ಎರಡು ಲಘು ಕವಿತೆಗಳು; ವಿ(ಚಾರ)ವಾದಿಗಳ ಮಂತ್ಲಿ ಮೀಟಿಂಗ್ ! ಮತ್ತು ದೊ೦ಬರಾಟವಯ್ಯಾ

ಇಂಗ್ಲೆಂಡಿನ ಬೇಸಿಗೆ ವಿರಾಮದಲ್ಲಿ ನಿಮ್ಮ ಮನಸ್ಸುಗಳನ್ನು ಹಗುರಗೊಳಿಸಲು ಎರಡು ಲಘು ಕವನಗಳನ್ನು ಪ್ರಕಟಪಡಿಸಲಾಗಿದೆ. ಮೊದಲನೆ ಕವಿತೆ ಡಾ. ಪ್ರೇಮಲತಾ ಅವರಿಂದ. ೭೦ ರ ದಶಕದಲ್ಲಿ ನವೋದಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ರಾಂತಿ ಎಲ್ಲರಲ್ಲಿ ಹೊಸ ಲವಲವಿಕೆ ಮತ್ತು ಸ್ಪೂರ್ತಿಯನ್ನು ಮೂಡಿಸಿದ ಕಾಲವಾಗಿತ್ತು. ಕನ್ನಡ ಸಾಹಿತ್ಯ ಅನೇಕ ಪ್ರತಿಭೆಗಳನ್ನು ಕಾಣ ತೊಡಗಿತು. ಬರಹಗಾರರು ಮತ್ತು ಉದಯೋನ್ಮುಖ ಕವಿಗಳು ತಮ್ಮ ಪಾಶ್ಚಿಮಾತ್ಯ ಉಡುಪಗಳ ಜೊತೆ ದೇಶೀ ಉಡುಪು ಗಳನ್ನೂ ಹೊಂದಿಸಿ, ಗಡ್ಡ ಬಿಟ್ಟುಕೊಂಡು ಬಗಲಿಗೆ ಒಂದು ಚೀಲವನ್ನೇರಿಸಿ , ವಿಶ್ವವಿದ್ಯಾಲಗಳಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ವಿಜೃಂಭಿಸುತ್ತಿದ್ದ ಕಾಲ. ಈ ವೇಷಧಾರಿಗಳು ಸಾಮಾನ್ಯ ವಾಗಿ ಸಾಹಿತ್ಯ ವಿದ್ಯಾರ್ಥಿಗಳಾಗಿ ಅಥವಾ ಇನ್ನಿತರ ಕ್ಷೇತ್ರದಲ್ಲಿದ್ದು ಸಾಹಿತ್ಯಾಸಕ್ತರಾಗಿರುತ್ತಿದ್ದರು. ಈ ರೀತಿ ಪೋಷಾಕು ಧರಿಸಿ ಸಾಹಿತ್ಯ ರಾಜಕೀಯ ಮತ್ತು ಪತ್ರಿಕೋದ್ಯಮ ವಿಚಾರಗಳ ಬಗ್ಗೆ ಹರಟುತ್ತಿದ್ದ ವ್ಯಕ್ತಿಗಳನ್ನು ಬುದ್ಧಿಜೀವಿ ಅಥವಾ ವಿಚಾರ ವಾದಿಗಳೆಂದು ಗುರುತಿಸಬಹುದಾಗಿತ್ತು. ಈ ಒಂದು ವ್ಯಕ್ತಿಚಿತ್ರ ನಮ್ಮಕಲ್ಪನೆಗಳಲ್ಲಿ ಚಿರವಾಗಿದೆ. ತಮ್ಮ ಪ್ರಗತಿಪರ ವೈಚಾರಿಕ ಚಿಂತನೆಗಳನ್ನು ಮುಕ್ತವಾಗಿ ಅಭಿವ್ಯಕ್ತಗೊಳಿಸುವ ಪ್ರವೃತಿ ಈ ವಿಚಾರವಾದಿಗಳಲ್ಲಿಸಾಮಾನ್ಯ ವಾಗಿ ಕಾಣಬಹುದು. ಇಂತಹ ನಾಲ್ಕಾರು ವಿಚಾರ ವಾದಿಗಳು ಸೇರಿದಾಗ ಆ ಮೀಟಿಂಗ್ ಹೇಗಿರಬಹುದು ಎಂಬುದರ ಬಗ್ಗೆ ಪ್ರೇಮಲತಾ ಅವರು ತಮ್ಮ ಕವನದಲ್ಲಿ ತಿಳಿಸಿದ್ದಾರೆ.

ದೊಂಬರಾಟವಯ್ಯ ಎಂಬ ಇನ್ನೊಂದು ಕವಿತೆಯಲ್ಲಿ ಸುಶೀಲೇಂದ್ರ ರಾವ್ ಅವರು ರಾಜಕಾರಣಿಗಳು ಮತಗಳನ್ನುಗಳಿಸಲು ಮಾಡುವ ತಂತ್ರ, ಮೋಡಿ ಮತ್ತು ಮಾತಿನಜಾಲವನ್ನು ವಿಡಂಬನೆಗೆ ಒಳಪಡಿಸಿ, ಡೊಂಬರಾಟಕ್ಕೆ ಹೋಲಿಸಿ ಬರೆದಿರುವ ಅಣಕ .

“ಬೋಂಬೆಯಾಟವಯ್ಯಾ ಬ್ರಹ್ಮಾಂಡವೇ ಆ ದೇವನಾಡುವ ಬೊಂಬೆಯಾಟವಯ್ಯ
ಅಂಬುಜನಾಥನ ಅಂತ್ಯವಿಲ್ಲದಾತನ ತುಂಬು ಮಾಯೆಯಯ್ಯ” !!

ಎಂಬ ಚಿರಪರಿಚಿತವಾದ ಡಾ. ರಾಜ್ ಕುಮಾರ್ ನಟಿಸಿರುವ ಶ್ರೀ ಕೃಷ್ಣಗಾರುಡಿಯಲ್ಲಿನ ಸಿನಿಮಾ ಹಾಡನ್ನು ಕೌಶಲ್ಯದಿಂದ ಬಳೆಸಿಕೊಂಡಿರುವುದನ್ನು ಗಮನಿಸಬಹುದು.

ಈ ಕವನಗಳಲ್ಲಿ ವಿಚಾರವಾದಿಗಳನ್ನು ಅಥವಾ ರಾಜಕಾರಣಿಗಳನ್ನು ಅವಹೇಳನ ಮಾಡುವ ಉದ್ದೇಶವಿಲ್ಲ , ದಯವಿಟ್ಟು ಇದನ್ನು ಕೇವಲ ಲಘು ವಿಡಂಬನಾತ್ಮಕ ಬರಹವೆಂದು ಪರಿಗಣಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ನಿಮ್ಮ ಹಾಸ್ಯ ಪ್ರಜ್ಞೆಗೆ ಕಚಗುಳಿ ಇಡುವ ಪ್ರಯತ್ನವಷ್ಟೇ. ರಚನೆಯ ಹಿನ್ನೆಲೆ ಕೇವಲ ಕಾಲ್ಪನಿಕ.

ಶಿವಪ್ರಸಾದ್ (ಸಂ )

 

ವಿ(ಚಾರ)ವಾದಿಗಳ ಮಂತ್ಲಿ ಮೀಟಿಂಗ್ !

ಡಾ. ಪ್ರೇಮಲತ ಬಿ.

 

Cartoon by Dr G S Prasad

 

ವಿ (ಚಾರ)ವಾದಿಗಳ ಮಂತ್ಲಿ ಮೀಟಿಂಗ್ !
ಎಡದವನು, ಬಲದವನು, ಮಧ್ಯದವನು
ಸತ್ತ ಕಣ್ಣವನು, ದಪ್ಪ ತಲೆಯವನು
ಹೋತದ ಗಡ್ಡ ಹೊತ್ತವನು,
ಜೊತೆಗೆ ಡೊಳ್ಳು ಹೊಟ್ಟೆಯ ನಾನು.. !

ತಪ್ಪದೆ ಕಲೆಯುತ್ತೇವೆ ತಿಂಗಳ
ಕೊನೆ ಶನಿವಾರದ ಮಧು ರಾತ್ರಿ

ಬುದ್ಧಿ ಜೀವಿಗಳು, ಬರಹಗಾರರು
ಕೂಡಿ ಮಾಡಿಕೊಂಡ ವಿಚಾರವಾದಿಗಳ
ಸಂಘದಲಿ ಮೊದಲು ಕಾಫಿ, ಟೀ, ಬಿಸ್ಕತ್ತು
ನಂತರ ಎಣ್ಣೆ, ಖಾರ, ಬುರುಗಿನ ಶರಬತ್ತು !

ಉಭಯಕುಶಲೋಪರಿ ಒಬ್ಬರಿಗೊಬ್ಬರು
ನಂತರ ತೆಗೆಯುತ್ತೇವೆ ಸರಕುಗಳನು
ಜುಬ್ಬಾದ ಜೇಬಿಂದ, ಬಗಲಿನ ಬ್ಯಾಗಿಂದ
ಮಡಚಿಟ್ಟ ಹಾಳೆಗಳ ಬಿಚ್ಚಿ ಹರಡಿ
ಸಿಗರೇಟು ಹಚ್ಚುತ್ತಾನೆ ಕವಿತೆಯೆಂದರೆ
ಅವನೋ… ಬಲು ಮೂಡಿ !

ದಪ್ಪಗಾಜಿನ ತೇಲುಗಣ್ಣುಗಳನು
ಹಾಳೆಗಳಲಿ ನೆಟ್ಟು
ಬಳೆ ಬಿಟ್ಟ ಹಲ್ಲುಗಳು ,ಹಾರುವ
ಪುಕ್ಕದಂತ ಕೂದಲು, ಓದುವನು
ಅರ್ಥ ವ್ಯಾಕರಣ ಎಲ್ಲ ಎಡವಟ್ಟು..!

ನಂತರದ ಸರದಿ ದನಿಯಿಲ್ಲದವನದ್ದು
ಅವನು ಓದುತ್ತಾನೆ, ನಾವು ನಟಿಸುತ್ತೇವೆ
ಭಲೇ ಕೇಳಿದಂತೆ ತಲೆದೂಗಿ
ತಟ್ಟನೆ ಕಾವೇರುತ್ತದೆ,ದನಿಗಳು ಮೊಳಗುತ್ತವೆ
ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್
ಕಳ್ಳ ರಾಜಕಾರಣಿಗಳು,ಪುಂಡು ಪೋಕರಿಗಳು
ಧರ್ಮ ಮತ ರಾಜಕೀಯಗಳು..

ಸಮಯ ಸರಿದಂತೆ, ಅಮಲು ಹರಿದಂತೆ
ಸಿನಿಮಾ, ಸಂಗೀತ ಮತ್ತು ಸಾಹಿತ್ಯ
ಜೊತೆಗೊಂದಿಷ್ಟು ಇಸ್ಪೀಟು ಎಲೆಯ ಆಟ
ಊಟದ ಸಮಯವಾದಂತೆ ಹೊರಡಲನುವಾಗುತ್ತೇವೆ
ಮರು ಭೇಟಿಯ ಮರುಕಳಿಗೆಗಳಿಗೆ
ಯಾರದೆಂದು ಸರದಿ ಗುರುತಿಸಿಕೊಂಡು
ಅಂದುಕೊಂಡು ದೇಶ ಉದ್ದರಿಸಿದೆವೆಂದು…
ಇದೋ ನನ್ನ ಕವನ ತಯಾರು… !

***

ದೊ೦ಬರಾಟವಯ್ಯಾ

ಸುಶೀಲೇಂದ್ರ ರಾವ್

 

 

ನಮ್ಮ ರಾಜಕೀಯ ಪಟುಗಳು ಆಡುವ ಆಟಗಳೆಲ್ಲಾ
ದೊ೦ಬರಾಟವಯ್ಯಾ

ಸುಳ್ಳು ಜೊಳ್ಳು ಪೊಳ್ಳು ಕತೆಗಳ ಕಟ್ಟಿ
ಇಲ್ಲ ಸಲ್ಲದ ವಿಷಯಗಳ ಮಾತನಾಡಿ
ಮೋಸದಿ೦ ಬಹು ಜನರ ಮನ ಒಲಿಸಿ
ಬಹುಮತ ಪಡೆಯಲು ಆಡುವ ಆಟಗಳೆಲ್ಲಾ
ದೊ೦ಬರಾಟವಯ್ಯಾ……………

ಜಾತಿ ಮತ ಭೇದ ಭಾವನೆಗಳ ಉದ್ರೇಕಿಸಿ
ಕೋತಿಗಳ೦ತೆ ಜನರ ಅತ್ತಲಿ೦ದಿತ್ತ ಎಗರಾಡಿಸಿ
ಷ್ಕುಲ್ಲಕ ವಿಷಯಗಳ ಉಲ್ಬಣಗೊಳಿಸಿ
ಪ್ರೇಷ್ಕಣೀಯ ಘನ ಆಟಗಳ ಆಡಿ ಮೆಚ್ಚಿಗೆ ಪಡೆವ
ದೊ೦ಬರಾಟವಯ್ಯಾ………….

ಅಣಕು ಬಣಕು ಕೆಣಕು ಮಾತುಗಳಿ೦ ಬಣ್ಣಿಸಿ
ಆಣೆ ಪ್ರಮಾಣಗಳಿ೦ದ ನ೦ಬಿಕೆ ಉಲ್ಲೇಕಿಸಿ
ಆಕಾಶಕೆ ಏಣಿ ಹಾಕುವ ಯೋಜನೆಗಳ ಆಸೆ
ತೋರಿಸಿ ಚುನಾವಣೆಯಲಿ ಜಯಗಳಿಸುವ ಆಟಗಳೆಲ್ಲಾ
ದೊ೦ಬರಾಟವಯ್ಯಾ………..

ಜಾತಿ ಕಕಲಾತಿ ನೀತಿ ಮೀಸಲಾತಿಗಳ ಕೆದಕಿ
ಅನಾಹುತಿ ಭೀತಿಗಳ ಉದ್ರೇಕ ಕೆರಳಿಸಿ
ಹೊಸ ಹೊಸ ನೀತಿ ನಿಯಮಗಳ ಭೋದಿಸಿ
ಮಾನವತಿ ಸ೦ಪನ್ನತಿಗಳ ಉಲ್ಲ೦ಗಿಸಿ ಆಡುವ ಆಟಗಳೆಲ್ಲಾ
ದೊ೦ಬರಾಟವಯ್ಯಾ …………

ನ೦ಬದಿರಿ ಈ ದೊ೦ಬರನು ಎ೦ದೆದೂ
ಮತ್ತು ಅವರಾಡುವ ಕಪಟ ಆಟಗಳನು
“ದೊ೦ಬರವ ಬಿದ್ದರೆ ಅದೂ ಒ೦ದು ಲಾಗ”
ಎ೦ಬುದು ನಮ್ಮ ಕನ್ನಡ ಗಾದೆಯು
ಅನುಭವದಮಾತುಗಳಯ್ಯಾ…………

***

’ಕಾಫಿ ವಿತ್ ಕಾಸರವಳ್ಳಿ ’ ಭಾಗ ೨- ’ಹಸೀನಾ ’ ಬಗ್ಗೆ ಡಾ. ಶಿವಪ್ರಸಾದ್

(ಇದೇ ವರ್ಷ ಏಪ್ರಿಲ್ ನಲ್ಲಿ ಡಾಂಕಾಸ್ಟರಿನಲ್ಲಿ ನಡೆದ ಕನ್ನಡ ಬಳಗದ ಯುಗಾದಿ ಸಮಾರಂಭದಲ್ಲಿ   ’ ಅನಿವಾಸಿ ’ ತಂಡ ಡಾ.ಪ್ರಸಾದ್ ರ ನೇತೃತ್ವದಲ್ಲಿ  ’ ’ಕಾಫಿ ವಿತ್ ಕಾಸರವಳ್ಳಿ ’ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲರ ಸಮಕ್ಷಮದಲ್ಲಿ ನಡೆದ ಈ ಕಮ್ಮಟದಲ್ಲಿ  ಡಾ.ಗಿರೀಶ್ ಕಾಸರವಳ್ಳಿಯವರ ಆಯ್ದ ಸಿನಿಮಾಗಳ ಬಗ್ಗೆ ಹಲವರು ಮಾತನಾಡಿದರು. ಆಯಾ ಸಿನಿಮಾಗಳ  ಕೆಲವು ದೃಶ್ಯಾವಳಿಗಳನ್ನು ನೆರೆದ ಜನರಿಗೆ ತೋರಿಸಿದರು.ವಿಶೇಷ ಎಂದರೆ ಈ ಸಿನಿಮಾಗಳ ರೂವಾರಿ, ನಿರ್ದೇಶಕ, ಹಲವು ಚಿತ್ರಗಳ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದ ಖ್ಯಾತಿಯ, ಕಲಾತ್ಮಕ ಚಿತ್ರಗಳ ಗಾರುಡಿಗ, ಪ್ರಪಂಚದ ಒಬ್ಬ ಶ್ರೇಷ್ಠ ಸಿನಿಮಾ ನಿರ್ದೇಶಕರಾದ ಪದ್ಮಶ್ರೀ ವಿಜೇತ ಡಾ. ಗಿರೀಶ್ ಕಾಸರವಳ್ಳಿಯವರೂ ನಮ್ಮೊಡನಿದ್ದುದು ! ಅವರ ಸಮ್ಮುಖದಲ್ಲೇ ಅವರ ಚಿತ್ರಗಳ ಬಗ್ಗೆ ಮಾತನಾಡುವ ನಮ್ಮ ಪ್ರಯತ್ನದ ನಂತರ ಅವರೊಂದಿಗೆ ಆ ಚಿತ್ರದ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ಕೇಳುವ ಅವಕಾಶವೂ ಇತ್ತು.  ಈ ಕಾರ್ಯಕ್ರಮದಲ್ಲಿ ಅತ್ಯಂತ ಸಮಾಧಾನ  ಚಿತ್ತದೊಡನೆ ಕಾಸರವಳ್ಳಿಯವರು ಭಾಗವಹಿಸಿದ್ದಲ್ಲದೆ ಕೇಳಿದ ಪ್ರಶ್ನೆಗಳಿಗೆ ಪ್ರತಿಶತಃ ನೈಜ, ಸರಳ ಮತ್ತು ಪ್ರಬುದ್ಧ ಉತ್ತರಗಳನ್ನು ನೀಡಿ ಎಲ್ಲರ ಮನಗೆದ್ದರು. ಆ ಸಂದರ್ಭದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟ ಡಾ. ಶಿವಪ್ರಸಾದ್   ಜಿ.ಕೆ. ಯವರ ಹಸೀನ ಚಿತ್ರದ ಬಗ್ಗೆ ಮಾತನಾಡಿದರು. ಈ ಚಿತ್ರದ ಬಗ್ಗೆಗಿನ ಅವರ ಲೇಖನ ಈ ವಾರ ನಿಮಗಾಗಿ- ಸಂ )

 

ಹಸೀನಾ ಚಿತ್ರದ ಬಗ್ಗೆ ಕೆಲವು ಅನಿಸಿಕೆಗಳು

 

ಹಸೀನಾ ಚಿತ್ರವನ್ನು ಗಿರೀಶ್ ಕಾಸರವಳ್ಳಿಯವರು  ೨೦೦೪ ರಲ್ಲಿ ನಿರ್ದೇಶಿಸಿದರು .  ಈ ಚಿತ್ರದ ನಿರ್ಮಾಪಕರು ಮಾಜಿ ಐಎಎಸ್ ಅಧಿಕಾರಿಗಳಾದ ಐ. ಎಂ. ವಿಠಲಮೂರ್ತಿಯವರು. ಈ ಚಿತ್ರಕ್ಕೆ ಮೂರು ಬೆಳ್ಳಿ ಕಮಲ ಪ್ರಶಸ್ತಿಯಲ್ಲದೆ ಎರಡು ರಾಜ್ಯ ಪ್ರಶಸ್ತಿ ದೊರಕಿದೆ. ಲೇಖಕಿ ಬಾನು ಮುಷ್ತಾಕ್ ಅವರ ‘ಕರಿನಾಗರಗಳು’ ಎಂಬ ಕಥೆಯ ಮೇಲೆ ಆಧರಿಸಿದ ಚಿತ್ರ ಹಸೀನಾ.

ಒಂದು ಚಿತ್ರವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಅದರ ಅಂತರಾಳವಾದ ಕಥೆ ಕಾದಂಬರಿಯ ವಿಶ್ಲೇಷಣೆ ಕೂಡಾ  ಅನಿವಾರ್ಯವಾಗುತ್ತದೆ. ಈ ಚಿತ್ರಕಥೆ ಬಹಳ ಸರಳವಾಗಿದ್ದು ಇಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತನೆಗಳಿವೆ.  ಒಂದು ಮುಸ್ಲಿಂ ಕುಟುಂಬದಲ್ಲಿ ಹೆಣ್ಣು ಮಕ್ಕಳನ್ನು ಹಡೆಯುತ್ತಿದ್ದ ಹಸೀನಾ  ತನ್ನ ನಾಲ್ಕನೇ ಬಸುರಿನಲ್ಲಿ ವೈದ್ಯರ ಸ್ಕ್ಯಾನಿಂಗ್ ಮೂಲಕ ಮತ್ತೊಂದು ಹೆಣ್ಣು ಮಗುವನ್ನು ಹೆರೆಯುವ  ಪರಿಸ್ಥಿತಿ ಗೊತ್ತಾದಾಗ  ಆಕೆ ತನ್ನ ಗಂಡನ ಆಕ್ರೋಶಕ್ಕೆ ತುತ್ತಾಗುತ್ತಾಳೆ.  ಈ ಒಂದು ಕಾರಣಕ್ಕೆ ಅವಳ ಗಂಡ ಹಸೀನಾಳನ್ನು ವಿಚ್ಛೇದಿಸಿ ಬೇರೊಂದು ಮದುವೆಯಲ್ಲಿ ತೊಡಗುತ್ತಾನೆ.  ಈ ಮಧ್ಯದಲ್ಲಿ ತನ್ನ ಹುಟ್ಟು ಕುರುಡಿ ಮಗುವೊಂದಕ್ಕೆ ಆಪರೇಷನ್ ಮೂಲಕ ದೃಷ್ಟಿ ತರಿಸುವ ಭರವಸೆಯನ್ನು ವೈದ್ಯರು ಕೊಟ್ಟು ಅದಕ್ಕೆ ಬೇಕಾದ ಹಣ ಕೂಡಿಸಲು ಹಸೀನಾ ಹೆಣಗುತ್ತಾಳೆ.

ತನ್ನನ್ನು ವಿಚ್ಛೇದಿಸುತ್ತಿರುವ ಗಂಡನಿಂದ ಧನ ಸಹಾಯ ಬೇಡಿ ಅವನಿಂದ ಮತ್ತಷ್ಟು ಆಕ್ರೋಶಕ್ಕೆ ಒಳಗಾಗುತ್ತಾಳೆ. ಹಸೀನಾ ಅನಕ್ಷರಸ್ಥೆ, ಒಂಟಿ ಹೆಣ್ಣು,  ಮೂರು ಮಕ್ಕಳ ತಾಯಿ, ತುಂಬು  ಗರ್ಭಿಣಿಯಾಗಿದ್ದರೂ ತನ್ನ ಸ್ವಾಭಿಮಾನ ಮತ್ತು ಛಲಗಳಿಂದ ತನಗೆ ನ್ಯಾಯವಾಗಿ ದಕ್ಕಬೇಕಾದ ಸಂಭಾವನೆಗೆ ನಿರಂತರ ಹೋರಾಟ ನಡೆಸುತ್ತಾಳೆ.  ಈ ಜಂಜಾಟದಲ್ಲಿ ಮಸೀದಿಯ ಮುಖ್ಯಸ್ಥ ಮೌಲ್ವಿಯ ಸಹಾಯ ಮತ್ತು ಸಹಕಾರ ಬೇಡುತ್ತಾಳೆ. ಪುರುಷ ಪ್ರಧಾನವಾದ ಸಮಾಜದಲ್ಲಿ ಮತ್ತು ಮಸೀದಿಯ ಒಳ ರಾಜಕೀಯದಲ್ಲಿ ಹಸೀನಾಳ  ಬೇಡಿಕೆ ನಿರ್ಲಕ್ಷಗೊಳ್ಳುತ್ತದೆ.

ಹಸಿನಾಳ ಹೋರಾಟ ಒಂದು ಕಡೆಯಾದರೆ ಮುಸ್ಲಿಂ ಸಮುದಾಯದ ಅನೇಕ ಮಹಿಳೆಯರು ಒಂದಲ್ಲ ಒಂದು ರೀತಿಯ ವೈಯುಕ್ತಿಕ  ಶೋಷಣೆಗೆ ಒಳಪಟ್ಟು ನಿಸ್ಸಹಾಯಕರಾಗಿ ಪರಿತಪಿಸುವುದನ್ನು ಚಿತ್ರದಲ್ಲಿ ಕಾಣಬಹುದು. ಕೊನೆಗೆ ಹಸೀನಾ ರೋಸತ್ತು ಮಸೀದಿಯ ಆವರಣದಲ್ಲಿ ಅನ್ನ ನೀರು ಬಿಟ್ಟು ಮಕ್ಕಳ ಜೊತೆ ಧರಣಿಗೆ ಕೂರುತ್ತಾಳೆ. ಇದರಿಂದ ಸಿಟ್ಟಿಗೆದ್ದ ಗಂಡ  ಯಾಕೂಬ್ ಅವಳ ಮೇಲೆ ಹಲ್ಲೆ ಮಾಡುತ್ತಾನೆ. ಈ ಚಕಮಕಿಯಲ್ಲಿ ಅವರ ಕುರುಡು ಮಗು ಮುನ್ನಿ ಮಧ್ಯದಲ್ಲಿ ಸಿಲುಕಿ ಸಾವನ್ನಪ್ಪುತ್ತಾಳೆ.  ಈ ಘಟನೆಯ ನಂತರ ಹಸೀನಾಗೆ  ಒದಗಿದ  ಅನ್ಯಾಯದ ಬಗ್ಗೆ ಮೌಲ್ವಿಗೆ ಮರುಕ ಹುಟ್ಟಿ ಅವಳಿಗೆ ಸಂಭಾವನೆ ಕೊಡಿಸಲು ಮುಂದಾಗುತ್ತಾನೆ. ತಾನು ಯಾವ ಕಾರಣಕ್ಕೆ ಹೋರಾಟ ನಡೆಸಿದ್ದಳೋ ಆ ಮುನ್ನಿಯೇ ಇಲ್ಲದ ಮೇಲೆ ಸಂಭಾವನೆ ಸಿಕ್ಕರೆಷ್ಟು ಬಿಟ್ಟರೆಷ್ಟು ಎಂಬ  ಹಸೀನಾಳ ಭಾವನೆಯಲ್ಲಿ ಚಿತ್ರ ಕೊನೆಗೊಳ್ಳುತ್ತದೆ. Justice delayed is justice denied ಎಂಬ ಇಂಗ್ಲಿಷ್ ಉಕ್ತಿಯನ್ನು ಚಿತ್ರ ಇಲ್ಲಿ ನೆನಪಿಗೆ ತರುತ್ತದೆ.

ಈ ಚಿತ್ರದಲ್ಲಿನ ಸಾಮಾಜಿಕ ಸಮಸ್ಯೆಗಳಾದ ಹೆಣ್ಣು ಭ್ರೂಣಹತ್ಯೆ, ಸ್ತ್ರೀ ಸ್ವಾತಂತ್ರ,  ಸ್ತ್ರೀಯರ ಮೇಲೆ ದಬ್ಬಾಳಿಕೆ,  ತಾರತಮ್ಯ, Child Labour, Domestic violence ಇವು ಬಹಳ ಪ್ರಸ್ತುತವಾಗಿದೆ.  ಅನಕ್ಷರತೆ ಮತ್ತು ಬಡತನ ಹೇಗೆ ಈ ಮೇಲಿನ ಸಮಸ್ಯೆಗಳಿಗೆ ಹಿನ್ನಲೆ ಕಾರಣಗಳಾಗಿವೆ ಎಂಬುದನ್ನು ಗಮನಿಸಬಹುದು. ಈ ರೀತಿಯ ಸಮಸ್ಯೆಗಳು ಎಲ್ಲ ಧರ್ಮಗಳಲ್ಲೂ ಕಾಣಬಹುದು ಈ ಚಿತ್ರದ ಮುಸ್ಲಿಂ ಕುಟುಂಬ ಒಂದು ಉದಾಹರಣೆಯಷ್ಟೆ.

ಇಷ್ಟು ಸೂಕ್ಷ್ಮವಾದ ಸಮಸ್ಯೆಯನ್ನು ತೆಗೆದುಕೊಂಡು ಅದರಲ್ಲೂ ಸಮಕಾಲೀನ ಪರಿಸ್ಥಿತಿಯಲ್ಲಿ ಮುಸ್ಲಿಮ್ ಸಮುದಾಯವನ್ನು ಪ್ರಧಾನವಾಗಿಟ್ಟುಕೊಂಡು ಒಂದು ಪ್ರಾದೇಶಿಕತೆ ಕಟ್ಟಿರುವುದು ಶ್ಲಾಘನೀಯ.  ಚಿತ್ರದಲ್ಲಿ  ಮುಸ್ಲಿಂ ಕನ್ನಡ ಭಾಷೆ, ನಡೆ ನುಡಿ ಮತ್ತು  ಸಂಸ್ಕೃತಿಯನ್ನು ಸಂಪೂರ್ಣವಾಗಿ ಪರಿಚಯಿಸಿ ಅಲ್ಲಿನ ಸಮಸ್ಯೆಗಳನ್ನು ವಿಶ್ಲೇಷಿಸಿರುವುದು ವಿಶೇಷ.  ಹಿಂದೂ ಮುಸ್ಲಿಂ ಘರ್ಷಣೆ ಗಳನ್ನಷ್ಟೇ ಬಂಡವಾಳವಾಗಿಸಿ ತೆಗೆದ ಇತರ ಚಿತ್ರಗಳಿಗಿಂತ ಹಸೀನಾ ಭಿನ್ನವಾಗಿದೆ.  ಇಲ್ಲಿ ಅಡಗಿರುವ ಸಾಮಾಜಿಕ ಸಮಸ್ಯೆಗಳಿಂದಾಗಿ ಎಲ್ಲ ವರ್ಗದ ಎಲ್ಲ ಧರ್ಮದ ಜನರ ಕಲ್ಪನೆಗೆ ನಿಲುಕುವ ಸಿನೆಮಾ ಆಗಿದೆ.  ಸಾಮಾಜಿಕ ಕಾಳಜಿಯ ಬಗ್ಗೆ ತೆಗೆದ ಅತ್ಯುತ್ತಮ ಚಿತ್ರವೆಂಬ ಪುರಸ್ಕಾರ ಗಿಟ್ಟಿದೆ.  ಹಸೀನಾ ಪಾತ್ರದಲ್ಲಿ ಖ್ಯಾತ ನಟಿ ತಾರಾ ಅವರ ಅಭಿನಯ ತುಂಬಾ ಉತ್ಕೃಷ್ಟವಾಗಿದೆ. ಇಲ್ಲಿ ಮಕ್ಕಳ ಪಾತ್ರ ಮತ್ತು ಅವರ ಮುಗ್ಧತೆ ಈ ಗಂಭೀರ ಸಮಸ್ಯೆಗಳ ಮಧ್ಯೆ ಕಳಕಳಿ ತಂದಿದೆ.

ಹಸೀನಾ ಮೂಲ ಕಥೆಯನ್ನು ಓದಿದವರು  ನಿರ್ದೇಶಕರು  ತಂದಿರುವ ಸಾಕಷ್ಟು ಬದಲಾವಣೆಗಳನ್ನು ಗುರುತಿಸಬಹುದು.  ಒಂದು ಸಾಹಿತ್ಯ ಮಾಧ್ಯಮವನ್ನು ದೃಶ್ಯ ಮಾಧ್ಯಮವಾಗಿ ಮಾರ್ಪಾಟು ಮಾಡಿದಾಗ ಈ ರೀತಿಯ ಬದಲಾವಣೆಗಳು ಅನಿವಾರ್ಯ ಎಂಬುದು ಕಾಸರವಳ್ಳಿಯವರ ಅಭಿಪ್ರಾಯ.  ಒಬ್ಬ ನಿರ್ದೇಶಕನಿಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕೆಂಬ ಉದ್ದೇಶವಿದ್ದಲ್ಲಿ ಆ ಉದ್ದೇಶ ಈ ಚಿತ್ರದಲ್ಲಿ ಸಫಲವಾಗಿದೆ. ನಿರ್ದೇಶಕ ತನ್ನ ಅಭಿಪ್ರಾಯವನ್ನು ಇತರರ ಮೇಲೆ ಹೇರದೆ ಪ್ರೇಕ್ಷಕರ ಒಳ ಸಂವಾದವನ್ನು ಹುಟ್ಟು  ಹಾಕಿ ಆಲೋಚನಾ ಕ್ರಮಗಳನ್ನು ಕೆರಳಿಸದೆ ಅರಳಿಸಬೇಕು ಎಂದು ಕಾಸರವಳ್ಳಿಯವರು ಸಂದರ್ಶನದಲ್ಲಿ ಹೇಳಿದ್ದನ್ನು ಇಲ್ಲಿ ನೆನೆಯುತ್ತೇನೆ.

ಡಾ.  ಜಿ. ಎಸ್. ಶಿವಪ್ರಸಾದ್