ನೋಬೆಲ್ ಪ್ರಶಸ್ತಿ ಮತ್ತು ಮಹಿಳೆಯರು 1. ಪಲ್ಸಾರ್ ಅನ್ವೇಷಕಿ, ಖಭೌತಶಾಸ್ತ್ರಜ್ಞೆ–ಜೋಸಲೀನ್ ಬೆಲ್ ಬರ್ನೆಲ್ (Jocelyn Bell Burnell) ಡಾ ಉಮಾ ವೆಂಕಟೇಶ್

ವಿಜ್ಞಾನಕ್ಕೆ ಸಂಬಂಧಿಸಿದ  ಲೇಖನಗಳನ್ನು ಬರೆಯುವದರಲ್ಲಿ ಅತ್ಯಂತ ಆಸಕ್ತಿ ಮತ್ತು ವಿಶೇಷ ಪರಿಣತಿ ಹೊಂದಿರುವ ಬರಹಗಾರರಾದ ಡಾ ಉಮಾ ವೆಂಕಟೇಶ್ ಈಗಾಗಲೇ ಈ ವೇದಿಕೆಯ ಓದುಗರಿಗೆ ಚಿರ ಪರಿಚಿತರು. ನೋಬೆಲ್ ಪ್ರಶಸ್ತಿ ಮತ್ತು ಮಹಿಳೆಯರನ್ನು ಕುರಿತಾದ  ಈ ಹೊಸ ಸರಣಿಯಲ್ಲಿ ಅವರ ಮೊದಲ ಲೇಖನ  ಇದು.

 ಹೆಂಗಸರು ಕೇವಲ ಮದುವೆಯಾಗಿ, ಮಕ್ಕಳನ್ನು ಹೆತ್ತು……..?

ವೃತ್ತಿಪರ ರಂಗವನ್ನು ಪ್ರವೇಶಿಸಿ ಅಲ್ಲಿ ಯಶಸ್ಸನ್ನು ಗಳಿಸುವುದು ಮಹಿಳೆಯರಿಗೆ ಸದಾಕಾಲ ಒಂದು ಸವಾಲಿನ ಪ್ರಶ್ನೆಯಾಗೇ ಉಳಿದಿದೆ. ಇದಕ್ಕೆ ಕಾರಣ ಮಹಿಳೆ ತನ್ನ ಬುದ್ಧಿಶಕ್ತಿಯಲ್ಲಾಗಲಿ, ಅಥವಾ ಕಾರ್ಯನಿರ್ವಹಣೆಯ ಸಾಮರ್ಥ್ಯದಲ್ಲಾಗಲಿ ಗಂಡಿಗಿಂತ ಕಡಿಮೆ ಎನ್ನುವ ಕಾರಣದಿಂದಲ್ಲ. ಕೇವಲ ಅವಳು ಪುರುಷಳಲ್ಲ ಎನ್ನುವುದೊಂದೇ ಅದಕ್ಕೆ ಕಾರಣ. ನಮ್ಮ ಸಮಾಜವೆಷ್ಟೇ ಆಧುನಿಕಗೊಂಡು ಮುನ್ನಡೆದಿದೆ ಎಂದುಕೊಂಡರೂ, ಮಹಿಳೆಯರ ಬಗ್ಗೆ ಇರುವ ಕೆಲವು ಕೀಳು ಭಾವನೆಗಳು ಮತ್ತು ಪೂರ್ವಾಗ್ರಹಗಳು ಇನ್ನೂ ಆಳವಾಗಿ ಬೇರೂರಿಯೇ ಇವೆ.  ಇಷ್ಟಾದರೂ, ಈ ಪುರುಷ ಪ್ರಧಾನ ಸಮಾಜದ ವಿವಿಧ ವೃತ್ತಿಪರ ರಂಗಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು, ಅಂತಹ ಸಮಯವನ್ನು ಹಿಂದಕ್ಕೆ ನೂಕಿ, ಮುನ್ನಡೆದ ಮಹಿಳೆಯರು ಅನೇಕರಿದ್ದಾರೆ. ಅಂತಹ ವನಿತೆಯರಲ್ಲಿ ಒಬ್ಬಳು ಜೋಸಿಲೀನ್ ಬೆಲ್ ಬರ್ನೆಲ್. ಅತ್ಯಂತ ಪುರುಷ-ಪ್ರಧಾನ ರಂಗವೆನಿಸಿದ ವಿಜ್ಞಾನದಲ್ಲಿ, ಅದರಲ್ಲೂ ಭೌತಶಾಸ್ತ್ರದ ಉಪಕ್ಷೇತ್ರವಾದ ರೇಡಿಯೋ ಖಗೋಳಶಾಸ್ತ್ರದಂತಹ ಅಪರೂಪದ ವಿಷಯದಲ್ಲಿ ಸಾಧನೆಗೈದ ಬ್ರಿಟಿಷ್ ಖಭೌತಶಾಸ್ತ್ರಜ್ಞೆ ಜೋಸಿಲೀನ್ ಬೆಲ್, ಮೊಟ್ಟಮೊದಲ ರೇಡಿಯೋ ಪಲ್ಸಾರ್ ಶೋಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಮಹಿಳೆಯಾಗಿದ್ದಾಳೆ.Read More »

ನನ್ನೂರು ಧಾರವಾಡ – ಡಾ. ಅರವಿಂದ ಕುಲಕರ್ಣಿ ಬರೆದ ಲೇಖನ

ಕನ್ನಡ ಬಳಗ ಯು ಕೆ ದ ಸಂಸ್ಥಾಪಕ ಸದಸ್ಯರಾದ ಅರವಿಂದ ಕುಲಕರ್ಣಿಯವರ ಪರಿಚಯವಿಲ್ಲದವರು ಕಡಿಮೆ. ಬಳಗದ ಬೆನ್ನೆಲುಬಾಗಿ ನಿಂತು,  ದುಡಿದು ಅ೦ದಿನಿ೦ದ  ಇಂದಿನ ವರೆಗೆ ಅಖಂಡ ಸೇವೆ ಸಲ್ಲಿಸಿದ್ದಾರೆ. ಅವರಿಗೆ KBಯಷ್ಟೇ ಅಚ್ಚು ಮೆಚ್ಚು ತಮ್ಮ ಊರು. ಅವರು  ಬರೆಯುತ್ತಾರೆ …Aravind

Dharwad1ನನ್ನೂರು ಧಾರವಾಡ. ನಾನು ಹುಟ್ಟಿದ ಊರು, ನನ್ನ ನೆಚ್ಚಿನ ಊರು. 1930ರ ವರ್ಷದ ಕೊನೆಯಲ್ಲಿ ಹುಟ್ಟಿ, ಬೆಳೆದು, ಕಲಿತು,ಆಟ, ಚೆಲ್ಲಾಟ, ಸ್ನೇಹಿತರ ಕೂಡಿ ಮಂಗತನದ ಹುಡುಗಾಟಗಳಲ್ಲಿ ಆನಂದಪಟ್ಟದ್ದು ಇದೇ ಊರಲ್ಲಿ. ಕಳೆದ 46 ವರ್ಷಗಳಿಂದ ಆಂಗ್ಲನಾಡಿನಲ್ಲಿ ಸ್ಥಾಯಿಕವಾಗಿ ನೆಲಸಿದ್ದರೂ ಕೂಡಾ, ಪಂಪನಂದಂತೆ “ಆರಂಕುಸಮಿಟ್ಟೊಡೇಮ್ ನೆನವುದೆನ್ನ ಮನಂ ಬನವಾಸಿ ದೇಶಮಂ”, ಎನ್ನುವ ತೆರದಿ ನನ್ನ ಮನಸ್ಸು ಈಗಲೂ ಧಾರವಾಡಕ್ಕೆ ಮರಳಲು ಇಚ್ಛಿಸುತ್ತದೆ.

ಐತಿಹಾಸಿಕ ಹಿನ್ನೆಲೆ:

Dharwad Fort
ಧಾರವಾಡದ ‘ಕಿಲ್ಲೆ’

ಧಾರವಾಡ ಎಂಬ ಹೆಸರು ಬರಲು ಹಲವಾರು ಕಾರಣಗಳಿವೆ. ದ್ವಾರ-ವಾಟ, ಅಂದರೆ ಬಯಲುಸೀಮೆಯಿಂದ ಮಲೆನಾಡಿನ ಬಾಗಿಲಿಗೆ (ದ್ವಾರ) ನಿಂತ ಊರು (ವಾಡ,ವಾಟ) ಎನ್ನುವುದು ಕೆಲವರ ಅಭಿಮತ. ಇತಿಹಾಸಕಾರರು 1403ರಲ್ಲಿ, ವಿಜಯನಗರದ ಸಾಮ್ರಾಜ್ಯದ ‘ಧಾರವ’ ಎಂಬ ಅರಸ ಧಾರವಾಡವನ್ನು ಆಳಿದ್ದರ ಉಲ್ಲೇಖವಿದೆ ಎನ್ನುತ್ತಾರೆ. ಅವನಿಂದಲೇ ಆ ಊರಿಗೆ ಆ ಹೆಸರು ಬಂತಂತೆ. ಆ ವರ್ಷದಲ್ಲೇ ಧಾರವಾಡದ ಕೋಟೆ (ಕಿಲ್ಲೆ) ನಿರ್ಮಾಣವಾಯಿತು. ನಂತರ ಅದು 1573ರಲ್ಲಿ, ವಿಜಾಪುರದ ಆದಿಲ್ ಷಾಹಾನ ಕೈವಶವಾಯಿತು. ಅದಾದ ನಂತರ ಧಾರವಾಡವು ಔರಂಗಜೇಬ, ಶಿವಾಜಿ, ಪೇಶ್ವೆ ಬಾಳಾಜಿರಾವ್, ಹೈದರಾಲಿ, ಟಿಪ್ಪು ನಂತರ ಬ್ರಿಟಿಷ್ ಸಾಮ್ರಾಜ್ಯ ಹೀಗೆ ಹಲವು ಹತ್ತು ಜನರ ಅಧಿಕಾರಕ್ಕೆ ಒಳಪಟ್ಟಿತು. ಬ್ರಿಟಿಷರ ವಿರುದ್ಧ ಹೋರಾಡಿದ ಉತ್ತರಕನ್ನಡ ಸ್ವಾತಂತ್ರ್ಯಯೋಧರಲ್ಲಿ, ನರಗುಂದದ ಬಾಬಾಸಾಹೇಬ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ಅಗ್ರಗಣ್ಯರು. 1956ರಲ್ಲಿ, ಭಾರತ ಸ್ವತಂತ್ರವಾದ ಬಳಿಕ ನಡೆದ ಭಾಷಾವಾರು ಪ್ರಾಂತಗಳ ರಚನೆಯ ಸಮಯದಲ್ಲಿ, ಧಾರವಾಡ ಮುಂಬಯಿ ಪ್ರೆಸಿಡೆನ್ಸಿಯಿಂದ ಬೇರ್ಪಟ್ಟು, ಕರ್ನಾಟಕ ರಾಜ್ಯಕ್ಕೆ ಸೇರಿತು.Read More »