ಬಾಲ್ಯದ ನೆನಪುಗಳು – ‘ಬಾಲ್ಯದ ಬೆಳದಿಂಗಳು’ ರಾಧಿಕಾ ಜೋಶಿ ಹಾಗೂ ‘ನನ್ನ ಬಾಲ್ಯದ ಕಥೆಗಾರರು’ ಲಕ್ಷ್ಮೀನಾರಾಯಣ ಗುಡೂರ

ಪ್ರಿಯರೇ, ಚಿಕ್ಕಂದಿನ ದಿನಗಳಲ್ಲಿ ಕಟ್ಟಿಕೊಂಡ ಅನುಭವಗಳ ಬುತ್ತಿ ಕರಗದಂಥದ್ದು. ಅದು ಸಿಹಿ, ಕಹಿ, ಹುಳಿ, ಉಪ್ಪು, ಖಾರ ಎಂಥದ್ದೇ ಇರಲಿ, ಅದರ ರುಚಿ ಬಾಯಲ್ಲಿ ಕೊನೆಯವರೆಗೂ ಉಳಿಯುವುದು ಖಂಡಿತ. ನೀವು ಕೇಳಿರಬಹುದು ಈ ಗಝಲ್, ಜಗಜಿತ ಸಿಂಗ್ ಹಾಡಿರೋದು, “ಯಹ್ ದೌಲತ್ ಭೀ ಲೇಲೋ, ಯಹ್ ಶೋಹೊರತ್ ಭೀ ಲೇಲೋ, ಮಗರ್ ಮುಝ ಕೋ ಲೌಟಾದೋ ಬಚಪನ ಕಾ ಸಾವನ್; ವೋ ಕಾಗಜ ಕಿ ಕಷ್ತಿ ವೋ ಬಾರಿಶ್ ಕಾ ಪಾನಿ” .. ಆ ರೀತಿ ಎಷ್ಟು ಬೇಡಿಕೊಂಡರೂ ಬಾಲ್ಯ ತಿರುಗಿ ಬಾರದೆನ್ನುವುದೇನೋ ನಿಜ. ಆದರೆ, ಆ ನೆನಪುಗಳನ್ನ ಮತ್ತೆ ಮನಸ್ಸಿನ ಅಟ್ಟದಿಂದ ಕೆಳಗಿಳಿಸಿ, ಧೂಳು ಝಾಡಿಸಿ ಒಂದೊಂದಾಗಿ ತೆಗೆದು, ನೋಡಿ ನಕ್ಕು, ನಗುತ್ತಾ ತೆಗೆದಿಟ್ಟದ್ದನ್ನ ಜೊತೆಯವರೊಂದಿಗೆ ಹಂಚಿಕೊಂಡು ಮೆಲುಕು ಹಾಕುವುದಿದೆಯಲ್ಲ, ಅದು ಮಜಾ! ಈ ವಿಚಾರ ಮಾಡಿಯೇ ನನ್ನ ಮುಂಚಿನ ಸಂಪಾದಕಿ ಶ್ರೀಮತಿ ದಾಕ್ಷಾಯಣಿ ಗೌಡ ಅವರು ಹಾಕಿಟ್ಟ ಪಾಯದ ಮೇಲೆ ಕಟ್ಟಿದ ಮೊದಲ ಎರಡು ಲೇಖನಗಳು – ರಾಧಿಕಾ ಜೋಶಿಯವರು ನೋಡಿದ “ಬಾಲ್ಯದ ಬೆಳದಿಂಗಳು” ಮತ್ತು ನಾನು (ಲನಾ ಗುಡೂರ) ಕೇಳಿದ “ನನ್ನ ಬಾಲ್ಯದ ಕಥೆಗಾರರು”. ಎಂದಿನಂತೆ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ; ನಿಮ್ಮ ಬುತ್ತಿಯಲ್ಲೇನಾದರೂ ಹಂಚಿಕೊಳ್ಳುವಂಥದು ಇದ್ದರೆ, e-ಪೇಪರೆತ್ತಿಕೊಂಡು ಪೊಟ್ಟಣ ಕಟ್ಟಿ ಹಂಚಿ ಮತ್ತೆ! – ಎಲ್ಲೆನ್ ಗುಡೂರ (ಸಂ.)

ಬಾಲ್ಯದ ಬೆಳದಿಂಗಳು – ರಾಧಿಕಾ ಜೋಶಿ

ಚಿತ್ರ ಕೃಪೆ: ಗೂಗಲ್

ಬಾಲ್ಯದ ಬಗ್ಗೆ ನೆನಪುಗಳು ನನ್ನ ಜೀವನದ ಉತ್ತಮವಾದ ಹಾಗು ಈಗಿನ ಜೀವನ ಶೈಲಿಯನ್ನು ರೂಪಿಸುವಲ್ಲಿ ಮಹತ್ತಾದ ಪಾತ್ರ ವಹಿಸಿವೆ. ಎಲ್ಲರಂತೆ ನನ್ನ ಬಾಲ್ಯವೂ ಹಿತಕರವಾಗಿ ಹಾಗು ಆರೋಗ್ಯಕರವಾಗಿ ಇತ್ತು. ಟಿವಿ, ಮೊಬೈಲ್ ಫೋನ್, ಕಂಪ್ಯೂಟ ಇಲ್ಲದ ಜಗತ್ತು ನಮ್ಮ ಮಕ್ಕಳ ಬಾಲ್ಯದ ಜೀವನಕ್ಕಿಂತ ಉತ್ತಮವೆಂದು ದಿನನಿತ್ಯ ಅನಿಸುತ್ತದೆ. ಆದರೆ ಕೆಲವೊಂದು ವಿಷಯಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುವಂತೆ, ಬದಲಾವಣೆ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ಮೂಡಿಸುವಲ್ಲಿ ಸಹಾಯ ಮಾಡುತ್ತದೆ.

ಹುಟ್ಟಿದ್ದು ಹುಬ್ಬಳ್ಳಿಯಲ್ಲಾದರೂ, ನನ್ನ ಸಂಪೂರ್ಣ ಬಾಲ್ಯ ಹಾಗು ವಿದ್ಯಾಭ್ಯಾಸ ಎಲ್ಲವು ವೈಭವಯುತ ಮೈಸೂರಿನಲ್ಲಿ. ನನ್ನ ಅದೃಷ್ಟವೋ ಅವಕಾಶವೋ ಗೊತ್ತಿಲ್ಲ, ಮೈಸೂರಿನಂತಹ ಸಾಂಪ್ರದಾಯಿಕ ಹಾಗು ಪ್ರಗತಿಶೀಲ ನಗರಲ್ಲಿ ನನ್ನ ಬೆಳೆವಣಿಗೆಯ ೨೩ ವರ್ಷಗಳು ಇದ್ದದ್ದು ಒಂದು ಅಮೂಲ್ಯವಾದ ಅಂಶ.

ತಂದೆಯದು ಸರ್ಕಾರೀ ನೌಕರಿ. ಮಧ್ಯಮ ವರ್ಗದ ಪರಿವಾರದಲ್ಲಿ ಇದ್ದ ನಮಗೆ ಮೈಸೂರಿನಲ್ಲಿ ನಮ್ಮ ಸಂಬಂಧಿಕರು ಅಂತ ಯಾರೂ ಇರದಿದ್ದ ಕಾರಣ, ನಮ್ಮ ಅಕ್ಕ ಪಕ್ಕದ ಮನೆಯವರು ಮತ್ತು ನಮ್ಮ ತಂದೆ ವರ್ಷಗಳಿಂದ ಸಂಪಾದಿಸಿದ ಸ್ನೇಹಿತರ ಗುಂಪೇ ನಮ್ಮ ನೆಂಟರಿಷ್ಟರು. ಮನೆಯೊಳಗೆ ಉತ್ತರ ಕರ್ನಾಟಕ ಭಾಷೆ ಹಾಗು ಅಡುಗೆ. ಹೊರಗೆ ಕಾಲಿಟ್ಟ ತಕ್ಷಣ ಮೈಸೂರಿನ ಸೊಗಸಾದ ಕನ್ನಡ ಹಾಗೂ ಅಕ್ಕ-ಪಕ್ಕದ ಮನೆಯವರ ರುಚಿಯಾದ ಬಿಟ್ಟಿ ಕವಳದ (ನನ್ನ ತಾಯಿ ನನ್ನ ಆಡಿಕೊಳ್ಳತಾಯಿದ್ರು ‘ನೀನು ಹೊರಗೆ ಆಟಕ್ಕೆ ಹೋದರೆ ಯಾರದಾದರೂ ಮನೇಲಿ ಊಟ ಮಾಡತಿದ್ದೆ’) ಆನಂದ.

ನಮಗೆ ಬೇಸಿಗೆಯ ರಜೆಯಲ್ಲಿ ಅಜ್ಜಿ ಮನೆಯಾದ ಹುಬ್ಬಳ್ಳಿ, ಮೌಶಿಯಂದಿರ ಊರಾದ ಶಿಗ್ಗಾವಿ, ಗದುಗ, ಧಾರ್ವಾಡ ಹೀಗೆ ಹಲವು ಊರುಗಳ ಪರ್ಯಟನೆ ಆಗುತಿತ್ತು. ನಮ್ಮ ಸೋದರಸಂಬಂಧಿ ಅಕ್ಕ ಅಣ್ಣರೊಂದಿಗೆ ಒಂದು ತಿಂಗಳು ಹೇಗೆ ಕಳೆಯುತಿದ್ವಿ ಗೊತ್ತೇ ಆಗುತ್ತಿರಲಿಲ್ಲ.

ನಾನು ಈ ಕೆಳಗೆ ಬರೆಯುವ ವಿಷಯ ಕೇವಲ ನನ್ನ ಸುತ್ತಮುತ್ತಲಿನ ಸಹೋದರ ಸಂಬಂದಿಯಲ್ಲಿ ಹಾಗು ಅವರ ಗೆಳೆಯೆರ ಗುಂಪಿನಲ್ಲಿ ಕಂಡಂತಹ ವಿಷಯ. ತಮ್ಮದೇ ಮಾರ್ಗ ಸೃಷ್ಟಿಸಿಕೊಂಡು, ಶ್ರಮಪಟ್ಟ ತಂದೆ ತಾಯಿ ವಿರುದ್ಧ ಹೋಗಿ ಭವಿಷ್ಯ ರೂಪಿಸಿಕೊಂಡ ಜನರೂ ಇದ್ದಾರೆ (ಅದು ನನಗೆ ದೊಡ್ಡವಳಾದ ಮೇಲೆ ತಿಳಿಯಿತು). ಹೀಗಾಗಿ ದಯವಿಟ್ಟು ಇದನ್ನು ಬೇರೆ ಯಾವ ಅರ್ಥದಲ್ಲಿ ತಿಳಿಯದಿರಿ.

ಮೈಸೂರಿನಲ್ಲಿ ನಾವು ವಿದ್ಯಾಭ್ಯಾಸ ಹಾಗು ಸಂಗೀತ – ನೃತ್ಯದ ಮೇಲೆ ಹೆಚ್ಚು ಗಮನ ಕೊಟ್ರೆ, ಹುಬ್ಬಳ್ಳಿ, ಬಾಗಲಕೋಟೆ ಅಂತಹ ಊರುಗಳಲ್ಲಿ ಶಾಲಾ ಮಟ್ಟದ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸುವ ಶಿಕ್ಷಣ ಮನೆಯಲ್ಲಿ ಕೊಟ್ಟರೂ ಅದನ್ನು ವೃತ್ತಿ ರೂಪಕ್ಕೆ ಪರಿವರ್ತಿಸುವ ಅವಕಾಶ ಕಡಿಮೆ. ವೈದ್ಯಕೀಯ ವೃತ್ತಿಯ ಹೊರತಾಗಿ, ನಾವು ನೋಡಿದ ನಮ್ಮ ಸಂಬಂಧಿಕರಲ್ಲಿ ಹೆಚ್ಚಾಗಿ ಎಲ್ಲಾ ಹೆಣ್ಣು ಮಕ್ಕಳಲ್ಲಿ ವೃತ್ತಿಪರ ಮಹತ್ವಾಕಾಂಕ್ಷೆ ಕಂಡದ್ದು ಕಡಿಮೆ. ಕೆಲವರಿಗೆ ಸಂಗೀತದಲ್ಲಿ ಆಸಕ್ತಿ, ಮತ್ತೊಬ್ಬರಿಗೆ ಕ್ರೀಡೆಯನ್ನು ವೃತ್ತಿಯನ್ನಾಗಿಸಬೇಕೆಂಬ ಆಸೆ ಆದರೆ, ನಮ್ಮ ಜಾತಿ ಅಡ್ಡವಾಯಿತೋ ಅಥವಾ ಸಂಪ್ರದಾಯವೋ ಗೊತ್ತಿಲ್ಲ! ಮೈಸೂರಿನಲ್ಲಿ  (ಬೆಂಗಳೂರು) ಬೆಳೆದ ಮಕ್ಕಳಲ್ಲಿ ಛಾತಿ, ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಹೆಚ್ಚು ಕಂಡುಬಂದಿತು.

ನಮ್ಮ ಬ್ರಾಹ್ಮಣ ಜಾತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟೆಲ್ಲಾ ವಿದ್ಯಾಭ್ಯಾಸ ಕೊಟ್ಟು, ಎಲ್ಲಾ ಸಂಸ್ಕಾರವನ್ನು ಕೊಡುವಾಗ ಒಳ್ಳೆಯ ಗೃಹಿಣಿ ಆಗಬೇಕೆಂಬ ಅಂಶವನ್ನು ಅಧಿಕವಾಗಿ ನಮ್ಮಲ್ಲಿ ಬಿತ್ತುತ್ತಾರೆ. ಪ್ರತಿಭೆ ಹಾಗು ಜಾಣ್ಮೆಗೆ ಶಭಾಷಿ ಕೊಟ್ಟರೂ ಅದನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಮನೆ ನಡೆಸುವುದು ಸುಲಭವಲ್ಲ. ಒಳ್ಳೆ ಗೃಹಿಣಿಯಾಗಿ, ಒಳ್ಳೆ ತಾಯಿಯಾಗಿ, ಎಲ್ಲವನ್ನು ನಯವಾಗಿ ನಿಭಾಯಿಸುವುದು ಎಲ್ಲಕಿಂತ ಕಷ್ಟದ ಕೆಲಸ. ಆದರೆ ಅವಕಾಶ ಸಿಕ್ಕಾಗ ನಮ್ಮ ಕನಸು ಆಸೆಯನ್ನು ಪೂರ್ಣಗೊಳಿಸುವ ಸಮಯ ಬಂದಾಗ ಹಿಂದೇಟು ಹಾಕುತ್ತೀವಿ.

ನನ್ನ ಅದೃಷ್ಟ ಏನಂದರೆ ನನ್ನ ತಂದೆ ತಾಯಿ ಹುಬ್ಬಳ್ಳಿಯವರಾದರೂ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗು ಮೈಸೂರಿನ ಜೀವನ ಶೈಲಿಯನ್ನು ಮೆಚ್ಚಿ ಅಲ್ಲಿಯೇ ಉಳಿದು ನಮ್ಮ ಮೇಲೆ ತಮ್ಮ ಎಲ್ಲಾ ಗಮನವನ್ನು ಇಟ್ಟು ನಮ್ಮನ್ನು ಕೇವಲ ಪದವೀಧರನ್ನಾಗಿ ಸೀಮಿತ ಮಾಡದೇ ಅದನ್ನು ವೃತ್ತಿಯನ್ನಾಗಿ ಪರಿವರ್ತಿಸಲು ಪ್ರಯತ್ನ ಪಟ್ಟರೂ. ನಮ್ಮಲ್ಲಿನ ಆತ್ಮವಿಶ್ವಾಸ ಕುಗ್ಗದಂತೆ ಉಳಿಯುವ ಸಂಸ್ಕಾರ ಕೊಟ್ಟ ನಮ್ಮ ತಂದೆ-ತಾಯಿಯಂಥವರು ಬಹಳ ವಿರಳ. ಈ ಅದೃಷ್ಟ ನನ್ನ ಸಂಬಂಧಿಕರಲ್ಲಿ ಕಂಡುಬರಲಿಲ್ಲ. ಆದರೆ ಈಗ ಜಗತ್ತು ಬದಲಾಗುತ್ತಿದೆ, ಎಲ್ಲೆಡೆ ಮಕ್ಕಳ ಪ್ರತಿಭೆ ಹಾಗು ಜಾಣ್ಮೆಯನ್ನು ಗುರುತಿಸಿ ಅವರಿಗೆ ಸರಿಯಾದ ಪ್ರೋತ್ಸಾಹ ನೀಡಲಾಗುತ್ತಿದೆ.

ಚಂದ್ರನಂತಿರುವ ಪ್ರತಿಯೊಬ್ಬ ಮಗುವಿನಲ್ಲೂ ಇರುವ ಪ್ರತಿಭೆಯನ್ನು ಕೇವಲ ಇರುಳಿಗೆ ಸೀಮಿತವಾಗಿಸದೇ ಬೆಳದಿಂಗಳಿನ ಕಾಂತಿಯಂತೆ ಎಲ್ಲೆಡೆ ಹರಡಲು ಅವಕಾಶ ಮಾಡಿಕೊಟ್ಟರೆ ಎಷ್ಟು ಸುಂದರ!

– ರಾಧಿಕಾ ಜೋಶಿ

ನನ್ನ ಬಾಲ್ಯದ ಕಥೆಗಾರರು – ಲಕ್ಷ್ಮೀನಾರಾಯಣ ಗುಡೂರ

ಕಥೆ ಕೇಳುವವರಿಗೆ ಎಷ್ಟು ಆಸಕ್ತಿ ಇರಬೇಕೋ, ಹೇಳುವವರಿಗೂ ಅಷ್ಟೇ ಹೇಳುವ ಹುಮ್ಮಸ್ಸು ಇರಬೇಕು. ಇಲ್ಲದಿದ್ದರೆ ಕಥೆಯ ಸ್ವಾರಸ್ಯವೇ ಹಾಳಾಗಿ ಹೋಗಿಬಿಡುತ್ತದೆ, ಕೇಳಿದರೂ ಪ್ರಯೋಜನವಿಲ್ಲ.  ಒಂದು ನುಡಿಗಟ್ಟಿದೆ, ಯಾವಾಗಲೋ ಕೇಳಿದ್ದು ‘there are no boring subjects; there are boring teachers’; ಇದನ್ನು ಕಥೆಗಳಿಗೂ ಅನ್ವಯಿಸಬಹುದು.  ಜನಮೇಜಯನಿಗೆ ಕಥೆ ಹೇಳಿದ ಸೂತ ಪುರಾಣಿಕರಂತಹವರಿದ್ದರೆ, ಕೂತು ಲಕ್ಷ ಶ್ಲೋಕಗಳ ಮಹಾಭಾರತವನ್ನೂ ಕೇಳಬಹುದು.  ಇಲ್ಲದಿದ್ದರೆ, ಐದು ನಿಮಿಷಕ್ಕೆ ಮುಖ ಮುಚ್ಚಿಯೋ, ಆ ಕಡೆ ನೋಡಿಯೋ ಆಕಳಿಸುವ ಪರಿಸ್ಥಿತಿ ಬರುತ್ತದೆ, ಅಷ್ಟೇ!

ಕಥೆ ಹೇಳುವುದು ನನಗೆ ಮುಂಚಿನಿಂದಲೂ ಇಷ್ಟವಾದದ್ದು.  ಶಾಲೆಯಲ್ಲಿದ್ದಾಗ ನನ್ನ ಸಹಪಾಠಿಗಳಿಗೆ ನನ್ನ ಕಥೆ ಹೇಳುವ ರೀತಿ ಸಾಕಷ್ಟು ಇಷ್ಟವಿದ್ದು, ಯಾವುದಾದರೂ ಪಿರಿಯಡ್ ಖಾಲಿ ಇದ್ದರಾಯಿತು, ಅದು ನನ್ನ ಕಥೆಯ ಕ್ಲಾಸ್ ಆಗಿಬಿಡುತ್ತಿತ್ತು.  ಈಗಲೂ ಮನೆಯಲ್ಲಿ ಮಕ್ಕಳಿಗೆ ಕಥೆ ಹೇಳುವುದು ನನ್ನ ಕೆಲಸವೇ.

ಈ ನನ್ನ ಕಥೆ ಹೇಳುವ ಹುಚ್ಚಿಗೆ ಕಾರಣಕರ್ತರು ಕೆಲವರಿದ್ದಾರೆ.  ಅವರನ್ನು ನೆನೆಯುವುದೇ ಈ ಬರಹದ ಉದ್ದೇಶ.  ಕಥೆ ಹೇಳಲು ಒಂಚೂರೂ ಬಾರದವರು ಮಾಡಿದ ಕಥೆಗಳ ಕೊಲೆಯನ್ನೂ ಸಂಕಟಪಟ್ಟು ಸಹಿಸಿದ್ದೇನೆ, ಆದರೆ ಆ ಮಹಾನುಭಾವರನ್ನ ಅಲ್ಲ ನಾನಿಲ್ಲಿ ನೆನೆಯುತ್ತಿರುವುದು.    

ನನಗೆ ನೆನಪಿರುವ ಮೊದಲ ಕಥೆಗಾರ ನನ್ನ ಬಾಲ್ಯದ ಗೆಳೆಯ ಗುಂಡಪ್ಪ, ಈಗ ಎಲ್ಲಿದ್ದಾನೋ ಗೊತ್ತಿಲ್ಲ.  ಒಂದು ಹತ್ತು ನಿಮಿಷ ಖಾಲಿ ಕೂತರೆ ಸಾಕು, ಗುಂಡಪ್ಪನ ಕಥಾಲಹರಿ ಹರಿಯಲು ಶುರು.  ಒಮ್ಮೆ ಶುರುವಾಯಿತೆಂದರೆ ನಿಲ್ಲಿಸುವುದು ಕಷ್ಟ, ವಾಶರ ಕೆಟ್ಟು ಹೋದ ನಲ್ಲಿಯಂತೆ.  ಅವನ ಕಥೆಗಳೋ, ಸುಳ್ಳು-ಬಳ್ಳು ಹೆಣೆದವು – ಆದಿ-ಅಂತ್ಯಗಳಿಲ್ಲದವು!  ಅವನ ಒಂದು ಕಥೆ ವಾರಗಟ್ಟಲೆ ಸಾಗಿದ್ದಲ್ಲದೇ, ಅದರಲ್ಲಿ ಡಾ|| ರಾಜಕುಮಾರ, ವಿಷ್ಣುವರ್ಧನ್ ಇತ್ಯಾದಿ ಕನ್ನಡ ಸಿನಿಮಾದ ದಿಗ್ಗಜರು ಮಾತ್ರವಲ್ಲ, ಅಕ್ಕ-ಪಕ್ಕದ ಓಣಿಯ ಹುಡುಗ-ಹುಡುಗಿಯರೂ, ಶೇಂಗಾ – ಪುಠಾಣಿ ಇತ್ಯಾದಿ ವಿಚಿತ್ರ ನಾಮಧೇಯಗಳುಳ್ಳ ಪಾತ್ರಗಳೂ ಬಂದು ಹೋಗುವಂಥ 12 ತಾಸಿನ ಹಳೆಯ ಕಾಲದ ತಮಿಳು ಸಿನಿಮದಂತಹವು.  ಕೊನೆ ಕೊನೆಗೆ ಯಾರಿಗೆ ಎಲ್ಲಿ ಏನಾಗುತ್ತಿದೆ ಅನ್ನುವದೆಲ್ಲ ಕಲಿತು ಕಲಗಚ್ಚಾಗುವ ಹೊತ್ತಿಗೆ, ಅಮ್ಮನೋ ಅಪ್ಪನೋ ನಮ್ಮ ಹೆಸರು ಹಿಡಿದು ಕೂಗಿ, ಗಜೇಂದ್ರ ಮೋಕ್ಷದ ವಿಷ್ಣುವಿನಂತೆ ಬಂದು ಕಾಪಾಡುತ್ತಿದ್ದರೆನ್ನಿ!

ಅಲ್ಲಿಂದ ಮುಂದಿನವರೆಲ್ಲ, ನನ್ನ ತುಂಬಾ ಇಷ್ಟದ ಕಥೆಗಾರರು. ಕೇಳಿ 40 ವರ್ಷವಾದರೂ, ಹೇಳಿದ ಪಾತ್ರಗಳ, ಸನ್ನಿವೇಶಗಳ ಚಿತ್ರಣ ಇನ್ನೂ ಕಲರ್ ಸಿನಿಮದಂತೆ ನನ್ನ ಕಣ್ಣ ಮುಂದಿದೆ.  ಆಗಾಗ್ಗೆ ನಮ್ಮಲ್ಲಿಗೆ ಬಂದು ಹೋಗುತ್ತಿದ್ದ ನಮ್ಮ ಆಚಾರು ತಾತ (ಅಮ್ಮನ ಅಪ್ಪ) ಅಲ್ಲದೆ, ವರ್ಷಕ್ಕೊಮ್ಮೆ ನಮ್ಮೂರಿಗೆ (ಆಗ ನಮ್ಮಪ್ಪ ಪೋಸ್ಟ್ ಮಾಸ್ಟರ್ ಆಗಿದ್ದ ಊರು, ಗಂಗಾವತಿ) ಪುರಾಣ, ಹರಿಕಥೆ ಹೇಳಲು ಬರುತ್ತಿದ್ದವರು ನನಗೆ ಮಹಾಭಾರತ, ಭಾಗವತ ಇತ್ಯಾದಿ ಕಥೆಗಳ ಪರಿಚಯ ಮಾಡಿಕೊಟ್ಟರು. ನಾವಾಗ ಇದ್ದದ್ದು ರಾಯರ ಮಠದ ಹತ್ತಿರವಾದ್ದರಿಂದ ಈ ರೀತಿಯ ಅವಕಾಶಗಳಿಗೇನೂ ಕೊರತೆಯಿರಲಿಲ್ಲವೆನ್ನಿ.  ಇವರಲ್ಲಿ ಪುರಾಣಿಕರು ಕಡಪ ಕೃಷ್ಟಾಚಾರ್ಯ ಅನ್ನುವವರು ಒಬ್ಬರು.  ಇನ್ನೊಬ್ಬರು ಹರಿಕಥೆ ಹೇಳುತ್ತಿದ್ದ ಶಿವಮೊಗ್ಗ ಶ್ರೀನಿವಾಸ ದಾಸರು ಅನ್ನುವವರು.  ಅವರಿಬ್ಬರ ಕಥೆ (ನನಗೆ ಕಥೆ, ಭಕ್ತರಿಗೆ ಪುರಾಣ / ಹರಿಕಥೆ ಅನ್ನಬಹುದು) ಹೇಳುವ ರೀತಿ, ಪಾತ್ರಗಳನ್ನು ಮತ್ತು ಸನ್ನಿವೇಶಗಳನ್ನು ಬಣ್ಣಿಸುವ ಹಾವ-ಭಾವಗಳು ಇನ್ನೂ ನನ್ನ ಕಣ್ಣಿಗೆ ಕಟ್ಟಿವೆ.  8-10 ವರ್ಷದ ನಾನು ಅವನ್ನು ಕೇಳಲು ಪ್ರತಿದಿನ ಮಠಕ್ಕೋ, ಯಾರದೋ ಮನೆಗೋ ಹೋಗಿ, ಮುಂದಿನ ಸಾಲಲ್ಲೆ ಕುಳಿತು, ಬಿಟ್ಟ ಬಾಯಿ ಬಿಟ್ಟ ಹಾಗೆಯೇ ಗಂಟೆಗಳ ಕಾಲ ಕಥೆ ಕೇಳುತ್ತಿದ್ದುದು ನನಗೆ ನೆನಪಿದೆ.  ಕೇಳುತ್ತಾ ಮೈಮರೆತು ನೇರವಾಗಿ ಕುರುಸಭೆಗೋ, ಕುರುಕ್ಷೇತ್ರಕ್ಕೋ ವೃಂದಾವನಕ್ಕೊ ಸಾಗಿಸಿ, ಅಲ್ಲಿ ನಡೆಯುತ್ತಿದ್ದ ಘಟನೆಗಳನ್ನು ಸೈಡ್ ವಿಂಗಿನಲ್ಲಿ ನಿಂತು ನಾಟಕ ನೋಡಿದಂತೆ ತೋರಿಸಿ ವಾಪಸ್ ಮನೆಗೆ ತಂದು ಬಿಟ್ಟ ಹಾಗೆ ಅನಿಸುತ್ತಿತ್ತು.  ಅವರ ಬಾಯಿಂದ ಕೇಳಿದ ಭೀಮನ ಶಕ್ತಿಯ, ಅರ್ಜುನನ ಬಿಲ್ಲುಗಾರಿಕೆಯ, ದುರ್ಯೋಧನನ ಸ್ವಾಭಿಮಾನದ, ಕೃಷ್ಣನ ಯುಕ್ತಿಯ, ಅಭಿಮನ್ಯುವಿನ ಸಾಹಸದ ಮತ್ತು ಭೀಷ್ಮ-ದ್ರೋಣ-ಕರ್ಣಾದಿಗಳ ಕುರುಕ್ಷೇತ್ರದ ಶೌರ್ಯದ ವರ್ಣನೆ ನನ್ನ ಮೆದುಳಿನ ಮೇಲೆ ಅಚ್ಚು ಒತ್ತಿದಂತಿದೆ. 

ಚಿತ್ರ: ಲಕ್ಷ್ಮೀನಾರಾಯಣ ಗೂಡೂರ್

ಅದಾದ ಮೇಲೆ ನಾನು ನನ್ನ ಅಜ್ಜನ ಮನೆಯಲ್ಲಿದ್ದು ಓದು ಮುಂದುವರಿಸಲು ಕಲಬುರ್ಗಿಗೆ ಬಂದೆ, 7 ನೇ ತರಗತಿಗೆ.  ಬೇಸಿಗೆ ರಜೆ ಬಂತೆಂದರೆ ನಮ್ಮ ಸೋದರತ್ತೆಯ ಮನೆಗೆ ರಾಯಚೂರಿಗೆ ಹೋಗುತ್ತಿದ್ದ 1 ತಿಂಗಳು ನಮಗೆಲ್ಲ ಭಾರಿ ಇಷ್ಟದ ಸಮಯ.  ಇದಕ್ಕೆ ಎರಡು ಕಾರಣಗಳು – ಒಂದು, ವಾರಿಗೆಯ ಹುಡುಗರು ಒಟ್ಟು 9 ಜನ, ದೊಡ್ಡ ಗದ್ದಲ ಹಾಕಿ ಮಜಾ ಮಾಡುವುದು; ಎರಡನೆಯ ಕಾರಣ, ನಮ್ಮ ಸೋದರತ್ತೆಯ ಗಂಡ ಅರವಿಂದ ಮಾಮಾ ಹೇಳುತ್ತಿದ್ದ ಕಥೆಗಳು.  ಅವರ ಮನೆಯಲ್ಲಿ ತರುತ್ತಿದ್ದ ಬುಟ್ಟಿಗಟ್ಟಲೆ ಮಾವಿನಹಣ್ಣುಗಳದ್ದೂ ಸ್ವಲ್ಪ (!) ಪಾತ್ರ ಇತ್ತು ಅನ್ನಬಹುದು.  ಅರವಿಂದ ಮಾಮಾ ನಮಗೆ ಹೇಳುತ್ತಿದ್ದ ಸಿನಿಮಾ ಕಥೆಗಳು, ಇಂಗ್ಲೀಷಿನ ಗಲಿವರನ ಪ್ರವಾಸ ಇತ್ಯಾದಿ ಕಥೆಗಳು, 3-4 ಗಂಟೆಯವು ಒಂದೊಂದೂ. ರಾತ್ರಿ 9 ಕ್ಕೆ ಊಟ ಮುಗಿಸಿ, ಛತ್ತಿನ ಮೇಲೆ ಹಾಸಿಗೆ ಹಾಸಿಕೊಂಡು, ತಣ್ಣನೆ ನೀರಿನ ಹೂಜಿ-ಲೋಟ ಪಕ್ಕದಲ್ಲಿಟ್ಟುಕೊಂಡು, ಬಾಳೆಹಣ್ಣು ಇತ್ಯಾದಿ ಕುರುಕು ತಯಾರಿಟ್ಟುಕೊಂಡು ಕೂತರೆ, ಕಥೆಗೆ ರೆಡಿ ಅಂತರ್ಥ.  ”ಇವತ್ತಿನ ಕಥೆಯ ಹೆಸರು ಪಾತಾಳ ಭೈರವಿ” ಅನ್ನುವ ಥರದ ಘೋಷಣೆಯೊಂದಿಗೆ ಶುರುವಾಗೋದು.  ಎರಡು ಗಂಟೆಗಳ ಮೊದಲ ಭಾಗ ಮುಗಿದೊಡನೆ ಇಂಟರವಲ್ಲು, ದೊಡ್ಡ ಹುಯಿಲೆಬ್ಬಿಸಿ ಎಲ್ಲರೂ  ಮತ್ತೆ ಕೆಳಗೆ ಬಂದು, ಒಂದು ದೊಡ್ಡ ಡಬರಿ ಅವಲಕ್ಕಿ ಕಲಿಸಿಕೊಂಡು, ನಂಚಿಕೊಳ್ಳಲು ಸೌತೆಕಾಯಿ, ಹಸಿಮೆಣಸಿನಕಾಯಿ, ಉಳ್ಳಾಗಡ್ಡಿಗಳೊಂದಿಗೆ ಮತ್ತೆ ಮೇಲೆ ಬಂದು ಕೂತೆವೆಂದರೆ, ಪಾರ್ಟ್ 2 ಶುರು.  ನಾಯಕ ರಾಜಕುಮಾರ (ಎನ್ ಟಿ ಆರ್), ನೇಪಾಳ ಮಾಂತ್ರಿಕನನ್ನು (ಎಸ್ವಿ ರಂಗಾರಾವು) ಸೋಲಿಸಿ, ರಾಜಕುಮಾರಿಯನ್ನು ಕಾಪಾಡುವ ಹೊತ್ತಿಗೆ ನಮ್ಮ ಡಬರಿ ಅವಲಕ್ಕಿ ಇತ್ಯಾದಿಗಳನ್ನು ಧ್ವಂಸ ಮಾಡುವ ಕಾರ್ಯಕ್ರಮವೂ ಮುಗಿದು, ಮಧ್ಯರಾತ್ರಿ ದಾಟಿ 1 ಗಂಟೆ ಆಗಿರುತ್ತಿತ್ತು.  ಅಲ್ಲಿಗೆ ಕಥೆ ಮುಗಿಯಿತು ಅಷ್ಟೇ, ನಮ್ಮ ಮಾತಲ್ಲ!  ಹಾಗೂ ಹೀಗೂ ಪಿಸ-ಪಿಸ ಗುಸು-ಗುಸು ಮಾತು, ನಗುವಿನಲ್ಲಿ ಇನ್ನೊಂದು ಗಂಟೆ ತಳ್ಳಿ, “ಇನ್ನ ಮಲಕೋಳರೊ ಎಲ್ಲ, ಸಾಕದು ನಗೋದು” ಅಂತ ಅಜ್ಜಿಯ ಕಡೆಯಿಂದ ಬೈಸಿಕೊಂಡು ಮಲಗುವಲ್ಲಿಗೆ ನಮ್ಮ ದಿನ ಸಮಾಪ್ತಿ!  ಈ ದಿನಚರಿ ವಾರಕ್ಕೊಂದು 2-3 ದಿನ ಖಂಡಿತ.  ಯಾವುದಾದರೂ ಕಥೆ ಒಂದೇ ದಿನಕ್ಕೆ ಮುಗಿಯದಿದ್ದರೆ, ಮತ್ತೊಂದು ರಾತ್ರಿ ಮುಂದುವರೆಯುತ್ತಿತ್ತು, ಆದರೆ, ನಾವೆಲ್ಲ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಹೇಳಿ ನಮಗೆ ಕಥೆಯ ಪಾತ್ರ-ಸನ್ನಿವೇಶಗಳೆಲ್ಲ ನೆನಪಿವೆಯೆಂದು ಸಾಧಿಸಿ ತೋರಿಸಿದರೆ ಮಾತ್ರ.   ರಾಬರ್ಟ್ ಲೂಯಿ ಸ್ಟೀವನ್ಸನ್ನನ Treasure Island ಮೂರು ಬೇಸಿಗೆಯಾದರೂ ಮುಗಿಯದೇ, ಕಾದು ಕಾದು ಸಾಕಾಗಿ ನಾನೇ ಆ ಪುಸ್ತಕ ಕೊಂಡು ಓದಿ ಮುಗಿಸಿದೆ! 

ಕಥೆ-ಕಾದಂಬರಿಗಳನ್ನು ಸ್ವತಃ ಓದುವ ಮಜಾ ಒಂದು ರೀತಿಯದಾದರೆ, ಒಳ್ಳೆಯ ಕಥೆಗಾರರಿಂದ ಕೇಳುವ ಸ್ವಾರಸ್ಯವೇ ಬೇರೆ.  ಅದೊಂದು ನನ್ನ ಬಾಲ್ಯದ ಮರೆಯದ ಸಿಹಿ ಅಥವಾ ಹುಳಿ-ಉಪ್ಪು-ಖಾರದ ಹದನಾದ ಅನುಭವ.

– ಲಕ್ಷ್ಮೀನಾರಾಯಣ ಗುಡೂರ್, ಪ್ರೆಸ್ಟನ್ (ಲಾಂಕಶೈರ್)

‘ಕತೆ: ಕಾಯ್ಕಿಣಿ ಜೊತೆ’ ಮತ್ತು ಈ-ಜಗುಲಿಯಲ್ಲೊಂದು ಕಾಯಕದ ಗಣಿ ಜಯಂತರೊಡನೆ ಪಟ್ಟಾಂಗ

1. ಕತೆ : ಕಾಯ್ಕಿಣಿ ಜೊತೆ

“ಸರ್ವಂ ಕೋವಿಡ್ ಮಯಂ ಜಗಂ” ಆಗಿರುವಾಗ ಮಿತ್ರರ, ಸಮಾನ ಮನಸ್ಕರ ಭೇಟಿ ದುಸ್ತರ. Zoom ರಾಯ, ಅವನಂಥ ಇತರ ತಂತ್ರಾಂಶಗಳು ಅಂತರ್ಜಾಲ  ಮಿಲಾಪಗಳನ್ನು ಸರಾಗಗೊಳಿಸಿವೆ. ಕಾಲಾಂತರದಿಂದ KBUK ಕಾಯ೯ಕ್ರಮಗಳ ನಡುವೆ ತೆವಳುತ್ತಿದ್ದ ಅನಿವಾಸಿಗಳ ಭೇಟಿಗೆ ಹೊಸ ಚಾಲನೆ ಸಿಕ್ಕಂತಾಗಿದೆ. ಈ ಹಿನ್ನಲೆಯಲ್ಲಿ ಹುಟ್ಟಿದ ಈ- ಜಗುಲಿ ಹಾಗೂ ಜಗುಲಿಯಲ್ಲಿ ನಡೆದ  ಸಂವಾದದ ವಿವರಗಳನ್ನು ಈಗಾಗಲೇ ಓದಿರುತ್ತೀರಿ. ಎರಡನೇ ಬೈಠಕ್ ನ  ನಿರ್ವಹಣೆಯ ಜವಾಬ್ದಾರಿ ಬಂದಿದ್ದು ನನ್ನ ಹಾಗೂ ಮುರಳಿ ಹತ್ವಾರ್  ಹೆಗಲಿಗೆ.  ಬೈಠಕ್ಕಿ ಗೆ  ತಕ್ಕುದಾದ ವಿಷಯ ಬೇಕಲ್ಲವೇ? ಮಾಚ್೯ ತಿಂಗಳಲ್ಲಿ ಕನ್ನಡ ಬಳಗದ ಯುಗಾದಿ ಆಚರಣೆಗೆ ನಾಡಿನ ಹೆಸರಾಂತ, ಪ್ರಭಾವಿ ಸಾಹಿತಿ ಶ್ರೀ ಜಯಂತ  ಕಾಯ್ಕಿಣಿ ಅವರ ಸಮ್ಮುಖದಲ್ಲಿ  ಅನಿವಾಸಿ ಸದಸ್ಯರು ಬರೆದ ಮಿನಿ ಕತೆಗಳನ್ನು ಓದುವ ತಯಾರಿ ಜೋರಾಗಿ ನಡೆದಿತ್ತು.  ಕೋವಿಡ್ ಸೋಂಕಿಗೆ ಯುಗಾದಿ ಕಾರ್ಯಕ್ರಮ  ಬಲಿಯಾದ ಸುದ್ದಿ ಹೊಸತಲ್ಲ. ಆಗ ನಮಗಾದ ನಿರಾಸೆ ಅಷ್ಟಿಷ್ಟಲ್ಲ! ಅಂದು ತಪ್ಪಿ ಹೋದ ಅವಕಾಶಕ್ಕೆ ಮತ್ತೊಮ್ಮೆ  ಪ್ರಯತ್ನಿಸುವುದೇ ಸೂಕ್ತ ಎಂಬುದು ಹಲವರ ಅಭಿಪ್ರಾಯವಾಗಿತ್ತು. ಈ ಪ್ರಸ್ತಾವಕ್ಕೆ ಸದಸ್ಯರೆಲ್ಲ ಉತ್ಸಾಹದಿಂದಲೇ ತಲೆದೂಗಿದರು. ಈ-ಜಗುಲಿಯ ಹರಟೆಗೆ ಶಿವಪ್ರಸಾದ್ ಕೊಟ್ಟ ಆಹ್ವಾನಕ್ಕೆ ಕಾಯ್ಕಿಣಿ ಯವರು ಸಮ್ಮತಿಸಿದಾಗ, ರಂಗದ ಹಿನ್ನಲೆಗೆ ನಮ್ಮ ಪ್ರವೇಶವಾಯ್ತು ಅಧಿಕೃತವಾಗಿ. ನಾನು, ಮುರಳಿ  ಸಭೆಯ ದಿನ, ಸಮಯ, ಕಚ್ಚಾ ರೂಪರೇಷೆಗಳನ್ನು ಚರ್ಚಿಸಿ ನಿರ್ಧರಿಸಿದಾಗ ಸ್ವಲ್ಪ ಧೈರ್ಯ ಮೂಡತೊಡಗಿತು ಕಾಯ್ಕಿಣಿಯವರ ಜೊತೆ ಮಾತಾಡಲು. ಕಡೆಗೂ, ವಾಟ್ಸ್ಯಾಪ್ ಮೂಲಕ ಅವರಿಗೆ ಒಂದು ಸಂದೇಶ ರವಾನಿಸಿಬಿಟ್ಟೆ.  ತಡ ಮಾಡದೇ  ಅವರ ಉತ್ತರವೂ ಬಂತು. ಆದರೂ, ಗೋಕರ್ಣದ ಜಾತ್ರೆಯ ಜನ ಜಂಗುಳಿಯಂತೆ ಮನದಲ್ಲಿ ಅಡರಿತ್ತು ಅಳುಕು. ಎಷ್ಟೇ  ಆದರೂ ಅವರು ಸುಪ್ರಸಿದ್ಧರು, ನಮ್ಮಂತವರನ್ನು ಸಾಕಷ್ಟು ನೋಡಿರುತ್ತಾರಲ್ಲ? ಅವರ ಹಸನ್ಮುಖ, ಹಮ್ಮು- ಬಿಮ್ಮಿಲ್ಲದ ವ್ಯಕ್ತಿತ್ವದ ಎದುರು, ಹೆಪ್ಪುಗಟ್ಟಿದ್ದ ಹೆದರಿಕೆ ಬೆಳಕು ಕಂಡ ಕತ್ತಲೆಯಂತೆ ಓಟ ಕಿತ್ತಿತ್ತು. ಮುಂದಿನ ಎರಡು-ಮೂರು ವಾರಗಳ ಅವಧಿಯಲ್ಲಿ ನಮ್ಮ- ಅವರ ನಡುವೆ ನಡೆದ ವಿಚಾರ ವಿನಿಮಯಗಳು ಸಭೆಗೆ ಸುಂದರ ರೂಪ ಕೊಡುವಲ್ಲಿ ನೆರವಾದವು. ಈ ಸಂಭಾಷಣೆಗಳು ವೈಯಕ್ತಿಗವಾಗೂ ನಮ್ಮ ನಡುವೆ ಬಾಂಧವ್ಯವನ್ನು ಹುಟ್ಟಿ ಬೆಳೆಸಲು ಕಾರಣವಾದದ್ದು ನಮ್ಮ ಸುದೈವ.

ಚಿತ್ರಕೃಪೆ: ಶ್ರೀ ಜಯಂತ  ಕಾಯ್ಕಿಣಿ

ಈ-ಜಗುಲಿಗೆ ಅವಶ್ಯವಾಗಿ ಬೇಕಾಗುವುದು ಜಾಲ ವೇದಿಕೆಯಲ್ಲವೇ? ಇರುವುದರಲ್ಲಿ ಜೂಮ್ ಮಾತ್ರ ಬೇಕಾದ ಸೌಲಭ್ಯಗಳನ್ನೊದಗಿಸುವ ತಂತ್ರಾಂಶ ಎಂಬುದು ಹಲವರ ಅಂಬೋಣ. ಇದನ್ನು ನಾವು ಹೇಗೆ ಅಳವಡಿಸುವುದು ನಮ್ಮ ವೇದಿಕೆಗೆ ಎಂಬ ಚರ್ಚೆ ಹಿನ್ನಲೆಯಲ್ಲಿ ಬಿರುಸಾಗಿ ಸಾಗಿತ್ತು. ನಮಗೆ ತುರ್ತಾಗಿ ಬೇಕಾದ ಸಾಧನಕ್ಕೆ ನಡೆಸಿದ ಹುಡುಕಾಟದಲ್ಲಿ ಮಿತ್ರರಾದ ಶ್ರೀವತ್ಸ ದೇಸಾಯಿ ಹಾಗೂ ಕೇಶವ ಕುಲಕರ್ಣಿಯವರ ಸಹಕಾರದಲ್ಲಿ Micosoft Teams ತಂತ್ರಾಂಶವನ್ನು ಪರೀಕ್ಷಿಸಿ ಬದಲೀ  ಬಾಣದಂತೆ ನಮ್ಮ ಬತ್ತಳಿಕೆಯಲ್ಲಿ ಸಿದ್ಧವಾಗಿಟ್ಟುಕೊಂಡಿದ್ದೆವು. ಈ ಬಾಣದ ಅವಶ್ಯಕತೆ ಬರದೇ ಇರಲು ಕಾರಣ, ಸಹೃದಯೀ  ಕನ್ನಡ ಬಳಗದ ಪದಾಧಿಕಾರಿಗಳಾದ  ಡಾ. ಸ್ನೇಹ ಕುಲಕರ್ಣಿ ಹಾಗೂ ಡಾ. ಗಿರೀಶ್ ವಶಿಷ್ಠ ಅವರ ಸಹಾಯ ಹಸ್ತ. ಕನ್ನಡ ಬಳಗದ ವತಿಯಿಂದ ಅವರು ಜೂಮ್  ವ್ಯವಸ್ಥೆಗೆ ಒಪ್ಪಿಗೆ ನೀಡಿ ಬಿಕ್ಕಟ್ಟಿನ ಪರಿಹಾರ ಮಾಡಿದರು. ಹಾಗೆಯೇ ನೀಲ್ ತಲಗೇರಿಯವರು ಕಾರ್ಯಕ್ರಮಕ್ಕೆ  ಮುನ್ನ, ಕಾರ್ಯಕ್ರಮದ  ಸಮಯದಲ್ಲಿ ಹಾಗೂ  ನಂತರ ನೀಡಿದ ತಾಂತ್ರಿಕ ಬೆಂಬಲ ಸದಾ ಸ್ಮರಣೀಯ.

ಆಗಸ್ಟ್ ೯ರಂದು ನಡೆದ ಸಭೆಯ ಪರಿಯನ್ನು ಗೆಳೆಯ ಮುರಳಿ ವಿವರಿಸಿದ್ದಾರೆ. ನಮ್ಮ ಕಾರ್ಯಕ್ರಮವನ್ನು ದೃಶ್ಯ ಮಾಧ್ಯಮದಲ್ಲಿ ದಾಖಲಿಸಲಾಗಿದೆ. ಈ ಮುದ್ರಿಕೆ ನಮ್ಮ ಜಾಲ ಜಗುಲಿಯ ಹೆಮ್ಮೆಯ ಸ್ವತ್ತಾಗಿ ಮುಂದಿನ ದಿನಗಳಲ್ಲಿ ಚಹಾದೊಂದಿಗೆ ಮೆಲಕು ಹಾಕಲು ಉತ್ತಮ ಕುರುಕಲು ತಿಂಡಿಯಾಗಿ ಸದಾ ಜೋಬಿನಲ್ಲಿ ತುಂಬಿರುವುದೆಂದು ನಮ್ಮ ನಂಬಿಕೆ.

ಡಾ ರಾಮಶರಣ

2. ಈ-ಜಗುಲಿಯಲ್ಲೊಂದು ಕಾಯಕದ ಗಣಿ ಜಯಂತರೊಡನೆ ಪಟ್ಟಾಂಗ

‘ಕಿಟಕಿಯಲ್ಲಿ ಇಣುಕುತ್ತಿದ್ದ ಮುಖಗಳು‘

ನಮ್ಮದೊಂದು ‘ಅನಿವಾಸಿ’ ಹೆಸರಿನ ಪುಟ್ಟಗುಂಪು. ಚೂರು-ಪಾರು ಸಾಹಿತ್ಯ ಓದಿರುವ, ಬರೆಯುವ ಯುನೈಟೆಡ್ ಕಿಂಗ್ಡಮಿನ ಕನ್ನಡದ ಅಮೇಚೂರಿಗಳು ತಾವು ಬರೆದಿದ್ದನ್ನು ಹಂಚಿಕೊಳ್ಳಲು ಹುಟ್ಟಿಸಿಕೊಂಡ ಗುಂಪು. ಇಲ್ಲಿನ ಕನ್ನಡದ ಹಿರಿಯ ಸಂಘ ಕನ್ನಡ ಬಳಗಕ್ಕೆ ಮಾರುದೂರಕ್ಕೆ ಅಂಟಿಕೊಂಡಿರುವ ‘ಅನಿವಾಸಿ’ಗಳು, ಕನ್ನಡ ಬಳಗ ವರ್ಷಕ್ಕೆರಡು ಬಾರಿ – ಯುಗಾದಿ, ದೀಪಾವಳಿ – ನಡೆಸುವ ಕಾರ್ಯಕ್ರಮಗಳಲ್ಲಿ ಸಾಹಿತ್ಯಾತ್ಮಕ ಚಟುವಟಿಕೆಗಳ ನಡೆಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ವೆಂಕಟೇಶ ಮೂರ್ತಿ, ಭೈರಪ್ಪ, ಗಿರೀಶ್ ಕಾಸರವಳ್ಳಿ ಹೀಗೆ ಹೆಸರಾಂತ ಸಾಹಿತಿ, ಸಿನೆಮಾ ಜನಗಳೊಂದಿಗೆ ಸಂವೇದನೆಯ ಸಂವಾದದ ಆಯೋಜನೆಯ ಗರಿ ಈ ಗುಂಪಿಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ಬಳಗದ ಯುಗಾದಿ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ಧತೆ ನಡೆದಿತ್ತು. ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಆ ಕಾರ್ಯಕ್ರಮಕ್ಕೆ ಕನ್ನಡದ ಪ್ರಸಿದ್ಧ ಮತ್ತು ಪ್ರಭಾವಿ ಕವಿ, ಕಥೆಗಾರ ಜಯಂತ ಕಾಯ್ಕಿಣಿ ಯವರು ಬರುವದಿತ್ತು. ಅವರೊಂದಿಗೆ ಕಥೆ ಕಟ್ಟುವ ಕಲೆಯ ಬಗ್ಗೆ ಸಂವಾದ ನಡೆಸಲು ‘ಅನಿವಾಸಿ’ಗಳ ಗುಂಪೂ ಸಜ್ಜಾಗಿತ್ತು. ಆ ಗುಂಪಿನ ಏಳೆಂಟು ಜನ ನಾಲ್ಕು ನಿಮಿಷದಲ್ಲಿ ಓದಿ ಮುಗಿಸುವಷ್ಟು ಗಿಡ್ಡದ ಕಥೆಗಳನ್ನು ಬರೆದು, ಶಾಲೆಯ ಇನ್ಸ್ಪೆಕ್ಷನ್ನಿಗೆ ಬರಲಿರುವ ದೊಡ್ಡ ಮೇಷ್ಟರೊಬ್ಬರ ಮುಂದೆ ಕೈಕಟ್ಟಿ ಬಾಯಿಪಾಠ ಒಪ್ಪಿಸುವ ಮಕ್ಕಳ ಹಾಗೆ ತಯಾರಾಗಿದ್ದರು.

ಅಷ್ಟರಲ್ಲಿ, ಚೀನಾದವರು ಕರೆಯದೆ ಕಳಿಸಿಕೊಟ್ಟ ಕರೋನ ಎಂಬ ಮಾರಿ ದೇಶಗಳ ಧೂಳೆಬ್ಬಿಸಿ, ಗಡಿಗಳ ಗುಡಿಸುತ್ತಾ ಸಾಗಿ, ತನ್ನ ದಾರಿಗುಂಟ ಸಿಕ್ಕಿದ ವಿಶಾಲ ಆಗಸದಿಂದ ಯಂತ್ರದ ಹಕ್ಕಿಗಳನ್ನೆಲ್ಲ ಕೆಳಗಿಳಿಸಿ, ಮಾನವನ ಶಕ್ತಿಯ ಮತ್ತೆ ಅವನ ಕೃತಕತೆಯ ಜೀವನವನ್ನ ಅಣಕಿಸಿ ಆಡಿಕೊಳ್ಳಲು ಶುರುಮಾಡಿತು. ಇದರ ಕಾಲ್ತುಳಿತಕ್ಕೆ ಸಿಕ್ಕಿ ಅಪ್ಪಚ್ಚಿಯಾದ ಕೋಟ್ಯಾಂತರ ಕಾರ್ಯಕ್ರಮಗಳಂತೆ  ಕನ್ನಡಬಳಗದ ಯುಗಾದಿ ಕಾರ್ಯಕ್ರಮವೂ  ನರಳಿ ಮೂಲೆಗೆ ಸರಿದಿತ್ತು. ಆದರೆ, ಕರೋನದ ಕಾಲ್ಬುಡದಲ್ಲೇ ಪಾರ್ಥೇನಿಯಂನಂತೆ ಬೆಳೆದ ಇಂಟೆರ್ನೆಟ್ಟು ಎಂಬ ದೈತ್ಯಾಸುರ ಎಲ್ಲರ ಮನೆ-ಮನದ ಮೂಲೆ-ಮೂಲೆ ಬಿಡದಂತೆ ನುಗ್ಗಿ ಹರಡಿ, ಮೊಬೈಲು-ಲ್ಯಾಪ್ಟಾಪ್-ಡೆಸ್ಕ್ಟಾಪುಗಳ ತಟ್ಟೆಗಳಲ್ಲಿ ಡೇಟಾಗಳ ಭೂರಿ ಭೋಜನ ಸವಿಯುತ್ತ, ಕುರ್ಚಿಗಳ ದಿಂಬುಗಳನು ಬಿಸಿಯಾಗಿಟ್ಟು ಅವುಗಳ ಮೇಲೆ ಕೂರುವವರ ಸೊಂಟದ ಸುತ್ತುಗಳನ್ನು ಹಿಗ್ಗಿಸಿ, ಆರಾಮದ ಮಂಪರು ಹೊದೆಸಿ ಆರೋಗ್ಯದ ಚರ್ಚೆಯನ್ನೇ ನಗಣ್ಯಗೊಳಿಸುತ್ತಾ, ಕೊರೋನಾಕ್ಕೆ ಆಪ್ತವಾದ ಕೊಬ್ಬನ್ನು ಸಂತೋಷದಿಂದ ಪೇರಿಸಿಕೊಳ್ಳುತ್ತಿರುವ ಕುಲವನ್ನ ಹೀಯಾಳಿಸುತ್ತ ಆಟವಾಡಿಸುತಿತ್ತು. ಮನೆಗಳೆಲ್ಲ ಕೆಲಸ ಮಾಡುವವರಿಗೆ ಆಫೀಸುಗಳಾಗಿ, ಮನೆಯಲ್ಲಿಯೇ ಇರುತ್ತಿದ್ದ ಗೃಹಿಣಿಯರಿಗೆ ಹಗಲಿನಲ್ಲೂ ಗಂಡಂದಿರ ಭಾರ ಹೊರಲಾಗದ ಹೊರಳು ಕಲ್ಲಾಗಿ, ಶಾಲೆಗೆ ಹೋಗಲಾಗದ ಮನೆಯ ಮಕ್ಕಳಿಗೆ ಸಜೆಯ ಸೆರೆಮನೆಯ ಸರಳುಗಳಾಗಿ  ಗೋಚರವಾಗುತ್ತಿತ್ತು. ಆಗಾಗ ಡೇಟಾಗಳ ಭಾರಕ್ಕೆ ಕುಸಿದ ಇಂಟರ್ನೆಟ್ಟಿಗಾಗಿಯೂ, ದೊಡ್ಡ ಸೈಝಿನ ಸ್ಕ್ರೀನ್ ಯಾರಿಗೆ ಬೇಕೆಂಬ ಕಾರಣಕ್ಕೂ ನಡೆಯುತ್ತಿದ್ದ ವಾದಗಳು ಕೆಲವೊಮ್ಮೆ ಮುಗಿಯದ ಯುದ್ಧಗಳಂತೆ ಕೆಲವರಿಗೆ ಅನಿಸಿದ್ದೂ ಉಂಟು.

ಈ ಹಿನ್ನೆಲೆಯಲ್ಲಿ, ಬೇರೆ-ಬೇರೆ ಗಾತ್ರಗಳ ಸ್ಕ್ರೀನಿಗಂಟಿದ ಕಣ್ಣುಗಳಿಗೆ ಆ ಸ್ಕ್ರೀನುಗಳಲ್ಲಿ ಆಪ್ತರ ದನಿಯ ಜೊತೆಗೆ ಮುಖದರ್ಶನ ಸಿಗುತ್ತಿದ್ದುದು ಭಾಗ್ಯವೆಂದೇ ಹೆಚ್ಚಿನವರಿಗೆ ಅನ್ನಿಸಿ, ಆ ಸ್ಕ್ರೀನುಗಳ ಕಿಟಕಿಗಳಲಿ ಪ್ರಪಂಚದೆಲ್ಲೆಡೆ ಹರಡಿರುವ ತಮ್ಮಾಪ್ತರ ದೃಷ್ಟಿ-ದನಿಗಳಲಿ ತಮ್ಮ ಮನ ತಣಿಸಿಕೊಂಡವರೇ ಮೊದಮೊದಲ ದಿನಗಳಲ್ಲಿ ಹೆಚ್ಚು. ಸಮಯ ಸರಿದಂತೆ, ತಮ್ಮ ತಮ್ಮ ‘ಹೊಸ’ ನಿತ್ಯ ವಿಧಿಗಳಿಗೆ ಒಗ್ಗಿಕೊಳ್ಳುತ್ತಾ, ಕರೋನಾದ ಕರಾಳತೆ ನುಂಗಿದ ನಂಬರ್ಗಳನ್ನೂ ಫುಟ್ಬಾಲಿನ ಲೀಗ್ ಟೇಬಲ್ಲಿನ ರ್ಯಾಂಕಿನಂತೆ ಇನ್ನೊಂದು ಪಟ್ಟಿಯಂತೆ ನೋಡುವುದನ್ನು – ಹತ್ತು ಹೆಣ ಮದುವೆಗೆ ಸಮಾನ ಎಂಬ ನಾಣ್ಣುಡಿಯ ನಿಜ ದರ್ಶನದಂತೆ – ಸಮಾಧಾನಗೊಳಿಸಿಕೊಳ್ಳುವ ಅಭ್ಯಾಸವಾಗಿ ಕಲಿತುಕೊಂಡ ಜನ ಮಾನಸಕ್ಕೆ, ಆ ಸ್ಕ್ರೀನುಗಳಲ್ಲಿ ಸಾಹಿತ್ಯ, ನೃತ್ಯ, ನಾಟಕ ಹೀಗೆ ನಾನಾ ತರದ, ಮನ ಸಂತೈಸುವ, ಸಾಮಾಜಿಕ ಚಟುವಟಿಕೆಗಳ ದರ್ಶನವಾಗಿದ್ದು, ಸ್ಕ್ರೀನುಗಳ ಮತ್ತೊಂದು ಸ್ಫೋಟಕ್ಕೆ ನಾಂದಿಯಾಯಿತು.

ಆ ಸ್ಫೋಟದ ಸಂಧಿಯಲ್ಲಿ ಹುಟ್ಟಿದ್ದು: ಈ-ಜಗುಲಿ. ಮೇಲೆ ವರ್ಣಿಸಿದ ‘ಅನಿವಾಸಿ’ಗಳು ತಮ್ಮ-ತಮ್ಮ ಯಂತ್ರ ಪರದೆಗಳ ಕಿಟಕಿ ತೆರೆದು ಒಂದಿಷ್ಟು ಇಷ್ಟದ ಕಥೆ-ಕವನಗಳ ಹಿನ್ನೆಯಲ್ಲಿ ಹರಟಲಿಕ್ಕೆಂದು ಮೇಲರ್ಥದಲ್ಲಿ ಅನಿಸಿದರೂ, ಆಪ್ತರೊಂದಿಗಿನ ಹರಟೆಯಲ್ಲಿ ಒಂದಿಷ್ಟು ಸಮಾಧಾನ ಹುಡುಕುವ, ಬೇಗುದಿ ಮರೆಯುವ ಮನುಷ್ಯನ ಮನಸಿನ ಒಳಸೆಳೆತ ಈ-ಜಗುಲಿಯನ್ನು ಕಟ್ಟಿದ ಇಟ್ಟಿಗೆಗಳು ಎನ್ನಬಹುದೇನೋ. ಏನೇ ಇರಲಿ, ಹೀಗೆ ಶುರುವಾದ ಈ-ಜಗುಲಿಯ ಮೊದಲ ಕಾರ್ಯಕ್ರಮದಲ್ಲಿ ನಿಸ್ಸಾರರ ನೆನಪು, ಹಾಡು, ಕವನ, ಅವರೊಂದಿಗೆ ಕಳೆದ ಕ್ಷಣ ಇವುಗಳಲ್ಲಿ ಹರಡಿ ಮೆರೆದಿತ್ತು. ಅದರೊಂದಿಗೆ, ಜಗುಲಿಯಲ್ಲಿ ಮತ್ತೆ ಬೆರೆತು ಹರಟುವ ಉತ್ಸಾಹವೂ ಸಹ ಬೆಳೆದಿತ್ತು. ಈ ಸಂಧರ್ಭದಲ್ಲಿ ನಡೆದ ಚರ್ಚೆಯಲ್ಲಿ, ಮಾರ್ಚ್ ತಿಂಗಳಲ್ಲಿ ಇಂಗ್ಲೆಂಡಿನಲ್ಲಿ ತಪ್ಪಿದ ಜಯಂತರ ಭೇಟಿಯನ್ನು ಈ-ಜಗುಲಿಯಲ್ಲಿ ಮಾಡುವ ಎನ್ನುವ ಆಸೆಯ ಮೊಳಕೆ ಮೊದಲ ಎಲೆ ಮೂಡಿಸಿತ್ತು. ಆ ಆಸೆಗೆ ನೀರೆರೆದ ‘ಅನಿವಾಸಿ’ಯ ಹಿರಿಯ ಸದಸ್ಯ ಶಿವಪ್ರಸಾದ್ ಅವರ ಕರೆಗೆ ಒಮ್ಮನದಲ್ಲಿ ಸಮ್ಮತಿಸಿದ ‘ಕಾಯ್ದಿಟ್ಟ ಮಗುವಿನ ಮನಸಿನ’ ಜಯಂತ ಕಾಯ್ಕಿಣಿಯಂತಹ ಕಥೆ ಕಟ್ಟುವ ಕಲೆಯ ಮಾಂತ್ರಿಕನನ್ನ ‘ಅನಿವಾಸಿ’ಗಳ  ಮನೆಯಂಗಳದ ತೆರೆಗಳ ಮೇಲೆ  ಭಾನುವಾರ, ಆಗಸ್ಟ್ ೯ ಕ್ಕೆ ತರಲು ಈ-ಜಗುಲಿ ಸಿದ್ಧವಾಯಿತು.

(ಜಗುಲಿಯನ್ನು ತೊಳೆದು, ಜಮಖಾನ ಹಾಸಿ, ಚಕ್ಕುಲಿ-ಕೋಡುಬಳೆ, ಮಂಡಾಳ್-ಒಗ್ಗರಣಿ ರೆಡಿ ಮಾಡಿದ ಮಜದ ಕೆಲಸವನ್ನು ಜೊತೆಗಾರ ರಾಮಶರಣ್ ಈ ಮುಂಚಿನ ಲೇಖನದಲ್ಲಿ ಹಂಚಿಕೊಂಡಿದ್ದಾರೆ.  
ಸೂ: ಕುಡಿಯಲಿಕ್ಕೆ, ಲೋಟದೊಳಗಿನ ಬಿಸಿ ಪೇಯವೋ, ಗಾಜಿನೊಳಗಿಂದ ತಣ್ಣಗಿಳಿದು ಒಳಗಿಂದ ಬಿಸಿ ಮಾಡುವ ಬಣ್ಣ-ಬಣ್ಣದ ರಸವೋ ಎಂಬುದನ್ನ ಅವರವರ ಆಯ್ಕೆಗೆ ಬಿಡುವದು ಕ್ಷೇಮವೆನಿಸಿ ಖಾಲಿ ಲೋಟ-ಗ್ಲಾಸುಗಳನ್ನಷ್ಟೇ ಒದಗಿಸಲಾಗಿತ್ತು!)

ಚಿತ್ರಕೃಪೆ: ಶ್ರೀ ಜಯಂತ  ಕಾಯ್ಕಿಣಿ

ಕಾರ್ಯಕ್ರಮದ ಆರಂಭ, ಜಯಂತರ ಆತ್ಮೀಯ ನಗುವಿನೊಂದಿಗೆ ಶುರುವಾದದ್ದು ಮೂವತ್ತಕ್ಕೂ ಹೆಚ್ಚು ಕಿಟಕಿಗಳಲ್ಲಿ ಇಣುಕುತ್ತಿದ್ದ ಮುಖಗಳ ನಗೆಯ ಹೊಳಪನ್ನ, ಕನ್ನಡಿ ಹರಡಿದ ಸೂರ್ಯನ  ಬೆಳಕಿನಂತೆ, ಹೆಚ್ಚಿಸಿತ್ತು. ಆ ಬೆಳಕಿನಲ್ಲಿ ಬೆಳೆದ ಈ-ಜಗುಲಿಯ ಪಟ್ಟಾಂಗ ಸುಮಾರು ಮೂರು ಘಂಟೆಗಳ ಕಾಲ ಇಳಿಜಾರಿನಲ್ಲಿ ಬ್ರೇಕಿಲ್ಲದೆ ರೊಯ್ಯನೆ ಸಾಗುವ ಸೈಕಲ್ಲಿನ ಸವಾರಿಯಂತೆ ಅತಿವೇಗದ ಪರಿ-ಪರಿಯ ಆನಂದೋತ್ಸಾಹದ ಪಯಣದ ಅನುಭವ ನೀಡುತ್ತಾ, ಮೆಲುಕಿಡುವ ಮನಸ್ಸಿಗೊಂದಿಷ್ಟು ಹೊಸ ಮೇವು ಕೊಡುತ್ತ ಸಾಗಿತ್ತು.

ಮೊದಲ ಭಾಗದಲ್ಲಿ, ಜಯಂತರು ಅವರ ಜೀವನದ ಇಲ್ಲಿನವರೆಗಿನ ಯಾನದ ಸ್ಪೂರ್ತಿದಾಯಕ ತುಣುಕುಗಳು, ಅವರಿಗೆ ತಿರುವು ನೀಡಿದ ಘಟನೆಗಳು, ಅವರನ್ನು ಬೆಳೆಸಿದ ಗೋಕರ್ಣ-ಮುಂಬೈ ಗಳ ಜೀವನದ ಸಾಮ್ಯತೆ ಮತ್ತು ವೈರುಧ್ಯತೆ, ಕಥೆ-ಕವನಗಳಲ್ಲಿ ಅವರು ಬೆಳೆದ ಮತ್ತು ಅವುಗಳು ಅವರನ್ನು ಬೆಳೆಸಿದ ಕಥನಗಳನ್ನ ಗೆಳೆಯರೊಂದಿಗೆ ಹರಟುವಷ್ಟು ಸ್ವಾಭಾವಿಕವಾಗಿ ಹಂಚಿಕೊಂಡರು. ಹೊಸಬರೊಂದಿಗೆ ಆತ್ಮೀಯವೆನಿಸುವಷ್ಟು ಮಾತನಾಡುವದು ಸಾರ್ವಜನಿಕ ಜೀವನಕ್ಕೆ ಒಗ್ಗಿಕೊಂಡವರಿಗೆ ಕಷ್ಟವೇನಲ್ಲ, ಆದರೆ, ಜಯಂತರ ಮಾತುಗಳಲ್ಲಿ ವಿಚಾರಗಳ, ಘಟನೆಗಳ ವಿಮರ್ಶಾತ್ಮಕ ವಿವರವಿತ್ತೇ ಹೊರತು, ಕೃತಕತೆಯ, ಸ್ವಪ್ರಶಂಸೆಯ ಧ್ವನಿಯ ನುಡಿಗಳಿರಲಿಲ್ಲ. ಆ ಒಳನೋಟದ ಸಾಮರ್ಥ್ಯವೇ ಅವರ ಕಥೆ-ಕವನಗಳಲ್ಲಿ ಹರಿಯುವ ಸಮತೆ-ಮಮತೆಗಳ ಸುಳಿಯ ಅಡಿ ಇರಬಹುದು; ಅದಿದ್ದರಷ್ಟೇ  ಜಗದ ಒಡೆದ ಕನ್ನಡಿಯ ಚೂರುಗಳಲ್ಲಡಗಿದ ಸೌಂದರ್ಯವನ್ನ ನಾವು ಕಾಣಬಹುದೇನೋ?

ಜಯಂತರ ತಂದೆ ಪ್ರಸಿದ್ಧ ಸಾಹಿತಿ ಗೌರೀಶ ಕಾಯ್ಕಿಣಿಯವರು. ಗೋಕರ್ಣದಲ್ಲಿ ಮೇಷ್ಟ್ರಾಗಿದ್ದ ಅವರ ಶಿಸ್ತಿನ ಜೀವನದ ಪ್ರಭಾವ ಮತ್ತು ಅವರಿಂದ ಕಲಿತ ಕೆಲವು ವಿಚಾರಗಳನ್ನು ಮೆಲುಕು ಹಾಕಿದರು. ಅದರಲ್ಲಿ ಮನಸಿಗೆ ಮುಟ್ಟಿದ್ದು, ಅವರು ಯಾವುದೇ ಖಾಲಿ ಹಾಳೆಯನ್ನ – ಬಿಲ್ಲಿರಲಿ, ಟಿಕೆಟ್ಟಿರಲಿ, ಕ್ಯಾಲೆಂಡರ್ ಇರಲಿ – ಎಸೆಯದೆ ಅದರಲ್ಲೇ ಕವನ, ಕಥೆ, ವರದಿಗಳನ್ನ ಬರೆಯುತ್ತಿದ್ದದ್ದು. ಅವರ ಆ ಅಭ್ಯಾಸವನ್ನ ಬಳುವಳಿ ಎಂಬಂತೆ  ಜಯಂತರೂ ಮುಂದುವರೆಸಿದ್ದಾರಂತೆ. ಇದು , ಯೋಚಿಸುವದಕ್ಕೆ ಮುನ್ನ ‘ಪ್ರಿಂಟ್’ ಒತ್ತುವ, ಎಲ್ಲವನ್ನೂ ‘ರೀ-ಸೈಕಲ್’ ಮಾಡುವ ನಮ್ಮ  ‘ತರುಣ’ ಸಮಾಜ ಅವಲೋಕಿಸಬೇಕಾದ ವಿಚಾರ. ಜಯಂತರು ಹಂಚಿಕೊಂಡ ಮತ್ತಷ್ಟು ವಿಚಾರಗಳಲ್ಲಿ ಅವರ ಮೇಲೆ ಅವರು ಬೆಳೆಯುವ ವಯಸ್ಸಿನಲ್ಲಿ ಅವರ ತಂದೆಯ ಪ್ರಭಾವ ತುಂಬಾ ಇತ್ತೆನ್ನುವದು ತಿಳಿಯುತ್ತದೆ. ತನ್ನ ಬೆಳೆಸಿದ ತಂದೆಯ ವಿಚಾರಗಳನ್ನು ನೆನಪಿಟ್ಟುಕೊಳ್ಳುತ್ತ, ಆ ವಿಚಾಗಳನ್ನು ಹರಡುತ್ತಾ ತಂದೆಯವರ ಅಕ್ಷರ-ಶ್ರೀಮಂತಿಕೆಯನ್ನು ಮತ್ತೆ ಹೊಸ ಜನರ ನೆನಪಿನಲ್ಲಿ ಬಿತ್ತಿ ಬೆಳಸುವದಕ್ಕಿಂತ ದೊಡ್ಡ ತರ್ಪಣ ಇನ್ನೊಂದಿಲ್ಲ, ಅಲ್ಲವೇ?

ತಾವು ಬೆಳೆದ ಗೋಕರ್ಣದ ಮೇಲೂ ಅಪಾರ ಪ್ರೀತಿ, ಜಯಂತರಿಗೆ. ಅಲ್ಲಿನ ರಥಬೀದಿ, ಅಲ್ಲಿಂದ ಹೊರಡುವ ಬಸ್ಸುಗಳು, ಅದರ ಯಾತ್ರಾರ್ಥಿಗಳು, ಆ ಮುಕ್ತಿ ಕ್ಷೇತ್ರದ ವೈವಿಧ್ಯಗಳು, ಹಿಡಿತಗಳು ಇವೆಲ್ಲವೂ ಹರಿದವು ಅವರ ಮಾತುಗಳಲ್ಲಿ. ಆ ಊರಿನ ಹಾಗೂ ಅವರ ವೃತ್ತಿ ಜೀವನದ ಮಹಾನಗರ ಮುಂಬೈ ನಡುವಿನ ಸಾಮ್ಯತೆ, ಭಿನ್ನತೆಗಳನ್ನ ನಮ್ಮೊಂದಿಗೆ ಹಂಚಿಕೊಂಡರು. ‘ಕೈಲಾಸವೇ ಕಾಯಕವೆಂಬ ಗೋಕರ್ಣದಿಂದ ನಾನು ಕಾಯಕವೇ ಕೈಲಾಸ’ ಎಂಬ ಮುಂಬೈಗೆ ಹೋದೆ ಎನ್ನುವ ಮಾತಿನಲ್ಲಿ ಮುಂಬೈ ಜೀವನ ಅವರನ್ನ ‘ಲಿಬರೇಟ್’ ಮಾಡಿ ಹೊಸ ಅರ್ಥ ನೀಡಿದ ಸ್ಥಳವೆಂದು ನೆನೆದರು. ಅಲ್ಲಿ ಯಾವ ಕೆಲಸ – ಸಂಬಳ?, ಎಲ್ಲಿ ಮನೆ – ಬಾಡಿಗೆಯೋ, ಸ್ವಂತದ್ದೋ, ಕಾರಿದೆಯೋ? – ಹೊಸತೋ, ಸೆಕೆಂಡ್ ಹ್ಯಾಂಡೊ?… ಹೀಗೆ ಅಳೆಯುವ ಪ್ರಶ್ನೆಗಳಲ್ಲಿ ವ್ಯಕ್ತಿಗಳನ್ನು ಹುಡುಕದ ಮತ್ತು ಆ ಕಾರಣಗಳಲ್ಲಿ ಜರೆಯದ ಸಮಾಜದ ಬಗ್ಗೆ ಅವರಿಗಿರುವ ಗೌರವ ಮತ್ತು ಮೆಚ್ಚುಗೆ ಅವರ ಮೇಲಿರುವ ಮುಂಬೈನ ಪ್ರಭಾವ ಮತ್ತು ಅವರ ಯಾಂತ್ರಿಕತೆಯ ಪದರದ ಕೆಳಗಿಳಿದು ನೋಡುವ ಜೀವನದ ದೃಷ್ಟಿಯ ಆಳವನ್ನ ತೋರಿಸುತ್ತದೆ. ಅವರ ಮುಂಬೈ ಜೀವನದ ಅನುಭವಗಳು ಅವರ ಕಥೆಗಳ ಪಾತ್ರಗಳಲ್ಲಿ ಬೆಳೆದಿವೆ. . ಬಹುಷಃ, ಡಿ.ವಿ.ಜಿ ಹೇಳಿದ:’ಅಸಮದಲಿ ಸಮತೆಯನು…’ ಎನ್ನುವದರ ನಿಜ ಉದಾಹರಣೆ ಇದು ಇರಬಹುದು. 

ಇಪ್ಪತ್ತು ವರ್ಷದ ಹಿಂದೆ ಅವರು ಹೈದ್ರಾಬಾದ್ ‘ಈ-ಟಿವಿ’ ಮಾರ್ಗವಾಗಿ ಬೆಂಗಳೂರಿಗೆ ‘ಮುಂಗಾರು ಮಳೆ’ ಹೊತ್ತುಕೊಂಡು ಬಂದ ಪಯಣವನ್ನ ನಮ್ಮ ಮುಂದೆ ಬಿಚ್ಚಿಟ್ಟು, ಅಲ್ಲಿಂದ ಶುರುವಾದ ಹಾಡು-ಕಟ್ಟುವ ಕಾಮಗಾರಿಯ ಕಷ್ಟ-ಸುಖಗಳನ್ನ ಹೇಳಿಕೊಂಡರು. ಬೆಂಗಳೂರು ಅವರಿಂದ ಹೊರ ತೆಗೆದ ಚಿತ್ರಗೀತೆಗಳು, ಚಿತ್ರ ಕಥೆಗಳು, ಸಂಪಾದಕತ್ವ ಮತ್ತು ಟಿ.ವಿ ಲೋಕದ ಹಲವು ರೀತಿಯ ಕಾರ್ಯಕ್ರಮಗಳು  ಅನಾವರಣಗೊಳಿಸಿದ ಗುಣಾತ್ಮಕ ವಿಮರ್ಶೆ ಮತ್ತು ಪ್ರೋತ್ಸಾಹಿಸುವ ಗುಣ ಅವರನ್ನ ಕರ್ನಾಟಕದ ಜನರಿಗೆ ಹತ್ತಿರವಾಗಿಸಿದೆ. ಮನಸ್ಸು ಹೊರಡಿಸುವ ಕಥೆ, ಕವನಕ್ಕಿಂತ, ಯಾರೋ ಬರೆದ ಮ್ಯೂಸಿಕ್ಕಿಗೆ ಹಾಡು ಕಟ್ಟುವದು ಕಷ್ಟದ ಕೆಲಸ ಎನ್ನುವದು ಅವರ ಅನಿಸಿಕೆ. ಅವರ ಹಾಡುಗಳಿಲ್ಲದೆ ಇದ್ದಿದ್ದರೆ ಈ ಶತಮಾನದ ಕನ್ನಡ ಗೀತೆಗಳ ಸ್ಥಿತಿ ಹೇಗಿರುತ್ತಿತ್ತು ಎನ್ನುವದು ನಾವು ಕೇಳದೆ ಉಳಿದ ಪ್ರಶ್ನೆ. ಆದರ ಉತ್ತರ ಕಷ್ಟದ್ದಲ್ಲ. 

ಮುಂದಿನ ಭಾಗ, ನಾವು ಎಂಟು ‘ವಿದ್ಯಾರ್ಥಿಗಳ’ ಕಥೆಯ ವಿಮರ್ಶೆ. ಅವರು ಅದನ್ನು ವಿಮರ್ಶಕನಂತೆ ಅಲ್ಲದೆ ಒಬ್ಬ ಓದುಗನಂತೆ ಅಭಿಪ್ರಾಯ ತಿಳಿಸುತ್ತೇನೆ ಎಂದದ್ದು ‘ಪರೀಕ್ಷೆಗೆ ಬಂದರೆ ಪಾಸ್’ ಎನ್ನುವಷ್ಟು ಸಮಾಧಾನ ಕೆಲವರಲ್ಲಿ (ಅಂದರೆ ನನ್ನಲ್ಲಿ!). ಎಲ್ಲ ಕಥೆಗಳನ್ನೂ ವಿವರವಾಗಿ ಕ್ರಿಟಿಸಿಸಂ ಮತ್ತು ಕ್ರಿಟಿಕ್ ಎರಡೂ ಅಲ್ಲದ ಪಾಸಿಟಿವ್ ಫೀಡ್ಬ್ಯಾಕ್ ರೀತಿಯಲ್ಲಿ ಕಥೆ ಹಿಡಿದಿಡುವ, ಅವರ ಮನ ಮುಟ್ಟಿದ ಮುಖ್ಯ ಅಂಶಗಳನ್ನ ವಿವರವಾಗಿ ಒಪ್ಪಿಸಿ, ಮತ್ತೆ ಬರೆಯಿರೆಂದು ಪ್ರೋತ್ಸಾಹಿಸಿ ಬೆನ್ನು ತಟ್ಟಿದರು. ನನ್ನ ಮಟ್ಟಿಗಂತೂ ಇದು ಮರೆಯಲಾರದ ಅನುಭವ. ತುಂಬಾ ವರ್ಷಗಳಿಂದ ಆಟೋಗ್ರಾಫ್ ಗೆಂದು ನಿಂತಿದ್ದ ಕ್ಯೂ ಕರಗಿ, ಆಟೋಗ್ರಾಫ್ ಜೊತೆಗೆ ಫೋಟೋ ತೆಗೆಸಿ ಹೆಸರಿಟ್ಟು ಕರೆದ ಅನುಭವ ; ಅದೂ  ಮತ್ತೆ ಮತ್ತೆ ಕೇಳಬಹುದಾದ, ಕೇಳಿಸಬಹುದಾದ ವಿಡಿಯೋ-ಆಟೋಗ್ರಾಫ್! ಜೀವನವೆಂದರೆ ಹೀಗೆಯೇ. ಕೆಲವೊಮ್ಮೆ ಬೆಲೆಕಟ್ಟಲಾಗದ  ಬಹುಮಾನಗಳು ಕೇಳದೆಯೇ ದೊರೆಯುತ್ತವೆ.

(ಆ ಕಥೆಗಳನ್ನ ನೀವು ಅನಿವಾಸಿ.ಕಾಮ್ ನಲ್ಲಿ ಓದಬಹುದು: https://wp.me/p4jn5J-2H0; https://wp.me/p4jn5J-2Ml; https://wp.me/p4jn5J-2G0; https://wp.me/p4jn5J-2IY) (ಮತ್ತು ಧ್ವನಿರೂಪದಲ್ಲಿ ಲೇಖನದ ಕೊನೆಯಲ್ಲಿ ಕೊಟ್ಟ ಕೊಂಡಿಯನ್ನು ಒತ್ತಿ ಆಲಿಸ ಬಹುದು)

ಕೊನೆಯ ಭಾಗ, ಪ್ರಶ್ನೋತ್ತರ: ತಮ್ಮ ಪ್ರಶೆಗಳಿಗೆ ದೊರೆಯುವ ಉತ್ತರದಲ್ಲಿ ಕಾಯ್ಕಿಣಿಯವರನ್ನ ತಿಳಿಯುವ ಪ್ರಯತ್ನ ‘ಅನಿವಾಸಿ’ ಬಳಗದವರಿಂದ. ಎಲ್ಲಾ ಪ್ರಶ್ನೆಗಳಿಗೂ ತಾಳ್ಮೆಯಿಂದ, ತಿಳಿ ಹಾಸ್ಯ ತುಂಬಿದ ಉತ್ತರ ಗಳನ್ನ ಪ್ರಶ್ನೆಗಳ ಧಾಟಿಗೆ ಸರಿಯಾಗಿ ಉತ್ತರಿಸುತ್ತಾ ತಮ್ಮ ಸ್ವಭಾವದ ಮತ್ತೊಂದು ಪುಟ ಜಯಂತರು ತೆರೆದಿಟ್ಟರು. ರಾಘವೇಂದ್ರ ಖಾಸನೀಸರ ತಬ್ಬಲಿಗಳು ಕಥೆಯನ್ನ ಎಲ್ಲರೂ ಓದಲೇ ಬೇಕಾದ ಕಥೆಯೆಂದೂ, ಅಹೋಬಲ ಶಂಕರರು ಕನ್ನಡಕ್ಕೆ ಅನುವಾದಿಸಿದ ರವೀಂದ್ರನಾಥ ಠಾಗೂರರ ಸಣ್ಣ ಕಥೆಗಳು ಅನುವಾದ ಸಾಹಿತ್ಯದ ಅತ್ಯುತ್ತಮ ನಿದರ್ಶನವೆಂದೂ, ಮತ್ತು ಈಗಿನ ಲೇಖಕರಲ್ಲಿ ಅಬ್ದುಲ್ ರಶೀದರ ಕಥೆಗಳನ್ನು ಅವರು ಓದಲು ಇಷ್ಟಪಡುತ್ತಾರೆಂದೂ ತಿಳಿಸಿದ್ದು, ನಮಗೆಲ್ಲ ಮುಂದೆ ಓದಬೇಕುನ್ನುವ ಪುಸ್ತಕಗಳನ್ನ ಪಟ್ಟಿ ಮಾಡಲು ಅನುಕೂಲವಾಯಿತು.

ಅನುವಾದಗಳ ಚರ್ಚೆಯ ಬಗ್ಗೆ ಬರೆವಾಗ  ನೆನಪಾಗಿದ್ದು, ಜಯಂತರ ಕೃತಿಗಳ ಇಂಗ್ಲಿಷ್ ಅನುವಾದದ ಪುಸ್ತಕ ‘ನೋ ಪ್ರೆಸೆಂಟ್ಸ್ ಪ್ಲೀಸ್’. ೨೦೧೭ರಲ್ಲಿ ಬಿಡುಗಡೆಯಾದ ಈ ಸಂಕಲನದ ಅಮೆರಿಕೆಯ ಆವೃತ್ತಿ ಈ ವರ್ಷದ ಜೂನ್ ನಲ್ಲಿ ಬೆಳಕು ಕಂಡಿತು. ಇನ್ನೆರಡು ತಿಂಗಳಲ್ಲಿ ಅದು ಇಂಗ್ಲೆಂಡಿನಲ್ಲಿ ಬಿಡುಗಡೆಯಾಗುವ ಸೂಚನೆಯಿದೆ. ಕನ್ನಡದ ಈ ಆಸ್ತಿ ಇಂಗ್ಲೀಷಷ್ಟೇ ಬಲ್ಲ ಕನ್ನಡಿಗರಿಗೂ, ಮತ್ತೆ ಇಂಗ್ಲಿಷ್ ಓದುವ ಮತ್ತೆಲ್ಲರ ಮನದಲ್ಲೂ ದಗಡೂ ಪರಬನ ಅಶ್ವದಂತೆ ಓಡಲಿ…

ಒಟ್ಟಾರೆ, ಜಯಂತರೊಂದಿಗೆ ಆತ್ಮೀಯವಾಗಿ ಸಮಯವನ್ನು ಮರೆತು ಮಾತನಾಡಿದ, ಅವರ ಮನದ ಮಾತುಗಳನ್ನು ಕೇಳಿದ ನೆನಪುಗಳು ಮೆಲುಕು ಹಾಕಿದಷ್ಟೂ ಬೆಳೆಯುತ್ತವೆ. ಹಾಗೆಯೇ, ಸಮಯ ಕಳೆದಂತೆ ವಿವರಗಳು ಮಾಸಿದರೂ ಏನೋ ಸಾಧಿಸಿದ ಸಮಾಧಾನವನ್ನು ಮಾತ್ರ ನಿರಂತರ ನೀಡುತ್ತಿರುತ್ತವೆ. ಅವರ ಮಾತುಗಳು, ಪಾತ್ರಗಳು, ಕವಿತೆಗಳು ಎಲ್ಲವೂ ಅವರ ನಂಬಿಕೆಯ ಸಾತ್ವಿಕ ಜೀವನ ತತ್ವದ ಜೊತೆಗೆ  ಬೆರೆತುಕೊಂಡಿವೆ. ಸಣ್ಣತಿನಲ್ಲಿ ಕೇಳಿದ್ದ ಶಿವರಾಂ ಕಾರಂತರ: ಮಾಡುವವನಿಂದ ಕಲಿ, ಬರಿ ಮಾತಾಡುವವನಿಂದಲ್ಲ, ಎನ್ನುವ ಅರ್ಥದ  ಮಾತುಗಳು ಜಯಂತ ಕಾಯ್ಕಿಣಿ ಯಂತಹ ಅಕ್ಷರ ಯೋಗಿಯ ಜೀವನವನ್ನ ನೋಡಿ ಕಲಿಯುವದು ಬಹಳಷ್ಟಿದೆ ಎನ್ನುವದನ್ನ ನೆನಪಿಸುತ್ತವೆ. ಅದನ್ನು ಅವರಿಂದಲೇ ತಿಳಿಯುವ ಹಾಗೆ ಆಗಿದ್ದು ನಮ್ಮ ಪುಣ್ಯ.     

ಮುರಳಿ ಹತ್ವಾರ್ 

(ಆ ಏಳೂ ಕಥೆಗಳ ಆಡಿಯೋವನ್ನು ಕೆಳಗಿನ ಕೊಂಡಿಯನ್ನು ಒತ್ತಿದರೆ ಕೇಳಬಹುದು. ಕೃಪೆ: ಮುರಳಿ ಹತ್ವಾರ್ -ಸಂ)

https://w.soundcloud.com/player/?url=https%3A//api.soundcloud.com/tracks/875421283&color=%23ff5500&auto_play=false&hide_related=false&show_comments=true&show_user=true&show_reposts=false&show_teaser=true&visual=true Shrivatsa Desai · Seven Short Stories