ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು|
ಹೊಸ ಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ|
ಜಸವು ಜನ ಜೀವನಕೆ-ಮಂಕುತಿಮ್ಮ||
ಆಳವಾಗಿ ಬೇರೂರಿರುವ ಮರದಲ್ಲಿ ಹೊಸಚಿಗುರಿನ ಸೊಬಗು , ಜನರ ಮನಸ್ಸಿಗೆ ಸಂತೋಷ ತರುತ್ತದೆ ಎನ್ನುವ ಸಾರ್ವಕಾಲಿಕ ಸತ್ಯವನ್ನು ಮಂಕುತಿಮ್ಮನ ಕಗ್ಗದಲ್ಲಿ ನಮ್ಮ ಡಿ.ವಿ.ಜಿ. ರವರು ಸೆರೆಹಿಡಿದಿದ್ದಾರೆ. ಇತ್ತೀಚೆಗಷ್ಟೇ ಐದು ವರ್ಷಗಳನ್ನು ಪೂರೈಸಿ, ತನ್ನ ಬೇರುಗಳನ್ನು ಬಲಿಸಿಕೊಂಡಿರುವ ‘ಅನಿವಾಸಿ’ ತಾಣಕ್ಕೀಗ ಹೊಸ ಚಿಗುರಿನ ಸಮಯ. ಹೌದು ನಮ್ಮ ‘ಅನಿವಾಸಿ’ ತಾಣದಲ್ಲಿ ಈ ವಾರ ತಾರ ಪ್ರೇಮ ಮತ್ತು ಪೂರ್ಣಿಮಾ ಹೆಗ್ಡೆ ಎಂಬ ಹತ್ತು ವರ್ಷ ವಯಸ್ಸಿನ ಪುಟಾಣಿಗಳಿಬ್ಬರು ಬರೆದಿರುವ ಇಂಗ್ಲೀಷ್ ಕವನಗಳನ್ನು ಪ್ರಕಟಿಸುತ್ತಿದ್ದೇವೆ.
ಈ ಕವನಗಳ ಜೊತೆಗೆ ಅವುಗಳ ಕನ್ನಡ ಅನುವಾದವನ್ನೇಕೆ ಪ್ರಕಟಿಸಬಾರದೆಂಬ ಪ್ರಶ್ನೆ ಮೂಡಿ, ಮಕ್ಕಳ ಪೋಷಕರಿಗೆ ಅದರ ಜವಾಬ್ದಾರಿಯನ್ನು ವಹಿಸಲಾಯಿತು. ಪುಟಾಣಿ ಪೂರ್ಣಿಮಾ ಹೆಗ್ಡೆ ಯ ತಂದೆ ಗೋಪಾಲಕೃಷ್ಣ ಹೆಗ್ಡೆ ರವರು ಮತ್ತು ಪುಟಾಣಿ ತಾರ ಪ್ರೇಮ ಳ ತಾಯಿಯಾದ ಪ್ರೇಮಲತಾ ರವರು ಈ ಕವಿತೆಗಳಿಗೆ ಭಾವಾನುವಾದವನ್ನು ಅಚ್ಚುಕಟ್ಟಾಗಿ ಬರೆದಿದ್ದಾರೆ.
ಕಗ್ಗದ ಸಾರದಂತೆ, ಮಕ್ಕಳ ಈ ಕವಿತೆಗಳು ‘ಅನಿವಾಸಿ’ ತಾಣದ ಓದುಗರೆಲ್ಲರ ಮನಸ್ಸಿಗೂ ಮುದ ತರುತ್ತವೆ ಎಂದು ನಂಬಿದ್ದೇನೆ.
1. My Magic Friend
ಬರೆದವರು: ಪೂರ್ಣಿಮಾ ಹೆಗ್ಡೆ (೧೦ ವರ್ಷ )
ಕನ್ನಡ ಅನುವಾದ: ಗೋಪಾಲಕೃಷ್ಣ ಹೆಗ್ಡೆ (ತಂದೆ )

The night stars sparkle so bright,
They glitter and shimmer and shine all night.
At midnight when the clock chimes,
Little, dainty fairies hop out from the flowers.
They all sing together and skip in the sky,
Merrily for hours and hours.
I dream that I would meet a fairy so beautiful and
elegant,
And call my new friend Sparkle!
Her eyes so twinkling in the bright night sky,
Her white dress dazzles as she flies so high.
I wish that one day my dream will come true,
And I will say hello and play with
my beautiful friend all night through.

ಪೂರ್ಣಿಮಾ ತನ್ನ ಆರನೇ ವಯಸ್ಸಿಗೆ ಇಂಗ್ಲಿಷ್ ನಲ್ಲಿ ಕವಿತೆಗಳನ್ನು ಬರೆಯುವುದರ ಕಡೆಗೆ ಒಲವು ತೋರಿಸುತ್ತಿದ್ದಳು. “My Magic Friend” ಎಂಬ ಈ ಕವಿತೆಯನ್ನು ಅವಳು ತನ್ನ ಏಳನೇ ವಯಸ್ಸಿನಲ್ಲಿ ಬರೆದಿದ್ದು, ಅದು 2017 ರಲ್ಲಿ ಜೆನ್ನಿ ಹ್ಯಾರಿಸನ್ ರವರು ಸಂಪಾದಿಸಿದ “Once upon a dream” ಎಂಬ ನಾರ್ತ್ ಲಂಡನ್ ನ ಚಿಣ್ಣರ ಕವನ ಸಂಕಲನದಲ್ಲಿ ಪ್ರಕಟವಾಗಿತ್ತು. ಈಗ ಪೂರ್ಣಿಮಾ 10 ವರ್ಷದವಳಾಗಿದ್ದು 6 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇತ್ತೀಚಿಗೆ ಕಥೆಗಳನ್ನು ಬರೆಯುವುದು ಅವಳ ಹವ್ಯಾಸಗಳಲ್ಲೊಂದಾಗಿದೆ.
ರಾತ್ರಿ ಅಂಗಳದಲಿ ಪಸರಿಸಿದೆ ರಾಶಿ ನಕ್ಷತ್ರ ಬೆಳಕು
ಹೊಳೆಯುತಿದೆ,ರಾತ್ರಿಯುದ್ದಕೂ ಬೆಳಗುತಿದೆ ಅದರ ಚೆಂದ
ಮಧ್ಯರಾತ್ರಿಯಲಿ ಬಂದ ಗಂಟೆಯ ಸದ್ದು ಕೇಳಿ
ಜಿಗಿ-ಜಿಗಿದು ಬರುತಿಹರು ಕಿನ್ನರಿಯರು ಎಲ್ಲ
ಬಾನಂಗಳದಿ ಅರಳಿದ ಪುಷ್ಪಗಳಿಂದ ಇಳಿದು
ದೂರದಿಗಂತದಲಿ ನಕ್ಕು-ನಲಿದಾಡಿಹರು
ಸಮಯಕ್ಕೆ ಅಂತ್ಯವೇ ಇಲ್ಲ ಎನ್ನುವ ಪರಿ.
ಈ ಕಿನ್ನರಿ-ಸುಂದರಿಯ ಕಾಣಲು ಕನವರಿಸಿರುವೆ ನಾನು
ಕರೆವೆ ನನ್ನ ಹೊಸ ಸಖಿಯನ್ನು ‘ಮಿನುಗುತಾರೆ’!
ಕಂಗೊಳಿಸುತಿವೆ ಸಖಿಯ ಕಣ್ಗಳು, ಬಾನಿನಂಗಳದಿ ಇಂದು
ಹಾರುತಿಹಳು ನನ್ನ ಸಖಿ ಗಗನದೆತ್ತರ ಏರಿ
ಉಟ್ಟಿಹಳು ಬಿಳಿಯ ಚೆಂದದ ಬಟ್ಟೆಯನು, ಈ ಸುಂದರ ಬಾಲೆ
ಕಾದಿಹೆನು ಕನಸಿನಲಿ ಈ ನನ್ನ ಸಖಿಗಾಗಿ ,
ಆಟವಾಡೋಣ ಆನಂದದಿ ರಾತ್ರಿಯೆಲ್ಲ,
ಇಳಿದು ಬಾರೆ ಮಾಟದ ಸಖಿ, ನನ್ನ ಜೊತೆಗಾಗಿ ಈಗ !
2. Night Time
ಬರೆದವರು: ತಾರ ಪ್ರೇಮ (೧೦ ವರ್ಷ )
ಕನ್ನಡ ಅನುವಾದ: ಪ್ರೇಮಲತ ಬಿ (ತಾಯಿ )
Stars bright sparkling and shining
Galaxies and other worlds yet to be discovered
Aliens and UFOs spying at night
I sit in my bed dreaming
Of all the possibilities
Suspicions and conspiracies yet to be uncovered
Area 51 to be raided in America
This is what happens at night!

ತಾರ ಇದನ್ನು ಬರೆದದ್ದು 2 ವರ್ಷಗಳ ಹಿಂದೆ. ಲಿಂಕನ್ ನಗರದ Grantham ಎನ್ನುವ ಜಾಗದಲ್ಲಿ ಐದನೇ ತರಗತಿ ಓದುತ್ತಿರುವ ತಾರಾಳಿಗೆ ಮುಖ್ಯವಾಗಿ ಜಿಮ್ನಾಸ್ಟಿಕ್ಸ್ ನಲ್ಲಿ ಆಸಕ್ತಿ. ಭರತನಾಟ್ಯಂ ನ ನಾಲ್ಕನೇ ಹಂತದಲ್ಲಿ ಕಲಿಕೆ. ಸಾಹಿತ್ಯ ಎನ್ನುವುದು ಆಗೀಗ ನಡೆಯುತ್ತಿರುತ್ತದೆ.4-5 ಕಥೆಗಳನ್ನೂ ಬರೆದಿದ್ದಾಳೆ. ಎಲ್ಲವೂ ಸಧ್ಯಕ್ಕೆ ನೋಟ್ ಪುಸ್ತಕದಲ್ಲಿ ಶೇಖರವಾಗುತ್ತಿವೆ
ಮಿನುಗುತಲಿ ಹೊಳೆಯುತಲಿ ಬೆಳಗುವ ತಾರೆಗಳು
ನಕ್ಷತ್ರ ಪುಂಜಗಳು ಹಾಗೂ ಹಲವು ಅಜ್ಞಾತ ಜಗತ್ತುಗಳು
ಏಲಿಯನ್ನುಗಳು ಮತ್ತು ಗುಪ್ತಚಾರಿ ಹಾರುವ ತಟ್ಟೆಗಳು.
ನನ್ನ ಹಾಸಿಗೆಯಲ್ಲಿ ಕೂತು ಆಲೋಚಿಸುತ್ತಿದ್ದೇನೆ
ಎಲ್ಲ ಸಾಧ್ಯತೆಗಳನ್ನು,
ಸಂದೇಹಗಳನ್ನು ಮತ್ತು ಬಿಡಿಸಲಾಗದ ಪಿತೂರಿಗಳನ್ನು
ಏರಿಯಾ 51ರ ಮೇಲಿನ ಧಾಳಿಯ ಒಳಸಂಚನ್ನು
ನನ್ನ ರಾತ್ರಿಗಳೆಂದರೆ ಹೀಗೆ!
ಏರಿಯಾ 51 ಎನ್ನುವುದು ಅಮೆರಿಕಾದ ನೆವಾಡಾ ಪ್ರಾಂತ್ಯದ ದಕ್ಷಿಣ ಭಾಗದಲ್ಲಿದೆ. ಇದೊಂದು ರಹಸ್ಯಗಳ ತಾಣ.ಇಲ್ಲಿಗೆ ಜನಸಾಮಾನ್ಯರನ್ನು ಅಮೆರಿಕಾ ಸರ್ಕಾರ ಬಿಟ್ಟುಕೊಳ್ಳುವುದಿಲ್ಲ.Freedom of information act ಗೆ ಮಣಿದು ಜೂನ್ 25, 2013 ರಲ್ಲಿ ಸರ್ಕಾರ ತಾವಿಲ್ಲಿ ರಹಸ್ಯ ಕಾರ್ಯಾಚರಣೆ ಮಾಡತ್ತಿದ್ದೇವೆಂದು ಒಪ್ಪಿಕೊಂಡಿತಾದರೂ, TC/SCI (Top secret/sensitive compartmented information) ಕಾಯ್ದೆಗಳ ಪ್ರಕಾರ ಏನು ನಡೆಯುತ್ತಿದೆ ಎನ್ನುವ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಇಲ್ಲಿ ಪರಗ್ರಹ ಜೀವಿಗಳನ್ನು ಅಮೆರಿಕಾ ಸರ್ಕಾರ ಹಿಡಿದಿಟ್ಟುಕೊಂಡಿದೆ ಎಂಬ ವದಂತಿ ಹರಡಿದೆ . ಮೇ 15, 2015 ರಲ್ಲಿ ’ಪರ್ಜ್ ’ ಖ್ಯಾತಿಯ ನಿರ್ದೇಶಕ ಈ ಕುರಿತು “ ಏರಿಯಾ 51 “ ಎನ್ನುವ ಪುಟ್ಟ ಸಿನಿಮಾವನ್ನು ಕೂಡ ಮಾಡಿದ್ದಾನೆ.
ಕಳೆದ ವರ್ಷ ಜುಲೈ 20 ರಂದು, ಈ ಜಾಗಕ್ಕೆ ಸೆಪ್ಟೆಂಬರ್ 20 ರ ದಿನ ಮುತ್ತಿಗೆ ಹಾಕಲು ಜೋಕಿನ ರೂಪದಲ್ಲಿ ಕರೆಹೋಯ್ತು. 20 ಲಕ್ಷ ಜನರು ಈ ಜೋಕಿಗೆ ಸ್ಪಂದಿಸಿದರು. ಮತ್ತೂ 15 ಲಕ್ಷ ಜನರು ತಾವೂ ಬರುತ್ತೇವೆಂದರು. ಇದನ್ನು ಅರಿತ ವಾಯುಸೇನೆ ಜನರನ್ನು ಬರದಿರುವಂತೆ ಅಧಿಕೃತವಾಗಿ ಕರೆಕೊಟ್ಟಿತು. ಆದರೆ ಪರಗ್ರಹ ಜೀವಿಗಳಲ್ಲಿ ನಂಬಿಕೆ ಇಟ್ಟ ಜನ ಕೇಳಲಿಲ್ಲ. ಈ ಜಾಗದ ಸುತ್ತಲೂ 3000 ಜನ ಸೇರಿ ಏಲಿಯನ್ ಗಳ ಕುರಿತಾದ ಹಬ್ಬಗಳನ್ನು ನಡೆಸಿದರು. 150 ಜನ ಗೇಟನ್ನೂ ತಲುಪಿದರು. ಒಳ ಹೋಗಲು ಸಫಲರಾಗದಿದ್ದರೂ ಅವರ ಹಳೆಯ ನಂಬಿಕೆಗಳು ಮತ್ತೂ ಬಲವಾಗಿವೆ ಮತ್ತು ಹೊಸ ಕನಸುಗಳು ಮೂಡುತ್ತಿವೆ.


