ಶ್ರದ್ಧಾಂಜಲಿ

ಕೇವಲ ಸಪ್ತಸ್ವರಗಳಿಂದ ಅದೆಂಥ ಅಲೌಕಿಕ  ಲೋಕವನ್ನು ಕಟ್ಟಿಕೊಡುತ್ತದೆ ಸಂಗೀತ!!  ಮಾನವ ಭಾವನೆಗಳಿಗೆಲ್ಲ ಬಣ್ಣತುಂಬುತ್ತದೆ. ನಿಮಿಷಾರ್ಧದಲ್ಲಿ ನವರಸಗಳ ಪ್ರಪಂಚ ಮೈತಳೆಯುತ್ತದೆ. ನಿಮಗಿದು ಅರ್ಥವಾಗಬೇಕೆಂದರೆ ಒಮ್ಮೆ ಟಿ.ವಿ. ವ್ಯಾಲ್ಯೂಮ್ ಪೂರ್ತಿ ಬಂದ್ ಮಾಡಿ ಬರೀ ದೃಶ್ಯವನ್ನು ನೋಡಿ. ಅಲ್ಲಿ ದೆವ್ವದ ಸೀನ್ ಇದ್ದರೂ ನಿಮಗೆ ಹೆದರಿಕೆ ಎನಿಸುವುದಿಲ್ಲ.  ನಾಯಕ -ನಾಯಕಿ ಅಪ್ಪಿ ಮುತ್ತಿಟ್ಟರೂ ನಿಮ್ಮ ಹೃದಯದಲ್ಲಿ ಶೃಂಗಾರ ರಸ ಜಿನುಗುವುದಿಲ್ಲ.  ನಾಯಕ ಫೈಟಿಂಗ್ ಮಾಡುತ್ತ ಏಕಕಾಲಕ್ಕೆ ನೂರು ಜನರನ್ನು ಕೆಡವಿದರೂ  ನೀವು ರೋಮಾಂಚಿತರಾಗುವುದಿಲ್ಲ. ಅಂತೂ  ಸಂಗೀತವಿಲ್ಲದೇ ರಸವಿಲ್ಲ..ಬಣ್ಣವಿಲ್ಲ. ಅಂಥ ಸಂಗೀತ ಲೋಕದ ಮಾಂತ್ರಿಕ ತಬಲಾಪಟು , ಹಲವಾರು ಪ್ರಶಸ್ತಿಗಳ ಗೌರವ ಹೆಚ್ಚಿಸಿದ ಉಸ್ತಾದ್ ಝಾಕೀರ್ ಹುಸೇನ್ ಅವರ ಶೃದ್ಧಾಂಜಲಿಗೆ ಮುಡಿಪು ಇಂದಿನ ಅನಿವಾಸಿ ಸಂಚಿಕೆ.  ಸಂಪಾದಕರು ಗತಕಾಲದ ಕಲಾವಿದರೊದಿಗಿನ ಸಾಕ್ಷಾತ್ ಪ್ರಸಂಗವನ್ನು ನೆನೆಸಿಕೊಂಡಿದ್ದಾರೆ. ರಾಧಿಕಾ ಜೋಶಿಯವರು ತಮ್ಮದೇ ಆದ ಅನನ್ಯ ಶೈಲಿಯ ಇಂಗ್ಲೀಷ್ ಕವನವೊಂದರ ಮೂಲಕ ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ. ಬನ್ನಿ.. ನೀವೂ ಓದಿ ನಿಮ್ಮ ಪಾಲಿನ ಅಂಜಲಿಯನ್ನು ಸಲ್ಲಿಸಿ.                           

~ ಸಂಪಾದಕಿ

ವಾಹ್! ಉಸ್ತಾದ್ ವಾಹ್!!

ಕೆಲವು ಚೇತನಗಳೇ ಹಾಗೆ. ಸುಮ್ಮನೇ ಅವರ ಹೆಸರು ಕೇಳಿದರೇನೇ  ಮನಕ್ಕೆಂಥದೋ ಹಾಯೆನ್ನಿಸುವ ಭಾವ, ಅದೇನೋ ನಿರಾಳ. ಎಲ್ಲಿಂದಲೂ, ಏನೂ ನೇರ ಸಂಬಂಧವಿರದೆಯೂ ಅದೇನೋ ಆತ್ಮೀಯ – ಆಪ್ತ ಅನುಭೂತಿ.  ಉಸ್ತಾದ್ ಝಾಕೀರ ಹುಸೇನ್ ಅಂಥದೇಒಂದು ಚೆಂದದ ಚೇತನ. ‘ ಚೆಲುವಯ್ಯಾ ಚೆಲುವೋ ತಾನಿತಂದಾನಾ’ ಅಂದಂತೆ ಅದೆಷ್ಟು ಚೆಲ್ವಿಕೆಗಳ  ಸಂಗಮ?! ಸುಂದರ ಶರೀರ- ಶಾರೀರ– ಅಂತ:ಕರಣಗಳು, ತಬಲಾವನ್ನು ನಾದದ ನದಿಯಾಗಿಸುವ ಅವರ ಶೈಲಿ, ನೆರೆದವರ ಮನ ತಿಳಿಯಾಗಿಸುವ ಲಘು ಹಾಸ್ಯದ  ಎಲ್ಲೆ ಮೀರದ ತೂಕದ ಮಾತುಗಳು. ಒಂದೊಂದೂ ನ ಭೂತೋ ನ ಭವಿಷ್ಯತಿ.

   ಎಲ್ಲಿಂದ, ಯಾವಾಗಿಂದ ಶುರುವಾದದ್ದು ಅವರ ನಂಟು ಎಂದು ಯೋಚಿಸಿ ನೋಡಿದರೆ – ‘ ವಾಹ್ !,ತಾಜ್ ಬೋಲಿಯೆ’ ದಿನಗಳಿಂದ ಅನ್ನಬಹುದು  ಸದಾ ಹಸನ್ಮುಖದ ಈ ಚೆಲುವ ಚೆನ್ನಿಗರಾಯನ ತಬಲಾದ ಮೇಲಿನ ಬೆರಳುಗಳ  ಆ ಸುರಳೀತ, ಸುಲಲಿತ ನಾಧಿನ್ ಧಿನ್ನಾ ನರ್ತನ, ಅಲೆಅಲೆಗುಂಗುರುಗೂದಲಿನ ತೋಂತನನ ನೋಡುತ್ತಿದ್ದರೆ ನಮ್ಮ ಹೃದಯವೂ ‘ ಧಕ್ ಧಕ್ ಕರನೇ ಲಗಾ’  ಆಗಿ ಅಮೃತವಾಹಿನಿಯೊಂದು ಹರಿಯುತ್ತಿದ್ದುದು ಸುಳ್ಳಲ್ಲ. ಸಂಗೀತದ ಬಗ್ಗೆ ಒಂದು ಕೈ ಒಲವು ಹೆಚ್ಚಾದದ್ದೇ ಇವರಿಂದ ಎನ್ನಬಹುದು. ನಮ್ಮ ಅಡುಗೆಮನೆಯಲ್ಲಿ red label   ಹೋಗಿ Taj ಚಹಾ ಬರಲೂ ಇವರೇ ಕಾರಣ.

ಕಲೆಯ ಬಗೆಗಿನ ಅವರ ಪ್ರೀತಿ, ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತಿರುವ ನಯವಿನಯ, ಸಾದಾತನಗಳು, ಮಾನವೀಯತೆಗೆ ಮಿಡಿವ ಅವರ ಮಾತು – ವರ್ತನೆಗಳು ಅವರನ್ನು ಬೇರೆಯದೇ ನೆಲೆಯಲ್ಲಿ ನಿಲ್ಲಿಸುತ್ತವೆ. ಅವರೇ ಹೇಳುವಂತೆ ಸಂಗೀತಕ್ಕಿರುವ ಶಕ್ತಿ ಅಪರಿಮಿತ. ಅದು ಯಾವಾಗಲೂ ಎಲ್ಲ ದೇಶ, ಕಾಲ, ಜನಾಂಗದಲ್ಲೂ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತದೆ. ಯಾವ ಧರ್ಮಕ್ಕೂ, ಪ್ರಭುತ್ವಕ್ಕೂ ಇರದ ಅಸಾಧಾರಣ ಶಕ್ತಿಯದು. 

   ಅದು ಸುಮಾರು 88 – 89 ರ ಇಸ್ವಿ. ‘ ಸುರ್ – ಸಂಗಮ್’ ಎನ್ನುವ ಕಾರ್ಯಕ್ರಮಕ್ಕೆ ಝಾಕೀರ್ ಹುಸೇನ್ ಬರುತ್ತಿದ್ದಾರೆನ್ನುವ ಸುದ್ದಿ ಗೊತ್ತಾಯಿತು. ಆದರೆ ಟಿಕೆಟ್ ದರ  500 ರೂಪಾಯಿಗಳು. ಆಗಿನ ಕಾಲಕ್ಕೆ 500 ರ ಮುಖವನ್ನೂ ನಾವು ನೋಡಿರಲಿಲ್ಲ. ಸಿನೆಮಾ  ನೋಡಲು ಹೋದರೆ  ಮೂರು ರೂಪಾಯಿ ಇಪ್ಪತ್ತು ಪೈಸೆಯ ಬಾಲ್ಕನಿ ಟಿಕೆಟ್ ತೆಗೆಸಲೂ ಹಿಂದು ಮುಂದೆ ನೋಡುವ ಕಾಲವದು. ಕಾಲೇಜಿನ ಲೆಕ್ಚರರ್ ಆಗಿದ್ದ ನಮ್ಮ ಮುದ್ದಣ್ಣ ಮಾಮಾಗೆ ಎರಡು ಪಾಸ್ ಸಿಕ್ಕಿತ್ತು. ನಮ್ಮದು 5 ಜನರ ಗ್ಯಾಂಗ್. ( ನಾನು ಹಾಗೂ  4 ಜನ ಮಾಮಾನ ಮಕ್ಕಳು) ನಾವೆಲ್ಲರೂ ನಮಗೂ ಹೋಗಲೇಬೇಕು ಎಂಬ ಒಕ್ಕೊರಲಿನ ಗಾಯನವನ್ನೂ, ಝಾಕೀರ್ ಹುಸೇನ್ ರನ್ನು ನೋಡಲೇಬೇಕೆಂದು ಧಿಮಿಧಿಮಿ ನೃತ್ಯವನ್ನೂ ಶುರುಮಾಡಿದೆವೆನ್ನಿ. “ಅಲ್ರೇ , ನಿಮಗೇನು ಮಹಾ ರಾಗತಾಳ ಜ್ಞಾನ ಅದ? 2-3 ತಾಸಿನ ಕಛೇರಿ ಅದು. ಬ್ಯಾಸರ ಆಗಿ ಬಿಡತದ ನಿಮಗ.” ಅಂದ ಮಾಮನಿಗೆ “ ನಮಗೆಲ್ಲಿ ತಬಲಾ ಕೇಳೂದದ? ಝಾಕೀರ ಹುಸೇನ್ ರನ್ನು ಹತ್ತಿರದಿಂದ ನೋಡಿ ಖುಷಿ ಪಡೂದದ” ಎನ್ನುವ ನಮ್ಮ ಉತ್ತರ ಸಿದ್ಧವಾಗಿತ್ತು  “ ದಿನಾ ಬೆಳಗಾದ್ರ ಟಿವ್ಯಾಗ ನೋಡತಿರಲಾ?” “ ಹೂಂ. ದಿನಾ ಟಿವ್ಯಾಗ ನೋಡಿ ನೋಡೇ ಅವರನ್ನ ನೋಡಲೇಬೇಕು ಅನ್ನಿನಿಸಿದ್ದು. ಇಲ್ಲೀತನಾ, ನಮ್ಮ ಬಿಜಾಪೂರಿಗೆ ಅದರಲ್ಲೂ ನಮ್ಮ ಮನೆ ಹತ್ತಿರದGovt.high school ಗೆ ಬರುತ್ತಿದ್ದಾರೆ. ನಾವು ಹೋಗಲಿಲ್ಲ ಅಂದರೆ ಅದ್ಹೇಗೆ ?” ಎನ್ನುವುದು ನಮ್ಮ ವಾದ. ಬೆಳಗ್ಗೆಯಿಂದ ಸಂಜೆಯವರೆಗೆ ಮಾಮನ ಮುಖ ಕಂಡೊಡನೆ ‘ ಝಾಕೀರ್, ತಬಲಾ. ಝಾಕೀರ, ತಬಲಾ’  ಅಂತ ಸ್ಲೋಗನ್ ಕೂಗುತ್ತ ದೊಡ್ಡ ಹರತಾಳವನ್ನೇ ಮಾಡಿ ಅಂತೂ ಯಶಸ್ವಿಯಾದೆವೆನ್ನಿ.ನಮ್ಮ ಬಡಬಡಿಸುವಿಕೆಗೆ, ಹಟಕ್ಕೆ ಸೋತ ನಮ್ಮ ಸೋದರಮಾವ 1,500 ರೂಪಾಯಿಗಳನ್ನು (ಆಗಿನ ಕಾಲಕ್ಕೆ) ಕೊಟ್ಟು ಇನ್ನೂ ಮೂರು ಟಿಕೆಟ್ ಖರೀದಿಸಿ ನಮ್ಮನ್ನು ಆ ಕಾರ್ಯಕ್ರಮಕ್ಕೆ ಕಳಿಸಿದ್ದರು. ಅವರು ಸ್ವಲ್ಪ  ಜೋರು ಮಾಡಿ ನಮ್ಮನ್ನು ಸುಮ್ಮನಾಗಿಸಬಹುದಿತ್ತು. ‘ ರೊಕ್ಕದ ಗಿಡಾ ಅದ ಎನು ಹಿಂದ?’ ಎನ್ನಬಹುದಿತ್ತು. ಆದರೆ ಹಾಗೆ ಮಾಡದೇ ನಮ್ಮ ಬಾಲಿಶ ಹುಚ್ಚುತನವನ್ನು ಅಪರೋಕ್ಷವಾಗಿ ಬೆಂಬಲಿಸಿದ ಆ ತಾಯಂಥಕರಣದ ಜೀವಕ್ಕೆ ಎಷ್ಟು ಮಣಿದರೂ ಕಡಿಮೆ ಎನಿಸುತ್ತದೀಗ.

 ಬಂಗಾರದ ಗುಂಡಿ, ಚೈನು ಪೋಣಿಸಿದ, ತಿಳಿನೀಲಿ ಬಣ್ಣದ ಉದ್ದನೆಯ ಕುರ್ತಾ, ಬಿಳಿ ಶುಭ್ರ ಪಾಯಿಜಾಮಾ ಧರಿಸಿದ ಅವರು ಸ್ಟೇಜ್ ಮೇಲೆ ಬಂದರೆ ನನಗೆ ಯಾರೋ ದೇವ ಮಾನವ ನಡೆದು ಬಂದಂಥ ಭಾವ. ತಬಲಾದ ರಠಈಕ ಅರ್ಥವಾಗದಿದ್ದರೂ ಆ ನಾದದ ಲಹರಿ ತಾನಾಗೇ ನಮ್ಭನ್ನು ತನ್ನ ಸೆಳವಿನಲ್ಲಿ ಎಳೆದೊಯ್ದು ನಮ್ಮನ್ನು ತೇಲಿಸಿ, ತೊಯ್ಯಿಸಿದ್ದು, ಆ ತಬಲಾ – ಡಗ್ಗಾಗಳ ಮೇಲೆ ಅವರು ಹರಿಸಿದ ಆ ದೈವೀಕ ನಾದದ ಹೊಳೆ, ಗುಡುಗಿನ ಆರ್ಭಟ, ಮಳೆಯ ಟಪಟಪ  ಹನಿಗಳ ಸದ್ದು, ಬೀಸುವ ರೊಯ್ ರೊಯ್ ಗಾಳಿ, ಶಿವನ ಡಮರುಗ, ಕೃಷ್ಣನ ಪಾಂಚಜನ್ಯ, ಕುದುರೆಯ ಹೇಷಾರವ, ಖುರಪುಟ.. ಕೇಳುತ್ತಿದ್ದ ಶ್ರೋತೃಗಳೆಲ್ಲ ದಂಗಾಗಿದ್ದರು; ಗುಂಗಿನಲ್ಲಿದ್ದರು.

ಆಗ ಸೆಲ್ಫಿಯ ಕಾಲವಲ್ಲ, ಆಟೋಗ್ರಾಫ್ ದ ಸ್ಪೆಲ್ಲಿಂಗೂ ಗೊತ್ತಿರಲಿಲ್ಲ. ಆದರೆ ಆ ಸುನೆಹರೆ ಕ್ಷಣಗಳು ಎದೆಯ ಗೂಡಲ್ಲಿ ನಿತ್ಯನಿರಂತರ ಹಸಿರು.ಇಷ್ಟು ಬೇಗ ಹೊರಡಬಾರದಿತ್ತು ಉಸ್ತಾದ್ ನೀವು. ಇನ್ನೂ ಇರಬೇಕಿತ್ತು.’ ಸುರ್ ಕಿ ಸಾಧನಾ ಪರಮೇಶ್ವರ್ ಕಿ’ ಎಂಬ ಆ ನಿಮ್ಮ ‘ ಸೋಚ್’ ಇನ್ನಷ್ಟು ಹರಡಬೇಕಿತ್ತು. “ ಕಲಾವಿದ ಹೋದರೇನಂತೆ? ಕಲೆ ಎಲ್ಲಿಗೂ ಹೋಗುವುದಿಲ್ಲ..ಯಾವೂದೂ ಖಾಲಿಯಾಗುವುದಿಲ್ಲ” ಎಂದು ನೀವೇ ಹಲವಾರು ಬಾರಿ ಸಂದರ್ಶನಗಳಲ್ಲಿ ಹೇಳುತ್ತಿದ್ದಿರಾದರೂ ನೀವು ತೆರವು ಮಾಡಿದ ಜಾಗ ಸದಾ ಖಾಲಿಯೇ. ಅದಕ್ಕ್ಯಾವ ಪರ್ಯಾಯವೂ ಇಲ್ಲ. ಹೋಗಿ ಬನ್ನಿ; ಭಾವಪೂರ್ಣ ಶೃದ್ಧಾಂಜಲಿಗಳು.

~ಗೌರಿ ಪ್ರಸನ್ನ

No photos, no videos to mark my tale,
Yet his magic fills my spirit’s sail.
Ustad Zakir Hussain, the tabla’s very name,
A legend whose glory ignites music’s flame.

As a child, through palace halls and Dasara nights,
I witnessed his art beneath Mysuru’s lights.
The memory is faint, yet vivid and clear,
A childlike smile—so pure, so near.

Oh, that smile! A symphony of untold lore,
A joy that sprang from his music’s core.
Each beat of the tabla, each rhythmic embrace,
Lit up his eyes, adorned his face.

Did he ever feel nerves, or pressures vast?
If so, that smile—steadfast, unsurpassed—
Taught us all, in life’s demanding race,
To wear our joy as a saving grace.

I’ve watched his videos, a hundred, no less,
Never a frown, never distress.
Eyes that sparkled, fingers that flew,
Creating celestial rhythms anew.

Even the tea ad, with his father in frame,
Hair aflutter, rhythm the same,
Added a cadence, a timeless beat,
Turning the mundane into something sweet.

My memories now soar beyond the clouds,
Among the stars, where his spirit resounds.
For Zakir Hussain, a maestro so bright,
Plays on forever, in music’s eternal light.

~ ರಾಧಿಕಾ ಜೋಶಿ

ಕೊನೆಯ ಚಿತ್ರ 

ಡಾ. ಮುರಳಿ ಹತ್ವಾರ್ ಅವರು ಬರೆದಿರುವ ‘ಕೊನೆಯ ಚಿತ್ರ’ ಎಂಬ ಲೇಖನ  ಮತ್ತು ‘ಸ್ತಬ್ಧ’ ಎಂಬ ಕವನ ವಿಷಾದ  ಮತ್ತು ಕರಾಳ ವಿಷಯವಾದರೂ ಅದು ಪ್ರಸ್ತುತವಾದ ಮತ್ತು ಸೂಕ್ಷ್ಮವಾದ ವಿಚಾರ. ಕಷ್ಟಗಳ ಸುರಿಮಳೆಯನ್ನು ಎದುರಿಸಿದಾಗ ನಾವು ನಮ್ಮ ವೈಯುಕ್ತಿಕ ಸಾಮರ್ಥ್ಯಯಕ್ಕೆ ತಕ್ಕಂತೆ ಅದನ್ನು ಬೇರೆ ಬೇರೆ ರೀತಿ ನಿಭಾಯಿಸಿ ನಿವಾರಿಸಿಕೊಳ್ಳುತ್ತೇವೆ. ಬದುಕಿನ ಹಲವಾರು ಅಡಚಣೆಗಳನ್ನು ಎದುರಿಸಲು ಎಲ್ಲರೂ ಸಿದ್ಧರಾಗಿರುವುದಿಲ್ಲ ಮತ್ತು ಎಲ್ಲರೂ ಏಕರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಕೆಲವರು ತಮ್ಮ ಬದುಕಿನಲ್ಲಿ  ಹೊಂದಾಣಿಕಗಳನ್ನು ಮಾಡಿಕೊಂಡು ಸ್ನೇಹಿತರು ಮತ್ತು ಬಂಧುಗಳ ವಿಶ್ವಾಸದಿಂದ, ಸ್ಥೈರ್ಯ ದಿಂದ ಪರಿಹಾರವನ್ನು ಕಂಡುಕೊಂಡು ಕಷ್ಟಗಳನ್ನು ದಾಟಿ ಬರುತ್ತಾರೆ. ಇನ್ನು ಕೆಲವರು, ಅದರಲ್ಲೂ ಸೂಕ್ಷ್ಮ ಸ್ವಭಾವದವರು, ಅಂತರ್ಮುಖಿಗಳು, ಮಾನಸಿಕ ತೊಂದರೆಗಳಿಗೆ ಒಳಗಾದವರು ಈ ಅಡಚಣೆಗಳನ್ನು ಹತ್ತಿಕ್ಕಲು ಹೆಣಗುತ್ತಾರೆ. ಇಂತಹ ಒಂದು ಕ್ಲಿಷ್ಟ ಪರಿಸ್ಥಿತಿಯಲ್ಲಿ ಭಾವೋದ್ರೇಕದಲ್ಲಿ  ಅವರು ಆತ್ಮಹತ್ಯೆಯ ಮಾರ್ಗವನ್ನು ಹಿಡಿಯಬಹುದು. ಮಾನಸಿಕ ಆರೋಗ್ಯ ದೈಹಿಕ ಆರೋಗ್ಯದಷ್ಟೇ ಮುಖ್ಯ. ಮಾನಸಿಕ ತೊಂದರೆಗೀಡಾದವರು ಆತ್ಮಹತ್ಯೆಯಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚು. ಎಷ್ಟೋ ವೇಳೆ ಒಬ್ಬ ವ್ಯಕ್ತಿಗೆ ಮಾನಸಿಕ ತೊಂದರೆ ಇದದ್ದು ತಿಳಿಯುವುದಿಲ್ಲ ಅವರ ಆತ್ಮಹತ್ಯೆಯ ನಂತರದ ವಿಶ್ಲೇಷಣೆಯಲ್ಲಿ ಈ ವಿಚಾರ ಬೆಳಕಿಗೆ ಬರುತ್ತದೆ. ಈ ಆತ್ಮಹತ್ಯೆಯ ಆಲೋಚನೆಗಳು ಬರಿ ದೊಡ್ಡವರ ಸಮಸ್ಯೆ ಅಷ್ಟೇ ಅಲ್ಲ ಏಕೆಂದರೆ ಶಾಲಾ ಮಕ್ಕಳು ಕೂಡಾ ಆತ್ಮಹತ್ಯೆಯಲ್ಲಿ ತೊಡಗಬಹುದು.  ಪರಿಸ್ಥಿತಿಯ ಒತ್ತಡದಲ್ಲಿ ಮೂಡಿಬರುವ ಈ ಆತ್ಮಹತ್ಯೆಯ ಆಲೋಚನೆ ತೀವ್ರ ವಾಗುವುದು ಒಂದು ಸಣ್ಣ ಘಳಿಗೆಯಲ್ಲಿ ಮತ್ತು ಅದು ಆಂತರಿಕ ಆವೇಗ ಎಂದು ಭಾವಿಸಬಹುದು. ಆ ಸಮಯದಲ್ಲಿ ಅದನ್ನು ಗುರುತಿಸಿ ನೆರವು ನೀಡಿದಲ್ಲಿ ಈ ಹಠಾತ್ ಪ್ರಚೋದನೆಯನ್ನು ತಡೆಗಟ್ಟಬಹುದು. ಆತ್ಮಹತ್ಯೆ ಒಂದು ತೀವ್ರ ಪ್ರಚೋದನೆಯ ಕ್ಷಣವಾದರೂ ಅದರ ಹಿಂದೆ ಸಾಮಾಜಿಕ, ಆರ್ಥಿಕ, ವೈಯುಕ್ತಿಕ ವೈಫಲ್ಯಗಳು ಇರುವುದು ಸಾಮಾನ್ಯ. ಈ ಕಾರಣಗಳಿಂದ ಖಿನ್ನರಾದವರು ಈ ಪಲಾಯನ ಮಾರ್ಗವನ್ನು ಹಿಡಿಯುವುದು ಶೋಚನೀಯ. ಚಲನಶೀಲವಾದ ನಮ್ಮ ಬದುಕಿನಲ್ಲಿ ಗಂಟೆ ಗಂಟೆಗೂ, ದಿನ ದಿನಕ್ಕೂ ಬದುಕಿನ ಪರಿಸ್ಥಿತಿ ಬದಲಾಗುವ ಅನೇಕ ಅವಕಾಶಗಳು ಬಂದು ಹೋಗುತ್ತಿರುವಾಗ, ಅನೇಕ ಆಶಾದಾಯಕ ಸಾಧ್ಯತೆಗಳು ಮೂಡುತ್ತಿರುವಾಗ ಕೆಲವರು ದುಡುಕಿ ಆತ್ಮಹತ್ಯೆಯ ಮಾರ್ಗವನ್ನು ಹಿಡಿಯುವುದು ವಿಷಾದದ ಸಂಗತಿ. ಇದನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿ. ಆದರೆ ಆತ್ಮಹತ್ಯೆ ಕೈಗೊಳ್ಳುವವರ ಸ್ವಾಭಾವಿಕ, ಮಾನಸಿಕ ಲಕ್ಷಣಗಳನ್ನು ಗುರುತಿಸುವುದು ಸುಲಭವಲ್ಲ. ಜನ ಸಾಮಾನ್ಯರಲ್ಲಿ ಅದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಅರಿವು ಮೂಡಿಸದರೆ ಅಷ್ಟೇ ಸಾಲದು ಆ ವ್ಯಕ್ತಿಗೆ ಬೇಕಾದ ತುರ್ತು ಸಹಾಯ ಮತ್ತು ಕೌನ್ಸೆಲಿಂಗ್ ಒದಗಿಸಲು ಸಂಪನ್ಮೂಲಗಳು ಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ ಹಲವಾರು ಸರ್ಕಾರಿ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಘಟನೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ವೈಯುಕ್ತಿಕ ನೆಲೆಯಲ್ಲಿ ಪ್ರತಿಯೊಬ್ಬರಿಗೂ ಆತ್ಮಹತ್ಯೆಯನ್ನು ತಡೆಗಟ್ಟುವ, ಇನ್ನೊಬ್ಬರಿಗೆ ಸಹಾಯ ಮಾಡುವ ಜವಾಬ್ದಾರಿಯಿದೆ ಎನ್ನುವುದನ್ನು ಮರೆಯಬಾರದು. ‘ಪ್ರತಿಯೊಂದು ಕಾರ್ಮೋಡಕ್ಕೂ ಒಂದು ಬೆಳ್ಳಿಯ ಅಂಚಿದೆ’ ಎನ್ನುವ ವಿಚಾರವನ್ನು ಅರಿಯಬೇಕಾಗಿದೆ.  ಭರವಸೆ ಎಂಬುದು ಬದುಕಿನ ಬುನಾದಿ.

ಡಾ. ಮುರಳಿ ಹತ್ವಾರ್ ಒಬ್ಬ ಅನುಕಂಪೆ ಉಳ್ಳ ವೈದ್ಯರಾಗಿ, ಸಾಮಾಜಿಕ ಕಾಳಜಿ ಇರುವ ಸತ್ಪ್ರಜೆಯಾಗಿ ಆತ್ಮ ಹತ್ಯೆಯನ್ನು ಕುರಿತ ವಿಚಾರಗಳನ್ನು ಚಿಂತನೆಗೆ ಒಳಪಡಿಸಿದ್ದಾರೆ. ಅವರು ಲಂಡನ್ನಿನ ಥೇಮ್ಸ್ ನದಿ ದಡದಲ್ಲಿ ಒಮ್ಮೆ ವಿಹಾರಕ್ಕೆಂದು ಹೋದಾಗ ಅಲ್ಲಿ ಕಂಡ ಚಿತ್ರಪ್ರದರ್ಶನ ಅವರ ಆಲೋಚನೆಗಳನ್ನು ಪ್ರಚೋದಿಸಿದ ಪರಿಣಾಮವೇ "ಕೊನೆಯ ಚಿತ್ರ" ಮತ್ತು "ಸ್ತಬ್ಧ" ಎಂಬ ಕವನ
     -ಸಂಪಾದಕ 


************************
ಎಲ್ಲಾ ಫೋಟೋ ಕೃಪೆ – ಡಾ ಮುರಳಿ ಹತ್ವಾರ್
ಕೊನೆಯ ಚಿತ್ರ 
ಡಾ. ಮುರಳಿ ಹತ್ವಾರ್ 

ದ ಲಾಸ್ಟ್  ಫೋಟೋ. ಇದೊಂದು ಚಿತ್ರ ಪ್ರದರ್ಶನ. ಯಾವುದೊ ದೊಡ್ಡ ಮ್ಯೂಸಿಯಂ ಅಥವಾ ಗ್ಯಾಲರಿಯಲ್ಲಲ್ಲ, ಥೆಮ್ಸ್ ನದಿ ದಂಡೆಯಲ್ಲಿ, ಪಾದಚಾರಿಗಳ, ಟೂರಿಸ್ಟರ ಆರಾಮ ನಡುಗೆಗೆಂದು ಹಾಸಿರುವ ಕಲ್ನೆಲದ ಮೇಲೆ. ದೂರದಿಂದಲೇ ಕಾಣುವ ದೊಡ್ಡ ಗಾತ್ರದ ನಗು ಮುಖಗಳ ಪೋರ್ಟ್ರೇಟ್ಗಳನ್ನ ನಡುವೆ ಒಬ್ಬರು ನಡೆಯುವಷ್ಟು ಜಾಗ ಬಿಟ್ಟು ಆಚೆಗೊಂದು ಈಚೆಗೊಂದು ಸಾಲಿನಲ್ಲಿ ಜೋಡಿಸಿಟ್ಟ ಪ್ರದರ್ಶನ. ಹತ್ತಿರ ಹೋದಾಗಲೇ ಗೊತ್ತಾಗೋದು ಇವು ಆ ನಗು ತುಂಬಿದ ಮುಖಗಳ ಕೊನೆಯ ಚಿತ್ರ ಎನ್ನೋ ವಿಷಾದದ ವಿಚಾರ. 

ನಗೆ ಮುಖದ, ಒಬ್ಬರೇ ಇರುವ, ಇಲ್ಲ ಮಕ್ಕಳು, ಮನೆಯವರು, ಸ್ನೇಹಿತರ ಜೊತೆ ಇರುವ, ಸಾಲಿನಲ್ಲಿ ಜೋಡಿಸಿಟ್ಟಿರುವ ದೊಡ್ಡ ಸೈಜಿನ ವ್ಯಕ್ತಿ ಚಿತ್ರಗಳು (portrait), ಅವುಗಳ ಕೆಳಗೆ ಆ ವ್ಯಕ್ತಿಯ ಕಿರು ಪರಿಚಯ ಓದಲು ಬೇಕಾದ QR Code.  ಒಂದಲ್ಲಾ ಒಂದು ಕಾರಣದಿಂದ ತಮ್ಮೆ ಜೀವ ತೆಗೆದುಕೊಂಡವರ ಕೊನೆಯ ಚಿತ್ರಗಳವು. ಈ ಪ್ರದರ್ಶನ ಆಯೋಜಿಸಿದ್ದು  ಲಂಡನ್ನಿನ CALM (Campaign Against Living Miserably) ಸಂಸ್ಥೆ; ಈ ಸಂಸ್ಥೆ ಸುಮಾರು ೨೫ ವರ್ಷಗಳಿಂದ ಖಿನ್ನತೆ ಮತ್ತಿತರ ಕಾರಣಗಳಿಂದ ಆತ್ಮಹತ್ಯೆಯ ರಿಸ್ಕ್ ಹೆಚ್ಚಿರುವವರಿಗೆ ಸಹಾಯ ಮಾಡುತ್ತಿದೆ. 

ಆತ್ಮಹತ್ಯೆಗೆ ಅದೇ ಇದೇ ಕಾರಣ ಅಂತಿಲ್ಲ. ಆ ವ್ಯಕ್ತಿಗಳಿಗೆ ಕಾಣುವಂತ ಖಾಯಿಲೆ, ತೊಂದರೆ ಇರಬೇಕಂತಲೂ ಇಲ್ಲ. ಒಂದು ವೇಳೆ ದೈಹಿಕ, ಮಾನಸಿಕ, ಆರ್ಥಿಕ, ಮತ್ಯಾವುದೋ ತೊಂದರೆ ಇದ್ದರೂ, ಅದು ಮೇಲ್ನೋಟಕ್ಕೆ ಕಾಣುಬೇಕಂತಲೂ ಇಲ್ಲ. ಹಾಗಾಗಿ, ಈ ಅನ್ಯಾಯದ ಸಾವನ್ನ ತಡೆಯುವದು ಕಷ್ಟ. ಆದರೆ, ಒಂದು ವೇಳೆ, ಆ ಅತಿ ದುರ್ಬಲ ಕ್ಷಣದಲ್ಲಿ ಸಹಾಯದ ಹುಲ್ಲು ಕಡ್ಡಿ ಸಿಕ್ಕಿ ಬದುಕಿನತ್ತ ಮತ್ತೆ ನಡೆಯುವ ಜನರಲ್ಲಿ ಶೇ. ೯೦ ಜನ ಮತ್ತೆ ಆ ಕಡೆ ನಡೆಯುವುದಿಲ್ಲ. ಇದೊಂದು ಕಾರಣ ಸಾಕಲ್ಲವೇ, ಆತ್ಮಹತ್ಯೆಗೆ ಪೂರಕವಾಗುವ ಸೂಕ್ಷ್ಮ ವಿಚಾರಗಳ, ಕ್ಷಣಗಳ ಮನನ ಮಾಡಿಕೊಂಡು, ಅಂತಹ ಸಂದರ್ಭಗಳೇನಾದರೂ ಬಂದರೆ, ಎಚ್ಚರಗೊಳ್ಳಲು? ಈ ಸೂಕ್ಷ್ಮ ವಿಚಾರಗಳ ಅರಿವು ಮೂಡಿಸುವದೇ CALM ಸಂಸ್ಥೆಯ ಸದುದ್ದೇಶ. 

ಇಂಗ್ಲೆಂಡಿನಂತಹ ಸಣ್ಣ ದೇಶದಲ್ಲೇ ವಾರಕ್ಕೆ ೧೨೫ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೆಲವು ಅಂಕಿಗಳ ಪ್ರಕಾರ ಪ್ರಪಂಚದಲ್ಲಿ ಒಟ್ಟಾರೆ ವರ್ಷಕ್ಕೆ ೮೦೦೦೦೦ ಜನ ಹೀಗೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚು ಯುವ ಜೀವಗಳ ಖಾಲಿಯಾಗುವದು ಇದರಿಂದಲೇ. ಗಂಡಸರ ಪ್ರಮಾಣ ಹೆಂಗಸರಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚು. ಮಾನಸಿಕ ಖಾಯಿಲೆ ಇರುವವರಿಗೆ ಹೆಚ್ಚಿನ ರಿಸ್ಕ್, ಆದರೆ ಯಾವುದೇ ತರಹದ ತಡೆಯಲಾಗದ ತೀವ್ರ ಒತ್ತಡವೂ ಮನಸ್ಸನ್ನ ಜೀವ ಕಳೆಯುವಷ್ಟು ಬಲಹೀನ ಮಾಡಬಲ್ಲದು. 

ಆ ದುರ್ಬಲ ಸನ್ನಿವೇಶದಲ್ಲಿ, ಅಡುಗೆ ಮನೆಯ ಒಲೆ, ಕತ್ತಿ, ಚಾಕು; ಗಿಡಕ್ಕೆ ಹೊಡೆಯುವ ಔಷಧಿ; ಇಲಿ ಪಾಷಾಣ; ಕೈಗೆ ಸಿಕ್ಕುವ ಮಾತ್ರೆಗಳು; ಸೀರೆ, ಪಂಚೆ; ಕೆರೆ, ಬಾವಿ, ನದಿ, ಸಮುದ್ರ; ರಸ್ತೆಯ ಬಸ್ಸು, ರೈಲಿನ ಪಟ್ಟಿ. . . ಯಾವುದೋ ಒಂದರ ದಾರಿ ಹಿಡಿದು ಹೊರಡುತ್ತದೆ ಮನಸು. ಒಮ್ಮೆ ಕಳೆದರೆ ಮತ್ತೆ ಬಾರದ ಆ ಮನಸು, ದೇಹಗಳು ಕಳೆದುಕೊಂಡದ್ದು, ಆವರ ಅಗಲಿಕೆಯಿಂದ ಅವರ ಮನೆಯವರಿಗೆ, ಸ್ನೇಹಿತರಿಗೆ, ಸಮಾಜಕ್ಕೆ ಆಗುವ ನಷ್ಟವನ್ನ ತುಂಬುವದು ಕಷ್ಟ.  

ಆ ಚಿತ್ರಗಳನ್ನು ನೋಡುತ್ತಾ ನಡೆಯುವಾಗ ಹೊಟ್ಟೆ ಕಿವುಚಿ, ಮುಖ ತುಂಬಿ, ಕಣ್ಣೀರು ಧುಮುಕುವಷ್ಟು ತೀವ್ರ ಉತ್ಪಾತ ಮನಸ್ಸಿನಲ್ಲಿ. ಕಣ್ಣ ಮುಂದಿರುವ ಅಪರಿಚಿತರ ಚಿತ್ರಗಳಡಿಯ ನೋವಷ್ಟೇ ಅಲ್ಲದೆ, ನನ್ನ ಬದುಕಿನ ಪಯಣದಲ್ಲಿ ಹೀಗೆ ಮರೆಯಾದವರ ನೆನಪುಗಳೆಲ್ಲ ಮತ್ತಷ್ಟು ಮನಸ್ಸನ್ನ ಒದ್ದೆ ಮಾಡಿತು. ಪರಿಚಿತರ ಮನೆಯ ಆ ಹೈಸ್ಕೂಲಿನ ಹುಡುಗಿ - ಹುಷಾರಿಲ್ಲವೆಂದು ಶಾಲೆಗೆ ಹೋಗದಿದ್ದಕ್ಕೆ ಅಮ್ಮನನ್ನು ಕರೆಸಿ ಹೆಡ್ ಮಿಸ್ ಎರ್ರಾಬಿರ್ರಿ ಬೈದರೆಂದು ನೊಂದು ಮಾರನೇ ದಿನ ಮನೆಯ ಮಾಡಿ ಮೇಲಿನ ಕೋಣೆಯಲ್ಲಿ... . ಎಷ್ಟು ನೊಂದಿರಬೇಕು ಆ ಚಿಕ್ಕ ಮನಸು. ಹೆಡ್ಮಿಸ್ಸಿಗೆ ನೂರಾರು ಮಕ್ಕಳಿದ್ದಾರೆ ಶಾಲೆಯಲ್ಲಿ. ಆದರೆ, ಆ ಮನೆಗಿದ್ದದ್ದು ಅವಳೊಬ್ಬಳೇ. ಸ್ವಲ್ಪ ಅವರ ಭಾಷೆಯಲ್ಲಿ, ಭಾವದಲ್ಲಿ ತಾಳ್ಮೆ, ಸಾಂತ್ವನವಿದ್ದಿದ್ದರೆ?. . . ಖಂಡಿತ ಬದುಕುತ್ತಿದ್ದಳು ಆ ಹುಡುಗಿ. . .

ಒತ್ತಡ, ಸ್ಟ್ರೆಸ್, ಬುಲ್ಯಿಂಗ್, ಬಡತನ, ಸಾಲ, ಅತಿ ನಿರೀಕ್ಷೆ, ಸೋಲು, ಗುಣವಾಗದ ಖಾಯಿಲೆ. . . ಹೀಗೆ ಕಾರಣ ನೂರಾರು. ಇಂತಹ ಯಾವುದಾದರೂ ಪರಿಸ್ಥಿತಿಯಲ್ಲಿ ನಡೆಯುತ್ತಿರುವವರನ್ನ ಸ್ವಲ್ಪ ಎಚ್ಚರದಿಂದ ಗಮನಿಸುತ್ತಾ, ಅವರ ದೈನಂದಿನ ಚಟುವಟಿಕೆ, ಮಾತು, ಹಾವಭಾವ, ಬಟ್ಟೆ, ಇನ್ನಿತರ ವಿಚಾರಗಳಲ್ಲಿ ಯಾವುದಾದರೂ ಬದಲಾವಣೆ ಕಂಡಲ್ಲಿ, ಮನೆಯವರಾಗಲಿ, ಸ್ನೇಹಿತರಾಗಲಿ, ಕೇಳುವ ಕಿವಿ ಕೊಟ್ಟು, ಮಾತಾಡಲು ಜಾಗ ಕೊಟ್ಟು, ಸಹಾಯಕ್ಕೆ ನಿಂತರೆ ಸಣ್ಣದರಲ್ಲಿಯೇ ತಪ್ಪಿಸಲು ಅವಕಾಶವಿದೆ. ಎಲ್ಲರಿಗೂ ಮನ ಬಿಚ್ಚಿ ಮಾತಾಡಲು ಬರುವುದಿಲ್ಲ. ಹಾಗೆ ಬರುವವರಿಗೂ, ಕೇಳುವವರಿಲ್ಲದೆ ಮಾತಾಡಲಾಗದು. ಹೀಗಾಗಿ, ಖಿನ್ನತೆ, ಒತ್ತಡ ಇವೆಲ್ಲ ಮನಸಿನ ಒಳಗೇ ಕುದ್ದು ಕುದ್ದು ಕೊನೆಗೊಮ್ಮೆ ಸ್ಫೋಟಗೊಳ್ಳೋದು. ಉರಿ ಹತ್ತುವ ಮುನ್ನವೇ ಆರಿಸಬೇಕು. ಯಾರಾದರೂ ಒಂಟಿಯಾಗಿದ್ದಾರೆ ಎನ್ನಿಸಿದರೆ. ಕೆಲಸದಲ್ಲಿ, ಜೀವನದಲ್ಲಿ, ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎನಿಸಿದರೆ, ಮುಟ್ಟಿ ಮಾತಾಡಿಸಬೇಕು. ಮಕ್ಕಳ ಅಳುವಿನಂತೆ ಬೆಳೆದವರ ಅಳು ಕೇಳಿಸುವುದಿಲ್ಲ, ಆದರೆ ಮನಸ್ಸಿನೊಳಗೆ ಎಲ್ಲರೂ ಮಕ್ಕಳೇ. ಆಗಾಗ ಅಮ್ಮನ, ಅಪ್ಪನ, ಅಣ್ಣನ, ಅಕ್ಕನ, ಗೆಳೆಯರ ಮಡಿಲಿನ ನೆಮ್ಮದಿಯ ಮನೆ ಬೇಕು ಆರಡಿಯ, ಅರವತ್ತು ದಾಟಿದ ದೇಹಗಳಿಗೂ. . 

ಮನೆಯವರಷ್ಟೇ ಅಲ್ಲ, ಸಮಾಜದ ಎಲ್ಲರೂ, ಎಲ್ಲ ಕ್ಷಣದಲ್ಲೂ ಎಚ್ಚರವಿದ್ದರೆ, ಒಂದಷ್ಟು ಜೀವಗಳನ್ನ ಉಳಿಸಬಹುದು. ರೈಲ್ವೆ ಸ್ಟೇಷನ್ನಿನಲ್ಲಿ ಒಂಟಿಯಾಗಿ ಮಾತಾಡಿಕೊಂಡು ಚಟಪಟನೇ ತಿರುಗುತ್ತಿರುವ ವ್ಯಕ್ತಿ, ಇಲ್ಲ ಏನೂ ಮಾತಾಡದೆ ಪ್ಲಾಟ್ಫಾರ್ಮಿನ ಅಂಚಿನಲ್ಲಿ ನಿಂತಿರುವ ವ್ಯಕ್ತಿಯನ್ನ ಒಮ್ಮೆ ಹಲೋ ಎಂದು ಮಾತಾಡಿಸಿದರೆ ಅಷ್ಟೇ ಸಾಕಾಗಬಹುದು ಆ ವ್ಯಕ್ತಿ ತನ್ನ ನಿರ್ಧಾರ ಬದಲಿಸಿ ರೈಲಿನಡಿಯ ಬದಲು ಮತ್ತೆ ಬದುಕಿನ ರೈಲಿನೊಳಗೆ ಓಡಲು. ಆ ಎಚ್ಚರದ ಕಣ್ಣುಗಳು, ಬೇರೊಂದು ಜೀವದ ಬಗ್ಗೆ ತುಡಿತ, ಆ ಆತ್ಮೀಯ ಸ್ಪಂದನೆ, ಮೊಬೈಲಿನಲ್ಲಿ ನಮಗೇ ನಾವು ಅಪರಿಚಿತರಂತೆ ಮುಳುಗಿರುವ ಈ 'ಬ್ಯುಸಿ-ಬ್ಯುಸಿ' ಟೈಮಿನಲ್ಲಿ ಸುಲಭವಲ್ಲ. ಆದರೆ, ಆ ಸಂಕಷ್ಟದ ಕ್ಷಣಗಳ ಸಂಧರ್ಭಕ್ಕೆ ಮಿಡಿದರೆ ಅದರಿಂದ ಆಗುವ ಲಾಭ ಅಪಾರ. 

ಅಂತಹ ಒಂದು ಘಟನೆ, ಮತ್ತೊಮ್ಮೆ ನೆನಪಿಗೆ ಬಂತು. ಹೀಗೆ ಒಮ್ಮೆ, ಬೆಳಗಿನ ವಾಕಿಂಗಿಗೆ ನದಿಯ ದಂಡೆಯ ಮೇಲೆ ನಡೆದು ಹೋಗುತ್ತಿದ್ದಾಗ, ದೂರದಲ್ಲಿ ಮಹಿಳೆಯೊಬ್ಬರು ಆಚೆಗಿಷ್ಟು ಈಚೆಗಿಷ್ಟು ಹೆಜ್ಜೆ ಮತ್ತೆ ಮತ್ತೆ ಓಡಿ ಸಣ್ಣ ಜಾಗದಲ್ಲೇ ಸುತ್ತುತ್ತಿದ್ದದ್ದು ವಿಚಿತ್ರವೆನಿಸಿತ್ತು. ಅವರ ತುಸು ಹತ್ತಿರ ನಡೆದಾಗ, ಅವರು ಹೆಜ್ಜೆ ಬೆಳೆಸಿ ನನ್ನತ್ತ ಓಡಿ ಪಕ್ಕ ನಿಂತು, ಆತಂಕ ತುಂಬಿದ ಏದುಸಿರಿನಲ್ಲಿ, "ಅಲ್ಲಿ ನೋಡಿ, ಅವನು, ಚಪ್ಪಲಿ ಕೆಳಗೆ ಬಿಟ್ಟು, ನದಿಯ ಅಂಚಿನ ಬೇಲಿಗೆ ಅಂಟುಕೊಂಡು ನಿಂತಿದ್ದಾನೆ, ಕಣ್ಣು ಮುಚ್ಚಿಕೊಂಡು. ಹತ್ತು ನಿಮಿಷದಿಂದ ನೋಡುತ್ತಿದ್ದೇನೆ, ಅಲ್ಲಾಡಿಲ್ಲ ". ನದಿಯತ್ತ ನೋಡಿದರೆ, ಯುವಕನೊಬ್ಬ ತಟಸ್ಥನಾಗಿ ನದಿಯ ಕಡೆ ಮುಖಮಾಡಿ ಬರಿಗಾಲಿನಲ್ಲಿ ನಿಂತಿದ್ದು ಕಾಣಿಸಿತು. ಎರಡು ಹೆಜ್ಜೆ ಹಿಂದೆ ಒಂದು ಜೊತೆ ಚಪ್ಪಲಿ ಇತ್ತು. ಏನೂ ವಿಶೇಷ ಅನ್ನಿಸಲಿಲ್ಲ. ಆಕೆ ಮುಂದುವರೆದು: "ನಾನು ಹೆಂಗಸು, ನಿಮ್ಮಂತ ಗಂಡಸರು ಬರುವದನ್ನು ಕಾಯುತ್ತಿದೆ. ಸ್ವಲ್ಪ ಮಾತಾಡಿಸಿ, ನನಗೇನೋ ಆತಂಕ"* ಎಂದು ನಾನು ಬಾಯಿ ತೆರೆಯುವದರೊಳಗೆ, ನನ್ನಿಂದ ದೂರ ದಿಕ್ಕಿನಲ್ಲಿ ಒಂದೇ ಸಮ ಓಡಿದರು. ನಾನು ನಿಂತೆ. 

ನದಿಯತ್ತ ತಿರುಗಿ ಅವನನ್ನ ನೋಡಿದೆ. ಹಾಗೇ ನಿಂತಿದ್ದ. ನಾನೂ ನಿಧಾನಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಅವನ ಮುಖ ಕಾಣುವಂತೆ ದಡದ ಬೇಲಿಗೆ ಅಂಟಿಕೊಂಡು ನಿಂತೆ. ಅವನು ಕಣ್ಣು ಮುಚ್ಸಿ ನಿಂತಿದ್ದ. ಮುಖದ ಭಾವ ಶಾಂತವೆನಿಸಿತ್ತು. ಮೋಡದ ಮರೆಯಿಂದ ತಪ್ಪಿಸಿಕೊಂಡು ಸರಿಯಲು ಪ್ರಯತ್ನಿಸುತ್ತಾ ಉದಯಿಸುತ್ತಿರುವ ಸೂರ್ಯನ ಬೆಳಕು ಅವನ ಮುಖವನ್ನ ಹೊಳೆಸಿತ್ತು. ನನ್ನ ಮನಸ್ಸಿನ್ನೂ  ಅಪರಿಚಿತೆಯೊಬ್ಬಳು ಒಪ್ಪಿಸಿದ ಜವಾಬ್ದಾರಿಯ ಭಾರದಲ್ಲಿ ಹೊಯ್ದಾಡುತ್ತಿತ್ತು. ಸಮಾಧಾನಕ್ಕೆ, ನಾನೂ ಸೂರ್ಯನತ್ತ ಮುಖ ಮಾಡಿ ಕಣ್ಮುಚ್ಚಿ ನಿಂತೆ. ಆ ಕ್ಷಣಕ್ಕೆ ಮೋಡದಿಂದ ಹೊರಬಂದ ಸೂರ್ಯನ ತೀಕ್ಷ್ಣಬೆಳಕು ಕಣ್ಣಿಗೆ ರಾಚಿ, ಮೂಗಿನ ಹೊಳ್ಳೆಯಿಂದ ಸೀನೊಂದು ಜೋರಾಗಿ ಹಾರಿತು. ಆ ಗದ್ದಲಕ್ಕೆ ಅವನು ಕಣ್ಬಿಟ್ಟು ನನ್ನತ್ತ ನೋಡಿದ. ಅವನ ತನ್ಮಯತೆ ಭಂಗ ಮಾಡಿದ ಪಾಪ ಪ್ರಜ್ಞೆಯಲ್ಲಿ ಸಾರೀ ಎಂದೆ. ಅವನು, "ಬ್ಲೆಸ್ ಯೂ"" ಎಂದ. ಇದೇ ಅವಕಾಶವೆಂಬಂತೆ, ಒಂದೆರಡು ಮಾತಾಡಿ ಮನಸ್ಸಿನ ಆತಂಕವಿಳಿಸಿಕೊಂಡು ನನ್ನ ನಡುಗೆ ಮುಂದುವರೆಸಿದೆ. 

ಮೇಲಿನ ಘಟನೆ, ಏನೂ ಅಲ್ಲದ, ಏನೂ ಆಗದ ಸಂಗತಿಯಾದರೂ, ನನಗೊಂದು ಪಾಠ ಕಲಿಸಿತು. ನಮ್ಮ ಸುತ್ತ ಮುತ್ತಿನ ವಿಚಾರಗಳ, ಜನರನ್ನ, ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ನಮ್ಮ ಜೀವನ ಕಾಲದಲ್ಲಿ ಒಬ್ಬಿಬ್ಬರ ಜೀವವನ್ನಾದರೂ ಉಳಿಸಬಹುದೇನೋ ಅಂತ. ಆ ಸೂಕ್ಷ್ಮತೆಯನ್ನ , ಮನೆಯವರಲ್ಲಿ, ಕೆಲಸದಲ್ಲಿ ಜೊತೆಗೊಯ್ದರೆ, ಸಂಕಷ್ಟದಲ್ಲಿರುವ ಮನಸಿನ ಎಳೆಗಳನ್ನ ಮಾತಿನಲ್ಲೋ, ಉಡುಗೆಯಲ್ಲೋ, ಅಭ್ಯಾಸದಲ್ಲೋ ಕಾಣುತ್ತ, ಪರಿಹಾರದ ದಿಕ್ಕಿನಲ್ಲಿ ಅವರನ್ನ ಕಳಿಸುವಂತಾದರೆ , ಕೊನೆಯ ಫೋಟೋಗಳ ಕ್ಷಣಗಳು ಬರುವದು ತುಂಬು ಜೀವನದ ಕೊನೆಯ ಹಂತಗಳಲ್ಲಿ. ಆ ನಿಟ್ಟಿನ ಪ್ರಯತ್ನ, CALM ಸಂಸ್ಥೆಯದ್ದು. ಅದು ಎಲ್ಲರದ್ದೂ ಆಗಬೇಕೆನ್ನುವ ಸದಾಶೆಯ ಪ್ರದರ್ಶನ, The Last Photo. 


ಟಿಪ್ಪಣಿ ೧: 
(*ಆಕೆ, 'ನಾನು ಹೆಂಗಸು. . .' ಎಂದು ಸಬೂಬು ಹೇಳಿದ್ದು ಯಾಕಿರಬಹುದು ಎನ್ನುವ ಪ್ರಶ್ನೆ ಆಗಾಗ ಈಗಲೂ ಕಾಡುತ್ತದೆ. ಬಹುಶ, ಗಂಡಸರ ಸಮಸ್ಯೆಗಳಿಗೆ ಸಾವಿರಾರು ವರ್ಷಗಳಿಂದ ಹೆಂಗಸರು ಸಮಾಧಾನ ಹುಡುಕಿದ್ದು ಸಾಕು, ಈಗ ಗಂಡಸರೇ ಸುಧಾರಿಸಿಕೊಳ್ಳಬೇಕು ಎನ್ನುವ ಆಲೋಚನೆಯಿರಬಹುದೇ? ವಿಪರ್ಯಾಸವೆಂದರೆ, ಆ ಘಟನೆ ನಡೆದಾಗ, ಎಲಿಜಬೆತ್ ರಾಣಿಯ ಈ ದೇಶದ ಪ್ರಧಾನಿ ಮಹಿಳೆ (ತೆರೇಸಾ ಮೇ) ಮತ್ತು ಲಂಡನ್ನಿನ ಮುಖ್ಯ ಪೊಲೀಸ್ ಆಫೀಸರೂ ಮಹಿಳೆ (ಕ್ರೆಸಿಡಾ ಡಿಕ್))

---------------
The Last Photo ಪ್ರದರ್ಶನದಿಂದ ಪ್ರೇರಿತ ಕವನ:
ಸ್ತಬ್ಧ

ಮನ ಸಂಗಮ, ಮನ ಜಂಗಮ
ಗುರುವಿಲ್ಲದ ಗುಡಿಯ ಘಂಟೆಗಳು
ಹೊಡೆಯುತ್ತಿವೆ ಸದ್ದಿಲ್ಲದೆ

ಮುಗಿಲಾಳದ ಗುಡುಗುಗಳು
ಕೇಳಿಸದಷ್ಟು ಕಳೆದುಹೋಗಿವೆ
ತಂಗಾಳಿಗೆ ಮೈಯೊಡ್ಡಿದ ಕಿವಿಗಳು

ಎಷ್ಟೇ ಮಳೆ ಸುರಿದರೂ
ತೋಯುವುದಿಲ್ಲ ಕೆಲವು ಬಯಲುಗಳು!

ಮುನ್ನೀರಿನ ಅಲೆಅಲೆಯ ಮೇಲೆ
ಹರಿದ ಕನಸುಗಳು ತೇಲಿವೆ
ಕಮಲವರಳಿದ ಕೆಸರಿನಡಿಯ
ಮೀನಿನ ಉಸಿರೆಲ್ಲ ಕರಗಿವೆ 

ಕಳೆ ಕೀಳುವ ಹನಿಗಳಿಗೆ
ಹೂವೊಂದು ಬಾಡಿ ಕರಟಿದೆ
ನೋವೆಳೆಯುವ ಹುಡಿಗಳಿಗೆ
ನುಡಿಯೊಂದು ಮೌನವಾಗಿದೆ

ಕಿಟಕಿಯಿಲ್ಲದ ಮನೆಯ ಬಾಗಿಲಿಗೂ ಬೀಗ
ಪುಸ್ತಕ ತುಂಬಿದ ಪಾಠೀಚೀಲ,
ಪಾಲೀಶು ಮಾಡಿದ ಶೂ
ಕಾಯುತ್ತಿವೆ ತನ್ನೊಡೆಯರಿಗೆ

ಮೂಲೆ ಕೋಣೆಯ ಸೀಲಿಂಗಿಗಂಟಿದ
ಫ್ಯಾನೊಂದು ತಿರುತಿರುಗಿ ಮತ್ತದೇ
ಕಥೆ ಹೇಳುತಿದೆ:

ಜೋಲಿ ತೂಗುವ ಸೀರೆಯ ತುಣುಕೊಂದು
ಧೂಳಿನಡಿಯಲಿ ಮಲಗಿದೆ
ಅಂಗಳದಲಿ ಹಸಿದ ಕೂಸೊಂದು
ಅಮ್ಮನ ಮೊಲೆ ಬೇಕೆಂದು ಕೂಗಿ ಅಳುತಿದೆ.

ಮುರಳಿ ಹತ್ವಾರ್
೨೪.೦೬.೨೦೨೨