ಪ್ರೇಮಲತಾಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾಸಂಕಲನ – ಕೆಲವುಅನಿಸಿಕೆಗಳು

ಡಾ.ಜಿ.ಎಸ್.ಶಿವಪ್ರಸಾದ್

ಪ್ರೇಮಲತಾ ಅವರ 'ನಂಬಿಕೆಯೆಂಬ ಗಾಳಿಕೊಡೆ'  ಕಥಾ ಸಂಕಲನವನ್ನು ಇತ್ತೀಚಿಗೆ ಓದಿ ಮುಗಿಸಿ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಈ ಕೃತಿಯನ್ನು ಈಗಾಗಲೇ ಓದಿರುವವರಿಗೆ ಈ ನನ್ನ ಬರಹ ಹೊಸ ದೃಷ್ಟಿ ಕೋನಗಳನ್ನು ನೀಡಬಹುದು. ಇನ್ನು ಓದಬೇಕು ಎಂಬ ಆಕಾಂಕ್ಷೆ ಉಳ್ಳವರಿಗೆ ಈ ಲೇಖನ ಪ್ರವೇಶ ಪರಿಚಯವನ್ನು ಒದಗಿಸಬಹುದು. ಲೇಖಕ/ಲೇಖಕಿಯರಿಗೆ ತಾವು ಬರೆದ ಕೃತಿಯನ್ನು ಇತರರು ಓದಿದರೆ ಅದರಿಂದ ಉಂಟಾಗುವ ಸಂತಸ ತೃಪ್ತಿ ಒಂದು ಕಡೆಯಾದರೆ, ಆ ಕೃತಿಯನ್ನು ಓದಿ ಅದರ ಬಗ್ಗೆ ಚರ್ಚೆ ನಡೆದಲ್ಲಿ ಅವರಿಗೆ ಸಾರ್ಥಕತೆಯ ಭಾವ ಉಂಟಾಗಬಹುದು. ಒಂದು ಕೃತಿಯ ವಿಷಯ ವಸ್ತು, ಆಳ ಮತ್ತು ವಿಸ್ತಾರಗಳು ಈ ಅಂಶಗಳನ್ನು ನಿರ್ಧರಿಸಬಹುದು.  ಬರಹಗಾರರಿಗೆ ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಇರಲಾರದು. ಇನ್ನು ಕೆಲವು ಕರ್ತೃಗಳು "ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ" ಎಂಬ ನಿರ್ಲಿಪ್ತ ನಿಲುವಿನಲ್ಲಿ ತಮ್ಮ ಒಂದು ಆತ್ಮ ತೃಪ್ತಿಗೆ ಬರವಣಿಗೆಯನ್ನು ಮುಂದುವರಿಸಬಹುದು. ಅನಿವಾಸಿ ನೆಲದಲ್ಲಿ ಮೂಡಿ ಬರುವ ಕನ್ನಡ ಕೃತಿಗಳನ್ನು ಇಲ್ಲಿಯ ಓದುಗರು ಓದಿ ಉತ್ತೇಜಿಸುವುದು, ಸಾಧ್ಯವಾದಲ್ಲಿ ಚರ್ಚೆಗೆ ಒಳಪಡಿಸುವುದು ಅಗತ್ಯವಷ್ಟೇ ಅಲ್ಲ, ಅದು ಅನಿವಾಸಿ  ಕನ್ನಡಿಗರ ಜವಾಬ್ದಾರಿಯೂ ಹೌದು. ಇದನ್ನು ನಮ್ಮ ಅನಿವಾಸಿ ದಶಮಾನೋತ್ಸವ ಸಂದರ್ಭದಲ್ಲಿ ಅನುಷ್ಠಾನಕ್ಕೆ ತರಲಾಯಿತು. ಸಮಯೋಚಿತವಾಗಿ ವಾಟ್ಸ್ ಆಪಿನಲ್ಲೂ ಚರ್ಚೆ ಮಾಡುಕೊಳ್ಳುತ್ತ ಬಂದಿದ್ದೇವೆ. ನನ್ನ ಒಂದು ಸಣ್ಣ ಕಾಣಿಕೆ ಈ ಬರಹದ ರೂಪದಲ್ಲಿ ಅಭಿವ್ಯಕ್ತಗೊಂಡಿದೆ. ಇಲ್ಲಿ ಸಣ್ಣಕಥೆಗಳ ಬಗ್ಗೆ ನನ್ನ ಕೆಲವು ಸಾರ್ವತ್ರಿಕ ಅನಿಸಿಕೆಗಳನ್ನು ಬೆಸೆಯಲಾಗಿದೆ. 

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಹೊಸ ವರ್ಷದಲ್ಲಿ ಇನ್ನೂ ಹೆಚ್ಚಿನ ಹೊಸ ಕೃತಿಗಳು ಹೊರಬಂದು ಸೃಜನಶೀಲತೆ ವಿಜೃಂಭಿಸಲಿ

-ಸಂ
ಪ್ರೇಮಲತಾ ಅವರು ದಶಕಗಳಿಂದ ಸಣ್ಣ ಕಥೆಗಳನ್ನು ಬರೆದು ಸುಧಾ, ಮಯೂರ ಮುಂತಾದ ಸಂಚಿಕೆಗಳಲ್ಲಿ ಪ್ರಕಟಿಸಿದ್ದಾರೆ. ಹಾಗೆ ಮೂರು ಕಥಾಸಂಕಲನಗಳನ್ನು ಈಗಾಗಲೇ ಪ್ರಕಟಿಸಿ ಖ್ಯಾತರಾಗಿದ್ದಾರೆ. ಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾ ಸಂಕಲನವು ವೀರಲೋಕ ಪ್ರಕಾಶನದಿಂದ ೨೦೨೩ರಲ್ಲಿ ಲೋಕಾರ್ಪಣೆಗೊಂಡಿದೆ. ಇಲ್ಲಿ ೧೦ ಸಣ್ಣ ಕಥೆಗಳಿವೆ. ಪುಸ್ತಕ ತರಿಸಿಕೊಂಡು ಹಲವಾರು ದಿನಗಳು ಕಳೆದಿದ್ದರೂ ಈಗ ಸಮಯ ಒದಗಿಬಂದು ಇತ್ತೀಚಿಗಷ್ಟೇ ಓದಿ ಮುಗಿಸಿ, ನನ್ನ ಕೆಲವು ಪ್ರಾಮಾಣಿಕ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಇದೊಂದು ವಿಮರ್ಶೆಯಾಗಿ ಮೂಡಿ ಬಂದಿದ್ದರೆ ಹಾಗೂ ಇರಲಿ. 

ಈ ಸಂಕಲನದ ಶೀರ್ಷಿಕೆ ಮತ್ತು ಮುಖಪುಟ ಇಲ್ಲಿಯ ಕಥೆಗಳ ರೂಪಕದಂತೆ ನಿಂತಿದೆ. ಸ್ವತಃ ಲೇಖಕಿ ತಮ್ಮ ಅರಿಕೆಯಲ್ಲಿ ಪ್ರಸ್ತಾಪಿಸಿರುವಂತೆ "ನಂಬಿಕೆಗಳೇ ಜೀವನಕ್ಕೆ ಆಧಾರ, ಬದುಕೇ ಒಂದು ನಂಬಿಕೆ" ಬದುಕಿನ ಹಲವಾರು ಸನ್ನಿವೇಶಗಳಲ್ಲಿ ಈ ನಂಬಿಕೆ ಎನ್ನುವುದು ಚುಕ್ಕಾಣಿಯಾಗಿ ನಮ್ಮ ದಿಕ್ಕು ದೆಸೆಗಳನ್ನು ಬದಲಾಯಿಸುತ್ತದೆ ಎಂಬ ವಿಚಾರ ಸೋಜಿಗವಾದದ್ದು. ಕ್ರಿಸ್ತ್ಮಸ್ ಸಮಯದಲ್ಲಿ ಒಬ್ಬ ಎಳೆ ಬಾಲಕ ರಾತ್ರಿ ತಾನು ಮಲಗಿದ್ದ ಸಮಯದಲ್ಲಿ ಸ್ಯಾಂಟಕ್ಲೌಸ್ ಬಂದು ತನಗೆ ಉಡುಗೊರೆಯನ್ನು ಕೊಡುತ್ತಾನೆ ಎನ್ನುವ ನಿರೀಕ್ಷೆ ಒಂದು ನಂಬಿಕೆಯಾದರೆ, ಬೆನ್ನಿಗೆ ಬಾಂಬು ಕಟ್ಟಿಕೊಂಡಿರುವ ತರುಣ ಭಯೋತ್ಪಾದಕ ತಾನು ಜಿಹಾದಿನಲ್ಲಿ ಮಡಿದರೆ ಪರಲೋಕದಲ್ಲಿ ಅಪ್ಸರೆಯನ್ನು ಕೂಡಬಹುದು ಎಂಬ ಅವನ ನಿರೀಕ್ಷೆಯೂ ನಂಬಿಕೆಯೇ. ಆದರೆ ಈ ರೀತಿಯ ನಂಬಿಕೆಗಳ ಪರಿಣಾಮಗಳೇನು ಎಂಬುದು ಮುಖ್ಯವಾದ ಪ್ರಶ್ನೆ. ನಂಬಿಕೆ ಮತ್ತು ತರ್ಕ, ವೈಚಾರಿಕತೆ, ವಿಜ್ಞಾನ ಇವುಗಳ ಮುಖ ಮುಖಿಯನ್ನು ಈಗಾಗಲೇ ಹಲವಾರು ಕಥೆ, ಕಾದಂಬರಿ ಮತ್ತು ಸಿನಿಮಾಗಳು ಶೋಧಿಸಿವೆ. ಪ್ರೇಮಲತಾ ಅವರೂ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ಸಂಬಂಧಗಳನ್ನು ಬೆಸೆಯುವುದು ಈ ನಂಬಿಕೆಗಳೇ. ಒಬ್ಬ ಬರಹಗಾರನಿಗೂ ತನ್ನ ಬರಹ ಓದುಗರ ಗ್ರಹಿಕೆಗೆ, ನಿರೀಕ್ಷೆಗೆ ನಿಲುಕಬಹುದು ಎನ್ನುವ ಹಂಬಲವೂ ಈ ನಂಬಿಕೆಯನ್ನು ಆಧರಿಸಿರುತ್ತದೆ. ಈ ಸಂಕಲನದ ಹಲವಾರು ಕಥೆಗಳ ಭೂಮಿಕೆ ಒಂದಲ್ಲ ಒಂದು ರೀತಿ ಆ ನಂಬಿಕೆಗೆ ಸಂಬಂಧಿಸಿದ್ದು.

ಕಥೆ ಹುಟ್ಟುವುದೇ ಜೀವನದ ಅನುಭವಗಳ ಮೇಲೆ. ಅದು ಬರಹಗಾರನ ವೈಯುಕ್ತಿಕ ಜೀವನ ಅನುಭವವಾಗಿರಬಹುದು, ಇಲ್ಲವೇ ಬರಹಗಾರ ಕಂಡು ಕೇಳಿದ ಅನುಭವವಾಗಿರಬಹುದು. ಈ ಅನುಭವ ಸಾಮಾನ್ಯನಿಗೆ ಒಂದು ಸಾಧಾರಣ ಘಟನೆ, ಸನ್ನಿವೇಶದಂತೆ ಕಂಡರೂ ಸೃಜನಶೀಲ ಲೇಖಕ, ಲೇಖಕಿಯರು ತಮ್ಮ ಅಪ್ರತಿಮ ಕಲ್ಪನಾ ಶಕ್ತಿಯಿಂದ ಆ ಘಟನೆಯನ್ನು ಗ್ರಹಿಸಿ ಅದಕ್ಕೆ ರೆಕ್ಕೆ, ಪುಕ್ಕ, ಮಾಂಸ, ಎಲಬುಗಳನ್ನು ಜೋಡಿಸಿ ಒಂದು ಸುಂದರ ಕಲಾಕೃತಿಯನ್ನು ಕಡೆದು ನಿಲ್ಲಿಸುತ್ತಾರೆ. ಆ ಪ್ರತಿಭೆ ಪ್ರೇಮಲತಾ ಅವರಿಗೆ ನಿಜವಾಗಿಯೂ ಪ್ರಾಪ್ತವಾಗಿದೆ.

ಬದುಕಿನ ಪ್ರಸಂಗಗಳ ಚಿತ್ರವೇ ಸಣ್ಣ ಕಥೆಯ ಬುನಾದಿ, ಹೀಗಾಗಿ ಸಣ್ಣ ಕಥೆಗಳಲ್ಲಿ, ಕೆಲವೇ ಪುಟಗಳಲ್ಲಿ ಕಥೆಯನ್ನು ಹೇಳಿ ಮುಗಿಸಬೇಕಾದ ಒತ್ತಡ ಇರುವುದರಿಂದ ಇಲ್ಲಿ ಹೆಚ್ಚು ಪಾತ್ರಗಳನ್ನು ತರಲು ಅವಕಾಶವಿಲ್ಲ ಮತ್ತು ಇಲ್ಲಿ ಪಾತ್ರಗಳನ್ನು ಆಳವಾಗಿ ಪೋಷಿಸಲು ಸಾಧ್ಯವಿಲ್ಲ. ಕಾದಂಬರಿಯಲ್ಲಿ ಈ ನಿರ್ಬಂಧೆನೆಗಳು ಇರುವುದಿಲ್ಲ. ಕಾದಂಬರಿಗಳಲ್ಲಿ ಕಾಣುವ ಆಳ, ವಿಸ್ತಾರಗಳನ್ನು ಸಣ್ಣ ಕಥೆಗಳಲ್ಲಿ ತರಲು ಸಾಧ್ಯವಿಲ್ಲವಾದರೂ ಸಣ್ಣ ಕಥೆಗಳ ಅನುಕೂಲವೆಂದರೆ ಇಲ್ಲಿ ವಿವಿಧ ಸಾಮಾಜಿಕ ವಿಷಯಗಳನ್ನು ಕಥಾವಸ್ತುವಾಗಿ ಬಳಸ ಬಹುದು, ಹೆಚ್ಚು ವಿಚಾರಗಳನ್ನು ಚಿಂತನೆಗೆ ಒಳಪಡಿಸಬಹುದು. ಕಾದಂಬರಿ ಹರಿಯುವ ನದಿಯಾದರೆ, ಸಣ್ಣ ಕಥೆಗಳು ಕೆರೆಗಳಂತೆ.

ಸಣ್ಣ ಕಥೆಗಳು ಒಡ್ಡುವ ಎಲ್ಲ ಮಿತಿಯೊಳಗೂ ಕೂಡ ಪ್ರೇಮಲತಾ ಅವರು ಸನ್ನಿವೇಶಗಳ ಜೊತೆ ಜೊತೆಗೆ ತಮ್ಮ ಕಥಾ ನಾಯಕ ನಾಯಕಿಯರನ್ನು ಪೋಷಿಸಿದ್ದಾರೆ. ಈ ಸಂಕಲನದ "ತೆರವು' ಎಂಬ ಕಥೆಯಲ್ಲಿ ಕರ್ನಾಟಕದ ರಿಯಲ್ ಎಸ್ಟೇಟ್ ಅವ್ಯವಹಾರದಲ್ಲಿ ಸಿಕ್ಕಿಕೊಂಡಿರುವ ದಂಪತಿಗಳ ಸನ್ನಿವೇಶದಲ್ಲಿ ಏನನ್ನೂ ಸಾಧಿಸಲಾರದ ನಾಮರ್ದ ಗಂಡ ಮತ್ತು ಮನೆ-ಮಡದಿಯಾದರೂ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡು ದಿಟ್ಟತನದಿಂದ ಲ್ಯಾನ್ಡ್ ಮಾಫಿಯಾ ಗೂಂಡಾಗಳನ್ನು ನಿಭಾಯಿಸುವ ಗೀತಾಳ ಪಾತ್ರ ಇದಕ್ಕೆ ಸಾಕ್ಷಿಯಾಗಿದೆ. ತೇಜೇಸ್ವಿಯವರ 'ಕಿರಿಗೂರಿನ ಗೈಯಾಳಿಗಳು' ಕಥೆಯನ್ನು ನೆನಪಿಗೆ ತಂದಿದೆ.

ಅನಿವಾಸಿ ಲೇಖಕರು ತಮ್ಮ ಪರಿಸರದ ನೆಲೆಯಲ್ಲಿ ಘಟಿಸುವ ಕಥೆಗಳನ್ನು ದೂರದ ಕನ್ನಡ ನಾಡಿಗೆ ತಿಳಿಸ ಬೇಕೇ ಅಥವಾ ಅವರು ಎಲ್ಲಿದ್ದರೂ, ಎಂತಿದ್ದರೂ ಕನ್ನಡ ನೆಲೆದ ಕಥೆಗಳನ್ನಷ್ಟೇ ಬರೆಯ ಬೇಕೇ ಎಂಬ ಪ್ರಶ್ನೆ ಮೂಡುವುದು ಸಹಜವೇ. ಇಂಗ್ಲೆಂಡಿನಲ್ಲಿ ನಡೆದ ಕಥೆ ಕನ್ನಡ ಜನಕ್ಕೆ ಸಲ್ಲಬಹುದೇ ಎಂತೆಂಬ ಪ್ರಶ್ನೆ ಅನಿವಾಸಿ ಬರಹಗಾರರನ್ನು ಕಾಡುವುದು ಸಹಜ. ಒಬ್ಬ ಲೇಖಕ ಯಾವ ದೇಶ ಕಾಲಮಾನಗಳಲ್ಲಿದ್ದರೂ ಅದು ಮನುಷ್ಯ ಸಂಬಂಧ, ಸಹಜ ಸ್ವಭಾವಗಳ ವೈರುಧ್ಯ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿದ್ದಲ್ಲಿ ಅದು ಎಲ್ಲಾ ದೇಶಕ್ಕೂ ಮತ್ತು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುತ್ತವೆ. ಈ ಕಾರಣಗಳಿಂದ ನಮಗೆ ರಷ್ಯಾದ ಟಾಲ್ಸ್ಟಾಯ್ ಮತ್ತು ಬಂಗಾಳದ ಟ್ಯಾಗೋರ್ ಬರೆದ ಕಥೆಗಳು ಹತ್ತಿರವಾಗುತ್ತವೆ. ಪ್ರೇಮಲತಾ ಅವರು ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡತಿ. ಅವರ ಪರಿಸರ ಇಂಗ್ಲೆಂಡಿನ ಆಂಗ್ಲ ಸಂಸ್ಕೃತಿಗೆ ಸಂಬಂಧಿಸಿದ್ದಾದರೂ ಅವರು ಬರೆಯುವ ಕಥೆಗಳು ನಮ್ಮ ಕನ್ನಡ ನೆಲದ ಕಥೆಗಳಾಗಿವೆ. ಇಲ್ಲಿ ಕರ್ನಾಟಕ ನಗರಗಳ, ಮಲೆನಾಡಿನ ದಟ್ಟ ಕಾಡುಗಳ, ಕಾರ್ಪೊರೇಟ್ ಕಂಪನಿಗಳ ಕಥೆ ಇವೆ. ಇದಕ್ಕೆ ಹೊರತಾಗಿ 'ದ್ರೋಹ' ಎಂಬ ಕಥೆ ಲಂಡನ್ ಮತ್ತು ಸಿರಿಯಾದಲ್ಲಿ ಸಂಭವಿಸುತ್ತದೆ.

ಇನ್ನೊಂದು ವಿಚಾರ; ಕಥೆ ಯಾವುದೇ ನೆಲದಲ್ಲಿ ಹುಟ್ಟಿಕೊಂಡರೂ ಆ ಕಥನ ಪ್ರಪಂಚದ ಬೇರೆಡೆ ಇನ್ನೊಬ್ಬರ ಕಥೆಯಾಗಿರಬಹುದು. ಮನುಷ್ಯನ ಮೂಲಭೂತ ಸ್ವಭಾವಗಳಿಗೆ ಬಣ್ಣ, ಸಂಸ್ಕೃತಿ, ಗಡಿ ರೇಖೆಗಳ ಹಂಗುಂಟೆ? ಈ ಸಂಕಲನದ ಶೀರ್ಷಿಕೆ ಕಥೆಯಾಗಿರುವ ‘ನಂಬಿಕೆಯೆಂಬ ಗಾಳಿಕೊಡೆ’ಯಲ್ಲಿ ಬೆಂಗಳೂರಿನ ಒಂದು ಖಾಸಗಿ ಆಫೀಸಿನ ಉದ್ಯೋಗಿಯ ಬೀಳ್ಕೊಡುಗೆ ಪಾರ್ಟಿಯಲ್ಲಿ ಲಕ್ಷ್ಮಿ ಎಂಬ ವಿವಾಹಿತ ಮಹಿಳೆಗೆ ಅವಳ ಪಾನೀಯದಲ್ಲಿ ಒಬ್ಬ ಕುಹಕಿ ಕದ್ದು ಮುಚ್ಚಿ ಮಾದಕವಸ್ತುವನ್ನು ಸೇರ್ಪಡಿಸಿ (ಸ್ಪೈಕ್ ಮಾಡಿ) ಅದರ ಪರಿಣಾಮವಾಗಿ ಲಕ್ಷ್ಮಿ ನಶೆಯಲ್ಲಿದ್ದಾಗ ಅವಳನ್ನು ಅತ್ಯಾಚಾರಕ್ಕೆ ಒಳಪಡಿಸುತ್ತಾನೆ. ಲಕ್ಷ್ಮಿಯ ಅತ್ಯಾಚಾರವನ್ನು ನಮ್ಮ ಸಮಾಜ ಹೇಗೆ ಗ್ರಹಿಸುತ್ತದೆ, ನಮ್ಮ ವ್ಯವಸ್ಥೆ ಹೇಗೆ ತನಿಖೆ ನಡೆಸುತ್ತವೆ ಮತ್ತು ನಂಬಿಕೆ ಆಧಾರದ ಮೇಲೆ ಜನರ ನಿರೀಕ್ಷೆ ಯಾವ ಯಾವ ರೂಪಗಳನ್ನು ತಳೆಯುತ್ತದೆ, ತನಗೆ ಅತ್ಯಾಚಾರವಾಗಿದೆ ಎಂದು ಲಕ್ಷ್ಮಿ ಬಹಿರಂಗವಾಗಿ ಒಪ್ಪಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಆ ವಿಚಾರವನ್ನು ಹಂಚಿಕೊಂಡದ್ದು ಸರಿಯೇ, ತಪ್ಪೇ? ಎಂಬ ವಿಚಾರಗಳ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಆಶ್ಚರ್ಯವೆಂದರೆ ಪ್ರೇಮಲತಾ ಈ ಕಥೆಯನ್ನು ಬರೆದು ನಾಲ್ಕು ವರುಷಗಳಾಗಿವೆ, ಬಹುಶಃ ಅದೇ ಸಮಯದಲ್ಲಿ, ಫ್ರಾನ್ಸ್ ದೇಶದಲ್ಲಿ, ಗೆಜೆಲ್ ಪೆಲಿಕೋ ಎಂಬ ಹಿರಿಯ ಮಹಿಳೆಯ ಸ್ವಂತ ಗಂಡನೇ ಅವಳಿಗೆ ಗೊತ್ತಾಗದಂತೆ ಡ್ರಗ್ಸ್ ಕೊಟ್ಟು ನಶೆಯಲ್ಲಿರುವಾಗ ಅವನು ತನ್ನ ಸ್ನೇಹಿತರನ್ನು ಕರೆದು ಅವಳೊಡನೆ ಸಂಭೋಗಿಸಲು ಉತ್ತೇಜಿಸಿದ. ಅದು ಗೆಜೆಲ್ ಮೇಲೆ ನಡೆದ ಅತ್ಯಾಚಾರವೆನ್ನಬಹುದು. ಅಷ್ಟೇ ಅಲ್ಲ ಈ ಅತ್ಯಾಚಾರವನ್ನು ಅವನು ವಿಡಿಯೋ ಮಾಡಿದ್ದು ಈ ವಿಚಾರ ಇತ್ತೀಚಿಗೆ ಬಹಿರಂಗಗೊಂಡು ಅದರ ತನಿಖೆ ನಡೆಯಿತು, ಈ ಸುದ್ದಿ ಬಿಬಿಸಿ ವಾರ್ತೆಯಲ್ಲಿ ಪ್ರಸಾರಗೊಂಡಿತು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಯಿತು. ನಂಬಿಕೆಯೆಂಬ ಗಾಳಿಕೋಡೆ ಕಥೆಯಲ್ಲೂ ಆಪಾದಿತ, ಲಕ್ಷ್ಮಿ ಮೇಲೆ ನಡೆಸಿದ ಅತ್ಯಾಚಾರವನ್ನು ವಿಡಿಯೋ ಮಾಡಿರುತ್ತಾನೆ. ಇದು ಎಷ್ಟು ಕಾಕತಾಳೀಯವಾಗಿದೆ! ಪ್ರಪಂಚದ ಯಾವುದೋ ಮೂಲೆಯಲ್ಲಿ ಒಬ್ಬ ಕನ್ನಡ ಲೇಖಕಿಯ ಕಲ್ಪನೆಗೆ ದೊರಕಿದ ಕಥೆ, ಇನ್ಯಾವುದೋ ಸಂಸ್ಕೃತಿಯಲ್ಲಿ, ದೇಶದಲ್ಲಿ ಸಂಭವಿಸಿದ ನೈಜ ಘಟನೆಯಾಗಿರುವುದು ಅಚ್ಚರಿಯನ್ನು ಉಂಟುಮಾಡುವಂಥದ್ದು.

ಪ್ರೇಮಲತಾ ಅವರು ಕೈಗೆತ್ತಿಕೊಳ್ಳುವ ಕಥಾವಸ್ತುಗಳು ನಮ್ಮ ನಿಮ್ಮ ಬದುಕಿಗೆ ಬಹಳ ಹತ್ತಿರವಾದದ್ದು. ಅವರ ಕಥೆಗಳಲ್ಲಿ ಪ್ರಾಮಾಣಿಕತೆ ಇದೆ, ಇಲ್ಲಿ ಅಥೆಂಟಿಸಿಟಿ ಇದೆ. ಅವರು ಸಾಮಾಜಿಕ ಸಮಸ್ಯೆಗಳನ್ನು ಅನೇಕ ಸೂಕ್ಷ್ಮ ದೃಷ್ಟಿ ಕೋನಗಳಿಂದ ವಿಶ್ಲೇಷಿಸಿದ್ದಾರೆ, ಇಲ್ಲಿಯ ಕಥೆಗಳು ಹಲವಾರು ಚಿಂತನೆಗಳಿಗೆ ಅನುವು ಮಾಡಿಕೊಡುತ್ತದೆ. ಇಲ್ಲಿ ಅತಿಯಾದ ಭಾವುಕತೆ ಇಲ್ಲ, ಎಲ್ಲ ಸನ್ನಿವೇಶಗಳನ್ನು ಹದವಾಗಿ ನಿರೂಪಿಸಲಾಗಿದೆ. ಇಲ್ಲಿ ಸ್ತ್ರೀ ಭಾವನೆಗಳಷ್ಟೇ ಅಲ್ಲದೆ ಪುರುಷರ ಭಾವನೆಗಳನ್ನು ನಿಭಾಯಿಸಲಾಗಿದೆ. ಇದರ ಉತ್ತಮ ಉದಾಹರಣೆಯನ್ನು 'ಗೊಡ್ಡು' ಎಂಬ ಕಥೆಯಲ್ಲಿ ಕಾಣಬಹುದು. ಸಾಮಾನ್ಯವಾಗಿ ಬಂಜೆತನವೆಂದರೆ ಅದು ಸ್ತ್ರೀಯರಿಗಷ್ಟೇ ಸಂಬಂಧಿಸಿರುವ ವಿಚಾರ ಎಂದು ಸಮಾಜ ನಂಬಿರುತ್ತದೆ. ಮಕ್ಕಳಾಗದ ದಾಂಪತ್ಯದಲ್ಲಿ ಬಹುಪಾಲು ಹೆಂಗಸೇ ಆಪಾದನೆಗೆ ಒಳಗಾಗುವುದನ್ನು ಕಾಣುತ್ತವೆ. ‘ಎಕ್ಸ್ ಎಕ್ಸ್ ವೈ’ (XXY) ಎಂಬ ಗಂಡಸಿನ ಬಂಜೆತನವನ್ನು ಕಥೆಯಲ್ಲಿ ತಂದು ಲೇಖಕಿ ಈ ನಂಬಿಕೆಯನ್ನು ಒಡೆಯುತ್ತಾರೆ. ಕಥಾ ನಾಯಕನಿಗೆ ತನ್ನ ಬಂಜೆ ತನದ ಅರಿವಾದಾಗ ಅವನಿಗೆ ಉಂಟಾಗುವ ಭಾವನೆಗಳ ಏರು ಪೆರುಗಳನ್ನು ಮತ್ತು ತಾನು ನಿಷ್ಪ್ರಯೋಜಕ ಎಂಬ ಮಾನಸಿಕ ತೊಳಲಾಟವನ್ನು ಅತ್ಯಂತ ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಸಮಾಜ ತಾನು ನಂಬಿರುವ ಸಾಮಾಜಿಕ "ಸತ್ಯಗಳನ್ನು" ನಂಬಿಕೆಗಳನ್ನು ಒಡೆದು ತೋರಿಸಿದಾಗ ಉಂಟಾಗುವ ಆಘಾತ ಬಹಳ ಆಳವಾದದ್ದು. ಅದು ಸಮಾಜವನ್ನು ತಿದ್ದುವ ಪ್ರಯತ್ನವೂ ಹೌದು. ಈ ಕಾರಣಕ್ಕಾಗಿ ನಮಗೆ ಪ್ರೇಮಲತಾ ಅವರ ಕಥೆಗಳು ಪ್ರಸ್ತುತವಾಗುತ್ತವೆ.

ಸಣ್ಣ ಕಥೆಗಳು ಎಷ್ಟು ಉದ್ದವಾಗಿರಬೇಕು ಎಂಬುದಕ್ಕೆ ಯಾವುದೇ ಅಳತೆಗೋಲುಗಳಿಲ್ಲ. ಹೇಳಿದಷ್ಟೂ ಕಥೆಯೇ. ಪ್ರೇಮಲತಾ ಅವರ ಕಥೆಗಳು ಕೊಂಚ ದೀರ್ಘವೆನಿಸುತ್ತದೆ. ಇವುಗಳ ನಡುವೆ ‘ನಿರ್ವಾತ’ ಎಂಬ ಕಥೆ ನಿಜವಾಗಿಯೂ ಸಣ್ಣ ಕಥೆ ಎನ್ನಬಹುದು. ಕೆಲವೇ ಪುಟಗಳ ಈ ಕಥೆ 'ಇನ್ಸೆಸ್ಟ್' ಕುರಿತಾಗಿದೆ. ಕಥಾನಾಯಕಿಯ ತಂದೆಯೇ ತನ್ನ ಚಿಕ್ಕ ತಾತನಾಗಿರುವ ಕಥೆ ಪರಿಣಾಮಕಾರಿಯಾಗಿದೆ. ಕನ್ನಡದ ಹಿಂದಿನ ಲೇಖಕರು ಸಲಿಂಗಕಾಮ, ವಿಕೃತ ಕಾಮ, ಅತ್ಯಾಚಾರ ಈ ವಿಚಾರಗಳನ್ನು ಮಡಿವಂತಿಕೆಯಿಂದ ಆಯ್ಕೆ ಮಾಡುತ್ತಿರಲಿಲ್ಲ. ಇದು ಸಾಮಾಜಿಕವಾಗಿ ನಿಷಿದ್ಧವಾದ ವಿಷಯವಾಗಿತ್ತು. ಪ್ರೇಮಲತಾ ಅವರು ಈ ರೀತಿಯ ಬಾಹಿರವಾದ ವಿಚಾರಗಳನ್ನು ಮುನ್ನೆಲೆಗೆ ತಂದಿರುವುದು ಶ್ಲಾಘನೀಯ. ಈ ಪ್ರಯತ್ನವನ್ನು ಇತ್ತೀಚಿನ ಇತರ ಲೇಖಕರೂ ಮಾಡುತ್ತಿದ್ದಾರೆ. ಕಥೆ, ಕಾದಂಬರಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಈ ರೀತಿ ವಿಷಯಗಳನ್ನು ತರುವುದರಿಂದ ಅದು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸಹಾಯವಾಗುತ್ತದೆ. ಇದರಿಂದ ಸಮಾಜದಲ್ಲಿ ಪರಿವರ್ತನೆ ಆಗಬಹುದು, ಆಗದಿರಬಹುದು, ಆದರೆ ಅರಿವನ್ನು ಹೆಚ್ಚಿಸುವುದು ಲೇಖಕರ ಮತ್ತು ಸಿನಿಮಾ ನಿರ್ದೇಶಕರ ಜವಾಬ್ದಾರಿ.

ಪ್ರೇಮಲತಾ, ತಮ್ಮ ಕಥೆಯಲ್ಲಿ ತಂದಿರುವ ಅನೇಕ ಸ್ತ್ರೀ ಪಾತ್ರಗಳನ್ನು ಸಹಜವಾಗಿ ನಿರೂಪಿಸಿದ್ದಾರೆ. ಇಲ್ಲಿಯ ಬಹುತೇಕ ಕಥೆಗಳಲ್ಲಿ ಸ್ತ್ರೀ ಪಾತ್ರ ಪ್ರಧಾನವಾಗಿರುವಂತೆ ತೋರುತ್ತದೆ. ಇಲ್ಲಿ ಅವಳು ಸತ್ಯಕ್ಕಾಗಿ, ನ್ಯಾಯಕ್ಕಾಗಿ, ಪ್ರೀತಿಗಾಗಿ ಎದ್ದು ನಿಲ್ಲುತ್ತಾಳೆ. ಅತ್ಯಾಚಾರಕ್ಕೆ ಒಳಗಾಗಿ ಹಿಂಸೆಯನ್ನು ಅನುಭವಿಸಿ ತನ್ನ ಹೆಸರಿಗೆ ಒದಗಿದ ಕಳಂಕವನ್ನು ಮುಚ್ಚಿಡದೆ, ಇತರ ಸ್ತ್ರೀಯರ ರಕ್ಷಣೆಗಾಗಿ ತನ್ನ ಅತ್ಯಾಚಾರವನ್ನು ಬಹಿರಂಗಗೊಳಿಸುವ ಧೀಮಂತ ಹೆಣ್ಣಾಗಿ ನಿಲ್ಲುತ್ತಾಳೆ. ಗಂಡು ಮತ್ತು ಹೆಣ್ಣು ಉದ್ಯೋಗಿಗಳಿಗೆ ನೀಡುವ ವೇತನದಲ್ಲಿ ಉಂಟಾಗಿರುವ ತರತಮಗಳಿಗಾಗಿ ಹೋರಾಡಲು ನಿಲ್ಲುತ್ತಾಳೆ. ವಿಚ್ಛೇದನ ಪಡೆದ ಹೆಂಗಸಾದರೂ ತನ್ನ ಭಾವಿ ಪತಿಗೆ ಕ್ಯಾನ್ಸರ್ ರೋಗ ತಟ್ಟಿದ್ದಾಗ ಅವನನ್ನು ಬೆಂಬಲಿಸಿ ನಿಂತು ಸಾಂತ್ವನ ನೀಡುವಷ್ಟು ಉದಾರಿಯಾಗಿರುತ್ತಾಳೆ. ಸಾಂಪ್ರದಾಯ ದೃಷ್ಟಿಕೋನಗಳಲ್ಲಿ ಸ್ತ್ರೀ ಪುರುಷನ ಅಧೀನಳು, ಅಬಲೆ, ಗಂಡನ ನೆರಳಲ್ಲಿ ಜೀವಿಸುವವಳು ಎಂತೆಲ್ಲಾ ನಮ್ಮ ಹಿಂದಿನ ಕಥೆ, ಪುರಾಣ, ಕಾದಂಬರಿ ಮತ್ತು ಸಿನಿಮಾಗಳಲ್ಲಿ ಚಿತ್ರಿಸಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಸ್ತ್ರೀಗೆ ತನ್ನದೇ ಅಸ್ತಿತ್ವವಿದೆ, ಅವಳು ತನ್ನ ಸಮಾನ ಹಕ್ಕುಗಳಿಗೆ ನಿಲ್ಲಬಲ್ಲಳು ಎಂಬ ವಿಚಾರವನ್ನು ಇಲ್ಲಿಯ ಕಥೆಗಳಲ್ಲಿ ಕಾಣಬಹುದು. ಜೊತೆಗೆ ಸ್ತ್ರೀ ಒಂದು ಶಕ್ತಿ ಅಷ್ಟೇ ಅಲ್ಲ, ಸ್ನೇಹ, ಪ್ರೀತಿ, ಕರುಣೆ, ಸಹನೆ ಮತ್ತು ಅನುಕಂಪೆಯ ಪ್ರತಿಮೆಯಾಗಿಯೂ ನಿಲ್ಲುತ್ತಾಳೆ.

'ವರ್ತುಲ' ಎಂಬ ಕಥೆ ಬೇರೆ ಕಥೆಗಳಿಗಿಂತ ಭಿನ್ನವಾಗಿ ಎದ್ದು ನಿಲ್ಲುತ್ತದೆ. ಬದುಕೆಂಬ ಸ್ಪರ್ಧೆಯಲ್ಲಿ ನಾವು ಯಶಸ್ಸಿನ ಸಾಧನೆಯಲ್ಲಿ ಸಿಕ್ಕಿಕೊಂಡಿ "ಇರುವುದೆಲ್ಲವ ಬಿಟ್ಟು ಇರದುದರ ಕಡೆ ತುಡಿಯುವ" ನಾಗರೀಕತೆ ಎಂಬ ಖಾಯಿಲೆಯಲ್ಲಿ ನರಳುವವವರ ಚಿತ್ರ ಈ ಕಥೆಯಲ್ಲಿದೆ. ಇಲ್ಲಿ ಪರಿಸರ ನಾಶದ ಬಗ್ಗೆ ಕಾಳಜಿ ಇದೆ. ತೀವ್ರ ಗತಿಯಲ್ಲಿ ಬದಲಾಗಿ ನಿಬಿಡವಾಗಿರುವ ನಗರಗಳ ನಡುವೆ ನಿಡುಸುಯ್ಯುವ ಸ್ವರಗಳ ದನಿಯಿದೆ. "ಹೊಸತಿಗೆ -ಹಳತಿಗೂ, ಒಳ್ಳೆಯದಕ್ಕೂ-ಕೆಟ್ಟದಕ್ಕೂ, ವಿವೇಕಕ್ಕೂ-ಅವಿವೆಕ್ಕಕ್ಕೂ, ಭೂತ-ಭವಿಷ್ಯತ್ತಿಗೂ ಇರುವ ಪರದೆ ಅತಿ ತೆಳುವಾದದ್ದು" ಎಂಬ ಮಾತನ್ನು ಲೇಖಕಿ ಇಲ್ಲಿ ಪ್ರಸ್ತಾಪಿಸುತ್ತಾರೆ. ಈ ಮಾತುಗಳು ಎಲ್ಲರನ್ನು ಕಾಡುವ ವಿಚಾರ. ಹಿಂದೊಮ್ಮೆ ಹಳೆಯದೆಂದು ನಾವೇ ತಿರಸ್ಕರಿಸಿದ ಬದುಕಿನ ರೀತಿಗಳು, ದಿನ ನಿತ್ಯ ಬಳಕೆಯ ವಸ್ತುಗಳು, ಮಣ್ಣಿನ ವಾಸನೆ, ನಿಸರ್ಗದ ತಾಜಾತನ ಕಾಲದ ವರ್ತುಲದಲ್ಲಿ ಕಳೆದು ಹೋಗಿ ಮತ್ತೆ ನಮಗೆ ಅದೇ ಹಳೆತಿನ ಬಗ್ಗೆ ಹೊಸ ವ್ಯಾಮೋಹ ಹುಟ್ಟಿಕೊಳ್ಳುವ ಪರಿ ಸೋಜಿಗವಾದದ್ದು. ಈ ವರ್ತುಲದಲ್ಲಿ ಮೊದಲಾವುದು, ಕೊನೆಯಾವುದು ಎಂಬ ಪ್ರಶ್ನೆ ಕಾಡುತ್ತದೆ. ಪ್ರಗತಿಯ ನೆಪದಲ್ಲಿ ಎಲ್ಲವನ್ನೂ ಕಬಳಿಸುವ ನಮ್ಮ ದುರಾಸೆಯನ್ನು ಪ್ರೇಮಲತಾ ಅವರು "ಹಾವೊಂದು ತನ್ನ ಬಾಲದಿಂದ ಶುರು ಮಾಡಿ ತನ್ನನ್ನು ತಾನೇ ಕಬಳಿಸುವ" ದುರಂತ ಪ್ರಯತ್ನದ ರೂಪಕವನ್ನು ಇಲ್ಲಿ ಇಟ್ಟಿದ್ದು ಅದು ಬಹಳ ಅರ್ಥಪೂರ್ಣವಾಗಿದೆ.

ಈ ಕಥಾ ಸಂಕಲನದ ಕಥಾ ನಿರೂಪಣೆ ಕೆಲವೆಡೆ ಸರಳವಾಗಿರಬಹುದಿತ್ತು. ಹಿಂದು-ಮುಂದಿಲ್ಲದೆ ಏಕಾಏಕಿ ಇಬ್ಬರ ನಡುವಿನ ಸಂಭಾಷಣೆಯೊಂದಿಗೆ ಶುರುವಾಗುವ ಕಥೆ ಓದುಗನಲ್ಲಿ ಗೊಂದಲ ಉಂಟುಮಾಡಬಹುದು. ಸಾರ್ವತ್ರಿಕವಾಗಿ ಹೇಳುವುದಾದರೆ ಓದುಗನನ್ನು ಕಥೆಯ ಆವರಣದೊಳಗೆ ಬರಮಾಡಿಕೊಳ್ಳುವ ಬಗ್ಗೆ ಲೇಖಕರು ಎಚ್ಚರಿಕೆ ವಹಿಸಬೇಕು. ಹೀಗಾಗಿ ಕಥೆಯ ಪ್ರವೇಶ ಸರಾಗವಾಗಿದ್ದಾರೆ ಒಳಿತು. ಕಥೆಯ ನಿರೂಪಕರೇ ಕಥೆಗೆ ಒಂದಿಷ್ಟು ಹಿನ್ನೆಲೆಯನ್ನು ಕೊಟ್ಟು ಪಾತ್ರಗಳನ್ನು ಸಾವಧಾನವಾಗಿ ಪರಿಚಯಿಸಿದರೆ ನಂತರ ಸಂಭಾಷಣೆಯನ್ನು ಗ್ರಹಿಸುವುದಕ್ಕೆ ಸರಾಗವಾಗುತ್ತದೆ ಎಂಬುದು ನನ್ನ ಅನಿಸಿಕೆ. ನಾವೆಲ್ಲಾ ಹಿಂದೆ ಓದಿರುವ ಜನಪ್ರಿಯ ಕಥೆ ಕಾದಂಬರಿಯಲ್ಲಿ ಕಥಾ ವಸ್ತುವನ್ನು ಫ್ಲಾಶ್ ಬ್ಯಾಕ್ ಮಾದರಿಯಲ್ಲಿ ಹಿಂದು ಮುಂದೆ ಮಾಡುವ ತಂತ್ರವನ್ನು ನೋಡಿದ್ದೇವೆ. ಇದು ದೃಶ್ಯ ಮಾಧ್ಯಮಗಳಲ್ಲಿ ಗ್ರಹಿಸುವುದು ಸುಲಭ ಆದರೆ ಬರಹದಲ್ಲಿ ಬಳಸಿದಾಗ ಕಥೆಯನ್ನು ಗ್ರಹಿಸುವುದು ಕಷ್ಟದ ಕೆಲಸ. ಈ ತಂತ್ರ ಸಣ್ಣ ಕಥೆಗಳಲ್ಲಿ ಅಷ್ಟು ಪ್ರಯೋಜನಕ್ಕೆ ಬರದಿದ್ದರೂ ಅದನ್ನು ಕಾದಂಬರಿಗಳಲ್ಲಿ ಅಗತ್ಯವಿದ್ದಾಗ ತರಬಹುದು. ಅಂದಹಾಗೆ ಈ ಕೃತಿಯಲ್ಲಿ ಆ ಫ್ಲಾಶ್ ಬ್ಯಾಕ್ ಗಳಿಲ್ಲ.

ಪ್ರೇಮಲತಾ ಬಳೆಸಿರುವ ಭಾಷೆ ಬಹಳ ಉತ್ಕೃಷ್ಟವಾಗಿದೆ. ಅವರಿಗೆ ಕನ್ನಡ ಭಾಷೆಯ ಮೇಲಿರುವ ಹತೋಟಿ ಇಲ್ಲಿ ಎದ್ದು ತೋರುತ್ತದೆ. ಸಂಕೀರ್ಣವಾಗಿರುವ ವೈದ್ಯಕೀಯ ವಿಷಯಗಳನ್ನು ಸರಳಗೊಳಿಸಿ ಕಥೆ ಹೇಳುವ ಸಾಮರ್ಥ್ಯ ಅವರಿಗಿದೆ. ಸಂಬಂಧಗಳು ಎಂಬ ಕೊನೆ ಕಥೆಯಲ್ಲಿ ಮನುಷ್ಯ-ಮನುಷ್ಯ ಸಂಬಂಧಗಳನ್ನು ಕುರಿತಾದ ಕಥಾವಸ್ತು ಇದೆ. ಯಾರು ಯಾರಿಗೆ? ಹೇಗೆ? ಎಲ್ಲಿಯವರೆಗೆ? ಯಾವ ರೀತಿ? ಸಂಬಂಧಿ ಎನ್ನುವ ವಿಚಾರವನ್ನು ಆಳವಾಗಿ ಚಿಂತಿಸಲಾಗಿದೆ. ಸಾವು ಎಂಬ ವಿಷಯವನ್ನು ಅಂತ್ಯಂತ ಸೂಕ್ಷ್ಮವಾಗಿ ನಿಭಾಯಿಸಲಾಗಿದೆ. ಕ್ಯಾನ್ಸರ್ ಪೀಡಿತ ಕಥಾನಾಯಕ ಸಾವನ್ನು ಬರಮಾಡಿಕೊಳ್ಳುವ ಸನ್ನಿವೇಶವನ್ನು ನವುರಾದ ರೂಪಕದೊಂದಿಗೆ ಬಿತ್ತರಿಸಲಾಗಿದ್ದು ಈ ಹಂತದಲ್ಲಿ ಕಥೆ ಮತ್ತು ಕಥಾ ಸಂಕಲನ ಕೊನೆಗೊಳ್ಳುತ್ತದೆ. ಈ ರೀತಿಯ ಉಪಮೆಗಳ ಬಳಕೆ ಇಲ್ಲಿಯ ಕಥೆಗಳಿಗೆ ವಿಶೇಷ ಆಯಾಮಗಳನ್ನು ದೊರಕಿಸಿಕೊಟ್ಟಿದೆ.

ಕಥೆ, ಕಾದಂಬರಿಯನ್ನು ಓದುತ್ತಿರುವಾಗ ಕಥೆಯ ಓಘ, ದಿಕ್ಕು, ಬೆಳವಣಿಗೆ, ಕುತೂಹಲ ಇವುಗಳಲ್ಲಿ ಮಗ್ನರಾಗಿ ಮುಳುಗಿ ಮೇಲೇಳುತ್ತೇವೆ. ಓದು ಮುಗಿದ ನಂತರ ಕೆಲವು ಕಥೆಗಳು ಸರಳ ಕಥೆಗಳಾಗಿ ನೆನಪಿನಿಂದ ಉದುರುತ್ತವೆ. ಇನ್ನು ಕೆಲವು ಕಥೆಗಳು ಹಿನ್ನೋಟದಲ್ಲಿ ಹಲವಾರು ಚಿಂತನೆಗಳಿಗೆ ಅನುವುಮಾಡಿಕೊಡುತ್ತವೆ, ಹೊಸ ಹೊಳಹುಗಳನ್ನು ನೀಡುತ್ತವೆ ಮತ್ತು ನಮ್ಮ ಸ್ಮೃತಿಯಲ್ಲಿ ಧೀರ್ಘ ಕಾಲ ಉಳಿಯುತ್ತವೆ, ಅದರಲ್ಲಿ ಪ್ರೇಮಲತಾ ಅವರ ಈ ಕೃತಿಯೂ ಸೇರಿದೆ.

ಕನ್ನಡ ಭಾಷೆಯ ಮೇಲೆ ಒಂದಿಷ್ಟು ಆಲೋಚನೆಗಳು – ಕೇಶವ ಕುಲಕರ್ಣಿ

ನಾನು ಇಂಗ್ಲೆಂಡಿಗೆ ಬಂದ ಹೊಸತಿನಲ್ಲಿ ಕನ್ನಡವನ್ನು ಓದಬೇಕೆಂದರೆ ಭಾರತದಿಂದ ತಂದ ಪುಸ್ತಕಗಳು ಮಾತ್ರ ಆಸರೆಯಾಗಿದ್ದವು. ಆಗತಾನೆ ಕನ್ನಡದಲ್ಲಿ ಬ್ಲಾಗುಗಳು ಆರಂಭವಾಗುತ್ತಿದ್ದವು. ದಾಟ್ಸ್ ಕನ್ನಡ ಎನ್ನುವ ಜಾಲದಲ್ಲಿ ಕನ್ನಡದ ವಾರ್ತೆಗಳನ್ನು ಓದಲು ಸಿಗುತ್ತಿತ್ತು. ವರುಷಗಳು ಕಳೆದಂತೆ ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜಾಲದಲ್ಲಿ ಓದಲು ಸಿಗಹತ್ತಿದವು. ಸುಧಾ, ತರಂಗ, ಮಯೂರ, ತುಷಾರ, ರೂಪತಾರಾಗಳೂ ಓದಲು ಸಿಗತೊಡಗಿದವು. ಇತ್ತೀಚೆಗೆ ವಿವಿಡ್‍ಲಿಪಿ, ಮೈಲಾಂಗ್ ಎನ್ನುವ ಆ್ಯಪ್‍ಗಳು ಕನ್ನಡದ ಇ-ಪುಸ್ತಕಗಳನ್ನು ಫೋನಿಗೆ ತಂದು ಹಾಕುತ್ತಿವೆ. ಯುಟ್ಯೂಬಿನಲ್ಲಿ ಕನ್ನಡ ಸಾಹಿತಿಗಳ ಚರ್ಚೆ ಮತ್ತು ಸಂದರ್ಶನಗಳನ್ನು ನೋಡಲು ಸಿಗುತ್ತಿವೆ. ಅವಧಿ ಮತ್ತು ಕೆಂಡಸಂಪಿಗೆ ತರಹದ ಕನ್ನಡ ಸಾಹಿತ್ಯಕ್ಕೇ ಮೀಸಲಾದ ಜಾಲತಾಣಗಳಿವೆ. 

ಕನ್ನಡನಾಡಿನಿಂದ ದೂರ ಬಂದಿದ್ದರೂ ಕನ್ನಡದಲ್ಲಿ ವಾರ್ತೆಗಳನ್ನು, ಕನ್ನಡದ ಕತೆ-ಕಾದಂಬರಿಗಳನ್ನು, ಕವನಗಳನ್ನು ಓದುವುದು ನಿರಂತರವಾಗಿ ನಡೆಯುತ್ತಲೇ ಇದೆ. ನಾನು ಇಂಗ್ಲೆಂಡಿನಲ್ಲಿ ಕಳೆದ ಈ ಹತ್ತು ಹದಿನೈದು ವರ್ಷಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಅಗಾಧವಾದ ಬದಲಾವಣೆಗಳಾಗಿವೆ ಎಂದು ಅನಿಸುತ್ತದೆ. ಅಂಥ ಕೆಲವು ವಿಷಯಗಳನ್ನು ಈ ಅಂಕಣ ಬರಹದಲ್ಲಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ (ನಾನೇ ಮೊದಲನೇಯನಲ್ಲ ಎಂದು ಗೊತ್ತು). ನಾನು ಕನ್ನಡದ ಪಂಡಿತನೂ ಅಲ್ಲ ಮತ್ತು ಕನ್ನಡ ಭಾಷೆಯ ಇತಿಹಾಸವನ್ನು ಓದಿಕೊಂಡವನೂ ಅಲ್ಲ ಎಂದು ಮೊದಲು ತಪ್ಪೊಪ್ಪಿಕೊಂಡೇ (ಡಿಸ್‍ಕ್ಲೇಮರ್) ಇದನ್ನೆಲ್ಲ ನಿಮ್ಮ ಮುಂದಿಡುತ್ತಿದ್ದೇನೆ. 

ಸಾಯುತ್ತಲಿರುವ ಕನ್ನಡಪದಗಳು, ಹೆಚ್ಚುತ್ತಲಿರುವ ಇಂಗ್ಲೀಷ್ ಶಬ್ದಗಳು:

ದೊಡ್ಡಪಟ್ಟಣಗಳಲ್ಲಿ ನೆಲೆಸುವ ಕನ್ನಡಿಗರು ಕನ್ನಡದಲ್ಲಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಒಂದಾದರೂ ಇಂಗ್ಲೀಷ್ ಶಬ್ದವನ್ನು ಉಪಯೋಗಿಸುತ್ತಾರೆ ಎನ್ನುವುದು ನನ್ನ ಅನಿಸಿಕೆ. ಕೇವಲ ಒಂದು ಪೀಳಿಗೆಯ ಹಿಂದೆ ದಿನಬಳಕೆಯಲ್ಲಿದ್ದ ಎಷ್ಟೊಂದು ಕನ್ನಡದ ಶಬ್ದಗಳನ್ನು ಇಂಗ್ಲೀಷ್ ಶಬ್ದಗಳು ಕೊಂದು ಹಾಕಿರುವುದರೆ ನೇರ ಪರಿಣಾಮವಿದು  (ಪ್ರೊಫೇಸರ್ ಕೃಷ್ಣೇಗೌಡರು ‘ಕೋಡಗನ ಕೋಳಿ ನುಂಗಿತ್ತ‘ದ ಮಾದರಿಯಲ್ಲಿ ಇದರ ಬಗ್ಗೆ ಒಂದು ಹಾಡು ಮಾಡಿದ್ದಾರೆ ಕೂಡ). 

ಪಾನಕವನ್ನು ಜ್ಯೂಸ್, ಪಚಡಿಯನ್ನು ಸಲಾಡ್, ಅನ್ನವನ್ನು ರೈಸ್, ಮೊಸರನ್ನವನ್ನು ಕರ್ಡ್‌-ರೈಸ್, ಚಿತ್ರಾನ್ನವನ್ನು ಲೆಮನ್-ರೈಸ್ ಅನ್ನುತ್ತಿದ್ದೇವೆ. ಪಡಸಾಲೆಯನ್ನು ಡ್ರಾಯಿಂಗ್-ರೂಮ್, ಅಡುಗೆಮನೆಯನ್ನು ಕಿಚನ್, ಬಚ್ಚಲುಮನೆಯನ್ನು ಬಾತ್‌-ರೂಮ್ ಅನ್ನುತ್ತಿದ್ದೇವೆ. ಅಪ್ಪ ಡ್ಯಾಡಿಯಾಗಿ, ಅಮ್ಮ ಮಮ್ಮಿಯಾಗಿ ಆಗಲೇ ಒಂದು ಪೀಳಿಗೆಯೇ ಮುಗಿದಿದೆ. ಮಾಮಾ, ಕಾಕಾ, ಸೋದರಮಾವ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲ ಶಬ್ದಗಳೂ ‘ಅಂಕಲ್’ ಆಗಿಬಿಟ್ಟಿವೆ. ಮಾಮಿ, ಕಾಕು, ದೊಡ್ಡಮ್ಮ, ಚಿಕ್ಕಮ್ಮರೆಲ್ಲ ‘ಆಂಟಿ’ಗಳಾಗಿದ್ದಾರೆ. ಮೆಣಸು ಪೆಪ್ಪರ್ ಆಗಿದೆ, ಶುಂಠಿ ಜಿಂಜರ್ ಆಗಿದೆ, ಬೆಳ್ಳುಳ್ಳಿ ಗಾರ್ಲಿಕ್ ಆಗಿದೆ, ಅರಿಶಿಣ ಪುಡಿ ಟರ್ಮರಿಕ್ ಆಗಿದೆ. ವರ್ಷಗಳು ಉರುಳಿದಂತೆ ನಿಧನಿಧಾನವಾಗಿ ದಿನನಿತ್ಯ ಬಳಸುವ ಕನ್ನಡದ ಪದಗಳನ್ನು ಇಂಗ್ಲೀಷ್ ಪದಗಳು ಆಕ್ರಮಿಸುತ್ತಿವೆ.   

ತಂತ್ರಜ್ಙಾನದಿಂದ ಬಂದ ಹೊಸ ಅವಿಷ್ಕಾರಗಳಾದ ಫೋನು, ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಿಗೆ ದೂರವಾಣಿ, ಗಣಕಯಂತ್ರ, ಜಂಗಮವಾಣಿ ಎಂದೆಲ್ಲ ಹೊಸ ಶಬ್ದಗಳನ್ನು ತರುವ ಪ್ರಯತ್ನ ನಡೆಯಿತಾದರೂ ಕೊನೆಗೆ ಕನ್ನಡಿಗರ ಮಾತಿನಲ್ಲಿ ಉಳಿದದ್ದು ಮೂಲ ಇಂಗ್ಲೀಷ್ ಪದಗಳೇ. ಪೋಲೀಸರಿಗೆ ಆರಕ್ಷಕ, ಇಂಜಿನಿಯರನಿಗೆ ಅಭಿಯಂತರ, ಮ್ಯಾನೇಜರನಿಗೆ ವ್ಯವಸ್ಥಾಪಕ (ಕಾರ್ಯನಿರ್ವಾಹಕ) ಎಂದೆಲ್ಲ ಹೊಸ ಶಬ್ದಗಳ ಪ್ರಯೋಗ ಪತ್ರಿಕೆಗಳಿಗೆ ಸೀಮಿತವಾಗಿ, ಕೊನೆಗೆ ಪತ್ರಿಕೆಗಳೂ ಅವುಗಳ ಬಳಕೆಯನ್ನು ಬಿಟ್ಟಿಕೊಟ್ಟವು.

ಕನ್ನಡ ಭಾಷೆಯಲ್ಲಿ ಪಾರಿಭಾಷಿಕ ಪದಗಳನ್ನು ಸೃಷ್ಟಿಸುವ ಕೆಲಸದ ಹಿಂದಿರುವ ಪರಿಶ್ರಮವೆಲ್ಲ ನಷ್ಟವಾಗುತ್ತಲಿದೆ. ಇದೇ ಪ್ರವೃತ್ತಿ ಮುಂದುವರೆದರೆ ಹೊಸ ಕನ್ನಡ ಶಬ್ದಗಳನ್ನು ಹುಟ್ಟುಹಾಕುವ ಪ್ರಯತ್ನವನ್ನೇ ಪಂಡಿತರು ಬಿಟ್ಟುಬಿಡುತ್ತಾರೆ ಅನಿಸುತ್ತದೆ. 

ಮಾತನಾಡುವಾಗ ಇಲ್ಲದ ಮಡಿವಂತಿಕೆ ಬರೆಯುವಾಗ ಇರಬೇಕೇ?:

ಹೀಗೆ ಸಾವಿರಾರು ಇಂಗ್ಲೀಷ್ ಪದಗಳು ದಿನ ಬಳಕೆಯ ಕನ್ನಡದ ಬದುಕಲ್ಲಿ ಹಾಸುಹೊಕ್ಕಾಗಿ, ಕನ್ನಡದ ಪದಗಳೇ ಆಗಿ ಹೋಗಿದ್ದರೂ, ನಾನು ಇಂಗ್ಲೆಂಡಿಗೆ ಬಂದು ಇಷ್ಟು ವರ್ಷಗಳಾದರೂ, ದಿನನಿತ್ಯ ಬಳಸುವ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ನನ್ನ ಕೈ ಓಡುವುದಿಲ್ಲ, ಆ ಶಬ್ದಗಳಿಗೆ ಸರಿಸಮನಾದ ಕನ್ನಡ ಶಬ್ದವನ್ನೋ, ಕನ್ನಡ ಶಬ್ದ ಸಿಗದಿದ್ದಾಗ ಸಂಸ್ಕೃತ ಶಬ್ದವನ್ನೋ ಮೆದುಳು ಹುಡುಕುತ್ತದೆ. ಕನ್ನಡದಲ್ಲಿ ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಅಂತರ್ಧಾನ, ಸ್ವರೂಪ, ವ್ಯಾಧಿಗ್ರಸ್ತ, ಜಾಜ್ವಲ್ಯಮಾನ, ವಾಕ್ಚಾತುರ್ಯ ಇತ್ಯಾದಿ ಸಂಸ್ಕೃತದ ಶಬ್ದಗಳನ್ನು ಬರೆಯುವಾಗ ಇಲ್ಲದ ಮಡಿವಂತಿಕೆ, ದಿನಬಳಕೆಯ ಇಂಗ್ಲೀಷ್ ಶಬ್ದಗಳಾದ ಹಾಸ್ಪಿಟಲ್, ಕೀಬೋರ್ಡ್, ಮಾನಿಟರ್ ಎಂದೆಲ್ಲ ಬರೆಯುವಾಗ ಅಡ್ಡಬರುತ್ತದೆ. ನಾನು ಚಿಕ್ಕನಿದ್ದಾಗ ಆಗಲೇ ಕನ್ನಡೀಕರಣಗೊಂಡ ಬಸ್ಸು, ಕಾರು, ರೈಲು, ರೋಡು ಎಂದು ಬರೆಯುವಾಗ ಇಲ್ಲದ ಮುಜುಗರ, ಇತ್ತೀಚಿನ ವರ್ಷಗಳಲ್ಲಿ ಕನ್ನಡೀಕರಣಗೊಂಡ ಇಂಗ್ಲೀಷ್ ಶಬ್ದಗಳನ್ನು ಬರೆಯುವಾಗ ಆಗುತ್ತದೆ. ಪಾರ್ಸಿಯಿಂದ ಬಂದ `ಅರ್ಜಿ` ಎಂದು ಬರೆದಾಗ ಏನೂ ಅನಿಸುವುದಿಲ್ಲ, ಆದರೆ `ಅಪ್ಲಿಕೇಷನ್` ಎಂದು ಕನ್ನಡದ ಲಿಪಿಯಲ್ಲಿ ಬರೆಯುವಾಗ ಇರಿಸುಮುರುಸಾಗುತ್ತದೆ. ಈ ಗೊಂದಲ ಕನ್ನಡದ ಬೇರೆ ಲೇಖಕರನ್ನು ಎಷ್ಟರಮಟ್ಟಿಗೆ ಕಾಡುವುದೋ ನನಗೆ ಗೊತ್ತಿಲ್ಲ. ಪ್ರಶ್ನೆ ಇರುವುದು ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದಲ್ಲ, ಯಾವುದನ್ನು ಬರೆದರೆ ಕನ್ನಡದ ಓದುಗರನ್ನು ಸುಲಭವಾಗಿ ತಲುಪಬಹುದು ಎನ್ನುವುದು.

ವಿರಾಮಚಿಹ್ನೆಗಳ (ದುರು)ಪಯೋಗ: 

ನಾವು ಬರೆಯುವಾಗ ಬಹಳಷ್ಟು ವಿರಾಮಚಿಹ್ನೆಗಳನ್ನು (punctuation) ಬಳಸುತ್ತೇವೆ, ಪೂರ್ಣವಿರಾಮ, ಅಲ್ಪವಿರಾಮ, ಅರ್ಧವಿರಾಮ, ಪ್ರಶ್ನಾರ್ಥಕ,  ಉದ್ಗಾರವಾಚಕ ಇತ್ಯಾದಿ. ಇಷ್ಟೊಂದು ವಿರಾಮ ಚಿಹ್ನೆಗಳನ್ನು ಭಾರತೀಯ ಭಾಷೆಗಳು ಕಲಿತದ್ದು ಬಹುಷಃ ಇಂಗ್ಲೀಷಿನಿಂದಲೇ ಇರಬೇಕು. 

ಅವುಗಳಲ್ಲಿ ಒಂದು ಚಿಹ್ನೆಯನ್ನು ಕನ್ನಡ ಸಾಹಿತ್ಯದ ಓದುಗರೆಲ್ಲರೂ ಖಂಡಿತ ಓದಿರುತ್ತೀರಿ (ಅಥವಾ ನೋಡಿರುತ್ತೀರಿ), ಅದು ಮೂರು ಡಾಟ್‍ಗಳು (…), ಇಂಗ್ಲೀಷಿನಲ್ಲಿ ಅದಕ್ಕೆ ellipse (ಎಲಿಪ್ಸ್) ಎನ್ನುತ್ತಾರೆ. ಈ ಎಲಿಪ್ಸಿಗೆ ಕನ್ನಡ ವ್ಯಾಕರಣಕಾರರು ಯಾವ ಕನ್ನಡ/ಸಂಸ್ಕೃತ ಶಬ್ದವನ್ನು ಕೊಟ್ಟಿದ್ದಾರೋ ಗೊತಿಲ್ಲ. 

ವಾಕ್ಯದ ಕೊನೆಗೆ ಎಲಿಪ್ಸನ್ನು ಉಪಯೋಗಿಸಿದರೆ, ಇನ್ನೂ ಏನೋ ಮಾತು ಉಳಿದಿದೆ ಎಂದು ಅರ್ಥ. ಸಂಭಾಷಣೆಯ ರೂಪದಲ್ಲಿರುವ ವಾಕ್ಯದ ನಡುವೆ ಎಲಿಪ್ಸ್ ಬರೆದರೆ, ಮಾತನಾಡುವ ವ್ಯಕ್ತಿ ಮಾತನ್ನು ನುಂಗಿದ ಎಂದು ಅರ್ಥ. ಒಟ್ಟಿನಲ್ಲಿ ಎಲಿಪ್ಸನ್ನು ಬಳಸಿದರೆ ಎಲ್ಲೋ ಏನೋ ಬಿಟ್ಟುಹೋಗಿದೆ ಎಂದು ಅರ್ಥ. ಆದ್ದರಿಂದ ಈ ಎಲಿಪ್ಸನ್ನು ಎಷ್ಟು ಕಡಿಮೆಯಾಗುತ್ತೋ ಅಷ್ಟು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತದೆ ಇಂಗ್ಲೀಷ್ ವ್ಯಾಕರಣ. ಎಲಿಪ್ಸ್ ಚಿಹ್ನೆಯನ್ನು ಎಲ್ಲಿ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬಾರದು ಎನ್ನುವುದನ್ನು ತಿಳಿಯಲು ಇಂಗ್ಲೀಷ್ ಭಾಷೆಯಲ್ಲಿ ಸಾಕಷ್ಟು ಲೇಖನಗಳಿವೆ, ವ್ಯಾಕರಣ ಪುಸ್ತಕಗಳಲ್ಲಿ ಅಧ್ಯಾಯಗಳಿವೆ. 

ಈ ಎಲಿಪ್ಸ್ ಚಿಹ್ನೆಯು ಕನ್ನಡದ ಕತೆ ಮತ್ತು ಕವನಗಳಲ್ಲಿ ಲಂಗುಲಗಾಮಿಲ್ಲದೇ ಎಲ್ಲಿಬೇಕೆಂದರಲ್ಲಿ ಒಕ್ಕರಿಸಿಬಿಡುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ‘ಬಿಟ್ಟ ಸ್ಥಳ ತುಂಬಿ‘ ಎಂದು ಇರುತ್ತದಲ್ಲ, ಹಾಗೆ. ಕತೆ ಬರೆಯುವಾಗ ಪ್ಯಾರಾಗ್ರಾಫಿನ ಕೊನೆಯಲ್ಲಿ ‘…‘ ಬಂದುಬಿಡುತ್ತದೆ. ಓದುಗರೇ, ನೀವೇ ಈ ಕತೆಯನು ಮುಂದುವರೆಸಿ ಎನ್ನುವಂತೆ. ಕತೆ ಕಾದಂಬರಿಗಳಲ್ಲಿ ಸಂಭಾಷಣೆಗಳನ್ನು ಬರೆಯುವಾಗ ಕನ್ನಡದ ಪ್ರಸಿದ್ಧ ಲೇಖಕರೂ ಈ ಎಲಿಪ್ಸನ್ನು ಎಲ್ಲಿ ಬೇಕೆಂದರಲ್ಲಿ ಬಳಸುತ್ತಾರೆ. ಇನ್ನು ಕವನಗಳಲ್ಲಿ ಎಲಿಪ್ಸ್ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕವನದ ಶೀರ್ಷಿಕೆಯಲ್ಲೇ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸಾಲಿನ ಕೊನೆಗೆ ಬರುತ್ತದೆ, ಕೆಲವೊಮ್ಮೆ ಕವನದ ಕೊನೆಯಲ್ಲಿ. ಎಲಿಪ್ಸ್ ಬಳಸುವುದರಿಂದ ಆ ಕವನದ ಅರ್ಥಕ್ಕೆ ಯಾವ ಬದಲಾವಣೆಯೂ ಆಗುವುದಿಲ್ಲ. ಓದುವವರಿಗೆ ಮಾತ್ರ ಕವನ ಅಪೂರ್ಣ ಅನ್ನಿಸದೇ ಇರದು. ಹೆಸರಾಂತ ಪತ್ರಿಕೆಗಳೂ ಎಪಿಪ್ಸನ್ನು ತಿದ್ದಿವ ಗೋಜಿಗೆ ಹೋಗುವುದಿಲ್ಲ. ಕನ್ನಡದಲ್ಲಿ ವಿರಾಮಚಿಹ್ನೆಗಳ ಬಗ್ಗೆ, ಅದರಲ್ಲೂ ಎಲಿಪ್ಸ್ ಚಿಹ್ನೆಯ ಬಗ್ಗೆ ಒಂದು ತರಹದ ಅಸಡ್ಡೆ ಇದೆ ಅನಿಸುತ್ತದೆ.  

ಅಷ್ಟೇ ಅಲ್ಲ, ಇನ್ನೂ ಕೆಲವು ವಿರಾಮ ಚಿಹ್ನೆಗಳನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಯುತ್ತಾರೆ, ಅದನ್ನು ಪತ್ರಿಕೆಗಳು ಪ್ರಕಟಿಸುತ್ತಾರೆ ಕೂಡ. ಎರಡು, ಮೂರು ಅಥವಾ ನಾಲ್ಕೆ ಉದ್ಗಾರ ವಾಚಗಳನ್ನು ಒಟ್ಟಿಗೇ ಬಳಸುತ್ತಾರೆ. ಉದ್ಗಾರದ ನಂತರ ಪ್ರಶ್ನಾರ್ಥಕವನ್ನೂ, ಪ್ರಶ್ನಾರ್ಥಕವಾದ ಮೇಲೆ ಉದ್ಗಾರವಾಚಕವನ್ನೂ ವಿನಾಕಾರಣ ಬಳಸುತ್ತಾರೆ (ಇಂಗ್ಲೀಷಿನಲ್ಲಿ ಇದಕ್ಕೆ interrobang ಎನ್ನುತ್ತಾರೆ). ಕೆಲವರಂತೂ ಎಲಿಪ್ಸ್ ಆದ ಮೇಲೆ ಉದ್ಗಾರವಾಚಕವನ್ನು ಬಳಸುತ್ತಾರೆ. ಭಾಷೆಯನ್ನು ಕಲಿಯುವಾಗ ಪದಭಂಡಾರ ಮತ್ತು ಕಾಗುಣಿತ ಎಷ್ಟು ಮುಖ್ಯವೋ ವಿರಾಮ ಚಿಹ್ನೆಗಳನ್ನು ಸರಿಯಾಗಿ ಬಳಸುವುದೂ ತುಂಬ ಮುಖ್ಯವಾಗುತ್ತದೆ. 

ಹೆಸರುಗಳನ್ನು ಬರೆಯುವುದು:

ನಾವು ಚಿಕ್ಕವರಿದ್ದಾಗ ಹೆಂಗಸರ ಹೆಸರನ್ನು ಗೀತಾ, ಸವಿತಾ, ಮಾಲಾ, ಸೀತಾ ಎಂದು, ಗಂಡಸರ ಹೆಸರುಗಳನ್ನು ರಮೇಶ, ಗಣೇಶ, ಸಂತೋಷ, ರಾಜೇಶ ಎಂದು ಎಲ್ಲ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದರು, ನಮ್ಮ ಪೀಳಿಗೆಯವರೂ ಹಾಗೆಯೇ ಬರೆಯುತ್ತಿದ್ದೆವು. ಇತ್ತೀಚಿನ ಒಂದೆರೆಡು ದಶಕಗಳಿಂದ, ಅದರಲ್ಲೂ ಕನ್ನಡ ಟಿವಿ ವಾಹಿನಿಗಳ ಸಂಖ್ಯೆ ಹೆಚ್ಚಾದ ಮೇಲೆ, ಹೆಂಗಸರ ಹೆಸರುಗಳು ಗೀತ, ಸವಿತ, ಮಾಲ, ಸೀತ ಎಂದೂ, ಗಂಡಸರ ಹೆಸರುಗಳನ್ನು ರಮೇಶ್, ಗಣೇಶ್, ಸಂತೋಷ್, ರಾಜೇಶ್ ಎಂದೂ ಬರೆಯುತ್ತಾರೆ. ಅಂದರೆ ಇಂಗ್ಲೀಷ್ ಭಾಷೆಯಲ್ಲಿ ಮೊದಲು ಹೆಸರುಗಳನ್ನು ಬರೆದುಕೊಂಡು, ನಂತರ ಕನ್ನಡಕ್ಕೆ ಭಾಷಾಂತರ ಮಾಡಿದಂತೆ ಕಾಣಿಸುತ್ತವೆ, ಈ ಹೆಸರುಗಳು. ಇದು ಕನ್ನಡ ಭಾಷೆ ಬೆಳೆಯುತ್ತಿರುವ ಸಂಕೇತವೋ ಅಥವಾ ವಿನಾಶದತ್ತ ಹೊರಟಿರುವ ಸಂಕೇತವೋ ಎನ್ನುವುದನ್ನು ಕನ್ನಡ ಪಂಡಿತರೇ ಉತ್ತರಿಸಬೇಕು.  

ಕನ್ನಡದಲ್ಲಿ ಸ್ಪೆಲ್ಲಿಂಗ್:

ಇಂಗ್ಲೀಷಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗುವಂತೆ ಕನ್ನಡದಲ್ಲಿ ಕಾಗುಣಿತ ದೋಷಗಳು ಆಗುತ್ತವೆ. ಅದನ್ನು ಅಮೇರಿಕದಲ್ಲಿ ನೆಲೆಸಿರುವ ಕನ್ನಡದ ಹೆಸರಾಂತ ಅಂಕಣಕಾರರಾದ ಶ್ರೀವತ್ಸ ಜೋಶಿಯವರು ಪ್ರತಿ ವಾರ ತಪ್ಪದೇ ‘ಸ್ವಚ್ಛ ಭಾಷೆ ಅಭಿಯಾನ‘ದಲ್ಲಿ ಬರೆದು ವಾಟ್ಸ್ಯಾಪ್ ಮಾಡುತ್ತಾರೆ, ಫೇಸ್ಬುಕ್ಕಿನಲ್ಲಿ ಬರೆಯುತ್ತಾರೆ. ನಾನು ಈಗ ಬರೆಯುತ್ತಿರುವುದು ಕಾಗುಣಿತ ದೋಷದ ಬಗ್ಗೆ ಅಲ್ಲ. ಕನ್ನಡದಲ್ಲಿ ಪ್ರತಿ ಶಬ್ದಕ್ಕೂ ಇರುವ ನಿಖರವಾದ ಸ್ಪೆಲಿಂಗ್ ಇರುವ ಬಗ್ಗೆ. ಏನು ಎನ್ನುವುದನ್ನು ಸ್ವಲ್ಪ ವಿವರಿಸುತ್ತೇನೆ.

‘ಅಂಚೆ‘ಯನ್ನು ‘ಅಞ್ಚೆ‘ ಎಂದೂ ಬರೆಯಬಹುದು. ನಿಜವಾಗಿ ನೋಡಿದರೆ ನಾನು ‘ಅಂಚೆ‘ಯನ್ನು ಉಚ್ಚಾರ ಮಾಡುವುದು ‘ಅಞ್ಚೆ‘ ಎಂದೇ.  ‘ಮಂಗ‘ನನ್ನು ‘ಮಙ್ಗ‘ ಎಂದು ಉಚ್ಚಾರ ಮಾಡುತ್ತೇವೆ, ಆದರೆ ‘ಮಂಗ‘ ಎಂದು ಬರೆಯುತ್ತೇವೆ. ಆದರೆ ‘ಅಂಚೆ‘, ‘ಮಂಗ‘ ಎಂದು ಬರೆದರೆ ಮಾತ್ರ ಓದುವವರಿಗೆ ಅರ್ಥವಾಗುತ್ತದೆ.  ‘ಅಞ್ಚೆ‘ ಅಥವಾ ‘ಮಙ್ಗ‘ ಎಂದು ಬರೆದರೆ ಎಂಥ ಕನ್ನಡ ಓದುಗನೂ ತಬ್ಬಿಬ್ಬಾಗುವುದು ಸಹಜ. ‘ನಿನ್ನನ್ನು‘ ಎನ್ನುವುದನ್ನು ‘ನಿಂನಂನು‘ ಎಂದು ಕೂಡ ಬರೆಯಬಹುದು, ಓದುವುದರಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ, ಆದರೆ ಅದು ತಪ್ಪು ಸ್ಪೆಲ್ಲಿಂಗ್ ಆಗುತ್ತದೆ. ಏಕೆಂದರೆ ರೂಢಿಯಲ್ಲಿ ಇರುವುದು ‘ನಿನ್ನನ್ನು‘ ಎಂದು. ‘ವಿಪರ್ಯಾಸ‘ವನ್ನು ‘ವಿಪರ‍್ಯಾಸ‘ ಎಂದೂ ಬರೆಯಬಹುದು, ಆದರೆ ಅದು ರೂಢಿಯಲ್ಲಿ ಇಲ್ಲದಿರುವುದರಿಂದ ತಪ್ಪು ಸ್ಪೆಲಿಂಗ್ ಆಗುತ್ತದೆ. ಬೀಚಿಯವರು ‘ತಿಮ್ಮ‘ನನ್ನು ‘ತಿಂಮ‘ ಎಂದು ಬರೆಯುತ್ತಿದ್ದರು, ಈಗ ‘ತಿಮ್ಮ‘ ಅದರ ಸರಿಯಾದ ಸ್ಪೆಲಿಂಗ್ ಆಗಿದೆ. .  

ಒಂದೇ ಶಬ್ದವನ್ನು ಸರಿಯಾಗಿಯೇ ಬೇರೆ ಬೇರೆ ರೀತಿಯಲ್ಲಿ ಬರೆಯಲು ಸಾಧ್ಯವಿದ್ದರೂ, ನಮಗೆ ಗೊತ್ತಿಲ್ಲದಂತೆಯೇ ಕನ್ನಡದಲ್ಲಿ ಕನ್ನಡ ಶಬ್ದಗಳ ಸ್ಪೆಲಿಂಗ್ ಇದೆ. ‘ತಂದೆ‘ಯನ್ನು ‘ತನ್ದೆ‘ ಎಂದು ಬರೆದರೆ ಅದು ‘ತಂದೆ‘ಯ ತಪ್ಪು ಸ್ಪೆಲಿಂಗ್ ಆಗುತ್ತದೆ. 

ಇದನ್ನೆಲ್ಲ ಏಕೆ ಬರೆಯುತ್ತಿದ್ದೇನೆ ಎಂದರೆ, ನಾವು ಇತ್ತೀಚೆಗೆ ಬಹಳಷ್ಟು ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೇವಷ್ಟೇ. ಆದರೆ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ  ಎರಡು ಅಥವಾ ಮೂರು ಒತ್ತಕ್ಷರಗಳು ಬರುತ್ತವೆ, ಅದನ್ನು ಹಾಗೆಯೇ ಬರೆದರೆ ಓದುವವರಿಗೆ ಕಷ್ಟವಾಗುತ್ತದೆ, ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಏಕರೂಪವನ್ನು ತರುವ ಅವಶ್ಯಕತೆ ಇದೆ, ಇಲ್ಲದಿದ್ದರೆ ಒಬ್ಬಬ್ಬರೂ ಒಂದೊಂದು ರೀತಿ ಬರೆಯುತ್ತಾರೆ. 

ಉದಾಹರಣೆಗೆ, ‘ಸಾಫ್ಟ್ವೇರ್‘ ಎಂದು ಬರೆಯುವ ಬದಲು ‘ಸಾಫ್ಟ್‌ವೇರ್‘ ಎಂದು ಬರೆದರೆ ಓದುವುದು ಸುಲಭ.“ಹಾರ್ಡ್ವೇರ್‘ ಎಂದು ಬರೆಯುವ ಬದಲು ‘ಹಾರ್ಡ್‌ವೇರ್‘ ಎಂದು ಬರೆದರೆ ಆರ್ಥಮಾಡಿಕೊಳ್ಳುವುದು ಸುಲಭ. ನಾನು ಈಗ ನೆಲೆಸಿರುವ ‘ಬರ್ಮಿಂಗ್ಹ್ಯಾಮ್‘ ನಗರವನ್ನು ‘ಬರ್ಮಿಂಗ್‍ಹ್ಯಾಮ್‘ ಎಂದು ಬರೆದರೆ ಓದುವವರಿಗೆ ಸುಲಭ. ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಸ್ಟ್ಯಾಂಡರ್ಡಾಜೇಶನ್ (ಸ್ಟ್ಯಾಂಡರ್ಡೈಜೇಷನ್) ಮಾಡುವ ಅವಶ್ಯಕತೆ ಇದೆ. 

ಕನ್ನಡದ ಅಕ್ಷರಗಳು:

ನಾನು ಶಾಲೆಯಲ್ಲಿ ಓದುವಾಗ ಕನ್ನಡದ ಅಕ್ಷರಮಾಲೆಯಲ್ಲಿ ಒಂದು ಅಕ್ಷರವಿತ್ತು (ಈಗಲೂ ಇದೆಯೋ ಇಲ್ಲವೋ ಗೊತ್ತಿಲ್ಲ), ಆದರೆ ಅದನ್ನು ಇದುವರೆಗೂ ಉಪಯೋಗಿಸಿದ ನೆನಪೇ ಇಲ್ಲ. ಆ ಅಕ್ಷರವೇ ‘ೠ‘. ಅನುನಾಸಿಕಗಳಾದ ಙ ಮತ್ತು ಞ ಗಳ ಉಪಯೋಗಗಳೂ ವಿರಳವೇ ಆದರೂ ‘ಅಂಚೆ‘, ‘ಮಂಗ‘ ಶಬ್ದಗಳ ಉಚ್ಚಾರವನ್ನು ಹೇಳಿಕೊಡಲು ಉಪಯುಕ್ತವಾಗಿವೆ. ಕೆಲವು ಅಕ್ಷರಗಳು ಕನ್ನಡದಲ್ಲಿ ಇದ್ದವು, ಅವು ಪೂರ್ತಿ ಮರೆಯಾಗಿವೆ. ಉದಾಹರಣೆಗೆ: ಱ ಮತ್ತು ೞ. ಈ ಅಕ್ಷರಗಳನ್ನು ಉಪಯೋಗಿಸಿ ಕನ್ನಡದಲ್ಲಿ ಈಗ ಯಾವ ಶಬ್ದಗಳೂ ಉಳಿದಿಲ್ಲ, ಅವುಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಕೂಡ ಕನ್ನಡಿಗರು ಮರೆತಾಗಿದೆ. ಹೀಗೆ ಕೆಲವು ಅಕ್ಷರಗಳು ಮರೆಯಾಗಿವೆ, ಕೆಲವು ಅನುಪಯುಕ್ತವಾಗಿವೆ. 

ಈಗಿರುವ ಕನ್ನಡದ ಅಕ್ಷರಗಳಿಂದ ದಿನ ನಿತ್ಯ ಉಪಯೋಗಿಸುವ ಕೆಲವು ಶಬ್ದಗಳ ಉಚ್ಚಾರಗಳನ್ನು ತರುವುದು ಕಷ್ಟವಾಗುತ್ತದೆ. ಅದರಲ್ಲೂ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬಳಸುವಾಗ, ಕನ್ನಡದ ಅಕ್ಷರಗಳನ್ನು ಬಳಸಿ ಆ ಉಚ್ಚಾರಗಳನ್ನು ತರುವುದು ಸಾಧ್ಯವಾಗುವುವಿಲ್ಲ.

ಉದಾಹರಣೆಗೆ: ‘loss‘ ಶಬ್ದವನ್ನು ‘ಲಾಸ್‘ ಎಂದು ಬರೆದರೆ ಅದರ ಮೂಲ ಉಚ್ಚಾರ ಅದರಲ್ಲಿ ಬರುವುದಿಲ್ಲ. ನಾನು ಚಿಕ್ಕವನಿದ್ದಾಗ ‘ಲಾ‘ ದ ಮೇಲೆ ‘ಅರ್ಧ ಚಂದ್ರಾಕಾರ (U)‘ ಹಾಕಿ ‘loss’ನಲ್ಲಿರುವ ‘ಆ‘ ಉಚ್ಚಾರವನ್ನು ತರುತ್ತಿದ್ದೆವು. ಆದರೆ ಈ ಅರ್ಧಚಂದ್ರಾಕರಾದ ಪ್ರಯೋಗವನ್ನು ನಾನು ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ನೋಡಿದ ನೆನಪಿಲ್ಲ. 

ಹಾಗೆಯೇ ‘Apple‘ ಶಬ್ದವನ್ನು“ಆ್ಯಪಲ್‘ ಎಂದು ಬರೆದರೆ ಓದಲು ಸುಲಭ, ‘ಆಪಲ್‘ ಎಂದೋ ‘ಯಾಪಲ್‘ ಎಂದೋ ಬರೆದರೆ ‘Apple’ ಎಂದು ಉಚ್ಚಾರ ಮಾಡುವುದು ಕಷ್ಟ. ಆದರೆ ಈ ‘ಆ್ಯ‘ ಎನ್ನುವ ಶಬ್ದ ಕನ್ನಡದ ವ್ಯಾಕರಣದ ಮಟ್ಟಿಗೆ ನಿಷಿದ್ಧ. 

‘ಫ‘ ಮತ್ತು ‘ಜ‘ ಅಕ್ಷರಗಳನ್ನು ಸ್ವಲ್ಪ ಬದಲಾಯಿಸಿ ‘ಫ಼‘ ಮತ್ತು ‘ಜ಼‘ ಎಂದಾಗಿಸಿ ‘fool‘ ಮತ್ತು ‘zoom‘ ಗಳನ್ನು ಸರಿಯಾಗಿ ಕನ್ನಡದಲ್ಲಿ ಬರೆಯಬಹುದು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರುವ ವಿಚಾರವೇ. ಆದರೆ ಈ ಅಕ್ಷರಗಳ ಬಳಕೆಯನ್ನು ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ ನಾನು ನೋಡಿಲ್ಲ. 

ಱ ಮತ್ತು ೞ ಅಕ್ಷರಗಳನ್ನು ಕನ್ನಡದ ಅಕ್ಷರಮಾಲೆಯಿಂದ ಅಧೀಕೃತವಾಗಿ ಕೈಬಿಟ್ಟಂತೆ, ಫ಼ ಮತ್ತು ಜ಼ ಅಕ್ಷರಗಳನ್ನು ಅಧೀಕೃತವಾಗಿ ಸೇರಿಸಬೇಕಾದ ಅವಶ್ಯಕತೆ ಇದೆಯೇ ಅನ್ನುವುದನ್ನು ತಜ್ಞರು ನೋಡಬೇಕು. ಹಾಗೆಯೇ ‘ಆ್ಯ‘ ಉಪಯೋಗಕ್ಕೆ ಮನ್ನಣೆ ಕೊಡಬೇಕು. ಅಕ್ಷರಗಳ ಮೇಲೆ ಅರ್ಧ ಚಂದ್ರಾಕಾರ(U)ವನ್ನು ಅರೆಸ್ವರವಾಗಿ ಕನ್ನಡದಲ್ಲಿ ಸೇರಿಸಬೇಕು ಎನ್ನುವುದು ನನ್ನ ಅನಿಸಿಕೆ. . 

ಕನ್ನಡದ ಅಂಕಿಗಳು:

ಕನ್ನಡದ ಯಾವುದೇ ಪತ್ರಿಕೆ ತೆಗೆದುಕೊಂಡರೂ, ಯಾವುದೇ ಟಿವಿ ಚಾನೆಲ್ ತೆರೆದರೂ ಅಂಕಿಗಳನ್ನು ಕನ್ನಡದಲ್ಲಿ ಬರೆಯದೇ ಹಿಂದೂ-ಅರೇಬಿಕ್‍ನಲ್ಲಿ ಬರೆಯುತ್ತಾರೆ. ನಾನು ಚಿಕ್ಕವನಿದ್ದಾಗ ಎಲ್ಲ ಪತ್ರಿಕೆಗಳೂ ಕನ್ನಡದಲ್ಲೇ ಅಂಕಿಗಳನ್ನು ಪ್ರಕಟಿಸುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಈ ಬದಲಾವಣೆಯಾಗಿದೆ. ಬರೆಯುವಾಗ ಕನ್ನಡದ ಶಬ್ದಗಳಂತೆ ಚಂದವಾಗಿ ಕಾಣುತ್ತಿದ್ದ ಕನ್ನಡದ ಅಂಕಿಗಳು ಶಾಶ್ವತವಾಗಿ ಸತ್ತು ಹೋಗಿರುವುದನ್ನು ನೋಡಿದರೆ ನನ್ನ ಪೀಳಿಗೆಯವರಿಗಾದರೂ ನೋವಾಗದೇ ಇರದು. 

ಲ್ಯಾಟಿನ್ (ರೋಮನ್) ಲಿಪಿಯಲ್ಲಿ ಕನ್ನಡ:

ಕನ್ನಡದ ಅಂಕಿಗಳನ್ನು ಹಿಂದೂ-ಅರೇಬಿಕ್ ಅಂಕಿಗಳು ನಿರ್ನಾಮ ಮಾಡಿದಂತೆ, ಕನ್ನಡದ ಲಿಪಿಯನ್ನು ಲ್ಯಾಟಿನ್/ರೋಮನ್ ಲಿಪಿ ನಿರ್ನಾಮ ಮಾಡುವ ನಿಟ್ಟಿನಲ್ಲಿ ಅಂಬೆಗಾಲಿಡುತ್ತಿದೆ.   

ಇತ್ತೀಚಿನ ವರ್ಷಗಳಲ್ಲಿ ಯುಟ್ಯೂಬಿನಲ್ಲಿ ಹಾಡುಗಳ ‘ಲಿರಿಕಲ್ ವಿಡಿಯೋ‘ಗಳನ್ನು ಬಿಡುತ್ತಾರೆ. ಹೆಚ್ಚು ಕಡಿಮೆ ಎಲ್ಲ ಕನ್ನಡ ಹಾಡುಗಳ ಬರವಣಿಗೆ ಲ್ಯಾಟಿನ್ ಲಿಪಿಯಲ್ಲಿಯೇ ಇರುತ್ತವೆ. ಇದು ಬರೀ ಕನ್ನಡದಲ್ಲಿ ಆಗಿರುವ ಬದಲಾವಣೆಯಲ್ಲ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಹಾಡಿನ ಸಾಹಿತ್ಯವನ್ನು ಲ್ಯಾಟಿನ್ನಿನಲ್ಲೇ ಬರೆಯುತ್ತಾರೆ. ಹಾಗೆಯೇ ಬಹಳಷ್ಟು ಕನ್ನಡಿಗರು ವಾಟ್ಸ್ಯಾಪ್ ಮಾಡುವಾಗ, ಮೆಸೇಜುಗಳನ್ನು ಕಳಿಸುವಾಗ ಕನ್ನಡವನ್ನು ಕನ್ನಡದಲ್ಲಿ ಬರೆಯದೇ ಲ್ಯಾಟಿನ್ ಲಿಪಿಯಲ್ಲಿ ಬರೆಯುವುದೇ ಹೆಚ್ಚು. ಕನ್ನಡ ಭಾಷೆಯನ್ನು ಲ್ಯಾಟಿನ್ ಲಿಪಿಯಲ್ಲಿ ಬರೆದರೆ ಮಾತ್ರ ಓದಬಲ್ಲ ಕನ್ನಡಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರೆದರೆ ಕನ್ನಡದ ಲಿಪಿಯನ್ನು ಓದುವ ಮತ್ತು ಬರೆಯುವ ಜನರು ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುತ್ತಾರೆ ಅನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ.