ಈ ವಾರದ ಸಂಚಿಕೆಯಲ್ಲಿ ಬೆಂಗಳೂರಿನ ನಿವೃತ್ತಿ-ನಂತರದ ಹಿರಿಯರ ಮನೆಯನ್ನು ಕುರಿತಾದ ನನ್ನ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇಲ್ಲಿ ಕೆಲವು ಹಿರಿಯ ನಾಗರೀಕರು ಬದುಕಿನ ಸಂಧ್ಯಾ ಕಾಲದಲ್ಲಿ ಸವಾಲುಗಳನ್ನು ಎದುರಿಸಿ ಹೇಗೆ ಪರಿಹಾರ ಕಂಡುಕೊಂಡಿದ್ದಾರೆ, ಅವರು ಹೇಗೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದಾರೆ
ಮತ್ತು ಅವರ ಮುಂದಿರುವ ಆಯ್ಕೆಗಳೇನು? ಎಂಬುದನ್ನು ವಿಶ್ಲೇಷಿಸಿದ್ದೇನೆ. ಇಲ್ಲಿ ಭಾರತ ಮತ್ತು ಬ್ರಿಟನ್ನಿನ್ನ ಹಿರಿಯರ ಬದುಕನ್ನು ಒಂದಕ್ಕೊಂದು ಪರ್ಯಾಯವಾಗಿ ಇಟ್ಟು ನೋಡುವ ಪ್ರಯತ್ನ ನನ್ನದಾಗಿದೆ. ಹಿಂದೆ ನಾನು ಬರೆದ "ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು' ಎಂಬ ಲೇಖನದ ಇನ್ನೊಂದು ಅಧ್ಯಾಯವೇ ಈ ಬರಹ ಎನ್ನಬಹುದು. ಬೆಂಗಳೂರಿನಲ್ಲಿ ನಾನು ಭೇಟಿನೀಡಿದ ‘ಪ್ರೈಮಸ್ ರಿಫ್ಲೆಕ್ಷನ್ಸ್’ ಎಂಬ ಹಿರಿಯರ ಮನೆಯ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಬೆಂಗಳೂರಿನ ಇನ್ನೊಂದು ಹಿರಿಯರ ಮನೆ ‘ಸಂಧ್ಯಾದೀಪ’ ಕುರಿತಾದ ನನ್ನ ಕವನವನ್ನು ಇಲ್ಲಿ ಪ್ರಕಟಿಸಲಾಗಿದೆ. ಯೌವನ ಮತ್ತು ವೃದ್ಧಾಪ್ಯ ಇವೆರಡರ ಕೆಲವು ಅಭಿಮುಖಗಳನ್ನು ಚಿತ್ರಿಸುವ "ಅಂದು-ಇಂದು" ಎಂಬ ಡಾ. ರಘುನಾಥರ ಕವನ ಇಲ್ಲಿದೆ. ಕೊನೆಯದಾಗಿ ಪ್ರೈಮಸ್ ಹಿರಿಯರ ಮನೆಯ ಸಾಹಿತ್ಯಾಸಕ್ತ ನಿವಾಸಿಯಾದ ಪುಷ್ಪ ಅವರು ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಏಕೀಕರಣದ ಹಿನ್ನೆಲೆಯನ್ನು ಕುರಿತು ಬರೆದ ಲೇಖನ ಇಲ್ಲಿದೆ. ಕನ್ನಡ ರಾಜ್ಯೋತ್ಸವವಾಗಿ ಕೆಲವು ದಿನಗಳಾಗಿವೆ, ನಾವೆಲ್ಲಾ ಇನ್ನು ಅದರ ನೆನಪಿನ ಪರವಶತೆಯಲ್ಲಿರುವಾಗ ಈ ಬರಹ ಸಮಯೋಚಿತವಾಗಿದೆ ಎಂದು ಭಾವಿಸಿ ಪ್ರಕಟಿಸಲಾಗಿದೆ.
-ಸಂ
ಫೋಟೋ ಕೃಪೆ ಗೂಗಲ್
ಸಂಧ್ಯಾ ದೀಪಗಳ ದಾರಿಯಲ್ಲಿ
ಡಾ. ಜಿ. ಎಸ್. ಶಿವಪ್ರಸಾದ್
ಪಾಶ್ಚಿಮಾತ್ಯ ದೇಶಗಳಲ್ಲಿ ನರ್ಸಿಂಗಹೋಮ್ ಎಂದರೆ ಅನಾರೋಗ್ಯದಿಂದಾಗಿ ತಮ್ಮ ಸ್ವಾವಲಂಬನೆಯನ್ನು ಕಳೆದುಕೊಂಡು ಇತರರನ್ನು ಅವಲಂಬಿಸಿ ಬದುಕುತ್ತಿರುವ ಹಿರಿಯರ ಮನೆ ಎನ್ನ ಬಹುದು. ಇದು ಖಾಸಗಿ ಅಥವಾ ಸರ್ಕಾರ ನಡೆಸುತ್ತಿರುವ ಸಂಸ್ಥೆಯಾಗಿರುತ್ತದೆ. ತಕ್ಕ ಮಟ್ಟಿಗೆ ಗಟ್ಟುಮುಟ್ಟಾಗಿರುವ ಹಿರಿಯರು ದಂಪತಿಗಳಾಗಿ ಅಥವಾ ಒಬ್ಬಂಟಿಗರಾಗಿ ತಮ್ಮ ತಮ್ಮ ಮನೆಗಳಲ್ಲಿ ವಾಸಮಾಡುವುದು ಸಾಮಾನ್ಯ. ಇನ್ನು ಕೆಲವು ಹಣವಂತರು ತಮ್ಮ ದೊಡ್ಡ ಮನೆಗಳನ್ನು ಮಾರಿಕೊಂಡು ಆಕರ್ಷಕವಾಗಿರುವ, ಸೆಕ್ಯೂರಿಟಿ ಒದಗಿಸುವ, ಹೊಟೇಲಿನಂತೆ ಹಲವಾರು ಸೌಲಭ್ಯಗಳು ಇರುವ ಬಹು ಅಂತಸ್ತಿನ ರಿಟೈರ್ಮೆಂಟ್ ಹೋಮ್ ಗಳಲ್ಲಿ ವಾಸಮಾಡುತ್ತಾರೆ.
ಭಾರತದಲ್ಲಿ ಕಳೆದ ದಶಕಗಳ ಹಿಂದೆ ಜಾಯಿಂಟ್ ಫ್ಯಾಮಲಿ ವ್ಯವಸ್ಥೆ ಇದ್ದು, ಮಕ್ಕಳು, ಮೊಮ್ಮಕಳು ಹಿರಿಯರನ್ನು ಆತ್ಮೀಯವಾಗಿ ಪ್ರೀತಿ ಗೌರವಗಳಿಂದ ನೋಡಿಕೊಳ್ಳುತ್ತಿದ್ದರು. ಅದು ಸಮಾಜದ ನಿರೀಕ್ಷೆಯಾಗಿತ್ತು, ವ್ಯವಸ್ಥೆಯ ಅಂಗವಾಗಿತ್ತು. ಹಿರಿಯರು ತಾವು ಹಿಂದೆ ಕಟ್ಟಿಸಿದ ಮನೆಗೆ ಭಾವನಾತ್ಮಕ ಕಾರಣಗಳಿಂದ ಜೋತು ಬಿದ್ದು ಸಾಯುವತನಕ ಕಷ್ಟವೋ ಸುಖವೋ ಮಕ್ಕಳ ಜೊತೆಗೇ ಬದುಕುತ್ತಿದ್ದರು. ಹೆತ್ತವರು ಆಳಿದ ಮೇಲೆ ಆ ಮನೆ, ಅಸ್ತಿ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೋಗುತ್ತಿತ್ತು. ವಿವಾಹ ವಿಚ್ಛೇದನವನ್ನು ಸಮಾಜ ಒಪ್ಪುತ್ತಿರಲಿಲ್ಲ. ಹೀಗಾಗಿ ಹಿಂದಿನ ಕಾಲದಲ್ಲಿ ಸಂಸಾರಗಳು ಅವಿಭಾಜ್ಯ ಕುಟುಂಬಗಳಾಗಿ ಜೀವನ ನಡೆಸುತ್ತಿದ್ದವು. ಆ ತಲೆಮಾರಿಗೆ ವೃದ್ಧಾಶ್ರಮದ ಅಗತ್ಯವಿರಲಿಲ್ಲ. ಈಗಲೂ ಕೆಲವು ಸಂಸಾರಗಳು ಜಾಯಿಂಟ್ ಫ್ಯಾಮಿಲಿ ವ್ಯವಸ್ಥೆಯಲ್ಲಿ ಬದುಕುತ್ತಿವೆ. ಆದರೆ ಇಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ, ಬದಲಾಗುತ್ತಿರುವ ಭಾರತದಲ್ಲಿ, ಕಿರಿಯ ದಂಪತಿಗಳು ತಮ್ಮ ವೃತ್ತಿಯ ಒತ್ತಡದಿಂದಾಗಿ ಅಥವಾ ವಿದೇಶದಲ್ಲಿ ಇರಬೇಕಾದ ಪರಿಸ್ಥಿತಿಯಿಂದಾಗಿ ತಮ್ಮ ಹಿರಿಯ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದೇ ಇರುವ ಸನ್ನಿವೇಶಗಳಲ್ಲಿ ವೃದ್ಧಾಶ್ರಮಗಳು ಅನಿವಾರ್ಯವಾಗಿವೆ.
ಇನ್ನು ವಿದೇಶದಲ್ಲಿ ನೆಲೆಸಿರುವ ಭಾರತೀಯರು, ಕನ್ನಡಿಗರು ತಾವು ತಮ್ಮ ಸಂಧ್ಯಾ ಕಾಲದಲ್ಲಿ ಎಲ್ಲಿ ನೆಲೆಸುವುದು ಎಂಬ ದ್ವಂದದಲ್ಲಿ ಬದುಕುತ್ತಿದ್ದಾರೆ. ನಿವೃತ್ತಿ ಪಡೆದ ನಂತರ ಈ ವಿದೇಶದಲ್ಲಿ ಬದುಕುವ ಆಸಕ್ತಿ ಕೆಲವರಲ್ಲಿ ಕಡಿಮೆಯಾಗಿ ತಾಯ್ನಾಡಿನ ತುಡಿತ ಹೆಚ್ಚಾಗುವುದು ಸಹಜ. ಭಾಷೆ ಮತ್ತು ಸಾಂಸ್ಕೃತಿಕ ಪ್ರಜ್ಞೆ ಜಾಗೃತವಾಗಿರುವವರಿಗೆ ಇದು ಹೆಚ್ಚಿನ ಸಮಸ್ಯೆಯಾಗಬಹುದು. ಇಂಗ್ಲಿಷ್ ಸಂಸ್ಕೃತಿಯನ್ನು ಸಂಪೂರ್ಣವಾಗಿ ಅಪ್ಪಿಕೊಂಡು ಬದುಕುತ್ತಿರುವವರಿಗೆ ಮತ್ತು ಬಲವಾದ ಸಾಂಸಾರಿಕ ನೆಂಟುಗಳು ಭಾರತಕ್ಕಿಂತ ವಿದೇಶದಲ್ಲೇ ಹೆಚ್ಚಾಗಿರುವವರಿಗೆ ಭಾರತಕ್ಕೆ ಮರಳುವ ಹಂಬಲ ಕಡಿಮೆ ಎನ್ನಬಹುದು. ಈ ವಿಚಾರ ನಮ್ಮ ಮೊದಲನೇ ಪೀಳಿಗೆಯವರಿಗಷ್ಟೇ ಪ್ರಸ್ತುತ ಸಮಸ್ಯೆ.
ಭಾರತಕ್ಕೆ ಮರಳಿ ಬರುಲು ಇಚ್ಛಿಸುವ ಅನಿವಾಸಿಗಳು, ನಿವೃತ್ತಿಯಲ್ಲಿ ಸ್ವಲ್ಪ ಹಣ ಉಳಿಸಿಕೊಂಡವರು ಇಲ್ಲಿಯ ಚಳಿಗೆ ಬೇಸತ್ತು, ಇಳಿ ವಯಸ್ಸಿನಲ್ಲಿ ಭಾರತಕ್ಕೆ ಬಂದು ನೆಲಸ ಬಾರದೇಕೆ ಎಂದು ಆಲೋಚಿಸುತ್ತಿದ್ದಾರೆ. ಇನ್ನು ಇತ್ತೀಚಿಗೆ ನಿವೃತ್ತಿ ಪಡೆದು ಒಳ್ಳೆ ಆರೋಗ್ಯವನ್ನು ಕಾಪಾಡಿಕೊಂಡಿರುವವರು ಚಳಿಗಾಲದಲ್ಲಿ ಬ್ರಿಟನ್ನಿನ ಚಳಿಯನ್ನು ತಪ್ಪಿಸಿಕೊಂಡು ೪-೬ ತಿಂಗಳವರೆಗೆ ಭಾರತದಲ್ಲಿ ವಾಸಮಾಡುವ ಸಾಧ್ಯತೆಯನ್ನು ಕಂಡುಕೊಂಡಿದ್ದಾರೆ. ಅಲ್ಲೊಂದು ಫ್ಲ್ಯಾಟ್ ತೆಗೆದುಕೊಂಡು ಅಲ್ಲೂ-ಇಲ್ಲೂ ವಾಸವಾಗಿರುತ್ತಾ ‘ಬೆಸ್ಟ್ ಆಫ್ ಬೋತ್ ವರ್ಲ್ಡ್ಸ್’ ಎನ್ನುವ ಖುಷಿಯಲ್ಲಿ ವಾಸ ಮಾಡುತ್ತಿದ್ದಾರೆ. ಈ ಒಂದು ವ್ಯವಸ್ಥೆ ಎಲ್ಲಿಯವರಗೆ ಎಂಬ ಪ್ರಶ್ನೆ ಮೂಡುತ್ತದೆ. ನನ್ನ ಅಂದಾಜಿನಲ್ಲಿ, ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಎನ್ನ ಬಹುದು. ಬ್ರಿಟನ್ನಿನಿಂದ ಭಾರತಕ್ಕೆ ಹಿಂದೆ ಮುಂದೆ ಪ್ರಯಾಣಿಸುವುದು ಚಿಕ್ಕ ವಯಸ್ಸಿನಲ್ಲಿ ಸರಾಗವಾದರೂ ಒಂದು ವಯಸ್ಸಾದ ಮೇಲೆ ಕಠಿಣವಾಗಬಹುದು. ಆರೋಗ್ಯ ಕೈಕೊಡಬಹುದು, ವಿಮಾನ ದರಗಳು ವರ್ಷ ವರ್ಷ ಹೆಚ್ಚಾಗುತ್ತಿದ್ದು ಒಂದು ಹಂತದಲ್ಲಿ ದುಬಾರಿ ಎನಿಸ ಬಹುದು. ಮುಂಬರುವ ಯಾವುದೋ ಒಂದು ಹಂತದಲ್ಲಿ ಈ ಹಿರಿಯರು ಎರಡು ಕಡೆ ವಾಸ ಮಾಡುವುದನ್ನು ಬಿಟ್ಟು ಒಂದೆಡೆ ನೆಲೆಸುವ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ.
ಹದಗೆಡುತ್ತಿರುವ ಅನಾರೋಗ್ಯದಿಂದ ತಮ್ಮ ದಿನ ನಿತ್ಯ ಬದುಕಿಗೆ ಇನ್ನೊಬ್ಬರನ್ನು ಅವಲಂಬಿಸಬೇಕಾದ ಸನ್ನಿವೇಶದಲ್ಲಿ, ಬ್ರಿಟನ್ನಿನಲ್ಲಿ ಸಾಕಷ್ಟು ಹಣ ತೆರಬೇಕಾಗುತ್ತದೆ. ನರ್ಸಿಂಗ್ ಹೋಂ ಸೇರಲು ತಮ್ಮ ತಮ್ಮ ಮನೆಗಳನ್ನು ಅಡವಿಡಬೇಕಾದ ಅನಿವಾರ್ಯವನ್ನು ಕಂಡಿದ್ದೇವೆ, ಕೇಳಿದ್ದೇವೆ. ಈ ನರ್ಸಿಂಗ್ ಹೋಮ್ ಅಥವಾ ರೆಸಿಡೆನ್ಶಿಯಲ್ ಹೋಂ ಗಳಲ್ಲಿ ಬ್ರಿಟಿಷ್ ಆಹಾರವನ್ನು ಸೇವಿಸುತ್ತಾ, ಗೊತ್ತು ಪರಿಚಯವಿಲ್ಲದ ಬೇರೊಂದು ಸಂಸ್ಕೃತಿಯ ಜನರೊಂದಿಗೆ ಬೆರೆಯುತ್ತಾ ಕೊನೆ ಘಳಿಗೆಯನ್ನು ಕಳೆಯುವುದು ಹೇಗೆ? ಎಂಬ ಚಿಂತೆ ಮೂಡುವುದು ಸಹಜವೇ. ತಮ್ಮ ತಮ್ಮ ಮನೆಗಳಲ್ಲೇ ಸಹಾಯಕ ಸಿಬಂದ್ಧಿಗಳನ್ನು ಇಟ್ಟುಕೊಂಡು ಬದುಕುವುದಕ್ಕೆ ಬಹಳ ಹಣ ಬೇಕು. ಈ ಹಿನ್ನೆಲೆಯಲ್ಲಿ ಇದರ ಅರ್ಧ ದುಡ್ಡಿಗೆ ಭಾರತದಲ್ಲಿ ಯಾವುದಾದರೂ ವೃದ್ಧಾಶ್ರಮದಲ್ಲಿ ಅಥವಾ ಫ್ಲ್ಯಾಟಿನಲ್ಲಿ ಸಹಾಯಕ ಸಿಬಂದ್ಧಿಯನ್ನು ಗೊತ್ತುಮಾಡಿಕೊಂಡು ಬದುಕಬಹುದು ಎಂಬ ಒಂದು ಆಯ್ಕೆ ನಮ್ಮ ಕಲ್ಪನೆಗೆ ಒದಗಿ ಬರುತ್ತಿದೆ. ಇದು ಸಾಧ್ಯ ಎಂದು ಕೆಲವು ಹಿರಿಯರು ತಮ್ಮ ಅನುಭವದಿಂದ ತಿಳಿಸಿದ್ದಾರೆ.
ಇದೇ ಒಂದು ಸನ್ನಿವೇಶದಲ್ಲಿ ಸಿಲುಕಿದ್ದ ನಮ್ಮ ಕನ್ನಡ ಬಳಗದ ಹಿರಿಯ ಸದಸ್ಯರು ಮತ್ತು ದಂಪತಿಗಳಾದ ಡಾ.ಅಪ್ಪಾಜಿ ಗೌಡ ಮತ್ತು ಡಾ.ಭಾನುಮತಿ ಅವರು ಬೆಂಗಳೂರಿಗೆ ತೆರಳಿ ಅಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ ಇರುವ ಪ್ರೈ ಮುಸ್ ರಿಫ್ಲೆಕ್ಷನ್ಸ್ ಎಂಬ ಹಿರಿಯರ ಮನೆ ಅಥವಾ ಆಶ್ರಯ ಸಂಕೀರ್ಣ ( Residential complex) ಎನ್ನಬಹುದಾದ ಸಂಸ್ಥೆಯಲ್ಲಿ ವಾಸವಾಗಿದ್ದರು. ಡಾ ಅಪ್ಪಾಜಿ ಅವರ ಅನಾರೋಗ್ಯ ಉಲ್ಪಣಗೊಂಡಾಗ ತಕ್ಕ ಮಟ್ಟಿಗೆ ಆರೋಗ್ಯವಂತರಾದ ಭಾನುಮತಿ ಆ ನಿರ್ಧಾರವನ್ನು ತೆಗೆದುಕೊಂಡು ಅಪ್ಪಾಜಿ ಅವರ ನಿಧನದ ಮುಂಚಿತ
ಹಲವಾರು ವರ್ಷಗಳನ್ನು ಗುಣಾತ್ಮಕ ಬದುಕಿನಲ್ಲಿ ಕಳೆದು ನೆಮ್ಮದಿಯನ್ನು ಪಡೆದುಕೊಂಡರು. ಈಗ ಭಾರತದಲ್ಲಿ ಆರೋಗ್ಯ ಸೌಲಭ್ಯಗಳು ಎಂದಿಗಿಂತ ಇಂದು ಚೆನ್ನಾಗಿವೆ. ಬ್ರಿಟನ್ನಿನ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಕುಂದು ಕೊರತೆಗಳು ಹಿರಿಯ ನಾಗರೀಕರಿಗೆ ಅಸಮಾಧಾನವನ್ನು ಮತ್ತು ಆತಂಕವನ್ನು ಉಂಟುಮಾಡುತ್ತಿದೆ. ಹೀಗಿರುವಾಗ ಭಾರತದಲ್ಲಿ, ನಮ್ಮದೇ ನಾಡಿನಲ್ಲಿ ನಮ್ಮ ಸಂಧ್ಯಾಕಾಲವನ್ನು ಕಳೆಯುವುದು ಸಾಧ್ಯ ಎಂಬ ಅರಿವು ಉಂಟಾಗುತ್ತಿದೆ. ಎಲ್ಲ ದೇಶಗಳಲ್ಲೂ ಅಲ್ಲಲ್ಲಿಯ ಸಮಸ್ಯೆಗಳು ಇರುತ್ತವೆ. ಒಬ್ಬರಿಗೆ ಒಂದು ಆಯ್ಕೆ ಸೂಕ್ತವಾಗಿದ್ದಲ್ಲಿ ಅದು ಇನ್ನೊಬ್ಬರಿಗೆ ಅನುಕೂಲವಾಗದಿರಬಹುದು. ಹೀಗಾಗಿ ಅನಿವಾಸಿ ಹಿರಿಯರು ತಮ್ಮ ವೃದ್ಧಾಪ್ಯದಲ್ಲಿ ಎಲ್ಲಿ ಖಾಯಂ ಆಗಿ ನೆಲಸಬೇಕು ಎಂಬ ವಿಚಾರವನ್ನು ಅವರವರ ವೈಯುಕ್ತಿಕ ಅರೋಗ್ಯ, ಸಾಂಸಾರಿಕ ನೆಂಟುಗಳು, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ನಿರ್ಧರಿಸುತ್ತವೆ.
ನಾನು ಕಂಡಿರುವ ಹಿರಿಯರ ಮನೆ ಸಮುಚ್ಛಯಗಳಲ್ಲಿ ಪ್ರೈಮಸ್ ಬಹಳ ಅನುಕೂಲವಾಗಿ ಉತ್ತಮ ಗುಣಮಟ್ಟದ್ದಾಗಿದೆ. ಇದು ಬೆಂಗಳೂರಿನ ಹೊರವಲಯದಲ್ಲಿದ್ದು ಪ್ರಶಾಂತವಾಗಿದೆ. ಕನಕಪುರ ರಸ್ತೆಯಲ್ಲಿರುವ ರವಿ ಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಸುಪಾಸಿನಲ್ಲಿದೆ. ಇಲ್ಲಿ ಒಟ್ಟಾರೆ ೧೬೩ ಫ್ಲ್ಯಾಟ್ಗಳಿವೆ. ಫ್ಲ್ಯಾಟ್ಗಳನ್ನು ಕೊಂಡು ಅಲ್ಲಿ ವಾಸವಾಗಿರಬಹುದು. ಕೆಳಹಂತದಲ್ಲಿರುವ ಭೋಜನ ಶಾಲೆಯಲ್ಲಿ ಊಟ, ಉಪಹಾರ
ಇವುಗಳ ವ್ಯವಸ್ಥೆ ಇದೆ. ಕಟ್ಟಡದ ಸುತ್ತು ವಿಹರಿಸಲು ಸಾಧ್ಯವಿದೆ, ಅಲ್ಲೇ ಒಂದು ಸಣ್ಣ ದೇವಸ್ಥಾನವಿದೆ, ಲೈಬ್ರರಿ ಇದೆ, ಈಜುಕೊಳವಿದೆ, ಮತ್ತು ಒಂದು ಸಾರ್ವಜನಿಕ ಸಭಾಂಗಣವಿದೆ. ಈ ಸಮುಚ್ಚಯದಲ್ಲೇ ಒಂದು ಸಣ್ಣ ಅರೋಗ್ಯ ಕೇಂದ್ರವಿದ್ದು, ಬೆಳಗಿನಿಂದ ಸಂಜೆಯವರೆಗೆ ಒಬ್ಬ ವೈದ್ಯರಿರುತ್ತಾರೆ, ಉಳಿದಂತೆ ಒಬ್ಬ ನಿವಾಸಿ ನರ್ಸ್ ಇರುತ್ತಾರೆ.
ಇಲ್ಲಿಯ ನಿವಾಸಿಯೊಬ್ಬರು ಆಸ್ಪತ್ರೆಗೆ ಸೇರುವ ಸಂದರ್ಭ ಉಂಟಾದಲ್ಲಿ ಈ ಸಂಸ್ಥೆಗೇ ಸೇರಿದ ಆಂಬುಲೆನ್ಸ್ ಸೌಲಭ್ಯವಿದೆ. ರೋಗಿಯನ್ನು ವರ್ಗಾಯಿಸಿ ಆಸ್ಪತ್ರೆಗೆ ನೋಂದಾಯಿಸುವ ತನಕ, ಸಂಸ್ಥೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಮಕ್ಕಳು ಅಥವಾ ಸಂಬಂಧಿಗಳು ಬರುವವರೆಗೆ ಕಾಯುವ ಅವಶ್ಯಕತೆ ಇಲ್ಲ.
ಇಲ್ಲಿ ದೀಪಾವಳಿ, ರಾಜ್ಯೋತ್ಸವ ಸಮಾರಂಭಗಳು, ಪ್ರವಚನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕಳೆದ ವರ್ಷ ನನ್ನ ಪುಸ್ತಕದ ಬಗ್ಗೆ, ನನ್ನ ಸಮ್ಮುಖದಲ್ಲಿ ಒಂದು ಸಾಹಿತ್ಯ ಸಂವಾದವನ್ನು ಏರ್ಪಡಿಸಲಾಗಿತ್ತು ಎಂಬುದನ್ನು ಇಲ್ಲಿ ನೆನೆಯುತ್ತೇನೆ. ಈ ಹಿರಿಯರು ಸಂಗೀತ, ನೃತ್ಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರೂ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ವಿಶೇಷವಾದ ಸಂಗತಿ.
ಡಾ. ಭಾನುಮತಿಯವರು ಉತ್ತಮ ಸಂಘಟಕರು. ಹಿಂದೆ ಅವರು ಕನ್ನಡ ಬಳಗದ ಸಕ್ರಿಯ ಅಧ್ಯಕ್ಷರಾಗಿ ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳನ್ನು, ಮೈಲಿಗಲ್ಲು ಸಂಭ್ರಮಗಳನ್ನು ಆಯೋಜಿಸಿದ್ದಾರೆ, ಅವರು ಬಹಳ ಕ್ರಿಯಾಶೀಲರು. ಅವರು ಬೆಂಗಳೂರಿನ ಪ್ರೈಮಸ್ ಸಂಸ್ಥೆಯಲ್ಲಿ ಇದೇ ಕ್ರಿಯಾಶೀಲತೆಯನ್ನು ಇತರರೊಂದಿಗೆ ಹಂಚಿಕೊಂಡು ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಅವರ ನೇತೃತ್ವದಲ್ಲಿ ಅನೇಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಿರಿಯರೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿರಿಯರು ಬದುಕಿನ ಪ್ರೀತಿಯನ್ನು ಉಳಿಸಿಕೊಂಡು, ಜೀವನೋತ್ಸಾಹದಲ್ಲಿ ಬದುಕುತ್ತಿರುವುದು ಶ್ಲಾಘನೀಯ. ಜೀವನದ ಸಂಧ್ಯಾಕಾಲದಲ್ಲಿ ಮೂಡುವ ಜಿಗುಪ್ಸೆ, ವೈರಾಗ್ಯ, ಒಂಟಿತನ, ಖಿನ್ನತೆಯನ್ನು ತರಬಹುದು. ಆದರೆ ಈ ಹಿರಿಯರು ತಮ್ಮ ಕಷ್ಟಗಳನ್ನು ಹತ್ತಿಕ್ಕಿ ತಮ್ಮ ಬದುಕನ್ನು ತಮಗೆ ಬೇಕಾದಂತೆ ರೂಪಿಸಿಕೊಂಡು ಖುಷಿಯಾಗಿದ್ದಾರೆ. ಇದು ಮೆಚ್ಚಬೇಕಾದ ಸಂಗತಿ. ಈ ಹಿರಿಯರಲ್ಲಿ ಒಂದು ನೆಮ್ಮದಿ ಇದೆ, ಸಂತೃಪ್ತಿ ಇದೆ ಎಂಬುದು ನನ್ನ ಗ್ರಹಿಕೆ. ಇಲ್ಲಿ ಒಬ್ಬರಿಗಿನೊಬ್ಬರು ಆಸರೆಯಾಗಿದ್ದಾರೆ. ಇಲ್ಲಿ ಪರಸ್ಪರ ಸಂಪರ್ಕ, ಪ್ರೀತಿ, ಕಾಳಜಿ ಮತ್ತು ವಿಶ್ವಾಸಗಳಿವೆ. ಎಲ್ಲರಿಗೂ ಎಲ್ಲರ ಪರಿಚಯವಿದೆ. ಒಂದು ರೀತಿ ನಮ್ಮ ಯು.ಕೆ ಕನ್ನಡ ಬಳಗದ ಸಮುದಾಯವಿದ್ದಂತೆ ಎನ್ನ ಬಹುದು. ನಾನು ಇಲ್ಲಿಗೆ ಎರಡು ಬಾರಿ ಭೇಟಿ ನೀಡಿದ್ದೇನೆ ಮತ್ತು ಇವರ ಒಡನಾಟವನ್ನು ಕಂಡಿದ್ದೇನೆ. ಅಪ್ಪಾಜಿ ಅವರು ವೀಲ್ ಚೇರಿನಲ್ಲಿ ಒಮ್ಮೆ ಭೋಜನ ಶಾಲೆಗೆ ಬಂದಾಗ ಅಲ್ಲಿಯ ಇತರ ನಿವಾಸಿಗಳು ಬಂದು ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಆತ್ಮೀಯ ಕುಶಲೋಪರಿಯಲ್ಲಿ ತೊಡಗಿದ್ದು ನನಗೆ ಇಂದಿಗೂ ನೆನಪಿದೆ. ಇಲ್ಲಿ ಹಿರಿಯರಿಗೆ ಸಾಂಸ್ಕೃತಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಅನುಭವ ದೊರೆಯುತ್ತಿದೆ. ಈ ರೀತಿಯ ಒಂದು ಗುಣಮಟ್ಟದ ಆತ್ಮೀಯ ಬದುಕನ್ನು ಬ್ರಿಟನ್ನಿನ ಯಾವುದೇ ನರ್ಸಿಂಗ್ ಹೋಮ್ ಗಳಲ್ಲಿ ನಿರೀಕ್ಷಿಸುವುದು ಸಾಧ್ಯವಿಲ್ಲ. ಎಲ್ಲ ಸೌಲಭ್ಯಗಳು ದೊರೆತರು ಆ ಸಾಂಸ್ಕೃತಿಕ ಕೊರತೆ ನೀಗುವುದಿಲ್ಲ ಎಂಬುದು ಸತ್ಯ.
ಬ್ರಿಟನ್ನಿನಲ್ಲಿ ಮುಂದಕ್ಕೆ ಕನ್ನಡ ಬಳಗವೇ ಒಂದು ಹಿರಿಯರ ಮನೆಯನ್ನು ಕಟ್ಟ ಬಹುದಲ್ಲವೇ? ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಹಾದುಹೋಗಿದೆ. ಅದರ ಬಗ್ಗೆ ಎಲ್ಲ ಅನಿವಾಸಿ ಹಿರಿಯರು ಚಿಂತಿಸಬೇಕಾಗಿದೆ. ನಮ್ಮ ಕನ್ನಡ ಬಳಗದ ಅದೆಷ್ಟೋ ಹಿರಿಯರಿಗೆ ಬೆಂಗಳೂರಿನಲ್ಲಿ ಹೋಗಿ ಖಾಯಂ ಆಗಿ ನೆಲೆಸುವ ಆಸೆ ಇದ್ದರೂ ಅಲ್ಲಿ ಹೋಗಿ ಬದುಕಬಲ್ಲೆವು ಎಂಬ ಆತ್ಮ ವಿಶ್ವಾಸ ಇಲ್ಲದಿರಬಹುದು ಮತ್ತು ಬ್ರಿಟನ್ನಿನಲ್ಲಿರುವ ತಮ್ಮ ಮಕ್ಕಳನ್ನು ಮತ್ತು ಮೊಮ್ಮಕ್ಕಳನ್ನು ತೊರೆದು ಹೋಗುವುದು ಕಷ್ಟವಿರಬಹುದು. ಈ ಒಂದು ಹಿನ್ನೆಲೆಯಲ್ಲಿ ಬ್ರಿಟನ್ನಿನಲ್ಲಿ ನೆಲೆಸಿರುವ ಭಾರತೀಯರೇ, ಭಾರತೀಯರಿಗಾಗಿ ನಡೆಸ ಬಹುದಾದ ನರ್ಸಿಂಗಹೋಮ್ ಗಳ, ಸಂಧ್ಯಾ ದೀಪಗಳ ಅಗತ್ಯವಿದೆ.
ನಾನು ಇಲ್ಲಿಯವರೆಗೆ 'ಸಂಧ್ಯಾದೀಪ' ಎಂಬ ಪದವನ್ನು ಹಿರಿಯರ ಮನೆ ಎಂಬುದನ್ನು ಸೂಚಿಸಲು ಒಂದು ರೂಪಕವಾಗಿ ಬಳೆಸಿದ್ದೇನೆ. ಇದಕ್ಕೆ ಇನ್ನೊಂದು ಕಾರಣವಿದೆ. ನನ್ನ ತಾಯಿ ರುದ್ರಾಣಿ ಅವರು ೩೦ ವರ್ಷಗಳ ಹಿಂದೆಯೇ ಸಂಧ್ಯಾದೀಪ ಎಂಬ ವೃದ್ಧಾ ಶ್ರಮವನ್ನು ಬೆಂಗಳೂರಿನಲ್ಲಿ ಹುಟ್ಟು ಹಾಕಿದ್ದು ಅದು ಇಂದಿಗೂ ವೃದ್ಧರಿಗೆ ಆಶ್ರಯ ನೀಡುತ್ತಾ ಬಂದಿದೆ. ಆ ಸಂಸ್ಥೆಗೆ ನಾನು ಪ್ರೀತಿಯಿಂದ ಬರೆದುಕೊಟ್ಟ ಕವನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ಒಂದು ಬರಹಕ್ಕೆ ನನ್ನ ಈ ಕವಿತೆ ಹೊಂದುವಂತಿದೆ ಎಂದು ಭಾವಿಸುತ್ತೇನೆ.
ಸಂಧ್ಯಾ ದೀಪ
ಡಾ. ಜಿ. ಎಸ್. ಶಿವಪ್ರಸಾದ್
ಪ್ರೀತಿ ವಾತ್ಸಲ್ಯದ ಸಂಧ್ಯಾದೀಪ
ಕರುಣೆಯ ಕುಡಿಯಲಿ ಉರಿಯುವ ದೀಪ
ಭರವಸೆ ನೀಡುವ ನಂದಾ ದೀಪ
ಕಾರ್ಮೋಡದ ಸಂಜೆಯ ದಾರಿಯ ದೀಪ
ಸವೆದಿಹ ಕೀಲಿಗೆ, ಮಬ್ಬಿನ ಕಣ್ಣಿಗೆ
ನಡುಗುವ ಕೈಯಿಗೆ, ಬಾಗಿದ ಬೆನ್ನಿಗೆ,
ಅಂದಿನ ತಪ್ಪಿಗೆ, ಇಂದಿನ ಮುಪ್ಪಿಗೆ
ಇನ್ನಿಲ್ಲ ಶಾಪ, ಪರಿತಾಪ
ಕಂಡರಿಯದ ಊರಿಗೆ ದೂರದ ಪಯಣ
ಬಸವಳಿದವರಿಗಿದು ಕೊನೆಯ ನಿಲ್ದಾಣ
ನಿರೀಕ್ಷೆಗೆ ಜಿಗುಪ್ಸೆಗೆ ವಿಶ್ರಾಂತಿಯ ತಾಣ
ಮಮತೆ ಆರೈಕೆಯ ಚಿಲುಮೆ ಇದು ಕಾಣ.
*
ವೃದ್ಧಾಪ್ಯದ ಬಗ್ಗೆ ಇನ್ನೊಂದು "ಅಂದು -ಇಂದು" ಎಂಬ ಪದ್ಯವನ್ನು ಇಲ್ಲಿ ಪ್ರಕಟಿಸಲಾಗಿದೆ.
ಈ ಪದ್ಯವನ್ನು ಮೈಸೂರಿನಲ್ಲಿ ನೆಲೆಸಿರುವ ರೆಡಿಯಾಲಜಿಸ್ಟ್ ಡಾ. ರಘುನಾಥ್ ಅವರು ಅಂತರ್ಜಾಲದಲ್ಲಿ ಕಂಡ ಇಂಗ್ಲಿಷ್ ಪದ್ಯದಿಂದ ಪ್ರೇರಿತಗೊಂಡು ರಚಿಸಿದ್ದಾರೆ. ಇದನ್ನು ಹಂಚಿಕೊಂಡ ನಮ್ಮ ಬಳಗದ ಸದಸ್ಯರಾದ ಡಾ.ಮಂದಗೆರೆ ವಿಶ್ವನಾಥ್ ಅವರಿಗೆ ಕೃತಜ್ಞತೆಗಳು. ಪದ್ಯವು ಈ ಸಂದರ್ಭಕ್ಕೆ ಉಚಿತವಾಗಿದೆ ಎಂದು ಭಾವಿಸುತ್ತೇನೆ.
ಅಂದು – ಇಂದು
ಡಾ. ರಘುನಾಥ್
ಏಳುವುದೇ (ನಿದ್ದೆಯಿಂದ) ಕಷ್ಟ
ಈಗ ನಿದ್ದೆ ಮಾಡುವುದೇ ಕಷ್ಟ
ಆಗೆಲ್ಲ ಮೊಡವೆಯ ಯೋಚನೆ
ಈಗೆಲ್ಲ ಸುಕ್ಕಿನ ಯೋಚನೆ
ಅಂದು ಯಾರೂ ನಮಗೆ ಬೇಡ
ಇಂದು ಯಾರಾದರೂ ಇದ್ದರೆ ಸಾಕು
ಅಂದು ಯಾರ ಕೈ ಹಿಡಿಯಲೆಂದು
ಇಂದು ಯಾರಾದರೂ ಕೈ ಹಿಡಿದರೆ ಸಾಕೆಂದು
ಅಂದು ಸುಂದರತೆ ನೋಡುವ ತವಕಾಟ
ಇಂದು ನೋಡಿದರಲ್ಲಿ ಸುಂದರತೆ ಕಾಣುವ ಸೆಣಸಾಟ
ಅಂದು ನಾನೇ ಎಂದಿಗೂ
ಇಂದು ನನ್ನ ಸರದಿ ಎಂದಿಗೂ
ಅಂದು ಎಲ್ಲರ ಹೃದಯ ಮಿಡಿತ ನಾನೇ
ಇಂದು ಅದು ನಿಂತಿತೆಂಬ ಭಾವನೆ
*
ಕನ್ನಡ ರಾಜ್ಯೋತ್ಸವ; ಕೆಲವು ಐತಿಹಾಸಿಕ ಹಿನ್ನೆಲೆಗಳು
ಶ್ರೀಮತಿ ಪುಷ್ಪ , ಪ್ರೈಮಸ್ ಹಿರಿಯರ ಮನೆ
ಡಿ.ಎಲ್ ಪುಷ್ಪ ಅವರ ಪರಿಚಯ ಅವರ ಮಾತುಗಳಲ್ಲೇ ಹೀಗಿದೆ:
"ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ವೈದ್ಯರಾಗಿದ್ದ ನನ್ನ ತಂದೆಯವರಿಗಿದ್ದ ಕನ್ನಡ ಸಾಹಿತ್ಯದ ಆಳವಾದ ಅರಿವು ನನ್ನ ಮೇಲೆ ಪ್ರಭಾವ ಬೀರಿತು.ತಾಯಿಯವರಿಂದ ದೇವರನಾಮಗಳನ್ನು ಕಲಿತೆ. ಕನ್ನಡ ಮಾಧ್ಯಮ ದಲ್ಲಿ ಶಿಕ್ಷಣ ಪಡೆದ ನನಗೆ ಕನ್ನಡ ಕಾದಂಬರಿಗಳನ್ನು ಓದುವ ಹವ್ಯಾಸವಿತ್ತು. ಭಾವಗೀತೆಗಳನ್ನು ರೇಡಿಯೋದಲ್ಲಿ ಕೇಳಿ ಕಲಿಯುತ್ತಾ ಶ್ರೀಮತಿ ಎಚ್.ಆರ್.ಲೀಲಾವತಿಯವರ ಅಭಿಮಾನಿಯಾದೆ. ಸಂಗೀತ ಸ್ವಲ್ಪ ಗೊತ್ತು. ಮುಂದೆ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗಲೂ.ಕನ್ನಡದ ಪತ್ರಗಳಿಗೆ ಕನ್ನಡದಲ್ಲೇ ಉತ್ತರಿಸುತ್ತಿದ್ದೆ. ಈಗ ಸ್ವಲ್ಪ ಮಟ್ಟಿಗಾದರೂ ಕನ್ನಡ ಓದುವ ಭಾವಗೀತೆ ಕೇಳುವ ಹಾಡುವ ಹವ್ಯಾಸಗಳು ನನ್ನ ಬಾಳನ್ನು ಮುನ್ನಡೆಸುವ ಶಕ್ತಿಗಳಾಗಿವೆ"
***
ಕರ್ನಾಟಕ ರಾಜ್ಯೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಒಂದು ಸುಧೀರ್ಘ ಹೋರಾಟದ ಕಥೆ ಇದೆ. ಅಪಮಾನನವನ್ನು ಸಹಿಸಿದೇ ಸ್ವಾಭಿಮಾನವನ್ನು ಉಳಿಸಿಕೊಳ್ಳುವಲ್ಲಿ ಕನ್ನಡ ಸಂಸ್ಕೃತಿ ಉದಯವಾಗಿದೆ.
ಪಲ್ಲವ ಕ್ಷತ್ರಿಯರಿಂದ ಆದ ಅಪಮಾನವನ್ನು ಸಹಸಿಕೊಳ್ಳದೇ ಸ್ವಾಭಿಮಾನದ ಕಿಚ್ಚಿನಿಂದ "ಶರ್ಮ" ಎಂಬ ಬ್ರಾಹ್ಮಣ ಸೂಚಿಕ ಪದವನ್ನು ತ್ಯಜಿಸಿ ಖಡ್ಗ ಹಿಡಿದು ಸೈನ್ಯ ಕಟ್ಟಿ ಹೋರಾಡಿ ಜಯಶೀಲನಾದವನೇ "ಮಯೂರ ವರ್ಮಾ", ಕನ್ನಡಿಗ ರಾಜವಂಶ ಕದಂಬರ ದೊರೆ. ಒಂದು ಸಂಸ್ಕೃತಿಯಂದರೆ ಆ ಜನಾಂಗದ ಜೀವನ ವಿಧಾನ, ಅದರ ಚರಿತ್ರೆ. ಸ್ವಾಭಿಮಾನ ಹಾಗೂ ಸಮದೃಷ್ಟಿಯುಳ್ಳವರಾಗಿದ್ದು, ಶೂರರು, ಉದಾರ ಹೃದಯಗಳೂ ಆಗಿದ್ದ ಚಾಲುಕ್ಯರು, ಹೊಯ್ಸಳರು ಮತ್ತು ರಾಷ್ಟ್ರಕೂಟ ದೊರೆಗಳ ಆಳ್ವಿಕೆಯಲ್ಲಿ ಸ್ವಂತಿಕೆಯನ್ನು ಮತ್ತು ಆತ್ಮವಿಶ್ವಾಸವನ್ನು ಬೆಳಸಿಕೊಂಡು ಕರ್ನಾಟಕ ಸಂಸ್ಕೃತಿ ರೂಪುಗೊಂಡಿತು. "ಮನುಷ್ಯ ಜಾತಿ ತಾನೊಂದೆ ವಲಂ" ಎಂಬುದು ಆದಿ ಕವಿ ಪಂಪನ ಮಾತು. ಮನುಷ್ಯವರ್ಗವೆಲ್ಲ ಒಂದು ಎಂಬ ತತ್ವವನ್ನು ತಮ್ಮ ಧರ್ಮದ ಚೌಕಟ್ಟಿನಲ್ಲೆ ಕನ್ನಡ ಜನ ಕಂಡಿದ್ದಾರೆ. ದಯೆಯೇ ಧರ್ಮದ ಮೂಲವೆಂದು ಬಸವಣ್ಣ ಹೇಳಿದ್ದರೆ, ಹೊಲಯ ಹೊರಗಿಹನೇ? ಊರೊಳಗಿಲ್ಲವೇ? ಎಂದು ಪುರಂದರದಾಸರು ಹೇಳಿದ್ದಾರೆ.
ಧಾರ್ಮಿಕ ಸಮನ್ವಯವಿದ್ದ ಕನ್ನಡನಾಡಿನಲ್ಲಿ ಶೈವ, ವೈಷ್ಣ , ಭೌದ್ಧ ,ಜೈನ ಮತಗಳ ಅಭಿವೃದ್ಧಿ ಹೊಂದಿದವು. ಅಪ್ರತಿಮ ಶಿಲ್ಪಕಲೆಯನ್ನೂಳಗೊಂಡ, ಬಾದಾಮಿ, ಐಹೊಳೆ ,ಪಟ್ಟದಕಲ್ಲು, ಬೇಲೂರು, ಹಳೇಬೀಡುಗಳ ದೇವಾಲಯಗಳು ನಿರ್ಮಾಣವಾದವು. ಪುರಂದರದಾಸರಂತ ವಾಗ್ಮಿಗಳಿಗೆ ಮತ್ತು ಪಂಪ, ರನ್ನ ಜನ್ನ , ನಾಗವರ್ಮ ಮತ್ತು ಕುಮಾರವ್ಯಾಸರಂಥ ಮಹಾ ಕವಿಗಳಿಗೆ ಜನ್ಮ ಕೊಟ್ಟ ನಾಡಿದು. ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸಾಮಾನತೆಯನ್ನು ಸಾರಿದ ಬಸವಣ್ಣ, ಅಲ್ಲಮಪ್ರಭು ,ಅಕ್ಕಮಹಾದೇವಿಯವರನ್ನು ಹೇಗೆ ಮರೆಯಲಾದೀತು? ಹೀಗೆ ಎಲ್ಲ ರಂಗಗಳಲ್ಲಿಯೂ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕನ್ನಡ ಪ್ರದೇಶಗಳು ವಿಜಯನಗರ ಸಾಮ್ರಾಜ್ಯ ಪತನದ ನಂತರ ಕನ್ನಡಿಗರ ಕೈ ತಪ್ಪಿ ಮುಂಬೈ, ಹೈದರಾಬಾದ್, ಮದ್ರಾಸ್ ಪ್ರಾಂತ್ಯಗಳಲ್ಲಿ ಹಂಚಿಹೋದವು. ಕನ್ನಡಿಗರು ಎರಡನೇ ದರ್ಜೆಯ ಪ್ರಜೆಗಳಾದರು. ಭೌಗೋಳಿಕವಾಗಿ ಒಂದಾಗಬೇಕಾದ ಅವಶ್ಯಕತೆ ಉಂಟಾಯಿತು. ಹೀಗಾಗಿ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾಜ್ಞರಾದವರು, ಸಾಹಿತಿಗಳು, ಕವಿಗಳು, ಕನ್ನಡ ಪತ್ರಿಕೆಗಳು, ಕನ್ನಡ ಸಂಘಟನೆಗಳು, ಕಲಾವಿದರು, ಕೃಷಿಕರು, ಸಾಮಾನ್ಯ ಜನರೆಲ್ಲರೂ ತಾವು ಒಂದುಗೂಡಬೇಕೆಂದು ಯೋಚಿಸಿ ಭಾವನಾತ್ಮಕವಾಗಿ ಹಾಗೂ ವೈಚಾರಿಕವಾಗಿ ಒಗ್ಗಟ್ಟಿನಿಂದ ಒಂದು ಚಳುವಳಿ ಪ್ರಾರಂಭಿಸಿದರು.
ಹೀಗೆ "ಕರ್ನಾಟಕ ಏಕೀಕರಣಕ್ಕಾಗಿ" ನಡೆದ ಚಳುವಳಿಯಲ್ಲಿನ ಕೆಲವು ಮುಜಲುಗಳನ್ನು ಗುರುತಿಸುವುದಾದರೆ ಭಾರತ ಸ್ವತಂತ್ರ ಹೋರಾಟದ ಜೊತೆ ಜೊತೆಗೆ ಸಮಾನಾಂತರವಾಗಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಯಿತು. ಅವು ಹೀಗಿವೆ;
೧)ಪ್ರಮುಖ ಸಾಹಿತಿಗಳಾದ ಆಲೂರು ವೆಂಕಟರಾವ್ (ಕನ್ನಡ ಕುಲ ಪುರೋಹಿತ ) ಅವರನ್ನು ಏಕೀಕರಣದ ಶಿಲ್ಪಿ ಎನ್ನಬಹುದು. ೧೯೦೭/೮ ರಲ್ಲಿ ಧಾರವಾಡದಲ್ಲಿ ಕನ್ನಡ ಲೇಖಕರ ಸಮ್ಮೇಳನ ನಡೆಸಿ ಲೇಖಕರು ತಮ್ಮ ಬರಹದ ಮೂಲಕ ಏಕೀಕರಣ ಚಳುವಳಿಯನ್ನು ಬೆಳಸುವಂತೆ ಕರೆ ನೀಡಿದರು. ಅವರ ಕಾದಂಬರಿ "ಕರ್ನಾಟಕ ಗಥ ವೈಭವ "ಏಕೀಕರಣದ ಬೈಬಲ್ " ಎಂದು ಹೇಳಲಾಗುತ್ತದೆ.
೨) ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ಸರ್ ಎಂ ವಿಶ್ವೇಶ್ವರಯ್ಯನವರು ೧೯೧೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಏಕೀಕರಣದ ಪರಿಕಲ್ಪನೆಗೆ ನಾಂದಿ ಹಾಡಿದರು.
೩) ೧೯೨೪ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಲುಗೊಳ ನಾರಾಯಣರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಗೀತೆಯನ್ನು ಪ್ರಾರ್ಥನೆಗೆ ಹಾಡಲಾಯಿತು. ಇದನ್ನೇ ಮುಂದೆ ಏಕೀಕರಣ ಗೀತೆಯಾಗಿ ಗುರುತಿಸಲಾಯಿತು.
೪)೧೯೨೬ರಲ್ಲಿ ಹಿಂದೂಸ್ತಾನ್ ಸೇವಾದಳದ ಎನ್. ಎಸ್ ಹರ್ಡಿಕರ್ ನೇತೃತ್ವದಲ್ಲಿ ಏಕೀಕರಣಕ್ಕೆ ಹಸ್ತಾಕ್ಷರ ಚಳುವಳಿ ನಡೆಯಿತು. ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ೧೯೫೬ರಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿ ನವಂಬರ್ ೧ನೇ ದಿನಾಂಕದಂದು ನವಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ಮುಂದೆ ಕೆಂಗಲ್ ಹನುಮಂತಯ್ಯನವರ ಮತ್ತು ಎಸ್. ನಿಜಲಿಂಗಪ್ಪನವರ ಪ್ರಯತ್ನದಿಂದ ೧೯೭೩ರ ನವಂಬರ್ ೧ನೇ ದಿನಾಂಕ "ಕರ್ನಾಟಕ " ವೆಂದು ನಾಡಿಗೆ ನಾಮಕರಣವಾಯಿತು. ಪ್ರತಿ ವರ್ಷ ಕರ್ನಾಟಕದ ಗತ ವೈಭವ ಮತ್ತು ಸಂಸ್ಕೃತಿಯನ್ನು ನೆನೆಪಿಸುವ ಸಲುವಾಗಿ ಮಾತ್ರವಲ್ಲದೆ ಕನ್ನಡಿಗರಿಗೆ ಒಂದು ಆಸ್ಮಿತೆಯನ್ನೂ, ಅಸ್ತಿತ್ವವನ್ನು ತಂದುಕೊಟ್ಟ ಎಲ್ಲ ಮಹನೀಯರ ಸ್ಮರಣೆಗಾಗಿ ಈ ರಾಜ್ಯೋತ್ಸವ ಆಚರಣೆ ಮುಖ್ಯವಾಗುತ್ತದೆ.
ಈ ಬರಹದ ಹಸ್ತಪ್ರತಿಯನ್ನು ಟೈಪ್ ಮಾಡಿಕೊಟ್ಟ ಅನಿವಾಸಿ ಬಳಗದ ರಾಮಮೂರ್ತಿ ಅವರಿಗೆ ಕೃತಜ್ಞತೆಗಳು
ಯುಕೆ ಕನ್ನಡ ಬಳಗದ ೪೦ನೇ ವಾರ್ಷಿಕೋತ್ಸವ ಸಮಾರಂಭದ ಅನಿವಾಸಿ ಆಶ್ರಯದಲ್ಲಿ ಶಿಕ್ಷಣ ವಿಷಯದ ಬಗ್ಗೆ ನಡೆದ ಚರ್ಚಾಗೋಷ್ಠಿಯಲ್ಲಿ ಮಂಡಿಸಿದ ನನ್ನ ಕೆಲವು ಅನಿಸಿಕೆಗಳನ್ನು ಆಧರಿಸಿ ಮುಂದಕ್ಕೆ ವಿಸ್ತರಿಸಿ ಬರೆದಿರುವ ಲೇಖನ. 'ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಣ' ಕುರಿತಾದ ವಿಷಯಗಳು ಸಾಕಷ್ಟಿವೆ. ಅದರ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದೇನೋ. ಹೀಗಾಗಿ ನನ್ನ ಅನಿಸಿಕೆಗಳನ್ನು ತುಸು ದೀರ್ಘವಾಗಿಯೇ ದಾಖಲಿಸಿದ್ದೇನೆ. ಪುರುಸೊತ್ತಿನಲ್ಲಿ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ. ನನಗೆ ಈ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಅನಿವಾಸಿ ವೇದಿಕೆಗೆ, ಕಾರ್ಯಕ್ರಮವನ್ನು ನಿರ್ವಹಿಸಿದ ಡಾ. ಪ್ರೇಮಲತಾ ಅವರಿಗೆ ಕೃತಜ್ಞತೆಗಳು
-ಸಂಪಾದಕ
'ಪರಿವರ್ತನೆ ಜಗದ ನಿಯಮ'. ನಮ್ಮ ಬದುಕು, ನಮ್ಮ ಸಮಾಜ, ನಮ್ಮ ಪರಿಸರ ಬದಲಾಗುತ್ತಿದೆ. ಜಾಗತೀಕರಣದಿಂದಾಗಿ ತೀವ್ರ ಬದಲಾವಣೆಗಳಾಗಿವೆ. ಕೈಗಾರಿಕಾ ಮತ್ತು ವೈಜ್ಞಾನಿಕ ಕ್ರಾಂತಿಯ ಮಧ್ಯದಲ್ಲಿ ನಾವು ಬದುಕುತ್ತಿದ್ದೇವೆ. ಕಳೆದ ಕೆಲವು ವರ್ಷಗಳ ಹಿಂದೆ ಆವರಿಸಿದ್ದ ಕರೋನ ಪಿಡುಗು ನಮ್ಮ ಬದುಕಿನ ರೀತಿ ನೀತಿಗಳನ್ನು ಬದಲಾಯಿಸಿದೆ. ಈ ಹಲವಾರು ಬದಲಾವಣೆಯಿಂದಾಗಿ ನಾವು ಸಾಕಷ್ಟು ಸಾಮಾಜಿಕ ಮತ್ತು ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿಕೊಂಡು ಹೊಸ ಕಲಿಕೆಗಳನ್ನು ಪಡೆದಿದ್ದೇವೆ. ಈ ಹೊಸ ಅನುಭವಗಳನ್ನು ನಾವು ಇಲ್ಲಿಯವರೆಗೆ ಗಳಿಸಿಕೊಂಡ ಹಳೆ ಅನುಭಗಳ ಜೊತೆ ತಳುಕು ಹಾಕಿಕೊಂಡು ಬದುಕಲು ಕಲಿಯಬೇಕಾಗಿದೆ. ಈ ಕಲಿಕೆಯೇ ಶಿಕ್ಷಣದ ಮೂಲ ಉದ್ದೇಶ. ಇಂದು ಕಲಿತ ಅನುಭವಗಳು, ಸಂಪಾದಿಸಿದ ಜ್ಞಾನ ಕಾಲ ತರುವ ತೀವ್ರ ಬದಲಾವಣೆಗಳ ಹಿನ್ನೆಲೆಯಲ್ಲಿ ಕೆಲವೊಮ್ಮೆ ಅಪ್ರಸ್ತುತವಾಗಬಹುದು. ಕಾಲೇಜು ಶಿಕ್ಷಣದ ಕೊನೆಯಲ್ಲಿ ಪಡೆದ ಪದವಿ ಪತ್ರ ಕಲಿಕೆಯ ಮುಕ್ತಾಯವಲ್ಲ! ಬಹುಶಃ ಅದು ಬದುಕಿನುದ್ದಕ್ಕೂ ಕಲಿಯುವ ಅವಕಾಶಗಳಿಗೆ ಒಂದು ಬುನಾದಿ. ಶಿಕ್ಷಣದ ಗುರಿ ಎಂದರೆ ಒಂದು ಡಿಗ್ರಿ ಎಂಬ ದಾಖಲೆಯನ್ನು ವಿಶ್ವವಿದ್ಯಾಲಯದಲ್ಲಿ ಗಳಿಸಿ ಒಬ್ಬ ಉದ್ಯೋಗಿಯಾಗಿ ಹಣಗಳಿಸಿ ಜೀವನ ಮಾರ್ಗವನ್ನು ಕಂಡುಕೊಳ್ಳುವುದು ಎಂಬುದು ಸಾರ್ವತ್ರಿಕವಾದ ಅಭಿಪ್ರಾಯ. ಇದು ಒಂದು ವೈಯುಕ್ತಿಕ ನೆಲೆಯಲ್ಲಿ ಅಗತ್ಯ. ಆದರೆ ಶಿಕ್ಷಣದ ಗುರಿ ಒಬ್ಬ ಉದ್ಯೋಗಿಯನ್ನಷ್ಟೇ ತಯಾರು ಮಾಡುವುದಲ್ಲ. ಆ ಉದ್ಯೋಗಿ ಸಮಜದಲ್ಲಿನ ಒಂದು ಘಟಕ. ಅವನು ಅಥವಾ ಅವಳು ಸಮಾಜಕ್ಕೆ ಸಲ್ಲುವಂಥವರಾಗಬೇಕು. ಹೀಗೆ ಸಾಮೂಹಿಕ ನೆಲೆಯಲ್ಲೂ ಒಂದು ಆರೋಗ್ಯಕರ ಸಮಾಜವನ್ನು ಕಟ್ಟಲು ಶಿಕ್ಷಣ ಅಗತ್ಯ. ಈ ಕಾರಣಗಳಿಂದ ನಮ್ಮ ಶಿಕ್ಷಣ, ಶಿಕ್ಷಣ ನೀತಿ ಸಮಾಜಕ್ಕೆ ಹೊಂದುವಂತಿರಬೇಕು.
ಸಮಾಜ ಕ್ಷಿಪ್ರವಾದ ಬದಲಾವಣೆಗಳನ್ನು ಕಾಣುತ್ತಿದ್ದರೂ ಮನುಷ್ಯನ ಮೂಲಭೂತವಾದ ಕೆಲವು ಮಾನವೀಯ ಮೌಲ್ಯಗಳು ನಮಗೆ ಅಗತ್ಯ. ಅವು ನಮ್ಮ ಅಸ್ತಿತ್ವದೊಂದಿಗೆ ಬೆರೆತುಕೊಂಡಿದೆ. ಸಮಾಜ ಬದಲಾಗುತ್ತಿದ್ದರೂ ಈ ಮೌಲ್ಯಗಳನ್ನು ಉಳಿಸಿಕೊಳ್ಳುವ ಶಿಕ್ಷಣ ಬೇಕಾಗಿದೆ. ಅದು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು. ಶಿಕ್ಷಣ, ವ್ಯಕ್ತಿತ್ವ ವಿಕಾಸನಕ್ಕೆ ಕಾರಣವಾಗಬೇಕು. ವ್ಯಕ್ತಿ ವಿಕಾಸನವಾದಲ್ಲಿ ಸಮಾಜವು ವಿಕಾಸಗೊಳ್ಳುತ್ತದೆ. ಇದನ್ನೇ ಮೌಲ್ಯಾಧಾರಿತ ಶಿಕ್ಷಣ (Value based education) ಎಂದು ಕರೆಯ ಬಹುದು. ಇದನ್ನು ಒಂದು ಸಣ್ಣ ಉದಾಹರಣೆಯೊಂದಿಗೆ ವಿವರಿಸುವುದು ಸೂಕ್ತ. ನಾನೊಬ್ಬ ವೈದ್ಯ. ನಮ್ಮ ವೈದ್ಯಕೀಯ ಕಾಲೇಜುಗಳು ಒಬ್ಬ ನುರಿತ, ನಿಪುಣ ವೈದ್ಯನನ್ನು ತಯಾರು ಮಾಡ ಬಹುದು. ಆದರೆ ಆ ವೈದ್ಯನಿಗೆ ಸೇವಾ ಮನೋಭಾವವಿಲ್ಲದೆ, ಅನುಕಂಪೆಯಿಲ್ಲದೆ, ಹಣಗಳಿಸುವ ನೆಪದಲ್ಲಿ ರೋಗಿಗಳನ್ನು ಶೋಷಿಸಲು ಮೊದಲಾದರೆ ಆ ಶಿಕ್ಷಣದಿಂದ ಸಮಾಜಕ್ಕೆ ಏನು ಪ್ರಯೋಜನ? ಆ ಶಿಕ್ಷಣ ಒಬ್ಬ ವ್ಯಕ್ತಿಗೆ ಲಾಭವನ್ನು ನೀಡುವುದೇ ಹೊರತು ಸಮಾಜಕ್ಕಲ್ಲ! ಒಬ್ಬ ನುರಿತ ಇಂಜಿನೀಯರ್ ಲಂಚಕೋರನಾಗಿ ಅವನು ಕಟ್ಟಿದ ಸೇತುವೆಗಳು, ಮನೆಗಳು ಕುಸಿದು ಬಿದ್ದಾಗ ಅವನು ಪಡೆದ ವೃತ್ತಿ ಶಿಕ್ಷಣ ಎಷ್ಟರ ಮಟ್ಟಿಗೆ ಮೌಲ್ಯಾಧಾರಿತವಾಗಿತ್ತು ಎನ್ನುವ ಪ್ರಶ್ನೆ ಮೂಡುತ್ತದೆ.
ಈ ಮೌಲ್ಯಾಧಾರಿತ ಶಿಕ್ಷಣ ವ್ಯಕ್ತಿಗಳ ನಡುವೆ ಸ್ನೇಹ, ಪ್ರೀತಿ, ವಿಶ್ವಾಸ, ಪರಸ್ಪರ ನಂಬಿಕೆ, ಗೌರವ ಇವುಗಳನ್ನು ಉಂಟುಮಾಡುತ್ತದೆ. ನಾಗರೀಕ ಸಮಾಜ ಮತ್ತು ಸಂಸ್ಕೃತಿಯನ್ನು ಕಟ್ಟಲು ನೆರವಾಗುತ್ತದೆ. ಕೆಲವು ಉದ್ಯೋಗಗಳಲ್ಲಿ ಒಬ್ಬ ವ್ಯಕ್ತಿ ಒಂದು ತಂಡದ ಭಾಗವಾಗಿ ಕೆಲಸ ಮಾಡಬೇಕಾಗುತ್ತದೆ. ಅಲ್ಲಿ ಸಹೋದ್ಯೋಗಿಗಳ ಜೊತೆ ಕೆಲವು ನಿಯಮಗಳಿಗೆ ಬದ್ಧವಾಗಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಹಕಾರ, ವಿನಯ, ಇತರರೊಡನೆ ಹೊಂದಾಣಿಕೆ ಇವುಗಳು ಮುಖ್ಯವಾಗುತ್ತವೆ. ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವೈದ್ಯಕೀಯ ಶಿಕ್ಷಣದಲ್ಲಿ ಒಬ್ಬ ವೈದ್ಯಕೀಯ ವಿದ್ಯಾರ್ಥಿಯ ಜ್ಞಾನದ ಅರಿವನ್ನು ಪರೀಕ್ಷಿಸುವುದರ ಜೊತೆ ಜೊತೆಗೆ ಅವನ ಸಮಯ ಪ್ರಜ್ಞೆ, ಸ್ನೇಹ, ವಿನಯಶೀಲತೆ, ಶ್ರದ್ಧೆ, ತಂಡದಲ್ಲಿ ಅವನ ಸಹಕಾರ ಇವುಗಳ ಬಗ್ಗೆ ಸಹಪಾಠಿಗಳು, ನರ್ಸ್ಗಳು, ಹಿರಿಯ ವೈದ್ಯರು ತಮ್ಮ ಅನಿಸಿಕೆಗಳನ್ನು ನೀಡಬೇಕು. ಈ ವರದಿ ಸಮಾಧಾನಕಾರವಾಗಿದ್ದಲ್ಲಿ ಮಾತ್ರ ಆ ವಿದ್ಯಾರ್ಥಿ ಮುಂದಿನ ಹಂತವನ್ನು ತಲುಪಲು ಸಾಧ್ಯ. ಈ ಮಾದರಿಯನ್ನು ಭಾರತೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಳ್ಳ ಬೇಕಾಗಿದೆ. ಈ ಮೌಲ್ಯಾಧಾರಿತ ಶಿಕ್ಷಣ ಪ್ರಾಥಮಿಕ ಶಿಕ್ಷಣದಿಂದಲೇ ಶುರುವಾಗಿ ಎಲ್ಲಾ ಹಂತದಲ್ಲೂ ದೊರೆಯುವಂತಾಗಬೇಕು.
ಶಿಕ್ಷಣದ ಗುರಿ ಎಂದರೆ ಅದು ಒಬ್ಬ ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ಮಾಡಬೇಕು, ಒಬ್ಬ ಅನಾಗರಿಕನನ್ನು ನಾಗರೀಕನನ್ನಾಗಿಸಬೇಕು. ಸಮಾಜದಲ್ಲಿ ನಾವು ಧರ್ಮ, ಜಾತಿ, ಆರ್ಥಿಕ ವರ್ಗ, ಎಡಪಂಥ, ಬಲಪಂಥ, ವರ್ಣ ಬೇಧ (ರೇಸಿಸಂ) ಎಂಬ ಗೋಡೆಗಳನ್ನು ಕಟ್ಟಿಕೊಂಡು ಅಲ್ಪಮಾನವರಾಗಿ ಬಿಡುತ್ತೇವೆ. ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ನಮ್ಮ ಆಲೋಚನಾ ಕ್ರಮದಿಂದಾಗಿ ದೇಶ ವಿಭಜನೆಯಾಗಿದೆ. ರಾಜಕೀಯ, ಧಾರ್ಮಿಕ ಪೂರ್ವೋದ್ದೇಶಗಳಿಂದ ನಮ್ಮ ಪಠ್ಯ ಪುಸ್ತಕದಲ್ಲಿನ ಮಾಹಿತಿಗಳನ್ನು ತಿದ್ದುವ ಪ್ರಯತ್ನ ನಡೆದಿದೆ. ಇತಿಹಾಸವನ್ನು ಮರುವ್ಯಾಖ್ಯಾನ ಮಾಡಿ ಮಕ್ಕಳ ಅರಿವನ್ನು ನಿಯಂತ್ರಿಸಲಾಗುತ್ತಿದೆ. ದ್ವೇಷವೆಂಬ ವಿಷದ ಬೀಜವನ್ನು ಬಿತ್ತುವ ಪ್ರಯತ್ನ ನಡೆಯುತ್ತಿದೆ. ಬದುಕಿನ ಪ್ರತಿಯೊಂದು ಮಜಲಿನಲ್ಲೂ ಶ್ರೇಷ್ಠ ನಿಕೃಷ್ಟ, 'ನಾವು ಮತ್ತು ಅವರು' ಎಂಬ ಭಾವನೆಗಳನ್ನು ಉಂಟುಮಾಡುವ ಶಿಕ್ಷಣದ ಕಡೆಗೆ ವಾಲುತ್ತಿದ್ದೇವೆ. ಬದುಕಿನಲ್ಲಿ ಸಹಭಾಗಿತ್ವ ಎಂಬ ಪರಿಕಲ್ಪನೆ ಸರಿದು ಎಲ್ಲ ಮಜಲುಗಳಲ್ಲಿ ಸ್ಪರ್ಧೆಯೇ ಮುಖ್ಯವಾಗಿದೆ. ಭಾರತದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಪರಿಷತ್ತುಗಳು ಹುಟ್ಟಿಕೊಂಡು ಅವುಗಳನ್ನು ರಾಜಕಾರಣಿಗಳು ನಿಯಂತ್ರಿಸುತ್ತಿದ್ದಾರೆ. ಪ್ರಭಾವಕ್ಕೆ ಒಳಗಾಗುವ ಯುವಕ ಯುವತಿಯರು ಒಂದು ರಾಜಕೀಯ ಪಕ್ಷದ ಕಾಲಾಳುಗಳಾಗಿ ನಿಲ್ಲಲು ತಯಾರಾಗಿದ್ದಾರೆ. ಬರಿ ಬಲಪಂಥ ಎಡಪಂಥ ಸಮಸ್ಯೆಗಳಲ್ಲದೆ ಇಲ್ಲಿ ಧರ್ಮವನ್ನು ಬೆಸೆಯಲಾಗಿದೆ. ಇಲ್ಲಿ ಸಾಕಷ್ಟು ಹಿಂಸೆ ಮತ್ತು ಸಂಘರ್ಷಣೆಗಳು ಸಂಭವಿಸುತ್ತವೆ. ಇದು ಅಪಾಯಕಾರಿ ಬೆಳವಣಿಗೆ ಎನ್ನ ಬಹುದು. ಈ ಕಾರಣಗಳಿಂದಾಗಿ ನಮ್ಮ ಶಿಕ್ಷಣ, ಧರ್ಮ ಮತ್ತು ರಾಜಕೀಯ ಇವುಗಳ ಪ್ರಭಾವದಿಂದ ದೂರವಾಗಬೇಕು. ಒಬ್ಬ ವಿಶ್ವಮಾನವನನ್ನು ತಯಾರು ಮಾಡುವ ಶಿಕ್ಷಣದಿಂದಾಗಿ ಆ ವ್ಯಕ್ತಿ ಪ್ರಪಂಚದ ಎಲ್ಲ ಕಡೆ ಸಲ್ಲುವವನಾಗುತ್ತಾನೆ. ಜಾತಿ ಧರ್ಮವೆಂಬ ಸಂಕುಚಿತ ಕಟ್ಟಳೆಗಳನ್ನು ಮೀರಿ ನಿಲ್ಲಲ್ಲು ಸಮರ್ಥನಾಗುತ್ತಾನೆ.
ನಾವು ನಮ್ಮ ಧರ್ಮ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವುದು ತಪ್ಪಲ್ಲ,
ಅದು ಅತ್ಯಗತ್ಯ. ನಮ್ಮ ಭಾರತೀಯ ಸಾಹಿತ್ಯ, ಕಲೆ, ಸಂಸ್ಕೃತಿ ಸಮೃದ್ಧವಾಗಿದ್ದು ಅದನ್ನು ಉಳಿಸಿಕೊಳ್ಳಬೇಕು. ಒಂದು ಶಿಕ್ಷಣ ಸಮಾಜಕ್ಕೆ ಹೊಂದುವಂತಾಗ ಬೇಕಿದ್ದಲ್ಲಿ ಅದು ನಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಗಟ್ಟಿಗೊಳಿಸಬೇಕು. ಅದು ಒಬ್ಬ ವ್ಯಕ್ತಿಯ ಪರಿಪೂರ್ಣತೆಗೆ ಬಹಳ ಮುಖ್ಯ. "ತನ್ನ ಬೇರುಗಳ ಶಾಶ್ವತ ನೆಲೆದ ನಂಟು ಒಂದು ಗಿಡಕ್ಕೆ ಅಥವಾ ಮರಕ್ಕೆ ಅತ್ಯಗತ್ಯ. ತಮ್ಮ ಸಾಂಸ್ಕೃತಿಕ ಅರಿವಿಲ್ಲದವರು, ತಮ್ಮ ಮೂಲ ಭಾಷೆ ನೆಲೆಗಳನ್ನು, ಅಸ್ಮಿತೆಗಳನ್ನು ಮರೆತವರು ನಿರ್ದಿಷ್ಟ ನೆಲೆಯಿಲ್ಲದೆ, ಸ್ಥಳಾಂತರಗೊಳ್ಳುವ ಕುಂಡಗಳಲ್ಲಿನ ಗಿಡ ಮರಗಳಂತೆ" ಎಂದು ಜಿ.ಎಸ್.ಎಸ್ ಒಮ್ಮೆ ಪ್ರಸ್ತಾಪಮಾಡಿದ್ದನು ಇಲ್ಲಿ ನೆನೆಯುವುದು ಸೂಕ್ತ. ಅವೈಚಾರಿಕತೆ ಮತ್ತು ಮೂಢನಂಬಿಕೆಗಳನ್ನು ಮೂಡಿಸುವ ಪಠ್ಯ ಕ್ರಮವನ್ನು ಕೈಬಿಡಬೇಕು.
ಶಿಕ್ಷಣವನ್ನು ಸ್ಥಳೀಯ ಸಮುದಾಯಕ್ಕೆ ಹೊಂದುವ ಪರಿಸರ ಭಾಷೆಯಲ್ಲೇ ನೀಡಬೇಕು. ಕರ್ನಾಟಕದಲ್ಲಿ ಅದರಲ್ಲೂ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕು. ಕಿರಿಯ ಮಕ್ಕಳು ತಮ್ಮ ಪರಿಸರವನ್ನು ಅರಿತುಕೊಳ್ಳುವುದು ಪರಿಸರ ಭಾಷೆಯಲ್ಲೇ. ಅವರ ಮಿದುಳಿನ ನರಮಂಡದಲ್ಲಿ ಉಂಟಾಗುವ ಕೆಲವು ಕಲ್ಪನೆಗಳು, ಮನಸ್ಸಿನಲ್ಲಿ ಅಚ್ಚಾಗುವ ಚಿತ್ತಾರಗಳು ಮನೆಯ ಮತ್ತು ಸುತ್ತಣ ಸಮಾಜ ತೊಡಗುವ ಭಾಷೆಯಲ್ಲೇ. ಹೀಗಿರುವಾಗ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಇಂಗ್ಲಿಷ್ ಮೀಡಿಯಂ ಸೇರಿಕೊಂಡು ಕಲಿಕೆಯನ್ನು ಪರಿಸರ ಭಾಷೆಯಲ್ಲದ ಇಂಗ್ಲೀಷಿನಲ್ಲಿ ಕಲಿಯುವ ಮಕ್ಕಳಿಗೆ ಸಾಕಷ್ಟು ಗೊಂದಲ ಉಂಟಾಗುವ ಬಗ್ಗೆ ಶಿಕ್ಷಣ ಮತ್ತು ಮಾನಸಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅದು ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆ ಬರುವುದಾಗಿ ಅಭಿಪ್ರಾಯ ನೀಡಿದ್ದಾರೆ. ಚಿಕ್ಕ ಮಕ್ಕಳಿಗೆ ಬೇರೆ ಬೇರೆ ಭಾಷೆ ಕಲಿಯುವುದು ಸರಾಗವಿರಬಹುದಾದರೂ ಅದು ಗೊಂದಲವನ್ನು ಉಂಟುಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಮಹಾತ್ಮ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ; “ತಮ್ಮ ಮಕ್ಕಳಿಗೆ ಆಲೋಚಿಸಲು ಮತ್ತು ವ್ಯವಹರಿಸಲು ಇಂಗ್ಲೀಷನ್ನೇ ಬಳಸಬೇಕೆನ್ನುವ ಭಾರತೀಯ ತಂದೆ ತಾಯಿಯರು ತಮ್ಮ ತಾಯ್ನಾಡಿಗೆ ದ್ರೋಹವನ್ನು ಬಗೆಯುತ್ತಿದ್ದಾರೆ. ಅವರು ತಮ್ಮ ಮಕ್ಕಳನ್ನು ಭಾರತೀಯ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಂಪರೆಯಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ" ಬ್ರಿಟಿಷರು ನಮ್ಮನ್ನು ನೂರಾರು ವರ್ಷಗಳು ಆಳಿ ಅವರ ಭಾಷೆ ಮತ್ತು ಸಂಸ್ಕೃತಿಯನ್ನು ನಮ್ಮ ಮೇಲೆ ಹೇರಿರುವ ಪರಿಣಾಮವಿದು. ನಮ್ಮ ಶಿಕ್ಷಣ ನೀತಿಗಳು ವಸಾಹತು ಬ್ರಿಟಿಷ್ ಮನಸ್ಥಿತಿಯಿಂದ ಮುಕ್ತವಾಗಬೇಕಾಗಿದೆ. ಇಲ್ಲಿ ಒಂದು ಸಣ್ಣ ಉದಾಹರಣೆ ನೀಡುವುದು ಸೂಕ್ತ. ಕರ್ನಾಟಕದ ಒಳನಾಡಿನ ಯಾವೊದೋ ಒಂದು ಸಣ್ಣ ಹಳ್ಳಿಯಲ್ಲಿ “London Bridge is falling down, falling down” ಎಂಬ ಶಿಶು ಗೀತೆಯನ್ನು ಹೇಳಿಕೊಟ್ಟಲ್ಲಿ, ಆ ಮಕ್ಕಳಿಗೆ ಲಂಡನ್ ಬ್ರಿಡ್ಜ್ ನಿಂತಿದರೆಷ್ಟು? ಬಿದ್ದರೆಷ್ಟು? ಅದರ ಬದಲಿಗೆ ‘ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ’ ಎಂಬ ಗೀತೆಯನ್ನು ಹೇಳಿ ಕೊಡ ಬಹುದಲ್ಲವೇ? ಉನ್ನತ ಶಿಕ್ಷಣದಲ್ಲಿ ವಿಜ್ಞಾನ ವಿಷಯಗಳನ್ನು ಕಲಿಯಲು ಇಂಗ್ಲಿಷ್ ಬೇಕೇ ಬೇಕು ಎಂದು ವಾದಿಸುವವರು ಒಮ್ಮೆ ಇಂಗ್ಲೆಂಡಿನ ಪಕ್ಕದ ದೇಶಗಳಾದ ಫ್ರಾನ್ಸ್ ಜರ್ಮನಿ, ಪೂರ್ವ ಯೂರೋಪ್ ದೇಶಗಳ ಶಿಕ್ಷಣ ಕ್ರಮಗಳನ್ನು ಗಮಸಿಸಬೇಕಾಗಿದೆ.
ಶಿಕ್ಷಣ ಎಲ್ಲರನ್ನು ಒಳಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಒಂದು ವಾಣಿಜ್ಯ ವಹಿವಾಟಾಗಿದೆ. ಖಾಸಗಿ ಶಾಲಾ ಕಾಲೇಜುಗಳು ಹೆಚ್ಚಾಗಿ ಶಿಕ್ಷಣ ಎಂಬುದು ಉಳ್ಳವರ ಸೊತ್ತಾಗಿದೆ. ಗುಣಮಟ್ಟದಲ್ಲಿ ಸರ್ಕಾರೀ ಮತ್ತು ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಅಂತರವಿರಬಾದು. ಸಮಾಜದಲ್ಲಿ ಕೆಳಗಿನ ಸ್ಥರಗಳಲ್ಲಿರುವವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಉಳಿದು ಅವರಿಗೂ ಅವಕಾಶವಿರಬೇಕು. ಎಲ್ಲಿಯವರೆಗೆ ಎನ್ನುವುದು ಇನ್ನೊಂದು ಪ್ರಶ್ನೆ. ಸಮಾಜದ ಹಿತದೃಷ್ಟಿಯಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಆದ್ಯತೆಯಾಗಬೇಕು. ಅಭಿವೃದ್ಧಿ ಗೊಳ್ಳುತ್ತಿರುವ ದೇಶಗಳಲ್ಲಿ ಅದರ ಪರಿಣಾಮಗಳು ಹಲವಾರು. ನಮ್ಮ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಪ್ಪಿಕೊಳ್ಳಲು ಹವಣಿಸುತ್ತಿದ್ದಾರೆ. ವಿದೇಶಗಳಲ್ಲಿರುವ ಲೈಂಗಿಕ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಾಗಿ ನಮ್ಮ ಯುವಕ ಯುವತಿಯರು ಹಾತೊರೆಯುತ್ತಿದ್ದಾರೆ. ತಮ್ಮ ಲೈಂಗಿಕ ಪ್ರವೃತ್ತಿಯನ್ನು, ತಾವು ಸಲಿಂಗ ಕಾಮಿಗಳು ಎಂಬ ವಿಚಾರವನ್ನು ಯುವಕರು ಮುಕ್ತವಾದ ಮನಸ್ಸಿನಿಂದ ಬಹಿರಂಗ ಪಡಿಸುತ್ತಿದ್ದಾರೆ. ಓಟಿಟಿ ಮತ್ತು ಇತರ ದೃಶ್ಯ ಮಾಧ್ಯಮಗಳಲ್ಲಿ ಲೈಂಗಿಕತೆ ಮತ್ತು ಲೈಂಗಿಕ ಉಲ್ಲೇಖವಿರುವ ಸಿನಿಮಾಗಳು ಧಾರಾವಾಹಿಗಳು ಈಗ ಯಥೇಚ್ಛವಾಗಿವೆ. ಲೈಂಗಿಕ ಗುಹ್ಯ ರೋಗಗಳು ಮತ್ತು ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ ಇವುಗಳ ಬಗ್ಗೆ ಯುವಜನತೆಗೆ ಅರಿವು ಮೂಡಿಸಬೇಕಾಗಿದೆ. ಈ ಒಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ. ಇದನ್ನು ಶಿಕ್ಷಣದ ಯಾವ ಹಂತದಲ್ಲಿ? ಮತ್ತು ಹೇಗೆ ನೀಡಬೇಕು? ಎಂಬುದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ.
ಕರೋನ ಪಿಡುಗು ಬಂದು ನಮ್ಮ ಬದುಕಿನಲ್ಲಿ ಸಾಮಾಜಿಕ ಮತ್ತು ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದೇವೆ. ತಂತ್ರಜ್ಞವನ್ನು ಬಳಸಿ ಮನೆಯಿಂದಲೇ ದುಡಿಯುವ ಮತ್ತು ಕಲಿಯುವ ಅವಕಾಶಗಳನ್ನು ಕಲ್ಪಿಸಿಕೊಂಡಿದ್ದೇವೆ. ಜೋಮ (Zoom) ವೇದಿಕೆ ಅನೇಕ ಶಿಕ್ಷಣ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಹಿಂದೆ ನಮ್ಮ ಅನಿವಾಸಿ ಕನ್ನಡಿಗರು ಮಕ್ಕಳನ್ನು ಒಂದೆಡೆ ಕಲೆಹಾಕಿ 'ಕನ್ನಡ ಕಲಿ' ತರಗತಿಗಳನ್ನು ನಡೆಸಲು ಹೆಣಗುತ್ತಿದ್ದೆವು. ಈಗ ಜೋಮ ವೇದಿಕೆಯಿಂದಾಗಿ ಮಕ್ಕಳು ಮನೆಯಲ್ಲೇ ಕುಳಿತು ಕನ್ನಡವನ್ನು ಕಲಿಯುವ ಅವಕಾಶ ಒದಗಿ ಬಂದಿದೆ. ಅಂದ ಹಾಗೆ ಅದು ಸಫಲತೆಯನ್ನೂ ಕಂಡುಕೊಂಡಿದೆ. ಉನ್ನತ ಶಿಕ್ಷಣದಲ್ಲಿ ಹಲವಾರು ಕಲಿಕೆಗಳು ಆನ್ ಲೈನ್ ವೇದಿಕೆಗಳಲ್ಲಿ ಲಭ್ಯವಾಗಿವೆ, ಇವೆಲ್ಲಾ ತಂತ್ರಜ್ಞಾನದ ಸದುಪಯೋಗ ಎನ್ನಬಹುದು.
ಪರಿಸರ ವಿನಾಶದ ಮತ್ತು ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಬಗ್ಗೆ ಎಲ್ಲ ದೇಶಗಳಲ್ಲಿ ಎಚ್ಚರಿಕೆಯ ಕರೆಗಂಟೆ ಕೇಳಿ ಬರುತ್ತಿದೆ. ಪರಿಸರದ ಅಳಿವು ಉಳಿವಿನ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ, ನಿಸರ್ಗ ಸಂಪನ್ಮೂಲಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸುವುದರ ಪರಿಣಾಮ ಈ ವಿಚಾರಗಳ ಬಗ್ಗೆ ತ್ವರಿತವಾಗಿ ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ. ಈ ವಿಷಯಗಳನ್ನು ಮಕ್ಕಳ ಗ್ರಹಿಕೆಗೆ ನಿಲುಕುವಂತೆ ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ಕಡ್ಡಾಯವಾಗಿ ಕಲಿಸಬೇಕು. ಇವುಗಳನ್ನು ತರಗತಿಯಲ್ಲಿ ಬೋಧಿಸಿದರಷ್ಟೇ ಸಾಲದು. ಮಕ್ಕಳನ್ನು ಅರಣ್ಯ ಪ್ರದೇಶಗಳಿಗೆ, ಹಾನಿಗೊಳಗಾದ ನಿಸರ್ಗ ತಾಣಗಳಿಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿ ಮಕ್ಕಳಿಗೆ ಪ್ರತ್ಯಕ್ಷ ಅನುಭವವನ್ನು ಒದಗಿಸಿದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಬಲ್ಲುದು. ಮಕ್ಕಳು ವಾಸಮಾಡುವ ಪರಿಸರದಲ್ಲಿ ಮರಗಳನ್ನು ನೆಡುವ, ಪೋಷಿಸುವ ಶೈಕ್ಷಣಿಕೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಶಾಲಾ ಕಾಲೇಜುಗಳ ಮಕ್ಕಳಿಂದ ಪರಿಸರ ವಿನಾಶದ ಕುರಿತಾಗಿ ಬೀದಿ ನಾಟಕಗಳನ್ನು ಆಡಿಸಿದರೆ ಅದು ಶೈಕ್ಷಣಿಕ ಕಾರ್ಯಕ್ರಮವಲ್ಲದೆ ಮನೋರಂಜನೆಯಾಗಿಯೂ ಕಿರಿಯರ-ಹಿರಿಯರ ಗಮನವನ್ನು ಸೆಳೆಯುತ್ತದೆ.
ಶಿಕ್ಷಣ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಾಗಿದೆ. ಶಾಲೆಯ ನಾಲ್ಕು ಗೋಡೆಗಳ ಒಳಗೆ ಮಾತ್ರ ಕಲಿಕೆ ಸಾಧ್ಯ ಎಂಬ ಈ ಮನಸ್ಥಿತಿಯಿಂದ ಹೊರಬರಬೇಕಾಗಿದೆ. ಇದು ಮಕ್ಕಳಲ್ಲಿ ಒಂದು ಸಂಕುಚಿತ ಮನೋಭಾವವನ್ನು ಉಂಟುಮಾಡಬಹುದು. ಅನುಕೂಲಕರ ಉತ್ತಮ ಹವಾಮಾನವಿರುವ ದೇಶಗಳಲ್ಲಿ ಮುಕ್ತವಾದ ನಿಸರ್ಗದ ಮಧ್ಯೆ ಕಲಿಕೆಯ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು. ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ನಡೆಯಬೇಕಾಗಿದೆ. ಎಲ್ಲರಿಗೂ ಒಂದೇ ಅಳತೆಗೋಲು ಹಿಡಿದು ಕಲಿಸುವ ಕ್ರಮವನ್ನು ಪರಿಶೀಲಿಸಿಬೇಕಾಗಿದೆ. ಕೆಲವೊಮ್ಮೆ ಪುಸ್ತಕಗಳನ್ನು ಪಕಕ್ಕೆ ಇಟ್ಟು ವಿಜ್ಞಾನದ ಪ್ರಯೋಗಗಳನ್ನು ಕೈಯಾರೆ ಮಾಡಿ ನಿತ್ಯ ಸತ್ಯಗಳನ್ನು ಮಕ್ಕಳೇ ಅನ್ವೇಷಣೆ ಮಾಡಿ ತಿಳಿದುಕೊಳ್ಳಬೇಕು. ಈ ರೀತಿಯ ಕಲಿಕೆ ಮಾನವ ಸಹಜ ಕುತೂಹಲವನ್ನು ಕೆರಳಿಸುವುದರ ಜೊತೆಗೆ ಅದು ಒಂದು ಉಲ್ಲಾಸಕರ ಚಟುವಟಿಕೆಯಾಗಬೇಕು. ಮಕ್ಕಳ ಮನಸ್ಸಿನಲ್ಲಿ ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಮತ್ತು ವೈಜ್ಞಾನಿಕ ಮನೋಭಾವವನ್ನು ಪ್ರಚೋದಿಸುವ ಶಿಕ್ಷಣ ಕ್ರಮವನ್ನು ಅಳವಡಿಸಬೇಕಾಗಿದೆ. ಭಾರತ ಭೌಗೋಳಿಕ ಸಾಂಸ್ಕೃತಿಕ ನೈಸರ್ಗಿಕ ದೃಷ್ಠಿಯಿಂದ ವೈವಿಧ್ಯತೆಯುಳ್ಳ ದೊಡ್ಡ ದೇಶ. ಹೀಗಾಗಿ ಈ ವೈವಿಧ್ಯತೆಯನ್ನು ವಿಜೃಂಭಿಸುವ ಸಲುವಾಗಿ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕತೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ನಗರ ಪ್ರದೇಶಗಳಲ್ಲಿ ಸಿಬಿಎಸ್ ಕೇಂದ್ರ ಪಠ್ಯಕ್ರಮವನ್ನು ಬೋಧಿಸುವ ರಾಷ್ಟೀಯ ಅಂತಾರಾಷ್ಟ್ರೀಯ ಶಾಲೆಗಳು ಈ ಪ್ರಾದೇಶಿಕತೆಯನ್ನು ಒದಗಿಸುವುದರ ಬಗ್ಗೆ ಸಂದೇಹವಿದೆ. ಹೆಚ್ಚಿನ ಅಂಕಗಳನ್ನು ನೀಡುವ ಹಿಂದಿ, ಸಂಸ್ಕೃತ ಭಾಷೆಗಳನ್ನು ಮಕ್ಕಳು ಆಯ್ಕೆಮಾಡುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಪೂರಕವಾಗುವ ಇಂಗ್ಲಿಷ್ ಪ್ರಧಾನವಾದ ಈ ಶಾಲೆಗಳಲ್ಲಿ ಅವರಿಗೆ ಸ್ಥಳೀಯ ಸಂಸ್ಕೃತಿಯ ಪರಿಚಯವಾಗುವುದಾದರೂ ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ಬಿಳಿಗಿರಿ ರಂಗನ ಬೆಟ್ಟದ ಆದಿವಾಸಿ ಮಕ್ಕಳಿಗೆ ಅವರಿಗೆ ಪ್ರಸ್ತುತವಾಗದ ನಗರದ ವಿಷಯದ ಬದಲು ಅವರ ಪರಿಸರವಾಗಿರುವ ಅರಣ್ಯದ ಬಗ್ಗೆ ಪಠ್ಯಕ್ರಮ ಒತ್ತುನೀಡಬೇಕು. ಕಲಿಕೆ ಎಂಬುದು ಬದುಕಿಗೆ ಬೇಕಾದ ಸಾರ್ವತ್ರಿಕ ಅರಿವಿನ ಜೊತೆಗೆ ಹೆಚ್ಚು ವ್ಯಾಪಕವಾಗದೆ ಒಂದು ವಿಶೇಷ ಜ್ಞಾನವನ್ನು ಆಳವಾಗಿ ದೀರ್ಘವಾಗಿ ಅರಿಯಲು ಸಹಾಯಕವಾಗಬೇಕು. ವಿದ್ಯಾಥಿಗಳ ಕಲಿಕೆ ಅವರ ಬದುಕಿಗೆ ಎಷ್ಟು ಪ್ರಸ್ತುತವಾಗಿರಬೇಕು ಎಂಬುದು ಬಹಳ ಸಂಕೀರ್ಣವಾದದ್ದು. ಆರ್ಥಿಕ ಕಾರಣಗಳಿಂದ ವಲಸೆ ಹೋಗುತ್ತಿರುವಾಗ ಮತ್ತು ಜಾಗತೀಕರಣದ ಹಿನ್ನೆಲೆಯಲ್ಲಿ ಎಲ್ಲವೂ ಪ್ರಸ್ತುತವೆಂಬಂತೆ ತೋರುತ್ತದೆ. ಈ ಪ್ರಶ್ನೆಗೆ ಉತ್ತರ ದೊರಕುವುದು ಸುಲಭವಲ್ಲ.
ಅಭಿವೃದ್ದಿಗೊಂಡಿರುವ ಇಂಗ್ಲೆಂಡಿನಂತಹ ದೇಶದಲ್ಲಿ ಕೆಲವು ಬಡ ಮಕ್ಕಳು ಮುಂಜಾನೆ ಶಾಲೆಗೆ ಹಸಿದ ಹೊಟ್ಟೆಯಲ್ಲಿ ಬರುತ್ತಿದ್ದಾರೆ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಬೆಳಗಿನ ಉಪಹಾರವನ್ನು ಶಾಲೆಯಲ್ಲಿ ಒದಗಿಸುತ್ತಿದೆ. ಹೀಗಿರುವಾಗ ಬಡತನ ಹಸಿವು ವ್ಯಾಪಕವಾಗಿರುವ ಭಾರತದಲ್ಲಿ ಅದೆಷ್ಟೋ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳಿಗೆ ಶಾಲೆಯಲ್ಲಿ ಬೆಳಗ್ಗೆ ಉಪಹಾರ ಮತ್ತು ಮಧ್ಯಾನ್ಹ ಭೋಜನ ಒದಗಿಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಬೇಕು. ಹಸಿದ ಹೊಟ್ಟೆಯಲ್ಲಿ ಮಕ್ಕಳ ಏಕಾಗ್ರತೆ ಕುಗ್ಗಿ ಹೋಗುವುದನ್ನು ನಾನು ಒಬ್ಬ ವೈದ್ಯನಾಗಿ ಗಮನಿಸಿದ್ದೇನೆ. ಶಾಲೆಯಲ್ಲಿ ಸಿಗುವ ಆಹಾರದಲ್ಲಿ ಪೌಷ್ಠಿಕ ಅಂಶಗಳೂ ಇರಬೇಕು. ಈ ವ್ಯವಸ್ಥೆ ಹಸಿದ ಹೊಟ್ಟೆಗೆ ಅನ್ನವನ್ನು ನೀಡುವುದರ ಜೊತೆಗೆ ಮಕ್ಕಳ ತಂದೆ ತಾಯಿಗಳ ಮೇಲೆ ಇರುವ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಶಾಲೆಯಲ್ಲಿ ಹಾಜರಾಗಲು ಕಾರಣವೂ ಆಗುತ್ತದೆ.
ವಿದ್ಯಾರ್ಜನೆಯಲ್ಲಿ ಶಿಕ್ಷಕರ ಪಾತ್ರವು ಮಹತ್ವವಾದದ್ದು. ಶಿಕ್ಷಕರಿಗೆ ಉನ್ನತ ಶಿಕ್ಷಣದ ಅವಶ್ಯಕತೆ ಇರುವುದನ್ನು ಮರೆಯುವುದು ಸುಲಭ. ಅವರಿಗೂ ಶಿಕ್ಷಣ ವ್ಯವಸ್ಥೆಯಿಂದ ಬೆಂಬಲ ಬೇಕಾಗಿದೆ. ಶಿಕ್ಷಣವನ್ನು ಯಾವ ರೀತಿ ವಿದ್ಯಾರ್ಥಿಗಳಿಗೆ ತಲುಪಿಸಬೇಕು, ಯಾವ ರೀತಿ ಒದಗಿಸಿದರೆ ಅದು ಪರಿಣಾಮಕಾರಿ ಎಂಬುದನ್ನು ಶಿಕ್ಷಣ ತಜ್ಞರು ಶಿಕ್ಷಕರಿಗೆ ತಿಳಿಸಬೇಕು. ನನಗೆ ತಿಳಿದಂತೆ ಕರ್ನಾಟಕದಲ್ಲಿ ಸರ್ಕಾರದ ಉನ್ನತ ಶಿಕ್ಷಣ ಅಕಾಡೆಮಿ ಈ ಕೆಲಸವನ್ನು ಮಾಡಿಕೊಂಡು ಬಂದಿದೆ. ಶಿಕ್ಷಕರಲ್ಲಿ ಒಂದು ಸೃಜನ ಶೀಲತೆ (creativity) ಇರಬೇಕು, ಸಂಬಳಕ್ಕಷ್ಟೇ ಕೆಲಸಮಾಡುತ್ತಾ ಹೇಳಿದ್ದನ್ನೇ ಹೇಳೊ ಕಿಸ ಬೈ ದಾಸ ಮೇಸ್ಟ್ರು ಗಳು ನಮ್ಮಲ್ಲಿ ಯಥೇಚ್ಛವಾಗಿದ್ದಾರೆ. ಅವರಲ್ಲಿ ಕ್ರಿಯಾಶೀಲತೆಯನ್ನು (Dynamisim) ಮತ್ತು ಸೃಜನಶೀಲತೆ (creativity) ಉಂಟುಮಾಡಬೇಕಾಗಿದೆ. ಹಿಂದೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಒಂದು ರೀತಿ ಭಯವಿತ್ತು. ಶಿಕ್ಷಣ ಕ್ರಮ ಕಠೋರವಾಗಿ ಮತ್ತು ಹಿಂಸಾತ್ಮಕವಾಗಿತ್ತು. (Learning by humiliation) ದಂಡನೆಯಿಲ್ಲದ ಶಿಕ್ಷಣವಿರಲಿಲ್ಲ. ಈಗ ಸಾಕಷ್ಟು ಸುಧಾರಣೆಗಳಾಗಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಬೇಕು. ವಿದ್ಯಾರ್ಥಿಗಳು ಅವರಿಂದ ಸ್ಫೂರ್ತಿಯನ್ನು ಪಡೆಯಬೇಕು. ಅವರಿಬ್ಬರ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಗೌರವಗಳು ಮೂಡಿ ಬರಬೇಕು.
ಇತ್ತೀಚಿಗೆ ಪಾಶ್ಚಿಮಾತ್ಯ ದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಲ್ಲಿ ನ್ಯೂರೋ ಡೈವರ್ಸಿಟಿ ಇರುವುದನ್ನು ಗುರುತಿಸಲಾಗುತ್ತಿದೆ. ಅದು ಮಕ್ಕಳ ಮಾನಸಿಕ ಬೆಳವಣಿಗೆಯ ನ್ಯೂನತೆ ಎಂದು ಹೇಳಬಹುದು. ಎಲ್ಲರ ಗ್ರಹಿಕೆ ಒಂದೇ ರೀತಿ ಇರುವುದಿಲ್ಲ. ಈ ನ್ಯೂನತೆ ಇರುವ ಮಕ್ಕಳ ಗ್ರಹಿಕೆಯಲ್ಲಿ ಕೆಲವು ಕುಂದು ಕೊರತೆಗಳಿರುತ್ತವೆ. ಕೆಲವು ವಿಷಯಗಳನ್ನು ಸಫಲವಾಗಿ ಗ್ರಹಿಸಿದರೂ ಇನ್ನು ಕೆಲವು ಗ್ರಹಿಕೆಯಲ್ಲಿ ತೊಂದರೆ ಇರುತ್ತದೆ. ಹೆತ್ತವರಿಗೆ ಮನೆಯಲ್ಲಿ ಕಾಣದ ಕೆಲವು ಮಾನಸಿಕ ತೊಂದರೆಗಳು ಶಾಲೆಯ ಒತ್ತಡ ವಾತಾವರಣದಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಈ ಒಂದು ಸನ್ನಿವೇಶದಲ್ಲಿ ಒಬ್ಬ ವಿದ್ಯಾರ್ಥಿ ಧಡ್ಡನೆಂದು ಅದು ಅವನ ಹಣೆಬರಹವೆಂದು ಕೈಬಿಡುವುದು ಸರಿಯಲ್ಲ. ಈ ರೀತಿ ತೊಂದರೆ ಇರುವ ಮಕ್ಕಳಿಗೆ ಮನಶಾಸ್ತ್ರ ತಜ್ಞರ ಸಹಾಯ ಸಲಹೆ ಬೇಕಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಶಿಕ್ಷಕರ ಮತ್ತು ಸಹಪಾಠಿಗಳ ಅನುಕಂಪೆ, ಸಹಕಾರ ಬಹಳ ಮುಖ್ಯ. ಈ ರೀತಿಯ ಮಕ್ಕಳಿಗೆ ವಿಶೇಷ ಪಠ್ಯ ಕ್ರಮ ಮತ್ತು ಪರೀಕ್ಷಾಕ್ರಮ ಬೇಕಾಗುತ್ತದೆ. ಇವರಿಗೆ ಕಲಿಸಲು ಹೆಚ್ಚಿನ ಸೌಲಭ್ಯ ಮತ್ತು ಸಂಪನ್ಮೂಲಗಳು ಬೇಕಾಗುತ್ತದೆ.
ನಮ್ಮ ಪರೀಕ್ಷಾಕ್ರಮದಲ್ಲಿ ಬಹಳ ವರ್ಷಗಳಿಂದ ವರ್ಷಕ್ಕೆ ಒಂದೇ ಪರೀಕ್ಷೆ ನಡೆಸಿ ಆ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ ಉತ್ತೀರ್ಣನಾಗಲು ಅರ್ಹನೇ ಎಂಬುದನ್ನು ನಿರ್ಧರಿಸಲಾಗುತ್ತಿದೆ. ವರ್ಷವಿಡೀ ಕಲಿತ ಒಂದೊಂದು ವಿಷಯವನ್ನು ಕೇವಲ ಮೂರು ಗಂಟೆಗಳ ಪರೀಕ್ಷೆಯಲ್ಲಿ ನಿರ್ಧರಿಸುವುದು ಒಂದು ವಿಕೃತ ಪದ್ಧತಿ. ಈ ಒಂದು ವ್ಯವಸ್ಥೆಯಲ್ಲಿ ಪರೀಕ್ಷೆ ಎಂಬುದು ವಿದ್ಯಾರ್ಥಿಯ ಅರಿವಿಗಿಂತ ಅವನ
/ಅವಳ ಜ್ಞಾಪಕ ಶಕ್ತಿಯನ್ನು ಅಳೆಯುವ ಸಾಧನವಾಗುತ್ತದೆ. ಒಂದು ಅಂತಿಮ ಪರೀಕ್ಷೆಯ ಬದಲು ವರ್ಷದುದ್ದಕ್ಕೂ ಹಲವಾರು ಘಟ್ಟಗಳಲ್ಲಿ ಮಾಡುವುದು ಲೇಸು. ಪರೀಕ್ಷೆ ಎನ್ನುವುದು ಒಂದು ರಣರಂಗವಾಗಿ ಇಲ್ಲಿ ಸ್ಪರ್ಧೆಗೆ ಹೆಚ್ಚು ಪ್ರಾಮುಖ್ಯತೆ. ಸ್ಪರ್ಧೆ ಕೆಲವು ಮಕ್ಕಳ ಆತ್ಮ ವಿಶ್ವಾಸಕ್ಕೆ ಅಗತ್ಯ ಇರಬಹುದು, ಇರಲಿ ಆದರೆ ಅದನ್ನು ವಿಪರೀತವಾಗಿ ವಿಜೃಂಭಿಸುವುದನ್ನು ಕೈಬಿಡಬೇಕು. ಸಾಧಾರಣ ಮತ್ತು ಅಸಾಧಾರಣ ಪ್ರತಿಭೆ ಎಂದು ಶ್ರೇಣೀಕರಿಸಿದರೆ ಸಾಲದೇ? ಹೆತ್ತವರು ತಮ್ಮ ಮಕ್ಕಳನ್ನು ಇತರ ಮಕ್ಕಳಿಗೆ ಹೋಲಿಸಿ ಹಲುಬುವುದುನ್ನು ಖಂಡಿಸಬೇಕು. ಹೆತ್ತವರ, ಪೋಷಕರ ಹೆಚ್ಚಿನ ನಿರೀಕ್ಷೆ ಹಲವಾರು ವಿದ್ಯಾರ್ಥಿಗಳಿಗೆ ಮಾನಸಿಕ ತೊಂದರೆ ನೀಡಿ ಅವರು ಕಿರುಕುಳ ಮತ್ತು ಆತ್ಮಹತ್ಯಗೆ ಗುರಿಯಾಗುತ್ತಿದ್ದಾರೆ. ಈ ಒಂದು ವ್ಯವಸ್ಥೆ ಬದಲಾಗಬೇಕು.
ಒಟ್ಟಾರೆ ಶಿಕ್ಷಣ ನೀತಿ ಸಮಾಜಕ್ಕೆ ಹೊಂದುವಂತಿರಬೇಕಾದರೆ ನಮ್ಮ ಪಠ್ಯ ಕ್ರಮದಲ್ಲಿ, ಶಿಕ್ಷಣ ನೀಡುವ ಕ್ರಮದಲ್ಲಿ, ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ, ಅವರ ತಂದೆ ತಾಯಿಯರ ನಿರೀಕ್ಷೆಯಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕು. ಇಪ್ಪತ್ತೊಂದನೇ ಶತಮಾನದಲ್ಲಿ ಹಲವಾರು ವೈಜ್ಞಾನಿಕ ಸಾಧನೆಗಳಾಗಿ ಬಾಹ್ಯಾಕಾಶ ಮತ್ತು ಗ್ರಹಗಳಲ್ಲಿ ವಸಾಹತು ಮಾಡುವ ಆಲೋಚನೆ ಮನುಜಕುಲಕ್ಕೆ ಮೂಡುತ್ತಿದೆ. ಕರೋನ ರೀತಿಯ ಭಯಂಕರ ಪಿಡುಗನ್ನು ಹತೋಟಿಯಲ್ಲಿಡಲು ಲಸಿಕೆಗಳನ್ನು ಕಂಡುಹಿಡಿದ್ದೇವೆ. ಸೋಶಿಯಲ್ ಮೀಡಿಯಾ ಎಂಬ ತಾಂತ್ರಿಕ ಅದ್ಭುತವನ್ನು ಕಂಡುಕೊಂಡಿದ್ದೇವೆ. ಹಿರಿದಾದ ಆಲೋಚನೆಗಳು ನಮ್ಮ ಕಲ್ಪನೆಗೆ ದೊರೆಯುತ್ತಿವೆ. ಆದರೆ ವಾಸ್ತವವಾಗಿ ನಮ್ಮ-ನಿಮ್ಮ ನಡುವೆ ಹಸಿವು, ಬಡತನ, ಪ್ರಕೃತಿ ವಿಕೋಪ, ಧರ್ಮಯುದ್ಧ, ವಲಸೆ, ಮೂಲಭೂತವಾದ, ಭಯೋತ್ಪಾದನೆ, ಸರ್ವಾಧಿಕಾರ, ಕ್ಷೀಣವಾಗುತ್ತಿರುವ ಪ್ರಜಾಪ್ರಭುತ್ವ ಮೌಲ್ಯಗಳು, ಮತಬೇಧ, ವರ್ಣಬೇಧ ಎಂಬ ಆತಂಕಕಾರಿ ಸನ್ನಿವೇಶಗಳ ಮಧ್ಯೆ ಬದುಕ ಬೇಕಾಗಿದೆ. ಹಸಿವನ್ನು ನೀಗಿಸುವ, ಮಾನವೀಯ ಮೌಲ್ಯಗಳನ್ನು, ಸಹಿಷ್ಣುತೆಯನ್ನು ಎತ್ತಿಹಿಡಿಯಬೇಕಾದ ಶಿಕ್ಷಣವನ್ನು ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ತುರ್ತಾಗಿ ನೀಡಬೇಕಾಗಿದೆ. ಉತ್ತಮ ಶಿಕ್ಷಣ ನೀತಿ ಒಂದು ಸಮಾಜದ ನೈತಿಕ ಕನ್ನಡಿಯಾಗಿರಬೇಕು. ಗಾಂಧೀಜಿ ಹೇಳಿದಂತೆ ಅದು ದೇಹ, ಮನಸ್ಸು, ಹೃದಯ ಮತ್ತು ಆತ್ಮದ ವಿಕಾಸಕ್ಕೆ ಕಾರಣವಾಗಬೇಕು. ಸ್ವನಿಯಂತ್ರಣ ಮತ್ತು ಆತ್ಮಶೋಧನೆಗಳನ್ನು ಕಲಿಸಬೇಕು. ಸತ್ಯ, ಪ್ರಾಮಾಣಿಕತೆ ಮತ್ತು ಅಹಿಂಸೆಯ ಹಾದಿಯಲ್ಲಿ ವಿಶ್ವಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ಹರಡಲು ಕಾರಣವಾಗಬೇಕು.
***