ಕನ್ನಡದ ಮನ ಕೇಳಿದ ಹಿಂದಿ ಗಾನಾ!

image.png  ಹುಟ್ಟೂರಿನಿಂದ ಎಷ್ಟೇ ದೂರ ಬಂದರೂ, ಬೆಳೆದಂತೆ ಬೇಕಾದ ಭಾಷೆಗಳ ಕಲಿತು ಬಳಸಿದರೂ, ಮನಸು ಮಂಥಿಸುವದು ಮಾತೃಭಾಷೆಯಲ್ಲೇ. ಹೀಗೆ ಹಿಂದಿಯಲ್ಲಿ ಕೇಳಿ ಆನಂದಿಸಿದ ಹಾಡುಗಳನ್ನು ಕನ್ನಡದಲ್ಲಿ ಜೀರ್ಣಿಸಿಕೊಂಡು, ಆ ಹಾಡುಗಳ ಭಾವವನ್ನ ಲಯದೊಂದಿಗೆ ಕನ್ನಡದಲ್ಲಿ ಬರೆಯುವ ಹವ್ಯಾಸದ ಅನಿವಾಸಿ ವೈದ್ಯ ಕೇಶವ ಕುಲಕರ್ಣಿ, ತಮ್ಮ ಭಂಡಾರದ ಎರಡು ಹಾಡುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. 

 
ಹಿಂದಿಯ ಹಾಡು ಮತ್ತು ಸಿನೆಮಾ ಹೆಸರು ಕಮೆಂಟುಗಳಲ್ಲಿ ಕಾಣಿಸುವ ಜಾಣ್ಮೆ ಹಾಗು ಉತ್ಸಾಹ ಅನಿವಾಸಿ ಓದುಗರಲ್ಲಿದೆ ಎನ್ನುವ ವಿಶ್ವಾಸ ನಮ್ಮದು. 
 

೧. ಈಶ್ವರ ಅಲ್ಲಾ 

 

ಈಶ್ವರ ಅಲ್ಲಾ ನಿನ್ನಯ ಜಗದಿ
ದ್ವೇಷವಿದೇಕೆ ಛಲವೇಕೆ? ।ಪ!

ನಿನ್ನಯ ಮನವು ಆಲದ ಮರವು
ಮನುಜನ ಮನವು ತೃಣವೇಕೆ? ।ಅ.ಪ।

ಅಡಿಗಡಿಗೊಂದು ಗಡಿಗಳು ಏಕೆ
ನಿನ್ನದೇ ಅಲ್ಲವೇ ಜಗವೆಲ್ಲಾ?
ನೇಸರ ನಮ್ಮನು ಸುತ್ತುತಲಿದ್ದರೂ
ಕತ್ತಲೆ ನಮ್ಮಯ ಬದುಕೆಲ್ಲಾ
ಭೂಮಿಯ ಸೀರೆಯ ಅಂಚಿನ ತುಂಬ
ಮನುಜನ ರಕುತದ ಕಲೆ ಏಕೆ? ।೧।

ಕಿವಿಗಪ್ಪಳಿಸಿವೆ ಹಾಹಾಕಾರ
ಒಲುಮೆಯ ಮಾತು ಕೇಳಿಸದು
ಚೂರ್ಚೂರಾದವು ಸಾವಿರ ಕನಸು
ಜೋಡಿಪರಾರೋ ಕಾಣಿಸದು
ಮನ ಬಾಗಿಲಿಗೆ ಬಿದ್ದಿದೆ ಬೀಗ
ಬೀಗಕೆ ಹಿಡಿದಿದೆ ತುಕ್ಕೇಕೆ? ।೨। 

 
 
ಕುರುಹು: ಸಂಗೀತ ಎ.ಆರ್. ರಹಮಾನ್, ಸಾಹಿತ್ಯ: ಜಾವೇದ್ ಅಕ್ತರ್ 
 
 
2. ನಾನಾರು?
ಹೇಳಿ ಯಾರಾದರೂ ನಾನೆಲ್ಲಿರುವೆ
ಹೇಳಿ ಯಾರಾದರೂ ನಾ ಏಕಿರುವೆ
ಸರಿಯೊ ತಪ್ಪೊ ಹೇಳಿ ನನ್ನಯ ದಾರಿ
ಶುರು ಮಾಡಲೊ ಬೇಡವೊ ನನ್ನ ಸವಾರಿ


ಹೆದರುವೆ ನಾ ಕನಸುಗಳಿಂದಲೆ
ಇರಿಯುವುದೇ ಬದುಕನು
ಬೆದರುವೆ ನಾ ನನ್ನವರಿಂದಲೆ
ಮುರಿಯುವರೇ ಮನಸನು


ನಾ ಕತ್ತಲೋ ಬೆಳದಿಂಗಳೊ
ನಾ ಬೂದಿಯೊ ಇಲ್ಲ ಬೆಂಕಿಯೊ
ನಾ ಬಿಂದುವೊ ನಾ ಅನಂತವೊ
ನಾ ಶಾಂತಿಯೊ ಇಲ್ಲ ಪ್ರಳಯವೊ

ಹೇಳಿ ಯಾರಾದರೂ ನಾನಾರು
ಏಕೆ ಇಲ್ಲಿರುವೆ ಯಾಕಾದರು
ನನ್ನ ಮೇಲೆ ನನಗೇ ನಂಬಿಕೆ‌ ಬರಬಹುದೆ?
ನಾನಿದ್ದರೂ ಇರದಿದ್ದರೂ ಜಗ ಬದಲಾಗುವುದೆ?


ಯಾರ ಮಡಿಲಲಿ ಮಲಗಿ ಅಳಲಿ
ಎಡವಿದರೆ ನಾ
ಯಾರನ್ನು ಕೇಳಲಿ ದಾರಿ
ತಪ್ಪಿದರೆ ನಾ


ನಾ ಮೌನವೋ ನಾ ಭಾಷೆಯೊ
ನಾ ಆಸೆಯೋ ನಿರಾಸೆಯೊ
ನಾ ರೆಕ್ಕೆಯೋ ಕಲ್ ಬಂಡೆಯೊ
ದೂರಾಸೆಯೋ ದುರಾಸೆಯೊ


ನಿಜ‌ ಹೇಳಲೆ ನುಂಗಿ ಕೊಳ್ಳಲೇ
ಮನ ಬಿಚ್ಚಲೆ ಇಲ್ಲ ಅದುಮಲೆ
ಬಲೆ ಹರಿಯಲೆ ಶರಣಾಗಲೇ
ನಾ ಸೆಣಸಲೇ ಶರಣಾಗಲೆ

ನಾನಾರು?

 

ಕುರುಹು: ಈ ಸಿನೆಮಾ ಬಿಡುಗಡೆಯಾಗಿದ್ದು ೨೦೧೭ರಲ್ಲಿ. ಇದರ ಗಳಿಕೆ ಭಾರತದಲ್ಲಿ ೯೦ ಕೋಟಿ, ಚೈನಾದಲ್ಲಿ ೯೦೦ ಕೋಟಿ!

 

ಅಮಿತಾ ರವಿಕಿರಣರ ಹನಿ ಹನಿ, ಹುಡುಕಾಟ!

                                                                                               image.pngಐರ್ಲೆಂಡ್ ವಾಸಿ ಅಮಿತಾ ರವಿಕಿರಣ ಕವಿತೆಗಳ ರೂಪದಲ್ಲಿ ತಮ್ಮ ಕನಸು, ಭಾವನೆ, ಅನುಭವದ ಬದುಕನ್ನು ಆಗಾಗ ಹೊರಚೆಲ್ಲುತ್ತಾರೆ. ಅವರ ಎರಡು ಕವಿತೆಗಳು ಅನಿವಾಸಿಯ ಓದುಗರಿಗೆ… 
 
ನಲ್ಲನ ಪ್ರೀತಿಯ ‘ಹನಿ ಹನಿ’ ಗಳಲ್ಲಿ ಕಳೆದುಹೋಗಿರುವ ಕವಿಯತ್ರಿ, ಬದುಕಿನ ಪಯಣದ ಮುಂದಿನ ಹೆಜ್ಜೆಗಳಿಗೆ ತನ್ನತನದ ಚಪ್ಪಲಿಯ  ‘ಹುಡುಕಾಟ’ ದಲ್ಲಿ ಗಂಭೀರವಾಗಿದ್ದಾರೆ. 
.
 ಹನಿ ಹನಿ..                                                       .
 
ನಿನ್ನ ಕಣ್ಣುಗಳ ಬಗ್ಗೆ ಸಿಕ್ಕಾಪಟ್ಟೆ ಹಮ್ಮು ನಿನಗೆ 
ಅವುಗಳ ಗುಂಗು ನನಗೆ,
ಅಷ್ಟು ನಂಬಬೇಡ ಅವನ್ನು
ನಿನ್ನ ಮನಸ್ಸನ್ನು ಎಳೆ ಎಳೆಯಾಗಿ ಬಿಡಿಸಿ ತೋರಿಸುತ್ತಿವೆ
ನೀನು ನನಗೀಗ ಇನ್ನೂ ನಿಚ್ಚಳ
        –  ೨-
ಎಲ್ಲಿ ಹೆಚ್ಚು ಎಲ್ಲಿ ಕಡಿಮೆ?
ಪ್ರೀತಿಯ ಈ ಉನ್ಮಾದದಲ್ಲಿ
ನೀ ಕೇಳುತ್ತೀಯ?
ನನ್ನ ಪಾಲು ಕೊಡು ಎಂದು..
ಹಿಸ್ಸೆ ಮಾಡುವ ಮನಸು ನನಗೂ ಇಲ್ಲ
          -೩-
ನೀ ಹೊರಟುಹೋದ ನಂತರ
ಹಾಸಿಗೆಯ ಮಡತೆಗಳನ್ನು ಎಣಿಸುತ್ತ ಕೂರುತ್ತೇನೆ
ಲೆಕ್ಕ ಮುಗಿಯುವಷ್ಟರಲ್ಲಿ ಮತ್ತೆ ಸಂಜೆ
ಮತ್ತೆ ನೀನು,
        -೪-
ಈಜು ಹೇಳಿಕೊಡು ನನಗೆ,
ನಿನ್ನ ಪ್ರೀತಿಯಲ್ಲಿ ಮುಳುಗಿ
ಉಸಿರುಗಟ್ಟಿ ಸಾಯುವ ಮುನ್ನ ..
        -೫-
ನೀ ಮದಿರೆಯಂಥವನು
ನಶೆಯಾಗುತ್ತಿದ್ದಿ ನನ್ನ ಮನಿಷೆಗಳಿಗೆ
ಸ್ವಲ್ಪ ಎಂದು ಶುರುವಾದವನು ಚೂರು ಚೂರೆ ರಂಗೇರುತ್ತಿದ್ದಿ
ನೀ ನನಗೆ ಅಭ್ಯಾಸ ಆಗುತ್ತಿದ್ದಿ, 
ಚಟವಾಗದಿರು ದೊರೆ, ನಾ ಈ ಹೊರಜಗತ್ತಿಗೂ  ಮುಖ ತೋರಿಸಬೇಕು ಅಪರೂಪಕ್ಕೊಮ್ಮೆ.
 
 
 
ಹುಡುಕಾಟ
 
ಸಿಟ್ಟು ಬಂದಿತ್ತು 
ಅದ್ಯಾರದೋ ಮೇಲೆ 
ಕೂಗುತ್ತಿದ್ದೆ ಚೀರುತ್ತಿದ್ದೆ 
ಅದೇನೋ ಸಿಟ್ಟು ಅದೇನೋ ಅಸಹನೆ 
ನನ್ನ ಆರ್ಭಟ ,ಆಟಾಟೋಪ ನೋಡಿ 
ಅಪ್ಪ ಹೇಳಿದರೊಂದು ಬುದ್ಧಿ ಮಾತ,
ಮಗಳೇ 
ಅವರಿವರು ನಿನಗಿಷ್ಟ ಬಂದಂತೆ ಇರಬೇಕೆಂದರೆ,
 
ಅದು ಆಗದ ಮಾತು 
ಏನಿವೆಯೋ ಅವರ ಕಷ್ಟಗಳು , 
ಹಂಚಿಕೊಳ್ಳಲಾಗದ ದುಃಖ ದುಮ್ಮಾನಗಳು 
ಸಾಧ್ಯವಾದರೆ ಯೋಚಿಸು ,
ಅವರ ಸ್ಥಾನದಲ್ಲಿ ನಿನ್ನರಿಸಿ ನೋಡು ,
ಒಮ್ಮೆ ಅವರ ಚಪ್ಪಲಿಯಲ್ಲಿ ಕಾಲಿಟ್ಟು ನಡೆ 
ಅವರ ಹಾದಿಯ ಕಲ್ಲು ಮುಳ್ಳು ನಿನಗೂ ಕಂಡಾವು ,
ಅವರ ಅಸಮಾಧಾನಕ್ಕೆ ಕಾರಣ ಹೊಳೆದೀತು,
 
ಓಹ್ ಹೌದಲ್ಲ ,
ಆ ಗಳಿಗೆಯಿಂದ ನಾ ಹಾಗೆ ಮಾಡತೊಡಗಿದೆ 
ನನಗೆ ನೋವಾದಾಗೆಲ್ಲ , 
ನೋಯಿಸಿದವರ ಮನಸ್ಥಿತಿಯ ಬಗ್ಗೆ ಆಲೋಚಿಸಿದೆ 
ಸಿಟ್ಟಿನ ಬದಲು ನಿಟ್ಟುಸಿರು 
ಅಸಮಾಧಾನ ಅನುಕಂಪವಾಗಿ 
ಚಿಂತೆ ಚಿಂತನೆಯಾಯಿತು 
ಈಗ ನನಗೆ ಮತ್ತೆ ಮರಳಬೇಕಿದೆ 
ಅವರಿವರ ಚಪ್ಪಲಿಯಲ್ಲಿ ಕಾಲು ತೂರಿಸಿ 
ನೋವು ನುಂಗುತ್ತ 
ಅದೆಷ್ಟು ದೂರ ಬಂದಿದ್ದೇನೆಂದರೆ 
ನನಗೀಗ ನನ್ನ ಚಪ್ಪಲಿ ಸಿಗುತ್ತಲೇ ಇಲ್ಲ ,
ಅದೆಲ್ಲಿ ಬಿಟ್ಟೆ 
ಮರೆತೇ ಹೋಗಿದೆ …
ಹುಡುಕುತ್ತಿರುವೆ 
ಹುಡುಕುತ್ತಲೇ ಇದ್ದೇನೆ