ಎರಡು ಶೋಧ ಕಥೆಗಳು -ತಲಾಷ್(2) ಮತ್ತು ರಿಚರ್ಡ್ ದಂತದ ಕಥೆ

ಈ ವಾರದ ಅಂಕಣದ ಎರಡನೆಯ ಭಾಗದಲ್ಲಿ ಓದುಗರು ಕುತೂಹಲದಿಂದ ಕಾಯುತ್ತಿರುವ ಶಿವ ಮೇಟಿಯವರ ’ತಲಾಷ್’ ಕಥೆಯ ಎರಡನೆಯ ಭಾಗ ಕಳೆದ ವಾರದಿಂದ ಮುಂದುವರೆದಿದೆ. ಅದಕ್ಕೂ ಮೊದಲು ಶ್ರೀವತ್ಸ ದೇಸಾಯಿಯವರು ಬರೆದ ಇಂಗ್ಲೆಂಡಿನ ಮಧ್ಯಯುಗದ ಅರಸನ ದಂತದ ಕಥೆಯನ್ನು ಓದುಗರಿಗಾಗಿ ಇಡಲಾಗುತ್ತಿದೆ. ಫ್ರಾನ್ಸ್ ಮೂಲದ ಪ್ಲಾಂಟಾಂಜೆನೆಟ್  ವಂಶದ ಕೊನೆಯ ಅರಸ ಮೂರನೆಯ ರಿಚರ್ಡ್ ದೊರೆ ಕಾರಣಾಂತರಗಳಿಂದ ಆ ಕಾಲದ ಇತಿಹಾಸದಲ್ಲಿ ಪ್ರಸಿದ್ಧನೂ ನಿಜ, ಕುಪ್ರಸಿದ್ಧನೂ ಸಹ.  ನೂರು ವರ್ಷಗಳ ಕಾಲ (1337-1453) ಫ್ರಾನ್ಸಿನೊಡನೆ ಈ ದೇಶ ಬಿಟ್ಟೂ ಬಿಡದೆ ಸಂಗ್ರಾಮದಲ್ಲಿ ತೊಡಗಿತ್ತು. ಅದು ಮುಗಿಯುತ್ತಿದ್ದಂತೆಯೇ War of the Roses ಪ್ರಾರಂಭವಾಗಿತ್ತು.ಆ ಸಮಯದಲ್ಲಿಯೇ ಹುಟ್ಟಿದ ಮೂರನೆಯ ರಿಚರ್ಡ್ ಮೂರು ದಶಕಗಳ ನಂತರ ಪಟ್ಟಕ್ಕೇರಿದರೂ ಆತ ಆಳಿದ್ದು ಕೇವಲ ಎರಡೂವರೆ ವರ್ಷ(1483-1485). ಆತ ತನ್ನ ಅಣ್ಣನ ಇಬ್ಬರ ಮಕ್ಕಳನ್ನು ಟಾವರ್ ಆಫ್ ಲಂಡನ್ನಿನಲ್ಲಿ ಸೆರೆಹಿಡಿದಿಟ್ಟಿದ್ದ, ಆತ ಗೂನನಲ್ಲದಿದ್ದರೂ ಆತನ ಬೆನ್ನು ಬಾಗಿತ್ತು, ಒಂದು ಕೈ ಮುರುಟಿತ್ತು, ಒಂದು ಕಾಲಿನಲ್ಲಿ ಕುಂಟುತ್ತಿದ್ದ, ಹೀಗೆಲ್ಲ ವರ್ಣಿಸಿ ಆತನನ್ನು ಖಳನಾಯಕನನ್ನಾಗಿ ಮಾಡಿ ಹೀಗಳೆದವರಲ್ಲಿ ಶೇಕ್ಸ್ಪಿಯರ್ ಮಹಾ ಕವಿ ಸಹ ಒಬ್ಬ. ಆತನ ಜೀವನ ಮತ್ತು ಮೃತ್ಯು ಅನೇಕ ದಂತ ಕಥೆಗಳನ್ನು ಹುಟ್ಟು ಹಾಕಿತ್ತು. ಆತನ ಬಗ್ಗೆ ಇತಿಹಾಸಕ್ತರ ಕುತೂಹಲ ಇತ್ತೀಚಿನ ವರೆಗೂ ಇತ್ತು; ಇನ್ನೂ ಇದೆ. ಆಧುನಿಕ ವಿಜ್ಞಾನದ ಸಂಶೋಧನೆ ಮತ್ತು ತಂತ್ರಗಳಿಂದ ಆತನ ಅಂತ್ಯದ ಬಗೆಗೆ ಬೆಳಕು ಚೆಲ್ಲುವ ಸ್ವಾರಸ್ಯಕರ ವೃತ್ತಾಂತವನ್ನು ನಿಮ್ಮೆದುರು ಇಡುವ ಪ್ರಯತ್ನ ಈ ಕೆಳಗಿನ ಲೇಖನದಲ್ಲಿದೆ. ಒಂದು ವಿಡಿಯೋ ಸಹ ಇದೆ. ಓದುಗರಿಗೆ ಹಿಡಿಸೀತೆಂಬ ಭರವಸೆಯಿದೆ. ಹೆಚ್ಚಿನ ಮಾಹಿತಿಗೆ ಲೆಸ್ಟರಿಗೆ ಭೇಟಿ ಕೊಡಬಹುದು. (ಸಂ )
1 ”ಕಾರ್ ಪಾರ್ಕ್ ರಾಜ’ -ಒಂದು ದಂತದ ಕಥೆ
ತನ್ನ ಮೈ ಮೇಲೆ ಸಾವಿರಾರು ಕಾರುಗಳು ಬಂದು, ನಿಂತು ದಾಟಿ ಹೋಗುತ್ತಿದ್ದರೂ ಐದು ಶತಮಾನಕ್ಕೂ ಮೇಲು ತನ್ನ ರಹಸ್ಯವನ್ನು R- ಅಡಿ ಬಚ್ಚಿಟ್ಟುಕೊಂಡು ಪವಡಿಸಿದ್ದ ಒಬ್ಬ ಅರಸನ ಕಥೆ ಇದು. ಒಬ್ಬ ಮೊಮ್ಮಗ ಅಜ್ಜನಿಗೆ ಹೇಳಿದ ’ದಂತ’ ಕಥೆ ಇದು. ಒಬ್ಬ ’ಕಿಂಗ್’ ಇನ್ನೊಬ್ಬ ಕಿಂಗನ ಅಸ್ಮಿತೆಯನ್ನು ಬಯಲು ಮಾಡಿದ ಕಥೆ. ಆಧುನಿಕ ವಿಜ್ಞಾನದ ಯಶೋಗಾಥೆ ಇದು!

ಇದು ಹದಿನೈದನೆಯ ಶತಮಾನದ ಇಂಗ್ಲೆಂಡಿನ ಒಬ್ಬ ಅರಸನ ದಂತದ ಕಥೆ! ಕ್ರಿ ಶ 1485ರಲ್ಲಿ ಇಂಗ್ಲೆಂಡಿನ ಮಧ್ಯಭಾಗದಲ್ಲಿ ಲೆಸ್ಟರ್ ಪಕ್ಕದ ಬಾಸ್ವರ್ತ್(Bosworth) ಕಾಳಗದಲ್ಲಿ ಮೂರನೆಯ ರಿಚರ್ಡ್ ರಾಜ (ಎಡಗಡೆಯ ಚಿತ್ರ) ಬಿದ್ದು ಕುದುರೆಯನ್ನು ಕಳಕೊಂಡು ಕಾದುತ್ತಲೇ ಲ್ಯಾಂಕಾಸ್ಟ್ರಿಯನ್  ರಿಚ್ಮಂಡ್ (ಮುಂದೆ ಏಳನೆಯ ಹೆನ್ರಿ) ಸೈನ್ಯದ ಪ್ರಹಾರದಿಂದ ಮೃತನಾದ. ಶೇಕ್ಸ್ಪಿಯರನ ಅದೇ ಹೆಸರಿನ ನಾಟಕದಲ್ಲಿ ಬರೆದಂತೆ “A horse, a horse, My kingdom for a horse” ಅಂತ ಪರಿತಪಿಸುತ್ತ ಮಡಿದ. ಐದೂವರೆ ನೂರು ವರ್ಷಗಳ ವರೆಗೆ ಆತನ ದೇಹದ ಅವಶೇಷಗಳ ಬಗ್ಗೆ ಊಹಾ ಪೋಹವೇ ಬೆಳೆದು ದಂತ ಕಥೆಗಳು ಹುಟ್ಟಿಕೊಡಿದ್ದವು. ಆತನೆ ಆಕಾರ-ಸ್ವಭಾವಗಳ ಬಗ್ಗೆ ಮಹಾಕವಿ ಶೇಕ್ಸ್ಪಿಯರ್ ಸಹ ಆ ದಂತಕಥೆಗಳ ಆಧಾರದ ಮೇಲೆ ತನ್ನ ನಾಟಕದಲ್ಲಿ ಆತನ ಅಸಾಮಂಜಸ ವರ್ಣನೆಯನ್ನೇ ಕೊಟ್ಟಿದ್ದಾನೆ. ಆತನ ಅಸ್ಥಿಗಳು 2012ರಲ್ಲಿ ಲೆಸ್ಟರ್ ಮಹಾನಗರದ ಮಧ್ಯದ ಒಂದು ಕಾರ್ ಪಾರ್ಕಿನಡಿಯಲ್ಲಿ ಆರ್ (R) ಅಕ್ಷರದಡಿ ಆರಡಿ ಕೆಳಗೆ ಸಿಕ್ಕವು. ಈಗ ಈ ವಿಸ್ಮಯಕಾರಕ, ರೋಚಕ ಕಥೆ ಇತಿಹಾಸಕಾರರನ್ನು ನಿರಂತರವಾಗಿ ಆಕರ್ಷಿಸುತ್ತಿದೆಯಲ್ಲದೆ ಅರ್ಕಿಯಾಲಜಿಸ್ಟ್ ಮತ್ತು ವಿಜ್ಞಾನಿಗಳ ಕುತೂಹಲವನ್ನೂ ಕೆರಳಿಸಿದ ಒಂದು ಕಥೆಯಾಗಿದೆ. ಆತನ ಕಥೆಯನ್ನು ಹೇಳುವ ಲೆಸ್ಟರ್ ಮ್ಯೂಸಿಯಮ್ ’RIII’ಗೆ ಈಗ ತಂಡೋಪ ತಂಡವಾಗಿ ಜನರು ಮತ್ತು ಶಾಲಾ ಮಕ್ಕಳೂ ಸಹ ಭೇಟಿ ಕೊಡುತ್ತಿದ್ದಾರೆ

ಫ್ರಾನ್ಸ್ ಮೂಲದ ಪ್ಲಾಂಟಾಜೆನೆಟ್ (Plantangenet) ಮನೆತನದ ಕೊನೆಯ ಅರಸ ರಿಚರ್ಡ್ನ ಅಸ್ಥಿ ಮತ್ತಿತರ ಪಳೆಯುಳಿಕೆಗಳು ಸಿಕ್ಕ ಜಾಗವನ್ನು ಸಹ ನೆಲದ ಮೇಲಿನ ಗಾಜಿನ ಮುಖಾಂತರ ನೋಡಬಹುದು ಅಂತ ತಿಳಿದಿದ್ದರಿಂದ ಬಲು ಉತ್ಸುಕನಾಗಿದ್ದ ಹತ್ತು ವರ್ಷದ ನನ್ನ ಮೊಮ್ಮಗ ಅಕ್ಷಯನನ್ನು ಕರೆದು ಕೊಂಡು ಕಳೆದ ತಿಂಗಳು ಲೆಸ್ಟರ್ ಊರಿನ ಮ್ಯೂಸಿಯಮ್ಗೆ ಹೊರಟೆ. ಶಾಲೆಯಲ್ಲಿ ಮೊದಲೇ ಆ ಬಗ್ಗೆ ಕಲಿತಿದ್ದ ಆತನೇ ನನಗೆ ’ಆರ’ಡಿ (R-ಅಡಿ) ಹೂತ ರಾಜನ ವಿಷಯ ಹೇಳಿದ್ದು. ಈಗಿನ ಮಹಾ ನಗರದ ಮಧ್ಯವರ್ತಿ ಕಾರ್ ರ್ಪಾರ್ಕಿನ ಅಡಿಯಲ್ಲಿ ಹಿಂದಿನ ಕಾಲದಲ್ಲಿ ನೆಲಸಮವಾದ ಗ್ರೇ ಫ್ರಯರ್ಸ್ ಚರ್ಚಿನಲ್ಲೇ ಹದಿನೈದನೆಯ ಶತಮಾನದಲ್ಲಿ ರಾಜನನ್ನು ಅವಸರದಲ್ಲಿ ದಫನ ಮಾಡಿದ ಹಳೆಯ ಕೆಲವು ದಾಖಲೆಗಳಿದ್ದವು. ಅದನ್ನು ಖಚಿತ ಪಡಿಸಿಕೊಳ್ಳಲು ಮುಮ್ಮಡಿ ರಿಚರ್ಡ್ ಸಂಸ್ಥೆ 13,000 ಪೌಂಡುಗಳ ಹಣ ಸಂಗ್ರಹ ಮಾಡಿ ನಗರ ಪಾಲಿಕೆಯ ಅನುಮತಿ ಪಡೆದು ಜಿ ಪಿ ಆರ್ ರಾಡಾರ್ ಸಹಾಯದಿಂದ ಆತ ಹೂತಿರುವ ಜಾಗದ ಪತ್ತೆ ಹಚ್ಚಿದ ನಂತರ ಉತ್ಖನನ ಪ್ರಾರಂಭವಾಯಿತು. ಮೊದಲು ಸಿಕ್ಕದ್ದು ತೊಡೆಯ ಎಲುವು. ಬೆನ್ನೆಲುಬು ಬಾಗಿತ್ತು (scoliosis). ತಲೆಬುರುಡೆಯ ಕೆಳಭಾಗದಲ್ಲಿ ಆಳವಾದ ಗಾಯಗಳ ಕುರುಹುಗಳಿದ್ದವು. ಶೇಕ್ಸ್ಪಿಯರ್ ಸಹ ಆಗಿನ ಕಾಲದ ಪ್ರಚಲಿತ ವಿದ್ಯಮಾನಕ್ಕನುಗುಣವಾಗಿ ತನ್ನ ’ಕಿಂಗ್ ರಿಚರ್ಡ್’ ನಾಟಕದಲ್ಲಿ ಆತನಿಗೆ, ’ಗೂನ, ಒಂದು ಕೈ ಮುರುಟಿತ್ತು, ಒಂದು ಕಾಲು ಕುಂಟುತ್ತಿತ್ತು’ ಎನ್ನುವ ವಿಕಾರ ರೂಪ ಕೊಟ್ಟಿದ್ದಲ್ಲದೇ ಅವನನ್ನು ಒಬ್ಬ ಖಳನಾಯಕನನ್ನಾಗಿ ವರ್ಣಿಸಿದ್ದಾನೆ (ಮೊದಲ ಮೂವತ್ತು ಸಾಲುಗಳಲ್ಲಿ). ತನ್ನ ಅಣ್ಣನ ಇಬ್ಬರು ಎಳೆಯ ಮಕ್ಕಳನ್ನು (”Princes in the Tower”) ಸೆರೆಹಿಡಿದಿಟ್ಟ ನಂತರ ಬಹುಶಃ ಕೊಲ್ಲಿಸಿ ಕುಖ್ಯಾತನನ್ನಾಗಿ ಮಾಡಿದ್ದಾನೆ. ’ನಾನು ಹೊರಟರೆ ನಾಯಿಗಳೂ ಸಹ ನಿಂತು ಬೊಗಳುತ್ತವೆ!ಎನ್ನುವ ಆತನ ಸ್ವಗತ ಆ ನಾಟಕದಲ್ಲಿ ಹೀಗಿದೆ:

 Deform’d, unfinish’d, sent before my time

 Into this breathing world, scarce half made up (Richard III, 1.1.14-31)
ಇತ್ತೀಚಿನ ಸಂಶೋಧಕರ ಅಭಿಪ್ರಾಯದ ಪ್ರಕಾರ ಇದು ಅತಿರೇಕದ ವರ್ಣನೆ, ರಿಚರ್ಡನ ಮರಣದ ನಂತರ ಬಂದ ಟ್ಯೂಡರ್ ಮನೆತನದ ಪರವಾಗಿದ್ದವರ ಪ್ರಚಾರದಿಂದ ಪ್ರೇರಿತವಾದ ತೇಜೊವಧೆ ಎನ್ನುವ ಮತಕ್ಕೆ ಬಂದಿದ್ದಾರೆ.

ಶಾಲಾ ಬಾಲಕ ಗಾಜಿನಡಿಯಲ್ಲಿಯ ಅಸ್ಥಿಯನ್ನು ನೋಡುತ್ತಿರುವ ದೃಶ್ಯ
ಬಾಗಿದ ಬೆನ್ನೆಲುಬಿನ ಅರಸ ರಿಚರ್ಡ್ನ ಅಸ್ಥಿ
ಲೆಸ್ಟರ್ (Leicester) ಐತಿಹಾಸಿಕ ಸ್ಥಳ
ಇಂಗ್ಲೆಂಡಿನ ಮಧ್ಯದಲ್ಲಿರುವ ಈ ಮಹಾನಗರ ಇತಿಹಾಸದ ಕೇಂದ್ರಬಿಂದುವಾಗಿ ಉಲ್ಲೇಖ ಪಡೆದಿದೆ. ಇತ್ತೀಚೆಗಷ್ಟೇ 2022 ರ ದೀಪಾವಳಿಗೆ ಮುಂಚೆ ಇಲ್ಲಿ ಮತೀಯ ಗಲಭೆಗಳುಂಟಾಗಿ ಜಗತ್ತಿನಲ್ಲೆಲ್ಲ ಹೆಡ್ಲೈನ್ ಸುದ್ದಿ ಮಾಡಿತ್ತು. ಸದ್ಯಕ್ಕಂತೂ ಇಲ್ಲಿ ಶಾಂತಿ ನೆಲೆಸಿದೆ. ಪೋಲೀಸರ ’ರಕ್ಷೆ’ಯಲ್ಲಿ ದೀಪಾವಳಿ ಹಬ್ಬ ವಿಜೃಂಭಣೆಯಿಂದ ಸಾಂಗವಾಗಿ ಜರಿದು ನಿಟ್ಟುಸಿರು ಬಿಟ್ಟೆವು. ಅದಕ್ಕೂ ಪೂರ್ವದಲ್ಲಿ 1974ರಲ್ಲಿ ದಕ್ಷಿಣ ಏಷಿಯಾದ ಮೂಲದ ಹೆಂಗಸರು ಬಿಳಿಯರಿಗಿಂತ ಅದೇ ಕೆಲಸಕ್ಕಾಗಿ ತಮಗೆ ಕಡಿಮೆ ವೇತನ ಕೊಟ್ಟದ್ದಕ್ಕಾಗಿ ಸಂಪು ಹೂಡಿ, ಕೊನೆಗೆ ಇಂಪೀರಿಯಲ್ ಟೈಪ್ ರೈಟರ್ ಕಂಪನಿಯನ್ನು ಮುಚ್ಚುವಂತೆ ಮಾಡಿ ಇತಿಹಾಸವನ್ನೇ ಬರೆದರು.  ಅದಕ್ಕೂ ಮೊದಲು ಐದೂವರೆ ನೂರು ವರ್ಷಗಳ ಹಿಂದೆ ಅನತಿ ದೂರದಲ್ಲಿರುವ ಬಾಸ್ವರ್ತ್ ಮೈದಾನದಲ್ಲಿ ಮಡಿದು ಮೂರನೆಯ ರಿಚರ್ಡ್ ರಾಜ ಊರ ಮಧ್ಯದ ಫ್ರಯರಿ ಚರ್ಚಿನಲ್ಲಿ ಅವಸರದ ಸಮಾಧಿಯನ್ನು ಹೊಕ್ಕುಇಲ್ಲಿಯ ವರೆಗೆ ಗುಲ್ಲೆಬ್ಬಿಸದೆ ಪವಡಿಸಿದ್ದ!
ಕಿಂಗ್ ರಿಚರ್ಡ್ ವಿಸಿಟರ್ ಸೆಂಟರ್, ಲೆಸ್ಟರ್
ಲೆಸ್ಟರಿನ ಯಾವದೇ ಮೂಲೆಯಲ್ಲಿಯೂ ಒಂದು ಕಿರೀಟದ ಕೆಳಗೆ ದೊಡ್ಡ 'R' ಎನ್ನುವ ಅಕ್ಷರವಿರುವ (ಲೋಗೋ) ಲಾಂಛನವನ್ನು ಕಾಣ ಬಹುದು. ಮ್ಯೂಸಿಯಂ ಮೂರು ಭಾಗಗಳಲ್ಲಿ ಈ ಕಥೆಯನ್ನು ಹೇಳುತ್ತದೆ: ವಂಶಾವಳಿ(Dynasty), ಮೃತ್ಯು(Death)ಮತ್ತು ವೈಜ್ಞಾನಿಕ ಅನ್ವೇಶಣೆ(Discovery).
RIII ಮ್ಯೂಸಿಯಂ ಒಳಗೆ …
1.ವಂಶಾವಳಿ: ಹದಿನಾಲ್ಕನೆಯ ಶತಮಾನದ ಆದಿಯಲ್ಲಿ ಮೂರನೆ ಎಡ್ವರ್ಡ್ ರಾಜ 50 ವರ್ಷ ನೆಮ್ಮದಿಯಾಗಿ ಆಳಿದ ನಂತರ ಫ್ರಾನ್ಸ್ ನೊಡನೆ ’ಒಂದು ಶತಮಾನ ದ ಯುದ್ಧ’ದಲ್ಲಿ ತೊಡಗಿ ಸೋತಿತ್ತು ಇಂಗ್ಲೆಂಡ್. ಆತನ ವಂಶದ ಎರಡು ಶಾಖೆಯ ಮರಿಮಕ್ಕಳು ದಾಯಾದಿಗಳಾಗಿ ಮೂವತ್ತು ವರ್ಷ ಸತತವಾಗಿ ಬಡಿದಾಡಿದ್ದೇ ”ವಾರ್ ಆಫ್ ಥಿ ರೋಸಸ್’ ಎನ್ನುವ ಹೆಸರು ಪಡೆಯಿತು. ಲ್ಯಾಂಕಾಸ್ಟರ್ ಮನೆತನ ಲಾಂಛನ ಕೆಂಪು ಗುಲಾಬಿ ಯಾಗಿದ್ದರೆ ಯಾರ್ಕ್ ಮನೆತನದ್ದು ಬಿಳಿ ಗುಲಾಬಿ (Yorkists). ಈ ಮನೆತನದ ಕೊನೆಯ ರಾಜನೇ ಯುದ್ಧದಲ್ಲಿ ಮಡಿದ ಕೊನೆಯ ಇಂಗ್ಲೆಂಡಿನ ರಾಜ ನಮ್ಮ ಕಥಾನಾಯಕ ಮೂರನೆಯ ರಿಚರ್ಡ್. ಆತನ ಮರಣದ ನಂತರ ಇವೆರಡೂ ಶಾಖೆಗಳು ವಿವಾಹದಿಂದ ಒಂದಾಗಿ ಟ್ಯೂಡರ್ ಮನೆತನ ಆರಂಭವಾಯಿತು. ಇದು ಸಂಕ್ಷಿಪ್ತ ಇತಿಹಾಸ.
2.ಮೃತ್ಯು

ಲೆಸ್ಟರಿನ ಬ್ಲೂ ಬೋರ್ ಎನ್ನುವ ಇನ್ ದಲ್ಲಿ (ತಂಗುದಾಣ) ರಿಚರ್ಡ್ ತನ್ನ ಕೊನೆಯ ರಾತ್ರಿಯನ್ನು ಕಳೆದ. ವೇಲ್ಸ್ ಕಡೆಯಿಂದ ಇನ್ನೂ ಪಡೆಯೊಂದಿಗೆ ಬರುತ್ತಿದ್ದ ಹೆನ್ರಿಯನ್ನು ಎದುರಿಸಲು ಬಾಸ್ವರ್ತ್ಗೆ ಕಾಳಗಕ್ಕೆ ಹೊರಟ. ರಿಚರ್ಡನ ಸೈನ್ಯ ದೊಡ್ಡದಿದ್ದರೂ ಆತನಿಗೆ ಬೆಂಬಲ ಕೊಡಬೇಕಾಗಿದ್ದ ಲಾರ್ಡ್ ಸ್ಟಾನ್ಲಿ ಕೊನೆಯ ಗಳಿಗೆಯಲ್ಲಿ ಅವನ ಸಹಾಯ ಮಾಡದೆ ವೈರಿಯ ಪಂಗಡವನ್ನು ಸೇರಿದ. ರಿಚರ್ಡ್ ಮಾತ್ರ ಕೆಸರಿನಲ್ಲಿ ತನ್ನ ಕುದುರೆ ಸಿಕ್ಕಿ ಬಿದ್ದಿದ್ದರಿಂದ ಕೆಳಗಿಳಿಯ ಬೇಕಾಯಿತು. ಆತನ ಕಿರೀಟ, ಶಿರಸ್ತ್ರಾಣ ಕಳಚಿ ಬಿದ್ದಿತ್ತು. ಯುದ್ದ ಮಾಡುತ್ತ ಸಾವನ್ನಪ್ಪಿದ. ಮೇಲೆ ಉದ್ಧರಿಸಿದಂತೆ, ’ಒಂದು ಕುದುರೆ ಬೇಕು! ಇದು ಸ್ಟಾನ್ಲಿಯ ಫಿತೂರಿ’, ಅನ್ನುತ್ತಲೇ ಮಡಿದ. ಒಂದು ಕುದುರೆಗಾಗಿ ನನ್ನ ರಾಜ್ಯವನ್ನೇ ಕೊಡುವೆ ಅನ್ನುವ ಇಂಗ್ಲಿಷ್ ಪದಪುಂಜ ಮಹಾಕವಿ ಶೇಕ್ಸ್ಪಿಯರನ ನಂತರ ಮನೆಮಾತಾಗಿದೆ. ಅದನ್ನೇ ತಿರುಚಿ ಈಗಲೂ ಸಹ "I will give an arm and a leg" ಅಂತ ಜನರಾಡುವದನ್ನು ಈಗಲೂ ನಾವು ಕೇಳ ಬಹುದು. ಆತನ ದೇಹಕ್ಕೆ ಬಿದ್ದ ಹನ್ನೊಂದು ಪ್ರಹಾರಗಳಲ್ಲಿ ತಲೆಯ ಕೆಳಭಾಕಕ್ಕೆ ತಗಲಿದ ಎರಡು ಮಾರಕವಾಗಿದ್ದವು ಅಂತ ಸಿದ್ಧವಾಗಿವೆ. ಆತನ ಬತ್ತಲೆ ದೇಹವನ್ನು ಆಗಿನ ರೂಢಿಯಂತೆ ಜನರೆಲ್ಲ ನೋಡಲೆಂದು ಎರಡು ದಿನ ಪಕ್ಕದಲ್ಲಿದ್ದ ಒಂದು ಚರ್ಚಿನಲ್ಲಿ ಪ್ರದರ್ಶನ ಮಾಡಿದ ನಂತರ ಗ್ರೇ ಪಾದ್ರಿಗಳು ಅವಸರದಲ್ಲಿ (ಅದಕ್ಕೇ ತಲೆ ಸೊಟ್ಟಾಗಿ ಕುಳಿತಿದೆ) ಶವ ಸಂಸ್ಕಾರ ಮಾಡಿದರೆಂದು ಸಂಶೋಧಕರ ಅಭಿಮತ.
ರುವ ಲೇಖನಗಳಿಂದ ತಿಳಿದು ಬರುತ್ತದೆ. 


3. ದಂತ ಮತ್ತು ವಂಶವಾಹಿನಿ

ನಿನ್ನಜ್ಜ ಮುತ್ತಜ್ಜ ಮೂಲಜ್ಜರೆಲ್ಲರುಂ
ನಿನ್ನೊಳವತರಿಸಿ ಮುಂದಿನ್ನು ಜನಿಸಲಿಹ
ನಿನ್ನ ಮಗ ಮೊಮ್ಮ ಮರಿಮೊಮ್ಮರೊಳು ಜೀವಿಪ್ಪರ್
ಅನ್ವಯ ಚಿರಂಜೀವಿ -ಮಂಕುತಿಮ್ಮ.

25 ಆಗಸ್ಟ್, 2012 ರಂದು ರಿಚರ್ಡ್ ಸೊಸೈಟಿಯವರ ((ಲೆಸ್ಟರ್ ರಿಕಾರ್ಡಿಯನ್ಸ್) ಪ್ರಯತ್ನದ ಫಲವಾಗಿ ಊರ ಮಧ್ಯದ ಸೋಶಿಯಲ್ ಸರ್ವಿಸಸ್ ಕಾರ್ ಪಾರ್ಕಿನಲ್ಲಿ ಡಿಗ್ಗರ್ ಗಳು ಕೆಲಸ ಪ್ರಾರಂಭ ಮಾಡಿದವು. ಮೂರು ಟ್ರೆಂಚುಗಳನ್ನು ಅಗಿಯುವ ಯೋಜನೆ. ಕಾರ್ ಪಾರ್ಕಿನ ನೆಲದ ಮೇಲೆ ಬರೆದ ಬಿಳಿಯ 'R' ಅಕ್ಷರದ ಹತ್ತಿರವೇ ಅಗಿದ ಮೊದಲನೆಯ ಟ್ರೆಂಚ್. ಕೆಲವೇ ತಾಸುಗಳಲ್ಲಿ ಸಿಕ್ಕ ತೊಡೆಯ ಎಲುಬು ರಿಚರ್ಡನದೇ ಅಂತ ವೈಜ್ಞಾನಿಕವಾಗಿ ನಂತರದ ಡಿ ಎನ್ ಎ ಸಂಶೋಧನೆಯಲ್ಲಿ ಸಾಬೀತಾದುದು ಕಾಕತಾಳೀಯವೇ! ಎಲುಬುಗಳ ಸ್ಕ್ಯಾನ್ನಿಂದ ಆತ 32 ರಿಂದ 34 ವಯಸ್ಸಿನವ ಅಂತ ಗೊತ್ತಾಯಿತು. ಅಷ್ಟೇ ಅಲ್ಲ, ಆ ಎಲುಬುಗಳ ಕೊಲಾಜನ್ನಿನ ಆಕ್ಸಿಜನ್, ಸ್ಟ್ರಾನ್ಷಿಯಮ್, ಕಾರ್ಬನ್ ಡೇಟಿಂಗ್ ಮತ್ತು ನೈಟ್ರೋಜನ್ ಐಸೊಟೋಪುಗಳ ವಿಶ್ಲೇಷಣೆಯಿಂದ ಆತ 1483ರಲ್ಲಿ ಪಟ್ಟಕ್ಕೇರಿದ ರಾಜನೇ ಅನ್ನುವದರಲ್ಲಿ ಸಂಶಯ ಉಳಿಯಲಿಲ್ಲ. ಆನಂತರ ಸೇವಿಸಿದ ರಾಜ ವೈಭವದ ಆಹಾರದಲ್ಲಿ ಹಂಸ, ಕೊಕ್ಕರೆ ಮತ್ತು ಸಾರಸ, ಅಪರೂಪದ ಮೀನ ಇತ್ಯಾದಿ ಇದ್ದವು ಅನ್ನುವ ಮಾಹಿತಿ ಗಣ್ಯ ವೈಜ್ಞಾನಿಕ ಜರ್ನಲ್ಗಳಲ್ಲಿ ಪ್ರಕಟಗೊಂಡ ಲೇಖನಗಳಿಂದ ತಿಳಿದು ಬರುತ್ತದೆ 
ಚ್ಯೂರಿಯ ಚೂರ್ಣ ಮತ್ತು ದಂತದ ಕಥೆ: 

ಕಟ್ಟ ಕಡೆಗೆ ಆತನದೇ ಆ ಅಸ್ಥಿ ಅಂತ 99.999% ಪುರಾವೆ ಸಿಕ್ಕಿದ್ದು ಆತನೆಯ ಹಲ್ಲುಗಳ ಡಿ ಎನ್ಎ ಗಳಿಂದ. ಆತನ ಬಗ್ಗೆ ಹಬ್ಬಿದ್ದ ಎಷ್ಟೋ ಸಂಗತಿಗಳು (ಉದಾ ಸೊಟ್ಟವಾದ ಬೆನ್ನು, ಗೂನ ಅಲ್ಲ) ಬರೀ ದಂತ ಕಥೆಯಲ್ಲ ಅಂತ ಕೊನೆಗೂ ರುಜು ಸಿಕ್ಕಿತು. ಲೆಸ್ಟರ್ ಯುನಿವರ್ಸಿಟಿಯ ಚ್ಯೂರಿ ಕಿಂಗ್ (Dr Turi King) ಎನ್ನುವ  ಜೆನೆಟಿಕ್ಸ್ ಮತ್ತು ಜೀನೋಮ್ ಬಯಾಲಜಿ ಪ್ರೊಫೆಸರ್ ಅವಳಿಗೆ ಅದರ ಹೊಣೆಯನ್ನು ಹೊರಿಸಿದ್ದರು. ಈ ವಿಷಯದಲ್ಲಿ ಅಪಾರ ಅನುಭವ ಆಕೆಗೆ. ಸದ್ಯ ಮೂವತ್ತುಮೂರನೇ ವಯಸ್ಸಿಗೇ ಜೀವ ತೆತ್ತಿದ್ದ ರಿಚಡನ ಕೆಳದವಡೆಯಲ್ಲಿ ಸಾಕಷ್ಟು ಹಲ್ಲುಗಳಿದ್ದವು. ಹಲ್ಲಿನ ಡಿ ಎನ್ ಎ ಸುಲಭದಲ್ಲಿ ಕ್ಷಯವಾಗುವದಿಲ್ಲವಂತೆ. ಸುದೈವದಿಂದ ದೇಹದ ಹತ್ತಿರದಲ್ಲೇ ತೇವವಿದ್ದರೂ ಎಲುವುಗಳು ನೀರಲ್ಲಿ ಮುಳುಗಿ ಹಾನಿಯಾಗಿರಲಿಲ್ಲ. ಮೆಲ್ಲ ಮೆಲ್ಲಗೆ ಒಂದು ಹಲ್ಲನ್ನು ಹತ್ತಾರು ನಿಮಿಷ ಅಲ್ಲಾಡಿಸುತ್ತ ಅಲ್ಲಾಡಿಸುತ್ತ ಕೊನೆಗೆ ಅದನ್ನು ಕಿತ್ತಿ ಸ್ವಚ್ಛ ಪಾಕೀಟಿನಲ್ಲಿ ಹಾಕಿ ಅದರ ಚೂರ್ಣದಿಂದ ತನ್ನ ಸಂಶೋಧನೆ ಮಾಡಿ ಅದರಲ್ಲಿ ದೊರೆತ (ತಾಯಿಯ ವಂಶಾವಳಿಯಿಂದ ಮುಂದುವರೆದ) ಮೈಟೋಕೋಂಡ್ರಿಯಲ್ ಡಿ ಎನ್ ಎ ರಿಚರ್ಡನ ಮನೆತನದ ಹೆಣ್ಣು ಸಂತತಿಯ ಹದಿನಾರನೆಯ ಪೀಳಿಗೆಯ ಮೈಕಲ್ ಇಬ್ಸೆನ್ ಮತ್ತು ಹದಿನೆಂಟನೆಯ ಪೀಳಿಗೆಯ ವೆಂಡಿ ಡಲ್ಡಿಗ್ ಅವರ ವಂಶವಾಹಿನಿಗಳ ಅತ್ಯಂತ ನಿಕಟ ಹೋಲಿಕೆ (ಮೇಲಿನ ಕಗ್ಗ ಹೇಳುವ ’ಅನ್ವಯ’) ಇರುವುದನ್ನು ಸಾಬೀತು ಮಾಡಿ ಕೊನೆಗೂ ಆ ಅಸ್ಥಿಗಳು 99.999% ಆತನದೇ ಅನ್ನುವ ರುಜುವಾತನ್ನು ಸ್ಥಾಪಿಸಿದ್ದು ಅದ್ಭುತವೇ ಸರಿ. Y ವರ್ಣತಂತುವಿನ (chromosome) ಜಾಡು ಹಿಡಿದು ಹೊರಟಾಗ ಸಿಕ್ಕ ಐವರು ವಂಶಜರಲ್ಲಿ ಒಬ್ಬರದೂ ಡಿ ಎನ್ ಎ ದಲ್ಲಿ ಹೊಂದಿಕೆ ಸಿಗದಿದ್ದರೂ ಆ ಎಲುಬುಗಳು ರಿಚರ್ಡನದೇ ಅನ್ನುವ ನಿರ್ಣಯಕ್ಕೆ ವ್ಯತಿರಿಕ್ತವಾಗಿರಲಿಲ್ಲ. ಗೀತೆ ಹೇಳಿದ ವರ್ಣಸಂಕರ ನೆನಪಾಗುತ್ತದೆ! ನಿಮಗೆ ಅವಕಾಶ ಸಿಕ್ಕರೆ ಲೆಸ್ಟರ್ಗೆ ಅವಶ್ಯ ಭೇಟಿ ಕೊಡಿ. ಒಮ್ಮೆ ಕೊಂಡ ತಿಕೀಟಿಗೆ ಮಾತ್ರ ಒಂದೇ ಒಂದು ವರ್ಷದ ಬಾಳಿಕೆಯಿದೆ!

Turi King removing a tooth from lower jaw of Richard III

ಶೇಕ್ಸ್ಪಿಯರಾಯಣ

What’s in a name? (Or in a letter?)

ಇಲ್ಲಿ ಒಂದು ಸಾಮ್ಯತೆಯಿದೆ. ಆತನ ನಾಟಕದಲ್ಲಿ ಒಬ್ಬ G ಅಕ್ಷರದವ ಎಡ್ವರ್ಡ್ ರಾಜನ ಸಂತತಿಯನ್ನು ಕೊಲೆಮಾಡುವದಾಗಿ ಭವಿಷ್ಯವಾಣಿ ಹೇಳುತ್ತದೆ. ಯಾರು ಆ G? ಅದು ನಾಟಕದಲ್ಲಿ ಬರುವ ರಹಸ್ಯ.

EIIR, VR ಮತ್ತು ಸದ್ಯ CR ಇತ್ಯಾದಿ ಬ್ರಿಟಿಷ್ ರಾಜ ಮುದ್ರೆಯಲ್ಲಿ ಕ್ರಮವಾಗಿ, ಎಲಿಝಬೆತ್, ವಿಕ್ಟೋರಿಯಾ, ಚಾರ್ಲ್ಸ್ ಇವರಲ್ಲಿ R- Regina (ರಾಣಿ) ಅಥವಾ Rex (ರಾಜ)ನನ್ನು ಸೂಚಿಸುತ್ತದೆ. ಅಂದರೆ ಲೆಸ್ಟರಿನ ಕಾರ್ ಪಾರ್ಕಿನ R? Reserved ಇರಬಹುದೇನೋ!

ದಂತ ಕಥೆ’ ಹೇಗೆ ಹುಟ್ಟಿತು?

ಇನ್ನು ಪಾವೆಂ ಅವರ ಪದಾರ್ಥ ಚಿಂತಾಮಣಿಯಿಂದ (ಪು:241): ”ದಂತಕ್ಕೂ ಕಥೆಗೂ ಏನು ಸಂಬಂಧ? ದಂತ ಕಥೆ ಎನ್ನುವ ಪದ ಎಲ್ಲರಿಗೂ ಗೊತ್ತು. ಯಾವ ಖಚಿತ ಆಧಾರವಿಲ್ಲದೆ ಬಾಯಿಂದ ಬಾಯಿಗೆ ತಲೆಮಾರುಗಳಿಗೆ ಹಬ್ಬುತ್ತ ಬೆಳೆದ ವಾರ್ತೆ ದಂತ ಕಥೆಯೆನಿಸುತ್ತದೆ. ಮಾಸ್ತಿಯವರು ಇದಕ್ಕೊಂದು ವ್ಯುತ್ಪತ್ತಿಯನ್ನು ಊಹಿಸುತ್ತಾರೆ. ದಂತ ಕಥೆಯ ದಂತ, ಹಲ್ಲು ಅಲ್ಲವೇ ಅಲ್ಲ, ’ಉದಂತ’ ಎಂದರೆ ಸಂಸ್ಕೃತದಲ್ಲಿ ವೃತ್ತಾಂತ, ವರ್ತಮಾನ(ಉದಾ: ರಾಮೋದಂತಃ). ಈ ಉದಂತದಲ್ಲಿ ಪ್ರಥಮಾಕ್ಷರ ಉದುರಿ ಹೋಗಿ ’ದಂತ’ ಮಾತ್ರ ಉಳಿಯಿತು. ಉದಂತ ಮತ್ತು ಕಥೆ ಸುಮಾರಾಗಿ ಒಂದೇ ಅರ್ಥದ ಶಬ್ದಗಳು. ಹೇಗಿದೆ ಈ ’ದಂತ ಕಥೆ’ಯ ವೃತ್ತಾಂತ?

ಲೇಖನ ಮತ್ತು ಫೋಟೋಗಳು: ಶ್ರೀವತ್ಸ ದೇಸಾಯಿ (ಎರಡು ಚಿತ್ರಗಳು ಗೈಡ ಬುಕ್ ಕೃಪೆ).

Links:

  1. King Richard III Visitor Centre, 4A St Martins, Leicester LE1 5DB
  2. https://www.researchgate.net/publication/273293657_%27The_king_in_the_car_park%27_New_light_on_the_death_and_burial_of_Richard_III_in_the_Grey_Friars_church_Leicester_in_1485

2. ತಲಾಷ್ - ೨ ಶಿವ ಮೇಟಿಯವರು ಬರೆದ ಕಥೆಯ ಎರಡನೆಯ ಭಾಗ
(ಮುಂದುವರೆದುದು) 
ಇಲ್ಲಿಯ ವರೆಗೆ: ಅಂಜಲಿ ಶಾಲೆಯಿಂದ ಇನ್ನೂ ಮನೆಗೆ ಬಂದಿಲ್ಲ. ಎಲ್ಲಿಗೆ ಹೋದಳೋ? ತಲಾಷ್ (ಶೋಧ) ಪ್ರಾರಂಭವಾಗಿದೆ. ಇನ್ನು ಓದಿರಿ.

ರಾಮೂನು ಆಲದ ಮರದ ಕಟ್ಟೆಯ ಹತ್ತಿರ ಬಂದು ಸೇರಿದ್ದ. ವಿಷಯ ಗೊತ್ತಾಗಿ ಓಣಿಯ ಜನರೂ ಧಾವಿಸಿದ್ದರು.
ಕಟ್ಟೆಯ ಹತ್ತಿರ ಕೆಲವು ಕ್ಷಣ ಮೌನವಾಗಿದ್ದ ನಾಯಿ ಮತ್ತೇ ಬೊಗಳತೊಡಗಿತು. ವಸುಂಧರೆಯ ಸೆರಗನ್ನು ಕಚ್ಚಿ ಎಲ್ಲಿಯೋ ಕರೆದುಕೊಂಡು  ಹೋಗಲು  ಪ್ರಯತ್ನಿಸುತಿತ್ತು. ಎಲ್ಲರೂ ಅದರ  ಜೊತೆಗೆ ಮುನ್ನೆಡೆದರು . ಕಟ್ಟೆಯಿಂದ ಉತ್ತರ ದಿಕ್ಕಿನೆಡೆಗೆ ನಡೆದ ನಾಯಿಯು ಸುಮಾರು ನೂರು ಮೀಟರುಗಳಾದ ಮೇಲೆ ನಿಂತುಕೊಂಡಿತು. 
ಅಲ್ಲೇನಿದೆ ಎಂದು ನೋಡಲು, ಹತ್ತಿರದಲ್ಲಿಯೇ ಅಂಜಲಿಯು ಶಾಲೆಗೆ ಒಯ್ಯುತ್ತಿದ್ದ ನೀರಿನ  ಬಾಟಲಿ ಬಿದ್ದಿತ್ತು . ಅಂಜಲಿಯು ಈ ದಿಕ್ಕಿನಲ್ಲಿಯೆ ಎಲ್ಲಿಯೋ ಮರೆಯಾಗಿದ್ದಾಳೆ  ಎಂಬುವದು  ಅಲ್ಲಿದ್ದವರಿಗೆಲ್ಲ ಖಾತರಿಯಾಯಿತು. ಬೀದಿಯ ನಾಯಿಯಾಗಿದ್ದರೂ 'ಅನ್ನ ತಿಂದ ಮನೆಯ ಋಣವನ್ನು' ತೀರಿಸಿತ್ತು. ಆ ದಿಕ್ಕಿನಲ್ಲಿಯೇ ಸುಮಾರು  ಜನರು ಅಲೆದು ಬಂದರೂ ಎಲ್ಲಿಯೂ ಅಂಜಲಿಯ  ಸುಳಿವು ಸಿಗಲಿಲ್ಲ. ಚಿಂತಾಕ್ರಾಂತವಾಗಿ ರೋಧಿಸುತ್ತಿದ್ದ ವಸುಂಧರೆಯನ್ನು ಬಿಟ್ಟು, ರಾಮು  ಪೊಲೀಸ್ ಸ್ಟೇಷನ್ ಕಡೆಗೆ ನಡೆದಿದ್ದ. ನೆರೆದವರೆಲ್ಲ 'ಎಲ್ಲ ಸರಿಹೋಗುವದೆಂದು' ವಸುಂಧರೆಗೆ ಸಮಾಧಾನ ಹೇಳುತ್ತಿದ್ದರು.  
ಕೆಲವು ಸಮಯದ ನಂತರ ರಾಮು ಪೋಲೀಸರ ವಾಹನದೊಂದಿಗೆ ಮರಳಿ ಸ್ಥಳಕ್ಕೆ ಬಂದಿದ್ದ. ಸಹಜವಾಗಿ, ಕೆಲಸವೆಲ್ಲ ಮುಗಿದ ಮೇಲೆ ಪ್ರತ್ಯಕ್ಶವಾಗುವ ಪೊಲೀಸರು ಇಷ್ಟು ಬೇಗನೆ  ಬಂದಿದ್ದು ಜನರಲ್ಲಿ ಆಶ್ಚರ್ಯವನ್ನು ಮೂಡಿಸಿತ್ತು. ಪೊಲೀಸರು ಸೂಕ್ಷ್ಮರೀತಿಯಾಗಿ ಪರಿಶೋಧಿಸಿದಾಗ ಅಲ್ಲಿಂದ ಅಡ್ಡದಾರಿಯಲ್ಲಿ ನಾಲ್ಕು ಚಕ್ರದ ವಾಹನ ಹೋಗಿರುವದು ಖಾತ್ರಿಯಾಯಿತು. ತಕ್ಷಣವೇ ಅವರು ಶಾಲಾವಾಹನದ ಚಾಲಕನನ್ನು ಫೋನಿನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು, ಸಾಧ್ಯವಾಗದೇ ಇದ್ದಾಗ ಪೋಲೀಸರ ಜೀಪು ಚಾಲಕನ ಮನೆಯತ್ತ ಸಾಗಿತು. ಪೊಲೀಸರನ್ನು ಕಂಡು ನಡುಗುತ್ತಿದ್ದ ಚಾಲಕನು ತನ್ನ ವಿವರಣೆಯನ್ನು ಕೊಟ್ಟನು. 'ಅಂಜಲಿಯು ಶಾಲೆ  ಮುಗಿದಾದ ಮೇಲೆ ಶಾಲಾವಾಹನದಲ್ಲಿ ಹತ್ತಿದ್ದು ಮತ್ತು  ತನ್ನ  ಗೆಳೆಯರೊಂದಿಗೆ ಕಟ್ಟೆಯ ಸ್ಟಾಪಿನಲ್ಲಿ ಇಳಿದಿದ್ದು ನಿಜವೆಂದು  ಹಾಗು  ಅದನ್ನು ಬಿಟ್ಟು ತನಗೆ ಬೇರೆ ಏನೂ ಗೊತ್ತಿಲ್ಲವೆಂದು, ತಾನು ಯಾವ ರೀತಿಯ ಶೋಧನೆಗೂ ಸಿದ್ದನೆಂದು ಪ್ರಮಾಣಮಾಡಿ  ಹೇಳಿದನು. 
ಅವನನ್ನು ಜೀಪಿನಲ್ಲಿ ಕೂರಲು ಹೇಳಿ, ಪೊಲೀಸರು ಅಂಜಲಿಯ ತರಗತಿಯ ಶಿಕ್ಷಕನ ಮನೆಯತ್ತ  ಧಾವಿಸಿದರು. ಶಿಕ್ಷಕನ ಮನೆಗೆ ಬೀಗ ಹಾಕಿತ್ತು. ಈಗೇನು ಮಾಡುವದು ಎಂದು ಯೋಚಿಸಿದ ಅವರು ನೇರವಾಗಿ ಶಾಲೆಯ ಪ್ರಿನ್ಸಿಪಾಲರ ಮನೆಯತ್ತ ಸಾಗಿದರು.
ಬಂದ ವಿಷಯವನ್ನು ಹೇಳಿದಾಗ ಅವರು 'ಅಂಜಲಿಯ ಕ್ಲಾಸಿನ ಶಿಕ್ಷಕ ಮತ್ತು ಉಪಶಿಕ್ಷಕರು ಕಳೆದ ಎರಡು ದಿನಗಳಿಂದ ರಜೆಯ ಮೇಲಿರುವದಾಗಿಯೂ ಮತ್ತು ಇನ್ನೊಬ್ಬ ಶಿಕ್ಷಕಿಯು ತರಗತಿಯನ್ನು ನೋಡಿಕೊಳ್ಳುತ್ತಿರುವದಾಗಿಯೂ' ಮಾಹಿತಿಯನ್ನು ನೀಡಿದರು. 
ತರಗತಿಯನ್ನು ನೋಡಿಕೊಳ್ಳುತ್ತಿದ್ದ ಶಿಕ್ಷಕಿಯನ್ನು ಫೋನಿನಲ್ಲಿ ಮಾತನಾಡಿಸಿದಾಗ 'ಅಂಜಲಿಯು ಪೂರ್ತಿ ದಿನ  ಶಾಲೆಯಲ್ಲಿ ಇದ್ದಿದ್ದು ಖಚಿತವಾಯಿತು'.
"ಹಲ್ಕಾ ನನ್ನ ಮಕ್ಕಳು! ಈ ಶಿಕ್ಷಕರದೇ ಕಿತಾಪತಿ, " ಎಂದು ಪೊಲೀಸರು ಮಾತನಾಡುವದನ್ನು ಕೇಳಿ ರಾಮುಗೆ ಭಯ ಬಂದಿತ್ತು . ಎಂದೂ ದೇವರಿಗೆ ಕೈ ಮುಗಿಯದವನು 'ಅಪ್ಪ ದೇವರೇ ! ನನ್ನ ಮಗಳನ್ನು ಸುರಕ್ಷಿತವ್ವಾಗಿ ಮನೆಗೆ ತಲುಪಿಸು,' ಎಂದು ಮನದಲ್ಲೇ ದೇವರಿಗೆ ಬೇಡಿಕೊಂಡಿದ್ದ. ರಾಮುನನ್ನು ಆಲದ ಕಟ್ಟೆಯ ಹತ್ತಿರ ಬಿಟ್ಟು ಪೊಲೀಸರು  ಮುಂದಿನ ಕಾರ್ಯಾಚರಣೆಗೆ ಸ್ಟೇಷನ್ ಗೆ ಮರಳಿದ್ದರು. 

ಇವನ ಬರುವಿಕೆಗಾಗಿಯೇ ಕಾಯುತ್ತಿದ್ದ ವಸುಂಧರೆ ಕೇಳಿದಳು 
"ಏನಾದರೂ ಗೊತ್ತಾಯ್ತೆನ್ರಿ?"
ಏನು ಹೇಳಬೇಕೆಂದು ತೋಚದೆ ರಾಮು ತೊದಲುತ್ತ ನುಡಿದಿದ್ದ 
" ಇನ್ನೂ ಏನು ಗೊತ್ತಾಗಿಲ್ಲ, ಇಷ್ಟರಲ್ಲಿಯೇ ಗೊತ್ತಾಗಬಹುದು "
ಅಷ್ಟರಲ್ಲಿಯೇ ಜನರಲ್ಲಿ ಯಾರೋ ಅನ್ನುತ್ತಿದ್ದರು: "ಪೋಲೀಸರ ಕೈಯಲ್ಲಿ ಅಷ್ಟು ಬೇಗನೆ  ಆಗುವ ಕೆಲಸ ಇದಲ್ಲ. ನಮ್ಮ ಹುಚ್ಚಪ್ಪನನ್ನು ಕೇಳಿದರೆ ಎಲ್ಲ ಗೊತ್ತಾಗಬಹುದು, ಅವನಿಗೆ ಗೊತ್ತಿಲ್ಲದಿರುವದು ಈ ಊರಲ್ಲಿ ಏನಿದೆ ?"
ಹೌದು; ಅವನೊಬ್ಬ ಹುಚ್ಚ. ಅವನ ಇಟ್ಟ ಹೆಸರು ಬಹು ಜನರಿಗೆ ಗೊತ್ತಿಲ್ಲದಿದ್ದರೂ ಕೊಟ್ಟ ಹೆಸರು ಮಾತ್ರ ಎಲ್ಲರಿಗೂ ಗೊತ್ತು. 'ಹುಚ್ಚಪ್ಪ'! ಐವತ್ತರ ಗಡಿಯಲ್ಲಿ ಇರುವ ಅವನ ಬಗ್ಗೆ ಊರ ಜನರಿಗೆ ಇಷ್ಟು ಮಾತ್ರ ಗೊತ್ತು- 
'ಅವನು ಭಾಳ ಸಾಲಿ ಓದ್ಯಾನಂತ, ಇಪ್ಪತ್ತು ವರ್ಷದ ಹಿಂದ ಬೆಳಗಾವಿ ಲಿಂಗರಾಜ ಕಾಲೇಜಿನಾಗ ಪದವಿ ಮುಗಿಸ್ಯಾನಂತ , ಅಷ್ಟ ಸಾಲಿ ಓದಿ ನೌಕರಿ ಸಿಗದಿದ್ದಕ್ಕ, ಊರ ಸುಧಾರಣೆ ಮಾಡಾಕ ಹೋಗಿ ತಾನ ಹುಚ್ಚ ಆಗ್ಯಾನಂತ ‘ ಎಂದು.
ಹಗಲಿನಲ್ಲೆಲ್ಲ ಊರಿನ ಬೀದಿ ಬೀದಿ ಅಲೆಯುತಿದ್ದ ಅವನು ಇಳಿ ಹೊತ್ತಾದರೆ ಆಲದ ಕಟ್ಟೆಯನ್ನು ಸೇರಿಕೊಳ್ಳುತಿದ್ದ. ಊರಿನಲ್ಲಿರುವ  ಎಲ್ಲ ಮನೆಗಳ ಗುಟ್ಟು ಅವನಿಗೆ  ಗೊತ್ತು. ಮಾತು  ಕಡಿಮೆ ನೋಟ ಜಾಸ್ತಿ.
ಅದೇನೋ ಕಾರಣಕ್ಕಾಗಿ ಆ ಸಮಯದಲ್ಲಿ ಅವನೂ ಸಹ ಆಲದ ಕಟ್ಟೆಯ ಹತ್ತಿರವಿರಲಿಲ್ಲ. ಜನರೆಲ್ಲಾ ಅವನ ಬಗ್ಗೆಯೇ ಮಾತನಾಡುತ್ತಿದ್ದಾಗ ಆಕಡೆಯಲ್ಲೋ ಅವನ ಆಗಮನ ಆಗುತ್ತಿದ್ದದ್ದು ಕಂಡು  ಬಂತು. 
ಅವನ ಬರುವಿಕೆಗಾಗಿಯೇ ಕಾಯುತ್ತಿದ್ದ ವಸುಂಧರೆ ದಗ್ಧ ದನಿಯಲ್ಲಿ ಕೇಳಿದಳು 
" ಹುಚ್ಚಪ್ಪ, ಅಂಜಲಿ ಎಲ್ಲೋ ಮಾಯ ಆಗ್ಯಾಳ, ಎಲ್ಲೂ ಸುಳುವು ಸಿಗವಲ್ಲದು "
ಅವಳ ಕಣ್ಣಲ್ಲೆ ನೋಡುತ್ತ ಅವನು ನುಡಿದ: "ಸಿಗತಾಳು! ಆರ ಮೈಲು, ಉತ್ತರ ದಿಕ್ಕು, ಅರೆ ರಾತ್ರಿ, ಅರಿಶಿಣ ಕುಂಕುಮ, ಟೈಮ್ ಜಾಸ್ತಿ ಇಲ್ಲ "
ಅಲ್ಲಿದ್ದವರಿಗೆ ಅದೇನೂ ಅರ್ಥವಾಗಲಿಲ್ಲ. ವಸುಂಧರೆ ಮನದಲ್ಲೇ ಅವನ ಒಗಟಿನ ಪದಗಳಿಗೆ ಅರ್ಥ ಹುಡುಕುತ್ತಿದ್ದಳು.
ಒಮ್ಮೆಲೇ ಅವಳಿಗೆ  ಅದೇನೋ ಅರ್ಥವಾಯಿತು .
ರಾಮುನಿಗೆ ಜೋರಾಗಿ ಹೇಳುತ್ತಿದ್ದಳು.                                         
" ಅರ್ಥ ಆಯ್ತು, ಅರ್ಥ ಆಯ್ತು, ಬೇಗ ಮನೆಗೆ ನಡೀರಿ, ಟೈಮ್ ಜಾಸ್ತಿ ಇಲ್ಲ "
ರಾಮುನಿಗೆ ಅದೇನು ಅವಳಿಗೆ ಅರ್ಥ ಆಯಿತು ಎಂದು ಸ್ವಲ್ಪವೂ ತಿಳಿಯಲಿಲ್ಲ ಆದರೂ ಅವಳ ಮಾತಿನಂತೆ ಅವಸರದಿಂದ ಮನೆಯ ಕಡೆಗೆ ನಡೆದ. 

( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು )
ಶಿವ ಮೇಟಿ

(ಕರಾಳ) ರಹಸ್ಯಗಳ ಗೂಡು ಬ್ರಾಡ್ಸ್ ವರ್ತ್ -ಭಾಗ 2 ಶ್ರೀವತ್ಸ ದೇಸಾಯಿ

 

ಕಳೆದ ವಾರ ಪ್ರಕಟಿಸಿದ ರಹಸ್ಯಗಳ ಗೂಡು ಭಾಗ ೧ ರ ನಂತರ ಈ ವಾರ ಇದೇ ವಿಷಯದ ಬಗ್ಗೆ ಅದರಲ್ಲೂ ಭವ್ಯವಾದ ಹಿರಿಯ ಮನೆಯ ಮತ್ತು ಮನೆ ಒಡೆಯರ ಕರಾಳ ಇತಿಹಾಸವನ್ನು ಶ್ರೀವತ್ಸ ದೇಸಾಯಿ ಅವರು ಭಾಗ ಎರಡರಲ್ಲಿ ದಾಖಲಿಸಿದ್ದಾರೆ. ಒಂದು ಹಿನ್ನೋಟದಲ್ಲಿ ನೋಡಿದಾಗ ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯ, ಒಂದು ರಾಷ್ಟ್ರ, ಒಂದು ಸಂಸ್ಕೃತಿ, ಒಂದು ಬಣ್ಣ, ಒಂದು ಜಾತಿ ಮತ್ತು ಒಂದು ಧರ್ಮ ಇನ್ನೊಂದನ್ನು ಶೋಷಿಸುತ್ತ ಬಂದಿದೆ. ಮೇಲು-ಕೀಳು, ಶ್ರೇಷ್ಠ- ಕನಿಷ್ಠ ಎಂಬ ಭಾವನೆಗಳನ್ನು ಹುಟ್ಟುಹಾಕಿದೆ. ಈ ಶೋಷಣೆ, ದ್ವೇಷ, ದಬ್ಬಾಳಿಕೆ, ಅನ್ಯಾಯ ಪ್ರಪಂಚದ ಹಲವಾರು ನೆಲೆಗಳಲ್ಲಿ ನಮ್ಮ-ನಿಮ್ಮ ನಡುವೆ ಇಂದಿಗೂ ನಡೆಯುತ್ತಿದೆ. ಭೇದಗ್ರಹಣ, ಗುಂಪುಗಾರಿಕೆ, ನಮ್ಮವರು-ಅನ್ಯರು ಈ ಭಾವನೆಗಳು ಜೈವಿಕವಾಗಿ ಮತ್ತು ಸಾಮಾಜಿಕವಾಗಿ ಒಂದು ಗುಂಪಿನ, ಸಮುದಾಯದ ಸಂರಕ್ಷಣೆಗೆ ಪೂರಕವಾದದ್ದು ಎಂದು ಸಮಾಜ ಶಾಸ್ತ್ರ ಪರಿಗಣಿಸಿದ್ದರೂ, ಯಾವ ವಿಶ್ಲೇಷಣೆ ವಿವರಣೆ ಕೊಟ್ಟರೂ, ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ! ಅದು ಅನೈತಿಕ ನಿಲುವು. ಈ ವಿಭಜನೆಗಳನ್ನು ದಾಟಿ ಮೇಲೇರುವುದು ಸಭ್ಯತೆಯ, ನಾಗರೀಕತೆಯ ಮತ್ತು ವಿಕಾಸದ ಲಕ್ಷಣ. ಇತಿಹಾಸದಲ್ಲಿ ನಡೆದ ಹಳೆ ಆಕ್ರಮಣ, ತಪ್ಪು ಇವುಗಳ ನೆಪದಲ್ಲಿ ಅವುಗಳನ್ನು ಕೆದಕಿ ಈ ಇಪ್ಪತ್ತೊಂದನೇ ಶತಮಾನದಲ್ಲಿ ಇತ್ಯರ್ಥ ಮಾಡುವುದು ಕೂಡ ಅನೈತಿಕ. ವಿಶ್ವಮಾನವ, ವಿಶ್ವ ಭ್ರಾತೃತ್ವ ಇವುಗಳ ಚೌಕಟ್ಟಿನಲ್ಲಿ ಈ ಮೇಲೆ ಪ್ರಸ್ತಾಪಿಸಿದ ವಿಭಜನೆಗಳನ್ನು ಸಜ್ಜನರು,ಉದಾರಿಗಳು, ಪ್ರಗತಿಪರರು ಪ್ರಶ್ನಿಸಬೇಕಾಗಿದೆ ಮತ್ತು ತಿರಸ್ಕರಿಸಬೇಕಾಗಿದೆ. ಇದು ನಾಗರೀಕ ಸಮಾಜದ ಸಾಮಾಜಿಕ ಜವಾಬ್ದಾರಿ. ಮೌನ ಸಮ್ಮತಿಯ ಸೂಚಕ ಎಂಬ ಉಕ್ತಿಯನ್ನು ಕೇಳಿದ್ದೇವೆ. ಡಾ.ದೇಸಾಯಿ ಅವರ ಬರಹ ನಮ್ಮ ಸಂವೇದನೆಗಳನ್ನು ಎಚ್ಚರ ಗೊಳಿಸುವುದಲ್ಲದೆ, ಅರಿವನ್ನು ಹೆಚ್ಚಿಸಿದೆ. ಸೂಕ್ಷ್ಮ ಮತೀಯರು ಈ ವಿಚಾರವನ್ನು ಪ್ರಪಂಚದ ಇತರ ನೆಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಟ್ಟು, ಒರೆ ಹಚ್ಚಿ ನೋಡಿ, ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
      -ಸಂಪಾದಕ

**********************************************************************************************

’ಸತ್ಯಂ ಬ್ರೂಯಾತ್, ಪ್ರಿಯಮ್ ಬ್ರೂಯಾತ್’. ಒಂದನೆಯ ಭಾಗದಲ್ಲಿ  ಬ್ರಾಡ್ಸ್ ವರ್ತ್ ಮನೆ, ತೋಟದ ಬಗ್ಗೆ ಥಳುಕಿನ ಸತ್ಯಗಾಥೆ ಓದಿದ ನಂತರ ಮೇಲೆ ಉದ್ಧರಿಸಿದ ಮನುಸಮೃತಿಯ ಎರಡನೆಯ ಪಾದಕ್ಕೆ ಬರಬೇಕಲ್ಲವೆ? ’ನ ಬ್ರೂಯಾತ್ ಸತ್ಯಮಪ್ರಿಯಂ!’ ಅಪ್ರಿಯವಾದದ್ದನ್ನೂ ಹೇಳಿದರೇನೇ ಬ್ಯಾಲನ್ಸ್ ಆಗುತ್ತದೆ. ಹೋದಸಲದ ಲೇಖನವನ್ನು ಓದಿದ ಕೆಲವರಿಗೆ ಬಿ ಬಿ ಸಿ ಯಲ್ಲಿ ಬಂದ ’ಆಂಟಿಕ್ ರೋಡ್ ಶೋ’ದಲ್ಲಿ ನೋಡಿದ ವಿವಿಧ grand country homes ಗಳು ನೆನಪಾದವಂತೆ. ನಿಜ, ಹಿಂದೊಮ್ಮೆ ಈ ದೇಶದಲ್ಲಿ 5,000 ಕ್ಕಿಂತ ಹೆಚ್ಚು ಇಂಥ ಭವ್ಯ ಮನೆಗಳಿದ್ದು ಕಾರಣಾಂತರಗಳಿಂದ ಈಗ ಅವುಗಳ ಸಂಖ್ಯೆ 3,000 ಕ್ಕೆ ಇಳಿದು ನಿಂತಿದೆ. ಇವುಗಳನ್ನು ನೋಡಿ ಆನಂದಿಸಿದ ಜನಸಾಮಾನ್ಯರಿಗೆ ಈ

ಬ್ರಾಡ್ಸ್ ವರ್ತ್ ಹಾಲ್

’ಮಾಂಡಲೀಕರು, ಪಾಳೇಗಾರರು (ಅವರಲ್ಲಿ ಕೆಲವರು ನೈಟ್(Kt), ಬಾರೊನೆಟ್(Bt), ಡ್ಯೂಕ್,  ಮಾರ್ಕಿಸ್ಸ್ ಅಂತೆಲ್ಲ ಟೈಟಲ್ ಹೊಂದಿದ ಮಾಲಕರು), ಹೇಗೆ ಸಿರಿವಂತರಾದರು ಅನ್ನುವ ಕುತೂಹಲವಿದ್ದರೂ ಅದನ್ನು ಇತ್ತೀಚೆಗೆ ಕೆದಕುವ ವರೆಗೆ ಗೌಪ್ಯವಾಗಿಯೇ ಇಡಲಾಗುತ್ತಿತ್ತು. ಈಗ ಆ ಕರಾಳ ಇತಿಹಾಸದ ಮೇಲೆ ಬೆಳಕು ಚೆಲ್ಲುವಾ. ಅದಕ್ಕೂ ಮೊದಲು ಅದರ ಹಿನ್ನೆಲೆಯನ್ನು ಅರಿತುಕೊಳ್ಳೋಣ.

 ಒಂದು ಕಾಲಕ್ಕೆ ಸೂರ್ಯಾಸ್ತ ಕಾಣದ ಸಾಮ್ರಾಜ್ಯಶಾಹಿಯಾಗಿದ್ದ ಬ್ರಿಟನ್ ದೇಶದವರು ಬೇರೆ ಕೆಲವು ವಸಹಾತುಶಾಹಿ ಯೂರೋಪಿಯನ್  ದೇಶದ ಪ್ರಜೆಗಳಂತೆ ಹೆಚ್ಚು ಕಡಿಮೆ ಹದಿನಾರನೆಯ ಶತಮಾನದಿಂದಲೂ ಆಫ್ರಿಕನ್ನರನ್ನು ’ಬೇಟೆಯಾಡಿ’ ಗುಲಾಮರನ್ನಾಗಿ ಹಿಡಿದೊಯ್ದು ’ನ್ಯೂ ವರ್ಲ್ಡ್’ ಅಮೇರಿಕೆ, ಮತ್ತು ವೆಸ್ಟ್ ಇಂಡೀಸ್ ದ್ವೀಪಗಳಿಗೆ ಕೊಂಡೊಯ್ದು ಮಾರುವ ವ್ಯಾಪಾರದಲ್ಲಿ ಆಳವಾಗಿ ತೊಡಗಿದ್ದರು. ದಾಖಲೆಗಳ ಪ್ರಕಾರ ಆ ಎರಡೂವರೆ ಶತಮಾನದ ಅವಧಿಯಲ್ಲಿ ಹೆಚ್ಚು ಕಡಿಮೆ 3,000,000 ಗುಲಾಮರನ್ನು ’ಕಪ್ಪು ಖಂಡ’ದಿಂದ ಅಮೇರಿಕೆಗಳಿಗೆ ಸಾಗಿಸಲಾಯಿತು. ಅದರಿಂದ ಉದ್ಭವಿಸಿದ ದುಡ್ಡು-ದೌಲತ್ತು, ವರ್ಚಸ್ಸು ಮತ್ತು ರಾಜಕಾರಣದಲ್ಲಿ  ಯಶಸ್ಸನ್ನು ಗಳಿಸಿದವರು ಅಗಣ್ಯರು. ಈ ದೇಶದ ಉದ್ದಗಲದ ಮಹಾನಗರಗಳಲ್ಲಿ ಅದರ ಕುರುಹುಗಳಿವೆ; ಇಮಾರತಿಗಳಿವೆ, ವಿದ್ಯಾ ಸಂಸ್ಥೆಗಳಿವೆ, ದತ್ತಿ ಪಾರಿತೋಷಕಗಳಿವೆ; ’ಮಹಾ ದಾನಿಗಳ’ ಪುತ್ಥಳಿಗಳಿವೆ. ಅಥವಾ ಇದ್ದವು. ಕೆಲವು ಇತ್ತೀಚಿನ ಕಾಲದಲ್ಲಿ ನೀರುಪಾಲಾದದ್ದು ಸರ್ವ ವಿದಿತ. ದಾಸ್ಯದ ವಿರುದ್ಧ ಪ್ರತಿಭಟನೆಗಳು ಬೆಳೆಯಲಾರಂಭಿಸಿ ತಡವಾಗಿಯಾದರೂ 1833 ರಲ್ಲಿ ಗುಲಾಮಗಿರಿ ನಿಷೇಧಿಸುವ ಕಾನೂನು (Slavery Abolition Act 1833) ಜಾರಿಗೆ ಬಂದಿತು.

ಪೀಟರ್ ಥೆಲ್ಲುಸನ್ ಮತ್ತು ಗುಲಾಮರ ಸಾಗಾಣಿಕೆ

ಗುಲಾಮಗಿರಿ ನಿರ್ಮೂಲನ ಆಂದೋಲನದ ದ್ವಿಶತಮಾನದ ವರ್ಧಂತಿಯ ಕಾಲದಲ್ಲಿ ಈ ವಿಷಯದಲ್ಲಿ ಆಸ್ಥೆ ಬೆಳೆಯಿತು. (ನಂತರದ Black Lives Matter ಆಂದೋಲನ ಇಲ್ಲಿ ಪ್ರಸ್ತುತ ಅಲ್ಲ). ಅದಕ್ಕೂ ಮೊದಲು ಜನರಲ್ಲಿ ಈ ವಿಷಯದಲ್ಲಿ ಹೆಚ್ಚಿನ ತಿಳಿವಳಿಕೆಯನ್ನು ಬಿಂಬಿಸಲು ಈ ನಾಡಿನ ಎರಡು ಪ್ರಮುಖ ದತ್ತಿ ಸಂಸ್ಥೆಗಳದ ಇಂಗ್ಲಿಷ್ ಹೆರಿಟೇಜ್(EH)  ಮತ್ತು ನ್ಯಾಷನಲ್ ಟ್ರಸ್ಟ್(NT)) ತಮ್ಮ ಆಡಳಿತದಲ್ಲಿರುವ ಆದರೆ ಹಿಂದೆ ಖಾಸಗಿ ಸ್ವಾಮಿತ್ವದಲ್ಲಿದ್ದ ಈ ’ಅರಮನೆ’ಗಳ ಹಿಂದಿನ ಇತಿಹಾಸದ ಬಗ್ಗೆ ಆಳವಾದ ಅಭ್ಯಾಸ ಮಾಡಲು ನಿರ್ಧರಿಸಿದವು. ಇತಿಹಾಸಕರರನ್ನು ಸಂಪರ್ಕಿಸಿದರು; ಸಂಶೋಧಕರನ್ನು ಆಹ್ವಾನಿಸಿದರು. ಅದರ ಫಲಶ್ರುತಿ 2009 ರಲ್ಲಿ ನಡೆದ ಮಹತ್ವಪೂರ್ಣ The Slavery and the British Country House’ Conference. (ಆ ವರದಿಯ ಕೊಂಡಿ ಲೇಖನದ ಕೆಳಗೆ ಇದೆ). ಆನಂತರ ಅವೆರಡೂ ಸಂಸ್ಥೆಗಳು ಆ ಸಂಕೀರಣದಲ್ಲಿ ಮಂಡಿಸಿದ ಅಧ್ಯಯನಗಳನ್ನು ಪ್ರಕಟಿಸಿವೆ (ಈ ಲೇಖನದ ಕೊನೆಯಲ್ಲಿಯ ಕೊಂಡಿ ನೋಡಿ). ಆಗ ಬಹಿರಂಗವಾದ ಸತ್ಯ ಜನರಿಗೆ ಅಚ್ಚರಿಯುಂಟು ಮಾಡಿದರೂ ಅವುಗಳು ಅತ್ಯಂತ ಅನಿರೀಕ್ಷಿತವೇನೂ ಆಗಿರಲಿಲ್ಲ. ಆ ವರದಿಯಲ್ಲಿ ಬ್ರಾಡ್ಸ್ ವರ್ತ್ ಮನೆಯ ಹೆಸರು ಕಂಡಿರಬೇಕು ಎಂದು ನೀವು ಈಗಾಗಲೇ ಊಹಿಸಿರಬಹುದು. ನಿಜ. ಇದೊಂದೇ ಅಲ್ಲ ಇಂಗ್ಲಿಷ್ ಹೆರಿಟೇಜ್ ನ ನಿರ್ವಹಣೆಯಲ್ಲಿರುವ 33 ರಲ್ಲಿ 26 ’ಮನೆ’ಗಳಲ್ಲಿ, ಮತ್ತು ನ್ಯಾಷನಲ್ ಟ್ರಸ್ಟ್(NT) ದ ಕೆಳಗಿನ ಮೂರರಲ್ಲೊಂದು ಮನೆಗಳು (93/300) ಈ ’ಕಳಂಕ’ದಿಂದ ಲೇಪಿತವಾಗಿದ್ದವು ಅಥವಾ ಪರೋಕ್ಷ ಸಂಬಂಧ ಹೊಂದಿದ್ದವು! ಈ ಸಂಬಂಧ ಕೆಲವು ಕಡೆಗಷ್ಟೇ ಢಾಲಾಗಿ ಕಂಡರೆ ಇನ್ನು ಕೆಲವು ಮನೆತನಗಳು ತಮ್ಮ ’ಹೇಯ’ ದೌಲತ್ತನ್ನು ಮರೆಮಾಚಿಸಿ ಚಾಣಾಕ್ಷತೆಯಿಂದ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಸಿ, ಅನೇಕ ರೀತಿಯ ಚರಾಚರ ಆಸ್ತಿಗಳನ್ನು ಗಳಿಸಿದ್ದರು. ಆ ವೈಭವವನ್ನೇ ಇಂದೂ ನೋಡ ಬಹುದು.ಕೆಲವರು ರಾಜಕಾಣದಲ್ಲಿ ಧುಮುಕಿ ಮ್ರಧಾನ ಮಂತ್ರಿಗಳಾದರು. (ಉದಾ:ಇಲ್ಲಿಂದ ಅನತಿದೂರದ ಬಾಲ್ಸೋವರ್ ಕಾಸಲ್ಲಿನ (Balsover Castle) ಡ್ಯೂಕ್ ಆಫ್ ಪೋರ್ಟ್ ಲಂಡ್).  ಬ್ರಾಡ್ಸ್ ವರ್ತ್ ಕೊಂಡ ಪೀಟರ್ ಥೆಲ್ಲಿಸನ್ ಬ್ಯಾಂಕ್ ಆಫ್ ಇಂಗ್ಲಂಡಿನ ಡೈರೆಕ್ಟರ್ ಆಗಿದ್ದರೂ ವಲಸಿಗನಾಗಿದ್ದರಿಂದ ಸ್ವತಃ ತನಗೆ ಪಾರ್ಲಿಮೆಂಟಿನಲ್ಲಿ ಕೂಡುವ ಹಕ್ಕಿರದಿದ್ದರೂ ಆತನ ಮಗನಿಗೆ (ಪೀಟರ್ ಐಸಾಕ್ ಥೆಲ್ಲಿಸನ್) ಹಣ ಮತ್ತು ವರ್ಚಸ್ಸಿನಿಂದ ಬ್ಯಾರನ್ ರೆಂಡಲ್ ಶಮ್ ಅನ್ನುವ ಆನುವಂಶಿಕ ಪಿಯರೇಜ್ ದೊರಕಿತು. ಈ ತರದ ಪರಿವರ್ತನೆ (gentrification)     ತಲೆತಲಾಂತರದಿಂದ ನಡೆಯುತ್ತಲೇ ಬಂದಿದೆ. ವಿಪರ್ಯಾಸವೆಂದರೆ ಬ್ರಾಡ್ಸ್ ವರ್ತ್ ಮನೆತನದ ಕೋಟ್ ಆಫ್ ಆರ್ಮ್ಸ್ ಕೆಳಗಿನ ಧ್ಯೇಯ ವಾಕ್ಯ: Lebore et Honore: ಪರಿಶ್ರಮದಿಂದ ಗೌರವ!  

ಮರಗಳು ಸಂಗೀತವ ಹಾಡುತಿವೆ! (Songs of Mahogany)

ಹಿಂದಿನ ಲೇಖನದಲ್ಲಿ ಬ್ರಾಡ್ಸ್ ವರ್ತ್ ಮನೆಯನ್ನು ಅಲಂಕರಿಸಿದ ಮಹೋಗನಿ ಮರದ ಆಕರ್ಷಕ ಬಾಗಿಲು, ಹಿಡಿಕೆ, ಸ್ಟೇರ್ಕೇಸ್, balustrade  ಬಗ್ಗೆ ಬರೆದಿದ್ದನ್ನು ಓದಿರ ಬಹುದು ಮತ್ತು ನೋಡಿರಬಹುದು. ಮಹೋಗನಿ ನಮಗೆಲ್ಲ ಚಿರಪರಿಚಿತವಾದ ತೇಗನ್ನು ಹೋಲುತ್ತದೆ. ಅದು ಗಟ್ಟಿ, ಮರಗೆಲಸಕ್ಕೆ ಅನುಕೂಲ ಮತ್ತು ಬೆಲೆಬಾಳುವಂಥದು. ಪಶ್ಚಿಮ ಆಫ್ರಿಕಾ ಮತ್ತು ಸೆಂಟ್ರಲ್ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ದ  ಜಮೈಕಾಗಳಲ್ಲಿ  ಬೆಳೆಯುವ ಈ ಮರ ಮೇಲಿನ ಎರಡು ಬ್ರಿಟಿಶರ ಆಧಿಪತ್ಯದಲ್ಲಿದ್ದ ಭಾಗಗಳಲ್ಲಿ ವಿಪುಲವಾಗಿ ದೊರಕುತ್ತಿದ್ದರಿಂದ ಮತ್ತು ಅದನ್ನು ಕಡಿದು ಸಾಗಿಸಲು ಗುಲಾಮರ ’ತೋಳುಬಲ’ ಇದ್ದುದರಿಂದ ಅದರ ಆಮದು ಬ್ರಿಟಿಶ್ ವಸಹಾತುಗಳಲ್ಲೆಲ್ಲ ಬೆಳೆದದ್ದರಲ್ಲಿ ಆಶ್ಚರ್ಯವಿಲ್ಲ.

ಇಂದು ನೀವು ಬ್ರಾಡ್ಸ್ ವರ್ತಿಗೆ ಭೇಟಿ ಕೊಟ್ಟರೆ ಅಲ್ಲಲ್ಲಿ ಮಲಿಕಾ ಬುಕರ್ (ಚಿತ್ರ) ಎನ್ನುವ ಗಯಾನಾ-ಗ್ರೆನೇಡಾ ಮೂಲದ ಇಂಗ್ಲಿಷ್ ಕವಯಿತ್ರಿಯ ಕವನಗಳ ಪ್ರದರ್ಶನವನ್ನು ನೋಡಬಹುದು (ಈ ಪ್ರದರ್ಶನ ನವೆಂಬರ್ ವರೆಗೆ ಅಷ್ಟೇ). ಆಕೆ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಕ್ರಿಯೇಟಿವ್ ರೈಟಿಂಗ್ ವಿಭಾಗದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿ.  ವಿಶಾಲವಾದ ಡೈನಿಂಗ್ ಟೇಬಲ್ ಹೊದಿಕೆಯ ಮೇಲೆ ಆಕೆಯ ಕವನದ (ಶೀರ್ಷಿಕೆ ಮೇಲೆ ಇದೆ) ಮುದ್ರಿತ ಸಾಲುಗಳು ಇವು:

  ”Speak of Mahogany. Speak

of the original people of the land!

And think of  bodies/ bodies/ blood

black …blessed …bones..back broad   broken branches/

broken bough/  brown/   bleed/ balsam/  balm/  breathless

Here is a space of interruption,
where hands slap wooden surfaces
for luck and palms lick wood for praise.”

ತೆರೆಯದ ಬಾಗಿಲು!

 ಬ್ರಾಡ್ಸ್ ವರ್ತ್ಆಸ್ತಿಯನ್ನು ಕೊಳ್ಳುವ ಮೊದಲು ಬ್ಯಾಂಕರ್ ಪೀಟರ್ ಥೆಲ್ಲುಸನ್ ಮತ್ತು ಅವನ ಸಹಯೋಗಿಗಳು ಗುಲಾಮರು ಮತ್ತು ಅದಕ್ಕೆ ಸಂಬಧ ಪಟ್ಟ ಸರಕುಗಳ ಸಾಗಾಣಿಕೆಯ ವ್ಯಾಪಾರಕ್ಕೆಂದು ಎರಡು ಹಡಗುಗಳನ್ನು ಕೊಂಡಿದ್ದರು. ಒಂದರ ಹೆಸರು ”ಲಾಟರಿ” ಮತ್ತು ಇನ್ನೊಂದು ”ಲಿಬರ್ಟಿ”(ಎಂಥ ವಿಪರ್ಯಾಸ!). ಇತರ ವ್ಯಾಪರಿಗಳು ಇವರಿಂದ ಸಾಲ ತೆಗೆದುಕೊಂಡಿರುತ್ತಿದ್ದರು. ಗ್ರನಾಡಾ ಮತ್ತು ಬೇರೆ ದ್ವೀಪಗಳ ಪ್ಲಾಂಟೇಶನ್ ವ್ಯವಹಾರದಲ್ಲಿ ತೊಂದರೆಯಾಗಿ ಸಾಲ ತೀರಿಸಲು ತಪ್ಪಿದರೆ, ಇನ್ಶೂರನ್ಸ್ ಹಣದಿಂದ ಶ್ರೀಮಂತರಾಗುತ್ತಿದ್ದರು. ಅದಲ್ಲದೆ ಥೆಲುಸ್ಸನ್ ಬೀಡ್ಸ್ (ಆಫ್ರಿಕನ್ ಮಣಿಗಳು), ಗುಲಾಮರು ತಯಾರಿಸಿದ ರಮ್ (ಮದ್ಯ), ತನ್ನದೇ ಸಕ್ಕರೆ ರಿಫೈನರಿ ಮುಂತಾದ ಎಲ್ಲವ್ಯಾಪಾರಗಳು ಅಪಾರ ಸಂಪತ್ತನ್ನು ತಂದದ್ದರಲ್ಲಿ ಆಶ್ಚರ್ಯವಿಲ್ಲ. ಆತ ಸ್ವತಃ ಗ್ರೆನಾಡಾದಲ್ಲಿ ಕಾಲಿಟ್ಟಿರಲಿಕ್ಕಿಲ್ಲ. ಅನೇಕರಂತೆ ಅನುಪಸ್ಥಿತ ಲ್ಯಾಂಡ್ ಲಾರ್ಡ್ಗಳಲ್ಲಿ ಪೀಟರ್ ಸಹ ಒಬ್ಬನು! ಬ್ರಾಡ್ಸ್ ವರ್ತ್ ಮನೆಯ ದಿವಾನಖಾನೆಯಲ್ಲಿ ಅಲಂಕಾರಕ್ಕೆ ಇಟ್ಟಂಥ ಕಂಪು -ಕಂದು ಬಣ್ಣದ ಮಹೋಗನಿಯ ತೆರೆಯದ ಬಾಗಿಲು ಇದ್ದಂತೆ! 1833 ರಲ್ಲಿ ಗುಲಾಮಗಿರಿಗೆ ಅಂತಿಮ ಕಹಳೆ ಊದಿಯಾದ ಮೇಲೆ ಇಂಥ ಭವ್ಯ ಎಸ್ಟೇಟಿನ ಮಾಲಕರ  ಮನೆತನದ ಜೀತದಾಳಾಗಿ ಅನೇಕರು ಅವರನ್ನು ಅವಲಂಬಿಸಿದ್ದುದು ಸತ್ಯ. ಸರಕಾರ ಗುಲಾಮಗಿರಿ ನಿಂತ ಮೇಲೆ ’ನಷ್ಟ ಪರಿಹಾರಕ್ಕೆ’ 20 ಮಿಲಿಯನ್ ಪೌಂಡುಗಳನ್ನು ಬದಿಗಿಟ್ಟಿತು. ಅದು ಈಗಿನ ಲೆಕ್ಕದಲ್ಲಿ 16.5 ಬಿಲಿಯನ್! 100 ಮನೆಮಾಲಕರು ಅರ್ಜಿ ಸಲ್ಲಿಸಿದ 100 ಜನರ ಯಾದಿಯಲ್ಲಿ ಥೆಲುಸನ್ ಹೆಸರು ಮಾತ್ರ ಇಲ್ಲ!

ಇತ್ತೀಚಿನ ವರೆಗೆ ಮೇಲು ನೋಟಕ್ಕೆ ಆತ ಗುಲಾಮಗಿರಿಯಿಂದ ಲಾಭಪಡೆದನೆಂಬ ವಿಷಯ ಎಷ್ಟೋ ತಲೆಮಾರುಗಳ ವರೆಗೆ ರಹಸ್ಯವಾಗಿಯೇ ಉಳಿದಿತ್ತು!  ಮುಖವಾಡದ ಹಿಂದೆ ಏನಿದೆಯೋ!

ಎಲ್ಲಿಂದ ಬಂತು ಮಹೋಗನಿ?

ಮೆಕ್ಸಿಕೋದ ದಕ್ಷಿಣದ ಆಗಿನ ಬ್ರಿಟಿಶ್ ಹೊಂಡುರಾಸ್  (ಈಗಿನ ಬೆಲೀಜ್ ದೇಶದ)”ಮಸ್ಕಿಟೋ ಬೇ’ ಪ್ರದೇಶದಲ್ಲಿ ಬೆಳೆದ ಉತ್ತುಂಗ ಮಹೋಗನಿ ಮರಗಳನ್ನು ಪಶ್ಚಿಮ ಆಫ್ರಿಕದ ಇಬೋ ಮತ್ತು ಯರುಬಾ ಎನ್ನುವ ಬುಡಕಟ್ಟು ಜನಾಂಗದವರು ಕಡಿಯುತ್ತಿದ್ದರು. ತಮ್ಮ ಊರಲ್ಲಿಯೂ ಇದೇ ತರದ ಖಯಾ ಮರಗಳಿಗೆ ’ಮೊಗಾನ್ವೋ’ (‘m’oganwo’) ಅಂತ ಕರೆಯುತ್ತಿದ್ದರಂತೆ. ಅದೇ ಮಹೋಗನಿ ಆಯಿತು ಅಂತ ಒಂದು ವಾದ. ಗುಲಾಮರು ಮರಗಳನ್ನು ಕೊಡಲಿಯನ್ನು ಪಯೋಗಿಸಿ ಕೈಯಿಂದಲೆ ಕಡಿಯುತ್ತಿದ್ದರು. ಮರದ ಬೊಡ್ಡೆಯನ್ನು ತಟ್ಟಿ, ಗುಡ್ ಲಕ್ಕಿಗೆಂದು ಉಗುಳು ಹಚ್ಚಿದ ಅಂಗೈಯಿಂದ ಅದನ್ನು ಸವರಿ, ಮರವನ್ನು ಕಡಿದು ಕೆಡವಿ, ಉರಿಳಿಸುತ್ತ  ನದಿಯಲ್ಲಿ ತೇಲಿಬಿಡುತ್ತಿದ್ದರು. ಆಚೆಯ ತುದಿಯಲ್ಲಿದ್ದ ಸಾ’ ಮಿಲ್ಲಿನಲ್ಲಿ  ಇನ್ನೊಬ್ಬ ಗುಲಾಮ -ಆತನ ಎದೆಯ ಮೇಲೆ ಬರೆಕೊಟ್ಟು ಉಬ್ಬಿದ ದಪ್ಪ ಕಲೆ ಬಿದ್ದ ಒಡೆಯನ ಅಂಕಿತ -ತಲೆಬಗ್ಗಿಸಿ ಪ್ರಾರ್ಥನೆ ಮಾಡಿ ಕ್ಷಮೆ ಕೇಳಿ ಕೊಯ್ಯು ಮರದ ಹಲಗೆಗಳನ್ನು ಮಾಡುತ್ತಾನೆ. ಕೊನೆಯ ಹಂತದಲ್ಲಿ ಕನ್ನಡಿಯಂತೆ ಮಿಂಚಿ ಎಲ್ಲರ ಕಣ್ಣ ಸೂರೆಗೊಳ್ಳುವ ಕೆಂಪು-ಕಪ್ಪು ಪಾಲಿಶ್ ತಿಕ್ಕಿ ಉಜ್ಜಿದರೆ ತನ್ನ ಮುಖವೇ ಕಾಣಬೇಕು. ಅದನ್ನೇ ಚಾರ್ಲ್ ಡಿಕಿನ್ಸ್ ತನ್ನ ಶಬ್ದಗಳಲ್ಲಿ ಹೇಳಿದ್ದು: ”the varnished wood reflected in the depth of its grain, through all its polish, the hue of the wretched slaves.”  

ಅದೇ ಭಾವವನ್ನು ಆ ಕರಿಯ ಕವಯಿತ್ರಿ (ಮಲಿಕಾ ಬುಕರ್) ತನ್ನ ಮನ ಕಲುಕುವ ಕವನದ ಸಾಲುಗಳಲ್ಲಿ ಹೇಳಿದ್ದಾಳೆ:

In Jamaica in the big house, the house girl is on her knees

polishing the wood floor with coconut oil and orange halves.

ಬೆನ್ನ ಮೇಲೆ ಚಾಟೆಯೇಟಿನ ಕಲೆಗಳುಳ್ಳ ಗುಲಾಮ

In England servants kneel with linseed and brick dust,

worshiping this majestic red, genuflecting.

In the kitchen cook prepares the tea tray for Master. It too

is fancy wood. She walks through the house to deliver

to a man hunched over a desk shaping his will. Now think of Brodsworth, …

ಆ ಕುಖ್ಯಾತ ಉಯಿಲು!

ಪೀಟರ್ ಥೆಲ್ಲುಸನ್ ಸ್ವತಃ ಡೋಂಕಾಸ್ಟರಿನ ಈ ಮನೆಯಲ್ಲಿ ವಾಸ ಮಾಡಿರಲಿಲ್ಲ. ಈ ಮನೆಯನ್ನು ಆತನ ಮೊಮ್ಮಗ (ಒಂದನೆಯ ಭಾಗದಲ್ಲಿ ಹೇಳಿದಂತೆ) 1860 ರಲ್ಲಿ ಚಾರ್ಲ್ಸ್ ಸಾಬಿನ್ ಕಟ್ಟಿಸಿದ. ಆತನ ಅಜ್ಜ ಪೀಟರ್ 1797ರಲ್ಲಿ ತೀರಿಕೊಳ್ಳುವ ಮೊದಲು ಮಾಡಿದ ವೈಶಿಷ್ಠ್ಯಪೂರ್ನ ಮೃತ್ಯುಪತ್ರ ಇತಿಹಾಸವನ್ನೇ ಮಾಡಿತು. ಆಗ ಆತನ ವಾರ್ಷಿಕ ರಿಯಲ್ ಎಸ್ಟೇಟ್ ಆಸ್ತಿ £5000 ದಷ್ಟಿತ್ತು. ಅದಲ್ಲದೆ ವೈಯಕ್ತಿಕ ಎಸ್ಟೇಟ್ ಆಗಿನ ಆರು ಲಕ್ಷ ಪೌಂಡುಗಳಿಗೆ ಟ್ರಸ್ಟೀಗಳನ್ನು ನೇಮಿಸಿ ಅವೆಲ್ಲಕ್ಕೂ ಒಂದು ವಿಚಿತ್ರ ’ಅಕ್ಯೂಮ್ಯುಲೇಷನ್ ಕ್ಲಾಸ್’ ಹಾಕಿ ಇಟ್ಟ. ಅದರ ಪ್ರಕಾರ ”ಆತನ ಆಸ್ತಿಯನ್ನು ಎಲ್ಲಿಯವರೆಗೆ ಬೆಳೆಯುವಂತೆ ತೊಡಗಿಸಬೇಕೆಂದರೆ ತನ್ನ ಮರಣದ ಸಮಯದಲ್ಲಿ ಬದುಕಿರುವ ಮೊಮ್ಮಕ್ಕಕಳ ಕೊನೆಯಗಂಡು ಸಂತತಿ ಬದುಕಿರುವವರೆಗೆ! ಆವರೆಗೆ ಅದು ಆಗಿನ ಕಾಲದ ಒಂದೂವರೆ ಕೋಟಿ ಪೌಂಡುಗಳಷ್ಟು ಆಗಿರಬಹುದಾಗಿದ್ದು ಅದನ್ನು ಅವರಿಗೆ ಹಂಚ ಬೇಕು” ಎಂದು. ಹಿಂದೆಂದೂ ಈ ತರದ ಉಯಿಲನ್ನು ಕಂಡಿರಲಿಲ್ಲ. ಅದನ್ನು ಆತನ ಹೆಂಡತಿ ಮಕ್ಕಳು ಪ್ರಶ್ನಿಸಲಾಗಿ ಟ್ರಸ್ಟುಗಳಿಗೆಂದೇ ಮೀಸಲಾಗಿದ್ದ  ಚಾನ್ಸರಿ ಕೋರ್ಟಿಗೆ ಬಗೆ ಹರಿಸಲು ತಲೆಬೇನೆಯಾಗಿ ಹೋಯಿತು. ಕೊನೆಗೆ ಮುಂದೆ ಇಂಥ ಮೃತ್ಯು ಪತ್ರಗಳು ಬರಬಾರದೆಂದು ’Thelluson Act’ ಎನ್ನುವ ಹೊಸ ಕಾನೂನೇ ಪಾಸು ಮಾಡಬೇಕಾಯಿತು! ಎಂದಿನಂತೆ ಇಂಥ ವ್ಯಾಜ್ಯಗಳು ಮುಗಿಯದೆ ವರ್ಷಾನುಗಟ್ಟಲೆ ಕೋರ್ಟ್ ಮೆಟ್ಟಲು ಹತ್ತಿಸಿದ ಬಗೆಹರಿಸಿ ಲಾಯರು, ಕೋರ್ಟಿನ ಖರ್ಚು, ಫೀಸ್ ಗಳನ್ನು ಕಳೆದ ನಂತರ ’ಗೆದ್ದ’ ಫಲಾನುಭವಿಗಳಿಗೆ (beneficiaries) ದೊರಕಿದ್ದು ತಮ್ಮ ಮೊದಲಿನ ವರ್ಷಾಸನಕ್ಕಿಂತ ಏನೂ ಹೆಚ್ಚಾಗಿರಲಿಲ್ಲ! ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ! ಈ ಕೇಸನ್ನು ಆಧರಿಸಿಯೇ ಚಾರ್ಲ್ಸ್ ಡಿಕೆನ್ಸ್ ’ಬ್ಲೀಕ್ ಹೌಸ್’ (Bleak House) ಎನ್ನುವ ಕಥೆ ಬರೆದನೆಂದು ಪ್ರತೀತಿ. ಕೆಲವರು ಇದನ್ನು ಒಪ್ಪ್ದದಿದ್ದರೂ ಕೆಂಟ್ ಪ್ರಾಂತದ ಬ್ರಾಡ್ಸ್ಟೇರ್ಸ್ ಎನ್ನುವ ಊರಲ್ಲಿಯ ಆ ಹೆಸರಿನ ಮನೆಗೂ ಆ ಕಾದಂಬರಿಗೂ ಏನೂ ಸಂಬಂಧವಿಲ್ಲ ಅನ್ನುತ್ತಾರೆ, ಅಲ್ಲಿ ಕುಳಿತು ಆ ಕಥೆಯನ್ನು ಬರೆದ ಎನ್ನುವದನ್ನು ಬಿಟ್ಟರೆ.

ನೋವು-ನಲಿವುಗಳನ್ನು ಹಾಡುವ ಕಿರುಸ್ತಂಭ 

ಥೆಲ್ಲುಸ್ಸನ್ ಮನೆಯ ಹಿಂದಿನ ಗ್ರೋಟೊದಲ್ಲಿ (ಭಾಗ -೧ ನೋಡಿರಿ) ಟಾರ್ಗೆಟ್ ಹೌಸ್ ಎದುರುಗಡೆ ತೋಟದಲ್ಲಿ ಬಟನ್ ಒತ್ತಿದರೆ  ಒಂದು ಮರದ ಕಿರುಸ್ತಂಭದಿಂದ ಎರಡು ಧ್ವನಿಮುದ್ರಿಕೆಗಳನ್ನು ಕೇಳಬಹುದು. ಒಂದರಲ್ಲಿ  ಗ್ರೆನಾಡಾದಾಮೀಪದ ದ್ವೀಪದಲ್ಲಿ ಪ್ರಚಲಿತವಿರುವ ಕರಿಯಾಕೋ ಡ್ರಮ್ ಮತ್ತು ನೃತ್ಯದ ಸಂಗೀತ ಕೇಳಬರುತ್ತದೆ. ಇನ್ನೊಂದರಲ್ಲಿ  ಪೀಟರ್ ಥೆಲ್ಲುಸನ್ ಸಾಲದ ಕಾಗದಪತ್ರದಲ್ಲಿ ನಮೂದಿಸಿದ ಗ್ರೆನೇಡಾದ ಬಕೋಲೆಯ (Bacolet Plantation, 1772) 101 ಅಫ್ರಿಕನ್ ಗುಲಾಮರ ಹೆಸರುಗಳನ್ನು ಇವೆಟ್ ಫಿಲ್ಬರ್ಟ್ ಓದುವದನ್ನು ಕೇಳಬಹುದು. ಸುಂದರ ಉದ್ಯಾನದಲ್ಲಿ ಮೈಮರೆತು ಆನಂದಿಸುವ ಪ್ರೇಕ್ಷಕರಿಗೆ ಅದರಲ್ಲಡಗಿದ ರಹಸ್ಯದ ಅರಿವೇ ಇರಲಾರದು. (ಲೇಖನದ ಕೊನೆಯಲ್ಲಿಯ ವಿಡಿಯೋವನ್ನು ನೋಡಿರಿ).

ಈಶಾವಾಸ್ಯಮಿದಂ ಸರ್ವಂ … ಮಾ ಗೃಧ ಕಸ್ಯಸ್ವಿದ್ಧನಂ

ಕೊನೆಯ ಮಾತು. ಈ ಎರಡು ಲೇಖನಗಳಲ್ಲಿ ಒಂದು ಕುಟುಂಬ ತಲೆತಲಾಂತರಗಳಿಂದ ವಾಸಮಾಡಿದ ಸುಂದರ ಮನೆ, ತೋಟಗಳನ್ನು ನೋಡಿದ್ದಾಯಿತು. ಆ ಸಂಪತ್ತಿನ ಹಿಂದಿನ ರಹಸ್ಯವನ್ನೂ ತಿಳಿದೆವು. ಇಲ್ಲಿ ಈಶಾವಾಸ್ಯ ಉಪನಿಷತ್ತಿನ ಮೊದಲ ಶ್ಲೋಕದ ಉಲ್ಲೇಖದಿಂದ ಇದನ್ನು ಮುಗಿಸುವೆ. ಅದರ ಸಂಕ್ಷಿಪ್ತ ತಾತ್ಪರ್ಯ ಹೀಗಿದೆ: ’ಈ ಜಗತ್ತೆಲ್ಲವೂ ಭಗವಂತನ ವಾಸಕ್ಕಾಗಿಯೇ ಇದೆ. ನಮಗೆ ದೊರಕಿದ್ದನ್ನು ತ್ಯಾಗಬುದ್ಧಿಯಿಂದ ಸ್ವೀಕರಿಸ ಬೇಕು ಮತ್ತು ಅನ್ಯರು ’’ಗಳಿಸಿದ” ಸಂಪತ್ತಿನ ಮೇಲೆ ದುರಾಸೆ ಪಡ ಬೇಡ.

ಶ್ರೀವತ್ಸ ದೇಸಾಯಿ

ಫೋಟೋಗಳು ಮತ್ತು ವಿಡಿಯೋ ಶ್ರೀವತ್ಸ ದೇಸಾಯಿ ಮತ್ತು ಗೂಗಲ್.

*ಆಧಾರ: ಪುಸ್ತಕ/ಲೇಖನಗಳು:

1)https://historicengland.org.uk/images-books/publications/slavery-and-british-country-house/slavery-british-country-house-web/

2)  https://www.nationaltrust.org.uk/features/addressing-the-histories-of-slavery-and-colonialism-at-the-national-trust

3) https://www.english-heritage.org.uk/siteassets/home/learn/research/the-slavery-connections-of-brodsworth-hall.pdf

4) Brodsworth Hall and Gardens: English Heritage Guidebooks; http://www.english-heritage.org.uk ; ISBN 978978-1-84802-014-6