ನಮಸ್ಕಾರ ಅನಿವಾಸಿಯ ಬಂಧುಗಳಿಗೆ. ಶರಣ-ದಾಸ-ಸಂತರ ಸಾಹಿತ್ಯ ಸಂಗೀತದೊಂದಿಗೆ ಆರಂಭವಾಗಿ, ಇತ್ತೀಚೆಗೆ ನಮ್ಮನ್ನಗಲಿದ ಕವಿ ಎಚ್ಚೆಸ್ವಿ ಅವರಿಗೆ ಅರ್ಪಿಸಿದ ನುಡಿನಮನದ ಪುಷ್ಪಗಳ ಪಕ್ಕದಲ್ಲಿ ಹಾಯ್ದು ಬಂದ ನಮ್ಮನ್ನು ಸಂಗೀತದ ಒಬ್ಬ ಕಲಾವಿದೆಯ ಪರಿಚಯಕ್ಕೆ ಕರೆದೊಯ್ಯುತ್ತಿದ್ದಾರೆ, ನಮ್ಮ ಅನಿವಾಸಿ ಬಳಗದ ಇತಿಹಾಸಕಾರ (resident historian) ಶ್ರೀ ರಾಮಮೂರ್ತಿಯವರು. ಅವರಿದ್ದ ಕಾಲಮಾನದಲ್ಲಿ ಬದಲಾವಣೆ ತರಲು, ಒಬ್ಬ ಸಂಗೀತಗಾರ್ತಿಯಾಗಿ ಹೋರಾಡಿ, ಹಲವಾರು ವಿಷಯಗಳಲ್ಲಿ ಮೊದಲಿಗರಾದ ಬೆಂಗಳೂರು ನಾಗರತ್ನಮ್ಮನವರ ಬಗ್ಗೆ ನೋಡೋಣ ಬನ್ನಿ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ತಿಳಿಸುವುದು. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಸಂ.)
******************************
******************************
ಬೆಂಗಳೂರು ನಾಗರತ್ನಮ್ಮನ ಹೆಸರು ನಿಮಗೆ ಪರಿಚಯ ಇಲ್ಲದಿರಬಹುದು. ಆದರೆ ಹತ್ತೊಂಬತ್ತನೇ ಶತಮಾನದಲ್ಲಿ ಒಬ್ಬ ದೇವದಾಸಿಯ ಮಗಳಾಗಿ ಬೆಳದು ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿ, ತಿರುವಾಯೂರಿನಲ್ಲಿ ನಡೆಯುವ ಪ್ರಸಿದ್ಧ ತ್ಯಾಗರಾಜ ಆರಾಧನೆಯಲ್ಲಿ ಮಹಿಳಾ ಸಂಗೀತಗಾರರು ಮೊಟ್ಟಮೊದಲಿಗೆ ಭಾಗವಹಿಸುವಂತೆ ಹೋರಾಡಿದವಳು ಈ ಕನ್ನಡತಿ. ಕಾವೇರಿ ನದಿ ದಡದಲ್ಲಿ ತ್ಯಾಗರಾಜರ ಸಮಾಧಿಯ ಮಂಟಪವನ್ನು ಸ್ವಂತ ಖರ್ಚಿನಲ್ಲಿ ಕಟ್ಟಿಸಿದ್ದೇ ಈಕೆ. ಗ್ರಾಮೋಫೋನ್ ಆಗ ತಾನೇ , ಅಂದರೆ ೧೯೦೦ ರಲ್ಲಿ , ಬಂದಾಗ ತನ್ನ ಧ್ವನಿಯನ್ನು ರೆಕಾರ್ಡ್ ಮಾಡಿದ ಆರಂಭಿಕರಲ್ಲಿ ಒಬ್ಬಳು.
೧೮೭೮ ರ ನವಂಬರ್ ೩ ರಂದು ನಂಜನಗೂಡಿನಲ್ಲಿ ಜನನ; ತಾಯಿ ಪುಟ್ಟ ಲಕ್ಷ್ಮಿ. ಪ್ರಾರಂಭದಲ್ಲಿ ಇವರ ಪೋಷಕ ವಕೀಲ್ ಸುಬ್ಬರಾಯರು. ಆದರೆ, ಬೆಳಸಿದ್ದು ತಾಯಿ ಪುಟ್ಟ ಲಕ್ಷ್ಮಿ. ನಂತರ ಮೈಸೂರಿನಲ್ಲಿ ನೆಲಸಿ ಮೈಸೂರು ಅರಮನೆಯ ಒಬ್ಬ ವಿದ್ವಾಂಸರಿಂದ ಕನ್ನಡ ಮತ್ತು ಸಂಸ್ಕೃತ ಅಧ್ಯಯನ ಕೆಲವು ವರ್ಷ ನಡೆಯಿತು. ಆದರೆ, ಈತ ದೇವದಾಸಿಯ ಮಗಳನ್ನು ಶಿಷ್ಯೆ ಆಗಿ ಮುಂದುವರಿಸಲು ಹಿಂಜರಿದರು, ಬಹುಶಃ ಸಮಾಜದ ಒತ್ತಡದಿಂದಿರಬಹುದು. ನಂತರ ನಾಗರತ್ನಮ್ಮನ ವಿದ್ಯಾಭ್ಯಾಸ ಅವಳ ಸೋದರ ಮಾವ "ಪಿಟೀಲು" ವೆಂಕಟಸ್ವಾಮಿ ಅವರಿಂದ ಮುಂದುವರೆಯಿತು. ನಂತರ, ತ್ಯಾಗರಾಜರ ಶಿಷ್ಯ ಪರಂಪರೆಯ (ಮೂರನೆಯ ಪೀಳಿಗೆ ) ಮುನಿಸ್ವಾಮಿ ಅವರಿಂದ ಸಂಗೀತ ಮತ್ತು ನೃತ್ಯ ಕಲಿಯಲು ಪ್ರಾರಂಭವಾಯಿತು. ಹೆಸರಾಂತ ಮೈಸೂರು ಆಸ್ಥಾನ ವಿದ್ವಾನ್ ಬಿಡಾರಂ ಕೃಷ್ಣಪ್ಪನವರು ಇವಳ ಪ್ರತಿಭೆಗೆ ಮೆಚ್ಚಿ ನಾಗರತಮ್ಮನನ್ನು ತಮ್ಮ ಶಿಷ್ಯ ವರ್ಗಕ್ಕೆ ಸೇರಿಸಿಕೊಂಡರು. ಇವಳ ಹದಿನೈದನೇ ವಯಸ್ಸಿನಲ್ಲಿ ಮೊದಲ ಕಚೇರಿ (Public Performance ) ಕೊಟ್ಟಾಗ ಮೈಸೂರು ಪ್ರಜೆಗಳಲ್ಲದೆ, ಅಂದಿನ ಮಹಾರಾಜರು ಚಾಮರಾಜ ಒಡೆಯರಿಂದಲೂ ಸಹ ಮೆಚ್ಚುಗೆ ಪಡೆದಳು. ಕೆಲವು ವರ್ಷಗಳ ನಂತರ ಆಸ್ತಾನ ವಿದುಷಿ ಅನ್ನುವ ಮನ್ನಣೆ ಸಹ ಬಂತು. ಈ ಗೌರವ ಪಡೆಯುವುದಕ್ಕೆ ಈಕೆಯೇ ಮೊದಲನೆಯ ಮಹಿಳೆ. ನಂತರ, ಮೈಸೂರಿನಲ್ಲಿ ಆಗ ಸಾಕಷ್ಟು ಅವಕಾಶಗಳು ಇಲ್ಲದಿರುವ ಕಾರಣದಿಂದ ನಾಗರತ್ನಮ್ಮ ಬೆಂಗಳೂರಿನಲ್ಲಿ ಮನೆ ಮಾಡಿದಳು. ಇಲ್ಲಿ ಅವಳ ಪ್ರತಿಭೆ ಬೇಗ ಹರಡಿ ಅನೇಕ ಗಣ್ಯ ವ್ಯಕ್ತಿಗಳ ಪರಿಚಯವಾಯಿತು. ಮುಖ್ಯವಾಗಿ, ಡಿ ವಿ ಗುಂಡಪ್ಪ , ಜಸ್ಟಿಸ್ ಚಂದ್ರಶೇಖರ್ ಐಯ್ಯರ್ ಮುಂತಾದವರು. ಡಿ ವಿ ಜಿ ಅವರ "ಜ್ಞಾಪಕ ಚಿತ್ರಶಾಲೆ"ಯಲ್ಲಿ ಇವಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ೧೯೦೮/೯ ರಲ್ಲಿ ಇವರು ಚಿಕ್ಕಪೇಟೆಯಲ್ಲಿ ಸಹೂಜಿ ಅನ್ನುವರ ಮನೆಯಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗೆ ಹೋಗುತ್ತಿದ್ದರಂತೆ. ಇವರಿಬ್ಬರ ಸ್ನೇಹ ಬಹಳ ವರ್ಷ ಮುಂದುವರೆಯಿತು. ಇನ್ನೊಂದು ಸ್ವಾರಸ್ಯವಾದ ಸಂಗತಿ ಇಲ್ಲಿ ಹೇಳಬೇಕು. ನಾಗರತ್ನಮ್ಮನ ಅಭಿಮಾನಿಗಳಲ್ಲಿ ಹೈಕೋರ್ಟಿನ ಜಸ್ಟಿಸ್ ನರಹರಿ ರಾಯರೂ ಒಬ್ಬರಾಗಿದ್ದರು. ಆಗಾಗ್ಯೆ ಕೋರ್ಟ್ ಮುಗಿದ ಮೇಲೆ ತಮ್ಮ ಅಧಿಕೃತ ಗಾಡಿಯಲ್ಲಿ (Official Vehicle) ಚಿಕ್ಕಪೇಟೆಗೆ ಬಂದು ನಾಗರತ್ನಮ್ಮ ನ ಸಂಗೀತ ವನ್ನು ಕೇಳುತ್ತಿದ್ದರು. ನಂತರ ಸ್ನೇಹವೂ ಹೆಚ್ಚಾಯಿತು. ಈ ಸ್ನೇಹ ಮುಂದುವರೆದಾಗ ನರಹರಿ ರಾಯರು ತಮ್ಮ ಪತ್ನಿಯ ಮುಂದೆ ಇದರ ವಿಚಾರ ಹೇಳಿ ಅವರ ಅನುಮತಿ ಕೇಳಿದರಂತೆ. ಏನಾದರೂ ಆಕ್ಷೇಪಣೆ ಇದ್ದರೆ ನಾಗರತ್ನಮ್ಮನ ಸ್ನೇಹವನ್ನು ಮುಂದೆ ಬೆಳುಸುವುದಿಲ್ಲ ಅಂದರಂತೆ. ಪತ್ನಿಯಿಂದ ಅನುಮತಿ ಪಡೆದ ಮೇಲೆ ಇವರ ಸ್ನೇಹ ಇನ್ನೂ ಮುಂದೆವರಿಯಿತು. ಈ ಸಂಭಾಷಣೆಯ ವಿವರವನ್ನು ಡಿ.ವಿ.ಜಿ.ಬರೆದಿದ್ದಾರೆ.
ನಿಮಗೆ ಬೆಂಗಳೂರಿನ ಬಸವನಗುಡಿಯ ನರಹರಿ ಗುಡ್ಡ ಮತ್ತು Mount Joy ಹೆಸರು ಪರಿಚಿತ ಇದ್ದರೆ ಅದರ ಹಿನ್ನೆಲೆ ಇಲ್ಲಿದೆ. ನರಹರಿ ರಾಯರ ಗಾಡಿ ಆಗಾಗ್ಯೆ ಚಿಕ್ಕ ಪೇಟೆಯಲ್ಲಿ ಬಂದು ನಿಲ್ಲುತ್ತಿದ್ದುದು ಜನರಿಗೆ ಸಂಶಯ ಬಂದು ಅನೇಕ ವದಂತಿಗಳು ಶುರುವಾದವು. ಈ ವಿಚಾರ ಅಂದಿನ ದಿವಾನ್ ಶೇಷಾದ್ರಿ ಐಯ್ಯರ್ ಅವರ ಕಿವಿಗೆ ಬಿದ್ದಾಗ, ರಾಜ್ಯದ ಉನ್ನತ ಪದವಿಯಲ್ಲಿರುವ ಒಬ್ಬ ಹೈ ಕೋರ್ಟ್ ನ್ಯಾಯಾಧೀಶನಿಗೆ ಕೆಟ್ಟ ಹೆಸರು ಬರಬಾರದು ಅನ್ನುವ ಉದ್ದೇಶದಿಂದ ದಿವಾನರು, ಗುಟ್ಟಾಗಿ ನರಹರಿ ರಾಯರನ್ನು ಭೇಟಿಮಾಡಿ ಈ ವದಂತಿಗಳ ಬಗ್ಗೆ ಪ್ರಸ್ತಾಪಿಸಿದರಂತೆ. ನಂತರ ನರಹರಿರಾಯರು, ನಾಗರತ್ನಮ್ಮನ ಸಂಗೀತವನ್ನು ಖಾಸಗಿಯಾಗಿ (in private ) ಕೇಳುವುದಕ್ಕೆ ಒಂದು ಮನೆಯನ್ನು ಗುಡ್ಡದ ಮೇಲೆ ಕಟ್ಟಿ ಅದನ್ನು Mount Joy ಅಂತ ಹೆಸರಿಟ್ಟರು. ಈಗ ನರಹರಿ ಗುಡ್ಡ ಮತ್ತು ಇಲ್ಲಿಗೆ ಹೋಗುವ ರಸ್ತೆ, ಹಣಮಂತನಗರದಲ್ಲಿ, Mount Joy ರಸ್ತೆ. ಶಾಸ್ತ್ರೀಯ ಸಂಗೀತಕ್ಕೆ ಬಹಳ ವರ್ಷಗಳಿಂದ ಈಗಿನ ಚೆನ್ನೈ (Madras) ನಲ್ಲಿ ಪ್ರಾಮುಖ್ಯತೆ ಇದೆ. ಈ ಕಾರಣದಿಂದ ನಾಗರತ್ನಮ್ಮ, ನರಹರಿರಾಯರ ಸಲಹೆಯ ಮೇಲೆ ಮದ್ರಾಸಿನಲ್ಲಿ ನೆಲಸುವುದಕ್ಕೆ ನಿರ್ಧಾರ ಮಾಡಿದಳು. ಅಲ್ಲಿ ಮೊದಲಿಯಾರ್ ಪಂಗಡದವರಿಂದ ಆಶ್ರಯ ಪಡೆದು ಬಹಳ ಬೇಗ ಒಬ್ಬ ಹೆಸರಾಂತ ಸಂಗೀತಗಾರಳಾದಳು. ೧೯೦೫ ರಿಂದ ಅಲ್ಲಿರುವ ಸಂಗೀತ ಸಭೆಗಳಲ್ಲಿ ಭಾಗವಹಿಸಿ ಯಶಸ್ಸನ್ನು ಕಂಡಳು. ಆ ಕಾಲದಲ್ಲೇ ವರಮಾನ ತೆರಿಗೆ (Income tax) ಕೊಡುವಷ್ಟು ಹಣ ಸಂಪಾದನೆ ಇತ್ತು. ಆಗಿನ ಕಾಲದಲ್ಲಿ , ದೇವದಾಸಿ ಪಂಗಡದಲ್ಲಿ ಇರಲಿ, ಯಾವುದೇ ಮಹಿಳೆಯರಲ್ಲಿ ಈ ತೆರಿಗೆ ಕೊಡುತ್ತಿದ್ದವರು ಬಹಳ ವಿರಳ. ನಾಗರತ್ನಮ್ಮ ಒಂದು ಭವ್ಯವಾದ ಮನೆಯನ್ನು ಕಟ್ಟಿ ಅದರ ಗೃಹ ಪ್ರವೇಶಕ್ಕೆ ಮೈಸೂರು ಬಿಡಾರಂ ಕೃಷ್ಣಪ್ಪನವರವನ್ನು ಆಹ್ವಾನಿಸಿದ್ದಳು. ಪುರಂದರ ದಾಸರ ದೇವರನಾಮಗಳನ್ನು ಮದ್ರಾಸಿನಲ್ಲಿ ಮೊದಲಿಗೆ ಕೇಳಿದ್ದು ಇವರಿಂದ ಎಂದು ಅನೇಕರು ಪ್ರಶಂಸಿದರು.
ತ್ಯಾಗರಾಜರ ಕೃತಿಗಳನ್ನು ಹಾಡುವುದು ಇವಳ ವಿಶೇಷತೆ ಆಗಿತ್ತು. ತ್ಯಾಗರಾಜರ ಸಮಾಧಿ ತಿರುವಾಯೂರಿನಲ್ಲಿ ನಿರ್ಲಕ್ಷ ಸ್ಥಿತಿಯಲ್ಲಿ ಇರುವ ವಿಷಯ ಅವಳ ಗುರು ಬಿಡಾರಂ ಕೃಷ್ಣಪ್ಪ ನವರಿಂದ ತಿಳಿಯುತು. ಅಲ್ಲಿಯವರೆಗೆ ಈ ಸಮಾದ್ಜಿ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಈಗ ಈ ಸಮಾಧಿಯನ್ನು ನವೀಕರಿಸುವುದನ್ನು ತನ್ನ ಜೀವನ ಧ್ಯೇಯವನ್ನಾಗಿಸಿಕೊಂಡಳು. ತಿರುವಾಯೂರಿಗೆ ಬಂದು ಸಮಾಧಿಯನ್ನು ಗುರುತಿಸಿ ಅಲ್ಲಿ ಒಂದು ಮಂದಿರವನ್ನು ಕಟ್ಟುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದಳು. ಮದ್ರಾಸಿನಲ್ಲಿದ್ದ ಮನೆ ಮತ್ತು ಬಳಿ ಇದ್ದ ಒಡವೆಗಳನ್ನು ಮಾರಿ ಬಂದ ಹಣದಿಂದ ಈ ಕಟ್ಟಡದ ನಿರ್ಮಾಣ ೨೭/೧೦/೧೯೨೧ ರಲ್ಲಿ ಪ್ರಾರಂಭವಾಗಿ ೭/೦೧/೧೯೨೫ ರಲ್ಲಿ ಪೂರ್ಣಗೊಂಡಿತು. ನಂತರ, ಅನೇಕರ ಸಹಾಯದಿಂದ, ತಿರುವಾಯೂರಿನಲ್ಲಿ ಮೈಸೂರು ಛತ್ರವನ್ನೂ ಕಟ್ಟಿದಳು.
೧೮೪೭ರಲ್ಲಿ ತ್ಯಾಗರಾಜರು ತೀರಿಹೋದ ಹಲವಾರು ವರ್ಷಗಳ ನಂತರ ಕೆಲವು ಸಂಗೀತಗಾರರು ಅಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ಹಾಡುತ್ತಿದ್ದರು. ಆದರೆ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಸ್ವಂತ ಖರ್ಚಿನಲ್ಲಿ ಮಂದಿರ ನಿರ್ಮಾಣ ಮಾಡಿದ ಮೇಲೂ ಸಹ ನಾಗರತ್ನಮ್ಮನಿಗೆ ಇವರ ಜೊತೆಯಲ್ಲಿ ಹಾಡುವುದಕ್ಕೆ ಅವಕಾಶ ಸಿಗಲಿಲ್ಲ. ನಂತರ ೧೯೨೭ ಜನವರಿ ತಿಂಗಳಲ್ಲಿ ಮಹಿಳೆಯರದ್ದೇ ಒಂದು ಗುಂಪು ಮಾಡಿಕೊಂಡು, ಇದರಲ್ಲಿ ಅನೇಕರು ದೇವದಾಸಿಯರು, ಮಂದಿರದ ಆವರಣದಲ್ಲಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದರು. ನಂತರ ಎರಡೂ ಪಂಗಡಗಳು ಸೇರಿ ಒಪ್ಪಂದಕ್ಕೆ ಬಂದು ಈ ಆರಾಧನೆ ಒಂದಾಗಿ, ಇಂದು ಈ ಆರಾಧನೆ ಉನ್ನತ ಮಟ್ಟಕ್ಕೆ ಏರಿದೆ. ನೂರಾರು ಪ್ರಸಿದ್ಧ ಗಾಯಕರು ಅಲ್ಲಿ ಸೇರಿ ಸಾವಿರಾರು ಪ್ರೇಕ್ಷಕರ ಮುಂದೆ ಪಂಚರತ್ನ ಕೀರ್ತನೆಗಳನ್ನು ಹಾಡುವುದನ್ನ ನೋಡುವುದು ಒಂದು ಅದ್ಭುತ ದೃಶ್ಯ. ತ್ಯಾಗರಾಜರ ಆರಾಧನೆ ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುತ್ತದೆ.
ಹದಿನೆಂಟನೇ ಶತಮಾನದ ಒಬ್ಬ ದೇವದಾಸಿ ಪಂಗಡದ ತೆಲಗು ಕವಿ ಮುದ್ದುಪಲನಿ ( ೧೭೩೦-೧೭೯೦) ರಚಿಸಿದ "ರಾಧಿಕಾ ಸಂತ್ವನಂ" ನಾಗರತ್ನಮ್ಮನ ಗಮನಕ್ಕೆ ಬಂತು. ಇದರಲ್ಲಿ ರಾಧೆಯ ದೈಹಿಕ ಬಯಕೆಯ ಪ್ರಸ್ತಾವನೆ ಇತ್ತು. ಆದರೆ ೧೮೮೭ ರಲ್ಲಿ ಪ್ರಕಟಿಸಿದ ಭಾಷಾಂತರದಲ್ಲಿ "ರಸವತ್ತವಾದ" ವರ್ಣನೆಗಳನ್ನು ತೆಗೆದುಹಾಕಿದ್ದಲ್ಲದೇ, ಮುದ್ದುಪಲನಿ ಪ್ರತಾಪಸಿಂಹನ ಆಸ್ಥಾನದಲ್ಲಿ ಕವಿಯಾಗಿದ್ದಳು ಅನ್ನುವ ವಿಚಾರವನ್ನು ಸಹ ಬರೆದಿರಿಲಿಲ್ಲ. ಕಾರಣ ಬ್ರಿಟಿಷರ "Victorian Values" ಮತ್ತು "ಕೀಳು ದರ್ಜೆಯ" ದೇವದಾಸಿ ಬರೆದ ರಸವತ್ತಾದ ಕವಿತೆಗಳನ್ನು ಪ್ರಕಟಿಸುವುದು ಸಮಾಜದ ದೃಷ್ಟಿಯಲ್ಲಿ ಸರಿಯಲ್ಲ ಅನ್ನುವ ಊಹೆ ಕೆಲವರಿಗಿತ್ತು. ಉದಾಹರಣೆಗೆ ಇಂಗ್ಲೆಂಡ್ನಲ್ಲಿ ೧೯೨೮ರಲ್ಲಿ DH Lawrence ಬರೆದ Lady Chatterley's Lover ಪುಸ್ತಕ ನಿಷೇಧಿತವಾಗಿತ್ತು. ಎರಡು ಆವೃತ್ತಿಗಳನ್ನೂ ಓದಿ ನಾಗರತ್ನಮ್ಮನಿಗೆ ಅಸಮಾಧಾನವಾಗಿ ಮುದ್ದುಪಲನಿಯ ಮೂಲ ರಾಧಿಕಾ ಸಂತ್ವನಂ ಅನ್ನು ೧೯೧೦ ರಲ್ಲಿ Ramaswamy & Sons ಎಂಬ ಪ್ರಕಾಶಕರಿಂದ ಪ್ರಕಟಣೆ ಮಾಡಿಸಿದಳು. ಆದರೆ ಅನೇಕ ಸಂಪ್ರದಾಯವಾದಿ ವಿದ್ವಾಂಸರು ಇದನ್ನು ಪ್ರತಿಭಟಿಸಿ, ಮುದ್ದುಪಲನಿ ಒಬ್ಬ ವೈಶ್ಯೆ, ಅಂತಹ ಕೀಳು ದರ್ಜೆಯ ಮಹಿಳೆ ಬರೆದಿರುವುದನ್ನು ಜನರು ಓದಬಾರದು ಎಂದು ಹೇಳಿ ಸರ್ಕಾರ ಇದನ್ನು ಬಹಿಷ್ಕಾರ ಮಾಡಬೇಕು ಅನ್ನುವ ಒತ್ತಡ ತಂದರು. ನಾಗರತ್ನಮ್ಮ ಮತ್ತು ದೇವದಾಸಿ ಪಂಗಡದವರು ಒಬ್ಬ ದೇವದಾಸಿ ಮಹಿಳೆ ಇದನ್ನು ಬರೆದ್ದರಿಂದ ಪ್ರತಿಭಟನೆ ಮಾಡುತ್ತೀರ ಎಂದು ವಾದಿಸಿದರು. ಆದರೆ ಸರ್ಕಾರ ಇದನ್ನು ಒಪ್ಪಲಿಲ್ಲ. ೧೯೧೧ ರಲ್ಲಿ ಪೊಲೀಸ್ ಅಧಿಕಾರಿಗಳು, ಐಪಿಸಿ ೨೯೨ ಕಾನೂನಿನ ಪ್ರಕಾರ ಈ ಪುಸ್ತಕದ ವ್ಯಾಪಾರ ನಿಲ್ಲಿಸುವುದಕ್ಕೆ ಆಜ್ಞೆ ಮಾಡಿ ಮಾರಾಟಕ್ಕಿದ್ದ ಪುಸ್ತಕಗಳನ್ನು ವಶ ಮಾಡಿಕೊಂಡರು. ೧೯೪೭ರ ನಂತರ ಈ ಪುಸ್ತಕ ನಿಷೇಧವನ್ನು ರದ್ದು ಮಾಡಲಾಯಿತು.
ಇಪ್ಪತ್ತನೇ ಶತಮಾನದ ಮೊದಲಿನಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಕೆಲವು ಹಿಂದು ಪಂಗಡದವರಿಂದ ದೇವದಾಸಿಯರು ವೇಶ್ಯೆಯರು, ಇವರಿಂದ ಸಮಾಜಕ್ಕೆ ಹಾನಿ ಎಂದು ಇವರ ಪದ್ದತಿಗಳನ್ನು ನಿಲ್ಲಿಸಬೇಕೆಂದು ಪ್ರಯತ್ನ ಪಟ್ಟರು. ನಾಗರತ್ನಮ್ಮ ಇದನ್ನು ಪ್ರತಿಭಟಿಸಿ ತಮ್ಮದೇ ಸಂಘವನ್ನು (Union )ಕಟ್ಟಿ ಅದರ ಅಧ್ಯಕ್ಸಳಾಗಿ ಅವರ ಹಕ್ಕುಗಳಿಗಾಗಿ ಹೋರಾಡಿದಳು. ೧೯೨೭ರಲ್ಲಿ ತಮ್ಮ ಹಕ್ಕುಗಳನ್ನು ಕಾಪಾಡುವುದಕ್ಕೆ ಇಂಗ್ಲಿಷ್ ನಲ್ಲಿ ಬರೆದ "A Humble Memorandum of Devadasis" ಅನ್ನುವ ಪತ್ರವನ್ನು ಸರ್ಕಾರಕ್ಕೆ ಕೊಟ್ಟು ತನ್ನ ಪಂಗಡದವರ ಮಾನವ ಹಕ್ಕುಗಳನ್ನು ( Human Rights ) ಕಾಪಾಡಿ ಎಂದು ಮನವಿ ಮಾಡಿಕೊಂಡಳು. ಅವಳ ಕೊನೆಕಾಲದಲ್ಲಿ ಡಿ.ವಿ.ಜಿ. ಇವಳನ್ನು ಭೇಟಿಮಾಡಿ ಆರೋಗ್ಯವನ್ನು ವಿಚಾರಿಸಿದರು. ಈ ಸಂಭಾಷಣೆಯನ್ನು ಡಿ.ವಿ.ಜಿ. ಹೀಗೆ ಬರೆದಿದ್ದಾರೆ: "ನಾನು ಹುಟ್ಟಿದಾಗ ನಾಗರತ್ನ, ನಂತರ ಭೋಗರತ್ನ ಆದರೆ ಈಗ ರೋಗರತ್ನ" ಅಂತ ನಾಗರತ್ನಮ್ಮ ಹೇಳಿದ್ದಕ್ಕೆ, ಡಿ.ವಿ.ಜಿ. ಹೇಳಿದರಂತೆ - "ನೀನು ಇನ್ನೆರಡು ರತ್ನಗಳನ್ನು ಮರೆತೆ; ಒಂದು ರಾಗರತ್ನ ಮತ್ತು ತ್ಯಾಗರತ್ನ" ಇದನ್ನು ಯಾರಿಗೂ ಹೇಳಬೇಡಿ ಅಂದಳಂತೆ ನಾಗರತ್ನಮ್ಮ! ಈಕೆ ಒಬ್ಬ ಮಹಿಳೆಯರ ಹಕ್ಕುಗಳಿಗೆ ಹೋರಾಡಿದ ಮತ್ತು ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ ಎಂದನ್ನು ಪ್ರತಿಪಾದಿಸಿದ ಕನ್ನಡತಿ ಮತ್ತು ಕ್ರಾಂತಿಕಾರಿಣಿ. ನಾಗರತ್ನಮ್ಮ ೧೯/೫/೧೯೫೨ ರಂದು ತನ್ನ ೭೩ರನೇ ವಯಸ್ಸಿನಲ್ಲಿ ತಿರುವಾಯೂರಿನಲ್ಲಿ ನಿಧನಳಾದಳು. ತ್ಯಾಗರಾಜರ ಸಮಾಧಿ ಪಕ್ಕದಲ್ಲೇ ಇವಳ ಸ್ಮಾರಕವನ್ನು ನಿರ್ಮಿಸಲಾಗಿದೆ.
ಈಕೆಯ ಜೀವನ ಚರಿತ್ರೆ ಬಗ್ಗೆ ಬೆಂಗಳೂರಿನ ರಂಗಶಂಕರದಲ್ಲಿ ನಾಗಾಭರಣರ ನಿರ್ದೇಶದಲ್ಲಿ ಒಂದು ನಾಟಕ ಪ್ರದರ್ಶನ ನಡೆಯಿಲಿದೆ. ರಾಮಮೂರ್ತಿ ಕಾಂಗಲ್ಟನ್ , ಚೆಶೈರ್
“ಕಾವ್ಯವೆನ್ನುವುದು ಎಚ್.ಎಸ್.ವಿ.ಯವರ ಉಸಿರು. ಅದು ಅವರ ಭಾವ- ಬುದ್ಧಿ-ಕನಸು-ದರ್ಶನಗಳನ್ನು ಏಕತ್ರ ಹಿಡಿದಿಡುವ, ಅವರ ಸ್ಮೃತಿ ಮತ್ತು ಆಧುನಿಕ ಜ್ಞಾನಗಳನ್ನು ಹದವಾಗಿ ಬೆಸೆದಿರುವ ಸೂತ್ರವೆಂದರೆ ಅತಿಶಯೋಕ್ತಿಯಾಗಲಾರದು. ಕಾವ್ಯವೆನ್ನುವುದು ಅವರಿಗೆ ಕೇವಲ ಸಾಹಿತ್ಯದ ಒಂದು ಪ್ರಕಾರವಲ್ಲ; ಅದು,ಅವರು ಜೀವನವನ್ನು ನೋಡುವ, ಗ್ರಹಿಸುವ, ಅರ್ಥೈಸುವ, ವ್ಯಾಖ್ಯಾನಿಸುವ ಒಂದು ಕ್ರಮ.” ~ ಟಿ. ಪಿ. ಅಶೋಕ್.
ನಮಸ್ಕಾರ ಅನಿವಾಸಿ ಬಂಧುಗಳೇ. ಇಂದಿನ ಈ ಸಂಚಿಕೆ ನಮ್ಮೆಲ್ಲರ ಭಾವ ಜಗತ್ತನ್ನು ದೀಪ್ತಗೊಳಿಸಿದಂಥ ಎಚ್. ಎಸ್. ವೆಂಕಟೇಶ ಮೂರ್ತಿಯವರ ಭಾವನಮನಕ್ಕೆ ಮೀಸಲಾಗಿದೆ. ವೆಂಕಟೇಶ ಮೂರ್ತಿಯವರಿಗೂ , ಅನಿವಾಸಿಗೂ ಅದೊಂದು ಹಳೆಯ ಅತ್ಮೀಯ ಬಂಧ. ಈ ನಮ್ಮ ಅನಿವಾಸಿಗೆ ಅಧಿಕೃತ ಚಾಲನೆ ನೀಡಿ ಅದನ್ನು ಲೋಕಾರ್ಪಣಗೊಳಿಸಿದವರೇ ನಮ್ಮ HSV ಯವರು. ಅವರ ಷೆಫೀಲ್ಡ್ ಕವಿತೆಗಳ ಹುಟ್ಟಿಗೆ ಕಾರಣರಾಗಿದ್ದು ಹಾಗೂ ಹಿರಿಯ ಕವಿಗಳಿಂದ ಅದರ ಅರ್ಪಣೆಯ ಭಾಗ್ಯ ಲಭಿಸಿದ್ದು ನಮ್ಮ ಅನಿವಾಸಿಯ ಹೆಮ್ಮೆಯ ಸದಸ್ಯರಾದ ಪ್ರಸಾದ್ ಹಾಗೂ ಅವರ ಶ್ರೀಮತಿ ಪೂರ್ಣಿಮಾ ಅವರಿಗೆ.
“ ಷೆಫೀಲ್ಡಿನ ಡಾಕ್ಟರ್ ಪ್ರಸಾದರ ಮನೆಯಲ್ಲೊಂದು ಸಣ್ಣ ಕನ್ನಡ ಕನಸು. ಅದು ಬಂದದ್ದು ವಯಾ ಅಬುದಾಬಿಯೇ? ವೀಸಾ ಅಧಿಕಾರಿಗಳ ಹದ್ದುಕಣ್ಣಿಗೆ ಬೀಳಲಾರದೇ ಇದು ನನ್ನ ನಿದ್ದೆಗೆ ಬಂದದ್ದಾದರೂ ಹೇಗೆ?”
ಎಂದೇ ಅವರ ಪೆಫೀಲ್ಡ್ ಕವಿತೆಗಳು ಆರಂಭವಾಗುತ್ತವೆ. ಕವಿವರ್ಯರೊಂದಿಗನ ತಮ್ಮ ಅಪೂರ್ವ-ಆತ್ಮೀಯ ಅನುಭವಗಳನ್ನು ಇಂದಿಲ್ಲಿ ನಮ್ಮೊಡನೆ ಹಂಚಿಕೊಂಡಿದ್ದಾರೆ ಪ್ರಸಾದ್ ಅವರು. ಅದೇ ಸಮಯದಲ್ಲಿ ಅಂದರೆ 2014 ರಲ್ಲಿ ಅನಿವಾಸಿಯ ಮತ್ತೋರ್ವ ಹೆಮ್ಮೆಯ ಸದಸ್ಯೆ, ಕತೆಗಾರ್ತಿ ಪ್ರೇಮಲತಾ ಅವರು HSV ಯವರೊಡನೆ ನಡೆಸಿಕೊಟ್ಟ ಸಂದರ್ಶನದ ವೀಡಿಯೋವನ್ನು ಶ್ರೀವತ್ಸ ದೇಸಾಯಿಯವರು ಹಂಚಿಕೊಂಡಿದ್ದಾರೆ. ಅದರ ಲಿಂಕ್ ನ್ನು ಕೆಳಗೆ ಕೊಡಲಾಗಿದೆ. ಆಸಕ್ತರು ಸವಿಯಬಹುದು.
ಸುಮಾರು 2003 -04 ರ ಕಾಲಘಟ್ಟ...ದೆಹಲಿಯ ಕರ್ನಾಟಕ ಭವನದ ಅಡಿಟೋರಿಯಂ.. ಕನ್ನಡ ಸಂಘದ ಕಾರ್ಯಕ್ರಮ.. HSV ಯವರ ‘ಉರಿಯ ಉಯ್ಯಾಲೆ’ ದ್ರೌಪದಿಯ ಏಕಪಾತ್ರಾಭಿನಯನವನ್ನು ಅಭಿನಯಿಸುತ್ತಿರುವ ಹಿರಿಯ ರಂಗ ಕಲಾವಿದೆ ಬಿ. ಜಯಶ್ರೀಯವರು..ಪದರ ಪದರವಾಗಿ ಬಿಚ್ಚಿಕೊಳ್ಳುತ್ತ ಹೋಗುವ ದ್ರೌಪದಿಯ ಅಂತರಂಗ..ಅಗ್ನಿಕನ್ಯೆಯ ಹೃದಯದಲ್ಲಿ ಮಡುಗಟ್ಟಿದ್ದ ವಿಷಾದ, ನೋವು, ಆರ್ದ್ರತೆಗಳು..ಪ್ರೇಕ್ಷಕನನ್ನು ಸೀದಾ ದ್ವಾಪರಕ್ಕೊಯ್ದಿದ್ದವು. ಹೀಗೆ ಪರಕಾಯ ಪ್ರವೇಶ ಮಾಡಿ ಹೆಣ್ಣೊಬ್ಬಳ ಆಂತರಂಗಿಕ ಭಾವ ಮಿಡಿತಗಳಿಗೆ ಸ್ಪಂದಿಸಿದ ಕವಿಯ ಸಹೃದಯತೆ, ಅಂತ:ಕರಣಗಳಿಗೆ ಮನ ಮಾರುಹೋಗಿತ್ತು; ಶರಣಾಗಿತ್ತು. ಈಗ 3-4 ವರುಷಗಳ ಕೆಳಗೆ ನನ್ನ ಅವಳಿ ಮಕ್ಕಳಿಂದ ಉರಿಯ ಉಯ್ಯಾಲೆಯ ಆಯ್ದ ಭಾಗಗಳ ಭಾವಾಭಿನಯ ಮಾಡಿಸಿದ್ದೆ ಕವಿಯ ಜನುಮದಿನದ ಸಂದರ್ಭದಲ್ಲಿ. ಈ ಮಕ್ಕಳ ತೊದಲು- ತೊಡರು ಇಲ್ಲಿ ಹಂಚಿಕೊಳ್ಳುವುದು ಅದೆಷ್ಟು ಸಮಂಜಸ ಎಂದು ಯೋಚಿಸುತ್ತಿದ್ದಾಗ HSV ಯವರ ‘ ತಾವರೆಯ ಬಾಗಿಲು’ ಪುಸ್ತಕದ ‘ಸ್ಪಿರಿಟ್ ಈಜ್ ದ ಸೇಮ್’ ಎನ್ನುವ ಲೇಖನದಲ್ಲಿ ಅವರು ಉಲ್ಲೇಖಿಸಿದ ಅವರ ಗುರುವರ್ಯರ ಸಾಲು ನನಗಿಲ್ಲಿ ಅದನ್ನು ಹಾಕಲು ಧೈರ್ಯ ಕೊಟ್ಟಿದೆ. ಆ ಸಾಲು ಹೀಗಿದೆ – “ ತೇನ್ಸಿಂಗನ ಮೌಂಟ್ ಎವರೆಸ್ಟ್ ಆರೋಹಣ ಮತ್ತು ಮನೆಯ ಮಗು ಹೊಸ್ತಿಲು ದಾಟಿದ್ದು ಗುಣಾತ್ಮಕತೆ ಆತ್ಮಿಕ ನೆಲೆಯಲ್ಲಿ ಸಮಾಸಮ” ಎಂದು ಜಿ.ಎಸ್.ಎಸ್. ಒಂದು ಪದ್ಯದಲ್ಲಿ ಹೇಳುತ್ತಾರಲ್ಲ – ಹಾಗೆ. ಅಗಲಿದ ಹಿರಿಯ ಚೇತನಕ್ಕೆ ಕಿರಿಯರಾದ ಅಕ್ಷತಾ ಹಾಗೂ ಚಿನ್ಮಯಿಯಿಂದ ಭಾವಾಭಿನಯದ ಭಾವನಮನ.
ಬನ್ನಿ; ಓದಿ, ನೋಡಿ. ನೀವೂ ಕೆಲ ಸಾಲಿನ ಅಕ್ಷರ ನಮನವನ್ನು ಕವಿಗೆ ಸಲ್ಲಿಸಿ. ~ ಸಂಪಾದಕಿ
ಎಚ್ಚೆಸ್ವಿ ಕೆಲವು ಆತ್ಮೀಯ ನೆನಪುಗಳು
ಎಚ್ಚೆಸ್ವಿ ಅವರು ನನ್ನ ತಂದೆ ಜಿ ಎಸ್ ಎಸ್ ಅವರ ಪ್ರತಿಭಾವಂತ ಮತ್ತು ಆಪ್ತ ಶಿಷ್ಯರು. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ ವಿದ್ಯಾರ್ಥಿಯಾದ ಮೇಲೆ (1971-1973) ನಮ್ಮ ಕುಟುಂಬಕ್ಕೆ ಪರಿಚಿತರಾದರು. ಕುವೆಂಪು ಅವರಿಗೆ ವೆಂಕಣಯ್ಯ ನವರು ಹೇಗೋ, ಜಿ ಎಸ್ ಎಸ್ ಅವರಿಗೆ ಕುವೆಂಪು ಹೇಗೋ , ಹಾಗೆ ಎಚ್ಚೆಸ್ವಿ ಅವರಿಗೆ ಜಿ ಎಸ್ ಎಸ್ ಪೂಜ್ಯ ಗುರುಗಳು. ಅದು ಅನನ್ಯವಾದ ಗುರು ಶಿಷ್ಯ ಸಂಬಂಧ. ಅಲ್ಲಿ ಪರಸ್ಪರ ಪ್ರೀತಿ, ಗೌರವ, ಸಲಿಗೆ, ಗೆಳೆತನ ಒಂದು ಹದದಲ್ಲಿ ಇರುವಂತಹ ಒಡನಾಟ. ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸುವುದಾದರೆ "ಅಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ. ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಹತ್ತಿರವಾದದ್ದು ಬರಿಯ ವಿದ್ಯಾರ್ಥಿ ದೆಸೆಯಿಂದಲ್ಲ, ಅದಕ್ಕೆ ಮುಖ್ಯಕಾರಣ ಎಚ್ಚೆಸ್ವಿ ಒಬ್ಬ ಸೃಜನಶೀಲ ಕವಿ, ಅವರು ಸ್ನೇಹಪರರು ಮತ್ತು ಮೃದು ಸ್ವಭಾವದವರು. ಗುರು ಶಿಷ್ಯರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಸಮ್ಮೇಳನಗಳಲ್ಲಿ ಒಟ್ಟಿಗೆ ಭಾಗವಹಿಸಿದವರು. ಒಬ್ಬರ ಕವಿತೆಯನ್ನು ಇನ್ನೊಬ್ಬರು ಮೆಚ್ಚಿಕೊಂಡವರು. ಕಾಲಕ್ರಮೇಣ ಎಚ್ಚೆಸ್ವಿ ಅವರು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಪಕರಾಗಿದ್ದಾಗ ನಾವು ವಾಸವಾಗಿದ್ದ ಬನಶಂಕರಿ ಎರಡನೆಹಂತದ ೧೮ನೇ ಮುಖ್ಯ ರಸ್ತೆಯಲ್ಲಿ, ಪಕ್ಕದಲ್ಲೇ ಅವರೂ, ಮಡದಿ ರಾಜಲಕ್ಷ್ಮಿ ಮತ್ತು ಮಕ್ಕಳ ಜೊತೆ ಒಂದು ಬಾಡಿಗೆ ಮನೆಯಲ್ಲಿ ಹಲವಾರು ವರ್ಷಗಳ ಅವಧಿಯಲ್ಲಿ ವಾಸವಾಗಿದ್ದರು. ಗುರು ಶಿಷ್ಯರು ಸಾಹಿತ್ಯ ಸಮ್ಮೇಳನಗಳ ನಡುವೆ ಹಲವಾರು ಪ್ರವಾಸವನ್ನು ಕೈಗೊಳ್ಳುತ್ತಿದ್ದರು, ಕೆಲವೊಮ್ಮೆ ಮಾರ್ನಿಂಗ್ ವಾಕ್ ಮಾಡುತ್ತಿದ್ದರು. ಸೂರ್ಯದಯವನ್ನು ಒಟ್ಟಿಗೆ ನಿಂತು ವೀಕ್ಷಿಸುತ್ತಿದ್ದರು. ಆ ವೇಳೆ ಎಚ್ಚೆಸ್ವಿ ಏನಾದರೂ ಹರಟೆಗೆ ತೊಡಗಿದರೆ, ಜಿ ಎಸ್ ಎಸ್ ಅವರು 'ಶುಶ್ ಸುಮ್ಮನಿರಿ ಸೂರ್ಯೋದಯವನ್ನು ನಿಶಬ್ದದಲ್ಲಿ ನೋಡೋಣ' ಎನ್ನುತ್ತಿದ್ದರಂತೆ! (ಇದರ ಬಗ್ಗೆ ಎಚ್ಚೆಸ್ವಿ ಅವರು ಒಂದು ಕಡೆ ಬರೆದಿದ್ದಾರೆ) ವಾಕಿಂಗ್ ಬಳಿಕ ಗುರು ಶಿಷ್ಯರು ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಅಲ್ಲಿ ಮಸಾಲೆ ದೋಸೆ ಕಾಫಿ ಸವಿದು ಬರುತ್ತಿದ್ದರು. ಜಿ ಎಸ್ ಎಸ್ ಅವರೇ ವಿದ್ಯಾರ್ಥಿಭವನದ ಬಿಲ್ಲು ಕಟ್ಟುತ್ತಿದ್ದರೆಂದು ಎಚ್ಚೆಸ್ವಿ "ಬಿಲ್ಲೋಜ ಜಿ ಎಸ್ ಎಸ್ " ಎಂಬ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ. ಸ್ವಾರಸ್ಯಕರವಾದ ಸಂಗತಿ ಎಂದರೆ ಗುರು ಶಿಷ್ಯರಿಬ್ಬರೂ ತಮ್ಮ ಪತ್ನಿಯರಿಗೆ ವಿದ್ಯಾರ್ಥಿ ಭವನಕ್ಕೆ ಹೋಗುತ್ತಿದ್ದೇವೆ ಎಂಬ ಸುಳಿವು ಕೊಡುತ್ತಿರಲಿಲ್ಲವಂತೆ. (ಹೋಟೆಲ್ಗೆ ಹೋಗಿ ಯಾಕೆ ತಿನ್ನ ಬೇಕು ಕೇಳಿದ್ದರೆ ಮನೆಯಲ್ಲೇ ಮಾಡಿಕೊಡುತ್ತಿದ್ದೆವಲ್ಲ ಎಂಬ ಮಡದಿಯ ಆಕ್ಷೇಪಣೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ) ನಮ್ಮ ಮನೆಯಲ್ಲಿ ಪ್ರತಿ ವರ್ಷ ಮೇ ತಿಂಗಳ ಕೊನೆಗೆ ಮಾವಿನ ಹಣ್ಣಿನ ಸೀಸನ್ ಮಧ್ಯದಲ್ಲಿ ಅಪ್ಪ, ಅವರ ಆತ್ಮೀಯ ಸಾಹಿತಿ ಮಿತ್ರರನ್ನು ಹೋಳಿಗೆ ಸೀಕರಣೆ ಊಟಕ್ಕೆ ಆಹ್ವಾನಿಸುತ್ತಿದ್ದರು, ಅದರಲ್ಲಿ ಎಚ್ಚೆಸ್ವಿ ಅವರು ಇದ್ದೇ ಇರುತ್ತಿದ್ದರು. ಅಪ್ಪ ಶುರುವಿನಲ್ಲಿ ಎಚ್ಚೆಸ್ವಿ ಅವರಿಗೆ ಹೇಗೆ ಹೋಳಿಗೆಗೆ ತುಪ್ಪಕಲೆಸಿ ನಂತರ ಸೀಕರಣೆಯನ್ನು ಕಿವುಚಿ ಒಂದು ಹದದಲ್ಲಿ ಮಿಕ್ಸ್ ಮಾಡಿ ತಿನ್ನಬೇಕು ಎಂಬುದನ್ನು ತಿಳಿಸಿಕೊಟ್ಟದ್ದನ್ನು ಎಚ್ಚೆಸ್ವಿ ತಮ್ಮ ಒಂದು ಬರಹದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಗುರು ಶಿಷ್ಯರಿಬ್ಬರು ತಮ್ಮ ಕೃತಿಗಳನ್ನು ಪರಸ್ಪರ ವಿಮರ್ಶೆ ಮಾಡಿದ್ದಾರೆ. ಎಚ್ಚೆಸ್ವಿ ಅವರು 'ಜಿ ಎಸ್ ಎಸ್ ಬದುಕು ಬರಹ' ಎಂಬ ವಿಮರ್ಶೆ ಕೃತಿಯನ್ನು ೨೦೧೨ರಲ್ಲಿ ಪ್ರಕಟಿಸಿದ್ದಾರೆ. 'ಎಚ್ಚೆಸ್ವಿ ಸಮಗ್ರ ಕವಿತೆಗಳು' ಎಂಬ ಬೃಹತ್ ಕೃತಿಯನ್ನು ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಅರ್ಪಣೆಮಾಡಿರುವುದು ಆ ಗುರು ಶಿಷ್ಯರ ಅನ್ಯೋನ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ಜಿ ಎಸ್ ಎಸ್ ಅವರೂ ಎಚ್ಚೆಸ್ವಿ ಅವರ ಕೃತಿಗಳನ್ನು ಕುರಿತು ಅನೇಕ ಬರಹಗಳನ್ನು ಬರೆದಿದ್ದಾರೆ.
ವಾರಾಂತ್ಯ ಹತ್ತುಗಂಟೆಯ ನಂತರ ಎಚ್ಚೆಸ್ವಿ ನಮ್ಮ ಮನೆ ಬಾಗಿಲು ಬಡಿದಾಗ ನಾನು ಅಥವಾ ಅಮ್ಮ ಬಾಗಿಲು ತೆರದ ಕೂಡಲೇ 'ಮೇಷ್ಟ್ರು ಇದಾರ' ಎಂದು ಮುಗುಳ್ನಗುತ್ತಿದ್ದರು, 'ಬನ್ನಿ ಒಳಗೆ' ಎಂದಾಗ ಅವರು ನೇರವಾಗಿ ಅಪ್ಪನ ಲೈಬ್ರರಿ/ಸ್ಟಡಿ ಕೋಣೆಯೊಳಗೆ ಕೂತು ಅಪ್ಪನನ್ನು ಭೇಟೆಯಾಗುತ್ತಿದ್ದರು. ಈ ಗುರು ಶಿಷ್ಯರು ಗಂಟೆಗಟ್ಟಲೆ ಸಾಹಿತ್ಯ ಸಂವಾದದಲ್ಲಿ ತೊಡಗುತ್ತಿದ್ದರು. ಕೆಲವೊಮ್ಮೆ ಇವರ ಜೊತೆ ಸಿ ಅಶ್ವಥ್, ಸುಮತೀನ್ದ್ರ ನಾಡಿಗ, ಎಚ್ ಎಸ್ ರಾಘವೇಂದ್ರ ರಾವ್ ಮತ್ತಿತರು ಬಂದು ಸೇರಿಕೊಳ್ಳುತ್ತಿದ್ದರು. ಸಂವಾದ ಮುಗಿದನಂತರ ನಾನು ವೆರಾಂಡದಲ್ಲಿ ಅಥವಾ ಅಂಗಳದ ಗೇಟು ಹಾಕಲು ಬಂದಾಗ ಡಾಕ್ಟ್ರೇ ಹೇಗಿದ್ದೀರಾ, ಕ್ಲಿನಿಕ್ ಹೇಗೆ ನಡೀತಾಯಿದೆ ಇತ್ಯಾದಿ ಸಾಹಿತ್ಯದ ಆಚೆಯ ಮಾತುಗಳನ್ನು ಆಡುತ್ತಿದ್ದರು. ಯೌವ್ವನದಲ್ಲಿ ನನ್ನ ವೈದ್ಯಕೀಯ ವೃತ್ತಿ ನನ್ನನ್ನು ಆವರಿಸಿಕೊಂಡಿದ್ದು ನನಗೆ ಸಾಹಿತ್ಯದ ಬಗ್ಗೆ ಗಮನ ಕೊಡಲು ಸಮಯದ ಅವಕಾಶವೇ ಇರಲಿಲ್ಲ, ಸಾಹಿತ್ಯಾಸಕ್ತಿ ಹಿಂದೆಯೇ ಉಳಿದಿದ್ದ ಕಾಲವದು. ನಾನು ಮತ್ತು ಎಚ್ಚೆಸ್ವಿ ಸಾಹಿತ್ಯ ಸಂವಾದಕ್ಕೆ ತೊಡಗಿದ್ದು ನಾನು ಇಂಗ್ಲೆಂಡಿಗೆ ಬಂದಮೇಲೆ ಎನ್ನ ಬಹುದು. ಆ ಕಾಲಕ್ಕೆ ನನಗೆ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿತ್ತು, ಓದಲು ಬರೆಯಲು ಸಮಯ ಮತ್ತು ಅವಕಾಶ ಎರಡು ದಕ್ಕಿದ್ದವು.
ಅಂದಹಾಗೆ ನನಗೆ ಎಚ್ಚೆಸ್ವಿ ಅವರ ಸಾಹಿತ್ಯ ಪರಿಚಯವಾದದ್ದು ಸುಗಮ ಸಂಗೀತದ ಮೂಲಕವೇ. ನನಗೆ ಅವರು ಹೆಚ್ಚು ಹತ್ತಿರವಾದದ್ದು ನಾನು ಕನ್ನಡದಲ್ಲಿ ಕವನಗಳನ್ನು ಪ್ರಬಂಧಗಳನ್ನು ರಚಿಸಲು ಶುರುವಾದಾಗ. ಈ ವೇಳೆಗೆ ಅಪ್ಪ ತೀರಿಕೊಂಡಿದ್ದರು. ಎಚ್ಚೆಸ್ವಿ ಅವರು ಇಂಗ್ಲೆಂಡಿಗೆ ಕನ್ನಡ ಬಳಗದ ಆಹ್ವಾನದ ಮೇರೆಗೆ ಇಲ್ಲಿ ಬಂದಾಗ ನಮ್ಮ ಬಾಂಧವ್ಯ ಹೆಚ್ಚಾಯಿತು. ನಾನು ಬೆಂಗಳೂರಿಗೆ ಹೋದಾಗ ಎಚ್ಚೆಸ್ವಿ, ಬಿ ಆರ್ ಲಕ್ಷ್ಮಣ ರಾವ್, ಡುಂಡಿರಾಜ್, ಜೋಗಿ ಇವರೊಡನೆ ಅನೇಕ ಕ್ಲಬ್ ಮತ್ತು ಹೋಟೆಲಿನಲ್ಲಿ ಭೋಜನ ಕೂಟಗಳಲ್ಲಿ ಒಡನಾಡುವ ಅವಕಾಶ ಒದಗಿ ಬಂತು. ವಿಸ್ಕಿ ಸೇವೆನಯಲ್ಲೂ ಎಚ್ಚೆಸ್ವಿ ಮಿತವಾಗಿ ಒಂದು ಪೆಗ್ ಸೇವಿಸಿ ನಂತರ ಎರಡನೇ ಪೆಗ್ಗಿಗೆ ಒತ್ತಾಯಿಸಿದಾಗ ಬೇಡವೆಂದು ‘ನನ್ನದು ಅದ್ವೈತ ಫಿಲಾಸಫಿ’ ಎಂದು ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದರು. ಎಚ್ಚೆಸ್ವಿ ಉತ್ತಮ ವಾಗ್ಮಿಗಳು, ಸಾಮಾನ್ಯವಾಗಿ ಅವರು ಸಭೆಗಳಲ್ಲಿ ಸುಮಾರು 15-20 ನಿಮಿಷಕ್ಕಿಂತ ಹೆಚ್ಚು ಮಾತನಾಡಿದ್ದನ್ನು ನಾನು ಕೇಳಿಲ್ಲ. ಆ ಮಿತವಾದ ಭಾಷಣದಲ್ಲಿ ಸರಳತೆ, ಸ್ಪಷ್ಟತೆ, ಪದಗಳ ಬಳಕೆ ಮತ್ತು ವಿಚಾರಗಳು ಸೊಗಸಾಗಿರುತ್ತಿತ್ತು. 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದ ಸಾಲುಗಳು ನೆನಪಿಗೆ ಬರುತ್ತಿತ್ತು.
ನಾನು ಬರೆಯಲು ಶುರುಮಾಡಿದಾಗ ನನ್ನ ಕೋರಿಕೆಯ ಮೇಲೆ ಎಚ್ಚೆಸ್ವಿ ನನ್ನ ಎಲ್ಲ ಬರಹಗಳನ್ನು ಓದಿ, ಸೂಕ್ತ ಸಲಹೆಗಳನ್ನು ನೀಡಿ, ಪ್ರಕಟಿಸಲು ಉತ್ತೇಜನ ನೀಡುತ್ತಿದ್ದರು. ನನ್ನ ಚೊಚ್ಚಲ ಕವನ ಸಂಕಲನ 'ಇಂಗ್ಲೆಂಡಿನಲ್ಲಿ ಕನ್ನಡಿಗ' ಕೃತಿಗೆ ಮುನ್ನುಡಿಯನ್ನು ಬರೆದು, ನನ್ನ ‘ಪಯಣ’ ಕಾದಂಬರಿಗೆ ಬೆನ್ನುಡಿಯನ್ನು ಕೂಡ ಬರೆದುಕೊಟ್ಟರು. ನಾನು ಒಂದು ರೀತಿ ಅವರ ಶಿಷ್ಯನೂ ಹೌದು. ಅವರಿಗೆ ಕಾಣಿಕೆಯಾಗಿ ನನ್ನ ಇತ್ತೀಚಿನ 'ಮೊನಾಲೀಸಾ' ಎಂಬ ಕವನ ಸಂಕಲನವನ್ನು ಅವರಿಗೆ ಅರ್ಪಿಸಿದ್ದೇನೆ. ಎಚ್ಚೆಸ್ವಿ ಅವರು ಶೆಫೀಲ್ಡ್ ನಗರಕ್ಕೆ ಆಗಮಿಸಿ ಯುಕೆ ಕನ್ನಡ ಬಳಗದ ಆಶ್ರಯದಲ್ಲಿ ನಡೆದ 2013 ದೀಪಾವಳಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅನಿವಾಸಿ ಸಾಹಿತ್ಯ ಅಂಗದ ಉದ್ಘಾಟನೆ ಮಾಡಿದ್ದನ್ನು ನಾನು ಸ್ಮರಿಸುತ್ತೇನೆ. ಈ ಸಾಹಿತ್ಯ ಅಂಗ ಈಗ ಎತ್ತರಕ್ಕೆ ಬೆಳದಿದೆ. ಆ ಸಂದರ್ಭದಲ್ಲಿ ಎಚ್ಚೆಸ್ವಿ ಅವರು ‘ಬೆಂಗಳೂರಿಗಿಂತ ಇಲ್ಲಿ ಹೆಚ್ಚು ಕನ್ನಡ ಕೇಳಿ ಬರುತ್ತಿದೆ’ ಎಂದು ಮಾತನಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ಆ ವಿಚಾರ ನಮ್ಮ ಯುಕೆ ಅನಿವಾಸಿ ಕನ್ನಡಿಗರಿಗೆ ಹೆಮ್ಮೆಯ ವಿಷಯ. ನನ್ನ ಮತ್ತು ಎಚ್ಚೆಸ್ವಿ ನಡುವಿನ ವಾಟ್ಸ್ ಆಪ್ ಸಂದೇಶಗಳನ್ನು ನೆನೆದು ಕೆಳಗೆ ಹಂಚಿಕೊಳ್ಳುತ್ತಿದ್ದೇನೆ. ಸಂದರ್ಭ; ನನ್ನ ‘ಪಯಣ’ ಎಂಬ ಕಾದಂಬರಿ ತಯಾರಾಗುತ್ತಿದ್ದ ಸಮಯ.
"ಪ್ರಿಯ ಡಾ.ಪ್ರಸಾದ್ ನಿಮ್ಮ ಕಾದಂಬರಿಯನ್ನು ಒಂದೇ ಪಟ್ಟಿನಲ್ಲಿ ಓದಿ ಆನಂದಿಸಿದೆ. ಇನ್ನು ನೀವು ವೈದ್ಯಕೀಯದೊಂದಿಗೆ ಸಾಹಿತ್ಯ ಕೃಷಿ ಯಲ್ಲೂ ತೊಡಗಬೇಕು. ಲೀಲಾ ಜಾಲವಾಗಿ, ಎಲ್ಲೂ ಓದುಗರ ಆಸಕ್ತಿ ಕುಂದದಂತೆ ಕಥೆಯನ್ನು ನಿರೂಪಿಸಿದ್ದೀರಿ. ನಾಯಿಯು ಇಲ್ಲಿ ನಮಗೆಲ್ಲ ಆಪ್ತವಾಗುತ್ತದೆ. ಅದರ ನೋವು ನಮ್ಮ ನೋವಾಗುತ್ತದೆ. ಮಕ್ಕಳಿಗೆ ನಾಯಿ ಯಾಕೆ ಪ್ರಿಯವಾಗುತ್ತದೆ ಎಂಬುದು ನನಗೆ ಈಗ ಮನದಟ್ಟಾಯಿತು. ಮುಗ್ಧತೆ ಮತ್ತು ಸಹಜ ಪ್ರೀತಿ ಎರಡು ಜೀವಕ್ಕೂ ಸಮಾನ. ಸಿನಿಮಾಕ್ಕೆ ಲಾಯಕ್ಕಾಗಿದೆ. ಸಿನಿಮೀಯ ಎನ್ನಿಸದು. ಇದೊಂದು ಲೋಕಪ್ರೀತಿಯ ಸಹಜ ಕಲಾಕೃತಿ"
"ಧನ್ಯವಾದಗಳು ಎಚ್ಚೆಸ್ವಿ ತುಂಬಾ ಖುಷಿಯಾಯಿತು. ಈ ಕೃತಿಗೆ ‘ಸಾರ್ಥಕ ಪಯಣ’ ಎಂಬ ಹೆಸರನ್ನು ಆಯ್ಕೆ ಮಾಡಿರುವೆ"
" ಹೆಸರು ತುಂಬಾ ಗದ್ಯಮಯ. ಯಾನ…ಅಷ್ಟೇ ಸಾಕು. ಅಥವಾ ಪಯಣ ಎಂದು ಇಡಬಹುದು"
“ಪಯಣ ಬಹುಶಃ ಸೂಕ್ತವಾಗಿರಬಹುದು. ‘ಯಾನ’ ಎನ್ನುವ ಹೆಸರಲ್ಲಿ ಭೈರಪ್ಪನವರ ಕಾದಂಬರಿ ಇದೆ. ನನ್ನ ಈ ಕಥೆ ಸರಳವಾಗಿರಬಹುದು"
"ಸರಳತೆ ಗುಣವೋ ದೋಷವೋ ಎಂಬ ವಾಗ್ವಾದ ಇನ್ನೂ ಬಗೆಹರಿದಿಲ್ಲ...!"
ಎಚ್ಚೆಸ್ವಿ ಅವರ ಹಲವಾರು ಬರಹಗಳಲ್ಲಿ, ಮಾತುಗಳಲ್ಲಿ ಸರಳತೆ ಇದ್ದುದನ್ನು ನಾವೆಲ್ಲಾ ಗಮನಿಸಿದ್ದೇವೆ. ಕಥೆ, ಕವನ ಸಂಕೀರ್ಣವಾಗಿರಬೇಕು, ಆಗ ಅದಕ್ಕೆ ಹೆಚ್ಚು ಬೆಲೆ, ಸರಳತೆ ಒಂದು ದೋಷ ಎಂಬ ನನ್ನಲ್ಲಿದ್ದ ಕಲ್ಪನೆಯ ಹಿನ್ನೆಲೆಯಲ್ಲಿ ಅವರ ಮಾತುಗಳು ಅರ್ಥಪೂರ್ಣವಾಗಿ ತೋರಿದವು. ಸರಳವಾಗಿ ಬರೆಯುವುದೂ ಒಂದು ಕಲೆ ಎಂಬ ಆಲೋಚನೆ ಮೂಡಿಬಂತು. ಎಚ್ಚೆಸ್ವಿ ಅವರು ಬಹಳ ಶ್ರದ್ಧಾವಂತರು. ಅವರು ಶೇಫಿಲ್ಡ್ ನಗರದ ನಮ್ಮ ಮನೆಯಲ್ಲಿ ಒಂದು ವಾರ ತಂಗಿದ್ದಾಗ ‘ಶೆಫೀಲ್ಡ್ ಕವಿತೆಗಳು’ ಎಂಬ ನೀಳ್ಗವನದ ರಚನೆಯಲ್ಲಿ ತೊಡಗಿದ್ದರು. ಅವರು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕುಳಿತು, ತೀಕ್ಷ್ಣ ಕವಿಸಮಯದಲ್ಲಿ ಮೂಡಿತ್ತಿದ್ದ ಸಾಲುಗಳನ್ನು ದಾಖಲಿಸುತ್ತಿದ್ದರು. ಮುಂದಕ್ಕೆ ‘ಶೆಫೀಲ್ಡ್ ಕವಿತೆಗಳು’ ಎಂಬ ಕೃತಿಯನ್ನು ಅವರು ಹೊರತಂದರು. ಆ ಕೃತಿಯನ್ನು ಕುರಿತು ‘ಎಚ್ಚೆಸ್ವಿ ಅವರ ಶೇಫಿಲ್ಡ್ ಕವಿತೆಗಳ ಬಗ್ಗೆ ಶೆಫೀಲ್ಡ್ ನಿವಾಸಿಯ ಅನಿಸಿಕೆಗಳು’ ಎಂಬ ಬರಹವನ್ನು ನಾನು ‘ಸಮಾಹಿತ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಎಚ್ಚೆಸ್ವಿ ಅವರು ಫೋನ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಆ ಕೃತಿಯನ್ನು ನನಗೆ ಮತ್ತು ನನ್ನ ಶ್ರೀಮತಿ ಪೂರ್ಣಿಮಾಗೆ ಅರ್ಪಣೆಮಾಡಿದ್ದು ಅದು ನನಗೆ ಅತ್ಯಂತ ಗೌರವದ ವಿಷಯ. * ~ ಡಾ ಜಿ ಎಸ್ ಪ್ರಸಾದ್
ಎಚ್ಚೆಸ್ವಿಯವರ ಸಂದರ್ಶನ
ಸಂದರ್ಶಕಿ – ಡಾ. ಪ್ರೇಮಲತಾ
‘ ಉರಿಯ ಉಯ್ಯಾಲೆ’ಯ ಆಯ್ದ ಭಾಗಗಳು
~ ಚಿನ್ಮಯಿ
~ ಅಕ್ಷತಾ
ವಿದಾಯ ಹೇಳಬಹುದೇ ಇಷ್ಟು ಸುಲಭಕ್ಕೆ ನಿಮಗೆ?
“ ಕಥೆ ಮುಗಿಯುವಾಗ ಚಡಪಡಿಕೆ ಪಾತ್ರಕ್ಕಷ್ಟೇ. ಕೃತಿ ಮುಗಿದ ತೃಪ್ತಿ ಬರೆದವಗೆ. ಇಷ್ಟು ದಿನ ಎಡೆಬಿಡದೇ ಬರೆದ ಬೆರಳಿಗೆ ಬಿಡುವು. ಹೊರೆ ಇಳಿದ ಗೆಲುವು ಮುಖದೊಳಗೆ.” ( ಒಂದು ಕಥೆ – ಉತ್ತರಾಯಣ ಮತ್ತು...) HSV ಹೋದರಂತೆ.. ಎಂಬ ಸುದ್ದಿ ಕೇಳಿದಾಗಿನಿಂದ ಅದೇನೋ ನನ್ನ ಮನದ ಭಾವಗಳೆಲ್ಲ ಹೆಪ್ಪುಗಟ್ಟಿದಂಥ ಅನುಭವ. ಎರಡಕ್ಷರದ ಶ್ರದ್ಧಾಂಜಲಿಯನ್ನೂ ಬರೆಯಲಾಗದ ಭಾವ ಜಡತೆ. ಬರೆದು ಮುಗಿಸಿಬಿಟ್ಟರೆ ಅದೆಲ್ಲಿ ಕವಿಯೊಡನೆಯ ಕೊನೆಯ ಋಣವೂ ಹರಿದುಕೊಂಡು ಬಿಡುತ್ತದೋ ಎನ್ನುವ ತಳಮಳ..ಆತಂಕ. ಬರೆಯದೇ ಹೋದರೆ ಅತೀ ಮಹತ್ವದ ಕಾರ್ಯವನ್ನೇನೋ ಬೇಕೆಂದೇ ಅಲಕ್ಷ್ಯ ಮಾಡುತ್ತಿರುವ ಚಡಪಡಿಕೆ..ಅಪರಾಧೀ ಭಾವ. ಅಂತೂ ಕೊನೆಗೂ ಪ್ರೀತಿಯ ಕಣ್ಣ ಕಂಬನಿಯಷ್ಟೇ ಅವರಿಗೆ ನಾವು ನೀಡಬಹುದಾದ ಕಾಣಿಕೆ. ಜೀವ-ಜೀವನ ಪ್ರೀತಿ, ಜಗದ ಚೆಲುವು- ಒಲವು, ಅತೀ ಸೂಕ್ಷ್ಮ ಅಷ್ಟೇ ಬಲವತ್ತರವಾದ ಮಾನವ ಭಾವಲೋಕದ ಅನಾವರಣ, ತಾಳುವಿಕೆ, ಒಗ್ಗುವಿಕೆ ತನ್ಮೂಲಕ ಮಾಗುವಿಕೆ ಈ ಕವಿಯ ಸಾಹಿತ್ಯದ ಮುಖ್ಯ ಪ್ರತಿಪಾದನೆಗಳು. ಈ ಜೀವ ಜಗತ್ತಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಿಗೂ ಇವರು ಕಿವಿಯಾಗುತ್ತಾರೆ; ಕಣ್ಣಾಗುತ್ತಾರೆ; ದನಿಯಾಗುತ್ತಾರೆ; ಹಾಡಾಗುತ್ತಾರೆ. ‘ಶ್ರೀ ಸಂಸಾರಿ’ಯ ಶ್ರೀರಾಮಚಂದ್ರನನ್ನು, ‘ ಆಪ್ತ ಗೀತೆ’ ಯ ಶ್ರೀಕೃಷ್ಣನನ್ನು, ‘ ಬುದ್ಧ ಚರಣದ’ ತಥಾಗತನನ್ನು ಎಷ್ಟು ಮಣ್ಣಿನ ಮಕ್ಕಳನ್ನಾಗಿ ಮಾಡಿ ಮರ್ತ್ಯರಾದ ನಮಗೆ ಅವರೆಲ್ಲರನ್ನು ಅತ್ಯಾಪ್ತರಾಗಿಸುತ್ತಾರೆ.ಧನುರ್ಧಾರಿ ರಾಮನ ಹೆಗಲಮೇಲಿನ ಬಿಲ್ಲು-ಬಾಣ ಕೆಳಗಿಳಿಸಿ ಅಲ್ಲೊಂದು ಪುಟ್ಟ ಅಳಿಲನ್ನು ಕೂಡಿಸುತ್ತಾರೆ. ರಾಜಸೇವೆಗಷ್ಟೇ ಮಿಗಿಲಾದ ‘ ಪುಷ್ಪಕ’ ದಲ್ಲಿ ವಾನರ – ಭಲ್ಲೂಕಾದಿಗಳಿಗೂ ಸೀಟು ಕೊಡಿಸಿಬಿಡುತ್ತಾರೆ. ಗೊಲ್ಲರ ಹುಡುಗ ‘ ಯಾದವ’, ‘ಕಾದವ’, ‘ ಸೇವಕ’ , ಶ್ರಾವಕ’ ನಾದ ಕಥೆ ಬಣ್ಣಿಸುತ್ತಾರೆ. ಲೋಕದ ಕಣ್ಣಿಗೆ ಕೇವಲ ಹೆಣ್ಣಾದ ರಾಧೆಯನ್ನು ಕೃಷ್ಣನನ್ನು ಕಾಣಿಸುತ್ತಾರೆ. ದ್ರೌಪದಿ, ಪೃಥೆ, ಮಂಥರೆ, ಊರ್ಮಿಳೆಯರ ಎದೆಯಾಳಕ್ಕಿಳಿದು ಮಂಥನ ನಡೆಸುತ್ತಾರೆ; ಹೃದಯ ಸಮುದ್ರದ ಹಾಲಾಹಲ - ಸುಧಾರಸಗಳನ್ನು ಹೊರ ಚೆಲ್ಲುತ್ತಾರೆ. “ ಕೊಂದವನದಲ್ಲ ಕಾದವನದ್ದು ಹಕ್ಕಿಯ ಹಕ್ಕು” ಎಂದು ಹೇಳಿ ಬುದ್ಧನ ಶಾಂತಿ- ಕರುಣೆಗಳಲ್ಲಿ ಮನ ತೊಯ್ಯಿಸುತ್ತಾರೆ. “ ತಾನು ಕರಗದೇ ಮಳೆ ಸುರಿಸುವುದೇ ಶ್ರಾವಣದ ಸಿರಿ ಮುಗಿಲು?”, ‘ ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ’, ‘ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ’, ‘ತಾನೇ ಕಡಲಾಗಲು ಹೊರಟ ಗಂಗೆಗೆ ಆಣೆಕಟ್ಟು ಕಟ್ಟುವರಾರು?’, ‘ ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೇ? ‘....ಎಂಥೆಂಥ ಅದ್ಭುತ ಸಾಲುಗಳನ್ನವರು ಕೊಟ್ಟಿದ್ದು..ಪಟ್ಟಿ ಮಾಡುತ್ತ ಹೋದರೆ ಬೆಳಗಾಗುತ್ತದೆ. ಅವರ ಜೀವನ ಹಾಗೂ ಕೃತಿಗಳ ಕಿರುಪರಿಚಯ ಇಂತಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ 1944ರ ಜೂನ್ 23ರಂದು ಜನಿಸಿದರು. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ. ಪ್ರಾಥಮಿಕ ಶಿಕ್ಷಣ ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗದಲ್ಲಿ ಮಾಡಿದರು. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್ ಆಗಿ ಉದ್ಯೋಗ ಆರಂಭಿಸಿದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಗಳಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಎಚ್ಚೆಸ್ವಿ ರಚಿಸಿದ ಮುಖ್ಯ ಕಾವ್ಯ ಕೃತಿಗಳು: ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ). ಮಹಾಕಾವ್ಯ: ಬುದ್ಧ ಚರಣ ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ). ಮಕ್ಕಳ ಸಾಹಿತ್ಯಕ್ಕೆ ಕೊಡುಗೆ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು). ಕಾದಂಬರಿ: ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು. ಎಚ್.ಎಸ್. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಿರುತೆರೆ–ಚಲನಚಿತ್ರ: ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಪ್ರಶಸ್ತಿಗಳು: 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಕವಿಯ ಭೌತಿಕ ಶರೀರಕ್ಕೆ ಮಾತ್ರ ಕೊನೆ ಯಶ: ಕಾಯಕ್ಕಲ್ಲ ಎನ್ನುವುದು ಸರ್ವವಿದಿತ . ಅಕ್ಷರಗಳ ಅಕ್ಷಯವಾದ ಅಪೂರ್ವ ನಿಧಿಯನ್ನು ನಮಗಾಗಿ ಬಿಟ್ಟು ಹೋದ ನೆಚ್ಚಿನ ಕವಿಗೆ ಅಶ್ರುಪೂರ್ಣ ಭಾವನಮನ. “ ಮುಳುಗಿದರೆ ಮುಳುಗಬೇಕೀ ರೀತಿ ಹತ್ತು ಜನ ನಿಂತು ನೋಡುವ ಹಾಗೆ.. ಗೌರವ ಬೆರೆತ ಬೆರಗಲ್ಲಿ. ಸೂರ್ಯ ಮುಳುಗುವ ಮುನ್ನ, ಓಡೋಡಿ ಬರುವ ಜನ ಕೈ ಮುಗಿವ ಹಾಗೆ ಮುಳುಗಲ್ಲಿ ಮುಳುಗಿ” ( ಆಗುಂಬೆಯ ಸೂರ್ಯಾಸ್ತ ). ಓಂ ಶಾಂತಿರಸ್ತು ~ ಗೌರಿಪ್ರಸನ್ನ