ಯಕ್ಷಗಾನ ‘ಪ್ರಸಂಗ’ದಲ್ಲಿ ಸಾಮಾಜಿಕ ಸಮಸ್ಯೆಗಳು – ರಾಮ್

ಯಕ್ಷಗಾನ ದಕ್ಷಿಣೋತ್ತರ ಜಿಲ್ಲೆಗಳ ಜನರ ನರನಾಡಿಗಳಲ್ಲಿ ಹರಿಯುವ ನೆತ್ತರು. ‘ಆಟ’ ಎಂದರೆ ಯಕ್ಷಗಾನ; ‘ಪ್ರಸಂಗ’- ಆಟದ ಕಥೆ; ತಂಡವೇ ಮೇಳ. ಬೆಳೆಯುವಾಗ ಆಟ ಕುಣಿಯದ ಚಿಣ್ಣರು ನನ್ನ ಬಾಲ್ಯದ ದಿನಗಳಲ್ಲಿರಲಿಲ್ಲ. ರಾತ್ರಿಯಿಡೀ ಕುಳಿತು, ಮಲಗಿ, ನೋಡುತ್ತಿದ್ದ ಆಟ ನಮಗೊಂದು ಥರ ಮಾಟ ಮಾಡಿತ್ತು. ಆ ಅಮಲು ಇಂದೂ ಇಳಿದಿಲ್ಲ. ಕಾಲಕ್ಕೆ ತಕ್ಕಂತೆ ಈಗ ಆಟದ ಅವಧಿ ಪಟ್ಟಣಗಳಲ್ಲಿ 2-3 ತಾಸಿಗೆ ಇಳಿದಿದೆ. ಮೊನ್ನೆ ಊರಿಗೆ ಹೋದಾಗ ಆಟ ನೋಡುವ ಅವಕಾಶ ಸಿಕ್ಕಿತು. ಹೆಕ್ಮೇಳ ಅಂದರೆ ಆರಿಸಿದ ಕಲಾವಿದರ ತಂಡ – hand picked ಅಂತಾರಲ್ಲ, ಹಾಗೆ. ಪ್ರಮುಖ ಪಾತ್ರದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ (ನುರಿತ ಹಿರಿಯ ಕಲಾವಿದ) ಹಾಗೂ ಸ್ತ್ರೀವೇಷದಲ್ಲಿ ನೀಲ್ಕೋಡು ಶಂಕರ ಹೆಗಡೆ (ಭಾವಪೂರ್ಣ ಹಾಗೂ ಅನನ್ಯ ನೃತ್ಯ ಶೈಲಿಗೆ ಪ್ರಸಿದ್ಧ)ಯವರಿದ್ದಾಗ ಸಿಕ್ಕ ಚಾನ್ಸ್ ಬಿಡಲಾದೀತೇ?

ಪ್ರಸಂಗಗಳು  ಪೌರಾಣಿಕ ಕಥೆಗಳನ್ನು ಅವಲಂಬಿಸಿರುವುದೇ ಜಾಸ್ತಿ. ರಾಮಾಯಣ, ಮಹಾಭಾರತಗಳ ಉಪಕಥೆಗಳು ಸಾಮಾನ್ಯ. ‘ಮಾಗದ ವಧೆ’, ‘ರುಕ್ಮಾಂಗದ ಚರಿತೆ’  ಅಥವಾ ‘ಕೀಚಕ ವಧೆ’ ಕೆಲವು ಚಿರಪರಿಚಿತ ಪ್ರಸಂಗಗಳು. ಚಂದಮಾಮದ ಕಥೆಗಳೂ ಪ್ರಸಂಗಗಳಾಗಿವೆ. ನಾನು ನೋಡಿದ ಪ್ರಸಂಗ, ‘ರಾಜಾ ಉಗ್ರಸೇನ’. ನನಗೆ ಈ ಕಥೆಯ ತುದಿ ಬುಡ ಗೊತ್ತಿರಲಿಲ್ಲ. ಯಾವುದೋ ಅಡುಗೂಲಜ್ಜಿ ಕಥೆಯಂತಿತ್ತು ಈ ಶೀರ್ಷಿಕೆ. ಇದರಲ್ಲೇನಿದೆ ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣೆ ಎಂದು ನೀವು ಪ್ರಶ್ನಿಸಿದರೆ ಆಶ್ಚರ್ಯವೇನಿಲ್ಲ. ಮೊದಲು ಕಥೆ ಕೇಳಿ.

IMG_8308
ವಸಂತಾಗಮನವನ್ನು ಆನಂದಿಸುವ ವೃಷಸೇನೆ

ಒಂದಾನೊಂದು ಕಾಲದಲ್ಲಿ ಒಂದೂರು. ಅಲ್ಲಿಯ ರಾಜ ಉಗ್ರಸೇನ. ಅವನ ಪಟ್ಟದರಸಿ ವೃಷಸೇನೆ. ರಾಜನಿಗೆ ಸುಮಾರು ಮಧ್ಯಮ ವಯಸ್ಸು. ರಾಣಿ ಇನ್ನೂ ಯುವತಿ.  ಇಬ್ಬರಿಗೂ ಮಕ್ಕಳಿಲ್ಲ. ಈ ನೋವು ರಾಣಿಯನ್ನು ಕಾಡುತ್ತಿದೆ. ಆಗಷ್ಟೇ ವಸಂತ ಕಾಲಿಡುತ್ತಿದ್ದಾನೆ. ಎಲ್ಲೆಲ್ಲೂ ಚಿಗುರೊಡೆದು ಮರಗಿಡಗಳು ನವಯೌವ್ವನ ಪಡೆದಿವೆ; ಗಿಳಿಗೊರವಂಕಗಳ ಸಂಗೀತ ಎಲ್ಲೆಡೆ ಪಸರಿಸಿ ನೋವೋತ್ಸಾಹವನ್ನು ತುಂಬುತ್ತಿದೆ. ವೃಷಸೇನೆಗೆ ತಾಯ್ತನದ ಆಸೆ ಉಕ್ಕುತ್ತಿದೆ. ಆಕೆ ರಾಜನನ್ನು ವನ ವಿಹಾರಕ್ಕೆ ಆಹ್ವಾನಿಸುತ್ತಾಳೆ. ರಾಜನಲ್ಲಿ ಯಾವುದೇ ಉಲ್ಲಾಸವಿಲ್ಲ. ರಾಜ್ಯಭಾರದ ನೆವ ಹೇಳಿ, ಸಖಿಯರೊಡನೆ ಜಲಕ್ರೀಡೆಯಾಡಲು ಕಳಿಸಿ, ಸಂಜೆಯಾಗುವುದರಲ್ಲಿ ಬಂದು ಕೂಡುವೆನೆಂದೂ ಭರವಸೆ ನೀಡುತ್ತಾನೆ.

ಅದೇ ಸಮಯದಲ್ಲಿ ಕಾಡಿನಲ್ಲಿ ರಕ್ಕಸನೊಬ್ಬ ಹಸಿವೆಯಿಂದ ಚಡಪಡಿಸುತ್ತಾ ಆಹಾರದ ಹೊಂಚು IMG_8281ಹಾಕುತ್ತಿರುತ್ತಾನೆ. ಅವನ ಕೈಗೆ ಪ್ರಪಂಚ ಪರ್ಯಟನೆಗೆ ಹೋರಟ ನಾರದರು ಸಿಕ್ಕಿಬೀಳುತ್ತಾರೆ. ತಿನ್ನಲು ಬಂದ ರಾಕ್ಷಸನ ಹಸಿವೆಯನ್ನು ಮಂತ್ರ ಶಕ್ತಿಯಿಂದ ಪರಿಹರಿಸುತ್ತ, ಋಷಿಯೊಬ್ಬನ ಶಾಪಕ್ಕೊಳಗಾಗಿ ಅಸುರನಾಗಿರುವ ಯಕ್ಷ ನೀನು ಎಂಬ ಕಥೆಯನ್ನೂ ಹೇಳುತ್ತಾರೆ. ನೀನು ಸ್ತ್ರೀಯೊಬ್ಬಳನ್ನು ಕೂಡಿ, ಗರ್ಭದಾನ ಮಾಡಿ ಅದೇ ಸ್ತ್ರೀಯ ಪತಿಯಿಂದ ಹತನಾದರೆ ಮಾತ್ರ ನಿನಗೆ ಶಾಪ ಮುಕ್ತಿ ಎಂಬ ಪರಿಹಾರವನ್ನು ತಿಳಿಸುತ್ತಾರೆ. ರಾಕ್ಷಸ ಶಾಪ ಮುಕ್ತಿಯ ಹಾದಿ ಹುಡುಕುತ್ತ ಸಾಗುತ್ತಾನೆ.

ರಾಜನ ಅಸಡ್ಡೆಯಿಂದ ನೊಂದ ರಾಣಿ ಅರಣ್ಯದಲ್ಲಿ ವಿಹರಿಸುತ್ತಿರುವಾಗ, ಮುದಿ ಬ್ರಾಹ್ಮಣನೊಬ್ಬ IMG_8347ಎದುರಾಗುತ್ತಾನೆ. ಉಭಯಕುಶಲೋಪರಿಯ ಬಳಿಕ ಮಾತು ಮುಂದುವರೆಯುತ್ತ, ವೃಷಸೇನೆ ಮನದಿಚ್ಛೆ, ದುಗುಡ-ದುಮ್ಮಾನಗಳನ್ನು ಅಪರಿಚಿತನೆದುರು ಬಿಚ್ಚಿಡುತ್ತಾಳೆ. ಬ್ರಾಹ್ಮಣ ಅವಳಿಗೆ ಸಮಾಧಾನ ಹೇಳಿ, ಆಶೀರ್ವದಿಸಿ ತನ್ನ ದಾರಿ ಹಿಡಿದು ಹೋಗುತ್ತಾನೆ. ಅಂತೆಯೇ ಅಲ್ಲಿಗೆ ಉಗ್ರಸೇನ ಆಗಮಿಸುತ್ತಾನೆ.  ವೃಷಸೇನೆಗೆ ಆನಂದಾಶ್ಚರ್ಯ! ನಿರೀಕ್ಷೆಗಿಂತ ಮೊದಲೇ ಬಂದ ಗಂಡನನ್ನು ಕಂಡ ಆಕೆಯ ಸಂತೋಷಕ್ಕೆ ಮೇರೆಯೇ ಇರುವುದಿಲ್ಲ. ರಾಜ ಪ್ರವೇಶಿಸುತ್ತಿದ್ದಂತೇ ಅವರ ಏಕಾಂತಕ್ಕೆ ಧಕ್ಕೆ ಬರದಿರಲೆಂದು ಸಖಿಯರು ಅರಮನೆಗೆ ತೆರಳುತ್ತಾರೆ. ಮೈಮರೆತ ವೃಷಸೇನೆ, ರಾಜನನ್ನು ಬಲು ಸಂಭ್ರಮದಿಂದ ಕೂಡುತ್ತಾಳೆ.

ರಾಸಕ್ರಿಯೆ ಮುಗಿದಂತೇ, ಉಗ್ರಸೇನನ ರೂಪದಲ್ಲಿದ್ದ ರಾಕ್ಷಸ ನಿಜ ರೂಪ ತೋರಿಸುತ್ತಾನೆ. ಪತಿಯ ವೇಷದಲ್ಲಿ ಬಂದವನ ಜೊತೆ ಮೋಸ ಹೋದೆನಲ್ಲ ಎಂಬ ಹತಾಶೆ ವೃಷಸೇನೆಗೆ ಒಂದೆಡೆ; ತನ್ನ ಅಸಹಾಯಕತೆಯ  ಬಳಸಿಕೊಂಡನಲ್ಲ ಎಂಬ ಕ್ರೋಧ ಇನ್ನೊಂದೆಡೆ. ದುಃಖ-ಕ್ರೋಧಗಳ ಉನ್ಮಾದದಲ್ಲಿ IMG_8321ಆಕೆ ಮೂರ್ಛೆ ಹೋಗುತ್ತಾಳೆ. ತಾನು ಮಾಡಿದ ಪ್ರಮಾದದ ಅರಿವೂ ಇಲ್ಲದ ರಾಕ್ಷಸನೋ ತನ್ನ ಕಾರ್ಯವಾದ ಸಂತಸದಲ್ಲಿ ಬೀಗುತ್ತ ವಿಶ್ರಮಿಸುತ್ತಾನೆ. ಅತ್ತ, ಅರಮನೆಗೆ ತೆರಳಿದ ಸಖಿಯರಿಗೆ ದಿಗ್ಭ್ರಾಂತಿ ; ತಾವು ಕಾಡಿನಲ್ಲಿ ಕಂಡ ಅರಸ ಅರಮನೆಯಲ್ಲೇ ಇದ್ದಾನೆ! ವೃತ್ತಾಂತ ಕೇಳಿದ ಉಗ್ರಸೇನ ನಖಶಿಖಾಂತ ಕೋಪದಿಂದ ಕುದಿಯುತ್ತ ಅರಣ್ಯಕ್ಕೆ ಧಾವಿಸುತ್ತಾನೆ. ಹಮ್ಮಿನಲ್ಲಿ ಕುಳಿತ ದುರುಳನ ಕತ್ತನ್ನು ‘ಖಚಕ್’ ಎಂದು ಕತ್ತರಿಸುತ್ತಾನೆ. ಸ್ಮೃತಿ ಬಂದ ವೃಷಸೇನೆ, ಗಂಡನಿಗೆ ಆದ ಕಥೆಯನ್ನೆಲ್ಲ ಹೇಳಿ, ತಿಳಿಯದೇ ಆದ ತಪ್ಪನು ಮನ್ನಿಸೆನೆಂದು ಗೋಗರೆಯುತ್ತಾಳೆ. ಉಗ್ರಸೇನನಿಗೆ ಉಭಯಸಂಕಟ. ಆತ ವೃಷಸೇನೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರೂ, ಸಮಾಜದ ಕೊಂಕುನೋಟವನ್ನು ಎದುರಿಸಲಾರೆನಲ್ಲ ಎಂದು ಅಲವತ್ತುಕೊಳ್ಳುತ್ತಾನೆ. ಬೇರೆ ದಾರಿ ಕಾಣದೇ  ವೃಷಸೇನೆ ಇನ್ನೇನು ಆತ್ಮಹತ್ಯೆಯ ಮೊರೆಹೋಗಬೇಕೆನ್ನುವಾಗ, ನಾರದರು ಪ್ರತ್ಯಕ್ಷರಾಗುತ್ತಾರೆ. ಇಬ್ಬರಿಗೂ ಬುದ್ಧಿ ಹೇಳಿ, ದಂಪತಿಗಳನ್ನು ಒಂದು ಮಾಡಿ ಮಂಗಳ ಹಾಡುತ್ತಾರೆ.

ಹೌದು, ಇದೊಂದು ಅಡಗೂಲಜ್ಜಿ ಕಥೆಯೇ ಸರಿ. ಅಪ್ರತಿಮ ಕಲಾವಿದರ ಅಭಿನಯ ನಮ್ಮನು ತಾಸೆರಡು ತಾಸು ಮೈಮರೆಸಿತ್ತು. ಹಾಗೇ  ಮೆಲಕು ಹಾಕಿದಾಗ, ಪ್ರತಿ ಮಜಲಿನಲ್ಲಿ ಈ ಕಥೆ ಜೀವನದ ಮೌಲ್ಯಗಳನ್ನು ತೆರೆದಿಡುತ್ತ ಹೋಗುವುದು ಭಾಸವಾಗುತ್ತದೆ. ಇಲ್ಲೊಬ್ಬ ಮಧ್ಯ ವಯಸ್ಸಿನ ಪುರುಷ, ಆತನ ಮಡದಿ ಇನ್ನೂ ತರುಣಿ. ಆತನಿಗೆ ಜೀವನದಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ, ಅದರೊಟ್ಟಿಗೆ ಅವನಿಗೆ ಹಲವು ಸ್ತ್ರೀಯರ ಸಂಪರ್ಕವೂ ಇದೆ ಎಂದು ಸೂಕ್ಷ್ಮವಾಗಿ ಅರಹುತ್ತಾನೆ. ಇದು ತಲತಲಾಂತರಗಳಿಂದ ನಡೆದು ಬಂದಿರುವ ಶೋಷಣೆಯ ಪ್ರತಿಬಿಂಬ. ಉಗ್ರಸೇನ, ವೃಷಸೇನೆಯ ಬಯಕೆಗಳನ್ನು ಪತಿಯಾಗಿ ಪೂರ್ತಿಗೊಳಿಸಲಾರ; ಆದರೆ ಆಕೆಗೆ ಅವನ್ನು ಬಯಸುವ ಹಕ್ಕಿಲ್ಲ. ತಿಳಿಯದೇ ತಪ್ಪು ಮಾಡಿ, ಪ್ರಾಯಶ್ಚಿತ್ತ ಅನುಭವಿಸಿದರೂ, ಕ್ಷಮಿಸಿ ಮಡದಿಯನ್ನು ಸಂತೈಸುವ ಉದಾರ ಮನೋಭಾವ ಆತ ತೋರಲಾರ. ಇದೇನು ವಿರೋಧಾಭಾಸ? ಶತಮಾನಗಳು ಉರುಳಿದರೂ  ಅಂದಿಗೂ-ಇಂದಿಗೂ ಯಾವ ವ್ಯತ್ಯಾಸವೂ ಇಲ್ಲ.

ಅವಕಾಶವಾದಿಗಳು ಸದಾಕಾಲ ನಮ್ಮ ಸುತ್ತ ಹೊಂಚು ಹಾಕುತ್ತಿರುತ್ತಾರೆ. ಈ ಪ್ರಸಂಗದಲ್ಲಿನ ರಾಕ್ಷಸ ಇದಕ್ಕೆ ಸರಿಯಾದ ಉದಾಹರಣೆ. ತನ್ನ ಮರೆಮಾಚುವಿಕೆಯ ಪರಿಣತಿಯನ್ನು ಬಂಡವಾಳವನ್ನಾಗಿಸಿ, ಬ್ರಾಹ್ಮಣನಾಗಿ ತನಗೆ ಬೇಕಾದ ಮಾಹಿತಿಯನ್ನು ಸಂಗ್ರಹಿಸುತ್ತಾನೆ. ಆಧುನಿಕ ಯುಗದ ಮಾಹಿತಿ ಕಳುವು/ ಕಟಾವು (data theft/harvest) ನಮ್ಮ ಮುಂದೆ ಅನಾವರಣಗೊಳ್ಳುತ್ತದೆ. ಅಂತೆಯೇ ಸಿಕ್ಕ ವಿವರಗಳಿಂದ ಉಗ್ರಸೇನನ ಗುರುತನ್ನೂ ನಕಲಿಸಿ ತನ್ನ ಲಾಭಕ್ಕಾಗಿ ದುರುಪಯೋಗಿಸಿಕೊಳ್ಳುತ್ತಾನೆ.

ಕ್ಷಣಕಾಲದ ಮೈಮರೆವು ವೈಯಕ್ತಿಕ ಹಂತದಲ್ಲಿ ಯಾವ ರೀತಿ ಪ್ರತಿಕೂಲ ಪರಿಣಾಮ ಬೀರಬಲ್ಲದು! ನಮ್ಮ ವೈಯಕ್ತಿಕ ವಿವರಗಳು ರಹಸ್ಯವಷ್ಟೇ ಅಲ್ಲ, ಪವಿತ್ರ ಕೂಡ ಇಂದಿನ ಗಣಕ/ಅಂತರ್ಜಾಲ ಯುಗದಲ್ಲಿ. ಅನಾಮಧೇಯರೊಂದಿಗೆ, ಅಪರಿಚಿತರೊಂದಿಗೆ ಅವನ್ನು ಹಂಚಿಕೊಂಡರೆ ಮುಂದೆರಗುವ ಆಘಾತ ಅದೆಷ್ಟು ಗಂಭೀರ ಎಂದು ಅರಿವಾಗುವುದಲ್ಲವೇ? ದಿನ ನಿತ್ಯ ನಮ್ಮ ಸುತ್ತ ಮುತ್ತ ಹಾಗೂ  ಪ್ರಪಂಚದಾದ್ಯಂತ ನಡೆದ, ನಡೆಯುತ್ತಿರುವ ವಿದ್ಯಮಾನಗಳಿಗೆ, ಮಾಮೂಲಿ ಎನಿಸುವ ಕಥೆ ಎಷ್ಟು ಸರಳವಾಗಿ, ಸುಂದರವಾಗಿ ಕನ್ನಡಿ ಹಿಡಿದಿದೆಯಲ್ಲ! ಸೊಗಸಾದ ಮನೋರಂಜನೆಯೊಂದಿಗೆ, ಜ್ವಲಂತ ಸಮಸ್ಯೆಗಳನ್ನು ಚಿಂತಿಸುವಂತೆ ಮಾಡಿದ ಪ್ರಸಂಗ, ಕಳೆದ ಸಂಜೆಯ ಸಮಯ ಸಾರ್ಥಕವಾಯಿತೆಂಬ ಧನ್ಯತೆ ಮೂಡಿಸಿತ್ತು ಕೊನೆಯಲ್ಲಿ.

ಲೇಖನ, ವಿಡಿಯೋ ಮತ್ತು ಚಿತ್ರಗಳು: ರಾಂಶರಣ್

Video link: https://www.youtube.com/watch?v=P0uwHxLk1Z4&feature=youtu.be

 

ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು: ಒಂದು ಅವಲೋಕನ – ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ

ಈ ಅಕ್ಟೋಬರ್ ಒ೦ದನೆಯ ತಾರೀಖು ”ಅ೦ತರ ರಾಷ್ಟೀಯ ವೃದ್ಧರ ದಿನಾಚರಣೆ’’ ಯೆ೦ದು ಗುರುತಿಸಲಾಗಿದೆ. ಪ್ರಪ೦ಚದಾದ್ಯ೦ತ ವಯಸ್ಸಾದವರ ಸ೦ಖ್ಯೆ ಅತಿ ವೇಗದಲ್ಲಿ ಬೆಳೆಯುತ್ತಿದೆ. ವೃದ್ಧಾಪ್ಯ ಯಾರಿಗೂ ತಪ್ಪಿದ್ದಲ್ಲ. ಜೀವನದ ಈ ಹ೦ತವನ್ನು ಎದುರಿಸುವ ರೀತಿ ಒ೦ದೇ ರೀತಿಯಾಗಿಲ್ಲ. ಇದು ವಯಸ್ಸಾದವರ ಬಗ್ಗೆ ನಮಗಿರುವ ಅಭಿಪ್ರಾಯ, ಸಮಾಜ, ಮತ್ತು ಸ೦ಸ್ಖೃತಿಯನ್ನು ಅವಲ೦ಬಿಸಿದೆ. ಹಿರಿಯರನ್ನು ದೇಶದ ಹಿರಿಮೆಯೆ೦ದು ಗುರುತಿಸಿ,ಗೌರವಿಸುವ ಮನೋಭಾವ ನಮ್ಮಲ್ಲಿ ಮೂಡಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ದೇಶ, ಸಮಾಜ ಮತ್ತು ಹಿರಿಯರೂ ಸಹ ವೈಯುಕ್ತಿಕ ಪ್ರಯತ್ನವನ್ನು ಹೇಗೆ ಮಾಡಬಹುದೆ೦ದು ಡಾ// ಶಿವಪ್ರಸಾದ್ ರವರು ಈ ಲೇಖನದಲ್ಲಿ ನಿಮ್ಮೊ೦ದಿಗೆ ಹ೦ಚಿಕೊ೦ಡಿದ್ದಾರೆ – ಸ೦

ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು:  ಒಂದು ಅವಲೋಕನ

ನಮಗೆ ಕಂಡಂತೆ ಹಲವು ದಶಕಗಳಿಂದ ಸಮಾಜದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಇಂದು ನಮ್ಮ ಹಿರಿಯರು ಹಿಂದಿಗಿಂತ ಹೆಚ್ಚು ಆರೋಗ್ಯವಂತರಾಗಿ ಧೀರ್ಘ ಆಯುಷ್ಯವನ್ನು ಪಡೆದವರಾಗಿದ್ದಾರೆ. ವೈದ್ಯಕೀಯ ಸೌಲಭ್ಯ ಉತ್ತಮವಾದ ಆಹಾರ, ವ್ಯಾಯಾಮದ ಕಡೆ ಗಮನ ಇವುಗಳಿಂದ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಅವಕಾಶವಿದೆ. ಹಾಗೆ ಜಾಗತೀಕರಣ, ಕಂಪ್ಯೂಟರ್ ಗಳ ಬಳಕೆ, ಅಂತರ್ಜಾಲ ನಮ್ಮ ಬದುಕನ್ನು ಸರಳಗೊಳಿಸಿವೆ. ಈ ತೀಕ್ಷ್ಣ ಹಾಗೂ ಕ್ಷಿಪ್ರ ಬದಲಾವಣೆಗಳ ಜೊತೆಗೆ ಹೊಂದಿಕೊಂಡು ಹೊಸ ತಂತ್ರ ಜ್ಞಾನವನ್ನು ಕಲಿಯುತ್ತ ತಮ್ಮ ಬದುಕನ್ನು ಅಳವಡಿಸಿಕೊಳ್ಳುತ್ತಾ ಸಾಗುವುದು ಇವತ್ತಿನ ಹಿರಿಯರಿಗೆ ಒಂದು ಕಷ್ಟವಾದ ಕೆಲಸ. ಈ ತಾಂತ್ರಿಕ ಬೆಳವಣಿಗೆ ಹಿರಿಯರ ಪಾಲಿಗೆ ಒಂದು ದೊಡ್ಡ ಸವಾಲು.

ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು ಎಂಬ ವಿಚಾರದಲ್ಲಿ ನಾವು ಎರಡು ಅಂಶಗಳನ್ನು ಗಮನಿಸಬೇಕು

  1. ವೃದ್ಧರು ಎಂದರೆ ಯಾರು?
  2. ಬದಲಾಗುತ್ತಿರುವ ಸಮಾಜ ಎಂದರೇನು?

ವೃದ್ಧರು ಎಂದರೆ ಯಾರು? ಎಂಬ ಪ್ರಶ್ನೆಗೆ ಸಮಂಜಸವಾದ ಉತ್ತರ ನೀಡಲು ಕಷ್ಟ. ವೃದ್ಧರು ಎಂಬ ಅರ್ಥ ಹಿರಿಯರು, ಮುದುಕರು, ಇಳಿವಯಸ್ಸಿನವರು ಹೀಗೆ ಹಲಾವರು ಹೆಸರುಗಳನ್ನು ಹಾಗೂ ಅದರೊಡನೆ ಮನದಲ್ಲಿ ಮೂಡುವ Images ಅಥವಾ  ಚಿತ್ರಗಳನ್ನು ಸ್ಮರಿಸಬಹುದು. ವೃದ್ಧರು ಎಂದರೆ ಯಾರು? ಎಂಬ ಪ್ರಶ್ನೆಗೆ ಬಹಳ ಸರಳವಾದ ಒಂದು ಅರ್ಥವನ್ನು ಒಬ್ಬ ವ್ಯಕ್ತಿಯ ವಯಸ್ಸಿನ ಮೂಲಕ ಕಾಣಬಹುದು. ಸಾಮಾನ್ಯವಾಗಿ 60 ವರ್ಷ ಮೀರಿದವರನ್ನು ಈ ಗುಂಪಿಗೆ ಸೇರಿಸುವುದು ಸಾಮಾನ್ಯ. ಹಿಂದೆ ಒಂದು ದೇಶದಲ್ಲಿನ ಗಂಡು ಹೆಣ್ಣುಗಳ ಜೀವಮಾನ (life Expectancy) ಆಧಾರಧ ಮೇಲೆ 60 ಮೀರಿದವರನ್ನು ಹಿರಿಯರು ಎಂದು ಕರೆದು ಸರ್ಕಾರ ಒಂದು ನಿವೃತ್ತಿಯ ಗಾಡಿಯನ್ನು ಹಾಕಿರುವುದುಂಟು. ಆದರೆ ಈಗ ಅದೇ ಜೀವಮಾನ ಮೇಲೆ ತಿಳಿಸಿದ ಕಾರಣಗಳಿಂದ ಹಿಗ್ಗಿದೆ. ಪಾಶ್ಚಿಮಾತ್ಯ  ದೇಶಗಳಲ್ಲಿ  ಇಂದು ನಿವೃತ್ತಿಯ ಗಾಡಿಯನ್ನು 65-70 ಕ್ಕೆ ವಿಸ್ತರಿಸಲಾಗಿದೆ. ಹಾಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಒಬ್ಬ ವ್ಯಕ್ತಿ  65-70 ವರ್ಷದಾಟುವ ವರೆಗೆ ಅವರನ್ನು ವೃದ್ಧರು ಎಂದು ಪರಿಗಣಿಸುವ ಸಾಧ್ಯತೆ ಕಡಿಮೆ.

ವೃದ್ಧಾಪ್ಯ ವೆಂಬುದು ಒಂದು ಮನಸ್ಥಿತಿಯೇ ಅಥವಾ ದೈಹಿಕ ಸ್ಥಿತಿಯೇ ಎಂಬ ಪ್ರಶ್ನೆ ಹಲವರಿಗೆ ಮೂಡಬಹುದು. ಪಾಶ್ಚಿಮಾತ್ಯ ದೇಶದಲ್ಲಿ 60-70 ವರ್ಷಗಳನ್ನು ಮೀರಿದವರು ದೇಹವನ್ನು ಅತಿಯಾಗಿ ದಂಡಿಸಿ ಹತ್ತು ಇಪ್ಪತ್ತು ಮೈಲಿಗಳ ಮ್ಯಾರಥಾನ್ ರೇಸ್ ಗಳಲ್ಲಿ ಭಾಗವಹಿಸುವುದು ಸಾಮಾನ್ಯ. ಹಲವು ವರ್ಷಗಳ ಹಿಂದೆ ನಾನು, ನನ್ನ ಪತ್ನಿ ಪೂರ್ಣಿಮಾ ಹಾಗೂ ಹಲವು ಗೆಳೆಯರು ಕೆನಡಾ ದೇಶದ ರಾಕಿ ಪರ್ವತಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ ಒಂದು ಕಡಿದಾದ ಹಿರಿದಾದ ಹಿಮ ಪರ್ವತವನ್ನು ನಡುಗೆಯಲ್ಲಿ ಹತ್ತಿರುವ ಬಗ್ಗೆ ನಮ್ಮನ್ನು ನಾವೇ ಪ್ರಶಂಸಿಸಿ ಕೊಳ್ಳುತ್ತಿರುವಾಗ ಆಕಸ್ಮಿಕವಾಗಿ ಪರ್ವತದ ಮೇಲೆ ಹಿರಿಯ ದಂಪತಿಗಳ ಭೇಟಿಯಾಯಿತು. ಕುಶಲ ಪ್ರಶ್ನೆಗಳನ್ನು ಮಾತಾಡಿ ಮುಗಿಸಿದ ನಂತರ ಅವರು 80 ವರ್ಷ ವಯಸ್ಸಿನವರು ಎಂದು ತಿಳಿದಾಗ ಅಚ್ಚರಿಯಾಯಿತು!

ಸಾಮಾನ್ಯರಲ್ಲಿ ಅದೂ ಭಾರತದಲ್ಲಿ ವೃದ್ಧರು ಎಂದ ಕೂಡಲೇ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರ ವೆಂದರೆ ನೆರತು ಉದುರುವ ಕೂದಲು, ನಡುಗುವ ಕೈಗಳು, ಮಬ್ಬಾದ ಕಣ್ಣುಗಳು, ಅಸಹಾಯಕತೆ ಮತ್ತು ಇತರರ ಮೇಲೆ ಅವಲಂಬನೆ. ಇದು ನಮ್ಮ ಕಲ್ಪನೆ! ಇದನ್ನು ಗಮನಿಸಿದಾಗೆ ಇದರಲ್ಲಿ ಒಂದು Negative Image ಹೆಚ್ಚಾಗಿ ಮೂಡಿ ಬರುತ್ತದ್ದೆ. ಇಂಗ್ಲೆಂಡಿನಲ್ಲಿ ನಮ್ಮ ಆಸ್ಪತ್ರೆಗೆ ಬರುವ ಅಥವಾ ಬಹಿರಂಗ ಸ್ಥಳಗಳಲ್ಲಿ ಕಾಣುವ ವೃದ್ಧರು ಒಳ್ಳೆ ಸೂಟು, ಬೂಟು ಟೈ ಗಳನ್ನು  ಧರಿಸಿ, ಬಹಳ ಸ್ವತಂತ್ರರಾಗಿ ತಲೆಯೆತ್ತಿ ನಡೆಯುತ್ತಾ ಎಲ್ಲರನ್ನು ವಿಚಾರಿಸಿಕೊಳ್ಳುತ್ತ ಒಂದು ಘನತೆಯ ಚಿತ್ರವನ್ನು ನೆನಪಿಗೆ ತರುತ್ತಾರೆ.  ಮುಂದುವರಿದ ದೇಶಗಳಲ್ಲಿ ಹಿರಿಯರು ಒಂದು ದೇಶದ Intellectual ಸಂಪತ್ತು ಎಂದು ಪರಿಗಣಿಸಿದರೆ ಇನ್ನು ಕೆಲವು ದೇಶಗಳಲ್ಲಿ ವೃದ್ಧರು ಸಮಾಜಕ್ಕೆ ಹೊರೆ ಎಂಬ ಮನೋಭಾವ ಇರಬಹುದು. ಭಾರತದಲ್ಲಿ ಹಿರಿಯರ ಬಗ್ಗೆ ಒಂದು ಮಾತಿದೆ: ‘ಕಾಡು ಬಾ ಅನ್ನುತ್ತೆ, ನಾಡು ಹೋಗು ಅನ್ನುತ್ತೆ.’ ಬಹುಶಃ ಇದು ಪುರಾತನ ಕಾಲದಲ್ಲಿ ವಯಸ್ಸಾದವರು ನಾಡನ್ನು ತೊರೆದು ವನಗಳಲ್ಲಿ ನೆಲಸುತ್ತಿದ್ದ  ಒಂದು ಹಿನ್ನೆಲೆಯಲ್ಲಿ ಮೂಡಿ ಬಂದಿರಬಹುದು. ವಯಸ್ಸಿಗೆ ಅನುಗುಣವಾಗಿ ನಡೆದುಕೊಳ್ಳುವುದರಲ್ಲಿ ಅರ್ಥವಿದೆ ಆದರೆ ಬದುಕನ್ನು ಪ್ರೀತಿಸಲು ಯಾವ ವಯಸ್ಸಿನ ಮಿತಿ ಇಲ್ಲ!

ಯುನೈಟೆಡ್ ನೇಷನ್ಸ್ ಹಿರಿಯ ವಯಸ್ಕರ ಗಣತಿಯ ಪ್ರಕಾರ 2015 ರಿಂದ ಹಿಡಿದು 2030 ವರೆಗೆ 60 ಮೀರಿದವರ ಸಂಖ್ಯೆ ಶೇಕಡಾ 56% ಹೆಚ್ಚಾಗುವ ಸಂಭವವಿದೆ. 2050 ಹೊತ್ತಿಗೆ ಸಂಖ್ಯೆ 2.1 ಬಿಲಿಯನ್ ಆಗುವ ಸಾಧ್ಯತೆ ಇದೆ. ಈ ಹಿಂದೆ ಹೆಂಗಸರ ಜೀವಮಾನ ಗಂಡಸಿಗಿಂತ 4.5 ವರ್ಷ ಹೆಚ್ಚಿನದಾಗಿದ್ದು ಮುಂದಕ್ಕೆ ಗಂಡಸರೂ ಕೂಡ ಧೀರ್ಘ ವಾದ ಜೀವಮಾನವನ್ನು ಪಡೆದು ಈಗಿರುವ ವ್ಯತ್ಯಾಸ ಸಮನಾಗುವು ಸಂಭವವಿದೆ. ಹಾಗೆಯೇ 80 ಮೀರಿದವರ ಸಂಖ್ಯೆ 2015 ನಿಂದ 2030 ಹೊತ್ತಿಗೆ 20% ಹೆಚ್ಚಾಗುವ ಸಾಧ್ಯತೆ ಇದೆ. ಹಿರಿಯರ ಈ ಜೀವಮಾನ ಹೆಚ್ಚಳ ಹಳ್ಳಿಗಳಿಗಿಂತ ನಗರಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಪಂಚದಲ್ಲಿ 80 ಮೀರಿ ದಾಟಿರುವ ಹಿರಿಯರ ಸಂಖ್ಯೆ ಈಗ 125 ಮಿಲಿಯನ್ ಇದ್ದರೆ 2050 ನಲ್ಲಿ  ಇನ್ನು ಮೂರು ಪಟ್ಟು ಹೆಚ್ಚಾಗಿ 434 ಮಿಲಿಯನ್ ಗೆ ಏರುವ ಸಂಭವಿದೆ.  ಒಟ್ಟಿನಲ್ಲಿ ಈ ಶತಮಾನದ ಅರ್ಧದಲ್ಲಿ, ಪ್ರಪಂಚದಲ್ಲಿ ಇರುವ ಜನಸಂಖ್ಯೆಯಲ್ಲಿ, ಐದು ಜನರಲ್ಲಿ ಒಬ್ಬ ವ್ಯಕ್ತಿ 60 ವರ್ಷ ಮೀರಿರುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ವೃದ್ಧರ ಜನಸಂಖ್ಯೆ ಸಮಾಜದ ಆರ್ಥಿಕ ಪರಿಸ್ಥಿತಿ, ವಸತಿ, ಸಾರಿಗೆ ಆರೋಗ್ಯ ಹಾಗೂ ಸಾಮಾಜಿಕ ಒತ್ತಡಗಳನ್ನು ತರಬಹುದು. Birth rate ಹೆಚ್ಚಿರುವ ಹಾಗೂ ಅಭಿವೃದ್ಧಿ ಗೊಳ್ಳು ತ್ತಿರುವ ಭಾರತ, ಬ್ರೆಜಿಲ್ ಆಫ್ರಿಕಾ ದೇಶಗಳಲ್ಲಿ ಹಿರಿಯರಸಂಖ್ಯೆ ಮಹತ್ತರವಾಗಿ ಹಿಗ್ಗ ಬಹುದೆಂದು ಅಂದಾಜು ಮಾಡಲಾಗಿದೆ.

ನಮ್ಮ ಮುಂದಿನ ಪ್ರಶ್ನೆ ಬದಲಾಗುತ್ತಿರುವ ಸಮಾಜ ಎಂದರೇನು? ಎಂಬುದರ ಬಗ್ಗೆ ವಿಚಾರ ಮಾಡೋಣ. ಹಲವು ದಶಕಗಳ ಹಿಂದೆ ನಮ್ಮ ಜಾಯಿಂಟ್ ಫ್ಯಾಮಿಲಿ ಕುಟುಂಬ ವ್ಯವಸ್ಥೆ ಯಿಂದಾಗಿ ವೃದ್ಧರು ತಮ್ಮ ಮಕ್ಕಳು ಮೊಮ್ಮಕ್ಕಳೊಡನೆ ನೆಮ್ಮದಿಯಾಗಿ ಅವರ ಆಶ್ರಯದಲ್ಲಿ ಬದುಕಬಹುದಿತ್ತು. ಹಲವಾರು ಅಣ್ಣ, ತಮ್ಮ, ಅಕ್ಕ ತೆಂಗಿಯರು ತಂದೆತಾಯಿಗಳನ್ನು ಸರದಿಯಲ್ಲಿ ನೋಡಿಕೊಳ್ಳುವ ಒಂದು ವ್ಯವ್ಯಸ್ಥೆ ಇದ್ದು ಎಲ್ಲ ಹೊಂದಿಕೊಂಡು ನಡೆಯುತ್ತಿದ್ದ ಪರಿಸ್ಥಿತಿ ಇತ್ತು. ಈಗ ಸಣ್ಣ ಕುಟುಂಬ ಅಥವಾ Nuclear Family ವ್ಯವಸ್ಥೆ ಬಹಳ ಮಟ್ಟಿಗೆ ರೀತಿಯಲ್ಲಿದೆ. ಮೇಲಾಗಿ ಗಂಡ ಹೆಂಡತಿಯರು ವೃತ್ತಿಯಲ್ಲಿ ತೊಡಗಿ  ವೃದ್ಧರಿಗೆ ಬೆಂಬಲ ಸಹಾಯ ಮಾಡುವ ಅವಕಾಶ ಕುಗ್ಗಿದೆ. ಅದಲ್ಲದೆ ವೃದ್ಧ ತಂದೆ ತಾಯಿಗಳಿಗೆ ಮೂಮ್ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಹೊರಲಾಗಿದೆ. ಒಂದು ಕುಟುಂಬದ ಆರ್ಥಿಕ ಪರಿಸ್ಥಿತಿಯ ಒತ್ತಡ ಹಾಗೂ ಹಲವಾರು ತೊಂದರೆಗಳಲ್ಲಿ ವೃದ್ಧ ತಂದೆ ತಾಯಿಯಾರು ಅನಿವಾರ್ಯವಾಗಿ ಸಿಕ್ಕಿಕೊಂಡು ಹೊರಬರುವುದು ಕಷ್ಟವಾಗಿದೆ. ಇನ್ನು ಕೆಲವು ಕುಟುಂಬಗಳಲ್ಲಿ ಮಕ್ಕಳು ವೃತ್ತಿಯ ಬದ್ದತೆ ಗಳಿಂದಾಗಿ ಹೊರನಾಡಿಗೆ ಅಥವಾ ಹೊರದೇಶಕ್ಕೆ ವಲಸೆ ಹೋಗಲು ನಿರ್ಧರಿಸಿದಾಗ ಇನ್ನು ಹೆಚ್ಚಿನ ಬಿಕ್ಕಟ್ಟುಗಳನ್ನು ಒಡ್ಡುತ್ತದೆ. ಇದರ ಜೊತೆಗೆ ಹಿರಿಯ ದಂಪತಿಗಳಲ್ಲಿ ಒಬ್ಬರ ಅನಾರೋಗ್ಯ ಅಥವಾ ಅಕಾಲ ಮರಣ ಇನ್ನು ಹೆಚ್ಚಿನ ಸಮಸ್ಯೆಗಳನ್ನು ತೆರದಿಡುತ್ತದೆ. ಇದರ ಒಟ್ಟಾರೆ ಪರಿಣಾಮ ಒಂಟಿತನ ಹಾಗೂ ಇಳಿವಯಸ್ಸಿನಲ್ಲಿ ಬದುಕನ್ನು ಒಬ್ಬರೇ ಎದುರಿಸುವ ಪರಿಸ್ಥಿತಿ ಉಂಟಾಗುತ್ತದೆ.

ಮೇಲೆ ಪ್ರಸ್ತಾಪಿಸಿರುವ ವಿಷಯಗಳಾದ ಜಗಾತಿಕರಣ  ಹಾಗೂ ಕಂಪ್ಯೂಟರ್ ಶಿಕ್ಷಣ (Computer Literacy) ಇತ್ತಿಚಿನದಿನಗಳಲ್ಲಿ ಬಹಳ ಮುಖ್ಯವಾದ ವಿಚಾರ. ಮನೆಗೆ ಸಂಬಂಧಪಟ್ಟ ಹಾಗೂ ಬ್ಯಾಂಕ್ ಗಳಲ್ಲಿನ ವ್ಯವಹಾರ, ಸಂಪರ್ಕ ಇವುಗಳನ್ನು ಸಮರ್ಪಕವಾಗಿ ನೆರವೇರಿಸಲು ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯ. ವಾಣಿಜ್ಯ ಹಾಗು ಸರ್ಕಾರದ ಪೇಪರ್ ರಹಿತ ವಹಿವಾಟುಗಳು ಅಡಚಣೆ ತರಬಹುದು. ಇತ್ತೀಚಿನ ದಿನಗಳಲ್ಲಿ ಹೊರದೇಶದಲ್ಲಿ ನೆಲಸಿರುವ ಮಕ್ಕಳು ಮೊಮ್ಮಕ್ಕಳು ಇವರೊಡನೆ ಸಂಪರ್ಕಿಸಲು ಕಂಪ್ಯೂಟರ್ ಶಿಕ್ಷಣ ಹಾಗೂ ಸೋಶಿಯಲ್ ಮೀಡಿಯಾಗಳ ಬಳಕೆಯನ್ನು ವೃದ್ಧರು ರೂಡಿಸಿಕೊಳ್ಳಬೇಕು.

60 ವರ್ಷಗಳು ಮೀರಿದಂತೆ ದೇಹಶಕ್ತಿ ಕುಗ್ಗುತ್ತಿರುವಾಗ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಕ್ಯಾನ್ಸರ್, ಸ್ಟ್ರೋಕ್, ಕಣ್ಣಿನಲ್ಲಿ ಪೊರೆ , ಗಂಡಸರಲ್ಲಿ ಪ್ರಾಸ್ಟೇಟ್ ತೊಂದರೆ, ಮೂಳೆಗಳು ಸವಿದು ಮಂಡಿ ಮತ್ತು ಸೊಂಟಗಳಲ್ಲಿ ನೋವು, ಸಕ್ಕರೆ ಖಾಯಿಲೆ, ರಕ್ತ ಒತ್ತಡ ಹಾಗು ಮುಖ್ಯವಾಗಿ ಮಾನಸಿಕ ತೊಂದರೆಗಳು ಹಿರಿಯರನ್ನು ಬಾಧಿಸುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಆಲ್ಜಿಮೆರ್ಸ ಖಾಯಿಲೆ (Alzheimer’s Disease) ಒಂದು ಭಯಂಕರ ಸಮಸ್ಯೆಯಾಗಿದೆ. ಹಿಂದೊಮ್ಮೆ ಅರವತ್ತರ ಅರುಳು ಮರುಳು ಎಂದು ಪರಿಗಣಿಸಲ್ಪಟ್ಟ ಈ ಖಾಯಿಲೆ ಅಷ್ಟು ಸರಳವಲ್ಲ.

ವೃದ್ಧಾಪ್ಯದಲ್ಲಿ ಎಲ್ಲರನ್ನು ಹೆಚ್ಚು ಭಾದಿಸುವ ಸಮಸ್ಯೆ ಎಂದರೆ ಒಂಟಿತನ ಮತ್ತು ಬೇಸರ. ಹಲವು ತಿಂಗಳ ಹಿಂದೆ  ಬಿ ಬಿ ಸಿ ವಾರ್ತೆಯಲ್ಲಿ ಇಲ್ಲಿ ಸ್ಥಳೀಯ ಹಿರಿಯ ವ್ಯಕ್ತಿ, ಸುಮಾರು 89 ವರ್ಷದ ಜೋ ಬಾರ್ಟ್ಲಿ, ಮನೆಯಲ್ಲಿ ಒಬ್ಬಂಟಿಗನಾಗಿ ಕುಳಿತು ಬೇಸರವಾಗಿ ಕೆಲಸಕ್ಕೆ ಅರ್ಜಿ ಹಾಕಿದ್ದು ಒಂದು ದೊಡ್ಡ ಸುದ್ದಿಯಾಗಿ ಎಲ್ಲ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರಗೊಂಡಿತು. ಕೊನೆಗೆ ಆತನಿಗೆ ಒಂದು ಸಣ್ಣ ಹೋಟೆಲಿನಲ್ಲಿ ಕೆಲಸ ದೊರಕಿತು. ಜೋ ಈಗ ಕೆಲಸಕ್ಕೆ ಮರಳಿದ್ದಾನೆ!  ಅವನಿಗೆ ಎಲ್ಲಿಲ್ಲದ ಹುರುಪು ಉತ್ಸಾಹ !  ಆದರೆ ನಾನು ಆಲೋಚಿಸುವುದು ಜೋ ತರಹದ ವ್ಯಕ್ತಿಗಳಿಗೆ ಬದುಕಿನಲ್ಲಿ ಯಾವ ಹವ್ಯಾಸ ಇರಲಿಲ್ಲವೇ?

ನಾವು ಬದುಕಿನಲ್ಲಿ ಸಂಗೀತ, ಸಾಹಿತ್ಯ, ಕಲೆ, ವ್ಯಾಯಾಮ ಮುಂತಾದ ಹವ್ಯಾಸಗಳನ್ನು ಬೆಳಸಿಕೊಂಡು ಅದನ್ನು ಪೋಷಿಸುತ್ತ ಬದುಕುವುದನ್ನು ಕಲಿತರೆ ಇಳಿವಯಸ್ಸಿನಲ್ಲಿ ಒಂಟಿತನ ಮತ್ತು ಬೇಸರಗಳನ್ನು ಕಡಿಮೆ ಮಾಡಿಕೊಳ್ಳ ಬಹುದು. ಸೋಶಿಯಲ್ ಕ್ಲಬ್ ಗಳ ಸದಸ್ಯರಾಗಿ ಸ್ನೇಹಿತರನ್ನು ಗಳಿಸಿದವರಿಗೆ ಹೃದ್ರೋಗ ಕಡಿಮೆಯಾಗಿರುವುದರ ಬಗ್ಗೆ ವೈದ್ಯಕೀಯ ಸಂಶೋಧನೆ ಮಾಹಿತಿಗಳಿವೆ. ನನಗೆ ತಿಳಿದ ಕೆಲವು ಸಾಹಿತ್ಯ ಹಾಗೂ ಕವಿ ಮಿತ್ರರು ನಿವೃತಿಯ ಬಳಿಕ ಇನ್ನು ಹೆಚ್ಚಿನ ಬರವಣಿಗೆಯಲ್ಲಿ ತೊಡಗಿ ಸಮಯ ಅಭಾವದ ಬಗ್ಗೆ ಗೊಣಗಿರುವುದು ಉಂಟು! ಹವ್ಯಾಸಗಳಿಂದ ಬುದ್ಧಿ  ಶಕ್ತಿಯನ್ನು ತೀಕ್ಷ್ಣ ವಾಗಿ ಉಳಿಸಿಕೊಂಡವರಿಗೆ ಡಿಮೆನ್ ಶಿಯ (Dementia) ರೀತಿಯ ಮಾನಸಿಕ ತೊಂದರೆಗಳು ಕಡಿಮೆ

ಇನ್ನು ಇಳಿವಯಸ್ಸಿನಲ್ಲಿ ಆರ್ಥಿಕ ಸುಭದ್ರತೆ ಬಹಳ ಮುಖ್ಯ. ಇಂಗ್ಲಿಷ್ ಸಂಸ್ಕೃತಿಯಲ್ಲಿ ಒಂದು ನಾಣ್ನುಡಿ ಇದೆ; ‘Save for a rainy day’ ದುಡಿಯುವ ಶಕ್ತಿ ಇರುವಾಗ ಮುಂಬರುವ ಕಷ್ಟಗಳ ದಿನಕ್ಕಾಗಿ ಕೂಡಿಡುವ ಆಲೋಚನೆಯನ್ನು ಕಿರಿಯರು ಪರಿಗಣಿಸಬೇಕು. ಇಂಗ್ಲೆಂಡಿನ ಹಿರಿಯರು ನರ್ಸಿಂಗ್ ಹೋಂಗಳಲ್ಲಿ  ಸೇರಬೇಕಾದರೆ ಬಹಳಷ್ಟು ಹಣ ಬೇಕಾಗುತ್ತದೆ. ಪೆಂಶನ್ (Pension)  ಹಣ ಸಾಕಾಗದೆ ಹಲವಾರು ಹಿರಿಯರು ತಮ್ಮ ಮನೆಗಳನ್ನು ಅಡವಿಟ್ಟು ಅಥವಾ ಮಾರಿ ನರ್ಸಿಂಗ್ ಹೋಂ ಸೇರಿಕೊಂಡಿರುವ ಬಗ್ಗೆ ಕೇಳುತ್ತೇವೆ.

ಮಧ್ಯ ವಯಸ್ಕರು ಅದರಲ್ಲೂ ಸಕ್ಕರೆ ಹಾಗೂ ರಕ್ತ ಒತ್ತಡ ಖಾಯಿಲೆ ಇರುವವರು ಆಹಾರ ಮತ್ತು ವ್ಯಾಯಾಮಗಳ ಕಡೆ ಗಮನ ಕೊಡದಿದ್ದಲ್ಲಿ ಇಳಿವಯಸ್ಸಿನಲ್ಲಿ  ಈ ಖಾಯಿಲೆಗಳ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.  ಒಬ್ಬ ವ್ಯಕ್ತಿ 50 ರ ಕೊನೆಯಲ್ಲಿ ಅಥವಾ ಅರವತ್ತರಲ್ಲಿ  ಇರುವಾಗ  ಗಂಡ ಅಥವಾ ಹೆಂಡತಿಯ ಅಕಾಲ ಮರಣದಿಂದ ಉದ್ಭವಿಸುವ ಒಂಟಿತನವನ್ನು ಎದುರಿಸುವುದು ಬಹಳ ಕಷ್ಟ. ಮಾನಸಿಕವಾಗಿ ಈ ಅಘಾತದಿಂದ ಚೇತರಿಸಿಕೊಳ್ಳುವುದು ಕಠಿಣ. ಹಿರಿಯ ವಯಸ್ಸಿನಲ್ಲಿ ಕಾಮಾದಿ ಬಯಕೆಗಳನ್ನು ಮೀರಿ ಸಾಂಗತ್ಯಕ್ಕೆಂದು ಮರು ಮದುವೆಯಾಗುವುದು ಅಥವಾ ಮದುವೆಯಾಗದೆ ಗಂಡು ಹೆಣ್ಣುಗಳು ಒಟ್ಟಿಗೆ ಇರುವುದು ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯ. ಈ ವಿಚಾರದ ಬಗ್ಗೆ ನಮ್ಮ ಭಾರತದ ಸಂಸ್ಕೃತಿಯಲ್ಲಿ  ಒಂದು ಸಾಂಪ್ರದಾಯಕ ನಿಲುವು ಹಾಗೂ ಮಡಿವಂತಿಕೆ ಇರುವುದನ್ನು ಗಮನಿಸಬಹುದು. ಈ ವಿಚಾರದ ಬಗ್ಗೆ ಮುಂದಿನ ಪೀಳಿಗೆ ಹಿರಿಯರು ಆಲೋಚನೆ ಮಾಡಬಹುದು

ವೃದ್ಧರ ಏಳಿಗೆ, ಅನುಕೂಲ, ಆರೋಗ್ಯ ಮತ್ತು ಕಲ್ಯಾಣ ಇವುಗಳ ಬಗ್ಗೆ ಸಮಾಜ, ಸರ್ಕಾರ ಹಾಗೂ ಚಾರಿಟಿ ಸಂಘಗಳು ಗಮನ ಹರಿಸಬೇಕು. ಯೋಜನೆಗಳನ್ನು ಹಾಕಿಕೊಳ್ಳಬೇಕು. ವೃದ್ಧರು ಸಮಾಜದ ಆಸ್ತಿ , ಅವರು  ಸಮಾಜಕ್ಕೆ  ಹೊರೆ ಅಲ್ಲ ಎಂಬ ಆರೋಗ್ಯಕರವಾದ ಚಿಂತನೆಯನ್ನು  ಕಿರಿಯರು ಬೆಳಸಿಕೊಳ್ಳಬೇಕು. ವೃದ್ಧರಿಗೆ ಹಲವು ರೀತಿ ಆರ್ಥಿಕ ರಿಯಾಯಿತಿ ಹಾಗೂ ಆರೋಗ್ಯ ವಿಮೆ ದೊರಕುವಂತಾಗಬೇಕು. ಇನ್ನು ಹೆಚ್ಚಿನ ಹಾಗೂ ವಿವಿಧ ಹಂತಗಳ ವೃದ್ಧಾಶ್ರಮ ಹಾಗೂ ಸಾಮೂಹಿಕ ವಸತಿಗಳ ಸೌಕರ್ಯಗಳನ್ನೂ ಕಲ್ಪಿಸಬೇಕಾಗಿದೆ.

ವೃದ್ಧಾಪ್ಯದ ಸಮಸ್ಯೆಗಳು ನಾವು ಎದುರಿಸಬೇಕಾದ ಬಹಳ ದೊಡ್ಡ ಸವಾಲು. ಇದು ಗಡಿ, ದೇಶ ಹಾಗೂ ಸಂಸ್ಕೃತಿಗಳನ್ನು ಮೀರಿದ್ದು ಮಾನವ ಕುಲದ ಒಂದು ಸಮಸ್ಯೆ. ಒಂದಲ್ಲ ಒಂದು ದಿನ ಎಲ್ಲರು ಎದುರಿಸಬೇಕಾದ ಪರಿಸ್ಥಿತಿ. ಈ ಅನಿವಾರ್ಯತೆಯನ್ನು ಒಪ್ಪಿಕೊಂಡು ಇಳಿವಯಸ್ಸಿನಲ್ಲಿ ಧೈರ್ಯ ಹಾಗೂ ಆತ್ಮ ವಿಶ್ವಾಸಗಳೊಂದಿಗೆ ನೆಮ್ಮದಿಯಾಗಿ ಬದುಕಿನ ಸಂಜೆಯನ್ನು ಕಡಲಂಚಿನಲ್ಲಿ ಕಾಣುವ ಸೂರ್ಯಾಸ್ತದ ಪ್ರಶಾಂತತೆಯಷ್ಟೇ ಹಿತಕರವಾಗಿ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.

ಜಿ.ಎಸ್. ಶಿವಪ್ರಸಾದ್