ನಮಸ್ಕಾರ. ಅನಿವಾಸಿ ಬಳಗಕ್ಕೆಲ್ಲ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಹರನರಸಿ ಸಿರಿಗೌರಿ ಸರ್ವರಿಗೂ ಸನ್ಮಂಗಲವನ್ನುಂಟು ಮಾಡಲಿ.
“ಗಜಮುಖನೇ ಗಣಪತಿಯೇ ನಿನಗೆ ವಂದನೆ. ನಂಬಿದವರ ಪಾಲಿನ ಕಲ್ಪತರು ನೀನೇ” ಹೊರಗೆ ಮೃಣ್ಮಯನಾದರೂ ಚಿನ್ಮಯನಾದ ಈ ಮಹಾಭಾರತದ ಲಿಪಿಕಾರ ನಮ್ಮೆಲ್ಲರ ಹಣೆಯ ಲಿಪಿಯನ್ನೂ ನೇರ್ಪಾಗಿಸಲಿ. ವಿಘ್ನಗಳ ತರಿದು ವಿದ್ಯೆ-ಬುದ್ಧಿ- ಸಿದ್ಧೀಯನ್ನೀಯಲಿ.
~ ಸಂಪಾದಕಿ
“ನಡೀತದೇಳ್ರಿ”
ಈ ಶ್ರಾವಣ -ಭಾದ್ರಪದ ಮಾಸಗಳು ಬಂದೂ ಅಂದ್ರ ದಿವಶಿಗೌರಿ, ಮಂಗಳಗೌರಿ, ಸಂಪತ್ ಶುಕ್ರವಾರದ ಗಡಗಿ ಗೌರಿ, ಸ್ವರ್ಣಗೌರಿ, ಜೇಷ್ಠಾಗೌರಿಯರ ಜೋಡಿ ಸೋಳಾ ಸೋಮವಾರದ ಈಶಪ್ಪ, ಪಂಚಮಿಯ ನಾಗಪ್ಪ, ಗೋಕುಲಾಷ್ಟಮಿಯ ಕಿಟ್ಟಪ್ಪ, ಚೌತಿಯ ಗಣಪ್ಪ, ಕಡೀಕೆ ಅನಂತ ಪದ್ಮನಾಭ ( ಇಷ್ಟರ ನಡಬರಕ ನಮ್ಮ ಮಂಚಾಲಿ ರಾಯರು) ಹೀಂಗ ಸಾಲುಸಾಲಾಗಿ ಹಿಂಡುದೈವದ ಹಾಗೂ ಹಿಂಡು ದೈವದ ಗಂಡ ಉದ್ಧಂಡನ ಪೂಜೆ- ಪುನಸ್ಕಾರ , ಅವರುಗಳ ಹೆಸರಲ್ಲಿ ತಂಬಿಟ್ಟು, ಅಂಟಿನುಂಡೆ, ಕರದವಲಕ್ಕಿ, ಹೋಳಿಗೆ-ಕಡಬು, ಪಾಯಸ -ಪರಮಾನ್ನ -ಚಿತ್ರಾನ್ನಗಳ ಥರಾವರಿ ಭಕ್ಷ್ಯಭೋಜನಗಳ ಸಮಾರಾಧನೆ. ಒಟ್ಟನಾಗ ನಮ್ಮಂಥ ಗೃಹಿಣಿಯರು ಮಾಡಿ,ಉಂಡುಟ್ಟು ಉಸ್ ಎಂದು ದಣಿಯುವ ಮಾಸಗಳಿವು.
(ಅಂಡಜವಾಹನ ಅನಂತ ಮಹಿಮ
ಪುಂಡರಿಕಾಕ್ಷ ಶ್ರೀ ಪರಮ ಪಾವನ್ನ
ಹಿಂಡು ದೈವದ ಗಂಡ ಉದ್ಧಂಡ
ಪಾಂಡುರಂಗ ಶ್ರೀ ಪುರಂದರ ವಿಠ್ಠಲ)
‘ ಅದೆಲ್ಲ ಬರೋಬ್ಬರಿ..ಇದೇನೋ ‘ನಡೀತದೇಳ್ರಿ’ ನಡೀಯೂದೂ, ಏಳೂದು ಅಂದ್ರ ಏನು ಅಂತ ಹುಬ್ಬೇರಿಸಲಿಕ್ಹತ್ತೀರೇನು? ಹಾಂ ಅಂದಹಂಗ ಹತ್ತಿರೇನು ಅಂದಕೂಡಲೇ ನೆನಪಾತು, ನನ್ನ ಗೆಳತಿ ಒಬ್ಬಾಕಿ “ ಇದೇನವಾ ನಿಮ್ಮ ಉತ್ತರ ಕರ್ನಾಟಕದ ಭಾಷೆ ಇಳೀಲಿಕ್ಕೂ ಹತ್ತತಾರ, ಕೂಡಲಿಕ್ಕೂ ಹತ್ತತಾರ ,ಉಣಲಿಕ್ಕೆ, ಕುಡೀಲಿಕ್ಕೆ, ಓದಲಿಕ್ಕೆ, ಬರೀಲಿಕ್ಕೆ, ಮಲಗಲಿಕ್ಕೆ ಎಲ್ಲಕ್ಕೂ ಹತ್ತೂದೇ, ಏನರೇs ಹತ್ತತೀರಿ..ಎಷ್ಟರೇs ಹತ್ತತೀರಿ?” ಅಂತ ಕಾಲೆಳಿತಿರತಾಳ. ಈಗ ಇದೊಂದೇನೋ ಹೊಸಾದು ‘ನಡೀತದೇಳ್ರಿ’ ತಗೊಂಡು ಬಂದೀರಿ ಅಂತಿರೇನು ನೀವೂ? ತಡೀರಿ..ಅದನ್ನೇ ಹೇಳಲಿಕ್ಕೆ ಬರಲಿಕ್ಹತ್ತೀನಿ.
ಕಳೆದ ವಾರ ‘ ಬಪ್ಪಾ’ ನನ್ನು ಮನೆಗೆ ಕರೆತರಲು Wembley ಗೆ ಹೋಗಿದ್ವಿ. ಅಲ್ಲಿ ಅದೆಷ್ಟು ಥರಾವರಿ ಗಣಪತಿಗಳು, ಅದೇನು ಹೂ-ಹಣ್ಣು, ಪೂಜಾಸಾಮಗ್ರಿಗಳು, ಡೆಕಾರೇಶನ್ ಸಾಮಾನು, ಮಂಟಪ, ಲೈಟು..ಪ್ರತಿ ಅಂಗಡಿ ಕಿಕ್ಕಿರಿದು ತುಂಬಿತ್ತು. ಆಗ ನನ್ನ ತಲೆಯಲ್ಲಿ ಸುಳಿದಾಡಿದ ಭಾವಲಹರಿ ಏನೆಂದರೆ –‘ದೇವರೇ ಇಲ್ಲ’ ಅನ್ನೋ ವಾದದಸರಣಿಯಂತೆ ದೇವರು ಸುಳ್ಳಿರಬಹುದು ಆದರದನ್ನು ಆತುಕೊಂಡು ಬೆಳೆದು, ಹಬ್ಬಿದ ವೇದೋಪನಿಷತ್ತು, ರಾಮಾಯಣ-ಮಹಾಭಾರತ, ದಾಸ-ವಚನ ಸಾಹಿತ್ಯಗಳು, ಮಂತ್ರ-ತಂತ್ರ, ನಾಟ್ಯ-ಸಂಗೀತ- ಶಿಲ್ಪಕಲೆ, ಹಬ್ಬ-ಹರಿದಿನಗಳ ಆಚರಣೆ- ಸಡಗರ- ಸಂಭ್ರಮ ಇವೆಲ್ಲವುಗಳಂತೂ ಸತ್ಯಸ್ಯ ಸತ್ಯ. ಎಷ್ಟೆಲ್ಲ ಜನರಿಗೆ ಎಷ್ಟೆಲ್ಲ ರೀತಿಯ ಜೀವನೋಪಾಯಗಳು?! ‘ ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯಾನೆ?’
(ಇಲ್ಲಿ ದೇವರು ನಮ್ಮನ್ನು ಹುಟ್ಟಿಸಿದನೇ? ಅಥವಾ ನಾವು ಅವನನ್ನು ಹುಟ್ಟಿಸಿದೆವೇ ಎಂಬ ಮತ್ತೊಂದು ತರ್ಕಕ್ಕೂ ವಿಫುಲ ಅವಕಾಶವಿದೆಯಾದರೂ ಈಗದು ಬೇಡ.)
ಸರಿ, ಈಗ ಹಕೀಕತ್ತಿಗೆ ಬರತೀನಿ. ಅಲ್ಲಿದ್ದ ನೂರಾರು ಗಣಪತಿಗಳಲ್ಲಿ ಯಾವುದು ತರುವುದು ಎಂಬ ಸಮಸ್ಯೆ. Options ಹೆಚ್ಚಾದಷ್ಟೂ ಆಯ್ಕೆ ಕಷ್ಟ.’ಇದು ಬ್ಯಾಡ. ಮಡಿ-ಶಲ್ಯ ಮ್ಯಾಚಿಂಗ್ ಆಗವಲ್ತು’ ನನ್ನ ಅವಳಿಯ ರಾಗ. ‘ ಇದರಾಗ ಗಣಪ್ಪನ ಸೊಂಡಿ, ಇಲಿ ಅಪ್ಪಚ್ಚಿಯಾದ್ಹಂಗದ’ ಜವಳಿಯ ತಗಾದೆ. ‘ಇವಂಗ ಜನಿವಾರನೇ ಇಲ್ಲಲs’ ಅತ್ತೆಯವರ ಉವಾಚ. ‘ ಇವಾ ಬರಿಗೈಯಾಗಿದ್ದಾನ. ಕೈಯಾಗ ಆಯುಧ, ಮೋದಕ ಯಾವುದೂ ಇಲ್ಲ’ ಮಾವನವರ ಉದ್ಗಾರ , ‘ ಹೊಟ್ಟಿಗೆ ಹಾವೇ ಇಲ್ಲಲಾ, ಈಬತ್ತಿ ಬ್ಯಾರೆ ಹಚಗೊಂಡಾನ’ , ಒಬ್ಬ ಗಣಪ್ಪ ಮುಂದ ಬಾಗ್ಯಾನ, ಇನ್ನೊಬ್ಬ ಭಾಳ ಹಿಂದ ಒರಗ್ಯಾನ..ನೂರು ತಕರಾರು.ಅಂತೂ ಪೌಂಡ್ ಗಟ್ಟಲೇ ದುಡ್ಡು ಸುರಿದರೂ ಬೇಕಾದ ಗಣಪ್ಪ ಸಿಗವಲ್ಲ. ಇವರೆಲ್ಲರ ನಡುವ “ ಏಯ್ ಮ್ಯಾಚಿಂಗ್ ಇರದಿದ್ರೇನಾತು? ಚಂದೇ ಕಾಣಸತದ ನಡೀತದೇಳು, ಜನಿವಾರ ಇರದಿದ್ರೇನಾತು? ಹೆಂಗೂ ಪೂಜಾ ಟೈಮಿಗೆ ಹಾಕತೀವಲಾ ನಡೀತದೇಳ್ರಿ, clay ಲೇ ಒಂದ ಸಣ್ಣ ಮೋದಕಾ ಮಾಡಿ ಕೈಯಾಗಿಟ್ರಾತು, ನಡೀತದೇಳ್ರಿ , ಕಡಬು, ಮೋದಕಾ ತಿಂದು ಸ್ವಲ್ಪ ಹಿಂದ ಒರಗ್ಯಾನ ನಡೀತದೇಳ್ರಿ” ಅಂತ ನಾನು.
‘ಛಾ ಪುಡಿ ಇಲ್ಲ, ಕಾಫಿ ಮಾಡ್ಲಿ?’ ‘ನಡೀತದೇಳ್ರಿ’
‘ಸಾರು ಸ್ವಲ್ಪ ನೀರಾಗೇದ’ ‘ ನಡೀತದೇಳ್ರಿ’
‘ಪಲ್ಯ ಚೂರು ಉಪ್ಪಾಗೇದ.’ ‘ಸಪ್ಪಗಿನ ಅನ್ನ – ಚಪಾತಿ ಜೋಡಿ ನಡೀತದೇಳ್ರಿ.’
‘ ಹುಡುಗ ಚೂರು ಸಾದಗಪ್ಪ ಇದ್ದಾನ’ ‘ ಬಣ್ಣ ಏನಮಾಡತೀರಿ? ಸಂಸ್ಕಾರಿ ಇದ್ದಾನಲಾ ನಡೀತದೇಳ್ರಿ’
‘ ಹುಡಗಿಗೆ ಅಡಗಿ ಬರಂಗಿಲ್ಲ’ ‘ ಇವತ್ತ ನಾಳೆ ಅದೇನ ಮಹಾ? ಬೇಕಂದ್ರ ಯೂಟ್ಯೂಬ್ ನೋಡಿ ಕಲಿತಾಳ. ನಡೀತದೇಳ್ರಿ’
‘ ಬ್ಲೌಜ್ ಮೈಯಾಗ ಲೂಸ್ ಆಗೇದ’ ‘ ಸಧ್ಯಕ್ಕ ಒಂದ safety pin ಹಚಗೊಂಡ್ರಾತು. ನಡೀತದೇಳು’
‘ ಸೀರಿಗೆ ಕಲೆ ಹತ್ತೇದ’ ‘ ನಿರಿಗ್ಯಾಗ ಮುಚ್ಚಿಹೋಗತದ. ನಡೀತದೇಳು.’
‘ ಅಲ್ಲೆ ಮೂಲ್ಯಾಗೊಂಚೂರು ಕಸಾ ಅದ.’ ‘ ಮುಂಜಾನೆ ಬಳಿಯೂಣಂತ. ನಡೀತದೇಳ್ರಿ’
‘ ಮಳಿ ಬರೂ ಹಂಗ ಅದ’ ‘ ಛತ್ರಿ ತಗೊಂಡ ಹೋದ್ರಾತು. ನಡೀತದೇಳ್ರಿ’
‘ ಬಸ್ ಮಿಸ್ ಆತು.’ ‘ನಡೀತದೇಳ್ರಿ. ಶೇರಿಂಗ್ ಆಟೊ ಹತ್ತಿದ್ರಾತು.’
‘ ಮಗಗ ಮಾರ್ಕ್ಸ್ ಕಮ್ಮಿ ಬಂದಾವ.’ ‘ ನಡೀತದೇಳ್ರಿ ಮುಂದಿನ ಸಲಾ ಮೆಹನತ್ ಮಾಡತಾನ.’
‘ ಇವತ್ತ ಕೆಲಸದಕಿ ಬರಂಗಿಲ್ಲಂತ’ ‘ ನಡೀತದೇಳು.ಎಷ್ಟ ಬೇಕ ಅಷ್ಟ ಭಾಂಡಿ ತೊಳಕೊಂಡ್ರಾತು’
ಒಟ್ಟಿನಾಗ ಸಾರಾಂಶ ಏನಂದ್ರ ಈ ‘ನಡೀತದೇಳ್ರಿ’ ಬದುಕನ್ನು
ಸರಳವಾಗಿಸುವ, ಸಹ್ಯವಾಗಿಸುವ ದಿವ್ಯ ಮಂತ್ರ.
ಎತ್ತಿನಾಗೂ ಸೈ..ಕತ್ಯಾಗೂ (ಕತ್ತೆ) ಸೈ ಅಂತಾರಲಾ . ನಾ ಅಂಥಾ ಜಾತಿಯಕಿ ಅನಕೋರಿ. ಹೀಂಗೇ ಆಗಬೇಕು, ಹಂಗೇ ಆಗಬೇಕು ಅನ್ನದs ‘ ನಡೀತದೇಳ್ರಿ’ ಅಂತ ಕೆಲಸ ಸಾಗಿಸುವ ಗುಣ ಅಷ್ಟೇನೂ ಸರಳಲ್ಲ. ಅದಕ್ಕೂ ‘ ಸಾಧನಾ’ (ಸಿನೆಮಾ ತಾರೆ ಅಲ್ಲ ಮತ್ತ) ಬೇಕಾಗತದ ಅಂಬೂದು ನನ್ನ ಅಂಬೋಣ.
ಇನ್ನ ನೀವು ಇದನ್ನೋದಿ ಕಾಮೆಂಟ್ ಮಾಡದಿದ್ರೂ ‘ ನಡೀತದೇಳ್ರಿ’ ಅಂತ ಅನಕೊಂಡ ಬಿಡಬ್ಯಾಡ್ರಿ. ಯಾಕಂದ್ರ ನೀವು ಓದೂದು, ಬರಿಯೂದು , ಅನಿವಾಸಿಯನ್ನ ಬೆಳಸೂದು, ಬೆಳಗಸೂದು ಭಾಳ ಮಹತ್ವದ್ದ ಅದ. ಏನಂತೀರಿ?

