ಬಾಲ್ಯದ ನೆನಪುಗಳು – ‘ಬಾಲ್ಯದ ಬೆಳದಿಂಗಳು’ ರಾಧಿಕಾ ಜೋಶಿ ಹಾಗೂ ‘ನನ್ನ ಬಾಲ್ಯದ ಕಥೆಗಾರರು’ ಲಕ್ಷ್ಮೀನಾರಾಯಣ ಗುಡೂರ

ಪ್ರಿಯರೇ, ಚಿಕ್ಕಂದಿನ ದಿನಗಳಲ್ಲಿ ಕಟ್ಟಿಕೊಂಡ ಅನುಭವಗಳ ಬುತ್ತಿ ಕರಗದಂಥದ್ದು. ಅದು ಸಿಹಿ, ಕಹಿ, ಹುಳಿ, ಉಪ್ಪು, ಖಾರ ಎಂಥದ್ದೇ ಇರಲಿ, ಅದರ ರುಚಿ ಬಾಯಲ್ಲಿ ಕೊನೆಯವರೆಗೂ ಉಳಿಯುವುದು ಖಂಡಿತ. ನೀವು ಕೇಳಿರಬಹುದು ಈ ಗಝಲ್, ಜಗಜಿತ ಸಿಂಗ್ ಹಾಡಿರೋದು, “ಯಹ್ ದೌಲತ್ ಭೀ ಲೇಲೋ, ಯಹ್ ಶೋಹೊರತ್ ಭೀ ಲೇಲೋ, ಮಗರ್ ಮುಝ ಕೋ ಲೌಟಾದೋ ಬಚಪನ ಕಾ ಸಾವನ್; ವೋ ಕಾಗಜ ಕಿ ಕಷ್ತಿ ವೋ ಬಾರಿಶ್ ಕಾ ಪಾನಿ” .. ಆ ರೀತಿ ಎಷ್ಟು ಬೇಡಿಕೊಂಡರೂ ಬಾಲ್ಯ ತಿರುಗಿ ಬಾರದೆನ್ನುವುದೇನೋ ನಿಜ. ಆದರೆ, ಆ ನೆನಪುಗಳನ್ನ ಮತ್ತೆ ಮನಸ್ಸಿನ ಅಟ್ಟದಿಂದ ಕೆಳಗಿಳಿಸಿ, ಧೂಳು ಝಾಡಿಸಿ ಒಂದೊಂದಾಗಿ ತೆಗೆದು, ನೋಡಿ ನಕ್ಕು, ನಗುತ್ತಾ ತೆಗೆದಿಟ್ಟದ್ದನ್ನ ಜೊತೆಯವರೊಂದಿಗೆ ಹಂಚಿಕೊಂಡು ಮೆಲುಕು ಹಾಕುವುದಿದೆಯಲ್ಲ, ಅದು ಮಜಾ! ಈ ವಿಚಾರ ಮಾಡಿಯೇ ನನ್ನ ಮುಂಚಿನ ಸಂಪಾದಕಿ ಶ್ರೀಮತಿ ದಾಕ್ಷಾಯಣಿ ಗೌಡ ಅವರು ಹಾಕಿಟ್ಟ ಪಾಯದ ಮೇಲೆ ಕಟ್ಟಿದ ಮೊದಲ ಎರಡು ಲೇಖನಗಳು – ರಾಧಿಕಾ ಜೋಶಿಯವರು ನೋಡಿದ “ಬಾಲ್ಯದ ಬೆಳದಿಂಗಳು” ಮತ್ತು ನಾನು (ಲನಾ ಗುಡೂರ) ಕೇಳಿದ “ನನ್ನ ಬಾಲ್ಯದ ಕಥೆಗಾರರು”. ಎಂದಿನಂತೆ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ; ನಿಮ್ಮ ಬುತ್ತಿಯಲ್ಲೇನಾದರೂ ಹಂಚಿಕೊಳ್ಳುವಂಥದು ಇದ್ದರೆ, e-ಪೇಪರೆತ್ತಿಕೊಂಡು ಪೊಟ್ಟಣ ಕಟ್ಟಿ ಹಂಚಿ ಮತ್ತೆ! – ಎಲ್ಲೆನ್ ಗುಡೂರ (ಸಂ.)

ಬಾಲ್ಯದ ಬೆಳದಿಂಗಳು – ರಾಧಿಕಾ ಜೋಶಿ

ಚಿತ್ರ ಕೃಪೆ: ಗೂಗಲ್

ಬಾಲ್ಯದ ಬಗ್ಗೆ ನೆನಪುಗಳು ನನ್ನ ಜೀವನದ ಉತ್ತಮವಾದ ಹಾಗು ಈಗಿನ ಜೀವನ ಶೈಲಿಯನ್ನು ರೂಪಿಸುವಲ್ಲಿ ಮಹತ್ತಾದ ಪಾತ್ರ ವಹಿಸಿವೆ. ಎಲ್ಲರಂತೆ ನನ್ನ ಬಾಲ್ಯವೂ ಹಿತಕರವಾಗಿ ಹಾಗು ಆರೋಗ್ಯಕರವಾಗಿ ಇತ್ತು. ಟಿವಿ, ಮೊಬೈಲ್ ಫೋನ್, ಕಂಪ್ಯೂಟ ಇಲ್ಲದ ಜಗತ್ತು ನಮ್ಮ ಮಕ್ಕಳ ಬಾಲ್ಯದ ಜೀವನಕ್ಕಿಂತ ಉತ್ತಮವೆಂದು ದಿನನಿತ್ಯ ಅನಿಸುತ್ತದೆ. ಆದರೆ ಕೆಲವೊಂದು ವಿಷಯಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುವಂತೆ, ಬದಲಾವಣೆ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ಮೂಡಿಸುವಲ್ಲಿ ಸಹಾಯ ಮಾಡುತ್ತದೆ.

ಹುಟ್ಟಿದ್ದು ಹುಬ್ಬಳ್ಳಿಯಲ್ಲಾದರೂ, ನನ್ನ ಸಂಪೂರ್ಣ ಬಾಲ್ಯ ಹಾಗು ವಿದ್ಯಾಭ್ಯಾಸ ಎಲ್ಲವು ವೈಭವಯುತ ಮೈಸೂರಿನಲ್ಲಿ. ನನ್ನ ಅದೃಷ್ಟವೋ ಅವಕಾಶವೋ ಗೊತ್ತಿಲ್ಲ, ಮೈಸೂರಿನಂತಹ ಸಾಂಪ್ರದಾಯಿಕ ಹಾಗು ಪ್ರಗತಿಶೀಲ ನಗರಲ್ಲಿ ನನ್ನ ಬೆಳೆವಣಿಗೆಯ ೨೩ ವರ್ಷಗಳು ಇದ್ದದ್ದು ಒಂದು ಅಮೂಲ್ಯವಾದ ಅಂಶ.

ತಂದೆಯದು ಸರ್ಕಾರೀ ನೌಕರಿ. ಮಧ್ಯಮ ವರ್ಗದ ಪರಿವಾರದಲ್ಲಿ ಇದ್ದ ನಮಗೆ ಮೈಸೂರಿನಲ್ಲಿ ನಮ್ಮ ಸಂಬಂಧಿಕರು ಅಂತ ಯಾರೂ ಇರದಿದ್ದ ಕಾರಣ, ನಮ್ಮ ಅಕ್ಕ ಪಕ್ಕದ ಮನೆಯವರು ಮತ್ತು ನಮ್ಮ ತಂದೆ ವರ್ಷಗಳಿಂದ ಸಂಪಾದಿಸಿದ ಸ್ನೇಹಿತರ ಗುಂಪೇ ನಮ್ಮ ನೆಂಟರಿಷ್ಟರು. ಮನೆಯೊಳಗೆ ಉತ್ತರ ಕರ್ನಾಟಕ ಭಾಷೆ ಹಾಗು ಅಡುಗೆ. ಹೊರಗೆ ಕಾಲಿಟ್ಟ ತಕ್ಷಣ ಮೈಸೂರಿನ ಸೊಗಸಾದ ಕನ್ನಡ ಹಾಗೂ ಅಕ್ಕ-ಪಕ್ಕದ ಮನೆಯವರ ರುಚಿಯಾದ ಬಿಟ್ಟಿ ಕವಳದ (ನನ್ನ ತಾಯಿ ನನ್ನ ಆಡಿಕೊಳ್ಳತಾಯಿದ್ರು ‘ನೀನು ಹೊರಗೆ ಆಟಕ್ಕೆ ಹೋದರೆ ಯಾರದಾದರೂ ಮನೇಲಿ ಊಟ ಮಾಡತಿದ್ದೆ’) ಆನಂದ.

ನಮಗೆ ಬೇಸಿಗೆಯ ರಜೆಯಲ್ಲಿ ಅಜ್ಜಿ ಮನೆಯಾದ ಹುಬ್ಬಳ್ಳಿ, ಮೌಶಿಯಂದಿರ ಊರಾದ ಶಿಗ್ಗಾವಿ, ಗದುಗ, ಧಾರ್ವಾಡ ಹೀಗೆ ಹಲವು ಊರುಗಳ ಪರ್ಯಟನೆ ಆಗುತಿತ್ತು. ನಮ್ಮ ಸೋದರಸಂಬಂಧಿ ಅಕ್ಕ ಅಣ್ಣರೊಂದಿಗೆ ಒಂದು ತಿಂಗಳು ಹೇಗೆ ಕಳೆಯುತಿದ್ವಿ ಗೊತ್ತೇ ಆಗುತ್ತಿರಲಿಲ್ಲ.

ನಾನು ಈ ಕೆಳಗೆ ಬರೆಯುವ ವಿಷಯ ಕೇವಲ ನನ್ನ ಸುತ್ತಮುತ್ತಲಿನ ಸಹೋದರ ಸಂಬಂದಿಯಲ್ಲಿ ಹಾಗು ಅವರ ಗೆಳೆಯೆರ ಗುಂಪಿನಲ್ಲಿ ಕಂಡಂತಹ ವಿಷಯ. ತಮ್ಮದೇ ಮಾರ್ಗ ಸೃಷ್ಟಿಸಿಕೊಂಡು, ಶ್ರಮಪಟ್ಟ ತಂದೆ ತಾಯಿ ವಿರುದ್ಧ ಹೋಗಿ ಭವಿಷ್ಯ ರೂಪಿಸಿಕೊಂಡ ಜನರೂ ಇದ್ದಾರೆ (ಅದು ನನಗೆ ದೊಡ್ಡವಳಾದ ಮೇಲೆ ತಿಳಿಯಿತು). ಹೀಗಾಗಿ ದಯವಿಟ್ಟು ಇದನ್ನು ಬೇರೆ ಯಾವ ಅರ್ಥದಲ್ಲಿ ತಿಳಿಯದಿರಿ.

ಮೈಸೂರಿನಲ್ಲಿ ನಾವು ವಿದ್ಯಾಭ್ಯಾಸ ಹಾಗು ಸಂಗೀತ – ನೃತ್ಯದ ಮೇಲೆ ಹೆಚ್ಚು ಗಮನ ಕೊಟ್ರೆ, ಹುಬ್ಬಳ್ಳಿ, ಬಾಗಲಕೋಟೆ ಅಂತಹ ಊರುಗಳಲ್ಲಿ ಶಾಲಾ ಮಟ್ಟದ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸುವ ಶಿಕ್ಷಣ ಮನೆಯಲ್ಲಿ ಕೊಟ್ಟರೂ ಅದನ್ನು ವೃತ್ತಿ ರೂಪಕ್ಕೆ ಪರಿವರ್ತಿಸುವ ಅವಕಾಶ ಕಡಿಮೆ. ವೈದ್ಯಕೀಯ ವೃತ್ತಿಯ ಹೊರತಾಗಿ, ನಾವು ನೋಡಿದ ನಮ್ಮ ಸಂಬಂಧಿಕರಲ್ಲಿ ಹೆಚ್ಚಾಗಿ ಎಲ್ಲಾ ಹೆಣ್ಣು ಮಕ್ಕಳಲ್ಲಿ ವೃತ್ತಿಪರ ಮಹತ್ವಾಕಾಂಕ್ಷೆ ಕಂಡದ್ದು ಕಡಿಮೆ. ಕೆಲವರಿಗೆ ಸಂಗೀತದಲ್ಲಿ ಆಸಕ್ತಿ, ಮತ್ತೊಬ್ಬರಿಗೆ ಕ್ರೀಡೆಯನ್ನು ವೃತ್ತಿಯನ್ನಾಗಿಸಬೇಕೆಂಬ ಆಸೆ ಆದರೆ, ನಮ್ಮ ಜಾತಿ ಅಡ್ಡವಾಯಿತೋ ಅಥವಾ ಸಂಪ್ರದಾಯವೋ ಗೊತ್ತಿಲ್ಲ! ಮೈಸೂರಿನಲ್ಲಿ  (ಬೆಂಗಳೂರು) ಬೆಳೆದ ಮಕ್ಕಳಲ್ಲಿ ಛಾತಿ, ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಹೆಚ್ಚು ಕಂಡುಬಂದಿತು.

ನಮ್ಮ ಬ್ರಾಹ್ಮಣ ಜಾತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟೆಲ್ಲಾ ವಿದ್ಯಾಭ್ಯಾಸ ಕೊಟ್ಟು, ಎಲ್ಲಾ ಸಂಸ್ಕಾರವನ್ನು ಕೊಡುವಾಗ ಒಳ್ಳೆಯ ಗೃಹಿಣಿ ಆಗಬೇಕೆಂಬ ಅಂಶವನ್ನು ಅಧಿಕವಾಗಿ ನಮ್ಮಲ್ಲಿ ಬಿತ್ತುತ್ತಾರೆ. ಪ್ರತಿಭೆ ಹಾಗು ಜಾಣ್ಮೆಗೆ ಶಭಾಷಿ ಕೊಟ್ಟರೂ ಅದನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಮನೆ ನಡೆಸುವುದು ಸುಲಭವಲ್ಲ. ಒಳ್ಳೆ ಗೃಹಿಣಿಯಾಗಿ, ಒಳ್ಳೆ ತಾಯಿಯಾಗಿ, ಎಲ್ಲವನ್ನು ನಯವಾಗಿ ನಿಭಾಯಿಸುವುದು ಎಲ್ಲಕಿಂತ ಕಷ್ಟದ ಕೆಲಸ. ಆದರೆ ಅವಕಾಶ ಸಿಕ್ಕಾಗ ನಮ್ಮ ಕನಸು ಆಸೆಯನ್ನು ಪೂರ್ಣಗೊಳಿಸುವ ಸಮಯ ಬಂದಾಗ ಹಿಂದೇಟು ಹಾಕುತ್ತೀವಿ.

ನನ್ನ ಅದೃಷ್ಟ ಏನಂದರೆ ನನ್ನ ತಂದೆ ತಾಯಿ ಹುಬ್ಬಳ್ಳಿಯವರಾದರೂ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗು ಮೈಸೂರಿನ ಜೀವನ ಶೈಲಿಯನ್ನು ಮೆಚ್ಚಿ ಅಲ್ಲಿಯೇ ಉಳಿದು ನಮ್ಮ ಮೇಲೆ ತಮ್ಮ ಎಲ್ಲಾ ಗಮನವನ್ನು ಇಟ್ಟು ನಮ್ಮನ್ನು ಕೇವಲ ಪದವೀಧರನ್ನಾಗಿ ಸೀಮಿತ ಮಾಡದೇ ಅದನ್ನು ವೃತ್ತಿಯನ್ನಾಗಿ ಪರಿವರ್ತಿಸಲು ಪ್ರಯತ್ನ ಪಟ್ಟರೂ. ನಮ್ಮಲ್ಲಿನ ಆತ್ಮವಿಶ್ವಾಸ ಕುಗ್ಗದಂತೆ ಉಳಿಯುವ ಸಂಸ್ಕಾರ ಕೊಟ್ಟ ನಮ್ಮ ತಂದೆ-ತಾಯಿಯಂಥವರು ಬಹಳ ವಿರಳ. ಈ ಅದೃಷ್ಟ ನನ್ನ ಸಂಬಂಧಿಕರಲ್ಲಿ ಕಂಡುಬರಲಿಲ್ಲ. ಆದರೆ ಈಗ ಜಗತ್ತು ಬದಲಾಗುತ್ತಿದೆ, ಎಲ್ಲೆಡೆ ಮಕ್ಕಳ ಪ್ರತಿಭೆ ಹಾಗು ಜಾಣ್ಮೆಯನ್ನು ಗುರುತಿಸಿ ಅವರಿಗೆ ಸರಿಯಾದ ಪ್ರೋತ್ಸಾಹ ನೀಡಲಾಗುತ್ತಿದೆ.

ಚಂದ್ರನಂತಿರುವ ಪ್ರತಿಯೊಬ್ಬ ಮಗುವಿನಲ್ಲೂ ಇರುವ ಪ್ರತಿಭೆಯನ್ನು ಕೇವಲ ಇರುಳಿಗೆ ಸೀಮಿತವಾಗಿಸದೇ ಬೆಳದಿಂಗಳಿನ ಕಾಂತಿಯಂತೆ ಎಲ್ಲೆಡೆ ಹರಡಲು ಅವಕಾಶ ಮಾಡಿಕೊಟ್ಟರೆ ಎಷ್ಟು ಸುಂದರ!

– ರಾಧಿಕಾ ಜೋಶಿ

ನನ್ನ ಬಾಲ್ಯದ ಕಥೆಗಾರರು – ಲಕ್ಷ್ಮೀನಾರಾಯಣ ಗುಡೂರ

ಕಥೆ ಕೇಳುವವರಿಗೆ ಎಷ್ಟು ಆಸಕ್ತಿ ಇರಬೇಕೋ, ಹೇಳುವವರಿಗೂ ಅಷ್ಟೇ ಹೇಳುವ ಹುಮ್ಮಸ್ಸು ಇರಬೇಕು. ಇಲ್ಲದಿದ್ದರೆ ಕಥೆಯ ಸ್ವಾರಸ್ಯವೇ ಹಾಳಾಗಿ ಹೋಗಿಬಿಡುತ್ತದೆ, ಕೇಳಿದರೂ ಪ್ರಯೋಜನವಿಲ್ಲ.  ಒಂದು ನುಡಿಗಟ್ಟಿದೆ, ಯಾವಾಗಲೋ ಕೇಳಿದ್ದು ‘there are no boring subjects; there are boring teachers’; ಇದನ್ನು ಕಥೆಗಳಿಗೂ ಅನ್ವಯಿಸಬಹುದು.  ಜನಮೇಜಯನಿಗೆ ಕಥೆ ಹೇಳಿದ ಸೂತ ಪುರಾಣಿಕರಂತಹವರಿದ್ದರೆ, ಕೂತು ಲಕ್ಷ ಶ್ಲೋಕಗಳ ಮಹಾಭಾರತವನ್ನೂ ಕೇಳಬಹುದು.  ಇಲ್ಲದಿದ್ದರೆ, ಐದು ನಿಮಿಷಕ್ಕೆ ಮುಖ ಮುಚ್ಚಿಯೋ, ಆ ಕಡೆ ನೋಡಿಯೋ ಆಕಳಿಸುವ ಪರಿಸ್ಥಿತಿ ಬರುತ್ತದೆ, ಅಷ್ಟೇ!

ಕಥೆ ಹೇಳುವುದು ನನಗೆ ಮುಂಚಿನಿಂದಲೂ ಇಷ್ಟವಾದದ್ದು.  ಶಾಲೆಯಲ್ಲಿದ್ದಾಗ ನನ್ನ ಸಹಪಾಠಿಗಳಿಗೆ ನನ್ನ ಕಥೆ ಹೇಳುವ ರೀತಿ ಸಾಕಷ್ಟು ಇಷ್ಟವಿದ್ದು, ಯಾವುದಾದರೂ ಪಿರಿಯಡ್ ಖಾಲಿ ಇದ್ದರಾಯಿತು, ಅದು ನನ್ನ ಕಥೆಯ ಕ್ಲಾಸ್ ಆಗಿಬಿಡುತ್ತಿತ್ತು.  ಈಗಲೂ ಮನೆಯಲ್ಲಿ ಮಕ್ಕಳಿಗೆ ಕಥೆ ಹೇಳುವುದು ನನ್ನ ಕೆಲಸವೇ.

ಈ ನನ್ನ ಕಥೆ ಹೇಳುವ ಹುಚ್ಚಿಗೆ ಕಾರಣಕರ್ತರು ಕೆಲವರಿದ್ದಾರೆ.  ಅವರನ್ನು ನೆನೆಯುವುದೇ ಈ ಬರಹದ ಉದ್ದೇಶ.  ಕಥೆ ಹೇಳಲು ಒಂಚೂರೂ ಬಾರದವರು ಮಾಡಿದ ಕಥೆಗಳ ಕೊಲೆಯನ್ನೂ ಸಂಕಟಪಟ್ಟು ಸಹಿಸಿದ್ದೇನೆ, ಆದರೆ ಆ ಮಹಾನುಭಾವರನ್ನ ಅಲ್ಲ ನಾನಿಲ್ಲಿ ನೆನೆಯುತ್ತಿರುವುದು.    

ನನಗೆ ನೆನಪಿರುವ ಮೊದಲ ಕಥೆಗಾರ ನನ್ನ ಬಾಲ್ಯದ ಗೆಳೆಯ ಗುಂಡಪ್ಪ, ಈಗ ಎಲ್ಲಿದ್ದಾನೋ ಗೊತ್ತಿಲ್ಲ.  ಒಂದು ಹತ್ತು ನಿಮಿಷ ಖಾಲಿ ಕೂತರೆ ಸಾಕು, ಗುಂಡಪ್ಪನ ಕಥಾಲಹರಿ ಹರಿಯಲು ಶುರು.  ಒಮ್ಮೆ ಶುರುವಾಯಿತೆಂದರೆ ನಿಲ್ಲಿಸುವುದು ಕಷ್ಟ, ವಾಶರ ಕೆಟ್ಟು ಹೋದ ನಲ್ಲಿಯಂತೆ.  ಅವನ ಕಥೆಗಳೋ, ಸುಳ್ಳು-ಬಳ್ಳು ಹೆಣೆದವು – ಆದಿ-ಅಂತ್ಯಗಳಿಲ್ಲದವು!  ಅವನ ಒಂದು ಕಥೆ ವಾರಗಟ್ಟಲೆ ಸಾಗಿದ್ದಲ್ಲದೇ, ಅದರಲ್ಲಿ ಡಾ|| ರಾಜಕುಮಾರ, ವಿಷ್ಣುವರ್ಧನ್ ಇತ್ಯಾದಿ ಕನ್ನಡ ಸಿನಿಮಾದ ದಿಗ್ಗಜರು ಮಾತ್ರವಲ್ಲ, ಅಕ್ಕ-ಪಕ್ಕದ ಓಣಿಯ ಹುಡುಗ-ಹುಡುಗಿಯರೂ, ಶೇಂಗಾ – ಪುಠಾಣಿ ಇತ್ಯಾದಿ ವಿಚಿತ್ರ ನಾಮಧೇಯಗಳುಳ್ಳ ಪಾತ್ರಗಳೂ ಬಂದು ಹೋಗುವಂಥ 12 ತಾಸಿನ ಹಳೆಯ ಕಾಲದ ತಮಿಳು ಸಿನಿಮದಂತಹವು.  ಕೊನೆ ಕೊನೆಗೆ ಯಾರಿಗೆ ಎಲ್ಲಿ ಏನಾಗುತ್ತಿದೆ ಅನ್ನುವದೆಲ್ಲ ಕಲಿತು ಕಲಗಚ್ಚಾಗುವ ಹೊತ್ತಿಗೆ, ಅಮ್ಮನೋ ಅಪ್ಪನೋ ನಮ್ಮ ಹೆಸರು ಹಿಡಿದು ಕೂಗಿ, ಗಜೇಂದ್ರ ಮೋಕ್ಷದ ವಿಷ್ಣುವಿನಂತೆ ಬಂದು ಕಾಪಾಡುತ್ತಿದ್ದರೆನ್ನಿ!

ಅಲ್ಲಿಂದ ಮುಂದಿನವರೆಲ್ಲ, ನನ್ನ ತುಂಬಾ ಇಷ್ಟದ ಕಥೆಗಾರರು. ಕೇಳಿ 40 ವರ್ಷವಾದರೂ, ಹೇಳಿದ ಪಾತ್ರಗಳ, ಸನ್ನಿವೇಶಗಳ ಚಿತ್ರಣ ಇನ್ನೂ ಕಲರ್ ಸಿನಿಮದಂತೆ ನನ್ನ ಕಣ್ಣ ಮುಂದಿದೆ.  ಆಗಾಗ್ಗೆ ನಮ್ಮಲ್ಲಿಗೆ ಬಂದು ಹೋಗುತ್ತಿದ್ದ ನಮ್ಮ ಆಚಾರು ತಾತ (ಅಮ್ಮನ ಅಪ್ಪ) ಅಲ್ಲದೆ, ವರ್ಷಕ್ಕೊಮ್ಮೆ ನಮ್ಮೂರಿಗೆ (ಆಗ ನಮ್ಮಪ್ಪ ಪೋಸ್ಟ್ ಮಾಸ್ಟರ್ ಆಗಿದ್ದ ಊರು, ಗಂಗಾವತಿ) ಪುರಾಣ, ಹರಿಕಥೆ ಹೇಳಲು ಬರುತ್ತಿದ್ದವರು ನನಗೆ ಮಹಾಭಾರತ, ಭಾಗವತ ಇತ್ಯಾದಿ ಕಥೆಗಳ ಪರಿಚಯ ಮಾಡಿಕೊಟ್ಟರು. ನಾವಾಗ ಇದ್ದದ್ದು ರಾಯರ ಮಠದ ಹತ್ತಿರವಾದ್ದರಿಂದ ಈ ರೀತಿಯ ಅವಕಾಶಗಳಿಗೇನೂ ಕೊರತೆಯಿರಲಿಲ್ಲವೆನ್ನಿ.  ಇವರಲ್ಲಿ ಪುರಾಣಿಕರು ಕಡಪ ಕೃಷ್ಟಾಚಾರ್ಯ ಅನ್ನುವವರು ಒಬ್ಬರು.  ಇನ್ನೊಬ್ಬರು ಹರಿಕಥೆ ಹೇಳುತ್ತಿದ್ದ ಶಿವಮೊಗ್ಗ ಶ್ರೀನಿವಾಸ ದಾಸರು ಅನ್ನುವವರು.  ಅವರಿಬ್ಬರ ಕಥೆ (ನನಗೆ ಕಥೆ, ಭಕ್ತರಿಗೆ ಪುರಾಣ / ಹರಿಕಥೆ ಅನ್ನಬಹುದು) ಹೇಳುವ ರೀತಿ, ಪಾತ್ರಗಳನ್ನು ಮತ್ತು ಸನ್ನಿವೇಶಗಳನ್ನು ಬಣ್ಣಿಸುವ ಹಾವ-ಭಾವಗಳು ಇನ್ನೂ ನನ್ನ ಕಣ್ಣಿಗೆ ಕಟ್ಟಿವೆ.  8-10 ವರ್ಷದ ನಾನು ಅವನ್ನು ಕೇಳಲು ಪ್ರತಿದಿನ ಮಠಕ್ಕೋ, ಯಾರದೋ ಮನೆಗೋ ಹೋಗಿ, ಮುಂದಿನ ಸಾಲಲ್ಲೆ ಕುಳಿತು, ಬಿಟ್ಟ ಬಾಯಿ ಬಿಟ್ಟ ಹಾಗೆಯೇ ಗಂಟೆಗಳ ಕಾಲ ಕಥೆ ಕೇಳುತ್ತಿದ್ದುದು ನನಗೆ ನೆನಪಿದೆ.  ಕೇಳುತ್ತಾ ಮೈಮರೆತು ನೇರವಾಗಿ ಕುರುಸಭೆಗೋ, ಕುರುಕ್ಷೇತ್ರಕ್ಕೋ ವೃಂದಾವನಕ್ಕೊ ಸಾಗಿಸಿ, ಅಲ್ಲಿ ನಡೆಯುತ್ತಿದ್ದ ಘಟನೆಗಳನ್ನು ಸೈಡ್ ವಿಂಗಿನಲ್ಲಿ ನಿಂತು ನಾಟಕ ನೋಡಿದಂತೆ ತೋರಿಸಿ ವಾಪಸ್ ಮನೆಗೆ ತಂದು ಬಿಟ್ಟ ಹಾಗೆ ಅನಿಸುತ್ತಿತ್ತು.  ಅವರ ಬಾಯಿಂದ ಕೇಳಿದ ಭೀಮನ ಶಕ್ತಿಯ, ಅರ್ಜುನನ ಬಿಲ್ಲುಗಾರಿಕೆಯ, ದುರ್ಯೋಧನನ ಸ್ವಾಭಿಮಾನದ, ಕೃಷ್ಣನ ಯುಕ್ತಿಯ, ಅಭಿಮನ್ಯುವಿನ ಸಾಹಸದ ಮತ್ತು ಭೀಷ್ಮ-ದ್ರೋಣ-ಕರ್ಣಾದಿಗಳ ಕುರುಕ್ಷೇತ್ರದ ಶೌರ್ಯದ ವರ್ಣನೆ ನನ್ನ ಮೆದುಳಿನ ಮೇಲೆ ಅಚ್ಚು ಒತ್ತಿದಂತಿದೆ. 

ಚಿತ್ರ: ಲಕ್ಷ್ಮೀನಾರಾಯಣ ಗೂಡೂರ್

ಅದಾದ ಮೇಲೆ ನಾನು ನನ್ನ ಅಜ್ಜನ ಮನೆಯಲ್ಲಿದ್ದು ಓದು ಮುಂದುವರಿಸಲು ಕಲಬುರ್ಗಿಗೆ ಬಂದೆ, 7 ನೇ ತರಗತಿಗೆ.  ಬೇಸಿಗೆ ರಜೆ ಬಂತೆಂದರೆ ನಮ್ಮ ಸೋದರತ್ತೆಯ ಮನೆಗೆ ರಾಯಚೂರಿಗೆ ಹೋಗುತ್ತಿದ್ದ 1 ತಿಂಗಳು ನಮಗೆಲ್ಲ ಭಾರಿ ಇಷ್ಟದ ಸಮಯ.  ಇದಕ್ಕೆ ಎರಡು ಕಾರಣಗಳು – ಒಂದು, ವಾರಿಗೆಯ ಹುಡುಗರು ಒಟ್ಟು 9 ಜನ, ದೊಡ್ಡ ಗದ್ದಲ ಹಾಕಿ ಮಜಾ ಮಾಡುವುದು; ಎರಡನೆಯ ಕಾರಣ, ನಮ್ಮ ಸೋದರತ್ತೆಯ ಗಂಡ ಅರವಿಂದ ಮಾಮಾ ಹೇಳುತ್ತಿದ್ದ ಕಥೆಗಳು.  ಅವರ ಮನೆಯಲ್ಲಿ ತರುತ್ತಿದ್ದ ಬುಟ್ಟಿಗಟ್ಟಲೆ ಮಾವಿನಹಣ್ಣುಗಳದ್ದೂ ಸ್ವಲ್ಪ (!) ಪಾತ್ರ ಇತ್ತು ಅನ್ನಬಹುದು.  ಅರವಿಂದ ಮಾಮಾ ನಮಗೆ ಹೇಳುತ್ತಿದ್ದ ಸಿನಿಮಾ ಕಥೆಗಳು, ಇಂಗ್ಲೀಷಿನ ಗಲಿವರನ ಪ್ರವಾಸ ಇತ್ಯಾದಿ ಕಥೆಗಳು, 3-4 ಗಂಟೆಯವು ಒಂದೊಂದೂ. ರಾತ್ರಿ 9 ಕ್ಕೆ ಊಟ ಮುಗಿಸಿ, ಛತ್ತಿನ ಮೇಲೆ ಹಾಸಿಗೆ ಹಾಸಿಕೊಂಡು, ತಣ್ಣನೆ ನೀರಿನ ಹೂಜಿ-ಲೋಟ ಪಕ್ಕದಲ್ಲಿಟ್ಟುಕೊಂಡು, ಬಾಳೆಹಣ್ಣು ಇತ್ಯಾದಿ ಕುರುಕು ತಯಾರಿಟ್ಟುಕೊಂಡು ಕೂತರೆ, ಕಥೆಗೆ ರೆಡಿ ಅಂತರ್ಥ.  ”ಇವತ್ತಿನ ಕಥೆಯ ಹೆಸರು ಪಾತಾಳ ಭೈರವಿ” ಅನ್ನುವ ಥರದ ಘೋಷಣೆಯೊಂದಿಗೆ ಶುರುವಾಗೋದು.  ಎರಡು ಗಂಟೆಗಳ ಮೊದಲ ಭಾಗ ಮುಗಿದೊಡನೆ ಇಂಟರವಲ್ಲು, ದೊಡ್ಡ ಹುಯಿಲೆಬ್ಬಿಸಿ ಎಲ್ಲರೂ  ಮತ್ತೆ ಕೆಳಗೆ ಬಂದು, ಒಂದು ದೊಡ್ಡ ಡಬರಿ ಅವಲಕ್ಕಿ ಕಲಿಸಿಕೊಂಡು, ನಂಚಿಕೊಳ್ಳಲು ಸೌತೆಕಾಯಿ, ಹಸಿಮೆಣಸಿನಕಾಯಿ, ಉಳ್ಳಾಗಡ್ಡಿಗಳೊಂದಿಗೆ ಮತ್ತೆ ಮೇಲೆ ಬಂದು ಕೂತೆವೆಂದರೆ, ಪಾರ್ಟ್ 2 ಶುರು.  ನಾಯಕ ರಾಜಕುಮಾರ (ಎನ್ ಟಿ ಆರ್), ನೇಪಾಳ ಮಾಂತ್ರಿಕನನ್ನು (ಎಸ್ವಿ ರಂಗಾರಾವು) ಸೋಲಿಸಿ, ರಾಜಕುಮಾರಿಯನ್ನು ಕಾಪಾಡುವ ಹೊತ್ತಿಗೆ ನಮ್ಮ ಡಬರಿ ಅವಲಕ್ಕಿ ಇತ್ಯಾದಿಗಳನ್ನು ಧ್ವಂಸ ಮಾಡುವ ಕಾರ್ಯಕ್ರಮವೂ ಮುಗಿದು, ಮಧ್ಯರಾತ್ರಿ ದಾಟಿ 1 ಗಂಟೆ ಆಗಿರುತ್ತಿತ್ತು.  ಅಲ್ಲಿಗೆ ಕಥೆ ಮುಗಿಯಿತು ಅಷ್ಟೇ, ನಮ್ಮ ಮಾತಲ್ಲ!  ಹಾಗೂ ಹೀಗೂ ಪಿಸ-ಪಿಸ ಗುಸು-ಗುಸು ಮಾತು, ನಗುವಿನಲ್ಲಿ ಇನ್ನೊಂದು ಗಂಟೆ ತಳ್ಳಿ, “ಇನ್ನ ಮಲಕೋಳರೊ ಎಲ್ಲ, ಸಾಕದು ನಗೋದು” ಅಂತ ಅಜ್ಜಿಯ ಕಡೆಯಿಂದ ಬೈಸಿಕೊಂಡು ಮಲಗುವಲ್ಲಿಗೆ ನಮ್ಮ ದಿನ ಸಮಾಪ್ತಿ!  ಈ ದಿನಚರಿ ವಾರಕ್ಕೊಂದು 2-3 ದಿನ ಖಂಡಿತ.  ಯಾವುದಾದರೂ ಕಥೆ ಒಂದೇ ದಿನಕ್ಕೆ ಮುಗಿಯದಿದ್ದರೆ, ಮತ್ತೊಂದು ರಾತ್ರಿ ಮುಂದುವರೆಯುತ್ತಿತ್ತು, ಆದರೆ, ನಾವೆಲ್ಲ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಹೇಳಿ ನಮಗೆ ಕಥೆಯ ಪಾತ್ರ-ಸನ್ನಿವೇಶಗಳೆಲ್ಲ ನೆನಪಿವೆಯೆಂದು ಸಾಧಿಸಿ ತೋರಿಸಿದರೆ ಮಾತ್ರ.   ರಾಬರ್ಟ್ ಲೂಯಿ ಸ್ಟೀವನ್ಸನ್ನನ Treasure Island ಮೂರು ಬೇಸಿಗೆಯಾದರೂ ಮುಗಿಯದೇ, ಕಾದು ಕಾದು ಸಾಕಾಗಿ ನಾನೇ ಆ ಪುಸ್ತಕ ಕೊಂಡು ಓದಿ ಮುಗಿಸಿದೆ! 

ಕಥೆ-ಕಾದಂಬರಿಗಳನ್ನು ಸ್ವತಃ ಓದುವ ಮಜಾ ಒಂದು ರೀತಿಯದಾದರೆ, ಒಳ್ಳೆಯ ಕಥೆಗಾರರಿಂದ ಕೇಳುವ ಸ್ವಾರಸ್ಯವೇ ಬೇರೆ.  ಅದೊಂದು ನನ್ನ ಬಾಲ್ಯದ ಮರೆಯದ ಸಿಹಿ ಅಥವಾ ಹುಳಿ-ಉಪ್ಪು-ಖಾರದ ಹದನಾದ ಅನುಭವ.

– ಲಕ್ಷ್ಮೀನಾರಾಯಣ ಗುಡೂರ್, ಪ್ರೆಸ್ಟನ್ (ಲಾಂಕಶೈರ್)

ಸಂಕ್ರಾಂತಿ, ಸಂಕ್ರಮಣ – ಅಮಿತಾ ರವಿಕಿರಣ ಲೇಖನ, ಸ್ವರೂಪ ಅಯ್ಯರ್ ಕವನ

ಲೇಖಕರು: ಅಮಿತಾ ರವಿಕಿರಣ

ಅಮಿತಾ ರವಿಕಿರಣ್ ಅವರ ಆಸಕ್ತಿಗಳು ಒಂದೆರಡಲ್ಲ. ಅದ್ಭುತ ಹಾಡುಗಾರ್ತಿ, ಸಂಗೀತದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ನಮ್ಮ `ಅನಿವಾಸಿ` ಹಾಡಿನ ಸಿಡಿಗೆ ಧ್ವನಿಯಾಗಿದ್ದಾರೆ. ಫೋಟೋಗ್ರಾಫಿ ಇವರ ಇನ್ನೊಂದು ಹುಚ್ಚು. ಅದಲ್ಲದೇ ಚಂದದ ಕವನಗಳನ್ನು ಪೋಣಿಸುತ್ತಾರೆ. ಆಗಾಗ ಪ್ರಬಂಧ ಬರಹಗಳನ್ನು ಬರೆದು ಪ್ರಕಟಿಸುತ್ತಾರೆ. ಉತ್ತರ ಐರ್ಲಂಡಿನಲ್ಲಿ ವಾಸವಾಗಿರುವ ಅಮಿತಾ ಈ ಸಲ ಸಂಕ್ರಾಂತಿಯನ್ನು ನೆನೆಸಿಕೊಂಡು ಬರೆದಿದ್ದಾರೆ.

`ಎಳ್ಳು ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡಿ` ಅಂತ ಕುಸುರೆಳ್ಳನ್ನು ಕೊಟ್ಟು, ಹಿರಿಯರ ಕಾಲಿಗೆ ನಮಸ್ಕರಿಸಿ, ಹೊಸ ಬಟ್ಟೆಯ ಜರಜರ ಸಪ್ಪಳದಲ್ಲೇ ಮೈ ಮರೆಯುತ್ತಿದ್ದ ಸಂಕ್ರಮಣಗಳು. ಆ ಸಡಗರ ಮರೆಯಾಗಿ ಎಷ್ಟೋ ವರ್ಷಗಳಾದವು. ಈಗಂತೂ ಹಬ್ಬಗಳಿಗಿಂತ ಅಂಗಡಿಯಲ್ಲಿರುವ ಸೇಲ್ ಎಂಬ ಕೆಂಪು ಬೋರ್ಡ ಕಂಡಾಗಲೇ ಬಟ್ಟೆ ಕೊಳ್ಳುವ ಸಂಭ್ರಮ. ಇವತ್ತು ಮನಸಿಗೆ ಬಂದಿದ್ದು ಅದೇ ವಿಷಯ. ಅವರಿವರ ವಿಷಯ ಯಾಕೆ ? ನಾನೇ ಅಮ್ಮನ ರೇಷ್ಮೆ ಸೀರೆಯಲ್ಲಿ ಲಂಗ, ರವಿಕೆ ಹೋಲಿಸಿಕೊಂಡು ದಾವಣಿ ಹಾಕಿಕೊಂಡು ಮನೆ ಮನೆಗೆ ಎಳ್ಳು ಹಂಚಲು ಹೋಗುವ ಸಂಭ್ರಮವನ್ನು ಮನಸ್ಪೂರ್ತಿ ಅನುಭವಿಸಿದ್ದೇನೆ.

`ಎಳ್ಳು ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡಿ` ಅಂತ ಕುಸುರೆಳ್ಳನ್ನು ಕೊಟ್ಟು, ಹಿರಿಯರ ಕಾಲಿಗೆ ನಮಸ್ಕರಿಸಿ, ಹೊಸ ಬಟ್ಟೆಯ ಜರಜರ ಸಪ್ಪಳದಲ್ಲೇ ಮೈ ಮರೆಯುತ್ತಿದ್ದ ಸಂಕ್ರಮಣಗಳು. ಆ ಸಡಗರ ಮರೆಯಾಗಿ ಎಷ್ಟೋ ವರ್ಷಗಳಾದವು. ಈಗಂತೂ ಹಬ್ಬಗಳಿಗಿಂತ ಅಂಗಡಿಯಲ್ಲಿರುವ ಸೇಲ್ ಎಂಬ ಕೆಂಪು ಬೋರ್ಡ ಕಂಡಾಗಲೇ ಬಟ್ಟೆ ಕೊಳ್ಳುವ ಸಂಭ್ರಮ. ಇವತ್ತು ಮನಸಿಗೆ ಬಂದಿದ್ದು ಅದೇ ವಿಷಯ. ಅವರಿವರ ವಿಷಯ ಯಾಕೆ ? ನಾನೇ ಅಮ್ಮನ ರೇಷ್ಮೆ ಸೀರೆಯಲ್ಲಿ ಲಂಗ, ರವಿಕೆ ಹೋಲಿಸಿಕೊಂಡು ದಾವಣಿ ಹಾಕಿಕೊಂಡು ಮನೆ ಮನೆಗೆ ಎಳ್ಳು ಹಂಚಲು ಹೋಗುವ ಸಂಭ್ರಮವನ್ನು ಮನಸ್ಪೂರ್ತಿ ಅನುಭವಿಸಿದ್ದೇನೆ.

ಸಂಕ್ರಾಂತಿ  ಹಬ್ಬ ಬರುವ ಎರಡು ತಿಂಗಳು ಮುಂಚಿನಿಂದಲೇ ನಮ್ಮ ತಯಾರಿ ಶುರು. ಅಂಥದ್ದೇನು  ತಯಾರಿ ಅಂದಿರಾ? ಆಗ ನಾವು ಮಾರುಕಟ್ಟೆಯಲ್ಲಿ ಸಿಗುವ ಸಕ್ಕರೆ ಗುಳಿಗೆಗಳನ್ನುತರುತ್ತಿರಲಿಲ್ಲ. ಮನೆಯಲ್ಲೇ  ಎಳ್ಳು ತಯಾರಿಸುತ್ತಿದ್ದೆವು.

ಸಕ್ಕರೆಪಾಕವನ್ನು ಏಳು ಬಾರಿ ಸೋಸಿ, ಕಾಸಿ, ಅದಕ್ಕೆ ನಿಂಬೆ ರಸ ಸೇರಿಸಿ ಸುಧಾರಸ ಎಂಬ ಪಾಕ ತಯಾರಿಸಿ, ಎಳ್ಳು, ಗೋಡಂಬಿ, ಕುಂಬಳ ಬೀಜದ ಒಳತಿರುಳು, ಜೀರಿಗೆ, ಬಡೆಸೋಪು, ಲವಂಗ, ಶೇಂಗ, ಪುಟಾಣಿ…ಹೀಗೆ ಎಲ್ಲವನ್ನೂ ಒಂದು ಹಿತ್ತಾಳೆ ಹರಿವಾಣದಲ್ಲಿ ಹಾಕಿ, ಕೆಂಡ ಹಾಕಿದ ಶೇಗಡಿ ಮೇಲೆ ಆ ಹರಿವಾಣವನ್ನು ಇಟ್ಟು, ಒಂದೆರಡು ಚಮಚ ಸುಧಾರಸ ಹಾಕಿ, ಮೆತ್ತಗೆ ಕೈ ಆಡಿಸಬೇಕು. ನಸುಕಿನಲ್ಲಿ ಎದ್ದು ಮಾಡಿದರೆ ಇನ್ನೂ ಒಳ್ಳೆಯದು, ಏಕೆಂದರೆ ಚಳಿ ಬಿದ್ದಷ್ಟು ಎಳ್ಳಿನ ಮೇಲೆ ಸಕ್ಕರೆ ಮುಳ್ಳುಗಳು ಏಳುತ್ತವೆ. ಅದಕ್ಕೆ ಸೂರ್ಯನ ದರ್ಶನ ಆಗಬರದಂತೆ!

ಇನ್ನೇನು ಜನೆವರಿ ತಿಂಗಳ ೧೫ ಬಂದೆ ಬಿಡ್ತು ಎನ್ನುವ ಹೊತ್ತಿಗೆ ಈ ಎಳ್ಳುಗಳು ಬಿಳಿ ಬಿಳಿ ಅರಳು ಮಲ್ಲಿಗೆಯ ನಗುವನ್ನು ಶೆಗಡಿಯ ಬಿಸಿಯಲ್ಲೇ  ನಗುತ್ತವೆ. ನಂತರದ್ದು ಅದನ್ನು ಎಲ್ಲಾ ಬಂಧು ಬಾಂಧವರಿಗೆ ಕಳಿಸುವ ಕಾರ್ಯಕ್ರಮ.

ಕಾಮತ್ ಮಾಮನ ಅಂಗಡಿಗೆ ಹೋಗಿ ಚಂದದ ಗ್ರೀಟಿಂಗ್ ತಂದು ಅಥವಾ ಎಷ್ಟೋ ದಿನಗಳಿಂದ ಪುಸ್ತಕದಲ್ಲಿ ಒಣಗಿಸಿಟ್ಟ ಗುಲ್ಮೊಹರ್, ಹೂವು, ಎಲೆಗಳು, ಗುಲಾಬಿ ಪಕಳೆಗಳನ್ನು ಬಳಸಿ ಆಸ್ಥೆಯಿಂದ ಗ್ರೀಟಿಂಗ್ ತಯಾರಿಸಿ, ಅಲ್ಲಿ ಇಲ್ಲಿ ಕದ್ದು ತಂದ ಸಾಲುಗಳನ್ನು ಬರೆದು, ತಯಾರಿಸಿದ ಎಳ್ಳು ಹಾಕಿ ಅಂಚೆ ಪೆಟ್ಟಿಗೆಗೆ ಹಾಕಿದರೆ ಏನೋ ಒಂದು ದೊಡ್ಡ ಸಮಾಧಾನ (ಕೆಲವೊಮ್ಮೆ ಸ್ಟಾಂಪ್ ಮರೆತು ಗ್ರೀಟಿಂಗ್ಸ್ ನನಗೇ ವಾಪಾಸ್ ಸಿಕ್ಕಿದ್ದೂ ಉಂಟು).

ಸಂಕ್ರಾಂತಿಯ ದಿನ ಆ ದಿನ ಅಬ್ಬಲಿಗೆ (ಆಬೂಲಿ ಎಂದೂ ಹೇಳುತ್ತಾರೆ), ಅಂದರೆ ಕನಕಾಂಬರ ಹೂ ಮುಡಿಯಲೆಬೇಕಂತೆ, ಅದು ಆ ಹೊತ್ತಿಗೆ ಅರಳುವ ಹೂವು. ನಮ್ಮಕಡೆ ಪ್ರತಿ ಮನೆಯಲ್ಲೂ ಮಾರು ಅಲ್ಲದಿದ್ದರೂ, ಒಂದು ಮೊಳ ಅಬ್ಬಲಿಗೆ  ಸಿಕ್ಕೇ ಸಿಗುತ್ತೆ. ಅದಲ್ಲದಿದ್ದರೂ, ಆಡುಸೋಗೆ ಹೂವು ಅಬ್ಬಲಿಗೆಯಂತೆ ಕಾಣುವ ಬಿಳಿ ಹೂವನ್ನು ನನ್ನ ಸೋದರತ್ತೆ ಅಕ್ಕರೆಯಿಂದ ದಂಡೆ ಕಟ್ಟಿ ನನ್ನ ನಾಗರಜಡೆಗೆ ಮುಡಿಸಿ ಸಿಂಗಾರ ಮಾಡುತ್ತಿದ್ದನ್ನು ಮರೆಯಲಾದೀತೇ?

ನಂತರ ಮನೆ ಮನೆ ತಿರುಗಾಡಿ, ಪುಟ್ಟ ಸ್ಟೀಲ್ ಡಬ್ಬಿ ಖಾಲಿ ಆಗುತ್ತೇನೋ ಅನ್ನೋ ಭಯದಲ್ಲೇ ನಾಲ್ಕೇ ನಾಲ್ಕು ಕಾಳು ಕೊಟ್ಟು, ನನ್ನ ಡಬ್ಬಿ, ನಿನ್ನ ಡಬ್ಬಿ ಅಂತ ತಂಗಿ ನಾನೂ ಜಗಳ ಮಾಡುತ್ತ ರಸ್ತೆಯಲ್ಲೇ ಮಾತು ಬಿಟ್ಟು ಮತ್ತೆ ದೋಸ್ತಿನೂ ಆಗಿ ಮನೆಗೆ ಮರಳುತ್ತಿದ್ದ ದೃಶ್ಯ ಇವತ್ತಿಗೂ ನಿಚ್ಚಳ.

ಮತ್ತೊಂದು ವಿಶೇಷ ಎಂದರೆ ಸಂಕ್ರಾಂತಿಯ ಜಾತ್ರೆಗಳು. ನಮ್ಮೂರಿಂದ  ಐದಾರು ಮೈಲಿ ದೂರ ಇರುವ ಸಾಲಗಾಂವಿಯಲ್ಲಿ ಬಾಣಂತಿದೇವಿಯ ಜಾತ್ರೆ, ದನಗಳ ಸಂತೆ ನಡೆಯುತ್ತದೆ. ಅಲ್ಲಿ ಮಾವಿನ ತೋಪಿನ ನಡುವೆ  ಅಂಗಡಿಗಳು ಎಷ್ಟು ಚಂದ! ಅಲ್ಲೇ ಊಟ ಕಟ್ಟಿಕೊಂಡು ಹೆಗೆಡೆರ ಅಡಿಕೆ ತೋಟದಲ್ಲಿ ಕೂತು ಊಟ ಮುಗಿಸಿ, ಜೋಕಾಲಿ, ಮಿರ್ಚಿ ಭಜಿ, ಕಬ್ಬಿನಹಾಲು, ಮಂಡಕ್ಕಿ, ಖಾರದಾಣಿ ತಿಂದು, ಒಂದಷ್ಟನ್ನು ಕಟ್ಟಿಸಿಕೊಂಡು ಬಂದರೆ, ಇನ್ನೊಂದು ಜಾತ್ರೆ ಬರುವತನಕ ಅದರ ಉಮೇದಿ ಜಾರಿಯಲ್ಲಿರುತ್ತಿತ್ತು.

ಎಷ್ಟೋ ”ಚಾಳಿ ಟೂ”ಗಳು ಮತ್ತೆ ಗೆಳೆತನವಾಗಿ ಮಾರ್ಪಡುವ ಸದವಕಾಶ ಈ ಹಬ್ಬದಲ್ಲಿ ಬಹಳ. ಹೈಸ್ಕೂಲು ಮುಗಿಯುವ ಹೊತ್ತಿಗೆ ಈ ಜಾತ್ರೆಗೆ ಹೋಗೋ ಉತ್ಸಾಹ ಕಡಿಮೆ ಆಗುತ್ತ ಬಂತು. ಜಾತ್ರೆಯಲ್ಲಿ ನಡೆಯುತ್ತ ಮೈತಿಕ್ಕುವ ಚಟಕೋರರು, ದೇವರಿಗೆ ಮುಗಿಯುವ ಕೈಗಿಂತ ಹುಡುಗಿಯರ ಮೈ ಕೈ ಚೂಟುವ ಕೈಗಳೇ ಜಾಸ್ತಿ ಆಗಿದ್ದು ಒಂದು ಮುಖ್ಯ ಕಾರಣ,  ಕಾಲೇಜು ದಿನಗಳಲ್ಲಿ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಎಳ್ಳು, ತಿರುಗಾಟವೂ ಕಡಿಮೆಯೇ, ಅಬ್ಬಲಿಗೆ ಮುಡಿದದ್ದು ಇನ್ನೂ ಕಡಿಮೆಯೇ.

ಹಾಂ ಮರೆತಿದ್ದೆ:  ಬೆಳಗಾವಿ, ಸೋಲ್ಲಾಪುರ ಗಳಲ್ಲಿ ಮಕ್ಕಳಿಗೆ ಬೊರೆ ಹಣ್ಣು (ಬಾರಿ ಹಣ್ಣು)  ಮಂಡಕ್ಕಿಯ ಸ್ನಾನ ಮಾಡಿಸುತ್ತಾರಂತೆ, ಸಂಜೆಗೆ ಆರತಿ ಮಾಡುವುದು ಇದೆಯಂತೆ. ಇದು ನನ್ನ ಅತ್ತೆ ಅವರ ತವರುಮನೆಯ ಸಂಕ್ರಾಂತಿ ನೆನಪಿನಿಂದ ಹಂಚಿಕೊಂಡಿದ್ದು.

ಆದರೆ ಈಗ ಈ ಉತ್ಸಾಹ ಇಲ್ಲ ಅಥವಾ ನನಗೇ ಇಲ್ಲವೋ? ನನ್ನ ವಾರಗೆಯವರೆಲ್ಲರಿಗೆ ಹೀಗೆಯೋ? ಅಥವಾ ಈಗಿನ ದಿನಮಾನದ ಮಕ್ಕಳಲ್ಲಿ ಈ ಹಬ್ಬಗಳ ಬಗ್ಗೆ ಆಕರ್ಷಣೆ ಕಡಿಮೆ ಆಗಿದೆಯೋ ಗೊತ್ತಿಲ್ಲ.

ಒಟ್ಟಿನಲ್ಲಿ ಸಂಕ್ರಮಣವೇ ಏಕೆ ಯಾವ ಹಬ್ಬಗಳಲ್ಲೂ ಮೊದಲಿನ ಸ್ವಾರಸ್ಯ ಇಲ್ಲ ಅನಿಸುತ್ತೆ.

ನಾವು ದೊಡ್ಡವರಾಗಿ ಬಿಟ್ಟೆವಾ ಅಥವಾ ನಮ್ಮ ಮಕ್ಕಳಿಗೆ ಈ ಹಬ್ಬಗಳ  ನಿಜವಾದ ರುಚಿಯನ್ನು ಉಣಿಸಲು ವಿಫಲವಾದೆವಾ ಗೊತಾಗುತ್ತಿಲ್ಲ. ಯಾಕೋ ನೀರಸ  ಎನ್ನುವ ವಾತಾವರಣ. ನನಗನಿಸಿದ ಮಟ್ಟಿಗೆ ಮೊದಲಿನವರ ತಾಳ್ಮೆ, ಸಹನೆ ನಮ್ಮಲ್ಲಿಲ್ಲ.

ಹಬ್ಬಗಳೆಂದರೆ ನಮ್ಮ ಮನಸಿಗೆ ಬರುವುದು ಎರಡೇ ವಿಷಯ:

೧. ಹಬ್ಬ ಯಾವ ವಾರ ಬಂದಿದೆ(ಇದು ಸರದಿ ರಜೆಗಾಗಿ )

೨. ಈ ಬಾರಿಯ ರಜೆಯಲ್ಲಿ ಯಾವ ಬಾಕಿ ಕೆಲಸ ಪೂರೈಸಬಹುದು ಅಥವಾ ಎಷ್ಟು ವಿರಮಿಸಬಹುದು.

ಹೀಗೆ  ಮುಂದುವರಿದರೆ, ಒಂದು ದಿನ  ನಮ್ಮ ಹಬ್ಬಗಳು ಕೇವಲ ಕ್ಯಾಲೆಂಡರಿನಲ್ಲಿ ಕೆಂಪು ಅಕ್ಷರವಾಗಿ ಉಳಿದು ಹೋಗುತ್ತೇನೋ ಎಂದು ಭಾರತದಲ್ಲಿದ್ದಾಗಲೇ ಅನಿಸುತ್ತಿತ್ತು. ಈ ಉತ್ತರ ಐರ್ಲಂಡಿಗೆ ಬಂದ ನಂತರವೇ ನಾನು ಮತ್ತೆ ಈ ಸಂಕ್ರಾಂತಿ ಮತ್ತು ಇತರ ಹಬ್ಬಗಳನ್ನು ಅಷ್ಟೇ ಉತ್ಸಾಹದಿಂದ ಆಚರಿಸಲು ಶುರು ಮಾಡಿದ್ದು,

ಮನೆಗೆ ಮಗಳು ಬಂದಮೇಲಂತೂ ಸಂಭ್ರಮ ಅಗಣಿತವಾಗಿದೆ. ನಾನಷ್ಟೇ ಅಲ್ಲ ನನ್ನ ಎಲ್ಲ ಸ್ನೇಹಿತೆಯಯರೂ ಸೇರಿ ಎಳ್ಳು ಬೀರಲು ತಮ್ಮ ಮಕ್ಕಳೊಂದಿಗೆ ಪರಸ್ಪರ ಮನೆಗೆ ಹೋಗುತ್ತೇವೆ. ನಮ್ಮದಲ್ಲದ ಶಾಸ್ತ್ರ ಸಂಪ್ರದಾಯಗಳನ್ನು ಕೇಳಿ ತಿಳಿದು ಆಚರಿಸಲು ಯತ್ನಿಸುತ್ತೇವೆ.

ಊಟ ತಿಂಡಿಯ ವಿಷಯವಂತೂ ಕೇಳಲೇಬೇಡಿ. ಸಂಕ್ರಾಂತಿಗೆ ನಮ್ಮಲ್ಲಿ ಸಜ್ಜೆ ರೊಟ್ಟಿ, ಅವರೆಕಾಳಿನ ಪಲ್ಯ, ಏಣಗಾಯಿ, ಕಾಳುಪಲ್ಯ, ಶೆಂಗ/ಎಳ್ಳು ಹೋಳಿಗೆ , ಬುತ್ತಿ ಅನ್ನ ಮಾಡುವ ರೂಡಿ, ಜೊತೆಗೆ ಉತ್ತರಭಾರತದ ಅಡುಗೆಗಳು, ಪೊಂಗಲ್, ಬೂರಿಯಲು ಎನ್ನುವ ನೆರೆರಾಜ್ಯದ ಅಡುಗೆಗಳು ಸೇರಿ ನಮ್ಮ ಹಬ್ಬದ ಮೆನು ತುಂಬಾ ವೈವಿಧ್ಯಮಯ ವಾಗಿದೆ.

ಲೇಖಕರು: ಡಾ. ಸ್ವರೂಪ್ ಅಯ್ಯರ್

ಸ್ವರೂಪ್ ಅಯ್ಯರ್ ವೃತ್ತಿಯಲ್ಲಿ ವೈದ್ಯರು , ಭಾಷೆ ಸಂಸ್ಕೃತಿ, ವೇದ ವಿಶ್ಲೇಷಣೆ ಮತ್ತು ಛಾಯಾಗ್ರಹಣ ಅವರ ಹವ್ಯಾಸಗಳು.  ತಂದೆಯ ಶಿಕ್ಷಕ ವೃತ್ತಿಯ ನೈತಿಕ ಆದರ್ಶಗಳು ಮಾತೃಶ್ರೀಯವರ ಧಾರ್ಮಿಕ ಸಾಮಾಜಿಕ ಬದುಕು ಅವರ ಚಿಂತನೆಯನ್ನು ಪ್ರಭಾವಿತಗೊಳಿಸಿವೆ. ಕನ್ನಡ ಸಾಹಿತ್ಯದಲ್ಲಿ  ಡಿ.ವಿ.ಜಿಯ ಮಂಕುತಿಮ್ಮನ ಕಗ್ಗ ಅವರಿಗೆ ಪ್ರೇರಣೆ. ಸಂಸ್ಕೃತಿಯ ಮೇಲೆ ನಿಸರ್ಗದ ಪ್ರಭಾವ, ವೈದ್ಯಕೀಯದಲ್ಲಿ ವೇದಗಳ ಮಹತ್ವ  ಅವರ ಅಧ್ಯಯನದ ವಸ್ತುಗಳು. ಮೊದಲ ಬಾರಿಗೆ `ಅನಿವಾಸಿ` ಗೆ ಬರೆದಿದ್ದಾರೆ. ಸ್ವಾಗತಿಸಿ. ಓದಿ, ಹರಸಿ.

ಸಂಕ್ರಾಂತಿಯ ಸವಿನೆನಪು 

ಬಂದಿತು ಬಂದಿತು ಮಕರ ಸಂಕ್ರಮಣ
ತಂದಿತು ಎಲ್ಲೆಡೆ ಸಮೃದ್ಧಿ ಸುಖ ಶಾಂತಿ
ಲೋಹ್ರಿ ಪೊಂಗಲ್ ಬಿಹು ಸಂಕ್ರಾಂತಿ
ಹಲವಾರು ಹೆಸರುಗಳ ಧಾನ್ಯ ಕ್ರಾಂತಿ

ಮುಂಜಾನೆಯಲಿ ಎದ್ದು ಬಿಸಿ ಬಿಸಿ ಎಳ್ಳೆಣ್ಣೆ ಸ್ನಾನ
ನಂತರ ಎಲ್ಲರೂ ಕೂಡಿ ಹಾಡುವ ದೇವರಗಾನ
ಪೊಂಗಲ್ ನೈವೇದ್ಯ ಮಂಗಳಾರತಿಯೊಂದಿಗೆ ವಂದನ
ತಂದೆ ತಾಯಿಗೆ ನಮನ ನಂತರ ತೀರ್ಥ ಪ್ರಸಾದ ಪಾನ

ಪಾಕಶಾಲೆಯಲ್ಲಿ ಮೂಡಿತು ಅಮ್ಮನ ಸವಿ ಕೈಚಳಕ
ಪೊಂಗಲ್ ಅವಿಯಲ್ ಆಂಬೊಡೆ ತಯಾರು ಚಕ ಚಕ
ಜೊತೆಗೆ ಎಳ್ಳುಂಡೆ ಒಬ್ಬಟ್ಟಿನ ಘಮಘಮ ಸಿಹಿಪಾಕ
ಬಂಧು ಮಿತ್ರರೊಡನೆ ಭೋಜನವೇ ರೋಮಾಂಚಕ

ಎಳ್ಳು ಬೆಲ್ಲ ಕಬ್ಬು ಬಾಳೆಯ ಜೊತೆಗೆ ಸಕ್ಕರೆ ಅಚ್ಚು
ಮರೆಯದೆ ಎಲ್ಲೆಡೆ ಬೀರೋಣ ಸಮೃದ್ಧಿಯ ಸಂಪತ್ತು
ಮನೆಯ ಅತಿಥಿಗಳಿಗೆಲ್ಲಾ ನಮ್ಮ ಎಳ್ಳುಬೆಲ್ಲ ಅಚ್ಚುಮೆಚ್ಚು
ಆಶೀರ್ವದಿಸುವರು “ಚಿರವಾಗಿರಲಿ ಐಶ್ವರ್ಯ ಸಂತಸ ಯಾವತ್ತೂ"

ಸುಗ್ಗಿಯನು ಸವಿಯುತ್ತ ಎಲ್ಲರೂ ಹಿಗ್ಗುತ್ತ
ಪೊಂಗಲ್ ಓ ಪೊಂಗಲಿನ ವಿಶೇಷ ಮಹತ್ತು