ಮಾವು..ನಾವು.

ಸ್ವರ್ಗದೊಳಗೀ ಮಾವು ದೊರೆವುದೇನು?
ಎಲ್ಲ ಪರಿ ಸವಿಸೊಬಗ ರಸದ ಜೇನು॥
ಇಲ್ಲದಿರೆ ಎನಗಿಲ್ಲೆ ನೂರು ಜನುಮಗಳಿರಲಿ
ಎಲ್ಲ ಪರಿಯ ಮಾವು ಸವಿಯ ಸಿಗಲಿ ॥
( ಮೂಲ ಕವಿಯ ಕ್ಷ ಮೆ ಯಾಚಿಸುತ್ತ)

ಜಗದೊಡೆಯನ ಅತ್ಯದ್ಭುತ ಸೃಷ್ಟಿ ಯಾವುದೆಂದು ಯಾರಾದರೂ ಕೇಳಿದರೆ ನಾನಿನಿತೂ ಹಿಂದೆ ಮುಂದೆ ನೋಡದೇ ಥಟ್ಟನೇ ಕಣ್ಮುಚ್ಚಿಕೊಂಡು ಕೊಡುವ ಉತ್ತರ ಎಂದರೆ. ‘ಮಾವು..ಮಾವು..ಮಾವು’.

ಎಂಥ ಸೊಗಸು ಘಮ್ಮನೇ ಹೂತ ಆ ಚೂತ ಮರ,ಚಿಗುರು,ತಳಿರು,ದೋರಗಾಯಿ,ಕಾಯಿ, ಹಣ್ಣುಗಳು!! ಮಾಮರದ ಹೂಗಳನ್ನೇ ಮಾರ ತನ್ನ ಬಿಲ್ಲಿನ ಹೂಬಾಣಕ್ಕೆ ಬಳಸುವುದಂತೆ. ಕೋಗಿಲೆಯ ಪಂಚಮನೂಂಚರದ ತವರೂ ಇದೇ ಮಾಮರ. ಕವಿಗಳಿಗೂ ಇದುವೇ ಸ್ಫೂರ್ತಿಯ ಸೆಲೆ. ವಸಂತನಾಗಮನದ ತುತ್ತೂರಿ ಈ ಮಾವೇ.
ಈ ಮಾವಿನಕಾಯಿ – ಹಣ್ಣುಗಳಿರದಿದ್ದರೆ ಜೀವನ ಅದೆಷ್ಟು ನೀರಸವಾಗಿರುತ್ತಿತ್ತು ಊಹಿಸಿ. ಮಾವು ಬಳಸಿದ ಅಡುಗೆಯ ಸ್ವಾದದ ಮಾತೇ ಬೇರೆ. ಚಟ್ನಿ, ಕೋಸಂಬರಿ, ಗೊಜ್ಜು, ತೊಕ್ಕು- ಉಪ್ಪಿನಕಾಯಿಗಳು, ಪಳುವು, ಮೊರಬ್ಬ-ಗುಳಂಬಗಳು, ಚಿತ್ರಾನ್ನ-ಕಲಸನ್ನಗಳು, ಸೀಕರಣೆ-ಆಮ್ರಖಂಡಗಳು, ಅಪ್ಪೆಹುಳಿ,ತೊವ್ವೆಗಳು..ಒಂದೇ ?! ಎರಡೇ?! ನನಗಂತೂ ಆ ವಿಧಾತ ಕನಿಷ್ಟ ಈ ಮಾವಿನ ಸೀಜನ್ ನಲ್ಲಾದರೂ ಎರಡು ಹೊಟ್ಟೆ ಕೊಡಬಾರದೇ ಎಂಬ ಚಡಪಡಿಕೆ.
ನನಗಂತೂ ಈ ಮಾವಿನ ಖಾದ್ಯಗಳು ಬರೀ ಬಾಯ್ ರುಚಿಯ,ಹೊಟ್ಟೆ ತುಂಬಿಸುವ ತಿನಿಸುಗಳಲ್ಲ. ಅವುಗಳಲ್ಲಿ ನನ್ನ ಬಾಲ್ಯದ ಕಂಪಿದೆ. ನೂರಾರು ಮಧುರನೆನಪುಗಳು ಭಾವಕೋಶದೊಂದಿಗೆ ಬೆಸೆದಿವೆ.

ತೊವ್ವೆ

ಬಚ್ಚಲಿನ ಹಂಡೆದೊಲೆಯ ಕಟ್ಟಿಗೆಯನ್ನು ಹೊರಗೆಳೆದು ಕಪ್ಪಾದ ದೊಡ್ಡ ಝಾಲಿಸೌಟಿನಿಂದ ಒಳಗಿನ ನಿಗಿನಿಗಿಕೆಂಡವನ್ನು ಒಂದು ಹಿತ್ತಾಳಿಝಾಕಣಿಯಲ್ಲಿ ತುಂಬಿಕೊಂಡು ಬಂದು ಅದನ್ನು ಅಡುಗೆಮನೆಯ ಶೇಗಡಿಗೆ (ಇದ್ದಲಿ ಒಲಿ) ಸುರುವಿ ಅದರ ಮೇಲೆ ದಪ್ಪನೆಯ ಹಿತ್ತಾಳೆಯಗುಂಡಿಯಲ್ಲಿ ಬ್ಯಾಳಿ ಬೇಯಲಿಕ್ಕಿಡೂದು ಅಮ್ಮನ ದಿನಬೆಳಗಿನ ಕಾಯಕ. ಮಾವಿನಕಾಯಿ ತೊವ್ವೆ ಮಾಡುವ ದಿನದಂದು ಎರಡು ಮುಷ್ಟಿಬ್ಯಾಳಿ ಹೆಚ್ಚಿಗೇ ಇಡುವುದಿತ್ತು. ಆ ಇದ್ದಿಲೊಲೆಯ ಹದವಾದ ಶಾಖದಲ್ಲಿ ನಿಧಾನವಾಗಿ ಮಿದುವಾಗಿ ಬೆಂದ ತೊಗರಿಬೇಳೆ ತೊವ್ವೆಗೆ ಸ್ವಲ್ಪಹೆಚ್ಚಿಗೇ ಇಂಗು, ಜೀರಗೆ, ಮೆಂತ್ಯ, ಕರಿಬೇವು, ಸಣ್ಣಗೆ ಹೆಚ್ಚಿದ ಹಸಿಮೆಣಸು ಹಾಗೂ ಮಾವಿನಕಾಯಿ ಹೋಳುಗಳನ್ನು  ಒಗ್ಗರಣೆಯಲ್ಲಿಕೈಯಾಡಿಸಿ ಸುರಿದು,ಒಂದಿಷ್ಟು  ಉಪ್ಪು,ಬೆಲ್ಲ ಹಾಕಿ ಮತ್ತೊಂದು ಕುದಿ ಕುದಿಸಿದರೆ 'ಮಾವಿನಕಾಯಿ ತವ್ವಿ' ಸವಿಯಲು ಸಿದ್ಧವಾಗುತ್ತಿತ್ತು. ಮೆಂತ್ಯ-ಇಂಗು-ಮಾವಿನ ಘಮ, ಖಾರ-ಹುಳಿ-ಉಪ್ಪು-ಸಿಹಿಗಳ ಹಿತವಾದ ಮಿಶ್ರಣ..ಬಿಸಿ ಬಿಸಿ ಅನ್ನ-ತುಪ್ಪದೊಡನೆಯೋ, ಭಕ್ರಿ-ಚಪಾತಿಯೊಡನೆಯೋ  ಉಂಡರೆ..ಅದೂ ಎಡಗೈಯಲ್ಲಿ  ಬೆವರೊರೆಸಿಕೊಳ್ಳುತ್ತ ( ಮಾವಿನಕಾಯಿ ಸೀಜನ್ನೇ ಭರ್ತಿ ಬೇಸಗೆಯಏಪ್ರಿಲ್-ಮೇ ದಿನಗಳಲ್ಲಿ.ಲೋಡ್ ಶೆಡ್ಡಿಂಗ್ ನಿಂದಾಗಿ ಒಂದಿನವೂ ಮಧ್ಯಾಹ್ನ  ಕರೆಂಟ್ ಇರುತ್ತಿರಲಿಲ್ಲ ನಮ್ಮ ಹಳ್ಳಿಯಲ್ಲಿ.) ಮತ್ತಾವಸುಖವಿದ್ದೀತು ಅದರ ಮುಂದೆ ಎನಿಸುತ್ತಿತ್ತು.

         ಈಗ ಪ್ರೆಸ್ಟೀಜ್ ಪ್ರೆಷರ್ ಕುಕ್ಕರ್ ನಲ್ಲಿ ಗ್ಯಾಸೊಲೆಯ ಮೇಲೆ ಬೆಂದ ನನ್ನೀ ತೊವ್ವೆಗೆ ಆ ಘನತೆ ಇರದಿದ್ದರೂ ಈಗಲೂ ಮಾವಿನಕಾಯಿತವ್ವಿ ಕೊಡೋ ಆ ಸುಖಕ್ಕೇನೂ ಮೋಸವಿಲ್ಲ.

ಚಟ್ನಿ

ಮಾವಿನಕಾಯಿ ಸೀಜನ್ ಬರುವ ಮುಂಚೆಯೇ ದೊಡ್ಡ ದೊಡ್ಡ ಬೆಲ್ಲದ ಪೆಂಟೆಗಳು  ಮನೆಗೆ ಬರುತ್ತಿದ್ದವು. ಸಿಹಿ-ಖಾರದ ಯಾವುದೇಮಾವಿನ ಪದಾರ್ಥಕ್ಕೂ ಈ ಬೆಲ್ಲ ಬೇಕೇ ಬೇಕಾಗುತ್ತಿತ್ತು. ಹುಳಿಹುಳಿಯಾದ ಮಾವಿನ ಹೆರಕಲಿಗೆ ಸಮಪ್ರಮಾಣದಲ್ಲಿ ಬೆಲ್ಲ, ಖಾರಪುಡಿ, ಉಪ್ಪು ಬೆರೆಸಿ, ಘಮ್ಮೆನ್ನುವ ಹುರಿದ ಮೆಂತ್ಯ, ಗಟ್ಟಿ ಇಂಗು ಹಾಕಿ, ಒಣಖೊಬ್ರಿ ತುರಿಯೊಂದಿಗೆ ಅಮ್ಮ ಒಳಕಲ್ಲಿನಲ್ಲಿ ರುಬ್ಬುಗುಂಡಿನಿಂದರುಬ್ಬಲು ಶುರುಮಾಡಿದರೆ ನಮಗೆ ಬಾಯ್ತುಂಬ ನೀರು. ಎಷ್ಟೋ ಸಲ ನಾನು ರುಬ್ಬುತ್ತೇನೆಂದು  ಹಟಮಾಡಿ ರುಬ್ಬಿಯಾದ ಮೇಲೆ ಕೈಗೆಮೆತ್ತಿಕೊಂಡ  ಚಟ್ನಿಯನ್ನು ಗೀರದೇ ಕೈ ತೊಳೆಯಲೆಂದು ಹೋಗಿ ಬಚ್ಚಲಲ್ಲಿ ನಿಂತು ಬಟ್ಟು ನೆಕ್ಕುವ ಆ ಸುಖವೇ ಸುಖ! ದೊಡ್ಡ ಕಲಪರಟಿಯಆ ಚಟ್ನಿ  ಕಣ್ಮುಚ್ಚಿ ತೆಗೆವುದರಲ್ಲೇ ಖಾಲಿಯಾಗುತ್ತಿತ್ತು.

ಇದು ಕಾಯಿಯದಾದರೆ  ಹಣ್ಣಿನ ಸಂಭ್ರಮವೇ ಬೇರೆ. ‘ಸಕ್ರಿ ಮಾವು’, ‘ ಅಡಕಿ ಮಾವು’ ಹೆಸರಿನ ಮನೆಯ ಮಾವಿನಗಿಡಗಳ ಹಣ್ಣುಗಳು. ಒಳಕೋಣೆಯಲ್ಲಿ ಹುಲ್ಲಿನಡಿಯಲ್ಲಿ ಅಡಿಹಾಕಿದ ಕಾಯಿಗಳು..ಮನೆತುಂಬ ಹಣ್ಣಿನ ಸುವಾಸನೆ. ಏಲಕ್ಕಿ,ಜಾಜಿಕಾಯಿ ಪುಡಿ,  ಚಿಟಿಕೆ ಉಪ್ಪು ಹಾಕಿ ಹಿಂಡಿಟ್ಟ ಕೊಳಗಗಟ್ಟಲೇ ಸೀಕರಣೆ.  ಕೆಲವೊಮ್ಮ ಕೋವಳ್ಳಿಡೈರಿಯಿಂದ ತಂದ ಚಕ್ಕಾದಲ್ಲಿ ಮಾವಿನಹಣ್ಣಿನ ರಸ ಬೆರೆಸಿ ಮಾಡಿದ  ಆಮ್ರಖಂಡದ ತಣ್ಣಗಿನ ನಳ್ಪು.ಸಿಹಿಯೊಡನೆ ಮತ್ತೆ ನೆಂಚಿಕೊಳ್ಳಲು ಮಾವಿನಕಾಯಿ ಕಾರೇಸಾ, ಚಿತ್ರಾನ್ನ, ಕೋಸಂಬ್ರಿಗಳು.. ಸಂಹನನಕುಪಚಯ..ಕರಣಕಾನಂದ .

~ ಗೌರಿಪ್ರಸನ್ನ

ಹಸಿರೇ ಉಸಿರು – ಗಿರೀಶ್ ಪ್ರಸಾದ್

ಪ್ರಿಯ ಓದುಗರೇ ! ಈ ವಾರದ ಸಾಪ್ತಾಹಕ ಸಂಚಿಕೆಯಲ್ಲಿ ಯುನೈಟೆಡ್ ಕಿಂಗ್ಡಮ್ ನ ಮಿಲ್ಟನ್ ಕೇನ್ಸ್ ನಿವಾಸಿಯಾದ ಹಾಗು ನಮ್ಮ್ ರೇಡಿಯೋ ವಾಟ್ಸ್ ಅಪ್ ಯು.ಕೆ? ಕಾರ್ಯಕ್ರಮದ RJ ಗಿರೀಶ್ ಪ್ರಸಾದ್ ಅವರ ‘ಹಸಿರೇ ಉಸಿರು’ ಶೀರ್ಷಿಕೆಯಡಿಯಲ್ಲಿ ಒಂದು ಪುಟ್ಟ ಲೇಖನ. ಓದಿ ಪ್ರತಿಕ್ರಿಯಿಸಿ. -ಸವಿ. ಸಂ

ಲೇಖಕರ ನುಡಿಗಳು

ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಗಿರೀಶ್ ಪ್ರಸಾದ್, ಯುನೈಟೆಡ್ ಕಿಂಗ್ಡಮ್ ನ ಮಿಲ್ಟನ್ ಕೇನ್ಸ್ ನಿವಾಸಿ. Astra Zeneca ಎಂಬ ಸಂಸ್ಥೆಯಲ್ಲಿ ಕೋವಿಡ್-೧೯ ಲಸಿಕೆಯ ಪ್ರಯೋಗ ತಂಡದಲ್ಲಿ ವಿಜ್ಞಾನಿಯಾಗಿ ನನ್ನ ವೃತ್ತಿ. ‘ನಮ್ಮ್ ರೇಡಿಯೋ’ ಖ್ಯಾತಿಯ ವಾಟ್ಸ್ ಅಪ್ ಯು.ಕೆ? ಕಾರ್ಯಕ್ರಮದಲ್ಲಿ RJ ಗಿರೀಶ್ ಪ್ರಸಾದ್ ಧ್ವನಿ ತಮಗೆಲ್ಲ ಚಿರ ಪರಿಚಿತ. ನನ್ನ ಈ ಇತ್ತೀಚಿನ ವೃತ್ತಿಪರ ಪ್ರಯೋಗದ ಅನುಭವ ಪ್ರಕೃತಿಯ ಹಸಿರಿನ ಮೌಲ್ಯ ಎಷ್ಟು ಪ್ರಮುಖ ಎಂದು ಅರಿವಾಯಿತು. ನನ್ನ ಈ ಒಂದು ಚಿಕ್ಕ ಲೇಖನ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ .

💚💚 ಹಸಿರೇ ಉಸಿರು 💚💚

ಕೆಲವಾರು ವರುಷಗಳಿಂದ ಎಲ್ಲಾ ದಿನ ಪತ್ರಿಕೆಗಳಲ್ಲಿ, ಸುದ್ದಿ ಮಾಧ್ಯಮದಲ್ಲಿ , ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚು ಸದ್ದು ಮಾಡಿರುವ, ಮಾಡುತ್ತಿರುವ  ಸುದ್ದಿಎಂದರೆ  “ಕಾಂಕ್ರೀಟ್ ಕಾಡಿನಿಂದಾಗಿ ಮುಂದೊಂದು ದಿನ ಆಮ್ಲಜನಕ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು ” ಎಂದು ! ಈ ಸುದ್ದಿಗೂ , ನಮಗೂ , ಯಾವುದೇ ರೀತಿಯ ಸಂಬಂಧವೇ ಇಲ್ಲ  ಎನ್ನುವಂತೆ ಬುದ್ಧಿವಂತ ಮರೆವನ್ನು ಪ್ರದರ್ಶಿಸಿ, ಪ್ರಕೃತಿ ವಿನಾಶದ ಕಡೆ ಅಲಕ್ಷ್ಯ ಮಾಡಿದ ನಮಗೆಲ್ಲಾ ಕನಸಿನಲ್ಲೂ ಊಹಿಸದ ಆ ದಿನ ಇಷ್ಟು ಬೇಗ ಎದುರಾಗಿದ್ದು ದುರಂತವೇ ಸರಿ. ಯಾರ ಮಾತನ್ನೂ ಕೇಳದ ಅತಿಜಾಣ ಮಾನವನಿಗೆ  ಒಂದು ಸಣ್ಣ ವೈರಾಣು  ‘ಹಸಿರಿಂದಲೇ ಉಸಿರು. ಹಸಿರಿಲ್ಲದ ಕಡೆ ಉಸಿರೂ ಇಲ್ಲ  ಎಂಬ ನಿತ್ಯ  ಪಾಠ ಕಲಿಸಿದ್ದು ವಿಪರ್ಯಾಸವೇ ಸರಿ.

ಚಿತ್ರ ಕೃಪೆ : ಗಿರೀಶ್ ಪ್ರಸಾದ್


💚💚ಪಾಶ್ಚಿಮಾತ್ಯ ದೇಶಗಳನ್ನು ಎಲ್ಲಾ ವಿಷಯದಲ್ಲೂ ಅನುಸರಿಸೋ ನಾವುಗಳು. ಅದ್ಯಾಕೋ ಪರಿಸರ ಸಂರಕ್ಷಣೆ ವಿಚಾರದಲ್ಲಿ ಮಾತ್ರ ಕಡೆಗಣಿಸುತ್ತೇವೆ. ‘ವಿದೇಶದಲ್ಲಿ ರಸ್ತೆಗಳು ಬಹಳ ಸ್ವಚ್ಛವಾಗಿರುತ್ತವೆಯಂತೆ’ ,  ‘ ಮನೆ ಸುತ್ತ ಉದ್ಯಾನವನಗಳಿರುತ್ತವಂತೆ’ , ‘ವಿದೇಶದಲ್ಲಿ ಎಲ್ಲಿ ನೋಡಿದರೂ ಹಸಿರು ಕಂಗೊಳಿಸುತ್ತದೆಯಂತೆ’  ಎಂದು ಮಾತಾಡುತ್ತಲೇ ನಮ್ಮ ಮನೆ ಅಂಗಳದಲ್ಲಿರುವ ತಾತನ ಕಾಲದ ಮರಗಳನ್ನು ನೆಲ ಸಮ ಮಾಡಿ ಆ ಜಾಗದಲ್ಲಿ ಒಂದು ರೂಮ್ , ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡುವುದರಲ್ಲಿ ವ್ಯಸ್ಥವಾಗುತ್ತ ಇರೋದು ಸೋಜಿಗವೇ ಸರಿ.  ಈ ಕರೋನ ಮಹಾಮಾರಿಯನ್ನು  ಪಾಶ್ಚತ್ಯ ದೇಶಗಳು, ಅಲ್ಲಿನ ಜನರು  ಎದುರಿಸಲು ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು  ಈ “ಹಸಿರೇ “.  ಇಂದಿಗೂ ತನ್ನನ್ನೇ ನಂಬಿರುವ ಜನರ ಕೈ ಬಿಡದೆ , ಶುದ್ಧ ಆಮ್ಲಜನಕವನ್ನು  ‘ಉಸಿರಾಗಿ’ ಕೊಡುತ್ತಿರುವ , ಸಸ್ಯಶಾಮಲೆಗೆ ಸಮರಾರು ? ಒಂದು ಸಣ್ಣ ವೈರಾಣು ಕಲಿಸಿರುವ ಜೀವನ ಪಾಠವನ್ನು ಈ ಜನ್ಮದಲ್ಲಿ ಮರೆಯದೇ ,  ಹಸಿರೇ ಉಸಿರು ಎಂಬ ಮಂತ್ರವನ್ನು ನಿತ್ಯಮಂತ್ರವಾಗಿಸಿಕೊಂಡು ಇನ್ನು ಮುಂದಾದರೂ ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳೆಸಿ, ಉಳಿಸೋಣ.  ಬನ್ನಿ ಉಸಿರಾಡೋಣ …🌴🌱🌲🍀🌴🌳

– ಗಿರೀಶ್ ಪ್ರಸಾದ್