ಪ್ರಿಯ ಓದುಗರೆ
ಈ ವಾರದ ಅನಿವಾಸಿಯಲ್ಲಿ, ಇತ್ತೀಚಿಗೆ ಬಳಗಕ್ಕೆ ಸೇರಿದ ಹೊಸ ಬರಹಗಾರ್ತಿಯ ಬರಹವನ್ನು ಪರಿಚಯಿಸುತ್ತಿದ್ದೇನೆ.
ವೃತ್ತಿಯಲ್ಲಿ ಅರಿವಳಿಕೆ ವಿಭಾಗದಲ್ಲಿ ತಜ್ಞ ವೈದ್ಯೆಯಾಗಿರುವ ದೀಪಾ ಸಣ್ಣಕ್ಕಿಯವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕಿನವರು. ಸದ್ಯ ಇಂಗ್ಲೆಂಡಿನ ಸ್ಟಾಕ್ಟನ್ ಆನ್ ಟೀಸ್ ಅಲ್ಲಿ ವಾಸವಾಗಿದ್ದಾರೆ. ಇತ್ತೀಚಿಗೆ ವೈದ್ಯ ಸಂಪದದಲ್ಲಿ ಅವರ ಕವನವೂ ಕೂಡಾ ಪ್ರಕಟವಾಗಿತ್ತು. ಕನ್ನಡ ಸಾಹಿತ್ಯದಲ್ಲಿ ತುಂಬಾ ಆಸಕ್ತಿ. ಮನತುಂಬಿ ಬರೆಯುವುದು ಹವ್ಯಾಸ. ದಯವಿಟ್ಟು ಓದಿ ಹರಸಿ
ಪ್ರಸಂಗ ೧
ಕಡಿದಾದ ಬೆಟ್ಟದ ಏರಿನ ಕಾಲುದಾರಿ ಸವೆಸುತ ಸಮಯ ಸಂದಿದ್ದೇ ಗೊತ್ತಾಗಲಿಲ್ಲ. ಅವರಿಬ್ಬರು ಬೆಟ್ಟದ ಪಾದದಡಿ ಸೇರಿದಾಗ ಬೆಳಗಿನ ಐದು ಕಳೆದಿರಬೇಕು. ಆಗಿನ್ನೂ ನಸುಗಪ್ಪು ಕತ್ತಲು. ಒಬ್ಬರನ್ನೊಬ್ಬರು ನೋಡದೇ ಮೂರು ವರ್ಷವೇ ಕಳೆದು ಹೋಗಿ, ಮುಖಚಹರೆಯ ನೆನಪು ಮಾಸಿಹೋದಂತಿತ್ತು. ಆದರೂ, ಫೋನಿನ ಸಂಭಾಷಣೆಯ ಚಿರಪರಿಚಿತ ಧ್ವನಿಯೊಂದಿಗೆ ಸಂಭ್ರಮದಿಂದ ಪರಸ್ಪರ ಬರಮಾಡಿಕೊಂಡಿದ್ದರು. ಪೂರ್ವಾಭಿಮುಖವಾದ ಬೆಟ್ಟವನ್ನು ಮೇಲೆರಿದಂತೆ, ಸೂರ್ಯೋದಯದ ಸೊಬಗು ಕಣ್ಣಿಗೆ ಕಾಣದಿದ್ದರೂ ಸೃಷ್ಟಿಯ ಎಲ್ಲಾ
ಸಂಕೇತಗಳೂ ಅರುಣೋದಯವನ್ನು ಸಾರುತಿದ್ದವು. ಬಾನಿನಂಚಿನಲ್ಲಿ ಬೆಳಗು ಮೂಡಲು ಕಾಯದೇ, ಹಕ್ಕಿಗಳು ಎಂದಿನಂತೆ ತಮ್ಮ ದಿನಚರಿಯಲ್ಲಿ ತೊಡಗಿದ್ದವು. ದಟ್ಟವಾಗಿ ಹಬ್ಬಿದ ಮರಗಳ ಸಂದುಗೊಂದಿನಂದ ಉದಯರವಿಯ ಕಿರಣಗಳು ತೂರಿ ಬರುತ್ತಿದ್ದವು. ಇಬ್ಬನಿಯಲಿ ತೋಯ್ದ ಇಳೆ, ಕಾಡುಹೂವುಗಳ
ಮಿಶ್ರಸುಗಂಧ, ಮರಿ ಹಕ್ಕಿಗಳ ಕೊರಳ ಇಂಪನ,ಇವೆಲ್ಲವೂ ಇಬ್ಬರ ಮನಸ್ಸನ್ನು ಆಹ್ಲಾದಕರವನ್ನಾಗಿ ಮಾಡಿದ್ದವು. ಕಳೆದ ಮೂರು ವರ್ಷದಿಂದ ಬರೀ ಫೋನಿನ ಸಂಭಾಷಣೆಯಲ್ಲಿ ತೊಡಗಿ, ಇಂದು ಮುಖಾಮುಖಿಯಾಗುವ ಅಪರೂಪದ ಸುದಿನವಾಗಿತ್ತು. ಅದೇ ಕಾರಣಕ್ಕಾಗಿಯೇ, ಮಾಗಿಯ ಚಳಿಯು ನಡುಕವನ್ನುಂಟು ಮಾಡದೆ, ಮನಸನ್ನು ಪ್ರಫುಲ್ಲಿತಗೊಳಿಸುತ್ತಿತ್ತು. ಮನಮಂದಿರದಲ್ಲಿ ಸ್ಥಾಪಿಸಿದ ಮೂರ್ತಿಯು ಇಂದು ಜೀವತಳೆದು ಕಣ್ಮುಂದೆ ಅವತರಿಸಲು ಅವಳ ಮನವು ಭಾವೋನ್ಮತ್ತವಾಗಿತ್ತು.ಒಡಲಲ್ಲಿ ಭಾವನೆಗಳ ಮಹಾಪೂರ ಹರಿಯುತ್ತಿದ್ದರೂ ಮಾತುಗಳಿಗೆ ಬರ ಬಂದು ಮೌನವೇ ಪ್ರಧಾನವಾಗಿತ್ತು.
“ಹೇಗೆ ಮಾತಿಗೆಳೆಯಲಿ” ಎಂದವಳು ಯೋಚಿಸುತ್ತಿರುವಾಗಲೇ ಮೂಡಿಬಂದಿತು ಅವನ ಮಾರ್ದವಧ್ವನಿ…
“ಮೂರು ವರ್ಷವೇ ಕಳೆದು ಹೋಯಿತಲ್ಲ ಅಲ್ಲವೇ!?!”
” ನಿಜ, ಕಳೆದು ಹೋದ ಸಮಯವನ್ನು ತಡೆಯಲು ಅದು ಯಾರೊಬ್ಬರ ಸ್ವತ್ತು ಅಲ್ಲವಲ್ಲ” ಎಂದಷ್ಟೇ ಹೇಳಿ ಸುಮ್ಮನಾದಳು. ಆ ಮೌನಕ್ಕೆ ಬಹುಘನವಾದ ಭಾವ ಸಂವೇದನೆಗಳ ತೂಕವಿತ್ತು. ಇರ್ವರ ಮನಸಿನ ರಂಗಮಂಚಿಕೆಗಳು ಎರಡಾದರೂ, ಅಲ್ಲಿ ನಡೆಯುತ್ತಿದುದು ಒಂದೇ ರಸಸನ್ನಿವೇಷ. ಅದರಲ್ಲಿ ಅವಳೇ ಕಥಾನಾಯಕಿ, ಅವನೇ ಕಥಾನಾಯಕ… ಭಾವತುಮುಲಕ್ಕೆ ವಶವಾಗಿಯೋ, ಬೆಟ್ಟದೇರಿನ ಆಯಾಸಕ್ಕಾಗಿಯೋ ಮಾತೇ ಹೊರಡುತ್ತಿರಲಿಲ್ಲ. ನೀರಿನಲ್ಲಿ ಮೀನು ಈಜುವಷ್ಟೇ ಸಲೀಸಾಗಿ ಅವನು ನೆಲವನ್ನು ಹಾರಿ ಹಾರಿ ಮುಂದುವರೆಯುತ್ತಿದ್ದ. ಅವಳೋ, ಹೆಜ್ಜೆಹೆಜ್ಜೆಗೂ ಸಾವರಿಸಿಕೊಂಡು ನಿಧಾನವಾಗಿ ಸಾಗುತ್ತಿದ್ದಳು. ಈ ಸಹಪ್ರಯಾಣದಲ್ಲಿ, ಅವಳ ಮನಸ್ಸನ್ನು ಸೆರೆ ಹಿಡಿದ ಒಂದೇ ಒಂದು ನೋಟವೆಂದರೆ ಅವನ ಪದ್ಮಪಾದಗಳು.
ಗಿರಿಪಾದದಿಂದ ಗಿರಿಯಂಚಿನವರೆಗಿನ ಇಕ್ಕಟ್ಟಾದ ಮಾರ್ಗವನ್ನು ಅವನು ನಗ್ನಪಾದಗಳಿಂದಲೇ ಪೂರೈಸಿದ್ದ.
ಆ ಚರಣಗಳು, ಕೆಂಪುಮಣ್ಣಿನಿಂದ ಮೆತ್ತಿ,ಅಲ್ಲಲ್ಲಿ ಒಣಗಿ, ಕಾಲ್ಬೆರಳ ಸಂದುಗಳೆಲ್ಲ ಮುರಿದ ಹುಲ್ಲು ಎಲೆಗಳಿಂದ
ಶೃಂಗಾರಗೊಂಡಂತೆ ಕಾಣುತ್ತಿದ್ದವು. ಅವನು ಕಾಲಿಟ್ಟಲ್ಲೆಲ್ಲ, ಭುವಿಯು ತಾನೇ ಕೈದೋರಿ ಮುಂದಿನ ಹೆಜ್ಜೆಯನ್ನು ಇರಿಸುತ್ತಾಳೋ ಎಂದೆನಿಸುತ್ತಿತ್ತು. “ಅವನ”ಮತ್ತು “ಅವನಿ”ಯ ಮಧ್ಯೆ ಅಸಾಮಾನ್ಯ ಅನಿರ್ವಚನೀಯ ಅನ್ಯೋನ್ಯತೆಯಿದ್ದಂತೆ ಭಾಸವಾಗುತ್ತಿತ್ತು. ಪ್ರತಿ ಹೆಜ್ಜೆಗೂ ಆ ಅನ್ಯೋನ್ಯತೆ ಗಾಢವಾಗುವಂತೆ ಕಾಣುತ್ತಿತ್ತು. ಈ ಸೋಜಿಗವನ್ನು ಕಂಡು ಅವಳು ಮನದುಂಬಿ ಹರ್ಷಿಸುತ್ತಿರಲು…
ಬೆಟ್ಟದ ತುದಿಯನ್ನು ಸಮೀಪಿಸಿದಂತೆ ಕಲ್ಲಿನ ಗೋಪುರವೊಂದು ಗೋಚರವಾಯಿತು. ಅದು ಕಂಡೊಡನೆ ಹುಮ್ಮಸ್ಸು ಇಮ್ಮಡಿಯಾಗಿ ಕಾಲ್ನಡಿಗೆಯಲ್ಲಿ ಅದರ ಪ್ರಭಾವ ಕಂಡಿತು.
ಎಲ್ಲ ದುಃಖ ದುಮ್ಮಾನಗಳು,ಕಷ್ಟ ಕಾರ್ಪಣ್ಯಗಳು ಶಿವನ ಆಶ್ರಯದಲ್ಲಿ ಕೊನೆಗೊಳ್ಳುವಂತೆ ಇವರ ಈ ಕಡಿದಾದ ಪಯಣ ಶಿವಾಲಯದ ಮಂಟಪದಲ್ಲಿ ತೆರವಾಯಿತು. ಮಹಾದೇವನ ಸನ್ನಿಧಿಯಲ್ಲಿ ಅವನು ಭಕ್ತಿಪರವಶನಾಗಿ ಕಣ್ಮುಚ್ಚಿದ್ದರೆ, ಅವಳ ಚಿತ್ತವಿನ್ನೂ ಅವನ ಪಾದದಡಿಗಳನ್ನು ನಿರುಕಿಸುವದರಲ್ಲೇ ಮಗ್ನವಾಗಿತ್ತು. ಅವಳ ಮನದಲ್ಲಿ ಏನೋ ಅಸ್ಪಷ್ಟವಾದ ಭಾವವೊಂದು ಉದಯಿಸುತ್ತಿತ್ತು, ಅವನೆಡೆಗೆ ಪೂಜ್ಯತೆಯೋ,ಆರಾಧನೆಯೋ,ಸಮರ್ಪಣೆಯೋ ಹೇಳಲಾಗದು. ಆ ಅದ್ಭುತ ಅನುಭವದಲ್ಲಿ ತನ್ನ ಇರುವನ್ನೇ ಅವಳು ಮರೆತುಹೋಗಿದ್ದಳು.
ಘಂಟಾನಾದದಿಂದ ತನ್ಮಯತೆಗೆ ಭಂಗಬರಲು ಸರಸರನೆ ಅವನ ಮುಂಗೈಗೆ ತನ್ನ ಕೈ ನೀಡಿ ಕಲ್ಲು ಚಪ್ಪರದೆಡೆ ಕರೆದೊಯ್ದು ಎತ್ತರದ ಆಸನದಲ್ಲಿ ಅವನನ್ನು ಕೂರಿಸಿದಳು. ಶಿವನ ಜಲಾಭಿಷೇಕದಲ್ಲಿ ತೊಡಗಿದ್ದ ಕಲಶವನ್ನು ಹೊತ್ತು ತಂದು, ಆ ಪವಿತ್ರಜಲದಿಂದ ತನ್ನ ಹಸುಗೂಸನ್ನು ಮಜ್ಜನಗೈಯುವಂತೆ, ಅವನ ಪಾದಗಳನ್ನು ನೀವಿ ನೀವಿ ತೊಳೆದಳು! ಈ ಕಾರ್ಯದಲ್ಲಿ ತೊಡಗಿದ ಅವಳ ಪ್ರಸನ್ನಚಿತ್ತ ಮುಖವನ್ನು ಕಂಡು ಅವನು ಬೆಕ್ಕಸ ಬೆರಗಾದನು. ಅನೌಚಿತ ಕಾರ್ಯದಿಂದ ದಿಗಿಲುಗೊಂಡ ಅವನು, ಮೇಲೆಳಲು ಯತ್ನಿಸಿ ತಡವರಿಸಿದನು. ಆದರೆ ಕಂಬನಿದುಂಬಿದ ಅವಳ ಕಂಗಳನ್ನು ವೀಕ್ಷಿಸಿ ಕರಗಿ ನೀರಾಗಿಹೋದನು. ಅವಳ ಈ ಭಾವಸಮಾಧಿಯ ಪರಾಕಾಷ್ಠೆಗೆ ಮೂಕಪ್ರೇಕ್ಷಕನಾದನು. ತನಗರಿವಿಲ್ಲದೆಯೇ ಈ ಸನ್ನಿವೇಶದ ಪಾತ್ರವಾಗಿ ಹೋದನು.
ಮುಂದಿನ ಪಾದಪೂಜೆಯೆಲ್ಲ ಯಥಾವತ್ತಾಗಿ ನೆರವೇರಿತು. ವಿಭೂತಿರೂಪದಲ್ಲಿ ಅದೇ ಮಣ್ಣಿನ ಹುಡಿಯೂ, ಶ್ರೀಗಂಧದ ರೂಪದಲ್ಲಿ ಅವಳ ಹಣೆಯ ಸಿಂಧೂರವೂ ಲೇಪನವಾಯಿತು. ಕಣ್ಣಹನಿಗಳ ಪುಷ್ಪಾರ್ಚನೆಯಾದಮೇಲೆ ಕಣ್ಣೆವೆಗಳಿಂದ ಚರಣಸ್ಪರ್ಷವಾಗಿಯೂ ಪೂರೈಸಿತು. ಅವಳ ಮಡಿಲಲ್ಲಿ ಆ ಚರಣಕಮಲಗಳು ತಮ್ಮ ಮೂಲಸ್ಥಾನ ಸೇರಿದಂತೆಯೇ ಅನಾವರಿಸಿದ್ದವು. ಅವಳ ಭಾವ ಸೆಳೆತದ ರಭಸಕ್ಕೆ ಒಳಗಾದ ಅವನು ಮರುಕ್ಷಣವೇ ಅವಳನ್ನು ತನ್ನ ನೀಳ ತೋಳ್ಗಳಲ್ಲಿ ಬಂಧಿಸಿದನು. ಸುತ್ತಲಿನ ಸೃಷ್ಟಿಯು ಕೌತುಕದಿಂದ ಈ ಭಾವವೈಚಿತ್ರ್ಯವನ್ನು ವೀಕ್ಷಿಸುತ್ತಿತ್ತು. ಗುಡಿಯೊಳಗಿನ ಶಿವಲಿಂಗ ನಸುನಕ್ಕ ಹಾಗೆ ಭಾಸವಾಗುತ್ತಿತ್ತು, ಸಮಯದ ಚಕ್ರ “ಈ ಕ್ಷಣ” ತಾನು ಅವರಿಬ್ಬರ ಸ್ವತ್ತು ಎಂದೊಪ್ಪಿಕೊಂಡು ಸ್ಥಗಿತವಾಗಿ ಹೋಗಿತ್ತು.
ಪ್ರಸಂಗ ೨
ಮುಸ್ಸಂಜೆಯ ಆ ವಾತಾವರಣ ಮನಸಿಗೆ ಬಲು ಆಹ್ಲಾದಕರವಾಗಿತ್ತು. ಸಂಧ್ಯಾ ರವಿಯು, ಕ್ಷಿತಿಜದಿಂದಾಚೆಯ ಇನ್ನೊಂದು ನಾಡನ್ನು ಬೆಳಗಲು ತೆರಳಿ ಗಂಟೆಯೇ ಸಂದಿತ್ತು. ಅದಕ್ಕೆ ಸಾಕ್ಷಿಯೆಂಬಂತೆ ಪಡುವಣದ ಅಂಗಳವು ಕೇಸರಿ ಯಿಂದ ಕಪ್ಪು ಬಣ್ಣಕ್ಕೆ ತಿರುಗುತ್ತಿತ್ತು. ತಾರೆಗಳು ಮಿನಿ ಮಿನುಗಿ ತಮ್ಮ ಇರುವನ್ನು ಬಿತ್ತರಿಸುತ್ತಿದ್ದವು. ಈ ಗೋಧೂಳಿಯ ಸಮಯ ಅವಳಿಗೆ ಬಲು ಅಚ್ಚುಮೆಚ್ಚು. ಪ್ರತಿದಿನ ಸಂಜೆ ಮಂಗಳಾರತಿಯ ನಂತರ ಕಣ್ಮುಚ್ಚಿ ಅವನನ್ನು ನೆನೆದು ಪ್ರಾರ್ಥಿಸುತ್ತಿದ್ದಳು. ಹೇಳಲಾಗದೇ ಉಳಿದಮಾತುಗಳನ್ನು ಮನದಲ್ಲೇ ಕನವರಿಸಿ ನಿಡುಸಿರುಗೈಯ್ಯುತ್ತಿದ್ದಳು.ಆದರೆ ಈ ಸಂಜೆಯ ರಮ್ಯತೆಯೇ ಬೇರೆಯಾಗಿತ್ತು!ಅವಳ ನಯನನೇತ್ರದಲ್ಲಿ, ಚಿತ್ತ ಭಿತ್ತಿಯಲ್ಲಿ ಪರೋಕ್ಷವಾಗಷ್ಟೇ ಅಲ್ಲದೆ ಪ್ರತ್ಯಕ್ಷವಾಗಿಯೂ ಅವನು ಅವಳೊಡನೆ ಇದ್ದ. ಅವನ ಏದುಸಿರು ಅವಳಿಗೆ ಕೇಳಿಸುವಷ್ಟು ಹತ್ತಿರ ,ಸೋಕಿದರೆ ನವಿರೇಳಿಸುವಷ್ಟು ಹತ್ತಿರ ,ಅವನ ಕಂಗಳ ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಹೊಳೆಯುವಷ್ಟು ಹತ್ತಿರ! ಕಳೆದ ಹಲವಾರು ಗಂಟೆಗಳ ಕಾಲ ತಲಕಾಡಿನ ಮರಳಿನಲ್ಲಿ ಅಲೆದಲೆದು ಬಸವಳಿದಿದ್ದರು. ಆ ದಣಿವಿನಲ್ಲೂ ಕೂಡ ಮತ್ತೆ ಮತ್ತೆ ಅಲೆಯಲು ಪ್ರೇರೇಪಿಸುವ ವಿಶಿಷ್ಟವಾದ ಸೆಳೆತವೊಂದಿತ್ತು. ಕಳೆದ ಬಾರಿ ಹಲವು ವರ್ಷಗಳ ಹಿಂದೆ ಸ್ನೇಹಿತರ ತಂಡದೊಂದಿಗೆ ಸುತ್ತುವಾಗ ಇದೇ ತಾಣ, ಇಷ್ಟೊಂದು ಮೋಹಕವಾಗಿ ಸೊಗಯಿಸಿರಲಿಲ್ಲ. ಆಗಿನ ಹದಿಹರೆಯದ ಲಘುಲಹರಿಯೇ ಬೇರೆ, ಈಗಿನ ಪ್ರಬುದ್ಧ ಮೈತ್ರಿಯ ವೈಖರಿಯೇ ಬೇರೆ. ಮರಳು ಹಾಸಿನ ಮೇಲೆ ಕುಳಿತು, ಪಶ್ಚಿಮದಲ್ಲಿ ಪ್ರಬಲವಾಗಿ ಹೊಳೆಯುತ್ತಿದ್ದ ಈವ್ನಿಂಗ್ ಸ್ಟಾರ್ ದೆಡೆಗೆ ಇಬ್ಬರ ಚಿತ್ತ ನೆಟ್ಟಿತ್ತು.
ಪ್ರವಾಸಿಗರು, ಶಿವಭಕ್ತರು, ದೈನಂದಿನ ವ್ಯಾಪಾರಸ್ಥರು, ಹಕ್ಕಿಪಿಕ್ಕಿಗಳು, ಬ್ರಾಹ್ಮಣಪೂಜಾರಿಯು ಅಷ್ಟೇ ಅಲ್ಲ,
ಗರ್ಭಗುಡಿಯೊಳಗಿನ ಪರಶಿವನೂ ಕೂಡ ದಿನದ ದಣಿವನ್ನಾರಿಸಿಕೊಳ್ಳುವ ತಯಾರಿಯಲ್ಲಿದ್ದನು. ಸಂಸಾರ ದೂಡಿತರುವ “ನಾಳೆ”ಯೆಂಬ ಭರವಸೆಗೂ, ಅವಘಡಕ್ಕೂ ಟೊಂಕ ಕಟ್ಟಿ ನಿಲ್ಲಬೇಡವೇ! ಆದರೆ ಒಕ್ಕೊರಲಿನಲಿ ಧ್ವನಿಸುತ್ತಿದ್ದ ಈ ಎರಡು ಹೃದಯಗಳಿಗೆ ಸಧ್ಯಕ್ಕೆ “ನಾಳೆ”ಯ ಚಿಂತೆಯಿರಲಿಲ್ಲ. ದೈವಿಕೃಪೆಯಿಂದ ಘಟಿಸಿದ
ಈ ಅಮೃತಘಳಿಗೆಯ ಆಸ್ವಾದನೆಯಲ್ಲಿ ಮನದಣಿಯೇ ಕೂಡಿ ತೊಡಗಿದ್ದವು. ಸುತ್ತಲೆಲ್ಲ ಕತ್ತಲು ಹೆಪ್ಪುಗಟ್ಟುತ್ತಿದ್ದರೂ, ರಾತ್ರಿದೇವಿ ತನ್ನ ಕಪ್ಪು ಸೆರಗನ್ನು ಎಲ್ಲೆಡೆ ಹಾಸುತ್ತಿದ್ದರೂ ಅವರಿಬ್ಬರ ಮುಖದ ಮೇಲೆ ಕೀರ್ತಿನಾರಾಯಣ ದೇವಸ್ಥಾನದ ಬೆಳಕು ಚೆಲ್ಲಿ ನಲಿದಾಡುತ್ತಿತ್ತು. ಅಂತರಂಗದ ಭಾವನೆಗಳೆಲ್ಲ ಮುಖದಲ್ಲಿ ಪ್ರಸ್ತುತವಾಗಿ ವಿಶೇಷ ಮೆರುಗನ್ನೇ ತಂದಿತ್ತು.
“ನಾನಿರುವ ಊರಲ್ಲಿ ಆಕಾಶ, ಅದೆಷ್ಟು ವಿಸ್ತಾರವಾಗಿ ಕಾಣ್ತದೆ ಗೊತ್ತಾ? ಆ ಬಾನಿನಂಚಿನಿಂದ ಈ ಬಾನಿನಂಚಿನವರೆಗಿನ ಅಗಾಧತೆಯನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬ ಕಣೋ!”
ಅವಳ ಮಾತಿಗೆ ಬರಿ ಹೂಂಗುಟ್ಟಿ ಅವನು ಮತ್ತೇ ದೃಷ್ಟಿಯನ್ನು ಆಗಸದೆಡೆಗೆ ನೆಟ್ಟ. ಭಾವಪ್ರವಾಹ ತುಂಬಿ ಬಂದಾಗ ಅವನು ಮೌನಕ್ಕೆ ಶರಣಾಗುವುದನ್ನು ಅವಳು ಮನಃ ಪೂರ್ತಿ ಬಲ್ಲಳು, ಒಪ್ಪಿಕೊಂಡಿರುವಳು ಕೂಡ! ಸಂಭಾಷಣೆಯಲ್ಲಿ ತೊಡಗದಿದ್ದರೂ ಅವಳ ಧ್ವನಿಯ ಅನುರಣಿತಕ್ಕೆ ಅವನು ಬಯಸಿಹನು ಎಂದರಿತು ಮತ್ತೇ ಮುಂದುವರೆಸಿದಳು.
” ಈ ವಿಸ್ಮಯಶೀಲ ನಿಸರ್ಗಕ್ಕೂ ನಿನ್ನ ಘನತೂಕದ ವ್ಯಕ್ತಿತ್ವಕ್ಕೂ ತುಂಬಾ ಸಾಮ್ಯವುಂಟು ಕಣೋ! ಈ ಅಗಾಧ ಆಕಾಶದಂತೆಯೇ, ಆ ಅಗಣಿತ ನಕ್ಷತ್ರಗಳೂ, ಅಪರಿಮಿತ ಆಳವುಳ್ಳ ಸಾಗರವೂ, ಗಗನಚುಂಬಿ ಪರ್ವತ ಶಿಖರಗಳೂ, ಅದ್ವಿತೀಯ ಶಕ್ತಿಸಾರವಾದ ಅಗ್ನಿಯೂ,ಕೈಗೆಟುಕದ ಸೂರ್ಯೋದಯ-ಅಸ್ತಗಳೂ; ಎಲ್ಲವೂ , ಎಲ್ಲವೂ ನಿನ್ನ ಇರುವಿನ ನೆನಪನ್ನು ಹೊತ್ತು ತರುತ್ತವೆ. ಈ ಸಾಂದರ್ಭಿಕ ಮಾತು, ಅತಿರೇಕವೆಂದೆನಿದರೂ ಸುಳ್ಳಲ್ಲ. ನೀನೆಂದೂ ನಿನ್ನ ಘನತೆಗೆ ವ್ಯತಿರಿಕ್ತವಾಗಿ ನಡೆದಿಲ್ಲವಾದರೂ, ನಿನ್ನ ಚಿತ್ರ ನನ್ನ ಸ್ಮೃತಿ ಪಟಲದಲ್ಲಿ ಯಾವಾಗಲೂ ‘ಅನಾದಿಅನಂತ ಯೋಗೇಶ್ವರ’ ನಾಗಿಯೇ ಇದ್ದೀತು.”
ಪ್ರತ್ಯುತ್ತರವಾಗಿ ಅವಳಿಗೆ ಮತ್ತೆ ಮೌನವೇ ದೊರಕಿತು. ಆದರೆ ಈ ಬಾರಿ ಅವನ ಕಂಗಳಲ್ಲಿ ಅವಳ ಪ್ರತಿಬಿಂಬದ ಬದಲು ಅಮೃತ ಬಿಂದುಗಳ ಕೊಳವೊಂದು ಕಂಡಿತು. ತುಸುಕಾಲ ಮಾತುಗಳ ಅವಶ್ಯಕತೆ ಇಲ್ಲವಾಗಿ ಮೌನವೇ ಸನ್ನಿವೇಶದ ಅಧಿಪತ್ಯವನ್ನು ವಹಿಸಿತ್ತು. ರಾತ್ರಿಯಲ್ಲಿ ಮಾತ್ರ ಕೇಳುವ ಕೀಟಗಳ ಜೀರ್ದನಿ, ಬೀಸುತ್ತಿದ್ದ ಗಾಳಿಗೆ ತೂಗುತ್ತಿದ್ದ ಮರಗಳ ಪಿಸುದನಿ, ಹತ್ತಿರದಲ್ಲೇ ಹರಿಯುತ್ತಿದ್ದ ತಾಯಿಕಾವೇರಿಯ ಮಂಜುಳದನಿ, ದೂರದಲ್ಲೆಲ್ಲೋ ಸೀಳಿ ಬರುತ್ತಿದ್ದ ನರಿಯ ಊಳುದನಿ ಇವೆಲ್ಲವೂ ಆ ನೀರವತೆಯ ಅವಿಭಾಜ್ಯ ತರಂಗಗಳಾಗಿದ್ದವು. ಇವುಗಳ ಮಧ್ಯೆ ನಿಟ್ಟುಸಿರುಗಳ ಸ್ವರವೂ ಆಗೀಗ ಕೇಳಿಬರುತ್ತಿತ್ತು.
” ನಮ್ಮಿಬ್ಬರ ಕವಲೊಡೆದ ದಾರಿಗಳನ್ನು ಮತ್ತೆ ಸಮಾನಾಂತರಗೊಳಿಸಿದ ಚೈತನ್ಯ ಶಕ್ತಿ ಯಾವುದೋ…?” ಎಂದವಳ ಪ್ರಶ್ನೆಗೆ
” ಆ ಶಕ್ತಿ ಯಾವುದೇ ಇರಲಿ. ಈ ನಮ್ಮಿಬ್ಬರ ವಿಶಿಷ್ಟವಾದ ಸ್ನೇಹ, ಇರುವ ಹಾಗೆಯೇ ಅತ್ಯಂತ ಮಧುರವಾಗಿದೆ. ಜಗತ್ತಿನ ಸಂಶೋಧಕ ಕಣ್ಣಿಗೆ ನಾವು ಸತಿಪತಿಯಾಗದಿದ್ದರೂ, ನಮ್ಮನಮ್ಮ ಅಂತರ್ ದೃಷ್ಟಿಯಲ್ಲಿ ನಮಗೆ ಅದರ ಅನಿವಾರ್ಯತೆ ಇಲ್ಲ. ಈ ಸಂಬಂಧ, ಅದಕ್ಕಿಂತಲೂ ಉತ್ಕೃಷ್ಟವಾದದ್ದು, ಭವಬಂಧನದ ಮೇರೆ ಮೀರಿದ್ದು.
ಇಲ್ಲಿ ಬೇಡಿಕೆ, ಅಪೇಕ್ಷೆ, ನಿಗ್ರಹ ,ಪೂರ್ವಾಗ್ರಹ ಇತ್ಯಾದಿ ಋಣಾತ್ಮಕ ಗುಣಗಳಿಗೆ ಅವಕಾಶವಿಲ್ಲ. ಬರೀ ನಿಃಸ್ವಾರ್ಥವಾದ, ನಿಃವ್ಯಾಜ್ಯವಾದ ಅನುರಾಗ , ಸಾದರನೀಯ ಆರಾಧನೆ ಮತ್ತು ಹೃತ್ಪೂರ್ವಕ ಸಮರ್ಪಣೆಯುಳ್ಳ ಬಾಂಧವ್ಯದ ಬೆಸುಗೆಯುಂಟು. ಅದೇ ಕಾರಣಕ್ಕಾಗಿಯೇ ಈ ನಂಟು, ನಿಯಮಾವಳಿ/ ಕಟ್ಟುಪಾಡುಗಳಿಗೆ ಒಳಪಡದೇ ಯಾವುದೋ ಕ್ಷುಲ್ಲಕ ಪರಿಧಿಗೋ, ಪ್ರಮಾಣಕ್ಕೊ, ಪುರಾವೆಗಳಿಗೊ ಸಿಲುಕದೇ ಅತೀತವಾದದ್ದು!
ಈ ಒಡನಾಟ, ವಿಶ್ವವಿನ್ಯಾಸದಷ್ಟೇ ಸೋಜಿಗವಾಗಿರುವುದು, ಸೂರ್ಯಚಂದ್ರ ನಕ್ಷತ್ರಗಳಷ್ಟೇ ನಿತ್ಯನಿರಂತರವಾಗಿರುವುದು. ಜೀವನದಿಯಂತೆ ನಮ್ಮಿಬ್ಬರನ್ನು ಸಾಕಿಸಲಹುವುದು. ಇಷ್ಟು ಸಮರ್ಥನೆ ಸಾಕಲ್ಲವೇ ನಮ್ಮಿಬ್ಬರ ಈ ಹುಚ್ಚು ಪ್ರೀತಿಗೆ! ಅಷ್ಟೇ ಅಲ್ಲದೆ, ‘ಅವನ’ ಇಚ್ಛೆಯನ್ನು ಮೀರಲು ನಾನ್ಯಾರು, ನೀನ್ಯಾರು…!” ಎಂದುತ್ತರಿಸಿ ಗದ್ಗದಕಂಠದಲ್ಲಿ ಬಿಕ್ಕಿದನು.
ಯಾವತ್ತೂ ತನ್ನ ಮನಸಿನ ಹತೋಟಿಯನ್ನು ಕಳೆದುಕೊಳ್ಳದೇ, ತಟಸ್ಥನಾಗಿದ್ದವನ ರಸಾವೇಶವನ್ನು ಇಂದು ಕಂಡು ಅವಳು ದಿಙ್ಮೂಢಳಾದಳು. ಇನ್ನು ಮಾತು ವ್ಯರ್ಥವೆನಿಸಿ ಪೂರ್ಣವಿರಾಮವಿರಿಸಿದಳು. ಅವನೆದೆಯ ಹರಹುವನ್ನು ತನ್ನ ತೋಳುಗಳಿಂದ ಬಳಸಿ ಹೆಗಲಿಗೊರಗಿದಳು. ಅವನಿಗರಿವಿಲ್ಲದಯೇ ಬೆರಳುಗಳು ಅವಳ ತಲೆಯನ್ನು ನೇವರಿಸುತ್ತಿದ್ದವು. ಸಮಯವು ಈ ಸಂವಾದಕ್ಕೆ ಸಾಕ್ಷಿಯಾಗುವದರ ಜೊತೆಗೆ ಮುಸ್ಸಂಜೆಯನ್ನು ನಡುರಾತ್ರಿಯನ್ನಾಗಿ ಮಾಡಿತ್ತು. ಉಳಿದ ನಿಶಾಘಳಿಗೆಗಳನ್ನು ಮರಳಿನ ಹಾಸಿನ ಮೇಲೆ ಅಂಗಾತವಾಗಿ ವಿಶ್ರಾಂತಿಸಿ ಪ್ರಕೃತಿಯ ಮಡಿಲಲ್ಲಿ ಪರವಶವಾದರು.
– ದೀಪಾ ಸಣ್ಣಕ್ಕಿ
