ಕ್ರಿಕೆಟಿನ ತವರುಮನೆಯ ಕಳವಳಗಳು – ಯೋಗೀಂದ್ರ ಮರವಂತೆ

ಆಶಸ್ ಟ್ರೋಫಿ

ಆಶಸ್ ನಡೆಯುತ್ತಿರುವಾಗ ಕ್ರಿಕೆಟಿನ ಬಗ್ಗೆ ಮಾತನಾಡಿದರೆ, ಬೇಸಿಗೆಯ ಕ್ರಿಕೆಟ್ ಮಾಸ
ಮುಗಿದು ಮೂರು ತಿಂಗಳು ಕಳೆದ ಚಳಿಗಾಲದ ಇಂಗ್ಲೆಂಡಿನಲ್ಲಿ ವಿಷಯಾಂತರವೇನೂ
ಆಗಲಿಕ್ಕಿಲ್ಲ.  ಕಡುಚಳಿಯ ಪರೀಕ್ಷೆ ನಿರೀಕ್ಷೆಯಲ್ಲಿ ಮುಸುಕುಹೊದ್ದು ಮಲಗಿರುವ
ಇಂಗ್ಲೆಂಡಿನ  ಕ್ರಿಕೆಟ್ ಮೈದಾನಗಳಿಂದ  ಹದಿನೈದು ಸಾವಿರ ಕಿಲೋಮೀಟರು ದೂರದ ಬೆಚ್ಚನೆ
ಬಿಸಿಲಿನ ಆಸ್ಟ್ರೇಲಿಯದಲ್ಲಿ ಈ ಸಲದ ಆಶಸ್ ಸರಣಿ ಶುರು ಆಗಿದೆ. “ಆಶಸ್” ಆಂಗ್ಲ ಶಬ್ದದ
ಕನ್ನಡ ರೂಪ “ಬೂದಿ” ಎಂದಾದರೂ , ಈ ಎರಡು ತಂಡಗಳ ನಡುವೆ ನಡೆಯುವ  ಸ್ಪರ್ಧೆ  ಬೂದಿ
ಮುಚ್ಚಿದ ಕೆಂಡದಂತೆ ಯಾವಾಗಲೂ ನಿಗಿನಿಗಿ.  ಆದರೆ, ಸಾಂಪ್ರದಾಯಿಕ ಮತ್ತು ಕಲಾತ್ಮಕ
ಕ್ರಿಕೆಟಿನ ಹೆಮ್ಮೆಯ ಐದು ದಿನಗಳ ಟೆಸ್ಟ್ ಮಾದರಿಯಲ್ಲಿಯೇ  ವಿಶಿಷ್ಟ ಪರಂಪರೆ ಇರುವ
ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ ಪ್ರಸಕ್ತ ಹಣಾಹಣಿಯ ಮೊದಲ ಪಂದ್ಯ, ಎರಡೇ ದಿನಗಳಲ್ಲಿ
ಮುಗಿದು ಹೋಗಿ ಇತಿಹಾಸಪ್ರಿಯ ಆಂಗ್ಲರ  ಮಟ್ಟಿಗೆ ಕರಾಳ ಚರಿತ್ರೆಯಾಗಿ ದಾಖಲಾಗಿದೆ.
ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಗಳ ನಡುವಿನ ಮೊತ್ತಮೊದಲ
ಟೆಸ್ಟ್ ಪಂದ್ಯ ೧೮೭೭ರಲ್ಲಿ  ನಡೆದಿದ್ದರೂ , ಆಶಸ್ ಮಾದರಿಯ ಸರಣಿ ಶುರು ಆದದ್ದು
೧೮೮೨ರಲ್ಲಿ . ಲಂಡನ್ನಿನ ಓವಲ್ ಅಲ್ಲಿ ನೆಡೆದಿದ್ದ  ಆ ಪಂದ್ಯದಲ್ಲಿ ಇಂಗ್ಲೆಂಡ್
ಸೋತಿತ್ತು. ಸ್ಪೋರ್ಟಿಂಗ್ ಟೈಮ್ಸ್ ಪತ್ರಿಕೆ ಅಂದಿನ  ಸೋಲನ್ನು ಆಂಗ್ಲ ಕ್ರಿಕೆಟಿನ
ಸಾವೆಂದು  ಗೇಲಿ ಮಾಡಿತ್ತು. “ಆಂಗ್ಲ ಕ್ರಿಕೆಟಿನ ಶವಸಂಸ್ಕಾರ  ಮಾಡಲಾಗುತ್ತದೆ,
ಬೂದಿಯನ್ನು ಆಸ್ಟ್ರೇಲಿಯಾಕ್ಕೆ  ಒಯ್ಯಲಾಗುತ್ತದೆ ” ಎಂದು ಅಣಕು ಸಂತಾಪ ಸೂಚಿಸಿತ್ತು.
ಪತ್ರಿಕೆ ಪ್ರಕಟಿಸಿದ ಅಣಕು ಪದವನ್ನೇ ಬಳಸಿಕೊಂಡು ಆಗಿನ ಇಂಗ್ಲೆಂಡ್ ತಂಡದ  ನಾಯಕ,
ಮುಂದಿನ ತಿರುಗಾಟದಲ್ಲಿ “ಬೂದಿ”ಯನ್ನು ಮರಳಿ ತರುತ್ತೇವೆ ಎಂದು ಆಂಗ್ಲ ಕ್ರಿಕೆಟ್
ಪ್ರೇಮಿಗಳಿಗೆ ಭರವಸೆ ನೀಡಿದ್ದ. ೧೮೮೨ರ ಮೊದಲ ಸೋಲಿನ ನಂತರದ ಎಂಟು ಆಶಸ್ ಸರಣಿಗಳಲ್ಲಿ
ಇಂಗ್ಲೆಂಡ್ ನಿರಂತರ ಜಯಗಳಿಸಿತ್ತು.  ಜಿದ್ದು ಮತ್ತು ಮುಯ್ಯಿಗಳ ಸರಣಿ ಪಾರಂಪರಿಕ
ಸ್ಪರ್ಧೆಯಾಗಿ ಬೆಳೆಯಿತು ಮುಂದುವರಿಯಿತು. ಎರಡು ವರ್ಷಕ್ಕೊಮ್ಮೆ ನಡೆಯುವ  ಕ್ರಿಕೆಟ್
ಸರಣಿಯಲ್ಲಿ  ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳು ಉತ್ಸುಕತೆ ಆತಂಕದಲ್ಲಿ ಕಾಯುವ
ವಾತಾವರಣವನ್ನು ಹುಟ್ಟಿಸಿತು.

 ಕ್ರೀಡೆಯೊಂದರ ಕಲೆ ಕ್ಷಮತೆ ಕೌಶಲ ಸೇಡು ಪ್ರತಿಷ್ಠೆಗಳ ಪರಾಕಾಷ್ಠೆಗಳಿಗೆ
ಹೆಸರಾಗಿದ್ದ ಆಶಸ್ ನ ದೀರ್ಘ ಇತಿಹಾಸದ ಹೊಚ್ಚ ಹೊಸ ಪುಟವಾದ ಮೊನ್ನೆಮೊನ್ನಿನ ಸೋಲು
ಕ್ರಿಕೆಟಿನ ಹುಟ್ಟೂರಿನಲ್ಲಿ ಕ್ರಿಕೆಟಿನ ಪ್ರಸ್ತುತ ಪರಿಸ್ಥಿತಿಯ ಬಗೆಗಿನ
ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಅನಿರೀಕ್ಷಿತ ತಿರುವುಗಳು , ಊಹಿಸಲಾಗದ
ಫಲಿತಾಂಶಗಳ ಕಾರಣಕ್ಕೆ ಕೆಲವೊಮ್ಮೆ ಮನುಷ್ಯ ಜೀವನಕ್ಕೆ ಹೋಲಿಸಲ್ಪಡುವ ಕ್ರಿಕೆಟ್
ಪಂದ್ಯದಲ್ಲಿ  ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕಾದ  ಪಾಠ, ಭಗ್ನ ಹೃದಯಿಯ
ಯಾತನೆಗೆ ಹೋಲಿಸಬಹುದಾದ ಹತಾಶೆಯ ಅನುಭವ  ಸಾಮಾನ್ಯ ಆದರೂ ಮತ್ತೆ ಆ ಕಾರಣಗಳಿಗಾಗಿಯೇ
ಜನಾಕರ್ಷಣೆ ಪಡೆದಿರುತ್ತಿದ್ದ ಇಂಗ್ಲಿಷ್ ಕ್ರಿಕೆಟ್ ಇತ್ತೀಚಿನ ವರ್ಷಗಳಲ್ಲಿ ಹೊಸ
ತಲೆಮಾರಿನ ಪ್ರೇಕ್ಷಕರನ್ನು  ಸೆಳೆಯುವಲ್ಲಿ ವಿಫಲ ಆಗುತ್ತಿದೆ. ಇಂಗ್ಲೆಂಡಿನ  ಜನರ
ನಿತ್ಯದ ಹರಟೆಯೊಳಗೆ ಸ್ಥಾನ ಪಡೆಯುವಲ್ಲಿ ಸೋಲುತ್ತಿದೆ. ಯುವಜನತೆಯ ಆಸಕ್ತಿ  ಮತ್ತು
ನೆನಪುಗಳಿಂದ ದೂರ ಆಗುತ್ತಿದೆ.  ಬೇಸಿಗೆಯಲ್ಲಿ ಕ್ರಿಕೆಟ್ ಪಂದ್ಯಗಳು ಹಿಂದಿಗಿಂತ
ಹೆಚ್ಚೇ ನಡೆದರೂ  ಕ್ರೀಡಾಂಗಣದ ಆಸನದಲ್ಲಿ ದಕ್ಷಿಣ ಏಷ್ಯಾ ಮೂಲದ ಪ್ರೇಕ್ಷಕರೇ
ಹೆಚ್ಚಾಗಿ ಕಾಣಿಸುವುದು ಸಾಮನ್ಯ ಆಗಿದೆ.

೭೦-೮೦ರ ದಶಕದಲ್ಲಿ ಜೆಫ್  ಬಾಯ್ಕಾಟ್ ಅಥವ ಇಯಾನ್ ಬೋಥಮ್ ರು ಇಂಗ್ಲೆಂಡಿನ
ಮನೆಮಾತಾಗಿದ್ದವರು, ಆ ಕಾಲದ ಅತ್ಯಂತ ಪ್ರಸಿದ್ಧ ಫುಟ್ಬಾಲ್ ತಾರೆಯರಷ್ಟೇ ಜನಪ್ರಿಯತೆ
ಪಡೆದಿದ್ದವರು. ಆದರೆ ಪ್ರಸ್ತುತ ಇಂಗ್ಲೆಂಡ್ ತಂಡದ ನಾಯಕ ಅಥವಾ ಮುಖ್ಯ ಆಟಗಾರರ ಹೆಸರು
ಇಂಗ್ಲೆಂಡಿನ ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. ಜೋ ರೂಟ್ ಎಲ್ಲಾದರೂ
ಬೀದಿಯಲ್ಲಿಯೋ ಅಂಗಡಿಯಲ್ಲಿಯೋ ಎದುರಾದರೆ ಹಸ್ತಾಕ್ಷರಕ್ಕೆ ದುಂಬಾಲು ಬೀಳುವುದು ಬಿಡಿ
ಗುರುತು ಹಿಡಿಯುವವರೇ ವಿರಳ ಇರಬಹುದು.  ಇಂಗ್ಲೆಂಡಿನಲ್ಲಿ ಹುಟ್ಟಿ ಬಲಿತ ,
ಇಂಗ್ಲಿಷರು ತಕ್ಕಡಿ ಹಿಡಿದು ಹೋದಲ್ಲೆಲ್ಲ ಬಿತ್ತಿ ಬೆಳೆದ ಕ್ರೀಡೆಯೊಂದು ಯಾಕೆ
ಅಸಡ್ಡೆಗೆ ಗುರಿ ಆಗುತ್ತಿರಬಹುದು ಎನ್ನುವುದರ ವಿಶ್ಲೇಷಣೆಯೂ ಆಶಸ್ ನ ಮೊದಲ ಪಂದ್ಯದ
ಅಪಮಾನಕರ ಸೋಲಿನಿಂದ , ಸ್ಟುಡಿಯೋದಲ್ಲಿ ಕುಳಿತು ಕ್ರಿಕೆಟನ್ನು ಚರ್ಚಿಸುವ ಬಿಳಿಕೂದಲ
ಗತಕಾಲದ ಇಂಗ್ಲಿಷ್ ಕ್ರೀಡಾ  ಪಂಡಿತರ ಕಾಮೆಂಟರಿಯೊಳಗೆ ಸೇರಿಕೊಂಡಿದೆ , ದಿನಪತ್ರಿಕೆಯ
ಮೂಲೆಯಲ್ಲಿ ಅಭಿಮತವಾಗಿ ಜಾಗ ಪಡೆದಿದೆ. ಆಂಗ್ಲರು ನಿಜವಾದ ಕ್ರಿಕೆಟ್ ಎಂದು ಕರೆಯುವ,
ಐದು ದಿನಗಳ ಟೆಸ್ಟ್ ಪಂದ್ಯಗಳು ಒಂದು ಕಾಲದಲ್ಲಿ ಉಚಿತವಾಗಿ ದೂರದರ್ಶನದಲ್ಲಿ
ಪ್ರಸಾರಗೊಳ್ಳುತ್ತಿದ್ದವು. ಆಶಸ್ ನ ವೀರೋಚಿತ ಸೋಲು ಗೆಲುವುಗಳು ಟಿವಿ ಇರುವ ಪ್ರತಿ
ಮನೆಯನ್ನೂ  ರೇಡಿಯೋ ಆಲಿಸುವ ಜೋಡಿ ಕಿವಿಗಳನ್ನೂ ಸುಲಭವಾಗಿ ತಲುಪುತ್ತಿದ್ದವು. ಈ
ಕಾಲದಲ್ಲಿ ಪ್ರಸಾರದ ಹಕ್ಕುಗಳನ್ನು ಚಂದಾ ನೀಡಬೇಕಾದ ಚಾನೆಲ್ ಗಳಿಗೆ ಮಾರಲಾಗಿದೆ.
ಕ್ರಿಕೆಟ್ ನಿಯಂತ್ರಣ ಮಂಡಳಿಗಳಿಗೆ ಅಲ್ಪಾವಧಿಯಲ್ಲಿ ಹಣ ಹರಿದು ಬರುವುದು
ಹೆಚ್ಚಿದೆಯಾದರೂ  ದೀರ್ಘಾವಧಿಯಲ್ಲಿ ಕ್ರಿಕೆಟಿನ ಜನಪ್ರಿಯತೆಯನ್ನು  ಕುಗ್ಗಿಸಿದೆ.
೨೦೧೯ರ ವಿಶ್ವಕಪ್ ಫೈನಲ್ಸ್ ಚಾನೆಲ್ ೪ರಲ್ಲಿ ಉಚಿತವಾಗಿ ಪ್ರಸಾರವಾಗಿದ್ದು , ತಮ್ಮ
ತಂಡ ಜಯಗಳಿಸಿದ್ದನ್ನು  ಇಂಗ್ಲೆಂಡಿನ ಉದ್ದಗಲಕ್ಕೆ  ಸಂಭ್ರಮಿಸಿದ್ದು , ಇಂಗ್ಲಿಷ್
ಮಣ್ಣಿನ ಕ್ರೀಡೆಗೆ ಸಿಕ್ಕ ಆತ್ಮೀಯತೆಯ ಕೊನೆಯ ಉದಾಹರಣೆ ಇರಬಹುದು.

ಹಾಗೆ ನೋಡಿದರೆ ಕ್ರಿಕೆಟ್  ಆಂಗ್ಲರ  ಕೈಬಿಟ್ಟು … ಆಂಗ್ಲರು  ಕ್ರಿಕೆಟಿನ ಕೈ
ಬಿಟ್ಟು  ದಶಕಗಳೇ  ಕಳೆದಿವೆ. ಇದು ಕ್ರಿಕೆಟಿಗೂ ಮತ್ತು ಅದರ ಅಳಿದುಳಿದ ಆಂಗ್ಲ
ಅಭಿಮಾನಿಗಳಿಗೂ ಬಹಳ ಬೇಸರದ  ವಿಷಯವೇನೂ  ಇರಲಿಕ್ಕಿಲ್ಲ. ಇಂಗ್ಲೆಂಡಿನಲ್ಲಿ ಈ  ಬಗ್ಗೆ
ಕಳವಳ ಪಡುತ್ತಿರುವುದಿದ್ದರೆ  ಅದು  “ಕ್ರಿಕೆಟಿನ  ತವರು ” ಎಂದು ಶತಮಾನದಿಂದ
ಕರೆಸಿಕೊಳ್ಳುತ್ತ  ಹೊಗಳಿಕೆ  ಪ್ರೀತಿ ಹೆಮ್ಮೆ ಮತ್ತು ಹೊಣೆಗಾರಿಕೆಯ  ಭಾರ ಹೊತ್ತ
ಲಾರ್ಡ್ಸ್  ಮೈದಾನ ಇರಬಹುದು .  ಲಾರ್ಡ್ಸ್  ನ ಪೆವಿಲಿಯನ್ ಗೆ ನೀವು ಭೇಟಿ
ನೀಡಿದ್ದರೆ ಆ ಐತಿಹಾಸಿಕ ಮೈದಾನದಲ್ಲಿ ಸಾಹಸ  ಮೆರೆದ  ಕ್ರಿಕೆಟಿಗರ  ಹೆಸರುಗಳ
ಫಲಕವನ್ನು ಗೋಡೆಗೆ   ತೂಗು  ಹಾಕಿದ್ದು ಗಮನಿಸಿರುತ್ತೀರಿ  , ಮತ್ತೆ ಅದರಲ್ಲಿ  ವರ್ಷ
ಕಳೆದಂತೆ ಆಂಗ್ಲರ  ಹೆಸರು ಕಡಿಮೆ  ಆಗುತ್ತಿರುವುದನ್ನೂ .  ಕಣ್ಣುಕುಕ್ಕುವ ಹಚ್ಚ
ಹಸಿರಿನ ಹುಲ್ಲಿನ ಹೊದಿಕೆಯ ಕೆಳಗೆ , ಮೆತ್ತಗೆ ಹೆಜ್ಜೆ  ಇಟ್ಟು ನಡೆಯುವ ಮತ್ತೆ
ಬೀಸುವ ತಂಗಾಳಿಗೆ  ಮೈ ಸೆಟೆದು ಪಟ ಪಟ ರೆಕ್ಕೆ ಬಡಿದು ಹಾರುವ  ಪಾರಿವಾಳಗಳ ಗುಂಪಿನ
ನೆರಳಲ್ಲಿ   ಮತ್ತು ಮೈದಾನವನ್ನು ಕೋಟೆಯಂತೆ ಸುತ್ತುವರಿದ ಹಳೆಯ ಕಟ್ಟಡಗಳು ,
ಪವಿಲಿಯನ್ ಮತ್ತು  ಡ್ರೆಸಿಂಗ್ ರೂಂಗಳ ಸುತ್ತಿನ ಕೋಟೆಯ ಒಳಗೆ  ಹುದುಗಿ  ಸೆರಗಿನ
ತುದಿಯನ್ನು ಬೆರಳಿಗೆ ಸುತ್ತುತ್ತ ಯೋಚಿಸುತ್ತಿರುವುದಿದ್ದರೆ  ಅದು  ಲಾರ್ಡ್ಸ್ ಮಾತ್ರ
ಇರಬಹುದು .

ಭಾರತದಲ್ಲಿ  ಮಣ್ಣಿನ ಆಟವಾದ  ಹಾಕಿಯನ್ನು ಹಿಂದೆ  ತಳ್ಳಿ   ಕ್ರಿಕೆಟ್
ಮೆರೆಯುವಂತೆ, ಇಂಗ್ಲೆಂಡಿನ ಕ್ರಿಕೆಟ್ ಮೈದಾನಗಳಲ್ಲಿನ  ಸಣ್ಣ ಪುಟ್ಟ ಚಪ್ಪಾಳೆ
ಶಿಳ್ಳೆಗಳನ್ನು ಮಿಕ್ಕಿಮೀರಿ  ಫುಟ್ಬಾಲ್ ರಗ್ಬಿಗಳ ಉನ್ಮಾದ ಉತ್ಸಾಹ
ಮುಗಿಲುಮುಟ್ಟುತ್ತದೆ . ಎಲ್ಲೆಂದರಲ್ಲಿ ಯಾವಾಗ ಬೇಕಾದರೂ ಅತಿ ಸುಲಭದಲ್ಲಿ ಕಡಿಮೆ
ಖರ್ಚಿನಲ್ಲಿ ಆಡಬಹುದಾದ  ಫುಟ್ಬಾಲ್  ಮಕ್ಕಳನ್ನು ಎಚ್ಚರದಲ್ಲೂ ಸ್ವಪ್ನದಲ್ಲೂ
ಕಾಡುತ್ತದೆ.  ಲೀಗ್  ಫುಟ್ಬಾಲಲ್ಲಿರುವ  ಅಪಾರ  ಹಣ , ಜನಪ್ರಿಯತೆ , ಜಾಹಿರಾತು
,ವ್ಯಾಪಾರೀ ತಂತ್ರ ಎಲ್ಲವೂ ಸೇರಿ  ಹೊಸ ಪ್ರೇಕ್ಷಕರನ್ನು ಸೇರಿಸಿಕೊಳ್ಳುತ್ತದೆ.
ಟಿವಿ, ಸಾಮಾಜಿಕ ಮಾಧ್ಯಮ , ಪಬ್ಬಿನಲ್ಲಿ ಶುಕ್ರವಾರ ಸಂಜೆಯ ಹರಟೆ ಹೀಗೆ ಎಲ್ಲೆಡೆಯೂ
ಹರಡುತ್ತದೆ.   ಜೆಂಟಲ್ ಮ್ಯಾನ್ ಗಳ ಆಟ ಎಂದು ಹೆಸರಾದ ಕ್ರಿಕೆಟ್  ಆಟದ ಈಗಿನ
ಇಂಗ್ಲಿಷ್ ಪ್ರೇಕ್ಷಕ ವರ್ಗದಲ್ಲಿ ಬಹುಪಾಲು ಜನರು ನಲವತ್ತು ಐವತ್ತು ವರ್ಷ ಮೇಲಿನವರು
ಅಂದರೆ ನಿಜವಾಗಲೂ ಪ್ರಬುಧ್ಧ  ವಯಸ್ಕ ಜೆಂಟಲ್ ಮ್ಯಾನ್ ಗಳು.

ಕ್ರೀಡೆ ಯಾವುದೇ ಇದ್ದರೂ , ಗತಕಾಲದ ಘಟನೆಗಳಿಂದಾಗಿ ಆಯಾ ಕ್ರೀಡೆಗೆ ತಕ್ಕಂತೆ  ಕೆಲವು
 ದೇಶಗಳ  ವಿರುದ್ಧ  ಆಡುವಾಗ  ತಾವು ಗೆಲ್ಲಲೇ  ಬೇಕೆಂದು  ಇಂಗ್ಲಿಷ್
ಕ್ರೀಡಾಭಿಮಾನಿಗಳು  ಹಾರೈಸುತ್ತಾರೆ. ಕ್ರಿಕೆಟಿನ  ಮಟ್ಟಿಗೆ  ಅದು  ಆಸ್ಟ್ರೇಲಿಯದ
ವಿರುದ್ಧ , ಫುಟ್ಬಾಲ್  ಆದರೆ  ಜರ್ಮನಿ, ಫ್ರಾನ್ಸ್ ಗಳ  ವಿರುದ್ಧ. ತಮ್ಮ ಬದ್ದ
ವೈರಿಯ ಜೊತೆ ಒಂದು ವೇಳೆ ಸೋತರೆ,  ವಿಶೇಷ ಟಿಪ್ಪಣಿ ಅಥವಾ ವ್ಯಂಗ್ಯದಲ್ಲೇ  ಪಂದ್ಯ
ಮತ್ತು ವಿಶ್ಲೇಷಣೆ  ಎರಡನ್ನೂ ಮುಗಿಸುತ್ತಾರೆ.  ಈ ಹಿಂದೊಮ್ಮೆ  ಇಂಗ್ಲಂಡ್
ಆಸ್ಟ್ರೇಲಿಯಾಕ್ಕೆ ಸೋತಾಗ ಬೇಸರಗೊಂಡ ನನ್ನ ಕಚೇರಿಯ  ಕ್ರಿಕೆಟ್ ಅಭಿಮಾನಿ,
ಕ್ರಿಕೆಟ್  ಮಟ್ಟಿಗೆ ಆಸ್ಟ್ರೇಲಿಯಾಕ್ಕೆ ಎಷ್ಟು  ಅದೃಷ್ಟ  ಇದೆಯೋ  ತಮ್ಮ   ದೇಶಕ್ಕೆ
 ಅಷ್ಟೇ ಪಾಲಿನ  ದುರಾದೃಷ್ಟ   ಇದೆ  ಎಂದು ಸಮರ್ಥನೆ ನೀಡಿದ್ದ ! ಹಾಗಂತ ಇಂತಹ ಹಲವು
ಸೋಲುಗಳನ್ನು ಅರಗಿಸಿಕೊಂಡಿರುವ ಲಾರ್ಡ್ಸ್ ಮೈದಾನ ಇದನ್ನು  ತನ್ನ ದುರಾದೃಷ್ಟ ಎಂದೇ
ತಿಳಿಯಬಹುದು.  ಲಾರ್ಡ್ಸ್ ನಲ್ಲಿ ನಡೆದ ೨೦೦೨ ರ  ನಾಟ್ ವೆಸ್ಟ್  ಸರಣಿಯ  ಕೊನೆಯ
ಪಂದ್ಯದಲ್ಲಿ  ಭಾರತ  ಇಂಗ್ಲೆಂಡನ್ನು ವೀರೋಚಿತವಾಗಿ ಹೋರಾಡಿ ಸೋಲಿಸಿತ್ತು. ಯುವರಾಜ್
ಮತ್ತು  ಕೈಫ್ ಅಂದಿನ ಪಂದ್ಯದ  ಜೋಡಿ ಹೀರೋಗಳು . ಈ ಪಂದ್ಯವನ್ನು  ಭಾರತ ತಂಡದ
ಡ್ರೆಸಿಂಗ್ ರೂಮಿನ ಬಾಲ್ಕನಿಯಲ್ಲಿ ನಿಂತು ಉಗುರು ಕಚ್ಚುತ್ತ ನೋಡಿ ಮುಗಿಸಿದ್ದ ಆಗಿನ
 ನಾಯಕ  ಗಂಗೂಲಿ , ತಡೆಯಲಾಗದ ಉದ್ವೇಗ  ಸಂತೋಷದಲ್ಲಿ  ಬಾಲ್ಕನಿಯಲ್ಲೇ  ನಿಂತು
ಎಲ್ಲರೆದುರೇ   ಅಂಗಿಯನ್ನು  ಕಳಚಿ  ಕೈಯಲ್ಲಿ ಹಿಡಿದು ಗರಗರ  ತಿರುಗಿಸಿದ್ದು . ಈಗಲೂ
 ಆ  ಕಾರಣಕ್ಕೆ  ಅತಿಥಿ ತಂಡದ  ಬಾಲ್ಕನಿಯನ್ನು ‘ಗಂಗೂಲಿ  ಬಾಲ್ಕನಿ ‘ ಎಂದೇ
ಅನೌಪಚಾರಿಕವಾಗಿ ಕರೆಯುತ್ತಾರೆ . ಎಷ್ಟೇ ಆನಂದ  ಆಗಲಿ    ಇಂಗ್ಲೆಂಡಿನ  ಕ್ರಿಕೆಟಿನ
ಸಂಪ್ರದಾಯಸ್ಥ   ಪ್ರೇಕ್ಷಕರು   ಹೆಚ್ಚೆಂದರೆ  ಕೂತಲ್ಲೇ ,ಅಲ್ಲದಿದ್ದರೆ ಎದ್ದು
ನಿಂತು ಕೈ  ತಟ್ಟಿ  ಅತಿಯಾದ ಹರ್ಷವನ್ನು ಸೂಚಿಸುವವರು , ಕ್ರಿಕೆಟಿನ “ಜೆಂಟಲ್
ಮ್ಯಾನ್ ” ಪರಂಪರೆಯನ್ನು ಮುರಿದ ಆ ಘಟನೆಗೆ ಬೆರಗಾಗಿದ್ದರು .  ಲಾರ್ಡ್ಸ್ ಮೈದಾನವಂತೂ
 ಆಂಗ್ಲ ಸಂಪ್ರದಾಯ ರಿವಾಜನ್ನು ಮೀರಿದ ಭಾರತೀಯನ ನಡವಳಿಕೆಗೆ ನಾಚಿ ಮುದ್ದೆ
ಆಗಿರಬಹುದು. ಇದೇ  ಮೈದಾನದಲ್ಲಿ ನಡೆದ ಇನ್ನೊಂದು  ಪಂದ್ಯದಲ್ಲಿ , ಆಸ್ಟ್ರೇಲಿಯ
ತಂಡದ  ರೋಚಕ  ಗೆಲುವನ್ನು ಸಂಭ್ರಮಿಸಲು   ಶೇನ್   ವಾರ್ನ್  ಕೂಡ  ಅತಿಥಿ ತಂಡದ
ಬಾಲ್ಕನಿಯಲ್ಲಿ  ಗಂಗೂಲಿಯಂತೆ  ಅಂಗಿ  ಕಳಚಿ  ಎಸೆದಿದ್ದ  . ಆಮೇಲೆ   ಕೆಲವರು ಈ
ಬಾಲ್ಕನಿಯನ್ನು  ‘ವಾರ್ನ್  ಬಾಲ್ಕನಿ’ಯಂತಲೂ ಕರೆಯತೊಡಗಿದ್ದರು .

ಹೀಗೆ ಕ್ರಿಕೆಟ್ ಚರಿತ್ರೆಯ ಮಾಹಾಸಂಪುಟವನ್ನು ತನ್ನೊಳಗೆ ಹುದುಗಿಸಿಕೊಂಡಿರುವ
ಲಾರ್ಡ್ಸ್ ಗೆ ಇಂಗ್ಲೆಂಡಿನ ಚರಿತ್ರೆಯಲ್ಲಿಯೂ  ವಿಶಿಷ್ಟ  ಪಾಲುದಾರಿಕೆ ಇದೆ.
ಇತಿಹಾಸದ ಜೊತೆಗೆ   ಸಣ್ಣ  ಸಂಬಂಧ  ಹೊಂದಿದ  ವಸ್ತುವನ್ನೂ  ವಿಷಯವನ್ನೂ
ವೈಭವೀಕರಿಸಿ ಪ್ರವಾಸೋದ್ಯಮದಲ್ಲಿ  ಸೇರಿಸಿಕೊಳ್ಳುವ  ಇಂಗ್ಲೆಂಡಿನಲ್ಲಿ  ,
ಕ್ರಿಕೆಟಿನ ಜನಪ್ರಿಯತೆ  ಕುಗ್ಗಿದ್ದರೂ   ಲಂಡನ್ ಪ್ರವಾಸೋದ್ಯಮದ ನಕ್ಷೆಯಲ್ಲಿ
ಲಾರ್ಡ್ಸ್ ಮೈದಾನಕ್ಕೆ  ವಿಶೇಷ ಗುರುತು ಇದೆ. ಈ ಗುರುತಿನ ಬೆನ್ನು ಹಿಡಿದು  ದುಬಾರಿ
ಎಂದು ತೋರುವ ಟಿಕೇಟು ಪಡೆದು ಮೈದಾನದ ಒಳ ನಡೆದರೆ  ಅಲ್ಲೊಬ್ಬ   ಗೈಡ್   ಲಾರ್ಡ್ಸ್
ಒಳಗೆಲ್ಲ  ಸುತ್ತಾಡಿಸಿ   ಗೋಡೆ ಫಲಕ ಮೈದಾನ ಕಂಬ ಕಿಟಕಿಗಳ ಇತಿಹಾಸ ಕಥೆ  ಹೇಳಿ
ನಿಮ್ಮನ್ನು ರಂಜಿಸುತ್ತಾನೆ. ಮತ್ತೆ  ಲಾರ್ಡ್ಸ್  ಒಳಗಿನ  ಅಂಗಡಿಯಲ್ಲಿ  ನಮ್ಮ  ನಮ್ಮ
 ರುಚಿಗೆ ಮತ್ತು  ಕಿಸೆಗೆ  ತಕ್ಕಂತೆ  ದೊರೆಯುವ ಸ್ಮರಣಿಕೆಗಳ ಕಡೆಗೂ ಗಮನ
ಸೆಳೆಯುತ್ತಾನೆ . ಲಾರ್ಡ್ಸ್ ಮೈದಾನಕ್ಕೆ ಇನ್ನಷ್ಟು ಮುಜುಗರ ಹುಟ್ಟಿಸುತ್ತಾನೆ.
ಲಾರ್ಡ್ಸ್ ನ ಹಳೆಯ ವೈಭವನ್ನು ಮೆಲುಕು ಹಾಕುತ್ತ ಗೈಡನ ಹಿಂದೆ  ಕೈ ಕಟ್ಟಿಕೊಂಡು
ದೂರದೂರದ ಪ್ರವಾಸಿ ಕ್ರಿಕೆಟ್ ಪ್ರೇಮಿಗಳು ಹಿಂಬಾಲಿಸುವಾಗ  ಲಾರ್ಡ್ಸ್ ಒಂದು
ನಿಟ್ಟುಸಿರು ಬಿಡುತ್ತದೆ, ಕ್ಯಾಮೆರ ಹಿಡಿದು ಮೈದಾನದ ವಿವಿಧ ದಿಕ್ಕುದೆಸೆಗಳ ಭಂಗಿಗಳ
ಛಾಯಾಚಿತ್ರ ತೆಗೆಯ ಹೊರಟವರಿಗೂ ಲಾರ್ಡ್ಸ್ ಮನದುಂಬಿ ನಕ್ಕಿದ್ದನ್ನು ಕ್ಲಿಕ್ಕಿಸುವುದು
 ಸಾಧ್ಯ ಆಗಲಿಕ್ಕಿಲ್ಲ . ಪ್ರೇಮಿಗಳಿಗೆ  ಕಾಶ್ಮೀರದ  ಕಣಿವೆಯಲ್ಲೋ ,
ಸ್ವಿಜರ್ಲ್ಯಾಂಡಿನ  ಹಿಮ ಶಿಖರದಲ್ಲೋ  ಸಿಗುವ ರೋಮಾಂಚನವನ್ನು ಲಾರ್ಡ್ಸ್ ಮೈದಾನ
ಕ್ರಿಕೆಟ್  ಆಟಗಾರರಿಗೆ ,  ಪ್ರೇಕ್ಷಕರಿಗೆ  ನೀಡುತ್ತಲೇ ಬಂದಿದೆ.  ಕ್ರಿಕೆಟ್
ಆಟಗಾರರು  ಪಂದ್ಯವೊಂದರಲ್ಲಿ ಶತಕವನ್ನೋ  ಅಥವಾ  ಐದು  ವಿಕೆಟುಗಳನ್ನೋ  ಪಡೆದು
ಅಲ್ಲಿನ ಶಾಶ್ವತ ಫಲಕದಲ್ಲಿ  ತಮ್ಮ  ಹೆಸರು  ಸೇರಿದರೆ  ತಮ್ಮ ಕ್ರೀಡಾ ಜನುಮಕ್ಕೆ
ಮೋಕ್ಷ  ಸಿಕ್ಕಿದವರಂತೆ  ಖುಶಿ  ಪಡುತ್ತಾರೆ . ಕ್ರಿಕೆಟಿನ  ಅಪ್ಪಟ  ಪ್ರೇಮಿಗಳು
ಲಾರ್ಡ್ಸ್ ಅಲ್ಲಿ ಕುಳಿತು  ಒಂದು  ಪಂದ್ಯವನ್ನಾದರು  ನೋಡಬೇಕೆಂದು  ಕನಸು
ಕಾಣುತ್ತಾರೆ. ಕೋಟ್ಯಾಂತರ ಜನರ ತಲೆಯಲ್ಲಿ ಗುಂಯ್ ಗುಂಯ್ ಗುಟ್ಟುವ  ಇಂತಹ ಕನವರಿಕೆಗೆ
 ತಾನೇ ಕಾರಣ  ಎನ್ನುವ ಹೆಮ್ಮೆಯಲ್ಲಿದ್ದ ಲಾರ್ಡ್ಸ್ , ತವರಿನ ತಂಡದ ಕಳಪೆ ಸಾಧನೆ,
ವಿಮುಖರಾದ ಅಭಿಮಾನಿಗಳು ಮತ್ತೆ ಕರಗುತ್ತಿರುವ ಆಸಕ್ತಿ ಜನಪ್ರಿಯತೆಗಳಿಂದ
ಸೊರಗಿಹೋಗಿದೆ  .

ಇಂಗ್ಲೆಂಡಿನ ಕ್ರಿಕೆಟ್ ಮತ್ತೆ ತನ್ನ ವೈಭವದ ದಿನಗಳನ್ನು ಮತ್ತು ಯಶಸನ್ನು
ಕಂಡುಕೊಳ್ಳುತ್ತದೋ ಇಲ್ಲವೋ , ಹೊಸ ಕ್ರಿಕೆಟ್ ಹೀರೋಗಳ ಫೋಟೋಗಳು ಚಿಣ್ಣರ ಬ್ಯಾಟುಗಳ
ಮೇಲೆ, ಶಾಲಾ  ಪುಸ್ತಕದ ಒಳಪುಟಗಳಲ್ಲಿ  ಅವಿತು  ಮಂದಹಾಸ ಬೀರುತ್ತವೋ ಇಲ್ಲವೋ ಆದರೆ
ಕ್ರಿಕೆಟ್ ಎನ್ನುವುದು ದೇಹ ಮನಸುಗಳಿಗೆ ಉಲ್ಲಾಸ ಆರೋಗ್ಯ ತರುವ   ಕ್ರೀಡೆಯಾಗಿ
ಉಳಿಯಲಿ ಎಂದು  ಕ್ರಿಕೆಟಿನ ತವರು  ಆಶಿಸುತ್ತಿರಬಹುದು.  ಜನಪ್ರಿಯತೆಯ
ಉತ್ತುಂಗದಲ್ಲಿರುವ ಫುಟ್ಬಾಲ್ ,   ಕ್ರೀಡೆಯ ಆಯ ಆಕಾರ ಗಾತ್ರವನ್ನು ಮೀರಿ ಬೆಳೆದ
ಬಲಿಷ್ಠ ದೊಡ್ಡ ಉದ್ಯಮವಾದ  ಹೊತ್ತಿನಲ್ಲಿ  , ಕ್ರಿಕೆಟ್ ಕೂಡ ಶುದ್ಧ ಮಾರುಕಟ್ಟೆಯಾಗಿ
ಬದಲಾಗುತ್ತಿರುವುದು,  ಇಂಗ್ಲೆಂಡ್ ನ ಮೈದಾನಗಳಲ್ಲಿ ಕ್ರಿಕೆಟನ್ನು ಆಸ್ವಾದಿಸುವ
ಆಂಗ್ಲ ಪ್ರೇಕ್ಷಕರು ಬಹಳ ಕಡಿಮೆ ಇದ್ದರೂ ಜಗತ್ತಿನ ಮೈದಾನದಲ್ಲಿ ಕ್ರಿಕೆಟ್
ದಿನನಿತ್ಯದ ವ್ಯಾಪಾರವಾಗಿ ಬಹಳ ಬೇಗ ಬೆಳೆಯುತ್ತಿರುವುದು , ಲಾರ್ಡ್ಸ್ ನ ಕಳವಳವನ್ನು
ಹೆಚ್ಚಿಸುತ್ತಿರಬಹುದು. ಇಷ್ಟರಲ್ಲೇ  ಕ್ರಿಕೆಟಿನ ತವರುಮನೆಯ ಮೊದಮೊದಲಿನ ಕಸಿವಿಸಿ
ಮುನಿಸುಗಳು  ಬೇಸರವೂ ಆಗಿ ಪರಿವರ್ತನೆ ಹೊಂದಿರಬಹುದು  . ಲಾರ್ಡ್ಸ್ ನ ಮೋಹಕ ಹಸಿರು
ಸೆರಗಿನ ತುದಿಯಲ್ಲಿ ಗಂಟುಗಳು ಒಂದು ಎರಡು ಮೂರು .. ಇನ್ನೂ ಹೆಚ್ಚಿರಬಹುದು.

ದಿ. ಎಸ್ ಎಲ್ ಭೈರಪ್ಪ – ನೆನಪುಗಳ ಅಚ್ಚಿನ ನುಡಿನಮನ.

ನಮಸ್ಕಾರ.  ಕನ್ನಡ ಸಾಹಿತ್ಯಾಸಕ್ತರಿಗೆ ಹೋದವಾರ ಎರಗಿದ ಆಘಾತ ಇನ್ನೂ ಪೂರ್ತಿ ಕಡಿಮೆಯಾಗಿಲ್ಲ.  ಶಕ್ತಿಯುತ ಕಾದಂಬರಿಗಳನ್ನು ನೀಡಿದ, ಸರಸ್ವತೀ ಸಮ್ಮಾನ ಪುರಸ್ಕೃತ ಶ್ರೀ ಎಸ್ ಎಲ್ ಭೈರಪ್ಪ ಈ ಲೋಕವನ್ನು ಬಿಟ್ಟು ಹೊರಟರೂ, ಅವರ ಲೆಗಸಿ, ಓದುಗರ ಮೇಲಿನ ಅವರ ಪ್ರಭಾವ, ಅವರ ಕಾದಂಬರಿಗಳ ಪರಿಣಾಮ ಇವ್ಯಾವೂ ಅವರ ಜೊತೆಗೆ ಹೋಗಲಾರವು.  ಅವರ ಪುಸ್ತಕಗಳನ್ನು ಓದುವವರ ಮನಸ್ಸಿನ ಮೇಲೆ ಅದರಲ್ಲಿನ ಪಾತ್ರಗಳು, ಸನ್ನಿವೇಶಗಳು ಹಾಕುವ ಮೋಡಿ ಮರೆಯಾಗಲಾರದು.  ನನ್ನ ಸೋದರತ್ತೆಯ ಮನೆಯಲ್ಲಿ ನಮ್ಮ ಮಾವ ಪೇರಿಸಿಟ್ಟಿದ್ದ ಪುಸ್ತಕ ರಾಶಿಯನ್ನು ಸೇರಿರುವ ಹೊಸ ಹೊತ್ತಗೆಗಳನ್ನು ಓದಿ ಮುಗಿಸುವ ಸ್ಪರ್ಧೆ ಪ್ರತೀ ಬೇಸಿಗೆ ರಜೆಯಲ್ಲಿ ನನಗೂ ನನ್ನ ತಂಗಿಗೂ ಇದ್ದದ್ದೇ.  ಅಷ್ಟು ದಪ್ಪನೆಯ ಪುಸ್ತಕ ಪರ್ವವನ್ನು ಎಡಬಿಡದೆ, ಊಟ ತಿಂಡಿ ಬಿಟ್ಟು ೨೪ ಗಂಟೆಗಳಲ್ಲಿ ಓದಿದ್ದನ್ನು ಮರೆಯಲಾರೆ.  

ನಮ್ಮಲ್ಲಿನ ಹಲವಾರು ಅನಿವಾಸಿ ಸದಸ್ಯರು ತಮ್ಮ ನೆನಪುಗಳನ್ನು, ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಕೆಳಗೆ. ಈ ಸಂಚಿಕೆಯನ್ನು ಹೋದವಾರ ಶ್ರೀಮತಿ ಗೌರಿ ಪ್ರಸನ್ನ ಅವರು ಬರೆದ ನುಡಿನಮನಕ್ಕೆ ಜೋಡಿಸಿಕೊಂಡು, ಆಸಕ್ತರು ಒಂದೆಡೆ ಇಟ್ಟುಕೊಳ್ಳಬಹುದು. - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).

ಕೊಸರು: ಇಲ್ಲಿ ಪ್ರಕಟಿಸಿರುವ ಲೇಖನಗಳು ಯಾವುದೇ order ನಲ್ಲಿ ಇರುವುದಿಲ್ಲ, ಅವನ್ನು ನನಗೆ ತಲುಪಿದಂತೆ ಬಳಸಿದ್ದೇನೆ.
**********************
ಒಂದು ಮಹಾನ್ ದೀಪವು ಇತರ ಲೋಕಗಳನ್ನು ಪ್ರಕಾಶಮಾನಗೊಳಿಸಲು ಸಾಗಿದೆ. ಕನ್ನಡ ಭಾಷೆಯ ಮೇಲಿನ ನನ್ನ ಪ್ರೀತಿಯು ಎಸ್.ಎಲ್. ಭೈರಪ್ಪ ಅವರ ಬರವಣಿಗೆಯ ಮೂಲಕ ಆಕಾಶಕ್ಕೇರಿತು. ಅವರ ಸಂಶೋಧನೆಯ ಆಳತೆ, ಸತ್ಯವನ್ನು ಅಸಂಪ್ರದಾಯಿಕವಾಗಿ ಮತ್ತು ಅಚಲವಾದ ದೃಢತೆಯಿಂದ ಪ್ರಸ್ತುತಪಡಿಸುವ ಅವರ ನಿಶ್ಚಯವನ್ನು ತೋರಿಸುತ್ತದೆ, ಜೊತೆಗೆ ಕಾದಂಬರಿಯ ಸಾಹಿತ್ಯದ ಸೌಂದರ್ಯವನ್ನು ಕಸಿದುಕೊಳ್ಳದೆ. 'ಅವರಣ' ಓದಿದಾಗ, ಇತಿಹಾಸವನ್ನು ಎಷ್ಟು ಮಟ್ಟಿಗೆ ವಿಕೃತಗೊಳಿಸಲಾಗಿದೆ ಎಂಬುದನ್ನು ನಾನು ಅರಿತುಕೊಂಡೆ ಮತ್ತು ಇದನ್ನು ಎಲ್ಲರಿಗೂ, ವಿಶೇಷವಾಗಿ ಇತಿಹಾಸದ ಕೇವಲ ಒಂದು ಭಾಗವನ್ನು ಮಾತ್ರ ಕೇಳಿರುವ ಯುವಜನತೆಗೆ ಓದಬೇಕೆಂದು ಶಿಫಾರಸು ಮಾಡುವೆ. ಕಥೆಯೊಳಗಿನ ಕಥೆ ಬರೆಯುವ ಕಠಿಣ ತಂತ್ರವನ್ನು ಡಾ. ಭೈರಪ್ಪ ಅವರು ಅದ್ಭುತವಾಗಿ ನಿರ್ವಹಿಸಿದ್ದಾರೆ.

ಇನ್ನೂ ಅವರ ಅನೇಕ ಕಾದಂಬರಿಗಳನ್ನು ನಾನು ಓದಿಲ್ಲ, ಈಗ ಅವುಗಳನ್ನು ಓದುವ ನಿಶ್ಚಯ ಮಾಡಿಕೊಂಡಿದ್ದೇನೆ. ನಮ್ಮ ನಡುವೆ ಎಸ್‌ ಎಲ್‌ ಭೈರಪ್ಪನವರು ಇದ್ದರು ಎಂಬುದು ನಮಗೆ ಆಶೀರ್ವಾದವೇ ಅಲ್ಲವೇ? ಅವರು ಕರುನಾಡಿನಲ್ಲಿ ಹುಟ್ಟಿದ್ದು, ಅವರ ಸಾಹಿತ್ಯದ ಅಪಾರ ಕೊಡುಗೆ ನಮ್ಮ ಕನ್ನಡ ಭಾಷೆಯಲ್ಲಿ ಎಂಬದು ಕನ್ನಡಿಗರಾದ ನಮೆಲ್ಲರಿಗೆಷ್ಟು ಹೆಮ್ಮೆ! ಅವರು 2019ರಲ್ಲಿ ಯುಕೆಗೆ ಭೇಟಿ ನೀಡಿದಾಗ ಅವರನ್ನು ನೋಡುವ ಮತ್ತು ಕೇಳುವ ಅವಕಾಶ ನನ್ನದಾಯಿತು. ಇದಕ್ಕೆ ನಾನು ಚಿರಋಣಿ. ಅವರ ಬಗ್ಗೆ ಹೆಚ್ಚು ತಿಳಿದಷ್ಟು, ಹೆಚ್ಚು ವಿನಮ್ರತೆಯ ಭಾವನೆ ಉಂಟಾಗುತ್ತದೆ. ಅವರ ಗಮನವು ಒಂದು ಯುಗದ ಅಂತ್ಯದಂತೆ ಅನಿಸುತ್ತದೆ.

ಓಂ ಶಾಂತಿ.

- ಶಾಲಿನಿ ಜ್ಞಾನಸುಬ್ರಮಣಿಯನ್.
**********************
ಡಾ ಎಸ್ ಎಲ್ ಭೈರಪ್ಪ; ಕೆಲವು ಚಿಂತನೆಗಳು ಮತ್ತು ನೆನಹುಗಳು
ಡಾ ಜಿ ಎಸ್ ಶಿವಪ್ರಸಾದ್


ಭೈರಪ್ಪನವರು ಬಹಳ ಜನಪ್ರಿಯ ಲೇಖಕರು ಮತ್ತು ಕನ್ನಡ ಸಾರಸ್ವತ ಲೋಕದ ದಿಗ್ಗಜರು. ಸರಸ್ವತಿ ಸಮ್ಮಾನ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟವರು. ಅವರು ಪದ್ಮಶ್ರೀ ಮತ್ತು ಪದ್ಮವಿಭೂಷಣ ಪುರಸ್ಕೃತರೂ ಆಗಿದ್ದರು. ಭೈರಪ್ಪನವರು ಸಮಾಜದಲ್ಲಿನ ವಿವಿಧ ಸಮುದಾಯಗಳ ಅನುಭವವನ್ನು ಪಡೆಯಲು ಹತ್ತಾರು ನೆಲೆಗಳಲ್ಲಿ ಹೋಗಿ ಬದುಕನ್ನು ಹತ್ತಿರದಿಂದ ಕಂಡು, ಅದನ್ನು ಧರ್ಮ, ತರ್ಕ ಶಾಸ್ತ್ರ, ಮತ್ತು ಸಾಂಸ್ಕೃತಿಕ ವಿಷಯಗಳ ಹಿನ್ನೆಲೆಯಲ್ಲಿ ತೀವ್ರ ಚರ್ಚೆಗೆ ಒಳಪಡಿಸಿದ ಲೇಖಕ. ಅವರ ಕಾದಂಬರಿ ವಸ್ತು ವಿಷಯದ ಬಗ್ಗೆ ಸಾಕಷ್ಟು ಸಂಶೋಧನೆಯನ್ನು ಮಾಡಿ ಬದುಕಿನ ಅನುಭವಗಳ ವಿಸ್ತಾರವನ್ನು ಓದುಗರಿಗೆ ಪರಿಚಯಿಸುತ್ತಿದ್ದರು. ತಮ್ಮ ನಿಲುವಿಗೆ ಬದ್ಧರಾಗಿ ನಿಂತವರು ಭೈರಪ್ಪನವರು. ಪಂಡಿತರು, ವಿಮರ್ಶಕರು, ಮೀಮಾಂಸಕರು ಭೈರಪ್ಪನವರ ಕೃತಿಗಳ ತಿರುಳುಗಳನ್ನು ಚರ್ಚಿಸಿದ್ದು ಅದನ್ನು ರಾಜಕೀಯ, ಧಾರ್ಮಿಕ, ಸಾಮಾಜಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅದರ ಪ್ರಸ್ತುತತೆಯನ್ನು ಪರಿಣಾಮಗಳನ್ನು ನೋಡಿ ವಿಶ್ಲೇಷಿಸಿದ್ದಾರೆ. ಅಲ್ಲಿ ಕೆಲವು ವಿವಾದಗಳು ಹುಟ್ಟುಕೊಂಡಿರುವುದು ನಿಜ. ಹಲವಾರು ಸಾಂಸ್ಕೃತಿಕ, ಧಾರ್ಮಿಕ, ಮತ, ಜಾತಿ ವ್ಯವಸ್ಥೆಗಳ ನಡುವೆ ಬಹುತ್ವ ಉಳ್ಳ ಭಾರತೀಯ ಸಮಾಜದಲ್ಲಿ ಇತಿಹಾಸ, ಧರ್ಮ, ಸಂಪ್ರದಾಯ ಎಂಬ ವಿಚಾರಗಳು ಭಾವನೆಗಳನ್ನು ಕಲಕುವುದು ಸಹಜವೇ.

ಜಾಗತೀಕರಣದ ಹಿನ್ನೆಲೆಯಲ್ಲಿ ಸಮಾಜ ತೀವ್ರಗತಿಯಲ್ಲಿ ಬದಲಾಗುತ್ತಿದೆ. ರಾಷ್ತ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಕೂಡ ಬದಲಾಗುತ್ತಿದೆ. ಈ ಬದಲಾವಣೆಗಳ ನಡುವೆ ಬದುಕುತ್ತಿರುವ ಸೃಜನ ಶೀಲ ಲೇಖಕರು ಆ ಬದಲಾವಣೆಗಳಿಗೆ ಸ್ಪಂದಿಸಿ ಅದನ್ನು ತಮ್ಮ ಕಲ್ಪನಾ ಶಕ್ತಿಯಿಂದ ಅದರ ವಿವಿಧ ಆಯಾಮಗಳನ್ನು ಗ್ರಹಿಸಿ ಕಥೆ, ಕವನ, ಕಾದಂಬರಿಗಳಲ್ಲಿ ಪ್ರಸ್ತುತಿ ಪಡಿಸುತ್ತಾರೆ. ಅಲ್ಲಿ ಪ್ರಭುತ್ವದ, ಬಹುಸಂಖ್ಯಾತರ, ಅಲ್ಪಸಂಖ್ಯಾತರ ಪರ ಅಥವಾ ವಿರೋಧ ಭಾವನೆಗಳು ಉಂಟಾಗುವುದು ಅನಿವಾರ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ, ಒಂದು ಸಿದ್ಧಾಂತಕ್ಕೆ ಜನರು,
ಓದುಗರು ತಮ್ಮ ವೈಯುಕ್ತಿಕ ಬದುಕಿನ ಅನುಭವದ ಆಧಾರದಮೇಲೆ, ಹುಟ್ಟಿನಿಂದಲೇ ಪ್ರಾಪ್ತವಾಗಿರುವ ಕೆಲವು ಸಾಮಾಜಿಕ, ಧಾರ್ಮಿಕ ಸಾಂಸ್ಕೃತಿಕ ಪ್ರಭಾವಗಳ ಆಧಾರದ ಮೇಲೆ, ತಮ್ಮ ಶಿಕ್ಷಣ, ಸಾಹಿತ್ಯದ ಅರಿವು, ತಮ್ಮ ಪರಿಸರ, ಒಡನಾಟ, ಬದುಕಿನ ಮೌಲ್ಯ, ದೃಷ್ಟಿಕೋನ ಇವುಗಳ ಆಧಾರದ ಮೇಲೆ ತಮಗೆ ಒಪ್ಪುವಂಥ ನಿಲುವನ್ನು ಕಟ್ಟಿಕೊಂಡಿರುತ್ತಾರೆ. ಇಂಥ ಒಂದು ಸನ್ನಿವೇಶದಲ್ಲಿ ಒಂದು ಕಥಾವಸ್ತುವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಆಯ್ಕೆಯನ್ನು ಅವರು ಪಡೆದಿರುತ್ತಾರೆ. ಹಿಂದೆ ಸಾಹಿತ್ಯ ವಿಚಾರ ಗೋಷ್ಠಿಯಲ್ಲಿ, ಪತ್ರಿಕೆಗಳಲ್ಲಿ, ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದವು, ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲೂ ನಡೆಯುತ್ತಿವೆ. ಈ ಚರ್ಚೆಗಳು ಘನವಾಗಿದ್ದಲ್ಲಿ ಅದು ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿರುತ್ತದೆ. ಹಿಂದೆ, ಭಿನ್ನಾಭಿಪ್ರಾಯಗಳ ನಡುವೆಯೂ ಹಿರಿಯ ಸಾಹಿತಿಗಳ ನಡುವೆ ಪರಸ್ಪರ ಗೌರವ, ಸ್ನೇಹ, ವಿಶ್ವಾಸಗಳಿರುತ್ತಿದ್ದವು.

ಒಂದು ಕಥೆಯಲ್ಲಿ ಕಥಾವಸ್ತು, ಬರವಣಿಗೆಯ ಶೈಲಿ, ಪಾತ್ರಪೋಷಣೆ, ಸರಳತೆ, ಸಂಕೀರ್ಣತೆ ಹೀಗೆ ಅನೇಕ ಆಯಾಮಗಳಿರುತ್ತವೆ. ಕೆಲವೊಮ್ಮೆ ಕಥಾವಸ್ತು ಇಷ್ಟವಾಗಬಹುದು, ಅಥವಾ ಇಷ್ಟವಾಗದಿರಬಹುದು, ಶೈಲಿ ಇಷ್ಟವಾಗ ಬಹುದು, ಅಥವಾ ಸನ್ನಿವೇಶಗಳ ಸಂಕೀರ್ಣತೆ ಮತ್ತು ಪಾತ್ರಗಳ ಪೋಷಣೆ ಓದುಗನ ಆಸಕ್ತಿಯನ್ನು ಸೆಳೆಯಬಹುದು. ಬದುಕಿನಲ್ಲಿ ಎದುರಾಗುವ ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳ, ನಂಬಿಕಗಳ ಘರ್ಷಣೆಗಳು ದ್ವಂದ್ವಗಳು ಎಲ್ಲರನ್ನು ಕಾಡುವುದು ಸಹಜ. ಆ ರೀತಿ ವಿಚಾರಗಳನ್ನು ಲೇಖಕರು ತೀವ್ರ ವಿಮರ್ಶೆಗೆ ಒಳಪಡಿಸಿ ಅದನ್ನು ತಮ್ಮ ಅಭಿಪ್ರಾಯ ಎಂದು ಹೇಳದೆಯೇ ಪಾತ್ರಗಳ ಮುಖೇನ ತೆರೆದಿಡುತ್ತಾರೆ. ಓದುಗರನ್ನು ಆ ಆಳಕ್ಕೆ ಲೇಖಕರು ಕರೆದೊಯ್ಯುತ್ತಾರೆ. ಓದುಗರು ತಮ್ಮ ಅನುಭವಕ್ಕೆ ತಕ್ಕಂತೆ ಅದನ್ನು ಅರ್ಥೈಸಿಕೊಳ್ಳಬಹುದು.

ಕೆಲವು ಲೇಖಕರ ಕೃತಿಗಳನ್ನು ಅರ್ಥಮಾಡಿಕೊಳ್ಳಲು ಭಾರತೀಯ ಸಾಂಸ್ಕೃತಿಕ ಪ್ರಜ್ಞೆ ಅಗತ್ಯ. ಕೆಲವು ಕೃತಿಗಳಿಗೆ ಸಾಂಸ್ಕೃತಿಕ ಗಡಿಗಳನ್ನು ದಾಟಿ ನಿಲ್ಲುವ ಶಕ್ತಿ ಇರುತ್ತದೆ, ಕೆಲವು ಕೃತಿಗಳನ್ನು ಅದರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ
ನೋಡಿ ಅರ್ಥೈಸಿಕೊಳ್ಳಬೇಕು. ಎಲ್ಲ ಕೃತಿಗಳಿಗೂ ಇತಿಮಿತಿಗಳಿರುತ್ತದೆ, ಅದರ ಮಧ್ಯದಲ್ಲಿ ಅದು ಎಷ್ಟರ ಮಟ್ಟಿಗೆ ಜನರ ಮನ್ನಣೆ ಪಡೆದಿದೆ, ಕೃತಿಗಳು ಎಷ್ಟು ಜನರನ್ನು ತಲುಪಿದೆ, ಎಷ್ಟು ಮರು ಮುದ್ರಣವನ್ನು ಕಂಡಿದೆ, ಎಷ್ಟು ಭಾಷೆಗಳಿಗೆ ಭಾಷಾಂತರಗೊಂಡಿದೆ ಮತ್ತು ಮುಂದಕ್ಕೆ ಎಲ್ಲಿಯವರೆಗೆ ಜನರಿಂದ ಸ್ವೀಕೃತವಾಗಿರುತ್ತದೆ ಅನ್ನುವುದು ಕಡೆಗೆ ಉಳಿಯುವ ವಿಚಾರ. ಈ ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ನಾವು ಭೈರಪ್ಪನವರನ್ನು ಒಬ್ಬ ಲೇಖಕನಾಗಿ ಮತ್ತು ಅವರು ಬರೆದಿರುವ ಕೃತಿಗಳನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ.

ನಾನು ಭೈರಪ್ಪನವರನ್ನು ಹತ್ತಿರದಿಂದ ಕಂಡದ್ದು ಅವರು ನಮ್ಮ ಕನ್ನಡ ಬಳಗದ ಮೂವತ್ತನೇ ವಾರ್ಷಿಕೋತ್ಸವದ ಅತಿಥಿಯಾಗಿ ಬಂದ ಸಂದರ್ಭದಲ್ಲಿ. ನಾನು ಆಗ ಸ್ಮರಣ ಸಂಚಿಕೆಯ ಸಂಪಾದಕನಾಗುವುದರ ಜೊತೆಗೆ ಸಾಹಿತ್ಯ ಕಾರ್ಯಕ್ರಮಗಳ ಜವಾಬ್ದಾರಿಯನ್ನೂ ಹೊತ್ತಿದ್ದೆ. ಆಗ ಮುಖ್ಯ ಮಂತ್ರಿ ಚಂದ್ರು ಮತ್ತು ಪ್ರೊ ಕೃಷ್ಣೇಗೌಡರು ನಮ್ಮ ಅತಿಥಿಯಾಗಿ ಆಗಮಿಸಿದ್ದರು. ಡಾ ಭಾನುಮತಿ ಅವರು ಬಳಗದ ಅಧ್ಯಕ್ಷರಾಗಿದ್ದರು. ಆ ಒಂದು ಸಂಧರ್ಭದಲ್ಲಿ ಭೈರಪ್ಪ ಅವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ನಾನು ಭೈರಪ್ಪನವರನ್ನು ಸಾಹಿತ್ಯ ವಿಚಾರವಾಗಿ ಮಾತನಾಡಬೇಕೆಂದು ವಿನಂತಿಸಿಕೊಂಡಾಗ ಅವರು ಅದಕ್ಕೆ ಬದಲಾಗಿ ಅವರ ಕೃತಿಯ ಬಗ್ಗೆ ಸಾರ್ವಜನಿಕ ಸಂವಾದ ಒಂದನ್ನು ಏರ್ಪಡಿಸುವುದು ಸೂಕ್ತವೆಂದು ಸಲಹೆ ನೀಡಿದ್ದರು. ಅಂದಿನ ಪ್ರಶ್ನೋತ್ತರ ಕಾರ್ಯಕ್ರಮಕ್ಕೆ ಡಾ ವತ್ಸಲಾ ರಾಮಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಒಳ್ಳೆ ಸಂವಾದ ನಡೆಯಿತು.

೨೦೧೯ರಲ್ಲಿ ಭೈರಪ್ಪನವರನ್ನು ಕುರಿತು ಲಂಡನ್ನಿನ ನೆಹರು ಸೆಂಟರಿನಲ್ಲಿ ಒಂದು ಇಂಗ್ಲಿಷ್ ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಅದಕ್ಕೆ ಭೈರಪ್ಪನವರು ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ನನಗೆ ಭೈರಪ್ಪನವರ ಕೃತಿಯ ಬಗ್ಗೆ ಇಂಗ್ಲೀಷಿನಲ್ಲಿ ಮಾತನಾಡುವುದಕ್ಕೆ ಅಹ್ವಾನ ಒದಗಿ ಬಂತು. ಸಂತೋಷದಿಂದ ಒಪ್ಪಿಕೊಂಡೆ. ಅಂದು ಖ್ಯಾತ ಲೇಖಕ ಅಮಿಶ್ ತ್ರಿಪಾಠಿ ಅಧ್ಯಕ್ಷತೆ ವಿಹಿಸಿದ್ದು ಅಲ್ಲಿ ಶತಾವಧಾನಿ ಗಣೇಶ್ ಮತ್ತು ಸಾಹಿತಿಗಳಾದ ಗಿರೀಶ್ ಭಟ್ ಅವರೂ ಮಾತನಾಡಿದರು. ನಾನು ಒಬ್ಬ ಅನಿವಾಸಿ ಲೇಖಕನಾಗಿ ‘ತಬ್ಬಲಿಯು ನೀನಾದೆ ಮಗನೆ’ ಕೃತಿಯ ಬಗ್ಗೆ ಒಂದು ಪುನರಾವಲೋಕನೆಯನ್ನು ಮಂಡಿಸಿದೆ. ಐದು ದಶಕಗಳ ನಂತರ ಆ ಕಥೆಯನ್ನು ಅವಲೋಕನೆ ಮಾಡಿದಾಗ ಅದು ತನ್ನ ಸ್ವರೂಪವನ್ನು ಹೇಗೆ ಉಳಿಸಿಕೊಂಡಿದೆ ಎನ್ನುವುದರ ಬಗ್ಗೆ ಮಾತನಾಡಿದೆ. ನನ್ನ ಮಾತುಗಳ ನಂತರ ಭೈರಪ್ಪನವರು ನನ್ನನ್ನು ಅಭಿನಂದಿಸಿದರು, ತಮ್ಮ ಮಾತುಗಳಲ್ಲೂ ಉಲ್ಲೇಖಿಸಿದರು. ಇದು ನನಗೆ ಗೌರವದ ವಿಷಯವಾಗಿದೆ.

ಕೋವಿಡ್ ಸಮಯದಲ್ಲಿ 'ಪಯಣ' ಎಂಬ ನನ್ನ ಕಿರುಕಾದಂಬರಿಯನ್ನು ಸಪ್ನಾ ಬುಕ್ ಹೌಸ್ ಭೈರಪ್ಪನವರ ಗಮನಕ್ಕೆ ಕಳುಹಿಸಿದ್ದು ಅದನ್ನು ಬಿಡುವಿನಲ್ಲಿ ಓದಿ, ಅದು ತಮಗೆ ಇಷ್ಟವಾಯಿತೆಂದು ನನ್ನ ಪರಿವಾರ ಮಿತ್ರದವರ ಮೂಲಕ ತಿಳಿಸಿದ್ದು ನನಗೆ ಖುಷಿ ಮತ್ತು ತೃಪ್ತಿಯನ್ನು ನೀಡಿತು. ಕೋವಿಡ್ ನಂತರದ ಸಮಯದಲ್ಲಿ ನನ್ನ ಅಣ್ಣ ಜಯದೇವ್ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕೆಂಬ ಒಂದು ಮನವಿಯನ್ನು ಭೈರಪ್ಪನವರ ಬಳಿ ಪ್ರಸ್ತಾಪಿಸಿ ಆ ಚಾಲನೆಗೆ ನೆರವು ಕೇಳಲು ಅವರ ಮನೆಗೆ ಹೋಗಬೇಕಿತ್ತು. ನನಗಾಗಲೇ ಪರಿಚಿತರಾಗಿದ್ದ ಅವರನ್ನು ಕಾಣಲು ಅವರ ಕುವೆಂಪು ನಗರದ ಮನೆಗೆ ಹೋದಾಗ ಅಣ್ಣ ಜಯದೇವನ ಯತ್ನವನ್ನು ಮೆಚ್ಚಿ ಕಂಬಾರರ ಜೊತೆ ಸಮಾಲೋಚಿಸಿ ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆಯನ್ನು ನೀಡಿದರು. ಮಾತುಕತೆಯ ನಂತರ ಅವರೇ ಅಡುಗೆ ಮನೆಗೆ ಹೋಗಿ ಕಾಫಿ ತುಂಬಿದ ಕಪ್ಪುಗಳನ್ನು ಹೊತ್ತು ತಂದರು, ಅದನ್ನು ಕೂಡಲೇ ಗಮನಿಸಿದ ನನ್ನ ಶ್ರೀಮತಿ ತುರ್ತಾಗಿ ಅವರಿಂದ ಕಾಫಿ ಟ್ರೇ ಪಡೆದಳು. ಅವರು ಅಂದು, ಒಂದು ಪಂಚೆ ಬನಿಯನ್ ಹಾಕಿಕೊಂಡು ಸರಳವಾಗಿದ್ದರು, ಮನೆಯಲ್ಲಿ ಒಬ್ಬ ಆಳಿಗೆ ಅಥವಾ ಹೆಂಡತಿಗೆ ಕಾಫಿ ತರಲು ಆಜ್ಞಾಪಿಸುವ ಬದಲು ತಾವೇ ಕಾಫಿ ಟ್ರೇ ಹೊತ್ತು ತಂದದ್ದು ಅವರ ಸರಳ ಬದುಕಿಗೆ ಸಾಕ್ಷಿಯಾಗಿತ್ತು. ಅವರ ವಿನಯ ಶೀಲತೆಯನ್ನು ನಾನು ಬಹಳವಾಗಿ ಮೆಚ್ಚಿಕೊಂಡೆ. ಅಲ್ಲಿ ಪ್ರೀತಿ ವಿಶ್ವಾಸವೇ ಪ್ರಧಾನವಾಗಿತ್ತು. ಅವರ ಮನೆಯ ಅಂಗಳದಲ್ಲಿ ತೂಗು ಹಾಕಿದ್ದ ಒಂದು ಸ್ಕಾಟ್ಲ್ಯಾಂಡಿನ ಸ್ಟಾಗ್ ಚಿತ್ರ ನನ್ನ ಗಮನವನ್ನು ಸೆಳೆಯಿತು, ಅದರ ಬಗ್ಗೆ ನಾನು ಮಾತೆತ್ತಿದಾಗ ಈ ಜಿಂಕೆಯ ಚಿತ್ರ ಅವರು ಉತ್ತರಕಾಂಡವನ್ನು ಬರೆಯಲು ಪ್ರೇರಣೆ ನೀಡಿತೆಂದು ತಿಳಿಸಿದರು. ನನ್ನ ತಂದೆ ಜಿ ಎಸ್ ಎಸ್ ಮತ್ತು ಭೈರಪ್ಪ ಆಪ್ತ ಗೆಳೆಯರಾಗಿದ್ದರು, ಜಿ ಎಸ್ ಎಸ್ ಅವರ ಅರೋಗ್ಯ ಕ್ಷೀಣಿಸುತ್ತಿರುವಾಗ ಭೈರಪ್ಪನವರು ಮನೆಗೆ ಬಂದು ಅವರನ್ನು ವಿಚಾರಿಸಿಕೊಂಡು ಸಂತೈಸಿದ್ದರು. ಪಿ ಶೇಷಾದ್ರಿ ನಿರ್ದೇಶನದ, ಸಾಹಿತ್ಯ ಅಕೆಡೆಮಿ ಹೊರತಂದ ಭೈರಪ್ಪನವರ ಸಾಕ್ಷ್ಯ ಚಿತ್ರದಲ್ಲಿ ಭೈರಪ್ಪನವರು ‘ನನ್ನ ಬದುಕಿನಲ್ಲಿ ಹಲವಾರು ಗೆಳೆತನವನ್ನು ನಾನು ಪಡೆದುಕೊಂಡೆ’ ಎನ್ನುತ್ತಾ ಬದುಕಿನ ಪ್ರೀತಿಯ ಬಗ್ಗೆ ಮಾತನಾಡುವಾಗ ಮೂಡುವ ಭೈರಪ್ಪ ಮತ್ತು ಜಿ ಎಸ್ ಎಸ್ ಹಸ್ತಲಾಘ ಮಾಡುತ್ತಿರುವ ಚಿತ್ರ ಅರ್ಥಪೂರ್ಣವಾಗಿದೆ. ಎಲ್ಲ ಕನ್ನಡಿಗರಲ್ಲಿ ಹೆಮ್ಮೆಯನ್ನು ಉಂಟುಮಾಡುತ್ತದೆ.
**********************
ನಾನು ಮೊದಲ ಬಾರಿ ಭೈರಪ್ಪನವರ ಪುಸ್ತಕ ಓದಿದ್ದು 9ನೇ ತರಗತಿಯಲ್ಲಿರುವಾಗ. ದಸರಾ ರಜೆ ಕಳೆದು ಶಾಲೆಗೆ ವಾಪಸಾದಾಗ ಒಮ್ಮಿಂದೊಮ್ಮೆಲೆ ನನ್ನ ತರಗತಿಯ ಒಂದಿಷ್ಟು ಜನರಿಗೆ ಕನ್ನಡ ಕಾದಂಬರಿಯ ಓದುವ ಹವ್ಯಾಸ ಸ್ಪರ್ಧೆಯಾಗಿ ಮಾರ್ಪಟ್ಟಿತು - ನಾನೆಷ್ಟು ಓದಿದೆ ನೀನೆಷ್ಟು ಓದಿದೆ ಎಂಬ ತೋರಿಕೆಯ ಹುಚ್ಚು.  ಅದಕ್ಕೆ ಸರಿಯಾಗಿ ನಮ್ಮ ಶಾಲೆಯಲ್ಲಿ ತುಂಬಾ ಸುಂದರವಾದ ವಾಚನಾಲಯವಿತ್ತು. ಪುಸ್ತಕಗಳನ್ನು ಮನೆಗೂ ಒಯ್ಯಲು ಕೊಡುತ್ತಿದ್ದರು.  ನಾನು ಆ ತನಕ ಓದಿದ ಯಾವುದೇ ಶಾಲೆಯಲ್ಲಿ, ವಾಚನಾಲಯ, ಪುಸ್ತಕವನ್ನು ಮನೆಗೆ ಕೊಂಡೊಯ್ಯುವ ಆಯ್ಕೆ ಇರಲಿಲ್ಲವಾದ್ದರಿಂದ ಈಗ ಅದೊಂದು ರೀತಿ ಒಮ್ಮಿಂದೊಮ್ಮೆಲೆ ಶ್ರೀಮಂತಿಕೆ ಬಂದಂತೆ ಅನಿಸುತ್ತಿತ್ತು. 

ಬರೀ ಪುಸ್ತಕ ತೆಗೆದುಕೊಂಡರೆ ಮುಗಿಯುತ್ತಿರಲಿಲ್ಲ, ಪುಸ್ತಕ ಮರಳಿಸುವಾಗ ಲೈಬ್ರರಿ ಜವಾಬ್ದಾರಿ ಹೊತ್ತಿದ್ದ ಟೀಚರ್ ನಮ್ಮನ್ನು ಪುಸ್ತಕದ ಸಾರಾಂಶದ ಕುರಿತು ಕೇಳುತ್ತಿದ್ದರು. Test ಗಳಲ್ಲಿ ಕಮ್ಮಿ ಮಾರ್ಕ್ಸ್ ಬಂದಾಗ ಕಾದಂಬರಿ ಓದಿದ್ದು ಜಾಸ್ತಿ ಆಯ್ತು ಅನಿಸುತ್ತೆ ಎಂದು ಹಂಗಿಸುತ್ತಿದ್ದರು ಕೂಡ.

ನನ್ನ ಪಪ್ಪ ಭೈರಪ್ಪನವರ ಅಭಿಮಾನಿ, ಜೊತೆಗೆ ಅವರಷ್ಟು ಒಳ್ಳೆಯ ಓದುಗರೆಂದರೆ, ಅವರು ಓದಿದ ಪುಸ್ತಕದ ಕಥೆ ಸಾರಾಂಶವನ್ನು ಅತ್ಯಂತ ಸುಂದರವಾಗಿ ನಮಗೆ narrate ಮಾಡುತ್ತಿದ್ದರು. ಎಷ್ಟು ಚೆನ್ನಾಗಿ ಹೇಳುತ್ತಿದ್ದರು ಎಂದರೆ ಕೊನೆಯಲ್ಲಿ ನಾವು ಕೂಡ ಪುಸ್ತಕ ಓದಿ ಮುಗಿಸಿದ್ದೇವೆ ಅನ್ನುವ ಭಾವ ಮನಸನ್ನು ತುಂಬಿಕೊಳ್ಳುತ್ತಿತ್ತು. ದಾಟು, ಭಿತ್ತಿ, ತಬ್ಬಲಿಯು ನೀನಾದೆ ಮಗನೆ, ನಾಯಿ ನೆರಳು, ಗ್ರಹಣ, ಇವೆಲ್ಲ ಕಾದಂಬರಿ ನಾನು ಓದಿದ್ದು ಪಪ್ಪನ ಕಥೆಗಳ ಮೂಲಕವೇ!

ಅವರನ್ನು ಮೆಚ್ಚಿಸಲು, ಅಥವಾ ನಾನೂ ದೊಡ್ಡ ಓದುಗಳು ಎಂದು ತೋರಿಸಲೋ ಭೈರಪ್ಪನವರ ಪುಸ್ತಕ ಓದುವೆ ಎಂದು ಆ ಸಲ ವಾಚನಾಲಯಕ್ಕೆ ಹೋಗಿ ಭೈರಪ್ಪನವರ ಧರ್ಮಶ್ರೀ ಕಾದಂಬರಿ ತಂದು ಓದಲು ಶುರು ಮಾಡಿದೆ. ನಾನು ಮುಗಿಸುವ ಮೊದಲೇ ಪಪ್ಪ ಅದನ್ನು ಓದಿ ಮುಗಿಸಿದರು, ಜೊತೆಗೆ ಚಿಕ್ಕಪ್ಪ, ಅಕ್ಕ ಪಕ್ಕದಲ್ಲಿದ್ದ ಅಣ್ಣ, ಅಂಕಲ್ ಎಲ್ಲರೂ ಅದನ್ನು ಓದಿ, ಅದ್ಬುತ ಅದ್ಬುತ ಅನ್ನುವಾಗ. ಅದನ್ನು ವಾಪಸ್ ಕೊಡುವ ಸಮಯ ಬಂದೇ ಬಿಟ್ಟಿತ್ತು. ಆ ದಿನ ರಾತ್ರಿ ಪೂರ್ತಿ ಕೂತು ಪುಸ್ತಕ ಮುಗಿಸಿದೆ. ಆ ಪುಸ್ತಕ ಆಪ್ತವಾಗಲು ಹಲವು ಕಾರಣಗಳಿತ್ತು, ಮುಂಡಗೋಡ, ಹಳಿಯಾಳ, ಯಲ್ಲಾಪುರದ ಹಲವೆಡೆ ಈ ಮತಾಂತರದ ವಿರುದ್ಧ ಹಲವಾರು protest ಗಳು ನಡೆಯುತ್ತಿದ್ದವು. ನಮ್ಮ ಜೊತೆಗೆ ಓದುತ್ತಿದ್ದ ಸಹಪಾಠಿಗಳ ಕುಟುಂಬಗಳು ಮತಾಂತರವಾಗಿ ಒಮ್ಮಿಂದೊಮ್ಮೆಲೆ ಹೆಸರು ಬದಲಿಸಿಕೊಂಡು ಚರ್ಚ್ ಗೆ ಹೋಗುತ್ತಿದ್ದ ದೃಶ್ಯಗಳು, ಅದರ ಬಗ್ಗೆ ನಾವು ಕ್ಲಾಸಿನಲ್ಲಿ ಗುಸು ಗುಸು ಮಾಡುತ್ತಿದ್ದುದು. ಕ್ರೈಸ್ತ ಮಿಷನರಿ ಶಾಲೆಯಲ್ಲಿಯೇ ಓದುತ್ತಿದ್ದ ಕಾರಣ ಅದನ್ನು ಮುಕ್ತ ಚರ್ಚೆ ಮಾಡುವ ಧೈರ್ಯವೂ ಇಲ್ಲದ ವಯಸ್ಸು, ಸಂದರ್ಭ, ವೈಪರೀತ್ಯಗಳ ನಡುವೆಯೇ ಮತಾಂತರ ಎಂಬುದು ಹೇಗೆ ಸಾಂಸ್ಕೃತಿಕ ಘರ್ಷಣೆಯನ್ನು ತಂದು ಒಬ್ಬ ವ್ಯಕ್ತಿಯನ್ನು ಟೊಳ್ಳು ಮಾಡುತ್ತದೆ ಎಂಬ ಸಾರಾಂಶದ ಧರ್ಮಶ್ರೀ ನಮ್ಮ ಸುತ್ತಲಿನ ಕಥೆಯೇ ಆಗಿ ಮನಸನ್ನು ಆವರಿಸಿಕೊಂಡಿತು. ಅಲ್ಲಿನ ನಾಯಕನಂತೆಯೇ, ನನ್ನ ಸುತ್ತಲಿನ ಒಬ್ಬ ವ್ಯಕ್ತಿಯೂ ಹೀಗೆ ಅಮ್ಮನ ಮಡಿಲಿಗೆ ಮರಳಬಹುದೇ? ಯಾರಿರಬಹುದು ಅವರು? ಹೀಗೆಲ್ಲ ಪ್ರಶ್ನೆ ಮನದಲ್ಲಿ ಹುಟ್ಟುತ್ತಿತ್ತು.

ಪುಸ್ತಕ ವಾಪಸ್ ಕೊಟ್ಟ ಮೇಲೆ ಟೀಚರ ಕಥೆ ಕೇಳಿದರು, ನಾನೂ ಅನುಮಾನದಲ್ಲಿ ಕಥೆ ಶುರು ಮಾಡಿದೆ. ಅವರು ಅರ್ಧದಲ್ಲೇ ನಿಲ್ಲಿಸಿ "ಸಾಕು ಸಾಕು, ಸ್ವಲ್ಪ ಓದಿನ ಕಡೆಗೆ ಗಮನವಿರಲಿ. ಬರೀ ಕಾದಂಬರಿ ಓದಿ ವಿಮರ್ಶೆ ಮಾಡೋದಲ್ಲ" ಎಂದು ಜೋರ್ ಮಾಡಿದರು.
ಆಮೇಲೆ ಕೆಂಪು ಬಣ್ಣದ ಮುಖಪುಟವಿದ್ದ ಧರ್ಮಶ್ರೀ ನಮ್ಮ ಲೈಬ್ರರಿಯಲಿ ಕಾಣಲೇ ಇಲ್ಲ.

‘ಭಿತ್ತಿ’ ಓದಿ ನನ್ನ ಪಪ್ಪ ಅದೆಷ್ಟು ಪ್ರಭಾವಿತರಾಗಿದ್ದರು ಎಂದರೆ, ಭೈರಪ್ಪನವರಿಗೆ ಪತ್ರ ಬರೆದು ಅವರ ಫೋಟೋ ಒಂದನ್ನು ಕಳಿಸಲು ವಿನಮ್ರ ವಿನಂತಿ ಮಾಡಿದ್ದರು. ಅವರಿಗೆ ಅದೆಷ್ಟೋ ಜನ ಈ ರೀತಿ ಪತ್ರ ಬರೆಯುತ್ತಾರೋ, ನಿರೀಕ್ಷಿಸಿದಂತೆಯೇ ಅವರಿಂದ ಯಾವ ಉತ್ತರವೂ ಬರಲಿಲ್ಲ.
ಮತ್ತೊಂದಿಷ್ಟು ದಿನ ಬಿಟ್ಟು, ಸ್ವವಿಳಾಸದ ಲಕೋಟೆಗೆ ಅಂಚೆ ಚೀಟಿ ಹಚ್ಚಿ ಮತ್ತೊಂದು ಪತ್ರ ಬರೆದು ಮತ್ತದೇ ಮನವಿ ಮಾಡಿದಾಗ, ಭೈರಪ್ಪನವರು ತಮ್ಮದೊಂದು ಭಾವಚಿತ್ರ ಮತ್ತು ಅದರ ಹಿಂದೆ ತಮ್ಮ ಸಹಿ ಹಾಕಿ ಕಳಿಸಿದ್ದರು.

ಆ ಚಿತ್ರ ಇಂದಿಗೂ ನಮ್ಮ ಆಲ್ಬಮ್ ನಲ್ಲಿ ಬೆಚ್ಚಗಿದೆ. ಭೀಮಕಾಯ, ಯಾನ, ಮತದಾನ ಬಿಟ್ಟು ನಾನು ಅವರೆಲ್ಲ ಪುಸ್ತಕಗಳನ್ನು ಓದಿರುವೆ. (ಕೆಲವು ಪಪ್ಪನ ಬಾಯಲ್ಲಿ ಕೇಳಿರುವೆ) ಮಂದ್ರ ಕಾಲೇಜ್ ದಿನಗಳಲ್ಲಿ ಎರಡೇ ದಿನಕ್ಕೆ ಓದಿ ಮುಗಿಸಿದ್ದು, ಈಗ ಓದಲು ಕುಳಿತರೆ ಎರಡೆರಡು ಪುಟಕ್ಕೆ ಇಪ್ಪತ್ತು ಪ್ರಶ್ನೆ ಮನದಲ್ಲಿ ಮೂಡುತ್ತವೆ. ಸಂಗೀತಲೋಕದ ಕರಾಳತೆ, ಸುಂದರತೆ ಎರಡನ್ನೂ ಅದ್ಭುತವಾಗಿ ತೋರಿಸುತ್ತಾ ಚಿತ್ರಿತಗೊಂಡಿರುವ ಪಾತ್ರಗಳು, ನಮ್ಮ ಸುತ್ತಲಿರುವ ಮಂದಿಯೇ ಅನಿಸಿಬಿಡುತ್ತದೆ.

ನನ್ನ ಅತೀ ಪ್ರೀತಿಯ ಕಾದಂಬರಿಗಳು ಎಂದರೆ, ಆವರಣ, ಮತ್ತು ಸಾರ್ಥ; time travel ಮಾಡಿಸುವ ಪುಸ್ತಕಗಳಿವು. ಸಾರ್ಥದ ಚಂದ್ರಿಕೆಯ ಕುರಿತು ನನಗೆ ಈಗಲೂ, ಕನಸುಗಳು ಬರುತ್ತವೆ. ಆವರಣ ಓದಿ ಒಮ್ಮೆಯಾದರೂ ಕಾಶಿಯ ಬೀದಿಗಳಲ್ಲಿ ಗಮ್ಯದ ಹಂಗಿಲ್ಲದೇ ಓಡಾಡಬೇಕು ಎನ್ನುವ ತುಡಿತ ಇನ್ನೂ ಉಳಿದುಕೊಂಡಿದೆ.

ಸರಸ್ವತಿಪುತ್ರರನ್ನ ಸಾರಸ್ವತ ಲೋಕ ಸದಾ ಸ್ಮರಿಸುತ್ತದೆ. ತುಂಬು ಜೀವನ ನಡೆಸಿದ ಗಟ್ಟಿ ವ್ಯಕ್ತಿತ್ವದ ಭೈರಪ್ಪನವರು, ಸರಸ್ವತಿಯ ಮಡಿಲಲ್ಲಿ ಸದ್ಗತಿ ಪಡೆಯಲಿ ಎಂಬ ಪ್ರಾರ್ಥನೆ.

- ಅಮಿತಾ ರವಿಕಿರಣ್, ಬೆಲ್‍ಫಾಸ್ಟ್.
ಅಮಿತಾ ರವಿಕಿರಣ ಅವರ ಸಂಗ್ರಹ.

**********************

’ಪರ್ವ’
ಚಿಕ್ಕವನಾಗಿದ್ದಾಗ ಓದಿದ ಪರ್ವದಲ್ಲಿನ ಪಾತ್ರಗಳು, ನನ್ನ ನೆಚ್ಚಿನ ಮಹಾಕಾವ್ಯ ಮಹಾಭಾರತವನ್ನು ಪೂರ್ತಿ humanise ಮಾಡಿದ ಕಾದಂಬರಿ. ಆದರೂ, ಕಥೆಗೆ, ಪಾತ್ರಗಳಿಗೆ ಒಂಚೂರೂ ಮರ್ಯಾದಾಭಂಗವಾಗದಂತೆ ಬರೆದ ಶ್ರೇಯಸ್ಸು ಭೈರಪ್ಪನವರಿಗೆ ಸಲ್ಲುತ್ತದೆ. ಯುದ್ಧ ಶುರುವಾಗುವ ಹೊತ್ತಿಗಿನ ಬಕ್ಕಾಗುತ್ತಿರುವ ತಲೆಯ ಭೀಮ, ವಯಸ್ಸಾಗುತ್ತಿರುವಾಗ ರಾಜ್ಯ ಗೆದ್ದು ಏನು ಮಾಡುವುದು ೫ ಹಳ್ಳಿ ಕೇಳು ಸಾಕು ಎಂದು ಕೃಷ್ಣನಿಗೆ ಹೇಳುವ ಯುಧಿಷ್ಠಿರ, ಮುದುಕನಾದರೂ ಮೋಹ ಬಿಡದ ಧೃತರಾಷ್ಟ್ರ ಮುಂತಾವರ ಪಾತ್ರಗಳನ್ನು ನಮ್ಮ ದೃಷ್ಟಿಯಲ್ಲಿ ಪೌರಾಣಿಕದಿಂದ ಐತಿಹಾಸಿಕ ಪಾತ್ರಗಳನ್ನಾಗಿಸಿದ್ದು ಸರಳವೇನಲ್ಲ. ಪರ್ವವನ್ನು ದೂರದರ್ಶನದಲ್ಲಿ ೮೦ರ ದಶಕದಲ್ಲಿ ಪ್ರಸಾರವಾದ ಶ್ಯಾಮ್ ಬೆನೆಗಾಲ್ ನಿರ್ದೇಶನದ ’ಭಾರತ್ ಏಕ್ ಖೋಜ್’ ನೊಂದಿಗೆ ಹೋಲಿಸುತ್ತದೆ ನನ್ನ ಮನಸ್ಸು.

ಯುದ್ಧ ನಡೆದಾಗಿನ ಒಂದು ಸನ್ನಿವೇಶ: ಸೈನಿಕರೊಂದಷ್ಟು ಜನ ಯುದ್ಧಕ್ಕೆ ಶುರುವಾಗುವ ಮುನ್ನ (ದಿನದ ಯುದ್ಧ ಮುಗಿಸಿಯೋ, ನೆನಪಾಗುತ್ತಿಲ್ಲ) ಬೆಂಕಿಯ ಸುತ್ತ ಕೈಕಾಯಿಸಿಕೊಳ್ಳುತ್ತ ಮಾತಾಡುತ್ತಿರುತ್ತಾರೆ.
ಸೈನಿಕ ೧: ಯಾರ ಮಧ್ಯ ಯುದ್ಧ ಈಗ?
ಸೈನಿಕ ೨: ಕುಂತಿಯ ಮಕ್ಕಳಿಗೂ, ಕೌರವರಿಗೂ ಮಧ್ಯ ಅಂತೆ, ರಾಜ್ಯ ಕೊಟ್ಟಿಲ್ಲವಂತೆ.
ಸೈನಿಕ ೩: ಅಲ್ಲ, ಈ ಕುಂತಿ ಅನ್ನುವವನು ಯಾರು, ಯಾವ ಊರಿನ ರಾಜ?

ಇನ್ನೂ ಎಷ್ಟೋ ಕಾದಂಬರಿಗಳನ್ನು ನಾನು ಓದಿಲ್ಲ. ಅದರ ತಪ್ಪನ್ನು ನಮ್ಮ ಸೋದರತ್ತೆಯ ಗಂಡನಿಗೆ ಕಟ್ಟಬೇಕೋ ಅಂತ ವಿಚಾರ ಮಾಡುತ್ತಿರುವೆ. ಈ ನಡುವೆ ಓದುವ ಚಟ ಕಡಿಮೆಯಾಗಿದೆ (ಆ ತಪ್ಪು ನನ್ನ ಸ್ವಂತದ್ದು). ಓದಬೇಕೆನ್ನುವ ಹುಮ್ಮಸ್ಸು ಮತ್ತೆ ಹುಟ್ಟುತ್ತಿದೆ, ಭೈರಪ್ಪನವರ ಪುಸ್ತಕಗಳನ್ನು ಹುಡುಕಬೇಕು ಇನ್ನು.

ಎಸ್ ಎಲ್ ಭೈರಪ್ಪನವರ ಆತ್ಮಕ್ಕೆ ಶಾಂತಿಯನ್ನು ಕೋರುವೆ.

- ಲಕ್ಷ್ಮೀನಾರಾಯಣ ಗುಡೂರ್.
**********************