ದಶಮಾನೋತ್ಸವವನ್ನು ಆಚರಿಸಿದ ಯು ಕೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವಿಚಾರ ವೇದಿಕೆ (KSSVV)

ಅದೊಂದು ಮಹತ್ವದ ಮೈಲಿಗಲ್ಲು. ಆ ನವೆಂಬರ್ ೨೪, ೨೦೨೪ರ ವಾರಾಂತ್ಯದಲ್ಲಿ  ಹವಾಮಾನ ಬಿಗಡಾಯಿಸುವ ಚಂಡಮಾರುತ ಬರುವ ಎಚ್ಚರಿಕೆಯಿತ್ತು! ಅದಕ್ಕೆ ಬರ್ಟ ಎನ್ನುವ ಅಂದದ ನಾಮಧೇಯವನ್ನೂ ಕೊಟ್ಟಿದ್ದರು. ಶೆಫಿಲ್ಡ್ ದಿಂದ, ದೂರದ ‘ಟಿ ಸೈಡ್ ‘ದಿಂದ, ಲಂಡನ್ ಮತ್ತು ಲಿಂಕನ್ ನಗರಗಳ ಆಸುಪಾಸಿನಿಂದ ಹೊರಟ ಜಿಗುಟಿನ ಸಾಹಿತ್ಯಾಸಕ್ತರು ಮಳೆ ಬಿರುಗಾಳಿಯನ್ನು ಲೆಕ್ಕಿಸದೆ, ಮೋಟರ್ವೆದಲ್ಲಿ ಉರುಳಿ ಬಿದ್ದು ಎರಡೆರಡು ರಸ್ತೆಗಳನ್ನು ಬಂದು ಮಾಡಿದ್ದರೂ ಧೃತಿಗೆಡದೆ ತಡಮಾಡದೆ ಯುಕೆದ ಮಧ್ಯವರ್ತಿ ನಗರವಾದ ಲೆಸ್ಟರಿಗೆ ಬಂದದ್ದೂ ಒಂದು ಸಾಹಸದ ಕಥೆಯೇ ಆಗಿತ್ತು. ಆಗಲೇ ಅಲ್ಲಿ ನೆರೆದಿದ್ದ ಮತ್ತಿತರ ಕನ್ನಡಿಗರಲ್ಲಿ ಎಲ್ಲಿಲ್ಲದ ಉತ್ಸಾಹ!  ಅವರೆಲ್ಲ ಕೂಡಿ ಹತ್ತು ವರ್ಷ ಸತತವಾಗಿ ವಾರಂಪ್ರತಿ ಕನ್ನಡದಲ್ಲಿ ಒಂದು ಬ್ಲಾಗ್ ಅಂಕಣ ಪ್ರಕಟಿಸುತ್ತ ಬಂದಿದ್ದಾರೆ. ಈಗ ಅಂಕಣಗಳ ಸಂಖ್ಯೆ ೬೦೦ ನ್ನೂ ಮೀರಿದೆ! ಯುಕೆ ಕನ್ನಡ ಬಳಗದ ಯುಗಾದಿಯು ಮತ್ತು ದೀಪಾವಳಿ ಸಮಾರಂಭಗಳಲ್ಲಿ ಸಿಕ್ಕ ಸ್ವಲ್ಪೇ ಸಮಯದಲ್ಲೂ ಗಂಭೀರ ಸಾಹಿತ್ತ್ಯದ ಚರ್ಚೆ, ಕವಿ ಗೋಷ್ಠಿ, ನಾಟಕ ಇತ್ಯಾದಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದವರು. ಆ ದಿನ ಹಿರಿಯ ಕಿರಿಯ ಸದಸ್ಯರು ನಂತರ ಬಂದವರನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.

ಆ ದಿನ ಅವರು ರಾಜಶ್ರೀ ಮತ್ತು ವೀರೇಶ್ ಅವರ ಮನೆಯಲ್ಲಿ ಸೇರಿ ಬೆಳಿಗ್ಗೆ ೧೧ರಿಂದ ಸಂಜೆ ನಾಲ್ಕು ಗಂಟೆಯವರೆಗಿನ  ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದರು. ಸ್ವಾಗತ ಮತ್ತು  ಉಭಯ ಕುಶಲೋಪರಿ ಆಗುತ್ತಿದ್ದಂತೆಯೇ ಅಪರೂಪದ ಬಿಸಿ ಬಿಸಿ ಮದ್ದೂರು ವಡೆ, ರುಚಿಯಾದ ಚಟ್ನಿ ಮತ್ತು ಕಾಫಿ ಅವರಿಗಾಗಿ ಕಾಯುತ್ತಿದ್ದವು.  ಹಲವಾರು ಹಿರಿಯರು ಯುಕೆಗೆ ಬಂದು ನಾಲ್ಕು ಅಥವಾ ಐದು ದಶಕಗಳೇ ಸಂದಿದ್ದವು. ಕೆಲವರು ಇನ್ನೂ ಎರಡು ದಶಕ ಕಳೆಯದ ಹಸುಳೆಗಳು. ಎಲ್ಲರೂ ಒಂದಿಲ್ಲೊಂದು ರೀತಿಯ ಬರಹಗಾರರು. ಕೆಲವರು ಐದೈದು ಪುಸ್ತಕಗಳನ್ನು ಪ್ರಕಟಿಸಿದ ಸರಸ್ವತಿ ಪುತ್ರರು. ಒಂದಿಬ್ಬರು ಹತ್ತಾರು ಪುಟಗಳ ಲೇಖಕರು, ಆದರೆ ಒಳ್ಳೆಯ ಓದುವ ಆಸ್ಥೆ ಉಳ್ಳವರು. ಎಲ್ಲರೂ ಕುವೆಂಪು ಹೇಳಿದ ‘ಎಲ್ಲಾದರೂ ಇರು, ಎಂತಾದರೂ ಇರು, ಆದರೆ ಕನ್ನಡವಾಗಿರು’ ಎನ್ನುವದನ್ನು ಇವರನ್ನುದ್ದೇಶಿಸಿಯೇ ಹಾಡಿದರೋ ಏನೋ ಅನ್ನುವಂತೆ ಜೀವಿಸುವವರು. ಹೊಟ್ಟೆ ಪಾಡಿಗೆ ವೈದ್ಯರೇ ಆಗಿರಲಿ, ಐಟಿ ಪಟುವೆ ಆಗಿರಲಿ  ಕನ್ನಡವೇ ಉಸಿರು, ಕನ್ನಡವೇ ಜೀವನ ಅನ್ನುವಂತೆ ಬದುಕುವವರು. ತಮ್ಮನ್ನು ಸಲುಹಿದ ಕನ್ನಡ ನುಡಿಯನ್ನು ಮರೆಯದಂತೆ, ಮುಂದಿನ ಪೀಳಿಗೆಗೂ ಸ್ವಲ್ಪವಾದರೂ ಪರಿಚಯಿಸುತ್ತ ಜೀವಂತವಾಗಿಡುತ್ತ  ತಮ್ಮ ಅಳಿಲು ಸೇವೆಯನ್ನು ಮಾಡುತ್ತಿರುವವರು. ಕೆಲವರು ಅನೇಕ ಸಲ ಭೇಟಿಯಾದವರು ಒಂದಿಬ್ಬರು ಎಲ್ಲರನ್ನೂ ಭೇಟಿ ಮಾಡುವದು ಇದೆ ಮೊದಲ ಸಲ. ಅಂದರೆ ಒಂದು ರೀತಿಯಿಂದ ‘ಅನಿವಾಸಿ ಈ-ಪೇಪರಿನ’ ಪ್ರಸ್ತುತಿಗಳಂತೆ ಕಲಸುಮೇಲೋಗರ!  

ಪ್ರಾರಂಭದಲ್ಲಿ ಎಲ್ಲರನ್ನೂ “ನನ್ನ ಊರಿಗೆ, ನನ್ನ ಸೂರಿಗೆ” ಸ್ವಾಗತಿಸುತ್ತಾ ರಾಜಶ್ರೀ ಪಾಟೀಲ್ ಅವರು ಕುವೆಂಪು ಅವರ ‘ಕನ್ನಡಕ್ಕಾಗಿ ಹೋರಾಡು ಕಂದ’ ಎನ್ನುವ ಜೋಗುಳದ ಹರಕೆಯನ್ನು ನೆನಪಿಸಿ ನಾವಿಲ್ಲಿ ಮಾಡುತ್ತಿರುವುದೂ ಅದನ್ನೇ ಎನ್ನುವುದನ್ನು ಒತ್ತಿ ಹೇಳಿದರು. ಈ ದಶಮಾನೋತ್ಸವ ಶತಮಾನೋತ್ಸವದತ್ತ ಧಾಪು ಕಾಲಿಂದ ನಡೆಯಲಿ ಅಂತ ಶುಭ ಹಾರೈಕೆಗಳನ್ನು ಹೇಳಿ ಮುಂದಿನ ಕಾರ್ಯಕಲಾಪಗಳಿಗೆ ಚಾಲನೆ ಕೊಟ್ಟರು.

ಬೆಳಗಿನ ಸಿಂಹಾವಲೋಕನದಲ್ಲಿ ‘ಅನಿವಾಸಿ ನಡೆದು ಬಂದ ದಾರಿ’ಯನ್ನು ಮೂವರು ಪರಿಚಯಿಸಿದರು. ಜಿ ಎಸ ಪ್ರಸಾದ್ ಅವರು ಯುಕೆ ಕನ್ನಡ ಬಳಗದೊಡನೆಯ ಸಂಬಂಧವನ್ನು ತಿಳಿಹೇಳಿ ಮುಂದಿನ ಚರ್ಚೆಗೂ ಪೀಠಿಕೆ ಕೊಟ್ಟದ್ದು ವಿಶೇಷ. (* ಹಿಂದಿನ ಮೈಲಿಗಲ್ಲಿನ ಲೇಖನಗಳಿಗೆ ಇದರ ಕೊನೆಯಲ್ಲಿ ಕೊಟ್ಟ ಕೊಂಡಿ ನೋಡಿರಿ )

ನಂತರ ಫೋಟೋ: ನೆನಪಿಗಾದರೂ ಇರಲೇಬೇಕಲ್ಲವೇ, ಅನಿವಾರ್ಯ ಆದರೂ ಆವಶ್ಯಕವೆನ್ನುವ ‘ದಶಕದ ಕೇಕ್” ತರಲಾಯಿತು. ಇದರ ವಿಶೇಷತೆಯೆಂದರೆ ಅದನ್ನು ‘ಬೇಕ್’ ಮಾಡಿದವಳು ಆತಿಥೇಯ ದಂಪತಿ ರಾಜಶ್ರೀ ಮತ್ತು ವೀರೇಶರ ಹದಿನಾಲ್ಕು ವರ್ಷದ ಮಗಳು ಖುಷಿ. ಅದರ ಮೇಲೆ ಬರೆದ  ಸುಂದರ ಕನ್ನಡ ಅಕ್ಷರಗಳು ಇಲ್ಲಿಯ ಕೇಕುಗಳಲ್ಲಿ ಅಪರೂಪ. ಇದು ‘ಹೇಳಿ ಮಾಡಿಸಿದ’ commissioned cake! ದೀಪ ಬೆಳಗಿ ಉದ್ಘಾಟನೆ ಮಾಡಿ ಕೇಕ್ ಹಂಚಿದ್ದಾಯಿತು. ಕೇಕ್ ರುಚಿಯಾಗಿದೆ ಅಂದರು ಎಲ್ಲರೂ!
ಉಪನ್ಯಾಸಗಳು

ನಂತರದ ಮುಖ್ಯ ಉಪನ್ಯಾಸವನ್ನು ಕೊಟ್ಟವರು ಯೋಗಿಂದ್ರ ಮರವಂತೆ. ಅವರು ಒಬ್ಬ ಗಣನೀಯ ಪ್ರಬಂಧಕಾರರು. ಪ್ರಬಂಧದ ಇತಿಹಾಸವನ್ನು ಫ್ರಾನ್ಸ್ ದೇಶದ ತತ್ವಜ್ಞಾನಿ ಮೈಕೆಲ್ ಮೊಂಟೇನ್ ನಿಂದ ಶುರುಮಾಡಿ ಇಂಗ್ಲೆಂಡಿನ ಜಾರ್ಜ್ ಆರ್ವೆಲ್ ನಂತರ ಕನ್ನಡದ ಪ್ರಬಂಧಬ್ರಹ್ಮ ಎ  ಎನ್ ಮೂರ್ತಿರಾಯರ ಬರವಣಿಗೆಯ ಪರಿಚಯ ಮಾಡಿಕೊಟ್ಟು ನಾನು ಏಕೆ ಮತ್ತು ಹೇಗೆ  ಬರೆಯುತ್ತೇನೆ ಅಂತ ವರ್ಣಿಸಿದರು. ಸುಪ್ರಸಿದ್ಧ ಲೇಖಕ ಎಸ್  ದಿವಾಕರ್ ಅವರ ಪ್ರಬಂಧ ಬರಹಗಳನ್ನೂ ಉಲ್ಲೇಖಿಸಿದರು.

 ನೆರೆದವರಲ್ಲಿ ಐದೈದು ಪುಸ್ತಕಗಳನ್ನು ಪ್ರಕಟಿಸಿದ ಮೂವರು ಲೇಖಕರು ತಂತಮ್ಮ ಕೃತಿಗಳನ್ನು ತಂದು ಪ್ರದರ್ಶಿಸಿದ್ದಲ್ಲದೆ, ಈಗ ವಿದೇಶದಲ್ಲಿ ವಾಸಿಸುತ್ತಿರುವ ಇಬ್ಬವು ಮಹಿಳಾ ಲೇಖಕರು ಈ ವೇದಿಕೆಯ ಭಾಗವಾಗಿರುವದರಿಂದ ಅವರ ಮೂರರಲ್ಲಿ ಎರಡು ಕೃತಿಗಳೂ ಲಭ್ಯವಿದ್ದವು ಮಧ್ಯಂತರದಲ್ಲಿ.

 ಮಧ್ಯಾಹ್ನದ ಭೋಜನ ನಂತರ ಕವಿತೆಗಳ ಬಗೆಗಿನ ಭಾಷಣ ಮತ್ತು ಸ್ಥಳೀಯ ಬರಹಗಾರರ ಎರಡು ಹೊಸ ಕವನ ಸಂಕಲನಗಳ ವಿಮರ್ಶೆ ಕೇಶವ ಅವರು ನಡೆಸಿ ಕೊಟ್ಟರು. ಸ್ವತಃ ಹೊಸತಲೆಮಾರಿನ ಕವಿಯಾಗಿ ವಿವಿಧ ಪ್ರಕಾರದ ಕವಿತೆಗಳ ಛಂದಸ್ಸು ಮತ್ತು ಅಲಂಕಾರಗಳನ್ನು ಚರ್ಚಿಸಿದರು.

ಕವಿಗೋಷ್ಠಿ
ಅದರ ನಂತರ ಚಿಕ್ಕ ಕವಿಗೋಷ್ಠಿಯಲ್ಲಿ. ನೆರೆದ ‘ಅನಿವಾಸಿ’ಯ ೮  ಕವಿಗಳು ತಮ್ಮ (ತಾವು ಬರೆದ) ವಿವಿಧ ಅಭಿರುಚಿಯ ಕವಿತೆಗಳನ್ನೋದಿದರು. ಕೆಲವು ಚುಟುಕಪಟಾಕಿಗಳಾಗಿದ್ದರೆ ಇನ್ನು ಕೆಲವು ‘ಮನ್ ಕಿ ಬಾತ್’ ಹೇಳುವ ಅನಿವಾಸಿ ದೇವಿಗರ್ಪಿಸಿದ ಹೃದಯಾಳದ ಸ್ಪಂದನಗಳ ಪದ್ಯಮಾಲೆಗಳು! ನೆರೆದವರಲ್ಲಿ ಯಾರೂ ಅರಸಿಕರಾಗಿರಲಿಲ್ಲವಾದ್ದರಿಂದ ಈ ಕವಿತ್ವ ನಿವೇದನಕ್ಕೆ  ಯಾರೂ ‘ಮಾ ಲಿಖ x3 ಸಲ’ ಅನ್ನಲಿಲ್ಲ! (ಅರಸಿಕೇಷು ಕಾವ್ಯ ನಿವೇದನಂ ಶಿರಸಿ ಮಾ ಲಿಖ, ಮಾ ಲಿಖ, ಮಾ ಲಿಖ ಎನ್ನುವ ಸಂಸ್ಕೃತ ಬೇಡಿಕೆ!)   
ಕೊನೆಗೆ ಈ ವೇದಿಕೆಯ ಭವಿಷ್ಯತ್ತಿನ ಬಗ್ಗೆ ಮುಕ್ತ ಚರ್ಚೆಯಾಗಿ ಉಪಯುಕ್ತ ನಿರ್ಣಯಗಳ ಅನುಮೋದನೆಯೊಂದಿಗೆ ದಶಮಾನೋತ್ಸಮದ ಸಂಭ್ರಮ ಅಪ್ರತಿಮ ಆತಿಥೇಯ ರಾಜಶ್ರೀ ಮತ್ತು ವೀರೇಶ, ಮತ್ತಿತರಿಗೆ ವಂದನಾರ್ಪಣೆಯೊಂದಿಗೆ ಮುಕ್ತಾಯವಾಗಿ ಎಲ್ಲರೂ ಗೂಡಿಗೆ ಮರಳಿದರು! ಈಗ ಪ್ರಕೃತಿಯ ಅಬ್ಬರ ಕಡಿಮೆಯಾಗಿತ್ತು. ಮನಸ್ಸಿನಲ್ಲೊಂದು ಉಲ್ಲಾಸವಿತ್ತು.

ಲೇಖನ: ಶ್ರೀವತ್ಸ ದೇಸಾಯಿ      ಛಾಯಾಚಿತ್ರ ಕೃಪೆ : ಅನೇಕ ಸದಸ್ಯರಿಂದ;      ರೇಖಾಚಿತ್ರ: ಲಕ್ಷ್ಮಿನಾರಾಯಣ ಗುಡೂರ

ಕವಿಗೋಷ್ಠಿಯಲ್ಲಿ ಓದಿದ ಕವನಗಳು 

1 ರಾಧಿಕಾ ಜೋಶಿ
ಅಕ್ಷರಗಳನ್ನು ವಾರಾಂತ್ಯವಾರ ಪೋಣಿಸಿ
ಎಂದೆಂದೂ ಬಾಡದ ಒಂದು ಸುಂದರ
ಮುತ್ತಿನ ಮಾಲೆಯನ್ನಾಗಿಸಿ
ಗದ್ಯ ಪದ್ಯ ಕಾಲ್ಪನಿಕ ನೈಜ
ಎಲ್ಲವಾಯಿತು ಇಲ್ಲಿ ನಿಜ
ಪರೀಕ್ಷೆ ನಿರೀಕ್ಷೆಗಳ ಲೆಕ್ಕಿಸದ ಹುಲಿ
ಅವಕಾಶಗಳ ಪ್ರೋತ್ಸಾಹದ ಜಗುಲಿ
ಹೇಳಹೊರಟ ಹೊಸ ಹಳೆಯ ಸಂಗತಿ
ಸದಾ ಮೀಟುತ್ತಿರುವ ಅನಿವಾಸಿ ಎಂಬ ೪ ತಂತಿ

ಬರೆಯುವ ಕೌತುಕತೆ ಓದುವ ಆತುರತೆ
ಹೊರತರಲು ಪ್ರತಿಯೊಬ್ಬರಲ್ಲಿವು ಉತ್ತಮತೆ

ಹತ್ತು ಅಧ್ಯಾಯಗಳನ್ನು ಪ್ರತಿಬಿಂಬಿಸುವ
ಈ ದಿನ ಮುಂಬರುವ ಹತ್ತು
ಅಧ್ಯಾಯಗಳಿಗೆ ನಾಂದಿಯಾಗಲಿ
-Radhika Joshi

2 ಲಕ್ಷ್ಮೀನಾರಾಯಣ ಗುಡೂರ್
(1)
ಭಾವಗಳ ಹೂರಣವ ಪದಗಳಲಿ ಸುತ್ತಿಟ್ಟು
ಹದನಾದ ಛಂದಗಳ ಬಿಸಿಹಂಚಲಿಟ್ಟು
ಬೇಯಿಸುತ ಹೋಳಿಗೆಯ, ಹಾಕಿ ರಾಗದ ತುಪ್ಪ
ಸಂಗೀತದೊಡೆ ಬಡಿಸೆ ಅದುವೇ ಬಲು ಒಪ್ಪ!

(2)
ಹಾಡು ನವ ರಾಗವನು ಕೇಳುವೆನು ನಿಂದು
ಬರೆಯೆ ಕವನವನೊಂದ ಓದುವೆನು ಬಂದು
ಹೇಳು ಹೊಸ ಕಥೆಯನ್ನು ಆಲಿಸುವೆನಿಂದು
ಸಾಹಿತ್ಯಸಿಹಿಯೆರೆಯೆ ಚಪ್ಪರಿಸುವೆನು ತಿಂದು
- Lakshminarayana Gudur

* * * *
3. C ನವೀನ್
ಹಿಂದಿನ ಸಾಲಿನ ಹುಡುಗರು...

ಹಿಂದಿನ ಸಾಲಿನ ಹುಡುಗರಲ್ಲಿ ನಾನೂ ಒಬ್ಬನಾಗಿದ್ದೆ;
ಮರೆಯಾಗಿ ಕುಂತು ಚೆಸ್ ಆಡಿದ್ದೆ!
ಪುಸ್ತಕದ ಹಾಳೆಗಳೆಲ್ಲ ವಿಮಾನಕ್ಕೆ ಮೀಸಲು;
ಅದೆಷ್ಟು ಮೋಜು ಎಸೆದು ಅವಿತುಕೊಳಲು!

ಥಿಯಟರ್ ನಂಥ ಕ್ಲಾಸ್ ರೂಮು;
ಭಯವಿರಲಿಲ್ಲ ನಮಗೆ ಪ್ರೊಫೆಸರ್ ಹಾಕುವ ಲಗಾಮು!
ಕಾಣುತಿರಲಿಲ್ಲ ಅವರಿಗೆ ನಾವು ಮಾಡುವ ಚೇಷ್ಟೆ;
ಅವರ ದೃಷ್ಟಿಗೆ ಮುಂದಿನ ಸಾಲಿನ ಹುಡುಗಿಯರಷ್ಟೆ!!
-C Navin

4. ಶ್ರೀವತ್ಸ ದೇಸಾಯಿ
ವ್ಯತ್ಯಾಸ

ಒಂದು ದಿನ ಕೇಳಿದಳು ನೀಲು
ನಿನ್ನ ಉತ್ತರ ಕರ್ನಾಟಕದ ಭಾಷೆ ಬಲು ಕಷ್ಟ
ಈ ಮುಸಿರಿ ಎಂಜಲು
ವ್ಯತ್ಯಾಸ ಏನು ಹೇಳು?
ಆತ ಹೇಳಿದ --
ಜಳಕ ಮಾಡು ಮೊದಲು
ತೊಳೆದು ಹೋಗುತ್ತೆ ಎಲ್ಲ
ಮೊದಲು ಇಟ್ಟು ಬಿಡು ಒಂದು ಮುತ್ತು
ಅದು ಮುಸಿರೆಯೂ ಅಲ್ಲ
ಎಂಜಲು ಅಂತೂ ಮೊದಲೇ ಅಲ್ಲ!
-Shrivatsa Desai

5) ರಾಜಶ್ರೀ ಪಾಟೀಲ್
ಮುಗಿದರೆನಂತೆ ದಶಕೋತ್ಸವ …

ಮುಂಜಾನೆ ರವಿಗಿರೋ ತಾಳ್ಮೆ
ಸಂಜೆ ರವಿಗುಂಟೆ ?
ಇರು ಎಂದರೂ ಇಳಿದೋಡುವ
ಮರೆಯಾಗದಿರೆಂದರೂ ಮತ್ತೆ ಮುಗಿಲೇರಬೇಕೆಂದು
ಮುಚ್ಚಿಟ್ಟುಕೊಳ್ಳುವ
ಮುಗಿಯದಿರೆಂದರೂ ಮುಗಿದೋಹಿತು, ಅರಿವಾಗೋ ಮುನ್ನ ಅನಿವಾಸಿ ಸಂಭ್ರಮ
ಮುಗಿದರೇನಂತೆ ದಶಕೋತ್ಸವ ಬರಲೇಬೇಕಲ್ಲವೇ ರಜತೋತ್ಸವ,
ಅದಕಾಗಿ ಕಾಯದೆ ನಡು ನಡುವೆ ಮಾಡುತ್ತಿರೋಣ ಸಿಕ್ಕಾಗಲೆಲ್ಲ ಸಭಾಮಹೋತ್ಸವ
- Rajashree Patil

6) ವೀರೇಶ್ ಪಾಟೀಲ್
ನಿನ್ನ ಕಣ್ಣಂಚಿನಿಂದ ಬಂದ ಮಿಂಚಿನ ಬಾಣ

ನಿನ್ನ ಕಣ್ಣಂಚಿನಿಂದ ಬಂದ ಮಿಂಚಿನ ಬಾಣ
ಬರಿ ನನ್ನ ಕಣ್ಣಂಚನೇನು ಹೃದಯದ ಇಂಚು ಇಂಚನ್ನು ಹೊಕ್ಕಿತು.
ಹೃದಯಕ್ಕೇ ನಾಟಿದಮೇಲೆ ಮನಸ್ಸಿನದಿನ್ನೇನು
ಅದುವೋ ಏನೂ ಹೇಳದೆ, ಏನೂ ಕೇಳದೆ
ನಿನ್ನ ಒಪ್ಪಿತು.
-Veeresh Patil

8. ಕೇಶವ ಕುಲಕರ್ಣಿಯವರು ತಾವು ಭಾವಾನುವಾದ ಮಾಡಿ, ಹಿಂದೆ ಪ್ರಕಟಿಸಿದ ಕವನ 'ನೋಡೂಣಂತ' ವನ್ನು ಓದಿದರು.
https://anivaasi.com/2024/05/17/2poems1article/
* KSSVV-Anivaasi ನಡೆದು ಬಂದ ದಾರಿ (ಎರಡು ಭಾಗಗಳು) ಓದಲು ಕೆಳಗಿನ ಎರಡು ಲಿಂಕ್ (Copy & Paste)
https://anivaasi.com/2019/10/25/
https://anivaasi.com/2019/11/01/

ಇಬ್ಬರು ವ್ಯಕ್ತಿಗಳು ಭೇಟಿಯಾಗುವ ಕತೆಗಳು – ಕೇಶವ ಕುಲಕರ್ಣಿ

ಬಹಳ ವರ್ಷಗಳಾದ ಮೇಲೆ ಅಥವಾ ದಶಕಗಳು ಗತಿಸಿದ ಮೇಲೆ ಬೇರ್ಪಟ್ಟ ಪ್ರೇಮಿಗಳು ಮತ್ತೆ ಭೇಟಿಯಾದರೆ ಏನಾಗಬಹುದು ಎನ್ನುವ ಪ್ರಶ್ನೆ ಕತೆ ಬರೆಯುವವರಿಗೆ ಮತ್ತು ಸಿನೆಮಾ ಮಾಡುವವರಿಗೆ ತುಂಬ ಇಷ್ಟದ ವಿಷಯ. ಕತೆಯಲ್ಲಿ ಇಬ್ಬರದೂ ಈಗಾಗಲೇ ಮದುವೆಯಾಗಿರಬಹುದು, ಆಗದೆಯೂ ಇರಬಹುದು. ಒಬ್ಬರದು ಮಾತ್ರ ಆಗಿ, ಇನ್ನೊಬ್ಬರು ಭಗ್ನಪ್ರೇಮಿಯಾಗಿರಬಹುದು. ಒಬ್ಬರ ವಿಚ್ಚೇದನವಾಗಿರಬಹುದು. ಒಬ್ಬರಿಗೆ ಕೊನೆಗಾಲದ ಕ್ಯಾನ್ಸರ್ ಆಗಿರಬಹುದು. ಅವರಿಬ್ಬರು ಅಚಾನಕ್ಕಾಗಿ ಭೇಟಿಯಾಗಲು ಒಂದು ಕಾರಣ ಅಥವಾ ಘಟನೆ ಬೇಕು ಆಷ್ಟೇ,  ಕತೆ ಅಲ್ಲಿಂದ ಹಿಂದೆ ಮತ್ತು ಮುಂದೆ ಸಾಗುತ್ತ, ಓದುಗರನ್ನು/ನೋಡುಗರನ್ನು ತಮ್ಮ ಟೀನೇಜ್ ಮತ್ತು ಹದಿಕರೆಯದ ದಿನಗಳಿಗೆ ಕರೆದೊಯ್ಯುತ್ತ, ಯಾರದೋ ನೆನಪನ್ನು ತರುತ್ತ, ಮನಸ್ಸಿನಲ್ಲೊಂದು ಪ್ರೀತಿಯ ಸಂವೇದನೆಯನ್ನು ಹುಟ್ಟಿಸುತ್ತವೆ. ಇಂಥ ಬಹುತೇಕ ಸಿನೆಮಾಗಳು ವಾಸ್ತವದ ತಳಹದಿಯಲ್ಲಿ ಇದ್ದರೂ ರೋಮ್ಯಾಂಟಿಸಿಸಂನ ಭಾಷೆಯನ್ನು ಉಪಯೋಗಿಸುತ್ತವೆ. 

ಇಂಥ ನೂರಾರು ಪರ್-ಮ್ಯುಟೇಶನ್ ಮತ್ತು ಕಾಂಬಿನೇಶನ್-ನಿಂದ ಇಂಗ್ಲೀಷ್ ಭಾಷೆಯಲ್ಲಿ ನೂರಾರು ಕಾದಂಬರಿಗಳು ಮತ್ತು ಸಿನೆಮಾಗಳು ಬಂದಿವೆ. ಹಿಂದಿ ಭಾಷೆಯಲ್ಲಿ ಗುಲ್ಜಾರ್ ಬರೆದು ನಿರ್ದೇಶಿಸಿದ `ಇಜಾಜತ್` ಸಿನೆಮಾ ಆಗಿನ ದಿನಗಳಲ್ಲಿ ತುಂಬ ಕಾಡಿದ ಸಿನೆಮಾ. ಆ ಚಿತ್ರದಲ್ಲಿ ವಿಚ್ಛೇದನಗೊಂಡ ದಂಪತಿಗಳು ರೈಲುನಿಲ್ದಾಣದ ವೇಟಿಂಗ್-ರೂಮಿನಲ್ಲಿ ಭೇಟಿಯಾಗುವ ಕತೆ –  ಆ ಸಿನೆಮಾದ ಅಂತ್ಯ ಬಹಳ ಇಷ್ಟವಾಗಿತ್ತು. ಓ ಹೆನ್ರಿ ಕಥೆಯನ್ನು ಆಧರಿಸಿದ ಋತುಪರ್ಣ ಘೋಷ್ ನಿರ್ದೇಶನದ `ರೇನ್-ಕೋಟ್` ಸಿನೆಮಾ (ಅಜಯ್ ದೇವಗಣ್ ಮತ್ತು ಐಶ್ವರ್ಯಾ ರೈ) ಕೂಡ ಇಂಥದೇ ಕತೆ. `೯೬` ಎನ್ನುವ ತಮಿಳು ಸಿನೆಮಾ (ಕನ್ನಡದಲ್ಲಿ ಅದನ್ನೇ ೯೯ ಎಂದು ರಿಮೇಕ್ ಮಾಡಿದರು)ದಲ್ಲಿ ಪ್ರೇಮಿಗಳು ದಶಕಗಳಾದ ಮೇಲೆ ರಿ-ಯುನಿಯನ್ನಿನ ನೆಪದಲ್ಲಿ ಭೇಟಿಯಾಗುತ್ತಾರೆ. ಅವಳ ಮದುವೆಯಾಗುತ್ತದೆ, ಮಕ್ಕಳಾಗಿವೆ. ಆದರೆ ಈತ ಭಗ್ನಪ್ರೇಮಿ. ರೀ-ಯುನಿಯನ್ ಮುಗಿದ ಮೇಲೆ ಒಂದು ರಾತ್ರಿಯನ್ನು ಅವರು ಒಟ್ಟಿಗೇ ಕಳೆಯುತ್ತಾರೆ. ಕತೆ ಪದರು ಪದರಾಗಿ ತೆರೆದುಕೊಳ್ಳುತ್ತ ಆಪ್ತವಾಗುತ್ತ ಸಾಗುತ್ತದೆ. 

ಆದರೆ ಪ್ರೇಮಿಗಳಲ್ಲದ ಇಬ್ಬರು ವ್ಯಕ್ತಿಗಳ ನಡುವಿನ ಕತೆಗಳು ಮತ್ತು ಸಿನೆಮಾಗಳು ವಿರಳವೆಂದೇ ಹೇಳಬಹುದು. ಅಂಥ ಕತೆಗಳನ್ನು ಬರೆಯುವುದು, ಅದರಲ್ಲೂ ಸಿನೆಮಾ ಮಾಡುವುದು ತುಂಬ ಕಷ್ಟದ ಕೆಲಸ. ಎರಡೂ ವ್ಯಕ್ತಿಗಳು ಒಂದೇ ಲಿಂಗದವರಾಗಿರಬೇಕು (ಸಹೋದರ/ಪಿತೃ ಬಾಂಧವ್ಯವಿಲ್ಲದಿದ್ದರೆ). ಅವರು ಅಪರಿಚಿತರಿರಬಹುದು. ತುಂಬ ವರ್ಷಗಳಾದ ಮೇಲೆ ಭೇಟಿಯಾದ ಗೆಳೆಯರಿರಬಹುದು. ದಶಕಗಟ್ಟಲೇ ಭೇಟಿಯಾಗದ ಅಪ್ಪ-ಮಗನಿರಬಹುದು, ದಾಯಾದಿಗಳಿರಬಹುದು, ಸಹೋದರ-ಸಹೋದರಿಯರಿರಬಹುದು. ಇಂಥ ಕತೆಗಳ ವ್ಯಾಪ್ತಿ ಮತ್ತು ಆಳ ಎರಡೂ ಆಯಾ ಕತೆಗಾರನ ಅನುಭವ, ಓದು  ಮತ್ತು ಏನನ್ನು ಹೇಳಬೇಕು ಎನ್ನುವ ತುಡಿತದ ಮೇಲೆ ಅವಲಂಬಿಸಿಸಿರುತ್ತದೆ. 

ಇದನ್ನೆಲ್ಲ ಬರೆಯಲು ಕಾರಣ, ಇತ್ತೀಚೆಗೆ ಅಂಥ ಎರಡು ಸಿನೆಮಾಗಳನ್ನು ನೋಡಿದೆ. 

ಅಡಿಯೋಸ್ ಅಮಿಗೋ

ಸ್ಪ್ಯಾನಿಷ್ ಭಾಷೆಯಲ್ಲಿ ‘ಅಡಿಯೋಸ್ ಅಮಿಗೋ’ ಎಂದರೆ ‘ವಿದಾಯ ಗೆಳಯನೇ`’ ಎಂದು. ಆದರೆ ಇದು ಸ್ಪ್ಯಾನಿಷ್ ಚಿತ್ರವಲ್ಲ, ಕೇರಳದಲ್ಲಿ ಜರಗುವ ಶುದ್ಧ ಮಲಯಾಳಂ ಚಿತ್ರ! 

ಸಂಪೂರ್ಣವಾಗಿ ವಿಭಿನ್ನ ಹಿನ್ನೆಲೆಯ ಇಬ್ಬರು ಅಪರಿಚಿತರು ಆಕಸ್ಮಿಕವಾಗಿ ಭೇಟಿಯಾದರೆ ಏನಾಗಬಹುದು?  

ಒಬ್ಬ ಶ್ರೀಮಂತ ಮತ್ತು ಇನ್ನೊಬ್ಬ ಬಡವ. 

ಒಬ್ಬ ತುಂಬ ತೊಂದರೆಯಲ್ಲಿದ್ದಾನೆ, ಇನ್ನೊಬ್ಬ ಬೇಕಾಬಿಟ್ಟಿ ಬದುಕುತ್ತಿದ್ದಾನೆ. 

ಒಬ್ಬ ನಿರಾತಂಕದಲ್ಲಿರುವಂತೆ ತೋರುತ್ತಾನೆ, ಇನ್ನೊಬ್ಬ ಆತಂಕದಲ್ಲೇ ಕಾಯುತ್ತಿದ್ದಾನೆ. 

ಒಬ್ಬ ಹಣವನ್ನು ಹೇಗೆ ಬೇಕೆಂದ ಹಾಗೆ ಖರ್ಚು ಮಾಡುತ್ತಾನೆ,,ನ್ನೊಬ್ಬ ತನ್ನ ತಾಯಿಯ ಆಸ್ಪತ್ರೆಯ ಬಿಲ್‌ಗಳಿಗಾಗಿ ಹತಾಶರಾಗಿದ್ದಾನೆ. 

ಇಂಥ ವ್ಯತಿರಿಕ್ತ ಅಪರಿಚಿತರು ಬಸ್-ಸ್ಟ್ಯಾಂಡಿನಲ್ಲಿ ಭೇಟಿಯಾಗುತ್ತಾರೆ. ಕೇರಳದಾದ್ಯಂತ ಬಸ್, ಕಾರು ಮತ್ತು ದೋಣಿಯಲ್ಲಿ ೨೪ ಗಂಟೆಗಳ ಕಾಲ ಸುಮಾರಾಗಿ ಗೊತ್ತುಗುರಿಯಿಲ್ಲದ ಅರ್ಥಹೀನ ಪ್ರವಾಸಕ್ಕೆ ಹೋಗುತ್ತಾರೆ. ಇಡೀ ಸಿನೆಮಾ ನಮ್ಮನ್ನು ಉದ್ದೇಶರಹಿತ ಪ್ರಯಾಣಕ್ಕೆ ಕರೆದೊಯ್ಯುತ್ತದೆ.

ಇಂಥ ಸಂಪೂರ್ಣ ವಿರುದ್ಧದ ಇಬ್ಬರ ಯಾತ್ರೆ, ಕಪ್ಪುಬಿಳಿಪಾಗಿ ಸಾಗುವುದಿಲ್ಲ. ಶ್ರೀಮಂತ ಮತ್ತು ಬಡವರ ನಡುವಿನ ವ್ಯತ್ಯಾಸವನ್ನು ಅನ್ವೇಷಿಸುವುದಿಲ್ಲ. ಯಾವುದೇ ಪಾತ್ರವನ್ನು ನಿರ್ಣಯಿಸುವುದಿಲ್ಲ. ಬೋಧನೆ ಇಲ್ಲ. ನೈತಿಕತೆಯ ಪಾಠಗಳಿಲ್ಲ.  ನಾನ್-ಜಡ್ಜ್-ಮೆಂಟಲ್ ಆಗಿ ದೈನಂದಿನ ಜೀವನದ ಸಾಮಾನ್ಯ ದೃಶ್ಯಗಳಲ್ಲಿ ವೈಭವೀಕರಣವಿಲ್ಲದೇ ತೋರಿಸುತ್ತ ಮನುಷ್ಯನ ಒಳಪದರುಗಳನ್ನು ಬಿಡಿಸುತ್ತ ಹೋಗುತ್ತದೆ. 

ಮೇಯಗನ್

ಮೇಯೞಗನ್, ಹೆಸರೇ ಹೇಳುವಂತೆ, ತಮಿಳು ಸಿನೆಮಾ. ಕನ್ನಡದಲ್ಲಿ ತಿಲಾಂಜಲಿ ಕೊಟ್ಟಿರುವ `ೞ` (ಳ) ಇರುವ ಅಚ್ಚ ತಮಿಳು ಹೆಸರಿನ ಸಿನೆಮಾ. 

ಈ ಸಿನೆಮಾದಲ್ಲೂ ಇಬ್ಬರು ಭೇಟಿಯಾಗುತ್ತಾರೆ. ಆದರೆ ಸಂಪೂರ್ಣ ಅಪರಿಚಿತರಲ್ಲ. ಆದರೆ ಕೆಲವು ದಶಕಗಳ ಮೇಲೆ ಭೇಟಿಯಾಗುತ್ತಾರೆ. 

ಒಬ್ಬ ನಗರ ನಿವಾಸಿಯ ಪ್ರತಿರೂಪ, ಇನ್ನೊಬ್ಬ ಹಳ್ಳಿಯ ಭೂಪ. 

ಒಬ್ಬ ತುಂಬ ಮಿತಭಾಷಿ, ಇನ್ನೊಬ್ಬ ಅರಳು ಹುರಿದಂತೆ ಮಾತಾಡುವ.

ಒಬ್ಬ ರಿಸರ್ವ್ಡ್, ಇನ್ನೊಬ್ಬ ಓಪನ್. 

ಒಬ್ಬನದು ಯಾರನ್ನೂ ಹೆಚ್ಚಾಗಿ ನಂಬದ ಬದುಕು, ಇನ್ನೊಬ್ಬನ ಬದುಕೇ ನಂಬುಗೆಯ ಮೇಲೆ ನಿಂತಿರುವುದು. 

ಒಬ್ಬನದು ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದ ನಡೆ,  ಇನ್ನೊಬ್ಬನದು ಎಲ್ಲರೂ ನಮ್ಮವರೇ ಎನ್ನುವ ಬಾಳು. 

ಒಬ್ಬನದು ಇತರರೊಂದಿಗೆ ಸಂಪರ್ಕ ಸಾಧಿಸಲು ಹೆಣಗಾಡುವ ಸ್ವಭಾವ, ಇನ್ನೊಬ್ಬ ಪ್ರಾಣಿಗಳನ್ನೂ ಮಾತನಾಡಿಸಬಲ್ಲ. 

ದಶಕಗಳಾದ ಮೇಲೆ ಈ ನಗರವಾಸಿ ತಾನು ಹುಟ್ಟಿಬೆಳೆದ ಹಳ್ಳಿಗೆ ಹೋಗಬೇಕಾಗುವ ಪ್ರಸಂಗ ಬರುತ್ತದೆ, ಒಂದು ಮದುವೆಯ ಕಾರಣಕ್ಕಾಗಿ. ಅಲ್ಲಿ ನಗರವಾಸಿಯ ಉಪಚಾರವನ್ನು ನೋಡಿಕೊಳ್ಳಲು ಈ ಹಳ್ಳಿಯ ಭೂಪ. ಹಳ್ಳಿಯ ಭೂಪನಿಗೆ ನಗರವಾಸಿಯನ್ನು ನೋಡುತ್ತಿದ್ದಂತೆ ತನ್ನ ಅತ್ಯಂತ ಆಪ್ತಬಂಧು ಬಂದಂತೆ ವ್ಯವಹರಿಸುತ್ತಾನೆ.  ಆದರೆ ನಗರವಾಸಿಗೆ ಈ ಹಳ್ಳಿಯ ಭೂಪ ಯಾರೆಂದು ಏನು ಮಾಡಿದರೂ ಗೊತ್ತಾಗುತ್ತಿಲ್ಲ, ಅವನನ್ನೇ ನೀನಾರೆಂದು ಕೇಳಲು ಸಂಕೋಚ. ಮದುವೆಯ ಮಂಟಪದಲ್ಲಿ ಏನೆಲ್ಲ ಸಾಹಸ ಮಾಡಿದರೂ ಈ ಹಳ್ಳಿಯ ಭೂಪ ತನಗೆ ಹೇಗೆ ಸಂಬಂಧವಾಗಬೇಕು, ಅವನ ಹೆಸರೇನು ಎಂದು ಹರಸಾಹಸ ಮಾಡಿದರೂ ಗೊತ್ತಾಗುವುದೇ ಇಲ್ಲ!

ಈ ಸಿನೆಮಾದ ನಿರೂಪಣೆ ಮಾಸ್ತಿಯವರ ಅವರ ಸಣ್ಣ ಕಥೆಗಳಂತಿದೆ –  ಸರಳ, ಅಷ್ಟೇ ಆಳ. ಈ ಚಿತ್ರವೂ `ಅಡಿಯೋಸ್ ಅಮಿಗೋ` ಚಿತ್ರದಂತೆ ಬಹುತೇಕಕ ೨೪ ಗಂಟೆಗಳಲ್ಲಿ ನಡೆಯುತ್ತದೆ. ಪದರು ಪದರಾಗಿ ಮನುಷ್ಯನ ದೊಡ್ಡತನ ಮತ್ತು ಸಣ್ಣತನಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ಸಾಗುತ್ತದೆ. ನಗರಪ್ರಜ್ಞೆ ಮತ್ತು ಗ್ರಾಮೀಣ ನಂಬುಗೆಗಳು ರೋಮ್ಯಾಂಟಿಕ್ ಪದರುಗಳಲ್ಲಿ ಬಿಡಿಸಿಕೊಳ್ಳುತ್ತ ಹೋಗುತ್ತದೆ (ಕೆಲವೊಮ್ಮೆ ವ್ಯಾಚ್ಯವೂ ಆಗುತ್ತದೆ). 

(ಅಂದ ಹಾಗೆ  `ಮೇಯೞಗನ್` ಸಿನೆಮಾದ ನಿರ್ದೇಶಕನ ಮೊದಲ ಸಿನೆಮಾ ನಾನು ಮೇಲೆ ಹೇಳಿದ ೯೬). 

ಇಂಥ ಕೆಲವು ಕತೆಗಳು

ಆರ್ ಕೆ ನಾರಾಯಣರು ಬರೆದ `ಜ್ಯೋತಿಷಿಯ ದಿನ` ಕತೆಯೊಂದಿದೆ. ಅದರಲ್ಲಿ ವಿದ್ಯುಚ್ಛಕ್ತಿ ಇಲ್ಲದ ಆಗಿನ ಕಾಲದಲ್ಲಿ ಕತ್ತಲಾಗುವ ಹೊತ್ತಿನಲ್ಲಿ ಜ್ಯೋತಿಷಿಯ ಬಳಿ ವ್ಯಕ್ತಿಯೊಬ್ಬ ಬಂದು ತನ್ನನ್ನು ತುಂಬ ವರ್ಷಗಳ ಹಿಂದೆ ಹೆಚ್ಚು-ಕಡಿಮೆ ಕೊಂದೇ ಹಾಕಿದ ವ್ಯಕ್ತಿ ಎಲ್ಲಿರಬಹುದೆಂದು ಕೇಳುತ್ತಾನೆ. ಜ್ಯೋತಿಷಿಗೆ ಭವಿಷ್ಯ ಕೇಳಲು ಬಂದ ವ್ಯಕ್ತಿ ಯಾರು ಎನ್ನುವುದು ಗೊತ್ತು, ಆದರೆ ಆ ವ್ಯಕ್ತಿಗೆ ಜ್ಯೋತಿಷಿ ಯಾರೆಂದು ಗೊತ್ತಿಲ್ಲ, `ಮೇಯೞಗನ್` ಸಿನೆಮಾದಲ್ಲಿ ಆಗುವಂತೆ. ಆ ಕತೆಯ ವಸ್ತು, ಅದನ್ನು ಬರೆದ ಶೈಲಿ ಮತ್ತು ಕೊನೆಯವರೆಗೂ ಕಾದಿಡುವ ರಹಸ್ಯ ಈಗಲೂ ಕತೆ ಬರೆಯುವವರಿಗೆ ಹೇಳಿ ಮಾಡಿಸಿದ ಪಾಠದಂತಿದೆ.  

ವಿವೇಕ ಶಾನಭಾಗರು ಬರೆದ `ನಿರ್ವಾಣ` ಎನ್ನುವ ಕತೆಯೊಂದಿದೆ (ಘಾಚರ್ ಘೋಚರ್ ಸಂಕಲನ). ನಗರ ಜೀವನದ, ಕಾರ್ಪೋರೇಟ್ ಬದುಕಿನ ಪುಳ್ಳುತನವನ್ನು ಎಲ್ಲಿಯೂ ವ್ಯಾಚ್ಯವಾಗಿಸದೇ ಸಶಕ್ತವಾಗಿ ಬರೆದ ಕತೆ.  ಈ ಕತೆಯಲ್ಲೂ ಇಬ್ಬರು ವ್ಯಕ್ತಿಗಳು ಭೇಟಿಯಾಗುತ್ತಾರೆ, `’ಅಡಿಯೋಸ್ ಅಮಿಗೋ’ ತರಹ. `ಮೇಯೞಗನ್` ತರಹ. ಕಾರ್ಪೋರೇಟ್ ಜಗತ್ತಿನಲ್ಲಿ ಮ್ಯಾನೇಜರ್ ಜಾಗದಲ್ಲಿ ಇರುವ ಇಬ್ಬರು ಪರದೇಶದ ಹೊಟೇಲೊಂದರಲ್ಲಿ ಭೇಟಿಯಾಗುತ್ತಾರೆ. ಇಬ್ಬರೂ ಬಹಳ ವರ್ಷಗಳಾದ ಮೇಲೆ ಸಿಕ್ಕವರು. ಕಥಾನಾಯಕನಿಗೆ ಅವನನ್ನು ಮುಂಚೆ ನೋಡಿದ ಮಾತನಾಡಿಸಿದ ನೆನಪಿದೆ, ಆದರೆ ಪೂರ್ತಿ ನೆನಪಾಗುತ್ತಿಲ್ಲ. ಇರಲಿ, ಏನಂತೆ, ಇದೆಲ್ಲ ಕಾರ್ಪೋರೇಟ್ ಜಗತ್ತಿನಲ್ಲಿ ಸಾಮಾನ್ಯವಲ್ಲವೇ? ಇಬ್ಬರೂ ಸೇರಿ ಆತನ ರೂಮಿನಲ್ಲಿ ಗುಂಡು ಹಾಕುತ್ತಾ ಪರಸ್ಪರ ಉಭಯ ಕುಶಲೋಪರಿಯನ್ನು ಮಾತನಾಡುತ್ತಾರೆ. ಮಾತನಾಡುತ್ತ ಕಥಾನಾಯಕನಿಗೆ ಆತ ತಾನು ಅಂದುಕೊಂಡ ಆತನಲ್ಲ ಎಂದು ಗೊತ್ತಾಗುತ್ತದೆ! ಮುಂದೆ ಇನ್ನೂ ಏನೇನೋ ಆಗುತ್ತೆ, ಸಸ್ಪೆನ್ಸ್ ಹಾಗೇ ಇರಲಿ. 

ಇನ್ನೂ ಕೆಲವು ಕತೆಗಳಿರುತ್ತವೆ. ಆ ಕತೆಗಳಲ್ಲಿ ಒಂದೇ ವ್ಯಕ್ತಿ ಎರಡು ಹೋಳಾಗಿ ಎರಡು ವಿರುದ್ಧ ವ್ಯಕ್ತಿತ್ವದ ಮನುಷ್ಯರಾಗಿ, ಬೇರೆ ಬೇರೆಯಾಗಿ, ಮತ್ತೆ ಎದುರಾಗುತ್ತಾರೆ. ಹಾಗೆ ಎದುರಾದಾಗ ಎಂಥ ತೀವ್ರ ಸಂಘರ್ಷವಾಗುತ್ತದೆ ಅಲ್ಲವೇ!  ಕಾರ್ನಾಡರ `ನಾಗಮಂಡಲ` ಮತ್ತು ಕಂಬಾರರ `ಸಿರಿಸಂಪಿಗೆ` ಇದಕ್ಕೆ ಉದಾಹರಣೆಗಳು. ಅಮೋಲ್ ಪಾಲೇಕರ್ ನಿರ್ದೇಶಿಸಿದ `ಪಹೇಲಿ` (ಶಾರೂಕ್ ಖಾನ್ ನಟನೆ)ಯದೂ ಇಂಥದೇ ಕತೆ. ಎ ಕೆ ರಾಮಾನುಜನ್ ಬರೆದ `ಮತ್ತೊಬ್ಬನ ಆತ್ಮ ಚರಿತ್ರೆ`ಯನ್ನೂ ಇಂಥ ಕತೆಗಳ ಸಾಲಿಗೆ ಸೇರಿಸಬಹುದೇನೋ. 

ನಿಮಗೂ ಇಂಥ ಕಥೆಗಳು ಮತ್ತು ಸಿನೆಮಾಗಳು ಗೊತ್ತಿದ್ದರೆ, ಅವು ನಿಮ್ಮನ್ನು ಸ್ವಲ್ಪವಾದರೂ ಕಾಡಿದ್ದರೆ ನಿಮ್ಮ ಪ್ರತ್ರಿಕ್ರಿಯೆಯಲ್ಲಿ ಬರೆಯಲು ಮರೆಯಬೇಡಿ.