ಎಚ್ಚೆಸ್ವಿ ಎಂಬ ಜೀವಪರತೆ..ಭಾವದೊರತೆ

ಎಚ್ಚೆಸ್ವಿ ಕೆಲವು ಆತ್ಮೀಯ ನೆನಪುಗಳು

ಎಚ್ಚೆಸ್ವಿ ಅವರು ನನ್ನ ತಂದೆ ಜಿ ಎಸ್ ಎಸ್ ಅವರ ಪ್ರತಿಭಾವಂತ ಮತ್ತು ಆಪ್ತ ಶಿಷ್ಯರು. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ   ಕನ್ನಡ ಎಂ.ಎ ವಿದ್ಯಾರ್ಥಿಯಾದ ಮೇಲೆ (1971-1973) ನಮ್ಮ ಕುಟುಂಬಕ್ಕೆ ಪರಿಚಿತರಾದರು. ಕುವೆಂಪು ಅವರಿಗೆ ವೆಂಕಣಯ್ಯ ನವರು ಹೇಗೋ, ಜಿ ಎಸ್ ಎಸ್ ಅವರಿಗೆ ಕುವೆಂಪು ಹೇಗೋ , ಹಾಗೆ ಎಚ್ಚೆಸ್ವಿ ಅವರಿಗೆ ಜಿ ಎಸ್ ಎಸ್ ಪೂಜ್ಯ ಗುರುಗಳು. ಅದು ಅನನ್ಯವಾದ ಗುರು ಶಿಷ್ಯ ಸಂಬಂಧ. ಅಲ್ಲಿ ಪರಸ್ಪರ ಪ್ರೀತಿ, ಗೌರವ, ಸಲಿಗೆ, ಗೆಳೆತನ ಒಂದು ಹದದಲ್ಲಿ  ಇರುವಂತಹ ಒಡನಾಟ. ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸುವುದಾದರೆ "ಅಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ. ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಹತ್ತಿರವಾದದ್ದು ಬರಿಯ ವಿದ್ಯಾರ್ಥಿ ದೆಸೆಯಿಂದಲ್ಲ, ಅದಕ್ಕೆ ಮುಖ್ಯಕಾರಣ ಎಚ್ಚೆಸ್ವಿ ಒಬ್ಬ ಸೃಜನಶೀಲ ಕವಿ, ಅವರು ಸ್ನೇಹಪರರು ಮತ್ತು ಮೃದು ಸ್ವಭಾವದವರು. ಗುರು ಶಿಷ್ಯರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಸಮ್ಮೇಳನಗಳಲ್ಲಿ ಒಟ್ಟಿಗೆ ಭಾಗವಹಿಸಿದವರು. ಒಬ್ಬರ ಕವಿತೆಯನ್ನು ಇನ್ನೊಬ್ಬರು ಮೆಚ್ಚಿಕೊಂಡವರು. ಕಾಲಕ್ರಮೇಣ ಎಚ್ಚೆಸ್ವಿ ಅವರು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಧ್ಯಪಕರಾಗಿದ್ದಾಗ ನಾವು ವಾಸವಾಗಿದ್ದ ಬನಶಂಕರಿ ಎರಡನೆಹಂತದ ೧೮ನೇ ಮುಖ್ಯ ರಸ್ತೆಯಲ್ಲಿ, ಪಕ್ಕದಲ್ಲೇ ಅವರೂ, ಮಡದಿ ರಾಜಲಕ್ಷ್ಮಿ ಮತ್ತು ಮಕ್ಕಳ ಜೊತೆ ಒಂದು ಬಾಡಿಗೆ ಮನೆಯಲ್ಲಿ ಹಲವಾರು ವರ್ಷಗಳ ಅವಧಿಯಲ್ಲಿ ವಾಸವಾಗಿದ್ದರು. ಗುರು ಶಿಷ್ಯರು ಸಾಹಿತ್ಯ ಸಮ್ಮೇಳನಗಳ ನಡುವೆ ಹಲವಾರು ಪ್ರವಾಸವನ್ನು ಕೈಗೊಳ್ಳುತ್ತಿದ್ದರು, ಕೆಲವೊಮ್ಮೆ ಮಾರ್ನಿಂಗ್ ವಾಕ್ ಮಾಡುತ್ತಿದ್ದರು. ಸೂರ್ಯದಯವನ್ನು ಒಟ್ಟಿಗೆ ನಿಂತು ವೀಕ್ಷಿಸುತ್ತಿದ್ದರು. ಆ ವೇಳೆ ಎಚ್ಚೆಸ್ವಿ ಏನಾದರೂ ಹರಟೆಗೆ ತೊಡಗಿದರೆ, ಜಿ ಎಸ್ ಎಸ್ ಅವರು 'ಶುಶ್ ಸುಮ್ಮನಿರಿ ಸೂರ್ಯೋದಯವನ್ನು ನಿಶಬ್ದದಲ್ಲಿ ನೋಡೋಣ' ಎನ್ನುತ್ತಿದ್ದರಂತೆ! (ಇದರ ಬಗ್ಗೆ ಎಚ್ಚೆಸ್ವಿ ಅವರು ಒಂದು ಕಡೆ ಬರೆದಿದ್ದಾರೆ) ವಾಕಿಂಗ್ ಬಳಿಕ ಗುರು ಶಿಷ್ಯರು ಗಾಂಧಿಬಜಾರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಅಲ್ಲಿ ಮಸಾಲೆ ದೋಸೆ ಕಾಫಿ ಸವಿದು ಬರುತ್ತಿದ್ದರು. ಜಿ ಎಸ್ ಎಸ್ ಅವರೇ ವಿದ್ಯಾರ್ಥಿಭವನದ ಬಿಲ್ಲು ಕಟ್ಟುತ್ತಿದ್ದರೆಂದು ಎಚ್ಚೆಸ್ವಿ "ಬಿಲ್ಲೋಜ ಜಿ ಎಸ್ ಎಸ್ " ಎಂಬ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ. ಸ್ವಾರಸ್ಯಕರವಾದ ಸಂಗತಿ ಎಂದರೆ ಗುರು ಶಿಷ್ಯರಿಬ್ಬರೂ ತಮ್ಮ ಪತ್ನಿಯರಿಗೆ ವಿದ್ಯಾರ್ಥಿ ಭವನಕ್ಕೆ ಹೋಗುತ್ತಿದ್ದೇವೆ ಎಂಬ ಸುಳಿವು ಕೊಡುತ್ತಿರಲಿಲ್ಲವಂತೆ. (ಹೋಟೆಲ್ಗೆ ಹೋಗಿ ಯಾಕೆ ತಿನ್ನ ಬೇಕು ಕೇಳಿದ್ದರೆ ಮನೆಯಲ್ಲೇ ಮಾಡಿಕೊಡುತ್ತಿದ್ದೆವಲ್ಲ ಎಂಬ ಮಡದಿಯ ಆಕ್ಷೇಪಣೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ) ನಮ್ಮ ಮನೆಯಲ್ಲಿ ಪ್ರತಿ ವರ್ಷ ಮೇ ತಿಂಗಳ ಕೊನೆಗೆ ಮಾವಿನ ಹಣ್ಣಿನ ಸೀಸನ್ ಮಧ್ಯದಲ್ಲಿ ಅಪ್ಪ, ಅವರ ಆತ್ಮೀಯ ಸಾಹಿತಿ ಮಿತ್ರರನ್ನು ಹೋಳಿಗೆ ಸೀಕರಣೆ ಊಟಕ್ಕೆ ಆಹ್ವಾನಿಸುತ್ತಿದ್ದರು, ಅದರಲ್ಲಿ ಎಚ್ಚೆಸ್ವಿ ಅವರು ಇದ್ದೇ ಇರುತ್ತಿದ್ದರು. ಅಪ್ಪ ಶುರುವಿನಲ್ಲಿ ಎಚ್ಚೆಸ್ವಿ ಅವರಿಗೆ ಹೇಗೆ ಹೋಳಿಗೆಗೆ ತುಪ್ಪಕಲೆಸಿ ನಂತರ ಸೀಕರಣೆಯನ್ನು ಕಿವುಚಿ ಒಂದು ಹದದಲ್ಲಿ ಮಿಕ್ಸ್ ಮಾಡಿ ತಿನ್ನಬೇಕು ಎಂಬುದನ್ನು ತಿಳಿಸಿಕೊಟ್ಟದ್ದನ್ನು ಎಚ್ಚೆಸ್ವಿ ತಮ್ಮ ಒಂದು ಬರಹದಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಗುರು ಶಿಷ್ಯರಿಬ್ಬರು ತಮ್ಮ ಕೃತಿಗಳನ್ನು ಪರಸ್ಪರ ವಿಮರ್ಶೆ ಮಾಡಿದ್ದಾರೆ. ಎಚ್ಚೆಸ್ವಿ ಅವರು 'ಜಿ ಎಸ್ ಎಸ್ ಬದುಕು ಬರಹ' ಎಂಬ ವಿಮರ್ಶೆ ಕೃತಿಯನ್ನು ೨೦೧೨ರಲ್ಲಿ ಪ್ರಕಟಿಸಿದ್ದಾರೆ. 'ಎಚ್ಚೆಸ್ವಿ ಸಮಗ್ರ ಕವಿತೆಗಳು' ಎಂಬ ಬೃಹತ್ ಕೃತಿಯನ್ನು ಎಚ್ಚೆಸ್ವಿ ಅವರು ಜಿ ಎಸ್ ಎಸ್ ಅವರಿಗೆ ಅರ್ಪಣೆಮಾಡಿರುವುದು ಆ ಗುರು ಶಿಷ್ಯರ ಅನ್ಯೋನ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ಜಿ ಎಸ್ ಎಸ್ ಅವರೂ ಎಚ್ಚೆಸ್ವಿ ಅವರ ಕೃತಿಗಳನ್ನು ಕುರಿತು ಅನೇಕ ಬರಹಗಳನ್ನು ಬರೆದಿದ್ದಾರೆ.

ವಾರಾಂತ್ಯ ಹತ್ತುಗಂಟೆಯ ನಂತರ ಎಚ್ಚೆಸ್ವಿ ನಮ್ಮ ಮನೆ ಬಾಗಿಲು ಬಡಿದಾಗ ನಾನು ಅಥವಾ ಅಮ್ಮ ಬಾಗಿಲು ತೆರದ ಕೂಡಲೇ 'ಮೇಷ್ಟ್ರು ಇದಾರ' ಎಂದು ಮುಗುಳ್ನಗುತ್ತಿದ್ದರು, 'ಬನ್ನಿ ಒಳಗೆ' ಎಂದಾಗ ಅವರು ನೇರವಾಗಿ ಅಪ್ಪನ ಲೈಬ್ರರಿ/ಸ್ಟಡಿ ಕೋಣೆಯೊಳಗೆ ಕೂತು ಅಪ್ಪನನ್ನು ಭೇಟೆಯಾಗುತ್ತಿದ್ದರು. ಈ ಗುರು ಶಿಷ್ಯರು ಗಂಟೆಗಟ್ಟಲೆ ಸಾಹಿತ್ಯ ಸಂವಾದದಲ್ಲಿ ತೊಡಗುತ್ತಿದ್ದರು. ಕೆಲವೊಮ್ಮೆ ಇವರ ಜೊತೆ ಸಿ ಅಶ್ವಥ್, ಸುಮತೀನ್ದ್ರ ನಾಡಿಗ, ಎಚ್ ಎಸ್ ರಾಘವೇಂದ್ರ ರಾವ್ ಮತ್ತಿತರು ಬಂದು ಸೇರಿಕೊಳ್ಳುತ್ತಿದ್ದರು. ಸಂವಾದ ಮುಗಿದನಂತರ ನಾನು ವೆರಾಂಡದಲ್ಲಿ ಅಥವಾ ಅಂಗಳದ ಗೇಟು ಹಾಕಲು ಬಂದಾಗ ಡಾಕ್ಟ್ರೇ ಹೇಗಿದ್ದೀರಾ, ಕ್ಲಿನಿಕ್ ಹೇಗೆ ನಡೀತಾಯಿದೆ ಇತ್ಯಾದಿ ಸಾಹಿತ್ಯದ ಆಚೆಯ ಮಾತುಗಳನ್ನು ಆಡುತ್ತಿದ್ದರು. ಯೌವ್ವನದಲ್ಲಿ ನನ್ನ ವೈದ್ಯಕೀಯ ವೃತ್ತಿ ನನ್ನನ್ನು ಆವರಿಸಿಕೊಂಡಿದ್ದು ನನಗೆ ಸಾಹಿತ್ಯದ ಬಗ್ಗೆ ಗಮನ ಕೊಡಲು ಸಮಯದ ಅವಕಾಶವೇ ಇರಲಿಲ್ಲ, ಸಾಹಿತ್ಯಾಸಕ್ತಿ ಹಿಂದೆಯೇ ಉಳಿದಿದ್ದ ಕಾಲವದು. ನಾನು ಮತ್ತು ಎಚ್ಚೆಸ್ವಿ ಸಾಹಿತ್ಯ ಸಂವಾದಕ್ಕೆ ತೊಡಗಿದ್ದು ನಾನು ಇಂಗ್ಲೆಂಡಿಗೆ ಬಂದಮೇಲೆ ಎನ್ನ ಬಹುದು. ಆ ಕಾಲಕ್ಕೆ ನನಗೆ ಸಾಹಿತ್ಯದಲ್ಲಿ ಆಸಕ್ತಿ ಉಂಟಾಗಿತ್ತು, ಓದಲು ಬರೆಯಲು ಸಮಯ ಮತ್ತು ಅವಕಾಶ ಎರಡು ದಕ್ಕಿದ್ದವು.

ಅಂದಹಾಗೆ ನನಗೆ ಎಚ್ಚೆಸ್ವಿ ಅವರ ಸಾಹಿತ್ಯ ಪರಿಚಯವಾದದ್ದು ಸುಗಮ ಸಂಗೀತದ ಮೂಲಕವೇ. ನನಗೆ ಅವರು ಹೆಚ್ಚು ಹತ್ತಿರವಾದದ್ದು ನಾನು ಕನ್ನಡದಲ್ಲಿ ಕವನಗಳನ್ನು ಪ್ರಬಂಧಗಳನ್ನು ರಚಿಸಲು ಶುರುವಾದಾಗ. ಈ ವೇಳೆಗೆ ಅಪ್ಪ ತೀರಿಕೊಂಡಿದ್ದರು. ಎಚ್ಚೆಸ್ವಿ ಅವರು ಇಂಗ್ಲೆಂಡಿಗೆ ಕನ್ನಡ ಬಳಗದ ಆಹ್ವಾನದ ಮೇರೆಗೆ ಇಲ್ಲಿ ಬಂದಾಗ ನಮ್ಮ ಬಾಂಧವ್ಯ ಹೆಚ್ಚಾಯಿತು. ನಾನು ಬೆಂಗಳೂರಿಗೆ ಹೋದಾಗ ಎಚ್ಚೆಸ್ವಿ, ಬಿ ಆರ್ ಲಕ್ಷ್ಮಣ ರಾವ್, ಡುಂಡಿರಾಜ್, ಜೋಗಿ ಇವರೊಡನೆ ಅನೇಕ ಕ್ಲಬ್ ಮತ್ತು ಹೋಟೆಲಿನಲ್ಲಿ ಭೋಜನ ಕೂಟಗಳಲ್ಲಿ ಒಡನಾಡುವ ಅವಕಾಶ ಒದಗಿ ಬಂತು. ವಿಸ್ಕಿ ಸೇವೆನಯಲ್ಲೂ ಎಚ್ಚೆಸ್ವಿ ಮಿತವಾಗಿ ಒಂದು ಪೆಗ್ ಸೇವಿಸಿ ನಂತರ ಎರಡನೇ ಪೆಗ್ಗಿಗೆ ಒತ್ತಾಯಿಸಿದಾಗ ಬೇಡವೆಂದು ‘ನನ್ನದು ಅದ್ವೈತ ಫಿಲಾಸಫಿ’ ಎಂದು ಹಾಸ್ಯ ಚಟಾಕಿಯನ್ನು ಹಾರಿಸುತ್ತಿದ್ದರು. ಎಚ್ಚೆಸ್ವಿ ಉತ್ತಮ ವಾಗ್ಮಿಗಳು, ಸಾಮಾನ್ಯವಾಗಿ ಅವರು ಸಭೆಗಳಲ್ಲಿ ಸುಮಾರು 15-20 ನಿಮಿಷಕ್ಕಿಂತ ಹೆಚ್ಚು ಮಾತನಾಡಿದ್ದನ್ನು ನಾನು ಕೇಳಿಲ್ಲ. ಆ ಮಿತವಾದ ಭಾಷಣದಲ್ಲಿ ಸರಳತೆ, ಸ್ಪಷ್ಟತೆ, ಪದಗಳ ಬಳಕೆ ಮತ್ತು ವಿಚಾರಗಳು ಸೊಗಸಾಗಿರುತ್ತಿತ್ತು. 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂಬ ವಚನದ ಸಾಲುಗಳು ನೆನಪಿಗೆ ಬರುತ್ತಿತ್ತು.

ನಾನು ಬರೆಯಲು ಶುರುಮಾಡಿದಾಗ ನನ್ನ ಕೋರಿಕೆಯ ಮೇಲೆ ಎಚ್ಚೆಸ್ವಿ ನನ್ನ ಎಲ್ಲ ಬರಹಗಳನ್ನು ಓದಿ, ಸೂಕ್ತ ಸಲಹೆಗಳನ್ನು ನೀಡಿ, ಪ್ರಕಟಿಸಲು ಉತ್ತೇಜನ ನೀಡುತ್ತಿದ್ದರು. ನನ್ನ ಚೊಚ್ಚಲ ಕವನ ಸಂಕಲನ 'ಇಂಗ್ಲೆಂಡಿನಲ್ಲಿ ಕನ್ನಡಿಗ' ಕೃತಿಗೆ ಮುನ್ನುಡಿಯನ್ನು ಬರೆದು, ನನ್ನ ‘ಪಯಣ’ ಕಾದಂಬರಿಗೆ ಬೆನ್ನುಡಿಯನ್ನು ಕೂಡ ಬರೆದುಕೊಟ್ಟರು. ನಾನು ಒಂದು ರೀತಿ ಅವರ ಶಿಷ್ಯನೂ ಹೌದು. ಅವರಿಗೆ ಕಾಣಿಕೆಯಾಗಿ ನನ್ನ ಇತ್ತೀಚಿನ 'ಮೊನಾಲೀಸಾ' ಎಂಬ ಕವನ ಸಂಕಲನವನ್ನು ಅವರಿಗೆ ಅರ್ಪಿಸಿದ್ದೇನೆ. ಎಚ್ಚೆಸ್ವಿ ಅವರು ಶೆಫೀಲ್ಡ್ ನಗರಕ್ಕೆ ಆಗಮಿಸಿ ಯುಕೆ ಕನ್ನಡ ಬಳಗದ ಆಶ್ರಯದಲ್ಲಿ ನಡೆದ 2013 ದೀಪಾವಳಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅನಿವಾಸಿ ಸಾಹಿತ್ಯ ಅಂಗದ ಉದ್ಘಾಟನೆ ಮಾಡಿದ್ದನ್ನು ನಾನು ಸ್ಮರಿಸುತ್ತೇನೆ. ಈ ಸಾಹಿತ್ಯ ಅಂಗ ಈಗ ಎತ್ತರಕ್ಕೆ ಬೆಳದಿದೆ. ಆ ಸಂದರ್ಭದಲ್ಲಿ ಎಚ್ಚೆಸ್ವಿ ಅವರು ‘ಬೆಂಗಳೂರಿಗಿಂತ ಇಲ್ಲಿ ಹೆಚ್ಚು ಕನ್ನಡ ಕೇಳಿ ಬರುತ್ತಿದೆ’ ಎಂದು ಮಾತನಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ಆ ವಿಚಾರ ನಮ್ಮ ಯುಕೆ ಅನಿವಾಸಿ ಕನ್ನಡಿಗರಿಗೆ ಹೆಮ್ಮೆಯ ವಿಷಯ. ನನ್ನ ಮತ್ತು ಎಚ್ಚೆಸ್ವಿ ನಡುವಿನ ವಾಟ್ಸ್ ಆಪ್ ಸಂದೇಶಗಳನ್ನು ನೆನೆದು ಕೆಳಗೆ ಹಂಚಿಕೊಳ್ಳುತ್ತಿದ್ದೇನೆ. ಸಂದರ್ಭ; ನನ್ನ ‘ಪಯಣ’ ಎಂಬ ಕಾದಂಬರಿ ತಯಾರಾಗುತ್ತಿದ್ದ ಸಮಯ.

"ಪ್ರಿಯ ಡಾ.ಪ್ರಸಾದ್
ನಿಮ್ಮ ಕಾದಂಬರಿಯನ್ನು ಒಂದೇ ಪಟ್ಟಿನಲ್ಲಿ ಓದಿ ಆನಂದಿಸಿದೆ. ಇನ್ನು ನೀವು ವೈದ್ಯಕೀಯದೊಂದಿಗೆ ಸಾಹಿತ್ಯ ಕೃಷಿ ಯಲ್ಲೂ ತೊಡಗಬೇಕು. ಲೀಲಾ ಜಾಲವಾಗಿ, ಎಲ್ಲೂ ಓದುಗರ ಆಸಕ್ತಿ ಕುಂದದಂತೆ ಕಥೆಯನ್ನು ನಿರೂಪಿಸಿದ್ದೀರಿ. ನಾಯಿಯು ಇಲ್ಲಿ ನಮಗೆಲ್ಲ ಆಪ್ತವಾಗುತ್ತದೆ. ಅದರ ನೋವು ನಮ್ಮ ನೋವಾಗುತ್ತದೆ. ಮಕ್ಕಳಿಗೆ ನಾಯಿ ಯಾಕೆ ಪ್ರಿಯವಾಗುತ್ತದೆ ಎಂಬುದು ನನಗೆ ಈಗ ಮನದಟ್ಟಾಯಿತು. ಮುಗ್ಧತೆ ಮತ್ತು ಸಹಜ ಪ್ರೀತಿ ಎರಡು ಜೀವಕ್ಕೂ ಸಮಾನ. ಸಿನಿಮಾಕ್ಕೆ ಲಾಯಕ್ಕಾಗಿದೆ. ಸಿನಿಮೀಯ ಎನ್ನಿಸದು. ಇದೊಂದು ಲೋಕಪ್ರೀತಿಯ ಸಹಜ ಕಲಾಕೃತಿ"

"ಧನ್ಯವಾದಗಳು ಎಚ್ಚೆಸ್ವಿ ತುಂಬಾ ಖುಷಿಯಾಯಿತು. ಈ ಕೃತಿಗೆ ‘ಸಾರ್ಥಕ ಪಯಣ’ ಎಂಬ ಹೆಸರನ್ನು ಆಯ್ಕೆ ಮಾಡಿರುವೆ"

" ಹೆಸರು ತುಂಬಾ ಗದ್ಯಮಯ. ಯಾನ…ಅಷ್ಟೇ ಸಾಕು. ಅಥವಾ ಪಯಣ ಎಂದು ಇಡಬಹುದು"

“ಪಯಣ ಬಹುಶಃ ಸೂಕ್ತವಾಗಿರಬಹುದು. ‘ಯಾನ’ ಎನ್ನುವ ಹೆಸರಲ್ಲಿ ಭೈರಪ್ಪನವರ ಕಾದಂಬರಿ ಇದೆ. ನನ್ನ ಈ ಕಥೆ ಸರಳವಾಗಿರಬಹುದು"

"ಸರಳತೆ ಗುಣವೋ ದೋಷವೋ ಎಂಬ ವಾಗ್ವಾದ ಇನ್ನೂ ಬಗೆಹರಿದಿಲ್ಲ...!"


ಎಚ್ಚೆಸ್ವಿ ಅವರ ಹಲವಾರು ಬರಹಗಳಲ್ಲಿ, ಮಾತುಗಳಲ್ಲಿ ಸರಳತೆ ಇದ್ದುದನ್ನು ನಾವೆಲ್ಲಾ ಗಮನಿಸಿದ್ದೇವೆ. ಕಥೆ, ಕವನ ಸಂಕೀರ್ಣವಾಗಿರಬೇಕು, ಆಗ ಅದಕ್ಕೆ ಹೆಚ್ಚು ಬೆಲೆ, ಸರಳತೆ ಒಂದು ದೋಷ ಎಂಬ ನನ್ನಲ್ಲಿದ್ದ ಕಲ್ಪನೆಯ ಹಿನ್ನೆಲೆಯಲ್ಲಿ ಅವರ ಮಾತುಗಳು ಅರ್ಥಪೂರ್ಣವಾಗಿ ತೋರಿದವು. ಸರಳವಾಗಿ ಬರೆಯುವುದೂ ಒಂದು ಕಲೆ ಎಂಬ ಆಲೋಚನೆ ಮೂಡಿಬಂತು. ಎಚ್ಚೆಸ್ವಿ ಅವರು ಬಹಳ ಶ್ರದ್ಧಾವಂತರು. ಅವರು ಶೇಫಿಲ್ಡ್ ನಗರದ ನಮ್ಮ ಮನೆಯಲ್ಲಿ ಒಂದು ವಾರ ತಂಗಿದ್ದಾಗ ‘ಶೆಫೀಲ್ಡ್ ಕವಿತೆಗಳು’ ಎಂಬ ನೀಳ್ಗವನದ ರಚನೆಯಲ್ಲಿ ತೊಡಗಿದ್ದರು. ಅವರು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕುಳಿತು, ತೀಕ್ಷ್ಣ ಕವಿಸಮಯದಲ್ಲಿ ಮೂಡಿತ್ತಿದ್ದ ಸಾಲುಗಳನ್ನು ದಾಖಲಿಸುತ್ತಿದ್ದರು. ಮುಂದಕ್ಕೆ ‘ಶೆಫೀಲ್ಡ್ ಕವಿತೆಗಳು’ ಎಂಬ ಕೃತಿಯನ್ನು ಅವರು ಹೊರತಂದರು. ಆ ಕೃತಿಯನ್ನು ಕುರಿತು ‘ಎಚ್ಚೆಸ್ವಿ ಅವರ ಶೇಫಿಲ್ಡ್ ಕವಿತೆಗಳ ಬಗ್ಗೆ ಶೆಫೀಲ್ಡ್ ನಿವಾಸಿಯ ಅನಿಸಿಕೆಗಳು’ ಎಂಬ ಬರಹವನ್ನು ನಾನು ‘ಸಮಾಹಿತ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಎಚ್ಚೆಸ್ವಿ ಅವರು ಫೋನ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಆ ಕೃತಿಯನ್ನು ನನಗೆ ಮತ್ತು ನನ್ನ ಶ್ರೀಮತಿ ಪೂರ್ಣಿಮಾಗೆ ಅರ್ಪಣೆಮಾಡಿದ್ದು ಅದು ನನಗೆ ಅತ್ಯಂತ ಗೌರವದ ವಿಷಯ.
*
~ ಡಾ ಜಿ ಎಸ್ ಪ್ರಸಾದ್

ಎಚ್ಚೆಸ್ವಿಯವರ ಸಂದರ್ಶನ 

ಸಂದರ್ಶಕಿ – ಡಾ. ಪ್ರೇಮಲತಾ

‘ ಉರಿಯ ಉಯ್ಯಾಲೆ’ಯ  ಆಯ್ದ ಭಾಗಗಳು

~ ಚಿನ್ಮಯಿ

~ ಅಕ್ಷತಾ

ವಿದಾಯ ಹೇಳಬಹುದೇ ಇಷ್ಟು ಸುಲಭಕ್ಕೆ ನಿಮಗೆ? 

“ ಕಥೆ ಮುಗಿಯುವಾಗ ಚಡಪಡಿಕೆ ಪಾತ್ರಕ್ಕಷ್ಟೇ.
ಕೃತಿ ಮುಗಿದ ತೃಪ್ತಿ ಬರೆದವಗೆ.
ಇಷ್ಟು ದಿನ ಎಡೆಬಿಡದೇ ಬರೆದ ಬೆರಳಿಗೆ ಬಿಡುವು.
ಹೊರೆ ಇಳಿದ ಗೆಲುವು ಮುಖದೊಳಗೆ.”
( ಒಂದು ಕಥೆ – ಉತ್ತರಾಯಣ ಮತ್ತು...)
HSV ಹೋದರಂತೆ.. ಎಂಬ ಸುದ್ದಿ ಕೇಳಿದಾಗಿನಿಂದ ಅದೇನೋ ನನ್ನ ಮನದ ಭಾವಗಳೆಲ್ಲ ಹೆಪ್ಪುಗಟ್ಟಿದಂಥ ಅನುಭವ. ಎರಡಕ್ಷರದ ಶ್ರದ್ಧಾಂಜಲಿಯನ್ನೂ ಬರೆಯಲಾಗದ ಭಾವ ಜಡತೆ. ಬರೆದು ಮುಗಿಸಿಬಿಟ್ಟರೆ ಅದೆಲ್ಲಿ ಕವಿಯೊಡನೆಯ ಕೊನೆಯ ಋಣವೂ ಹರಿದುಕೊಂಡು ಬಿಡುತ್ತದೋ ಎನ್ನುವ ತಳಮಳ..ಆತಂಕ. ಬರೆಯದೇ ಹೋದರೆ ಅತೀ ಮಹತ್ವದ ಕಾರ್ಯವನ್ನೇನೋ ಬೇಕೆಂದೇ ಅಲಕ್ಷ್ಯ ಮಾಡುತ್ತಿರುವ ಚಡಪಡಿಕೆ..ಅಪರಾಧೀ ಭಾವ. ಅಂತೂ ಕೊನೆಗೂ ಪ್ರೀತಿಯ ಕಣ್ಣ ಕಂಬನಿಯಷ್ಟೇ ಅವರಿಗೆ ನಾವು ನೀಡಬಹುದಾದ ಕಾಣಿಕೆ.
ಜೀವ-ಜೀವನ ಪ್ರೀತಿ, ಜಗದ ಚೆಲುವು- ಒಲವು, ಅತೀ ಸೂಕ್ಷ್ಮ ಅಷ್ಟೇ ಬಲವತ್ತರವಾದ ಮಾನವ ಭಾವಲೋಕದ ಅನಾವರಣ, ತಾಳುವಿಕೆ, ಒಗ್ಗುವಿಕೆ ತನ್ಮೂಲಕ ಮಾಗುವಿಕೆ ಈ ಕವಿಯ ಸಾಹಿತ್ಯದ ಮುಖ್ಯ ಪ್ರತಿಪಾದನೆಗಳು. ಈ ಜೀವ ಜಗತ್ತಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಿಗೂ ಇವರು ಕಿವಿಯಾಗುತ್ತಾರೆ; ಕಣ್ಣಾಗುತ್ತಾರೆ; ದನಿಯಾಗುತ್ತಾರೆ; ಹಾಡಾಗುತ್ತಾರೆ. ‘ಶ್ರೀ ಸಂಸಾರಿ’ಯ ಶ್ರೀರಾಮಚಂದ್ರನನ್ನು, ‘ ಆಪ್ತ ಗೀತೆ’ ಯ ಶ್ರೀಕೃಷ್ಣನನ್ನು, ‘ ಬುದ್ಧ ಚರಣದ’ ತಥಾಗತನನ್ನು ಎಷ್ಟು ಮಣ್ಣಿನ ಮಕ್ಕಳನ್ನಾಗಿ ಮಾಡಿ ಮರ್ತ್ಯರಾದ ನಮಗೆ ಅವರೆಲ್ಲರನ್ನು ಅತ್ಯಾಪ್ತರಾಗಿಸುತ್ತಾರೆ.ಧನುರ್ಧಾರಿ ರಾಮನ ಹೆಗಲಮೇಲಿನ ಬಿಲ್ಲು-ಬಾಣ ಕೆಳಗಿಳಿಸಿ ಅಲ್ಲೊಂದು ಪುಟ್ಟ ಅಳಿಲನ್ನು ಕೂಡಿಸುತ್ತಾರೆ. ರಾಜಸೇವೆಗಷ್ಟೇ ಮಿಗಿಲಾದ ‘ ಪುಷ್ಪಕ’ ದಲ್ಲಿ ವಾನರ – ಭಲ್ಲೂಕಾದಿಗಳಿಗೂ ಸೀಟು ಕೊಡಿಸಿಬಿಡುತ್ತಾರೆ. ಗೊಲ್ಲರ ಹುಡುಗ ‘ ಯಾದವ’, ‘ಕಾದವ’, ‘ ಸೇವಕ’ , ಶ್ರಾವಕ’ ನಾದ ಕಥೆ ಬಣ್ಣಿಸುತ್ತಾರೆ. ಲೋಕದ ಕಣ್ಣಿಗೆ ಕೇವಲ ಹೆಣ್ಣಾದ ರಾಧೆಯನ್ನು ಕೃಷ್ಣನನ್ನು ಕಾಣಿಸುತ್ತಾರೆ. ದ್ರೌಪದಿ, ಪೃಥೆ, ಮಂಥರೆ, ಊರ್ಮಿಳೆಯರ ಎದೆಯಾಳಕ್ಕಿಳಿದು ಮಂಥನ ನಡೆಸುತ್ತಾರೆ; ಹೃದಯ ಸಮುದ್ರದ ಹಾಲಾಹಲ - ಸುಧಾರಸಗಳನ್ನು ಹೊರ ಚೆಲ್ಲುತ್ತಾರೆ. “ ಕೊಂದವನದಲ್ಲ ಕಾದವನದ್ದು ಹಕ್ಕಿಯ ಹಕ್ಕು” ಎಂದು ಹೇಳಿ ಬುದ್ಧನ ಶಾಂತಿ- ಕರುಣೆಗಳಲ್ಲಿ ಮನ ತೊಯ್ಯಿಸುತ್ತಾರೆ.
“ ತಾನು ಕರಗದೇ ಮಳೆ ಸುರಿಸುವುದೇ ಶ್ರಾವಣದ ಸಿರಿ ಮುಗಿಲು?”, ‘ ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ’, ‘ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ’, ‘ತಾನೇ ಕಡಲಾಗಲು ಹೊರಟ ಗಂಗೆಗೆ ಆಣೆಕಟ್ಟು ಕಟ್ಟುವರಾರು?’, ‘ ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೇ? ‘....ಎಂಥೆಂಥ ಅದ್ಭುತ ಸಾಲುಗಳನ್ನವರು ಕೊಟ್ಟಿದ್ದು..ಪಟ್ಟಿ ಮಾಡುತ್ತ ಹೋದರೆ ಬೆಳಗಾಗುತ್ತದೆ. ಅವರ ಜೀವನ ಹಾಗೂ ಕೃತಿಗಳ ಕಿರುಪರಿಚಯ ಇಂತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ 1944ರ ಜೂನ್‌ 23ರಂದು ಜನಿಸಿದರು. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ.
ಪ್ರಾಥಮಿಕ ಶಿಕ್ಷಣ ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗದಲ್ಲಿ ಮಾಡಿದರು. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್‌ ಆಗಿ ಉದ್ಯೋಗ ಆರಂಭಿಸಿದರು.
ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿ ಪದವಿ ಗಳಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಎಚ್ಚೆಸ್ವಿ ರಚಿಸಿದ ಮುಖ್ಯ ಕಾವ್ಯ ಕೃತಿಗಳು: ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ). ಮಹಾಕಾವ್ಯ: ಬುದ್ಧ ಚರಣ
ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ).
ಮಕ್ಕಳ ಸಾಹಿತ್ಯಕ್ಕೆ ಕೊಡುಗೆ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು).
ಕಾದಂಬರಿ: ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು.
ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕಿರುತೆರೆ–ಚಲನಚಿತ್ರ: ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ.‌‌ ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.
ಪ್ರಶಸ್ತಿಗಳು: 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಕವಿಯ ಭೌತಿಕ ಶರೀರಕ್ಕೆ ಮಾತ್ರ ಕೊನೆ ಯಶ: ಕಾಯಕ್ಕಲ್ಲ ಎನ್ನುವುದು ಸರ್ವವಿದಿತ . ಅಕ್ಷರಗಳ ಅಕ್ಷಯವಾದ ಅಪೂರ್ವ ನಿಧಿಯನ್ನು ನಮಗಾಗಿ ಬಿಟ್ಟು ಹೋದ ನೆಚ್ಚಿನ ಕವಿಗೆ ಅಶ್ರುಪೂರ್ಣ ಭಾವನಮನ.
“ ಮುಳುಗಿದರೆ ಮುಳುಗಬೇಕೀ ರೀತಿ
ಹತ್ತು ಜನ ನಿಂತು ನೋಡುವ ಹಾಗೆ..
ಗೌರವ ಬೆರೆತ ಬೆರಗಲ್ಲಿ.
ಸೂರ್ಯ ಮುಳುಗುವ ಮುನ್ನ,
ಓಡೋಡಿ ಬರುವ ಜನ ಕೈ ಮುಗಿವ ಹಾಗೆ
ಮುಳುಗಲ್ಲಿ ಮುಳುಗಿ”
( ಆಗುಂಬೆಯ ಸೂರ್ಯಾಸ್ತ ).
ಓಂ ಶಾಂತಿರಸ್ತು
~ ಗೌರಿಪ್ರಸನ್ನ

ಕನ್ನಡ ನಾಡು, ಭಾಷೆ, ಉತ್ಸವ, ಮತ್ತು ಹೊಸವರ್ಷ …..

ಅನಿವಾಸಿಯ ಬಳಗಕ್ಕೆ ನಮಸ್ಕಾರ. 2025ರ ಹೊಸವರ್ಷದಲ್ಲಿಯ ನನ್ನ ಮೊದಲ ಸಂಚಿಕೆಗೆ ನಿಮ್ಮೆಲ್ಲರ ಸ್ವಾಗತ.  ಅನಿವಾಸಿ ಬಳಗದ ಉತ್ಸಾಹ ಹೆಚ್ಚುತ್ತಿರುವುದಕ್ಕೆ ಇತ್ತೀಚೆಗೆ ನಡೆದ ದಶಮಾನೋತ್ಸವ, ಹೊಸ ಸದಸ್ಯರುಗಳ ಆಗಮನ, ಬರವಣಿಗೆ ಇತ್ತ್ಯಾದಿಗಳೇ ಸಾಕ್ಷಿ.  ಇದರ ಜೊತೆಯಲ್ಲೇ, ಕೆಲವೇ ವಾರಗಳ ಹಿಂದೆ (ಕಳೆದ ವರ್ಷ ಅನ್ನಬಹುದಿತ್ತೇನೋ, ಆದರೆ ಎಷ್ಟೋ ದಿನ ಆದಂತೆ ಅನ್ನಿಸುವುದರಿಂದ ಬೇಡ ಅಂದುಕೊಂಡೆ) ಸಕ್ಕರೆಯ ನಾಡು, ಮಂಡ್ಯದಲ್ಲಿ ಹಿರಿಯ ಸಾಹಿತಿ ಶ್ರೀ ಗೋ ರು ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ನಡೆದ 87ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲೆಂದೇ ನಮ್ಮ ಅನಿವಾಸಿ ಬಳಗದ ಪ್ರತಿನಿಧಿಯಾಗಿ ತೆರಳಿದ್ದರು ನಮ್ಮ ನವೀನ್.  ಅವರು ಬರೆದ ವರದಿ ಇಲ್ಲಿ ಕೆಳಗಿದೆ.  ಅವರೇ ತೆಗೆದ ಹಲವು ಚಿತ್ರಗಳೂ ಜೊತೆಯಲ್ಲಿವೆ - ಅದರಲ್ಲಿ ಪರಿಚಿತ ಮುಖಗಳಿವೆ, ನೋಡಿ.

ಜೊತೆಯಲ್ಲಿ ನಮ್ಮ ಗೋಪಾಲಕೃಷ್ಣ ಹೆಗಡೆಯವರ ಒಂದು ಕವನವಿದೆ, ಹೊಸವರ್ಷದ ಆಶಯಗಳೊಂದಿಗೆ. ಅವರದ್ದೇ ಮಾತಿನಲ್ಲಿ ಕವನದ ಹುಟ್ಟಿನ ಪರಿಚಯವೂ ಇದೆ.

ಕೊನೆಯ ಕೊಸರಿನಂತೆ, ಹೆಗ್ಡೆಯವರದೊಂದು ಚಿತ್ರಕ್ಕೆ ನನ್ನದೊಂದು ಕಿರು ಕವನವನ್ನೂ ಹಾಕಿಬಿಟ್ಟಿದ್ದೇನೆ, ತಡೆಯಲಾರದೆ. ಕ್ಷಮೆಯಿರಲಿ.

ಎಂದಿನಂತೆ ಓದಿ, ತಮ್ಮೆಲ್ಲರ ಮನೋಭಿಪ್ರಾಯವನ್ನು ತಿಳಿಸುವುದನ್ನು ಮುಂದುವರೆಸಿ. ಹೊಸವರ್ಷದ ಶುಭಾಶಯಗಳು.
- ಲಕ್ಷ್ಮೀನಾರಾಯಣ ಗುಡೂರ
*******************************************
೮೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ೨೦೨೪, ಮಂಡ್ಯ

ಇತ್ತೀಚಿಗಷ್ಟೆ ೮೭ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಿತು. ಅದಕ್ಕಂತಲೇ ನಾನು ಭಾರತಕ್ಕೆ ಹೋಗಿದ್ದೆ. ಬಹಳ ವರ್ಷಗಳಿಂದಲೂ ಸಮ್ಮೇಳನದಲ್ಲಿ ಭಾಗಿಯಾಗುವ ತವಕವಿತ್ತು. ಆದರೆ ಆ ಸುಸಂದರ್ಭ ಈಗ ದೊರಕಿತು. ಬಹಳ ನಿರೀಕ್ಷಣೆಯಿಂದ ಸಿದ್ಧತೆ ಮಾಡಿಕೊಂಡಿದ್ದೆ. ಸಾಹಿತ್ಯ ಸಮಾರೋಪದಲ್ಲಿ ಸಾಕಷ್ಟು ಸಾಹಿತ್ಯದಬಗ್ಗೆ, ಕನ್ನಡ ಭಾಷೆ ಬಗ್ಗೆ ಕೇಳಿಬರುತ್ತದೆ, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವಸಾಹಿತಿ, ಕವಿ, ಬರಹಗಾರರ ನಡುವೆ ನಡೆದಾಡಿ, ಅವರನ್ನು ಆಲಿಸಿ ಅವರಿಂದ ಪ್ರೇರಣೆ ಪಡೆಯುವುದಲ್ಲದೆ, ಕನ್ನಡ ಭಾಷಾಕ್ಷೇತ್ರದಲ್ಲಿ ಎಂಥಹ ಬೆಳವಣಿಗೆ ರೂಪಗೊಂಡಿದೆ ಎಂದು ಕಾಣುವ ಹಂಬಲ ಬೆಳಸಿಕೊಂಡಿದ್ದೆ. ಇದಕ್ಕನುಗುಣವಾಗಿ ಲೀಡ್ಸ್ನಲ್ಲಿ ಮಾಡುತಿದ್ದ ಕೆಲಸವನ್ನು ಮೊಟಕುಗೊಳಿಸಿ ಹತ್ತಿದೆ, ಯುನೈಟೆಡ್ ಕಿಂಗ್ಡಮ್ನ ರಾಯಭಾರಿಯಂತೆ ಭಾವಿಸಿ. ಯಾಕಂದರೆ ನನಗೆ ತಿಳಿದಿರಲಿಲ್ಲ ಬೆರ್ಯಾರಾದರು ಇಲ್ಲಿಂದ ಹೋಗುವರೇನೋ ಅಂತ. ಆದರೆ ಅಲ್ಲಿಗೆ ಹೋದಮೇಲೆ ಲಂಡನಿನಿಂದ ಬಂದಿದ್ದ ಇನ್ನಿಬ್ಬರನ್ನು ಭೇಟಿಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿಯವರು ಕೆಲವೇ ದಿನಗಳ ಹಿಂದೆ ಬಂದು ನಮ್ಮೆಲ್ಲರಿಗೂ ಆಮಂತ್ರಣ ಕೊಟ್ಟಿದ್ದರು. ನಮ್ಮ ದೇಶವಲ್ಲದೆ ಕನ್ನಡಿಗರಿರುವ ಹತ್ತಾರು ರಾಷ್ಟ್ರಗಳಿಗೂ ಹೋಗಿ ವೈಯಕ್ತಿಕವಾಗಿ ಅಭಿಮಾನಿಗಳು ಭಾಗವಹಿಸಬೇಕೆಂದು ವಿನಂತಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಸಾಹಿತ್ಯ ಸಮ್ಮೇಳನ ಬರೇ ಕರ್ನಾಟಕದ ಕನ್ನಡ ಜನರ ತಾಣವಲ್ಲ, ಅವು ಪ್ರಪಂಚದ ಎಲ್ಲೆಡೆ ನೆಲಸಿ ತಮ್ಮ ತಾಯ್ನಾಡನ್ನ ಮರೆಯದ ಜನಸಮುದಾಯದ ಸಂಸ್ಥೆಗಳು ಎಂದು ಸಾರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ನಾನು ಗುರುವಾರ ೧೯ನೆ ತಾರೀಖಿನಂದೇ ಮಂಡ್ಯಕ್ಕೆ ಹೊರಟೆ. ವಿದೇಶದಿಂದ ಬರುವ ಎಲ್ಲ ಪ್ರತಿನಿಧಿಗಳಿಗೆಂದೇ ವಿಶೇಷ ವ್ಯವಸ್ಥೆ ಬಹಳ ದಿನಗಳಿಂದಲೇ ರೂಪಗೊಂಡಿತ್ತು. ಮೈಸೂರಿನ ಸಂದೇಶ್ ಪ್ರಿನ್ಸ್ನಲ್ಲಿ ನಮಗೆ ಉಳಿದುಕೊಳ್ಳುವ, ಅಲ್ಲಿಂದ ಪ್ರತಿದಿನ ಸಮ್ಮೇಳನ ನಡೆಯುವ ಮಂಡ್ಯಕ್ಕೆ ಹೋಗಿಬರುವ ಸಾರಿಗೆ ಏರ್ಪಾಟು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ನಿವೇದಿತಾ ಹೊನ್ನತ್ತಿಯವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ಯೋಜಿಸಿ ಕಾರ್ಯಗತ ಮಾಡಲಾಗಿತ್ತು. ನನ್ನ ಭಾಷೆಯ ಸಮ್ಮೇಳನಕ್ಕೆ ನಾನೇ ಎಲ್ಲ ಖರ್ಚುಗಳನ್ನ ವಹಿಸಿಕೊಂಡು ಸರ್ಕಾರಕ್ಕಾಗಲಿ ಪರಿಷತ್ತಿಗಾಗಲಿ, ಸಮ್ಮೇಳನ ಸಂಚಾಲಕ ಇಲಾಖೆಗಾಗಲಿ ಋಣಿಯಾಗಬಾರದೆಂದಿದ್ದೆ. ಆದರೆ ನಮಗ್ಯಾವ ಕುಂದುಕೊರತೆಯಾಗದೆ, ಶುಲ್ಕವೂಯಿಲ್ಲದೆ ವಸತಿ, ಊಟ, ಜೊತೆಗೆ ಮನರಂಜನೆ, ಸಾಹಿತ್ಯ ರಸದೌತಣ ಉಣಿಸಿದ ಎಲ್ಲರಿಗೂ ನಾವು ಚಿರಋಣಿಯಾಗಿರಬೇಕು.

ಮಂಡ್ಯದಲ್ಲಿ ಅದೊಂದು ದೊಡ್ಡ ‘ಕುಂಭಮೇಳ’ ಅನ್ನಬೇಕು. ವಿಶಾಲ ಜಾಗ, ಲಕ್ಷಾಂತರ ಜನರು ಕೂರುವಂಥ ಸಭಾಂಗಣ, ಅದಕ್ಕೆ ತಕ್ಕಂಥ ಅದ್ದೂರಿ ಪ್ರವೇಶದ್ವಾರ, ದೃಷ್ಟಿಯಗಲಕ್ಕೂ ಮೀರಿದ ವೇದಿಕೆ, ಮಹಾಮಂಟಪ, ಅಲ್ಲಲ್ಲೇ ನೋಡಲನುಕೂಲವಾಗುವಂಥ ಕ್ಲೋಸ್ಡ್-ಸರ್ಕ್ಯೂಟ್ ಟಿವಿ, ಹೊರಗಿದ್ದರೂ ಕೇಳಿಸಿಕೊಳ್ಳುವಂಥ ಧ್ವನಿ ವ್ಯವಸ್ಥೆ, ಇವೆಲ್ಲ ದೊಡ್ಡ ಪ್ರಮಾಣದ ವಿನ್ಯಾಸವೆಂತಲೇ ಭಾವಿಸಬೇಕು.

ಸಮ್ಮೇಳನದ ವಿಶೇಷತೆ ಅದರ ಸಭಾಧ್ಯಕ್ಷರಾದ ನಾಡೋಜ ಗೊ ರು ಚನ್ನಬಸಪ್ಪನವರು. ೯೪ ವರ್ಷಗಳಾಗಿದ್ದರೂ ಅವರ ಮಾತಿನಲ್ಲಿದ್ದ ಸ್ಪಷ್ಟತೆ, ಶಬ್ದಭಂಡಾರ, ನಿರರ್ಗಳತೆ ಎಂತಹವರನ್ನೂ ಮೋಡಿ ಮಾಡುವಂಥದು. ನೇರವಾಗಿ ಸರ್ಕಾರಕ್ಕೆ ಮತ್ತು ವಾಣಿಜ್ಯ ಉದ್ಯಮಿಗಳಿಗೆ ಕರೆ ಕೊಟ್ಟರು. ಕನ್ನಡ ಭಾಷೆ ಉಳಿಯಲು ಬೆಳೆಸಲು ಅವರಿಂದ ಯಾವ ತರಹದ ಉತ್ತೇಜನ ದೊರಕಬೇಕು, ಅದರಲ್ಲೂ ಆರ್ಥಿಕ ಹೊಣೆ ವಹಿಸಿಕೊಳ್ಳಬೇಕೆಂದು. ಕನ್ನಡ ವಿಶ್ವವಿದ್ಯಾನಿಲಯ, ಕನ್ನಡ ಶಾಲೆಗಳು ಮುಚ್ಚುವಂಥ ಸ್ಥಿತಿಯನ್ನು ತಡೆಗಟ್ಟಲು ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಮೇಲಿದ್ದ ರಾಜಕೀಯ ಮುಖಂಡರಿಗೆ ಮನದಟ್ಟು ಮಾಡಿದರು. ಕನ್ನಡ ಪ್ರಾಚೀನ ಭಾಷೆಯಾಗಿದ್ದರೂ ಇಂದಿನ ತಂತ್ರಜ್ಞಾನ ಅಳವಡಿಸಿಕೊಂಡು, ಎಲ್ಲರಿಗೂ, ಅದರಲ್ಲೂ ಪ್ರಚಲಿತ ಯುವಪೀಳಿಗೆಗೆ ತಟ್ಟುವಂಥ ಮಾರ್ಪಾಟು ಮಾಡಿಕೊಳ್ಳಬೇಕು ಎಂದು ಕರೆಯಿತ್ತರು. ಇದರ ಜೊತೆಗೆ ಅವರು ಮತ್ತಿತರ ಮಹತ್ತರ ವಿಷಯಗಳನ್ನೂ ಚರ್ಚಿಸಿದರು. ಶಿಕ್ಷಣ ಮಾಧ್ಯಮ, ಅಂತರ-ರಾಜ್ಯ ಭಾಷಾವಿನಿಮಯ, ಕನ್ನಡ ಕಲಿಕಾ ಕೇಂದ್ರಗಳು, ಪರಿಸರ ಸಂರಕ್ಷಣೆ, ಧರ್ಮದ ದುರುಪಯೋಗ, ಮಹಿಳಾ ಸಮಾನತೆ ಹಾಗು ಸ್ವಾಯತ್ತತೆ, ಕನ್ನಡಿಗರ ಉದ್ಯೋಗ ಬದುಕು, ಪ್ರವಾಸೋದ್ಯಮ, ಮುಂತಾದ ವಿಚಾರಗಳನ್ನು ಎತ್ತಿ ತೋರಿಸಿ ಆ ದಿಕ್ಕಿನಲ್ಲಿ ಏನೆಲ್ಲಾ ಕೆಲಸಕಾರ್ಯಗಳು ನಡೆಯಬೇಕಾಗಿದೆ ಎಂದು ವಿವರಿಸಿದರು.

ಕೆಲವರ ಭಾಷಣಗಳು ತೀರ್ವವಾಗಿದ್ದವು. ಮುಖ್ಯಮಂತ್ರಿ ಚಂದ್ರುರವರು ಸಭಾಧ್ಯಕ್ಷರು ಉಲ್ಲೇಖಿಸಿದ ವಿಷಯಗಳಲ್ಲಿ ಸರ್ಕಾರ ವರ್ಷದಿಂದ ವರ್ಷಕ್ಕೆ ಅನುಸರಿಸುತ್ತಿರುವ ನಿರ್ಲಕ್ಷರೀತ್ಯಕ್ರಮವನ್ನು ಕಟುವಾಗಿ ರಾಜಕೀಯ ಮುಖಂಡರ ಮುಂದೆಯೇ ಟೀಕಿಸಿದರು. ಪ್ರತಿ ಸಮ್ಮೇಳನದಲ್ಲೂ ದೊಡ್ಡ ದೊಡ್ಡ ಭಾಷಣಗಳು ಆಗುತ್ತವೆ, ಮುಂದೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ನಿರ್ಣಯವೂ ಆಗುತ್ತೆ, ಆದರೆ ಸಮ್ಮೇಳನ ತದನಂತರ ಅವೆಲ್ಲ ಒಣಆಶ್ವಾಸನೆಗಳಾಗೆ ಉಳಿಯುತ್ತವೆ ಎಂದು ಆಕ್ಷೇಪಿಸಿದರು.

ಅನೇಕ ಕವಿಗೋಷ್ಠಿಗಳು, ಉಪನ್ಯಾಸಗಳು, ಸಮಾಲೋಚನೆಗಳು ಮೂರು ದಿನಗಳಲ್ಲೂ ಹಬ್ಬಿಕೊಂಡು ಕಿಕ್ಕಿರಿದು ತುಂಬಿದ ಮಂಡ್ಯ ಜನಸಮೂಹಕ್ಕೆ ಒಂದು ರೀತಿಯ ಜ್ಞಾನೋದಯ ಉಂಟುಮಾಡಿತು. ಬೆಳಿಗ್ಗೆಯಿಂದ ಸಂಜೆವರೆಗೂ ಈ ಕಾರ್ಯಕ್ರಮಗಳಾದ ಮೇಲೆ ಮನರಂಜನೆ ಸಾಗುತಿತ್ತು. ಒಂದು ದಿನ ಸಾಧು ಕೋಕಿಲ, ಮತ್ತೊಂದು ಸಂಜೆ ಅರ್ಜುನ ಜನ್ಯ ನೆರೆದಿದ್ದ ಯುವಕ ಯುವತಿಯರನ್ನು ಕುರ್ಚಿ ಮೇಲೆಯೇ ನಿಂತು ಕುಣಿದಾಡುವಂತೆ ಮಾಡಿದರು.

ಪುಸ್ತಕ ಮಳಿಗೆಗಳು ಮತ್ತೊಂದು ವೈಶಿಷ್ಟತೆ. ಕೊಂಡುಕೊಳ್ಳುವರಿಗಂತೂ ಅದೊಂದುಹಬ್ಬವೇ. ಬಹುಷಃ ಇಲ್ಲಿವರೆಗೆ ಪ್ರಕಟವಾಗಿರುವ ಎಲ್ಲ ಕಾದಂಬರಿಗಳು ನಾಟಕಗಳುಕಾವ್ಯಗಳು, ಇತರೆ ಅನೇಕ ಬರವಣಿಗಗಳು ಮಳಿಗೆಗಳಲ್ಲಿ ರಾರಾಜಿಸುತ್ತಿದ್ದವು. ಪ್ರಕಾಶಕರುಅಲ್ಲಿ ತಮ್ಮ ತಮ್ಮ ಪ್ರಕಟಣೆಗಳನ್ನು ಸಾಲು ಸಾಲು ಅಂಗಡಿಗಳಲ್ಲಿ ಬಿತ್ತರಿಸಿ ೫೦%ಗೂ ಮಿಗಿಲಾಗಿ ರಿಯಾಯಿತಿ ಕೊಟ್ಟು ಓದುಗರನ್ನು ಪ್ರೇರೇಪಿಸುತ್ತಿದ್ದರು. ಅಷ್ಟೊಂದು ಪುಸ್ತಕಗಳು ಒಂದೇ ಜಾಗದಲ್ಲಿ ಪ್ರದರ್ಶನವಾದದನ್ನು ಬಹುಷಃ ನಾನು ನೋಡಿರಲಿಲ್ಲ.

ವಿದೇಶಿ ಕನ್ನಡಿಗರ ಸಂಘಟನೆ ಈ ಸಮ್ಮೇಳನದ ಮತ್ತೊಂದು ವೈಶಿಷ್ಟ್ಯಪೂರ್ಣಕಾರ್ಯಕ್ರಮ. ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ದೇಶಗಳ ಜೊತೆಗೆ ಅನೇಕ ಏಷ್ಯಾರಾಷ್ಟ್ರಗಳ ಕನ್ನಡಿಗರು ನೆರೆದಿದ್ದರು. ಅವರೊಡನಾದ ಸ್ನೇಹ-ಪರಿಚಯ ಪರಸ್ಪರಕ್ರಿಯೆ ಬಹಳ ಕಾಲ ಉಳಿಯುವಂಥದು. ನಾನು ಬಹಳಷ್ಟು ವಿದೇಶಿ ಕನ್ನಡಿಗರನ್ನು ಪರಿಚಯಿಸಿಕೊಂಡು ಅವರ ದೇಶಗಳಲ್ಲಿ ಜರುಗುತ್ತಿರುವ ಕನ್ನಡ ಕಲಿಸುವಂಥ ಶಾಲೆಗಳ ಬಗ್ಗೆ, ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡೆ. ನಾವು ರಾಜ್ಯ ದೇಶ ಬಿಟ್ಟುಹೋಗಿದ್ದರೂ, ನಮ್ಮ ಕನ್ನಡ ನಮ್ಮೆಲ್ಲರನ್ನೂ ಒಂದುಗೂಡಿಸುತ್ತಿರುವ ಪರಿ ಎಲ್ಲರಿಗೂ ಅಗಾಧ ಸಂತಸ ತಂದಿರುವುದನ್ನ ಎಲ್ಲರಲ್ಲೂ ಕಂಡೆ. ಮುಂದೆ ನಾವೆಲ್ಲ ಸೇರಿ ಯಾವ ರೀತಿಯ ಕೊಡುಗೆ ಕೊಡಲು ಸಾಧ್ಯ ಅನ್ನುವುದನ್ನು ಕೂಲಂಕಶವಾಗಿ ಚರ್ಚಿಸಿ ಕಾರ್ಯಗತ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದೆ ಕನ್ನಡ ಸಾಹಿತ್ಯ ಸಮ್ಮೇಳನ.

ಒಟ್ಟಿನಲ್ಲಿ ಈ ಸಮ್ಮೇಳನ ನನಗೊಂದು ಅಪೂರ್ವ ಅನುಭವ!

- ನವೀನ
*******************************************
ಆಕಾಶದ  ಆಶೆ -ಹೊಸ ವರುಷಕೆ!

(ಮುನ್ನುಡಿ: ಹೊಸವರ್ಷವೆಂದರೆ ನನಗೆ ಅದರಲ್ಲಿ ಕಂಡಿದ್ದು ಬರೇ ಅಂದಿನ ಮೈಮರೆತಂತ ಗಳಿಗೆಗಳಲ್ಲ; ಆದರೆ ಹಿಂದಿನ ದಿನಗಳ ನೋವು, ಮುಂದಿರುವ ಅನಿರ್ದಿಷ್ಟದ ಚಿಂತೆ. ಹಾಗೆಯೇ ಸಮತೋಲನದಲ್ಲಿ ಅವಲೋಕಿಸಿದಾಗ, ನನ್ನ ಮನಸ್ಸಿನಲ್ಲಿ ಆನಂದದಕ್ಕಾಗಿ ಆಕಾಶ ಬಯಸಿದ್ದೇನಿರಬಹುದೆಂಬ ಆ ಅವಲೋಕನದ ಚಿತ್ರಣ ಇಲ್ಲಿರಬಹುದು, ನೋಡಿ ತಿಳಿಸಿ; ಆದಿ-ಅಂತ್ಯಗಳ ನಡುವೆ ತುಂಬಿ ಸಂಬಂಧ ಕಲ್ಪಿಸಿದ್ದು ಅಂತರಂಗದ ಗಂಗೆ ಹರಿದು ಮಂದಹಾಸದಲ್ಲಿ ಮನೆಮಾಡಿದಂತಿತ್ತು, ಎನ್ನುವ ಭಾವವನ್ನು ಹಿಡಿಯಲು ಮಾಡಿದ ನನ್ನ ಕಿರು ಪ್ರಯತ್ನ, ನಿಮಗೆ ಹೇಗನ್ನಿಸಿತೋ ಕೇಳುವ ಕುತೂಹಲ! ಸಹನೆಯಿಂದ ಓದಿ ಪ್ರತಿಕ್ರಿಯಿಸುವಿರೆಂದು ನಂಬಿದ್ದೇನೆ – ಗೋಪಾಲಕೃಷ್ಣ ಹೆಗ್ಡೆ)

*****************************

ನೋವಿನಲ್ಲಿ ಕೂಡಿತ್ತೆ ೨೪ರ ಇತಿಹಾಸ?
ಮತ್ತೆ
ನಾಡೆಲ್ಲ ನೋಡಲಿಕ್ಕಿದೆ ೨೫ರ ಪರದೆ-
೨೬ಕ್ಕೆ ಮೊದಲು ಪರದಾಟ,
ನಂಬಲಾರದ ಸತ್ಯ
ಗೊತ್ತಿದ್ದರೂ
ಮೊದಲ ದಿವಸವೇ ಹೊಸವರುಷವನ್ನೆಲ್ಲ
ಬೊಗಸೆಯಲ್ಲಿ ಬಿಗಿದಿಟ್ಟ- ಒಂದನೇ ( ಒಂದೇ)
ದಿನದ ಇದು ಎಂಥಾ ವಿಪರ್ಯಾಸ-ಆಭಾಸ
ಸುಗ್ಗಿ ಕೋಲಾಟ !

ಯಾಕೋ ಈ ಮೌನದಲಿ
ಮೂಡಿದೆ ಮಂದಹಾಸ
- ಹಾರಿರುವೆ ಗರಿಬಿಚ್ಚಿ ಅರಳಿದ
ನೀ,
ನನ್ನ ನೀಲಿ ಆಕಾಶದ ಆಶೆ
ತೋರಿಸಿದೆ ದಿಗಂತ- ಅವಕಾಶ
ಮತ್ತೆ- ಮತ್ತೆ
ಹೀಗೆ
ಆಶಿಸಿಸಿದೆ ನೀಲಿತುಂಬಿರಲಿ - ಶುಭ್ರ
ಅಂತರಂಗ ಅದು
ನಿತ್ಯಾನಂದ, ಕಾವ್ಯಾನಂದದಂತಿರಲಿ
ಸದಾ ಈ ಬ್ರಹ್ಮಾಂಡ ಗುಂಡಿ
ಬಂಡಿ -
ಉಕ್ಕುತ್ತಿರಲಿ
ಸದಾ ಚೆಂದ ತಂದ ಅದು
ಬ್ರಹ್ಮಾನಂದ ಆಗಲಿ,
ಆದಿ - ಅಂತ್ಯಗಳ
ನಡುವೆ
ತುಂಬಿ ಈ,
ಅಂತರಂಗ - ಗಂಗೆ
ಹರಿಯಲಿ ಹರಿದ್ವಾರ
ವರ್ಷತುಂಬ 🙏💐🎊

- ಗೋಪಾಲಕೃಷ್ಣ ಹೆಗ್ಡೆ
*******************************************
ದೇವ - ದಾನವರಿಲ್ಲ, ಸಮುದ್ರಮಥನವೂ ಇಲ್ಲ;
ಹಾಲಾಹಲವಂತೂ ಮೊದಲೇ ಇಲ್ಲ.
ಲಕ್ಷ್ಮೀ ಚಂದ್ರರು ಇಲ್ಲ,
ಧನ್ವಂತರಿಯ ಸುಳಿವಿಲ್ಲ;
ಅಮೃತ ಕಲಶವದೊಂದೇ ಇರುವುದಲ್ಲ!
ಕೇಳು ಜನಮೇಜಯ, ಒಳ್ಳೆಯದ ಹೊರತರಲು ಉಳಿದೆಲ್ಲ ಬೇಕಿಲ್ಲ,
ಮನವದೊಂದಿದ್ದರೆ ಸಾಕಲ್ಲ!

- ಲಕ್ಷ್ಮೀನಾರಾಯಣ ಗುಡೂರ.
*******************************************