ಮಾರ್ಚ್ ತಿಂಗಳ ಕೊನೆಯ ಭಾನುವಾರ ಆಚರಿಸುವ, ಹೇಗೋ ಶುರುವಾಗಿ ಇನ್ನಾವುದೂ ಅರ್ಥದಲ್ಲಿ ಬೆಳೆದು ಉಳಿದಿರುವ, ತಾಯಂದಿರ ದಿನವನ್ನು ಅಕ್ಷರಗಳಲ್ಲಿ ಮೆರೆಸುವ ಅನಿವಾಸಿಯ ಆಶಯದ ಎರಡನೇ ಲೇಖನ ಈ ವಾರ. ಹೋದ ವಾರ, ಮಾತೃ ಭಾಷೆಯ ಅಕ್ಷರ, ವ್ಯಂಜನಗಳನ್ನ ಪದ್ಯ ರೂಪದಲ್ಲಿ ಮೆರೆಸಿದ ಲೇಖನವನ್ನ ನೀವೆಲ್ಲ ಓದಿರಬೇಕು. ಹಿರಿಯ ವೈದ್ಯ, ಅನಿವಾಸಿಯ ಮೂಲ ಚೇತನ, ಶ್ರೀಯುತ ಶ್ರೀವತ್ಸ ದೇಸಾಯಿಯವರು ತಮ್ಮ ಜೀವನದ ಅಮೂಲ್ಯ ಹಿನ್ನೋಟವೊಂದನ್ನು ಈ ವಾರ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ, ಕೇಶವ ಕುಲಕರ್ಣಿಯವರು ಕನ್ನಡದಲ್ಲಿ ಕೇಳಿಸಿಕೊಂಡಿರುವ ಹಿಂದಿಯ ಅಮ್ಮ-ಮಗನ ಹಾಡು. ನಿಮಗಾಗಿ.

ಈ ವರ್ಷದ ’ಮದರ್ಸ್ ಡೇ’ ದಿನ ಜಗತ್ತಿನ ಎಲ್ಲ ತಾಯಂದಿರಿಗೆ ನನ್ನ ತಾಯಿಯನ್ನು ನೆನೆಸುತ್ತ ಕೃತಜ್ಞತೆಗಳನ್ನು
ಅರ್ಪಿಸುತ್ತಿದ್ದೇನೆ.
ದೊಡ್ಡವರ ಚಿಕ್ ಚಿಕ್ ಸಂಗತಿಗಳು
ನನ್ನ ಪಾಲಿಗೆ ಅವ್ವ-ನಾವು ಉತ್ತರ ಕರ್ನಾಟಕದಲ್ಲಿ ಅಮ್ಮನನ್ನು ಹಾಗೇ ಕರೆಯುತ್ತಿದ್ದೆವು- ದೊಡ್ಡವಳೇ! ಐದನ್ನು ಹೆತ್ತು ದೊಡ್ಡವರನ್ನಾಗಿ ಮಾಡಿ ಕೊನೆಯ ವರೆಗೆ ಪ್ರೀತಿಯನ್ನಲ್ಲದೆ ಬೇರೇನೂ ಎರೆದವಳು ದೊಡ್ಡವಳೇ ಅಲ್ಲವೆ? ಎಲ್ಲರೂ ಮಹಾ ’ಸಾಧಕ’ರೇ ಆಗಿರಬೇಕೆ? ಆಕೆಗೆ ನಾನೇನು ಪ್ರತಿಫಲ ಕೊಟ್ಟೆ? ಉಪಕಾರ ಮಾಡಿದೆ? ಅದು ನನ್ನನ್ನು ಕಾಡದ ದಿನವಿಲ್ಲ. ”ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ”– ನಿಜ. ತಾಯಿ ಮತ್ತು ತಾಯಿನಾಡು ಎರಡೂ ಸ್ವರ್ಗಕ್ಕೆ ಸಮಾನ ಅಂತೆ. ಒಂದು ಸ್ವರ್ಗಕ್ಕಾಗಿ ಇನ್ನಾವ ಸ್ವರ್ಗವನ್ನು ಮಾರಿಕೊಂಡೆವು? ಅವ್ವ ಬದುಕಿರುವಾಗ ಈ ‘ಮದರ್ಸ್ ಡೇ’ದ ಕಲ್ಪನೆಯೇ ಇರಲಿಲ್ಲ. 1970ರ ದಶಕದಲ್ಲಿ ಈ ದೇಶಕ್ಕೆ ಬಂದ ಮೇಲೆಯೇ ನಾನು ಮೊದಲು ಬಾರಿ Mothers Day ಆಚರಣೆಯ ಬಗ್ಗೆ ಕೇಳಿದ್ದು. ಆಗ ಇಂಗ್ಲೆಂಡ್, ಅಮೇರಿಕಾ ಹೋಗುವದೆಂದರೆ ಸ್ವರ್ಗ ಸಿಕ್ಕಂತೆ. ನಾನು ಇಲ್ಲಿ ಬಂದು ಅನಿವಾಸಿಯಾಗಿ ನೆಲೆಸಿದ ನಂತರ ’ಊರಿಗೆ’ ಆಗಾಗ ಹೋಗಿ ಬರುವದುಂಟು. ಹೋದಾಗೆಲ್ಲ, ಮಿತ್ರರು, ಸಂಬಂಧಿಕರು “ಇಂಗ್ಲೆಂಡಿನಿಂದ ಏನೇನು ತಂದ್ರೆಪ್ಪ?“ ಎಂದು ಕೇಳುವವರೇ ಎಲ್ಲ. ಭಾರತದಲ್ಲಿ ಬಹಳಷ್ಟು ಐಷಾರಾಮಿ ವಸ್ತುಗಳು ಸಿಗುತ್ತಿರಲಿಲ್ಲ. ವಿಮಾನ ನಿಲ್ದಾಣದಲ್ಲಿ ಇಳಿದು ಕಸ್ಟಮ್ಸ್ ದಾಟಿಸಿ, ಡ್ಯೂಟಿ ಕೊಟ್ಟು ಏನೇನೋ ತೊಗೊಂಡು ಹೋಗುತ್ತಿದ್ದೆ. ಆಗ ಕ್ಯಾಮರಾ, ರೇಡಿಯೋ-ಟೇಪ್ ಕೆಸೆಟ್ ಪ್ಲೇಯರ್ ಭಾರತದಲ್ಲಿ ದುರ್ಲಭ. ತಾಯಿಗೆ ಅಂತ ಶಾಲು, ವಸ್ತ್ರ ಒಮ್ಮೊಮ್ಮೆ ಸೀರೆ ಒಯ್ಯುವೆ. ‘ನೀನು ಇಲ್ಲಿಗೆ ಬಂದಿದ್ದೇ ಸಾಕು‘ ಅನ್ನುತ್ತಿದ್ದಳು ಅವ್ವ. ವಯಸ್ಸಾದಂತೆ ಮುದುಕರಿಗೆ ಏನೆಲ್ಲ ಅಪೇಕ್ಷೆ ಕಡಿಮೆಯಾಗುತ್ತ ಹೋಗುತ್ತದೆ. ನನ್ನ ಮದುವೆಯಲ್ಲೇ ತನ್ನ ಪತಿ (ನನ್ನ ತಂದೆ)ಯನ್ನು ಕಳೆದುಕೊಂಡ ಆಕೆ ಮುಪ್ಪಿನ ದಿನಗಳನ್ನು ಧಾರವಾಡದಲ್ಲಿ ನನ್ನ ಒಬ್ಬ ಅಣ್ಣನ ಮನೆಯಲ್ಲಿ ಕಳೆದಳು. ವಯಸ್ಸಾದವರಿಗೆ ಚಿಕ್ಕದರಲ್ಲೇ ಸಂತೋಷ ಅಂತ ನನಗೆ ಅನುಭವವಾದದ್ದು ಆಗಲೇ.
ಚಿಕ್ ಚಿಕ್ ಸಂಗತಿಗಳು:
ಯು ಕೆ ದಿಂದ ರಜೆಯಲ್ಲಿ ಧಾರವಾಡಕ್ಕೆ ಹೋದಾಗ ಅವ್ವ ನನ್ನನ್ನು ಕರೆದು ”ಮಗು, ನನ್ನ ಕಾಲು ಉಗುರು ಸ್ವಲ್ಪ ಕತ್ತರಿಸಪ್ಪ, ಹಿಡಕೊಂಡ್ಬಿಟ್ಟಾವಽ” ಅನ್ನುವವಳು. ಮಗು! ಐದು ಮಕ್ಕಳಲ್ಲಿ ಕೊನೆಯವನಾದ ನನಗೆ ಬಂದ ’ಅಚ್ಚಾದ’ ಹೆಸರು.(Nickname) ಮಗು. ಆಗ ಅರವತ್ತರ ಹೊಸ್ತಿಲಲ್ಲಿದ್ದರೂ ನಾನು ಅವಳ ಪಾಲಿಗೆ ಮಗೂನೇ. ಹಗುರಾಗಿ ಅವಳ ಕಾಲನ್ನು ನನ್ನ ತೊಡೆಯ ಮೇಲಿಟ್ಟುಕೊಂಡು – ನಾನು ಮಗುವಾಗಿದ್ದಾಗ ಅವಳ ತೊಡೆಯ ಮೇಲೆ ನನ್ನಕಾಲುಗಳಿದ್ದಂತೆ!- ನನ್ನ ಸರ್ಜನ್ನನ ಕೌಶಲ್ಯವನ್ನೆಲ್ಲ ಉಪಯೋಗಿಸಿ ಮೆಲ್ಲಗೆ ಒಂದೊಂದಾಗಿ ಪಂಜಿನಂತೆ ಕಚ್ಚಿಕೊಂಡ ನಖಗಳನ್ನು ಕ್ಲಿಪ್ ಮಾಡಿ ಕಾಲ್ಬೆರಳುಗಳ ಚರ್ಮವನ್ನು ಬಿಡಿಸಿದಾಗ ಆಕೆಗಾಗುವ ಆನಂದದ ಪಾರವೇ ಇಲ್ಲ. ”ಎಷ್ಟು ಹಗುರಾತು ನೋಡು, ಮಗು!” ಎಂದು ಲಟಿಗೆ ಮುರಿಯುವವಳು ಪ್ರತಿ ಸಲ! ನಾನೊಬ್ಬ ಕಣ್ಣಿನ ವೈದ್ಯನಿಂದ ಪಾದವೈದ್ಯ(chiropodist) ಆದದ್ದಕ್ಕೆ ನನಗೇನೂ ಅವಮಾನವಿಲ್ಲ. ತಾನು ಬರೀ ಅಮ್ಮನಾದಂತೆ ನಾನು ಬರೀ ಮಗನಲ್ಲವೆ? ಅವಳೋ ಪುತ್ರವಾತ್ಸಲ್ಯದಿಂದ ಅಪ್ಪಿಕೊಂಡರೆ, ನಾನು ಮತ್ತೆ ಮಗುವಾಗಿ ಕರಗಿ ಹೋಗುತ್ತಿದ್ದೆ. ಧಾರವಾಡಕ್ಕೆ ಬರುವ ಮೊದಲು 18 ವರ್ಷಗಳ ಕಾಲ ನಮ್ಮ ದೊಡ್ಡ ಕುಟುಂಬ ಊಟಿಯಲ್ಲಿ ವಾಸಿಸುತ್ತಿತ್ತು. ಬ್ರಿಟಿಶರು ಉಟಕಮಂಡ್ ಎಂದು ಕರೆಯುತ್ತಿದ್ದ ಆ ಊರನ್ನು ಆದಿವಾಸಿಗಳು ಕರೆಯುತ್ತಿದ್ದುದು ”ಒತ್ತಕಲ್ ಮಂದು” ಎಂದು. ಅಂದರೆ ”ಒಂದು ಕಲ್ಲಿನ ವಸಾಹತು’ ಎನ್ನುವ ಬುಡಕಟ್ಟು ಜನಾಂಗ ತೊದವರ ಶಬ್ದದ ಅಪಭ್ರಂಶ ಎಂದು ನನ್ನ ತಂದೆ ಬರೆದ ಸಂಶೋಧನಾ ಗ್ರಂಥದ ನೆನಪು ಹಸಿರಾಗಿದೆ. ಎಲ್ಲೆಲ್ಲೂ ಹಸಿರು. ಮನ್ಸೂನ ಮಳೆಯನ್ನು ಅಲ್ಲೇ ನೋಡಬೇಕು. ಮಳೆ ಸುರಿದರೆ ಪಟಪಟನೆ ಕಿಡಕಿಯ ಕಾಜಿನ ಮೇಲೆ ಕೋಲಿನಿಂದ ಬಡಿದಂತೆ. ಹೊರಗಡೆ ನಿಂತಿದ್ದರೆ ಕ್ಷಣದಲ್ಲಿ ಪೂರ್ತಿ
ತೋಯಿಸಿಕೊಳ್ಳುವದೇ. ಒಂದು ಸಲ ಒಂದೂವರೆ ಮೈಲು ದೂರದಲ್ಲಿದ್ದ ಪೇಟೆಯಿಂದ ಮನೆಗೆ ನಡೆದುಕೊಂಡು ಮರಳಿ ಬರುತ್ತಿದ್ದೆವು ನಾನು ಮತ್ತು ನನ್ನ ಅವ್ವ. ಒತ್ತ ಕಲ್ (ಒಂಟಿಕಲ್) ಚಿಕ್ಕ ಗವಿಯಂತಿದ್ದ ಗುಡಿಯ ಹತ್ತಿರ ಬರುವಷ್ಟರಲ್ಲಿ ಗುಡುಗು- ಮಿಂಚಿನೊಂದಿಗೆ ಮನ್ಸೂನ್ ಮಳೆ. ಕೈಯಲ್ಲಿ ಛತ್ರಿ (ಕೊಡೆ)ಯಿಲ್ಲ. ಇದ್ದರೂ ರಕ್ಷಣೆಯಿರುತ್ತಿರಲ್ಲ. ಐದು ವರ್ಷದ ಹುಡುಗ ನಾನು. ತನ್ನ ಸೀರೆಯ ಸೆರಗನ್ನೇ ಹೊದಿಸಿ ಮಳೆಯಿಂದ ನನ್ನನ್ನು ರಕ್ಷಿಸಿ, ಕೊನೆಗೆ ಅದು ನಿಂತ ಮೇಲೆ ಮನೆಗೆ ಕರೆದುಕೊಂಡು ಬಂದಳು. ಮನೆಗೆ ಬರುವ ವರೆಗೆ ಆಕೆಯ ಹೊಟ್ಟೆಗೆ ತೋಯ್ದು ತೊಪ್ಪೆಯಾದ ನನ್ನ ತಲೆಯನ್ನುಅಂಟಿಸಿ ಕೊಂಡಿದ್ದ ಆ ಚಿತ್ರ ಇಂದಿಗೂ ನನ್ನ ಮನಃಪಟದಲ್ಲಿ ಅಚ್ಚಳಿಯದೆ ನಿಂತಿದೆ! ಆಕೆಗೆ ಮದುವೆಯಾದಾಗ ಹೈಸ್ಕೂಲು ವಿದ್ಯಾಭ್ಯಾಸ ಸಹ ಪೂರ್ತಿಯಾಗಿದ್ದಿಲ್ಲ. ಆಗಿನ ಕಾಲದಲ್ಲಿ ಅದು ಸಾಮಾನ್ಯ. ಮೈನೆರೆತ ಮೇಲೆಯೇ ಅತ್ತೆಮನೆಗೆ ಬಂದು ಐವರು ಗಂಡು ಮಕ್ಕಳನ್ನು ಹೆತ್ತಳು. ನಾನು ಕೊನೆಯವ. ಎಲ್ಲರ ವಿದ್ಯಾಭ್ಯಾಸಕ್ಕಾಗಿ ತಂದೆ ತಾಯಿಯರ ತ್ಯಾಗ ಮರೆಯಲಾರೆ. ಮೊದಲು ಗತಿಸಿದ್ದು ತಂದೆ. ನಾನು ಮೆಡಿಕಲ್ ಮುಗಿಸಿ ವಿದೇಶಕ್ಕೆ ಹೊರಟೆ. ನನ್ನನ್ನು ಹರಸಿ ಬೀಳ್ಕೊಟ್ಟ ಅವ್ವ ಪ್ರತಿವರ್ಷ ತಪ್ಪದೆ ನನ್ನ ಹುಟ್ಟಿದ ಹಬ್ಬದ ದಿವಸ ನನ್ನನ್ನು ಆಶೀರ್ವದಿಸಿ ಹರಸಿ ಪತ್ರ ಬರೆಯಲು ಮರೆಯಲಿಲ್ಲ. ಪ್ರತಿ ಕಾಗದದಲ್ಲೂ ”ಮಗು”ವಿಗೆ, ಎಂತಲೇ ಸಂಬೋಧನೆ. ಅಗ STD, ಮೋಬೈಲ್, ಇಂಟರ್ನೆಟ್ ಇರಲಿಲ್ಲ. ಆ ವರ್ಷ ಅವ್ವನ ಪತ್ರ ಬರಲೇ ಇಲ್ಲ. ಅಂದು ನನ್ನ ಜಂಘಾಬಲವೇ ಉಡುಗಿ ಹೋಗಿತ್ತು. ನನಗಿಂತ ಹಿರಿಯರಾದ ನಾಲ್ವರು ಅಣ್ಣಂದಿರು ಭಾರತದಲ್ಲೇ ಇದ್ದುದರಿಂದ ನನಗೆ ಆಕೆಯ ಕೊನೆಯ ದಿನಗಳಲ್ಲಿ ಸಹ ಆರೈಕೆ ಮಾಡುವ ಅವಕಾಶ ಒದಗಿ ಬಂದಿರಲಿಲ್ಲ. ಅವ್ವ ತೀರಿಕೊಂಡ ಸುದ್ದಿ ಗೊತ್ತಾದ ದಿನ ನಾನು ತಬ್ಬಲಿಯಾದ ಅನುಭವ. ಆಸ್ಕರ್ ವೈಲ್ಡನ ನಾಟಕ ’ದ ಇಂಪಾರ್ಟನ್ಸ್ ಆಫ್ ಬೀಯಿಂಗ್ ಅರ್ನೆಸ್ಟ್’ ದ ಲೇಡಿ ಬ್ರಾಕ್ನೆಲ್ ಹೇಳಿದಂತೆ “To lose one parent may be regarded as a misfortune; to lose both looks like carelessness” ಮಾತು ನೆನಪಾಯಿತು. ಕೇರ್ಲೆಸ್ ಅಲ್ಲದಿದ್ದರೂ, ಕಳೆದುಕೊಂಡದ್ದು ಸ್ವರ್ಗವೇ ಏನೋ? Paradise lost? ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ, ಅದರ ಸತ್ಯ ಮನದಟ್ಟವಾಯಿತು. ಜಗತ್ತಿನ ಎಲ್ಲ ತ್ಯಾಗಮಯಿ, ವಾತ್ಸಲ್ಯದ ಮೂರ್ತಿ ತಾಯಂದಿರಿಗೂ ನಮನಗಳು.
– ಶ್ರೀವತ್ಸ ದೇಸಾಯಿ

ನಾ ಕರೆದೊಯ್ಯುವೆ
ಆ ದೂರ ಗಗನದೆಡೆ
ಎಲ್ಲಿ ದುಃಖವಿರದೋ
ಕಣ್ಣೀರಿರದೋ
ಆ ದೂರ ಗಗನದೆಡೆ //ಪ//
ಸೂರ್ಯನ ಮೊದಲನೆ ಕಿರಣ
ಆಸೆಯ ಬೆಳಕಿನ ಸ್ಫುರಣ
ಚಂದ್ರನ ತಿಂಗಳ ಬೆಳಕು
ಅಂಧಕಾರ ಹೋಯಿತು ಹೊರಕು
ಬಿಸಿಲೇ ಇರಲಿ
ನೆರಳೇ ಬರಲಿ
ನಮ್ಮ ದಾರಿ ಗಮ್ಯದೆಡೆ
ಎಲ್ಲಿ ದುಃಖವಿರದೋ
ಕಣ್ಣೀರಿರದೋ
ಆ ದೂರ ಗಗನದೆಡೆ //೧//
ಕಣ್ಣನು ಚಾಚಿದಷ್ಟೂ
ಮುಕ್ತ ಗಗನವೇ ಇರಲಿ
ಅಲ್ಲಿ ರಂಗು ರಂಗಿನ ಹಕ್ಕಿ
ಆಸೆ ಸಂದೇಶವ ತರಲಿ
ಕನಸಿನ ಚಿಗುರು
ನಳನಳಿಸಿರಲು
ಸಂಜೆಯ ತಳಿರಿನೆಡೆ
ಎಲ್ಲಿ ದುಃಖವಿರದೋ
ಕಣ್ಣೀರಿರದೋ
ಆ ದೂರ ಗಗನದೆಡೆ //೨//
– ಕೇಶವ ಕುಲಕರ್ಣಿ
