ಪ್ರೀತಿಗೊಂದು ವ್ಯಾಖ್ಯೆ ಬೇಕೆ? ಅದಕ್ಕೊಂದು ಪ್ರತಿಮೆ ಬೇಕೆ? ಕಬೀರನಿಂದ ಆರಂಭಿಸಿ ಬೀಟಲ್ಸ್ ಬ್ರಿಟಿಷ್ ’ಪಾಪ್ ಬ್ಯಾಂಡ್’ (Beatles) ವರೆಗೆ ಅವರು ಹಾಡಿದ್ದನ್ನು ಗುನುಗುನಿಸುತ್ತ ಬಂದಿದ್ದೇವೆ. ಜಾನ್ ಲೆನನ್ ಮತ್ತು ಪಾಲ್ ಮೆಕ್ಕಾರ್ಟ್ನಿಯವರ All you need is Love ಹಾಡು ಅನಿವಾಸಿಯ ಹಿರಿಯ ಓದುಗರ ತುಟಿಯ ಮೇಲೆ ಸದಾ ಇರುತ್ತಿತ್ತು!ಎರಡೂ ಕೈಗಳನ್ನು ಜೋಡಿಸಿ ಹಾರ್ಟ್ ಲಾಂಛನವನ್ನು ತೋರಿಸದ ಈಗಿನ ಯುವಕರೇ ಇಲ್ಲ. ಅದೇ ತರಹ ಬಹುಕಾಲದಿಂದ ಯುಕೆ ದೇಶದ ವೇಲ್ಸ್ ಪ್ರಾಂತದಲ್ಲಿ ಚಮಚಗಳನ್ನು ಕೆತ್ತಿ ಪ್ರೀತಿಯ ದ್ಯೋತಕವಾಗಿ ಕೊಡುವ ರೋಚಕ ಇತಿಹಾಸವನ್ನು ಈ ವಾರ ಬೆಲ್ ಫ಼ಾಸ್ಟ್ ನಲ್ಲಿ ವಾಸಿಸುತ್ತಿರುವ ಅಮಿತಾ ರವಿಕಿರಣ್ ಅವರು ಬರೆದಿದ್ದಾರೆ. ಅದು ನಿಮಗೆಲ್ಲ ಹಿಡಿಸೀತು ಎನ್ನುವ ನಮ್ಮ ಆಶಯ. (ಸಂ)
'ಪ್ರೀತಿ' ಎಂಬ ಈ ಎರಡೂವರೆ ಅಕ್ಷರದ* ಪದವನ್ನು ಕೇಳಿದಾಗ ಮನಸ್ಸು ಉಲ್ಲಸಿತವಾಗುತ್ತದೆ. ಪ್ರೀತಿ ಎಂದರೇನು? ಹಾಗೆಂದು ಯಾರಾದರೂ ಒಂದೇ ವಾಕ್ಯದಲ್ಲಿ ಉತ್ತರಿಸಿ ಎಂಬ ಪ್ರಶ್ನೆ ಹಾಕಿದರೆ, ಪ್ರೀತಿ ಎಂಬ ಪದ ಒಂದೇ ಆದರೂ ಹಾಗೆಂದರೇನು ಎಂಬ ಪ್ರಶ್ನೆಗೆ ಸಿಗುವ ಉತ್ತರಗಳು ಲೆಕ್ಕಕ್ಕೆ ಸಿಗದಷ್ಟು.
ಜೊತೆಗೆ ಪ್ರತಿ ಉತ್ತರವೂ ಅನನ್ಯ!
ಪ್ರೀತಿ ಎಂದರೇ ಹಾಗಲ್ಲವೇ? ಭಾಷೆಗೆ ನಿಲುಕದ ಭಾವವದು! ಆದರೂ ಮನುಷ್ಯ ತನ್ನ ಒಲವು ವ್ಯಕ್ತಪಡಿಸಿ ಪ್ರೀತಿಯನ್ನು ಪಡೆಯಲು, ಅದನ್ನು ಬೆಳೆಸಲು, ಒಂದು ಬಹು ಸುಂದರ ಉಪಾಯ ಹುಡುಕಿಕೊಂಡಿದ್ದಾನೆ ಅದೇ ಉಡುಗೊರೆ;
ಅದು ಸಂಗೀತ, ಸಾಹಿತ್ಯ, ಮಾತು, ಚಿತ್ರಕಲೆಯ ಮೂಲವಾದರೂ ಸರಿ. ಅಥವಾ ಒಂದು ವಸ್ತು ರೂಪದಲ್ಲಾದರೂ ಸರಿ. ಉಡುಗೊರೆಯ
ಮೂಲಕ ತನ್ನಲ್ಲಿ ಮೂಡಿದ ಪ್ರೀತಿಯನ್ನು ತಾನು ಪ್ರೀತಿಸುವ ಜೀವಕ್ಕೆ ತಿಳಿಸಲು ಹವಣಿಸುತ್ತಾನೆ.
ಈ ಪ್ರೀತಿ ಅಭಿವ್ಯಕ್ತಿಯಲ್ಲಿ ತನ್ನಿಷ್ಟದ ಜೀವಕ್ಕೆ, ಉಡುಗೊರೆ ಕೊಟ್ಟು, ತನ್ನ ಪ್ರೀತಿಯನ್ನು ನಿವೇದಿಸಿಕೊಳ್ಳುವ ಬಗೆ ಇಂದು ನಿನ್ನಯದಲ್ಲ.
ಪುರಾಣ ಕಾಲದಲ್ಲಿ ಪಾರ್ವತಿ ಶಿವನ ಕುರಿತು ತಪಸ್ಸು ಮಾಡುವಾಗ ಆತನನ್ನು ಒಲಿಸಿಕೊಂಡು ಅವನ ಪ್ರೀತಿ ಸಾಂಗತ್ಯದ ಅಭಿಲಾಷಿಯಾಗಿ ಅಪರೂಪದ ಫಲ ಪುಷ್ಪಗಳನ್ನು ಆತನಿಗೆ ಉಡುಗೊರೆಯಾಗಿ ಸಮರ್ಪಿಸಿದಳಂತೆ!
ಅಂತೆಯೇ, ಕೃಷ್ಣ ರಾಧೆಯ ಪ್ರೇಮಕಥೆಯಲ್ಲಿ ಬರುವ ವೈಜಯಂತಿ ಹಾರ ಮತ್ತು ಕೊಳಲು ಕೂಡ ಪರಸ್ಪರ ಕೊಟ್ಟು ಪಡೆದ ಪ್ರೀತಿಯ ಉಡುಗೊರೆಗಳೇ. ಕೃಷ್ಣ-ರುಕ್ಮಿಣಿ- ಸತ್ಯಭಾಮೆಯ ಪಾರಿಜಾತದ ಕಥೆ, ದುಶ್ಯಂತ ಶಾಕುಂತಲೆಯ ಪ್ರೇಮಕಥೆಯಲ್ಲಿ ಬರುವ ಉಂಗುರದ ಉಲ್ಲೇಖಗಳನ್ನು ಕೇಳಿದಾಗ ಪ್ರೇಮ ನಿವೇದನೆಗೆ, ಸಾಮರಸ್ಯ ತುಂಬಿದ ಜೀವನಕ್ಕೆ ಉಡುಗೊರೆ ಎಂಬುದು ಅದೆಷ್ಟು ಮುಖ್ಯ ಎಂಬುದರ ಅರಿವಾಗುತ್ತದೆ.

ಇದೇ ಹಿನ್ನೆಲೆಯಲ್ಲಿ ಹುಟ್ಟಿದ ಒಂದು ಅಪರೂಪದ ಸಂಪ್ರದಾಯ, ಕಲೆ, ರೂಡಿ ವೇಲ್ಸ್ ದೇಶದಲ್ಲಿ ಕಂಡುಬರುತ್ತದೆ.
ಈ ಸಂಪ್ರದಾಯ ಶುರುವಾದದ್ದು ಹದಿನಾರನೇ ಶತಮಾನದ ಅಂತ್ಯದಲ್ಲಿ. ಬೇಸಾಯ, ಹೈನುಗಾರಿಕೆ, ಗಣಿಗಾರಿಕೆ, ಮತ್ತು ನಾವಿಕ ವೃತ್ತಿಯೇ ಮುಖ್ಯವಾಗಿದ್ದ ವೇಲ್ಸ ದೇಶದಲ್ಲಿ, ಅಕ್ಟೋಬರ್ ತಿಂಗಳು ಕಳೆಯುವ ಹೊತ್ತಿಗೆ ಒಂದು ರೀತಿಯ ಬೇಸರದ ಛಾಯೆ ಆವರಿಸುತ್ತಿತ್ತು. ಕಾರಣ ಇಲ್ಲಿ ಆಗ ಚಳಿಗಾಲ ಶುರುವಾಗುತ್ತದೆ. ಮಧ್ಯಾನ್ಹ ಎರಡಕ್ಕೆ ಆವರಿಸುವ ಕತ್ತಲು, ಮತ್ತು ಹವಾಮಾನ ವೈಪರಿತ್ಯ, ಶ್ರಮಜೀವಿಗಳನ್ನು ಏಕತಾನತೆ ಮತ್ತು ಖಿನ್ನತೆಗೆ ನೂಕುತ್ತಿತ್ತು.

ಅದೇ ಸಂದರ್ಭದಲ್ಲಿ, ಅಲ್ಲಿಯ ಕ್ರಿಯಾಶೀಲ ಯುವಕನೊಬ್ಬ, ಸುಮ್ಮನೆ ಕೂರಲಾಗದೆ ಮನೆಯ ಮೂಲೆಯಲ್ಲಿ ಬಿದ್ದಿದ್ದ ಪುಟ್ಟ ಮರದ ತುಂಡಿನಲ್ಲಿ, ಕಲಾತ್ಮಕ ಚಮಚೆ/ಸೌಟೊಂದನ್ನು ತಯಾರಿಸಿದ. ಇದು ಬರಿಯ ಚಮಚೆ ಆಗಿರದೆ ಅತ್ಯಂತ ಸೂಕ್ಷ್ಮ ಕುಸುರಿ ಕೆತ್ತನೆಗಳನ್ನು ಒಳಗೊಂಡ ಸುಂದರ ಕಲಾಕೃತಿಯಂತೆ ತಯಾರಿಸಲ್ಪಟ್ಟಿತ್ತು.
ತಾನು ತಯಾರಿಸಿದ ಈ ಚಮಚೆಯನ್ನು ತನ್ನ ಪ್ರೇಯಸಿಗೆ ಕಾಣಿಕೆಯ ರೂಪದಲ್ಲಿ ನೀಡಿ ಆಕೆ ಅವನ ಮನಸನ್ನು ಬಗೆದಷ್ಟೂ ಸಿಗುವ ಪ್ರೀತಿಯ ಅಗಾಧತೆಯನ್ನು ತಿಳಿಸಿದ. ಆಕೆಯನ್ನು ಮೆಚ್ಚಿಸಲು ರಮಿಸಲು ಮಾಡಿದ ಈ ಪ್ರಯತ್ನ ಯಶಸ್ವಿಯಾಗಿತ್ತು.
ತನಗಾಗಿ ಸಮಯ ಕೊಟ್ಟು ಪ್ರಿಯಕರ ತಯಾರಿಸಿದ ಈ ವಿಶಿಷ್ಟ ವಸ್ತುವನ್ನು ಕಂಡು ಅವನ ಪ್ರೇಯಸಿ ತುಂಬಾ ಖುಶಿಯಾಗಿ, ತನ್ನೆಲ್ಲ ಗೆಳತಿಯರ ಬಳಗಕ್ಕೂ ಇದನ್ನು ಹೆಮ್ಮೆಯಿಂದ ತೋರಿಸಿಕೊಂಡು ಬಂದಳು.
ಈ ಯುವಕ ಸಮಾಜದ ಇತರ ಯುವಕರಿಗೆ/ಪ್ರೇಮಿಗಳಿಗೆ ಮಾದರಿಯಾದ. ಅವನಂತೆ ಇತರರೂ ತಮ್ಮ ಈ ಚಳಿಗಾಲದ ಏಕತಾನತೆ ಕಳೆಯಲು ಈ love spoons ತಯಾರಿಕೆಯಲ್ಲಿ ನಿರತರಾದರು. ಜೊತೆಗೆ ಈ ಕಲಾಕೃತಿಗಳನ್ನು ತಮ್ಮ ಪ್ರೇಯಸಿಯರಿಗೆ ಕೊಡುವ ಹುಮ್ಮಸ್ಸಿನಲ್ಲಿ, ಹಲವು ಅಪರೂಪದ ವಿನ್ಯಾಸಗಳು, ಮಾದರಿಗಳು ಸೇರಿಕೊಂಡವು. ಅಲ್ಲಿನ ಪ್ರಸಿದ್ಧ ಪ್ರೇಮ ಕಥೆಯ ದ್ಯೋತಕದಂತೆ ಈ ಕೆತ್ತನೆಗಳು ಮೂಡಿಬಂದವು.




ಅಲ್ಲಿಂದ ಈ 'ಲವ್ ಸ್ಪೂನ್' ಎಂಬ ಕಾಷ್ಠ ಕಲೆ. ವೇಲ್ಸ್ ದೇಶದ ಜನಪದ ವೈಶಿಷ್ಟಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು.
ಪ್ರೇಯಸಿಗೆ ಕೊಡಲು ಮಾಡಿದ ಈ ಲವ್ ಸ್ಪೂನ್ ಕೆಲ ಸಮಯದ ನಂತರ ಪ್ರೀತಿ ಮತ್ತು ಸಾಮರಸ್ಯ, ಗೌರವ ಆದರ ಇರುವ ಎಲ್ಲ ಬಾಂಧವ್ಯಗಳಲ್ಲೂ. ಶುಭಕಾರ್ಯಗಳಲ್ಲಿ, ಸವಿಗಳಿಗೆಗಳಲ್ಲಿ ಪರಸ್ಪರ ಉಡುಗೊರೆಯಾಗಿ ನೀಡುವ ಕ್ರಮ ಶುರುವಾಯಿತು.
ಪ್ರತಿ ಸೌಟಿನಲ್ಲಿ ಇರುವ ಕೆತ್ತನೆಗೆ ಅದರದೇ ಆದ ಅರ್ಥ ಮತ್ತು ಪ್ರಾಮುಖ್ಯತೆ ಇದೆ.
ಉದಾಹರಣೆಗೆ;
• ಹೃದಯ - ಪ್ರೀತಿಯ ದ್ಯೋತಕ
• ಎರಡು ಬಟ್ಟಲ ವಿನ್ಯಾಸ - ಸಾಂಗತ್ಯ ಮತ್ತು ನಂಬಿಕೆ
• ಸರಪಳಿ ವಿನ್ಯಾಸ - ಪ್ರಾಮಾಣಿಕತೆ ಮತ್ತು ನಂಬಿಕೆ
• ವಜ್ರಾಕೃತಿ - ಸಮೃದ್ಧಿ ಮತ್ತು ಸುಗಮ ಜೀವನದ ಹಾರೈಕೆ
• ಬೀಗ ಮತ್ತು ಬೀಗದ ಕೈ - ಮನೆಯ ಸ್ವಾಸ್ಥ್ಯ, ಶಾಂತಿ ಮತ್ತು ಸಹಬಾಳ್ವೆ.
• ಚಕ್ರ - ಕೆಲಸ ಕಾರ್ಯದಲ್ಲಿ ಶ್ರದ್ಧೆ, ಉನ್ನತಿ
ಹೀಗೆ ಅಸಂಖ್ಯ ಸಾಂಕೇತಿಕ ಅರ್ಥಗಳನ್ನು ಬಿಂಬಿಸುವ ಈ ಕಲಾತ್ಮಕ ಚಮಚೆಗಳ ಜೊತೆಗೆ ವೇಲ್ಸ್ ದೇಶದ ಹಿರಿಮೆ ಬಿಂಬಿಸುವ ರಾಷ್ಟ್ರೀಯ ಚಿಹ್ನೆಗಳನ್ನು ಕೂಡ ಸೇರಿಸಲಾಯಿತು.
ನೀರಸ ಚಳಿಗಾಲ ಕಳೆದು, ವಸಂತಾಗಮನವನ್ನು ಸಾರುವ ಡಾಫುಡಿಲ್ಸ್ ಹೂವು. ಡ್ರಾಗನ್, ಕೆಲ್ಟಿಕ್ ಶೈಲಿಯ ಕೆತ್ತನೆಗಳು ಈ ಕಲೆಯನ್ನು ವೇಲ್ಸ್ ದೇಶದ ಕಲಾಭಿವ್ಯಕ್ತಿಯ ಪ್ರತೀಕವಾಗಿಸಿವೆ.
ಸುಮಾರು ಐದು ಶತಮಾನದ ಇತಿಹಾಸ ಇರುವ ಈ ವಿಶಿಷ್ಟ ಕಲೆಯನ್ನು ಇಲ್ಲಿನ ಆಸಕ್ತ ಕಲಾವಿದರು ಅಷ್ಟೇ ಅಸ್ಥೆಯಿಂದ ತಮ್ಮ ಹಿರಿಯರಿಂದ ಕಲಿತು ಮುಂದುವರಿಸಿಕೊಂಡು ಬಂದಿದ್ದಾರೆ.
ನಾನು ಒಂದು ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಲು ವೇಲ್ಸ್ ದೇಶದ ಒಂದು ಹಳ್ಳಿಗೆ ಭೇಟಿ ಕೊಟ್ಟಾಗ ಅಲ್ಲಿ ಈ ಕಲೆಯ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇದ್ದವು. ಅಲ್ಲಿದ್ದ 70ರ ಹರೆಯದ ಲವ್ ಸ್ಪೂನ್ ತಯಾರಿಸುವ ಕಲಾವಿದನೊಬ್ಬ ನನಗೆ ಈ ಕಲೆ ಹುಟ್ಟಿ ಬೆಳೆದು ಬಂದ ಕಥೆಯನ್ನು ಹೇಳಿದ. ಕನ್ನಡದಲ್ಲಿ ಸಾಮಾನ್ಯವಾಗಿ ಬಳಸುವ ಗಾದೆ ಮಾತೊಂದು ಆ ನಿಮಿಷದಲ್ಲಿ ನೆನಪಾಯಿತು:
ಕೆಲಸವಿಲ್ಲದ ಬಡಗಿ... ತನ್ನ ಪ್ರಿಯತಮೆಯ ಮುಖದಲ್ಲೊಂದು ನಗು ನೋಡಲು ದೇಶವೇ ಹೆಮ್ಮೆ ಪಡುವ ಅನನ್ಯ ಕಲೆಯೊಂದನ್ನು ತನಗೇ ಗೊತ್ತಿಲ್ಲದೆ ಶುರುಮಾಡಿದ. ಅದು ಇಂದು ಅದೆಷ್ಟೋ ಜನರಿಗೆ ಕೆಲಸ ಕೊಟ್ಟು ಕಾಪಾಡಿದೆ.
ಅಮಿತಾ ರವಿಕಿರಣ್, ಬೆಲ್ಫಾಸ್ಟ್,ಯುಕೆ
ಚಿತ್ರ ಕೃಪೆ: ಪಾಲ್ ಕರ್ಟಿಸ್ ಅವರ ಜಾಲ ತಾಣ. (ಅವರ ವೈಯಕ್ತಿಕ ಅನುಮತಿಯೊಂದಿಗೆ.)
*ಕಬೀರ್ ದಾಸನ ಒಂದು ದೋಹಾ ಹೀಗಿದೆ:
पोथी पढ़ पढ़ जग मुआ, पंडित भया न कोय
ढाई अक्षर प्रेम का, पढ़े सो पंडित होय
(ಪುಸ್ತಕ ಓದಿ ಯಾರೂ ಪಂಡಿತರಾಗಿಲ್ಲ. ಪ್ರೇಮದ ಎರಡೂವರೆ ಅಕ್ಷರಗಳನ್ನು ಕಲಿತವನೇ ಪಂಡಿತ.)




