
ಯೋಗೀಂದ್ರ ಮರವಂತೆಯವರು ಯು.ಕೆಯಲ್ಲಿ ನೆಲೆಸಿರುವ ಕನ್ನಡದ ಪ್ರಮುಖ ಬರಹಗಾರು ಮತ್ತು ಯಕ್ಷಗಾನ ಕಲಾವಿದರು. ಇವರು ಬರೆದ ಲೇಖನಗಳು ಮತ್ತು ಅಂಕಣಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಭಾರತ ಮತ್ತು ಇಂಗ್ಲಂಡು, ಕನ್ನಡ ಮತ್ತು ಇಂಗ್ಲೀಷು – ಇವೆರಡರ ನಡುವಿನ ಸೇತುವೆಯಂತೆ ಅಪ್ಯಾಯಮಾನವಾಗಿ ಬರೆಯುತ್ತಾರೆ. ಇಂಗ್ಲಂಡಿನ ಸಂಸ್ಕೃತಿಯ ಬಗ್ಗೆ ಕನ್ನಡದ ಅಂಕಣಗಳಲ್ಲಿ ವಿವರವಾಗಿ ಬರೆದಿದ್ದಾರೆ. ಅವರ ಬರಹಗಳೆಲ್ಲ ಸೇರಿ ಆದಷ್ಟು ಬೇಗ ಒಂದು ಪುಸ್ತಕ ಬರಲಿ ಎಂದು ಹಾರೈಸುತ್ತೇನೆ. ದಿನನಿತ್ಯ ನಡೆಯುವ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಬರೆದು ತಲೆಯಲ್ಲಿ ಒಂದು ಸಣ್ಣ ಹುಳ ಬಿಡುತ್ತಾರೆ ಈ ಲೇಖನದಲ್ಲಿ. ಓದಿ, ಪ್ರತಿಕ್ರಿಯೆ ಬರೆಯಿರಿ – ಸಂ
ಸಣ್ಣ ಮಕ್ಕಳು ಹೋಗುವ ಒಂದು ಸಣ್ಣ ಶಾಲೆ. ನಾಲ್ಕಾರು ಕೋಣೆಗಳು , ಎಂಟತ್ತು ಗೋಡೆಗಳು; ಒಳಗೆ ಪಟಗಳು , ಅಕ್ಷರಗಳು, ಮಕ್ಕಳು ಕೈಯಾರೆ ಮಾಡಿದ ಬಣ್ಣ ಬಣ್ಣದ ಚಿತ್ರಗಳು, ಮುದ್ದಾದ ವಿನ್ಯಾಸಗಳು, ಒಂದಿಷ್ಟು ವಿಷಯಗಳು ,ಇವಿಷ್ಟನ್ನು ತನ್ನ ಮೈಮೇಲೆ ಹೊದ್ದು, ಖಾಲಿ ಉಳಿದ ಜಾಗದಲ್ಲಿ ಮಾತ್ರ ಕಾಣಿಸುತ್ತಿರುವ ಹಳದಿ ಬಣ್ಣದ ಗೋಡೆ, ಕೋಣೆಯೊಳಗೆ ದಿನವೂ ತುಂಬುವ ಮಕ್ಕಳ ಕೇಕೆಗಳು ಅಳು ನಗು ಜಗಳ ಮತ್ತು ಪುಟ್ಟ ಪುಟ್ಟ ಕಲಿಕೆಗಳು, ಹೊರಗೊಂದು ಮೈದಾನ ಸುತ್ತಲಿಗೆ ಆಳೆತ್ತರದ ಆವರಣ, ಆವರಣದ ಮೇಲೆ ಮಕ್ಕಳ ಶಾಲೆ ಎನ್ನುವ ಫಲಕ , ಶಾಲೆ ಎನಿಸಿಕೊಳ್ಳಲು ಇಷ್ಟು ಸಾಲದೇ? ಸಣ್ಣ ಶಾಲೆ ಎನಿಸಿಕೊಳ್ಳಲು ಖಂಡಿತ ಇಷ್ಟು ಸಾಕೋ ಏನೋ.
ಬೆಳಿಗ್ಗೆ ಎಂಟು ಮುಕ್ಕಾಲಕ್ಕೆ ಶಾಲೆಯ ಬಾಗಿಲಿನ ಎದುರು ಇರಬೇಕೆಂದು ಮಗಳ ಬಲ ಕೈಯನ್ನು ನನ್ನ ಎಡ ಮುಷ್ಟಿಯಲ್ಲಿ ಹಿಡಿದು ಹಜ್ಜೆ ಹಾಕಿದ್ದೇನೆ . ರಸ್ತೆಯಲ್ಲಿ ಸಿಗುವ ತನ್ನದೇ ಶಾಲೆಯ ಇತರ ಮಕ್ಕಳನ್ನು ನೋಡುತ್ತಾ , ಇವಳ ಹೆಸರು ಇದು , ಅವಳ ಮನೆ ಆ ಕಡೆ ಎನ್ನುತ್ತಿದ್ದಾಳೆ ಮಗಳು. ಕೆಲವು ಸಹಪಾಠಿಗಳನ್ನು ನೋಡಿ ನಗುತ್ತ , ಮತ್ತೆ ಕೆಲವರನ್ನು ಕಂಡು ನಿನ್ನೆ ಜಗಳ ಆಡಿದನ್ನು ನೆನಪು ಮಾಡುತ್ತಾ ಇನ್ನೊಂದು ಖಾಲಿ ಕೈಯನ್ನು ಬೀಸುತ್ತ ,ಕಾಲನ್ನು ಹಿಂದೆ ಮುಂದೆ ಚಿಮ್ಮಿ ನೆಗೆಯುತ್ತ ನಡೆಯುತ್ತಿದ್ದಾಳೆ. ಇವಳ ಕೈ ಹಿಡಿದು ಕೊಂಡಿದ್ದಕ್ಕೆ ನೇರವಾಗಿ ನಡೆಯಲಾಗದೆ ಈಕೆ ಜಗ್ಗಿದ ಕಡೆಯೆಲ್ಲ ಹೆಜ್ಜೆ ಹಾಕುತ್ತ ತೂರಾಡಿಕೊಂಡು ನಡೆದಿದ್ದೇನೆ . ಮಧ್ಯ ಮಧ್ಯ ನನ್ನ ತಾಳ್ಮೆ ತಪ್ಪಿ ” ಏ ಸರಿ ನಡಿಯೇ” ಎನ್ನುತ್ತಾ ಅವಳನ್ನು ಎಳೆದು ನಡುದಾರಿಗೆ ತಂದ ಹೆಮ್ಮೆಯಲ್ಲಿ ನಡೆಯುತ್ತಿದ್ದೇನೆ. ನನ್ನ ಬಲ ಕೈಯಲ್ಲಿ ಹಿಡಿಯಲ್ಪಟ್ಟ ಎರಡು ಪುಟಾಣಿ ಚೀಲಗಳು ಕೂಡ ನನ್ನ ಏರು ಧ್ವನಿಗೆ ಬೆಚ್ಚಿ ನನ್ನನು ಅಪ್ಪನನ್ನು ನೋಡುವಂತೆ ನೋಡುತ್ತಿವೆ- ಊಟದ ಡಬ್ಬಿಯ ಚೀಲ ಒಂದು, ಒಂದೇ ಒಂದು ಪುಸ್ತಕವನ್ನು ಹೊತ್ತ ಪುಸ್ತಕದ ಚೀಲ ಇನ್ನೊಂದು. ಯಾರ ಕೈಹಿಡಿದೆಯೇ ನಡೆಯುವಷ್ಟು ದೊಡ್ಡವನಾದ ಅಥವಾ ಹಾಗೆ ತಿಳಿದುಕೊಂಡ ನಾನೂ ಹೀಗೆಯೇ ಎಡವುತ್ತಾ ನಡೆಯುತ್ತಿರಬಹೊದೋ ಅಥವಾ ಎಡವಿದ್ದೇ ನನಗೆ ತಿಳಿಯುವುದಿಲ್ಲವೋ ಎಂದು ಕೂಡ ಯೋಚಿಸುತ್ತಿದ್ದೇನೆ .

ರಸ್ತೆಯ ಎರಡು ಕಡೆಯ ಕಾಲು ಹಾದಿಗಳಲ್ಲಿ ಸಮವಸ್ತ್ರಧಾರಿ ಮಕ್ಕಳ ಗೌಜು, ಅವಸರದ ನಡಿಗೆ ,ಪುಸ್ತಕದ ಚೀಲ, ಬುತ್ತಿ ಚೀಲಗಳ ಅಲುಗಾಟ . ಕಣ್ಣು ಹಾಯಿಸಿದಷ್ಟು ದೂರ ಮಕ್ಕಳ ಹಿಂಡು ,ಬೆನ್ನಿಗೆ ಹೆತ್ತವರ ದಂಡು. ಮಕ್ಕಳನ್ನು ಶಾಲೆಗೆ ಬಿಟ್ಟು ಹೋಗುವುದೊಂದೇ ಆ ಒಂದು ಘಳಿಗೆಯ ಕಾಲದ ದೃಢ ಸಂಕಲ್ಪ . ಶಾಲೆಯ ಬಾಗಿಲಿನ ಎದುರಿನ ರಸ್ತೆ ಬೆಳಿಗಿನ ಆ ಹೊತ್ತಿಗೆ ವಾಹನಗಳಿಂದ ಕಿಕ್ಕಿರಿದಿದೆ. ದೂರದಿಂದ ಕಾರಿನಲ್ಲಿ ಬಂದು ಮಕ್ಕಳನ್ನು ಬಿಡುವವರು , ರಸ್ತೆ ಬದಿಗೆ ಕಾರು ನಿಲ್ಲಿಸಬಾರದ ಕಡೆಗಳಲ್ಲಿ ಮೆತ್ತಗೆ ಕಾರು ನಿಲ್ಲಿಸಿ ಇನ್ನೇನು ಪೊಲೀಸರು ಬಂದು ದಂಡ ಹಾಕುತ್ತಾರೆನೋ ಎಂದು ಹೆದರುತ್ತ ಮಕ್ಕಳ ಕೈ ಎಳೆದುಕೊಂಡು ಶಾಲೆಯ ಕಡೆಗೆ ಓಡುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಬಿಡುವ ಉಸಾಬರಿ ಇಲ್ಲದವರು ಅದೇ ರಸ್ತೆಯಲ್ಲಿ ಆ ಹೊತ್ತಿಗೆ ಹಾದುಹೋಗಬೇಕಾದಾಗ ಯಾಕಾದರೂ ಈ ರಸ್ತೆಯಲ್ಲೊಂದು ಶಾಲೆ ಇದೆಯೋ ಯಾಕಾದರೂ ಮಕ್ಕಳನ್ನು ಹೆರುತ್ತಾರೋ ಎಂದು ಗೊಣಗುತ್ತ ತಮ್ಮ ತಾಳ್ಮೆಯನ್ನು ಪರೀಕ್ಷೆಗೆ ಒಡ್ಡುತ್ತಾ ಸಾಗುತ್ತಿದ್ದಾರೆ. ಆ ರಸ್ತೆಯಲ್ಲಿ ತಿರುಗುವವರ ಹೊಣೆ ಅವರವರದೇ ಆದರೂ ಅಲ್ಲಿ ಮಕ್ಕಳನ್ನು ರಸ್ತೆ ದಾಟಿಸುವ ಹೊಣೆ ಇನ್ನೊಬ್ಬರ ಮೇಲಿದೆ. ಶಾಲೆ ಶುರು ಆಗುವ ಮತ್ತು ಮುಚ್ಚುವ ಹೊತ್ತಿನಲ್ಲಿ ಸಿಗ್ನಲ್ ಇಲ್ಲದ ಕಡೆ ಸುರಕ್ಷಿತವಾಗಿ ರಸ್ತೆ ದಾಟಿಸಲು , ಕೈಯಲ್ಲಿ ‘ನಿಲ್ಲಿ ‘ ಎನ್ನುವ ಫಲಕ ಹೊತ್ತವಳು ಒಬ್ಬಾಕೆ ನಿಂತಿದ್ದಾಳೆ . ಶಾಲೆಯ ಬಾಗಿಲಿನ ಎದುರು ರಸ್ತೆ ದಾಟಲೆಂದು ಮಕ್ಕಳು ಒಟ್ಟಾದಾಗಲೆಲ್ಲ , ಈಕೆ ತನ್ನ ಕೈಯ ‘ನಿಲ್ಲಿ ‘ ಫಲಕದೊಂದಿಗೆ ರಸ್ತೆಗೆ ಧುಮುಕಿ ,ಎರಡೂ ಕಡೆಯ ವಾಹನಗಳನ್ನು ನಿಲ್ಲಿಸಿ , ದಾಟುವವರಿಗೆ ಅನುಕೂಲ ಮಾಡುತ್ತಾಳೆ .ಮಕ್ಕಳು ಇವಳನ್ನು ‘ಲಾಲಿಪಾಪ್ ಲೇಡಿ ‘ ಎನ್ನುತ್ತಾರೆ . ಇವಳು ಕೈಯಲ್ಲಿ ಹಿಡಿಯುವ ‘ಸ್ಟಾಪ್ ‘ ಫಲಕ ದ ಆಕಾರ ಲಾಲಿಪಾಪಿನಂತಿದೆ . ಇವಳು ಕಣ್ಣೆದುರು ಬರುವ ಎಲ್ಲ ಮಕ್ಕಳನ್ನೂ ಹೆಸರಿಡಿದು ಕೂಗಿ ‘ಸುಪ್ರಭಾತ ‘ ಹೇಳುತ್ತಾಳೆ . ಜ್ವರ ನೆಗಡಿ ಕೆಮ್ಮು ಎಂದು ಶಾಲೆಗೇ ಹಾಜರಾಗದ ಮಕ್ಕಳು ಇರಲಿ ಬಿಡಲಿ, ಲಾಲಿಪೋಪ್ ಲೇಡಿ ಸೂಟಿ ತೆಗೆದು ಕೊಂಡದ್ದು ನೋಡಿಲ್ಲ ಕೇಳಿಲ್ಲ . ಮಕ್ಕಳ ಸಣ್ಣ ಸಣ್ಣ ಹೆಜ್ಜೆಗಳು ಇವಳ ಕಣ್ಣೆದುರೇ ದೊಡ್ಡದಾಗಿವೆ, ತೊದಲು ಅಸ್ಪಷ್ಟ ನುಡಿಗಳು ಬಲಿತಿವೆ. ಲಾಲಿಪಾಪ್ ಲೇಡಿ, ದಿನ ಬೆಳಗೊಮ್ಮೆ ಅಪರಾಹ್ನ ಒಮ್ಮೆ, ದೂರದ ವಾಹನಗಳಿಗೂ ಕಣ್ಣು ಕುಕ್ಕುವ ವಸ್ತ್ರ ಧರಿಸಿ ಕೈಯಲ್ಲಿ ವಾಹನ ನಿಲ್ಲಿಸುವ ದಂಡ ಹಿಡಿದು ಹಲವು ಬಾರಿ ರಸ್ತೆಗೆ ಧುಮುಕುತ್ತಾಳೆ, ವಾಹನಗಳನ್ನು ನಿಲ್ಲಿಸುತ್ತಾಳೆ. ರಸ್ತೆ ದಾಟಿಸುತ್ತಾಳೆ.
ಶಾಲೆಯ ಬಾಗಿಲು ತೆರೆಯಲು ಇನ್ನೂ ಹೊತ್ತಿರುವುದರಿಂದ ಶಾಲೆಯ ಮುಚ್ಚಿದ ಗಾಜಿನ ಬಾಗಿಲಿನ ಒಳಗಿಂದ ಕೆಲವು ಪರಿಚಯದ ‘ಮಿಸ್’ಗಳ ಕೈ ಕಾಲು , ಅರ್ಧರ್ಧ ಮುಖಗಳು ಕಾಣಿಸುತ್ತಿವೆ .ಆವರಣದ ಒಳ ಬಂದು ಕಾಯುತ್ತಿರುವ ಅಪ್ಪ ಅಬ್ಬೆಯಂದಿರ ಗುಂಪು ಅಷ್ಟರಲ್ಲೇ ದೊಡ್ಡದಾಗಿದೆ ;ಈ ಗುಂಪಿನಲ್ಲಿ ನಾನೂ ,ಒಂದು ಕೈಯಲ್ಲಿ ಮಗಳನ್ನು ಮತ್ತೊಂದು ಕೈಯಲ್ಲಿ ಅವಳ ಚೀಲಗಳನ್ನು ಹಿಡಿದು ಮಹಾ ಜವಾಬ್ದಾರಿಗಳನ್ನು ಸರಿತೂಗಿಸುವವನಂತೆ ಸೇರಿಕೊಂಡಿದ್ದೇನೆ . ಹೆಸರು ಪರಿಚಯ ಇಲ್ಲದ ಕೆಲವರು ಇವನು ಈ ಮಗುವಿನ ಅಪ್ಪ ಎಂದು ಗುರುತು ಹಾಕಿಕೊಂಡು ಒಂದು ನಗೆ ಕೊಟ್ಟಿದ್ದಾರೆ. ಸಣ್ಣ ಶಾಲೆಯ ಸಣ್ಣ ಬಾಗಿಲು ತೆರೆಯುತ್ತಿದ್ದಂತೆ ಶಿಸ್ತಿನ ಪಾಠವನ್ನು ದಿನವೂ ಕಲಿಯುವ ಮಕ್ಕಳು ಸಾಲಿನಲ್ಲಿ ಒಬ್ಬರ ಹಿಂದೆ ಒಬ್ಬರು ಒಳ ಹೋಗುತ್ತಿದ್ದಾರೆ . ಹಾಗೆ ಸಾಲಿನಲ್ಲಿ ಸಾಗುವಾಗ ಮೈಗೆ ಮೈ ತಾಗಿದ್ದಕ್ಕೆ , ಬಾಯಿಗೆ ಕೈ ಅಡ್ಡ ಹಿಡಿಯದೆ ಕೆಮ್ಮಿದ್ದಕ್ಕೆ “ಕ್ಷಮಿಸಿ ” ಎನ್ನುತ್ತಾ , ಎರಡು ಮಕ್ಕಳು ಒಂದೇ ಸಲ ಒಳ ಹೋಗಲಾಗದೆ ಒಂದು ಪಿಳ್ಳೆ ಇನ್ನೊಂದಕ್ಕೆ ಒಳ ಹೋಗಲು ಬಿಟ್ಟಿದ್ದಕ್ಕೆ ಇನ್ನೊಂದು “ಧನ್ಯವಾದ ” ಹೇಳುತ್ತಾ , ಕಲಿತ ಪಾಠಗಳನ್ನೆಲ್ಲ ಅಲ್ಲಲ್ಲೇ ಒಪ್ಪಿಸುತ್ತಿದ್ದಾವೆ. ಬಹಳ ಗಡಿಬಿಡಿಯವರು ,ಮಕ್ಕಳನ್ನು ತರಗತಿಯ ಬಾಗಿಲಿನ ಮೆಟ್ಟಿಲಿನ ಮೇಲೆ ಎತ್ತಿ ನಿಲ್ಲಿಸಿ ಬಾಗಿಲಿನ ಒಳಗೆ ದಬ್ಬಿ ಓಡಿದ್ದಾರೆ . ಮಕ್ಕಳು , ಅವರ ಚಳಿ ಟೊಪ್ಪಿ ,ಕೋಟಿನ ಬಣ್ಣ ,ಶಾಲಾ ಕೊಠಡಿಯ ಒಳಗೆ ಕಣ್ಮರೆ ಆಗುವ ಕೊನೆಯ ನೋಟಕ್ಕೆ ಕೈ ಎತ್ತಿ ಟಾಟಾ ಮಾಡಿ ಹೊರಟಿದ್ದೇವೆ- ಅಪ್ಪಂದಿರು ಅಮ್ಮಂದಿರು. ಮನೆಯ ದಾರಿ ಹಿಡಿದು ಕೆಲವು ಹೆತ್ತವರು ಅವಸರದಲ್ಲಿ, ಮತ್ತೆ ಕೆಲವರು ಸಮಾಧಾನದಲ್ಲಿ ಈಗ ಮನೆಯ ಕಡೆ ,ಕಚೇರಿಯ ದಿಕ್ಕಿಗೆ ಹೆಜ್ಜೆ ಹಾಕಿದ್ದಾರೆ . ಇನ್ನು ಕೆಲವು ಸಿಕ್ಕಾಪಟ್ಟೆ ಪುರಸೊತ್ತಿನ ಅಪ್ಪ ಅಮ್ಮಂದಿರು ಶಾಲೆಯ ಆವರಣದ ಹೊರ ಬರುತ್ತಿದ್ದಂತೆಯೇ ಒಂದು ಸಿಗರೇಟು ಹಚ್ಚಿ ಮಾತಿಗೆ ನಿಂತಿದ್ದಾರೆ .ಅಂದಿನ ಹವಾಮಾನದ ಕುರಿತು ಒಂದು ಟಿಪ್ಪಣಿಯಿಂದ ಶುರುವಾದದದ್ದು , ಅಪರಾಹ್ನ ಮಕ್ಕಳನ್ನು ವಾಪಾಸು ಕರೆದುಕೊಂಡು ಹೋಗುವಾಗ ಶಾಲೆಯ ಆವರಣದ ಹೊರಗೆ ದಿನವೂ ಕಾಯುವ ಐಸ್ ಕ್ರೀಮ್ ಗಾಡಿಯವನಿಗೆ ಶಾಪ ಹಾಕುವುದರಲ್ಲಿ ಮುಂದುವರಿದಿದೆ. ಘಂಟೆ ಒಂಭತ್ತು ಆಗುವಾಗ ಶಾಲೆಯ ಬಾಗಿಲು ಮತ್ತು ಆವರಣದ ಬಾಗಿಲು ಬಾಗಿಲು ಮುಚ್ಚಿದ್ದಾರೆ. ಇನ್ನು ಅಪರಾಹ್ನ ಶಾಲೆ ಮುಗಿಯುವ ತನಕವೂ ಹೊರಗಿನವರು ಹೊರಗೆ ಒಳಗಿನವರು ಒಳಗೆ. ಶಾಲೆಯ ಎದುರಿನ ಬೀದಿ ಮತ್ತೆ ನಿರ್ಜನ ನಿಶಬ್ದ ಮೌನವಾಗಿ ಬದಲಾಗಿದೆ. ಕೈಗಳೆರಡು ಖಾಲಿಯಾದದ್ದಕ್ಕೋ ಬರಿದಾದ್ದಕ್ಕೋ ಕೈಗಳನ್ನು ಬೀಸಿ ಬೀಸಿ ನಡೆಯುತ್ತಾ ಶಾಲೆಯಿಂದ ಹೊರಬಂದಿದ್ದೇನೆ. ಇನ್ನು ಕಚೇರಿಗೆ ಹೊರಡುವ ಹೊತ್ತಾದ್ದರಿಂದ, ಬೆಳಿಗ್ಗೆ ಧರಿಸಿದ ಅಪ್ಪನ ವೇಷ ತನ್ನಷ್ಟಕ್ಕೆ ಎಲ್ಲೋ ಕಾಣೆಯಾಗಿ ಉದ್ಯೋಗಕ್ಕೆ ಒಪ್ಪುವ ರೂಪು ಮುಖ ಮುದ್ರೆಗಳು ತಂತಾನೇ ಏರಿಸಿ ನಡೆದಿದ್ದೇನೆ.

