ನೋಬೆಲ್ ಪ್ರಶಸ್ತಿ ಮತ್ತು ಮಹಿಳೆಯರು- 2. ಹೆನ್ರಿಯೆಟ್ಟ ಲೆವಿಟ್ (Henrietta Leavitt) ಡಾ ಉಮಾ ವೆಂಕಟೇಶ್

ನೋಬೆಲ್ ಪ್ರಶಸ್ತಿಗೆ ಸಂಬಂಧಿಸಿದ ಈ ಸರಣಿಯಲ್ಲಿ ಡಾ ಉಮಾ ವೆಂಕಟೇಶ್ ಅವರ ಎರಡನೆಯ ಲೇಖನ ಇದು.

1895 ರಲ್ಲಿ ಸ್ಥಾಪಿತವಾದ ನೋಬೆಲ್ ಪ್ರಶಸ್ತಿಯನ್ನು, ಸಾಹಿತ್ಯ, ವಿಜ್ಞಾನ, ಶಾಂತಿ ಹೀಗೆ ಹಲವು Leavitt_aavsoರಂಗಗಳಲ್ಲಿ ಅತ್ಯುನ್ನತ ಸಾಧನೆಗೈದ ವ್ಯಕ್ತಿಗಳಿಗೆ ನೀಡುವ ಸಂಪ್ರದಾಯ ಈಗ ಸುಮಾರು 115 ವರ್ಷಗಳಿಂದ ನಡೆದುಬಂದಿದೆ. ಒಂದು ಉನ್ನತ ಸಮಿತಿಯ ಸದಸ್ಯರು ಪರಿಶೀಲಿಸಿ ನಿರ್ಧರಿಸುವ ಈ ಪ್ರಶಸ್ತಿ ಪ್ರಧಾನ ವ್ಯವಸ್ಥೆಯಲ್ಲಿ, ನೋಬೆಲ್ ಸಮಿತಿ ಹಲವಾರು ಬಾರಿ ಎಡವಿದ ಪ್ರಸಂಗಗಳಿವೆ. ಹಲವೊಮ್ಮೆ ಸಾಧಕ ವ್ಯಕ್ತಿ ನಿಧನಹೊಂದಿದರೆಂದೋ, ಇಲ್ಲಾ ಲಿಂಗಬೇಧ, ವರ್ಣನೀತಿ, ರಾಜಕಾರಣ, ಅಥವಾ ಈರ್ಷೆ ಅಸೂಯೆಗಳ ಕಾರಣವೋ, ಒಟ್ಟಿನಲ್ಲಿ ನೋಬೆಲ್ ಇತಿಹಾಸದಲ್ಲಿ ಅನ್ಯಾಯಗಳು ಜರಗುತ್ತಲೇ ಇದೆ. ಮಹಿಳೆಯರು ಇದಕ್ಕೆ ಬಲಿಯಾಗಿರುವ ಅನೇಕ ನಿದರ್ಶನಗಳಿವೆ. ಅದನ್ನು ಓದುಗರಿಗೆ ಹೇಳುವ ಈ ಸರಣಿಯ ಲೇಖನದಲ್ಲಿ ಎರಡನೆಯ ಮಹಿಳೆ, ಖಗೋಳಶಾಸ್ತ್ರಜ್ಞ ಹೆನ್ರಿಯೆಟ್ಟಾ ಲೆವಿಟ್ಟಳ ಪ್ರಸಂಗ ನಿಜಕ್ಕೂ ಅನ್ಯಾಯವಾದ ಸಂಗತಿಯೆನಿಸುತ್ತದೆ. ಆ ಸಮಯದಲ್ಲಿದ್ದ ಪೂರ್ವಾಗ್ರಹಗಳ ಹೊರತಾಗಿಯೂ, ಹೆನ್ರಿಯೆಟ್ಟಾ ಲೆವಿಟ್ ನಡೆಸಿದ ಅನ್ವೇಷಣೆ ನಿಜಕ್ಕೂ ಮಹತ್ವದ್ದು!

ನಮ್ಮಲ್ಲಿ ಹಿರಿಯರು ಮಕ್ಕಳೊಡನೆ ಮಾತನಾಡುವಾಗ ಹಲವೊಮ್ಮೆ ವಿನೋದವಾಗಿ, “ಅಯ್ಯೋ ಮಕ್ಕಳಾ, ಆಕಾಶದಲ್ಲಿರುವ ತಾರೆಗಳನ್ನೂ, ತಲೆಯಲ್ಲಿರುವ ಕೂದಲ ಎಳೆಗಳನ್ನೂ ಎಣಿಸಕ್ಕೆ ಸಾಧ್ಯವೇ?” ಎಂದು ಹೇಳುತ್ತಿದ್ದ ನೆನಪಿದೆ. ಯಾರಾದರೂ ಕೂದಲ ಎಳೆಗಳನ್ನು ಎಣಿಸುವ ಪ್ರಯತ್ನ ಪಟ್ಟಿದ್ದಾರೋ ಇಲ್ಲವೋ ತಿಳಿಯದು, ಆದರೆ ನನ್ನ ಲೇಖನದ ಪ್ರಧಾನ ವ್ಯಕ್ತಿ ಹೆನ್ರಿಯೆಟ್ಟ ಲೆವಿಟ್ಟಳು 1800ರ ದಶಕದಲ್ಲಿ, ಒಬ್ಬ ಮಾನವ ಗಣಕಯಂತ್ರದ ತೆರದಲ್ಲಿ ಆಕಾಶದ ತಾರೆಗಳನ್ನು ಎಣಿಸಿದ ಕಾರ್ಯವಂತೂ ಸತ್ಯವಾದ ವಿಷಯ. 19 ಶತಮಾನದ ಅಂತ್ಯದಲ್ಲಿ ಅಮೆರಿಕೆಯಲ್ಲಿರುವ ಪ್ರತಿಷ್ಟಿತ ಹಾರ್ವರ್ಡ್ ವಿಶ್ವವಿದ್ಯಾಲಯದ ಖಗೋಳ ವೀಕ್ಷಣಾಲಯದಲ್ಲಿದ್ದ ಖಗೋಳಶಾಸ್ತ್ರಜ್ಞರು ಅಂದಿನ ದಿನಗಳಲ್ಲಿ, ಆಕಾಶದಲ್ಲಿನ ಸುಮಾರು 500,000 ದಷ್ಟು ಬೃಹತ್ ಸಂಖ್ಯೆಯ ನಕ್ಷತ್ರಗಳಿಂದ ಹೊಮ್ಮುವ ಬೆಳಕನ್ನು ವಿಂಗಡಿಸುವಂತಹ ಒಂದು ಭಗೀರಥ ಸಾಹಸವನ್ನು ಕೈಗೊಂಡಿದ್ದರು. ಆ ಕಾಲದಲ್ಲಿ ಮಹಿಳೆಯರನ್ನು ಖಗೋಳವೀಕ್ಷಕರನ್ನಾಗಿ ನೇಮಿಸುವ ಪದ್ಧತಿಯಿರಲಿಲ್ಲ.  ಮಹಿಳೆಯರಿಗೆ ದೂರದರ್ಶಕದ ಕಾರ್ಯನಿರ್ವಹಿಸಲು ಅನುಮತಿ ಇರಲಿಲ್ಲ. ಹಾರ್ವಡಿನ ಖಗೋಳ ವೀಕ್ಷಣಾಲಯದ ನಿರ್ದೇಶಕನಾಗಿದ್ದ ಎಡ್ವರ್ಡ್ ಪಿಕರಿಂಗ್ (Edward Pikering), ಆಕಾಶದಲ್ಲಿರುವ ಪ್ರತಿಯೊಂದು ನಕ್ಷತ್ರವನ್ನು ನೋಡಿ, ಎಣಿಸಿ ಪಟ್ಟಿಮಾಡುವಂತಹ ಮಹತ್ವಾಕಾಂಕ್ಷೆಯ ಕಾರ್ಯವೊಂದನ್ನು ಕೈಗೊಂಡಿದ್ದನು. ಇದರಲ್ಲಿ ಛಾಯಾಚಿತ್ರದ ತಟ್ಟೆಯ ಮೇಲೆ ಚಿತ್ರಿತವಾದ ಪ್ರತಿಯೊಂದು ನಕ್ಷತ್ರದ ಬಣ್ಣ, ಸ್ಥಾನ ಮತ್ತು ಹೊಳಪನ್ನು ಬದ್ಧಗೊಳಿಸಿ ಪರೀಕ್ಷಿಸುವಂತಹ ದೈಹಿಕ ಶ್ರಮದ ಕಾರ್ಯಭಾರವನ್ನು ನಡೆಸಬೇಕಿತ್ತು. ವೀಕ್ಷಣಾಲಯದ ನಿರ್ದೇಶಕನಾಗಿದ್ದ ಪಿಕರಿಂಗ್, ಈ ಕಾರ್ಯಕ್ಕೆ ಮೊದಲಿಗೆ ಗಂಡಸರನ್ನು ನೇಮಿಸಿದ್ದ. ಆದರೆ ಈ ಗಂಡಸರಲ್ಲಿ ಏಕಾಗ್ರತೆ ಮತ್ತು ವಿವರಗಳ ಕಡೆಗೆ ನೀಡಬೇಕಾಗಿದ್ದ ಗಮನದ ಕೊರತೆಯಿರುವುದನ್ನು ಕಂಡು, ಬಹಳ ಹತಾಶನಾಗಿದ್ದನು.

Harem
“Pickering’s harem“      CC: Wiki

ಹಾಗಾಗಿ, ಮಹಿಳೆಯರು ಈ ಕಾರ್ಯವನ್ನು ಮೇಲಾಗಿ ನಿರ್ವಹಿಸಬಹುದೇನೋ ಎಂಬ ಆಶಾಭಾವನೆಯಿಂದ ಪಿಕರಿಂಗನು,  ಆ ಕಾರ್ಯದಿಂದ ಗಂಡಸರನ್ನು ವಜಾಮಾಡಿ, ಅವರ ಸ್ಥಾನದಲ್ಲಿ ಮಹಿಳೆಯರ ತಂಡವೊಂದನ್ನು ನೇಮಿಸಿದನು. ಅವನು ನೇಮಿಸಿದ ಈ ಮಹಿಳಾ ತಂಡವನ್ನು ಅಲ್ಲಿಯ ಜನ “ಪಿಕರಿಂಗನ ಜನಾನ” (Pickering’s harem)  ಎಂದು ಲೇವಡಿ ಮಾಡುತ್ತಿದ್ದರಂತೆ! ಪಿಕರಿಂಗನಿಗೆ ಇದರಿಂದ ಉತ್ತಮವಾಗಿ ಕಾರ್ಯನಿರ್ವಹಿಸುವ ಕೆಲಸಗಾರರು ದೊರೆತರಲ್ಲದೇ, ಅವನು ಗಂಡಸರಿಗೆ ನೀಡುತ್ತಿದ್ದ ಸಂಬಳದ ಅರ್ಧದಷ್ಟು ಹಣವನ್ನು ಮಾತ್ರಾ ಈ ಮಹಿಳೆಯರಿಗೆ ನೀಡುತ್ತಿದ್ದನು. ಇಲ್ಲೂ ಸಹಾ ಲಿಂಗ ಭೇದ ನೀತಿಯ ಕಾರಣದಿಂದ, ಮಹಿಳೆಯರಿಗೆ ನ್ಯಾಯವಾದ ಹಣ ದೊರಕುತ್ತಿರಲಿಲ್ಲ. ಅಷ್ಟೇ ಅಲ್ಲದೇ ಮಹಿಳಾ ತಂಡದಲ್ಲಿದ್ದ ವಿಜ್ಞಾನಿಗಳು ಅರ್ಥಾತ್ ವೀಕ್ಷಕಿಯರು, ತಮ್ಮದೇ ಸ್ವಂತ ವೀಕ್ಷಣೆಯ ಕಾರ್ಯಗಳನ್ನು ನಡೆಸುತ್ತಾರೆಂಬ ಬಗ್ಗೆ ಅವನು ತಲೆಕೆಡಿಸಿಕೊಳ್ಳುವ ಸಮಸ್ಯೆಯಿರಲಿಲ್ಲ. ಕಾರಣ ಮಹಿಳೆಯರಿಗೆ ದೂರದರ್ಶಕವನ್ನು ಬಳಸಲು ಅನುಮತಿಯಿರಲಿಲ್ಲ. ಆದರೆ, ಮೇಜಿಗೆ ಅಂಟಿ ಕುಳಿತ ಈ ಮಾನವ ಗಣಕಯಂತ್ರಗಳ ತಂಡದಲ್ಲಿ ಒಬ್ಬಳಾಗಿದ್ದ ಹೆನ್ರಿಯೆಟ್ಟ ಲೆವಿಟ್ಟಳು, ಅಸಾಮಾನ್ಯವಾದದ್ದನ್ನು ಅನ್ವೇಷಿಸಿದ್ದಳು.

1868ರ ಜುಲೈ 4ರಂದು, ಅಮೆರಿಕೆಯ ಮೆಸ್ಸಾಚ್ಯುಸೆಟ್ಸ್ ಪ್ರಾಂತದ, ಲಾಂಕಾಸ್ಟರಿನ ಚರ್ಚಿನಲ್ಲಿ ಪಾದ್ರಿಯಾಗಿದ್ದ ಜಾರ್ಜ್ ರಾಸ್ವೆಲ್ ಲೆವಿಟ್ ಮತ್ತು ಅವನ ಪತ್ನಿ ಹೆನ್ರಿಯೆಟ್ಟ ಸ್ವಾನ್ (ಕೆಂಡ್ರಿಕ್) ರಿಗೆ ಜನಿಸಿದ ಹೆನ್ರಿಯೆಟ್ಟ ಲೆವಿಟ್ಟ್, 1892ರಲ್ಲೇ ಗ್ರೀಕ್ ಶಾಸ್ತ್ರೀಯ ಸಾಹಿತ್ಯ, ಗಣಿತ, ತತ್ವಶಾಸ್ತ್ರಗಳಲ್ಲಿ ಪದವಿಯನ್ನು ಸಂಪಾದಿಸಿದ್ದಳು. ಕಾಲೇಜಿನ ನಾಲ್ಕನೆಯ ವರ್ಷದಲ್ಲಿ ಖಗೋಳಶಾಸ್ತ್ರದ ಪ್ರವಚನವನ್ನು ಆಯ್ದುಕೊಂಡಿದ್ದ ಹೆನ್ರಿಯೆಟ್ಟಳು, ಆ ವಿಷಯದಲ್ಲಿ A- ಅಂಕವನ್ನು ಗಳಿಸಿದ್ದಳು. ಮುಂದೆ ಅಮೆರಿಕ ಮತ್ತು ಯೂರೋಪಿನಲ್ಲಿ ಪ್ರವಾಸ ಮಾಡುವ ಸಮಯದಲ್ಲಿ ಹೆನ್ರಿಯೆಟ್ಟ, ತನ್ನ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಳು. 1893ರಲ್ಲಿ ಹಾರ್ವರ್ಡ್ ಕಾಲೇಜಿನ ಖಗೋಳವೀಕ್ಷಣಾಲಯದ ಮಾನವ ಗಣಕ ಯಂತ್ರಗಳೆಂದೇ ಕರೆಯಲ್ಪಡುತ್ತಿದ್ದ, ಎಡ್ವರ್ಡ್ ಪಿಕರಿಂಗನ ಮಹಿಳಾ ತಂಡವನ್ನು ಸೇರಿದ ಹೆನ್ರಿಯೆಟ್ಟ ಲೆವಿಟ್, ಒಬ್ಬ ಗಂಭೀರ ಸ್ವಭಾವದ, ಪರಿಶ್ರಮಿ ವ್ಯಕ್ತಿಯಾಗಿದ್ದು ಆ ತಂಡದ ಅತ್ಯಂತ ಪ್ರತಿಭಾವಂತ ಕೆಲಸಗಾರ್ತಿಯೆನಿಸಿದ್ದಳು. ಒಂದು ಗಂಟೆಯ ಕೆಲಸಕ್ಕೆ ಕೇವಲ $0.30ರಷ್ಟು ಹಣವನ್ನು ಮಾತ್ರಾ ಸಂಬಳವಾಗಿ ನೀಡುತ್ತಿದ್ದ ದಿನಗಳವು. ಪಿಕರಿಂಗನು ಹೆನ್ರಿಯೆಟ್ಟಳಿಗೆ ಅಸ್ಥಿರ ನಕ್ಷತ್ರಗಳನ್ನು (Variable Stars) ಅಧ್ಯಯನ ಮಾಡುವ ಕಾರ್ಯವನ್ನು ನಿರ್ವಹಿಸಿದ್ದನು. ಕಾಲಾನಂತರದಲ್ಲಿ ವ್ಯತ್ಯಾಸಗೊಳ್ಳುವ ಹೊಳಪನ್ನು ಹೊಂದಿದ ಈ ಅಸ್ಥಿರ ನಕ್ಷತ್ರಗಳ ಅಧ್ಯಯನವು ಆ ದಿನಗಳಲ್ಲಿ, ಖಗೋಳಶಾಸ್ತ್ರಜ್ಞರಿಗೆ ಅತ್ಯಂತ ಕುತೂಹಲಕರ ವಿಷಯವಾಗಿತ್ತು. ಇಂತಹ ನಕ್ಷತ್ರಗಳ  ಛಾಯಾಚಿತ್ರ ತಟ್ಟೆಗಳನ್ನು ಪರೀಕ್ಷಿಸಿ ನೋಡುತ್ತಿದ್ದ ಲೆವಿಟ್ಟಳು, ಒಂದು ಅಸಾಮಾನ್ಯವಾದ ಅನ್ವೇಷಣೆಗೆ ಕಾರಣವಾಗುತ್ತಾಳೆಂದು ಪಿಕರಿಂಗನು ಕನಸು-ಮನಸಿನಲ್ಲೂ ಯೋಚಿಸಿರಲಿಲ್ಲ.

Panoramic_Large_and_Small_Magellanic_Clouds by ESO ಖಗೋಳವೀಕ್ಷಣಾಲಯದ ಎಡಗಡೆ ಕಾಣುವದೇ ಸಣ್ಣ ಮೆಗೆಲ್ಯಾನಿಕ್ ಮೋಡಗಳು

ದಕ್ಷಿಣ ಗೋಲಾರ್ಧದಿಂದ ಸ್ಪಷ್ಟವಾಗಿ ಗೋಚರಿಸುವ, ಪೆರುವಿನ ಅರಿಕಿಪಾದಿಂದ ಹಾರ್ವರ್ಡ್ ಖಗೋಳವೀಕ್ಷಣಾಲಯದವರು ಚಿತ್ರೀಕರಿಸಿದ್ದ, ಸಣ್ಣ ಮೆಗೆಲ್ಯಾನಿಕ್ ಮೋಡಗಳು (Small Megellanic Cloud-SMC) ಎಂಬ ನೀಹಾರಿಕೆಯ (Nebula) ಛಾಯಾಚಿತ್ರದ ತಟ್ಟೆಯನ್ನು ಹೆನ್ರಿಯೆಟ್ಟ ಪರೀಕ್ಷಿಸಿ ನೋಡುತ್ತಿದ್ದಳು. ಆ ಸಮಯದಲ್ಲಿ ಈ ನೀಹಾರಿಕೆಗಳಿಗಿರುವ ದೂರ ಮತ್ತು ಆ ದೂರವನ್ನು ಅಳೆಯುವ ವಿಧಾನ ಇನ್ನೂ ಖಗೋಳವೀಕ್ಷಕರಿಗೆ ತಿಳಿದಿರಲಿಲ್ಲ. ಛಾಯಾಗ್ರಹಣ ಫಲಕಗಳನ್ನು ಕೂಲಂಕುಶವಾಗಿ ಪರೀಕ್ಷಿಸಿದ ಲೆವಿಟ್ಟಳು, ಅಸ್ಥಿರ ಚರತಾರೆಗಳು ಅಥವಾ ಸೀಫಿಡ್ ಅಸ್ಥಿರ ನಕ್ಷತ್ರಗಳು (Cepheid Variables) ಎಂಬ 25 ನಕ್ಷತ್ರಗಳನ್ನು, ಸಣ್ಣ ಮೆಗೆಲ್ಲಾನಿಕ್ ಮೋಡಗಳಲ್ಲಿ ಅನ್ವೇಷಿಸಿದಳು. ಈ ನಕ್ಷತ್ರಗಳಲ್ಲಿ ಅವುಗಳ ಹೊಳಪು ನಿಯತಕಾಲಿಕವಾಗಿ ಏರುಪೇರಾಗುತ್ತವೆ. ಇವೆಲ್ಲಾ ಅಸ್ಥಿರ ಚರತಾರೆಗಳೂ ಸಣ್ಣ ಮೆಗಾಲೆನಿಕ್ ಮೋಡಗಳಲ್ಲೇ ಇರುವುದರಿಂದ, ಆ ಎಲ್ಲ ನಕ್ಷತ್ರಗಳೂ ಭೂಮಿಯಿಂದ ಒಂದೇ ದೂರದಲ್ಲಿರಬೇಕು ಎಂದು ಊಹಿಸಿ ಸರಿಯಾಗಿಯೇ ತೀರ್ಮಾನಿಸಿದಳು. ಈ ಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು, ಈ ಅಸ್ಥಿರ ನಕ್ಷತ್ರಗಳಲ್ಲಿ ಅವುಗಳ ಹೊಳಪು ಮತ್ತು ನಿಯತಕಾಲಿಕೆಯ ನಡುವಣ ಇರುವ ಸಂಬಂಧವನ್ನು ಲೆಕ್ಕಾಚಾರ ಮಾಡಿದಾಗ, ಅಸ್ಥಿರ ಚರತಾರೆಯೊಂದರ ಏರಿಳಿತಗಳಿಗೆ ಹೆಚ್ಚಿನ ಸಮಯ ತೆಗೆದುಕೊಂಡಷ್ಟೂ, ಅದರ ಸ್ವಾಭಾವಿಕ ಹೊಳಪು ಹೆಚ್ಚಾಗಿರುತ್ತದೆ ಎನ್ನುವ ಸಂಗತಿಯನ್ನು ಕಂಡುಹಿಡಿದಿದ್ದಳು. ಅಂತಿಮವಾಗಿ ನಕ್ಷತ್ರವೊಂದನ್ನು ನೋಡಿ, ಅದರ ಸಾಂದ್ರತೆಯನ್ನು ಅಳೆಯಬೇಕಾದರೆ, ನೀವು ಕೇವಲ ಅದರ ಆವರ್ತನವನ್ನಷ್ಟೇ ಅಳತೆ ಮಾಡಿದರಾಯಿತು ಎನ್ನುವುದನ್ನು ಹೆನ್ರಿಯೆಟ್ಟ ಲೆವಿಟ್ ಅನ್ವೇಷಿಸಿದ್ದಳು. ನಂತರ ನಿಮ್ಮ ಹತ್ತಿರ ಇರುವ ನಕ್ಷತ್ರದ ಸ್ವಾಭಾವಿಕ ಹೊಳಪು ಮತ್ತು ಭೂಮಿಯಿಂದ ಕಾಣುವ ಅದರ ಸ್ಪಷ್ಟ ಹೊಳಪನ್ನು ಉಪಯೋಗಿಸಿ ಅದರ ಅಂತರವನ್ನು ಲೆಕ್ಕಾಚಾರ ಮಾಡಬಹುದು ಎಂದು ತೋರಿಸಿಕೊಟ್ಟಳು-ಏಕೆಂದರೆ ನಕ್ಷತ್ರದ ಹೊಳಪು, ಅದರ ದೂರಕ್ಕೆ ಸಂಬಂಧಿಸಿದಂತೆ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗೆ ಹೆನ್ರಿಯೆಟ್ಟ ಲೆವಿಟ್ಟಳ ಸಂಶೋಧನೆಯು ಎರಡು ಅಸ್ಥಿರ ಚರತಾರೆಗಳು ಹಾಗೂ ಭೂಮಿಯ ನಡುವಣ ಹೊಂದಿರುವ ಕೇವಲ ಸಂಗತ ದೂರವನ್ನು ಲೆಕ್ಕಾಚಾರಮಾಡಲು ಅವಕಾಶಮಾಡಿಕೊಡುತ್ತದೆ.

henrietta Levittಹಾರ್ವರ್ಡ್ ಖಗೋಳ ವೀಕ್ಷಣಾಲಯದ ಛಾಯಾಚಿತ್ರಣದ ಫಲಕಗಳ ಮೇಲೆ ದಾಖಲಾಗಿದ್ದ ಸುಮಾರು 1,777 ನಕ್ಷತ್ರಗಳನ್ನು ಸಂಬಂಧಿಸಿ ನಡೆಸಿದ್ದ ಲೆವಿಟ್ಟಳ ಈ ಅನ್ವೇಷಣೆಯು, ಇತರ ಖಗೋಳಶಾಸ್ತ್ರಜ್ಞರಿಗೆ ಸ್ವರ್ಗದ ಬಾಗಿಲನ್ನೇ ತೆರೆದಿಟ್ಟು ಮುಂದಿನ ಮಹದ್ಕಾರ್ಯಗಳಿಗೆ ಅನುವುಮಾಡಿಕೊಟ್ಟಿತ್ತು. ಲೆವಿಟ್ಟಳ ಈ ಸಂಶೋಧನೆ ಎಷ್ಟು ಗಮನಾರ್ಹವಾಗಿತ್ತೆಂದರೆ, 1925ರಲ್ಲಿ, ಸ್ವೀಡನ್ನಿನ ಗಣಿತಶಾಸ್ತ್ರಜ್ಞ, ಯೋಸ್ಟಾ ಮಿಟ್ಟಾಗ್-ಲೆಫ಼್ಲರ್ (Gösta Mittag-Lefller) ಲೆವಿಟ್ಟಳಿಗೆ ಪತ್ರ ಬರೆದು, ನಿಮ್ಮನ್ನು 1926ರ ಭೌತಶಾಸ್ತ್ರದ ನೋಬೆಲ್ ಪಾರಿತೋಷಕಕ್ಕೆ ನೇಮಕಾತಿ ಮಾಡಬೇಕೆಂದು ನನ್ನ ಮನ ಗಂಭೀರವಾಗಿ ಬಯಸುತ್ತಿದೆ ಎಂದು ತಿಳಿಸಿದ್ದನು. ದುರದೃಷ್ಟವಶಾತ್ ಅದಕ್ಕೆ ಮುಂಚೆಯೇ 1921ರಲ್ಲಿ ನಿಧನಳಾಗಿದ್ದ ಹೆನ್ರಿಯೆಟ್ಟ ಲೆವಿಟ್ಟಳಿಗೆ ಆ ಪತ್ರ ತಲುಪಲೇ ಇಲ್ಲ. ಬದಲಾಗಿ ಆ ಪತ್ರವು ಅಂದು ಹಾರ್ವರ್ಡ್ ಖಗೋಳ-ವೀಕ್ಷಣಾಲಯದ ನಿರ್ದೇಶಕನಾಗಿದ್ದ ಹಾರ್ಲೋ ಶೆಪ್ಲಿಯ (Harlow Shepely) ಕೈಸೇರಿತು. ಮಿಟ್ಟಾಗ್-ಲೆಫ಼ಲರ್ ಪತ್ರಕ್ಕೆ ಬರೆದ ಉತ್ತರದಲ್ಲಿ ಶೆಪ್ಲಿ, ಶಾಪಗ್ರಸ್ತ ಹೆನ್ರಿಯೆಟ್ಟಳ ಬಗ್ಗೆ ಕೇವಲ ಮಸುಕಾದ ಪ್ರಶಂಸೆಯ ಮಾತುಗಳನ್ನು ಬರೆದು, ಆ ಸಂಶೋಧನೆಯ ಮೂಲ ಹಕ್ಕುದಾರ ತಾನೆಂತಲೂ, ಅವಳ ಸಂಶೋಧನೆಯ ಫಲಿತಾಂಶವನ್ನು ವ್ಯಾಖ್ಯಾನಿಸಿ, ಅದರ ಅರ್ಥವಿವರಣೆ ತಾನು ನೀಡಿದ್ದ ಕಾರಣದಿಂದ, ಅದರ ಭೌತಿಕ ಸಾಧನೆ ತನ್ನದೆಂದು ಸಮರ್ಥಿಸಿಕೊಂಡು ಬರೆದಿದ್ದನು. ಮೃತರಾದವರಿಗೆ ಮರಣೋತ್ತರವಾಗಿ ನೋಬೆಲ್ ಪ್ರಶಸ್ತಿ ನೀಡುವ ಪದ್ಧತಿ ಇಲ್ಲದಿದ್ದ ಕಾರಣ, ಹೆನ್ರಿಯೆಟ್ಟಳಿಗೆ ಅವಳು ಮಾಡಿದ್ದ ಕಾರ್ಯಕ್ಕೆ ಸಲ್ಲಬೇಕಾಗಿದ್ದ ಗೌರವ ದಕ್ಕಲಿಲ್ಲ. ಎಡ್ವರ್ಡ್ ಪಿಕರಿಂಗನು, ಲೆವಿಟ್ಟಳನ್ನು ತನ್ನ ವೀಕ್ಷಣಾಲಯದ ಕಾರ್ಯಕ್ಕೆ ನೇಮಿಸಿಕೊಂಡಾಗ, ಅವಳು ನಡೆಸಿದ ಕಾರ್ಯ ಖಗೋಳಶಾಸ್ತ್ರದಲ್ಲಿ ಮಹತ್ಕ್ರಾಂತಿಯನ್ನುಂಟು ಮಾಡಬಹುದೆಂಬ ಯಾವುದೇ ಕಲ್ಪನೆಯೂ ಇರಲಿಲ್ಲ. ಲೆವಿಟ್ಟಳ ಸಂಶೋಧನೆಯ ಫಲಿತಾಂಶವನ್ನು 1908ರಲ್ಲಿ The Annals of the Astronomical Observatory of Harvard College ಪ್ರಕಾಶನದ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿತ್ತು. ಅವಳ ಈ ಅನ್ವೇಷಣೆಯನ್ನು “ಕಾಲಾವಧಿ ಹಾಗೂ ಪ್ರಕಾಶಮಾನತೆಯ ಸಂಬಂಧ” (Period and Luminosity Relationship) ಎಂದು ಕರೆಯಲಾಗುತ್ತದೆ. ನೀಹಾರಿಕೆಗಳಲ್ಲಿಯ ಈ ಸಂಬಂಧವು ಲೆವಿಟ್ಟಳ ಅನ್ವೇಷಣೆಗೆ, ಖಗೋಳಶಾಸ್ತ್ರದಲ್ಲಿ ಒಂದು ಮಾನದಂಡ ಕಂದೀಲಿನ ಸ್ಥಾನವನ್ನು ನೀಡಿತು. ಇದನ್ನೇ ಆಧಾರವಾಗಿಟ್ಟುಕೊಂಡು ಡೆನ್ಮಾರ್ಕಿನ ಪ್ರಖ್ಯಾತ ಖಗೋಳಶಾಸ್ತ್ರಜ್ಞ ಹೆರ್ಟ್ಝಸ್ಪ್ರುಂಗ್ (Hertzsprung, Denmark), ನಮ್ಮ ಆಕಾಶಗಂಗೆಯಲ್ಲಿರುವ ಇನ್ನೂ ಅನೇಕ ನೀಹಾರಿಕೆಗಳ ನಡುವಿನ ದೂರವನ್ನು ಕಂಡುಹಿಡಿದನು.

hubble
ಕಾರ್ಯನಿರತ ಎಡ್ವರ್ಡ್ ಹಬ್ಬಲ್

 

ಲೆವಿಟ್ಟಳ ಈ ಅನ್ವೇಷಣೆ ನಮ್ಮ ವಿಶ್ವದ ಬಗ್ಗೆ ನಮಗಿದ್ದ ಅನೇಕ ಕಲ್ಪನೆಗಳನ್ನು ಶಾಶ್ವತವಾಗಿ ಬದಲಾಯಿಸಿತು. ಇದರ ಆಧಾರದ ಮೇಲೆಯೇ ಮುಂದೆ ಹಾರ್ಲೋ ಶಪ್ಲೆ (Harlow Shapley), ಸೂರ್ಯನನ್ನು ನಮ್ಮ ವಿಶ್ವದ ಕೇಂದ್ರ ಭಾಗದಿಂದ ವರ್ಗಾಯಿಸಲು ಪ್ರೇರೇಪಿಸಿತಲ್ಲದೇ, ಹೆನ್ರಿಯೆಟ್ಟಳ ಈ ಕ್ರಾಂತಿಕಾರಕ ಅನ್ವೇಷಣೆಯ ಸಹಾಯದಿಂದಲೇ, ನಂತರ ಅಮೆರಿಕೆಯ ಪ್ರಸಿದ್ಧ ಖಗೋಳವೀಕ್ಷಕನಾದ ಹಬ್ಬಲ್ಲನಿಗೆ (Edward Hubble), ನಮ್ಮ ವಿಶ್ವವು ವಿಸ್ತರಿಸುತ್ತಿದೆ ಎಂದು ದೃಢಪಡಿಸಲು ಸಾಧ್ಯವಾಯಿತು. ಆಧುನಿಕ ಖಗೋಳತಜ್ಞರು ನಮ್ಮ ವಿಶ್ವದ ರಚನೆ ಮತ್ತು ಅದರ ಪ್ರಮಾಣವನ್ನು ಅರಿಯುವಲ್ಲಿ, ಅಂತರ-ತಾರಾಗಣೀಯ ಪ್ರಮಾಣದಲ್ಲಿ ಅಂತರಗಳನ್ನು ನಿಖರವಾಗಿ ಮಾಪನ ಮಾಡಲು ಸಹಾಯಕಾರಿಯಾಗುವಂತಹ ಒಂದು ಮಹಾನ್ ಅನ್ವೇಷಣೆಯ ಕಾರ್ಯಕ್ಕೆ, ಅಂದು ಹೆನ್ರಿಯೆಟ್ಟ ಲೆವಿಟ್ಟಳಿಗೆ ಹಾರ್ವರ್ಡ್ ಖಗೋಳವೀಕ್ಷಣಾಲಯ ನೀಡುತ್ತಿದ್ದ ಸಂಬಳ ವಾರಕ್ಕೆ ಕೇವಲ $.10.50! ಅಂತಹ ಮಹಾನ್ ಅನ್ವೇಷಣೆಯ ಬೆಲೆ ಇಷ್ಟೇನೇ! ಮಹಿಳೆಯಾದ್ದ ಕಾರಣ ಹೆನ್ರಿಯೆಟ್ಟಳಿಗೆ ಹಣವಂತೂ ಕಡಿಮೆ ಲಭ್ಯವಾಗಿತ್ತು, ಅದರೆ ವಿಧಿಯ ವಿಲಾಸ ನೋಡಿ, ಅವಳು ಸತ್ತ ಐದು ವರ್ಷಗಳ ನಂತರ, ಯೋಷ್ಟಾ ಮಿಟ್ಟಾಗ್-ಲೆಫ಼್ಲರ್ ಆಕೆಯ ಹೆಸರನ್ನು ನೋಬೆಲ್ ಪ್ರಶಸ್ತಿಗೆ ಸೂಚಿಸುವುದಾಗಿ ಬರೆದಿದ್ದ. ಅಂತೂ ಇಂತೂ ಕುಂತಿಯ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ, ಯಾವುದೋ ಒಂದು ಕಾರಣದಿಂದ ಮತ್ತೊಬ್ಬ ಅರ್ಹ ಮಹಿಳೆಯ ಮಹಾನ್ ಕ್ರಾಂತಿಕಾರಕ ಅನ್ವೇಷಣೆಗೆ ವಿಜ್ಞಾನ ಲೋಕದ ಅತ್ಯುತ್ತಮ ಪಾರಿತೋಷಕ ಲಭಿಸಲಿಲ್ಲ. 1921ಕಡೆಯ ಹೊತ್ತಿಗೆ ಕ್ಯಾನ್ಸರ್ ರೋಗಕ್ಕೆ ಬಲಿಯಾದ ಹೆನ್ರಿಯೆಟ್ಟ ಲೆವಿಟ್ಟಳಿಗೆ ಅವಳ ಜೀವಿತಕಾಲದಲ್ಲಿ ಅಮೆರಿಕೆಯ ಖಗೋಳಶಾಸ್ತ್ರ ಮತ್ತು ಖಭೌತಶಾಸ್ತ್ರ ಸಂಸ್ಥೆ, ಅಮೆರಿಕೆಯ ವಿಜ್ಞಾನ ಅಸೋಸಿಯೇಶನ್ ಅಂತಹ ಗೌರವಾನ್ವಿತ ಸಂಘಗಳ ಗೌರವ ಸದಸ್ಯತ್ವ ದೊರೆತಿದ್ದರೂ, ಅವಳ ಮಹಾನ್ ಕಾರ್ಯಕ್ಕೆ ಇನ್ನೂ ಹೆಚ್ಚಿನ ಗೌರವ ಸಿಕ್ಕಬೇಕಾಗಿತ್ತು. ಎಡ್ವರ್ಡ್ ಹಬ್ಬಲ್ಲನಂತೂ, ತನ್ನ ಜೀವಿತಕಾಲದಲ್ಲಿ ಅನೇಕ ಬಾರಿ ಹೆನ್ರಿಯೆಟ್ಟ ಲೆವಿಟ್ಟಳಿಗೆ ನೋಬೆಲ್ ಪ್ರಶಸ್ತಿ ದೊರಕಬೇಕಾಗಿತ್ತು ಎಂದಿದ್ದನು.

ಆದರೆ ದುರಾದೃಷ್ಟವಶಾತ್ ಅವಳಿಗೆ ಅದು ದಕ್ಕಲಿಲ್ಲ. ಆದರೆ ಇಂದು ನಮ್ಮ ಭೂಮಿಯ ಉಪಗ್ರಹವಾದ ಚಂದ್ರನ ಮೇಲಿರುವ ಅನೇಕ ಕುಳಿಗಳಲ್ಲಿ ಒಂದಕ್ಕೆ Crater Levitt  ಎಂದು ಅವಳ ಹೆಸರನ್ನಿಡಲಾಗಿದೆ. Moonಹಾಗಾಗಿ ಅವಳ ಹೆಸರು ಒಂದು ರೀತಿಯಲ್ಲಿ ಅವಳು ನಡೆಸಿದ ಅನ್ವೇಷಣೆಗೆ ತಕ್ಕದಾಗಿ ಚಿರಂತನವಾಗಿ ಉಳಿದಿದೆ ಅನ್ನಬಹುದು. ಅಷ್ಟೇ ಏನು, ಪ್ರಸಿದ್ಧ ಅಮೆರಿಕೆಯ ನಾಟಕಕಾರ್ತಿ ಲಾರೆನ್ ಗುಂಡರಸನ್ (Lauren Gunderson) ಬರೆದ “ನಿಶ್ಯಬ್ದ ಆಕಾಶ” (Silent Sky) ಎಂಬ ನಾಟಕವು, ಹೆನ್ರಿಯೆಟ್ಟ ಲೆವಿಟ್ಟಳ ಜೀವನವನ್ನೇ ಕುರಿತಾಗಿದ್ದು, ಅವಳ ಜೀವನಯಾತ್ರೆಯನ್ನು ಸುಂದರವಾಗಿ ನಿರೂಪಿಸುತ್ತದೆ.

ಏನೇ ಆಗಲೀ ಅಂದಿನ ಸಮಾಜದಲ್ಲಿ ಮಹಿಳೆಯರ ಬಗ್ಗೆ ಇದ್ದ ಎಲ್ಲಾ ರೀತಿಯ ಪೂರ್ವಾಗ್ರಹಗಳ ನಡುವೆಯೂ, ಸದ್ದಿಲ್ಲದೇ ತನ್ನ ಕಾರ್ಯ ನಿರ್ವಹಿಸಿ, ಖಗೋಳಶಾಸ್ತ್ರದಲ್ಲಿ ತನ್ನ ಛಾಪನ್ನು ಒತ್ತಿದ ಹೆನ್ರಿಯೆಟ್ಟ ಲೆವಿಟ್ಟಳ ಹೆಸರನ್ನು ಖಗೋಳಶಾಸ್ತ್ರದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು. ತನ್ನ ತಾರುಣ್ಯದಲ್ಲಿಯೇ ಕ್ಯಾನ್ಸರ್ ವ್ಯಾಧಿಗೆ ಬಲಿಯಾದ ಹೆನ್ರಿಯೆಟ್ಟಳ ಆಯಸ್ಸು ಹೆಚ್ಚಿದ್ದರೆ, ಅವಳಿಂದ ಇನ್ನೂ ಅನೇಕ ಮಹಾನ್ ಅನ್ವೇಷಣೆಗಳು ನಡೆಯುತ್ತಿದ್ದವು ಎನ್ನುವುದರಲ್ಲಿ ಸಂದೇಹವೇ ಇಲ್ಲಾ!

ನಮ್ಮೂರು ಚಂದವೋ, ಈ ಊರು ಅಂದವೋ? ಆದರೆ ಈಗಾವುದಯ್ಯಾ ನನ್ನೂರು?–ರಾಮಮೂರ್ತಿಯವರು ಬರೆದ ಲೇಖನ

ಇತ್ತೀಚೆಗೆ ‘ನಮ್ಮ ಊರು ಯಾವುದು’ ಎಂಬ ವಿಚಾರದ ಬಗ್ಗೆ ರಾಜಾರಾಮ್ ಕಾವಳೆ, ವತ್ಸಲಾ ರಾಮ್, ಶ್ರೀವತ್ಸ Ramamurthy Portraitsದೇಸಾಯಿ, ಉಮಾ ವೆಂಕಟೇಶ್ ಮತ್ತು ಅರವಿಂದ ಕುಲಕರ್ಣಿ ಅವರು ರಸವತ್ತಾಗಿ ಬರೆದಿದ್ದಾರೆ. ಆದರೆ ನನ್ನ ಊರು ಯಾವುದು ಎಂಬ ಪ್ರಶ್ನೆ ನನ್ನನ್ನು ಬಹಳ ದಿನಗಳಿಂದ ಕಾಡಿಸುತ್ತಿದೆ, ಎನ್ನುತ್ತಾರೆ ಬೇಸಿಂಗಸ್ಟೋಕ್ ವಾ್ಸಿ ರಾಮಮೂರ್ತಿ.

ಈ ಲೇಖಕರ ಪರಿಚಯ (ಅದು ಅವಶ್ಯವೇ?):  ಯು ಕೆ ಕನ್ನಡ ಬಳಗದ ಆರಂಭದ ದಿನಗಳಿಂದಲೂ ವಿವಿಧ ರೀತಿಯಲ್ಲಿ ಸತತವಾಗಿ ಅದರ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಸ್ವಯಂ ಸೇವಕರಾಗಿ,  ಕಾರ್ಯಕಾರಿ ಮಂಡಲಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆನ್ನಿಗೆ ನಿಂತು ಕೆಲಸ ಮಾಡಿದ, ಮಾಡುತ್ತಿರುವ ಗಣ್ಯರ ಮುಂಚೂಣಿಯಲ್ಲಿ ಅವರ ಹೆಸರು ಯಾವಾಗಲೂ ಇದ್ದೇ ಇರುತ್ತದೆ ಎಂದರೆ ಅದೇನೂ ಅತಿಶಯೋಕ್ತಿಯಲ್ಲ. ಇದರಲ್ಲಿ ಯಾವ ಕನ್ಫ಼್ಯೂಶನ್ನೂ ಇಲ್ಲ. ಆದರೆ ”ನನ್ನ ಊರಿನ ಬಗ್ಗೆ ….?” ಅವರೇ ಬರೆದದ್ದನ್ನು ಮುಂದೆ ಓದಿ:

 ನನ್ನ ಪತ್ನಿ ಸೀತುಗೆ ಈ ಸಮಸ್ಯೆ ಇಲ್ಲ. ಬೆಳೆದಿದ್ದು ಬೆಂಗಳೂರು, ಸಂಸಾರ ಮಾಡುತ್ತಿರುವುದು ಇಂಗ್ಲೆಂಡ್. ಇಂಡಿಯಾಗೆ ಹೋದಾಗ ನನಗೆ ಕೆಲವರು ಎರಡು ಪ್ರಶ್ನೆಗಳನ್ನು ಕೇಳುತ್ತಾರೆ, “What is your good name?” ಮತ್ತು “ನಿಮ್ಮ ನೇಟಿವ್ ಪ್ಲೇಸ್?”.  ಗುಡ್ ನೇಮೂ ಬ್ಯಾಡ್ ನೇಮೂ ಗೊತ್ತು ಆದರೆ ನೇಟಿವ್ ಪ್ಲೇಸ್ ? ದೇವರಿಗೇ ಗೊತ್ತು. ಅದು ಯಾಕೆ ಅಂತ ಕೇಳ್ತೀರಾ?

ಕಾವೇರಿ ನದಿ ಮಧ್ಯ ಗೋವಿನ ಬಂಡೆ
ಕಾವೇರಿ ನದಿ ಮಧ್ಯ ಗೋವಿನ ಬಂಡೆ All Photos: Author’s

ನೋಡಿ, ನಮ್ಮ ತಂದೆಯ ಕಡೆಯವರು ತಮಿಳುನಾಡಿನಿಂದ ಬಂದವರು ಅಂತ ಕೇಳಿದ್ದೆ, ಬಹಳ ಹಿಂದೆ ಅಂತ ಇಟ್ಕೋಳಿ. ಇವರು ವಲಸೆ ಬಂದು ಕಾವೇರಿ ನದಿಯ ದಡದಲ್ಲಿ ಇರುವ ಹನಸೋಗೆಯಲ್ಲಿ (ಹಾಸನ ಡಿಸ್ಟ್ರಿಕ್ಟ್) ಬಂದು ಸೆಟ್ಲ್ ಆದರಂತೆ. ಯಾಕೆ ಅಂತ ಕೇಳಬೇಡಿ, ನನಗೆ ಗೊತ್ತಿಲ್ಲ. ನಮ್ಮ ಮನೆ ದೇವರು ಜೋಲಾರ ಪೇಟೆ ಹತ್ತಿರ ಘಟಕಾಚಲ. ಇದು ಇರುವುದು ತಮಿಳುನಾಡಿನಲ್ಲಿ.  ಅಜ್ಜಿ ಮನೆಯವರು ಮಹಾರಾಷ್ಟ್ರದವರು. ಇವರೆಲ್ಲಾ ಪೇಶ್ವೆಗಳ ಕಾಲದಲ್ಲಿ ಬಂದವರು, ಕಂದಾಯ ವಸೂಲಿ ಗಾರರು. ಕೊಣಸೋರು (ಮೈಸೂರು ಮತ್ತು  ಕೊಡಗು ಗಡಿಯಲ್ಲಿ) ನೆಲಸಿದ್ದವರು.  ನಮ್ಮ ಅಜ್ಜಿಗೆ 4 ಜನ  ಅಣ್ಣಂದಿರು.

ಮನೆಯಲ್ಲಿ ಅನುಕೂಲವಂತರು ಬೇಕಾದಷ್ಟು ತೋಟ ಗದ್ದೆ  ಇತ್ತು. ಒಬ್ಬ ಅಣ್ಣ ರಾಮರಾಯರು, ಮನೆ ಎದುರಲ್ಲೇ ಇದ್ದ ಪ್ರಾಥಮಿಕ ಶಾಲೆಯಲ್ಲಿ ಓದಿ, ಅಲ್ಲೇ ಮೇಷ್ಟ್ರು ಆಗಿ ರಿಟೈರ್ ಆದರು.  ಸಾಯಂಕಾಲ ಅವರು ಜಗಲಿ ಮೇಲೆ ಕೂತು ಹಳ್ಳಿಯವರ  ಕಷ್ಟಗಳನ್ನ ಮತ್ತು  ಜಗಳಗಳನ್ನು ಪರಿಹರಿಸುತ್ತಿದರು. ಇದು ಸುಮಾರು 1920 ರಲ್ಲಿ. ಇನ್ನೊಬ್ಬ ಅಣ್ಣ ನಾರಾಯಣರಾಯರು ಬಹಳ ಮುಂದುವರೆದರು. 1925 ರಲ್ಲಿ ಮೈಸೂರು ರಾಜ್ಯದ Education Dept. ನಲ್ಲಿ ಡೈರೆಕ್ಟರ್ ಆಗಿದ್ದರು. ಇವರೇ ನಮ್ಮ ತಂದೆಗೆ ಕೆಲಸ ಕೊಡಿಸಿದ್ದರು. Nepotism ಅಂದಿರಾ, ಹೌದು ಇದು ಬಹಳ ಹಳೇ ಪದ್ದತಿ ಅಲ್ಲವೇ?

ನಾನು ಹುಟ್ಟಿದ್ದು ಕಾವೇರಿ ದಡದಲ್ಲಿರುವ ರಾಮನಾಥಪುರ, ನಮ್ಮ ತಾಯಿಯ ಊರು.  ಇಲ್ಲಿ ನಮ್ಮ ಅಜ್ಜಿ f
ಮತ್ತು ಮುತ್ತಜ್ಜಿ ಇದ್ದರು. ಇವರ ಮನೆಗೆ ಪ್ರತಿ ಬೇಸಿಗೆ ರಜಕ್ಕೆ ಹೋಗುತ್ತಿದ್ದೆ . ನಮ್ಮ ಅಜ್ಜಿ ಅಡ್ರೆಸ್ ಬಹಳ ಸಿಂಪಲ್: “ಅರಕಲಗೂಡು ತಾಲೋಕು ರಾಮನಾಥಪುರದ ಓಣಿ ನಾಗೂ ಬಾಯಿ  ಅವರಿಗೆ”.

ಇವರ ಮನೆ ಸುಬ್ರಹ್ಮಣ್ಯ ದೇವಸ್ತಾನದ ಎದರು ಓಣಿ.  ಸಾಯಂಕಾಲ ನಮ್ಮಗೆಲ್ಲಾ ಮುತ್ತಜ್ಜಿ, ತುಳಸಿಬಾಯಿ ನದಿ ದಡದಲ್ಲಿ ಕಥೆಗಳ ಮಧ್ಯೆ ಕೈತುತ್ತು ಹಾಕುತ್ತಿದ್ದರು. ಈ ನದಿಯಲ್ಲಿ ದೊಡ್ಡ ದೊಡ್ಡ ಮೀನುಗಳು (ಇನ್ನೂ  ಇದೆ).  ಜೇಬಿನಲ್ಲಿ ಕಡಲೆಪುರಿ ತುಂಬಿಕೊಂಡು ಮೀನುಗಳಿಗೆ ಹಾಕುತ್ತಿದ್ದೆವು.

Old woman on BusB&W 4
”ಎಷ್ಟು ಎತ್ತು ಕಟ್ಟಿದ್ದಾರೆ?”

ಅರಕಲ ಗೂಡಿನಿಂದ ಮೊದಲನೇ  ಬಸ್ ಬಂದಾಗ ನಮ್ಮ ಮುತ್ತಜ್ಜಿಯ  ತಾಯಿನ ಬಸ್ನಲ್ಲಿ ಕರೆಕೊಂಡು ಹೋದರು. ಪಾಪ ಈ ಮುದುಕಿಗೆ  ಸರಿಯಾಗಿ ಕಣ್ಣು ಕಾಣುತ್ತಿರಲ್ಲಿಲ್ಲ. ಬಸ್ ಬಹಳ ಸ್ಪೀಡಿನಲ್ಲಿ ಹೋಗುತ್ತಾ ಇತ್ತು. ಆಶ್ಚರ್ಯದಿಂದ   ”ಎಷ್ಟು ಎತ್ತು ಕಟ್ಟಿದಾರೆ ಈ ಗಾಡಿಗೆ” ಅಂತ ಕೇಳಿದ್ದರಂತೆ!

School Teacher by RKLaxman
”ಮೇಷ್ಟ್ರು” – ಆರ್ ಕೆ ಲಕ್ಷ್ಮಣ್ ‘ಕೊರವಂಜಿ’ಯಲ್ಲಿ. ಕೃಪೆ: ಅಪರಂಜಿ ಶಿವಕುಮಾರ
ನಂಜನಗೂಡಿನ ದೇವಸ್ತಾನ
ನಂಜನಗೂಡಿನ ದೇವಸ್ತಾನ

ನಮ್ಮ ತಂದೆ ಹುಟ್ಟಿದ್ದು ನಂಜನಗೂಡಿನಲ್ಲಿ. ಅಲ್ಲಿ ಅವರ ತಂದೆ ಕೆಲಸಕ್ಕೆ ಬಂದವರು ಅಂತ ಕಾಣುತ್ತೆ, ಸರಿಯಾಗಿ ಗೊತ್ತಿಲ್ಲ. ನಾನು ಈ ಊರಿನ ಹೈಸ್ಕೂಲಿನಲ್ಲಿ  ಓದಿದೆ. ನಮ್ಮ ಹೆಡ್ ಮಾಸ್ಟರ ಹೆಸರು “ತಾಪತ್ರಯ ಅಯ್ಯಂಗಾರ್“  ಇವರ ನಿಜವಾದ ಹೆಸರು ಮರುತುಹೋಗಿದೆ.  ಬಹಳ ಸ್ಟಿಕ್ಟ್ ಮನುಷ್ಯ, ಲೇಟಾಗಿ ಬಂದರೆ ಏಟು. ಇವರಿಗೆ ಈ ಅಡ್ಡ ಹೆಸರು ಹೇಗೆ ಬಂತು ಅನ್ನುವುದು ಸ್ವಲ್ಪ ತಮಾಷಿಯಾಗಿದೆ. ಬಾಲ್ಯದಲ್ಲಿ ಇವರು ಚೆನ್ನಾಗಿ ಫುಟ್ ಬಾಲ್ ಆಡುತ್ತಿದ್ದರಂತೆ. ಒಂದು ಮ್ಯಾಚಿಗೆ ಬಂದಿದ್ದು ಲೇಟ ಆಯಿತು “ಏನೋ ಮನೇಲಿ ತಾಪತ್ರಯ ಇತ್ತು ಅದಕ್ಕೆ ಲೇಟ ಆಯಿತು ” ಅಂದರಂತೆ . ಅವತ್ತಿಂದ ಅವರ ಹೆಸರು ಹೀಗೆ ನಿಂತುಹೋಯಿತಂತೆ.

ನಮ್ಮ ತಂದೆ ಮಿಡ್ಲ್ ಸ್ಕೂಲ್ headmaster. ಕೋಲಾರ ಡಿಸ್ಟ್ರಿಕ್ಟ್ ನ ಕೈವಾರ, ಚಿಂತಾಮಣಿ, ಕಾಗತಿ ಮುಂತಾದ ಕಡೆ ಇದ್ದು ಕೊನೆಗೆ ನಾನು ಬೆಂಗಳೂರಿಗೆ ಕೆಲಸಕ್ಕೆ ಬಂದೆ. ನೀವು ಕೈವಾರದ ಹೆಸರು ಕೇಳಿರಬಹುದು. ಪೂರ್ವ ಕಾಲದ ಹೆಸರು ಏಕಚಕ್ರ ನಗರ, ಮಹಾಭಾರತದಲ್ಲಿ. ಇಲ್ಲೇ ಭೀಮ ಬಕಾಸುರನ್ನು ಕೊಂದಿದ್ದು ಅಂತ ಪ್ರತೀತಿ.

ಈ ದೇಶಕ್ಕೆ ಬರುವುದು ನನ್ನ ಕನಸಿನಲ್ಲೂ ಬಂದಿರಲಿಲ್ಲ. ಆದರೆ ನನ್ನ ಸ್ನೇಹಿತ ಹೇಳಿದ Employment voucher ಗೆ  ಅಪ್ಲೈ ಮಾಡು ಅಂದ. ಮಾಡಿ ಆರು ತಿಂಗಳಿಗೆ ಪೋಸ್ಟ್ ನಲ್ಲಿ  On Her Majesty`s Service ಕಾಗದ ಬಂತು ಇಂಗ್ಲೆಂಡಿಗೆ ಹೋಗುವುದಕ್ಕೆ. ಮನೆಯಲ್ಲಿ ಹೇಳಿದರೆ  ನಮ್ಮಜ್ಜಿ ನನಗೆ ಹುಚ್ಚು ಅಂತ ಹೇಳಿದರು. ಆದರೆ ನಮ್ಮ ತಂದೆ ಹೋಗು, ಆದರೆ 5 ವರ್ಷ ದಲ್ಲಿ ವಾಪಸ್ ಬಂದು ಬಿಡು ಅಂದರು. ಇದು ಆಗಿ ಈ ತಿಂಗಳಿಗೆ ೫೦ ವರ್ಷ ಆಯಿತು. ನಾನು ಇನ್ನೂ ಇಲ್ಲೇ ಇದ್ದೀನಿ.OHMS 1965

ಹೇಗೋ ಮಾಡಿ  ಏರ್ ಇಂಡಿಯಾ  ಟಿಕೆಟ್ ಆಯ್ತು. ಆಗ ಪಾಕಿಸ್ತಾನದ ಮೇಲೆ ಯುದ್ಧ ಶುರು ಆಯಿತು. ಬೊಂಬಾಯಿಗೆ ಬಂದರೆ ಅಲ್ಲಿ ಬ್ಲಾಕ್ ಔಟ್. airport ತಲುಪಿದಾಗಲೂ ಹೊರಡುವುದು ಗ್ಯಾರಂಟಿ ಇರಲಿಲ್ಲ .ಆಗ  ಕೇವಲ Rs.50 (£3) ಮಾತ್ರ exchange ಕೊಡುತ್ತಿದ್ದರು.ಇದನ್ನ ಜೇಬಿನಲ್ಲಿ ಹಾಕಿ ಇಲ್ಲಿಗೆ ಬಂದೆ  1965ರಲ್ಲಿ.

ಲಂಡನ್ನಿಗೆ ಬಂದು Essex, Cambridgeshireನಲ್ಲಿ ವಾಸಮಾಡಿ ಈಗ ಮೂವತ್ತು ವರ್ಷಗಳಿಂದ ಬೇಸಿಂಗಸ್ಟೋಕ್ ನಲ್ಲಿ ವಾಸಿಸುತ್ತಿದ್ದೇನೆ. ಈಗ ನೀವೇ ಹೇಳಿ ನನ್ನ ‘ನೇಟಿವ್ ಪ್ಲೇಸ್’ ಯಾವುದು? ಅಂತ. ನೀನು Gipsy ಅಂತ ನಮ್ಮ ಮಕ್ಕಳು ಹಾಸ್ಯ ಮಾಡುತ್ತಾರೆ! ಈ ವಿಚಾರನೆಲ್ಲಾ ನಮ್ಮ ಇಬ್ಬರು ಮೊಮ್ಮಕ್ಕಳಿಗೆ ಹೇಳಬೇಕು!

              ರಾಮಮೂರ್ತಿ, Basingstoke