ತಾಜಾ ಮಹಲ್ – ಸುದರ್ಶನ ಗುರುರಾಜರಾವ್ ಬರೆದ ಕವಿತೆ

ದಿನ ರಾತ್ರಿಯು ಸ್ವಪ್ನದಲ್ಲಿ
ಮಮತಾಜಳು ನಗೆಯ ಚೆಲ್ಲಿ
ತಾಜಮಹಲು ಬಳಿಗೆ ನೀನು ಬಾರೊ ಎನ್ನುತ
ಆಗ್ರಹವನು ಮಾಡಲಾಗಿ
ನಿಗ್ರಹವನು ವಿಜಯ ನೀಗಿ
ಒಂದು ದಿನ ಹೊರಡಲೆಂದು ಸಿದ್ಧನಾಗುತ

ಮಡದಿಗದನು ಹೇಳದಂತೆ
ಹೆಜ್ಜೆ ಕಳ್ಳ ಬೆಕ್ಕಿನಂತೆ
ಇಡುತ ತನ್ನ ಗಂಟು ಮೂಟೆ ಕಟ್ಟತೊಡಗಿದ

ವಿಜಯನ ನಡವಳಿಕೆ ಕಂಡು
ಮಡದಿ ಅನುಮಾನಗೊಂಡು
ಅವನ ಬೆನ್ನ ಬಿಡದೆ ಹಿಂದೆ ಸುತ್ತ ತೊಡಗಲು
ಇರಿಸು ಮುರಿಸು ಮಾಡಿಕೊಂಡು
ಗುಟ್ಟು ಜತನ ಕಾಯ್ದುಕೊಂಡು
ಸಮಜಾಯಿಶಿ ವಿಜಯ ಮನದೆ ಹೊಸೆದುಕೊಳ್ಳಲು

ಎಲ್ಲಿಗೀಗ ತಮ್ಮ ಪಯಣ
ಎನ್ನ ನಯನದಲ್ಲಿ ನಯನ
ಇಟ್ಟು ನಿಜವ ನುಡಿಯಿರೆಂದು ಜೋರು ಮಾಡಲು

ಕಛೇರಿ ಕೆಲಸ ನನಗೆ ಉಂಟು
ದೂರದೂರಿಗೆಂದು ಗಂಟು
ಕಟ್ಟುತಿರುವೆ ಬರಲು ವಾರ ಬೇಕು ಎನ್ನುತ
ಹೊರಟು ನಿಂತ ವಿಜಯ ಅಂದೆ
ಕರೆದೊಯ್ಯುವೆ ನಿನ್ನ ಮುಂದೆ
ಎನುತ ರಮಿಸಿ ಮಡದಿಯನ್ನು ಬೀಳುಕೊಳ್ಳುತ

ದೂರದಲ್ಲಿ ತಾಜಮಹಲು
ಕಣ್ಣಳತೆಗೆ ಕಾಣುತಿರಲು
ವಿಜಯ ತಾನೆ ಶಹಜಹಾನನಂತೆ ಬೀಗುತ
ಅಂಗಿಹೋಗಿ ಕುರ್ತವಾಯ್ತು
ತಲೆಗೆ ಗರಿಯ ಪೇಠ ಬಂತು
ಕೈಯ್ಯಲೊಂದು ಚೆಂಗುಲಾಬಿ ಹೂವು ಹಿಡಿಯುತ

ಕೊಟ್ಟ ಭಾಷೆ ಮೀರದಂತೆ
ಬಂದೆ ನಿನ್ನ ಅಣತಿಯಂತೆ
ನಿನ್ನ ಒಲವು ನನಗೆ ಈಗ ಬೇಕು ಎನ್ನುತ

ಮಮತಾಜಳ ಬಳ್ಳಿ ನಡುವ
ಬಳಸೆ ಕೈಯ್ಯ ಚಾಚಿದನವ
ಪಕ್ಕದಿ ಮಲಗಿದ್ದ ಸೀತೆ ಮುಖಕೆ ತಾಕಲು
ನಿದ್ರೆಯಲ್ಲಿ ಮಾತ ಕೇಳಿ
ಬಳಿಕ ಮುಖಕೆ ಹಸ್ತ ತಗುಲಿ
ಮಗ್ಗುಲು ಬದಲಿಸಿದ ಸೀತೆ ಎಚ್ಚರಾಗಲು

ಸ್ಲೋ ಮೋಷನ್ ಮೂವಿಯಂತೆ
ಗಾಳಿಯಲ್ಲಿ ತೇಲುವಂತೆ
ಕಾಲು ಕೈಯ್ಯನಾಡಿಸುತ್ತ ಮಡದಿಗೊದೆಯಲು
ಮೊದಲು ಮಾತು ಕೇಳುತಿತ್ತು
ಇದೇನಿಂಥ ಒದೆತ ಬಿತ್ತು
ಎಂದು ಸೀತೆ ನಿದ್ರೆಯಿಂದ ಎದ್ದು ನೋಡಲು

ಹಾವ ಭಾವ ಮಾಡಿಕೊಂಡು
ಜೊ.. ವಾ..ದಾ ಕಿ.ಯಾ ಎಂದು
ಕನಸು ಕಾಣುತಿದ್ದ ವಿಜಯ ತನಗೆ ಕಾಣಲು
ಮಮತಾಜಳ ಹೆಸರು ಕೇಳಿ
ಕೆಟ್ಟ ಕುತೂಹಲವು ಕೆರಳಿ
ಕನಸಿನಾಟವನ್ನು ಸೀತೆ ಗಮನಿಸುತಿರಲು

ಸಿಟ್ಟು ಪಿತ್ತ ನೆತ್ತಿಗೇರಿ
ಸದ್ದು ಮಾಡದೊಳಗೆ ಸೇರಿ
ಚೊಂಬಿನಲ್ಲಿ ನೀರ ತಂದು ಮೇಲೆ ಸುರಿಯಲು
ಕೋಪ ತಣ್ಣಗಾಗದಿರಲು
ಮತ್ಸರವದು ಎದೆಯ ಸುಡಲು
ಖಾಲಿ ಚೊಂಬಿನಿಂದ ತಲೆಗೆ ಹಾಕಿ ಕುಕ್ಕಲು

ಕನಸೆ ನಿಜವು ಎಂದುಕೊಂಡು
ರಸದನುಭವ ಮನದಿ ಉಂಡು
ನಲಿಯುತಿದ್ದ ವಿಜಯ ಧಿಗ್ಗನೆದ್ದು ಕೂಡಲು
ನಿಶೆಯು ಜರ್ರನೆಂದು ಇಳಿದು
ವಾಸ್ತವತೆಯು ಮನದಿ ಸುಳಿದು
ಕಣ್ಣನುಜ್ಜಿಕೊಂಡು ತಲೆಯನೆತ್ತಿ ನೋಡಲು

ಮಮತಾಜಳ ಜಾಗದಲ್ಲಿ
ಮಡದಿ ಮುಖವು ಕಂಡಿತಲ್ಲಿ
ಕೆಂಡದಂಥ ಕಣ್ಣ ದೃಷ್ಟಿ ಕಂಡು ನಲುಗುತ
ಮೂತಿಯನ್ನು ತಿವಿಸಿಕೊಂಡು
ಮಂಗ ಮುಖವ ಮಾಡಿಕೊಂಡು
ತಡಬಡಾಯಿಸಿ ಮಾತನಾಡೆ ತಾನು ತೊದಲುತ

ಕದ್ದು ಹಾಲು ಕುಡಿದ ಬೆಕ್ಕು
ಮನೆಯಾಕೆಯ ಕೈಗೆ ಸಿಕ್ಕು
ಥಳಿಸಿಕೊಂಡು ನೀರ ಮೇಲೆ ಸುರಿಸಿಕೊಂಡೊಲು
ಕನಸಿನ ಸವಿ ಮಂಡಿಗೆ
ನನಸಿನ ಬಿಸಿ ತುಪ್ಪವಾಗೆ
ಬಾಯಿ ಸುಟ್ಟ ಬೆಕ್ಕಿನಂತೆ ಮೂತಿಮಾಡಲು

ಮಂಚದಿಂದ ಇಳಿಯಿರೆಂದು
ಹರುಕು ಚಾಪೆಯೊಂದ ತಂದು
ಕಲ್ಲಿನಂಥ ದಿಂಬು ಕೊಡುತ ಹೊರಗೆ ನೂಕಲು
ಜಗುಲಿ ಮೇಲೆ ವಿಜಯ ಮಲಗಿ
ಚಳಿಗೆ ದೇಹ ನಡುಗಿ ನಲುಗಿ
ಹರುಷಗೊಂಡ ಸೊಳ್ಳೆ ಅಲ್ಲಿ-ಇಲ್ಲಿ ಕಚ್ಚಲು

ಉರಿತ ಕೆರೆತ ತಾಳದಾಗಿ
ಕೊರೆವ ಚಳಿಯ ಸಹಿಸದಾಗಿ
ಜಗುಲಿಮೇಲೆ ತಕತಕನೆ ವಿಜಯ ಕುಣಿಯಲು
ಕರೆಯಿರಿ ಮಮತಾಜಳನ್ನು
ಓಡಿಸಲಿ ಸೊಳ್ಳೆಗಳನು
ಕಾಯುತಿರುವೆ ನಿಮ್ಮ ಸರಸ ನೋಡಿ ತಣಿಯಲು!!

ಇರುವ ಸುಖವ ಬಿಟ್ಟುಕೊಟ್ಟು
ಸಿಗದ ರಾಣಿಗಾಸೆಪಟ್ಟು
ಮರುಳು ಹಿಡಿದ ತನ್ನ ಬುದ್ಧಿ ಶಪಿಸಿಕೊಳ್ಳುತ
ಮಮತಾಜಳ ಮುಖವೆ ಕಾಣೆ
ಸೀತೆ ನೀನೆ ನನ್ನ ಜಾಣೆ
ಬಾಗಿಲನ್ನು ತೆಗಿಸೆ ರಮಿಸಿ ತಾಜಾ ಮಾಡುತ

ಬಾಗಿಲನ್ನು ಬಿಡದೆ ಬಡಿದ
ಕಿಟಕಿಯಲ್ಲಿ ಕೈಯ್ಯ ಮುಗಿದ
ಮಹಲಿನೊಳಗೆ ಬಿಟ್ಟುಕೊಳಲು ಕಾಡಿ ಬೇಡಿದ
ಅಷ್ಟರಲ್ಲಿ ಬೆಳಕು ಹರಿದು
ಸೀತೆ ಕೋಪ ತಾಪ ಇಳಿದು
ಗಂಡ ಹೆಂಡಿರವರ ಜಗಳ ಸೂರ್ಯ ಮುಗಿಸಿದ.

(ಕನ್ನಡ ಬಳಗ, ಯುಕೆ, ಯ ಯುಗಾದಿ ಸಮಾರಂಭದ `ಹಾಸ್ಯಕವಿಗೋಷ್ಠಿಯಲ್ಲಿ ಓದಬೇಕಾಗಿದ್ದ ಕವನ, ಸಮಯಾಭಾವದಿಂದ ಓದಲಾಗಲಿಲ್ಲ)

 

ಮ್ಯಾಂಚೆಸ್ಟರಿನಲ್ಲಿ ನಡೆದ ಕನ್ನಡ ಹಾಸ್ಯ ಕವಿಗೋಷ್ಠಿ – ಸುಹಾಸ ಕರ್ವೆ ವರದಿ

Gangavati Pranesh
ಗಂಗಾವತಿ ಪ್ರಾಣೇಶ

ಅಲ್ಪಪ್ರಾಣ, ಮಹಾಪ್ರಾಣ  ಉಪಯೋಗಿಸಿ  ಅಲ್ಪಮತಿಗೆ   ತೋಚಿದಷ್ಟು, ಕಲ್ಪಿಸಿದಷ್ಟು  ಬರೆದ  ಕವನಗಳ  ಕವಿಗೋಷ್ಟಿಗೆ ವಿಮರ್ಶಕರಾಗಿ  ‘ಪ್ರಾಣೇಶ’ ಎಂಬ  ಮಹಾಕಲಾವಿದ   ಲಭಿಸಿದ್ದು   ಕವಿತೆಗಳ  ಕಲ್ಪಿತ   ಭಾವಗಳಿಗೆ    ‘ಪ್ರಾಣ’   ದೊರಕಿದ್ದೇ   ಸೈ!!

‘ಪ್ರಾಣೇಶ’   ಅವರ   ಮಾತು, ಅವರ   ಶೈಲಿ. ಅವರ   ವಿಮರ್ಶೆ   ಎಷ್ಟು   ಪ್ರಭಾವ   ಬೀರಿದೆ   ಎಂದರೆ, ಪ್ರತಿಯೊಂದು ಸಾಲಿನಲ್ಲಿ   ‘ಪ್ರಾಣ’ಕ್ಕೆ  ಅನುಗುಣವಾದ   ಶಬ್ದಗಳನ್ನು   ನನ್ನ   ಲೇಖನಿ   ಹುಡುಕುತ್ತಿದೆ, ತವಕಿಸುತ್ತಿದೆ.   ಪ್ರಾಣೇಶರವರ   ಶೈಲಿಯಲ್ಲಿ   ಹೇಳುವುದಾದರೆ,  “ಸಾಕೋಪಾ, ಇಷ್ಟಸರ್ತಿ ‘ಪ್ರಾಣ’ ‘ಪ್ರಾಣ’  ಅಂತ   ಬರದ್ರ   ನನ್ನ   ಹೆಸರ   ಬರೆ   ‘ಈಶ’ ಅಂತ   ಉಳದೊಕೈತ್ ನೋಡು!!!”

ಡಾ|| ರಾಮಾಶರಣರವರು ಕಾರ್ಯಕ್ರಮವನ್ನು ತುಂಬಾ ಚಾಕಚಕ್ಯತೆಯಿಂದ ನಿರೂಪಿಸಿದರು. ಮಹಾಕಲಾವಿದನ ಪಕ್ಕದಲ್ಲಿ ಕೂತು, ಆಂಗ್ಲ ಅಧಿಕಚಾಲ್ತಿಯಲ್ಲಿರುವ ನಿಮ್ಮ ಉದ್ಯೋಗ ಹಾಗೂ ಈ ಕಾಲದಲ್ಲಿ, ‘ಸಕಾಲ’ದಲ್ಲಿ ‘ಸೂಕ್ತ’ ಕನ್ನಡ ಶಬ್ದಗಳನ್ನು ಪ್ರಯೋಗಿಸಿದ್ದು ನಿಜಕ್ಕೂ ಶ್ಲಾಘನೀಯ.

ಕಾರ್ಯಕ್ರಮ ಆರಂಭವಾಗಿದ್ದು ನಮ್ಮ ವೇದಿಕೆಯ ಕಿರು-ಪರಿಚಯದೊಂದಿಗೆ. ನಮ್ಮ ವೇದಿಕೆಗೆ ಪಿತೃ ಸಮಾನರಾದ ಕೈ. ಡಾ|| ರಾಜಾರಾಮ ಕಾವಳೆರವರಸ್ಮರಿಸಿ, ಅವರ ಲೇಖನಿಯ ‘ಸತಿಯ ಹಾಡು’ ಕವಿತೆಯನ್ನು ಡಾ|| ಉಮಾರವರು ಮೂಲ ಭಾವಕ್ಕೆ ನ್ಯಾಯ ದೊರಕಿಸಿ ‘ಪ್ರತಿಭಾ’ವಂತ ಸಾಹಿತಿಗೆ ಸೊಗಸಾದ’ಸಂಗೀತ’ ನೀಡಿದಂತೆ ಓದಿದರು. ಪ್ರಾಣೇಶರವರು ಕವಿತೆಯನ್ನು ಭಾವಗೀತೆಗೆ ಹೋಲಿಸಿದ್ದು ಅದಕ್ಕೆ ಸಿಕ್ಕ ನಿಜ ಬಹುಮಾನ.

ಡಾ|| ದೇಸಾಯಿ ಅವರು ತುಂಬಾ ಅಚ್ಚುಕಟ್ಟಾಗಿ, ಇಂಗ್ಲೆಂಡ್ನಲ್ಲಿ ಸಹಜವಾಗಿ ಪೇಚಿಗೆ ಬೀಳುವಂತಹ ಸಂಗತಿಯ ಆಧಾರಿಸಿ ಬರೆದ ‘ಏನ್ರೀ!!’, ಎಲ್ಲ ಶ್ರೋತ್ರರಿಗೆಹೋ! ಹೋ! ಹೌದಲ್ಲವೇ ಎಂಬ ಸಹಜ ಭಾವನೆ ಮೂಡಿಸಿದಂತಹ ಕವಿತೆ. ‘ಪ್ರಾಣೇಶ-ಮಂಗಣ್ಣರು’ ತುಂಬಾ ಸೊಗಸಾಗಿ ಮೂಡಿಬಂದು, ಕೇಳುಗರಲ್ಲಿಸಹಜ ನಗು ಅರಳಿಸಿತು.

ಡಾ|| ಹಂಪಾಪುರ ಬರೆದ ಚಿಕ್ಕ-ಚೊಕ್ಕ ಕವಿತೆ ಈ ಕಾಲದ ಸಣ್ಣ ಕವಿತೆಗಳ ಅಗತ್ಯತೆಯನ್ನು ಎತ್ತಿ ತೋರಿಸಿತು. ಪ್ರಾಣೇಶರವರು ಕೂಡ ಈ ಮಾತಿಗೆ ಸೈಎಂದಿದ್ದು, ಡಾ|| ಹಂಪಾಪುರ ಅವರಿಗೆ ‘ಬೆನ್ನು ತಟ್ಟಿದ’ ಅನುಭವ ನೀಡಿತು ಎಂದರೆ ಅತಿಶಯೋಕ್ತಿಯಾಗಲಾರದು.

ವೈದ್ಯನ ವ್ಯಥೆಯನ್ನು ಡಾ|| ರಾಮಶರಣರವರು ಓದಿದಾಗ ನಮ್ಮಂತಹ ವೈದ್ಯರಲ್ಲದವರಿಗೆ ಅವರ ಮನೋವ್ಯಥೆಗಳ ಬಗ್ಗೆ ಪರಿಚಯವಾಯಿತು. ‘ಆರಾಮಹರಾಮ್ ಹೈ’ ಎಂಬ ಹಿಂದಿ ನಾಣ್ಣುಡಿಯನ್ನು ತುಂಬಾ ಚಾಣಕ್ಷವಾಗಿ ಬರೆದಿದ್ದಾರೆ ಡಾ|| ರಾಮಶರಣರವರು.

ಡಾ|| ಕೇಶವರವರು ಬರಲು ಅನಿವಾರ್ಯ ಕಾರಣಗಳಿಂದ ತಡವಾಯಿತು. ಅವರು ಬರೆದ ‘ಫೇಸ್ ಬುಕ್’ ಕವಿತೆ  ಡಾ|| ರಾಮಶರಣರವರು ತುಂಬಾ ಸೊಗಸಾಗಿ ಡಾ|| ಕೇಶವ ಅವರು ದೈಹಿಕವಾಗಿ ಅಲ್ಲಿರದಿದ್ದರೂ ತಾರ್ಕಿಕವಾಗಿ ಅಲ್ಲಿರುವಂತೆ ಓದಿದರು. ಇಂದಿನ ಆನ್‌ಲೈನ್ ಅಂಟನ್ನು ಭಾರೀ ಸೊಗಸಾಗಿ ವರ್ಣಿಸಿದ್ದಾರೆಈ ಕವಿತೆಯಲ್ಲಿ.

ಡಾ|| ಶಿವಪ್ರಸಾದ ಬರೆದ ‘ಸ್ಕಾಚ್ ವಿಸ್ಕೀ’ ಸುರಪಾನ ಮಾಡುವವರಿಗೆ ನೀಡಿದ ಹಸಿರು ನಿಶಾನೆ ಹಾಗೆ. ತುಂಬಾ ಸೊಗಸಾಗಿ ಮೂಡಿಬಂದ ಈ ಕವಿತೆ,ಹೆಂಡತಿಯನ್ನು ಚೆಲುವಾಗಿಸುವ ಪ್ರಾಣೇಶರ ಸೂಚನೆ ಸಭಿಕರನ್ನು ಬಹುಸಮಯದವರೆಗೆ ನಗೆಹೊನಲಲ್ಲಿ ತೇಲಾಡಿಸಿತು!!

‘ಚಟ ಮಾಡುವವರಿಗೆ ಮಾತ್ರ’ ಎಂಬಂತೆ ಬರೆದ ಸುಹಾಸ ಕರ್ವೆ ಅವರ ಕವಿತೆ, ಇನ್ನೂ ಹೇಗೆ ಮೊನಚಾಗಿಸಬಹುದು ಎಂಬ ಪ್ರಾಣೇಶರ ವಿಮರ್ಶೆ ‘ಮರಎತ್ತರವಿದ್ದರೂ ಬೇರು ಭೂಮಿಯಲ್ಲೇ’ ಎಂಬಂತೆ ಅವರ ಸಹಜತೆಗೆ ಸಾಕ್ಷಿಯಾಗಿತ್ತು.

ಕಾರ್ಯಕ್ರಮ ಪ್ರಾಣೇಶರವರ ಕವಿತೆಗಳ ಬಗ್ಗೆ ಅಭಿಪ್ರಾಯ, ಕೆಲವು ಚುಟುಕು ಕವಿತೆಗಳು ಹಾಗೂ ಸೊಗಸಾದ ಮಾತಿನ ಶೈಲಿಯಿಂದ ಇನ್ನಷ್ಟು ಅರಳಿತು.

ಕಾರ್ಯಕ್ರಮದ ವಂದನೆಯನ್ನು ಡಾ|| ದಾಕ್ಷಾಯಣಿ ಚಿಕ್ಕದಾಗಿ ತುಂಬಾ ಸೊಗಸಾಗಿ ನಿರ್ವಹಿಸಿದರು. ನಮ್ಮ ಪರಿಶ್ರಮ, ಕಾರ್ಯದ ಶ್ಲಾಘನೆಯನ್ನು ಮುಕ್ತಕಂಠದಿಂದ ಹೊಗಳಿದ ಪ್ರಾಣೇಶ ಮತ್ತು ಮಹಾಮನಿ ಅವರಿಗೆ ನಮ್ಮೆಲ್ಲರ ಕೃತಜ್ಞತೆ.

ಈ ಬಾರಿಯ ಯುಗಾದಿ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ ‘ಅನಿವಾಸಿಗಳ ಅಂಗಳದಿಂದ’ ಪುಸ್ತಕದ ಬಿಡುಗಡೆ ಸಮಾರಂಭ. ಅವಿರತ ಶ್ರಮದಿಂದಈ ‘ಹೊತ್ತಿಗೆ’ಯನ್ನು  ಸರಿಯಾದ ‘ಹೊತ್ತಿಗೆ’ ಪ್ರಕಾಶಿಸಲು ಸಾಧ್ಯವಾಯಿತು. ಪ್ರತಿಯೊಬ್ಬರೂ ತಮ್ಮ ಲೇಖನಿ ರೂಪದಲ್ಲಿ ನೀಡಿದ ಕೊಡುಗೆ ಪುಸ್ತಕರೂಪದಲ್ಲಿ ಹೊರಬಂದಾಗ ಎಲ್ಲರ ಮುಖದಲ್ಲೂ ಒಂದು ಪರಿಪೂರ್ಣತೆಯ ಭಾವ ಗೋಚರಿಸುತಿತ್ತು.