ಸಂಪಾದಕೀಯ ರುಚಿಯಾದ ಅಡಿಗೆಯನ್ನು ಮಾಡುವದು ಒಂದು ಕಲೆಯಾದರೆ, ಮಾಡಿದ ರೀತಿಯನ್ನು ಬರೆದು, ಅಷ್ಟೇ ರುಚಿಯಾಗಿ ಓದುಗರಿಗೆ ಉಣಬಡಿಸುವದು ಇನ್ನೊಂದು ಕಲೆ. ಈ ವಾರದ ಸಂಚಿಕೆಯಲ್ಲಿ, ಈ ಎರಡೂ ಕಲೆಗಳಲ್ಲಿ ಪರಿಣಿತರಾದ ಗೌರಿ ಪ್ರಸನ್ನರ ಒಂದು ಲೇಖನವಿದೆ. ಪಾಕ ಪ್ರವೀಣೆಯ ಗಜ್ಜರ ಹಲ್ವಾದ ಸ್ವಾಧವನ್ನು ಅವರ ಬರಹದಲ್ಲಿಯೇ ಓದಿ ನಾನಂತು ಖುಷಿಯಾದೆ, ನೀವೂ ಓದಿ ಆನಂದಿಸಿವಿರೆಂದು ನಂಬಿರುವೆ. (ಸಂ- ಶಿವ ಮೇಟಿ)
ಈ ಡಿಸೆಂಬರ್, ಚಳಿಗಾಲ ಬಂತೆಂದರೆ ದೆಹಲಿಯ ಸಬ್ಜಿ ಮಂಡಿಯ ಗಾಜರ್, ಮಟರ್ ಮುಂತಾದ ವರ್ಣರಂಜಿತ ತಾಜಾ ತರಕಾರಿಗಳನ್ನು, ಪಾಲಕ್, ಮೇಥಿ, ಸರಸೋಂ, ಬಥುವಾ, ಧನಿಯಾ, ಪುದೀನಾ..ರಾಶಿ ರಾಶಿ ವಿಧವಿಧ ಹಸಿರು ಸೊಪ್ಪುಗಳ ಸುವಾಸನೆಯನ್ನು, ಚಕ್ಕಡಿಗಳ ತಾಜಾ ಬೆಲ್ಲದ ಸಿಹಿಯನ್ನು, ಮಾಸಲೆಗೆಂದು ತಳ್ಳುಗಾಡಿಗಳಲ್ಲಿ ಹೂವಿನಾಕಾರದಲ್ಲಿ ಕತ್ತರಿಸಿಟ್ಟ ಕೆಂಪು ಅಮರೂದ್ ಗಳ ಕಂಪನ್ನು, ಶೇಂಗಾ, ಎಳ್ಳಿನ ನಾನಾ ನಮೂನೆಯ ರೇವಡಿ, ಗಜ್ಜಕ್ ಗಳನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಅಲ್ಲಿನ ಆ ಮಂಗಲ್, ಶುಕ್ಕರ್ ಬಜಾರ್ ಗಳ ಆ ತಾಜಾತನರ ವೈಭೋಗ ನೋಡಿಯೇ ತಿಳಿಯಬೇಕು. ಚುಮುಚುಮು ಚಳಿ ಶುರುವಾಗಿ ಶಾಲ್, ಸ್ವೆಟರ್ ಗಳು ದಿವಾನದಿಂದ ಹೊರಬರುತ್ತಿದ್ದಂತೆಯೇ ಮಗರಾಯನ ಬೇಡಿಕೆ ಶುರು.. ‘ಅಮ್ಮಾ, ಗಾಜರ್ ಕಾ ಹಲ್ವಾ ಮಾಡತಿ?’ ಅಂತ. ಆದರೆ ಆ ಕೆಜಿಗಟ್ಟಲೆ ಗಜ್ಜರಿ ಹೆರೆದು ನಂತರ ಲೀಟರ್ಗಟ್ಟಲೆ ಹಾಲು ಸುರಿದು, ಗಂಟೆಗಟ್ಟಲೆ ಗ್ಯಾಸೊಲೆಯ ಮೇಲಿಟ್ಟು, ಆಗಾಗ ಕೈಯಾಡಿಸುತ್ತ ಅದನ್ನು ಮಾಡಿ ಮುಗಿಸುವ ಶಕ್ತಿ,ಶ್ರಮ, ಸಮಯಗಳನ್ನೆಲ್ಲ ಎಣಿಸಿ ‘ಗಜ್ಜರಿ ಈಗ ಬರಲಿಕ್ಹತ್ಯಾವ ಮಾರ್ಕೆಟ್ ನಾಗ..ಸ್ವಲ್ಪ ಸೋವಿ ಆಗಲಿ’ ಅಂತ 2-3 ಬಾರಿ ನೆಪ ಹೇಳಿ ಮುಂದ ಹಾಕಿದಮ್ಯಾಲೆ ಮಗನ ಸಹನೆ ಮುಗಿದು ‘ ಅಮ್ಮಾ , ನಿನ್ನ ಲೆಕ್ಕದ ಫಂಡಾನೇ ನಂಗ ತಿಳ್ಯಂಗಿಲ್ಲ ನೋಡು..ಹತ್ತಿಪ್ಪತ್ತು ರೂಪಾಯಿ ಗಜ್ಜರಿ ಸಲುವಾಗಿ ವಿಚಾರ ಮಾಡತಿ. ಅದಕ್ಕ ಹಾಕೂ ಫುಲ್ ಕ್ರೀಂ ಹಾಲು, ತುಪ್ಪ, ಖೋವಾ, ಡ್ರೈಫ್ರುಟ್ಸ್ ಇವೆಲ್ಲ ಅಂತೂ ಸೋವಿ ಆಗಂಗಿಲ್ಲ ಹೌದಿಲ್ಲೋ?’ ಅಂತ ಬಲವಾದ ವಾದ ಮಂಡಿಸುತ್ತಿದ್ದ. ಆದರೂ ಗಾಜರ್ ‘ದಸ್ ಕಾ ದೇಡ್ ಕಿಲೋ’ ಅಂತ ಭಯ್ಯಾ ಹೇಳಬೇಕು.. ನಾನು ‘ ತೀಸ್ ಕಾ ಪಾಂಚ್ ಕಿಲೋ ಕರದೋಂ’ ಅಂತ ಚೌಕಾಶಿ ಮಾಡಬೇಕು..ಆವಾಗಲೇ ಗಾಜರ್ ಕಾ ಹಲ್ವಾದ ಮಜಾ ಬರುತ್ತಿದ್ದುದು.ನೀಳ ದೇಹದ, ಚೆಂದನೆಯ ಬಣ್ಣದ ಈ ಗಾಜರಿ ಚೆಲುವೆಯರನ್ನು ಹೊತ್ತು ಮನೆಗೆ ತಂರೊಡನೇ ಮಕ್ಕಳ ಕಣ್ಣುಗಳ ಹೊಳಪನ್ನು ನೋಡಬೇಕು. ಅತ್ತೆಯವರು, ಮಕ್ಕಳಿಗೆ ಪೀಲರ್, ಹೆರೋಮಣಿ ಕೊಟ್ಟು ಕೂಡಿಸಿ ಹೆರೆದಾದ ಮೇಲೆ 12 ಲೀಟರ್ ನ ದಪ್ಪ ತಳದ ಅಲ್ಯೂಮಿನಿಯಂ ಕುಕ್ಕರ್ ಗ್ಯಾಸ್ ಮೇಲಿಟ್ಟು ದೊಡ್ಡ ಚಮಚ ದೇಸಿ ಘೀ ಹಾಕಿ ಹೆರೆದ ತುರಿ ಸುರಿದು ಅದರಲ್ಲಿನ ನೀರಿನಾಂಶ ಹೋಗುವವರೆಗೆ ಹುರಿದು ಸಣ್ಣ ಉರಿಯಲ್ಲಿ ಕಾಸಿ ದಪ್ಪ ಕೆನೆಗಟ್ಟಿದ ಹಾಲನ್ನು ಸುರುವಿ ಆಗೀಗ ಕೈಯಾಡಿಸುತ್ತ, ಹಾಲೆಲ್ಲ ಇಂಗಿದ ಮೇಲೆ ಛಲೋ ಪ್ರಮಾಣದಾಗ ಖೋವಾ ಹೆರೆದುಹಾಕಿ, ತುಪ್ಪದಲ್ಲಿ ಕರಿದ ಡ್ರೈಫ್ರುಟ್ಸ್ ಗಳನ್ನು ಮೇಲೆ ಸುರುವಿದರೆ ಆಹಾ! ಬಿಸಿಬಿಸಿಯಾಗಿ,ಬೆಚ್ಚಗಾಗಿ, ಥಣ್ಣನೆಯದು ಹೇಗೇ ತಿನ್ನಿ ನಿಮ್ಮ ರಸನೇಂದ್ರಿಯಕ್ಕೆ ಮೋಸ ಮಾಡದೇ ಧನ್ಯತೆಯ ಭಾವವನ್ನು ನೀಡುವುದರಲ್ಲಿ ಯಾವ ಕಸರನ್ನೂ ಉಳಿಸದಿದು. ಬಿಸಿ ಹಲ್ವಾದ ಮೇಲೆ ಒಂದು ಸ್ಕೂಪ್ ಐಸ್ ಕ್ರೀಂ ಹಾಕಿಕೊಂಡು ತಿಂದರಂತೂ ಕಿಚ್ಚು ಹಚ್ಚೇಬಿಡುವುದು ಸ್ವರ್ಗಕ್ಕೆ. ಬಯಲುಸೀಮೆಯವರಾದ ನಮಗೆ ಸಣ್ಣಂದಿನಲ್ಲಿ ಈ ‘ ಗಾಜರ್ ಕಾ ಹಲ್ವಾ’ ಕನಸಲ್ಲಿ ಕಂಡ ಸುಂದರ ಷೋಡಷಿಯಂತೆ, ಕೈಗೆಟುಕದ ಅಪ್ಸರೆಯಂತೆ ಭಾಸವಾಗುತ್ತಿತ್ತು. ಬಾಲಿವುಡ್ ಮೂವಿಗಳಲ್ಲಿ ಅಮ್ಮಂದಿರು ತಮ್ಮ ಹೀರೋ ಬೇಟಾಗಳಿಗೆ, ಹೀರೋಯಿನ್ ಗಳು ತಮ್ಮ ಹೀರೋಗಳಿಗೆ ‘ಖುದ್ ಅಪನೆ ಹಾಥೋಂ ಸೆ ಬನಾಕೆ’ ಈ ಹಲ್ವಾ ತಿನ್ನಿಸುತ್ತಿದ್ದರೆ ಅದೇನೋ ದೇವರೋಕದ ಸ್ವೀಟೇ ಇದ್ದೀತು..ನಮ್ಮಂಥ ಬಡಪಾಯಿಗಳಿಗೇನು ದಕ್ಕೀತು ಅಂತಲೇ ಅನ್ನಿಸುತ್ತಿತ್ತು. ಯಾಕೆಂದರೆ ನಮ್ಮನೆಗೆ ಬರುವ ಗಜ್ಜರಿ ಹೋಳುಗಳಾಗಿ ಹುಳಿಯಲ್ಲೋ, ಹೆರಕಲಾಗಿ ಪಚಡಿ ಅಥವಾ ಮೊಸರು ಭಜ್ಜಿಯಲ್ಲಷ್ಟೇ ದೊರೆಯುತ್ತಿತ್ತು. ಅಪರೂಪಕ್ಕೊಮ್ಮೆ ಬಿಸಿಬೇಳೆ ಭಾತಿನ ತಪ್ಪೇಲಿಯಲ್ಲಿ ಮುಳುಗೇಳುವ ಭಾಗ್ಯ ಸಿಕ್ಕರೆ ಅದೇ ದೊಡ್ಡದು. ಹೀಂಗ ಹಲ್ವಾ ಆಗುವ ಭಾಗ್ಯ ಪಾಪ ನಮ್ಮ ದೇಸಿ ಗಜ್ಜರಿಗಳಿಗಿರಲೇ ಇಲ್ಲ. ಯಾವಾಗಾದರೊಮ್ಮೆ (ಸಿನೆಮಾದಲ್ಲಿ ನೋಡಿ) ಆಸೆಪಟ್ಟು ಅಜ್ಜಿಯನ್ನೋ, ಅಮ್ಮನನ್ನೋ ಕೇಳಿದರೆ ಅವರಿಗೆ ನಮ್ಮ ಹಯಗ್ರೀವ, ಗೋದಿಕುಟ್ಟಿದ ಪಾಯಸ, ಹೂರಣಗಳ ಮುಂದೆ ‘ಅದೇನ, ಸೌಳ ಗಜ್ಜರಿ ಸಕ್ಕರಿ ಕುದಸಿದ್ರ ಪಕ್ವಾನ್ನ ಆಗತದೇನು’ ಅನ್ನುವ ಉತ್ತರಾನೇ ಸಿಕ್ಕತಿತ್ತು ಅನ್ನಿ. ಅಂತೂ ಈ ಗಗನಕುಸುಮ ನಮ್ಮ ಕೈಗೆಟುಕಿದ್ದು ಬಿಜಾಪೂರ ಬಿಟ್ಟು ದೆಲ್ಲಿಗೆ ಬಂದಮೇಲೇನೇ. ಇದು ಮೊಘಲಾಯಿ ಡಿಶ್ ಅಂತೆ. ಮೊಘಲ್ ದೊರೆಗಳಾಳಿದ ಊರಲ್ಲಿ ಚಳಿಗಾಲ ಮುಗಿವವರೆಗೂ ಈಗಲೂ ಇದಕ್ಕೆ ರಾಜವೈಭೋಗ. ಡಿಸೆಂಬರ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ನನ್ನ ಅವಳಿ ಮಕ್ಕಳಿಗೆ ಈ ಹಲ್ವಾ ಅನೂಚಾನವಾಗಿ ನಡೆದುಕೊಂಡು ಬಂದ ಒಂದು ಪ್ರಥಾ ..ಒಂದು ಶುಭ ಶಕುನ. ಹೀಗಾಗಿ ಮೊಘಲ್ ದೊರೆಗಳ ಈ ಡಿಶ್ ಇದೀಗ ರಾಣಿಯ ನಾಡಲ್ಲೂ ತನ್ನ ಪತಾಕೆ ಹಾರಿಸಿದೆ. ಫರಕು ಇಷ್ಟೇ..ಇಲ್ಲಿನ ನೀಲಿ ಮುಚ್ಚಳದ ಕ್ಯಾನಿನ ಹಾಲಿಗೆ ಕೆನೆಗಟ್ಟುವ ಭಾಗ್ಯವಿಲ್ಲ ..ಅಲ್ಲಿನ ‘ದಸ್ ಕಾ ದೇಡ್ ಕಿಲೋ’ ಇಲ್ಲಿ ಹಜಾರ್ ಕಾ ದೇಡ್ ಕಿಲೋ.(6.99 ಕ್ಕೆ ಕೆ.ಜಿ.). ಆಖಿರ್ ಬಾತ್ ಪೈಸೋಂಕಿ ನಹೀಂ..ಮಾ ಕೆ ಹಾಥ್ ಕಿ ಹಲ್ವಾ ಕಿ ಹೈ..ಏನಂತೀರಿ?
ಡಾ. ರಾಜಶ್ರೀ ವೀ ಪಾಟೀಲ್, ಸದ್ಯ ಲೆಸ್ಟರ್ ಗ್ಲೆನ್ ಫೀಲ್ಡ್ ಹಾಸ್ಪಿಟಲ್ ನಲ್ಲಿ ಕಾರ್ಡಿಯೋ ಥೋರಾಸಿಕ್ ರೇಡಿಯೊಲೊಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ . ‘ಅನಿವಾಸಿ’ಯಸಿಯಲ್ಲಿ ಒಂದಿಷ್ಟು ಜನಕ್ಕೆ ಪರಿಚಯವಿರುವ ಡಾ. ವೀರೇಶ್ ಪಾಟೀಲ ಅವರ ಪತ್ನಿ. “ನಮಗಿಬ್ಬರು ಮುದ್ದಾದ ರಾಜಕುಮಾರಿಯರು ಖುಷಿ ಮತ್ತು ಇಂಚರ“ ಅನ್ನುತಾರೆ ಹೆಮ್ಮೆಯಿಂದ. ಅವರು ಸಹ ಅನಿವಾಸಿಗೆ ಹೊಸಬರಲ್ಲ. ಈ ಮೊದಲು ಸರಿಯಾಗಿ ಮೂರು ವರ್ಷಗಳ ಹಿಂದೆ ಅನಿವಾಸಿಯಲ್ಲಿ ಒಂದು ಲೇಖನವನ್ನು ಸಹ ಬರೆದಿದ್ದರು.(https://wp.me/p4jn5J-2OE) ಇತ್ತೀಚೆಗಷ್ಟೇ ಭಾರತಕ್ಕೆ ರಜೆಗೆಂದು ಮಕ್ಕಳೊಂದಿಗೆ ತಮ್ಮ ಊರಿಗೆ ಹೋಗಿ ಬಂದಿದ್ದಾರೆ. ಆ ಅನುಭವವನ್ನೇ ಇಲ್ಲಿ ಹಂಚಿ ಕೊಂಡಿದ್ದಾರೆ. ತಂದೆ -ತಾಯಿ, ಅತ್ತೆ-ಮಾವ ಅವರೊಡನೆ ಸಮಯ ಕಳೆದು ಹಬ್ಬ ಮಾಡಿ ಸವಿ ನೆನಪುಗಳನ್ನು ತರುವದನ್ನು ನಾವು ಸಹ ಮಾಡಿಲ್ಲವೆ?(ಮಕ್ಕಳು, ಮೊಮ್ಮಕ್ಕಳು ಬಂದದ್ದೇ ಹೆತ್ತವರಿಗೆ ಹಬ್ಬವಲ್ಲವೇ? ಆದರೂ …) ನಾವು ಶಾಲೆಯಲ್ಲಿ ಇಂಗ್ಲಿಷ್ ಟೆಕ್ಸ್ಟ್ ಪುಸ್ತಕದಲ್ಲಿ, ಕವಿತೆಗಳಲ್ಲಿ ಓದುತ್ತಿದ್ದ ವಿಕ್ಟೋರಿಯನ್ ‘Rural idyll’ ಇಂದಿನ ಇಂಗ್ಲೆಂಡಿನಲ್ಲಿ ಉಳಿದಿಲ್ಲ ಅಂತ ಬರೆದಿತ್ತು ಇತ್ತೀಚಿನ ಒಂದು ಗಾರ್ಡಿಯನ್ ಲೇಖನದಲ್ಲಿ. ಜಿ ವಿ ಅವರ ನಿಘಂಟು ಆ ಪದಕ್ಕೆ ಕೊಟ್ಟ ಅರ್ಥವಾದ ’ಹಳ್ಳಿ ಜೀವನದ ಮನೋಹರ ಜೀವನದ ವರ್ಣನೆ’ ಭಾರತದ ಹಳ್ಳಿಗಳಲ್ಲಿ ಇಂದಿಗೂ ನೋಡ ಬಹುದು. ರಾಜಶ್ರೀ ಅವರ ಶಿಗ್ಲಿಯ ಮನೆಯ ಮುಂದೆ ಕಾರಿರಬಹುದು. ಹೊಲದಲ್ಲಿ ಟ್ರಾಕ್ಟರ್ ಇರಬಹುದು. ಮನೆಯ ಹಿಂದಿನ ರೊಪ್ಪೆಯಲ್ಲಿ ಆಡುಗಳು ಮತ್ತು ’ನಮ್ಮೂರ ಹಾದಿ’ಯಲ್ಲಿ ಎಮ್ಮೆಗಳ ಹಿಂಡು, ಎತ್ತುಗಳು ಇನ್ನೂ ಇವೆ. ’ಮನೆಯ ಸುತ್ತ ಮಾನವೀಯತೆಯ ಸೆಲೆ’ಗೆ ಸಾಕ್ಷಿಯಾಗಿ ಶಾಲೆಯ ಗೆಳೆಯ ಕುಡಿಸಿದ ಜೀರಾ ಸೋಡಾ ಇದೆ ಪ್ರೀತಿ ಸವಿದು ನೀರಡಿಕೆ ತಣಿಸಲು! ಎಲ್ಲಿದೆ idyll? ನಂದನ ಇಲ್ಲಿದೆ! ಆದರೆ ಪ್ರತಿಯೊಬ್ಬರ ವಿಶಿಷ್ಟ ಅನುಭವವೂ ಭಿನ್ನ. ರಾಜಶ್ರೀ ಅವರ ಅನುಭವವನ್ನು ಅವರ ಬಾಯಲ್ಲೇ ಕೇಳುವಾ, ಓದುವಾ, ನೋಡುವಾ. ಲೇಖನ, ಕವನ ಮತ್ತು ಚಿತ್ರಗಳು ಸಹ ರಾಜಶ್ರೀ ಅವರ ಕೊಡುಗೆಯೇ! (ಸಂ)
ರಾಜಶ್ರೀ ಬರೆಯುತ್ತಾರೆ ...
ಎರಡು ವಾರದ ಹಿಂದೆ ಭಾರತಕ್ಕೆ, ಅಂದರೆ ನನ್ನೂರು ಗದಗ ಜಿಲ್ಲೆಯ, ಶಿರಹಟ್ಟಿ ತಾಲ್ಲೂಕಿನ, ಬಯಲುಸೀಮೆಯ ಸಣ್ಣ ಹಳ್ಳಿ ಶಿಗ್ಲಿಗೆ, ತಮ್ಮನ ಹೆಂಡತಿಯ ಶ್ರೀಮಂತಕೋಸ್ಕರ ಭೇಟಿ ನೀಡಿದ್ದೆವು. ಭಾರತದ ಪ್ರವಾಸದ ಬಗ್ಗೆ ಬರೆಯಲು ಹೊರಟರೆ ಪದಗಳು ಮತ್ತು ವೇಳೆ ಯಾವಾಗಲು ಅಭಾವವೇ. ನನ್ನ ಇತ್ತೀಚಿನ ಭೇಟಿಯ ಬಗ್ಗೆ ತಿಳಿದ ದೇಸಾಯಿಯವರ ಪ್ರೋತ್ಸಾಹ ದೊರಕಿದ್ದೇ ತಡ, ತಲೆಯಲ್ಲಿ ನೂರೆಂಟು ಯೋಚನೆಗಳು. ದಾವಣಗೇರೆ ಬೆಣ್ಣೆ ದೋಸೆ ಬಗ್ಗೆ ಬರೀಲಾ, ಅತ್ತೆ ಮಾವನವರ ಜೊತೆ ಭೇಟಿನೀಡಿದ ಮಲೇಬೆನ್ನೂರು ವೀರಭದ್ರೇಶ್ವರ ದೇವರ ಆಧುನಿಕ ಕಲ್ಲಿನ ಗುಡಿಯ ಬಗ್ಗೆ ಬರೀಲಾ, ಎಲ್ಲರು ಸೇರಿ ಹೋದ ನಾಕು ದಿನದ, ಸಂತಸದ ಬುಗ್ಗೆ ಹರಿಸಿದ ದಾಂಡೇಲಿಯ ಪ್ರವಾಸದ ಬಗ್ಗೆ ಬರೀಲಾ ಅಂತ ಯೋಚಿಸಿದಾಗ, ನನ್ನೂರಿಗೆ ಸರಿಸಾಟಿ ಇಲ್ಲವೆಂದೆನಿಸಿ ಬರೆದ ಈ ಚಿಕ್ಕ ಪ್ರಯತ್ನ.
ನನ್ನೂರ ಹಾದಿ , ನನ್ನೂರ ಭೇಟಿ
ನನ್ನೂರ ಹಾದಿ , ನನ್ನೂರ ಭೇಟಿ
ಹಸಿದವಳಿಗೆ ಹರಿವಾಣದಲ್ಲಿ ನೀಡಿದ ರೊಟ್ಟಿ ಬುತ್ತಿ
ನನ್ನೂರ ಹಾದಿ, ಈತ್ತೀಚಿನ ನನ್ನೂರ ಭೇಟಿ,
ಬಾರಿ ಬಾರಿ ನಡೆದರೂ, ಬಾರಿ ಬಾರಿ ಮಾಡಿದರೂ ಇದಕಿಲ್ಲ ಸರಿಸಾಟಿ
ಬಾಲ್ಯಕಳೆದ ಮನೆ, ಕನ್ನಡದೊಟ್ಟಿಗೆ ಬದುಕು ಕಲಿಸಿದ ಶಾಲೆ
ಊರ ತುಂಬೆಲ್ಲ ಕಾಕಾ, ಚಿಗವ್ವಗಳು,
ಅವರು ಕಲಿಸಿದ ಸಂಬಂಧಗಳ ಬೆಲೆ
ಮನೆಯ ಸುತ್ತ ಮಾನವೀಯತೆಯ ಸೆಲೆ,
ಶೇಂಗಾ, ಹತ್ತಿ ಹೊಲ, ಅದರಲ್ಲಿರೋ ದನಕರು, ಕುರಿಕೋಳಿಗಳು.
ಮನತೃಪ್ತಿ ಯಾಗಲು ಇದಕ್ಕಿಂತ ಬೇಕೇ ಬೇರೆ ಚಂದದ ನೆಲೆ?
ಅಪ್ಪನೊಂದಿಗೆ ಊರ ತುಂಬೆಲ್ಲ ಟ್ರಾಕ್ಟರ್ ಸವಾರಿ,
ನನಗನ್ನಿಸಿತು ಬಾರಿ, ಬಾರಿ ನಾನೊಬ್ಬ ರಾಜಕುಮಾರಿ,
ಆದರೆ ಅವರಿಗೋ ಅನ್ನಿಸಿದ್ದು ತನ್ನದೊಂದು ಅಂಬಾರಿ,
ಅದರಲ್ಲಿ ನನ್ನೊಂದಿಗೆ ಕುಳಿತ ಅವರ ಮೊಮ್ಮಗಳೊಬ್ಬ ವಿಶ್ವಸುಂದರಿ.
ಸಿಕ್ಕವರಿಗೆಲ್ಲ ಪರಿಚಯಿಸಿ ಬಣ್ಣಿಸಿದ ವೈಖರಿ ಭಾರೀ.
ಪಂಚಮಿ ಮುಂಚೆಯೆ ಮೊಮ್ಮಕ್ಕಳಿಗಾಗಿ ಬಂದಿತ್ತು ಗಂಡಮ್ಮನ ಪಂಚಮಿ ಉಂಡಿ,
ಗೌರವ್ವ ಕೆರೆ ಸೇರಿ ಮಾಸಗಳೇ ಕಳೆದರೂ ಹೆಣ್ಣಮ್ಮನಿಂದ ಬಂದಿತ್ತು ಸಕ್ಕರೆ ಗೊಂಬೆ,
ಇದೆಲ್ಲ ನೋಡಿ ನೆನಪಾಗಿತ್ತು ನನ್ನ ಬಾಲ್ಯದ ಪಂಚಮಿ, ಗೌರಿ ಹುಣ್ಣಿವೆ .
ಅದಕಾಗಿ ಆಡಿಯೂ ಆಯಿತು ಜೋಕಾಲಿ, ಹಾಡಿ ಕರೆದೂ ಆಯಿತು ಗೌರವ್ವನ.
ತಮ್ಮನೊಂದಿಗೆ ಊರ ಸಂತೆಯಲಿ ಮಾಡಿದ ಚೌಕಾಸಿ
ನೆನಪು ಮಾಡಿತ್ತು ಬಾಲ್ಯದ ನಾಕಾಣಿ, ಎಂಟಾಣಿಯಲಿ ಬಂದ ಖುಸಿ
ಅದನ ನೆನೆಸಿಕೊಂಡು ಮುಂದೆ ನಡೆವಾಗ ಶಾಲೆಯ ಗೆಳೆಯ
ಅಕ್ಕರೆಯಿಂದ ಕರೆದು ಕುಡಿಸಿದ ತನ್ನಂಗಡಿಯ ಜೀರಾ ಸೋಡಾ,
ಅನ್ನಿಸುವಂತೆ ಮಾಡಿತ್ತು ಈ ಖುಷಿಗೆ ಸರಿಸಾಟಿ ಇಲ್ಲ ನೋಡಾ!
ಡಾ. ರಾಜಶ್ರೀ ವೀ ಪಾಟೀಲ್