ಚುನಾವಣೆ ಮತ್ತು ಪ್ರಜಾಪ್ರಭುತ್ವ; ಕೆಲವು ಅನಿಸಿಕೆಗಳು

ಡಾ ಜಿ .ಎಸ್. ಶಿವಪ್ರಸಾದ್

ಬ್ರಿಟನ್ ದೇಶವನ್ನು ಒಳಗೊಂಡು ಪ್ರಪಂಚದ ಹಲವಾರು ರಾಷ್ಟ್ರಗಳಲ್ಲಿ ಈ ವರ್ಷ ಚುನಾವಣೆ ನಡೆಯುತ್ತಿದೆ. ಚುನಾವಣೆಯ ಬಗ್ಗೆ ಎಂದಿಗಿಂತ ಇಂದು ಎಲ್ಲರಲ್ಲಿ ಹೆಚ್ಚಿನ ಆಸಕ್ತಿ ಇದೆ ಎಂದು ತೋರುತ್ತದೆ. ಸುದ್ದಿ ಮಾಧ್ಯಮ, ಸೋಶಿಯಲ್ ಮೀಡಿಯಾಗಳಲ್ಲಿ ನಿರಂತರವಾಗಿ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂಗ್ಲೆಂಡಿನ ಡಿಸೆಂಬರ್ ತಿಂಗಳಲ್ಲಿ ಹೇಗೆ  ಕ್ರಿಸ್ಮಸ್ ಹಬ್ಬದ ಸಡಗರ  ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೆ ಈಗ ಚುನಾವಣೆ ಬಿಸಿಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಅನಿವಾಸಿ ತಾಣದಲ್ಲೂ ಅದರ ಬಿಸಿ ನಿಮಗೆ ನನ್ನ ಈ ಲೇಖನದ ಮೂಲಕ ತಾಗುತ್ತಿರಬಹುದು. ಚುನಾವಣೆ ಮತ್ತು ಪ್ರಜಾಪ್ರಭುತ್ವ ಈ ಎರಡೂ ವಿಷಯಗಳ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇಲ್ಲಿ ಬ್ರಿಟನ್ ಚುನಾವಣೆಯಲ್ಲದೆ ಒಂದು ಗ್ಲೋಬಲ್ ಪೆರ್ಸ್ಪೆಕ್ಟಿವ್ ಒದಗಿಸುವ ಪ್ರಯತ್ನ ಮಾಡಲಾಗಿದೆ. ಸ್ವಲ್ಪ ದೀರ್ಘವಾದ ಲೇಖನ, ಬಿಡುವಿನಲ್ಲಿ ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. 
-ಸಂ
2024, ಚುನಾವಣೆಗಳ ಹಿನ್ನೆಲೆಯಲ್ಲಿ ನೆನಪಿಡಬೇಕಾದ ಸಂವತ್ಸರ. ಈ ವರುಷ 64 ರಾಷ್ಟ್ರಗಳಲ್ಲಿ ಚುನಾವಣೆ
ನಡೆಯುತ್ತಿದೆ. ಒಟ್ಟಾರೆ ಪ್ರಪಂಚದ ಅರ್ಧ ಜನಸಂಖ್ಯೆ (49%) ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರೆ ಈ ಕಾಲಘಟ್ಟ ರಾಜಕೀಯವಾಗಿ ಮಹತ್ವವಾದದ್ದು. ರಷ್ಯಾ, ದಕ್ಷಿಣ ಆಫ್ರಿಕಾ, ಮೆಕ್ಸಿಕೋ, ಇಂಡಿಯಾ, ಬಾಂಗ್ಲಾದೇಶ, ಮತ್ತು ಪಾಕಿಸ್ತಾನದಲ್ಲಿ ಚುನಾವಣೆ ಮುಗಿದಿದೆ. ಬ್ರಿಟನ್ನಿನಲ್ಲಿ ಜುಲೈ ನಾಲ್ಕನೇ ತಾರೀಕು ಜನ ಮತ ನೀಡಲಿದ್ದಾರೆ. ಅಮೇರಿಕದಲ್ಲಿ ನವೆಂಬರ್ ಐದನೇ ತಾರೀಕು ಚುನಾವಣಾ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡೆ ಇನ್ನು ಕೆಲವೇ ವಾರಗಳಲ್ಲಿ ಶುರುವಾಗಬೇಕು ಈ ಮಧ್ಯೆ ಅಲ್ಲಿಯ ಅಧ್ಯಕ್ಷರಾದ ಮಕರೂನ್ ಅವರು ಹಠಾತ್ತನೆ ಎಲೆಕ್ಷನ್ ಘೋಷಿಸಿ ಜೂನ್ ಕೊನೆ ಮತ್ತು ಜುಲೈ ಶುರುವಿನಲ್ಲಿ ಚುನಾವಣೆಗೆ ಕರೆ ನೀಡಿದ್ದಾರೆ. 2024ರಲ್ಲಿ ಇಲ್ಲಿ ಪಟ್ಟಿಮಾಡಲಾಗದಷ್ಟು ರಾಷ್ಟ್ರಗಳು ಚುನಾವಣೆಯಲ್ಲಿ ಭಾಗವಹಿಸುತ್ತಿದೆ.

ಬ್ರಿಟನ್ನಿನ ಪ್ರಜಾಪ್ರಭುತ್ವ ಮತ್ತು ಪಾರ್ಲಿಮೆಂಟ್ ವ್ಯವಸ್ಥೆಯನ್ನು "ಮದರ್ ಆಫ್ ಪಾರ್ಲಿಮೆಂಟ್ಸ್” ಎಂದು ಭಾವಿಸಲಾಗಿದೆ. ಇದಕ್ಕೆ ಇಲ್ಲಿಯ ಕೆಲವು ಐತಿಹಾಸಿಕ ಹಿನ್ನೆಲೆಗಳು ಕಾರಣವಾಗಿದೆ. 1215ರಲ್ಲಿ ಮ್ಯಾಗ್ನಕಾರ್ಟ ಎಂಬ ದಾಖಲೆಯನ್ನು ಲಂಡನ್ ಸಮೀಪದ ರನ್ನಿಮೀಡ್ ಎಂಬ ಪ್ರದೇಶದಲ್ಲಿ ಮೊದಲು ಬರೆಯಲಾಯಿತು. ಎಲ್ಲರಿಗು ತಿಳಿದ ಮಟ್ಟಿಗೆ ಇದು ಪಾರ್ಲಿಮೆಂಟ್ ಮತ್ತು ಪ್ರಜಾಪ್ರಭುತ್ವದ ಮೊದಲ ಕಲ್ಪನೆ. ಅಂದಹಾಗೆ ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಹುಟ್ಟುಹಾಕಿದ ಅನುಭವ ಮಂಟಪ ಕೂಡ ಒಂದು ರೀತಿ ಪ್ರಜಾಪ್ರಭುತ್ವದ ಪರಿಕಲ್ಪನೆ ಎಂದು ಭಾವಿಸಲಾಗಿದೆ. ಇಂಗ್ಲೆಂಡಿನಲ್ಲಿ ಆಗಿನ ಕಾಲಕ್ಕೆ ರಾಜರು ಕೂಡ ನ್ಯಾಯಕ್ಕೆ ಬದ್ಧರಾಗಿರಬೇಕು, ಅದನ್ನು ಗೌರವಿಸಿ ಆಡಳಿತ ನಡೆಸಬೇಕು ಎಂಬ ವಿಚಾರವನ್ನು ಮ್ಯಾಗ್ನ ಕಾರ್ಟದಲ್ಲಿ ಪ್ರಸ್ತಾಪಿಸಲಾಗಿದೆ. 1264ರಲ್ಲಿ ಸೈಮನ್ ಡಿ ಮೊಂಟ್ಫಾರ್ಡ್ ಎಂಬ ರಾಜ ತನ್ನ ಆಳ್ವಿಕೆಯಲ್ಲಿ ಸರಿ-ತಪ್ಪುಗಳನ್ನು ಚರ್ಚಿಸಲು ಜನರ ಪ್ರತಿನಿಧಿಗಳನ್ನು ಆಹ್ವಾನಿಸಿದ್ದು ಈ ಮ್ಯಾಗ್ನ ಕಾರ್ಟ ಹಿನ್ನೆಲೆಯಲ್ಲೇ ಎಂದು ಇತಿಹಾಸ ಹೇಳುತ್ತದೆ. 18ನೇ ಶತಮಾನದಲ್ಲಿ ಬ್ರಿಟನ್ನಿನ ಪಾರ್ಲಿಮೆಂಟ್ ಸಾಕಷ್ಟು ಪರಿಶೀಲನೆಗೊಂಡಿತು. 1605ರಲ್ಲಿ ಮೊದಲನೇ ಜೇಮ್ಸ್ ದೊರೆ ಕ್ಯಾಥೋಲಿಕ್ ಕ್ರಿಶ್ಚಿಯನ್ ಗಳಿಗೆ ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ವೆಸ್ಟ್ ಮಿನಿಸ್ಟರ್ ಅರಮನೆಯಲ್ಲಿ ನಡೆಯಬೇಕಾಗಿದ್ದ ಪಾರ್ಲಿಮೆಂಟ್ ಸಭೆಯನ್ನು ಗನ್ ಪೌಡರ್ ಬಳಸಿ ಸ್ಫೋಟ ಗೊಳಿಸಿ ಕೊಲೆ ಮತ್ತು ಹಿಂಸೆಯ ಸಂಚನ್ನು ಕೆಲವು ಕ್ರಾಂತಿಕಾರರು ಹೂಡಿದ್ದರು. ಅದೃಷ್ಟವಶತ್ ಈ ಸುದ್ದಿ ಬಹಿರಂಗಗೊಂಡು ಈ ಭಯೋತ್ಪಾದಕರನ್ನು ಗುರುತಿಸಿ ಅದರ ನಾಯಕನಾದ ಗೈ ಫ್ಯಾಕ್ಸ್ ಎಂಬ ವ್ಯಕ್ತಿಗೆ ಗಲ್ಲು ಶಿಕ್ಷೆಯಾಯಿತು. ಪಾರ್ಲಿಮೆಂಟ್ ವ್ಯವಸ್ಥೆಯ ಉಳಿವನ್ನು ನವೆಂಬರ್ 5ನೇ ತಾರೀಕು ರಾಷ್ಟ್ರೀಯ ದಿನಾಚರಣೆಯಾಗಿ ಅಂದಿನಿಂದ ಇಂದಿನವರೆಗೂ ಆಚರಿಸಲಾಗುತ್ತದೆ.

ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯುತ್ತಿರುವ ಬ್ರಿಟನ್ನಿನಲ್ಲಿ ಸಡಗರ, ಸಂಭ್ರಮ, ಕಾತರತೆ ಹೆಚ್ಚಾಗಿದೆ. ಸುದ್ದಿಮಾಧ್ಯಮಗಳು ಎಲೆಕ್ಷನ್ ವಿಚಾರವನ್ನು ವಿಶ್ಲೇಷಿಸುವುದರಲ್ಲಿ ನಿರತವಾಗಿದೆ. 650 ಎಂಪಿಗಳ ಸ್ಥಾನಕ್ಕೆ ಸ್ಪರ್ಧೆ ನಡೆಯುತ್ತಿದೆ. ಕಳೆದ 2019 ಚುನಾವಣೆಯಲ್ಲಿ 47.5 ಮಿಲಿಯನ್ ಜನರು ಭಾಗವಹಿಸಿದ್ದರು. ಅದೇ ಭಾರತದಲ್ಲಿ 543 ಸ್ಥಾನಕ್ಕೆ ಸ್ಪರ್ಧೆ ನಡೆದು 968 ಮಿಲಿಯನ್ ಜನರು ಮತ ನೀಡಿದ್ದಾರೆ ಎಂಬುದನ್ನು ಇಲ್ಲಿ ಹೋಲಿಕೆಗಾಗಿ ಪ್ರಸ್ತಾಪಿಸಲಾಗಿದೆ. ಬ್ರಿಟನ್ನಿನಲ್ಲಿ ಕಳೆದ 14 ವರ್ಷಗಳಿಂದ ಕನ್ಸರ್ವೇಟಿವ್ ಪಕ್ಷ ಮೂರು ಚುನಾವಣೆಗಳನ್ನು ಗೆದ್ದು ಅಧಿಕಾರದಲ್ಲಿದೆ. ಈ ಒಂದು ಅವಧಿಯಲ್ಲಿ ಐದು ಪ್ರಧಾನಿಗಳನ್ನು ಕಂಡಿದೆ. ಇವರ ಆಡಳಿತದಲ್ಲಿ ಬ್ರೆಕ್ಸಿಟ್ ಸಂಭವಿಸಿದ್ದು ಇಲ್ಲಿಯ ಬಲಪಂಥ ರಾಷ್ಟ್ರವಾದಿಗಳಿಗೆ ಹೆಮ್ಮೆಯ ವಿಷಯವಾದರೂ ಬ್ರೆಕ್ಸಿಟ್ ತಂದಿಟ್ಟಿರುವ ಸಮಸ್ಯೆಗಳನ್ನು ಈಗ ಎದುರಿಸುತ್ತಿದ್ದೇವೆ. ಬ್ರೆಕ್ಸಿಟ್ ನಂತರದ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷ ಬಹುಮತದಿಂದ ಆಯ್ಕೆಯಾಗಿ ಬೋರಿಸ್ ಜಾನ್ಸನ್ ಪ್ರಬಲವಾದ ಪ್ರಧಾನಿಯಂತೆ ಕಂಡುಬಂದರು. 2020 ಸಂವತ್ಸರದ ಹೊತ್ತಿಗೆ ವಿಶ್ವವನ್ನೇ ವ್ಯಾಪಿಸಿದ ಕೋವಿಡ್ ಪಿಡುಗು ಬರಿಯ ಅರೋಗ್ಯ ಸಮಸ್ಯೆಯಾಗದೆ ಅದು ರಾಜಕೀಯ ಸಮಸ್ಯೆಯಾಗಿಯೂ ಪರಿಣಮಿಸಿತು. ಬೋರಿಸ್ ಜಾನ್ಸನ್ ಅವರೇ ಕೋವಿಡ್ ಖಾಯಿಲೆಯಿಂದ ಸಾವಿನ ಅಂಚಿಗೆ ಹೋಗಿ ಬರಬೇಕಾಯಿತು. ಕೋವಿಡ್ ಪಿಡುಗಿನ ಮಧ್ಯದಲ್ಲಿ ಬೋರಿಸ್ ತಮ್ಮ ಕಚೇರಿಯಲ್ಲಿ ಒಂದು ಸಣ್ಣ ಪಾರ್ಟಿ ಇಟ್ಟುಕೊಂಡು ವೈನ್ ಮತ್ತು ಚೀಸ್ ಸೇವಿಸಿದ್ದು ಅದು ಕೋವಿಡ್ ನಿರ್ಬಂಧದ ಉಲ್ಲಂಘನೆಯಾಗಿ ಈ "ಪಾರ್ಟಿಗೇಟ್" ಹಗರಣ ಒಂದು ದೊಡ್ಡ ಅಪರಾಧವಾಗಿ ಬೋರಿಸ್ ರಾಜೀನಾಮೆ ನೀಡಬೇಕಾಯಿತು. ಈ ಘಟನೆಯನ್ನು ಗಮನಿಸಿದಾಗ ಬೇರೆ ದೇಶಗಳಲ್ಲಿ ಸರ್ಕಾರ ಕೋವಿಡ್ ನಿರ್ಬಂಧನೆಗಳನ್ನು ಗಾಳಿಗೆ ತೂರಿರುವ ಪ್ರಸಂಗಗಳಿವೆ; ಭಾರತದಲ್ಲಿ ಕೋವಿಡ್ ಅತಿಯಾಗಿರುವ ಸಮಯದಲ್ಲಿ ಪ್ರಧಾನಿಯವರು ಸಹಸ್ರಾರು ಜನರು ಕುಂಭಮೇಳವನ್ನು ಆಚರಿಸಲು ಅನುಮತಿ ಕೊಟ್ಟರಲ್ಲವೇ? ಆ ಹಿನ್ನೆಲೆಯಲ್ಲಿ ಅವರು ರಾಜಿನಾಮೆ ನೀಡಬೇಕಾಗಿತ್ತಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಅಮೇರಿಕ ಅಧ್ಯಕ್ಷ ಟ್ರಂಪ್ ಕೂಡ ಕೋವಿಡ್ ನಿರ್ಬಂಧನೆಗಳನ್ನು ಉಲ್ಲಂಘಿಸಿರುವ ಸನ್ನಿವೇಶಗಳಿವೆ. ಒಂದೊಂದು ದೇಶದಲ್ಲಿ ಈ ನೈತಿಕ ಹೊಣೆಗಾರಿಕೆ ಮತ್ತು ರಾಜಕೀಯ ಮೌಲ್ಯಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಓದುಗರು ಗಮನಿಸಬಹುದು. ಬ್ರಿಟನ್ ಕೆಲವು ಆದರ್ಶಗಳನ್ನು ತಾನು ಅನುಸರಿಸುತ್ತಿದ್ದು ಇತರ ದೇಶಗಳಿಗೆ ಮಾದರಿಯಾಗಿದೆ. ಇದು ಶ್ಲಾಘನೀಯವಾದ ವಿಷಯ. ಕೋವಿಡ್ ತಂದ ಆರ್ಥಿಕ ತೊಂದರೆಗಳು ಮತ್ತು ರಷ್ಯಾ-ಯುಕ್ರೈನ್ ಯುದ್ಧ ಅನೇಕ ತೊಡಕುಗಳನ್ನು ತಂದು ಕನ್ಸರ್ವೇಟಿವ್ ಪಕ್ಷ ಬಲಹೀನವಾಯಿತು. ಇದರ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಕ್ಷದೊಳಗೆ ಬಿರುಕುಗಳು, ಒಳಜಗಳಗಳು ಶುರುವಾದವು. ಬ್ರಿಟನ್ನಿನಲ್ಲಿ ಹಣದುಬ್ಬರ 11% ವರೆಗೂ ಹೆಚ್ಚಿ ದಿನನಿತ್ಯ ಬದುಕು (ಕಾಸ್ಟ್ ಆಫ್ ಲಿವಿಂಗ್) ತೊಂದರೆಗಳು ಉಂಟಾದವು. ಅದನ್ನು ರಿಷಿ ಸುನಾಕ್ ಅವರು ಯಶಸ್ವಿಯಾಗಿ ನಿಭಾಯಿಸಿದರೂ ಬರಲಿರುವ ಚುನಾವಣೆಯಲ್ಲಿ ಅವರು ಗೆದ್ದು ಬರುವ ಸಾಧ್ಯತೆ ಕಡಿಮೆ ಎಂದು ಜನಾಭಿಪ್ರಾಯ ಸಮೀಕ್ಷೆ ವರದಿಮಾಡಿವೆ.

ಒಂದು ಚುನಾವಣೆಯಲ್ಲಿ ಜನರಿಗೆ ಯಾವ ಅಂಶಗಳು ಮುಖ್ಯವಾಗುತ್ತವೆ ಎನ್ನುವುದು ಸ್ವಾರಸ್ಯಕರವಾಗಿದೆ. ಜನರಿಗೆ ಒಂದು ಪಕ್ಷದ ಸಾಮಾಜಿಕ ಧೋರಣೆಗಳು ಮುಖ್ಯವೋ? ಪಕ್ಷದ ಮಹಾನ್ ನಾಯಕನ ವರ್ಚಸ್ಸು ಮುಖ್ಯವೋ? ಪ್ರಜಾ ಪ್ರಭುತ್ವ ಮೌಲ್ಯಗಳು ಮತ್ತು ಸಂವಿಧಾನ ರಕ್ಷಣೆ ಮುಖ್ಯವೋ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಇವೆಲ್ಲವನ್ನೂ ಮೀರಿ ಜನರು ತಮ್ಮ ದಿನ ನಿತ್ಯ ಬದುಕಿನ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬಲ್ಲ ರಾಜಕೀಯ ಪಕ್ಷಕ್ಕೆ ಮತ ನೀಡುವುದು ಸಹಜ. ಸಮಸ್ಯೆ ಎನ್ನುವುದು ವೈಯುಕ್ತಿಕ ಗ್ರಹಿಕೆ. ಬಡವರಿಗೆ ಹಸಿವು, ಮಾಳಿಗೆ, ಉದ್ಯೋಗ ಮತ್ತು ದಿನ ನಿತ್ಯ ಬದುಕೇ ಒಂದು ಸಮಸ್ಯೆಯಾದರೆ, ಹೊಟ್ಟೆ ತುಂಬಿದ ಮಧ್ಯಮ ವರ್ಗದವರ ಸಮಸ್ಯೆಯೇ ಬೇರೆ. ಶ್ರೀಮಂತರ ಸಮಸ್ಯೆ ಬೇರೆಯೇ ಆಗಿರುತ್ತದೆ. ಅದು ತೆರಿಗೆಗೆ ಸಂಬಂಧಿಸಿರುವ ವಿಷಯ ವಾಗಿರಬಹುದು. ವೈಯುಕ್ತಿಕ ನೆಲೆಯಲ್ಲಿ ಸಮಸ್ಯೆಗಳು ಒಂದು ರೀತಿಯದಾಗಿದ್ದರೆ ಸಾಮೂಹಿಕ ನೆಲೆಯಲ್ಲಿ; ಅಂತರಾಷ್ಟ್ರೀಯ ಘಟನೆಗಳು, ವಲಸೆ, ದೇಶದ ಗಡಿಗಳ ರಕ್ಷಣೆ, ಜಾಗತಿಕ ತಾಪಮಾನ ಸಮಸ್ಯೆಗಳಾಗಬಹುದು. ಜನರ ನಿರೀಕ್ಷೆ ಅಪೇಕ್ಷೆಗಳನ್ನು ಗುರುತಿಸಿ ಒಂದು ರಾಜಕೀಯ ಪಕ್ಷ ತನ್ನ ಆದ್ಯತೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಸೂಚಿಸಬೇಕು. ತಮ್ಮ ಪಕ್ಷ ಹೇಗೆ ಅದನ್ನು ನಿಭಾಯಿಸಲು ಅರ್ಹ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಬೇಕು. ಅಭ್ಯರ್ಥಿಗಳು ತಾವು ಹೇಗೆ ಇದಕ್ಕೆ ಪರಿಹಾರ ಕೊಡಬಹುದು ಎಂಬುದನ್ನು ಅವರು ಸಾಬೀತುಪಡಿಸಬೇಕು. ಇದಕ್ಕೆ ಪೂರಕವಾಗಿ ಚುನಾವಣಾ ಪ್ರಚಾರಕ್ಕೆ ಬೇಕಾದ ಸಮಯ ಮತ್ತು ಅವಕಾಶವನ್ನು ಆಡಳಿತವು ವ್ಯವಸ್ಥೆ ಮಾಡಿರುತ್ತದೆ. ಬ್ರಿಟನ್ ದೇಶವನ್ನು ಒಳಗೊಂಡು ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಟಿವಿ ಚುನಾವಣಾ ಚರ್ಚೆ ವ್ಯವಸ್ಥಿತವಾಗಿ ನಡೆಯುತ್ತದೆ. ಬ್ರಿಟನ್ನಿನಲ್ಲಿ ಈಗ ನಡೆಯುತ್ತಿರುವ ಟಿವಿ ಚರ್ಚೆ ಉತ್ತಮ ಗುಣಮಟ್ಟದ್ದಾಗಿದೆ. ಕನ್ಸರ್ವೇಟಿವ್ ಪಕ್ಷದ ಪ್ರಧಾನಿ ರಿಷಿ ಸುನಾಕ್ ಮತ್ತು ಲೇಬರ್ ಪಕ್ಷದ ಕಿಯರ್ ಸ್ಟಾರ್ಮರ್ ಅವರ ನಡುವಿನ ಚರ್ಚೆ ಸ್ವಾರಸ್ಯಕರವಾಗಿತ್ತು, ಬಹಳ ಸಭ್ಯವಾಗಿ ಘನವಾಗಿತ್ತು. ಈ ಚರ್ಚೆಗಳಲ್ಲಿ ಕೆಲವೊಮ್ಮೆ ಮಾತುಗಳ ಅತಿಕ್ರಮಣವಾದಾಗ, ಉದ್ವೇಗ ಹೆಚ್ಚಿದಾಗ ಅದನ್ನು ನಿಯಂತ್ರಿಸುವ ಹಿರಿಯ ಪತ್ರಕರ್ತರು ಅಭ್ಯರ್ಥಿಗಳಗೆ (ದೇಶದ ಪ್ರಧಾನಿಯಾದರೂ) ಎಚ್ಚರಿಕೆ ನೀಡುವಷ್ಟು ಪ್ರಬಲರಾಗಿರುತ್ತಾರೆ. ಅದೇ ಭಾರತದಲ್ಲಿ ಪ್ರಧಾನಿ ಎಂದಕೂಡಲೇ ಅವರನ್ನು ದೇವರಂತೆ ಕಾಣುತ್ತೇವೆ. ಅವರು ಪ್ರಶ್ನಾತೀತರು ಎಂಬ ಭಾವನೆಯಲ್ಲಿ ಸಂದರ್ಶನಗಳು ನಡೆಯುತ್ತವೆ. ಭಾರತದಲ್ಲಿ ಆಳುವ ಪಕ್ಷ, ವಿರೋಧ ಪಕ್ಷ ಮುಖಾ-ಮುಖಿ ಸಂವಾದದಲ್ಲಿ ತೊಡಗುವುದು ಬಹಳ ಕಷ್ಟ. ಅಲ್ಲಿ ಸ್ವಾಭಿಮಾನ ಮತ್ತು ಪ್ರತಿಷ್ಠೆಗಳ ಸಂಘರ್ಷಣೆಯಾಗಿ, ರಣ-ರಂಗವಾಗಿ ಮಾರ್ಪಾಡಾಗಬಹುದು. ಪರಸ್ಪರ ವಿಶ್ವಾಸ ಮತ್ತು ಗೌರವವನ್ನು ರಾಜಕಾರಣಿಗಳು ಉಳಿಸಿಕೊಂಡರೆ ಅಲ್ಲಿ ಒಂದು ಘನತೆ ಇರುತ್ತದೆ. ಭಾರತದಲ್ಲಿ ಎನ್ಡಿಟಿವಿ ನಡೆಸುವ ಚರ್ಚೆಗಳಲ್ಲಿ ಎರಡು ಪಕ್ಷಗಳ ವಕ್ತಾರರು ಭಾಗವಹಿಸಿದಾಗ ಅವರ ನಡುವಿನ ಕೂಗಾಟ, ಅಸಹನೆ, ಒಬ್ಬರು ಮಾತನಾಡುತ್ತಿದ್ದಾಗ ತಮ್ಮ ಸರದಿಗೆ ಕಾಯದೆ ಇನ್ನೊಬ್ಬರ ಮಾತಿನ ಮಧ್ಯೆ ಬಾಯಿಹಾಕುವುದು ನೋಡುಗರಿಗೆ ಮುಜುಗರವನ್ನು ನೀಡುವಂಥದ್ದು. ಬ್ರಿಟನ್ನಿನಲ್ಲಿ ಬಿಬಿಸಿ, ಸ್ಕೈ ಮತ್ತು ಐಟಿವಿ ನಡೆಸುವ ಚರ್ಚೆಗಳಲ್ಲಿ ಕೆಲವೊಮ್ಮೆ ಪಕ್ಷದ ಇತರ ಪ್ರತಿನಿಧಿಗಳು, ಮಂತ್ರಿಗಳು ಭಾಗವಹಿಸುತ್ತಾರೆ. ಇಲ್ಲಿ ನಡೆವ ಚರ್ಚೆಯಲ್ಲಿ ಹೆಚ್ಚು ಉದ್ವೇಗವಿಲ್ಲದೆ, ಒಬ್ಬರು ಇನ್ನೊಬ್ಬರನ್ನು ಹೀಯಾಳಿಸುವುದು ಒಂದು ಮಿತಿಯಲ್ಲಿ ನಡೆಯುತ್ತದೆ. ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಗೌರವ ವಿಶ್ವಾಸಗಳಿರುತ್ತವೆ. ಮುಖ್ಯವಾಗಿ ಆಹ್ವಾನಿತ ಜನ ಸಾಮಾನ್ಯರು ಪ್ರಧಾನಿಯನ್ನು ಒಳಗೊಂಡಂತೆ ಎಲ್ಲ ಹಿರಿಯ. ರಾಜಕಾರಣಿಗಳ ಜೊತೆ ಸಂವಾದಕ್ಕೆ ತೊಡಗಬಹುದು. ಪ್ರಶ್ನೆಗಳನ್ನು ಮುಂದಾಗಿ ಆಯ್ಕೆಮಾಡಿರುತ್ತಾರೆ. ಯು.ಕೆ ಯ ಚುನಾವಣೆ ಪ್ರಚಾರ ಕಾರ್ಯವು ಪಕ್ಷಪಾತ, ಹೆದರಿಕೆ, ಬೆದರಿಕೆ, ಗೂಂಡಾಗಿರಿ ಇವುಗಳಿಂದ ಮುಕ್ತವಾಗಿದೆ. ಯು.ಕೆಯಲ್ಲಿ ಧರ್ಮ ಮತ್ತು ರಾಜಕೀಯ ಇವು ಎರಡು ಬೇರೆ ವಿಚಾರವಾಗಿದ್ದಾರೂ ಇಲ್ಲಿಯ ಕೆಲವು ಪ್ರದೇಶದಲ್ಲಿ ಇಸ್ಲಾಮ್ ಧರ್ಮದವರು ದೂರದ ಪ್ಯಾಲೆಸ್ಟೈನ್ ಇಸ್ರೇಲ್ ಘರ್ಷಣೆಯನ್ನು ಬ್ರಿಟನ್ನಿನ ರಾಜಕಾರಣದೊಳಗೆ ಮತ್ತು ಚುನಾವಣೆಯ ಒಳಗೆ ತರುವ ಪ್ರಯತ್ನವನ್ನು ಮಾಡುತ್ತಿರುವುದು ಮತ್ತು ಕೆಲವು ಸಂಘಟನೆಗಳು ‘ಹಿಂದೂಸ್ ಫಾರ್ ಲೇಬರ್’ ಎಂದು ಪ್ರಚಾರ ಕೈಗೊಂಡಿರುವುದು ವಿಷಾದದ ಸಂಗತಿ. ಧರ್ಮವನ್ನು ರಾಜಕೀಯ ಮತ್ತು ಚುನಾವಣೆಯೊಂದಿಗೆ ತಳುಕು ಹಾಕುವುದು ಸರಿಯಲ್ಲ.


ಈ ಬಾರಿ ಬ್ರಿಟನ್ನಿನ ಚುನಾವಣೆಯಲ್ಲಿ ಯಾವ ರೀತಿಯ ವಿಷಯಗಳು ಜನರಿಗೆ ಪ್ರಸ್ತುತವಾಗಿದೆ ಎಂಬುದರ ಬಗ್ಗೆ ಗಮನ ಹರಿಸೋಣ. ಮೇಲೆ ಪ್ರಸ್ತಾಪಿಸಿದ ಹಾಗೆ ಕೋವಿಡ್ ಪಿಡುಗು ನಂತರದ ಸಮಯದಲ್ಲಿ ಹಣದ ಉಬ್ಬರ ಅತಿಯಾಗಿ ಯುಕ್ರೈನ್-ರಷ್ಯಾ ಯುದ್ಧವೂ ಈ ಹಣದುಬ್ಬರಕ್ಕೆ ಕಾರಣವಾಗಿದೆ. ಅನಿಲ ಮತ್ತು ತೈಲಗಳ ಬೆಲೆ ವಿಪರೀತ ಹೆಚ್ಚಾಗಿ ಸಾರಿಗೆ ವ್ಯವಸ್ಥೆ ದುಬಾರಿಯಾಗಿ ದಿನನಿತ್ಯ ಆಹಾರ ಮತ್ತು ಬಳಕೆ ವಸ್ತುಗಳ ಬೆಲೆ ಏರಿದೆ. ಈ ಹಣದ ಉಬ್ಬರಗಳ ನಡುವೆ ಮುಂದಕ್ಕೆ ಬರುವ ಪಕ್ಷ ತೆರಿಗೆಗಳನ್ನು ಜಾಸ್ತಿ ಮಾಡ ಬಹುದೇ ಎಂಬ ಆತಂಕವಿದೆ. ನಮ್ಮ ರಾಷ್ಟ್ರೀಯ ಅರೋಗ್ಯ ಸಂಸ್ಥೆಯಲ್ಲಿ ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳ ಕೊರತೆಯಿಂದ ರೋಗಿಗಳಿಗೆ ಹೆಚ್ಚಿನ ಅನಾನುಕೂಲಗಳ ಮತ್ತು ಕಷ್ಟ ನಷ್ಟಗಳು ಸಂಭವಿಸಿವೆ. ಹೀಗಾಗಿ ಇದು ಈಗಿನ ಚುನಾವಣೆಯಲ್ಲಿ ಬಹುದೊಡ್ಡದಾದ ವಿಷಯ. ಇದನ್ನು ಪುನರುತ್ಥಾನ ಗೊಳಿಸುವ ಆಶ್ವಾಸನೆಯನ್ನು ಎಲ್ಲ ಪಕ್ಷಗಳು ನೀಡುತ್ತಿವೆ. ಬ್ರೆಕ್ಸಿಟ್ ನಂತರದ ಸಮಯದಲ್ಲಿ ವೈದ್ಯರ ಮತ್ತು ನರ್ಸ್ ಗಳ ಕೊರತೆ ಉಂಟಾಗಿದೆ, ವೈದ್ಯರು ಹೆಚ್ಚಿನ ಸಂಬಳವನ್ನು ಬೇಡಿದ್ದಾರೆ. ಬ್ರಿಟನ್ ರಾಷ್ಟ್ರವನ್ನು ಕಾಡುತ್ತಿರುವ ಇನ್ನೊಂದು ಬೃಹತ್ ಸಮಸ್ಯೆ ಎಂದರೆ ವಲಸೆ. ಬಡ ದೇಶಗಳಿಂದ ದಂಡಿಯಾಗಿ ನಿರಾಶ್ರಿತರು ಬರುತ್ತಿದ್ದಾರೆ. ಅವರಲ್ಲಿ ಯಾರು ಪ್ರಾಮಾಣಿಕವಾಗಿ ನಿರಾಶ್ರಿತರು ಯಾರು ಅವಕಾಶ ಆಕಾಂಕ್ಷಿಗಳು ಎಂಬುದನ್ನು ನಿರ್ಧರಿಸವುದು ಸರ್ಕಾರಕ್ಕೆ ಕಷ್ಟದ ಕೆಲಸವಾಗಿದೆ. ಕ್ರಿಶ್ಚಿಯನ್ ಹಿನ್ನೆಲೆ ಇರುವ ಬ್ರಿಟನ್ನಿನಲ್ಲಿ ಧರ್ಮ ಎಂದೂ ರಾಜಕೀಯ ವಿಷಯದಲ್ಲಿ ತಲೆಹಾಕುವುದಿಲ್ಲ. ಆದರೆ ಇಲ್ಲಿ ಮೈನಾರಿಟಿ ವಿರುದ್ಧ ಜನಾಂಗ ಬೇಧ (ರೇಸಿಸಮ್) ವನ್ನು ಪ್ರಚೋದಿಸುವ, ಮತ್ತು ರೇಸಿಸ್ಟ್ ಹಿನ್ನೆಲೆಯಿರುವ ಬಲಪಂಥ ಪಕ್ಷವೊಂದು ರಿಫಾರ್ಮ್ ಯು.ಕೆ ಎನ್ನುವ ಶೀರ್ಷಿಕೆಯಲ್ಲಿ ಬ್ರೆಕ್ಸಿಟ್ಟಿಗೆ ಕಾರಣವಾದ ಮತ್ತು ಕೆಲವು ಮತೀಯರ ಬಗ್ಗೆ ಉಗ್ರವಾದ ನಿಲುವನ್ನು ಹೊಂದಿರುವ ನೈಜಲ್ ಫರಾಜ್ ಎಂಬ ರಾಜಕಾರಣಿ ಚುನಾವಣೆಯಲ್ಲಿ ನಿಂತಿರುವುದು ಉದಾರ ನಿಲುವುಗಳನ್ನು ಪ್ರತಿಪಾದಿಸುವ ಇತರ ಪಕ್ಷಗಳಿಗೆ ಆತಂಕವನ್ನು ತಂದಿದೆ. ಬ್ರಿಟನ್ನಿನ ಗ್ರೀನ್ ಪಾರ್ಟಿ ಪರಿಸರದ ಬಗ್ಗೆ ಜಾಗತಿಕ ತಾಪಮಾನದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೋರಿರುವ ರಾಜಕೀಯ ಪಕ್ಷವಾದ. ಯು.ಕೆಯ ಒಕ್ಕೂಟದ ಒಳಗಿನ ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡಿನಲ್ಲಿ ಅಲ್ಲಿಯ ಸ್ಥಳೀಯ ಸಮಸ್ಯೆಗಳು ಪ್ರಸ್ತುತವಾಗಿ ಅವು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುತ್ತವೆ.

ಇನ್ನು ಭಾರತದಲ್ಲಿ ನಡೆದ ಚುನಾವಣೆಯ ಬಗ್ಗೆ ಗಮನ ಹರಿಸೋಣ. ಪ್ರಪಂಚದಲ್ಲೇ ಅತ್ಯಂತ ಹಿರಿದಾದ ಪ್ರಜಾಪ್ರಭುತ್ವವೆಂದು ಹೆಸರಾದ ಭಾರತ ಈ ವರ್ಷ ಜೂನ್ ತಿಂಗಳಲ್ಲಿ ಚುನಾವಣೆ ನಡೆಸಿದೆ. ಸುಮಾರು 940 ಮಿಲಿಯನ್ ಜನರು ಮತ ನೀಡಿದ್ದು ಏಳು ಹಂತಗಳಲ್ಲಿ ಚುನಾವಣೆ ನಡಿಸಿದ ಭಾರತದ ಎಲೆಕ್ಷನ್ ಕಮಿಷನ್ ಮಾಡಿರುವ ಕಾರ್ಯ ಶ್ಲಾಘನೀಯವಾದದ್ದು. ಭಾರತದಲ್ಲಿ ಎಲೆಕ್ಷನ್ ವಿಷಯ ಬಂದಾಗ ಎಂದಿಗಿಂತ ಇಂದು ಧರ್ಮ, ಜಾತಿ ಮತ್ತು ದೇವಸ್ಥಾನ ಇತರ ಸಾಮಾಜಿಕ ಸಮಸ್ಯೆಗಳಷ್ಟೇ ಪ್ರಸ್ತುತವಾಗಿದೆ. ಒಂದು ಪಕ್ಷ ತನ್ನ ಆಡಳಿತದಲ್ಲಿ ದೇಶದ ರಸ್ತೆ, ರೈಲು, ವಿಮಾನ ನಿಲ್ದಾಣ, ನಗರಗಳ ಅಭಿವೃದ್ಧಿ, ಹೊಸ ಕಟ್ಟಡಗಳ ನಿರ್ಮಾಣ ಮುಂತಾದ ಸಾರ್ವಜನಿಕ ಸೌಕರ್ಯವನ್ನು ಮಾಡಿ ತಾವು ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಚುನಾವಣೆ ಪ್ರಚಾರ ಮಾಡಿದರೆ ಸಾಲದು. ಆ ಸರ್ಕಾರದ ಧೋರಣೆಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಇವೆಯೇ? ಸಂವಿಧಾನಕ್ಕೆ ಬದ್ಧವಾಗಿದೆಯೇ? ಎಂಬುದು ಮುಖ್ಯ. ಆರ್ಥಿಕ ಪ್ರಗತಿ ಬರಿಯ ಕೆಲವು ಬಿಲಿಯನೇರ್ ಗಳ ಜೇಬುಗಳನ್ನು ತುಂಬಿದರಷ್ಟೇ ಸಾಲದು. ಅದು ತಳ ಸಮುದಾಯದ ಸಮಾಜ ಕಲ್ಯಾಣ ಆಯೋಜನೆಯನ್ನು ತಲುಪುತ್ತಿದೆಯೇ ಅನ್ನುವುದು ಮುಖ್ಯ. ಅಂತಾರಾಷ್ಟ್ರೀಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಬಡತನ, ಹಸಿವು, ನಿರುದ್ಯೋಗ ಸಮಸ್ಯೆಗಳು ವ್ಯಾಪಕವಾಗಿವೆ. ಭಾರತದಲ್ಲಿ ಒಂದು ಹಿನ್ನೋಟದಲ್ಲಿ ಗಮನಿಸಿದಾಗ ಅಲ್ಲಿ ಎಲ್ಲಕಾಲಕ್ಕೂ ಜನ ನಾಯಕರ ವರ್ಚಸ್ಸು ಮುಖ್ಯವಾಗಿ ವ್ಯಕ್ತಿಪೂಜೆ ನಡೆಯುತ್ತಾ ಬಂದಿದೆ. ರಾಷ್ಟ ಮಟ್ಟದಲ್ಲಿ ಇಂದಿರಾಗಾಂಧಿ, ಮುಂದಕ್ಕೆ ಮೋದಿ, ರಾಜ್ಯಮಟ್ಟದಲ್ಲಿ ಎಂಜಿಆರ್, ಏನ್ ಟಿ ರಾಮರಾವ್, ಜಯಲಲಿತಾ ನೆನಪಿಗೆಬರುತ್ತಾರೆ. ವ್ಯಕ್ತಿಯ ವರ್ಚಸ್ಸಿಗಿಂತ ಪಕ್ಷದ ಧೋರಣೆಗಳು ಪ್ರಸ್ತುತವಾಗಿರಬೇಕು. ಇನ್ನೊಂದು ವಿಚಾರವೆಂದರೆ ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ ಸೋಷಿಯಲ್ ಮೀಡಿಯಾಗಳನ್ನು ಪಕ್ಷದ ಪ್ರಚಾರಕ್ಕೆ ಬಳಸಿ ವಿರೋಧಪಕ್ಷದವರನ್ನು ಇಲ್ಲ ಸಲ್ಲದ ನೆಪದಲ್ಲಿ ಅಪ್ರಾಮಾಣಿಕವಾಗಿ ಹೀಯಾಳಿಸಿ, ಮೂದಲಿಸಿ ಗೌಣ ಗೊಳಿಸಲಾಗಿದೆ. ವಿರೋಧಪಕ್ಷವನ್ನು ಬಲಹೀನ ಗೊಳಿಸುವ ಪ್ರಯತ್ನ ನಡೆದಿದೆ. ವಿರೋಧಪಕ್ಷವು ಬಲಹೀನಗೊಳ್ಳಲು ಆ ಪಕ್ಷದಲ್ಲಿ ಒಗ್ಗಟ್ಟು ಇಲ್ಲದಿರುವುದೂ ಕಾರಣವಾಗಿದೆ. ವಿರೋಧ ಪಕ್ಷದಲ್ಲಿ ಮುಂದಾಳುತ್ವವನ್ನು ವಹಿಸಿರುವ ಪಕ್ಷ ರಾಜಕಾರಣವನ್ನು ತನ್ನ ಮನತನದ ಸ್ವತ್ತಾಗಿ ಗುತ್ತಿಗೆ ಹಿಡಿದಂತಿದೆ. ಇಲ್ಲಿ ಹೊರಗಿನ ಪ್ರತಿಭೆಗಳಿಗೆ ಅವಕಾಶ ಇಲ್ಲದಂತಾಗಿದೆ. ಒಂದು ಪ್ರಜಾಪ್ರಭುತ್ವದಲ್ಲಿ ಬಲವಾದ ವಿರೋಧಪಕ್ಷ ಇಲ್ಲದಿದ್ದಲ್ಲಿ ಆ ಪ್ರಜಾಪ್ರಭುತ್ವ ಆರೋಗ್ಯವಾಗಿ ಮತ್ತು ಸಮತೋಲನದಲ್ಲಿ ಇರಲು ಸಾಧ್ಯವಿಲ್ಲ. ಇದು ಅಪಾಯಕಾರಿ ಬೆಳವಣಿಗೆ. ವಿರೋಧಪಕ್ಷವನ್ನು ಅತಿಯಾಗಿ ದುರ್ಬಲಗೊಳಿಸಿದಲ್ಲಿ ಅದು ಸರ್ವಾಧಿಕಾರಕ್ಕೆ ಪೂರಕವಾಗುವುದರಲ್ಲಿ ಸಂದೇಹವಿಲ್ಲ. 2024ರ ಚುನಾವಣೆಯಲ್ಲಿ ವಿರೋಧ ಪಕ್ಷವು ಸ್ವಲ್ಪಮಟ್ಟಿಗೆ ಚೇತರಿಸಿ ಕೊಂಡಿದೆ ಎನ್ನಬಹುದು. ಒಂದು ಪಕ್ಷ ಎಲೆಕ್ಟೊರಲ್ ಬಾಂಡ್ ಗಳ ಮುಖಾಂತರ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಸಾಮೂಹಿಕ ಸುದ್ದಿ ಮಾಧ್ಯಮಗಳು ಒಂದು ರಾಜಕೀಯ ಪಕ್ಷದ ಪರವಹಿಸಿದಾಗ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತದೆ. ಚುನಾವಣೆ ಎಂಬ ಸ್ಪರ್ಧೆಯ ಮೈದಾನದಲ್ಲಿ ಎಲ್ಲ ಸಮತಟ್ಟಾಗಿರಬೇಕು. ಇಲ್ಲದಿದ್ದಲ್ಲಿ ಅದು ನ್ಯಾಯ ಸಮ್ಮತವಾದ ಸ್ಪರ್ಧೆ ಅಲ್ಲ. ಅನಕ್ಷರತೆ, ಆರ್ಥಿಕ ಅಸಮತೆ ಮತ್ತು ಬಡತನ ಹೆಚ್ಚಾಗಿರುವ ದೇಶಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ಕಾಪಾಡ ಬಹುದು ಎಂಬುದರ ಬಗ್ಗೆ ಸಂದೇಹವಿದೆ. ಭಾರತದ ಮಧ್ಯಮವರ್ಗ ಕಳೆದ ಕೆಲವು ವರ್ಷಗಳಲ್ಲಿ ಹಿಗ್ಗಿದೆ. ಈ ‘ಹೊಸ ಮಧ್ಯಮ ವರ್ಗ’ ಅನುಕೂಲವಾಗಿ ಜೀವನ ನಡೆಸುತ್ತಿವೆ ಮತ್ತು ಈ ವರ್ಗ ಚುನಾವಣೆಯ ಫಲಿತಾಂಶವನ್ನು ಪರೋಕ್ಷವಾಗಿಯಾದರೂ ನಿರ್ಧರಿಸುತ್ತವೆ ಎನ್ನಬಹುದು. ಈ ವರ್ಗವು ಒಂದು ರಾಜಕೀಯ ಪಕ್ಷಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು, ನಿಷ್ಠೆಯನ್ನು ತೋರುತ್ತಾ ಬಂದಿರುವುದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಬಹುದು. ಹೀಗಾಗಿ ರಾಜಕೀಯ ಪಕ್ಷಗಳು ಈ ಮಧ್ಯಮವರ್ಗವನ್ನು ಓಲೈಸಲು ಹವಣಿಸುತ್ತವೆ. ಈ ಮಧ್ಯಮ ವರ್ಗದವರು ಬಹುಪಾಲು ಸುಶಿಕ್ಷಿತರು, ಮೇಲ್ಜಾತಿಯವರು, ಧರ್ಮ ಅಪೇಕ್ಷಿಗಳು, ಸಂಪ್ರದಾಯ ವಾದಿಗಳು ಮತ್ತು ನಗರ ನಿವಾಸಿಗಳು. ಈ ವರ್ಗದವರಿಗೆ ಗ್ರಾಮೀಣ ಪ್ರದೇಶದ ಮತ್ತು ಮೈನಾರಿಟಿ, ತಳ ಸಮುದಾಯದವರ ಸಮಸ್ಯೆಗಳ ಬಗ್ಗೆ ಅರಿವು ಕಡಿಮೆ ಮತ್ತು ಸಹಾನುಭೂತಿಯೂ ಕಡಿಮೆ ಎನ್ನಬಹುದು. ಕೆಲವರನ್ನು ಹೊರತು ಪಡಿಸಿ ಈ ವರ್ಗದಲ್ಲಿ ಅನೇಕರಿಗೆ ಅನ್ಯ ಧರ್ಮದವರ ಬಗ್ಗೆ ಅನುಮಾನ, ಸಂದೇಹ ಮತ್ತು ತಿರಸ್ಕಾರ ಭಾವನೆಗಳಿವೆ. ಒಂದು ವಾಟ್ಸ್ ಆಪಿನ ಗುಂಪಿನಲ್ಲಿ ಇವರು ಹಂಚಿಕೊಳ್ಳುವ ಸಂದೇಶಗಳು ಇದಕ್ಕೆ ಸಾಕ್ಷಿಯಾಗಿವೆ.

ಇನ್ನು ರಷ್ಯಾದ ರಾಜಕಾರಣ ಮತ್ತು ಚುನಾವಣೆಯನ್ನು ಗಮನಿಸಿದರೆ ಅಲ್ಲಿ ಪ್ಯೂಟಿನ್ ಸರ್ವಾಧಿಕಾರಿಯಾಗಿ ತನ್ನ ವಿರೋಧ ಪಕ್ಷದ ರಾಜಕಾರಣಿಗಳನ್ನು ಕ್ಷುಲ್ಲಕ ಕಾರಣಗಳಿಂದ ಜೈಲಿಗೆ ತಳ್ಳಿ, ಕೆಲವರನ್ನು ಮುಗಿಸಿ, ವಿರೋಧಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ಮಾಧ್ಯಮಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ಖಾಯಂ ಅಧ್ಯಕ್ಷನಾಗಿದ್ದಾನೆ. 1999ರಲ್ಲಿ ಪ್ಯೂಟಿನ್ ರಷ್ಯಾ ಅಧ್ಯಕ್ಷನಾಗಿ ಎರಡು ಟರ್ಮ್ ಅವಧಿಯನ್ನು 2008ರಲ್ಲಿ ಮುಗಿಸಿದ. ರಷ್ಯಾದ ಸಂವಿಧಾನದ ಪ್ರಕಾರ ಯಾವುದೇ ವ್ಯಕ್ತಿ ಎರಡು ಟರ್ಮ್ ಗಿಂತ ಹೆಚ್ಚಾಗಿ ಅಧ್ಯಕ್ಷನಾಗಿರಲು ಸಾಧ್ಯವಿಲ್ಲ. ಹೀಗಾಗಿ ಪ್ಯೂಟಿನ್ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಪ್ರಧಾನಿಯಾಗಿ ಒಂದು ಅವಧಿಯನ್ನು ಮುಗಿಸಿ ಮತ್ತೆ ಚುನಾಯಿತನಾಗಿ ಅಧ್ಯಕ್ಷನಾದ. ಅಷ್ಟೇ ಅಲ್ಲ ಅವನು ಈ ಬಾರಿ ಸಂವಿಧಾನವನ್ನೇ ಬದಲಿಸಿ ಖಾಯಂ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾನೆ. ಇಂತಹ ಸರ್ವಾಧಿಕಾರಿ ಚುನಾವಣೆಯಲ್ಲಿ ಭಾಗವಹಿಸಿ ಗೆದ್ದು ಬಂದಿದ್ದೇನೆ ಎಂದು ಹೇಳಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಹಾಸ್ಯಾಸ್ಪದವಾಗಿ ತೋರುತ್ತದೆ. ಕೆಲವು ದೇಶದ ರಾಜಕಾರಣದಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ಪ್ರಬಲವಾದ ಜನನಾಯಕರು ತಮ್ಮ ಬಲಾಢ್ಯವನ್ನು ಪ್ರದರ್ಶಿಸಲು ತಮ್ಮ ವೈಯುಕ್ತಿಕ ವರ್ಚಸ್ಸು ಮತ್ತು ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಪಕ್ಕದ ಚಿಕ್ಕ ಬಲಹೀನ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡಿ ತಾವು ಹೀರೋಗಳಾಗಿ ಮೇಲೇರುವುದ ಒಂದು ರೀತಿಯ ರಾಜಕೀಯ ಯುಕ್ತಿ ಎಂದು ಭಾವಿಸಬಹುದು. ರಷ್ಯಾ, ಯುಕ್ರೈನ್ ದೇಶದ ಮೇಲೆ ಮಾಡುತ್ತಿರುವ ಯುದ್ಧಕ್ಕ ಬೇರೆ ಕಾರಣಗಳು ಇರಬಹುದಾದರೂ ಅದನ್ನು ಚನಾವಣೆಯ ಪ್ರಚಾರವಾಗಿ ಕೂಡ ಬಳಸಲಾಯಿತು.


ಅಮೇರಿಕದಲ್ಲಿ ಈ ವರ್ಷ ನವೆಂಬರ್ ತಿಂಗಳಲ್ಲಿ ನಡೆಯುತ್ತಿರುವ ಚುನಾವಣೆಯನ್ನು ಇಡೀ ಪ್ರಪಂಚವೇ ಕುತೂಹಲ ಮತ್ತು ಕಾಳಜಿಯಿಂದ ನೋಡುತ್ತಿದೆ. ಇದಕ್ಕೆ ಹಿಂದೆ ಟ್ರಂಪ್ ನ ಆಡಳಿತ ವೈಖರಿ ಮತ್ತು ಅವನ ವರ್ತನೆಯೂ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ತಾನು ಸೋತಾಗ ಆ ಚುನಾವಣೆ ಫಲಿತಾಂಶವನ್ನು ಯಾವ ಪುರಾವೆ ಸಾಕ್ಷಿಗಳಿಲ್ಲದಿದ್ದರೂ ಎಲೆಕ್ಷನ್ ಕಾರ್ಯದಲ್ಲಿ ವಂಚನೆ ನಡೆದಿದೆ ಎಂಬ ಸುಳ್ಳು ಆಪಾದನೆ ಮಾಡಿ ರಾದ್ಧಾಂತ ಎಬ್ಬಿಸಿದ. ಇವನ ಮೊಂಡಾಟ ಅಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದ ಜನರ ನಂಬಿಕೆಯನ್ನು ನಿರಾಸೆಗೊಳಿಸಿತು. ಅಷ್ಟೇ ಏಕೆ ಎಲೆಕ್ಷನ್ ನಂತರದ ಸಮಯದಲ್ಲಿ ತನ್ನ ಅನುಯಾಯಿಗಳನ್ನು ಪ್ರಚೋದಿಸಿ ಅವರು ಗುಂಡಾಗಳಂತೆ ಅಸ್ತ್ರಗಳನ್ನು ಹಿಡಿದು ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ಹಿಂಸೆ ಆಕ್ರೋಶಕ್ಕೆ ತೊಡಗಿದಾಗ ಡೆಮೋಕ್ರೆಟ್ ಸದಸ್ಯರು ಪ್ರಾಣ ಭಯದಿಂದ ಕುರ್ಚಿ ಬೆಂಚುಗಳಡಿಯಲ್ಲಿ ಅವಿತುಕೊಳ್ಳಬೇಕಾಯಿತು. ಪ್ರಪಂಚದ ಇತರ ಸಭ್ಯ ಜನತೆ ಅಮೇರಿಕ ಪ್ರಜಾಪ್ರಭುತ್ವದಲ್ಲಿ ಹೀಗೂ ಉಂಟೆ ಎಂದು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಾಯಿತು. ಟ್ರಂಪ್ ತನ್ನ ಬಲಪಂಥ ಧೋರಣೆಗಳಿಂದ ಅಲ್ಲಿಯವರೆಗೆ ನಾಗರೀಕರಾಗಿದ್ದ ಜನರನ್ನು ಧ್ರುವೀಕರಣಗೊಳಿಸಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಡೆಗಾಣಿಸಿದ ಎಂಬ ಅಪವಾದವಿದೆ. ಟ್ರಂಪ್ ಎಷ್ಟೇ ಒಳ್ಳೆ ಕೆಲಸಗಳನ್ನು ಮಾಡಿದ್ದರೂ ಈ ವಿಚಾರಗಳನ್ನು ಕಡೆಗಾಣಿಸಲು ಸಾಧ್ಯವಿಲ್ಲ.

ಟ್ರಂಪ್ ಅಮೇರಿಕಗೆ ವಲಸೆ ಬರುತ್ತಿರುವ ಜನರ ಬಗ್ಗೆ, ಇಸ್ಲಾಂ ಧರ್ಮದವರ ಬಗ್ಗೆ ಎರ್ರಾ ಬಿರ್ರಿ ಮಾತನಾಡಿ ಎಲ್ಲರನ್ನು ಚಕಿತಗೊಳಿಸಿದ. ಹಿಂದಿನ ಚುನಾವಣೆಯ ಪ್ರಚಾರದಲ್ಲಿ ತನ್ನ ವಿರೋಧಿ ಹಿಲರಿ ಕ್ಲಿಂಟನ್ ಕುರಿತು ಕೀಳಾಗಿ ವರ್ತಿಸಿ ಅವಳನ್ನು ಜೈಲಿನಲ್ಲಿ ಲಾಕ್ ಅಪ್ ಮಾಡಬೇಕೆಂದು ಭಾಷಣದಲ್ಲಿ ಕೂಗಾಡಿದ. ಫ್ಲೋರಿಡಾ ರಾಜ್ಯದ ನಿಕ್ಕಿ ಹೇಲಿ ಎಂಬ ಭಾರತೀಯ ಮೂಲದ ಅಭ್ಯರ್ಥಿ ರಿಪಬ್ಲಿಕ್ ಪಾರ್ಟಿ ಪ್ರತಿನಿಧಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುತ್ತಾರೆ ಎಂಬ ಸುದ್ದಿ ಮಧ್ಯದಲ್ಲಿ ಈ ಟ್ರಂಪ್ ಮಹಾಶಯ ಮತ್ತೆ ನುಸುಳಿಕೊಂಡು ಬಂದು ಈಗ ಅಧ್ಯಕ್ಷಸ್ಥಾನಕ್ಕೆ ಮತ್ತೆ ನಿಲ್ಲುತ್ತಿದ್ದಾನೆ. ಟ್ರಂಪ್ ಹಿಂದೆ ಪೋರ್ನ್ ಸ್ಟಾರ್ ಜೊತೆ ಸಂಬಂಧ ಇಟ್ಟುಕೊಂಡ್ಡಿದ್ದು ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಈ ಸಂಗತಿಯನ್ನು ಮುಚ್ಚಿಡಲು ಅವಳಿಗೆ ಹಣವನ್ನು ವಿತರಣೆ ಮಾಡುವಾಗ ಉಂಟಾದ ಅವ್ಯವಹಾರದಲ್ಲಿ ಸಿಕ್ಕಿಕೊಂಡು ಅವನನ್ನು ಕೋರ್ಟಿಗೆ ಎಳೆಯಲಾಯಿತು. ಟ್ರಂಪ್ ತಪ್ಪಿತಸ್ಥನೆಂದು ತೀರ್ಮಾನಿಸಲಾಗಿದೆ. ಜೈಲು ಶಿಕ್ಷೆಯ ಬದಲು ಅವನು ದಂಡವನ್ನು ತೆರಬೇಕಾಗುತ್ತದೆ. ಇಷ್ಟೆಲ್ಲ ಅಪಚಾರಗಳ ಹಿನ್ನೆಲೆಯಲ್ಲಿ ಮತ್ತೆ ಟ್ರಂಪ್ ಅಧ್ಯಕ್ಷಸ್ಥಾನಕ್ಕೆ ನಿಂತಿದ್ದಾನೆ. ಹಿಂದೆ ಒಬಾಮ, ಕ್ಲಿಂಟನ್ ಮುಂತಾದ ಹಿರಿಯ ವ್ಯಕ್ತಿತ್ವಗಳನ್ನು ಕಂಡ ಅಮೇರಿಕ ಈಗ ಮತ್ತೆ ಟ್ರಂಪ್ ಮೇಲೇರಿಬರಲು ಒಪ್ಪಿದೆ, ಅವನು ಆಯ್ಕೆಯಾಗಿ ಬರುವ ಸಾಧ್ಯತೆಗಳಿವೆ. ಅಮೇರಿಕದಂತಹ ಮುಂದುವರಿದ ಶ್ರೀಮಂತ ದೇಶದಲ್ಲಿ ಟ್ರಂಪ್ ತರಹದ ರಾಜಕಾರಣಿಗೆ ಮಿಲಿಯನ್ ಗಟ್ಟಲೆ ಜನ ಬೆಂಬಲ ನೀಡುತ್ತಿದ್ದಾರೆ ಎಂದರೆ ಜನರ ವಿವೇಚನಾ ಶಕ್ತಿಗೆ ಏನಾಗಿದೆ ಎಂಬ ಆತಂಕ ಮೂಡುತ್ತದೆ. 'ಅಮೇರಿಕ ಫಸ್ಟ್' ಎನ್ನುವ ರಾಷ್ಟ್ರವಾದ ಮತ್ತು ಸ್ವಾರ್ಥ ನಿಲುವನ್ನು ಟ್ರಂಪ್ ಎತ್ತಿಹಿಡಿದಿರುವುದು ಅವನ ಜನಪ್ರಿಯತೆಗೆ ಕಾರಣವಾಗಿರಬಹುದು. ಇಡೀ ಪ್ರಪಂಚವೇ ಬಲಪಂಥದ ಕಡೆ ವಾಲುತ್ತಿದೆ. ಎಲ್ಲೆಡೆ ಸಂಶಯಗಳು ಹುಟ್ಟಿಕೊಂಡು ಪರಕೀಯ ಪ್ರಜ್ಞೆ (Tribalism) ಜಾಗೃತವಾಗಿದೆ. ಇಲ್ಲ ಸಲ್ಲದ ಕಾಲ್ಪನಿಕ ಶತ್ರುಗಳನ್ನು ರಾಜಕಾರಣಿಗಳು ಹುಟ್ಟು ಹಾಕುತ್ತಿದ್ದಾರೆ. ಒಂದು ದೇಶದ ಜನರಲ್ಲಿ ಒಗ್ಗಟ್ಟನ್ನು, ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಮೂಡಿಸಲು ಇದು ಸುಲಭದ ತಂತ್ರ! ಇದರಿಂದಾಗಿ 'ನಾವು ಮತ್ತು ಅವರು' ಎಂಬ ಧ್ರುವೀಕರಣ ಉಂಟುಮಾಡುತ್ತಿದ್ದರೆ. ಟ್ರಂಪ್ ಶ್ರೀಮಂತ ಉದ್ಯಮಿಗಳ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಅವನಿಗೆ ವ್ಯಾಪಾರಿ ವರ್ಗದವರು ಬೆಂಬಲ ನೀಡಲು ತಯಾರಿದ್ದರೆ. ನನಗೆ ತಿಳಿದ ಅನೇಕ ಅಮೇರಿಕ ಶ್ರೀಮಂತ ಅನಿವಾಸಿ ಮಿತ್ರರು ಟ್ರಂಪ್ ಗೆ ಬೆಂಬಲ ನೀಡಲು ತಯಾರಿದ್ದಾರೆ. ಸ್ವಾರ್ಥ ಹೆಚ್ಚಾದಂತೆ ಬಹುಶಃ ನಾವು ನಮ್ಮ ವಿವೇಚನಾಶಕ್ತಿಯನ್ನು ಕಳೆದುಕೊಳ್ಳುತೇವೆ. ರಷ್ಯಾ ದೇಶವು ಟ್ರಂಪ್ ಹಿಂದೆ ಗೆದ್ದು ಬಂದ ಚುನಾವಣೆಯಲ್ಲಿ ಹಸ್ತಾಕ್ಷೇಪಮಾಡಿದೆ ಎನ್ನುವ ವದಂತಿ ಇದೆ, ಇದಕ್ಕೆ ಕೆಲವು ಸಾಕ್ಷಿಗಳಿವೆ ಎಂದು ತಿಳಿದುಬಂದಿದೆ. ಎಲೆಕ್ಟ್ರಾನಿಕ್ ವೋಟಿಂಗ್ ವ್ಯವಸ್ಥೆಯಲ್ಲಿ ಸೈಬರ್ ಸೆಕ್ಯೂರಿಟಿ ಒಡೆದು ವಂಚನೆ ಉಂಟುಮಾಡುವ ಸಾಧ್ಯತೆಗಳು ಇವೆ. ನಕಲಿ ಅಸ್ತಿತ್ವವನ್ನು ಸೃಷ್ಟಿಸಿ ಹೆಚ್ಚು ಮತಗಳನ್ನು ಪಡೆಯಬಹುದು. ಹೀಗೆ ತಾಂತ್ರಿಕತೆಯನ್ನು ಒಂದು ರಾಜಕೀಯ ಪಕ್ಷ ದುರುಪಯೋಗ ಪಡೆದುಕೊಳ್ಳಬಹುದು. ಚುನಾವಣೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕ ವ್ಯವಹಾರಗಳು ಮುಖ್ಯ.

ಕ್ರಿಕೆಟ್, ಫುಟ್ಬಾಲ್ ಪಂದ್ಯಗಳಂತೆ ಚುನಾವಣೆಯಲ್ಲಿ ಅನಿರೀಕ್ಷಿತ ತಿರುವುಗಳು ಸಾಧ್ಯ. ಸದರಿ ಅಧ್ಯಕ್ಷ ಬೈಡೆನ್ ಅವರ ಪುತ್ರ ಹಿಂದೆ ಮಾದಕವಸ್ತುಗಳನ್ನು ಬಳಸುತ್ತಿರುವಾಗ ಬಂದೂಕದ ಪರವಾನಗಿಯನ್ನು ಪಡೆದಿದ್ದ ಎನ್ನುವ ವಿಚಾರ ಬಹಿರಂಗಕ್ಕೆ ಬಂದು ಅದು ಚುನಾವಣೆ ಪ್ರಚಾರದಲ್ಲಿ ಒಂದು ವಿಷಯವಾಗಿದೆ. ಅಮೇರಿಕ ಸರ್ಕಾರವು ಇಸ್ರೇಲ್-ಪ್ಯಾಲೆಸ್ಟೈನ್ ಘರ್ಷಣೆಯಲ್ಲಿ ಇಸ್ರೇಲ್ ಪರ ವಹಿಸಿದ್ದು, ಅಮೇರಿಕದ ಹಲವಾರು ವಿಶ್ವ ವಿದ್ಯಾಲಯಗಳಲ್ಲಿ ಪ್ರತಿಭಟನೆಗಳಾಗಿ ಅದೂ ಈಗ ಚುನಾವಣೆಯ ಒಂದು ಮುಖ್ಯ ವಿಷಯವಾಗಿದೆ. ಅಂದಹಾಗೆ ಬ್ರಿಟನ್ನಿನ ಪ್ರಧಾನಿ ರಿಷಿ ಸುನಾಕ್ ಇತ್ತೀಚಿಗೆ ಯೂರೋಪಿನಲ್ಲಿ ನಡೆದ ಎರಡನೇ ಮಹಾಯುದ್ಧ ಶ್ರದ್ಧಾಂಜಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಸುನಾಕ್ ಅವರ ರೇಟಿಂಗ್ ಕುಸಿದಿದೆ.

ಭಾರತದ ಉಪ ಖಂಡ ದೇಶಗಳಲ್ಲಿ ಪ್ರಜಾಪ್ರಭುತ್ವ ನರಳಿದೆ. ಪಾಕಿಸ್ತಾನ ಮತ್ತು ಮಿಯಾನ್ಮಾರ್ ದೇಶಗಳಲ್ಲಿ ಮಿಲಿಟರಿಯ ಜನರಲ್ ಗಳು ಹಸ್ತಕ್ಷೇಪಮಾಡಿ ಸರ್ಕಾರವನ್ನು ಉರುಳಿಸಿರುವ ಅನೇಕ ಪ್ರಸಂಗಗಳಿವೆ. ಈ ವರ್ಷ ಫೆಬ್ರುವರಿಯಲ್ಲಿ ಪಾಕಿಸ್ತಾನ ಚುನಾವಣೆ ನಡೆಸಿತು. ಪ್ರಧಾನಿ ಇಮ್ರಾನ್ ಖಾನನ್ನು ಅವಿಶ್ವಾಸ ನಿರ್ಣಯದ ಮೇಲೆ ಕೆಳಗಿಳಿಸಿ ಭ್ರಷ್ಟಾಚಾರದ ಅಪಾದನೆಯನ್ನು ಹೊರಿಸಿ ಜೈಲಿಗೆ ತಳ್ಳಿದ್ದರೂ ಅವನ ಪಿಟಿಐ ಪಕ್ಷವು ಈ ಬಾರಿ ಗಮನಾರ್ಹ ಮತವನ್ನು ಗಳಿಸಿತು. ಆದರೆ ಸರ್ಕಾರವನ್ನು ರಚಿಸುವಷ್ಟು ಬಹುಮತ ಪಡೆಯಲಿಲ್ಲ. ಕೊನೆಗೆ ಪಾಕಿಸ್ತಾನದ ಮುಸ್ಲಿಂ ಲೀಗ್ ಮತ್ತು ಪೀಪಲ್ ಪಾರ್ಟಿ ಎರಡು ಸಹಮತದಿಂದ ಸರ್ಕಾರ ರಚಿಸಿ ಶಿಬಾಸ್ ಶರೀಫ್ ಪ್ರಧಾನಿಯಾಗಿದ್ದಾನೆ. ಇನ್ನು ಮೀಯನ್ಮಾರದಲ್ಲಿ ನೋಬಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಚಿ ಹಲವಾರು ದಶಕಗಳಿಂದ ಬಹುಮತ ಗಳಿಸಿ ನಾಯಕಿಯಾಗಿದ್ದರೂ ಅವಳ ಗಂಡ ಹೊರದೇಶದವನಾಗಿದ್ದರಿಂದ ಅವರ ಸಂವಿಧಾನದ ಪ್ರಕಾರ ಅವಳು ಅಲ್ಲಿಯ ಪ್ರಧಾನಿಯಾಗಲು ಸಾಧ್ಯವಿಲ್ಲ. ಆದರೂ ಸ್ಟೇಟ್ ಕೌನ್ಸಿಲ್ಲರ್ ಎಂಬ ಉನ್ನತ ಪಟ್ಟದಲ್ಲಿ ಅವಳು ಅತ್ಯಂತ ಜನಪ್ರೀಯ ಜನನಾಯಕಿಯಾಗಿ ಹಲವಾರು ಬಾರಿ ಬಹುಮತದಿಂದ ಗೆದ್ದು ಬಂದರೂ ಅಲ್ಲಿಯ ಮಿಲಿಟರಿ ಜನರಲ್ ಗಳು ಅವಳ ಮೇಲೆ ಕೆಲವು ಆರೋಪಗಳನ್ನು ಹೊರಿಸಿ ಅಪರಾಧಿ ಎಂದು ಅವಳನ್ನು 27 ವರ್ಷ ಜೈಲ್ ಶಿಕ್ಷೆಗೆ ಗುರಿಪಡಿಸಿದೆ! ಅವಳಿಗೆ ಈಗ 79 ವರ್ಷಗಳಾಗಿರುವುದರಿಂದ ಇದು ಒಂದು ರೀತಿ ಜೀವಾವಧಿ ಶಿಕ್ಷೆಯಾಗಿ ಪರಿಣಮಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈ ವಿಚಾರದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಅಂಗ್ ಸಾನ್ ಸೂಚಿಗೆ ಬೆಂಬಲ ನೀಡಿವೆ.

ಒಟ್ಟಾರೆ ನೋಡಿದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ದೇಶದಲ್ಲಿ ಆಡಳಿತ ನಡೆಸಲು ಆದರ್ಶವಾದ ಮಾದರಿ. ಪ್ರಜಾಪ್ರಭುತ್ವ ಮತ್ತು ಚುನಾವಣೆ ಎಂಬ ಈ ಎರಡು ವಿಚಾರಗಳು ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ, ಅದು ಸಂಕೀರ್ಣವಾದದ್ದು. 'ಜನರಿಂದ ಜನರಿಗಾಗಿ' ಎಂಬ ಸಿದ್ಧಾಂತವನ್ನು ಆಧರಿಸಿದ್ದರೂ ಈ ವ್ಯವಸ್ಥೆಯಲ್ಲಿ ಹಲವಾರು ತೊಡಕುಗಳಿರುವುದನ್ನು ಮೇಲೆ ಪ್ರಸ್ತಾಪಮಾಡಿರುವ ನಿದರ್ಶನಗಳಲ್ಲಿ ಕಾಣಬಹುದು. ನಾವು ಯಾವುದೇ ದೇಶದವರಾಗಿದ್ದರೂ ನಮ್ಮ ಮಹತ್ವಾಕಾಂಶೆಗಳಲ್ಲಿ ವ್ಯತಾಸವಿದ್ದರೂ ಜನಸಾಮಾನ್ಯರ ಬದುಕಿನ ಮೂಲಭೂತ ಸಮಸ್ಯೆಗಳು ಒಂದೇ ಆಗಿರುತ್ತವೆ. ಈಗ ಜಾಗತೀಕರಣದ ಪರಿಣಾಮದಿಂದ ಇಡೀ ವಿಶ್ವವೇ ಒಂದು ಸಣ್ಣ ಕುಟುಂಬವಾಗಿದೆ. ಒಂದು ರಾಷ್ಟ್ರದ ಸಮಸ್ಯೆ ಬರಿ ಸ್ಥಳೀಯ ಸಮಸ್ಯೆಯಾಗದೆ ಅದು ವಿಶ್ವದ ಇನ್ನೊಂದು ಮೂಲೆಯಲ್ಲಿ ವಾಸಿಸುವರ ಸಮಸ್ಯೆಯೂ ಆಗಬಹುದು. ಕರೋನ ಪಿಡುಗು, ಗ್ಲೋಬಲ್ ವಾರ್ಮಿಂಗ್, ಯೂಕ್ರೈನ್ ಯುದ್ಧ, ಸಮುದಾಯದ ವಲಸೆ, ಸ್ಥಳಾಂತರ ಇವು ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಸಮಸ್ಯೆಕೂಡ. ಈ ಸಮಸ್ಯೆಗಳನ್ನು ಎದುರಿಸಲು ದೇಶಗಳ ನಡುವೆ ಸಹಕಾರ ಒಪ್ಪಂದ ಬೇಕಾಗುತ್ತದೆ. ಸರ್ವಾಧಿಕಾರಿಗಳಿಗೆ ಮತ್ತು ರಾಷ್ಟ್ರವಾದಿಗಳಿಗೆ ತಮ್ಮ ದೇಶದ ಹಿತಾಸಕ್ತಿ ಅಷ್ಟೇ ಅವರಿಗೆ ಮುಖ್ಯವಾಗುತ್ತದೆ. ಅಲ್ಲಿ ಒಂದು ಸ್ವಾರ್ಥ ನಿಲುವು ಇರುತ್ತದೆ. ಆದುದರಿಂದ ಅವರ ಸಹಕಾರ ಮತ್ತು ಸಮ್ಮತವನ್ನು ನಿರೀಕ್ಷಿಸಲು ಸಾಧ್ಯವಾಗದಿರಬಹುದು. ಈ ಒಂದು ಹಿನ್ನೆಲೆಯಲ್ಲಿ ಉದಾರವಾದ ಮತ್ತು ಪ್ರಜಾಪ್ರಭುತ್ವ ವಿಶೇಷ ಅಗತ್ಯವಾಗಿ ಎದ್ದು ನಿಲ್ಲುತ್ತದೆ. ಬಹುಮುಖಿ ಸಂಸ್ಕೃತಿ ಇರುವ ಒಂದು ದೇಶದ ಒಳಗೆ ಮತ್ತು ಹೊರಗೆ ಜನರನ್ನು ಒಂದು ಗೂಡಿಸಲು ಪ್ರಜಾಪ್ರಭುತ್ವ ಮೌಲ್ಯಗಳು ಬೇಕಾಗಿವೆ. ಒಂದು ಸರ್ಕಾರ ತನ್ನ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿದಾಗ ಆ ರಾಜಕೀಯ ಪಕ್ಷವನ್ನು ಹತೋಟಿಯಲ್ಲಿಡಲು ಮತದಾರರಿಗೆ ಶಕ್ತಿಯಿದೆ. ಚುನಾವಣೆ ಮುಗಿದಮೇಲೆ ಗೊಣಗಾಡಿ ಕೈ ಹಿಸುಕಿಕೊಳ್ಳುವ ಬದಲು ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದರಲ್ಲಿ ಹಿತವಿದೆ. ಪಟ್ಟಭದ್ರ ಹಿತಾಸಕ್ತರ ಸ್ವಾರ್ಥ, ಧರ್ಮದ ನೆಪದಲ್ಲಿ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರನ್ನು ಮತ್ತು ಬಹುಸಂಖ್ಯಾತರನ್ನು ಓಲೈಸುವುದು, ವ್ಯಕ್ತಿ ಪೂಜೆ ಮತ್ತು ಒಂದು ಐಡಿಯಾಲಜಿಯನ್ನು ಆರಾಧಿಸುವುದು, ಮತದಾರರಿಗೆ ಹಣ ಮತ್ತು ಇತರ ಆಮಿಷಗಳನ್ನು ನೀಡಿ ಮತ ಪಡೆಯುವುದು, ಸೋಷಿಯಲ್ ಮೀಡಿಯಾ ಮತ್ತು ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸುವುದು ಪ್ರಜಾಪ್ರಭುತ್ವದ ಮೂಲ ಉದ್ದೇಶಕ್ಕೆ ಧಕ್ಕೆಯನ್ನು ಉಂಟುಮಾಡುತ್ತದೆ.

ಪ್ರಜಾಪ್ರಭುತ್ವ ಮತ್ತು ಚುನಾವಣೆ ಹಿಂದೆ ಅಂತಾರಾಷ್ಟ್ರೀಯ, ಪಾಶ್ಚಿಮಾತ್ಯ ದೇಶಗಳ ಅಭಿಪ್ರಾಯಕ್ಕೆ, ನೈತಿಕ ಮಟ್ಟ ಎಂಬ ಅಳತೆಗೋಲಿಗೆ ಬದ್ದವಾಗಿ ಸ್ವವಿಮರ್ಶೆ ಮಾಡಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದವು. ಆದರೆ ಈಗ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದೇವೆ, ವಿಶ್ವ ಗುರುವಾಗಲು ನಾವು ಲಾಯಕ್ಕು, ನಾವು ಬಲಾಢ್ಯ ರಾಷ್ಟ್ರ ಆದುದರಿಂದ ನಾವೇಕೆ ಪಾಶ್ಚಿಮಾತ್ಯ ದೇಶಗಳಿಗೆ ಲೆಕ್ಕಿಸಬೇಕು ಎಂಬ ಗರ್ವ ಉಂಟಾಗಿದೆ. ಪಾಶ್ಚಿಮಾತ್ಯ ಸುದ್ದಿ ಮಾಧ್ಯಮ ಮತ್ತು ಮೀಡಿಯಾಗಳು, ಟೈಮ್ಸ್ ಮುಂತಾದ ಪತ್ರಿಕೆಗಳು ನಮ್ಮ ಹುಳುಕುಗಳನ್ನು ಎತ್ತಿ ತೋರಿಸಿದಾಗ ಇದು ನಮ್ಮ ಆಂತರಿಕ ವಿಷಯ, ನಮಗೆ ಬಿಟ್ಟಿದ್ದು, ಹೊರಗಿನವರು ಏಕೆ ಹಸ್ತಾಕ್ಷೇಪ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಸರ್ವಾಧಿಕಾರದ ಸರ್ಕಾರಗಳು ಯುನೈಟೆಡ್ ನೇಶನ್ಸ್ ಮತ್ತು ಇತರ ವಿಶ್ವ ಶಾಂತಿ ಸಂಸ್ಥೆಗೆ ಬದ್ಧರಾಗುತ್ತಿಲ್ಲ ಎಂಬುದು ಆತಂಕದ ವಿಷಯವಾಗಿದೆ. ಪ್ರಜಾ ಪ್ರಭುತ್ವದ ಪರಿಕಲ್ಪನೆ ಎಲ್ಲ ರಾಷ್ಟ್ರಗಳಿಗೆ ಹೊಂದುವಂತಹ, ಅನ್ವಯವಾಗುವಂತಹ ವ್ಯವಸ್ಥೆಯಲ್ಲ! ಮಯನ್ಮಾರ್, ರಷ್ಯಾ ಚೈನಾ, ಮಧ್ಯಪೂರ್ವ ಇಸ್ಲಾಂ ದೇಶಗಳನ್ನು, ಆಫ್ರಿಕಾದ ಕೆಲವು ರಾಷ್ಟ್ರಗಳನ್ನು ಗಮನಿಸಿದಾಗ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಅಗತ್ಯವಾಗಿ ಕಾಣದಿರುವುದು ಆಶ್ಚರ್ಯವೇನಲ್ಲ. ಪ್ರಜಾಪ್ರಭುತ್ವ ಅಂತಿಮ ಸ್ವಾತಂತ್ರ್ಯವನ್ನು ನೀಡುವುದಾದರೂ ಆ ಸ್ವಾತಂತ್ರ್ಯ ಕೆಲವರಿಗೆ ಬೇಕಿಲ್ಲ. ಈ ದೇಶಗಳಲ್ಲಿ ಇರುವ ಪರ್ಯಾಯ ಆಡಳಿತ ವ್ಯವಸ್ಥೆ ಅಲ್ಲಿನ ಪ್ರಜೆಗಳ ಬೌದ್ಧಿಕ ಮತ್ತು ಜೀವನ ಮಟ್ಟಕೆ ಸರಿಯಾಗಿರಬಹುದು. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ಒಂದು ಆದರ್ಶ ಮಾದರಿ ಅದನ್ನು ಎಲ್ಲರೂ ಸ್ವೀಕರಿಸಬೇಕು ಎಂದು ಭಾವಿಸಿ ಪ್ರಪಂಚದ ಎಲ್ಲ ಮೂಲೆ, ಮೂಲೆಗೆ ಅದನ್ನು ತಲುಪಿಸಲು ಹವಣಿಸುತ್ತಿರುವ ಅಮೇರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಮತ್ತೊಮ್ಮೆ ಆಲೋಚಿಸಬೇಕಾಗಿದೆ.
*



ಮರೆಯಲಾಗದ ರಾಜರ್ಷಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್

ಬೇಸಿಂಗ್ ಸ್ಟೋಕ್  ರಾಮಮೂರ್ತಿ ಅವರ ಲೇಖನ 
  • ಅವರನ್ನು ಜನತೆ ”ಕೃಷ್ಣರಾಜ ಭೂಪ, ಮನೆ ಮನೆ ದೀಪ” ಎಂದು ಗೌರವಿಸುತ್ತಿದ್ದರು! ಮೈಸೂರು ಸಂಸ್ಥಾನ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಆಡಳಿತವುಳ್ಳ ರಾಜ್ಯವೆಂದು ೧೯೩೦ ರ ದುಂಡು ಮೇಜು ಪರಿಷತ್ತಿನಲ್ಲಿ ಲಾರ್ಡ್ ಜಾನ್ ಸ್ಯಾಂಕಿಯವರಿಂದ ಶ್ಲಾಘಿಸಲ್ಪಟ್ಟಿತ್ತು. ಆ ಮಟ್ಟಕ್ಕೆ ತಂದ ಶ್ರೇಯಸ್ಸಿನ ಸಿಂಹಪಾಲು ನಮ್ಮ ಹೆಮ್ಮೆಯ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರಿಗೆ ಸಲ್ಲ ಬೇಕು ಅಂದರೆ ಅತಿಶಯೋಕ್ತಿಯಾಗಲಾರದು. ಈ ತಿಂಗಳಿನ ನಾಲ್ಕನೆಯ ತಾರೀಕು ಅವರ ೧೪೦ನೇ ಜಯಂತಿ. ಅದನ್ನು ಸ್ಮರಿಸುತ್ತ ಕರ್ನಾಟಕದ ಇತಿಹಾಸದಲ್ಲಿ ವಿಶೇಷ ಆಸಕ್ತಿಯುಳ್ಳ ಮತ್ತು ’ಅನಿವಾಸಿ’ಯಲ್ಲಿ ಅನೇಕ ಇತಿಹಾಸ ಸಂಬಂಧ ಪಟ್ಟ ಲೇಖನಗಳನ್ನು ಒದಗಿಸಿಕೊಟ್ಟ ಕನ್ನಡ ಬಳಗ ಯು ಕೆ ದ ಹಿರಿಯ ಆಜೀವ ಸದಸ್ಯರಾದ ಶ್ರೀ ರಾಮಮೂರ್ತಿಯವರಿಗೆ ನಾವು ಆಭಾರಿ. ಕಳೆದ ವರ್ಷದ ಬಳಗದ ೪೦ನೆಯ ವಷವನ್ನು ಅದ್ದೂರಿಯಾಗಿ ’ಸಂಭ್ರಮ’ ಅಂತ ಕರೆದು ಲಂಡನ್ನಿನಲ್ಲಿ ಆಚರಿಸಿದಾಗ ಮುಖ್ಯ ಅತಿಥಿಯಾಗಿ ಈಗಿನ ಮೈಸೂರು ಮಹಾರಾಜರು ಬಂದಾಗ ನಾಲ್ವಡಿಯವರು ೧೯೩೬ರಲ್ಲಿ ಲಂಡನ್ನಿಗೆ ಬಂದ ವಿಷಯವನ್ನು ಪ್ರಸ್ತಾಪಿಸಿದ್ದರು. ಆ ಪ್ರವಾಸದ ಬಗ್ಗೆ ಸಹ ರಾಮಮೂರ್ತಿಯವರು ಇನ್ನುಳಿದ ವಿಷಯಗಳೊಂದಿಗೆ ಪ್ರಸ್ತುತ ಪಡಿಸಿದ್ದಾರೆ. ಲೇಖನ ಕೊನೆಗೆ ಒಂದು ಸ್ವಾರಸ್ಯಕರ *ಟಿಪ್ಪಣಿಯಿದೆ. ಓದಲು ಮರೆಯ ಬೇಡಿ! ಎಂದಿನಂತೆ ಎಲ್ಲರೂ ತಪ್ಪದೆ ಓದಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಬೇಕೆಂದು ಕೋರುತ್ತೇನೆ. (ಸಂ)

ನಾವು ಮರೆತೆಂತಿರುವ ’ರಾಜಋಷಿ” ಅಥವ ರಾಜರ್ಷಿ, ಮೈಸೂರು ಸಂಸ್ಥಾನವನ್ನು ಭಾರತದ ಮಾದರಿ ರಾಜ್ಯವನ್ನಾಗಿ ಮಾಡಿದಂತಹ ಮಹಾನುಭಾವ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಮಹಾರಾಜರು.(೧೮೮೪-೧೯೪೦). ಇವರ ೧೪೦ನೇ ಜಯಂತಿ ಇದೇ ವಾರ ೦೪/೦೬/೨೦೨೪ ರಂದು ಇತ್ತು! ಆದರೆ ಈಗಿನ ಕರ್ನಾಟಕದಲ್ಲಿ ಇವರನ್ನು ಸರ್ಕಾರ ಮತ್ತು ಜನತೆ ಸಹ ಮರೆತಂತೆ ಇದೆ. ತಮ್ಮ ಆಡಳಿತಲ್ಲಿ ಇವರು ತಾವು ತಂದ ಸುಧಾರಣೆಗಳನ್ನು ನೋಡಿ, ೧೯೨೫ ರಲ್ಲಿ ಮಹಾತ್ಮ ಗಾಂಧಿ ಇವರನ್ನು ಇವರೊಬ್ಬ ರಾಜರ್ಷಿ ಎಂದು ಪ್ರಶಂಸಿದರು ಮತ್ತು ಲಂಡನ್ ನಲ್ಲಿ ೧೯೩೦ ರಲ್ಲಿ ನಡೆದ ದುಂಡು ಮೇಜು ( Round Table) ಸಭೆಯಲ್ಲಿ “ಮೈಸೂರು ರಾಜ್ಯದ ಆಡಳಿತ ಪ್ರಪಂಚದಲ್ಲೇ ಅತ್ಯುತ್ತಮವಾದದ್ದು” ಅನ್ನುವ ಹೇಳಿಕೆಯನ್ನೂ ಕೊಡಲಾಯಿತು.

ಹನ್ನೊಂದನೆಯ ವಯಸ್ಸಿಗೇ ಪಟ್ಟ
೧೯ನೇ ಶತಮಾನದ ಕೊನೆಯಲ್ಲಿ ಮೈಸೂರು ರಾಜ್ಯದಲ್ಲಿ ತೀವ್ರ ಬರಗಾಲ ಬಂದಿತ್ತು ಮತ್ತು ಚಿಕ್ಕ ವಯಸ್ಸಿನಲ್ಲೇ ಇವರ ತಂದೆ ಚಾಮರಾಜ ಒಡೆಯರ್ ಕಲ್ಕತ್ತ ನಗರದಲ್ಲಿ ತೀರಿದ್ದರಿಂದ ರಾಜ್ಯದಲ್ಲಿ ಗೊಂದಲವೇ ಉಂಟಾಗಿತ್ತು. ಆಗ ಕೃಷ್ಣರಾಜೇಂದ್ರರರಿಗೆ ಕೇವಲ ೧೧ ವರ್ಷವಾದರೂ ಪಟ್ಟಕ್ಕೆ ಏರಬೇಕಾಯಿತು (೧/೦೨/೧೮೯೫). ಆದರೆ ಅವರ ತಾಯಿ ಕೆಂಪರಾಜಮ್ಮಣಿ ರಾಜ್ಯದ ಆಡಳಿತವನ್ನು ಕೃಷ್ಣರಾಜೇಂದ್ರ ಅವರಿಗೆ ೧೮ ವರ್ಷ ತುಂಬುವ ವರೆಗೂ ವಹಿಸಿಕೊಂಡಿದ್ದರು. ಜಗನ್ಮೋಹನ್ ಅರಮನೆಯಲ್ಲಿ ಅಂದಿನ ವೈಸರಾಯ್ ಲಾರ್ಡ್ ಕರ್ಜನ್ ಅವರ ನೇತೃತ್ವದಲ್ಲಿ ೮/೧೨/೧೯೦೨ ರಂದು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಇಪ್ಪತ್ತು ನಾಲ್ಕನೆಯ ಮೈಸೂರ ಮಹಾರಾಜರಾದರು. ಇವರ ವಂಶದಲ್ಲಿ ಇವರು ನಾಲ್ಕನೆಯ ಕೃಷ್ಣರಾಜೇಂದ್ರ ಆದ್ದರಿಂದ ನಾಲ್ವಡಿ ಸೇರಿಸಲ್ಪಟ್ಟಿತು. ಅವ್ರು ೧೯೦೦, ಜೂನ್ ೬ರಂದು ಈಗಿನ ಗುಜರಾತ್ ರಾಜ್ಯದ ಕಾಠಿಯಾವಾಡದ ರಾಜಕುಮಾರಿ ಪ್ರತಾಪಕುಮಾರಿ ಇವರ ಜೊತೆ ವಿವಾಹ ನಡೆಯಿತು

ಅವರ ಆಡಳಿತದ ಸಾಧನೆಗಳು

ಈ ಕಾಲದ  ಮತ್ತು ಸ್ವಲ್ಪ ಹಿಂದೆ ಇದ್ದ ಆಡಳಿತದ ಕೆಲವು ಉಲ್ಲೇಖನೀಯ ಅಂಶಗಳನ್ನು  ಇಲ್ಲಿ ನೋಡೋಣ.

  • ೧೮೭೬ ನಲ್ಲಿ ಮಹಾರಾಜಾ ಸಂಸ್ಕೃತ ಕಾಲೇಜ್ ಪ್ರಾರಂಭ (ಭಾರತದ ಮೊಟ್ಟ ಮೊದಲನೆಯ ಸಂಸ್ಕೃತ ಕಾಲೇಜ್ ಸ್ಥಾಪಿತವಾದದ್ದು ೧೭೯೧ ಕಾಶಿ ನಗರದಲ್ಲಿ ಒಬ್ಬ ಬ್ರಿಟಿಷ್  ಪ್ರಜೆ ಜೋನಾತನ್ ಡಂಕನ್ ಎಂಬಾತನಿಂದ)  
  • ಮೊಟ್ಟಮೊದಲನೆಯ ಹೈಡ್ರೋ ಎಲೆಕ್ಟ್ರಿಕ್ ಉತ್ಪಾದನೆ ೧೯೦೨ ನಲ್ಲಿ ಶಿವನಸಮುದ್ರದಲ್ಲಿ ಪ್ರಾರಂಭವಾಯಿತು. ಇದರ ಬ್ರಿಟಿಷರ ಮುಖ್ಯ ಉದ್ದೇಶ ಬೇರೆ ಅನ್ನಿ, ಕೋಲಾರದ ಚಿನ್ನದ ಗಣಿಗೆ ವಿದ್ಯುಚ್ಛಕ್ತಿಯ ಅವಶ್ಯಕತೆ ಇತ್ತು!
  • ೧೯೦೩ರಲ್ಲಿ ಭಾರತದ ಮೊದಲನೆಯ ಕಣ್ಣಾಸ್ಪತ್ರೆ, ಬೆಂಗಳೂರಿನ ಮಿಂಟೋ ಆಸ್ಪತ್ರೆ (Minto Eye hospital).
  • ಆಗಸ್ಟ್ ಐದನೇ ತಾರೀಕು ೧೯೦೫ ಬೆಂಗಳೂರಿನ ರಸ್ತೆಗಳಿಗೆ ಏಷ್ಯಾದ ಮೊದಲನೆಯ ವಿದ್ಯುತ್ ರಸ್ತೆ ದೀಪಗಳು. ಕೆ ರ್ ಮಾರ್ಕೆಟ್ ನಲ್ಲಿ ಸರ್ ಜಾನ್ ಹ್ಯುಯೆಟ್ ಎಂಬಾತನಿಂದ ಉದ್ಘಾಟನೆ. 
  • ಚಿತ್ರದುರ್ಗದಲ್ಲಿ ವಾಣಿವಿಲಾಸ ಅಣೆಕಟ್ಟು.
  • ಜಮ್ಶೇಟ್ ಜಿ ಟಾಟಾ ಅವರಿಗೆ ೩೭೧ ಎಕರೆ ಮತ್ತು ಐದು ಲಕ್ಷ ರೂಪಾಯಿ ಹಣ ಸಹಾಯದಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರಾರಂಭ.
  • ರಾಜ್ಯದಲ್ಲಿ ರೈಲು ಸಂಪರ್ಕ ಮತ್ತು ಇನ್ನೂ ಅನೇಕ ಸುಧಾರಣೆಗಳು ಪ್ರಾರಂಭವಾದವು
  • ಗ್ರಾಮ ಕೈಗಾರಿಕೆಗಳಾದ ಮರಗೆಲಸ, ನೇಯ್ಗೆ, ರೇಶ್ಮೆ, ಕಬ್ಬಿಣ ಮತ್ತು ಬೆತ್ತದ ಕೆಲಸಗಳು, ಚೆನ್ನಪಟ್ಣದಲ್ಲಿ ಗೊಂಬೆ ಮತ್ತು ಬಣ್ಣದ ಕೆಲಸ. – ಇವುಗಳ ತರಬೇತಿ ಕೇಂದ್ರಗಳನ್ನು ಸಹ ಸ್ಥಾಪಿಸಿಲಾಯಿತು.
  • ೧೯೦೩ ರಲ್ಲಿ ಮೈಸೂರು ನಾಗರಾಭಿವೃದ್ಧಿ ಮಂಡಳಿ ರಚಿತವಾಗಿ, ಅದರ ಫಲವಾಗಿ ಮೈಸೂರು ನಗರ ಭಾರತದಲ್ಲಿ ಅತ್ಯಂತ ಸುಂದರ ನಗರವೆಂದು ಹೆಸರು ಪಡೆಯಿತು. 
  • ೧೯೦೫ರಲ್ಲಿ ಸಹಕಾರಿ ಸಂಘ ಮತ್ತು ಬ್ಯಾಂಕ್ ಗಳು ಸ್ಥಾಪಿತವಾದವು.
  • ೧೮೮೧ ರಲ್ಲಿ ಪ್ರಾರಂಭವಾಗಿದ್ದ ಮೈಸೂರು ಪ್ರತಿನಿಧಿಗಳ ಸಭೆ, ೧೯೦೭ ರಲ್ಲಿ ವಿಸ್ತಾರಗೊಂಡು Mysore Legislative Assembly ಯಾಯಿತು. ರಾಜ್ಯದ ಆಡಳಿತಕ್ಕೆ ನೆರವಾಗುವ  ಕಾನೂನುಗಳು ಮತ್ತು ನಿಬಂಧನೆಗಳನ್ನು ಜಾರಿಗೆ ತರುವುದು ಇದರ ಉದ್ದೇಶ.ವಾಗಿತ್ತು. ಸಮಾಜದ ಹಲವಾರು ಗಣ್ಯ ವ್ಯೆಕ್ತಿ ಗಳು ಇದರಲ್ಲಿ ಭಾಗವಹಿದ್ದರು. 

ತರುಣ ಮಹಾರಾಜರಿಗೆ ಸಾಕಷ್ಟು ತರಬೇತಿಯಾಗಿತ್ತು. ಬಾಲ್ಯದಲ್ಲಿ ಅರಮನೆಯಲ್ಲೇ ಇವರ ಶಿಕ್ಷಣ ಆಯಿತು.  ಶ್ರೀ ರಾಘವೇಂದ್ರ ರಾಯರಿಂದ ಕನ್ನಡ ಮತ್ತು ಸಂಸ್ಕೃತದ ಅಭ್ಯಾಸ,ಮತ್ತು ಆಡಳಿತದ ಕ್ರಮ ಮತ್ತು ಜವಾಬ್ದಾರಿ ಸರ್ ಸ್ಟೋವರ್ಟ್ ಫ್ರೇಸರ್ ಅವರಿಂದ ಪಡೆದರು . (ಬೆಂಗಳೂರಿನ ಈಗಿನ Fraser Town ಇವರ ಜ್ಞಾಪಕವಾಗಿ ). ಕ್ರಮೇಣ, ಕರ್ನಾಟಕ ಮತ್ತು ಪಾಶ್ಚಿಮಾತ್ಯ ಸಂಗೀತದ  ಅಭ್ಯಾಸ ಸಹ ದೊರಕಿತು. ಅರಮನೆಯಲ್ಲೇ ಇದ್ದ ತಮ್ಮ ಕಾರ್ಯಾಲಯಕ್ಕೆ ದಿನವೂ ಇತರ ಸರಕಾರಿ  ನೌಕರರಂತೆ ತಪ್ಪದೆ ಹೋಗುತ್ತಿದ್ದರು. ರಾಜ್ಯದ ಅನೇಕ ಭಾಗಗಳಿಗೆ ಭೇಟಿ ಮಾಡಿ ಪ್ರಜೆಗಳ ಕಷ್ಟ ಸುಖಗಳನ್ನು ತಿಳಿದು ಇದಕ್ಕೆ ಬೇಕಾದ ಪರಿಹಾರಗಳನ್ನು ಜಾರಿಗೆ ತಂದರು. ಶಿಕ್ಷಣದ ಬೆಳವಣಿಗಯ ಬಗ್ಗೆ   ತುಂಬಾ ಗಮನಕೊಟ್ಟು ದೇಶದ ಮೂಲೆ ಮೂಲೆಗಳಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳ ಆರಂಭವಾಯಿತು. ಶಿಕ್ಷಣದ ಕಡ್ಡಾಯ ಹಂತಹಂತವಾಗಿ ಜಾರಿಗೆ ತರಲು ಶಾಸನವನ್ನು ಮಾಡಿದರು. ಹೆಣ್ಣು ಮಕ್ಕಳ ಮತ್ತು ಹಿಂದುಳಿದ ಪಂಗದಗಳಿಗೆ ವಿದ್ಯಾಭ್ಯಾಸ ಹರಡಲು ತಕ್ಕ ಕಾರ್ಯಕ್ರವನ್ನು  ಕೈಕೊಂಡರು.

ಸುಧಾರಣೆಗಳು ಮತ್ತು ದಕ್ಷ ಆಡಳಿತ

ಮಹಾರಾಜರ ಆಡಳಿತದಲ್ಲಿ, ಗ್ರಾಮೀಣ ಜನರ ಬಡತನವನ್ನು ನಿವಾರಿಸುವುದು, ಅರೋಗ್ಯ ಮತ್ತು ಶಿಕ್ಷಣ ಕಡೆ ಗಮನ, ಬಾಲ್ಯವಿವಾಹದ ರದ್ದು  (ಎಂಟು ವರ್ಷದೊಳಗಿನ ಹುಡುಗಿಯರ) ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ  ಇತ್ಯಾದಿ ಸುಧಾರಣೆಗಳು ಇವರ ಗುರಿಯಾಗಿತ್ತು.   

ಪುಣೆಯಲ್ಲಿ ನೀರಾವರಿ ಇಲಾಖೆಯಲ್ಲಿ ಹೆಸರು ಪಡೆದಿದ್ದ  ಎಂ.ವಿಶ್ವೇಶರಯ್ಯನವರು ಕನ್ನಡಿಗರೇ ಆಗಿದ್ದರೂ, ಅವರ ಇಂಜನೀರಿಂಗ್ ಶಿಕ್ಷಣ ಪಡೆದಿದ್ದು ಪೂನಾ ಇಂಜಿನೀರಿಂಗ್ ಕಾಲೇಜ್ ನಲ್ಲಿ. ನಂತರ  ಬಾಂಬೆ ಪ್ರಾಂತ್ಯದಲ್ಲಿ ಕೆಲಸದಲ್ಲಿದ್ದವರು. ಅವರನ್ನು ಮೈಸೂರು ರಾಜ್ಯಕ್ಕೆ ಬರುವಂತೆ ಮಾಡಿದವರು ದಿವಾನ್ ಆನಂದ ರಾಯರು. ಮೊದಲು ನೀರಾವರಿ ಇಲಾಖೆಯ ಮುಖ್ಯಸ್ಥರಾಗಿ ಬಂದು ೧೯೧೨ ರಲ್ಲಿ ಆನಂದರಾಯರು ನಿವೃತವಾದ ನಂತರ ಮಹಾರಾಜರು ಇವರನ್ನು ದಿವಾನರಾಗಿ ಮಾಡಿದರು.  ಇವರ  ಕಾಲದಲ್ಲಿ ರಾಜ್ಯದ ಸರ್ವವಿಧದ ಬೆಳವಣಿಗೆಯ ಯುಗ ಆರಂಭವಾಯಿತು. ಕೈಗಾರಿಕೆಯ ಕ್ಷೇತ್ರ ವಿಶೇಷವಾಗಿ ಬೆಳೆಯಿತು. ಮಂಡ್ಯದ ಸಕ್ಕರೆ ಕಾರ್ಖಾನೆ, ಮೈಸೂರಿನಲ್ಲಿ ಗಂಧದ ಎಣ್ಣೆ ತಯಾರಿಕೆ, ಭದ್ರಾವತಿಯಲ್ಲಿ  ಕಾಗದ, ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ, ಬೆಂಗಳೂರಿನ ಗಾಜು ಮತ್ತು ಪಿಂಗಾಣಿ, ಮೈಸೂರು ಲ್ಯಾಂಪ್ಸ್, ಬೆಂಗಳೂರಿನಲ್ಲಿ ಇಂಜಿನೀರಿಂಗ್ ಕಾಲೇಜ್, ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಮತ್ತು ಮೈಸೂರ ಬ್ಯಾಂಕ್,  ಕನ್ನಡ ಸಾಹಿತ್ಯ ಪರಿಷತ್  ಮತ್ತು ಅನೇಕ ಸಂಸ್ಥೆಗಳು, ಇವೆಲ್ಲ ಸ್ಥಾಪಿತವಾದವು.

ಶಿಕ್ಷಣದ ಪೋಷಕ

ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವವರಿಗೆ ವಿದ್ಯಾರ್ಥಿವೇತನ ನೀಡುವ ಪದ್ದತಿಯನ್ನು ಜಾರಿಗೆ ತಂದುದಲ್ಲದೆ ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವನ್ನು ಸ್ಥಾಪಿಪಿಸದರು. 

ಟಿ. ಪಿ . ಕೈಲಾಸಂ ಅವರು ಗಣಿ ಶಾಸ್ತ್ರವನ್ನು ಓದಲು ಇಂಗ್ಲೆಂಡ್ ಗೆ ಬಂದಿದ್ದು ಮಹಾರಾಜರ ನೆರವಿನಿಂದಲೇ. ಕಾಶಿ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯಾಗಿದ್ದ ಮಹಾರಾಜರು ಆ ಸಂಸ್ಥೆಗೆ ೨ ಲಕ್ಷ ರೂಪಾಯಿಗಳ ದಾನಮಾಡಿದ್ದಲ್ಲದೆ ಪ್ರತಿ ವರ್ಷ ೧೨,೦೦೦ ರೂಪಾಯಿಗಳ ಧನ ಸಹಾಯವನ್ನು ಮಾಡುತ್ತಿದ್ದರು.    ಮೊದಲನೇ ಮಹಾ ಯುದ್ಧ (೧೯೧೪-೧೯೧೮) ಆರಂಭವಾದಾಗಲೇ ಮಹಾರಾಜರು ರೂ ೫೦ ಲಕ್ಷ ಕಾಣಿಕೆಯನ್ನು ಮತ್ತು ೨ ಲಕ್ಷ ಇಂಡಿಯಾ ರಿಲೀಫ್ ಫಂಡ್ ಗೂ  ನೀಡಿದರು. ಮೈಸೂರಿನ ಸೈನಿಕರು ಈಜಿಪ್ಟ್ ಮತ್ತು ಪ್ಯಾಲಸ್ಟೈನ್ ಪ್ರದೇಶದಲ್ಲಿ ಹೋರಾಡಿದರು.

”ಮಾದರಿ ರಾಜ್ಯ’’ದತ್ತ ಮುನ್ನಡೆ
೧೯೨೩ ರಲ್ಲಿ ರಾಜಘೋಷಣೆ ಪ್ರಕಟಣೆಯಾಗಿ ಪ್ರಜಾಪ್ರತಿನಿಧಿ ಸಭೆಯು ಪ್ರಥಮ ಬಾರಿಗೆ ಶಾಸನಬದ್ಧ ಸಂಸ್ಥೆಯಾಯಿತು (ಈಗಿನ ವಿಧಾನ ಸಭೆ). ಇದರ ಸಂಖ್ಯೆ ೨೫೦ -೨೭೫ ಎಂದು ನಿರ್ಧರಿಸಿ, ಬಹು ಮಂದಿಗೆ ಮತದಾನ ಮಾಡುವ ಅವಕಾಶ ದೊರಕಿತು. ಮೊದಲನೇ ಬಾರಿಗೆ ಮಹಿಳೆಯರಿಗೆ ಈ ಹಕ್ಕು ಬಂತು ಎನ್ನುವದು ಗಣನೀಯ.
ಹಿಂದುಳಿದ ವರ್ಗಗಳಿಗೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಜನಾಂಗಗಳಿಗೆ ೩೫ ಸ್ಥಾನಗಳು ಮತ್ತು ಗ್ರಾಮಾಂತರ ಪ್ರದೇಶದಿಂದ ಬಂದವರಿಗೆ ೧೫೦ ಸೀಟುಗಳು ಮೀಸಲಾಗಿತ್ತು.
೧೯೧೯ ರಲ್ಲಿ ಹಿಂದುಳಿದ ಜನಾಂಗಕ್ಕೆ ವಿದ್ಯಾಭ್ಯಾಸ ಮತ್ತು ಕೆಲಸದ ಅವಶ್ಯಕತೆಯ ಅರಿವಾಗಿ, ರಾಜ್ಯದ ಹಿರಿಯ ಅಧಿಕಾರಿಯಾಗಿದ್ದ ಲೆಸ್ಲಿ ಮಿಲ್ಲರ್ ಅವರನ್ನು ಈ ಬಗ್ಗೆ ಸಲಹೆ ಕೊಡುವುದಕ್ಕೆ ನೇಮಿಸಿದರು. ಇವರ ವರದಿಯಲ್ಲಿ ( Millers Report ) ೨೫% ಈ ಜನಾಂಗಕ್ಕೆ ಮೀಸಲಾಗಬೇಕು ಎಂದು ಸಲಹೆ ಕೊಟ್ಟರು ಮತ್ತು ಮಹಾರಾಜರಿಂದ ಒಪ್ಪಿಗೆ ಸಹ ಬಂತು. ಅಂದ ಮೇಲೆ ಇವತ್ತಿನ
Reservation Policy ಹೊಸತೇನಲ್ಲ.
೧೯೨೬ರಲ್ಲಿ ಮಹಾರಾಜರ ಆಪ್ತ ಕಾರ್ಯದರ್ಶಿಯಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ದಿವಾನರಾಗಿ , ಸರ್ ಎಂ ವಿ ಹಾಕಿದ್ದ ತಳಹದಿಯ ಮೇಲೆ ರಾಜ್ಯದ ಬೆಳವಣಿಗೆ ಇನ್ನು ಮುಂದುವರೆಯಿತು.
ಮೈಸೂರಿನ ಉತ್ಪನ್ನಗಳನ್ನು ವಿದೇಶದಲ್ಲಿ ಮಾರಾಟ ಮಾಡಲು ಅನುಕೂಲವಾಗಲೆಂದು ಲಂಡನ್ ನಲ್ಲಿ ರಾಜ್ಯದ ಹಿರಿಯ ಅಧಿಕಾರಿ ಎಮ್ ಏ ಶ್ರೀನಿವಾಸನ್ ಅವರನ್ನು ಟ್ರೇಡ್ ಕಮಿಷನರ್ ನ್ನಾಗಿ ನೇಮಿಸಿದರು. ಮೈಸೂರ್ ಸೇಲ್ಸ್ ಇಂಟರ್ನ್ಯಾಷನಲ್ (MSIL ) ಸ್ಥಾಪನೆಯಾಗಿ ಲಂಡನ್ನಿನ ಪಿಕಾಡಿಲ್ಲಿಯಲ್ಲಿ ( Piccadilly) ಇದರ ಕಚೇರಿ ಇತ್ತು. ಇದನ್ನು ಸುಮಾರು ೨೫-೩೦ ವರ್ಷದ ಹಿಂದೆ ಇಲ್ಲಿ ಮುಚ್ಚಿದರು.
ಮೈಸೂರಿನಲ್ಲಿ ವೈದ್ಯ ಶಿಕ್ಷಣ ಕಾಲೇಜ್ (ಮೈಸೂರ್ ಮೆಡಿಕಲ್ ಕಾಲೇಜ್ ) ೧೯೨೪ ರಲ್ಲಿ ಪ್ರಾರಂಭವಾಯಿತು.

ಕಾವೇರಿಗೊಂದು ಆಣೆಕಟ್ಟು
೧೯ನೇ ಕಾಲದಲ್ಲಿ ತೀವ್ರ ಬರಗಾಲದಿಂದ ಮೈಸೂರು ಮತ್ತು ಮಂಡ್ಯ ಪ್ರದೇಶಗಳಲ್ಲಿ ಕ್ಷಾಮ ಬರುವುದು ಸಾಮಾನ್ಯವಾಗಿತ್ತು ಹತ್ತಿರಲ್ಲೇ ಹರಿಯುವ ಕಾವೇರಿ ನದಿಗೆ ಆಣೆಕಟ್ಟು ಕಟ್ಟುವ ಯೋಜನೆ ಇತ್ತು ಆದರೆ ಅಂದಿನ ಮದ್ರಾಸ್ ಪ್ರೆಸಿಡೆನ್ಸಿ ವಿರೋಧಿಸಿತ್ತು. ದಿವಾನ್ ಆನಂದರಾಯರು ಮಹಾರಾಜರೊಂದಿಗೆ ಚರ್ಚಿಸಿ ಇದಕ್ಕೆ ಬೇಕಾಗಿದ್ದ ೮೧ ಲಕ್ಷ ರೂಪಾಯಿಗಳನ್ನು ಮಂಜೂರ್ ಮಾಡಿಸಿ ೧೧/೧೦/೧೯೧೧ ದಿನ ಈ ಜಲಾಶದ ನಿರ್ಮಾಣದ ಕೆಲಸ ಪ್ರಾರಂಭವಾಗಿ ೧೯೩೧ ರಲ್ಲಿ ಸಂಪೂರ್ಣವಾಯಿತು. ಇದರಿಂದ ಸಾವಿರಾರು ಎಕರೆ ಭೂಮಿ ಫಲವತ್ತಾಯಿತು
ಕೃಷ್ಣರಾಜಸಾಗರದ ಜಲಾಶಯದ ಪ್ರದೇಶದಲ್ಲಿ ದೊಡ್ಡ ಉದ್ಯಾನವನ ಮತ್ತು ಮೈಸೂರು ನಗರದಲ್ಲಿ ವಿಶಾಲವಾದ ರಸ್ತೆಗಳು, ಸಾಲು ಮರಗಳು ಮತ್ತು ಉಪವನ (ಪಾರ್ಕ್ಸ್) ನಿಮಾಣಗೊಂಡವು.
ಒಣ ಪ್ರದೇಶಗಳಾಗಿದ್ದ ಮಂಡ್ಯ, ಟಿ ನರಸೀಪುರ ತಾಲೋಕ್ ಗಳಿಗೆ ನೀರಾವರಿ ಸೌಲಭ್ಯ ಮತ್ತು ಅನೇಕ ಕೈಗಾರಿಕೆಗಳು ಮಹಾರಾಜರ ನೇತೃತ್ಯದಲ್ಲಿ ನಿರ್ಮಾಣವಾಯಿತು.
೧೯೩೦ ರಲ್ಲಿ ಸರ್ ಸಿ ವಿ ರಾಮನ್ ಅವರಿಗೆ ಭೌತಶಾಸ್ತ್ರದ ನೊಬೆಲ್ ಪಾರಿತೋಷಕ ಬಂದಾಗ ಮಹಾರಾಜರು ಅವರಿಗೆ ೧೦ ಎಕರೆ ಜಮೀನನ್ನು ಕೊಟ್ಟು ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಾರಂಭಿಸುವದಕ್ಕೆ ನೆರವು ನೀಡಿದರು. ೧೯೩೮ರಲ್ಲಿ ಮಹಾರಾಣಿ ಕಾಲೇಜ್ ಮತ್ತು ಕೃಷಿ ಮತ್ತು ವ್ಯವಸಾಯ ಅಧ್ಯಯನದ ಕಾಲೇಜ್ ಸಹ ಪ್ರಾರಂಭವಾಯಿತು.

ಲಂಡನ್ನಿನ ವಿಕ್ಟೋರಿಯಾ ನಿಲ್ದಾಣದಲ್ಲಿ ಸ್ವಾಗತ (೧೯೩೬)

ಇಂಗ್ಲೆಂಡಿನಲ್ಲಿ ಮಹಾರಾಜರು
೧೯೩೬ರಲ್ಲಿ ತಮ್ಮ ಖಾಸಕಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ಇಂಗ್ಲೆಂಡ್ ದೇಶಕ್ಕೆ ಪ್ರಯಾಣ ಬೆಳೆಸಿದರು. ಅದು ಅವರ ಪಪ್ರಥಮ ವಿದೇಶಯಾತ್ರೆಯಾಗಿತ್ತು. ೨೫ ದಿನದ ಸಮುದ್ರ ಪ್ರಯಾಣದ ನಂತರ ಲಂಡನ್ ನಲ್ಲಿ ಡಾರ್ಚೆಸ್ಟರ್ ಹೋಟೆಲಿನಲ್ಲಿ ತಂಗಿದ್ದರು. ಸಮುದ್ರಯಾನದಲ್ಲಿ ಇಂಗ್ಲೆಂಡ್ ತಲುಪಿ ನಂತರ ಅವರು ರೈಲು ಮಾರ್ಗವಾಗಿ ಹೊರಟು ಲಂಡನ್ನಿನ ವಿಕ್ಟೋರಿಯಾ ಸ್ಟೇಷನ್ನಿನಲ್ಲಿಳಿದಾಗ ಕೂಡಿತ್ತು ಕಿಕ್ಕಿರಿದ ಜನಸ್ತೋಮ. (ಫೊಟೋ).ದಿವಾನ್ ಮತ್ತು ಮಹಾರಾಜರನ್ನು ಸ್ವಾಗತಿಸಿದವರಲ್ಲಿ ಫ್ರೇಸರ್ ಟೌನ್ ಖ್ಯಾತಿಯ ಸರ್ ಸ್ಟುಅರ್ಟ್ ಫ್ರೇಸರ್ ಸಹ ಇದ್ದರು. ಭಾರತ ಮೂಲದ ೧೫೦ ವಿದ್ಯಾರ್ಥಿಗಳು ಕೂಡಿ ಮೆರವಣಿಗೆಯಲ್ಲಿ ಡಾರ್ಚೆಸ್ಟರ್ ಹೊಟೆಲ್ ಗೆ ಕರೆದೊಯ್ದರು. ಹೋಟೆಲ್ ತಲುಪಲು ಅರ್ಧ ಗಂಟೆಗೂ ಹೆಚ್ಚು ಸಮಯ (ಆಗಿನ ಕಾಲದಲ್ಲಿ) ಬೇಕಾಯಿತಂತ! ಮರುದಿನ ಡೇಲಿ ಸ್ಕೆಚ್ ಪತ್ರಿಕೆ ತನ್ನ ವರದಿಯಲ್ಲಿ ”ವಿಕ್ಟೋರಿಯಾ ಸ್ಟೇಶನ್ ದಲ್ಲಿ ಅರ್ಧ ಗಂಟೆ ಇಂದ್ರಧನುಷ್ಷಿನ ಒಂದು ತುದಿಯೇ ಇಳಿದಿತ್ತು” ಎಂದು ಬಣ್ಣಿಸಿತ್ತು!

ಕ್ರಾಯ್ಡನ್ ವಿಮಾನ ನಿಲ್ದಾಣದಿಂದ ಬರ್ಲಿನ್ನಿಗೆ ಹೊರಟು ನಿಂತ ಮಹಾರಾಜರು

ಹೋಟೆಲ್ಲಿನಲ್ಲಿ ಆಚಾರ್ಯವಂತ ಮಹಾರಾಜರಿಗೆ ತಕ್ಕ ಸಿದ್ದತೆಗಳನ್ನು ಮಾಡಲಾಗಿತ್ತು. ಸರ್ ಮಿರ್ಜಾ ಇಸ್ಮಾಯಿಲ್ ಅವರ ನೇತೃತ್ವದಲ್ಲಿ ಹಲವಾರು ಸೇವಕರು ಅಧಿಕಾರಿಗಳು ಮತ್ತು ದಿನನಿತ್ಯದ ಪೂಜೆಗಾಗಿ ಇಬ್ಬರು ಪುರೋಹಿತರು ಸಹ ಇವರ ತಂಡದಲ್ಲಿದ್ದರು! ಒಂದು ಪ್ರತ್ಯೇಕ ಕೋಣೆಯಲ್ಲಿ ದಿನಾಲು ಚಾಮುಂಡೇಶ್ವರಿಯ ಪೂಜೆ ನಡೆಯುತಿತ್ತು. ಅವರ ಅಂದಿನ ಇಂಗ್ಲೆಂಡ್ ವಾಸ್ತವ್ಯದಲ್ಲಿ ಮಹರಾಜರು ಥೇಮ್ಸ್ ದಂಡೆಯ ಮೇಲೆ ಉಪಾಕರ್ಮ ಸಹ ಮಾಡಿದರು ಎನ್ನುವ ದಾಖಲೆಯಿದೆ. (ಈಗಿನ ಮೈಸೂರು ಮಹಾರಾಜರಾದ ಶ್ರಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಳೆದ ೨೦೨೩ ಸೆಪ್ಟೆಂಬರ್ ೩೦ರಂದು ಕನ್ನಡ ಬಳಗ ಯು ಕೆ ದ ”ಸಂಭ್ರಮ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ತಮ್ಮ ಭಾಷಣದಲ್ಲಿ ಈ ಘಟನೆಯನ್ನು ನೆನೆದರು.-ಸಂ).
ಆ ನಂತರ ಅವರು ಬರ್ಲಿನ್ ಗೆ ವಿಮಾನದಲ್ಲಿ ಲಂಡನ್ ಹತ್ತಿರದ ಕ್ರಾಯ್ಡನ್ ವಿಮಾನ ನಿಲ್ದಾಣದಿಂದ ತೆರಳಿದರು.  ಆಗ ಅವರೊಡನೆ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಸಹ ಇದ್ದರು. ನಂತರ ಭಾರತಕ್ಮರಳಿದರು.

ಕೊನೆಯ ದಿನಗಳು
ಇಷ್ಟರಲ್ಲಿ, ಮಹಾರಾಜರ ಅರೋಗ್ಯ ದಿನೇ ದಿನೇ ಹದಗೆಡುತ್ತಿತ್ತು,. ಕೊನೆಗೆ ಹೃದಯಾಘಾತದಿಂದ ೩/೦೮/೧೯೪೦ ರಂದು ನಿಧನರಾದರು . ಲಂಡನ್ ಟೈಮ್ಸ್ ಪತ್ರಿಕೆ ಯಲ್ಲಿ ಇವರ ಮರಣ ಈ ರೀತಿ ಪ್ರಕಟವಾಯಿತು.

ಇವರಿಗೆ ಮಕ್ಕಳಿರಲಿಲ್ಲ. ಆದುದರಿಂದ ಕಂಠೀರವ ನರಸಿಂಹರಾಜ ಒಡೆಯರ್ ಅವರ ಪುತ್ರ ಜಯಜಾಮರಾಜೇಂದ್ರ ಒಡೆಯರ್ ೮/೯/೧೯೪೦ ದಿನ ರಾಜ್ಯದ ೨೫ನೇ ಹಾಗು ಕೊನೆಯ ಮಹಾರಾಜರಾದರು. ಮಹಾರಾಜರಾಗಿ ಇವರ ಆಡಳಿತ ಮುಗಿದ ನಂತರ (೨೫/೦೧/೧೯೫೦) ರಾಜಪ್ರಮುಖ ಮತ್ತು ರಾಜ್ಯಪಾಲರಾಗಿ ನೇಮಕವಾದರು. ಅವರು ೨೩/೦೯/೧೯೭೪ ರಂದು ನಿಧನರಾದರು.

ನಾಲ್ವಡಿಯವರ ಕೊಡುಗೆಯನ್ನು ನೆನೆಯೋಣ ಇಂದು.
ನಾಲ್ವಡಿ ಕೃಷ್ಣರಾಜೇಂದ್ರ ಮಹಾರಾಜರು ಮೈಸೂರು ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದದ್ದು. ಕನ್ನಡಿಗರಾದ ನಾವು ಇವರನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಇಂದು ಕರ್ನಾಟಕ ಸರ್ಕಾರಕ್ಕೆ ಮತ್ತು ಜನತೆಗೆ ಇದರ ಬಗ್ಗೆ ಯಾವ ರೀತಿಯಲ್ಲೂ ಆಸಕ್ತಿ ಇಲ್ಲವೇನೋ ಅನ್ನಿಸುತ್ತದೆ. ಟಿಪ್ಪು ಸುಲ್ತಾನರ ಜಯಂತಿ ಮಾಡಬೇಕೆಂದು ಸರ್ಕಾರದ ಅಸೆ ಇತ್ತು, ಮಾಡಲಿ, ಏನೂ ಅಭ್ಯಂತರ ಇಲ್ಲ, ಆದರೆ ಕನ್ನಡ ನಾಡನ್ನು ಮಾದರಿ ರಾಜ್ಯವನ್ನಾಗಿ ಮಾಡಿದವರು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು. ಈ ವರ್ಷ ಜೂನ್ ತಿಂಗಳಲ್ಲಿ ಇವರ ೧೪೦ ವರ್ಷದ ಜನ್ಮ ದಿನ, ಕನ್ನಡ ಜನತೆ ಆ ದಿನವನ್ನಾದರೂ ಜ್ಞಾಪಿಸಿಕೊಂಡು ನಮ್ಮ ಕೃತಜ್ಞತೆಯನ್ನು ಅರ್ಪಿಸೋಣ. ಆ ನಿಟ್ಟಿನಲ್ಲಿ ಇದೊಂದು ನನ್ನ ಚಿಕ್ಕ ಪ್ರಯತ್ನ.
(ಈ ಲೇಖನನಕ್ಕೆ ಅನೇಕ ಸಲಹೆಗಳನ್ನು ಕೊಟ್ಟು ಸಹಾಯ ಮಾಡಿದ ಶ್ರೀವತ್ಸ ದೇಸಾಯಿ ಅವರಿಗೆ ನನ್ನ ಕೃತಜ್ಞತೆಗಳು.)
ರಾಮಮೂರ್ತಿ
ಬೇಸಿಂಗ್ ಸ್ಟೋಕ್



* ಟಿಪ್ಪಣಿ -ಶ್ರೀವತ್ಸ ದೇಸಾಯಿ

ಆಚಾರವಂತ ಮಹಾರಾಜರು.

ರಾಮಮೂರ್ತಿಯವರು ಮೇಲಿನ ಲೇಖನದಲ್ಲಿ ಉಲ್ಲೇಖಿಸಿದಂತೆ ನಾಲ್ವಡಿಯವರು ಆಚಾರವಂತರು ಅಂದಾಯ್ತು. *ದಿನಕರ್ ಕೆ ಆರ್ ಅವರು ತಮ್ಮ ‘ಮ್ಯೂಸಿಂಗ್ಸ್ ಆಫ್ ಎ ಮೈಸೂರಿಯನ್‘ ಬ್ಲಾಗ್ ನಲ್ಲಿ ಮಹಾರಾಜರು ಓಕ್ಲಿ ಕೋರ್ಟ್ ನಲ್ಲಿ ಉಪಾಕರ್ಮ ಮಾಡಿದರು ಎಂದು ಬರೆದಿದ್ದಾರೆ. ಮೇಲೆ ಹೇಳಿದಂತೆ ತಮ್ಮ ಭಾಷಣದಲ್ಲಿ ಈಗಿನ ಮಹಾರಾಜರು ಶ್ರೀಕೃಷ್ಣದತ್ತ ಒಡೆಯರ್ ಅವರು ಟೇಮ್ಸ್ ದಂಡೆಯಲ್ಲಿ ಅಂತ ಖಚಿತ ಪಡಿಸಿದರು. ಎಲ್ಲಿದೆ ಆ ಸ್ಥಳ ಅಂತ ಅನ್ವೇಷಣೆ ಮಾಡುತ್ತ ಹೊರಟ ನನಗೆ ವಿಂಡ್ಸರ್ನಲ್ಲಿ ಟೇಮ್ಸ್ ನದಿತೀರದಲ್ಲಿಯ ಒಂದು ಭವ್ಯ ಮಹಲಿನ ಪತ್ತೆಯಾಯಿತು. ಹಿಂದೊಮ್ಮೆ ಶಿಪ್ ಓನರ್ ಅರ್ನೆಸ್ಟ್ ಒಲೀವಿಯರ್ ಅದರಲ್ಲಿ ವಾಸವಾಗಿದ್ದ ಅಂತ ೧೯೩೬ರ ೨೧, ಜೂಲೈ ಡೇಲಿ ಮಿರ್ರರ್ ಪತ್ರಿಕಾವರದಿಯಿಂದ (ಕೆಳಗಿನ ಚಿತ್ರ ನೋಡಿರಿ) ಗೊತ್ತಾಗುತ್ತದೆ. ಆಗ ಅರಮನೆಯವರು ವಾರ್ಷಿಕ ಉಪಾಕರ್ಮಕ್ಕೆ ಇನ್ನೂ ಜಾಗ ಹುಡುಕುತ್ತಿರಬೇಕು ಎಂದಾಯಿತು. ಆ ವರ್ಷ ಉಪಾಕರ್ಮದ ತಿಥಿ ಸೆಪ್ಟೆಂಬರ್ ೨ ರಂದು ಅಂತ ತಿಳಿಯಿತು. ಆ ಮಹಲಿನ ಮಾಲಕರ ಅವಸಾನದ ನಂತರ ಹಲವಾರು ವರ್ಷಗಳು ಓಕ್ಲಿ ಕೋರ್ಟ್ ಪಾಳು ಬಿದ್ದರೂ ಅನೇಕ ಹ್ಯಾಮರ್ ಹೌಸ್ ಹಾರರ್ ಫಿಲ್ಮ್ಗಳು, ಡ್ರಾಕುಲಾ ಚಿತ್ರಗಳ ಶೂಟಿಂಗ್ ಗೆ ಅವಕಾಶ ಕೊಟ್ಟ ದಾಖಲೆಯಿದೆ. ಈಗ ಅದನ್ನು ಪುನರುತ್ಥಾನಗೊಳಿಸಿ ಒಂದು ಲಗ್ಶುರಿ ರಿವರ್ ವ್ಯೂ ಹೋಟೆಲ್ಲಾಗಿ ಪರಿವರ್ತನೆ ಮಾಡಿದ್ದಾರಂತೆ. ಆಗ ೧೪ ಬೆಡ್ ರೂಂ ಗಳು, ಹದಿನಾರು ಸೇವಕರ ಮನೆಗಳಿದ್ದು ಈಗ ತಂಗಲು ೧೧೮ ಮಲಗುವ ಕೋಣೆಗಳಿವೆಯಂತೆ. ೨೫೦ ಪೌಂಡುಗಳಿಗೆ ಒಂದು ರಾಯಲ್ ಸ್ವೀಟ್ ಸಿಗಬಹುದೇನೋ! (ಪೇಪರ್ ಕಟ್ಟಿಂಗ್ ದೊರಕಿಸಿದ ಜೇಕ್ ರೋಚ್ ಅವರಿಗೆ ಧನ್ಯವಾದಗಳು).
* http://mysoreanmusings.blogspot.com/2014/04/first-flight-of-our-mysore-king-nalwadi.html