ಎಲ್ಲರಿಗೂ ನಮಸ್ಕಾರ, ನಾನು ಇಂದು ಬರೆಯುತ್ತಿರುವುದು, ನನ್ನ ಪ್ರೀತಿಯ ಗುರುಗಳಾದ ಡಾ. ಶಾಲಿನಿ ರಘುನಾಥ್ ಅವರ ಕುರಿತು. ಡಾ. ಶಾಲಿನಿ ರಘುನಾಥ್ ಅವರು ನಮ್ಮ ಕನ್ನಡ ನಾಡಿನ ಹೆಸರಾಂತ ಜಾನಪದ ವಿದ್ವಾಂಸರು. ಭಾಷಾ ವಿಜ್ಞಾನದಲ್ಲಿ ಹಲವು ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ. ಜಾನಪದ ಸಂಶೋಧನೆ ಮತ್ತು ಸಂಗ್ರಹಕಾರ್ಯದಲ್ಲೂ ಅವರು ತಮ್ಮ ವಿಶೇಷ ಛಾಪು ಮೂಡಿಸಿದ್ದಾರೆ. ತಮ್ಮ ಉದ್ಯೋಗವನ್ನು ತಪಸ್ಸಿನಂತೆ ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಧ್ಯಯನದ ರುಚಿ ಹತ್ತಿಸಿದವರು. ಕಲಿತ ವಿದ್ಯೆಯನ್ನು ಬದುಕಿಗೆ ಅಳವಡಿಸಿಕೊಂಡು ನಿರಂತರವಾಗಿ ಚಿಂತನೆ ಮಾಡುವ ಹಾದಿಯಲ್ಲಿ ನನ್ನನು ಕೈಹಿಡಿದು ನಡೆಸಿದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ ವಿದ್ಯಾರ್ಥಿಯಾಗಿ ನಾನು ಕಳೆದ ಎರಡು ವರ್ಷಗಳು ಆ ನಂತರದ ಈ 14 ವರ್ಷಗಳೂ ನನ್ನನು ಅದೇ ಕಲಿಕೆಯ ಹಾದಿಯಲ್ಲಿಟ್ಟಿವೆ. ಅಂತಹ ಗುರುವಿನ ಜೊತೆಗೆ ನನ್ನ ಒಡನಾಟದ ಕುರಿತು ನನ್ನ ಈ ಲೇಖನ. - ಅಮಿತಾ ರವಿಕಿರಣ್
ಚಿತ್ರಕೃಪೆ; ಗೂಗಲ್
ಪದವಿಯು ಮುಗಿದು ನಾಲ್ಕು ವರ್ಷಗಳ ಧೀರ್ಘ ಅಂತರದ ನಂತರ ಮತ್ತೆ ಕಾಲೇಜ್ ಸೇರಿಕೊಳ್ಳುವ ಸುಯೋಗ ಬಂದಿತ್ತು ಕಲಿಯಬೇಕೆಂಬ ಆಸೆ ಇತ್ತಾದರೂ ಅದನ್ನು ಆಚರಣೆಗೆ ಹೇಗೆ ತರುವುದು ಎಂಬುದು ತಿಳಿದಿರಲಿಲ್ಲ. ಪದವಿ ಪಡೆದಿದ್ದು ಸಂಗೀತದಲ್ಲಿ ಆದರೆ ಸ್ನಾತಕೋತ್ತರ ಅಧ್ಯಯನವನ್ನು ಸಂಗೀತದಲ್ಲೇ ಮುಂದುವರಿಸುವ ಮನಸ್ಸಿರಲಿಲ್ಲ ಸಂಗೀತ ಬಿಡುವ ಮನಸ್ಸು ಇರಲಿಲ್ಲ. ಈ ನಡುವೆ ಅತಿಯಾಗಿ ನನ್ನ ಮನಸನ್ನ ಆವರಿಸಿದ್ದ ವಿಷಯ ಜಾನಪದ. ಆಗ ನನಗೆ ಜನಪದ ಜಾನಪದ ದ ನಡುವಿನ ವ್ಯತ್ಯಾಸವು ತಿಳಿದಿರಲಿಲ್ಲ. ನನ್ನ ದನಿ ಕೇಳಿದ ಹಲವು ಮಂದಿ ಜನಪದ ಸಂಗೀತವನ್ನು ಮುಂದುವರಿಸಿಕೊಂಡು ಹೋಗು ಎಂದು ಹೇಳುತ್ತಿದ್ದರು ಮತ್ತು ಯಾವ ಕಾರ್ಯಕ್ರಮಕ್ಕೆ ಹೋದರೂ ಜಾನಪದ ಗೀತೆಗಳನ್ನು ಹಾಡು ಎಂಬ ಅಪೇಕ್ಷೆ ಮುಂದಿಡುತ್ತಿದ್ದರು. ಆ ಒಂದು ಹಿನ್ನೆಲೆಯಲ್ಲಿ ಜನಪದ ಸಂಗೀತದ ಬಗೆಗೆ ಏನಾದರು ಹೆಚ್ಚಿನದ್ದು ಕಲಿಯಬೇಕು ಎಂಬ ಸ್ಪಷ್ಟ ಉದ್ದೇಶದೊಂದಿಗೆ ನಾನು ಜಾನಪದ ಅಧ್ಯಯನ ಪೀಠದ ಹೊಸ್ತಿಲನ್ನು ತುಳಿದಿದ್ದೆ.
ಆ ದಿನ ನಮ್ಮ ಪ್ರವೇಶ ಪ್ರಕ್ರಿಯೆ ಆರಂಭವಾದ ದಿನ. ನಾನು ಮೊದಲ ಬಾರಿ ಶಾಲಿನಿ ಮೇಡಂ ಅವರನ್ನು ನೋಡಿದ್ದು ಹಸಿರು ಕೆಂಪಂಚಿನ ಧಾರವಾಡ ಸೀರೆಯಲ್ಲಿ ನಗು ಮೊಗದಿಂದ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಿದ್ದರು. ಅದೆಷ್ಟು ಸರಳತೆಯಿಂದ ಅವರು ನಮ್ಮೊಂದಿಗೆ ಮಾತನಾಡಿದ್ದರೆಂದರೆ, ಅವರು ಅಧ್ಯಯನ ಪೀಠದ ಅಧ್ಯಕ್ಷೆ ಎಂಬುದು ನನಗೆ ತಿಳಿಯಲೇ ಇಲ್ಲ. ಅಡ್ಮಿಷನ್ ಆಗಿ ಮನೆಗೆ ಹೋದಾಗ ಅದೇ ತಿಂಗಳ ಕಸ್ತೂರಿ ಮಾಸಪತ್ರಿಕೆಯಲಿ ಭಾಷಾ ಶಾಸ್ತ್ರ ಕುರಿತಾದ ಒಂದು ಲೇಖನದಲ್ಲಿ ಅವರ ಹೆಸರು ಉಲ್ಲೇಖಿಸಲಾಗಿತ್ತು. ಅವರಲ್ಲಿರುವ ಅಪರೂಪದ ಪುಸ್ತಕ ಸಂಗ್ರಹದ ಬಗ್ಗೆ ಲೇಖಕ ತುಂಬಾ ಚನ್ನಾಗಿ ಬರೆದಿದ್ದರು. ಅವರೇ ಇವರು ಎಂದು ತಿಳಿದಾಗ ಮನಸ್ಸು ಸಂಭ್ರಮಿಸಿತ್ತು.
ಕಾಲೇಜ್ ಶುರುವಾದ ನಂತರ ನಾವು ಅವರನ್ನು ಭೇಟಿ ಮಾಡಲು ಅವರ ಚೇಂಬರ್ ಗೆ ಹೋದಾಗ ಅವರು ಮಾತನಾಡಿದ ಶೈಲಿ, ಅವರ ಆತ್ಮೀಯತೆ ನನ್ನ ಶಿಕ್ಷಣ ಮುಂದುವರಿಸುವ ಕುರಿತು ಇದ್ದ ಹಲವು ದುಗುಡ ಕಡಿಮೆ ಮಾಡಿದ್ದವು. ಜೊತೆಗೆ ಅಷ್ಟೇ ಕಳಕಳಿಯಲ್ಲಿ ಹೇಳಿದ್ದರು. ಜಾನಪದವನ್ನು ಸುಲಭ , ಡಿಗ್ರಿ ಮುಗಿಸಲು ಒಂದು ಸರಳ ವಿಷಯ ಎಂಬ ಭಾವನೆ ಸಾಮಾನ್ಯ. ಮತ್ತು ಅಧ್ಯಯನ ಪೀಠಕ್ಕೆ ಬರುವ ಹಲವರಲ್ಲಿ ಈ ಆಲೋಚನೆಯೇ ಇರುತ್ತದೆ ಆದರೆ ನೀವು ಅದನ್ನು ನಿಜಕ್ಕೂ ಇಷ್ಟಪಟ್ಟು ಅಭ್ಯ್ಯಸಿಸಿ ಏನಾದರು ಹೊಸ ದಿಶೆಯಲ್ಲಿ ಆಲೋಚಿಸಬೇಕು. ಬರೀ ಜಾಬ್ ಗಿಟ್ಟಿಸಲು ಒಂದು ಡಿಗ್ರಿ ಅಂದುಕೊಳ್ಳದೆ ಪ್ರೀತಿಯಿಂದ ಅಧ್ಯಯನ ಶುರು ಮಾಡಿ, ಎಲ್ಲಿ ನೋಡಿದರೂ ನಿಮಗೆ ಜನಪದವೇ ಕಾಣಬೇಕು. ಈ ವಿಷಯವನ್ನು ಮನದಟ್ಟು ಮಾಡಿಕೊಂಡೆ ಕ್ಲಾಸಿಗೆ ಬನ್ನಿ ಮತ್ತು ತರಗತಿಗಳನ್ನು ತಪ್ಪಿಸಬೇಡಿ ಅಂದರು.
ಮೊದಲ ಸೆಮಿಸ್ಟರ್ ನಲ್ಲಿ ಜಗತ್ತಿನ ಜಾನಪದ ಇತಿಹಾಸ ಎಂಬ ವಿಷದೊಂದಿಗೆ ಮೇಡಂ ಮೊದಲಬಾರಿ ನಮ್ಮ ಮುಂದಿದ್ದರು , ಯುರೋಪ್ ಅಮೇರಿಕ ಮತ್ತು ರಷ್ಯ ಭಾರತದ ಜನಪದ ಇತಿಹಾಸವನ್ನು ಹೇಳುವುದರೊಂದಿಗೆ ಇತಿಹಾಸ ಓದುವುದು ನಮ್ಮ ವರ್ತಮಾನಕ್ಕೆ ಹೇಗೆ ಉಪಯೋಗಕಾರಿ ? ಅನ್ನುವ ವಿಷಯವನ್ನು ಅದೆಷ್ಟೋ ಉದಾಹರಣೆಗಳೊಂದಿಗೆ ವಿವರಿಸಿದ್ದರು ಅದರಲ್ಲೂ ಎಂದೋ ಕಳೆದು ಹೋದ ಫಿನ್ಲ್ಯಾಂಡ್ ನ ಕಲೆವಾಲ್ ಎಂಬುವ ಕಥನಗೀತೆಯನ್ನು ಸಂಪಾದಿಸಿದ ರೀತಿ ಅದು ಅಲ್ಲಿನ ಜನಮಾನಸದ ಮೇಲೆ ಬೀರಿದ ಪರಿಣಾಮ. ಮತ್ತು ಅದೇ ಕ್ರಮವನ್ನು ಬಳಸಿ ತುಳುನಾಡಿನ ಸಿರಿ ಪಾಡ್ದನಗಳನ್ನು ಸಂಗ್ರಹಿಸಿದ ಕ್ರಮವನ್ನು ಅದರ ಸುತ್ತಲಿನ ವಿಷಯವನ್ನು ಮನಮುಟ್ಟುವಂತೆ ಅರ್ಥಮಾಡಿಸಿದ್ದರು.
ನಾನು ಎಂ ಎ ಸೇರಿಕೊಂಡ ವರುಷವೇ ಮೊದಲಬಾರಿ ವಿಶ್ವವಿದ್ಯಾಲಯ ಮುಕ್ತ ವಿಷಯೊಂದನ್ನು ಆಯ್ಕೆಮಾಡಿಕೊಳ್ಳುವ ಹೊಸ ವಿಧಾನವನ್ನು ಪರಿಚಯಿಸಿತ್ತು. ಅದನ್ನು open elective subject ಎಂದು ಕರೆದಿದ್ದರು ನಾವು ಆಯ್ದುಕೊಂಡ ವಿಷಯದ ಜೊತೆಗೆ open elective ವಿಷಯದ ತರಗತಿಯ ಹಾಜರಿ ಮತ್ತು ಅದರ ಅಂಕಗಳು ಮುಖ್ಯವಾಗಿದ್ದವು. ಆ ಹೊತ್ತಿನಲ್ಲಿ ನನ್ನ ಕರೆದು ಮೇಡಂ ಹೇಳಿದ್ದರು 'ಯಾವ ವಿಷಯ ತಗೋಬೇಕು ಅನ್ನುವುದರ ಬಗ್ಗೆ ನಿಮಗೆ ಪೂರ್ಣ ಸ್ವಾತಂತ್ರವಿದೆ ಆದರೆ ನಿಮಗೊಂದು ಸಲಹೆ ಕೊಡುತ್ತೇನೆ. ಯಾವುದಾದರು ವಿದೇಶಿ ಭಾಷೆಯನ್ನು ಆಯ್ಕೆಮಾಡಿ. ಅದರಿಂದ ನಿಮ್ಮ ಕಲಿಕೆ ಇನ್ನು ಉತ್ತಮಗೊಳ್ಳುತ್ತದೆ, ಮತ್ತು ಜಾನಪದ ವಿಧ್ಯಾರ್ಥಿಗಳು ಆಂಗ್ಲ ಭಾಷೆ ಮತ್ತು ಇತರ ಭಾಷೆಗಳನ್ನು ಕಲಿಯಬೇಕು ಅದರಿಂದ ಅಧ್ಯಯನದಲ್ಲಿ ಹೊಸತನ ಕಾಣ ಸಿಗುತ್ತದೆ ಎಂದರು. ಅವರ ಮಾತಿನ ಅರ್ಥ,ದೂರದರ್ಶಿತ್ವ ಆಗ ನನಗೆ ನಿಜಕ್ಕೂ ಅರ್ಥವಾಗಿರಲಿಲ್ಲ. ಆದರೆ ಅವರ ಮಾತನ್ನು ಮೀರದೆ ಅವರ ಸಲಹೆಯಂತೆ ನಾನು ಕ್ರಮವಾಗಿ ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಆಯ್ಕೆ ಮಾಡಿಕೊಂಡು ಆ ಭಾಷೆಗಳ ಪ್ರಾರಂಭಿಕ ಕಲಿಕೆ ಮಾಡಲು ಸಾಧ್ಯವಾಯಿತು ,
`The dream begins with a teacher who believes in you ,who tugs and pushes and leads you to the next plateau sometimes poking you with a sharp stick' ಅನ್ನುವ ಮಾತು ಅದೆಷ್ಟು ಸತ್ಯ ನನ್ನಲ್ಲಿ ಅವರು ಕನಸುಗಳನ್ನು ಬಿತ್ತುತ್ತಿದ್ದರು ಸ್ನಾತಕೋತ್ತರ ಜಾನಪದ ಪದವಿ ಪಡೆದವರಿಗೆ ಲೆಕ್ಚರರಿಕೆ ಒಂದೇ ಆಯ್ಕೆ ಅಲ್ಲ! ಅದಲ್ಲದೆ ಹಲವಾರು ಕ್ರಿಯಾಶೀಲ ಕ್ಷೇತ್ರಗಳು ಕಾಯುತ್ತಿವೆ. ಆದರೆ ನಾವು ಅದರ ಬಗ್ಗೆ ಧೇನಿಸುತ್ತಿರಬೇಕು. ಸದಾಕಾಲ ಒಂದು ಎಚ್ಚರಿಕೆ ನಮ್ಮಲ್ಲಿರಬೇಕು. ಆ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ? ಯಾಕೆ ಹೀಗಲ್ಲದಿದ್ದರೆ ಹೇಗೆ ಆಗಬಹುದಿತ್ತು? ಅನ್ನುವ ಪ್ರಶ್ನೆಗಳನ್ನು ಪ್ರತಿ ವಿಷಯಕ್ಕೂ ನಮ್ಮನ್ನು ನಾವು ಕೇಳಿಕೊಳ್ಳಬೇಕು ಅದು ನಮ್ಮ ಆಲೋಚನೆಯನ್ನು ಮೊನಚು ಮಾಡುತ್ತದೆ ಎಂಬುದು ವಿದ್ಯಾರ್ಥಿಗಳಿಗೆಲ್ಲರಿಗೂ ಅವರು ಹೇಳುತ್ತಿದ್ದ ಕಿವಿಮಾತು.
ವಿರಾಮವಿರದ ಅವರ ದಿನಚರಿಯಲ್ಲೂ ಕ್ಲಾಸ್ ಗೆ ಒಮ್ಮೆಲೇ ಬಂದು ಯಾವುದಾದರೂ ವಿಷಯಗಳನ್ನು ಕೊಟ್ಟು ಅದರ ಬಗ್ಗೆ ಬರೆದು ತರಲು ಹೇಳುತ್ತಿದ್ದರು ಮತ್ತು ಪ್ರತಿ ಬರಹವನ್ನು ಕೂಲಂಕಷವಾಗಿ ಪರಿಶಿಲಿಸಿ ತಿದ್ದುಪಡಿ ಹೇಳುತಿದ್ದರು. ಆ ನಿಟ್ಟಿನಲ್ಲಿ ನಾನು ಹಲವು ಚಿಕ್ಕಪುಟ್ಟ ಲೇಖನ ಬರೆಯುತ್ತಿದ್ದೆ. ಅದರಲ್ಲಿ ಮುಖ್ಯವಾದದ್ದು ಚಿತ್ರರಂಗ ಮತ್ತು ಜಾನಪದ ಎಂಬ ವಿಷಯದ ಬಗ್ಗೆ ವಿವರವಾಗಿ ಬರೆದ ನಿಬಂಧ. ಅದನ್ನು ನೆನೆಸಿಕೊಂಡರೆ ಈಗಲೂ ನನಗೆ ನಗು ಬರುತ್ತದೆ. ಸಾಕಷ್ಟು ವಿಷಯಗಳನ್ನು ಇಂಟರ್ನೆಟ್ ನಿಂದ ಸಂಗ್ರಹಿಸಿದ್ದೆ. ಮೇಡಂ ಅವರಿಂದ ಸಾಕಷ್ಟು ಮೆಚ್ಚುಗೆಯನ್ನೂ ನಿರೀಕ್ಷಿಸಿದ್ದೆ. ಆದರೆ ಅವರು ಮಾತ್ರ 'ಸಂಗ್ರಹ ಚನ್ನಾಗಿದೆ ತುಂಬಾ ವಿಷಯ ಹುಡುಕಿದೀರಿ ಅನ್ನೋದನ್ನು ಬಿಟ್ಟು ಬೇರೇನೂ ಹೇಳಲೇ ಇಲ್ಲ. ನನಗೆ ನಿಜಕ್ಕೂ ಬೇಜಾರಾಗಿತ್ತು. ಕೆಲವು ವಾರಗಳ ನಂತರ ನನ್ನ ಕರೆದು ಹೇಳಿದರು ‘ನೀವು ತುಂಬಾ ಶ್ರಮ ಪಡ್ತೀರಿ,ವಿಷಯ ಸಂಗ್ರಹಿಸ್ತೀರಿ ಬರೀತೀರಿ ಕೂಡ ಆದರೆ ಅದನ್ನು ವ್ಯವಸ್ತಿತವಾಗಿ ಜೋಡಿಸುವುದರಲ್ಲಿ ಮುಗ್ಗರಿಸುತ್ತೀರಿ ಇದೊಂಥರ ಇಟ್ಟಿಗೆ ಸಿಮೆಂಟ್ ಕಲ್ಲು ಎಲ್ಲ ವನ್ನು ತಂದು ರಾಶಿ ಹಾಕಿ ಒಮ್ಮೆಲೇ ಮನೆ ಕಟ್ಟುವ ಹುರುಪಿನಂತೆ. ಆದರೆ ಮನೆ ಕಟ್ಟಲು ಒಂದು ಕ್ರಮವಿದೆ ಅದನ್ನು ನೀವು ಕಲಿಬೇಕು ಅದಕ್ಕೆ ನೀವು ಬಹಳ ಓದಬೇಕು ಅಂದು ತಮ್ಮಲ್ಲಿದ್ದ ಹಲವಾರು ಪುಸ್ತಕಗಳನ್ನು ನನಗೆ ಓದಲು ಕೊಟ್ಟಿದ್ದರು. ಬರವಣಿಗೆಯ ಮುನ್ನ ಸಂಗ್ರಹಿಸಿದ ವಿಷಯವನ್ನು ಹೇಗೆ ವಿಂಗಡಿಸುವುದು. ಕ್ರಮವಾಗಿ ಜೋಡಿಸುವುದು ಮತ್ತು ನಿರೂಪಿಸುವುದು ಹೇಗೆ ಅನ್ನುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದರು.
'A teacher is who gives you something to take home to Think about ,besides homework' ಅವರು ಕಲಿಸುತ್ತಿದ್ದುದೆ ಹಾಗೆ, ಪಾಠಗಳು ನಿಮಿತ್ಯ ಮಾತ್ರ ಆದರೆ ನಿಜವಾದ ಪಾಠಶಾಲೆ ಸಮಾಜ, ಜನಪದವನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿಯಾಲಾಗದು, ನಿಮಗೆ ಅದರ ಗುಂಗು ಹಿಡಿಯಬೇಕು ಅನ್ನುತ್ತಿದ್ದರು ಮತ್ತು ಅದು ನನಗೆ ಹಿಡಿದೇ ಬಿಟ್ಟಿತು. ಕಾಲೇಜಿಗೆ ಹೋಗಲು ನಾನು ದಿನ ಮುಂಡಗೊಡಿನಿಂದ ಧಾರವಾಡಕ್ಕೆ, ಮತ್ತೆ ವಾಪಸ್ ಮನೆಗೆ ಬರಲು ಬಸ್ನಲ್ಲಿ 150ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ಆ ಪಯಣದಲ್ಲಿ ದಿನದ ನಾಲ್ಕು ಘಂಟೆಗಳು ವ್ಯಯವಾಗುತಿದ್ದವು, ಅಷ್ಟು ಸಮಯ ನನ್ನ ಆಲೋಚನೆ ಓದು ಬರೀ ಜನಪದವೇ. ಕುರಿಮಂದೆಯ ಹೆಣ್ಣುಮಗಳ ಕಿವಿಯಲ್ಲಿಯುವ ಬುಗುಡಿ ಯಿಂದ ಅದ್ಯಾರೊ ಹಿಡಿದು ಬಂದ ಕಸೂತಿ ಚೀಲದವರೆಗೆ. ಆಟೋ ರಿಕ್ಷಾ ಹಿಂಬದಿಯ ತಮಾಷೆ ಬರಹಗಳಿಂದ ಹಿಡಿದು, ಜಗಳದಲ್ಲಿ ಬಳಸಲ್ಪಡುವ ಬೈಗುಳದಲ್ಲಿಯೂ, ಎಲ್ಲಿ ನೋಡಿದರಲ್ಲಿ ಜನಪದವೇ ಕಾಣುತಿತ್ತು.
ಮೇಡಂ ಅವರು ನನ್ನ ಮೇಲೆ ಅಷ್ಟು ಪರಿಣಾಮ ಬೀರಿದ್ದರು ಮಾತಿನಲ್ಲಿ, ಹಾಡಿನಲ್ಲಿ,ಕುಣಿತದಲ್ಲಿ ,ನಡೆಯಲ್ಲಿ ,ಹಿತ್ತಲ ಕಸದಲ್ಲೂ ಜನಪದೀಯ ಅಂಶಗಳು ಕುಣಿದಾಡುತ್ತಿದ್ದವು. ಆಗ ನನ್ನ ಮನಸು ಬುದ್ದಿ ಅನುಭವಿಸಿದ ಆ ಖುಷಿ, ಆತ್ಮ ಸಂತೃಪ್ತಿಯನ್ನು ಬರಹದಲ್ಲಿ ಹಿಡಿದಿದಲಾಗದು. ಇಷ್ಟು ವರ್ಷ ನಾನು ಹುಡುಕುತ್ತಿದ್ದುದು ಇದೆ ಏನೋ ಅನ್ನ್ನಿಸುವುದಕ್ಕೆ ಶುರುವಾಗಿದ್ದು ನನ್ನ ಎಲ್ಲ ಚಡಪಡಿಕೆಗಳಿಗೆ ಉತ್ತರ ಜಾನಪದ ಮಾತ್ರವೇ ನೀಡಬಲ್ಲದು ಎಂಬ ಸತ್ಯ ಅರಿವಾಗಿತ್ತು.
ಇದೆ ಸಮಯದಲ್ಲಿ ಮೇಡಂ ಅವರ ಮತ್ತೊಂದು ಯೋಜನೆಯಿಂದ ನಾನು ಜಾನಪದದ ಮತ್ತೂಂದು ಮಗ್ಗಲು ನೋಡುವಂತಾಯಿತು. ಪ್ರವಾಸೋದ್ಯಮ ಮತ್ತು ಜಾನಪದ ಎಂಬ ವಿಷಯದ ಮೇಲೆ ಮೂರು ದಿನಗಳ ಕಾರ್ಯಾಗಾರ, ನನ್ನ ಸ್ನಾತಕೋತ್ತರ ಅಧ್ಯಯನದ ಇನ್ನೊಂದು ತಿರುವು ಅದು. ಅಲ್ಲಿ ನಾ ತಿಳಿದ ,ನೋಡಿದ ,ಕಲಿತ ವಿಷಯ ಹಲವು ಅಲ್ಲಿಯ ತನಕ ಸಂಗೀತ ಮತ್ತು ಜಾನಪದವನ್ನು ಜೊತೆಮಾಡಿ ಅದನ್ನೇ ನನ್ನ ಮುಖ್ಯ ಅಧ್ಯಯನದ ವಿಷಯವನ್ನಾಗಿ ಮಾಡಿಕೊಳ್ಳಬೇಕು, ಸಂಶೋಧನೆಗೆ ಅಣಿಯಾಗಬೇಕು ಅಂದುಕೊಂಡ ನನಗೆ ಜನಪದ ವೈದ್ಯದ ಮೇಲೆ ಪ್ರೀತಿ ಹುಟ್ಟಿತು. ಅದಕ್ಕೆ ಕಾರಣವಾಗಿದ್ದು ಹೊನ್ನಾವರದ ಜನಪದ ತಜ್ಞೆ ಶ್ರೀಮತಿ ಶಾಂತಿ ನಾಯಕ್ .
ಸೆಮಿನಾರ್ ಮುಗಿಸಿ ಬಂದ ದಿನದಿಂದಲೇ ನಾನು ಮೇಡಂ ಅವರ ಬೆನ್ನು ಬಿದ್ದೆ. ಜನಪದ ವೈದ್ಯದ ಕುರಿತು ಅವರಲ್ಲಿದ್ದ ಅಪರೂಪದ ಪುಸ್ತಕಗಳು ,ಲೇಖನಗಳು, ಅವರಿಗೆ ತಿಳಿದಿದ್ದ ಹಲವಾರು ವಿಷಯಗಳನ್ನು ಸಮಯ ಸಿಕ್ಕಾಗಲೆಲ್ಲ ಚರ್ಚಿಸುತ್ತಿದ್ದರು.ಮತ್ತು ಜನಪದ ವೈದ್ಯದ ಕುರಿತು ಸಂಶೋಧನೆ ಅಥವಾ ಅಧ್ಯಯನ ಮಾಡುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಮೊದಲೇ ಅವರು ನನಗೆ ಎಚ್ಚರಿಸಲು ಮರೆಯಲಿಲ್ಲ. ಅವರ ಕಾರಣದಿಂದಲೇ ನಾನು ಶಾಂತಿ ನಾಯಕ್ ,ಏನ್ ಆರ್ ನಾಯಕ್, ಅರವಿಂದ್ ನಾವಡ, ಅಂಬಳಿಕೆ ಹಿರಿಯಣ್ಣ ,ಮತ್ತು ಜಾನಪದ ಲೋಕದ ಹಲವು ದಿಗ್ಗಜರನ್ನು ಭೇಟಿ ಮಾಡಿದೆ. ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ ಎಂಬ ವಿಷಯದ ಬಗ್ಗೆ ವಿಚಾರ ಕಮ್ಮಟ ಏರ್ಪಡಿಸಿದಾಗ ಅಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಮೇಡಂ ಅದೆಷ್ಟು ಚನ್ನಾಗಿ ಆಯ್ಕೆ ಮಾಡಿದ್ದಾರೆ ವಾಹ್ ಅನ್ನಿಸುತ್ತಿತ್ತು. ಪ್ರತಿಯೊಂದು ವಿಷಯವು ಅನನ್ಯ. ಟಿ ಎಸ ನಾಗಭರಣ ಅವರನ್ನು ನೇರ ಸಂವಾದಕ್ಕೆ ಕರೆದು ಅದೆಷ್ಟು ಚಂದದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳ ಮುಂದೆ ಇಟ್ಟಿದ್ದರು ಮತ್ತು ಅದು ಅಷ್ಟೇ ಉಪಯುಕ್ತವಾಗಿತ್ತು. ಅಂಥದೇ ಇನ್ನೊಂದು ಅನನ್ಯ ಕಾರ್ಯಕ್ರಮ ಶಿರಸಿಯ ಅಜ್ಜಿಮನೆಯಲ್ಲಿ ನಡೆದ ಸ್ಥಳೀಯ ಪರಂಪರಾಗತ ಜ್ಞಾನ ಮತ್ತು ಆರೋಗ್ಯ. ಇಲ್ಲಿ ಚರ್ಚಿತವಾದ ವಿಷಯಗಳೂ ಅಷ್ಟೇ ಈಗಲೂ ಹಸಿರು ಹಸಿರು ಕೆಲವೊಮ್ಮೆ ಶಿಬಿರದ ನಡುವೆ ಮೇಡಂ ನಮಗೆ ವಿಷಯ ಸಂಬಂಧಿ ಪ್ರಶ್ನೆ ಕೇಳುತ್ತಿದ್ದರು, ಮತ್ತು ಸಂಪನ್ಮೂಲ ವ್ಯಕ್ತಿ ಮಾತನಾಡುತ್ತಿರುವ ವಿಷಯಕ್ಕೆ ನಾವು ಎಷ್ಟರ ಮಟ್ಟಿಗೆ ಕನೆಕ್ಟ್ ಆಗಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದರು , ಈ ದಿಸೆಯಲ್ಲಿ ನಾವು ಭೇಟಿಯಾದದ್ದು ಅಪರೂಪದ ವಿಜ್ಞಾನಿ ಪಲ್ಲತಡ್ಕ ಕೇಶವ ಭಟ್ಟ್ ಅವರನ್ನ , ಈ ರೀತಿಯ ಅನನ್ಯ ವಿಚಾರ ಮತ್ತು ದೃಷ್ಟಿಕೋನ ಮತ್ತು ಸರಳತೆ ಮೇಡಂ ಅವರನ್ನು ಮತ್ತೂ ಹೆಚ್ಚು ಗೌರವಿಸುವಂತೆ ಮಾಡುತ್ತಿದ್ದವು ,
ಆ ವರೆಗೆ ಮೇಡಂ ಅಂದರೆ ನನಗೆ ನನ್ನ ದೊಡ್ಡಮ್ಮ ಚಿಕ್ಕಮ್ಮ ಸೋದರತ್ತೆ ರೂಪದಲ್ಲೇ ಕಂಡಿದ್ದರು. ಅವರು ಯಾವತ್ತು ಸಿಟ್ಟು ಮಾಡಿದ್ದು, ಜೋರಾಗಿ ಮಾತಾಡಿದ್ದು,ತಾಳ್ಮೆ ಕಳೆದುಕೊಂಡಿದ್ದು ನಾನು ನೋಡೇ ಇಲ್ಲ. ಎಂಥ ಕಠಿಣ ಪರಿಸ್ಥಿತಿಯಲ್ಲೂ ಅವರೊಂದು ಹೊಸ ವಿಚಾರ ಹುಡುಕಿ ಅದನ್ನು ಹಿಂಬಾಲಿಸಲು ಹೊರಡುತ್ತಿರುವಂತೆ ನನಗೆ ಭಾಸವಾಗುತಿತ್ತು. ಅದು ನನ್ನ ಕೊನೆ ಸೆಮಿಸ್ಟರ್. ನಾವು ಕ್ಷೇತ್ರ ಕಾರ್ಯ ಮಾಡಿ ನಿಬಂಧವಿ ಬರೆದು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಬೇಕಿತ್ತು. ನಾನು ಆಯ್ದು ಕೊಂಡಿದ್ದು ಬಾಣಂತಿ, ನವಜಾತ ಶಿಶುವಿನ ಆರೈಕೆ ಮತ್ತು ಜನಪದ ವೈದ್ಯ ಪದ್ಧತಿ. ಆಗ ಮಾತ್ರ ಮೇಡಂ ಅವರ ಇನ್ನೊಂದು ರೂಪ ನೋಡಿದ್ದು. ನಾನು ಅತಿ ಭಾವುಕಿ, ಸಿನಿಮ ಕಾದಂಬರಿ ಭಾವಗೀತೆ,ಗಝಲ್ ಹುಚ್ಚು ಇದ್ದಿದ್ದಕ್ಕೋ ಏನೋ ನನ್ನ ಬರವಣಿಗೆ ಒಂದು ವಿಚಿತ್ರ ಧಾಟಿಯಲ್ಲಿ ಇರುತಿತ್ತು.
ರಜಾ ಅರ್ಜಿಯನ್ನೂ ಕವಿತೆಯಂತೆ ಬರೆಯುತ್ತಿದ್ದೆ. ನಿಬಂದ ಬರೆಯುವಾಗ ನನ್ನ ಅದೇ ಬರವಣಿಗೆ ಮುಂದುವರಿಯಿತು , ಮೇಡಂ ನಾಲ್ಕು ಬಾರಿ ನನ್ನ ಕರಡು ಪ್ರತಿಯನ್ನು ಸರಿ ಇಲ್ಲ ಎಂದು ಮರಳಿಸಿ ಬಿಟ್ಟರು. ಅದು ಕೊನೆ ಹಂತ ನನ್ನಲ್ಲಿ ಸಾಕಷ್ಟು ಮಾಹಿತಿ ಇತ್ತು ಬರವಣಿಗೆ ಸಂಪೂರ್ಣ ಗೊಂಡಿತ್ತು. ಯಾಕೆ ?ಏನು ತಪ್ಪು ಎಂಬುದು ಅರಿವಿಗೆ ಬರಲಿಲ್ಲ ,ಮತ್ತೆ ಕೊಟ್ಟೆ ಆಗ ಅಂದರು; ನಿಮ್ಮ ತಪ್ಪು ನಿಮಗೆ ಗೊತ್ತಾಗುತ್ತೆ ಅಂದುಕೊಂಡೆ. ನೀವು ಅದನ್ನು ಗಮನಿಸಿಯೇ ಇಲ್ಲ ಆದಷ್ಟು ಸರಳ ವಾಕ್ಯಗಳನ್ನು ಬಳಸಿ. ನೇರ ವಿಷಯಗಳನ್ನು ಹೇಳುವಾಗ ಅಷ್ಟೇ ದೃಡವಾಗಿ ನೇರವಾಗಿ ಹೇಳಬೇಕು ಮತ್ತು ಅದಕ್ಕೊಂದು ಚೌಕಟ್ಟಿರಬೇಕು ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಬರೆಯೋದಲ್ಲ ಅಂದು ಮತ್ತೆ ವಾಪಸ್ ಮಾಡಿದ್ದರು. ಬಸ್ಸಿನಲ್ಲಿ ಕುಳಿತು ಮತ್ತೆ ಹಾಳೆಗಳನ್ನು ತಿರುವಿದೆ ಪ್ರತಿ ಪುಟದಲ್ಲೂ ಅವರ ಅಕ್ಷರಗಳು. ಅಷ್ಟೂ ಪುಟಗಳನ್ನು ಓದಿ ಮಾರ್ಕ್ ಮಾಡಿ ಕೊಟ್ಟಿದ್ದರು. ಅದನ್ನು ಹೇಗೆ ಬರೆಯಬಹುದು ಅನ್ನುವುದನ್ನು ಸೂಚ್ಯವಾಗಿ ಹೇಳಿದ್ದರು ಆಗಲೇ ಅನ್ನಿಸಿದ್ದು, ಕಾವ್ಯಾತ್ಮಕ ಬರವಣಿಗೆ ಮತ್ತು ನೇರ ಬರವಣಿಗೆ ಅದೆಷ್ಟು ದೂರ ದೂರ. ಸ್ವಲ್ಪ ಆಯ ತಪ್ಪಿದರು ಅರ್ಥ ಅಪಾರ್ಥ ಆಗುವ ಸಂಭವ ಇರುತ್ತದೆ ಅಧ್ಯಯನ ಪ್ರಬಂಧ ಲಲಿತ ಪ್ರಬಂಧವಾಗುವ ಸಾಧ್ಯತೆ ಇರುತ್ತದೆ. ಅದನ್ನು ಮೇಡಂ ನನಗೆ ಅದೆಷ್ಟು ಚನ್ನಾಗಿ ಅರ್ಥ ಮಾಡಿಸಿದ್ದರು.
ಜಾನಪದ ದ ಬಗ್ಗೆ ಮಾತಾಡುವ ಹಲವರು ಜನಪದ ಕಲಾವಿದರನ್ನು ನಡೆಸಿಕೊಳ್ಳುವ ರೀತಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಜನಪದ ಉಳಿಸಿ ಬೆಳೆಸಿ ಅನ್ನುತ್ತಾ ಭಾಷಣ ಮಾಡಿ ಹಾರ ತುರಾಯಿ ಹಾಕಿಸಿಕೊಂಡು, ಕಾರಿಡಾರಿನಲ್ಲಿ ನಡೆಯುವಾಗ ಅದೇ ಮಗ್ಗುಲಲ್ಲಿ ಕುಳಿತ ಜನಪದ ಕಲಾವಿದರಿಗೆ ನಕ್ಕು ನಮಸ್ಕರಿಸಿದ ದೊಡ್ಡ ವಿದ್ವಾಂಸರೂ ಈ ಕ್ಷೇತ್ರದಲ್ಲಿ ಇದ್ದಾರೆ. ಅಂಥಹ ಸಂದರ್ಭದಲ್ಲಿ ನಮ್ಮ ವಿಶ್ವವಿದ್ಯಾಲಯಕ್ಕೆ ಜನಪದ ಕಲೆಗಳು ಪ್ರಾಯೋಗಿಕ ಪರೀಕ್ಷೆಗಳಿಗೆಂದು ಹಾಲಕ್ಕಿ ಸುಗ್ಗಿ, ಕೋಲಾಟ ಕಲಿಸಲು ಬಂದ ಕಲಾವಿದರನ್ನು ಅದೆಷ್ಟು ಆತ್ಮೀಯವಾಗಿ ಮಾತನಾಡಿಸಿ, ಅವರ ಯೋಗಕ್ಷೇಮ ವಿಚಾರಿಸಿ ,ಅವರೊಂದಿಗೆ ಅದೆಷ್ಟು ಸರಳತೆಯಿಂದ ಸಜ್ಜನಿಕೆಯಿಂದ ವರ್ತಿಸುವ ಮೇಡಂ.ಅವರ ಊಟ ತಿಂಡಿ ವಸತಿ ಬಗೆಗೆ ಮನೆ ಮಂದಿಯ ಬಗ್ಗೆ ವಹಿಸುವ ಕಾಳಜಿಯನ್ನೇ ತೋರಿಸುವುದು ನೋಡಿದಾಗ ಅವರು ತುಂಬಿದ ಕೊಡ ಅನಿಸಿದ್ದು ಅದೆಷ್ಟು ಸಲವೂ.
ಹಾಗೆ ಒಂದು ದಿನ ಅವರ ಆಫೀಸ್ ನಲ್ಲಿ ನಾನು ಯಾವುದೊ ವಿಷಯ ಅವರೊಂದಿಗೆ ಚರ್ಚಿಸುತ್ತಿದ್ದಾಗ ,ಆಗಷ್ಟೇ ಪಿ ಹೆಚ್ ಡಿ ಸೇರಿಕೊಂಡ ನನ್ನ ಸಿನಿಯರ್ ಒಬ್ಬರಿಗೆ ಲಕೊಟೆ ಒಂದನ್ನು ಕೊಟ್ಟರು. ನಿಮ್ಮ ಸ್ಕಾಲರ್ಷಿಪ್ ಬರೋತನಕ ಸುಮಾರು ಕೆಲಸ ಮಾಡಲಿಕ್ಕೆ ಇರುತ್ತದೆ, ಮತ್ತು ಖರ್ಚು ಆಗುತ್ತೆ ಇದು ನನ್ನ ಪುಟ್ಟ ಸಹಾಯ ನಿಮಗೆ.ಅಧ್ಯಯನ ಚೆನ್ನಾಗಿ ನಡೀಲಿ ಎಂದು ಆಶೀರ್ವದಿಸಿದರು. ಆ ವಿದ್ಯಾರ್ಥಿ ಹೊರಗೆ ಹೋದ ನಂತರ ಪ್ರತಿ ವರ್ಷ ಯೋಗ್ಯ ಅನಿಸಿದ ಒಬ್ಬ ವಿದ್ಯಾರ್ಥಿಗೆ ನನ್ನ ಪತಿಯ ಸ್ಮರಣಾರ್ಥ ಒಂದಷ್ಟು ಸಹಾಯ ಮಾಡ್ತೇನೆ ನನ್ನ ಮನಸಿನ ನೆಮ್ಮದಿಗೆ ಅಂದರು ಆ ದಿನ ಅವರ ಮತ್ತೊಂದು ಅನನ್ಯತೆ ನನಗೆ ಕಾಣಿಸಿತ್ತು.
ನನಗನಿಸಿದ ಪ್ರಕಾರ ಅವರ ಸೃಜನ ಶೀಲತೆ ,ಮತ್ತು ನವೀನ ಆಲೋಚನೆಗಳು ಅವುಗಳನ್ನು ಕಾರ್ಯಗತ ಮಾಡುವಲ್ಲಿ ಹಲವಾರು ಬಾರಿ ಪೂರಕ ವಾತಾವರಣ ಇರುತ್ತಿರಲಿಲ್ಲ ಸಿಬ್ಬಂದಿ ಸಹಕಾರ ,ಕೆಲವೊಮ್ಮೆ ವಿದ್ಯಾರ್ಥಿಗಳ ನಿರಾಸಕ್ತಿ ಅವರಿಗೆ ಬೇಸರ ತರುತ್ತಿತ್ತು, ಆದರೆ ಎಂದು ಆ ಕಾರಣ ಕೊಟ್ಟು ಯಾವುದೇ ಯೋಜನೆಯನ್ನು ಅವರು ಕೈಬಿಟ್ಟಿಲ್ಲ. ಜನಪದ ಸಂಗ್ರಹಾಲಯ ಮತ್ತು ಅದಕ್ಕೆ ವಸ್ತುಗಳನ್ನು ಪೇರಿಸುವ ಕೆಲಸದಲ್ಲಿ ಅವರು ತೋರಿಸುತ್ತಿದ್ದ ಆಸಕ್ತಿ ಪುಟ್ಟ ಮಗು ಹೊಸ ವಿಷಯಕ್ಕೆ ತೋರುವ ಉತ್ಸಾಹದಂಥದ್ದು.
ಒಮ್ಮೆ ನನಗೆ ರಂಗಗೀತೆ ಗಳ ಬಗ್ಗೆ ಸ್ವಲ್ಪ ವಿವರಣೆಗಳು ಬೇಕಿದ್ದವು. ನಾನು ಅವರನ್ನು ಆ ಬಗ್ಗೆ ಕೇಳಿದ್ದೆ ಮತ್ತು ಅದನ್ನು ಮರೆತು ಬಿಟ್ಟಿದ್ದೆ. ಆದರೆ ಅವರು ತಮ್ಮ ಸಂಗ್ರಹದಲ್ಲಿನ ಪುಸ್ತಕ ಹುಡುಕಿ ಮತ್ತೆ ಸಂಜೆ ನನಗೆ ಫೋನ್ ಮಾಡಿದ್ದರು ನಾಳೆ ಪುಸ್ತಕ ತಗೊಂಡ್ ಹೋಗು ಅದು ಸಿಕ್ಕಿದೆ ಎಂದಾಗ ಅವರು ಆಸಕ್ತ ವಿದ್ಯಾರ್ಥಿಗಳಿಗಾಗಿ ಕೊಡುತ್ತಿದ್ದ ಸಮಯ ಮತ್ತು ಪ್ರಾಮುಖ್ಯತೆ ಅರಿವಿಗೆ ಬಂದಿತ್ತು. ಕಲಿಯುವ ಮನಸ್ಸಿರುವ ವಿದ್ಯಾರ್ಥಿಗೆ ಇಂಥ ಒಬ್ಬ ಗುರು ದಕ್ಕಿದರೆ ಆ ವಿದ್ಯಾರ್ಥಿಯ ಭವಿಷ್ಯ ಉಜ್ವಲ ವಾದಂತೆಯೇ. ಕಲಿಯುವ ಪಾಠ ಪಾಠವಾಗಿರದೆ ಅದು ಬದುಕಿಗೆ ಇಂಬುಕೊಡುವ ವಿದ್ಯೆಯಾಗಿತ್ತದೆ.
ನನ್ನ ನೆರವೇರದ ಆಸೆ ಎಂದರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಬೇಕು ಎಂಬುದು. ಸ್ನಾತಕೋತ್ತರ ಅಧ್ಯಯನ ಮುಗಿದ ನಂತರ ನಾನು ಬೆಲ್ಫಾಸ್ಟ್ ಬಂದು ಸೇರಿದೆ. ವಿಶ್ವವಿದ್ಯಾಲಯದ ಕೆಲವು ನಿಯಮಗಳು ಕಲಿಯುವ ತುಡಿತವಿರುವ ವಿದ್ಯಾರ್ಥಿಗಳಿಗೆ ಬೇಲಿ ಹಾಕಿಬಿಡುತ್ತವೆ. ಆದರೂ ಇಂದಿಗೂ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವೆ. ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ಜನಪದ ನನ್ನ ಕೈಹಿಡಿದು ಮುನ್ನಡೆಸಿದೆ ಈಗಲೂ ನಾ ಅವರಿಗೆ ಫೋನ್ ಮೂಲಕ ಸಂಪರ್ಕಿಸಿದರೆ ಅದೇ ಆತ್ಮೀಯತೆ ಅಷ್ಟೇ ಆಪ್ಯಾಯತೆ ಅಕ್ಕರೆ. “ಶಾನಭಾಗ್ ಊರಿಗೆ ಬಂದೀರ?” ಎನ್ನುತ್ತಲೇ ಮಾತು ಶುರುಮಾಡಿ ಅದೆಷ್ಟು ವಿಷಯ, ಉಲ್ಲೇಖ, ನೆನಪು ಹಂಚಿಕೊಳ್ತಾರೆ. ನನ್ನ ಬಾಲಿಶ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಾರೆ , ಅವರ ಶಿಷ್ಯೆ ಅವರ ವಿದ್ಯಾರ್ಥಿನಿ ಅನ್ನಲು ನನಗೆ ಯಾವತ್ತಿಗೂ ಹೆಮ್ಮೆ.
ಈ ವಾರವೂ ಎರಡು ಪ್ರಸ್ತುತಿಗಳು ಇವೆ. ಮೊದಲು ವತ್ಸಲಾ ರಾಮಮೂರ್ತಿಯವರು ಬರೆದ ಲೇಖನ ಅಪರೂಪದ ಪ್ರತಿಭೆ, ಅಪ್ರತಿಮ ಸಾಧಕಿಯೋರ್ವಳನ್ನು ಕುರಿತಾದ ನಾಟಕದ ವಿಮರ್ಶೆ ಮತ್ತು ಎರಡನೆಯದಾಗಿ ಶಿವ ಮೇಟಿಯವರ ಕತೂಹಲಕಾರಿ ಧಾರಾವಾಹಿ ಕಥೆಯ ಮುಕ್ತಾಯದ ಭಾಗವನ್ನು ಸಹ ಓದಿ ಅವಶ್ಯ ಪ್ರತಿಕ್ರಿಯೆಸಿರಿ. ನಾಗಾಭರಣ ಅವರು ಆಕೆಯ ಕಥೆಯನ್ನು ಹೇಳುವ ವಿಡಿಯೋ ಸಹ ಕೆಳಗೆ ಇದೆ. (ಸಂ)
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.Wishing you all Merry Christmas and a Happy New Year 2023
1) ವಿದ್ಯಾಸುಂದರಿ ‘ಬೆಂಗಳೂರು ನಾಗರತ್ನಮ್ಮ‘ - ವತ್ಸಲ ರಾಮಮೂರ್ತಿಯವರು ಬರೆದ ಲೇಖನ
ಪೀಠಿಕೆ ನಾನು ಈ ಸಲದ ‘ಅನಿವಾಸಿ‘ಯ ದೀಪಾವಳಿ ಸಮಾರಂಭದ ಕಾರ್ಯಕ್ರಮಕ್ಕೆಅನಾನುಕೂಲತೆಗಳಿಂದ ನನ್ನಿಂದ ಬರಲಾಗಲಿಲ್ಲ.ಅದರಲ್ಲಿ ನಾಗಾಭರಣರ ನಾಟಕ ವಿದ್ಯಾಸುಂದರಿ ‘ಬೆಂಗಳೂರು ನಾಗರತ್ನಮ್ಮ‘ ಬಗ್ಗೆ ವಿಮರ್ಶೆ ಮಾಡಲು ಒಪ್ಪಿಕೊಂಡಿದ್ದೆ. ಅವರ ಜೀವನಚರಿತ್ರೆಯನ್ನು ನಾನಾ ಮೂಲಗಳಿಂದ ಸಂಗ್ರಹಿಸಿದ್ದೆ. ಅದರ ಸಾರಾಂಶ ಕೆಳಗಿದೆ.
ಪ್ರಸಿದ್ಧ ರಂಗಕರ್ಮಿ ಮತ್ತು ಸಿನಿಮಾ ಡೈರೆಕ್ಟರ್ ನಾಗಾಭರಣ ಅವರಿಗೆ ಬೆಂಗಳೂರು ನಾಗರತ್ನಮ್ಮನವರ ಬಗ್ಗೆ ಸಿನಿಮಾ (biopic) ಮಾಡಲು ಕರೆ ಬಂದಿತ್ತು. ಸಿನಿಮಾ ತಯಾರಿಸಲು ಆಕೆಯ ಬಗ್ಗೆ ಸಂಶೋಧನೆ ನಡೆಸಿದ ಅವರು ಶ್ರೀರಾಮರವರ ಇಂಗ್ಲಿಷ್ ಪುಸ್ತಕ Devadasi and Saint -The Life and Times of Nagaratnamma ಮತ್ತು ಮೈಸೂರು ಗುರುಸ್ವಾಮಿಯವರ ಅದೇ ಹೆಸರಿನ ಕಾದಂಬರಿ ಓದಿ ಅವರ ವ್ಯಕ್ತಿತ್ವ ಮತ್ತು ಸಾಧನೆಗಳಿಗೆಮಾರು ಹೋದರು. ಬೈಯೋಪಿಕ್ ತಯಾರಿಸಲು ಕಷ್ಟವೆಂದು ತಿಳಿದು ಕರ್ನಾಟಕ ಸಂಗೀತದ(ಗಮಕ) ಮೂಲಕ ಕನ್ನಡದಲ್ಲಿ ಮ್ಯೂಸಿಕಲ್ ಮಾಡಿದರು. ಅವರು ಎಲ್ಲರೂ ನಾಗರತ್ನಮ್ಮ ಅವರ ಬಗ್ಗೆ ತಿಳಿಯಬೇಕೆಂದಿದ್ದಾರೆ.
ಬೆಂಗಳೂರು ನಾಗರತ್ನಮ್ಮ ಅವರ ಕಿರು ಪರಿಚಯ.
ಅವರು ಹುಟ್ಟಿದ್ದು 1878ರಲ್ಲಿ. ಅವರ ತಾಯಿ ಪುಟ್ಟಲಕ್ಷಮ್ಮ ದೇವದಾಸಿ ಪರಂಪರೆಯವರು. ಅವರತಂದೆ ವಕೀಲ ಸುಬ್ಬರಾಯರು ಅವರನ್ನು ತೊರೆದು ಹೋದ ನಂತರ ಪುಟ್ಟಲಕ್ಷಮ್ಮ ಮೈಸೂರುಆಸ್ಥಾನದಲ್ಲಿ ವಿದ್ವಾಂಸರಾಗಿದ್ಧ ಶಾಸ್ತ್ರಿಯವರ ಆಸರೆ ಪಡೆದರು ಶಾಸ್ತ್ರಿಯವರು ನಾಗರತ್ನಮ್ಮನಿಗೆ ಸಂಸ್ಕೃತ, ನೃತ್ಯ, ಕರ್ನಾಟಕ ಸಂಗೀತ, ಇಂಗ್ಲಿಷ್, ತೆಲಗು ಭಾಷೆಗಳನ್ನೂ ಕಲಿಸಿದರು. ಅವರು ಸಹ ಪುಟ್ಟಲಕ್ಷ್ಮಮ್ಮನವರನ್ನು ಬಿಟ್ಟು ಹೋದರು. ಆಮೇಲೆ ಪುಟ್ಟಲಕ್ಷಮ್ಮ ಅವರು ಮೈಸೂರನ್ನು ಬಿಟ್ಟು ತಮ್ಮ ಸಂಬಂಧಿ ವಯೊಲಿನ್ ವಿದ್ವಾನ್ ವೆಂಕಟೇಶ್ವರಪ್ಪನವರ ಆಶ್ರಯ ಪಡೆದರು. ಅವರ ಆಶ್ರಯದಲ್ಲಿ ಗುರು-ಶಿಷ್ಯೆ ಪರಂಪರೆಯಲ್ಲಿ ಸಂಗೀತ ಮತ್ತು ನೃತ್ಯದಲ್ಲಿ ಪಾರಂಗತರಾದರು. ತಮ್ಮಹದಿನೈದನೆಯ ವಯಸ್ಸಿನಲ್ಲಿ ಸಂಗೀತ ವಿದುಷಿಯಾಗಿ ರಂಗಾರ್ಪಣೆ ಮಾಡಿದರು.
ಅವರು ಸಂಸ್ಕೃತ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಹಾಡುತ್ತಿದ್ದರು. ಅವರ ವಿಶೇಷವಾದ ಕಲೆ ‘ಹರಿಕತೆ’. ಅವರು ಹರಿಕತೆಯನ್ನು ಜನ ಸಾಮಾನ್ಯರಿಗೆ ದೊರಕುವಂತೆಮಾಡಿದರು. ನಂತರ ಬೆಂಗಳೂರಿಗೆ ಬಂದು ಹೈ ಕೋರ್ಟ್ ಜಜ್ ನರಹರಿ ರಾಯರ ಆಶ್ರಯದಲ್ಲಿಅವರ ಪ್ರತಿಭೆಯ ಬಗ್ಗೆ ತಿಳುವಳಿಕೆ ಪಸರಿಸಿತು. ಎಲ್ಲ ಜನರಿಗೂ ಅವರ ಬಗ್ಗೆ ಗೊತ್ತಾಯಿತು. ನರಹರಿರಾಯರು ಅವರ ಪ್ರತಿಭೆ ಮುಂದುವರಿಯಲು ಅವರನ್ನು ಮದರಾಸ್ನಲ್ಲಿ ಮೊದಲಿಯಾರ್ ಅವರ ಆಶ್ರಯಕ್ಕೆ ಕಳಿಸಿದಾಗಿನಿಂದ ಅವರ ಪ್ರತಿಭೆ ಮತ್ತು ಖ್ಯಾತಿ ಮುಗಿಲೆತ್ತರಕ್ಕೆ ಬೆಳೆಯಿತು. ಅನೇಕ ಪ್ರಶಸ್ತಿ, ಬಿರುದು ಬಾವಲಿಗಳು ಅವರನ್ನರಸಿ ಬಂದವು. ಅವರು ಹೇಳಿದ್ದೇನೆಂದರೆ ತ್ಯಾಗರಾಜರು ಅವರ ಕನಸಿನಲ್ಲಿ ಬಂದು ಅವರ ಸ್ಮಾರಕ ಮತ್ತು ಕರ್ನಾಟಕ ಸಂಗೀತ ಪರಂಪರೆಯನ್ನು ಮುಂದುವರಿಸ-ಲು ಹೇಳಿದರಂತೆ. ನಾಗರತಮ್ಮ ಅವರು ತಮ್ಮ ಜೀವನವನ್ನುಕರ್ನಾಟಕ ಸಂಗೀತ ಮತ್ತು ತ್ಯಾಗರಾಜರಕೀರ್ತಗಳನ್ನು ಹೆಸರಿವಾಸಿಯಾಗಿ ಮಾಡಲು ಮುಡುಪಾಗಿಟ್ಟರು. ಪಾಳು ಬಿದ್ದಿದ್ದ ತ್ಯಾಗರಾಜರ ಸಮಾಧಿಯನ್ನು ಪುನರತ್ಥಾನಗೊಳಿಸಿದರು. ಶ್ರೀರಾಮ ಮಂದಿರವನ್ನು ಕಟ್ಟಿಸಿದರು. ಅದಕ್ಕಾಗಿ ತಮ್ಮ ಒಡವೆ ಮತ್ತು ಹಣವನ್ನು (ಆಗಿನ ಕಾಲದಲ್ಲಿ Rs 36,000) ದಾನ ಮಾಡಿದರು.
ನಾಗರತ್ನಮ್ಮನವರ ವ್ಯಕ್ತಿತ್ವ
ಅವರೊಬ್ಬ ಕಲಾವಿದೆ ಮತ್ತು ಕಲಾಭಿಮಾನಿ ಸಹ. ಚಿಕ್ಕ ವಯಸ್ಸಿನಿಂದ ಸಂಗೀತ, ನೃತ್ಯ, ಹರಿಕತೆಗಳಿಗೆಜೀವನವನ್ನೇ ಮುಡುಪಾಗಿಯಿಟ್ಟಿದ್ದರು. ತ್ಯಾಗರಾಜರ ಸಂಗೀತ ಪರಂಪರೆಯನ್ನು ಆರಾಧನೆಯ ಮೂಲಕ ಅಮರವಾಗಿ ಮಾಡಿದರು. ಇವತ್ತಿಗೂ ಅದು ಸಂಗೀತಪ್ರಿಯರಿಗೆ ರಸದೌತಣ. ಅವರು ಕ್ರಿಯಾವಾದಿ (activist). ಅವರ ಕಾಲದಲ್ಲಿ ಹೆಂಗಸರಿಗೆ ಅಷ್ಟು ಮರ್ಯಾದೆ ಇರಲಿಲ್ಲ. ಸಮಾಜದಲ್ಲಿ ಕೀಳು ಸ್ಥಿತಿ. ಅದರಲ್ಲೂ ದೇವದಾಸಿಯರನ್ನು ಕಡೆಗಣಿಸುತ್ತಿದ್ದರು. ಪುರುಷ ಸಂಗೀತಗಾರರು ತ್ಯಾಗರಾಜರ ಆರಾಧನೆಯ ಸಮಯದಲ್ಲಿ ಅವರಿಗೆ ಗುಡಿಯೊಳಗೆ ಹಾಡಲು ಅವಕಾಶ ಕೊಡುತ್ತಿರಲಿಲ್ಲ. ಅದಕ್ಕೆ ಸವಾಲಾಗಿ ಎಂಬಂತೆ ನಾಗರತ್ನಮ್ಮನವರು ತಮ್ಮದೇ ಆದ ಒಂದು ”ಸಂಗೀತ ಸಭೆ”ಯನ್ನು ಗುಡಿಯ ಹಿಂಭಾಗದಲ್ಲಿ ಶುರುಮಾಡಿದರು. ಕಾಲಾನಂತರ ಮಹಿಳೆಯರಿಗೂ ಪುರುಷರ ಸಮನಾಗಿ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶವಾಯ್ತು. ಅವರು ಮೊಟ್ಟ ಮೊದಲ ’ದೇವದಾಸಿ ಸಂಘ’ ಕಟ್ಟಿದರು. ದೇವದಾಸಿಯರು ವೇಶ್ಯೆಯರಲ್ಲ, ಕಲಾಭಿಮಾನಿಗಳೆಂದು ಸಾರಿದರು. ಅವರು ಪ್ರಪ್ರಥಮ ರೆಕಾರ್ಡಿಂಗ್ ಆರ್ಟಿಸ್ಟ್ ಗಳಲ್ಲೊಬ್ಬರು. ಆಗಿನ ಇಡೀ ಮದರಾಸು ಪ್ರೆಸಿಡೆನ್ಸಿಯಲ್ಲೇ ಇನ್ಕಮ್ ಟ್ಯಾಕ್ಸ್ ಕಟ್ಟಿದ ಪ್ರಥಮ ಮಹಿಳೆ ಅವರಾಗಿದ್ದರು. ಅವರು ವಿದ್ವಾಂಸಿ. ಅನೇಕ ಪುಸ್ತಕಗಳನ್ನು ಪ್ರಕಟಿಸಿದ ಮಹಿಳೆಯೆಂಬ ಹೆಗ್ಗಳಿಕೆ ಅವರದು. ಬಹು ಭಾಷಾ ಪರಿಣತಿಯರಾದ ಅವರು ಕವಿತೆ,ಮತ್ತಿತರ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರು 1952ರಲ್ಲಿ ನಿಧನರಾದರು.
Photos: Creative Commons License
ನಾಟಕದ ಬಗ್ಗೆ ಒಂದು ಅನಿಸಿಕೆ:
ನಾಟಕ ರೂಪವನ್ನು ಬರೆದವರು ಪ್ರತಿಭಾ ನಂದಕುಮಾರ್ ಮತ್ತು ಹೂಲಿ ಶೇಖರ್. ಸಂಗೀತ ಸಂಯೋಜನೆ ಮತ್ತು ನಿರ್ಮಾಣ ಡಾ ಪಿ. ರಮಾ ಅವರದು. ಬೆನಕ ಮತ್ತು ಸಂಗೀತ ಸಂಭ್ರಮ ಅವರು ಅರ್ಪಣೆ. ಮೊದಲ ಬಾರಿಗೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಸರಿಯಾಗಿ ಮೂರು ವರ್ಷದ ಕೆಳಗೆ 27-12-2019ರಂದು ಪ್ರದರ್ಶನಗೊಂಡಿತು. ಮೊದಲನೆಯ ದೃಶ್ಯದಲ್ಲಿ ಪಿರಿಯ ಕಚ್ಚಿ ಮತ್ತಿ ಚಿನ್ನ ಕಚ್ಚಿ ನಡುವೆ ಆರಾಧನೆಯ ಸಮಯದಲ್ಲಿ ಸುದೀರ್ಘ ವಿವಾದ ನಡೆಯುತ್ತದೆ. ಪುರುಷರ ಪೆರಿಯ ಕಚ್ಚಿ’ ಸ್ತ್ರೀಯರ ಸಂಗ ’ಚಿನ್ನ ಕಚ್ಚಿ’ಗೆ ಹಾಡಲು ಅವಕಾಶ ಕೊಡುತ್ತಿಲ್ಲ. ಆಗ ನಾಗರತ್ನಮ್ಮನವರು ತಮ್ಮ ಸಂಗೀತವನ್ನು ಪ್ರಾರಂಭಿಸುತ್ತಾರೆ. ಬೆಂಕಿಯ ಗಲಾಟೆಯಲ್ಲಿ ಸಮಾರಂಭ ನಿಲ್ಲಿಸಬೇಕಾಗುತ್ತದೆ. (ಬೆಂಕಿ ಹಚ್ಚಿದ್ದು ನಾಗರತ್ನಮ್ಮನವರ ಜಿದ್ದಿನಿಂದ!) ಹೀಗೆ ನಾಟಕ ನಾಗರತ್ನಮ್ಮನವರ ಜೀವನಕತೆ ಮೆಟ್ಟಲು ಮೆಟ್ಟಲಾಗಿ ಗಮಕ ಸಂಗೀತದಲ್ಲಿ ಸಾಗುತ್ತದೆ. ಅದರಲ್ಲಿ ’ನರಹರಿ ರಾಯರ ಮತ್ತು ಪತ್ನಿಯ ಸಂವಾದ,’ ನಾಗರತ್ನಮ್ಮನವರು ಒಡವೆ, ದುಡ್ಡು ಎಲ್ಲವನ್ನು ತ್ಯಾಗರಾಜರ ಆರಾಧನೆಗಾಗಿ ಕೊಡುವದು, ದೇವದಾಸಿಯರಿಗೆ ಸಹಾಯ ಮಾಡುವುದು, ಅವರ ಅಪಾರ ಕೊಡುಗೆಯನ್ನು ಮನಮುಟ್ಟುವಂತೆ ನಾಟಕದಲ್ಲಿ ಪ್ರದರ್ಶಿಸಿದ್ದಾರೆ. ನಾಟಕ ಬಹಳ ಗಂಭೀರವಾದ ವ್ಯಕ್ತಿ ಚಿತ್ರ. ಅದನ್ನು ಐದಾರು ಜನ ಸಂಗೀತಗಾರರು ಪಕ್ಕವಾದ್ಯಗಳ ಜೊತೆಗೆ ಒಂದೇ ರಾಗದಲ್ಲಿ ಅವರ ಜೀವನ ಚರಿತ್ರೆ ವಿವರಿಸುತ್ತಾರೆ. ಕೇಳುಗರಿಗೆ ಗಮಕ ಶೈಲಿ ಅರ್ಥವಾಗದಲ್ಲಿಕಥೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು. ಲಘು ಹಾಸ್ಯ ಸೇರಿಸಿದ್ದರೆ ಹಗುರವಾಗುತ್ತಿತ್ತೇನೋ ಎನಿಸುತ್ತದೆ. ಮಧ್ಯೆ ನಾಗರತ್ನಮ್ಮನ ಹಾಡುಗಳ, ತುಣುಕುಗಳ ಾವರ ಸಂಗೀತ ತಿಳಿಯದಿದ್ದವರಿಗೆ ಕಷ್ಟವೆನಿಸಿತು. ನಟನಟಿಯರು ಭಾವ್ಪೂರ್ವಗಿ ನಟಿಸಿದ್ದಾರೆ. Screen set up ಆಗಿನ ಕಾಲಕ್ಕೆ ಸರಿಯಾಗಿ ಜೋಡಿಸಿದ್ದಾರೆ. ನಾಗರತನಮ್ಮನವರ ವ್ಯಕ್ತಿತ್ವ ಚೆನ್ನಾಗಿ ಮೂಡಿ ಬಂದಿದೆ. ಅವರ ಜೀವನ ಚರಿತ್ರೆ ತಿಳಿಯದವರಿಗೆ musical follow ಮಾಡೋದು ಸ್ವಲ್ಪ ಕಷ್ಟವಾದರೂ ಕನ್ನಡದಲ್ಲಿ ಈ ಮ್ಯೂಸಿಕಲ್ ಮಾಡಿದ ನಾಗಾಭರಣ ಅವರಿಗೆ ಅನಂತ ವಂದನೆಗಳು
---ವತ್ಸಲ ರಾಮಮೂರ್ತಿ
2) ತಲಾಷ್ -3 - ಶಿವ ಮೇಟಿಯವರ ಕಥೆಯ ಕೊನೆಯ ಭಾಗ
(ಇಲ್ಲಿಯ ವರೆಗೆ: ಅಂಜಲಿ ಎನ್ನುವ ಶಾಲಾಬಾಲಕಿ ಇನ್ನೂ ಶಾಲೆಯಿಂದ ಮನೆಗೆ ಬಂದಿಲ್ಲ. ಆಲದ ಮರದ ಕೆಳಗೆ ಕುಳಿತ ಹುಚ್ಚಪ್ಪನ ಭವಿಷ್ಯವಾಣಿಯ ಜಾಡು ಹಿಡಿಯಬೇಕೆ? ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ ತಂದೆ ತಾಯಿಗಳು. ಮುಂದೆ ಓದಿ ...)
ವಸುಂಧರೆಯ ಮನಸಿನಲ್ಲಿ ಹುಚ್ಚಪ್ಪನ ಮಾತುಗಳು ಪ್ರತಿಧ್ವನಿಸುತಿದ್ದವು . ಅವನಾಡುವ ಪದಗಳು ಒಗಟಿನಂತೆ ಕಂಡರೂ, ಒರೆ ಹಚ್ಚಿ ನೋಡಿದಾಗ ಒಂದೊಂದು ಪದಕ್ಕೂ ಅರ್ಥವಿರುತ್ತಿತ್ತು . ಉತ್ತರ ದಿಕ್ಕಿನ ಕಡೆ ಆರು ಮೈಲಿನ ಅಂತರದಲ್ಲಿ ಅಂತದೇನು ವಿಶೇಷವಿದೆ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಂಡಳು. ಅವಳ ತಲೆಗೆ ಹೊಳೆದಿದ್ದು ಪಕ್ಕದ ಊರಿನ ಕಾಡಿನ ಆದಿಯಲ್ಲಿ ಇರುವ 'ದುರ್ಗಿ'ಯ ಗುಡಿ. ಕುರಿ ಕೋಣಗಳ ಬಲಿಗಳೊಂದಿಗೆ ಭರ್ಜರಿಯಾಗಿ ವರ್ಷಕ್ಕೊಮ್ಮೆ ನಡೆಯುತಿದ್ದ ದುರ್ಗಿಯ ಜಾತ್ರೆಗೆ ಅವಳೂ ಸಹ ಕೆಲವು ಸಲ ಹೋಗಿದ್ದಳು. ಆದರೆ ಅಂಜಲಿಗೂ ದುರ್ಗಿಯ ಗುಡಿಗೂ ಏನು ಸಂಬಂಧ?
ಅಷ್ಟರಲ್ಲಿಯೇ ರಾಮುನ ಫೋನು ಒದರತೊಡಗಿತ್ತು.
ಪೊಲೀಸ್ ಸ್ಟೇಷನ್ ನಿಂದ ಕರೆ: " ಸರ್ ಅಂಜಲಿಯ ಟೀಚರ್ ಮತ್ತು ಅಸಿಸ್ಟಂಟ್ ಇಬ್ಬರು ಸವದತ್ತಿಯಲ್ಲಿ ಸಿಕ್ಕಿದ್ದಾರೆ ವಿಚಾರಣೆ ಮುಂದುವರೆದಿದೆ; ಇಷ್ಟರಲ್ಲಿಯೇ ಎಲ್ಲಾ ಗೊತ್ತಾಗಬಹುದು, ನಿಮಗೆ ಮತ್ತೆ ಕರೆ ಮಾಡುತ್ತೇವೆ."
" ದಯವಿಟ್ಟು ಕರೆ ಮಾಡಿ " ಎಂದು ಹೇಳಿದ ರಾಮುವಿನ ಮುಖದಲ್ಲಿ ಸ್ವಲ್ಪ ಭರವಸೆಯ ಚಿನ್ಹೆ ಮೂಡಿತ್ತು.
" ವಸುಂಧರೆ ನಿನಗೇನು ಗೊತ್ತಾಗಿದೆ ಎಂದು ನನಗೂ ಸ್ವಲ್ಪ ಹೇಳಿಬಿಡೆ " ಎಂದು ಹೆಂಡತಿಯನ್ನು ಕೇಳಿದ.
"ಇಷ್ಟರಲ್ಲಿಯೇ ಎಲ್ಲಾ ಗೊತ್ತಾಗುತ್ತೆ , ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ " ಎಂದು ಅನ್ನುವಷ್ಟರಲ್ಲಿಯೇ ಅವರಿಬ್ಬರೂ ಮನೆಯನ್ನು ಸೇರಿದ್ದರು.
' ಅರಿಷಿಣ ಕುಂಕುಮ ------- ಅರಿಷಿಣ ಕುಂಕುಮ' ಮತ್ತೆ ಹುಚ್ಚಪ್ಪನ ಮಾತುಗಳು ವಸುಂಧರೆಯ ಕಿವಿಯಲ್ಲಿ . ನೇರವಾಗಿ ದೇವರ ಕೋಣೆಗೆ ಹೋದಳು. ದೊಡ್ಡ ಕುಂಕುಮ ಮತ್ತು ಅರಿಷಿಣದ ಭರಣಿಗಳು ಕೋಣೆಯಿಂದ ಮಾಯವಾಗಿದ್ದವು. ವಸುಂಧರೆಯ ಮನಸಿನಲ್ಲಿ ಇದ್ದ ಸಂಶಯ ಇನ್ನಷ್ಟು ಗಟ್ಟಿಯಾಯಿತು . ಅತ್ತೆಯ ಕೋಣೆಯ ಬಾಗಿಲನ್ನು ತೆರೆದಳು . ಮಂಚದ ಮೇಲೆ ತೆರೆದ ಪುಸ್ತಕಗಳು ಹರಡಿದ್ದವು. ಕೆಲವು ಪುಟಗಳಲ್ಲಿ ಪೆನ್ನಿನಿಂದ ಮಾಡಿದ ಗುರುತುಗಳಿದ್ದವು , ಪುಟಗಳ ಅಂಚಿನಲ್ಲಿ ಅದೇನೋ ಟಿಪ್ಪಣಿಗಳಿದ್ದವು. ಅತ್ತೆಯು ಅದಾವುದೋ ' ತಲಾಷ್' ನಲ್ಲಿ ತೊಡಗಿದ್ದಳು ಎಂಬುವದರಲ್ಲಿ ಸಂಶಯವಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಅತ್ತೆಯಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ವಸುಂಧರೆ ಸೂಕ್ಷ್ಮವಾಗಿ ನಿರೀಕ್ಷಿಸುತಿದ್ದಳು. ಕೋಣೆಯಿಂದ ಹೊರಗೆ ಬರುವದು ಕಡಿಮೆ ---- ಅದೇನೋ ಓದುತ್ತಿದ್ದಳು. ಕೆಲವು ಸಲ ತನ್ನ ಮನಸ್ಸಿನಲ್ಲಿಯೇ ಅದಾವುದೋ ಮಂತ್ರವನ್ನು ಜಪಿಸುತಿದ್ದಳು
--- ಕೆಲವು ಸಲ ಯಾರದೋ ಜೊತೆಗೆ ತಾಸುಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿದ್ದಳು. ರಾಮುನ ಜೊತೆಗೂ ಮಾತು ಕಡಿಮೆಯಾಗಿತ್ತು . ವಸುಂಧರೆ ಅಂದಿದ್ದಳು " ಅತ್ತೆ ಯಾಕೋ ಇತ್ತೀಚಲಾಗಿ ಒಂದ ಥರಾ ಇದ್ದಾಳ."
"ವಯಸ್ಸಿಗೆ ತಕ್ಕ ಬದಲಾವಣೆ ಇರಬಹುದು ಬಿಡು " ಎಂದು ರಾಮು ಮಾತು ಮರೆಸಿದ್ದ.
ಎರಡು ದಿನಗಳ ಮುಂಚೆ ಅತ್ತೆ ಧಾರವಾಡದಲ್ಲಿರುವ ತನ್ನ ತಮ್ಮನ ಮನೆಗೆ ಹೋಗಿದ್ದಳು ವಸುಂಧರೆ ಕೋಣೆಯ ಹೊರಗೆ ಬಂದು ರಾಮುನಿಗೆ ಹೇಳುತ್ತಿದ್ದಳು:
" ರೀ -- ಅತ್ತೆಗೆ ತಕ್ಷಣವೇ ಫೋನು ಮಾಡಿರಿ "
" ಅವಳಿಗೆ ಫೋನು ಮಾಡಿದರೆ ಏನು ಸಿಗುತ್ತೆ?" ಎಂದ ರಾಮು.
" ರೀ -- ನಿಮಗ ಗೊತ್ತಾಗುದಿಲ್ಲ , ಜಲ್ದಿ ಫೋನ್ ಮಾಡರಿ."
ಹೆಂಡತಿಯ ಬಲವಂತಿಕೆಗೆ ರಾಮು ತಾಯಿಗೆ ಫೋನು ಮಾಡಿದ, ಆದರೆ ತಾಯಿ ಮಾತ್ರ ಫೋನು ಎತ್ತಲಿಲ್ಲ. ರಾಮುನಿಗೆ ಯಾಕೋ ಭಯವಾಯಿತು.
ಧಾರವಾಡದ ಮಾವನಿಗೆ ಫೋನು ಮಾಡಿದ . ಉತ್ತರವನ್ನು ಕೇಳಿ ಇನ್ನೂ ಭಯವಾಯಿತು . ಮಾವ ಹೇಳಿದ್ದ - ಅವಳು ಧಾರವಾಡಕ್ಕೆ ಬಂದೆ ಇಲ್ಲವೆಂದು.
"ವಸುಂಧರಾ! ಅವ್ವ ಧಾರವಾಡಕ್ಕೆ ಹೋಗೆ ಇಲ್ಲವಂತೆ , ನನಗ್ಯಾಕೊ ಭಯ ಆಗತಾ ಇದೆ , ಅದೆಲ್ಲಿ ಹೋದಳೇನೋ?"
" ರೀ -- ನಿಮಗಿಂತ ಜಾಸ್ತಿ ಭಯ ನನಗ ಆಗೈತಿ. "
'ಅರೆ ರಾತ್ರಿ, ಟೈಮ್ ಇಲ್ಲ ' ಹುಚ್ಚಪ್ಪನ ಕೊನೆಯ ಮಾತುಗಳು ವಸುಂಧರೆ ಟೈಮ್ ನೋಡಿದಳು, ಆಗಲೇ ರಾತ್ರಿ ಒಂಭತ್ತು ಹತ್ತಿರವಾಗುತ್ತಿತ್ತು .
"ರೀ -- ಟೈಮ್ ಜಾಸ್ತಿ ಇಲ್ಲ ಬೇಗನೆ ನಡೀರಿ."
"ಎಲ್ಲಿಗೆ ಹೋಗಬೇಕೆ ? ನನಗೆ ಸ್ವಲ್ಪನೂ ಅರ್ಥ ಆಗತಾ ಇಲ್ಲ."
"ನಿಮ್ಮ ಬೈಕ್ ತೆಗಿರಿ , ದುರ್ಗಿ ಗುಡಿಗೆ ಹೋಗಬೇಕು."
"ನಿನಗೇನು ತಲೆ ಕೆಟ್ಟಿದೆ ಏನೇ ? ಈ ರಾತ್ರಿಯಲ್ಲಿ ದುರ್ಗಿ ಗುಡಿಯಲ್ಲಿ ಏನು ಮಾಡಬೇಕು?"
"ನನಗೆ ತಲೆ ಕೆಟ್ಟಿಲ್ಲ , ನಿಮ್ಮ ತಾಯಿಗೆ ತಲೆ ಕೆಟ್ಟಿದೆ, ಸಮಯ ಜಾಸ್ತಿ ಇಲ್ಲ ಜಲ್ದಿ ನಡೀರಿ."
ಉತ್ತರವಿಲ್ಲದೆ ರಾಮು ತನ್ನ ಬೈಕ್ ಅನ್ನು ಹೊರಗೆ ತೆಗೆದ. ಗಾಬರಿಯಲ್ಲಿದ್ದ ವಸುಂಧರೆಯನ್ನು ಕುಳ್ಳರಿಸಿಕೊಂಡು ದುರ್ಗಿಯ ಗುಡಿಯತ್ತ ಸಾಗಿದ.
ಆಲದ ಕಟ್ಟೆಯ ಮೇಲೆ ಅರೆಬೆಳಕಿನಲ್ಲಿ ಕುಳಿತಿದ್ದ ಹುಚ್ಚಪ್ಪ ಇವರ ಬೈಕ್ ಅನ್ನು ಕಂಡು ಒದರುತ್ತಿದ್ದ "ಸಿಗತಾಳ್ ---- ಸಿಗತಾಳ್ --- ಅಂಜಲಿ ಸಿಗತಾಳ್ " ಅರೆಬೆಳಕಿನ ಅಡ್ಡ ರೋಡಿನಲ್ಲಿ ಸರ್ಕಸ್ ಮಾಡುತ್ತ ಬೈಕು ಗುಡಿಯ ಹತ್ತಿರ ಬಂದಿತ್ತು ವಸುಂಧರೆ ಬೈಕ್ ಅನ್ನು ದೂರವೇ ನಿಲ್ಲಿಸಲು ಹೇಳಿದಳು.
ಸದ್ದಿಲ್ಲದೆ ನಿಧಾನವಾಗಿ ನಡೆಯುತ್ತಾ ಗುಡಿಯ ಕಡೆಗೆ ಸಾಗಿದರು. ಗುಡಿಯ ಮುಂದೆ ಬೆಂಕಿ ಉರಿಯುತ್ತಿತ್ತು, ಅದೇನೋ ಮಂತ್ರ ಪಠನೆ ಆಗುತಿತ್ತು, ನಡು ನಡುವೆ ಘಂಟೆಯ ಧ್ವನಿ ಕೇಳಿಸುತಿತ್ತು . ಇನ್ನೂ ಹತ್ತಿರ ಬಂದಾಗ ಯಜ್ಞದ ಬೆಂಕಿಯ ಮುಂದೆ ಅತ್ತೆಯ ಮುಖ ಸ್ಪಷ್ಟವಾಗಿ ಕಾಣಿಸತೊಡಗಿತು. ಇನ್ನೊಂದು ಕಡೆ ಒಬ್ಬ ವ್ಯಕ್ತಿ ಬೆಂಕಿಗೆ ತುಪ್ಪ ಸುರುವುತ್ತ ಮಂತ್ರ ಪಠನೆ ಮಾಡುತಿದ್ದ ಇಬ್ಬರ ನಡುವೆ ಅಂಜಲಿ ಕುಳಿತಿದ್ದಳು . ಆಕೆಯ ಮೈ ತುಂಬ ಅರಿಶಿಣ ಮತ್ತು ಕುಂಕುಮವನ್ನು ಸವರಿದ್ದರು . ಬಾಯಿಗೆ ಅರಿವೆಯನ್ನು ಕಟ್ಟಿದ್ದರು.
ಇದೆಲ್ಲವನ್ನು ಕಂಡು ರೊಚ್ಚಿಗೆದ್ದ ವಸುಂಧರೆ "ಸಾಕು ಮಾಡ್ರಿ-- ಸಾಕು ಮಾಡ್ರಿ -- ನಿಮ್ಮನ್ನು ಸುಮ್ಮನೆ ಬಿಡುಲ್ಲಾ" ಎಂದು ಅವರತ್ತ ಧಾವಿಸಿದಳು.
ಹಠಾತನೆ ಇವರನ್ನು ಕಂಡು ಬೆಚ್ಚಿ ಬಿದ್ದ ಅವರಿಗೆ ಏನು ಮಾಡಬೇಕೆಂದು ತೋರಲಿಲ್ಲ. ಮಂತ್ರ ಪಠಿಸುತ್ತಿದ್ದ ವ್ಯಕ್ತಿ ಕತ್ತಲಲ್ಲಿ ಓಡಲು ಪ್ರಾರಂಭಿಸಿದ, ರಾಮು ಅವನನ್ನು ಹಿಡಿಯಲು ಹಿಂಬಾಲಿಸಿದ್ದ. ಅಂಜಲಿ ಅಳುತ್ತ ಅಮ್ಮನನ್ನು ತಬ್ಬಿಕೊಂಡಳು. ಅತ್ತೆ ಹುಚ್ಚಿಯಂತೆ ಜೋಲಿ ಹೊಡಿಯುತಿದ್ದಳು, ಒಮ್ಮೆ ಗಟ್ಟಿಯಾಗಿ ನಕ್ಕು ಮತ್ತೊಮ್ಮೆ ಜೋರಾಗಿ ಅಳುತೊಡಗಿದಳು. ಉರಿಯುವ ಜ್ವಾಲೆಯ ಮುಂದೆ ಕುಂಕುಮಿನಿಂದ ಅಲಂಕೃತವಾದ ಹರಿತವಾದ ಆಯುಧ ಥಳ ಥಳಿಸುತಿತ್ತು. ಅತ್ತೆಯ ಮೂಢ ನಂಬಿಕೆ ಮತ್ತು ಕಂದಾಚಾರದ ' ತಲಾಷ್ ' ವ್ಯರ್ಥವಾಗಿತ್ತು!
( ಮುಗಿಯಿತು )
---ಶಿವ ಮೇಟಿ
ಕಥೆ ಇಲ್ಲಿ ಮುಗಿದರು ಮಾತ್ರ ನಿಜ ಜೀವನದಲ್ಲಿ ನೀವು ಇಂಥ ಅಸಹ್ಯಯಕರ ಘಟನೆಯನ್ನು ಕೇಳುವದು ಮತ್ತು ಓದುವುದು ಎಂದೂ ಮುಗಿಯುವದಿಲ್ಲ!
ನಾಗಾಭರಣ ಅವರು ನವೆಂಬರ್ 2022ರಲ್ಲಿ ”YSKB ಯೊಡನೆ ಸಂವಾದ”ದಲ್ಲಿ ಬೆಂಗಳೂರು ನಾಗರತ್ನಮ್ಮನವರ ಹಾಡಿನ ತುಣುಕಿನ ನಂತರ ಅವರ ಕಥೆ ಹೇಳುತ್ತಿದ್ದಾರೆ …