“ಅವನ ನಿಯಮ ಮೀರಿ ಇಲ್ಲೀ ಏನು ಸಾಗದು… ನಾವು ನೆನೆಸಿದ೦ತೆ ಬಾಳಲೇನು ನಡೆಯದು….”

“ಬಾನಿಗೊ೦ದು ಎಲ್ಲೆ ಎಲ್ಲಿದೇ? ನಿನ್ನಾಸೆಗೆಲ್ಲಿ ಕೊನೆಯಿದೇ?
ಏಕೆ ಕನಸು ಕಾಣುವೇ? ನಿಧಾನಿಸು.. ನಿಧಾನಿಸು..”

ಪ್ರೇಮದ ಕಾಣಿಕೆ ಚಿತ್ರದ ಹಾಡು ಎಲ್ಲರಿಗೂ ನೆನಪಿರಬಹುದು, ಚಿ. ಉದಯಶಂಕರ್ ಅವರ ಅದ್ಭುತ ರಚನೆಗೆ ಡಾ. ರಾಜಕುಮಾರ್ ಅವರು ಸುಂದರವಾಗಿ ಹಾಡಿದ್ದಾರೆ. ಪ್ರಸ್ತುತದಲ್ಲಿಯೂ ಈ ಹಾಡು ನಿಜಕ್ಕೂ ಅರ್ಥಪೂರ್ಣವಾಗಿದೆ, ಇಂದಿನ ಮನುಷ್ಯನ ಆಸೆ, ಆವಿಷ್ಕಾರಗಳಿಗೆ ಕೊನೆ ಎಲ್ಲಿದೆ ಎಂದು ಕೇಳುವ ಪರಿಸ್ಥಿತಿ ಬಂದಿದೆ. ಹೊಸ ಆವಿಷ್ಕಾರಗಳು ತಪ್ಪಲ್ಲ, ವೈಜ್ಞಾನಿಕ ಆವಿಷ್ಕಾರಗಳು ಜೀವನ ಮತ್ತು ಪ್ರಗತಿಯನ್ನು ನಡೆಸುತ್ತವೆ. ಆದಾಗಿಯೂ, ಅದರಲ್ಲಿ ಕೆಲವು ದುಷ್ಪರಿಣಾಮಗಳು ಇವೆ.

ವೈಜ್ಞಾನಿಕ ಆವಿಷ್ಕಾರಗಳ ಮತ್ತು ದುಷ್ಪರಿಣಾಮಗಳ ಬಗ್ಗೆ ವಿಚಾರ ಬಂದಾಗ, ಐನ್ಸ್ಟೀನ್ ಅವರ ದ್ರವ್ಯ – ಶಕ್ತಿ ಸಮೀಕರಣ (E =mc2) ಉದಾಹರಣೆ ನೋಡಣ. ಐನ್ಸ್ಟೀನ್ ಅವರು ಈ ಸಮೀಕರಣ ಜಗತ್ತಿಗೆ ತಂದಾಗ ಅವರು ಪರಮಾಣು ಶಕ್ತಿ ಮತ್ತು ಔಷಧ ಕ್ಷೇತ್ರದಲ್ಲಿ ತರಬಹುದಾದ ಪ್ರಗತಿಗಳ ಬಗ್ಗೆ ಒತ್ತು ಕೊಟ್ಟರು. ಇದರ ದುಷ್ಪರಿಣಾಮ ಜಗತ್ತು ಜಪಾನಿನ ಹಿರೋಷಿಮಾ ಮತ್ತು ನಾಗಾಸಾಕಿಯಲ್ಲಿ ಕಂಡಿತು. ಇನ್ನೊಂದು ಉದಾಹರಣೆ ಈಗ ನಮ್ಮ ಮುಂದಿದೆ, ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ) ಪ್ರಭಲತೆ ಜಗತ್ತಿಗೆ ಬಹು ಉಪಯುಕ್ತ ವ್ಯವಸ್ಥೆ ಕಲ್ಪಿಸಿತು. ದೇಶ ವಿದೇಶದ ವಿಷಯಗಳು ನಿಮ್ಮ ಬೆರಳು ತುದಿಯಲ್ಲಿ ಲಭ್ಯ. ಹತ್ತಿರದ ಆಸ್ಪತ್ರೆ, ಶಾಲೆ, ಮತ್ತಿತರ ಸೇವೆಗಳು ಮತ್ತು ಜನರ ಅಭಿಪ್ರಾಯ ಸರಳವಾಗಿ ಲಭ್ಯವಾಯಿತು. ಆದರೆ ಇದೆ ಸಾಮಾಜಿಕ ಮಾಧ್ಯಮ ಇರದ, ಕಂಡಿರದ ಮಾನಸಿಕ ರೋಗಗಳನ್ನು ಪರಿಚಯಿಸಿತು. ಪ್ರತಿ ಕ್ಷಣಕ್ಕೂ ಕಣ್ಣ ಮುಂದೆ ಬರುವ ಸುದ್ದಿ ಸತ್ಯವೋ, ಅಸತ್ಯವೋ ತಿಳಿಯದೆ ಜನರು ಅತಂತ್ರ ಪರಿಸ್ಥಿತಿ ಮುಟ್ಟುತ್ತಾರೆ, ರಾಷ್ಟ್ರದ ರಾಜಕೀಯ ಸಾಮಾಜಿಕ ತಾಣದಿಂದ ನಡೆಯುತ್ತೆ. ನೆಟ್ಫ್ಲಿಸ್ (Netflix) ನಲ್ಲಿ ಸಾಕ್ಷ್ಯಚಿತ್ರ “The Social Dilemma” ಸಾಮಾಜಿಕ ಮಾಧ್ಯಮದಿಂದ ಆಗುವ ದುಷ್ಪರಿಣಾಮಗಳು ಮನಮುಟ್ಟುವಂತೆ ಚಿತ್ರೀಕರಿಣಿಸಿದ್ದಾರೆ.

ಡಿಸೆಂಬರ್ ಮುಗಿದು ಹೊಸ ವರ್ಷ ಬಂತೆಂದರೆ ಎಲ್ಲರೊ ಒಂದೆಡೆ ಕಲೆತು ಸಂತೋಷ ಪಡುತ್ತಾರೆ, ಹೊಸವರ್ಷದ ನಿರ್ಣಯ (Resolution) ಮಾಡುತ್ತಾರೆ. ನಮ್ಮ ಸಂಶೋಧಕರೂ ಹೊಸ ವರ್ಷದ ಜೊತೆ, ತಮ್ಮ ಸಂಶೋಧನಾ ವಿವರಗಳನ್ನು ಸಿದ್ದ ಪಡಿಸಿಕೊಳ್ಳತ್ತಿರಬಹುದು, ಇತ್ತೀಚಿನ ಪ್ರತಿ ದಶಕ, ವರ್ಷ ಹೊಸ ಹೊಸ ಸಂಶೋಧನೆಗಳ ಅಗರ ಆಗಿದೆ. ಇಂತಹುದೇ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುವ ಉದ್ದೇಶದಿಂದ ಈ ಲೇಖನ ಬರೆಯುವ ವಿಚಾರ ಮಾಡಿದೆ. ಇದನ್ನು ನಾವು ಕೇಳಿದ ಪೌರಾಣಿಕ ಸಾಹಿತ್ಯದೊಂದಿಗೆ ಹೊಂದಿಸಿ ಹಂಚಿಕೊಳ್ಳುವ ಒಂದು ಪ್ರಯತ್ನ ಮಾಡುತ್ತಿದ್ದೇನೆ. ಈ ಒಂದು ಪ್ರಯತ್ನಕ್ಕೆ ಸ್ಫೂರ್ತಿ ಸದ್ಯೋಜಾತ ಭಟ್ಟ ಅವರು ಬರೆದ “ಕಾಲಯಾನ” ಪುಸ್ತಕ.

೧: ಸತ್ಯವ್ರತ ರಾಜ ಸಶರೀರದಿಂದ ದೇವಲೋಕ ಅಂದರೆ ಸ್ವರ್ಗಕ್ಕೆ ಹೋಗುವ ತನ್ನ ಇಚ್ಛೆ ವಸಿಷ್ಠ ಋಷಿಗಳೊಂದಿಗೆ ಹಂಚಿಕೊಳ್ಳುತ್ತಾನೆ. ಅವರು ಅದು ಸಾಧ್ಯವಾಗದ ವಿಚಾರ ಎಂದು ಸಹಾಯ ಮಾಡಲು ನಿರಾಕರಿಸುತ್ತಾರೆ. ಆಗ ಸತ್ಯವ್ರತ (ಶಾಪದಿಂದ ಚಾಂಡಾಲನಾಗಿ), ಮಹಾಋಷಿ ವಿಶ್ವಾಮಿತ್ರರಲ್ಲಿ ಈ ವಿಚಾರ ತಿಳಿಸಿ ಸಹಾಯ ಯಾಚಿಸುತ್ತಾನೆ. ವಿಶ್ವಾಮಿತ್ರರು ತಮ್ಮ ತಪೋಬಲದಿಂದ ಅವನನ್ನು ಸ್ವರ್ಗಕ್ಕೆ ಕಳುಹಿಸುತ್ತಾರೆ, ಆದರೆ ಇಂದ್ರ ಅವನನ್ನು ಒಳಗೆ ಸೇರಿಸದೆ ಕೆಳಕ್ಕೆ ನೂಕುತ್ತಾನೆ. ಕೆಳಗೆ ಬೀಳುವ ಸತ್ಯವ್ರತನನ್ನು ತಡೆದು ನಿಲ್ಲಿಸಿ ಅಲ್ಲಿ ಪ್ರತಿಸ್ವರ್ಗ ನಿರ್ಮಿಸುತ್ತಾರೆ. ಇದನ್ನೇ ತ್ರಿಶಂಕು ಸ್ವರ್ಗ ಎನ್ನುತ್ತಾರೆ.

ವೈಜ್ಞಾನಿಕ ಪ್ರಯೋಗಗಳಿಂದ ಈಗಾಗಲೇ ವಿಶ್ವಾಮಿತ್ರರು ನಿರ್ಮಿಸಿದಂತಹ ತಂಗುದಾಣ ಬಾಹ್ಯಾಕಾಶದಲ್ಲಿ ಬಂದಿವೆ. ೨೦೨೪ ಡಿಸೆಂಬರ್ ೩೦ಕ್ಕೆ ಭಾರತದ ಬಾಹ್ಯಾಕಾಶ ಸಂಸ್ಥೆ (ISRO) ಸ್ಪೇಸ್ ಡಾಕಿಂಗ್ (ಬಾಹ್ಯಾಕಾಶ ಬಂದರು ಅನ್ನಬಹುದೇ?) ಸಲುವಾಗಿ ಪ್ರಯೋಗ ಮಾಡಿದರು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ – ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ISS) ಪ್ರಸ್ತುತ ಅಂತರಿಕ್ಷದಲ್ಲಿ ಕಾರ್ಯ ನಿರತವಾಗಿದೆ. ಇದರಿಂದ ಬಾಹ್ಯಾಕಾಶ ಪ್ರಯೋಗಗಳಿಗೆ ಅಲ್ಲದೆ ಔಷಧಿ ತಯಾರಿಕೆ, ಸೂರ್ಯನ ಕಿರಣದ ಸಹಾಯದಿಂದ ಸುಸ್ಥಿರತೆ (ಸಸ್ಟೇನ್ಬಿಲಿಟಿ) ಪ್ರಯೋಗ ಮುಂತಾದವುಗಳು ಸಾಧ್ಯವಾಗಿವೆ. ಇದು ಇನ್ನೂ ಆರಂಭಿಕ ಹಂತದಲ್ಲಿರುವ ಕಾರಣ ಇದರ ಉಪಯೋಗ, ದುಷ್ಪರಿಣಾಮ ಪೂರ್ಣ ಪ್ರಮಾಣದಲ್ಲಿ ಕಾಣುತ್ತಿಲ್ಲ. ಸದ್ಯದ ದುಷ್ಪರಿಣಾಮ ವಿಕಿರಣ, ಬಾಹ್ಯಾಕಾಶ ಕಸ, ಮಾನಸಿಕ ರೋಗಗಳು ಇತ್ಯಾದಿ.

೨: ಕಕುದ್ಮಿಗೆ ಮಹರಾಜನಿಗೆ ರೇವತಿ ಎಂಬ ಸುಂದರ ಮಗಳಿದ್ದಳು. ಅವಳಿಗೆ ಸರಿಯಾದ ವರನನ್ನು ಹುಡುಕಲು ಸ್ವಯಂವರ ಏರ್ಪಡಿಸಿದ, ಯಾವ ವರನು ಸರಿಯಾದ ಜೋಡಿ ಎನಿಸಲಿಲ್ಲ. ಕೊನೆಗೆ ಕಕುದ್ಮಿ ಮಗಳೊಂದಿಗೆ ಬ್ರಹ್ಮನನ್ನು ಕಾಣಲು ಬ್ರಹ್ಮಲೋಕಕ್ಕೆ ಪಯಣಿಸಿದನು. ಅಲ್ಲಿ ಬ್ರಹ್ಮ ದೇವರ ಸಭೆಯಲ್ಲಿ ಸಂಗೀತ ಕಾರ್ಯಕ್ರಮ ನಡೆದಿತ್ತು. ಸ್ವಲ್ಪ ಹೊತ್ತಿನನಂತರ ಬ್ರಹ್ಮ ದೇವರು ಕಕುದ್ಮಿ ಬಂದ ಕಾರಣ ಕೇಳಿದರು. ಆಗ ಕಕುದ್ಮಿ ತನ್ನ ಕಷ್ಟ ತಿಳಿಸಿ, ಮಗಳಿಗೆ ಸರಿಯಾದ ವರನನ್ನು ಆಯ್ಕೆ ಮಾಡಿಕೊಡಲು ಸಹಾಯ ಕೇಳುತ್ತಾನೆ. ಆಗ ಬ್ರಹ್ಮ ನಗುತ್ತ ಹೇಳುತ್ತಾನೆ, “ನೀನು ಇಲ್ಲಿಗೆ ಬಂದು ಕಳೆದ ಕ್ಷಣಗಳಲ್ಲಿ ಭೂಲೋಕದಲ್ಲಿ ೨-೩ ಯುಗಗಳು ಮುಗಿದು ಹೋಗಿವೆ, ಈಗ ನಿನ್ನ ಸಮಯದ ಯಾವ ರಾಜಕುಮಾರ ಬದುಕಿಲ್ಲ, ಅವರ ನಂತರದ ಸಂತತಿ ಅಲ್ಲಿ ಇರುವುದು…ಅವರ ಮರಿ ಮಕ್ಕಳು ಹುಟ್ಟಿದ್ದಾರೆ.”

ಸಮಯ ವಿಸ್ತರಣೆ, ಇದು ಐನ್ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತ ಇಂದ ಬಂದ ಪರಿಣಾಮ.
ಸಮಯ ವಿಸ್ತರಣೆ ಬಗ್ಗೆ ನಾನು ಕೆಲವು ಲೇಖನಗಳನ್ನು ಓದುತ್ತಿದ್ದೆ, ಆಗ ದೊರಕಿದ ಒಂದು ಲೇಖನ “ಡುಂಡಿರಾಮ್ಸ್ ಲಿಮರಿಕ್ಸ್” (ಕವಿಗಳಾದ ಡುಂಡಿರಾಜ್ ಮತ್ತು ಅಣಕವಾಡುಗಳ ಸರದಾರ ಎನ್. ರಾಮನಾಥ್ ಜಂಟಿಯಾಗಿ ರಚಿಸಿದ ಚುಟುಕುಗಳ ಸಂಕಲನ) ಪುಸ್ತಕ ಪರಿಚಯ, ಡಾ. ಬಿ ಜನಾರ್ಧನ್ ಭಟ್ ಅವರಿಂದ. ಈ ಲೇಖನದ ಒಂದು ಭಾಗ ನನ್ನ ಲೇಖನಕ್ಕೆ ಉಪಯುಕ್ತ, ಆದುದರಿಂದ ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
(vishvadhwani.com/2021/10/03/dumi-rams-limericks/)

“ಸಾಪೇಕ್ಷತಾ ಸಿದ್ಧಾಂತದ ಒಂದು ಪ್ರಮೇಯ, ಬೆಳಕಿನ ವೇಗಕ್ಕಿಂತ ವೇಗವಾಗಿ ಹೋದರೆ ಕಾಲವೂ ಸಾಪೇಕ್ಷವಾಗಿರುತ್ತದೆ ಎನ್ನುವುದು. ಉದಾಹರಣೆಗೆ ಯಾರಾದರೂ ಬೆಳಕಿನ ವೇಗಕ್ಕಿಂತ ವೇಗವಾಗಿ ಹೋಗುವ ರಾಕೆಟಿನಲ್ಲಿ ಬಾಹ್ಯಾಕಾಶಕ್ಕೆ ಹೋಗಿ ಹಲವು ವರ್ಷಗಳ ನಂತರ ಭೂಮಿಗೆ ಹಿಂದಿರುಗಿದರೆ ಅವರ ವಯಸ್ಸು ಹೆಚ್ಚೇನೂ ಬದಲಾಗಿರುವುದಿಲ್ಲ; ಆದರೆ ಇಲ್ಲಿನ ಅವರ ಓರಗೆಯವರು ಮುದುಕರಾಗಿರುತ್ತಾರೆ! ಇಂತಹ ಸಿದ್ಧಾಂತ ಬಂದಾಗ ಹುಟ್ಟಿಕೊಂಡ ಲಿಮರಿಕ್ ಒಂದು ಇನ್ನೂ ಜಗತ್ತಿನಾದ್ಯಂತ ಪ್ರಸಿದ್ಧವಾಗಿ ಚಲಾವಣೆಯಲ್ಲಿದೆ!

1923 ರಲ್ಲಿ ಲಂಡನಿನ ಪ್ರಸಿದ್ಧ ಹಾಸ್ಯ ಪತ್ರಿಕೆ – ವ್ಯಂಗ್ಯ ಚಿತ್ರಗಳಿಗೂ ಅದು ಪ್ರಸಿದ್ಧ – ‘ಪಂಚ್’ನಲ್ಲಿ ಅದು ಮೊದಲು ಅನಾಮಧೇಯ ಕವಿಯ ಹೆಸರಿನಲ್ಲಿ ಪ್ರಕಟವಾಯಿತು. ಅದು ಹೀಗಿದೆ:

There was a young lady named Bright
Whose speed was much faster than light.
She set out one day
In a relative way
And returned (on) the previous night.

ಸುಮಾರಾಗಿ ಇದರ ಭಾವಾರ್ಥ ಹೀಗೆ (ಅನುವಾದ ಡಾ. ಬಿ ಜನಾರ್ಧನ್ ಭಟ್ ):

ಬ್ರೈಟ್ ಎಂಬ ಹೆಸರಿನವಳು ಇದ್ದಳೊಬ್ಬಳು
ಬೆಳಕಿಗಿಂತ ವೇಗವಾಗಿ ಚಲಿಸುವವಳು
ಒಂದುದಿನ ಹಗಲು ಸಾ-
ಪೇಕ್ಷ ರೀತಿಯಲ್ಲಿ ಹೊರಟು
ಹಿಂದಿನ ದಿನ ರಾತ್ರಿಯೇ ಹಿಂದಿರುಗಿದಳು.

ಸಮಯ ವಿಸ್ತರಣೆ ಸಿದ್ದಾಂತದ ಆಧಾರದ ಮೇಲೆ ಅಮರತ್ವ ಅಥವಾ ಸಾವನ್ನು ಮುಂದೂಡುವ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ವಿಚಾರ ಮಾಡುವ ಮುನ್ನ ನಚಿಕೇತನ ಬಗ್ಗೆ ತಿಳಿಯೋಣ.

೩. ಉದ್ಧಾಲಕ ಗೌತಮ ಗೋತ್ರದ ಋಷಿ, ಅವನು ಲೋಕದ ಕಲ್ಯಾಣಕ್ಕೆ “ವಿಶ್ವಜಿತ್” ಎನ್ನುವ ಯಾಗ ಮಾಡುತ್ತಾನೆ. ಈ ಯಾಗಕ್ಕೆ ದಾನ ಪ್ರಧಾನ ಆದುದರಿಂದ ಅವನು ತನ್ನೆಲ್ಲ ಸಂಪತ್ತನ್ನು ದಾನ ಮಾಡುತ್ತಾನೆ. ಅವನ ಮಗ ನಚಿಕೇತ, ಸಣ್ಣ ಹುಡುಗ ಅವನು. ಉದ್ಧಾಲಕ ದಾನ ಮಾಡುತ್ತ ಕೊನೆಗೆ ತನ್ನಲ್ಲಿ ಇರುವ ಗೋವುಗಳನ್ನು ದಾನ ಮಾಡುತ್ತಾನೆ. ಗೋವುಗಳು ಬಡಕಲು ಇದ್ದು ದಾನಕ್ಕೆ ಯೋಗ್ಯ ಅಲ್ಲ ಎಂದು ಅವನ ಮಗ ನಚಿಕೇತ ಅಪ್ಪನಿಗೆ ತಿಳಿಸುತ್ತಾನೆ. ಆಗ ಅಪ್ಪ ಹೇಳುತ್ತಾನೆ, “ನನ್ನಲ್ಲಿ ಇರುವದು ಇದೆ ಗೋವುಗಳು, ಇದನ್ನು ಬಿಟ್ಟರೆ ನೀನು ಉಳಿದಿದ್ದೀಯ”… ಆಗ ನಚಿಕೇತ ತನ್ನನ್ನು ದಾನ ಮಾಡಲು ಕೇಳುತ್ತಾನೆ, ಅದನ್ನು ಕೇಳಿ ಅಪ್ಪ ಕೋಪದಲ್ಲಿ ನಿನ್ನನ್ನು ಯಮನಿಗೆ ದಾನ ಮಾಡುತ್ತೇನೆ ಎನ್ನುತ್ತಾನೆ.
ನಚಿಕೇತನಿಗೆ ಒಂದು ಅಶರೀರವಾಣಿ ಕೇಳಿಸುತ್ತದೆ, ಅದು ಅವನಿಗೆ ಯಮ ಲೋಕಕ್ಕೆ ಹೋಗಲು ತಿಳಿಸುತ್ತದೆ. ನಚಿಕೇತ ಅಲ್ಲಿಗೆ ಹೋದಾಗ ಯಮನು ಇರುವದಿಲ್ಲ, ಆದುದರಿಂದ ಅವನು ಅಲ್ಲಿಯೇ ಯಮನಿಗಾಗಿ ಕಾಯುತ್ತ ಕುಳಿತುಕೊಳ್ಳುತ್ತಾನೆ. ಮೂರು ದಿನದ ನಂತರ ಯಮ ಬಂದು ಅಲ್ಲಿ ಕಾಯುತ್ತ ಕುಳಿತ ಬಾಲಕನನ್ನು ನೋಡಿ ಅವನಿಗೆ ಮೂರು ವರಗಳನ್ನು ಕೊಡುತ್ತಾನೆ. ನಚಿಕೇತ ತನ್ನ ಮೂರನೇ ವರದಲ್ಲಿ “ಮನುಷ್ಯ ಮೃತ್ಯುವನ್ನು ಜಯಿಸುವ ಉಪಾಯ ತಿಳಿಸಿಕೊಡು” ಎನುತ್ತಾನೆ. ಎರಡು ವರಗಳಿಗೆ ಅಸ್ತು ಅಂದಿದ್ದ ಯಮ, ಮೂರನೇ ವರ ನೀನು ಕೇಳಿದಂತೆ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಾನೆ.

ಯಮನು ನಿರಾಕರಿಸಿದ ವರ “ಸಾವನ್ನು ಗೆಲ್ಲುವುದು” ಈಗ ಮನುಷ್ಯನ ಮಹತ್ತರ ಗುರಿ ಆಗಿದೆ. ವೈಜ್ಞಾನಿಕವಾಗಿ ದೀರ್ಘಾಯುಷ್ಯ ಪಡೆಯುವುದು, ಚಿರಂಜೀವಿ ಆಗುವ ಕನಸನ್ನು ಕಾಣುತ್ತಿದ್ದಾನೆ.

ಖ್ಯಾತ ಗಾಯಕ, ನೃತ್ಯಪಟು ಮೈಕಲ್ ಜ್ಯಾಕ್ಸನ್ ಹೇಳಿದ್ದು, “”I don’t want to die. I want to live forever”, ಅದಕ್ಕಾಗಿ ಅವನು ಬಹಳ ಪ್ರಯತ್ನಪಟ್ಟನು.

“ಹುಟ್ಟು ಸಾವು ಬದುಕಿನಲ್ಲಿ ಎರಡು ಕೊನೆಗಳು… ಬಯಸಿದಾಗ ಕಾಣದಿರುವ ಎರಡು ಮುಖಗಳು…”
ಹುಟ್ಟಿದ್ದು ಸಾಯಬೇಕು, there is nothing forever ಎಂಬುದು ಜಗದ ನಿಯಮ, ಇದನ್ನು ಅಳಿಸಲು ನೋಡಿದರೆ ನಿಸರ್ಗದ ತತ್ವ ಬದಲಿಸಿದಂತೆ. ಬಂದ ಕೆಲಸ ಮುಗಿದ ಮೇಲೆ ಸಂತೋಷದಿಂದ ಹೋಗಬೇಕು, ರಾಮ… ಕೃಷ್ಣರೇ ಇದಕ್ಕೆ ಹೊರತಲ್ಲ, ಭೀಷ್ಮ ಪೀತಾಮಹ ಇಚ್ಚಾ ಮರಣ ಇದಾಗ್ಯೂ ಅವರು ಸಿಕ್ಕ ವರದಿಂದ ಚಿರಂಜೀವಿ ಆಗಲು ಬಯಸದೆ ಸಂತೋಷದಿಂದ ಈ ಬದುಕಿನಿಂದ ನಿರ್ಗಮಿಸಿದರು. ಅಶ್ವಥಾಮ ಶಾಪದಿಂದ ಚಿರಂಜೀವಿ ಆಗಿರಬಹುದು ಆದರೆ ಪರಿಣಾಮ ಅತಿ ಭೀಕರ.

ಚೀನಾ ದಲ್ಲಿ ೨೧% ಕ್ಕೋ ಹೆಚ್ಚಿನ ಜನ ೬೦ ವರುಷ ಮೇಲ್ಪಟ್ಟವರು. ಇನ್ನು ಜಪಾನ್ ದೇಶದ ೩೦% ಕ್ಕೋ ಹೆಚ್ಚು ಜನ ವಯಸ್ಸಾದವರು. ಸಾವು ಗೆಲ್ಲುವ ಔಷದಿ ಸಿಕ್ಕರೆ (ಅಮೃತ) ಎಲ್ಲೆಲ್ಲಿಯೂ ಜನರೇ… ಅವರ ಅರೋಗ್ಯ, ಜೀವನ ಮುಂತಾದ ನೆರವು ಸರಕಾರದ ಜವಾಬ್ದಾರಿ… ಈ ಪರಿಸ್ಥಿತಿ ಬಂದರೆ ಸರಕಾರ ಇರಬಹುದೇ? ಅವರಿಗೆ ಜೀವಿಸಲು ನೈಸರ್ಗಿಕ ಸಂಪನ್ಮೂಲಗಳು ಉಳಿಯುವದೇ? ಭೂಮಿ ಬಿಟ್ಟು, ಮಂಗಳ… ನಂತರ ಚಂದ್ರ… ನಂತರ ಇನ್ನೊಂದು ಗ್ರಹ ಹುಡುಕುತ್ತ ಮನೆ ಖರೀದಿಸುವ ಪ್ರಮೇಯ ಬರಬಹುದು. ಈಗ ಸಾಮಾನ್ಯವಾಗಿ ಕೇಳಿಬರುವದು “ಸತ್ತ ಮೇಲೆ ಹಣ ತೆಗೆದುಕೊಂಡು ಹೋಗುತ್ತಾರೇನು?”… ಇನ್ನು ಅಮರತ್ವ ಸಿಕ್ಕರೆ ನಮಗೆ ಕೇಳಿ ಬರಬಹುದಾದ ವಾಕ್ಯ “ಹಣ ಇದ್ದರೆ ಸಾಕು, ಸಾವನ್ನು ದಾಟಿಕೊಂಡು ಹೋಗುತ್ತಾರೆ”.

“Don’t Die: The Man Who Wants to Live Forever” ಇತ್ತೀಚಿಗೆ ನೆಟ್ಫ್ಲಿಸ್ ನಲ್ಲಿ ಬಂದ ಸಾಕ್ಷ್ಯಚಿತ್ರ. ಕಟ್ಟುನಿಟ್ಟಾದ ಆಹಾರ, ಜೀವನಶೈಲಿ ಮತ್ತು ವೈದ್ಯಕೀಯ ಪ್ರಯೋಗಗಳ ಸಹಾಯದಿಂದ ಬ್ರಯಾನ್ ಜಾನ್ಸನ್ ತನ್ನ ವಯಸ್ಸನ್ನು ಕಡಿಮೆ ಮಾಡಿಕೊಂಡು, ಹೆಚ್ಚು ವರ್ಷ… ಅಥವಾ ಸಾವಿಲ್ಲದ ಸರದಾರ ಆಗುವ ಪ್ರಯತ್ನದಲ್ಲಿ ಇದ್ದಾನೆ.

“ನಮ್ಮ ಸಂಸಾರ, ಆನಂದ ಸಾಗರ… ಪ್ರೀತಿ ಎಂಬ ದೈವವೇ ನಮಗಾಧಾರ” ಎನ್ನುವ ಹಾಡು, “ನಮ್ಮ ಸಂಸಾರ, ಬೃಹತ್ ಸಾಗರ… ಸಾವಿಲ್ಲದ ಔಷಧಿಯೇ ನಮಗಾಧಾರ” ಎಂದು ಬದಲಾಗುತ್ತದೆ.

“ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ್ನ ಸಂಗ” ಹಾಡು, “”ಜಗವೇ ಒಂದು ರಣರಂಗ, ಸಾವೇ ಇರಲಿ ನಿನ್ನ ಸಂಗ” ಎನ್ನಬೇಕಾಗಬಹುದು…ಸಾವಿಲ್ಲದೆ ಜನ ಸಣ್ಣ ಸಣ್ಣ ಅವಶ್ಯಕತೆಗೂ ಹೋರಾಡಿ, ನೋವಿಗಿಂತ ಸಾವೇ ಖುಷಿ ಎನ್ನುವ ಪರಿಸ್ಥಿತಿ ತಲುಪುತ್ತಾರೆ.

ಆವಿಷ್ಕಾರದ ಅವಶ್ಯಕತೆ ಇದೆ, ಆದರೆ ಫಲಿತಾಂಶ/ ಪರಿಣಾಮ ವಿಚಾರ ಇರದೇ ಮಾಡಿದ ಆವಿಷ್ಕಾರ ತಿರುಗುಬಾಣ ಆಗಬಹುದು.

ಮಾಯಾಲೋಕಗಳು

ಅಜ್ಜಿ ಕಥೆ

ನನ್ನ ಮೊಮ್ಮಕ್ಕಳು ರಜಾ ಬಂದಾಗ ನಮ್ಮ ಮನೆಗೆ ಬರುತ್ತಾರೆ. ಬಂದಾಗ ಅಜ್ಜಿ ಕತೆ ಹೇಳು ಅಂತ ಕೇಳುತ್ತಾರೆ. ಆಯಿತು. ಕೇಳಿ. ಇದು ನಡೆದ ಸಮಾಚಾರ. ಸುಮಾರು 100 ವರ್ಷ ಕಿಂತ ಮುಂಚೆ ನಡೆದ ಕಥೆ. ನನಗೆ ನನ್ನ ಅಮ್ಮ ಹೇಳಿದ್ದು. ಏನಪ್ಪಾ ಅಂದರೆ ನಾವು ಮೂಲತ: ಮಹಾರಾಷ್ಟ್ರದವರು. ಮಾದ್ವ ಬ್ರಾಹ್ಮಣರು. ವಿಪರೀತ ಮಡಿ, ಮೈಲಿಗೆ ಗಲಾಟೆ. ಮನೆಯ ಹೆಂಗಸರು ತುಂಬಾ ಜೋರು. ಆ ಕಾಲದಲ್ಲಿ ಕಚ್ಚೆ ಹಾಕಿಕೊಂಡು ಕುದರೆ ಸವಾರಿ ಮಾಡುತ್ತಿದ್ದರಂತೆ  ಅವರು ಪೂನಾ ಹತ್ತಿರ ಒಂದು ಊರಲ್ಲಿ ಇದ್ದರಂತೆ. ಪೇಶ್ವೆಗಳ ಹತ್ತಿರ ಸಿಪಾಯಿ ಗಳಾಗಿ ಇದ್ದರಂತೆ. ಇವರಿಗೆ ಮೈಸೂರಿನಲ್ಲಿ ನೆಂಟರು ಮದುವೆಗೆ ಬರಬೇಕೆಂದು ಕರೆದರಂತೆ. ಆ ಕಾಲದಲ್ಲಿ ಸಂಚಾರ ಮಾಡುವುದು ಬಹಳ ಕಷ್ಟ. ಕುದರೆಮೇಲೆ ಕಾಡಿನ ದಾರಿಯಲ್ಲಿ ಹೋಗಬೇಕು. ಚಿಕ್ಕ ಚಿಕ್ಕ ಹಳ್ಳಿಗಳಲ್ಲಿ ರಾತ್ರಿ ಇರಬೇಕು. ಸಾಮಾನ್ಯವಾಗಿ ಮರಾಟಿಗ ಹೆಂಗಸರು ಗಟ್ಟಿಗರು, ಸರಿ ಅಂತ ಪ್ರಯಾಣಕ್ಕೆ ಎಲ್ಲ ಸಿದ್ದಮಾಡಿಕೊಂಡು ಗಂಡ ಮತ್ತು ಹೆಂಡತಿ ಎರಡು ಕುದರೆ ಮೇಲೆ ಹೊರಟರಂತೆ. ಸುಮಾರು ದಿನಗಳು ಕಳೆದವು. ಎಷ್ಟೂ ಕಾಡು, ಮೆಡು ಗಲ್ಲಿ ಸುತ್ತಿ, ನಾನಾ ತರಹದ, ಕಷ್ಟ ಅನುಭವಿಸಿದರು. ಹುಲಿ, ಸಿಂಹ, ಹಾವು, ಜಿಂಕೆ ನಾನಾ ತರಹದ ಪ್ರಾಣಿಗಳನ್ನು ನೋಡಿದರಂತೆ. ಅವರ ಹತ್ತಿರ ಬಂದೂಕು ಇತ್ತು. ಒಂದು ಸಲ ಅವರ ಹತ್ತಿರ ಇದ್ದ ತಿಂಡಿ ಸಾಮಾನು ಮುಗಿದುಹೋಯ್ಯಂತೆ. ಕಾಡಿನಲ್ಲಿ ಏನು ಮಾಡುವುದು ಅಂತ, ಜೇನು, ಹಣ್ಣು ಸಿಗುತ್ತಾ ಅಂತ ನೋಡುತ್ತಾ ಇದ್ದರಂತೆ. ಒಂದು ಬಂಡೆ ಮೇಲೆ ದೊಡ್ಡ ಮುದ್ದೆ ಕಾಣಿಸಿತು. ಹೋಗಿ ನೋಡಿದರೆ ಬೇಲದ ಹಣ್ಣು, ಜೇನುತುಪ್ಪ ಕಲಿಸಿ,ಇತ್ತಂತ್ತೆ. ಇವರು ಹಸಿವೆಯನ್ನು ತಡಯಲಾರದೆ ತಿಂದರಂತೆ. ಅಷ್ಟರಲ್ಲಿ ಒಂದು ಕರಡಿ, ತನ್ನ ಮಕ್ಕಳಲಂದಿಗೆ ಬರುತ್ತಾ ಇದ್ದಿದ್ದನ್ನು ನೋಡಿ, ಇಬ್ಬರು, ಕುದರೆಮೇಲೆ ಹತ್ತಿ ಓಡಿಹೋಗಿ ಜೀವ ಉಳಿಸಿಕೊಂಡರು.  ಕರಡಿ ಪಾಪ!ತನ್ನ ಮಕ್ಕಳಿಗೆ  ತಯಾರಿಸಿದ ಬೆಲದ ಹಣ್ಣು ಜೇನು ತುಪ್ಪದ ಫಲಾಹಾರ,ನಮ್ಮ ನೆಂಟರು ತಿಂದುಬಿಟ್ಟರು. ಕರಡಿ ಅಟ್ಟಿಸಿಕೊಂಡು, ಬರುವವಷ್ಟ್ರಲ್ಲಿ, ಇವರು ಕುದರೆಮೇಲೆ ದೌಡಾಯಿಸಿದರು.
ಹೀಗೆ ನಮ್ಮ ಅಮ್ಮ ನಮಗೆಲ್ಲ ಬೆಳದಿಂಗಳ ಊಟ ಕೈ ತುತ್ತು ಹಾಕುತ್ತ ಹೇಳುತ್ತಿದರು.

'ಅಜ್ಜಿ ಇದು ನಿಜವಾದ ಘಟನೆನಾ ಅಥವಾ ಬರಿ ಕಥೆನಾ?' ' ನನ್ನ ತಾಯಿಯ ಮುತ್ತಜ್ಜಿ,ಮುತ್ತಜ್ಜ ಪೂನಾದಿಂದ ಮೈಸೂರಿಗೆ ವಲಸೆಬಂದದ್ಫು ನಿಜ. ಕುದುರೆ ಮೇಲೆ ಕಾಡಿನಲ್ಲಿ ಬಂದಿದ್ಫು ನಿಜ. ಮಿಕ್ಕಿದೆಲ್ಲ ನನಗೆ ಗೊತ್ತಿಲ್ಲ' ಅಂತ ಜಾರಿಕೊಂಡೆ. ಇಲ್ಲದಿದ್ದರೆ Where is the proof? ಅಂದರೆ ಏನು ಮಾಡಲಿ? ನಾವೆಲ್ಲ ನಮ್ಮ ಅಮ್ಮ ಹೇಳಿದ ಕಥೆ 200% ನಂಬುತ್ತೀವಿ. ಒಂದು ಜನರೇಶನ್ ಗೆ ಮುಂದಿನ ಜನರೇಶನ್ ಕತೆ ಇನ್ನು ಜೀವಂತ ವಾಗಿದೆ.

~ ವತ್ಸಲಾ ರಾಮಮೂರ್ತಿ

ಜಾಹೀರಾತುಗಳ ಮಾಯಾಲೋಕ

ಇದೀಗ ಇಲ್ಲಿ  ಸಂಜೆಗಳೇ ಇಲ್ಲದ  ಬರೀ ಬೆಳಗು – ರಾತ್ರಿಗಳ ನವೆಂಬರ್. ಚಳಿರಾಯ ನಿಧಾನವಾಗಿ ತನ್ನ ಪಾದವೂರುವ  ಸನ್ನಾಹದಲ್ಲಿದ್ದಾನೆ.  ಚಕ್ಕುಲಿ- ಕರಚಿಕಾಯಿ, ದೇಸಿ ಘೀ ಯ ಬೇಸನ್ ಉಂಡಿಗಳ ದೀಷಾವಳಿ ಫರಾಳದ  ಪ್ರಭಾವವೋ ಅಥವಾ ಚಳಿರಾಯನ ಕರಾಮತ್ತೋ ಅಂತೂ ಸಣ್ಣನೆಯ ಕೆಮ್ಮು, ಗಂಟಲ ಕೆರೆತ,  ಮೈಕೈ ನೋವು...ಹೀಂಗ  ಒಂದೊಂದೇ ಕಿರಿಕರಿಗಳು ,ಕಾಡಲಿಕ್ಕೆ ಶುರುವಾಗೂ ದಿನಗಳಿವು. 

‘ ಗಲೇಂ ಮೆ ಖರಾಶ್ ಮಜೇದಾರ್ ಸ್ಟೆಪ್ಸಿಲ್ಸ’ , ‘ ವಿಕ್ಸ್ ಕೀ ಗೋಲಿ ಲೋ ಖಿಚ್ ಖಿಚ್ ದೂರ್ ಕರೋಂ ‘
ಇದೇನಿದು ಜಾಹೀರಾತು ಶುರು ಮಾಡಿದ್ರೆಲಾ ಅಂತೀರೇನು? ಹೌದ ನೋಡ್ರಿ ಈ ಜಾಹೀರಾತುಗಳ ಮಹಿಮಾ ಮತ್ತ ಮಾಯಾ ( ಮುನ್ನಾಭಾಯಿಗತೆ ಯೆ ಮಹಿಮಾ ಔರ್ ಮಾಯಾ ಕೌನ್ ಹೈ ಅಂತ ಮಾತ್ರ ಕೇಳಬ್ಯಾಡ್ರಿ ಮತ್ತ) ಭಾಳ ದೊಡ್ಡದು ಬಿಡ್ರಿ. ಖರೇ ಹೇಳಬೇಕಂದ್ರ ಈ ಇಂಟರ್ ನೆಟ್ , ಗೂಗಲ್ ಮಹಾಶಯ ಸಹಾಯಕ್ಕಿಲ್ಲ ದ ನಮ್ಮ ಆಗಿನ ದಿನಗಳಲ್ಲಿ ನಮಗೇನರೇ ಅಲ್ಪ-ಸ್ವಲ್ಪ ಲೋಕಜ್ಞಾನ, ಸಾಮಾನ್ಯ ಜ್ಞಾನ ಇತ್ತು ಅಂದ್ರ ಅದರಾಗ ಈ ಜಾಹೀರಾತುಗಳದೇ ದೊಡ್ಡ ಪಾತ್ರ ಅಂತ ನಿಸ್ಸಂಶ ಯವಾಗಿ ಹೇಳಬಲ್ಲೆ.
ಡಮಡಮು ಅಂತ ಬಾರಸಕೋತ ಮಂಗ್ಯಾ ಆಡಸಂವಾ ಬಂದ್ರ, ‘ಮನ ಡೋಲೆ ಮೋರಾ ತನ್ ಡೋಲೆ’ ಅಂತ ಪುಂಗಿ ಊದೋ ಹಾವಾಡಿಗನ ಆ ಬಿದಿರನ ಬುಟ್ಟಿ ಕಂಡ್ರ, ಬಾರಕೋಲಿನ ಚಾಟಿ ಮೈಮೇಲೆ ಬೀಸಕೋತ ‘ ನೀರ ಹಾಕ್ರಿ, ನೀರ ಹಾಕ್ರಿ’ ಅಂತ ದುರಗಮುರಗ್ಯಾ ಬಂದ್ರ , ಆನೆಯೋ- ಒಂಟೆಯೋ ಸವಾರಿಗಾಗಿ ಬಂದ್ರ, ಯಾರೋ ಕೌಲೆತ್ತು ತಂದ್ರ, ಆಕಾಶದಾಗೊಂದು ವಿಮಾನ ಹಾರಿದ್ರ ಮನೆಯೊಳಗಿಂದ ಹೊರಗೆ ಓಡೋಡಿ ಬಂದು ಜಗತ್ತಿನ ಅದ್ಭುತಗಳೆಲ್ಲ ಅಲ್ಲೇ ಮೇಳೈಸಿಬಿಟ್ಟಾವೇನೋ ಅನ್ನೂಹಂಗ ಬೆರಗುಗಣ್ಣಿಂದ ನೋಡುತ್ತ ಅವನ್ನೆಲ್ಲ ಆಸ್ವಾದಿಸುವ ಮುಗ್ಧ ಬಾಲ್ಯ – ಹದಿಹರೆಯಗಳವು. ಹೊಸತಾಗಿ ಆಗಷ್ಟೇ ಅವರಿವರ ಮನೆಯಲ್ಲಿ ಸಣ್ಣದಾಗಿ ಒಂದೊಂದೇ Black & white, portable T.V.ಗಳು ಬರಲು ಶುರುವಾಗಿದ್ದ ದಿನಗಳು. ಖರೇ ಹೇಳಬೇಕಂದ್ರ ಆಗ ಈ ಟಿ ವಿ ವೈಯಕ್ತಿಕ ಸ್ವತ್ತಾಗಿರಲಿಲ್ಲ. ಮನೆಯವರು ದುಡ್ಡನ್ನು ಪಾವತಿಸಿ T.V ತಂದರೂ ಅದರ ಮೇಲೆ ಇಡಿಯ ಓಣಿಯ ಜನರ ಅಧಿಕಾರವಿರುತ್ತಿತ್ತು. ಈಗಿನವರಿಗೆ ಇದು ನಂಬಲಸಾಧ್ಯವಾದರೂ ನಮ್ಮ ಕಾಲದ ಸೋಳಾಣೆ ಸತ್ಯ,ಶಂಬರ್ ಟಕ್ಕೆ ಖರೇ ಮಾತಾಗಿತ್ತು ಇದು.

ನಮ್ಮ ಓಣ್ಯಾಗ ಮೊದಲ ಉಕ್ಕಲಿ ಮಾಮಾ ಅವರ ಮನಿಗೆ ಟಿ.ವಿ. ಬಂದಿತ್ತು. ಅವರ ಮನೆಯ ಮೂರುಜನ ನಮ್ಮ ಮನೆಯ ಆರು ಜನ ಅದನ್ನು ನೋಡಲು ಕೂಡುವುದಿತ್ತು. ಆ ಟಿ.ವಿ. ಕಾರ್ಯಕ್ರಮಗಳಿಗೆ ತಕ್ಕಹಂಗ ಅವರು ತಮ್ಮ ಊಟ, ತಿನಸು ,ಛಾ ಮುಗಸಕೊಂಡು ಎಷ್ಟೋ ಸಲ ನಮಗೂ ಕೊಟ್ಟು ನಮ್ಮನ್ನೆಲ್ಲ ಕುರ್ಚಿ, ದಿವಾನದ ಮೇಲೆ ಕೂಡಿಸಿ ಪಾಪ ಅವರೇ ಕೆಳಗೆ ಚಾಪೆ ಮ್ಯಾಲೆ ಕೂಡೋ ಪಾಳಿ ಬರತಿತ್ತು. ಆದ್ರ ಮಜಾ ಅಂದ್ರ ಇವುಗಳ ಬಗ್ಗೆ ಅವರಿಗೂ ಬೇಸರವಿರಲಿಲ್ಲ. ಉಲ್ಟಾ ಎಂದರೇs ಒಮ್ಮೆ ನಾವು ಹೋಗದಿದ್ರ ಅವರ ಮಗಳು ರೇಖಾ ಕಟ್ಟಿ ಮ್ಯಾಲೆ ನಿಂತು ‘ ಚಿತ್ರಹಾರ್ ಶುರು ಆತು ಲಗೂನೇ ಬರ್ರಿ’ ಅಂತ ಕೂಗಿ ಕರೆಯುತ್ತಿದ್ದಳು. ರಾತ್ರಿ ಹೊತ್ತು ಪ್ರಸಾರವಾಗುತ್ತಿದ್ದ ‘ ಕಿಲ್ಲೆ ಕಾ ರಹಸ್ಯ’ ನೋಡಲು ಅವರು ನಿದ್ದೆ ಬಂದಿದ್ದರೂ ತೂಕಡಿಸುತ್ತ ನಮಗಾಗಿ ಕಾಯುತ್ತಿದ್ದದು ನನಗೀಗಲೂ ನೆನಪಿದೆ.

84 ರಲ್ಲಿ ನಮ್ಭ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಯಾದಾಗಲಂತೂ ನಮ್ಮ ಹಿಂದಿನ ಓಣಿಯ ಗುನ್ನಾಳಕರ ಅವರು ತಮ್ಮ ಟಿ.ವಿ.ಯನ್ನು ಮನೆ ಯ ಅಂಗಳದಲ್ಲಿಟ್ಟು ನೂರಾರು ಮಂದಿಗೆ ಪ್ರಧಾನಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು. ಕ್ರಿಕೆಟ್ ಮ್ಯಾಚ್ ಗಳು ಇದ್ದರೂ ಅಷ್ಟೇ. ಪಡಸಾಲೆಯ ಟಿ.ವಿ. ಅಂಗಳಕ್ಕೇ ಬರುತ್ತಿತ್ತು.

ನಂತರ ಗೌಡರ್ ಅವರ ಮನಿಗೆ ಕಲರ್ ಟಿ.ವಿ. ಬಂದು ನಾವು ಐದು ಜನ ಮಕ್ಕಳು, ಅವರ ಮನೆಯ ಆರು ಜನ ಮಕ್ಕಳು ತಮ್ಮ ತಮ್ಮ ಸ್ನೇಹಿತರಾದಿಯಾಗಿ ಬಂಧುಬಳಗ ಸಮೇತವಾಗಿ ಸತ್ಯನಾರಾಯಣ ಪೂಜೆಯಷ್ಟೇ ಶ್ರದ್ಧೆಯಿಂದ ರಮಾನಂದ ಸಾಗರರ ರಾಮಾಯಣ, ಬಿ.ಆರ್. ಛೋಪ್ರಾರ ಮಹಾಭಾರತ ನೋಡುತ್ತಿದ್ದೆವೆನ್ನುವುದು ಬಹಳ ಸುಂದರ ನೆನಪು. ಗೌಡರ್ ಮಾಲಾಕಾಕು ಅಂತೂ ಸ್ನಾನ ಮಾಡಿ ಒಗೆದ ಬಟ್ಟೆ ತೊಡದೇ ಹೋದ್ರ ರಾಮಾಯಣ – ಮಹಾಭಾರತ ನೋಡಲಿಕ್ಕೆ ಎಂಟ್ರಿ ಪಾಸ್ ನೇ ಕೊಡತಿದ್ದಿಲ್ಲ. ಹಿಂಗಾಗಿ ನಾವು ರಾಮ- ಸೀತಾನ ಬಗ್ಗೆ ಭಯಭಕ್ತಿ ಇರದಿದ್ರ ಅಷ್ಟೇ ಹೋತು ಮಾಲಾಕಾಕುಗ ಅಂಜಿ ರವಿವಾರ ಇದ್ರೂ ಲಗೂಲಗೂ ಸ್ನಾನ – ಹೆರಳು,ಎಲ್ಲಾ ಮುಗಿಸಿಕೊಂಡು ಲಕಾಲಕಾ ತಯಾರಾಗಿ ಬಿಡತಿದ್ವಿ ಅನ್ರಿ.

ಈಗ ಮನ್ಯಾಗ 65, 75 ಇಂಚಿನ ಟಿ.ವಿ., ಹೋಮ್ ಥೇಟರ್ ಅಂತ ಸುಟ್ಟುಸುಡುಗಾಡು ನೂರಾ ಎಂಟು ಇದ್ರೂ ಆಗಿನ ಮಜಾ ಇಲ್ಲ ಅನ್ನೂದು ನನ್ನೊಬ್ಬಳ ಅನಿಸಿಕೆನೋ ಅಥವಾ ನಿಮ್ಮದೂ ಹೌದೋ ನನಗೆ ‘ ಗೊತ್ತಿಲ್ಲ.

ಹೀಂಗ ಈ ಟಿ.ವಿ. ಬಂದಮ್ಯಾಲೆ ಜಾಹೀರಾತುಗಳ ಒಂದು ಸುಂದರ ಪ್ರಪಂಚ ನಮ್ಮ ಕಣ್ಣೆದುರು ತೆರೆದುಕೊಂಡುಬಿಟ್ಟಿತು. 5-10 ಪೈಸೆಯ ಪೆಪ್ಪರ್ ಮಿಂಟೋ, ಕಿಸ್ ಮಿ ಚಾಕಲೇಟುಗಳಿಗಷ್ಟೇ ಪರಿಚಿತರಾಗಿದ್ದ ನಮಗೆ ‘ ಕಿತನಾ ಮಜಾ ಆಯೇರೆ ದುನಿಯಾ ಡೇರಿ ಮಿಲ್ಕ್ ಕಿ ಬನ್ ಜಾಯೇರೆ’ ಅಂತ ಚಾಕಲೇಟಿನಂಥ ಹೊಸ ಜಗತ್ತನ್ನು ತೋರಿಸಿದ್ದೇ ಈ ಜಾಹೀರಾತುಗಳು. ‘ಕುಛ್ ಬಾತ್ ಹೈಂ ಹಮ್ ಸಭೀಮೆಂ..ಖಾಸ್ ಹೈಂ..ಕುಛ್ ಸ್ವಾದ್ ಹೈಂ..ಕ್ಯಾ ಸ್ವಾದ್ ಹೈಂ ಜಿಂದಗಿ ಮೆಂ’ ಅಂತ ಶುರುವಾಗೋ ಡೇರಿ ಮಿಲ್ಕ್ ನ ಜಾಹೀರಾತು ನಮ್ಮ ಬದುಕಿನಾಗೂ ಸ್ವಾದ ತುಂಬಿ ಖಾಸ್ ಆದ್ವು ಇದರ ಎಲ್ಲಾ ಜಾಹೀರಾತುಗಳೂ ಒಂದೊಂದೂ ಸುಂದರ..ಒಂದೊಂದೂ ಹೃದಯಸ್ಪರ್ಶಿ. ಅವುಗಳನ್ನು ತಯಾರಿಸಿದವರ ಸೃಜನಶೀಲತೆಗೆ ನನ್ನ ಶರಣು.

‘ ಆಡು ಮುಟ್ಟದ ಸೊಪ್ಪಿಲ್ಲ’ ಅನ್ನೂಹಂಗ ಈ ಜಾಹೀರಾತುಗಳು ಕೈಯಾಡಿಸದ ಕ್ಷೇತ್ರಗಳೇ ಇಲ್ ಅನ್ನಬಹುದು. ಆಗಷ್ಟೇ ಹುಟ್ಟಿದ ಮಗುವಿನ ಪಿಂಕೂ ಗ್ರೈಪ್ ವಾಟರ್ ನಿಂದ ಹಿಡಿದು ನಿಮ್ಮ ಮಕ್ಕಳ ಎತ್ತರ, ತೂಕಗಳಿಗಾಗಿ ಕೋಂಪ್ಲಾನ್ – ಹಾರ್ಲಿಕ್ಸ್ ಗಳವರೆಗೆ, ಸ್ವಾದ್ ಭರೆ ಶಕ್ತಿಭರೆ ಪಾರ್ಲೆ ಜಿ ಯ ಜೊತೆಗೆ ನಾವು ಯಾವ ಚಹಾ ಕುಡಿಯಬೇಕು, ಯಾವ ಹಪ್ಪಳ ತಿನ್ನಬೇಕು, ನಲ್ಲನ ಮನ ಗೆಲ್ಲಲು ಅಡುಗೆಗೆ ಯಾವ ಮಸಾಲೆ ಉಪಯೋಗಿಸಬೇಕು, ಬಿರಿಯಾನಿ ರುಚಿಯಾಗಲು ಯಾವ ಅಕ್ಕಿ ಹಾಕಬೇಕು ? ಬೆನ್ನು – ಸೊಂಟ- ಹಲ್ಲು ನೋವುಗಳಿಗೆ ಏನು ಮಾಡಬೇಕು? ಯಾವ ಸೋಪ್, ಕ್ರೀಂ, ಪೌಡರ್ ನಿಂದ ನಾವು ಚಿರ ಯೌವನಿಗರಾಗಬಹುದು? ಯಾವ ಶಾಂಪೂ, ಹೇರ್ ಆಯಿಲ್ ಗಳಿಂದ ನಾವು ನಾಗವೇಣಿಯರಾಗಬಹುದು? ಯಾವ ಶೇವಿಂಗ್ ಕ್ರೀಂ, ಡಿಯೊಡ್ರಂಟ್ ಗಳನ್ನು ಬಳಸಿದ್ರ ಹುಡುಗಿಯರು ಮೈಮೇಲೆ ಬಂದು ಬೀಳಬಹುದು? ಏನು ಮಾಡಿದರೆ ಮನೆಯ ಪೀಠೋಪಕರಣಗಳನ್ನು ಆಜೀವಪರ್ಯಂತ ಮುರಿಯದಂತೆ ಇಟ್ಟುಕೊಳ್ಳಬಹುದು? ಯಾವ ಗಾಡಿ, ಬೈಕು ತಗೊಂಡ್ರ ಎಷ್ಟೆಷ್ಟು ಮೈಲೇಜು, ಏನೇನು ಲಾಭ? ಯಾವ ಚಪ್ಪಲಿ, ಶೂಸ್ ಬಳಸಬೇಕು? ಯಾವ ಒಳ ಉಡುಪುಗಳನ್ನು ಧರಿಸಬೇಕು? ಯಾವ ಪೆನ್ನು- ಪೆನ್ಸಿಲ್ – ನೋಟ್ ಬುಕ್ ಗಳನ್ನು ಉಪಯೋಗಿಸಿದ್ರ ಛಂದನೆಯ – ದುಂಡನೆಯ ಅಕ್ಷರ ಬರೆದು ವಿದ್ಯಾವಂತರಾಗಬಹುದು? ಕೊಳೆಯಾದ ಬಟ್ಟೆಗಳನ್ನು ಹೆಂಗ ಕೊಕ್ಕರೆಯಂತೆ ಬಿಳಿ ಶುಭ್ರ ಮಾಡಬಹುದು .ಇತ್ಯಾದಿ ಅಮೂಲ್ಯ – ಅತ್ಯಮೂಲ್ಯ ವಿಚಾರಗಳನ್ನೆಲ್ಲ ನಮ್ಮ ತಿಳಿವಿಗೆ ತುರುಕಿದ್ದೇ ಈ ಜಾಹೀರಾತುಗಳಂದ್ಲ ತಪ್ಪಿಲ್ಲ.
ಇನ್ನು ಕೆಲವೊಂದು ಜಾಹೀರಾತುಗಳಂತೂ ನಮ್ಮ ನೆಚ್ಚಿನ ನಟ- ನಟಿಯರ ಸಲುವಾಗಿ ಫೇವರಿಟ್. ‘ಲಿಮ್ಕಾ..ಲಿಮ್ಕಾ’ ಎಂದು ಹಾಡುವ , ಲಖಾನಿ ಹವಾಯಿ ಚಪ್ಪಲ್ ಹಾಕಿಕೊಂಡು ಕುಣಿಯುವ ಸಲ್ಮಾನ್ ಖಾನ್ ಇರಲಿ, ‘ ಡಾಬರ್ ಆಮ್ಲಾ ಕೇಶ್ ತೈಲ್’ ಅಂತ ಕಪ್ಪನೆಯ ಕೇಶರಾಶಿಯನ್ನು ಹಾರಿಸುತ್ತ ತಿರುಗುವ ಜಯಪ್ರದಾ ಇರಲಿ, ಬಾರಾತಿಯೋಂ ಕಾ ಸ್ವಾಗತವನ್ನು ಪಾನ್ ಪರಾಗ್ ಪಾನ್ ಮಸಾಲಾದಿಂದ ಮಾಡುವ ಶಮ್ಮಿಕಪೂರ್, ಅಶೋಕ ಕುಮಾರ್ ಇರಲಿ, ‘ what an Idea sir ji’ ಎನ್ನುವ ಅಭಿಷೇಕ್ ಬಚ್ಚನ್ ಇರಲಿ, Dr.fixit ನ ಅಮಿತಾಭ್ ಬಚ್ಚನ್ ಇರಲಿ, ತೀರ ಇತ್ತೀಚಿನ cleethorpes max fresh ನ ರಣವೀರ ಸಿಂಗ್ ಇರಲಿ, ಮಧುಬಾಲಾನಿಂದ ಹಿಡಿದು ಮಾಧುರಿ ದೀಕ್ಷಿತವರೆಗಿನ Lux ಸೋಪಿನ ರೂಪದರ್ಶಿಯರಿರಲಿ ಎಲ್ಲರೂ..ಎಲ್ಲವೂ ನಮ್ಮ ಫೇವರಿಟ್. ಯಾಕಂದ್ರ ನಮಗ ಬಾಲಿವುಡ್ ತಾರಾಮಣಿಗಳಂದ್ರ ಅದೇನೋ ಹುಚ್ಚು ಸೆಳೆತ – ಪ್ರೀತಿ – ಅಪನಾಪನ್. ಇನ್ನ ಅವರು ಮಾಡಿದ ads ಅಂದ್ರ ಮುಗದೇ ಹೋತ. ಅಲ್ಲೇನ್ರಿ?

ಅಲ್ರೀ ಎಲ್ಲಾಬಿಟ್ಟು ಯಕ:ಶ್ಚಿತ್ ಉಪ್ಪಿನ ಬಗ್ಗೆನೂ ಎಷ್ಟೆಲ್ಲ ಜಾಹೀರಾತುಗಳ್ರಿ..ಅದ್ಯಾಕ ಯಕ:ಶ್ಚಿತ್ ಬಿಡ್ರಿ ಇದರ ಮಹತ್ವ ಏನು ಕಡಿಮೆದ? ಇದರ ಸಲುವಾಗಿ ದಂಡಿ ಸತ್ಯಾಗ್ರಹನೇ ನಡದು ಇತಿಹಾಸದಾಗೂ ಅದಕ್ಕೊಂದು ಸ್ಥಾನ ಸಿಕ್ಕೇಬಿಟ್ಟದ. ಟಾಟಾ ನಮಕ್ ದೇಶ್ ಕಾ ನಮಕ್- ಅದರಾಗ ಶುದ್ಧತೆ, ಅಯೋಡಿನ್ ಗಳಂತೂ ಅವನೇ ಅವ ಜೋಡಿಗೆ ಚುಟಕಿ ಭರ್ ಇಮಾನದಾರಿನೂ ಅದರಾಗಿರತದ ಅನ್ನೂದು ad ನೋಡೇ ಗೊತ್ತಾಗಿದ್ದು. ‘ ಡರ್ ಕೆ ಆಗೇ ಜೀತ್ ಹೈ’ ಎಂಬ ಅಮೂಲ್ಯ ವಿಚಾರ ತಿಳಿದದ್ದೂ ಈ ಜಾಹೀರಾತಿನಿಂದಲೇ.

ಇನ್ನ ನಾವು ನಮ್ಮ ರೆಡ್ ಲೇಬಲ್ ಟೀ ಯಿಂದ Taj ಗೆ ಪಕ್ಷಾಂತರ ಮಾಡಿದ್ದಕ್ಕೂ ಈ ಜಾಹೀರಾತೇ ಕಾರಣ. ಉದ್ದನೆಯ ಗುಂಗುರು ಕೂದಲು ಹಾರಿಸುತ್ತ, ಬೆರಳುಗಳಿಂದ ತಬಲಾದ ಮೇಲೆ ನಾದದ ನರ್ತನ ಮಾಡುತ್ತ ಉಸ್ತಾದ್ ಝಾಕೀರ್ ಹುಸೇನ್ ‘ ವಾಹ್ ತಾಜ್ ಬೋಲಿಯೆ’ ಅಂತ ಸೇಳಿದ ಮ್ಯಾಲೆ ನಮಗೆ ಬ್ಯಾರೆ ಹಾದೀನೇ ಇದ್ದಿದ್ದಿಲ್ಲ ಬಿಡ್ರಿ.

‘ ದೋ ಮಿನಿಟ್’ ನ ಮ್ಯಾಗಿ ನನ್ನ ಮಕ್ಕಳ ಪ್ರೀತಿಯ ಭೋಜನ. ನನಗೂ ಅವಸರದ ಆಪ್ತಬಂಧು. ಪುಳಿಯೋಗರೆ, ಪಾವ್ ಭಾಜಿ ಮಸಾಲೆಗಳು , ಖರ್ರಂ ಖುರ್ರಂನ ಲಿಜ್ಜತ್ ಪಾಪಡ್ ಗಳು ನಮ್ಮ ಅಡುಗೆ ಮನೆಗೆ ಆಪ್ತವಾದದ್ದು ಜಾಹೀರಾತುಗಳ ಕಮಾಯಿನೇ.ಹಾಲು ಬೇಡವೆಂದ ಮಕ್ಕಳಿಗೆ compla, horlicks ಗಳ ಆಮಿಷವೊಡ್ಡಿ ಕುಡಿಸಿ ‘ಮೈ ಬಢ ರಹಾ ಹೂಂ ಮಮ್ಮಿ’ ಅಂತ ಅವರ ಪರವಾಗೆ ನಾನೇ ಅಂದುಕೊಂಡು ಖುಷಿಪಟ್ಟದ್ದು, ಬ್ಯಾಸಗ್ಯಾಗ ರಸನಾ, ಆಟ ಆಡಿ ಬಂದಕೂಡಲೇ glucon-D, ಥಂಡ್ಯಾಗ ಚ್ಯವನ್ ಪ್ರಾಶ್ ಹೀಂಗ ಮಕ್ಕಳ ಆರೋಗ್ಯದ ದೇಖರೇಕಿ ಬಗ್ಗೆ ಅತ್ಯಪರೂಪದ ಮಾರ್ಗದರ್ಶಿಗಳಾಗಿದ್ದವು.
ಈ ಮೈ ತೊಳೆವ ಸಾಬಾಣಿನ (soap) ಜಾಹೀರಾತುಗಳಂತೂ ನನ್ನ ಚಿತ್ತದಾಗ ಪಟ್ಟಾಗಿ ಕೂತಬಿಟ್ಟಾವ ಲಾ..ಲಲಾ..ಲ..ಲಾ ಅಂತ ಹಾಡಕೋತ ಸ್ವಚ್ಛ ಶುಭ್ರವಾದ ನದಿ- ಜಲಪಾತದಾಗ Liril soap ಹಿಡಿದು ಸ್ನಾನ ಮಾಡೋ ಆ ರೂಪದರ್ಶಿನ್ಶ ನೋಡಿದ್ರ ಬಚ್ಚಲಿನಾಗೇ ಹತ್ತು ಸಲ ನಮ್ಮ ಕೈಯಿಂದ ಜಾರಿ ಜಾರಿ ಬೀಳುತ್ತಿದ್ದ ಸೋಪ್ ನೆನೆಸಿಕೊಂಡು , ಇಂಥ,ಹರಿವ ನೀರಿನ ರಭಸದಾಗೊ,ಅದ್ಹೆಂಗಿನ್ನೂ ಜಾರದs ಅಕಿನ ಕೈಯಾಗೇ ಉಳದದ ಅನ್ಶೂದೇ ಸೋಜಿಗ ಅನಸತಿತ್ಯು ನನಗೆ. ಇನ್ನ ಹೊಸಬಟ್ಟಿ, ಬಿಳಿಬಟ್ಟಿ ಕೆಸರು ಮಾಡಿಕೊಂಡು ಬಂದ್ರ ಮಕ್ಕಳಿಗೆ ಬಯ್ಯದ s ‘ ದಾಗ್ ಅಚ್ಛಾ ಹೈ...surf excell hai na? ಅನ್ನುವ ನಗುಮೊಗದ ಅಮ್ಮಂದಿರೂ ನನಗ ಬ್ಯಾರೆ ಲೋಕದವರ ಹಂಗೇ ಕಾಣಸತಾರ. ಯಾಕಂದ್ರ ಸಣ್ಣವರಿದ್ದಾಗ ಹೊಸ ಬಟ್ಟೆ, ಬಿಳಿ ಬಟ್ಟೆ ಕಲೆ ಮಾಡಿಕೊಂಡ್ರ ಮಸ್ತ್ ಮಂಗಳಾರತಿ ಮಾಡಿಸಕೋತಿದ್ವಿ ಮನ್ಯಾಗ. ಈಗ ನಾನೂ ಮಕ್ಕಳಿಗೆ ಮಂಗಳಾರತಿ ಮಾಡದಿದ್ರೂ ‘ ಸ್ವಲ್ಪ ನೋಡಕೊಂಡು ಸಾವಕಾಶ ಮಾಡಲಿಕ್ಕೆ ಬರಂಗಿಲ್ಲ s?’ ಅಂತ ಅನ್ನಬಹುದೇ ಹೊರತು ‘ ದಾಗ್ ಅಚ್ಛಾ ಹೈ’ ಅನ್ನುವ ಸಹನಶೀಲತಾ ನನ್ನ ಹತ್ರ ಇಲ್ಲ.

ಒಟ್ಟಿನಾಗ ನನಗ ಈ ಜಾಹೀರಾತುಗಳ ತಯಾರಿಕೆ, ಹಣಹೂಡಿಕೆ, ಗಳಿಕೆ, ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಅಷ್ಟೆಲ್ಲ ಜ್ಞಾನ ಇರದಿದ್ರೂ ಅವು ಕೊಡುವ ಮುದದ ಬಗ್ಗೆ ಬಹಳ ಖುಷಿ ಅನಸತದ. ಇವುಗಳ ಸತ್ಯಾಸತ್ಯತೆಗಳೇನೇ ಇರಲಿ ಸೆಕೆಂಡುಗಳ, ನಿಮಿಷಗಳ ಅತ್ಯಲ್ಪ ಅವಧಿಯಲ್ಲೇ ಅವುಗಳನ್ನು ಹೃದ್ಯವಾಗಿ ಪ್ರಸ್ತುತ ಪಡಿಸುವ ರೀತಿ ಇದೆಯಲ್ಲ ಅದು ನನ್ನನ್ನು ತಟ್ಟುತ್ತದೆ. ಕಿವಿ ಗುಳು ಗಳು ಅನ್ನುವಾಗ ಇಯರ್ ಬಡ್ ಹಾಕಿಕೊಂಡು ಗಲಗಲ ಮಾಡಿ ಪ್ರಪಂಚವನ್ನೇ ಒಂದು ಕ್ಷಣ ಮರೆತಂತೆ, ಕೈಗೆ ತಾಗದ ಬೆನ್ನಿಗೆ ತುರಿಕೆಯಿದಾಗ ಹಣಿಗೆಯೊಂದರಿಂದ ಅದನ್ನು ಕೆರೆದುಕೊಂಡಾಗ ಸಿಗುವ ಸುಖದಂತೆ, ಗಂಟಲಲ್ಲೇ ಅಡಗಿ ಕಾಡಿಸಿದ ಶೀನೊಂದು ‘ಆಕ್ಶೀ’ ಎಂದು ಪಟ್ಟನೇ ಹೊರಬಂದಾಗ ಸಿಗುವ ಸಮಾಧಾನದಂತೆ, ಒತ್ತಿ ಬರುತ್ತಿರುವ ತೂಕಡಿಕೆಗೊಂದು ಹೆಗಲು ದೊರೆತಾಗಿನ ನೆಮ್ಮದಿಯಂತೆ ಈ ಜಾಹೀರಾತುಗಳೂ ಕೂಡ ನಂಗ ಏನೋ ಒಂಥರಾ ಅನಿರ್ವಚನೀಯ ಅಂತಾರಲ್ಲ ಅಂಥ ಖುಷಿ, ಭರವಸೆ, ನೆಮ್ಮದಿ, ಉತ್ಸಾಹಗಳನ್ನು ಕೊಡತಾವ.

ಇದನ್ನೋದಿ ಒಂದೆರಡು ನಿಮ್ಮ ಫೇವರಿಟ್ ಜಾಹೀರಾತು ನಿಮಗ ನೆನಪಾದ್ರ, ಮನಸ್ಸು ಜರ್ ಅಂತ ಹಿಂಬರಿಕಿ ಜಾರಿಹೋದ್ರ ಅದನ್ನ ನಂಗೂ ಹೇಳೂದ ಮರೀಬ್ಯಾಡ್ರಿ.

~ ಗೌರಿಪ್ರಸನ್ನ