ಅನಿವಾಸಿಯ ನೆಚ್ಚಿನ ಓದುಗರೇ !
ಈ ವಾರದ ‘ಹಸಿರು ಉಸಿರು’ ಪ್ರವರ್ಗದ ವಿಶೇಷ ಸಾಪ್ತಾಹಿಕ ಸಂಚಿಕೆಯಲ್ಲಿ ಕಳೆದ ಎರಡು ವರ್ಷಗಳಿಂದ ಓಟಗಾರ್ತಿ, ಟೆಲ್ಫೋರ್ಡ್ ನಿವಾಸಿಯಾದ ಶಾರದ ಸಕ್ರೆಮಠ್ ಅವರು ಸೀರೆಯಲ್ಲಿ ೫ಕಿ.ಮೀ , ೧೦ ಕಿ.ಮೀ ಮ್ಯಾರಥಾನ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಹೆಮ್ಮೆಯ ಕನ್ನಡತಿಯ ರೋಚಕ ಲೇಖನ ನಿಮ್ಮ ಮುಂದೆ. ಓದಿ ಪ್ರತಿಕ್ರಿಯಿಸಿ. -ಸವಿ.ಸಂ
ನನ್ನ ಹೆಸರು ಶಾರದ ಸಕ್ರೆಮಠ್. ಯುನೈಟೆಡ್ ಕಿಂಗ್ಡಂ ನ ಟೆಲ್ಫೋರ್ಡ್ ನಿವಾಸಿ. ಹಾಗೇರ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯಲ್ಲಿ ಸಹಾಯಕ ಲೆಕ್ಕಿಗಳಾಗಿ ಕೆಲಸ ಮಾಡುತ್ತಿದೇನೆ.
ಬಾಲ್ಯದಿಂದಲೂ ನಾನೋರ್ವ ಪರಿಸರ ಪ್ರೇಮಿಯಾಗಿದ್ದು ಧೀರ್ಘಚಾರಣ ಮಾಡುವುದೆಂದರೆ ಬಹುಉತ್ಸಾಹಿ. ಕರ್ನಾಟಕದ ಖ್ಯಾತ ಕವಿಗಳಾದ ಬೇ೦ದ್ರೆ ಅಜ್ಜರ ತವರೂರಾದ ಧಾರವಾಡ ಜಿಲ್ಲೆಯಲ್ಲಿರುವ ಕರ್ನಾಟಕ್ ಕಾಲೇಜ್ ಧಾರವಾಡ (KCD) ಒಳವಲಯದಲ್ಲಿ ಹಾಗು ಡಿ.ಸಿ ಕಾಂಪೌಂಡಿನೊಳಗೆ ಅಮ್ಮನೊಡಗೂಡಿ ಬಾಲ್ಯದಿಂದಲೂ ಧೀರ್ಘಚರಣಿಸಿದ್ದು ಇನ್ನೂ ಸವಿನೆನಪಾಗಿ ಉಳಿದಿವೆ. ಯಾವುದೇ ಸತ್ಕಾರ್ಯ ಪ್ರಾರಂಭಿಸಲು ಶ್ರೀಗಣೇಶನ ಆಶೀರ್ವಾದ ಅತ್ಯವಶ್ಯಕ ಅಲ್ಲವೇ? ಹಾಗಾಗಿ ನನ್ನ ಈ ಚಾರಣ ಪ್ರಾರಂಭಿಸಿದ್ದು KCD ವೃತ್ತದಲ್ಲಿರುವ ಗಣೇಶನ ದೇವಸ್ಥಾನದಿಂದ. ಪ್ರಾಕೃತಿಕ ಪರಿಸರದ ಆವರಣದಲ್ಲಿ ಚಾರಣಿಸುವುದರಿಂದ ದೈಹಿಕ ಚೈತನ್ಯ ಮತ್ತಷ್ಟು ಇಮ್ಮಡಿಯಾಗುವುದು.
ಮೊದಲು ಚಾರಣದಿಂದ ಪ್ರಾರಂಭಿಸಿ ನಂತರ ಓಡ ಬೇಕೆಂದು ನಿರ್ಧರಿಸಿದೆ. ಪ್ರಾರಂಭದಲ್ಲಿ ಕ್ಲಿಷ್ಟಕರವಾದರೂ ಅದನ್ನು ಸವಾಲಾಗಿ ತೆಗೆದುಕೊಂಡು ದಿಟ್ಟ ಮನಸ್ಸು ಮಾಡಿ ಪ್ರಥಮವಾಗಿ ಅಕ್ಟೋಬರ್,೨೦೧೯ ರಲ್ಲಿ ೫ಕಿ.ಮೀ ಓಟದ ಸಾಹಸಕ್ಕಿಳಿದು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರಿಂದ ನನ್ನ ಆತ್ಮಸ್ತೈರ್ಯಮತ್ತಷ್ಟು ಹೆಚ್ಚು ಮಾಡಿತು. ತದ ನಂತರ ಕೊಂಚ ವಿಭಿನ್ನವಾಗಿ, ವಿಶೇಷವಾಗಿ ಮಾಡಬೇಕೆಂದು ಅನಿಸಿತು. ಹೇಗೆ ಎಂದು ಯೋಚನೆ ಮಾಡುವಾಗ ಹೊಳೆದದ್ದು ನನ್ನ ವಸ್ತ್ರಾಭೂಷಣ. ಓಡುವಾಗ ಸಾಮಾನ್ಯವಾಗಿ ಎಲ್ಲರೂ ಜಾಗಿಂಗ್ ವಸ್ತ್ರದಲ್ಲಿ ಓಡುತ್ತಾರೆ. ಹಾಗೆ ಮಾಡುತ್ತಿದ್ದವಳು ಸೀರೆಯಲ್ಲಿ ಮಾಡಬೇಕೆಂದು ಹೊಳಿಯಿತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಸೀರೆ ನಾರಿಯ ಸಾಂಕೇತಿಕ ಮಹತ್ವದ ವಸ್ತ್ರವಾಗಿದ್ದು ಅದರದೆಯಾದ ವೈಶಿಷ್ಟ್ಯ ಹೊಂದಿದೆ.ಸೀರೆ ಉಡುವುದರಿಂದ ನಾರಿಯ ಸೌಂದರ್ಯ ಇಮ್ಮಡಿಯಾಗುವುದು. ಸೀರೆ ಉಡುವಾಗೆಲ್ಲ ತಾಯಿ,ತವರು ಹಾಗು ತಾಯ್ನಾಡಿನ ಹಂಬಲ ಹೆಚ್ಚಾಗುವುದು. ಸೀರೆ ಉಡುವುದೆಂದರೆ ಏನೋ ಸಂಭ್ರಮ ಸಡಗರ. ಅದರಲ್ಲೂ ಅಮ್ಮನ ಸೀರೆಯೆಂದರೆ ಏನೋ ಮನೋಲ್ಲಾಸ, ಮುದ ನೀಡುವುದು. ಅದರ ಸ್ಪರ್ಶವೇ ಅಮ್ಮ ನಮ್ಮೊಟ್ಟಿಗೆ ಇದ್ದಂತೆ. ತವರಿನ ಸವಿನೆನಪುಗಳು ಕಣ್ಣಮುಂದೆ ಬರುತ್ತವೆ. ನನಗೆ ಸೀರೆಯ ಮೇಲೆ ಅಪಾರ ಒಲವು. ಅದರಲ್ಲೂ ಇಳ್ಕಲ್ ಸೀರೆ, ರೇಷ್ಮೆ, ಮೈಸೂರು ರೇಷ್ಮೆ ಎಂದರೆ ತುಂಬ ಇಷ್ಟ.


ಚಿತ್ರ ಕೃಪೆ : ಶಾರದ ಸಕ್ರೆಮಠ್
ನಮ್ಮ ಭಾರತೀಯ ಇತಿಹಾಸದಲ್ಲಿ ಮಹಿಳೆಯರು ಸೀರೆಯುಟ್ಟು ಯುದ್ಧಭೂಮಿಯಲ್ಲಿ ಹೇಗೆ ಹೋರಾಡುಡ್ಡಿದ್ದಾರೆಂಬುದು ಅಚ್ಚರಿಗೊಳಿಸುವುದು. ಅದನ್ನು ವೀಕ್ಷಿಸುವುದೇ ರೋಚಕ. ಹಾಗಾಗಿ ನನಗೆ ಪ್ರೇರಣೆಯಾಗಿದ್ದು ಕರುನಾಡಿನ ವೀರ ಕಿತ್ತೂರು ರಾಣಿ ಚೆನ್ನಮ್ಮ.
ಹಾಗಾಗಿ ಮೊದಲು ಈ ಸೀರೆಯುಟ್ಟು ಪ್ರಸಿದ್ದವಾದ ಟೆಲ್ಫರ್ಡ್ ಪಾರ್ಕ್ ಓಟದಲ್ಲಿ ಇತರೆ ಮಹಿಳೆಯರೊಂದಿಗೆ ೫ ಕಿ.ಮೀ ಓಟ ಓಡುತ್ತಿದ್ದೆ. ದಿನದಿಂದ ದಿನಕ್ಕೆ ಉತ್ಸುಹಕಳಾಗಿ ಮಾಡುವಾಗ ನನಗೆ ಓಟದ ಆಯೋಜಕರಿಂದ ಹಾಗು ಸಹಓಟಗಾರ್ತಿಯರಿಂದ ಪ್ರಶಂಸೆ ಹಾಗು ಉತ್ತೇಜನ ದೊರೆಯುತ್ತಿತ್ತು. ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸುತ್ತಿತ್ತು. ಏಕೆಂದರೆ ನಮ್ಮ ಟೆಲ್ಫೋರ್ಡ್ ನ ಸ್ಥಳೀಯ ಪತ್ರಿಕೆಯಲ್ಲಿ ಪ್ರತಿ ವಾರ ಪ್ರಕಟವಾಗುತ್ತಿತ್ತು.ಸತತ ಪಾರ್ಕ್ ಓಟದಿಂದ ಕರುನಾಡಿನ ಕಾವಿಡ್ ರಿಲೀಫ್ ಫಂಡ್ ಗಾಗಿ ಫಂಡ್ ಗಳನ್ನೂ ಸಹ ಸಂಗ್ರಹಿಸಿದೆ. ಅಲ್ಲದೆ ನಾನು ಓಡುವಾಗ ಸ್ಪೋರ್ಟ್ಸ್ ಇಂಗ್ಲೆಂಡ್ ತಂಡದವರು ನನ್ನನ್ನು ಗುರುತಿಸಿ ‘ THE GIRL CAN CAMPAIGN’ ಎಂಬ ಕಾರ್ಯಕ್ರಮಕ್ಕೆ ಸಂದರ್ಶನ ನೀಡಲು ಹುರಿದುಂಬಿಸಿದರು. ಈ ಲಕ್ಷ್ಯಗಳು ಪೂರ್ಣಗೊಳಿಸಿ ಯುನೈಟೆಡ್ ಕಿಂಗ್ಡಮ್ ನ ಪ್ರಖ್ಯಾತ ಮ್ಯಾರಥಾನ್ ಗಾಗಿ ಓಡಲು ನನ್ನ ಹೊಂಗನಸ್ಸಾಗಿತ್ತು . ಹಾಗಾಗಿ EDINBURGH MARATHON 2020 ಗಾಗಿ ನೋಂದಾಯಿಸಿ ನನ್ನ ಓಟ ಮತ್ತಷ್ಟು ವೈಶಿಷ್ಟ್ಯ , ವೈವಿಧ್ಯಮಯವಾಗಿರಲೆಂದು ಬರಿಗಾಲಿನಲ್ಲಿ ಅಭ್ಯಾಸ ಮಾಡಲಾರಂಭಿಸಿದೆ. ಇದರಿಂದ ನನ್ನ ಆತ್ಮಸ್ತೈರ್ಯ ಪ್ರಬಲವಾಗುತ್ತ ಹೋಯಿತು.
ಆದರೆ ಕೋವಿಡ್-19 ನ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಸರ್ವರಿಗೂ ಪ್ರಭಾವ ಬೀರಿದಂತೆ ಈ ಓಟಕ್ಕೂ ಸಹ ಕಡಿವಾಣ ಹಾಕಿತು. ಹಾಗಾಗಿ ಮೇ ೨೦೨೧ಕ್ಕೆ ಮುಂದೂಡಲಾಯಿತು. ನಾನು ಕುಗ್ಗದೆ ಇನ್ನಷ್ಟು ಅಭ್ಯಾಸ ಮಾಡತೊಡಗಿದೆ. ಇದಕ್ಕೆ ನನ್ನ ಪತಿ ಹಾಗು ಪುತ್ರನಿಂದ ಬೆಂಬಲ ಪ್ರತಿ ಬಾರಿ ದೊರಕುತ್ತಿತ್ತು. ಪುತ್ರನಂತೂ ನನ್ನ ೧೦ ಕಿ.ಮೀ ಸೀರೆಯೋಟದಲ್ಲಿ ನನ್ನ ಬದಿಯಲ್ಲಿ ತನ್ನ ಸೈಕಲ್ ನಲ್ಲಿ ಚಲಿಸಿ ಉತ್ತೇಜಿಸಿದ. EDINBURGH MARATHON ಓಟವು ವಸ್ತುತಃ ಓಟವಾಗಿ ಬದಲಾಗಿ ಸಹ ಓಟಗಾರರಿಲ್ಲದೆಯೇ ಏಕಾಏಕಿ ಓಡುವುವುದೆಂದು ನಿರ್ಧರಿಸಲಾಯಿತು .



ಚಿತ್ರ ಕೃಪೆ : ಶಾರದ ಸಕ್ರೆಮಠ್
ಆ ದಿನ ನಾನು ಕರುನಾಡ ಧ್ವಜದ ಸಾಂಕೇತಿಕ ಬಣ್ಣಗಳಾದ ಹಳದಿ ಹಾಗು ಕೆಂಪು ಬಣ್ಣದ ಸೀರೆಯನ್ನುಟ್ಟು ನಮ್ಮ ಮನೆಯ ಆಸುಪಾಸಿನಲ್ಲಿರುವ ತೋಟದ ಬೀದಿಗಳಲ್ಲಿ ಓಡಲಾರಂಭಿಸಿದೆ. ಅರ್ಧ ಮ್ಯಾರಥಾನ್ ನಂತರ ತುಂತುರು ಹನಿಗಳು ಪ್ರಾರಂಭವಾಯಿತು. ಆದರೂ ಕುಗ್ಗದೆ ಮುಂದುವರಿಸಿದೆ. ಈ ಪಯಣದುದ್ದಕ್ಕೂ ಪತಿ ಹಾಗು ಪುತ್ರನ ಆಗಾಗಿನ ಆರೈಕೆಯಿಂದ ಹುರಿದುಂಬಿಸಿದರು. ೪೨.೪ ಕಿ.ಮೀ ನ ಈ ಮ್ಯಾರಥಾನ್ ಅಂತೂ ಸ್ಪೂರ್ತಿದಾಯಕವಾಗಿ ಯಶಸ್ವಿಯಾಗಿ ೫ಗಂಟೆ ೫೦ನಿಮಿಷಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಿದೆ. ನಂತರ ನಮ್ಮ ಭಾರತ ದೇಶದ ತಿರಂಗ ಧ್ವಜ ಮೇಲೆತ್ತಿಡಿದು ಛಾಯಾಚಿತ್ರದ ಭಂಗಿಗೆ ಹೆಮ್ಮೆಯಿಂದ ನಿಂತೆ.
ನನ್ನ ಈ ಆತ್ಮಸ್ತೈರ್ಯ ನಮ್ಮ ಭಾರತೀಯ ಸಂಸ್ಕೃತಿಯೊಂದಿಗೆ ಮತ್ತಷ್ಟು ಸಾಹಸಗಳೊಂದಿಗೆ ಮುಗಿಲೇರುವ ಆಸೆ !!
ಸ್ನೇಹಿತರೆ ! ನಮ್ಮ ಸಂಸ್ಕೃತಿ ನಮ್ಮ ಹಿರಿಮೆ ನಮ್ಮ ಅಸ್ತಿತ್ವ .
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ !
ಜೈ ಕರ್ನಾಟಕ ಜೈ ಹಿಂದ್ .
–ಶಾರದ ಸಕ್ರೆಮಠ್
ಕೆಹನಾ ಕ್ಯಾ ಚಾಹತೇ ಹೋ? ಜೋ ಭೀ ಹೋ ಸೊಚ್ ಕೆ ಕಹೋ! ಅನುವಂತೆ ನೀವು ಮಂಥನ ನಡೆಸಿದ ಕುರುಹು ೨೪ ತಾಸು ತಡವಾಗಿ ಬರೆದಿದ್ದರ ಮೇಲೆಯೇ…
@Rama Murthy sir, thank you for your tireless efforts and dedication to researching historical subjects and bringing to life the…
On behalf of Shri Ramamurthy I am posting his comment, addressed to the editor: “ ರಾಧಿಕ, ಶ್ರೀವತ್ಸ ದೇಸಾಯಿ ಹೇಳಿದಂತೆ ನನ್ನ…
ನೂರ್ ಇನಾಯತ್ ಖಾನ್ ಎನ್ನುವ ಮಹಿಳೆ ಟೀನೇಜ್ ಆಗುತ್ತಿದ್ದಂತೆಯೇ ತಂದೆಯನ್ನು ಕಳೆದುಕೊಂಡು ಜೀವನದಲ್ಲಿ ಅನೇಕ ಕಷ್ಟಗಳನ್ನೆದುರಿಸಿ ದೇಶಕ್ಕಾಗಿ ತನ್ನ ಜೀವವನ್ನೇ ತೆತ್ತ ಈ ಹುತಾತ್ಮಳ ಕಥೆ ನಿಜವಾಗಿಯೂ…

Wow! And WOW! ಅಷ್ಟೇ.