ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಅನಿವಾಸಿ ಬಂಧುಗಳಿಗೆ ನಮಸ್ಕಾರ. ಎರಡು ವಾರದಿಂದ ಭಾರತ  ಪ್ರವಾಸದಲ್ಲಿದ್ದೇನೆ. ಗೃಹಪ್ರವೇಶ, ಮದುವೆ ಸಮಾರಂಭಗಳನ್ನು ಅಟೆಂಡ್ ಮಾಡುತ್ತ, ಬಂಧು ಬಳಗ, ಸ್ನೇಹಿತರನ್ನು ಭೇಟಿಯಾಗುತ್ತ  ದೆಹಲಿ, ಮುಂಬಯಿ, ಪುಣೆ, ಧಾರವಾಡ ಎಂದೆಲ್ಲ ಸುತ್ತಾಡುತ್ತ ,  ದೆಹಲಿಯ ಚಳಿಗಾಲ  ಕಳೆದು  ಈಗಷ್ಟೇ ಆರಂಭವಾಗುತ್ತಿರುವ  ಎಳೆಯ ಬಿಸಿಲನ್ನೂ, ಮುಂಬಯಿಯ  ಆ humid ಶೆಕೆಯನ್ನೂ, ಪುಣೆಯ ಸಂಜೆ ಮುಂಜಾನೆಗಳ ಆಹ್ಲಾದಕರ ತಂಪು ಹವೆಯನ್ನೂ , ಧಾರವಾಡದ  ಬಿಸಿಲು ಮಳೆಗಳ  ಸಮ್ಮಿಶ್ರ ಹವಾಮಾನವನ್ನೂ, ಲಿಠ್ಠಿ ಛೌಕಾ, ದಾಲ್ ಮುರಾದಾಬಾದಿ, ಮಿಸಳ್ ಪಾವ್, ಭಾಕರ್ ವಡಿ, ಶ್ರೀಖಂಡ, ಗಿರಮಿಟ್, ಫೇಡೆಗಳನ್ನೂ  ಸಮಸಮವಾಗಿ ಆಸ್ವಾದಿಸುತ್ತ  ಜೊತೆಗೇ ಒಂದಷ್ಟು ನೆಗಡಿ, ಕೆಮ್ಮು ಎಂದು ಆರೋಗ್ಯ ಕೆಡಿಸಿಕೊಂಡು ಔಷಧಿ, ಗಳಿಗೆಯನ್ನೂ ಸೇವಿಸುತ್ತ ರಜಾದ ಮಜಾ ಸವಿಯುತ್ತಿದ್ದೇವೆ. ಹೀಗಾಗಿ ಈ ಸಲ ಅನಿವಾಸಿಯ ಓದಿಗೆ ಚಿಕ್ಕದಾದೊಂದು ವಸ್ತುವಿನ ಬಗ್ಗೆ ಒಂದು ಚಿಕ್ಕ ಲೇಖನ. ಒಪ್ಪಿಸಿಕೊಳ್ಳಿ.

~ ಸಂಪಾದಕಿ

ಸೇಫ್ಟಿ ಪಿನ್

ಕೆಲ ದಿನಗಳ ಹಿಂದೆ ಜಯಂತ ಕಾಯ್ಕಿಣಿಯವರ ‘ಅನಾರ್ಕಲಿಯ ಸೇಫ್ಟಿ ಪಿನ್’ ಓದುತ್ತಿರುವಾಗ ಈ ಸೇಫ್ಟಿ ಪಿನ್ ಗೂ, ಆ ಅನಾರ್ಕಲಿಗೂ ಅದೇನು ಸಂಬಂಧವಿರಬಹುದು ಎಂಬ ಗೊಂದಲದ ಭಾವ  ನನ್ನನ್ನು ಕಾಡಿತ್ತು. ಆಮೇಲೆ ಹೊಳೆದ ಸತ್ಯವೇನೆಂದರೆ ಅನಾರ್ಕಲಿಯೋ, ಚಂಪಾಕಲಿಯೋ, ಚಮೇಲಿಯೋ ಯಾರೇ ಇರಲಿ ಸೇಫ್ಟಿ ಪಿನ್ ಮಾತ್ರ ಎಲ್ಲರಿಗೂ ಬೇಕೇ ಬೇಕು ಎಂಬುದು. ಈ ಸೇಫ್ಟಿ ಪಿನ್ ಗಳಿಗೂ  ಹೆಂಗಳೆಯರಿಗೂ ಬಿಡಿಸಲಾಗದ ನೆಂಟು. ಹೆಂಗಳೆಯರ ಸೀರೆ ಬ್ಲೌಜ್ ಗಳಿಗೂ ಈ ಪಿನ್ನು ಗಳಿಗಂತೂ ಅವಿನಾಭಾವ ಸಂಬಂಧ. ‘ವಾಗರ್ಥ ವಿವ ಸಂಪ್ರೃಕ್ತೌ ವಾಗರ್ಥ ಪ್ರತಿಪತ್ತಯೇ’ ಎಂದು ಕಾಳಿದಾಸ ಹೇಳಿದಂತೆ. 

ಸೀರೆಯ ಚಂದದ ಸೆರಗನ್ನು ನೀಟಾಗಿ ಹಿಡಿದಿಡಲು, ಸಡಿಲವಾದ ಬ್ಲೌಸ್ ಅನ್ನು ಫಿಟ್ ಮಾಡಲು, ಬಿಗಿಯಾದ ಬ್ಲೌಸಿನ ಒಳಮೈ ಯ್ಯ ಹೊಲಿಗೆ ಬಿಚ್ಚಲು ಸೀರೆಯ ನೆರಿಗೆಗಳನ್ನು ಒಪ್ಪವಾಗಿಸಲು ಈ ಪಿನ್ನು ಬೇಕೇ ಬೇಕು. ಬ್ಲೌಸುಗಳಂತೂ ಈ ಪಿನ್ನುಗಳ ಭರವಸೆಯ ಮೇಲೆಯೇ ಬದುಕುವುದು. ಏಕೆಂದರೆ ನೀವು ಎಷ್ಟರೇ ರೊಕ್ಕ ಸುರದು ಬೇಕಾದಂತಹ ಡಿಸೈನರ್ ಬೋಟಿಕ್ ನಾಗ ಹೊಲಿಸಿದ್ರೂ ಅವು ನಿಮ್ಮ ಮೈ ಏರುವಾಗ ಲೂಸೋ, ಬಿಗಿಯೋ, ತೋಳು ಇಳಿಯುವುದೋ ಏನೋ ಒಂದು ಆಗಲೇಬೇಕು. ನನಗಂತೂ ಒಮ್ಮೊಮ್ಮೆ ಡೌಟು..ಚಂದದ ಕಿಮ್ಮತ್ತಿನ ಸೀರೆಗಳನ್ನು ದೌಲತ್ತಿನಿಂದ ಉಟ್ಟು ದಿಮಾಕಿನಿಂದ ನಡೆವ ಲಲನಾಮಣಿಯರನ್ನು ಕಂಡು ಹೊಟ್ಟೆ ಉರಿದವರ್ಯಾರದೋ ಕೆಟ್ಟ ದೃಷ್ಟಿತಾಗಿಯೋ,ಶಾಪ ತಟ್ಟಿಯೋ ಈ ಬ್ಲೌಸ್ ಗಳು ಹಾಳಾಗಬಹುದೆಂದು. ಅಂಥ ಸಮಯದಲ್ಲಿ ಶಾಪ ವಿಮೋಚಕನಾಗಿ ನಮಗೆ ನೆರವಾಗುವುದು ಇದೇ ಸೇಫ್ಟಿ ಪಿನ್ನು.

ಈ ಪಿನ್ನಿನ ಋಣ ಭಾರವಿಲ್ಲದ ಹೆಂಗಳೆಯರೇ ಇಲ್ಲ. ಸಾಲ ಸೋಲ ಎಂದರಾಗದ ನಿಯತ್ತಿನ ಜೀವಗಳನ್ನೂ ಇವು ಕಾಡದೇ ಬಿಡುವುದಿಲ್ಲ. ಎಷ್ಟರೇ ಡಜನ್ಗಟ್ಟಲೆ ಪಿನ್ನು ಖರೀದಿ ಮಾಡಿಟ್ಟಿರಿ ಬೇಕಾದ ಸಮಯಕ್ಕೆ ಸಿಗದೇ ಪಕ್ಕದಲ್ಲಿದ್ದ ಅಕ್ಕನೋ, ಅತ್ತಿಗೆಯೋ, ಅಮ್ಮನೋ, ಗೆಳತಿಯೋ ಯಾರ ಬಳಿಯಲ್ಲಾದರೂ ‘ಒಂದು ಪಿನ್ ಇದ್ರೆ ಕೊಡ’ ಎಂದು ನೀವು ಒಮ್ಮಿಲ್ಲ ಒಮ್ಮೆ ಕೇಳೇ ಕೇಳಿರುತ್ತೀರಿ. ಆ ಪಿನ್ನಿನ ಋಣದಲ್ಲಿ ಬಿದ್ದೇ ಇರುತ್ತೀರಿ. ನಿಮಗೆ ಅತಿ ಅವಶ್ಯಕತೆ ಇದ್ದಾಗ, ಬೇಕೆಂದಾಗ ಆ ಪಿನ್ನುಗಳು ನಿಮಗೆ ಸಿಕ್ಕದಿರಲಿ ಎಂದು ಅದ್ಯಾವ ಪರಶುರಾಮ ಶಾಪ ಕೊಟ್ಟನೋ ಕಾಣೆ ಬೇಕೆಂದಾಗ ಡ್ರಾತೆಗೆದು, ಡಬ್ಬಿ ತೆಗೆದು, ಪರ್ಸ್ ತಡಕಾಡಿ ಡ್ರೆಸ್ಸಿಂಗ್ ಟೇಬಲ್ ಜಾಲಾಡಿದರೂ ಅವು ಕಾಣದಂತೆ ಅದೃಶ್ಯವಾಗಿ ಬಿಟ್ಟಿರುತ್ತವೆ. ಎಲ್ಲಿಟ್ಟಿರುವೆವೆಂಬ ನೆನಪು ಬಾರದೆ ನಾವೂ ಸಹ ಆ ಮಹಾಭಾರತದ ಕರ್ಣನಂತೆ ಒದ್ದಾಡುತ್ತಿರುತ್ತೇವೆ.

ಸ್ತ್ರೀಯರ ವ್ಯಾನಿಟಿ ಬ್ಯಾಗ್ ಅಂದ್ರೆ ಅದರಲ್ಲಿ ಏನೇ ಇರಲಿ ಬಿಡಲಿ ಈ ನಾಲ್ಕಾರು ಪಿನ್ನುಗಳಂತೂ ಇರಲೇಬೇಕು. ಒಮ್ಮೆ ನಾನು ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದೆ. ಸೆಕ್ಯೂರಿಟಿ ಚೆಕ್ ನಲ್ಲಿ ನನ್ನ ವ್ಯಾನಿಟಿ ಬ್ಯಾಗ್ ತನ್ನ ನೇರ ರಸ್ತೆ ಬಿಟ್ಟು ಪಕ್ಕಕ್ಕೆ ಹೊರಳಿ ಅಲ್ಲಿದ್ದ ಅಧಿಕಾರಿಗಳ ಕೈಗೆ ಸಿಕ್ಕಿ ಬಿಟ್ಟಿತು. ಹತ್ತತ್ತು ಸಲ ಚೆಕ್ ಮಾಡಿದರೂ ಏನೂ ಸಿಗುತ್ತಿಲ್ಲವಾದರೂ ಸ್ಕ್ಯಾನ್ ನಲ್ಲಿ ಏನೋ ಇದೆಯೆಂದು ತೋರಿಸುತ್ತಿದೆ. ಅಲ್ಲಿನ ಅಧಿಕಾರಿಗಳು ನನ್ನನ್ನು ನೋಡುವ ರೀತಿಗೆ ‘ ಅಯ್ಯಾ, ನನ್ನ ಈ ಬ್ಯಾಗನ್ನು ನೀನೇ ಇಟ್ಟುಕೊಂಡುಬಿಡು’ ಎಂದು ಹೇಳಬೇಕೆನಿಸಿಬಿಟ್ಟಿತು.ಮುಂದೆ ಒಂದು ದಿನ ಅವತ್ತು ಅವರ ಕೈಗೆ ಸಿಗದ ಈ ಪಿನ್ನಿನ ಗೊಂಚಲು ಅಚಾನಕ್ಕಾಗಿ ನನಗೆ ಸಿಕ್ಕಿತ್ತು. ಬ್ಯಾಗಿನ ಒಳಭಾಗದ zip ನ ಬಟ್ಟೆಗೊಂದು ಸಣ್ಣ ತೂತಾಗಿ ಆ ಕಿಂಡಿಯಿಂದ ಹೈದರಾಲಿಯ ಸೈನಿಕನಂತೆ ನುಸುಳಿ ಅವಿತುಕೊಂಡಿದ್ದ ಆ ಪಿನ್ನಿನ ಗೊಂಚಲು ಅಂತೂ ಸೆಕ್ಯೂರಿಟಿಯ ಓಬವ್ವನ ಕೈಗೆ ಸಿಗದೆ ತಪ್ಪಿಸಿಕೊಂಡು ಹೊರಬಂದಿತ್ತು.

ಫ್ಲೈಟ್ ನಲ್ಲಿ ಕೊಡುವ ಈ ಸ್ನಾಕ್ಸ್ ಪ್ಯಾಕೆಟ್ ಹರಿಯಲು, ಕಿವಿ ಗುಳುಗುಳು ಎಂದರೆ ಇಯರ್ ಬಡ್ ನಂತೆ ಕೆಲಸ ಮಾಡಲು, ಹಲ್ಲು ಸಂದಿಯಲ್ಲಿ ಸಿಕ್ಕಿದ ಬೇಳೆಕಾಳು ಸೊಪ್ಪನ್ನು ತೆಗೆಯಲು ಟೂತ್ ಪಿಕ್ ನಂತೆಯೂ ಹಲವಾರು ರೀತಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಈ ಸೇಫ್ಟಿ ಪಿನ್. ಕಾಲಿಗೆ ನೆಟ್ಟ ಮುಳ್ಳು ತೆಗೆಯಲು, ಉಗುರು ಸಂದಿಯಲ್ಲಿ ಅವಿತ ಕೊಳಕು ತೆಗೆಯಲು, ಹಣಿಗೆಯ ಹಲ್ಲುಗಳನ್ನು ಸ್ವಚ್ಛಗೊಳಿಸಲು ಈ ಪಿನ್ನು ಬೇಕೇ ಬೇಕು . ನಿಮ್ಮ ಪ್ರೆಷರ್ ಕುಕ್ಕರ್ ಸೀಟಿಯಲ್ಲಿ ಸಿಕ್ಕಿಕೊಂಡ ಅನ್ನದ ಅಗುಳಿನ ತುಂಡನ್ನೋ, ಬೆಂದ ಬೇಳೆಯನ್ನೋ ತೆಗೆಯಲು ಇದು ಬೇಕೇ ಬೇಕು . ಕೆಲವೊಮ್ಮೆ ಹರಿದ ಚಪ್ಪಲಿಗೂ ಇದರ ನೆರವು ಬೇಕಾಗುತ್ತದೆ.

ಮನೆಯ ಅಂಗಳದಲ್ಲಿ ಅರಳುತ್ತಿದ್ದ ನಾಲ್ಕಾರು ದುಂಡು ಮಲ್ಲಿಗೆಯನ್ನು ಒಂದು ಪಿನ್ನಿನಲ್ಲಿ ವೃತ್ತಾಕಾರವಾಗಿ ಚುಚ್ಚಿ ಮುಡಿಗೇರಿಸಿಕೊಂಡು ಡೌಲು ಬಡಿಯುತ್ತಿದ್ದ, ಆ ಮಲ್ಲಿಗೆಯ ಘಮದಲ್ಲಿ ತೇಲಿ ಹೋಗುತ್ತಿದ್ದ ಬಾಲ್ಯದ ದಿನಗಳು ಈಗಲೂ ಮೆರವಣಿಗೆ ಹೊರಡುತ್ತವೆ. ಹೆರಳ ತೊಡಕು ಬಿಡಿಸುವಾಗ ಉದುರಿದ ಕೂದಲನ್ನು ಕೂಡಿಟ್ಟು ಆ ಕೂದಲ ಬದಲಿಗೆ ಈ ಪಿನ್ನುಗಳನ್ನು ಖರೀದಿಸುತ್ತಿದ್ದ ನನ್ನ ಬಾಲ್ಯಕಾಲದ ಹಳ್ಳಿಯ ಜೀವನ ಈಗಲೂ ಗುಂಗಾಗಿ ಕಾಡುತ್ತದೆ.

ಹಂಗಂತ ಈ ಸೇಫ್ಟಿ ಪಿನ್ ಗಳು ಬಹಳ ಸಾಚಾ ಅಂತನೂ ತಿಳ್ಕೋಬ್ಯಾಡ್ರಿ. ಇವುಗಳು ಮಾಡೋ ಅವಾಂತರ ನಮಗೆ ಅಂದರೆ ಹೆಂಗಳೆಯರಿಗೇ ಗೊತ್ತು. ಬೆಲೆ ಬಾಳುವ ಚಂದನೆಯ ರೇಷ್ಮೆ ಸೀರೆ, ಬ್ಲೌಜ್ ಗಳಿಗೆ ಕೆಲವೊಮ್ಮೆ ನಿರ್ದಯವಾಗಿ ತೂತು ಬೀಳಿಸಿ ಬಿಡುತ್ತವೆ. ದೊಡ್ಡ ಪಿನ್ನು ಮೊಂಡಹಡಿ ಇದ್ದು ಸೀರೆಗೆ ಚುಚ್ಚದೆ ಕೈ ನೋವು ಬರಿಸಿದರೆ ಗಿಡ್ಡ ಮೆಣಸಿನಕಾಯಿ ಅಂತಹ ಮರಿ ಪಿನ್ನು ಕಚಕ್ ನೇ ಚುಚ್ಚಿ ‘ಆ’ ಎನ್ನುವಂತೆ ಮಾಡುತ್ತದೆ. ಹೀಗಾಗಿ ನೀವು ಬೇರೆ ಯಾರದೋ ಸೀರೆಯನ್ನ ಏನಾದರೂ ಕಡ ತೆಗೆದುಕೊಂಡು ಉಡುತ್ತಿದ್ದರೆ ಬಹಳ ಹುಷಾರಾಗಿರಬೇಕಾಗುತ್ತದೆ.

ಬಹು ಉಪಯೋಗಿ ಈ ಪಿನ್ನುಗಳು ನಿಮಗೆ ಜನರನ್ನು ಯಾವ ಪ್ರಾಂತ್ಯದವರೆಂದು ಗುರುತಿಸಲು ಸಹ ನೆರವು ನೀಡುತ್ತವೆ. ಅದ್ಹೆಂಗ ಅಂತ ಹುಬ್ಬೇರಿಸಬ್ಯಾಡ್ರಿ. ಉದಾಹರಣೆ ಸಮೇತ ಹೇಳತೀನಿ ನೋಡ್ರಿ . ಒಮ್ಮೆ ದೆಹಲಿಯಲ್ಲಿ ಅಕ್ಷರಧಾಮಕ್ಕೆ ಹೋಗಿದ್ವಿ ಅಲ್ಲಿ ಪಾಳಿಯೊಳಗೆ ಇಬ್ಬರು ಮಧ್ಯವಯಸ್ಕ ಗಂಡ ಹೆಂಡತಿ ನಿಂತಿದ್ದರು. ನಾನು ನನ್ನ ಮಗನಿಗೆ ಅವರನ್ನು ಮಾತನಾಡಿಸಿ ಬರುವೆ, ಅವರು ಪಕ್ಕಾ ನಮ್ಮ ಕಡೆಯವರೇ ( ಉತ್ತರ ಕರ್ನಾಟಕ) ಇರುತ್ತಾರೆ ಅಂದೆ. ಅವನು ‘ಅದ್ಹೆಂಗ ಹೇಳತಿ’ಎಂದು ಸವಾಲೆಸೆದ. ಹೋಗಿ ಮಾತನಾಡಿಸಿದರೆ ಅವರು ಗುಲ್ಬರ್ಗದವರಿದ್ದರು. ಆ ಹೆಣ್ಣು ಮಗಳ ಕೈಯ ಕಾಜಿನ ಬಳೆ, ಪಾಟಲಿ, ಬಿಲವಾರದಲ್ಲಿ ಜೋತಾಡುತ್ತಿದ್ದ ಒಂದು ಹಳದಿ ಮರಿ ಪಿನ್ನು, ಒಂದು ಸ್ಟೀಲಿನ ದೊಡ್ಡ ಪಿನ್ನು ನೋಡಿಯೇ ನಾನು ಗುರುತು ಹಿಡಿದಿದ್ದು. ಈಗಲೂ ನಮ್ಮಮ್ಮ, ಅತ್ತೆಯರು ಪಿನ್ ಕೇಳಿದರೆ ತಕ್ಷಣ ಬಳೆ, ಮಂಗಳ ಸೂತ್ರದಿಂದ ತೆಗೆದುಕೊಡುತ್ತಾರೆ. ಮಂಗಳಸೂತ್ರ ಬಳೆ ಇರುವುದೇ ಈ ಪಿನ್ನುಗಳನ್ನು ಕಾಪಿಟ್ಟುಕೊಳ್ಳಲೇನು ಎಂಬ ಸಂಶಯ ನನ್ನನ್ನು ಕಾಡುತ್ತದೆ. ಒಮ್ಮೊಮ್ಮೆ ಈ ಶಿರಸಿ, ಮೈಸೂರು, ಬೆಂಗಳೂರು, ಮಂಗಳೂರಿನ ಹೆಂಗಳೆಯರ ಬಗ್ಗೆ ನನಗೆ ಗೊತ್ತಿಲ್ಲ ಆದರೆ ನಮ್ಮ ಕಡೆ ಹೆಣ್ಣು ಮಕ್ಕಳ ಕೈಯಲ್ಲಿ ಕೊರಳಲ್ಲಿ ಇವು ಇರಲೇಬೇಕು.. ಇರತಾವ ಕಾಸಿನ ಕಿಮ್ಮತ್ತಿನ ಈ ಪಿನ್ ಮಹಾಶಯ ಬಂಗಾರದ ಬಳೆ, ಸರಗಳಲ್ಲಿ ಮೆರೆಯುತ್ತಿರುತ್ತಾನೆ. ‘ ನಸೀಬ್ ಅಪನಾ ಅಪನಾ’ ಅನ್ನೋದು ಸುಳ್ಳಲ್ಲ ನೋಡ್ರಿ.

ಪಿಂಡಾಂಡದಲ್ಲಿ ಬ್ರಹ್ಮಾಂಡ ಎನ್ನುವ ತತ್ವ ಇವುಗಳನ್ನು ನೋಡಿಯೇ ಬಂದಿರಬೇಕು. ಆತ್ಮ ಸಂಗಾತಿಗಳು ಇವು. ಮಾನ ಕಾಯುವ, ಕಾಪಿಡುವ ಭಗವಂತನಿದ್ದಂತೆ ಗೀತೆಯ ವಿಭೂತಿ ಯೋಗದಲ್ಲಿ ಶ್ರೀ ಕೃಷ್ಣ ಹೇಳುತ್ತಾನಲ್ಲವೇ? “ನಾನು ನದಿಗಳಲ್ಲಿ ಗಂಗೆ, ಪರ್ವತಗಳಲ್ಲಿ ಮೇರು, ಯೋಧರಲ್ಲಿ ರಾಮ, ಸರ್ಪಗಳಲ್ಲಿ ಅನಂತ” ಅಂತೆಲ್ಲ.. ಈ ಪಿನ್ನುಗಳನ್ನು ಕಂಡಿದ್ದರೆ ಪಿನ್ನುಗಳಲ್ಲಿ ನಾನು ಸೇಫ್ಟಿ ಪಿನ್ನು ಎಂದು ಖಂಡಿತ ಹೇಳಿರುತ್ತಿದ್ದ.( ಸೂಜಿ, ಗುಂಡು ಸೂಜಿ, ಗುಂಡು ಪಿನ್ನು, ಪೇಪರ್ ಪಿನ್ನು, ಹೇರ್ ಪಿನ್ನು, ಸಾಡಿ ಪಿನ್ನು ಇತ್ಯಾದಿಗಳಲ್ಲಿ ).
ಹೀಗೆ ಆಪತ್ಕಾಲೀನ ಸಮಯದಲ್ಲಿ ಆಪದ್ಬಾಂಧವನಂತೆ ಕಣ್ಣಿಗೆ ಕಾಣದೆ ಒಳಗೆ ಸೇರಿಕೊಂಡು ಅದೃಶ್ಯವಾಗಿ ಈ ಸೇಫ್ಟಿ ಪಿನ್ನುಗಳು ಮಾನ ಕಾಯ್ದರೆ ಇದೇ ಕುಲದ ಸಾಡಿ ಪಿನ್ನುಗಳು ಎಲ್ಲರಿಗೂ ಕಂಡು ಸೀರೆಯ, ಸೀರೆಯುಟ್ಟ ನೀರೆಯ ಸೊಬಗು ಹೆಚ್ಚಿಸುತ್ತವೆ. ನವಿಲಿನಂಥ, ಹೂವಿನಂಥ, ಎಲೆ ಬಳ್ಳಿಯಂಥ, ಮುತ್ತಿನ ನತ್ತಿನಂತ ತರಾವರಿ ಸಾಡಿಪಿನ್ನುಗಳು ಮಾರ್ಕೆಟ್ನಲ್ಲಿ ಲಭ್ಯ.

1849ರಲ್ಲಿ ಅಮೆರಿಕನ್ ಮೆಕ್ಯಾನಿಕ್ ವಾಟರ್ ಹಂಟ್ ತನ್ನ ಹೆಂಡತಿಯ ಉಡುಪಿನ ಗುಂಡಿ ಕಿತ್ತು ಹೋದಾಗ ತಕ್ಷಣಕ್ಕೆ ಉಪಯೋಗವಾಗಲಿ ಎಂದು ಇದನ್ನು ಕಂಡುಹಿಡಿದನಂತೆ. ‘ಅವನ ಹೆಂಡತಿ ಸಂತತಿ ಸಾವಿರವಾಗಲಿ’. ಅವಳ ಗುಂಡಿ ಅಂದು ಕಿತ್ತಿರದಿದ್ದರೆ ಈ ಪಿನ್ನು ಸಿಕ್ಕುತ್ತಲೇ ಇರಲಿಲ್ಲ. ಹೆಗ್ಗಳಿಕೆ ಎಂದರೆ ಅಂದಿನಿಂದ ಇಂದಿನವರೆಗೂ ಅದರ ಗಾತ್ರ ವಿನ್ಯಾಸಗಳಲ್ಲಿ ಬಹುಶ: ದರದಲ್ಲಿಯೂ ಅಂಥದೇನೂ ವಿಶೇಷ ಬದಲಾವಣೆ ಆಗಿಲ್ಲ.
ಒಂಥರ ದೇಶಕಾಲಾದಿಗಳಿಗೆ ಸಿಕ್ಕಿಯೂ ಬದಲಾಗದಂತಹ ಸಂತ ಮಹಾಂತರ ಗುಣವಿದಕ್ಕೆ. ಇದರ ಮೂರ್ತಿ ಚಿಕ್ಕದಾದರೂ ಕೀರ್ತಿ ಬಲು ದೊಡ್ಡದು. ಅಂತಹ ಸೇಫ್ಟಿ ಪಿನ್ ಗೆ ಹೃದಯಾಳದ ನನ್ನಿಗಳು.

~ ಗೌರಿಪ್ರಸನ್ನ

ಕೆಹನಾ ಕ್ಯಾ ಚಾಹತೇ ಹೋ?

ಕೆಹನಾ ಕ್ಯಾ ಚಾಹತೇ ಹೋ?

ಈ ವಾರದ ಲೇಖನ ಓದಲು ಕೊಟ್ಟಾಗ ಹೆಂಡತಿಯ ಮೊದಲ ಉದ್ಘಾರ ಇದು. ವಿಜ್ಞಾನ, ದೇವರು, ಧರ್ಮ ಏನೆಲ್ಲಾ ವಿಷಯ ಒಂದೇ ಲೇಖನದಲ್ಲಿ ಹಾಕಿ ಅದನ್ನು ಚಿತ್ರಾನ್ನ ಮಾಡಿದ್ದಿಯ ಎಂದು ತನ್ನ ಅಭಿಪ್ರಾಯ ತಿಳಿಸಿದಳು, ನನ್ನ ಅಣ್ಣನೂ ಹಲವು ಸಲ ನನಗೆ ರಿಸರ್ಚ್ ಲೇಖನ ಬರೆಯುದು ಬಿಟ್ಟು ನಿನ್ನ ವಿಚಾರ ಹಂಚಿಕೊ ಎಂದು ಹೇಳುತ್ತಿರುತ್ತಾನೆ. ನನಗೋ ಓದಿದ ವಿಷಯ, ಕೇಳಿದ ವಿಷಯ ಒಂದೆಡೆ ಸೇರಿಸಿ ಅದನ್ನು ಹದವಾಗಿ ಕಲಿಸಿ, ಉಣಿಸಿದಾಗ ಖುಷಿ ಸಿಗುತ್ತದೆ. ಸಂಕೀರ್ಣ ವಿಷಯ ತಿಳಿಸುವಾಗ ನನ್ನದಷ್ಟೇ ವಿಚಾರಗಳನ್ನು ಹಂಚಿಕೊಳ್ಳದೇ, ಅದನ್ನು ಬೇರೆಯವರು ನೋಡುವ ಪರಿ ಸೇರಿಸಿದಾಗ ಸರಳ ಮಾಡಬಹುದೆಂಬ ಅನಿಸಿಕೆ ನನ್ನದು. ಅಂತಹದೇ ಒಂದು ಪ್ರಯತ್ನ ಇಂದಿನ ಲೇಖನ, ಹದವಾಗಿದೆ ಬೆರಸಿದ್ದೇನೆ ಅಂದುಕೊಳ್ಳುತೇನೆ.

“Science without religion is lame, religion without science is blind”
(Albert Einstein )

ಮೇಲಿನ ಸಾಲುಗಳು ಆಲ್ಬರ್ಟ್ ಐನ್ಸ್ಟೀನ್ ಅವರ ಅಭಿಪ್ರಾಯ, ಇನ್ನೂ ಸ್ಟೀಫನ್ ಹಾಕಿಂಗ್ ಏನು ಹೇಳುತ್ತಾರೆ ನೋಡೋಣ, ಅವರು ತಮ್ಮ ಒಂದು ಸಂದರ್ಶನದಲ್ಲಿ ಹೇಳುತ್ತಾರೆ “ಶತಮಾನಗಳಿಂದ, ನನ್ನಂತಹ ಅಂಗವಿಕಲರು ದೇವರು ಕೊಟ್ಟ ಶಾಪದಿಂದ ಈ ರೀತಿ ಬದುಕುತ್ತಿದ್ದಾರೆ ಎಂದು ನಂಬಲಾಗಿದೆ. ಸರಿ, ನಾನು ಯಾರಿಗಾದರೂ ತಪ್ಪು ಅಥವಾ ಅಸಮಾಧಾನಗೊಳಿಸಿರಬಹುದು ಎಂದು ನಾನು ಭಾವಿಸುತ್ತೇನೆ, ಆದರೆ ಈ ಎಲ್ಲವನ್ನೂ ಪ್ರಕೃತಿಯ ನಿಯಮಗಳಿಂದ ಇನ್ನೊಂದು ರೀತಿಯಲ್ಲಿ ವಿವರಿಸಬಹುದು. ನೀವು ವಿಜ್ಞಾನವನ್ನು ನಂಬಿದರೆ, ಯಾವಾಗಲೂ ಪಾಲಿಸಬೇಕಾದ ಕೆಲವು ನಿಯಮಗಳಿವೆ ಎಂದು ನೀವು ನಂಬುತ್ತೀರಿ. ನೀವು ಬಯಸಿದರೆ, ನಿಯಮಗಳು ದೇವರ ಕೆಲಸ ಎಂದು ನೀವು ಹೇಳಬಹುದು, ಆದರೆ ಅದು ದೇವರ ಅಸ್ತಿತ್ವದ ಪುರಾವೆಗಿಂತ ಹೆಚ್ಚಾಗಿ ಅವನ ವ್ಯಾಖ್ಯಾನವಾಗಿದೆ.”

ಧರ್ಮ, ದೇವರು, ವಿಜ್ಞಾನ, ಈ ವಿಚಾರವಾಗಿ ಹಿಂದಿನಿಂದಲೂ ಜನರ ಭಿನ್ನಾಭಿಪ್ರಾಯ ಅಥವಾ ತಿಕ್ಕಾಟ ನಡೆಯುತ್ತಲೇ ಇದೆ. ಗೆಲಿಲಿಯೋ ಭೂಮಿ ಸೂರ್ಯನ ಸುತ್ತ ತಿರುಗತ್ತದೆ ಎಂದು ಪ್ರತಿಪಾದಿಸಿದಾಗ ಅವನನ್ನು ಗ್ರಹ ಬಂಧನದಲ್ಲಿ ಇರಿಸಿ ಅವನ ಪುಸ್ತಕಗಳ ನಿಷೇದ ಮಾಡಿದ್ದು ಕೆಲವು ಧರ್ಮ ಗುರುಗಳು. ಇಂದಿನ ನನ್ನ ಲೇಖನದಲ್ಲಿ ನಾನು ಧರ್ಮವನ್ನು ಸರಿ ಎಂದು ಅಥವಾ ವಿಜ್ಞಾನ ಸರಿ ಎಂದು ವಾದಿಸುತ್ತಿಲ್ಲ, ವಿಷಯವನ್ನು ಅರಿಯುವ ಒಂದು ಪ್ರಯತ್ನ ಅಷ್ಟೇ. ಕೆಲವು ವಿಚಾರಗಳನ್ನು ಅರಿತು, ಅದನ್ನು ವಿಭಿನ್ನ ರೀತಿಯಲ್ಲಿ ಹೇಗೆ ನೋಡಬಹುದೆಂಬ ಒಂದು ಪ್ರಯತ್ನ.

ಇನ್ನೊಂದು ಉದಾಹರಣೆ “ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ” ಪುಸ್ತಕದಲ್ಲಿ ಹಲವು ಮಹಾತ್ಮರ ಬಗ್ಗೆ ಉಲ್ಲೇಖವಿದೆ, ಅವರು ತಮ್ಮ ತನು, ಮನ ನಿಯಂತ್ರಣದಿಂದ ಸಾಮಾನ್ಯ ಮನುಷ್ಯನಿಗೆ ಆಗದ ಕಾರ್ಯ ಮಾಡಿದ್ದಾರೆ, ವಯಸ್ಸು ಮತ್ತು ಸಾವನ್ನು ತಮ್ಮ ಹಿಡಿತದಲ್ಲಿ ಇರಿಸಿದ್ದಾರೆ. ಅವರ ದೇಹದ ಹಾಗೂ ಮನಸ್ಸಿನ ನಿಯಂತ್ರಣ ವಿಜ್ಞಾನದಿಂದಲೂ ಸುಲಭವಾಗಿ ವಿವರಿಸಲು ಅಸಾಧ್ಯ. ಆ ಪುಸ್ತಕದಲ್ಲೇ ಇನ್ನೊಂದು ತರಹದ ವ್ಯಕ್ತಿಗಳ ಬಗ್ಗೆ ತಿಳಿಸುತ್ತಾರೆ, ಕೊರಳಿಗೆ ಹಾವನ್ನು ಹಾಕಿಕೊಂಡು ಬಂದು ನಮ್ಮ ಮನದಲ್ಲಿ ನಡೆಯುತ್ತಿರುವ ವಿಚಾರವನ್ನು ಸರಾಗವಾಗಿ ಹೇಳುವ, ಹಣ ಕೇಳುವ ಜನರ ಕಪಟತನದ ಬಗ್ಗೆ. ಮನಸ್ಸನ್ನು ಅರಿಯುವ ಚತುರತೆಯಿಂದ ಇಂತಹ ಜನರು ವಿಜ್ಞಾನವನ್ನು (ದುರು) ಉಪಯೋಗಿಸಿ ನಿಂಬೆ ಹಣ್ಣಿನಲ್ಲಿ ರಕ್ತ ಬರಿಸುವುದು, ಕರ್ಪೂರ ಹೊತ್ತಿ ಉರಿಸುವದು ಮಾಡಿ ಜನರಿಗೆ ಧರ್ಮದ ಹೆಸರಿನಲ್ಲಿ ಮೋಡಿ ಮಾಡುತ್ತಾರೆ.

ವಿಜ್ಞಾನ ಮತ್ತು ಧರ್ಮ ಕೂಡಿಸಲು ಆಗದ ಮತ್ತು ಬಿಡಿಸಲೂ ಆಗದ ಸಂಬಂಧ, ಇದನ್ನು ಸುಂದರವಾಗಿ ಡ್ಯಾನ್ ಬ್ರೌನ್ ತನ್ನ ಪುಸ್ತಕ “ಏಂಜೆಲ್ಸ್ ಅಂಡ್ ಡೆಮಾನ್ಸ್ ” ನಲ್ಲಿ ತೋರಿಸುತ್ತಾನೆ. ಪುಸ್ತಕದ ಕಥೆ ಇರುವದೇ ವಿಜ್ಞಾನ ಮತ್ತು ಧರ್ಮ ಹೊಡೆದಾಟದ ಕುರಿತು, ಆದರೂ ಇದರ ಕೊನೆ ವಿಜ್ಞಾನ ಅಥವಾ ಧರ್ಮ ಸರಿ ಎಂದು ಸಮರ್ಥಿಸಲು ಅಲ್ಲ. ಈ ಪುಸ್ತಕದಲ್ಲಿ ಯುರೋಪಿಯನ್ ನ್ಯೂಕ್ಲಿಯರ್ ರಿಸರ್ಚ್ ಸಂಸ್ಥೆಯ ಒಂದು ವೈಜ್ಞಾನಿಕ ಶೋಧನೆ “Antimatter ” ಬಗ್ಗೆ ಪ್ರಸ್ತಾಪವಿದೆ. ದ್ರವ್ಯ (ಮ್ಯಾಟರ್) ಮತ್ತು ಪ್ರತಿದ್ರವ್ಯ (ಆಂಟಿಮ್ಯಾಟರ್) ಒಂದೇ ಪ್ರತಿರೂಪಗಳು ಆದರೆ ವಿರುದ್ಧ ವಿದ್ಯುದಾಂಶವನ್ನು ಹೊಂದಿರುತ್ತವೆ. ದ್ರವ್ಯ ಮತ್ತು ಪ್ರತಿದ್ರವ್ಯ ಜೊತೆಗೆ ಸಂಪರ್ಕಕ್ಕೆ ಬಂದರೆ, ಶುದ್ಧ ಶಕ್ತಿಯಾಗಿ ನಾಶವಾಗುತ್ತದೆ. ಇನ್ನು ನಾವು ವಾಸಿಸುವ ಭೂಮಿ ದ್ರವ್ಯದಿಂದ ಕೂಡಿದೆ; ಪ್ರತಿ ಒಂದು ಕಣ, ಸ್ಥಳದಲ್ಲಿ ದ್ರವ್ಯ ಇದೆ. ಎಲ್ಲೆಲ್ಲೂ ದೃವ್ಯ ಇದೆ ಎಂದು ಬರೆಯುವಾಗ ಕನಕದಾಸರ ಮತ್ತು ಅವರ ಗುರುಗಳ ಒಂದು ಪ್ರಸಂಗ ನೆನಪು ಬಂತು, ಅದನ್ನು ಓದಿ ಮುಂದುವರೆಯೋಣ,

ಒಂದು ಸಲ, ಏಕಾದಶಿಯ ಉಪವಾಸದ ದಿನ, ವ್ಯಾಸರಾಜರು ತಮ್ಮ ಎಲ್ಲ ವಿದ್ಯಾರ್ಥಿಗಳನ್ನು ಕರೆದು, ‘ನಾನು ನಿಮಗೆ ಒಬ್ಬೊಬ್ಬರಿಗೂ ಒಂದೊಂದು ಬಾಳೆಹಣ್ಣು ನೀಡುತ್ತಿದ್ದೇನೆ, ಯಾರೂ ನಿಮ್ಮನ್ನು ನೋಡದ ಸ್ಥಳವನ್ನು ನೀವು ಕಂಡುಕೊಂಡರೆ ನೀವು ಅದನ್ನು ತಿನ್ನಬಹುದು’ ಎಂದು ಹೇಳಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಬಾಳೆಹಣ್ಣನ್ನು ತೆಗೆದುಕೊಂಡು ರಹಸ್ಯ ಸ್ಥಳಗಳನ್ನು ಹುಡುಕಲು ಪ್ರಾರಂಭಿಸಿದರು. ಸಂಜೆ ಗುರು ವ್ಯಾಸತೀರ್ಥರು ಪಾಠದ ನಂತರ ಅವರು ತಮ್ಮ ಬಾಳೆಹಣ್ಣುಗಳನ್ನು ಎಲ್ಲಿ ಮತ್ತು ಹೇಗೆ ತಿಂದರು ಎಂದು ಕೇಳಿದರು. ಕೆಲವರು ಅವರು ಕತ್ತಲೆಯ ಮೂಲೆಗೆ ಹೋದರು, ಇತರರು ಮರದ ಹಿಂದೆ ಅಡಗಿಕೊಂಡರು ಅಥವಾ ಕಾಡಿಗೆ ಹೋಗಿದ್ದಾರೆ ಎಂದು ಹೇಳಿದರು. ಕನಕ ದಾಸರ ಸರದಿ ಬಂದಾಗ, ಅವರು ತಮ್ಮ ತಿನ್ನದ ಬಾಳೆಹಣ್ಣನ್ನು ತೋರಿಸಿ, ‘ಕ್ಷಮಿಸಿ, ನಾನು ನನ್ನ ಬಾಳೆಹಣ್ಣನ್ನು ತಿನ್ನಲಿಲ್ಲ. ನಾನು ತುಂಬಾ ಹುಡುಕಿದೆ ಆದರೆ ಯಾರೂ ಇಲ್ಲದ ಸ್ಥಳ ನನಗೆ ಸಿಗಲಿಲ್ಲ. ನಾನು ಎಲ್ಲಿಗೆ ಹೋದರೂ, ದೇವರು ಯಾವಾಗಲೂ ನನ್ನನ್ನು ನೋಡುತ್ತಿದ್ದನು. ಯಾರಿಗೂ ತಿಳಿಯದಂತೆ ನಾನು ತಿನ್ನಬೇಕೆಂದು ನೀವು ಹೇಳಿದ್ದೀರಿ, ನಾನು ಹಾಗೆ ಮಾಡಲು ಸಾಧ್ಯವಿಲ್ಲ ಏಕೆಂದರೆ ದೇವರು ಎಲ್ಲೆಡೆ ಇದ್ದನು’. ದ್ರವ್ಯ ಇರದ ಸ್ಥಳದಲ್ಲಿ ಬಾಳೆಹಣ್ಣನ್ನು ತಿನ್ನಲು ಹೇಳಿದರೆ, ನಾವು ಅದನ್ನು ತಿನ್ನದೇ ಒಯ್ಯಬೇಕಾಗುತ್ತದೆ.

ದೇವರು ಯಾರು? ಪ್ರತಿಯೊಬ್ಬರದು ಒಂದೊಂದು ಅನುಭವ, ಅಭಿಪ್ರಾಯ

ದೇವರ ಆಟ ಬಲ್ಲವರಾರು.. ಆತನ ಎದಿರು ನಿಲ್ಲುವರಾರು..
ಕೇಳದೆ ಸುಖವ ತರುವ.. ಹೇಳದೆ ದುಃಖವ ಕೊಡುವ..
ತನ್ನ ಮನದಂತೆ ಕುಣಿಸಿ ಆಡುವ..

ಇಲ್ಲಿ “ದೇವರು” ಎಂದರೆ ಯಾರು ಎಂಬ ಪ್ರಶ್ನೆ ಮುಖ್ಯ? ಬಲ್ಲವರು ಅದನ್ನು ಮಹಾಶಕ್ತಿ ಅನ್ನಬಹುದು, ಇನ್ನೂ ಕೆಲವರು ಅದಕ್ಕೆ ರೂಪ ಕೊಡಬಹುದು. ಅದಕ್ಕೆ ಮಹಾನ್ ಶಕ್ತಿ ಇರುವ ಕಾರಣ ಅದನ್ನು ಒಳಿತಿಗಾಗಿ ಪೂಜಿಸಬಹುದು. ಇದೆ ಕಾರಣ ಇರಬಹುದು ಮೊದಲು ಶಕ್ತಿ ಪೂಜೆ ಆಗಿದ್ದು …ನೀರು, ನೆಲ, ಗಾಳಿ, ಬೆಂಕಿ ಮತ್ತು ಆಕಾಶ ಪಂಚಭೂತಗಳು ದೈವಗಳಾಗಿದ್ದು. ನಿಸರ್ಗದ ಆಟ ಪ್ರತಿ ವರ್ಷ ನಾವು ನೋಡುತ್ತೇವೆ, ಪ್ರವಾಹ ಬಂದು ಮುಳುಗಿದ ಜನ ವಸತಿಗಳೆಷ್ಟೋ, ಸುಟ್ಟ ಕಾಡುಗಳ ಬೆಂಕಿ ಊರೊಳಗೆ ಬಂದು ರುದ್ರ ನರ್ತನ ಮಾಡಿವೆ, ಸರಿದ ನೆಲ ಊರನ್ನೇ ನುಂಗಿ ಹಾಕಿದೆ, ಸುಂಟರ ಗಾಳಿಗೆ ಮನೆಗಳೇ ಹಾರಿ ಹೋಗಿವೆ, ಇಂತಹ ಪ್ರಕೋಪಗಳನ್ನು ಮಾನವನು ತಡೆಯಬಲ್ಲನೆ? ಹಾಗಿದ್ದರೆ ಈ ನಿಸರ್ಗದ ಆಟ ಯಾವದೂ ಮಹಾನ್ ಶಕ್ತಿ ಕಾರಣವಿರಬಹುದೇ?

ನಿಸರ್ಗ ಶಕ್ತಿಯಾಗಿ ನಮ್ಮನ್ನು ನಡೆಸಲ್ಲದಾದರೆ; ಅದರ ಸುಂದರತೆ ನಮ್ಮ ಮನ ತಣಿಸಿ, ನಮ್ಮನ್ನು ಕುಣಿಸಬಹದು. ಕುವೆಂಪು ಅವರು ಪೂಜಿಸುವ ಪರಿ ನೋಡೋಣ ಈ ಕೆಳಗಿನ ಸಾಲುಗಳಲ್ಲಿ

ಶಿವಮಂದಿರ ಸಮ ವನಸುಂದರ ಸುಮ ಶೃಂಗಾರದ ಗಿರಿಶೃಂಗಕೆ ಬಾ!
ಬಾ ಫಾಲ್ಗುಣ ರವಿ ದರ್ಶನಕೆ!
ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿವಿಹಂಗಮ ಮಂಗಲರವರಸನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು |

ಈ ಸುಂದರತೆ ಶಕ್ತಿಯಾದರೆ, ಈ ಶಕ್ತಿಯನ್ನೇ ನಾವು ದೈವ ಎಂದೇವೆ? ಕಾಣದ ಈ ಶಕ್ತಿಯನ್ನು ದೇವರೆನ್ನಬಹುದೇ?

ಯುರೋಪಿಯನ್ ನ್ಯೂಕ್ಲಿಯರ್ ರಿಸರ್ಚ್ ಸಂಸ್ಥೆಯ ವೈಜ್ಞಾನಿಕ ಶೋಧನೆ “Antimatter ” ಬಗ್ಗೆ ಮತ್ತೆ ವಿಚಾರಕ್ಕೆ ಬರೋಣ. ನಾವು ದ್ರವ್ಯ (ಮ್ಯಾಟರ್) ಮತ್ತು ಪ್ರತಿದ್ರವ್ಯ (ಆಂಟಿಮ್ಯಾಟರ್) ವಿಷಯ ತಿಳಿಯುವಾಗ ಇವೆರಡಲ್ಲದೆ ಇನ್ನೊಂದು ಪ್ರಕಾರದ ದ್ರವ್ಯ ನೋಡೋಣ, ಅದು ಡಾರ್ಕ್ ಮ್ಯಾಟರ್. ಇದಕ್ಕೆ ಕನ್ನಡ ಪದ ಸಿಗದ ಕಾರಣ ಇದನ್ನು ಇಲ್ಲಿ ಕತ್ತಲದ್ರವ್ಯ ಅಥವಾ ಅಂಧಕಾರದ ದ್ರವ್ಯ ಎನ್ನಬಹುದೇ?
ಇಲ್ಲಿ ದ್ರವ್ಯ ಭೂಮಿ ಮತ್ತು ಇತರ ಸೃಷ್ಟಿ ಪ್ರಕಾರ ಇದ್ದಂತೆ, ಪ್ರತಿದ್ರವ್ಯ ಮತ್ತು ಡಾರ್ಕ್ ಮ್ಯಾಟರ್ ಇನ್ನೊಂದು ಸೃಷ್ಟಿಗೆ ಕಾರಣವಿರುತ್ತದೆ. ಈ ಕಾರಣಕ್ಕಾಗಿ, ಮೂರು ಪ್ರಕಾರಗಳನ್ನು ನಾವು ಮೂರು ಲೋಕಕ್ಕೆ ಹೊಂದಿಸಬಹುದೇ?

ಭೂಲೋಕ, ಸ್ವರ್ಗ, ಪಾತಾಳಲೋಕ – ಮಾನವರು ಮತ್ತು ಪ್ರಾಣಿ/ಪಕ್ಷಿ/ಜೀವಗಳು ವಾಸಿಸುವ ಲೋಕ ಭೂಲೋಕ. ದೇವತೆಗಳು, ಅಪ್ಸರೆಯರು ವಾಸಿಸುವ ಉನ್ನತ ಲೋಕ ಸ್ವರ್ಗ ಮತ್ತು ಭೂಮಿಯ ಕೆಳಗಿರುವ ಅಸುರರ ಕೇಳರಿಯದ, ನೋಡದ ಲೋಕ ಪಾತಾಳಲೋಕ. ಜೀವಗಳು ವಾಸಿಸುವ ಲೋಕ ಭೂಲೋಕದಲ್ಲಿ ಎಲ್ಲಕೂ ದ್ರವ್ಯ ರೂಪಕ, ಆದುದರಿಂದ ಇದನ್ನು ದ್ರವ್ಯ ಪ್ರಕಾರದಲ್ಲಿ ನೋಡುತ್ತೇವೆ. ಉನ್ನತ ಲೋಕದ ಭಿನ್ನ ಜಗತ್ತನ್ನು ಪ್ರತಿದ್ರವ್ಯ ಎಂದು, ಕಾಣದ ಕತ್ತಲ ಪಾತಾಳ ಲೋಕವನ್ನು ಡಾರ್ಕ್ ಮ್ಯಾಟರ್ ಎಂದು ನೋಡೋಣ.

ವಿಶ್ವಾಮಿತ್ರ ಮತ್ತು ತ್ರಿಶಂಕು ಕಥೆ ನೋಡೋಣ, ಸತ್ಯವ್ರತ ರಾಜ (ಮುಂದೆ ತ್ರಿಶಂಕು ಎಂದು ಕರೆಯಲ್ಪಟ್ಟ) ಸ್ವರ್ಗಕ್ಕೆ ಹೋಗಲು ಇಚ್ಛಿಸಿ ವಿಶ್ವಾಮಿತ್ರರನ್ನು ಕೇಳಿಕೊಂಡಾಗ, ವಿಶ್ವಾಮಿತ್ರರು ಯಾಗದಿಂದ ರಾಜನನ್ನು ಸ್ವರ್ಗದ ಬಾಗಿಲಿಗೆ ಕಳುಹಿಸಿದರು. ಆದರೆ ಇಂದ್ರ ರಾಜನನ್ನು ಕೆಳಕ್ಕೆ ನೂಕಿದಾಗ, ವಿಶ್ವಾಮಿತ್ರರು ಸತ್ಯವ್ರತ ರಾಜನನ್ನ ಮಧ್ಯದಲ್ಲಿ ನಿಲ್ಲಿಸಿ ಅವನಿಗೆ ಒಂದು ಸ್ವರ್ಗವನ್ನೇ ನಿರ್ಮಿಸಿದರು. ಈ ಕಥೆ ಇಲ್ಲಿ ತಿಳಿಸಿದ ಕಾರಣ, ಇದನ್ನು ಇನ್ನೊಂದು ರೀತಿಯಲ್ಲಿ ನೋಡಲು – ವಿಶ್ವಾಮಿತ್ರರು ರಾಜನನ್ನು ದ್ರವ್ಯ ಪ್ರಕಾರದ ಲೋಕದಿಂದ ಪ್ರತಿದ್ರವ್ಯ ಲೋಕಕ್ಕೆ ಕಳುಹಿಸಲು ವಿರುದ್ಧ ವಿದ್ಯುದಾಂಶ ಉಪಯೋಗಿಸಿದರೆ? ರಾಜನನ್ನು ಕೆಳಕ್ಕೆ ನೂಕಿದಾಗ ಎರಡು ಲೋಕದ ಮಧ್ಯ ವಿದ್ಯುದಾಂಶದ ಸಮತೋಲನದಲ್ಲಿ ನಿಲ್ಲಿಸಿದರೆ?
ಮೇಲಿನ ವಿಷಯ ನೋಡಿದಾಗ ಕಥೆ ಎನಿಸಬಹುದು…
ಹಲವು ದಶಕಗಳ ಹಿಂದೆ ಸಂಜಯನ ಮಹಾಭಾರತದ ಯುದ್ಧ ಲೈವ್ ಕಾಮೆಂಟರಿ ಎಲ್ಲರಿಗೂ ಕಥೆ ಎನಿಸಿತಿತ್ತು, ಆದರೆ ದೂರದರ್ಶನದ ನಂತರ ಮತ್ತು ಇತ್ತೀಚಿನ ಜೂಮ್ ಕಾಲ್ ನಂತರ ಪ್ರತಿ ಒಂದು ಸಣ್ಣ ಕಾರ್ಯಕ್ರಮ ಸಂಜಯನ ಲೈವ್ ಟೆಲಿಕಾಸ್ಟ್ ನಂತೆ ನೋಡಬಹುದಾಗಿದೆ. ವಿಜ್ಞಾನ ಮುಂದುವರೆದು ಹೊಸ ಆವಿಷ್ಕಾರ ಮಾಡುತ್ತ ಹೋದರೂ ಹೊಸ ವಿಸ್ಮಯಗಳು ನಮ್ಮೆದುರಿಗೆ ದುತ್ತೆಂದು ಬಂದು ನಿಲ್ಲುತ್ತವೆ. ವಿಸ್ಮಯಗಳ ಈ ಸಾಗರವೇ ಕಾಣದ, ತಿಳಿಯದ ಶಕ್ತಿ ಆಗಿದೆ.

ಹಾರ್ವರ್ಡ್ ಖಗೋಳ ಭೌತಶಾಸ್ತ್ರಜ್ಞ ಡಾ. ವಿಲ್ಲಿ ಸೂನ್ ಅವರ ಅಭಿಪ್ರಾಯದಂತೆ ಜಗತ್ತು ಒಂದು ಮಹಾನ್ ಶಕ್ತಿ ನಡೆಸುತ್ತಿದೆ ಎಂದು ತಿಳಿಸುತ್ತಾರೆ. ದ್ರವ್ಯ, ಪ್ರತಿದ್ರವ್ಯದ ನಿಖರವಾದ ಅಸಮತೋಲನವು ಉದ್ದೇಶಪೂರ್ವಕ ವಿನ್ಯಾಸವನ್ನು ಸೂಚಿಸುತ್ತದೆ, ಈ ಅಸಮತೋಲನ ಇರದಿದ್ದರೆ ಎಲ್ಲವೂ ನಾಶವಾಗುತ್ತಿತ್ತು. ಈ ಒಂದು ದ್ರವ್ಯ, ಪ್ರತಿದ್ರವ್ಯದ ಅಸಮತೋಲನ ಸಮೀಕರಣ ಅದೃಷ್ಟದಲ್ಲ, ಜಗವನ್ನು ಮತ್ತು ಜೀವರಾಶಿಯನ್ನು ನಡೆಸಿಕೊಂಡು ಹೋಗಲು ಮಾಡಿದ ಒಂದು ಮಹಾನ್ ನಿಯಮ. ಇದನ್ನೇ ನಾವು ದಶಾವತಾರದಲ್ಲಿ ಜಗವನ್ನು ಉಳಿಸಲು ಮತ್ಸ್ಯ. ಕೂರ್ಮ, ವರಾಹ ಇತ್ಯಾದಿ ಅವತಾರದಲ್ಲಿ ನೋಡಿದ್ದೇವೆ… ಕಲ್ಕಿಗಾಗಿ ಕಾಯುತ್ತಿದ್ದೇವೆ.

ಲೇಖನ ಅನಿಶ್ಚಿತೆಯಿಂದ ನಿಲ್ಲಿಸುತ್ತಿಲ್ಲ, ವಿಚಾರವನ್ನು ಮುಂದುವರಿಸೋಣ