ಯುಗಾದಿ ವಿಶೇಷ ಸಂಚಿಕೆ

ಸಂಪಾದಕರ ನುಡಿ…

ವರ್ಷದ ಆದಿಯಲ್ಲಿ ದಕ್ಷಿಣ ಭಾರತದ ಹಿಂದೂಗಳು ಆಚರಿಸುವ ಮೊದಲ ಹಬ್ಬ ಯುಗಾದಿ. ಈ ಹಬ್ಬ ಹೊಸವರ್ಷದ ಆಗಮನದ ಸಂಕೇತ.  ಅಸಂಖ್ಯಾತ ದೇವರು ದೇವತೆಗಳನ್ನೊಳಗೊಂಡ ನಮ್ಮ ಹಿಂದೂ ಧರ್ಮದಲ್ಲಿರುವ ಯಾವುದೇ ಒಂದು ದೇವರನ್ನು ಪ್ರಧಾನವಾಗಿ ಆರಾಧಿಸದೆ ಚೈತ್ರಋತುವನ್ನು ಹರ್ಷದಿಂದ ಆಗಮಿಸಿ ‘ಪ್ರಕೃತಿಯ ಪೂಜೆ’ ಮಾಡುವುದು ಈ ಹಬ್ಬದ ವಿಶೇಷ. ಇದು ಒಂದು ಆರೋಗ್ಯಕರ ಹಾಗು ಸೆಕ್ಕ್ಯುಲರ್ ಹಬ್ಬವೆಂದು ಪರಿಗಣಿಸಬಹುದು. ಹಾಗೆ ನಮ್ಮ ದಿನನಿತ್ಯ ಬದುಕಿನ ಕಷ್ಟ ಸುಖಗಳ ಪ್ರತೀಕವಾದ ಬೇವು ಬೆಲ್ಲವನ್ನು ಸವಿದು ಹಬ್ಬ ಆಚರಿಸುವುದು ಬಹಳ ಅರ್ಥಪೂರ್ಣವಾಗಿದೆ. ಈ ಹಬ್ಬದ ಚೈತನ್ಯ ಮನೆಯೊಳಕ್ಕೆ ಸೀಮಿತವಾಗದೆ ಮನೆ ಹೊರಗೆ ಹಸಿರು ತೋರಣ ಕಟ್ಟುವುದು ರಂಗು ರಂಗಿನ ರಂಗೋಲಿ ಹಾಕುವುದನ್ನು ಒಳಗೊಂಡಿದೆ. ಎಣ್ಣೆ ಸ್ನಾನ ಮಾಡಿ ಹೋಳಿಗೆ ಊಟಮಾಡಿ ಒಬ್ಬರಿಗಿನ್ನೊಬ್ಬರು  ಉಡುಗರೆ ಕೊಡುವುದು ಹೀಗೆ ಅನೇಕಾನೇಕ ಸಂಭ್ರಮಗಳು ಸೇರಿಕೊಂಡಿವೆ.

ಚೈತ್ರಮಾಸದಲ್ಲಿ ಮಬ್ಬು ಸರಿದು, ಪ್ರಕೃತಿಯಲ್ಲಿನ ಜಡತೆ ಕಳೆದು ಎಲ್ಲೆಲ್ಲೂ ಹಸಿರು ಚಿಗುರಿ, ಹೂವು ಅರಳಿ ಹೊಸ ಭರವಸೆಯನ್ನು ಮೂಡಿಸುವ ಸಂಕೇತ ಯುಗಾದಿ ಹಬ್ಬ. ಈ ಹಬ್ಬದ ಒಂದು ಚೈತನ್ಯವನ್ನು ಜಿ.ಎಸ್.ಎಸ್ ಅವರ ‘ಯುಗಾದಿಯ ಹಾಡು’ ಎಂಬ ಕವನದಲ್ಲಿ ಕಾಣಬಹುದು. ಆಯ್ದ ಕೆಲವು ಸಾಲುಗಳು ಹೀಗಿವೆ:

ಹಳೆ ನೆನಪುಗಳುದುರಲಿ ಬಿಡು ಬೀಸುವ ಛಳಿ ಗಾಳಿಗೆ

ತರಗೆಲೆಗಳ ಚಿತೆಯುರಿಯಲಿ ಚೈತ್ರೋದಯ ಜ್ವಾಲೆಗೆ

ಹೊಸ ಭರವಸೆಗಳು ಚಿಗುರುತಲಿವೆ ಎಲೆಉದುರಿದ ಕೊಂಬೆಗೆ

ಅರಳಿನಗುವ ಹೊಗಳಲ್ಲಿ ಪುಟಿಯುತಲಿವೆ ನಂಬಿಕೆ

ಈ ಯುಗಾದಿ ವಿಶೇಷ ಸಂಚಿಕೆಯಲ್ಲಿ ನನ್ನ ಒಂದು ಕವನ, ರಾಮ್ ಶರಣ್ ಅವರು ರಂಗೋಲಿ ಹಾಗೆ ದಾಕ್ಷಾಯಿಣಿ ಅವರು ಒಬ್ಬಟ್ಟಿನ ಮೇಲೆ ಬರೆದ ಕಿರು ಲೇಖನಗಳನ್ನು ಪ್ರಕಟಿಸುತ್ತಿದ್ದೇವೆ. ನಿಮಗೆಲ್ಲ ಯುಗಾದಿಯ ಶುಭಾಶಯಗಳು. ಸಂ

***

ರಂಗೋಲಿ  ರಾಮ್ ಶರಣ್ ಅವರ ಕಿರು ಲೇಖನ 

ಚುಕ್ಕೆ ಚುಕ್ಕೆ ಚಿತ್ತಾರ
ಹೊಸಲೆದುರಿನ ಮಂದಾರ
ಕೊನೆ ಮೊದಲಿಲ್ಲದ ಬಳ್ಳಿ
ಸುತ್ತಿ ಬಿಡಿಸಿದೆವಂದು  ಅಂಗಳದಲ್ಲಿ
ರಂಗವಲ್ಲಿ

ಹಬ್ಬವೆಂದರೆ ಸಡಗರ. ನಸುಕಲ್ಲೆದ್ದು, ಅಂಗಳ ಗುಡಿಸಿ, ಜಳಕ ಮುಗಿಸಿ, ಹೊಸಲು ತೊಳೆದು ಎರೆಯುವ ರಂಗೋಲಿ ಭಾರತೀಯರ ಜನ ಜೀವನದಲ್ಲಿ, ಮಾಡುವ ಶ್ವಾಸೋಚ್ಛಾಸದಷ್ಟೇ ಹಾಸು ಹೊಕ್ಕಾಗಿದೆ. ಇಂದು ನಮಗೆ ರಂಗೋಲಿ ಬಾಲ್ಯದ ಸವಿ ನೆನಪನ್ನು ಮರುಕಳಿಸುವ ಸಾಧನ. ಪ್ರತೀ ವಾರ ಪತ್ರಿಕೆಗಳಲ್ಲಿ ಬರುವ ಚುಕ್ಕೆಯ ಚಿತ್ತಾರಗಳನ್ನು ನೋಟ್ ಪುಸ್ತಕಗಳಲ್ಲಿ ನಕಲು ಮಾಡಿ, ಹಬ್ಬ-ಹರಿದಿನಗಳಂದು ಅಂಗಳದಲ್ಲಿಯೋ, ದೇವರ ಕೋಣೆಯ ಎದುರೋ ಬಿಡಿಸಿ, ಬಣ್ಣ ತುಂಬಿ ಖುಷಿ ಪಟ್ಟಿದ್ದನ್ನು ನೆನೆಸಿದರೆ ಮೈ ಇಂದಿಗೂ ನವಿರೇಳುತ್ತದೆ. ಕೆಲವೇ ಚುಕ್ಕೆಗಳನ್ನಿಟ್ಟು, ಚುಕ್ಕೆಗಳ ಸುತ್ತ ಲೀಲಾಜಾಲವಾಗಿ ರೇಖೆಗಳನ್ನು ಸುತ್ತಿ ಸರಳ ಮಾದರಿಯ ರಂಗೋಲಿ ಬಿಡಿಸುತ್ತಿದ್ದ ಅಜ್ಜಿಯ ಕೈ ಮಂತ್ರ ದಂಡವೋ ಎಂದು ಬೆಕ್ಕಸ ಬೆರಗಾಗುತ್ತಿದ್ದೆ! ಅವಳ ರಂಗೋಲಿಗೆ ಬೇಕಿದ್ದಿದ್ದು ಸೀಮೆಸುಣ್ಣ ಹಾಗು ಒಂದು ತುಂಡು ಜಾಗ ಅಷ್ಟೇ. ಈ ಮಾದರಿಯ ಕಲೆ ನೋಡಿ ಬೆಳೆದ ನನಗೆ ಇಂದಿಗೂ ಚುಕ್ಕೆ ಚಿತ್ತಾರದ ರಂಗೋಲಿಯನ್ನು ಮೀರಿಸಿದ ರಂಗೋಲಿಯೇ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ.

 

 

(ಓಣಂ ವೈಶಿಷ್ಟ್ಯ ಪೂಕಳಂ)

ಭಾರತೀಯ ಚಿತ್ರಕಲೆಯ ಇತಿಹಾಸದ ಗ್ರಂಥ, ರಂಗೋಲಿಯ ಮೂಲವನ್ನು  ಪುರಾಣ ಕಾಲಕ್ಕೆ ಎಳೆಯುತ್ತದೆ. ಒಂದಾನೊಂದು ಕಾಲದಲ್ಲಿ ರಾಜ ಪುರೋಹಿತನೊಬ್ಬನ ಪುತ್ರಶೋಕವನ್ನು ನಿವಾರಿಸಲು ಬ್ರಹ್ಮ ಆ ಮಗುವಿನ ಚಿತ್ರ ಬರೆಯಲು ಹೇಳುತ್ತಾನೆ. ಆ ಯಥಾವತ್ತಾದ ಚಿತ್ರಕ್ಕೆ ಪುನಶ್ಚೇತನ ಕೊಟ್ಟಿದ್ದೇ  ರಂಗೋಲಿ ಹುಟ್ಟಿಗೆ ಕಾರಣವಾಯಿತಂತೆ. ಇದು ಅಂತೆ-ಕಂತೆಯಾದರೂ, ರಾಮಾಯಣ – ಮಹಾಭಾರತದ ಕಥೆಗಳಲ್ಲಿ ರಂಗೋಲಿಯ ವರ್ಣನೆ ಇದೆ. ರಂಗೋಲಿ – ರಂಗವಲ್ಲಿ ಕನ್ನಡದಲ್ಲಾದರೆ, ರಾಂಗೋಳಿ ಎಂದು ಮರಾಠಿ, ಅಲ್ಪನ ಎಂದು ಬಂಗಾಳದಲ್ಲಿ, ಚೌಕ್ ಪುರ್ ಎಂದು ಛತ್ತೀಸಘಡ್, ಚೌಕ್ ಪೂಜನ್ ಎಂದು ಯು.ಪಿ, ಮುಗ್ಗು ಎಂದು ಆಂಧ್ರದಲ್ಲಿ ಹೆಸರಾಗಿದೆ. ಹೆಸರಿನಲ್ಲಿ ಬಹುರೂಪಿಯಾದಂತೇ, ರಂಗೋಲಿ ಪುರಾತನ ಜಾನಪದ ಕಲೆಯಾಗಿ ನಿಂತ ನೀರಾಗದೆ,  ಚುಕ್ಕೆಯಾಚಿನ ಆಯಾಮವನ್ನಾವರಿಸಿ ತರಹೇವಾರಿ ರೂಪದಗಳಲ್ಲಿ ಬೆಳೆದಿದೆ. ಬಣ್ಣದ ಪುಡಿಯಲ್ಲಿ, ಧಾನ್ಯಗಳಲ್ಲಿ, ಹೂವಿನಲ್ಲಿ, ಹಣ್ಣಿನಲ್ಲಿ, ನೀರಿನಲ್ಲಿ ಹೀಗೆ ವಿವಿಧ  ಮಾಧ್ಯಮಗಳಲ್ಲಿ ಕಣ್ತಣಿಸುತ್ತಿದೆ.
***

ಉಗಾದಿಯ ಸಿಹಿ – ಶ್ರೀಮತಿ ದಾಕ್ಷಾಯಿಣಿ ಅವರ ಲೇಖನ. ಚಿತ್ರ ಗೂಗಲ್ ಕೃಪೆ

ಹಬ್ಬ, ಹಬ್ಬಕ್ಕೂ ಹೋಳಿಗೆ ಮಾಡಲಾಗದಿದ್ದರೂ, ಯುಗಾದಿಯ ಹಬ್ಬಕ್ಕೆ ಮಾತ್ರ ಎಲ್ಲರ ಮನೆಯಲ್ಲಿ ಹಬ್ಬದೂಟಕ್ಕೆ ಹೋಳಿಗೆಯೆ ಆಗಬೇಕು. ಬಡವ, ಶ್ರೀಮ೦ತರೆನ್ನುವ ಭೇಧವಿಲ್ಲದೆ, ಹೋಳಿಗೆ ಅ೦ದು ಎಲ್ಲರ ಅಡಿಗೆಮನೆಯಲ್ಲಿ ಅವತರಿಸುತ್ತದೆ . ಅದರಲ್ಲೂ ಬೆಲ್ಲ, ಬೇಳೆಯ ಹೋಳಿಗೆಯೇ ಆಗಬೇಕು. ಅಮ್ಮ ಬೇಗನೆದ್ದು, ಸ್ನಾನ ಮಾಡಿ ಶುರುಮಾಡುವ ಮೊದಲ ಕೆಲಸವೆ೦ದರೆ ಬೇಳೆ ಬೇಯಿಸಲು ಇಡುವುದು. ಚಿಕ್ಕವರಿದ್ದಾಗ ನಮಗೆ ಸಣ್ಣ ಉ೦ಡೆ ಬೆಲ್ಲವನ್ನು ಕುಟ್ಟಿ ಪುಡಿ ಮಾಡುವ ಕೆಲಸ ಸಿಗುತ್ತಿತ್ತು. ಬಾಯಿ ಸಿಹಿ ಮಾಡಿಕೊ೦ಡು, ಕೈಕೆಲಸ ಮಾಡುತ್ತಾ ಇದ್ದುದು ನೆನಪಿಗೆ ಬರುತ್ತದೆ. ಮಕ್ಕಳು ಏಳುವ ವೇಳೆಗಾಗಲೆ ಯುಗಾದಿಯ ದಿನ ಮನೆ ತು೦ಬಾ ಹೊರಣದ ವಾಸನೆ. ದೇವರ ಪ್ರಸಾದಕ್ಕೆ೦ದು ಸ್ವಲ್ಪ ತೆಗೆದಿಟ್ಟ ನ೦ತರ, ಕಾಯಲು ತಯಾರಿಲ್ಲದ ಮಕ್ಕಳಿಗೆ ಹೊರಣದ ಉ೦ಡೆಗಳು, ಬೇಳೆಬೆಲ್ಲ ತಿನ್ನಲು ಸಿಗುತ್ತಿತ್ತು.

ಹೋಳಿಗೆ ಒ೦ದೇ ಆದರೂ ತಿನ್ನುವ ಪರಿ ಬೇರೆ, ಬೇರೆ. ಕೆಲವರು ತುಪ್ಪ, ಪುಟ್ಟಬಾಳೆಯ ಜೊತೆ ತಿ೦ದರೆ, ತೆ೦ಗಿನ ನಾಡಿನವರಿಗೆ ಹಸಿಕಾಯಿ ರುಬ್ಬಿ ತೆಗೆದ ರಸದ ಜೊತೆ ತಿ೦ದು ಅಭ್ಯಾಸ. ದಾವಣಗೆರೆಯ ಜನರಿಗೆ ಮಾವಿನಹಣ್ಣಿನ ಸೀಕರಣೆ ಜೊತೆಗಿರಲೇ ಬೇಕು.

ಹೋಳಿಗೆ ಒ೦ದು ರೀತಿಯಲ್ಲಿ ” ಮುಖ್ಯ ಅಥಿತಿ” ಯ ತರಹ. ಜೊತೆಗೆ ಪಲ್ಯ, ಕೋಸ೦ಬರಿ, ಚಿತ್ರಾನ್ನ, ಅನ್ನಸಾರು, ಹಪ್ಪಳ ಇನ್ನೂ ಮು೦ತಾದ ಅಡಿಗೆಯ ಮಧ್ಯೆ ಎಲೆಯ ಮೇಲೆ ಅದಕ್ಕೆ ಮುಖ್ಯ ಸ್ಥಾನ. ಕೆಲವರಿಗೆ ಹೋಳಿಗೆಗಿ೦ತ, ಹೋಳಿಗೆ ಸಾರಿನ ಮೇಲೆ ಅತಿ ಪ್ರೀತಿ. ಕುದಿಸಿದ ಸಾರನ್ನು ೩-೪ ದಿನ ಒ೦ದೇ ಸಮನೆ ಆಸ್ವಾದಿಸುತ್ತಾರೆ. ಹೋಳಿಗೆಯ ಊಟವಿಲ್ಲದೆ ಉಗಾದಿಯಿಲ್ಲ.

ಈಗೆಲ್ಲ, ಅ೦ಗಡಿಗಳಲ್ಲಿ, ಹೋಟೆಲ್ ಗಳಲ್ಲಿ ವಿವಿಧ ಬಗೆಯ ಹೋಳಿಗೆ ಸಿಗುತ್ತಿದೆ. ಬೆಲ್ಲದ, ಸಕ್ಕರೆಯ, ಕೊಬ್ಬರಿಯ, ಎಳ್ಳಿನ, ಕಡಲೆಬೀಜದ, ಖರ್ಜೂರದ ಇನ್ನೂ ಮು೦ತಾದ ಬಗೆಬಗೆಯ ಹೋಳಿಗೆ ಲಭ್ಯ. ನಗರಗಳಲ್ಲಿ ಬಹಳ ಮನೆಗಳಲ್ಲಿ ಹೋಳಿಗೆ ಮಾಡುವ ತೊ೦ದರೆ ಈಗ ತೆಗೆದುಕೊಳ್ಳುವುದಿಲ್ಲ. ಬೆ೦ಗಳೂರಿನ ನನ್ನ ಸ್ನೇಹಿತೆ ಪೊರ್ತಿ ಹಬ್ಬದ ಅಡಿಗೆಯನ್ನೆ, ಮತ್ತೊಬ್ಬರ ಮನೆಯಿ೦ದ ಖರೀದಿಸಿ ನಮಗೆ ಉಣಬಡಿಸಿದ್ದಳು, ಬಹಳ ಚೆನ್ನಾಗಿಯೆ ಇತ್ತು. ಕಾಲಕ್ಕೆ ತಕ್ಕ೦ತೆ ಬದಲಾಗುವುದು ಜೀವನದಲ್ಲಿ ಅವಶ್ಯಕ ಮತ್ತು ಜಾಣತನ.

ಬೆಳಿಗ್ಗೆ ಎದ್ದಾಗ, ಮನೆ ತು೦ಬಿದ ಬೆಲ್ಲದ ವಾಸನೆ, ರೆಡಿಯೋದಲ್ಲಿ ” ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಎನ್ನುವ ಇ೦ಪಾದ ಗಾನ, ಪೊಜೆ ಮುಗಿಯಲು ಕಾಯ್ವ ಹಸಿದ ಹೊಟ್ಟೆಯ ಸಿಟ್ಟು, ಇದೆಲ್ಲ ನನ್ನ ಬಾಲ್ಯದ ಯುಗಾದಿಯ ನೆನಪು. ನಮ್ಮ ಚಿ೦ತೆಗಳು, ನೆನಪುಗಳು ಎನೇ ಇರಲಿ, ನಾವು ಎಲ್ಲೇ ಇರಲಿ, ಪ್ರತಿವರ್ಷ ಯುಗಾದಿ ಮರಳಿ, ಮರಳಿ ನಮ್ಮ ಜೀವನದಲ್ಲಿ ಹೆಜ್ಜೆಇಡುತ್ತದೆ, ಬನ್ನಿ ಹೊಸ ನೆನಪುಗಳನ್ನು ರಚಿಸೋಣ, ಹಬ್ಬದ ಸಿಹಿ ಸವಿಯೋಣ. ಯುಗಾದಿಯ ಶುಭಾಶಯಗಳು ನಿಮ್ಮೆಲ್ಲರಿಗೆ.

***

ಇಂಗ್ಲೆಂಡಿನಲ್ಲಿ ಯುಗಾದಿ – ಜಿ. ಎಸ್. ಶಿವಪ್ರಸಾದ್ ಅವರ ಕವನ

 

ಬೇವು ಬೆಲ್ಲಗಳಿಲ್ಲದ ನಾಡಲ್ಲಿ

ಬಿಟ್ಟರ್ ಬೀರ್ ಹೀರಿ,

ಚಾಕ್ಲೇಟ್ ಸಿಹಿಯನು ಸವಿದು

ಸಿಹಿ ಕಹಿಯನುಂಡು,

ನಾವೂ ಆಚರಿಸಿದೆವು ಯುಗಾದಿ

 

ಝಗ್ಗನೆ ಮೂಡುವ ಚೆರ್ರಿ ಹೂಗಳಲಿ

ಡ್ಯಾಫೋ ಡಿಲ್ಸ್ ನಯವಾಗಿ ನರ್ತಿಸುವಲ್ಲಿ

ಚೈತ್ರದ ಚಿಗುರು ಮೂಡುವಲ್ಲಿ ,

ನಾವೂ ಆಚರಿಸಿದೆವು ಯುಗಾದಿ

 

ಪೂಜೆ ಪುನಸ್ಕಾರಗಳು ಬೇಕಿಲ್ಲ

ಕಾಲ,ವಿಧಿ, ನಿಯಮಗಳಿಲ್ಲ

ಪ್ರಕೃತಿಯ ಈ ಉತ್ಸವವೇ

ನಮಗೆ ಯುಗಾದಿ

 

ಯುಗಾದಿ ವೇಳೆಯಲಿ

ಸ್ನೇಹಗಳು ಬೆಸೆಯುವಲ್ಲಿ

ವಾರಾಂತ್ಯದಲಿ  ಒಂದಾಗಿ

ಹೋಳಿಗೆ ಚಿತ್ರಾನ್ನಗಳ ಉಂಡು….

 

‘ಹ್ಯಾಪಿ ಯುಗಾದಿ’ಯೆಂದು ಕೈಕುಲಕಿ

ಮನೆ ದಾರಿ ಹಿಡಿಯುವ ಅನಿವಾಸಿಗಳು

ನಾವೂ ಆಚರಿಸಿದೆವು ಯುಗಾದಿ

***

 

 

 

 

 

 

 

 

 

 

 

’ಇರು ನೀ ಧನಾತ್ಮಕ, ಆಗುವುದು ಜೀವನ ಸಾರ್ಥಕ’ – ಸುಹಾಸ್ ಪುರುಷೋತ್ತಮ ಕರ್ವೆ ಬರೆದ ಲೇಖನ

(ಸುಹಾಸ್ ಪುರುಷೋತ್ತಮ ಕರ್ವೆ ನಮ್ಮ ಯುವ ಬರಹಗಾರರಲ್ಲಿ ಒಬ್ಬರು. ಅವರ ವೃತ್ತಿಯೇನೋ ಐ. ಟಿ ಸಂಬಂಧಿಸಿದ್ದು. ಇನ್ನೂ ಎಳೆಯ ಸಂಸಾರ. ಆದರೆ ಈ ಚಿಕ್ಕ (ಆದರೆ ಪ್ರಭುದ್ದ) ಬರಹದಲ್ಲಿ ಒಂದು ಉದಾಹರಣೆಯೊಂದಿಗೆ ಪ್ರವಚನದ ಛಾಯೆಯಲ್ಲಿ ಮನುಷ್ಯನಲ್ಲಿರಬಹುದಾದ ಎರಡು ತರಹದ ಒಂದಕ್ಕೊಂದು ತದ್ವಿರುದ್ಧವಾಗಿರುವ ಪ್ರವೃತ್ತಿಗಳ ಬಗ್ಗೆ ಹೇಳಿ, ಶ್ರೀಮದ್ ಭಗವದ್ಗೀತೆಯಲ್ಲ್ಲಿ ಹೇಳಿದ ಇಂದ್ರಿಯ, ಮನಸ್ಸು, ಬುದ್ಧಿ ಇವುಗಳ ನಿಯಂತ್ರಣ, ಮತ್ತು ವಿಭಿನ್ನ ವ್ಯಕ್ತಿತ್ವಗಳನ್ನು ಬೆಳಸುವದು ಇವುಗಳನ್ನು ಗಂಭೀರವಾಗಿ ಚರ್ಚಿಸಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಅವರು ಉದ್ಧರಿಸಿದ ಶ್ಲೋಕದ ಜೊತೆಗೆ ಭಗವದ್ಗೀತೆಯ ಮೊರೆ ಹೋಗಿ ಆ ಅಧ್ಯಾಯದ ೪೦-೪೩ರ ಶ್ಲೋಕಗಳನ್ನು ಅರಿತುಕೊಳ್ಳುವ ಪ್ರಯತ್ನ (ನನ್ನಂತೆ) ಮಾಡಬಹುದಲ್ಲ! ಕಳೆದ ವಾರ ದಾಕ್ಷಾಯಿನಿಯವರ ಲೇಖನದಲ್ಲಿ ತಮ್ಮ ಅನುಭವದ ಆಧಾರದ ಮೇಲಿನ ಒಂದು ಜಟಿಲ ಪ್ರಶ್ನೆ ಕೇಳಿ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದರು. ಅದು ಸಾಕಷ್ಟು ಆರೋಗ್ಯಕರವಾದ ಚರ್ಚೆಗೆ ಎಡೆಕೊಟ್ಟಿತಲ್ಲದೆ, ಸಾಕಷ್ಟು ಓದುಗರ ಪ್ರತಿಕ್ರಿಯೆಗಳಿಗೆ ಅನುವು ಮಾಡಿ ಕೊಟ್ಟಿತ್ತು. ಇಂದಿನ ಲೇಖನವೂ ನಿಮ್ಮಲ್ಲಿ ವಿಚಾರ ಪ್ರಚೋದನೆ ಮಾಡುವದರಲ್ಲಿ ಸಂಶಯವಿಲ್ಲ. ಭಾಗವಹಿಸಿ! ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.   -ಸಂ)

’ಇರು ನೀ ಧನಾತ್ಮಕ, ಆಗುವುದು ಜೀವನ ಸಾರ್ಥಕ’ 

ಪ್ರತಿಯೊಬ್ಬರಲ್ಲೂ ಎರಡು ವ್ಯಕ್ತಿತ್ವಗಳು ಇರುತ್ತವೆ. ಒಂದು ಯಾವಾಗಲೂ ‘ಧನಾತ್ಮಕ’ [Positive Thinking] ಯೋಚನೆ ಮಾಡುವ ವ್ಯಕ್ತಿತ್ವವಾದರೆ, ಇನ್ನೊಂದು ‘ಋಣಾತ್ಮಕ’ [Negative Thinking] ಭಾವನೆಯನ್ನು ತನ್ನ ಬತ್ತಳಿಕೆಯಲ್ಲಿ ಇರಿಸುವಂತಹ ವ್ಯಕ್ತಿತ್ವ.

ಈ ಎರಡು ವ್ಯಕ್ತಿತ್ವಗಳು ಹೇಗಿರಬಹುದು? ನಮ್ಮ ಮೇಲೆ ಅವುಗಳ ಪರಿಣಾಮಗಳು ಹೇಗಿರಬಹುದು? ಎಂಬ ಕುತೂಹಲದಲ್ಲಿ ಬರೆದ ನನ್ನ ಅಭಿಪ್ರಾಯಗಳು ಮತ್ತು ಅನಿಸಿಕೆಗಳು.

ಈ ಪ್ರಪಂಚಕ್ಕೆ ನಾವು ಕಾಲಿಟ್ಟಾಗ ಈ ಎರಡು ವ್ಯಕ್ತಿತ್ವಗಳು ಸಾಮಾನ್ಯವಾಗಿ ಒಂದೇ ಆಗಿರುತ್ತವೆ ಅಥವಾ ಅವುಗಳ ಸ್ವಭಾವಗಳು ಒಂದೇ ಆಗಿರುತ್ತವೆ. ಪ್ರಮುಖವಾಗಿ ಅವು ಎಂದಿಗೂ ‘ಧನಾತ್ಮಕ’ ಆಗಿರುತ್ತವೆ ಎನ್ನುವುದು ವಿಶೇಷ. ಈ ಉದಾಹರಣೆಗಳನ್ನೇ ಗಮನಿಸೋಣ. ಮಗು ತಪ್ಪು ಮಾಡಿದೆ ಎಂದಾಗ ಪೋಷಕರು ಬೈದು ಅದನ್ನು ತಿದ್ದಿ ಹೇಳುವುದು ಸಮಂಜಸ, ಕ್ಷಣಿಕ ಸಿಟ್ಟು ಆ ಮಗುವಿನಲ್ಲಿ ಮೂಡುವುದು ಕೂಡ ಅಷ್ಟೇ ಸಹಜ. ಅದನ್ನೇ ಮತ್ಸರವಾಗಿ ಮನಸ್ಸಿನಲ್ಲಿ ಶೇಖರಿಸದೆ, ಮುಕ್ತವಾಗಿ ಪೋಷಕರನ್ನು ಮತ್ತೆ ಪ್ರೀತಿಸುವುದು ಎಷ್ಟು ಚೆಂದ ಅಲ್ಲವೇ?
ಅಪ್ಪ ಏನೋ ಉಡುಗೊರೆ ತರುತ್ತಾರೆ ಎಂದು ಹೇಳಿ ತರಲು ಮರೆತರೆ ಸ್ವಲ್ಪ ಹೊತ್ತು ಕೋಪದಿಂದ ಸಿಂಡರಿಸಿಕೊಂಡು, ಅಪ್ಪ ಮತ್ತೆ ಉಡುಗೊರೆ ತಂದಾಗ ‘ನಿನ್ನೆ ತಂದಿಲ್ಲವಲ್ಲ ಇವತ್ತು ಬೇಡ’ ಎಂದು ತಿರಸ್ಕರಿಸದೆ, ಅಷ್ಟೇ ಸಲೀಸಾಗಿ ಮತ್ತೆ ಪ್ರೀತಿ, ಉತ್ಸಾಹದಿಂದ ಅದನ್ನು ಸ್ವೀಕರಿಸುವುದು ಎಷ್ಟು ಮುಗ್ಧತೆ ಅಲ್ಲವೇ?
ಸಿಟ್ಟು, ಮತ್ಸರ, ತಿರಸ್ಕಾರ ಇವುಗಳನ್ನೆಲ್ಲ ಶೇಖರಿಸದೆ ಎಷ್ಟು ಧನಾತ್ಮಕವಾಗಿ ಬೆಳೆಯುತ್ತಿರುತ್ತವೆ ಈ ಮುಗ್ಧ ಪುಟಾಣಿಗಳು. ದೊಡ್ಡವರಾಗುತ್ತಿದ್ದಂತೆ ಈ ಎಲ್ಲ ಗುಣಗಳನ್ನು, ವಿಷಯಗಳನ್ನು ಶೇಖರಿಸುತ್ತಾ ‘ಋಣಾತ್ಮಕ’ ವ್ಯಕ್ತಿತ್ವವನ್ನು ಅರಿವಿಲ್ಲದೆ ಬೆಳೆಸುತ್ತಿರುತ್ತೇವೆ.

ಎಲ್ಲಿಯವರೆಗೆ ‘ಧನಾತ್ಮಕ’ ವ್ಯಕ್ತಿತ್ವದ ಛಾಯೆ ‘ಋಣಾತ್ಮಕ’ ವ್ಯಕ್ತಿತ್ವದ ಮೇಲಿರುತ್ತದೆಯೋ ಅಲ್ಲಿಯವರೆಗೆ ಅದರ ದುಷ್ಪರಿಣಾಮಗಳು ಕಾಣಸಿಗುವುದು ಅತಿ ವಿರಳ ಇಲ್ಲವೇ ಶೂನ್ಯಕ್ಕೆ ಸಮ. ‘ಋಣಾತ್ಮಕ’ ವ್ಯಕ್ತಿತ್ವ ಮಿತಿಗಿಂತ ಹೆಚ್ಚು ಬೆಳೆದರೆ ಮಾತ್ರ ನಮ್ಮ ನಿರ್ಧಾರ, ನಮ್ಮ ವಿಚಾರ, ನಮ್ಮ ಮಾತು, ನಮ್ಮ ಸಂಬಂಧಗಳು ಎಲ್ಲವೂ ‘ಋಣಾತ್ಮಕ’ ವ್ಯಕ್ತಿತ್ವದ ಕಡೆಗೆ ವಾಲುವುದು ಶತಸಿದ್ಧ!

ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ |
ಮನಸಸ್ತು ಪರಾ ಬುದ್ಧಿರ್ಯೋ ಬುದ್ಧೇಃ ಪರತಸ್ತು ಸಃ || ಶ್ಲೋಕ ೪೨ || [ಭಗವದ್ಗೀತೆ ಅಧ್ಯಾಯ ೩]

 

 

ಈ ಶ್ಲೋಕದಲ್ಲಿ ಭಗವಂತ ಶ್ರೀಕೃಷ್ಣ ಹೇಳಿದ ಹಾಗೆ, ಇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠ, ಮನಸ್ಸಿಗಿಂತ ಬುದ್ಧಿಯು ಹಿರಿದಾದ ತಾಣ, ಬುದ್ಧಿಗಿಂತಲೂ ಆ ಭಗವಂತ ದೊಡ್ಡವನು. ಭಗವಂತನನ್ನು ಕಾಣಬೇಕೆಂದರೆ, ಬ್ರಹ್ಮಾನಂದವನ್ನು ಅನುಭವಿಸಬೇಕೆಂದರೆ ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದು ಮುಖ್ಯವಾದರೂ ‘ಧನಾತ್ಮಕ’ ವ್ಯಕ್ತಿತ್ವದ ನಿಯಂತ್ರಣ ಇದರಲ್ಲಿ ಮಹತ್ವ. ಇಂದ್ರಿಯಗಳು ಸದಾ ಕ್ರಿಯಾಶೀಲರಾಗಿ, ಮನಸ್ಸು ಪ್ರಫುಲ್ಲಿತವಾಗಿ, ಬುದ್ಧಿಯು ಒಳ್ಳೆಯ ವಿಚಾರಗಳನ್ನೇ ಕೇಂದ್ರೀಕರಿಸಿ ನಮ್ಮಿಂದ ಸಹಜವಾಗಿ ಪರೋಪಕಾರಗಳನ್ನೇ ಮಾಡಿಸುತ್ತದೆ ಈ ‘ಧನಾತ್ಮಕ’ ವ್ಯಕ್ತಿತ್ವ.

ಅದೇ ‘ಋಣಾತ್ಮಕ’ ವ್ಯಕ್ತಿತ್ವವು ಇಂದ್ರಿಯ, ಮನಸ್ಸು ಮತ್ತು ಬುದ್ಧಿಯನ್ನು ತನ್ನ ವಶದಲ್ಲಿಟ್ಟುಕೊಂಡರೆ ಒಮ್ಮೆ ಯೋಚಿಸಿ ಅದರ ಪರಿಣಾಮ ಏನಾದೀತು?

ಇಂದ್ರಿಯಗಳು ಒಳ್ಳೆಯ ಕಾರ್ಯಕ್ಕೆ ಒಗ್ಗದೆ, ಮನಸ್ಸು ಅದಕ್ಕೆ ಪ್ರೇರೇಪಿಸದೆ,ಧೈರ್ಯ ತೋರದೆ, ಬುದ್ಧಿ ಆ ಕಾರ್ಯದಲ್ಲಿ ಸೋತವರನ್ನೇ ಆದರ್ಶವಾಗಿಸಿ ನಮ್ಮಲ್ಲಿ ಆಲಸ್ಯ, ಹಿಂಜರಿಕೆ ಹೆಚ್ಚಾಗಿ ಆತ್ಮವಿಶ್ವಾಸಕ್ಕೆ ಧಕ್ಕೆ ತಂದಂತಾಗುತ್ತದೆ. ಇಂದ್ರಿಯಗಳಿಂದ ‘ಶಾರೀರಿಕ’ ಪಾಪಗಳು ಹೆಚ್ಚಾಗಿ, ಮನಸ್ಸಿನಲ್ಲಿ ‘ಪಾಪ ಭಾವನೆಗಳು’ ಯಥೇಚ್ಛವಾಗಿ, ಬುದ್ಧಿ ಈ ಭಾವನೆಗಳನ್ನು ವ್ಯಕ್ತಪಡಿಸಲು ಹತ್ತಾರು ಮಾರ್ಗಗಳನ್ನು ಹುಡುಕಿ ನಮ್ಮ ನೈಜತೆಯನ್ನೇ ನಾವು ಕಳೆದು ಏಕಾಂಗಿಯಾಗಬಹುದು.

ಏಕಾಂಗಿ ಎಂದರೆ ಒಬ್ಬರೇ ಇರುವುದು ಎಂಬರ್ಥದಲ್ಲಲ್ಲ. ಮತ್ಸರ, ದ್ವೇಷ, ತಿರಸ್ಕಾರದಿಂದ ಹತ್ತಿರದವರು ದೂರಾಗಿ, ಕೇವಲ ‘ಲೆಕ್ಕಕ್ಕುಂಟು ಆಟಕ್ಕಿಲ್ಲ’ ಎನ್ನುವ ತರಹ ನಮ್ಮ ಸಂಬಂಧಗಳಾಗದಿದ್ದರೆ ಸಾಕು. ‘ಧನಾತ್ಮಕ’ ವ್ಯಕ್ತಿತ್ವ ನಮ್ಮಲ್ಲಿ ಎಷ್ಟು ಬೆಳೆಸೋಣ ಎಂದರೆ, ನಮ್ಮಲ್ಲಿರುವ ‘ಋಣಾತ್ಮಕ’ ವ್ಯಕ್ತಿತ್ವವನ್ನು ಅದಕ್ಕೆ ಎಷ್ಟು ಕೂಡಿಸಿದರು ಮೊತ್ತ ಎಂದಿಗೂ ಧನಾತ್ಮಕವೇ ಆಗಿರಬೇಕು. (+)+(-xn)=(+)

‘ಇರು ನೀ ಧನಾತ್ಮಕ, ಆಗುವುದು ಜೀವನ ಸಾರ್ಥಕ’

ಲೇಖಕ:     ಸುಹಾಸ್ ಪುರುಷೋತ್ತಮ ಕರ್ವೆ