ಕಳೆದ ತಿಂಗಳು ಬ್ರಿಟನ್ನಿನ ವೇಲ್ಸ್ ಪ್ರಾಂತದ ಹೆಮ್ಮೆಯ ಪುತ್ರ ಮತ್ತು ಸುಪ್ರಸಿದ್ಧ ಹಾಲಿವುಡ್ ನಟನಾಗಿದ್ದ ರಿಚರ್ಡ್ ಬರ್ಟನ್ ಹುಟ್ಟಿ ನೂರು ವರ್ಷಗಳಾಗಿವೆ. ಆತನ ನೆನಪಿನಲ್ಲಿ ಆತನ ಜನ್ಮಸ್ಥಳದ ಪಕ್ಕದ ದೊಡ್ಡ ಪಟ್ಟಣವಾದ ನೀತ್ ಪೋರ್ಟ್ ಟಾಲ್ಬಟ್ಟಿನವರು ಅನೇಕ ರೀತಿಯಿಂದ ವೈಭವದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಶಾಲಿನಿಯವರು ಅಲ್ಲಿಗೆ ಭೇಟಿಕೊಟ್ಟ ನೆನಪುಗಳನ್ನು ತಮ್ಮ ತಂದೆಯವರ ನೆನಪಿನಲ್ಲಿ ಭಾವಪೂರ್ಣ ಲೇಖನದಲ್ಲಿ ಗೌರವಾರ್ಪಣೆ (homage) ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ನನ್ನ ಕೆಲವು ನೆನಪುಗಳನ್ನು ಲಗತ್ತಿಸಿದ್ದೇನೆ!
ಅದರ ನಂತರ ಬಹಳ ದಿನಗಳಾದ ಮೇಲೆ ಡಾ ರಾಜಶ್ರೀ ಪಾಟೀಲ ಅವರು ಬರೆದ ಎರಡು ಕವಿತೆಗಳನ್ನೂ ಓದಿರಿ. ಎಂದಿನಂತೆ ನಿಮ್ಮ ಪ್ರೋತ್ಸಾಹ ಮತ್ತು ಪ್ರತಿಕ್ರಿಯೆಗೆ ಯಾವಾಗಲೂ ಸ್ವಾಗತ -(ಸಂ)

ಪೋರ್ಟ್ ಟಾಲ್ಬಟ್—ಟಾಟಾ ಸ್ಟೀಲ್ ಕಾರ್ಖಾನೆ, ಜಗತ್ತಿನ ಅತಿ ದೊಡ್ಡ ಕಾರ್ಖಾನೆಗಳಲ್ಲಿ ಒಂದಾಗಿ, ಇತ್ತೀಚಿನ ವರ್ಷಗಳಲ್ಲಿ ಸುದ್ದಿಯಲ್ಲಿರುವುದರಿಂದ ನಾವು ಈ ಹೆಸರನ್ನು ಹೆಚ್ಚು ಕೇಳುತ್ತಿದ್ದೇವೆ. ಈ ಸ್ಥಳವನ್ನು ಅನ್ವೇಷಿಸಲು ಮುಂದಾದಾಗ, ಇನ್ನೂ ಅನೇಕ ಕಥೆಗಳು ಹೊರಬರುತ್ತವೆ. ನನ್ನ ಬಾಲ್ಯದ ನೆನಪುಗಳನ್ನು ಜೋಡಿಸಲು ನಾನು ಪ್ರಯತ್ನಿಸಿದ್ದೇನೆ. ಪೋನ್ಟ್ರೈಡಿವೆನ್ (Pontrhydyfen) ದಕ್ಷಿಣ ವೇಲ್ಸ್ನ ನೀತ್ ಪೋರ್ಟ್ ಟಾಲ್ಬಟ್ ಪ್ರದೇಶದ ಆವಾನ್ ಕಣಿವೆಯಲ್ಲಿರುವ ಸುಂದರವಾದ ಚಿಕ್ಕ ಹಳ್ಳಿ, ಕಾರ್ಡಿಫ್ನಿಂದ ಸುಮಾರು 40 ಮೈಲಿಗಳ ದೂರದಲ್ಲಿದೆ. ಸುಮಾರು ನೂರು ವರ್ಷಗಳ ಹಿಂದೆ ಈ ಹಳ್ಳಿ ಕಲ್ಲಿದ್ದಲಿ ಗಣಿಯ ಪ್ರದೇಶವಾಗಿತ್ತು. ಆ ಗಣಿಗಾರ (miners)ರಲ್ಲಿ ಒಬ್ಬರ ಮಗನು ಈ ಪ್ರದೇಶದಲ್ಲಿ ಮಾತ್ರವಲ್ಲ, ಜಗತ್ತಿನ ಪ್ರಸಿದ್ಧ ವ್ಯಕ್ತಿಯಾಗಿಯೂ ಬೆಳೆದನು. ರಿಚರ್ಡ್ ವಾಲ್ಟರ್ ಜೆಂಕಿನ್ಸ್ ಎಂಬ ಹೆಸರಿನಲ್ಲಿ ಜನಿಸಿದ ಆ ಹುಡುಗನು ನಂತರ ಹಾಲಿವುಡ್ನ ಪ್ರಸಿದ್ಧ ನಟ ರಿಚರ್ಡ್ ಬರ್ಟನ್ ಆಗಿ ಬೆಳೆಯುವನು. ರಿಚರ್ಡ್ ಬರ್ಟನ್ ರ ಅದ್ಭುತ ಅಭಿನಯ ಶೈಲಿ, ಶಕ್ತಿಯುತ ಧ್ವನಿ ಮತ್ತು ಎಲಿಜಬೆತ್ ಟೇಲರ್ ಅವರೊಂದಿಗೆ ನಡೆದ ವಿವಾಹ (ಎರಡು ಬಾರಿ) —ಅವರನ್ನು ಪ್ರಸಿದ್ಧ “ಗೋಲ್ಡನ್ ಕಪಲ್” ಆಗಿ ಮಾಡಿದ್ದು—ಇಂದಿಗೂ ಎಷ್ಟೋ ಸಿನಿಮಾ ಪ್ರೇಮಿಗಳಿಗೆ ಮರೆಯಲಾಗದ ನೆನಪುಗಳಾಗಿವೆ.

1943ರಲ್ಲಿ ಲಂಡನ್ನ ಸೆಂಟ್ ಮಾರ್ಟಿನ್ ಥಿಯೇಟರ್ನಲ್ಲಿ ವೇದಿಕೆಯ ಮೇಲೆ ಮೊದಲ ಬಾರಿಗೆ ರಿಚರ್ಡ್ ಬರ್ಟನ್ ಅಭಿನಯಿಸಿದರು. ಆರು ವರ್ಷಗಳ ನಂತರ, 1949ರಲ್ಲಿ, ದಿ ಲಾಸ್ಟ್ ಡೇಸ್ ಆಫ್ ಡೋಲ್ವಿನ್ ಅವನ ಮೊದಲ ಚಿತ್ರವಾಗಿತ್ತು. ದಿ ರೋಬ್ (1953), ಕ್ಲಿಯೋಪಾತ್ರಾ (1963) ಎಲಿಜಬೆತ್ ಟೇಲರ್ ಜೊತೆ, ಮತ್ತು ವೇರ್ ಈಗಲ್ಸ್ ಡೇರ್ (1968) ಕ್ಲಿಂಟ್ ಈಸ್ಟ್ವುಡ್ ಜೊತೆ— ನೋಡಬೇಕಾದ ಕ್ಲಾಸಿಕ್ಸ್ (classics ). ಇಷ್ಟು ಹಳೆಯ ನಟನನ್ನು ನಾನು ಹೇಗೆ ನೆನೆದುಕೊಂಡೆ? ಎರಡು ಕಾರಣಗಳಿವೆ. ಮಿಸ್ಟರ್ ಬರ್ಟನ್ ಎಂಬ ಚಿತ್ರ ಏಪ್ರಿಲ್ 2025ರಲ್ಲಿ ಬಿಡುಗಡೆಯಾಯಿತು. ನಾನು ಅದನ್ನು ಮೊದಲ ದಿನ, ಮೊದಲ ಪ್ರದರ್ಶನದಲ್ಲೇ ನೋಡಿದೆ. ಅದು ನನಗೆ ಉತ್ಸಾಹ ಮತ್ತು ಭಾವನೆಗಳ ಅಲೆಗಳನ್ನು ತಂದಿತು. ನನ್ನ ತಂದೆಯಿಂದ ನನಗೆ ರಿಚರ್ಡ್ ಬರ್ಟನ್ ಅವರ ಬಗ್ಗೆ ತಿಳಿದುದ್ದು. ನಾನು ಚಿಕ್ಕವಳಾಗಿದ್ದಾಗ ನನ್ನ ತಂದೆ ಅವರ ಬಗ್ಗೆ ಚರ್ಚಿಸುತ್ತಿದ್ದುದನ್ನು ಮಸುಕಾಗಿ ನೆನಪಿಸಿಕೊಳ್ಳುತ್ತೇನೆ. ಅನೇಕ ವರ್ಷಗಳ ನಂತರ, ನಾನು ವೇಲ್ಸ್ನಲ್ಲಿ ವಾಸಿಸಲು ಬಂದಾಗ, ಕಾರ್ಡಿಫ್ನ ರಾಯಲ್ ವೆಲ್ಶ್ ಕಾಲೇಜ್ ಆಫ್ ಮ್ಯೂಸಿಕ್ ಅಂಡ್ ಡ್ರಾಮಾದ ಉಪನ್ಯಾಸ ಸಭಾಂಗಣಕ್ಕೆ ಭೇಟಿ ನೀಡಿದಾಗ, ಅದನ್ನು ರಿಚರ್ಡ್ ಬರ್ಟನ್ ಥಿಯೇಟರ್ ಎಂದು ಹೆಸರಿಸಲಾಗಿದೆ ಎಂದು ಕಂಡೆ. ಆ ಕ್ಷಣದಲ್ಲಿ ನನ್ನ ತಂದೆಯನ್ನು ನೆನಪಿಸಿಕೊಂಡು ನನಗೆ ಅಪಾರ ಸಂತೋಷವಾಯಿತು.
ಮಿಸ್ಟರ್ ಬರ್ಟನ್ ಚಿತ್ರವು ರಿಚರ್ಡ್ ಬರ್ಟನ್ ಅವರ ಜೀವನವನ್ನು ವಿವರಿಸುತ್ತದೆ—ಪೋನ್ಟ್ರೈಡಿವೆನ್ ಹಳ್ಳಿಯಿಂದ ಇಂಗ್ಲೆಂಡ್ನ ರಂಗಮಂದಿರಗಳವರೆಗೆ ಯುವಕ ರಿಚರ್ಡ್ ಜೆಂಕಿನ್ಸ್ ಅವರ ಜೀವನದಲ್ಲಿ ಅವರ ಶಾಲಾ ಶಿಕ್ಷಕರು ಪ್ರೇರಣಾದಾಯಕ ಪಾತ್ರ ವಹಿಸಿದರು—ಅವರ ಪ್ರತಿಭೆಯನ್ನು ಗುರುತಿಸಿ, ಅಭಿನಯವನ್ನು ಮುಂದುವರಿಸಲು ಪ್ರೋತ್ಸಾಹಿಸಿ, “ಬರ್ಟನ್” ಎಂಬ ತಮ್ಮ ಹೆಸರನ್ನೂ ನೀಡಿದರು. ಅವರ ಆಳವಾದ, ಪ್ರತಿಧ್ವನಿಸುವ ಧ್ವನಿ ಅವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು.
ಈ ಚಿತ್ರವನ್ನು ನೋಡಿದ ನನಗೆ ರಿಚರ್ಡ್ ಬರ್ಟನ್ ಅವರ Pontrhydyfen ಪಾಂಟ್ರಿಡ್ ವೆನ್ (ವೆಲ್ಶ್ ಭಾಷೆಯಲ್ಲಿ ’f’ ಗೆ ವ ಎನ್ನುವ ಉಚ್ಚಾರ) ಜನ್ಮಸ್ಥಳವನ್ನು ಅನ್ವೇಷಿಸಲು ಪ್ರೇರಣೆ ನೀಡಿತು. ಈ ವರ್ಷ 2025 ಅವರ ಜನ್ಮ ಶತಮಾನೋತ್ಸವದ ಸಂದರ್ಭವಾಗಿದ್ದು, ಪೋರ್ಟ್ ಟಾಲ್ಬಾಟ್ ಕೌನ್ಸಿಲ್ ಅನೇಕ ಸಂಬಂಧಿತ ಸ್ಥಳಗಳನ್ನು ‘ರಿಚರ್ಡ್ ಬರ್ಟನ್ ಟ್ರೈಲ್(trail)’ ಆಗಿ ಏರ್ಪಡಿಸಿದೆ.

ಮೇ ತಿಂಗಳಲ್ಲಿ, ವಸಂತಕಾಲದಲ್ಲಿ ನಾನು ಪೋನ್ಟ್ರೈಡಿವೆನ್ಗೆ ಭೇಟಿ ನೀಡಿದೆ. ಮೈನರ್ಸ್ ಆರ್ಮ್ಸ್ ಪಬ್ ಮುಂದೆ ಕಾರನ್ನು ನಿಲ್ಲಿಸಿದ ಕೂಡಲೇ ಎದುರು ಕಂಡ ದೃಶ್ಯ ಅದ್ಭುತವಾಗಿತ್ತು: ಪಬ್ ಪಕ್ಕದ ಸಂಪೂರ್ಣ ಗೋಡೆಯ ಮೇಲೆ ರಿಚರ್ಡ್ ಬರ್ಟನ್ ಅವರ ಜೀವಂತ ಗಾತ್ರದ ಚಿತ್ರ! (ಚಿತ್ರ 1).
ಸ್ವಲ್ಪ ದೂರದಲ್ಲಿ 2 ಡಾನ್-ಯ-ಬೋಂಟ್ ರಿಚರ್ಡನ ಜನ್ಮಸ್ಥಳದಲ್ಲಿ ಅವನು ಹುಟ್ಟಿದ ಮನೆ, ಈಗ ಪ್ರಸಿದ್ಧವಾದ ರಿಚರ್ಡ್ ಬರ್ಟನ್ ಸೇತುವೆ (ಚಿತ್ರದಲ್ಲಿ ಆತ ತಂದೆಯ ಜೊತೆಗೆ ವಾಕಿಂಗ್ ಮಾಡಿದ್ದು ಮತ್ತು ಅದರ ಇಂದಿನ ದೃಶ್ಯ ಇವೆ) ಹತ್ತಿರದಲ್ಲಿದೆ. 1950ರ ದಶಕದಲ್ಲಿ ರಿಚರ್ಡ್ ಬರ್ಟನ್ ತಮ್ಮ ತಂದೆಯೊಂದಿಗೆ ಈ ಸೇತುವೆಯನ್ನು ದಾಟುತ್ತಿರುವ ಐಕಾನಿಕ್ ಛಾಯಾಚಿತ್ರ ಇದೆ. ಸೇತುವೆಯ ಪಕ್ಕದಲ್ಲಿರುವ ಬೆಥೆಲ್ ಚಾಪೆಲ್ ನಲ್ಲಿ ಅವರ ಸ್ಮರಣಾರ್ಥ ಸೇವೆ ನಡೆಯಿತು. ಈಗ ಅದಕ್ಕೆ ಹೊಂದಿಕೊಂಡಿರುವ ಕೆಫೆ ಇದೆ, ಅಲ್ಲಿ ಅವರಿಗಾಗಿ ಮೀಸಲಾದ ಒಂದು ಜಾಗವನ್ನು ನೋಡಿದೆ. ಈ ಕೆಫೆಯನ್ನು ‘ಮಿಸ್ಟರ್ ಬರ್ಟನ್’ ಚಿತ್ರದ ಚಿತ್ರೀಕರಣದ ವೇಳೆ ಗ್ರೀನ್ ರೂಮ್ ಆಗಿ ಬಳಸಲಾಗಿತ್ತೆಂದು ನನಗೆ ತಿಳಿಸಲಾಯಿತು.
ಪೋರ್ಟ್ ಟಾಲ್ಬಾಟ್ ಕೌನ್ಸಿಲ್ ಶತಮಾನೋತ್ಸವದ ಅಂಗವಾಗಿ ನಿರ್ಮಿಸಿದ ಲೋಹದ ಶಿಲ್ಪವೂ ಅಲ್ಲಿ ಇದೆ. ರಿಚರ್ಡ್ ಬರ್ಟನ್ ತಮ್ಮದೇ ಶಬ್ದಗಳಲ್ಲಿ ನೆನಪಿಸಿಕೊಂಡಂತೆ: “ಇದು ತುಂಬಾ ರೊಮ್ಯಾಂಟಿಕ್ ಮತ್ತು ಮೂರ್ಖತನದಂತೆ ಕೇಳಿಸುತ್ತದೆ, ಆದರೆ ನಿಜವಾಗಿ ನಾನು ಬೆಟ್ಟದ ಮೇಲೆ ಹೋಗಿ ನನ್ನ ಧ್ವನಿ ನೋವು ಕಾಣುವವರೆಗೆ ಸಾಧ್ಯವಾದಷ್ಟು ಜೋರಾಗಿ ಕೂಗುತ್ತಿದ್ದೆ. ನಂತರ ಸ್ವಲ್ಪ ವಿರಾಮ ತೆಗೆದುಕೊಂಡು ಮತ್ತೆ ಕೂಗುತ್ತಿದ್ದೆ, ಅದು ನೋವು ಕಾಣದಂತೆ ಮಾಡಲು. ಇದು ತುಂಬಾ ಮೂಲಭೂತ ವಿಧಾನವಾಗಿತ್ತು, ಆದರೆ ಅದು ಕೆಲಸ ಮಾಡಿತು.”
ನಿಜವಾಗಿಯೂ, ಅವರದು ಪ್ರತಿಯೊಂದು ಪೀಳಿಗೆಯನ್ನೂ ಆಕರ್ಷಿಸುವ ಧ್ವನಿ, ಅಲ್ಲವೇ!
ಪೋರ್ಟ್ ಟಾಲ್ಬಾಟ್ನ ಅದ್ಭುತ ಕಣಿವೆಗಳು. ನನ್ನ ನೆಚ್ಚಿನ ನಟರಲ್ಲಿ ಒಬ್ಬರಾದ ಸರ್ ಆಂಟನಿ ಹಾಪ್ಕಿನ್ಸ್ ಅವರ ಜನ್ಮಸ್ಥಳ. ಅವರು ಮಾರ್ಗಮ್ ಜಿಲ್ಲೆಯಲ್ಲಿ ಜನಿಸಿ, 15ನೇ ವಯಸ್ಸಿನಲ್ಲಿ ಭೇಟಿಯಾದ ರಿಚರ್ಡ್ ಬರ್ಟನ್ ಅವರಿಂದ ಪ್ರೇರಿತರಾದರು. ಸೈಲೆನ್ಸ್ ಆಫ್ ದ ಲ್ಯಾಂಬ್ಸ್, ದಿ ಮಾಸ್ಕ್ ಆಫ್ ಝೊರೊ, ಹಿಚ್ಕಾಕ್, ಕಿಂಗ್ ಲಿಯರ್, ದಿ ಟು ಪೋಪ್ಸ್, ದಿ ಫಾದರ್—ಅವರ ಅಭಿನಯಗಳು ನನ್ನನ್ನು ಮಂತ್ರಮುಗ್ಧಗೊಳಿಸಿವೆ.
ಇತ್ತೀಚೆಗೆ, ಡಾ. ಶ್ರೀವತ್ಸ ದೇಸಾಯಿ ಅವರೊಂದಿಗೆ ಮಾತನಾಡುವಾಗ, ನಾನು “ಪ್ಯಾಷನ್ ಆಫ್ ಪೋರ್ಟ್ ಟಾಲ್ಬಾಟ್ ಬಗ್ಗೆ ತಿಳಿದುಕೊಂಡೆ—2011ರಲ್ಲಿ ಗುಡ್ ಫ್ರೈಡೇಯಿಂದ ಈಸ್ಟರ್ ಸಂಡೇವರೆಗೆ ನಡೆದ ನಾಟಕೀಯ ಪ್ರದರ್ಶನ. ಈ ನಾಟಕವು ಕ್ರಿಸ್ತನ ‘ಪುನರುತ್ಥಾನ’ದಲ್ಲಿ ಅಂತ್ಯಗೊಂಡಿತು, ಪ್ರಸಿದ್ಧ ಪ್ಯಾಷನ್ ಪ್ಲೇ ಪರಂಪರೆಯಿಂದ ಸ್ಪಷ್ಟವಾಗಿ ಪ್ರೇರಿತವಾಗಿತ್ತು. ಈ ಪರಂಪರೆ 1633ರಲ್ಲಿ ಜರ್ಮನ್ ಪಟ್ಟಣದಲ್ಲಿ ಆರಂಭವಾಗಿ, ಪ್ರತೀ ಹತ್ತು ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಶತಮಾನಗಳಿಂದ ಮುಂದುವರಿದಿದೆ ಮತ್ತು ಜಗತ್ತಿನ ಅತ್ಯಂತ ಪ್ರಸಿದ್ಧ ಪ್ಯಾಷನ್ ಪ್ಲೇಗಳಲ್ಲಿ ಒಂದಾಗಿದೆ. ಪೋರ್ಟ್ ಟಾಲ್ಬಾಟ್ ಪ್ರದರ್ಶನದಲ್ಲಿ ಪ್ರಸಿದ್ಧ ನಟ ಮೈಕೆಲ್ ಶೀನ್ ಅಭಿನಯಿಸಿದರು, ಅವರು ಈ ಪ್ರದೇಶದಲ್ಲೇ ಬೆಳೆದವರು. ಪಟ್ಟಣದ ಜನರು ಕಲಾವಿದರು, ಸಿಬ್ಬಂದಿ ಮತ್ತು ನಾಯಕರು—1,000ಕ್ಕೂ ಹೆಚ್ಚು ಜನರು ಈ ಕೃತಿಯ ಸೃಷ್ಟಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಪೋರ್ಟ್ ಟಾಲ್ಬೋಟ್ ನ ಮತ್ತೊಂದು ಖ್ಯಾತಿ- 2018ರಲ್ಲಿ ಪೋರ್ಟ್ ಟಾಲ್ಬಾಟ್ನ ಒಂದು ಗ್ಯಾರೇಜ್ನಲ್ಲಿ ಕಾಣಿಸಿಕೊಂಡ ಬ್ಯಾಂಕ್ಸಿ ಕಲಾಕೃತಿ ‘ಸೀಸನ್ಸ್ ಗ್ರೀಟಿಂಗ್ಸ್’! ಸುಮಾರು 20,000 ಮಂದಿ ಈ ಕಲಾಕೃತಿಯನ್ನು ನೋಡಲು ಬಂದಿದ್ದರು. ಬ್ಯಾಂಕ್ಸಿ ಭೇಟಿ ನಂತರ ಪೋರ್ಟ್ ಟಾಲ್ಬಾಟ್ನಲ್ಲಿ ಬೀದಿ ಕಲೆಯ ಗ್ರಫಿಟಿ ಸಂಗ್ರಹ ಹೆಚ್ಚುತ್ತಿದೆ ಮತ್ತು ಕಲಾವಿದರು ಸ್ವತಂತ್ರವಾಗಿ ಚಿತ್ರಿಸಲು ಮುಕ್ತ ಗೋಡೆಯೂ ಇದೆ. ಬ್ಯಾಂಕ್ಸಿ ಅವರ ಕಲೆಯಲ್ಲಿ, ಹಿಮದ ಹನಿಗಳನ್ನು ನಾಲಿಗೆಯ ಮೇಲೆ ಹಿಡಿಯುತ್ತಿರುವ ಮಗುವಿನ ಚಿತ್ರವಿತ್ತು, ಆದರೆ ಕೆಲವರ ಅಭಿಪ್ರಾಯದಂತೆ ಅದು ಸುಟ್ಟ ತೊಟ್ಟಿಯಿಂದ ಏರುತ್ತಿರುವ ಬೂದಿಯೆಂದು ಬಹಿರಂಗವಾಯಿತು. ಇದರ ಸಂಕೇತವನ್ನು ಪಟ್ಟಣದ ನಿವಾಸಿಗಳು ವಿಭಿನ್ನವಾಗಿ ಅರ್ಥೈಸಿದ್ದಾರೆ—ಕೆಲವರು ಇದನ್ನು ಪೋರ್ಟ್ ಟಾಲ್ಬಾಟ್ನ ಮಾಲಿನ್ಯದ ಮೇಲೆ ಟೀಕೆ ಎಂದು ನೋಡುತ್ತಾರೆ, ಇನ್ನು ಕೆಲವರು ಇದನ್ನು ಉಕ್ಕಿನ ಕಾರ್ಖಾನೆಯೊಂದಿಗೆ ಪಟ್ಟಣದ ಸಂಬಂಧದ ಸಿಹಿಕಹಿ ರೂಪಕವೆಂದು ಪರಿಗಣಿಸುತ್ತಾರೆ.
ಒಮ್ಮೆ ಗಣಿಗಾರಿಕೆಯ ಕೇಂದ್ರವಾಗಿದ್ದ ಮತ್ತು ಈಗ ಕೈಗಾರಿಕಾ ಪಟ್ಟಣವಾಗಿರುವ ಪೋರ್ಟ್ ಟಾಲ್ಬಾಟ್ನಿಂದ ನಿರಂತರ ಪ್ರತಿಭೆಗಳು ಹೊರಬಂದಿವೆ.
—ಶಾಲಿನಿ ಜ್ಞಾನಸುಬ್ರಹ್ಮಣಿಯನ್

ಶ್ರೀವತ್ಸ ದೇಸಾಯಿ ತಮ್ಮ ವೇಲ್ಸ್ ನೆನಪುಗಳನ್ನು ಜೋಡಿಸುತ್ತಾರೆ.
ನಾನು ಈ ದೇಶದ ಮಣ್ಣಿನ ಮೇಲೆ ಕಾಲಿಟ್ಟದ್ದು 1974 ರಲ್ಲಿ ಆಗಸ್ಟ್ ತಿಂಗಳ ಮೊದಲ ವಾರ. ಮಾಡ್ ಕವಿಡ್ ಆಕಾಶ ಜಿಟಿ ಜಿಟಿ ಮಳೆ. ಧಾರವಾಡದ ಶ್ರಾವಣವನ್ನು ನೆನೆಯುತಿತ್ತು ಮನ. ಎಲ್ಲೆಡೆ ಹಸಿರು ಹುಲ್ಲು. ನಾನು ಮೊದಲು ಕಂಡ ನ್ಯೂಪೋರ್ಟ್, ಕಾರ್ಡಿಫ್ ಗಳು ದಕ್ಷಿಣ ವೇಲ್ಸ್ ಪ್ರಾಂತದಲ್ಲಿವೆ. ನಾನು ಭೇಟಿಯಾದ ಎಳೆದೆಳೆದು ಇಂಗ್ಲಿಷ್ ಮಾತಾಡುವ ವೆಲ್ಶ್ ಜನರ ಮಾತಿನಲ್ಲಿlilt ಒಂದು ತರದ ಲಯ. ಅಂದು ಎಲ್ಲೆಡೆಗೆ eisteddfod (ಐಸ್ಟೆಡ್ವಡ್) ಎನ್ನುವ ವೆಲ್ಶ್ ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದ ಪ್ರಚಾರ, ಉತ್ಸಾಹ. ಆ ಭಾಷೆಯನ್ನಾಡುವ ಸುಪ್ರಸಿದ್ಧ ಸಾಹಿತಿ, ಸಂಗೀತ, ಕಲಾಕಾರರ ಕೂಟ. ಸ್ಫರ್ಧೆಗಳು, ಕವನಗೋಷ್ಠಿ, ಇತ್ಯಾದಿ. ಹೆಮ್ಮೆಯ ಪುತ್ರ ರಿಚರ್ಡ್ ಬರ್ಟನ್ ಸಹ ಹುಡುಗರ ಸೊಪ್ರಾನೊ ಹಾಡುಗಾರಿಕೆಯಲ್ಲಿ ಗೆದ್ದಿದ್ದ. ಆತನ ದನಿ ಸುಪ್ರಸಿದ್ಧ.ಇಂದಿಗೂ ಸಹ ವೇಲ್ಸ್ನಲ್ಲಿ ಹುಟ್ಟಿದ ಶ್ರೇಷ್ಠ ಕವಿ ಡಿಲನ್ ಥಾಮಸ್ಸನ ರೇಡಿಯೋ ನಾಟಕ 'ಅಂಡರ್ ಮಿಲ್ಕ್ ವುಡ್ 'ನ ಆತನ ವಾಚನವನ್ನು Voice of Wales: mellifluous, baritone, ಎಂದು ಕರೆದು ಪದೇ ಪದೇ ಕೇಳಲಾಗುತ್ತದೆ, ಬಿತ್ತರಿಸಲಾಗುತ್ತದೆ. (ಮೇಲಿನ ಚಿತ್ರ ನೋಡಿರಿ.)
ನಾನು ಕಾಲೇಜಿನಲ್ಲಿದ್ದಾಗ ರಿಚರ್ಡ್ ಬರ್ಟನ್ ಮತ್ತು ಎಲಿಝಬೆತ್ ಟೇಲರ್ ಯಾವಾಗಲೂ ಸುದ್ದಿಮಾಡುತ್ತಿದ್ದರು; ಅವರ ಸಿನಿಮಾಗಳು ಅಥವಾ ವೈಯಕ್ತಿಕ ವಿಷಯಗಳು ಯಾವಾಗಲೂ ಹಾಲಿವುಡ್ ಮಸಾಲೆಯನ್ನು ಹಂಡೆ ಗಟ್ಟಲೆ ನೀಡುತ್ತಿದ್ದವು. ಆಕೆಯ 7 ಗಂಡಂದಿರು, ಈತನಿಗೆ ಮೂವರು ಹೆಂಡತಿಯರು ಇತ್ಯಾದಿ. ಮೊದಲ ಸಲ ಇವರಿಬ್ಬರು ಮದುವೆಯಾದಾಗ ಆಕೆಯ ಐದನೆಯವನು, ಈತನ ಎರಡನೆಯವಳು ಇತ್ಯಾದಿ. ಡಿವೋರ್ಸ್ ಮಾಡಿದ ಒಂದು ವರ್ಷದಲ್ಲಿ ಮರುಮದುವೆ, ಇತ್ಯಾದಿ. ಕ್ಲಿಯೋಪಾತ್ರಾ ಸಿನಿಮಾ ಅಲ್ಲಿಯವರೆಗಿನ ಅತ್ಯಂತ ಅಧಿಕ ವೆಚ್ಚದ ಯೋಜನೆಯಾಗಿತ್ತು. ರಿಚರ್ಡ್ಗೆ ಅದರಲ್ಲಿ ಮಾರ್ಕ್ ಆಂಥನಿ ಪಾತ್ರ. ಸತ್ಯವೋ ಮಿಥ್ಯವೋ ರಾಣಿ ಕ್ಲಿಯೋಗೆ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುವ ರೂಢಿ ಇತ್ತಂತೆ. ಅದು ಚರ್ಮಕ್ಕೆ ಪೋಷಕ ಎಂದು ಆಕೆಯ ನಂಬಿಕೆ. ಆ ದೃಶ್ಯದ ಚಿತ್ರಣಕ್ಕೆ ಸ್ನಾನದ ಟಬ್ ತುಂಬಲು ನೂರಾರು ಹಾಲು ಕೊಡುವ ಗಾರ್ಧಭಗಳನ್ನು ರೋಮ್ ನಗರದಲ್ಲಿ ಎಲ್ಲಿಂದ ಹಿಡಿದು ತರುವುದು? ಕೊನೆಗೆ ಕೃತಕ ಹಾಲನ್ನು ಉಪಯೋಗಿಸಲಾಯಿತು. ಕೆಲವಷ್ಟೇ ಸಿನಿಮಾ ಸಿಬ್ಬಂದಿಗಷ್ಟೇ ಶೂಟಿಂಗ್ ಸಮಯದಲ್ಲಿ ಪ್ರವೇಶ, ಒಬ್ಬ ಕುರುಡ ಕವಿ ಪಾತ್ರಧಾರಿಯನ್ನು ಹೊರತಾಗಿ. ಆಮೇಲೆ ಗೊತ್ತಾದುದು ಆತನ ಪಾತ್ರವಷ್ಟೇ ಕುರುಡು, ನಿಜವಾಗಿಯೂ ಅಲ್ಲ ಅಂತ!
ನಾನು ನಾಲ್ಕು ವರ್ಷಗಳನ್ನು ದಕ್ಷಿಣ ವೇಲ್ಸ್ ನಲ್ಲಿ ಕಳೆದಿದ್ದೇನೆ. ಅವರಿಗೆ ತಮ್ಮ ಭಾಷೆಯಲ್ಲದೆ ಮೂರು ವಿಷಯಗಳು ಅತಿಪ್ರಿಯವಾದವು - ರಗ್ಬಿ ಆಟ, ದಿನದ ದುಡಿತವಾದ ಮೇಲೆ ಪಬ್ ನಲ್ಲಿ ಭೇಟಿಯಾಗುವದು. ಅದಕ್ಕೆ ಅವರಲ್ಲಿ ಒಂದು ನಾಣ್ನುಡಿ ಇದೆ: ವಲಸೆ ಹೋದರೂನು ಮೂವರು ವೆಲ್ಷ್ ಜನ ಕೂಡಿದರೆ ಸಾಕು ಅಲ್ಲೇ ಮೂರನ್ನು ಸ್ಥಾಪಿಸಿಬಿಡುತ್ತಾರಂತೆ: ರಗ್ಬಿ ಕ್ಲಬ್ಬು, ಪಬ್ಬು ಮತ್ತು ಒಂದು ಐಸ್ಟೆಡ್ವಡ್! ಇವೆಲ್ಲವೂ ಚಿರಾಯುವಾಗಿರಲಿ!
ಶ್ರೀವತ್ಸ ದೇಸಾಯಿ
ಎರಡು ಕವಿತೆಗಳು -- ಡಾ ರಾಜಶ್ರೀ ಪಾಟೀಲ

1. ಮಿತಿಯ ಪರಿಮಿತಿ
ತಿಳಿದಿತ್ತು ಹರಿವ ನದಿ, ಸಾಗರ ಸೇರುವದೇ ಗುರಿಯೆಂದು,
ಅದಕೇನು ಗೊತ್ತಿತ್ತು ಸಾಗರದಲೆ ಸೇರುವದರೊಟ್ಟಿಗೆ,
ಅದಕುಂಟು ಮೇಘ ಕಟ್ಟುವ, ಮಳೆ ಸುರಿಸುವ ಸಾಮರ್ಥ್ಯ
ಕಣ್ಮುಚ್ಚಿ ಕಾಣುವ ಕನಸುಗಳ ನನಸಾಗಿಸುವ,
ಕೈಗೆಟುವ ಕಾರ್ಯಗಳ ಪೂರೈಸುವ ಭರದಲ್ಲಿ
ಅರಿವಾರಿಗುಂಟು ಪ್ರತಿ ಜೀವದ ಸಾಮರ್ಥ್ಯದ ಮಿತಿಯೆಲ್ಲಿ ?
ರಾಜಶ್ರೀ ಪಾಟೀಲ

2. ಅರಿವಿನ ಪರದೆ
ಅಲಂಕಾರಕ್ಕೆ ಅಟ್ಟಣಿಗೆಯಲ್ಲಿ ಅಂದ ತೋರಿಸೋ ಹಿತ್ತಾಳೆ ಚರಿಗೆ,
ದೇವರ ಕೋಣೆಯಲ್ಲಿ ದರ್ಬಾರು ನಡೆಸೋ ತಾಮ್ರದ ಚರಿಗೆ,
ಬಯಲಿನ ಬಿಸಿಲುರಿಯ ದಾಹ ನೀಗುವ ಅಡುಗೆ ಮನೆಯ ಸ್ಟೀಲಿನ ಚರಿಗೆ ,
ಬೆಳ್ಳಂಬೆಳಗ್ಗೆ ತಪ್ಪದೆ ಹಿತ್ತಲ ಪ್ರವಾಸಕ್ಕೆ ಉಪಯೋಗಿಸೋ ಪ್ಲಾಸ್ಟಿಕ್ ಚರಿಗೆ ,
ಮರೆಯದೆ ಪ್ರತಿ ಅಮವಾಸೆ, ಹುಣ್ಣಿಮೆಗೆ ಬಯಲಿನ ಜೀವಜಂತುಗಳಿಗೆ ಅವ್ವ ಕಳಿಸುವ ಚರಗದ ಮಣ್ಣಿನ ಚರಿಗೆ ,
ಬಣ್ಣ ತರಾವರಿ, ಆಕಾರ ತರಾವರಿ, ಮೈಮಾಟ ತರಾವರಿ
ಆದರೆ ಪರಿ ಪರಿಯಾಗಿ ತುಂಬಿ ನೀಡುವದಲ್ಲವೇ ಗುರಿ ?
ರಾಜಶ್ರೀ ಪಾಟೀಲ
ಹೆಸರು ಉಲ್ಲೇಖಿಸದ ಚಿತ್ರಗಳು: ಇಂಟರ್ ನೆಟ್

