಮಾತುಗಳು ಮೌನಗಳು’ ಎಂಬ ಪ್ರಬಂಧದಲ್ಲಿ ಯೋಗಿಂದ್ರ ಅವರು ಇಂಗ್ಲೆಂಡ್ ವಿಷಯವನ್ನು ಪಕ್ಕಕ್ಕಿಟ್ಟು ತಮ್ಮ ಹುಟ್ಟೂರಾದ ಮರವಂತೆಯಿಂದ ಹೊರಟು ಕೊಲ್ಲೂರು ಘಾಟಿಯನ್ನು ದಾಟಿ ಒಳ ಮಲೆನಾಡಿನ ಹಿಂಸೋಡಿಗೆ ಹೋಗಿಬರುವ ಪ್ರಸಂಗ ವಿಶೇಷವಾಗಿದೆ. ಇಲ್ಲಿ ಮಲೆನಾಡಿನ ಮುಂಗಾರು ಮಳೆಯ ವರ್ಣನೆ, ದಟ್ಟವಾದ ಹಸಿರು ಕಾಡುಗಳು, ಮಳೆಯ ಹೊದಿಕೆಯಲ್ಲಿ ಮುಸುಕು ಹಾಕಿಕೊಂಡು ಮಾತನಾಡುವ ಮರಗಳು, ಕತ್ತಲಿಗೂ ಧ್ವನಿ ಭಾಷೆ ನೀಡುವ ಕಪ್ಪೆ ಜೀರುಂಡೆಗಳು, ಶರಾವತಿಯ ಹಿನ್ನೀರಿನ ದಡದಲ್ಲಿ ಚುರುಮುರಿ ಅಂಗಡಿ ಇಟ್ಟುಕೊಂಡಿರುವಾಕೆಯ ಅನಾನುಕೂಲಗಳು, ಸಮಸ್ಯೆಗಳು, ಅವಳ ದುಃಖದ ಮಾತುಗಳಿಗೆ ಹೊಂ ಹೌದು ಎಂದು ಧ್ವನಿಗೂಡಿಸುವ ಸೌತೆಕಾಯಿ, ಮೆಣಸು ಮತ್ತು ಮಂಡಕ್ಕಿಗಳು; ಹೀಗೆ ಅಲ್ಲಿ ಅನೇಕ ಸುಂದರ ಚಿತ್ರಗಳು ರೂಪಕಗಳು ತೆರೆದು ನಿಲ್ಲುತ್ತವೆ. ಇನ್ನೊಂದು ಮರವಂತೆ ಮಳೆಗೆ ಸಂಬಂಧಿಸಿದ ಪ್ರಬಂಧದಲ್ಲಿ ಕರಾವಳಿಯಲ್ಲಿ ಸುರಿಯುವ ಮಳೆಯ ವರ್ಣನೆ ಅದ್ಭುತವಾಗಿದೆ, ಹಾಗೆ ಲೇಖಕರಿಗೆ ಬೀಳುವ ಕನಸೊಂದರಲ್ಲಿ ಮಳೆ ಒಂದು ಕನ್ಯೆಯಾಗಿ ಬಂದು ಅವಳ ಮತ್ತು ಲೇಖಕನ ಪ್ರೇಮ ಪ್ರಸಂಗ ತೆರೆದುಕೊಂಡು ಅಲ್ಲಿ ಸಂವಾದ ಆತ್ಮೀಯವಾಗಿ ಶೃಂಗಾರ ಕಾವ್ಯವೇ ಸೃಷ್ಟಿಯಾಗಿದೆ. ಯೋಗಿಂದ್ರ ಅವರು ಬ್ರಿಟನ್ನಿನ ಬಗ್ಗೆ ಬರೆಯುವ ವಿಚಾರಕ್ಕಿಂತ ಅವರ ಊರಾದ ಮರವಂತೆಯ ಬಗ್ಗೆ ಬರೆಯುವಾಗ ಅವರ ಬರಹ ಇನ್ನು ಉಜ್ವಲವಾಗುತ್ತದೆ.  ಹಾಗೆಯೇ ಯೋಗಿಂದ್ರ ಅವರು ತಮ್ಮ ವೈಯುಕ್ತಿಕ ಬದುಕಿನ ಅನುಭವಗಳನ್ನು ಸೇರಿಸಿ ಬರೆದಾಗ ಅದು ಓದುಗರಿಗೆ ಆತ್ಮೀಯವಾಗುತ್ತದೆ.

'ಭಾನುವಾರದ ಇಟಾಲಿಯನ್ ಕಟಿಂಗ್' ಬಹಳ ಶ್ರೇಷ್ಠವಾದ ಪ್ರಬಂಧ. ಈ ಪ್ರಬಂಧಕ್ಕೆ ಸುಧಾ ಪತ್ರಿಕೆಯ ಯುಗಾದಿ ವಿಶೇಷಾಂಕದಿಂದ ಬಹುಮಾನ ದಕ್ಕಿದೆ. ಇಲ್ಲಿ ಹೇರ್ ಕಟಿಂಗ್ ಎಂಬ ಸಾಧಾರಣ ವಿಷಯದಲ್ಲಿ ಯೋಗಿಂದ್ರ ಅವರು ಅನೇಕ ಚಿಂತನೆಗಳನ್ನು, ಪ್ರತಿಮೆಗಳನ್ನು, ರೂಪಕಗಳನ್ನು ತಂದು ನಿಲ್ಲಿಸಿದ್ದಾರೆ. ತಗ್ಗಿಸಿದ ತಲೆ, ತಗ್ಗಿಸದೆ ಉಳಿದು ಕೊನೆಗೂ ತಗ್ಗಿಸಬೇಕಾದ ತಲೆ, ಅಹಂಕಾರ, ಅಜ್ಞಾನ, ಅರಿವಿನ ವಿಸ್ತಾರ, ಸಾಂಸ್ಕೃತಿಕ ವೈವಿಧ್ಯತೆ, ಸಂಘರ್ಷಗಳು, ಇವುಗಳನ್ನು ಒಳಗೊಂಡು ಕೊನೆಗೆ ಹೇರ್ ಕಟ್ ಮಾಡಿದಾಗ ಉರುಳಿದ ಎಲ್ಲ ಬಣ್ಣಗಳ, ಊರುಗಳ, ದೇಶಗಳ, ಜಾತಿಗಳ ಕೂದಲನ್ನು ನುಂಗಿಬಿಡುವ ಕಸದ ಬುಟ್ಟಿ ಇಲ್ಲಿ ಬಾಹ್ಯಾಕಾಶದ ಬ್ಲಾಕ್ ಹೋಲಿನ (Cosmic Black Hole) ಪ್ರತಿಮೆಯಾಗಿ ನಿಲ್ಲುತ್ತದೆ. ಇಲ್ಲಿ ಕಾಲನ ಮಹಿಮೆಯಿದೆ. ಒಂದು ಸಣ್ಣ ಪ್ರಸಂಗದಲ್ಲಿ ಇಡೀ ಬದುಕಿನ ಅನುಭವವನ್ನು ಸಾರಾಂಶವನ್ನು ಯೋಗಿಂದ್ರ ಈ ಶ್ರೇಷ್ಠ ಪ್ರಬಂಧದಲ್ಲಿ ಹಿಡಿದಿಟ್ಟಿದ್ದಾರೆ. 

ಈ ಬರಹಗಳಲ್ಲಿ ಯೋಗಿಂದ್ರ ಅವರ ಸೌಂದರ್ಯ ಪ್ರಜ್ಞೆ, ಕಾವ್ಯ ಪ್ರಜ್ಞೆ, ಎದ್ದು ನಿಲ್ಲುತ್ತವೆ. ಕೆಲವು ಕಡೆ ಅವರು ಬಳಸುವ ಪದಗಳು, ಆದಿಪ್ರಾಸಗಳು, ರೂಪಕಗಳು, ಮತ್ತು ಉಂಟಾಗಿರುವ ಛಂದಸ್ಸು ಒಂದು ಗದ್ಯವನ್ನು ಪದ್ಯವಾಗಿ  ನಿರೂಪಿಸುತ್ತದೆ, ಯೋಗಿಂದ್ರ ಇಲ್ಲಿ ಒಬ್ಬ ಕವಿಯೂ ಆಗಿದ್ದಾರೆ. ಕೆಲವೆಡೆ ಅವರು ಪದಗಳನ್ನು ಬಳಸಿ ಒಂದು ಸನ್ನಿವೇಶವನ್ನು ಕಟ್ಟುವಾಗ ಅಲ್ಲಿ ಒಂದು ಚಲನ ಶೀಲತೆ ಉಂಟಾಗುತ್ತದೆ. ಸ್ಥಾವರವು ಜಂಗಮವಾಗುತ್ತದೆ. ಬರಹದಲ್ಲಿಯ ನೋಟ, ಶಬ್ದ, ವಾಸನೆ, ಕ್ರಿಯೆ ಇವುಗಳಿಂದ ಒಂದು ಚಪ್ಪಟ್ಟೆಯಾಗಿರುವ ಸಾಲುಗಳು ಹಲವಾರು ಆಯಾಮಗಳನ್ನು ಪಡೆದುಕೊಂಡು ಒಂದು ಒಂದು ವರ್ಚುಯಲ್ (4D) ಅನುಭವ ಉಂಟಾಗುತ್ತದೆ. ಈ ರೀತಿಯ ವಿಶೇಷ ಅನುಭವವನ್ನು ಅರುಂಧತಿ ರಾಯ್ ಅವರ 'ಗಾಡ್ ಆಫ್ ಸ್ಮಾಲ್ ಥಿಂಗ್ಸ್ 'ಎಂಬ ಎಂಬ ಕೃತಿಯಲ್ಲೂ ಕಂಡಿದ್ದನ್ನು ಇಲ್ಲಿ ನೆನೆಯ ಬಯಸುತ್ತೇನೆ. 

ಒಂದು ಬರಹ ಯಾವಾಗ ಪ್ರಬಂಧ ಸಂಕಲನವಾಗುತ್ತದೆ? ಮತ್ತು ಯಾವಾಗ ಬಿಡಿ ಬರಹವಾಗುತ್ತದೆ? ಎಂಬ ಆಲೋಚನೆ ಒಬ್ಬ ಓದುಗನಾಗಿಯೂ ಮತ್ತು ಲೇಖಕನಾಗಿಯೂ ನನ್ನನು ಕಾಡಿರುವ ವಿಚಾರ. ಸಾಮಾನ್ಯವಾಗಿ ಪ್ರಬಂಧ ಸಂಕಲನ ಒಂದು ವಿಷಯ ಮಾದರಿಯನ್ನು ಕುರಿತಾದ ಧೀರ್ಘವಾದ ಮತ್ತು ಆಳವಾದ ಅಧ್ಯಯನ. ಅಲ್ಲಿ ವೈವಿಧ್ಯತೆ ಇದ್ದರೂ ಅದು ಒಂದು ನಿರ್ದಿಷ್ಟ ವಿಷಯದ ಚೌಕಟ್ಟಿನೊಳಗೇ ಇರುತ್ತದೆ. ಬಿಡಿ ಬರಹಕ್ಕೆ ಆ ಬದ್ಧತೆ ಇರುವುದಿಲ್ಲ. ಅಲ್ಲಿ ವ್ಯಕ್ತಿ ಚಿತ್ರಣ, ಒಂದು ಸಂಸ್ಕೃತಿಯ ಪರಿಚಯ, ಸಾಹಿತ್ಯ, ಕಲೆ, ವಿಜ್ಞಾನ, ವಿಮರ್ಶೆ, ಹೇಗೆ ಅನೇಕ ವಿಚಾರಗಳ ಕಲಸು ಮೇಲೋಗರವಾಗಿರುತ್ತದೆ. ವೈಯುಕ್ತಿಕ ಅನುಭವಗಳನ್ನು, ಸನ್ನಿವೇಶಗಳನ್ನು ಒಳಗೊಂಡು ಲೇಖಕನ ವೈಯುಕ್ತಿಕ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಬಿಡಿ ಬರಹದಲ್ಲಿ ಹೆಚ್ಚು ಅವಕಾಶವಿರಬಹುದು. ಅಂದಹಾಗೆ ಒಂದು ಕಥೆ ಕಾದಂಬರಿಯನ್ನು ಬರೆಯುವುದಕ್ಕಿಂತ ಪ್ರಬಂಧ ಮತ್ತು ಬಿಡಿ ಬರಹವನ್ನು ಬರೆಯುವುದು ಸುಲಭ ಎನ್ನುವುದು ನನ್ನ ಅನಿಸಿಕೆ. ಒಂದು ಉತ್ತಮ ಪ್ರಬಂಧವನ್ನು ಬರೆಯಬೇಕಿದ್ದಲ್ಲಿ ಯೋಗಿಂದ್ರ ಅವರ "ಕಾಣುವ ಕಣ್ಣು" ಅಗತ್ಯ.  ಹಾಗೆಯೇ ಅಲ್ಲಿ ಹಿನ್ನೆಲೆ ವಿಚಾರಗಳನ್ನು ಸಂಶೋಧನೆ ಮಾಡಿ ಮಾಹಿತಿಗಳನ್ನು ರಸವತ್ತಾಗಿ ಸ್ವಾರಸ್ಯಕರವಾಗಿ ಕಾವ್ಯಮಯವಾಗಿ ವ್ಯಕ್ತಪಡಿಸಿ ಹಲವಾರು ದೃಷ್ಠಿಕೋನಗಳನ್ನು ತರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅದು ಮಾಹಿತಿಗಳನ್ನು ವೈಕಿಪೀಡಿಯಾದಿಂದ ಓದಿದ ಶೈಕ್ಷಣಿಕ ಒಣ ಅನುಭವವಾಗುತ್ತದೆ. ಯೋಗಿಂದ್ರ ಅವರ ಇತರ ಕೃತಿಗಳನ್ನು ಹೊತ್ತು ತಂದಿದ್ದೇನೆ. ಅವುಗಳನ್ನು ಓದಲು ಕಾತರನಾಗಿದ್ದೇನೆ. ಒಟ್ಟಾರೆ ಹೇಳುವುದಾದರೆ 'ಲಂಡನ್ ಡೈರಿ' ಎಂಬ ಪ್ರಬಂಧ ಸಂಕಲನ ನನ್ನ ಅರಿವಿನ ವಿಸ್ತಾರವನ್ನು ಹೆಚ್ಚಿಸಿದೆ. ಎಲ್ಲರೂ ಓದಬೇಕಾದ ಪುಸ್ತಕ.  

***