ತಾಳೆಗರಿಗಳಲ್ಲಿ ಹುದುಗಿದ ಇತಿಹಾಸ– ಶಾಲಿನಿ ಜ್ಞಾನಸುಬ್ರಹ್ಮಣಿಯನ್ ಲೇಖನ


ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ- ಕಾಳಿದಾಸ ರಘುವಂಶದಲ್ಲಿ.
(ಜಗತ್ತಿನ ತಂದೆ ತಾಯಿಯರಾದ ಪಾರ್ವತಿ ಪರಮೇಶ್ವರರ ಕೃಪೆ ನಮ್ಮೆಲ್ಲರ ಮೇಲಿರಲಿ.)
ಸಂಸ್ಕೃತ ಅಂದ ಕೂಡಲೇ ಕೆಲವರು ಅದು ಇನ್ನೂ ಪ್ರಸ್ತುತವೆ?ಸಂಸ್ಕೃತವನ್ನು ಯಾಕೆ ಕಲಿಯಬೇಕು ಎನ್ನುವ ಚರ್ಚೆಗೆ ಶುರು ಮಾಡಿಬಿಡುತ್ತಾರೆ. ಆದರೆ ಶಾಲಿನಿಯವರ ಈ ಲೇಖನದಲ್ಲಿ ತಾವು ಕಂಡ ಸಂಸ್ಕೃತ ವಿಶ್ವವಿದ್ಯಾಲಯದ ಹಸ್ತಪ್ರತಿ ಎನ್ನಿಸಿಕೊಳ್ಳುವ ತಾಳೆಗರಿ ಸಂಗ್ರಹವನ್ನು ಕಂಡು ಪುಳಕಿತರಾದ ಆ ಅನುಭವವನ್ನು ವರ್ಣಿಸುತ್ತಿದ್ದಾರೆ.
ಅಲ್ಲಿಂದ ಮರಳಿ ಬಂದ ಕೂಡಲೇ ಒಂದು ಲೇಖನವನ್ನು ಬರೆದು ಕೊಡಲೇ ಎಂದು ಕೇಳಿದರು. ಅವರಿಗೆ ಮೊದಲಿನಿಂದಲೂ ಸಂಸ್ಕೃತದ ಬಗ್ಗೆ ಒಂದು ತರಹ ಪ್ರೀತಿ ಮತ್ತು ಗೌರವ. ಇತ್ತೀಚಿಗೆ ಸಂಸ್ಕೃತ ಭಾರತಿ ಎನ್ನುವ ಸಂಘಟನೆ ಸಂಸ್ಕೃತ ಸಂಭಾಷಣೆಯ ಆನ್ ಲೈನ್ ವರ್ಗಗಳನ್ನು ಅನೇಕ ದೇಶಗಳಲ್ಲಿ ಪ್ರಾರಂಭ ಮಾಡಿದೆ. ಅದನ್ನು ಹುಟ್ಟು ಹಾಕಿದವರು ಕರ್ನಾಟಕದವರೇ ಆದ ಪದ್ಮಶ್ರೀ ಜನಾರ್ಧನ ಹೆಗಡೆ ಮತ್ತು ಚ. ಮು. ಕೃಷ್ಣ ಶಾಸ್ತ್ರಿಗಳು. ಅದರ ಹೆಡ್ ಕ್ವಾರ್ಟರ್ಸ್ ದೆಹಲಿಯಲ್ಲಿದೆ. ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಯು ಕೆ ದ ಸಂಸ್ಕೃತ ಭಾರತಿ ಅಂಗ ಸಂಭಾಷಣೆ ವರ್ಗವಲ್ಲದೆ ವರ್ಷಕ್ಕೆರಡು ಸಲ ನಾಲ್ಕು ಸಂಸ್ಕೃತ ತರಗತಿಗಳಿಗೆ ಪರೀಕ್ಷೆ ಸಹ ನಡೆಸುತ್ತಿದ್ದಾರೆ. ಉತ್ಸುಕರು ಅವರ ವೆಬ್ ಸೈಟ್ ಸಂಪರ್ಕಿಸ ಬಹುದು. ಸಂಸ್ಕೃತ ಸಂಭಾಷಣೆಗೆ ಒತ್ತು ಕೊಟ್ಟು ಸಂಸ್ಕೃತ ಶಿಬಿರವೊಂದನ್ನು ಪ್ರತಿವರ್ಷ ಏಪ್ರಿಲ್ ತಿಂಗಳಿನ ಆಸು ಪಾಸಿನ ಈಸ್ಟರ್ ರಜೆಯಲ್ಲಿ ಏರ್ಪಡಿಸುತ್ತಾರೆ. (ಈ ವರ್ಷ ಮೇ ತಿಂಗಳಲ್ಲಿ.) ಎರಡು ವರ್ಷಗಳ ಕೆಳಗೆ ಅಲ್ಲಿಯೇ ನನಗೆ ಭೇಟಿ ಮಾಡಿದ್ದರು. ಕಾರ್ಡಿಫ್ನಲ್ಲಿ ತಮ್ಮ ಪತಿ ಮತ್ತು ಒಬ್ಬಳೇ ಮಗಳೊಡನೆ ವಾಸ ಮಾಡುತ್ತಿದ್ದಾರೆ.
ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಸಂಸ್ಕೃತ ಕಲಿಯಲು ಉತ್ಸುಕರಾಗಿದ್ದರೆ ಲೇಖನದ ಕೊನೆಗೆ ಕೊಟ್ಟ ಲಿಂಕ್ ಒತ್ತಿ ಯು ಕೆ ಸಂಸ್ಕೃತ ಭಾರತಿಗೆ ಸಂಪರ್ಕಿಸ ಬಹುದು. ಪರೀಕ್ಷೆಗಳಿಗೆ ಅಭ್ಯಾಸ ಮಾಡಲು ಪುಸ್ತಕಗಳನ್ನು ಸಹ ಕೊಳ್ಳ ಬಹುದು.(-ಸಂ)
ಬೆಂಗಳೂರಿನ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯ ಒಂದು ಕಡೆ ಕನ್ನಡ ಸಾಹಿತ್ಯ ಪರಿಷತ್ತು, ಅದರ ಎದುರು ಇರುವ ವಿಶಾಲವಾದ ಆವರಣ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ್ದು. ಎಂದಾದರೂ ಹೋಗೋಣವೆಂಬ ಕುತೂಹಲಕ್ಕೆ ಬೆಂಬಲ ನೀಡಿದಂತೆ ಇತ್ತೀಚಿಗೆ ಪ್ರಚಲಿತವಾದ ಹ್ಯಾಂಡ್ಸ ಆನ್ ಫೌಂಡೇಷನ್ರವರ ಸೋಶಿಯಲ್ ಮೀಡಿಯಾದಲ್ಲಾದ ವೈರಲ್ ವಿಡಿಯೋ. ಸರಿ, ನೋಡಲೇ ಬೇಕೆಂದು ನಿಶ್ಚಯಿಸಿ ಹೊರಟೆ ಹಸ್ತಪ್ರತಿ ಸಂಗ್ರಹಾಲಯದತ್ತ. ನನಗೆ ಸಂಸ್ಕೃತ ಕಲಿಯುವ ಆಸಕ್ತಿ ಮತ್ತು ಪ್ರೀತಿ ಶಾಲಾ ದಿನಗಳ ನಂತರ ಸ್ವಲ್ಪ ತಡವಾಗಿ ಆರಂಭವಾಯಿತು. ಶಾಲೆಯಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳದಿದ್ದುದರ ಪಶ್ಚಾತ್ತಾಪವನ್ನು ನಾನು ಇಂದಿಗೂ ಹೊಂದಿರುವೆ. ತದನಂತರ ಪಂಡಿತ ಸುಧಾಕರ ಚತುರ್ವೇದಿ ಮತ್ತು ಪಂಡಿತ ಸುಧಾಕರ ಶರ್ಮ ಅವರ ವೇದ ಪ್ರವಚನಗಳನ್ನು ಕೆಲ ವರ್ಷಗಳ ಹಿಂದೆ ಕೇಳುವ ಅವಕಾಶ ನನಗೆ ದೊರಕಿತ್ತು. ಸಂಸ್ಕೃತ ವ್ಯಾಕರಣ, ಧಾತುಗಳ ಕುರಿತು ಸಹ ಪಾರ್ಶ್ವವಾಗಿ ಚರ್ಚೆ ನಡೆಯುತ್ತಿತ್ತು. ಆದರೂ ಅನೇಕ  ವರ್ಷಗಳ ನಂತರವೂ, ನಾನು ಅದೇ ವಲಯದಲ್ಲಿ ಸುತ್ತುತ್ತಿರುವೆ ಅಂದುಕೊಳ್ಳುತ್ತೀನಿ.
ಇತ್ತೀಚೆಗೆ ನಾನು ಬೆಂಗಳೂರಿಗೆ ಹೋದಾಗ ಒಂದು ಸಂಜೆ ನಾನು ಅಲ್ಲಿ ತಲುಪುವಷ್ಟರಲ್ಲಿ ತಡವಾದರೂ ಸಹ ಕಾರ್ಯಾಲಯದಲ್ಲಿದ್ದ ಉನ್ನತ ಅಧಿಕಾರಿಯವರು ಮಂದಸ್ಮಿತರಾಗಿದ್ದರು. "ಮ್ಯೂಸಿಯಂ ಈಗ ತಾನೇ ಮುಚ್ಚಿದೆವು. ಪರವಾಗಿಲ್ಲಾ, ದೂರದಿಂದ ಬಂದಿದ್ದೀರಿ, ತೆರೆಯುತ್ತೇವೆ, ಹೋಗಿ ನೋಡಿಕೊಂಡು ಬನ್ನಿ" ಎಂದು ಸೌಹಾರ್ದತೆಯಿಂದ ಬರಮಾಡಿಕೊಂಡರು. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದವರು ಇವರೇ ಎಂಬ ಅರಿವು ನನಗೆ ಒಂದೇ ಕ್ಷಣದಲ್ಲಿ ಉದಯಿಸಿತು- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರಾಮಕೃಷ್ಣ ಭಟ್ ಅವರು. ಸರಳವಾದ ವ್ಯಕ್ತಿತ್ವ, ಬಿಳಿ ಶರ್ಟ್ ಮತ್ತು ಧೋತಿ ಧರಿಸಿದ್ದ ಅವರನ್ನು ನೋಡುತ್ತಿದ್ದಂತೆ, ವಿದ್ಯೆಯನ್ನು ಧಾರೆ ಇರಿಸಲು ಸಿಧ್ಧರಾದ ಗುರುಗಳನ್ನು ಕಂಡಂತಾಯಿತು.




ಪ್ರಥಮ ಫೋಟೋ: ಬ್ರಾಹ್ಮಿ ಲಿಪಿಯ ರೂಪಾಂತರ 
ಕೊನೆಯ ಸಾಲಿನಲ್ಲಿ: ಪ್ರತಿ ಅಕ್ಷರಕ್ಕೊಬ್ಬ ದೇವತೆ

		

ಗಮ್ಯ ತಲುಪದ ಕವಿತೆಗಳು!

ಅನಿವಾಸಿ ಓದುಗರಿಗೆಲ್ಲ ನಮಸ್ಕಾರ,
ನಾಳೆ ಪ್ರೇಮಿಗಳ ದಿನಾಚರಣೆ. ಹಳೆಯ ಡೈರಿಯಲ್ಲಿ ಎಂದೋ ಬರೆದಿಟ್ಟ, ಮತ್ತು ಅಲ್ಲೇ ಉಳಿದು ಹೋದ ಒಂದಷ್ಟು ಬಾಲಿಶ ಕವಿತೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಬಿಡುವಾದಾಗ ಓದಿ, ಎಂದಿನಂತೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸುವುದ ಮರೆಯಬೇಡಿ
ವಂದನೆಗಳು
ಅಮಿತಾ ರವಿಕಿರಣ್


ವರವಾಗಿ ದಕ್ಕಿದ ಮನಸೇ

ಇದೀಗ ಮತ್ತೆ ನಿನ್ನ ಕನಸೊಂದು ಬಿತ್ತು
ಮಳೆ ಬಿದ್ದು ಮಿದುವಾದ ಕೆಮ್ಮಣ್ಣ
ನೆಲೆದಮೇಲೆ, ಪಾರಿಜಾತವೊಂದು ಬಿದ್ದು
ಮೈ ನೋಯಿಸಿಕೊಂಡಂತೆ

ನೀ ಕದ್ದು ಲೂಟಿ ಮಾಡಿ
ಕೂಡಿಟ್ಟ ನನ್ನ ನಿದ್ದೆಯ ರಾಶಿಯಲ್ಲಿ
ಒಮ್ಮೆಯಾದರೂ ಇಣುಕಿದ್ದೀಯ ?
ಎಂತೆಂಥ ಅದ್ಬುತ ಕನಸುಗಳಿವೆ ಗೊತ್ತೇ ಅಲ್ಲಿ?
ಎಲ್ಲವೂ ನಿನ್ನವೇ,
ಆದರೆ
ನನಗೆ ಲೆಕ್ಕ ಬರದು,
ನಿನಗೆ ಎಣಿಸಲು ಸಮಯವಿರದು

ನಿನ್ನ ನೋಡಬೇಕು ಎನಿಸುವುದೇ
ಈ ಹಾಳು ರಾತ್ರಿಗಳಲ್ಲಿ
ಆಗೆಲ್ಲ ಬಾನ ಸುತ್ತಗಲ ಅಳೆಯುತ್ತೇನೆ
ಕಣ್ಣಿನಳತೆಗೆ ಸಿಗುವ ಚಿಕ್ಕಿ ತಾರೆಗಳನ್ನೆಲ್ಲ
ನಿಟ್ಟಿಸುತ್ತೇನೆ
ನಿನ್ನ ಕೋಣೆಯ ಆ ಕೊನೆಯ
ಕಿಟಕಿಯಿಂದ ಇವೇ
ನಕ್ಷತ್ರ ಕಾಣುತ್ತವೆ, ನೀನೂ
ನೋಡುತ್ತಿರಬಹುದೇನೋ
ಅಂದುಕೊಂಡು
ನನ್ನ ಹುಚ್ಚಿಗೆ ನಾನೇ ನಗುತ್ತೇನೆ

ಒಮ್ಮುಖ ಪ್ರೀತಿಯ
ಚಲುವೆ ಇದು,
ಕಲ್ಪನೆಯ ಕಟ್ಟಡಕ್ಕೆ
ಪಾಯ ಗೋಡೆಯೂ
ಬೇಡ,

ಇಷ್ಟಕ್ಕೂ ನಾನು ಪ್ರೀತಿಸುತ್ತಿರುವುದು
ನಿನ್ನನ್ನೋ,
ನಿನ್ನ ಕುರಿತು
ನಾನೇ ರೂಪಿಸಿಕೊಂಡ
ನನ್ನ ಕಲ್ಪನೆಯನ್ನೋ
ಇನ್ನೂ ನಿಚ್ಚಳವಾಗಿಲ್ಲ!
ಈ ಸಲ ನಿದ್ದೆ ಮಾಡಲು ಬಿಟ್ಟರೆ
ಖಂಡಿತ ಉತ್ತರ ಹುಡುಕಿಕೊಂಡು
ಬರುವೆ
- ಸಖಿ
(picture; Nandini MB/ Amita Ravikirana

ರಂಗೋಲಿಯಂಥ ಹುಡುಗ...

ಇಂದು ನಿನ್ನ ಆ ಮಾತಿನ ಚುಕ್ಕಿಯಿಂದ
ಈ ಮಾತಿನ ಚುಕ್ಕಿಗೆ ಎಳೆಯುತ್ತಿದ್ದ
ಸರಳ ವಕ್ರ ರೇಖೆಗಳನ್ನು
ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ಯಾಕೆ ಹೀಗೆ?
ನಿನಗೀಗ ಬೆಳಗಿನ ಜಾವದ ಸಿಹಿ ನಿದ್ದೆ
ಕನಸಿನಲ್ಲಿ ನಗ್ತಿದ್ದೀಯಾ ?
ಏನೋ ಕನವರಿಸುತ್ತಾ ಇರಬಹುದು ನೀನೀಗ,
ನನಗೊಂದು ದಿವ್ಯಶಕ್ತಿ ಇದ್ದಿದ್ದರೆ
ನಾನೀಗ ಒಮ್ಮೆ ನಿನ್ನ ಕೋಣೆಯನೊಮ್ಮೆ ಹೊಕ್ಕು
ನಿನ್ನ ಹಣೆ ನೇವರಿಸಿ ಬರುತ್ತಿದ್ದೆ.
ಹ್ಮ್ ಅಷ್ಟೇ!ಅದಕ್ಕಿಂತ ಹೆಚ್ಚು ಕಡಿಮೆ
ಏನೂ ಇಲ್ಲ...

ನೀ ಕಾಡುವುದಿಲ್ಲ ಪ್ರೇಮಿಯಂತೆ,
ನೀ ಬೇಡುವುದಿಲ್ಲ ಯಾಚಕನಂತೆ
ನೀ ನಿರ್ಲಿಪ್ತ, ನಿತ್ಯತೃಪ್ತ
ಗದರಬೇಕು ಅನ್ನಿಸುತ್ತದೆ
ನೀ ಎಲ್ಲರಂತೆ ಯಾಕಿಲ್ಲ ಎಂದು,
ನೀ ನನ್ನ ಕಾಡಿದಷ್ಟು ನೆನಪಾದಷ್ಟು
ನಿನಗೆ ನನ್ನ ನೆನಪಾಗುವುದಿಲ್ಲ ಗೊತ್ತು
ಅದು ನಿನ್ನ ಸಮಸ್ಯೆ ಅಲ್ಲ ಬಿಡು!
ನೀನು ಇರುವುದಕ್ಕೇ ನಾನು ಮಾತ್ರ ಶ್ರಾವಣದ ನವಿಲು
ಚೈತ್ರದ ಚಿಗುರು, ಒಗರು ಒಗರು
ಈ ಪ್ರೀತಿಯಲ್ಲಿ ನನ್ನದೊಂದು ಅವಸ್ಥೆ
ಯಾಕೆಂದರೆ ನಾನು ಸದಾ ಕಾಲ ನಿನ್ನ ಧ್ಯಾನಸ್ಥೆ

- ಸಖಿ

ಹೇ ಕೇಳಿಲ್ಲಿ,

ಬಾನ ಮಲ್ಲಿಗೆಯ ಹೂಗಳನ್ನು ಹೆಕ್ಕಿ
ಒಂದು ಚಂದದ ದಂಡೆ ಕಟ್ಟಿ
ಮುಡಿಯಬೇಕು ಎನಿಸಿದೆ
ನೀನೂ ಬರ್ತೀಯ ಜೊತೆ?
ಹೂ ಹೆಕ್ಕೋಣ!

ಈ ಕಾಲದಲ್ಲೇ ನೋಡು
ಹಾಡಿಯ ಅಂಚಲ್ಲಿ
ಬೆಣಸು, ಚೂರಿ, ಮುಳ್ಳಣ್ಣು
ರಾಶಿ ರಾಶಿ ಸಿಗುತ್ತವೆ ,
ಆ ಹುಳಿ ಬೋರೆ ಹಣ್ಣುಕೂಡ ಹಳದಿಯಿಂದ
ಮೆತ್ತಗೆ ಕಂದು ಬಣ್ಣಕ್ಕೆ ತಿರುಗಿರುತ್ತದೆ
ಎಲ್ಲವನ್ನೂ ಆಯ್ದು ಆ ಪುಟ್ಟ ಕುಕ್ಕೆಯಲ್ಲಿ
ಹಾಕಿಕೊಂಡು, ಯಾರಿಗೂ ಕೊಡದೆ
ತಿನ್ನಬೇಕು ಅನ್ನಿಸಿದೆ, 
ಬರ್ತೀಯ ಜೊತೆಗೆ? 
ನೀ ಬಂದರೆ ಕವಳಿ ಹಣ್ಣೂ ಕೊಯ್ಯಬಹುದು
ಬುಟ್ಟಿ ಇನ್ನಷ್ಟು ತುಂಬುತ್ತದೆ!
ದಾರಿಯೂ ಬೇಗ ಸವೆಯುತ್ತದೆ.

ಬೇಳೆ ಹೂವಿನ ಸಾರುಮಾಡಿ
ಬಳ್ಳಿ ಸೊಪ್ಪಿನ ಪಲ್ಯಮಾಡಿ
ಕೆಂಪಕ್ಕಿಅನ್ನಕ್ಕೆ ಒಂದು ಚೂರೇ ಚೂರು
ತುಪ್ಪ ಹಾಕುವೆ, ಊಟ ಮುಗಿಸು
ಕಡೆದ ಮಜ್ಜಿಗೆ ಕುಡಿದು
ಕಣ್ಣು ಎಳೆದು ಬರುವಾಗ,
ಇನ್ನೇನು ನಿನ್ನ ಬಾಯಿಂದ ಅನ್ನದಾತೆ ಸುಖಿಯಾಗಿರು
ಎನ್ನುವ ಮಾತು ಬರುವ ಮೊದಲೇ,

ಮತ್ತೆ ಊರ ತಿರುಗಲು
ನನ್ನೂರ ಇಂಚಿಂಚು ಸುತ್ತಿಬರಲು
ನಿನ್ನ ಎಳೆದುಕೊಂಡು
ಹೋಗಬೇಕಿದೆ,
ಬರ್ತೀಯ?

ನಿನಗೆ ಪ್ರೀತಿ ಎಂದರೆ ಹೇಗೋ ಏನೋ
ನನಗೆ ಗೊತ್ತಿಲ್ಲ,
ನನಗೆ ಮಾತ್ರ
ನನ್ನಿಷ್ಟದ ಎಲ್ಲ ಗಳಿಗೆಗಳಿಗೂ
ನಿನ್ನನ್ನು ಪರಿಚಯಿಸುವುದು
ನನ್ನ ಬದುಕಿನ ಎಲ್ಲ
ಖುಷಿ, ಬೆರಗು, ನೆಮ್ಮದಿಯಲ್ಲಿ
ನನ್ನ ಜೊತೆ ನಿನ್ನ ಹೆಜ್ಜೆಯೂ
ಇರುವುದೇ
ಪ್ರೀತಿ