ಹುಟ್ಟೂರಿನಿಂದ ಎಷ್ಟೇ ದೂರ ಬಂದರೂ, ಬೆಳೆದಂತೆ ಬೇಕಾದ ಭಾಷೆಗಳ ಕಲಿತು ಬಳಸಿದರೂ, ಮನಸು ಮಂಥಿಸುವದು ಮಾತೃಭಾಷೆಯಲ್ಲೇ. ಹೀಗೆ ಹಿಂದಿಯಲ್ಲಿ ಕೇಳಿ ಆನಂದಿಸಿದ ಹಾಡುಗಳನ್ನು ಕನ್ನಡದಲ್ಲಿ ಜೀರ್ಣಿಸಿಕೊಂಡು, ಆ ಹಾಡುಗಳ ಭಾವವನ್ನ ಲಯದೊಂದಿಗೆ ಕನ್ನಡದಲ್ಲಿ ಬರೆಯುವ ಹವ್ಯಾಸದ ಅನಿವಾಸಿ ವೈದ್ಯ ಕೇಶವ ಕುಲಕರ್ಣಿ, ತಮ್ಮ ಭಂಡಾರದ ಎರಡು ಹಾಡುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
೧. ಈಶ್ವರ ಅಲ್ಲಾ
ನಿನ್ನಯ ಮನವು ಆಲದ ಮರವು
ಮನುಜನ ಮನವು ತೃಣವೇಕೆ? ।ಅ.ಪ।
ಅಡಿಗಡಿಗೊಂದು ಗಡಿಗಳು ಏಕೆ
ನಿನ್ನದೇ ಅಲ್ಲವೇ ಜಗವೆಲ್ಲಾ?
ನೇಸರ ನಮ್ಮನು ಸುತ್ತುತಲಿದ್ದರೂ
ಕತ್ತಲೆ ನಮ್ಮಯ ಬದುಕೆಲ್ಲಾ
ಭೂಮಿಯ ಸೀರೆಯ ಅಂಚಿನ ತುಂಬ
ಮನುಜನ ರಕುತದ ಕಲೆ ಏಕೆ? ।೧।
ಕಿವಿಗಪ್ಪಳಿಸಿವೆ ಹಾಹಾಕಾರ
ಒಲುಮೆಯ ಮಾತು ಕೇಳಿಸದು
ಚೂರ್ಚೂರಾದವು ಸಾವಿರ ಕನಸು
ಜೋಡಿಪರಾರೋ ಕಾಣಿಸದು
ಮನ ಬಾಗಿಲಿಗೆ ಬಿದ್ದಿದೆ ಬೀಗ
ಬೀಗಕೆ ಹಿಡಿದಿದೆ ತುಕ್ಕೇಕೆ? ।೨।
ಒಲುಮೆಯ ಮಾತು ಕೇಳಿಸದು
ಚೂರ್ಚೂರಾದವು ಸಾವಿರ ಕನಸು
ಜೋಡಿಪರಾರೋ ಕಾಣಿಸದು
ಮನ ಬಾಗಿಲಿಗೆ ಬಿದ್ದಿದೆ ಬೀಗ
ಬೀಗಕೆ ಹಿಡಿದಿದೆ ತುಕ್ಕೇಕೆ? ।೨।
ಹೆದರುವೆ ನಾ ಕನಸುಗಳಿಂದಲೆ
ನಾ ಕತ್ತಲೋ ಬೆಳದಿಂಗಳೊ
ಯಾರ ಮಡಿಲಲಿ ಮಲಗಿ ಅಳಲಿ
ನಾ ಮೌನವೋ ನಾ ಭಾಷೆಯೊ
ನಿಜ ಹೇಳಲೆ ನುಂಗಿ ಕೊಳ್ಳಲೇ
ನಾನಾರು?
ಕುರುಹು: ಈ ಸಿನೆಮಾ ಬಿಡುಗಡೆಯಾಗಿದ್ದು ೨೦೧೭ರಲ್ಲಿ. ಇದರ ಗಳಿಕೆ ಭಾರತದಲ್ಲಿ ೯೦ ಕೋಟಿ, ಚೈನಾದಲ್ಲಿ ೯೦೦ ಕೋಟಿ!
