ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ- ಕಾಳಿದಾಸ ರಘುವಂಶದಲ್ಲಿ. (ಜಗತ್ತಿನ ತಂದೆ ತಾಯಿಯರಾದ ಪಾರ್ವತಿ ಪರಮೇಶ್ವರರ ಕೃಪೆ ನಮ್ಮೆಲ್ಲರ ಮೇಲಿರಲಿ.) ಸಂಸ್ಕೃತ ಅಂದ ಕೂಡಲೇ ಕೆಲವರು ಅದು ಇನ್ನೂ ಪ್ರಸ್ತುತವೆ?ಸಂಸ್ಕೃತವನ್ನು ಯಾಕೆ ಕಲಿಯಬೇಕು ಎನ್ನುವ ಚರ್ಚೆಗೆ ಶುರು ಮಾಡಿಬಿಡುತ್ತಾರೆ. ಆದರೆ ಶಾಲಿನಿಯವರ ಈ ಲೇಖನದಲ್ಲಿ ತಾವು ಕಂಡ ಸಂಸ್ಕೃತ ವಿಶ್ವವಿದ್ಯಾಲಯದ ಹಸ್ತಪ್ರತಿ ಎನ್ನಿಸಿಕೊಳ್ಳುವ ತಾಳೆಗರಿ ಸಂಗ್ರಹವನ್ನು ಕಂಡು ಪುಳಕಿತರಾದ ಆ ಅನುಭವವನ್ನು ವರ್ಣಿಸುತ್ತಿದ್ದಾರೆ. ಅಲ್ಲಿಂದ ಮರಳಿ ಬಂದ ಕೂಡಲೇ ಒಂದು ಲೇಖನವನ್ನು ಬರೆದು ಕೊಡಲೇ ಎಂದು ಕೇಳಿದರು. ಅವರಿಗೆ ಮೊದಲಿನಿಂದಲೂ ಸಂಸ್ಕೃತದ ಬಗ್ಗೆ ಒಂದು ತರಹ ಪ್ರೀತಿ ಮತ್ತು ಗೌರವ. ಇತ್ತೀಚಿಗೆ ಸಂಸ್ಕೃತ ಭಾರತಿ ಎನ್ನುವ ಸಂಘಟನೆ ಸಂಸ್ಕೃತ ಸಂಭಾಷಣೆಯ ಆನ್ ಲೈನ್ ವರ್ಗಗಳನ್ನು ಅನೇಕ ದೇಶಗಳಲ್ಲಿ ಪ್ರಾರಂಭ ಮಾಡಿದೆ. ಅದನ್ನು ಹುಟ್ಟು ಹಾಕಿದವರು ಕರ್ನಾಟಕದವರೇ ಆದ ಪದ್ಮಶ್ರೀ ಜನಾರ್ಧನ ಹೆಗಡೆ ಮತ್ತು ಚ. ಮು. ಕೃಷ್ಣ ಶಾಸ್ತ್ರಿಗಳು. ಅದರ ಹೆಡ್ ಕ್ವಾರ್ಟರ್ಸ್ ದೆಹಲಿಯಲ್ಲಿದೆ. ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಯು ಕೆ ದ ಸಂಸ್ಕೃತ ಭಾರತಿ ಅಂಗ ಸಂಭಾಷಣೆ ವರ್ಗವಲ್ಲದೆ ವರ್ಷಕ್ಕೆರಡು ಸಲ ನಾಲ್ಕು ಸಂಸ್ಕೃತ ತರಗತಿಗಳಿಗೆ ಪರೀಕ್ಷೆ ಸಹ ನಡೆಸುತ್ತಿದ್ದಾರೆ. ಉತ್ಸುಕರು ಅವರ ವೆಬ್ ಸೈಟ್ ಸಂಪರ್ಕಿಸ ಬಹುದು. ಸಂಸ್ಕೃತ ಸಂಭಾಷಣೆಗೆ ಒತ್ತು ಕೊಟ್ಟು ಸಂಸ್ಕೃತ ಶಿಬಿರವೊಂದನ್ನು ಪ್ರತಿವರ್ಷ ಏಪ್ರಿಲ್ ತಿಂಗಳಿನ ಆಸು ಪಾಸಿನ ಈಸ್ಟರ್ ರಜೆಯಲ್ಲಿ ಏರ್ಪಡಿಸುತ್ತಾರೆ. (ಈ ವರ್ಷ ಮೇ ತಿಂಗಳಲ್ಲಿ.) ಎರಡು ವರ್ಷಗಳ ಕೆಳಗೆ ಅಲ್ಲಿಯೇ ನನಗೆ ಭೇಟಿ ಮಾಡಿದ್ದರು. ಕಾರ್ಡಿಫ್ನಲ್ಲಿ ತಮ್ಮ ಪತಿ ಮತ್ತು ಒಬ್ಬಳೇ ಮಗಳೊಡನೆ ವಾಸ ಮಾಡುತ್ತಿದ್ದಾರೆ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಸಂಸ್ಕೃತ ಕಲಿಯಲು ಉತ್ಸುಕರಾಗಿದ್ದರೆ ಲೇಖನದ ಕೊನೆಗೆ ಕೊಟ್ಟ ಲಿಂಕ್ ಒತ್ತಿ ಯು ಕೆ ಸಂಸ್ಕೃತ ಭಾರತಿಗೆ ಸಂಪರ್ಕಿಸ ಬಹುದು. ಪರೀಕ್ಷೆಗಳಿಗೆ ಅಭ್ಯಾಸ ಮಾಡಲು ಪುಸ್ತಕಗಳನ್ನು ಸಹ ಕೊಳ್ಳ ಬಹುದು.(-ಸಂ)
ಬೆಂಗಳೂರಿನ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯ ಒಂದು ಕಡೆ ಕನ್ನಡ ಸಾಹಿತ್ಯ ಪರಿಷತ್ತು, ಅದರ ಎದುರು ಇರುವ ವಿಶಾಲವಾದ ಆವರಣ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ್ದು. ಎಂದಾದರೂ ಹೋಗೋಣವೆಂಬ ಕುತೂಹಲಕ್ಕೆ ಬೆಂಬಲ ನೀಡಿದಂತೆ ಇತ್ತೀಚಿಗೆ ಪ್ರಚಲಿತವಾದ ಹ್ಯಾಂಡ್ಸ ಆನ್ ಫೌಂಡೇಷನ್ರವರ ಸೋಶಿಯಲ್ ಮೀಡಿಯಾದಲ್ಲಾದ ವೈರಲ್ ವಿಡಿಯೋ. ಸರಿ, ನೋಡಲೇ ಬೇಕೆಂದು ನಿಶ್ಚಯಿಸಿ ಹೊರಟೆ ಹಸ್ತಪ್ರತಿ ಸಂಗ್ರಹಾಲಯದತ್ತ. ನನಗೆ ಸಂಸ್ಕೃತ ಕಲಿಯುವ ಆಸಕ್ತಿ ಮತ್ತು ಪ್ರೀತಿ ಶಾಲಾ ದಿನಗಳ ನಂತರ ಸ್ವಲ್ಪ ತಡವಾಗಿ ಆರಂಭವಾಯಿತು. ಶಾಲೆಯಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳದಿದ್ದುದರ ಪಶ್ಚಾತ್ತಾಪವನ್ನು ನಾನು ಇಂದಿಗೂ ಹೊಂದಿರುವೆ. ತದನಂತರ ಪಂಡಿತ ಸುಧಾಕರ ಚತುರ್ವೇದಿ ಮತ್ತು ಪಂಡಿತ ಸುಧಾಕರ ಶರ್ಮ ಅವರ ವೇದ ಪ್ರವಚನಗಳನ್ನು ಕೆಲ ವರ್ಷಗಳ ಹಿಂದೆ ಕೇಳುವ ಅವಕಾಶ ನನಗೆ ದೊರಕಿತ್ತು. ಸಂಸ್ಕೃತ ವ್ಯಾಕರಣ, ಧಾತುಗಳ ಕುರಿತು ಸಹ ಪಾರ್ಶ್ವವಾಗಿ ಚರ್ಚೆ ನಡೆಯುತ್ತಿತ್ತು. ಆದರೂ ಅನೇಕ ವರ್ಷಗಳ ನಂತರವೂ, ನಾನು ಅದೇ ವಲಯದಲ್ಲಿ ಸುತ್ತುತ್ತಿರುವೆ ಅಂದುಕೊಳ್ಳುತ್ತೀನಿ. ಇತ್ತೀಚೆಗೆ ನಾನು ಬೆಂಗಳೂರಿಗೆ ಹೋದಾಗ ಒಂದು ಸಂಜೆ ನಾನು ಅಲ್ಲಿ ತಲುಪುವಷ್ಟರಲ್ಲಿ ತಡವಾದರೂ ಸಹ ಕಾರ್ಯಾಲಯದಲ್ಲಿದ್ದ ಉನ್ನತ ಅಧಿಕಾರಿಯವರು ಮಂದಸ್ಮಿತರಾಗಿದ್ದರು. "ಮ್ಯೂಸಿಯಂ ಈಗ ತಾನೇ ಮುಚ್ಚಿದೆವು. ಪರವಾಗಿಲ್ಲಾ, ದೂರದಿಂದ ಬಂದಿದ್ದೀರಿ, ತೆರೆಯುತ್ತೇವೆ, ಹೋಗಿ ನೋಡಿಕೊಂಡು ಬನ್ನಿ" ಎಂದು ಸೌಹಾರ್ದತೆಯಿಂದ ಬರಮಾಡಿಕೊಂಡರು. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದವರು ಇವರೇ ಎಂಬ ಅರಿವು ನನಗೆ ಒಂದೇ ಕ್ಷಣದಲ್ಲಿ ಉದಯಿಸಿತು- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರಾಮಕೃಷ್ಣ ಭಟ್ ಅವರು. ಸರಳವಾದ ವ್ಯಕ್ತಿತ್ವ, ಬಿಳಿ ಶರ್ಟ್ ಮತ್ತು ಧೋತಿ ಧರಿಸಿದ್ದ ಅವರನ್ನು ನೋಡುತ್ತಿದ್ದಂತೆ, ವಿದ್ಯೆಯನ್ನು ಧಾರೆ ಇರಿಸಲು ಸಿಧ್ಧರಾದ ಗುರುಗಳನ್ನು ಕಂಡಂತಾಯಿತು.
ಕೈಯಿಂದ ಬರೆಯಲ್ಪಟ್ಟ ಯಾವುದೇ ಪುಸ್ತಕ ಅಥವಾ ದಾಖಲೆಗಳನ್ನು ‘ಹಸ್ತಪ್ರತಿ’ ಅಥವಾ ‘ಪಾಂಡುಲಿಪಿ’ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಹಸ್ತಪ್ರತಿಗಳ ಪರಂಪರೆ ಅತ್ಯಂತ ಪ್ರಾಚೀನವಾಗಿದೆ. ದೇಶದ ಎಲ್ಲಾ ಭಾಗಗಳಲ್ಲಿ ಅವು ರಚಿಸಲ್ಪಟ್ಟಿದ್ದು, ಅನೇಕ ಭಾಷೆಗಳು ಮತ್ತು ಲಿಪಿಗಳಲ್ಲಿ, ಧಾರ್ಮಿಕ, ತತ್ತ್ವಶಾಸ್ತ್ರೀಯ, ಐತಿಹಾಸಿಕ, ಸಾಹಿತ್ಯಿಕ ಹಾಗೂ ವೈಜ್ಞಾನಿಕ ವಿಷಯಗಳ ವಿಶಾಲ ವ್ಯಾಪ್ತಿಯನ್ನು ಒಳಗೊಂಡಿವೆ. ಭಾರತ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕ್ರಿಸ್ತಪೂರ್ವ 5ನೇ ಶತಮಾನದಿಂದಲೂ, ಮತ್ತು ಬಹುಶಃ ಅದಕ್ಕೂ ಮುಂಚೆಯೇ, ತಾಳೆಗರಿಗಳನ್ನು (Palm leaf; botanical name Borassus flabellifer) ಬರವಣಿಗೆ ಸಾಮಗ್ರಿಗಳಾಗಿ ಬಳಸಲಾಗುತ್ತಿತ್ತು. ದಕ್ಷಿಣ ಭಾರತದಲ್ಲಿ ತಾಳೆಗರಿಗಳನ್ನು ಬರವಣಿಗೆಯ ವಸ್ತುವಾಗಿ ಬಳಸಲಾಗುತ್ತಿತ್ತು; ಉತ್ತರ ಭಾರತದಲ್ಲಿ ಭೂರ್ಜಪತ್ರವೂ(bark of the Himalayan birch tree; botanical name Betula utilis) ವ್ಯಾಪಕವಾಗಿ ಬಳಕೆಯಲ್ಲಿತ್ತು. ಈ ಕಾರಣದಿಂದ, ಈ ಬರಹದಲ್ಲಿ ನಾನು ‘ಹಸ್ತಪ್ರತಿ’ ಮತ್ತು ‘ತಾಳೆಗರಿ’ ಪದಗಳನ್ನು ಪರಸ್ಪರ ಬದಲಾಯಿಸಿಕೊಂಡು ಬಳಸಿದ್ದೇನೆ. ಈ ತಾಳೆಗರಿಗಳು ವೈಶಿಷ್ಟ್ಯಪೂರ್ಣ. ಅವು ವಿವಿಧ ನಾಗರಿಕತೆಗಳ ಅಸ್ತಿತ್ವದ ಬಗ್ಗೆ ಮಾಹಿತಿಯನ್ನು ನೀಡುವುದರ ಜೊತೆಗೆ ಅವುಗಳ ಉಳಿವಿನ ಮಹತ್ವವನ್ನೂ ಒತ್ತಿ ಹೇಳುತ್ತವೆ. ಭಾರತೀಯ ಸಂಸ್ಕೃತಿಯ ಅದ್ಭುತ ವಿವರಗಳು ಈ ಪ್ರಾಚೀನ ತಾಳೆಗರಿಗಳಲ್ಲಿ ಅಡಗಿದೆ. ಇವುಗಳಿಂದ ಆ ಕಾಲದ ಸಂಸ್ಕೃತಿ ಬರವಣಿಗೆಯನ್ನು ತಿಳಿಯಬಹುದು. ಭಾರತವು ವಿಶ್ವದಲ್ಲೇ ಅತಿ ದೊಡ್ಡ ಹಸ್ತಪ್ರತಿ ಪರಂಪರೆಯನ್ನು ಹೊಂದಿದೆ. ಪ್ರಾಚೀನ ಭಾರತದ ಬರವಣಿಗೆಯ ಮೊದಲ ಭೌತಿಕ ಸಾಕ್ಷ್ಯ ಅಶೋಕನ ಶಾಸನಗಳಿಂದ ದೊರಕಿದ್ದು, ಅವು ಕ್ರಿ.ಪೂ. 3ನೇ ಶತಮಾನಕ್ಕೆ ಸೇರಿವೆ. ದಕ್ಷಿಣ ಭಾರತದಲ್ಲಿ ತಾಳೆ ಎಲೆಗಳ ಬಳಕೆ ಕ್ರಿ.ಪೂ. 5ನೇ ಶತಮಾನದಿಂದಲೇ ಆರಂಭವಾಗಿ, 19ನೇ ಶತಮಾನವರೆಗೆ ಮುಂದುವರಿದು, ನಂತರ ಮುದ್ರಣ ಪದ್ಧತಿಯಿಂದ ಬದಲಾಗಿತು. ಗ್ರಂಥಿ, ದೇವನಾಗರಿ, ನಂದನಾಗರಿ ಮುಂತಾದ ಅನೇಕ ಲಿಪಿಗಳಲ್ಲಿ ಮತ್ತು ಹಲವು ಭಾಷೆಗಳಲ್ಲಿ ಬರೆಯಲ್ಪಟ್ಟ ಹಸ್ತಪ್ರತಿಗಳ ಅತಿ ದೊಡ್ಡ ಸಂಗ್ರಹ ಭಾರತದಲ್ಲಿದೆ.
ಸಂಸ್ಕೃತ ಭಾಷೆಗೆ ಮೂಲತಃ ಸ್ವಂತ ಲಿಪಿ ಇರಲಿಲ್ಲ, ಏಕೆಂದರೆ ಅದು ಸಂಪೂರ್ಣವಾಗಿ ಮೌಖಿಕ ಪರಂಪರೆಯಲ್ಲೇ ಮಾತನಾಡಲ್ಪಡುತ್ತಿತ್ತು. ನಂತರ ಅದು ಬರವಣಿಗೆಯಲ್ಲಿ ಬಳಸಲ್ಪಟ್ಟಾಗ, ಪ್ರಾದೇಶಿಕ ಲಿಪಿಕಾರರು ಬಳಸುತ್ತಿದ್ದ ಲಿಪಿಗಳನ್ನೇ ಬಳಸಲಾಯಿತು. ಇಂದಿನ ಬಹುತೇಕ ಲಿಪಿಗಳು, ದೇವನಾಗರಿಯನ್ನು ಸೇರಿಸಿ, ಬ್ರಾಹ್ಮಿ ಲಿಪಿಯಿಂದ ವಂಶವಾಹಿಗಳಾಗಿವೆ. ಬ್ರಾಹ್ಮಿ ಲಿಪಿಯನ್ನು ಸಂಸ್ಕೃತ ಮತ್ತು ಸ್ಥಳೀಯ ಪ್ರಾಕೃತ ಭಾಷೆಗಳಿಗಾಗಿ ಬಳಸಲಾಗುತ್ತಿತ್ತು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದ ಎರಡನೇ ಮಹಡಿಯಲ್ಲಿ ಹಸ್ತಪ್ರತಿ ಸಂಗ್ರಹಾಲಯವಿದೆ. ಸಂಗ್ರಹಾಲಯವು 13 ಆಗಸ್ಟ್ 2025 ರಂದು ಸಾರ್ವಜನಿಕರಿಗೆ ತನ್ನ ಬಾಗಿಲುಗಳನ್ನು ತೆರೆಯಿತು. ಏನಿದು ಕರ್ನಾಟಕದ ಏಕೈಕ ಹಸ್ತಪ್ರತಿ ಮೂಸಿಯಮ್ ಅಂದರೆ, ಎಷ್ಟು ಹಳೆಯದ್ದು ಈ ಹಸ್ತಪ್ರತಿಗಳು, ಎಲ್ಲಿಂದ ದೊರಕಿವೆ? ಹೀಗೆ ಎಷ್ಟೊಂದು ಪ್ರಶ್ನೆಗಳು ನನ್ನ ಮನದಲ್ಲಿ! ಭಾರಿ ಕುತೂಹಲ. ಮೆಟ್ಟಿಲಿನ ಬಳಿಯಲ್ಲಿ ಸ್ಥಾಪಿತಳಾದ ಶಾರದಾ ದೇವಿಯ ಪ್ರತಿಮೆಗೆ ಪ್ರಣಾಮ ಸಲ್ಲಿಸಿ, ಎರಡನೇ ಮಹಡಿಗೆ ನಡೆದು ಹೋದೆವು. ಸಂಗ್ರಹಾಲಯದ ಗೋಡೆಗಳು ಕಲಾಕೃತಿಗಳಿಂದ ಅಲಂಕರಿಸಲ್ಪಟ್ಟಿದ್ದವು. ಪ್ರತಿಯೊಂದು ಅಕ್ಷರಕ್ಕೂ ಸಂಬಂಧಿತ ಪ್ರತ್ಯೇಕ ದೇವತೆ ಇದ್ದಾರೆ ಎಂದು ಡಾ. ಭಟ್ ವಿವರಿಸಿದರು (ಚಿತ್ರಗಳಲ್ಲಿ ತೋರಿಸಿದಂತೆ). ವಿವಿಧ ಉದ್ದ ಮತ್ತು ಗಾತ್ರಗಳ ತಾಳೆಗರಿಗಳು ಮರದ ಫಲಕಗಳ ನಡುವೆ ಹಿಡಿದಿಟ್ಟುಕೊಂಡು, ಕೆಂಪು ರೇಷ್ಮೆ ಬಟ್ಟೆಯಲ್ಲಿ ಸುವ್ಯವಸ್ಥಿತವಾಗಿ ಹೊದಿಸಿ ಕೊಠಡಿಯಾದ್ಯಂತ ಅಳವಡಿಸಲಾಗಿದ್ದವು. ಕೆಂಪು ಬಟ್ಟೆಯು ತಾಳೆಗರಿಗಳಿಗೆ ಬೆಳಕು ಮತ್ತು ಉಷ್ಣದಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.
ಸಂಗ್ರಹಾಲಯದಲ್ಲಿ ಸುಮಾರು 500 ವರ್ಷ ಹಳೆಯದಾದ ತಾಳೆಗರಿಗಳಿವೆ, ಮತ್ತು ಇಲ್ಲಿ ಶ್ರೀರಾಮನ ಜನನದ ವಿವರಗಳನ್ನೂ ಚರ್ಚಿಸಲಾಗುತ್ತಿದೆ. ಅಂಗೈಗಿಂತಲೂ ಚಿಕ್ಕದಾದ ಒಂದು ತಾಳೆಗರಿಯೂ ಇದೆ ಎಂದು ಡಾ. ಭಟ್ ತಿಳಿಸಿದರು. ಉದಾಹರಣೆಯಾಗಿ ಕೆಲವು ತಾಳೆಗರಿಗಳನ್ನು ತೋರಿಸುತ್ತಾ, ಅತಿ ಸೂಕ್ಷ್ಮವಾದ ಅಕ್ಷರಗಳಲ್ಲಿ ಎಷ್ಟು ಜ್ಞಾನವನ್ನು ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.
ಚಿತ್ರಣವಿಲ್ಲದ ತಾಳೆಗರಿಗಳು ಕ್ಯಾಲಿಗ್ರಫಿಕ್ ಶೈಲಿಯಲ್ಲಿದ್ದು, ಅಲಂಕಾರಿಕ ಅಕ್ಷರಗಳು ಚಿತ್ರಗಳಾಗಿ ರೂಪಾಂತರಗೊಳ್ಳುವಷ್ಟು ಸುಂದರವಾಗಿದ್ದವು. ಕೆಲವು ತಾಳೆಗರಿಗಳಲ್ಲಿ ಕೈಯಿಂದಲೇ ಅಳತೆಯಂತೆ ಬಿಡಿಸಿದ ರೇಖಾಗಣಿತ ಆಕೃತಿಗಳಂತಹ ಸೂಕ್ಷ್ಮ ಚಿತ್ರಗಳೂ ಕಂಡುಬಂದವು. ಬರಹ ಸಣ್ಣದಾಗಿದ್ದರೂ ಅತ್ಯಂತ ಸ್ವಚ್ಛವಾಗಿತ್ತು, ಮತ್ತು ಪದಗಳ ಹಾಗೂ ಸಾಲುಗಳ ನಡುವಿನ ಅಂತರವು ನಿಖರತೆಯ ಪ್ರತಿರೂಪವಾಗಿತ್ತು. ಯಾವುದೇ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಬರೆಯಲ್ಪಟ್ಟಿದ್ದರೂ, ನಮ್ಮ ಪೂರ್ವಜರು ಕ್ಯಾಲಿಗ್ರಫಿ ಮತ್ತು ರೇಖಾಗಣಿತದ ಕಲೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದರು ಎಂಬುದು ಸ್ಪಷ್ಟವಾಗಿತ್ತು. ಪುರಾಣಗಳಿಂದ ಆಯುರ್ವೇದ, ರಸಾಯನಶಾಸ್ತ್ರ, ಭೌತಶಾಸ್ತ್ರ, ಹಾಗು ವಿಮಾನಶಾಸ್ತ್ರದವರೆಗೂ—ಪಾಠಪುಸ್ತಕಗಳು ಬರೆಯುವ ಶತಮಾನಗಳ ಹಿಂದೆಯೇ—ಎಲ್ಲವನ್ನೂ ಈ ಹಸ್ತಪ್ರತಿಗಳು ದಾಖಲಿಸಿವೆ. ಇವೆಲ್ಲವೂ ಈಗ ವಿದ್ಯಾರ್ಥಿಗಳು ಮತ್ತು ಪಂಡಿತರಿಗಾಗಿ ಲಭ್ಯವಾಗಿವೆ. ಸುಮಾರು 10,000 ಪದಗಳನ್ನು ಹೊಂದಿರುವ ಒಂದು ಚಿಕ್ಕ ಹಸ್ತಪ್ರತಿ ಮುದ್ರಿಸಿದರೆ ಮಧ್ಯಮ ಗಾತ್ರದ ಪುಸ್ತಕವಾಗಬಹುದು ಎಂದು ಡಾ. ಭಟ್ ವಿವರಿಸಿದರು. ಇಷ್ಟು ಜ್ಞಾನವನ್ನು ಈ ತಾಳೆ ಗರಿಗಳಲ್ಲಿ ಸಂಗ್ರಹಿಸಲಾಗಿತ್ತು. ಸಾವಿರಾರು ನಾಜೂಕಾದ ಪುಟಗಳು ಮರೆತುಹೋದ ವಿಜ್ಞಾನ ವನ್ನು, ಕಥೆಗಳನ್ನು ಹೊರತರುತ್ತವೆ.
ಡಾ. ರಾಮಕೃಷ್ಣ ಭಟ್ಅವರು ಬ್ರಾಹ್ಮಿ, ಶಾರದಾ, ಗ್ರಂಥ, ನಂದಿನಾಗರಿ ಮುಂತಾದ ಪ್ರಾಚೀನ ಭಾರತೀಯ ಲಿಪಿಗಳಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ಶಾಸ್ತ್ರಪಠಣದಲ್ಲಿ ನಿಪುಣರು. ವಿಶ್ವವಿದ್ಯಾಲಯದಲ್ಲಿ ಇಷ್ಟು ಹಳೆಯ ತಾಳೆಗರಿಗಳನ್ನು ಹೇಗೆ ಓದಿ ಅರ್ಥೈಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುವ ಉದಾಹರಣೆಯಾಗಿ ಅವರು ಲಿಪಿಗಳ ವಿಕಾಸವನ್ನು ನಮಗೆ ವಿವರಿಸಿದರು.
ವಿಶ್ವವಿದ್ಯಾಲಯದ ಧ್ಯೇಯ ಹಸ್ತಪ್ರತಿಗಳನ್ನು ಪುನರುಜ್ಜೀವನಗೊಳಿಸಿ, ಭವಿಷ್ಯದ ಪೀಳಿಗೆಗಳಿಗೆ ಅವುಗಳನ್ನು ಲಭ್ಯವಾಗುವಂತೆ ಮಾಡುವುದಾಗಿದೆ. ನೂರಾರು ತಾಳೆಗರಿಗಳು ಈಗಾಗಲೇ ಪುನರುಜ್ಜೀವನಗೊಂಡು ಸಂಗ್ರಹಾಲಯದ ಪುಸ್ತಕ ಸಂಚಯದಲ್ಲಿ ತಮ್ಮ ಸ್ಥಾನ ಪಡೆದಿವೆ. ಸಾಕ್ಷ್ಯವನ್ನು ಕಂಡು ನಂಬುವ ಈ ಪೀಳಿಗೆಯ ಯುವಕರಿಗೆ, ನಮ್ಮ ನಾಗರಿಕತೆಯ ಅಮೂಲ್ಯ ಸಂಪತ್ತನ್ನು ಅರಿಯಲು ಈ ಸಂಗ್ರಹಾಲಯ ಸೂಕ್ತ ಸ್ಥಳ. ಮುಂದಿನ ಬಾರಿ ಕುಟುಂಬದೊಂದಿಗೆ ಬೆಂಗಳೂರಿಗೆ ಬರುವಾಗ, ಈ ಸ್ಥಳವನ್ನು ತಪ್ಪದೇ ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.
ಹಸ್ತಪ್ರತಿಗಳು ಭೂತಕಾಲದ ಅವಶೇಷಗಳಷ್ಟೇ ಅಲ್ಲ, ಭವಿಷ್ಯಕ್ಕೆ ದಾರಿದೀಪಗಳೂ ಆಗಿವೆ ಎಂಬುದನ್ನು ಒತ್ತಿ ಹೇಳುತ್ತಾ, ಭಾರತ ಸರ್ಕಾರವು ಜ್ಞಾನ ಭಾರತಂ ಯೋಜನೆಯನ್ನು 2025ರಲ್ಲಿ ಜಾರಿಗೊಳಿಸಿತು. ಈ ಯೋಜನೆ ದೇಶದಾದ್ಯಂತ—ಖಾಸಗಿ ಸ್ವಾಮ್ಯದಲ್ಲಿರುವವುಗಳನ್ನು ಸಹ ಒಳಗೊಂಡಂತೆ—ಹಸ್ತಪ್ರತಿಗಳ ಸಮಗ್ರ ಸಮೀಕ್ಷೆ, ಡಿಜಿಟೈಜೇಶನ್ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿದೆ. ಒಟ್ಟು 1 ಕೋಟಿ ಹಸ್ತಪ್ರತಿಗಳನ್ನು ಡಿಜಿಟೈಸ್ ಮಾಡುವ ಗುರಿಯನ್ನು ಇದು ಹೊಂದಿದೆ. ನಿಮ್ಮ ಮನೆಯಲ್ಲಿ ಧೂಳು ಹಿಡಿದು ಬಿದ್ದಿರುವ ಹಳೆಯ ಮನುಸ್ಕ್ರಿಪ್ಟ್ ಇದೆಯೇ? ಹಾಗಿದ್ದರೆ ಅದನ್ನು ಇಲ್ಲಿ ತಂದುಕೊಡಿ — ಅದನ್ನು ಸಂರಕ್ಷಿಸಿ, ನೋಡಿಕೊಳ್ಳಲಾಗುತ್ತದೆ.
ತಾಳೆಗರಿಗಳ ಲೋಕದ ಬಗ್ಗೆ ಏನು ಅರಿಯದ ನನಗೆ, ಅದರಲ್ಲಿ ಆಸಕ್ತಿ ಮೂಡಿಸಿ, ತಮ್ಮ ಸಮಯ ಮತ್ತು ಶ್ರಮವನ್ನು ಹಂಚಿಕೊಂಡ ಡಾ. ಭಟ್ ಅವರಿಗೆ ನಾವು ಧನ್ಯವಾದ ತಿಳಿಸಿ, ಅಲ್ಲಿಂದ ಹೊರಟೆವು. ಹೊರಟಿದ್ದೇ ತಡ, ಒಂದು ಹಾಡು ನನ್ನ ಮನಸ್ಸಿನಲ್ಲಿ ಮೃದುವಾಗಿ ಮೂಡಿಬಂದಿತು- ಪೂಜ್ಯ ಸ್ವಾಮಿ ದಯಾನಂದ ಸರಸ್ವತಿ ಅವರು ರಚಿಸಿದ:
ಭಾರತ ದೇಶ ಹಿತಾಯ ಭರತಾದಿ ಮಹಾಮತಿ ಸೇವಿತ ಕುರು ಸೇವಾಂ ತ್ವಂ
ಲೇಖನ ಮತ್ತು ಫೋಟೋಗಳು: ಶಾಲಿನಿ ಜ್ಞಾನಸುಬ್ರಹ್ಮಣಿಯನ್, ಕಾರ್ಡಿಫ್
ಪ್ರಥಮ ಫೋಟೋ: ಬ್ರಾಹ್ಮಿ ಲಿಪಿಯ ರೂಪಾಂತರ ಕೊನೆಯ ಸಾಲಿನಲ್ಲಿ: ಪ್ರತಿ ಅಕ್ಷರಕ್ಕೊಬ್ಬ ದೇವತೆ
ಈ ವಾರದ ಪ್ರಸ್ತುತಿ ಅಪರೂಪದ ವಸುಧೇಂದ್ರ ಬಂಪರ್ ಸಂಚಿಕೆ! ಕಳೆದ ಮಾರ್ಚ್ ೧೫ನೆಯ ತಾರೀಕು (೨೦೨೫) ’ಅನಿವಾಸಿ’ಯ ಓದುಗರು, ಬರಹಗಾರರು ಮತ್ತು ಕನ್ನಡ ಸಾಹಿತ್ಯಾಸಕ್ತರು ಹಲವರು ಇಂಗ್ಲೆಂಡಿನ ಲಿಂಕನ್ ನಗರದ ಸಮೀಪದ ಸ್ಕೆಲ್ಲಿಂಗ್ಥಾರ್ಪ್ದಲ್ಲಿಯ ಸಾಹಿತಿ-ಬರಹಗಾರ್ತಿ ಡಾ ಪ್ರೇಮಲತ ಅವರ ಮನೆಯಲ್ಲಿ ವಸುಧೇಂದ್ರ ಅವರ ಭೇಟಿಗೆ ಉತ್ಸಾಹದಿಂದ ನೆರೆದಿದ್ದರು. ಅವರೊಡನೆ ನಾಲ್ಕು ತಾಸುಗಳಿಗಿಂತ ಹೆಚ್ಚು ಕಾಲ ಕಳೆದ ಸಮಯವನ್ನು ತಮ್ಮ ಜೀವನದ ಅವಿಸ್ಮರಣೀಯ ಘಳಿಗೆಗಳು ಅಂತ ತಿಳಿದುಕೊಂಡರು. ಇನ್ನುಳಿದವರಿಗೆ ಏನು ಮಿಸ್ಸಾಯಿತು ಎನ್ನುವದರ ಒಂದೆರಡು ಝಲಕ್ಕುಗಳನ್ನು ಅಲ್ಲಿ ನೆರೆದಿದ್ದವರಲ್ಲಿ ಕೆಲವರು ಕೆಳಗೆ ಹಂಚಿಕೊಂಡಿದ್ದಾರೆ. ಮೊದಲನೆಯದಾಗಿ ಶ್ರೀವತ್ಸ ದೇಸಾಯಿಯವರು ಸಭೆಗೂ ಮುಂಚೆಯ ತಮ್ಮ ಅನುಭವದ ಬಗ್ಗೆ ಪೀಠಿಕೆಯ ರೂಪದಲ್ಲಿ ಬರೆದಿದ್ದಾರೆ. ಅದಾದ ಮೇಲೆ ಆ ಸಭೆಯ ಕಾರ್ಯಕಲಾಪಗಳ ಬಗ್ಗೆ ಶ್ರೀಮತಿ ಅನುರಾಧ ಜಗಲೂರು ಅವರ ಅನಿಸಿಕೆಗಳನ್ನು ಸುಂದರವಾಗಿ ಮತ್ತು ಸವಿಸ್ತಾರವಾಗಿ ಬರೆದಿದ್ದಾರೆ. ಡಾ ಪ್ರೇಮಲತಾ ಬಿ ಅವರು ತಮ್ಮ ಫೇಸ್ ಬುಕ್ ಲೇಖನವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಆಮೇಲೆ ವಸುಧೆಂದ್ರ ಅವರ ಪುಸ್ತಕದ ತಮ್ಮ ಕಾಪಿಯ ಮೇಲೆ ಹಸಹಿ ಗಿಟ್ಟಿಸಿದ ಖುಷಿಯಲ್ಲಿ ಒಂದು ಚಿಕ್ಕ ಲೇಖನದಲ್ಲಿ ತಮ್ಮ ಅನಿಸಿಕೆಗಳನ್ನು ಮೊದಲ ಬಾರಿ ಬರೆದಿದ್ದಾರೆ ಲೆಮಿಂಗ್ಟನ್ ಸ್ಪಾದ ಅಮಿತ್ ರಾಮ್. ಅವರ ಲೇಖನದಲ್ಲಿ ಕಟ್ಟ ಕಡೆಯ ವಿಡಿಯೋದ ಉಲ್ಲೇಖವಿದೆ. ಕೊನೆಯ ಲೇಖನ ತಮ್ಮ ಕೆಲಸ ಮುಗಿಸಿ ಡಾರ್ಬಿಯಿಂದ ತಡವಾದರೂ ಬಂದು ಕೂಡಿದ ರಾಂಶರಣ್ ಅವರದು.. ಎಲ್ಲರ ಲೇಖನದಲ್ಲೂ ವಸುಧೇಂದ್ರ ಅವರ ಅತಿ ಸರಳ ವ್ಯಕ್ತಿತ್ವದ ಪರಿಚಯ, ಆತ್ಮೀಯತೆ ಇವುಗಳ ಉಲ್ಲೇಖವಿದೆ. ಅದು ಸಾಕಾಗದಿದ್ದರೆ ಕೊನೆಯಲ್ಲಿ ಕೊಟ್ಟ ಗ್ಯಾಲರಿ ಫೋಟೋಗಳನ್ನು ನೋಡಿ ಭೇಟಿಯಾಗಲು ಸಾಧ್ಯವಾಗದವರು ಸಮಾಧಾನ ಪಟ್ಟುಕೊಳ್ಳ ಬಹುದು. ಕೊನೆಯದಾಗಿ ನಿಮ್ಮ ಅನಿಸಿಕೆಗಳನ್ನು ಅನಿವಾಸಿಯಲ್ಲಿ ಹಂಚಿಕೊಂಡು ಉಪಕಾರ ಮಾಡಿರಿ!(ಸಂ)
1 ಸಭೆಗೂ ಮೊದಲು — ಶ್ರೀವತ್ಸ ದೇಸಾಯಿ ಬರೆಯುತ್ತಾರೆ:
"ಶನಿವಾರ ೧೨ ಗಂಟೆಗೇ ಬಂದುಬಿಡಿ," ಅಂತ ಪ್ರೇಮಲತಾ ಹೇಳಿದ್ದರಿಂದ ಶನಿವಾರ ೧೫ ನೆಯ ಮಾರ್ಚ್ ಲೆಸ್ಟರಿನಿಂದ ಬೇಗನೆ ಹೊರಟೆ. ಮಧ್ಯದಲ್ಲಿ ನಿಂತು ಪುಷ್ಪ, ತೀರ್ಥ ( ಪ್ರೊಸೆಕ್ಕೋ) ಧೂಪ ಇಲ್ಲ(ಧೂಮ್ರಪಾನವರ್ಜ್ಯ!) ಚಾಕಲೇಟು ಕಾರಿನಲ್ಲಿ ಹೇರಿದ್ದಕ್ಕೆ ಸ್ವಲ್ಪ ತಡವಾದರೂ ಇನ್ ಟೈಮ್ ಅನ್ಕೋತ ಹೊರಟವನಿಗೆ ಎಚ್ಚರಿಕೆ ಬಂತು ಕಾರಿನಿಂದ: ಡ್ಯಾಶ್ ಬೋರ್ಡ್ ಮೇಲೆ 'ಪಿಂಗ್' ಆತು ಕಾರಿನ ಮೆಸೇಜ್ಜ್: ಚೆಕ್ ಟೈರ್ ಪ್ರೆಶರ್ ಅಂತ. ಬ್ಲಡ್ ಪ್ರೆಶರ್ ಇನ್ನಷ್ಟು ಏರಿದ್ದು ನನಗೇ! ಮೊನ್ನೆ ತಾನೇ ಇನ್ನೊಂದು ಟಯರಿಗೆ ಚುಚ್ಚಿದ್ದ ಮೊಳೆ ಕಿತ್ತಿಸಿ ರಿಪೇರ್ ಮಾಡಿಸಿದ್ದೆ. ಇದೇನಪ್ಪಾ ಮತ್ತೆ ಅಂತ ಫುಸ್ಸೆಂದು ಗಾಳಿ ಹೋದ ಫುಗ್ಗಾದಂತೆ ಇಳಿದುಬಿಟ್ಟೆ- wind out of my sail ತರ. ಕಂಠ(ಸ್ತ)ದಲ್ಲಿ ಪಂಪನಿರದಿದ್ದರೂ ಕಾರಿನಲ್ಲಿ ಇತ್ತೀಚಿಗೆ ಯಾವಾಗಲೂ ಇಟ್ಟಿದ್ದ ಪಂಪನಿಂದ ಟಯರ್ಗೆ ಗಾಳಿ ಹಾಕಿ ಬಚಾವಾದೆ. ಮುಂದೆ ಮತ್ತೆ ಲೀಕ್ ಕಾಣಿಸದೆ ಪ್ರೇಮಲತಾ ಅವರ ಮನೆಯನ್ನು ಸುರಕ್ಷಿತವಾಗಿ ಮುಟ್ಟಿದೆ. ಒಳೆಗೆ ಪಾರ್ಕ್ ಮಾಡುತ್ತಿದ್ದಾಗ ನನ್ನದು ಬರೀ ಮೂರನೆಯ ಕಾರು ಮಾತ್ರ ಅಂತ ಆಶ್ಚರ್ಯ! ಇನ್ನಾರೂ ಬಂದೇ ಇಲ್ಲವೇ ಅನ್ನುವಷ್ಟರಲ್ಲಿ ಎಂದಿನಂತೆ ರಿಲೈಯಬಲ್ ಸ್ಮಿತಾ ಮತ್ತು ಗೋಪಾಲ್ ಒಳಗೆ ಇದ್ದದ್ದು ಗೊತ್ತಾಯಿತು. ಸೇವರಿ ಡೋ ನಟ್ (ವಡೆ) ತಿನ್ನಲು ಆಮಿಷ ತೋರಿಸಿದರೂ ಸಂಕೋಚದಿಂದ ಬರಿ ಟೀ ಸಾಕೆಂದೆ. ಕಾಲು ಗಂಟೆ ತಡವಾಗಿತ್ತು ಆಗಲೇ ಅಂತ. ಮಲ್ಟಿಟಾಸ್ಕಿಂಗ್ ಪ್ರವೀಣೆಯಾದರೂ ನನಗೇ ಚಹಾ ಮಾಡಿಕೊಳ್ಳಲು ಹಚ್ಚಿದರು ಪ್ರೇಮಲತಾ! ತಾವೆಂದೂ ಟೀ ಕಾಫಿ ಕುಡಿಯದ 'ಟೀ ಟೋಟಲ್ಲರ್ ' ಅನ್ನುವ ರಹಸ್ಯ ಬಿಟ್ಟು ಕೊಟ್ಟ ಮೇಲೆ ಅರ್ಥವಾಯಿತು. ಅತ್ತ ಗೋಪಾಲ್ ಕಾಫಿ ಮಶೀನಿಗೆ ಕೈಹಾಕಿದ್ದರು ಅವರು ಆಗಲೇ ವಡೆ ತಿಂದಿದ್ದರೆಂದು ಹೇಳುತ್ತ. ಸನ್ನತಾ ಸಹ ಡೈನಿಂಗ್ ಟೇಬಲ್ ಮೇಲೆ. ಕೊನೆಗೆ ಕೋಲ್ಡ್ ಕಾಫಿ ಗಿಟ್ಟಿಸಿ ಸಮಾಧಾನ ಪಟ್ಟರು ಅವರು. ಆಮೇಲೆ ಶಶಿಧರ ಅವರ ಅನುಪಸ್ಥಿತಿಯಲ್ಲಿಯೂ ಅವರಿಗೆ ಬಿಸಿ ಪೇಯ ಸಿಕ್ಕಿತು ಅನ್ನಿ. ಅವರು ವಸುಧೇಂದ್ರರನ್ನು ಕರೆದು ಕೊಂಡು ಎಲ್ಲರೂ ಬರುವ ಮೊದಲು ಊರು ತೋರಿಸಲು ಹೋಗಿದ್ದರು. ಆ "ಎಲ್ಲರೂ" ಕೊನೆಗೆ ಆದದ್ದು ಅನುರಾಧ ಮತ್ತು ಹರ್ಷ ದಂಪತಿಗಳಷ್ಟೇ, ಲೇಟ ಅರೈವಲ್ ಲೆಮಿಂಗ್ಟನ್ ತ್ರಿಮೂರ್ತಿಗಳನ್ನು ಬಿಟ್ಟರೆ- ಅಮಿತ್ ರಾವ್, ಸಾಗರ್ ದೇಸಾಯಿ ಮತ್ತು ಸುಬ್ರಹ್ಮಣ್ಯ. (ಕೆಲಸವಿತ್ತೆಂದು ಬರಲಾಗದೆ ಆರರ ನಂತರ ಲೇಟಾಗಿ ಬಂದ ರಾಂ ರಾತ್ರಿ ಹತ್ತರ ವರೆಗೆ ಇದ್ದರೆಂದು ಆಮೇಲೆ ವರದಿ ಬಂತು! ಅವರ ಲೇಖನವೂ ಕೆಳಗೆ ಇದೆ.) ಅದೆಷ್ಟು ದಿನ ಪರಿಶ್ರಮ ಪಟ್ಟಿದ್ದರೋ, ಪ್ರೇಮಾ ಮತ್ತು ಶಶಿಧರ ಕಿಚನ್ ತುಂಬಾ ತಿಂಡಿ ಊಟ, ಸ್ನಾಕ್ಸ್ ಹರಡಿ ಬಿಟ್ಟಿದ್ದರು. ಬಿಬಿಬಿ (ಬಿಸಿ ಬೇಳೆ ಭಾತ್), ರಸಂ, ಅನ್ನ, ಮೊಸರನ್ನ, ಚಪಾತಿ, ವಡೆ,ಇಡ್ಲಿ, ತರತರದ ಚಟ್ನಿ , ಮಸಾಲೆ ಮಜ್ಜಿಗೆ ಹೀಗೆಯೇ ನನಗೆ ಗೊತ್ತಿರದ ಕೆಲವು, ಎಲ್ಲ ಬರದಂಥ ಅತಿಥಿಗಳಿಗಾಗಿ ಕಾಯುತ್ತ ಬಿಕೋ ಅಂತಿದ್ದವು. ಅನತಿ ಸಮಯದಲ್ಲೇ ಬಂದ ಜಗಳೂರು ದಂಪತಿಗಳು ಕಾಫಿ ವಡೆ ( ನಾನೂ ಸೇರಿಕೊಂಡೆ ಚಪ್ಪರಿಸುತ್ತ ). ಮಾತಾಡುತ್ತ ಅವರು ಚುಕ್ಕ್ಕಿ ಬಾಳೆಹಣ್ಣಿನ ಕಥೆಯನ್ನು ನೆನಪಿಸಿ ಹೇಳಿದರು. ನನಗೂ ಅದು ಮಿಸ್ಸಾಗಿತ್ತು. ( ಕೇಳಿ-ಓದಿರದಿದ್ದರೆ ಕೊನೆಗೆ ಕೊಟ್ಟಿದೆ!). ನಾವ್ಯಾರೂ ಅವರನ್ನು ಈ ಮೊದಲು ಭೇಟಿಯಾಗಿರಲಿಲ್ಲ ಅಂತ ನಾನು ತಿಳಿದಿದ್ದೆ. ಹಿಂದಿನ ದಿನವಷ್ಟೇ ಪ್ರೇಮಲತಾ ಮಾತ್ರ ಅವರೊಡನೆ "The Mouse trap” ನಾಟಕ ನೋಡಿದ್ದು ಬಿಟ್ಟರೆ. ನಮ್ಮೆಲ್ಲರ ಉತ್ಸಾಹ, ನಿರೀಕ್ಷೆ ಮೀರಿ ಯಶಸ್ವಿಯಾಗಲಿದೆ ಅನ್ನುವ ಕಲ್ಪನೆಯೇ ಇರಲಿಲ್ಲ ಆಗ. ನಾಲ್ಕು ತಾಸು ಅವರೊಡನೆ ಮಾತು,(ಅದರಲ್ಲಿ ಅವರದೇ ಸಿಂಹ ಪಾಲು) ಸಾಹಿತ್ಯ, ಚರ್ಚೆ, ಹರಟೆ, ನಗೆಚಾಟಿಕೆಯಲ್ಲಿ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಈ ಭೇಟಿ ನನ್ನ ಊಹೆ ಮೀರಿ ನನಗೆ ತೃಪ್ತಿ ಕೊಟ್ಟಿತು. ಇಂದು ಇದನ್ನು ಬರೆಯುತ್ತಿರುವಾಗಲೂ ಮೂರು ದಿನ ಆದರೂ ಇನ್ನೂ ಅದೇ ಗುಂಗಿನಲ್ಲಿದ್ದೇನೆ. ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಬೇರೆಯಾಗಿ ಬರೆಯಲಿದ್ದಾರೆಂದು ( ಕೆಳಗೆ ನೋಡಿ) ಇದನ್ನು ಪೂರ್ವ ಪೀಠಿಕೆ ಅಂತ ಹಂಚಿಕೊಳ್ಳುತ್ತಿದ್ದೇನೆ. KSSVV (ಅನಿವಾಸಿಯ ಹಿಂದಿನ ರೂಪದ) ದಶಮಾನೋತ್ಸವ ಮಾಡಿದ ಮೇಲೆಯೇ ಪ್ರಥಮ ಸಲ ಭೇಟಿಯಾಗಲಿದೆ ಅಂತ ಕಾತರದಿಂದ ಎದುರು ನೋಡಿದ್ದೆ. ನನಗೆ ಮೊದಲಿನಿಂದಲೂ ಇತಿಹಾಸ ಇಷ್ಟ. ತೇಜೋ ತುಂಗಭದ್ರಾ ಮತ್ತು ರೇಷ್ಮೆ ಬಟ್ಟೆ ಎರಡನ್ನೂ ಓದಿ ಮೆಚ್ಚಿದ್ದೇನೆ. ಅದರಲ್ಲಿಯ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಅವರು ಹೆಣೆದ ರೀತಿ ನೋಡಿ ಅಚ್ಚರಿ ಪಟ್ಟಿದ್ದೇನೆ. ಎರಡನ್ನೂ ಹೆಚ್ಚು ಸಮಯ ತೊಗೊಳ್ಳದೆ ಬರೆದದ್ದು ಊಹಿಸಲೂ ಕಷ್ಟ. ಅವರ ಓದುವ ಮತ್ತು ಬರೆಯುವ ವಿಧಾನವನ್ನು ತಿಳಿದುಕೊಳ್ಳಲು ಎದುರು ನೋಡುತ್ತಿದ್ದೆ. The Silk Road ಬಗ್ಗೆ ತಿಳಿದದ್ದು ದೊಡ್ಡವರಾದ ಮೇಲೆಯೇ. ಕಾಗದ ಮಾಡಲು ಯಾವಾಗಲೋ ಕಲಿತರು ಚೀನರು ಅಂತ 'ರೇಷ್ಮೆ ಬಟ್ಟೆ’ ಯಲ್ಲಿ ಓದಿದ್ದು ನನಗೆ ವಿಶೇಷವಾಗಿ ಆಕರ್ಷಣೆ. ಯಾಕೆಂದರೆ ಚಿಕ್ಕವನಿದ್ದಾಗಿನಿಂದ ನನ್ನ ಆರ್ಕಿಯಾಲಜಿಸ್ಟ್ ತಂದೆಯವರು ಶಿಲಾ ಶಾಸನಗಳಲ್ಲಿಯೇ ಮುಳುಗಿದ್ದುದನ್ನು ನೋಡಿದೇ ಕಾರಣವಾಗಿರ ಬೇಕು. ಅದರ ಬಗ್ಗೆ ಮತ್ತು ವೃತ್ತಿಯಲ್ಲಿ ಕಣ್ಣಿನ ಡಾಕ್ಟರಾಗಿ ನಾಲ್ಕು ದಶಕ ಕಳೆದದ್ದರಿಂದ ಒಂದೆರಡು ನಾಜೂಕಾದ ವಿಷಯಗಳ ಬಗ್ಗೆಯೂ ಪ್ರಶ್ನೆ ಕೇಳುವ ಉದ್ದೇಶವಿತ್ತು. ಈ ವಾರ ವಸುಧೇಂದ್ರ ಅವರು ತಮ್ಮ ಮಾತಿನಲ್ಲಿ ಎರಡು ಸಲ "ಭಂಡತನ" ಎನ್ನುವ ಶಬ್ದ ಉಪಯೋಗಿಸಿದರು. ನಾವಿನ್ನೂ ಚಳಿ ಚಳಿ ಅಂತ ಇಂಗ್ಲೆಂಡಿನ ಹವಾಮಾನದ ಬಗ್ಗೆ ಮಾತಾಡುತ್ತಿದ್ದಾಗ ತಮ್ಮtop ಮೇಲೆ ಒಂದು ತೆಳ್ಳಗಿನ ಹೊದಿಕೆಯೊಂದನ್ನಷ್ಟೇ ಧರಿಸಿ ಮಾರ್ಚ ಚಳಿಯಲ್ಲಿ ಕಾರಿನಲ್ಲಿ ತಿರುಗಾಡಲು ಹೋದವರು ಒಳಗೆ ಬಂದರು ಶಶಿಧರ ಅವರ ಜೊತೆಗೆ. ಇಷ್ಟರ ಮೇಲೆಯೇ ಒಬ್ಬರೇ ಕಿಲಿಮಾಂಜಾರೋ ಸಹ ಹತ್ತಿದ್ದರಂತೆ! ನಮಗೆ ಆಶ್ಚರ್ಯ! ಅನೋರಾಕ್ ಇಲ್ಲದೆ ಎಲ್ಲೂ ಹೋಗದ ನಾನು ಅವರದು "ಭಂಡತನ" ಅಂದು ಕೊಂಡೆ! ಮೊದಲು ಗ್ರುಪ್ ಫೋಟೋ ತೆಗೆಸಿಕೊಂಡು ಕಾಫಿ- ಟೀ ಕುಡಿದು ಪರಸ್ಪರ ಪರಿಚಯ ಮಾಡಿಕೊಂಡು “ಸಭೆ” ಪ್ರಾರಂಭ ಮಾಡಿದೆವು. ಪ್ರೇಮಲತಾ ಅವರ ಕೋರಿಕೆಯ ಮೇಲೆ ಸಭೆಗೆ ಇನ್ವೋಕೇಶನ್ ಹಾಡು ಅನುರಾಧ ಜಗಲೂರು ಅವರ ಕೊರಳಿಗೆ ಬಿತ್ತು. ಆ ಸಭೆಯ ಕಾರ್ಯಕಲಾಪಗಳ ಬಗ್ಗೆ, ಮತ್ತು ತಮ್ಮ ಅನಿಸಿಕೆಗಳನ್ನು ಅವರು ಸುಂದರವಾಗಿ ಮತ್ತು ಸವಿಸ್ತಾರವಾಗಿ ಬರೆದ ಪ್ರಬುದ್ಧ ಲೇಖನವನ್ನು ಕೆಳಗೆ ಓದಿರಿ.
ಶ್ರೀ ವಸುಧೇಂದ್ರ ಅವರೊಡನೆಶ್ರೀಮತಿ ಅನುರಾಧ ಜಗಲೂರು
2 ಶ್ರೀ ವಸುಧೇಂದ್ರ ಅವರೊಡನೆ ಒಂದು ಅಪೂರ್ವ ಸಂಭಾಷಣೆ - ಶ್ರೀಮತಿ ಅನುರಾಧ ಜಗಲೂರು ಬರೆಯುತ್ತಾರೆ:
‘ಐದು ಪೈಸೆ ವರದಕ್ಷಿಣೆ’ ಎಂಬ ಲಲಿತ ಪ್ರಬಂಧಗಳ ಸಂಕಲನದ ಮೂಲಕ ನನಗೆ ಲೇಖಕ ಶ್ರೀ ವಸುಧೇಂದ್ರ ಅವರ ಪರಿಚಯವಾಯಿತು. ನಂತರ ಸ್ವಲ್ಪ ದಿನಗಳಲ್ಲೇ ‘ತೇಜೋ ತುಂಗಭದ್ರಾ’ ಕಾದಂಬರಿಯನ್ನು ಓದಿ ಬಹಳ ಸಂತೋಷಪಟ್ಟೆ. ಐತಿಹಾಸಿಕ ಕಾದಂಬರಿಗಳನ್ನು ಬರೆಯುವುದೆಂದರೆ ಸುಲಭವೇ? ಅದೆಷ್ಟು ಸಂಶೋಧನೆ ನಡೆಸಬೇಕು! ಒಂದರಲ್ಲೊಂದು ಹೆಣೆದುಕೊಂಡಿರುವ ನಾನಾ ಎಳೆಗಳ ಹಲವಾರು ಕಥೆಗಳನ್ನು ಹುಟ್ಟುಹಾಕಬೇಕು. ಅವುಗಳ ಮಧ್ಯೆ ನಿಜವಾಗಿಯೂ ನಡೆದ ಐತಿಹಾಸಿಕ ಘಟನೆಗಳನ್ನು ಪೋಣಿಸಬೇಕು. ಕಥೆಯಲ್ಲಿ ಬರುವ ಭಾಷೆ, ಹೆಸರುಗಳು, ಸಾಮಾಜಿಕ ನೀತಿ ನಿಯಮಗಳು ಆ ಕಾಲಕ್ಕೆ ಸರಿಹೊಂದುತ್ತವೆಯೆಂದು ಖಚಿತಪಡಿಸಿಕೊಳ್ಳಬೇಕು. ಜೊತೆಗೆ, ಸಾರ್ವಕಾಲಿಕವಾದ ಮಾನವ ಸಹಜ ಭಾವನೆಗಳನ್ನೂ, ನಡುವಳಿಕೆಯನ್ನೂ ಕಥೆಯಲ್ಲಿ ಸೇರಿಸಿ, ಸಮಕಾಲೀನ ಓದುಗರ ಹೃದಯವನ್ನು ಸ್ಪಂದಿಸಬೇಕು. ಉಪಕಥೆಗಳನ್ನು ಅಲ್ಲಲ್ಲಿ ಚಿಮುಕಿಸಿ ಅಲಂಕರಿಸಬೇಕು, ಕಥೆಯನ್ನು ಪುಷ್ಟಿಗೊಳಿಸಬೇಕು. ‘ತೇಜೋ ತುಂಗಭದ್ರಾ’ ದಲ್ಲಿ ವಸುಧೇಂದ್ರ ಅವರು ಇವೆಲ್ಲವನ್ನೂ ಎಷ್ಟು ಯಶಸ್ವಿಯಾಗಿ ಮಾಡಿದ್ದಾರೆಂದರೆ, ನಾನು ಅವರ ಖಾಸಾ ಅಭಿಮಾನಿಯಾದೆ. ಅವರ ಮತ್ತೊಂದು ಐತಿಹಾಸಿಕ ಕಾದಂಬರಿ ‘ರೇಷ್ಮೆ ಬಟ್ಟೆ’ ಹೊರಬಂದಿದೆ ಎಂದು ಕೇಳಿ ಆದಷ್ಟು ಬೇಗ ಅದನ್ನು ತರಿಸಿಕೊಂಡು ಓದಿ ಆನಂದಿಸಿದೆ.
ಓದು ಮುಗಿಸಿದ ಕೆಲವೇ ದಿನಗಳಲ್ಲಿ, ವಸುಧೇಂದ್ರ ಅವರು ಇಂಗ್ಲೆಂಡಿಗೆ ಬರುತ್ತಿದ್ದಾರೆಂದು ತಿಳಿಯಿತು. ಲಂಡನ್ನಿನಲ್ಲಿ ನಾಲ್ಕು ದಿವಸವಿದ್ದು, ತಾವು ಬಂದ ಕೆಲಸವನ್ನು ಮುಗಿಸಿ, ಲಿಂಕನ್ನಿನಲ್ಲಿ ಶ್ರೀಮತಿ ಪ್ರೇಮಲತಾ ಶಶಿಧರ್ ಅವರ ಮನೆಯಲ್ಲಿ ಒಂದು ದಿವಸ ತಂಗುವುದಾಗಿಯೂ, ಅಲ್ಲಿ ಓದುಗರನ್ನು ಭೇಟಿಯಾಗಲು ಒಪ್ಪಿದ್ದಾರೆ ಎಂಬುದೂ ತಿಳಿದು ಬಂತು. ಇತ್ತೀಚೆಗಷ್ಟೇ ಪರಿಚಯವಾಗಿದ್ದ ಶ್ರೀಮತಿ ಪ್ರೇಮಲತಾ ಅವರು ನಮ್ಮನ್ನು ಬಹಳ ವಿಶ್ವಾಸದಿಂದ ಕಾರ್ಯಕ್ರಮಕ್ಕೆ ಆಮಂತ್ರಿಸಿದರು. ಮರುಯೋಚನೆಯಿಲ್ಲದೆ ಮೂರು ಘಂಟೆ ಪ್ರಯಾಣ ಮಾಡಿ ವಸುಧೇಂದ್ರ ಅವರನ್ನು ಭೇಟಿಯಾಗಲು ಮನೆಯವರೊಂದಿಗೆ ಹೊರಟೆ. ಪ್ರೇಮ ಅವರ ಮನೆಯಲ್ಲಿ ಅದೆಂತಹ ರಸದೌತಣ! ಹೊಟ್ಟೆಗೆ ಬಿದ್ದ ಬಿಸಿಬೇಳೆ ಭಾತ್, ಕ್ಯಾರಟ್ ಹಲ್ವಾ, ಇತ್ಯಾದಿ ಊಟದ ವಿಷಯವನ್ನಷ್ಟೇ ಹೇಳುತ್ತಿಲ್ಲ! ಹಲವೇ ಆಸಕ್ತರ ಆತ್ಮೀಯ ಸಭೆಯಲ್ಲಿ ಕುಳಿತು ನಾಲ್ಕು ಘಂಟೆಗಳ ಕಾಲ ವಸುಧೇಂದ್ರ ಅವರ ಮಾತನ್ನು ಕೇಳುತ್ತ, ಅವರೊಡನೆ ಸಂಭಾಷಣೆಯಲ್ಲಿ ತೊಡಗುವ ಅವಕಾಶ ಯಾರಿಗುಂಟು ಯಾರಿಗಿಲ್ಲ! ------------------------ ಎಲ್ಲರೂ ಸೇರಿದ ಮೇಲೆ, ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುವಾಗಲೇ ವಸುಧೇಂದ್ರ ಅವರು ಎಂತಹ ಸರಳ ವ್ಯಕ್ತಿ ಎನ್ನುವ ಸೂಚನೆ ಸಿಕ್ಕಿತು. ಎಲ್ಲರೂ ಕುಳಿತ ಕೂಡಲೇ ಪ್ರಶ್ನೆಗಳ ಸುರಿಮಳೆಯಾಯಿತು. ಬರೆಯುವುದಕ್ಕೆ ಅವರಿಗೆ ಪ್ರೇರಣೆ ಎಲ್ಲಿಂದ ಬಂತು? ಯಾವಾಗಿನಿಂದ ಬರೆಯಲು ಪ್ರಾರಂಭಿಸಿದರು? ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಅವರಿಗೆ ಬರೆಯಲು ಸಮಯ ಹೇಗೆ ಸಿಗುತ್ತಿತ್ತು? ಇತ್ಯಾದಿ.
ಶಾಲೆಯಲ್ಲಿದ್ದಾಗ ವಸುಧೇಂದ್ರ ಅವರು ಒಂದು ಸಣ್ಣ ಕಥೆ ಬರೆದಿದ್ದು, ಅದು ನಿಯತಕಾಲಿಕವೊಂದರಲ್ಲಿ ಬೆಳಕು ಕಂಡಿತ್ತಂತೆ, ಅದರೆ ತಾನು ಲೇಖಕನಾಗಬೇಕೆಂಬ ಆಸೆಯೇನೂ ಅವರಿಗೆ ಹುಟ್ಟಿರಲಿಲ್ಲ. ಇಂಜಿನಿಯರಿಂಗ್ ಓದಿ, ಸುಮಾರು ೨೦ ವರ್ಷಗಳ ಕಾಲ ಕೆಲಸ ಮಾಡಿದ ನಂತರ ಉದ್ಯೋಗ ಸ್ವಲ್ಪ ಬೇಸರ ತರಲು ಪ್ರಾರಂಭವಾದಾಗ, ಹಿಂದೆ ಕಥೆ ಬರೆದದ್ದು, ಮಾಸ್ತರೊಬ್ಬರು ಉತ್ತೇಜನ ನೀಡಿ ಹೊಗಳಿದ್ದು ನೆನಪಿಗೆ ಬಂತು. ಮತ್ತೆ ಏಕೆ ಬರೆಯಬಾರದು ಎಂಬ ಯೋಚನೆ ಹುಟ್ಟಿ, ಬರೆಯಲು ಪ್ರಾರಂಭಿಸಿದರು.
ಅಂದುಕೊಂಡ ಮಾತ್ರಕ್ಕೆ ಉದ್ಯೋಗವನ್ನು ಕಳಚಿ ಲೇಖಕನಾಗಲು ಸಾಧ್ಯವೇ? ಹೊಟ್ಟೆ ಪಾಡು ನೋಡಬೇಕಲ್ಲ? ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕೆಲಸ, ಜೀವವನ್ನು ಹಿಂಡಿ ತಿನ್ನುವಂತಹದ್ದು. ಸಮಯದ ತೀವ್ರ ಅಭಾವ. ಆದರೆ ಬರೆಯಲೇಬೇಕೆಂಬ ಹಠ. ಹೀಗಾಗಿ, ತಮ್ಮ ಕಾರಿಗೆ ಡ್ರೈವರ್ ಒಬ್ಬನನ್ನು ಗೊತ್ತುಪಡಿಸಿ, ಪ್ರತಿದಿನ ಬನ್ನೇರುಘಟ್ಟದ ತಮ್ಮ ಮನೆಯಿಂದ ವೈಟ್ ಫೀಲ್ಡ್ ಗೆ ಹೋಗುವಾಗ ಒಂದೂವರೆ ಘಂಟೆ, ಮತ್ತೆ ರಾತ್ರೆ ಮನೆಗೆ ಹಿಂದಿರುಗುವಾಗ ಒಂದೂವರೆ ಘಂಟೆ, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಲ್ಯಾಪ್ಟಾಪ್ ಮೇಲೆ ಕಥೆ ಬರೆಯುತ್ತಿದ್ದರು. ಮೊದಲಿಗೆ ಸಣ್ಣ ಕಥೆಗಳನ್ನು ಮತ್ತು ಲಘು ಪ್ರಬಂಧಗಳನ್ನು ಬರೆದರು. ವಿವೇಕ್ ಶಾನಭಾಗ್ ಅವರ ಪ್ರೇರಣೆಯಿಂದ ಮೊದಲ ಕಿರು ಕಾದಂಬರಿ ಹೊರಬಂತು. ತಮ್ಮ ಉದ್ಯೋಗವನ್ನು ಕೈ ಬಿಟ್ಟು ಸಾಹಿತ್ಯ ಕ್ಷೇತ್ರದಲ್ಲಿ ದೃಢವಾಗಿ ನಿಲ್ಲುವ ಧೈರ್ಯ ಬಂದಿತು.
ವಸುಧೇಂದ್ರ ಅವರು ಮೊದಮೊದಲು ಬರೆದದ್ದೆಲ್ಲ ತಮ್ಮ, ಮತ್ತು ತಮ್ಮ ಸುತ್ತಮುತ್ತಲಿನವರ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಬರೆದ ಕಥೆಗಳು. ಅವುಗಳಿಂದ ಈಚೆ ಬಂದು, ಇತರ ವಿಷಯಗಳ ಬಗ್ಗೆ ಬರೆಯುವ ಹಂಬಲ ಹುಟ್ಟಿದಾಗ ಐತಿಹಾಸಿಕ ಕಾದಂಬರಿಯನ್ನು ಬರೆಯುವ ಯೋಚನೆ ಬಂತು. ಹುಟ್ಟಿದ ಊರಿಗೂ, ಅವರ ಹೃದಯಕ್ಕೂ, ಹತ್ತಿರವಾದ ಊರು ಹಂಪೆ. ಆದ್ದರಿಂದ ಸಹಜವಾಗಿಯೇ ವಿಜಯನಗರದ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ಕಾದಂಬರಿಯನ್ನು ಬರೆಯುವ ಯೋಜನೆ ಹಾಕಿಕೊಂಡರು. ಆದರೆ ಅಲ್ಲಿಯ ರಾಜ ರಾಣಿಯರ ಬಗ್ಗೆ ಅಲ್ಲ, ಆ ಸಮಯದ ಜನಸಾಮಾನ್ಯರ ಬಗ್ಗೆ. ನೌಕರಿ ಬಿಟ್ಟಾಗಿತ್ತು. ಈಗ ಸಮಯವೋ ಸಮಯ. ಹಗಲು ರಾತ್ರಿ ಮೂರು ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯದ ಬಗ್ಗೆ ಓದಿದರು. ಆ ಸಮಯದಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರ ಬಗ್ಗೆ ಕುತೂಹಲ ಉಂಟಾಗಿ ಅವರ ಬಗ್ಗೆ ತನಿಖೆ ಮಾಡಿದಾಗ ಅವರು ಬರೆದಿಟ್ಟ ದಾಖಲೆಗಳ ದೊಡ್ಡ ಆಸ್ತಿಯೇ ದೊರಕಿತು. ಅವುಗಳ ಮೂಲಕ, ವಿಜಯನಗರದ ಜನಸಾಮಾನ್ಯರ ದಿನನಿತ್ಯ ಜೀವನದ ಬಗ್ಗೆ ಹೇರಳವಾಗಿ ವಿಷಯ ಸಂಪಾದನೆಯಾಯಿತು. ಸಂಶೋಧನೆ ಎಲ್ಲಿಗೆ ನಿಲ್ಲಿಸಬೇಕು ಎನ್ನುವುದೇ ತೋರಲಿಲ್ಲ. ಆಗ ಅವರ ಮಿತ್ರರೊಬ್ಬರು ‘ನಿನಗೆ ಈಗ ತಿಳಿದಿರುವುದು ಬೇಕಾದಷ್ಟಿದೆ. ಇನ್ನು ಮುಂದೆ ಏನಿದ್ದರೂ ನಿನ್ನ ಕ್ರಿಯಾಶೀಲತೆಯಿಂದ ಹುಟ್ಟಬೇಕಾದದ್ದು.’ ಎಂದು ಹೇಳಿದಾಗ, ‘ತೇಜೋ ತುಂಗಭದ್ರಾ’ ಬರೆಯಲು ಸಾಧ್ಯವಾಯಿತು.
ಓದುಗರಿಗೆ ಚಾರಿತ್ರಿಕ ಕಾದಂಬರಿಗಳ ಹಸಿವು ಎಷ್ಟರಮಟ್ಟಿಗೆ ಇದೆ ಎನ್ನುವುದು ವಸುಧೇಂದ್ರ ಅವರಿಗೆ ‘ತೇಜೋ ತುಂಗಭಧ್ರಾ’ಗೆ ದೊರೆತ ಸ್ವಾಗತ ಮತ್ತು ಮನ್ನಣೆಯಿಂದ ತಿಳಿದುಬಂತು. ಮತ್ತೊಂದು ಅಂತಹುದೇ ಕಾದಂಬರಿಗೆ ಓದುಗರು ಕಾತುರರಾಗಿರುವುದನ್ನು ತಿಳಿದು ಅವರಿಗೆ ಸ್ವಲ್ಪ ಗಾಬರಿಯೇ ಆಯಿತಂತೆ. ಇದನ್ನು ಯಾಕೆ ಬರೆದೆನಪ್ಪಾ, ಎನ್ನಿಸುವಷ್ಟು!
ವಸುಧೇಂದ್ರ ಅವರು ಇತ್ತೀಚಿಗೆ, ತಮ್ಮದೇ ಕಥೆ, ಕಾದಂಬರಿಗಳನ್ನು ಬರೆಯುವುದಲ್ಲದೆ, ಬೇರೆ ಭಾಷೆಗಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ತಮ್ಮದೇ ಪುಸ್ತಕ ಪ್ರಕಾಶನವನ್ನು ಪ್ರಾರಂಭಿಸಿ ಅದರ ಮೂಲಕ ಹೊಸ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ.
ವಸುಧೇಂದ್ರ ಅವರು ನಿಗರ್ವಿ. ತಮ್ಮ ವಿಷಯ ಹೇಳಿಕೊಳ್ಳುತ್ತಿದ್ದಾಗ, ಯಾವುದೇ ಹೆಚ್ಚುಗಾರಿಕೆಯಾಗಲೀ, ಸ್ವಪ್ರಶಂಸೆಯಾಗಲಿ ಕಂಡುಬರುವುದಿಲ್ಲ. ಅಹಂ ಅನ್ನುವುದರ ಸುಳಿವೂ ಹತ್ತಿರ ಬರುವುದಿಲ್ಲ. ಅವರ ಸಾಧನೆಗಳ ಪ್ರಸ್ತಾಪ ನಾವು ತೆಗೆದಾಗ, ಅವರ ಪ್ರತಿಕ್ರಿಯೆಯನ್ನು ನೋಡಿದರೆ, ಅವರು ಅದನ್ನು ಸಾಧಿಸಿದ್ದು ಅವರಿಗೇ ವಿಸ್ಮಯದ ಸಂಗತಿ ಎನ್ನುವ ಭಾವನೆ ಬರುತ್ತದೆ. ಅವರ ಪುಸ್ತಕಗಳು ಈ ವ್ಯಾಪ್ತಿಯಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿರುವುದು ಅವರಿಗೆ ಮಹದಾಶ್ಚರ್ಯ ಎನ್ನುವ ಭಾವನೆ ಉಂಟಾಗುತ್ತದೆ. ಯಶಸ್ವೀ ಲೇಖಕನಾಗಬೇಕಾದರೆ ಪ್ರತಿಭೆಯ ಅಗತ್ಯ ಇಲ್ಲವೆಂದಲ್ಲ, ಆದರೆ ಧೈರ್ಯದಿಂದ ಬರೆಯಲು ಧುಮುಕಬೇಕು, ನಂತರ, ಪಟ್ಟು ಹಿಡಿದು ಬರೆಯಬೇಕು, ಅದು ಮುಖ್ಯ, ಯಶಸ್ಸಿಗೆ ಕಾರಣ ಶೇಖಡ ೯೮ ರಷ್ಟು ಭಾಗ ಪಟ್ಟು ಹಿಡಿದು ಕೆಲಸ ಮಾಡುವುದೇ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕಷ್ಟಪಟ್ಟರೆ ತಾವೂ ಅವರಂತೆಯೇ ಬರೆದುಬಿಡಬಹುದು ಎಂದು ಕೇಳಿದವರಿಗೆ ಅನಿಸಬೇಕು, ಹಾಗೆ!
ವಸುಧೇಂದ್ರ ಅವರ ಸ್ವಾರಸ್ಯಕರವಾದ ಮಾತನ್ನು ಕೇಳುತ್ತ ಕುಳಿತ ನಮಗೆ ನಾಲ್ಕು ಘಂಟೆಗಳು ಕಳೆದದ್ದು ತಿಳಿಯಲೇ ಇಲ್ಲ. ಆ ಸಮಯದಲ್ಲಿ ಅವರ ಜೀವನ ಹಾಗೂ ಬರವಣಿಗೆಯ ಹಾದಿಯ ಬಗ್ಗೆ ನಮಗೆ ತಿಳಿದು ಬಂದದ್ದು ಮೇಲೆ ಹೇಳಿರುವ ಅಂಶಗಳಷ್ಟೇ. ಮುಖ್ಯವಾಗಿ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದು ತಮ್ಮ ಸಂಶೋಧನೆಯಿಂದ ತಿಳಿದುಬಂದ, ಅವರಿಗೆ ಬಹಳ ಕುತೂಹಲಕಾರಿ ಅಥವಾ ಆಕರ್ಷಕವೆನಿಸಿದ ನೂರೊಂದು ವಿಷಯಗಳು. ವಿಷಯಗಳ ವ್ಯಾಪ್ತಿಯ ಕುರುಹು ನೀಡಲು, ಅವುಗಳಲ್ಲಿ ಕೆಲವನ್ನು, ಅವರು ವ್ಯಕ್ತಪಡಿಸಿದ ಭಾವನೆಗಳು ಮತ್ತು ಅಭಿಪ್ರಾಯಗಳೊಡನೆ ಯಾವುದೇ ವಿಶೇಷ ಕ್ರಮವಿಲ್ಲದೆ ಕೆಳಗೆ ಪಟ್ಟಿ ಮಾಡಿದ್ದೇನೆ.
1. ಪೋರ್ಚುಗೀಸರು ವ್ಯಾಪಾರಕ್ಕಾಗಿ ನೌಕಾಪಡೆಯನ್ನು ಕಟ್ಟಿ ಇಡೀ ಪ್ರಪಂಚವನ್ನು ಅನ್ವೇಷಿಸಿದ್ದು. ಮಸಾಲೆ ಪದಾರ್ಥಗಳಿಗಾಗಿ ಯೂರೋಪಿನ ದೇಶಗಳ ಮಧ್ಯೆ ಪೈಪೋಟಿ.
2. ಚೀನೀಯರ ಆವಿಷ್ಕಾರಗಳು, ರೇಷ್ಮೆ ದಾರಿ, ಸರಕುಗಳು ಎಲ್ಲಿಂದೆಲ್ಲಿಗೆ ಪ್ರಯಾಣ ಮಾಡುತ್ತಿದ್ದವು.
3. ವಿಜಯನಗರ ಸಾಮ್ರಾಜ್ಯದ ಬಗ್ಗೆ ನಾವು ಮಾತನಾಡಲಿಚ್ಛಿಸುವುದು ಅದರ ವೈಭವ, ಮತ್ತು ಕೃಷ್ಣದೇವರಾಯನ ಉತ್ತಮ ಆಡಳಿತ. ಆದರೆ ಆಗಿನ ಕಾಲದಲ್ಲಿದ್ದ ಕೆಲವು ಸಾಮಾಜಿಕ ಆಚರಣೆಗಳ ಕ್ರೌರ್ಯ.
4. ಭಾಷೆಗಳು, ಭಾಷೆಗಳ ವಿಕಾಸ. ಬದಲಾವಣೆ ಎನ್ನುವುದು ಅನಿವಾರ್ಯ, ಯಾವುದೇ ಹೊಸ ಬದಲಾವಣೆಯಾಗಲೀ, ಅವಿಷ್ಕಾರಗಳಾಗಲೀ ಅದನ್ನು ಜನರು ಮೊದಲು ವಿರೋಧಿಸುತ್ತಾರೆ, ಆದರೆ ನಂತರ ಸ್ವೀಕರಿಸುತ್ತಾರೆ.
5. ಪೂರ್ವಜರ ಆರಾಧನೆ ಪ್ರಪಂಚಾದ್ಯಂತ ಎಲ್ಲ ಸಮುದಾಯಗಳಲ್ಲೂ ಕಂಡುಬರುವ ಬಗ್ಗೆ. ಚಾರಿತ್ರಿಕ ಕಾದಂಬರಿಗಳೆಂದರೆ ಓದುಗರಿಗೆ ಪ್ರಿಯವಾಗಿರುವುದು ಈ ಕಾರಣದಿಂದಲೇ?
6. ಹಿಂದೂ ಧರ್ಮ ಬೆಳೆದು ಬಂದ ಹಾದಿ, ಅದರ ಮೇಲೆ ಜೈನ, ಬುದ್ಧ ಧರ್ಮಗಳ ಪ್ರಭಾವ, ಅದರಲ್ಲೂ ಸಸ್ಯಾಹಾರದ ಅಭ್ಯಾಸ ಹರಡಿದ್ದು. ನಮ್ಮ ನಿಲುವು ಏನೇ ಇರಲಿ ಅದನ್ನು ಇತರರ ಮೇಲೆ ಹೇರದಿರುವುದರ ಪ್ರಾಮುಖ್ಯತೆ.
7. ಹಳೆಗನ್ನಡ ಮತ್ತು ನಡುಗನ್ನಡ ಸಾಹಿತ್ಯ, ಕುಮಾರವ್ಯಾಸ, ರಾಘವಾಂಕನ ಹರಿಶ್ಚಂದ್ರ ಕಾವ್ಯವು ಓದಲು ಎಷ್ಟು ಸೊಗಸಾಗಿದೆ ಎಂಬ ವಿಷಯ.
8. ಹಿಂದಿನ ರಾಜರುಗಳಾಗಲೀ, ಇಂದಿನ ಸರ್ಕಾರಗಳಾಗಲೀ ತಮ್ಮ ಅಧಿಪತ್ಯಕ್ಕೆ ಅನುಕೂಲವಾಗುವಂತೆ ಧರ್ಮವನ್ನು ಉಪಯೋಗಿಸಿಕೊಳ್ಳುವ ರೀತಿ. ಬಹುಮತೀಯರನ್ನು ಹಿಡಿದೆತ್ತಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು. ಮನುಷ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಧರ್ಮವನ್ನು ಅರ್ಥೈಸಿಕೊಳ್ಳುವುದು. ಧರ್ಮಗಳು ಸಮಯಕ್ಕೆ ತಕ್ಕಂತೆ ಬದಲಾಯಿಸದಿದ್ದರೆ, ಅವು ಅಳಿವಾಗುವ ಸಾಧ್ಯತೆ.
9. ಲೇಖಕರಾಗಲು ಇಚ್ಛೆಪಡುವವರಿಗೆ ಒಂದು ಕಿವಿಮಾತು. ಬೇರೆಯವರು ಮಾತನಾಡಿದಾಗ ಸೂಕ್ಷ್ಮವಾಗಿ ಕೇಳಿಸಿಕೊಳ್ಳುವುದನ್ನು ಕಲಿಯಬೇಕು. ಇತರರ ಬಗ್ಗೆ ನಿಮಗೆ ನಿಜವಾದ ಆಸಕ್ತಿ ಇಲ್ಲದಿದ್ದರೆ, ನೀವು ನಂಬಿಕಾರ್ಹರಲ್ಲದಿದ್ದರೆ ಅವರು ನಿಮ್ಮಲ್ಲಿ ಏನನ್ನೂ ಹಂಚಿಕೊಳ್ಳುವುದಿಲ್ಲ, ನೀವು ಏನನ್ನೂ ಕಲಿಯಲು ಸಾಧ್ಯವಿಲ್ಲ.
10. ಸಾಹಿತಿಗಳು ಬರೆಯುವ ಎಲ್ಲ ಕೃತಿಗಳೂ ಒಂದೇ ಗುಣಮಟ್ಟದ್ದಾಗಿರುತ್ತದೆ ಎಂದು ನಿರೀಕ್ಷಿಸುವುದು ಅನ್ಯಾಯ. ಬೇಂದ್ರೆ, ಕುವೆಂಪು ಅವರ ಕಾವ್ಯಗಳಲ್ಲಿ ಕೆಲವನ್ನು ಮಾತ್ರ ನಾವು ಈಗಲೂ ನೆನಪಿಸಿಕೊಳ್ಳುತ್ತೇವೆ. ಕುಮಾರವ್ಯಾಸ ಭಾರತದಲ್ಲೂ ಹಾಗೇ, ಪ್ರತಿಯೊಂದು ಪದ್ಯವೂ ಸುಂದರವಾಗಿದೆ ಎನ್ನಲಾಗುವುದೇ? ಆದರೆ ಕೆಲವನ್ನು ಓದಿದಾಗ ಮಾತ್ರ ರೋಮಾಂಚನವಾಗುತ್ತದೆ. ---------------
ಸಂಭಾಷಣೆ ಮುಂದುವರೆಯುತ್ತಲೇ ಇತ್ತು. ಕೊನೆಗೆ ವಸುಧೇಂದ್ರ ಅವರು ‘ನನಗೆ ಯಾರ ಮಾತನ್ನೂ ಮೂರು - ನಾಲ್ಕು ಘಂಟೆಗಳ ಕಾಲ ಕೇಳುವ ಸಹನೆ ಇಲ್ಲಪ್ಪ, ನಿಮ್ಮ ಸಹನೆಯನ್ನು ನಾನು ಮೆಚ್ಚುತ್ತೇನೆ, ಇಲ್ಲಿಗೆ ನನ್ನ ಮಾತನ್ನು ಮುಗಿಸುತ್ತೇನೆ’ ಎಂದು ಖಡಾಖಂಡಿತವಾಗಿ ಹೇಳಿ ಮಾತನ್ನು ಮುಗಿಸಿಬಿಟ್ಟರು. ಆದರೂ ನಾವು ಬಿಡಲಿಲ್ಲ, ‘ಒಂದೇ ಒಂದು ಪ್ರಶ್ನೆ’ ಎಂದು ಒತ್ತಾಯಿಸಿ, ಮತ್ತೊಂದೆರೆಡು ಪ್ರಶ್ನೆಗಳನ್ನು ಕೇಳಿದೆವು. ಪ್ರಪಂಚದ ಈಗಿನ ಪರಿಸ್ಥಿತಿಯ ಬಗ್ಗೆ ನಿಮಗೆ ಏನೆನಿಸುತ್ತದೆ ಎಂದು ಕೇಳಿದಾಗ, ಭಾರತದ ಪ್ರಸ್ತಾಪವನ್ನೆತ್ತಿ, ‘ನಾವೇ ಶ್ರೇಷ್ಟರು ಎಂಬ ಭಾವನೆ ನಮ್ಮಲ್ಲಿ ಹೆಚ್ಚಾಗುತ್ತಿದೆ, ಅದು ಚಿಂತಾಜನಕ’ ಎಂದು ಕಳಕಳಿ ವ್ಯಕ್ತಪಡಿಸಿದರು.
ತಿಂಡಿ, ಕಾಫಿ ಮುಗಿಸಿ ಅವರನ್ನು ಬೀಳ್ಕೊಂಡ ನಾವು ಆ ಮಧ್ಯಾಹ್ನದ ಸುಂದರ ಅನುಭವವನ್ನು ದಾರಿಯುದ್ದಕ್ಕೂ ಮೆಲಕು ಹಾಕುತ್ತ ಮನೆಗೆ ಹಿಂದುರುಗಿದೆವು.
3 ಡಾ ಪ್ರೇಮಲತ ಬಿ ಬರೆಯುತ್ತಾರೆ: (ಅವರ ಫೇಸ್ ಬುಕ್ ಲೇಖನದಿಂದ, ಅವರ ಸಮ್ಮತಿಯೊಡನೆ)
ವಸುಧೇಂದ್ರ, ಡಾ ಪ್ರೇಮಲತ ಬಿ
"ವಸುಧೇಂದ್ರ ಅಂದ್ರೆ ನನಗೂ ಇಷ್ಟ” -- ಡಾ ಪ್ರೇಮಲತ ಬಿ
ಲಾಕ್ ಡೌನ್ ಸಮಯದಲ್ಲಿ ಅವರ ಸರಳ ಬರಹಗಳನ್ನು ಓದಿದ ನಂತರವೇ ನಾನು ಕಥೆಗಳನ್ನು ಬರೆಯಲು ಶುರುಮಾಡಿದ್ದು. ಕಾಕತಾಳೀಯ ಅಂದರೆ, ಚೊಚ್ಚಲ ಕಥಾಸಂಕಲನ ಛಂದ ಸ್ಪರ್ಧೆ ಯ ಅಂತಿಮ ಆರರ ಹಂತಕ್ಕೆ ತಲುಪಿತು. ಡಾ. ಹೆಚ್. ಗಿರಿಜಮ್ಮ ಪ್ರಶಸ್ತಿಯನ್ನೂ ಗಳಿಸಿತು.
ವಸುಧೇಂದ್ರ ಅವರು ಸಮಕಾಲೀನ ಬರಹಗಾರರು, ವೃತ್ತಿ ಪರರು, ನನ್ನಂತೆ ಅನಿವಾಸಿಯಾಗಿದ್ದವರು, ಯಾವ ಕೃಪಾ ಪೋಷಣೆಗಳೂ ಇಲ್ಲದೆ ತಮ್ಮ ಬರಹದ ಪ್ರತಿಭೆಯಿಂದಲೇ ಹೆಸರು ಗಳಿಸಿದವರು. ತಾವು ಕ್ರಮಿಸಿದ ಶ್ರಮದ ಹಾದಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಹೇಳಿಕೊಂಡವರು. ಹೊಸ ಪ್ರತಿಭೆಗಳಿಗೆ ಮನ್ನಣೆ ನೀಡುವ ಛಂದ ಪುರಸ್ಕಾರ ಶುರುಮಾಡಿ ಹಲವರು ಹೆಸರು ಗಳಿಸಲು ಸಹಕರಿಸಿದವರು. ಅನುವಾದಗಳಿಗೆ ಪ್ರಾಮುಖ್ಯತೆ ನೀಡಿದವರು, ತಗಾದೆ ಗಳಿಂದ ದೂರವಿದ್ದು ಸಾಹಿತ್ಯದಲ್ಲಿ ಗಾಢವಾಗಿ ತೊಡಗಿಸಿಕೊಂಡವರು ಎಂಬೆಲ್ಲ ಕಾರಣಗಳಿಗಾಗಿ ನನಗೆ ಅವರ ಬಗ್ಗೆ ವೀಶೇಷ ಮೆಚ್ಚುಗೆಯಿತ್ತು.
ಬೆಂಗಳೂರಿಗೆ ಬಂದಾಗ ಹೋಗಿ ಭೇಟಿಯಾಗಿ ಬಂದಿದ್ದೆ. ಅವರು ಲಂಡನ್ನಿಗೆ ಬರುವುದು ತಿಳಿದಾಗ, ಅಲ್ಲಿಗೆ ಹೋಗಿ ಮನೆಗೂ ಕರೆತಂದೆ.
15/03/2025 ರಂದು Reading, Heathrow, Leamington Spa, Derby, Doncaster ನಗರಗಳಿಂದ ಹಲವಾರು ಸ್ನೇಹಿತರು ಅವರನ್ನು ನೋಡಲು ಬಂದರು. ಆಗಲೇ ನನಗೆ ಅವರು ಅದೆಷ್ಟು ಸೊಗಸಾಗಿ ಮಾತನಾಡಬಲ್ಲರು ಎಂದು ತಿಳಿದದ್ದು. ಅವರು ಸರಳತೆಗೆ ಬೆರಗಾಗದೆ ಇರಲು ಸಾಧ್ಯವೇ ಇಲ್ಲ. ಅಂದು ಅವರನ್ನು ಭೇಟಿಯಾಗಲು ಸಾಧ್ಯವಾಗದೆ ಪರಿತಪಿಸಿದವರು ಬಹಳಷ್ಟು ಜನ.
ವಸುಧೇಂದ್ರರ ಜೊತೆ ಒಂದು ಉತ್ತಮ ಸಾಹಿತ್ಯ ಚರ್ಚೆಯಲ್ಲಿ ತೊಡಗಿದ ಖುಷಿಯಲ್ಲಿ ವಾರಾಂತ್ಯ ಕಳೆದದ್ದೇ ತಿಳಿಯಲಿಲ್ಲ. ಆದರೆ ಅವರಿಂದ ತಿಳಿಯುವುದು ಮತ್ತು ಕಲಿಯಬೇಕಾದ ವಿಚಾರಗಳು ಮುಗಿಯುವಂತವಲ್ಲ ಅನ್ನಿಸಿದ್ದು ಮಾತ್ರ ಸುಳ್ಳಲ್ಲ.
ಲಿಂಕನ್ನಿನಲ್ಲಿ ನೆರೆದ ಉತ್ಸಾಹಿ ಸಾಹಿತ್ಯಾಸಕ್ತರು
4 ಹೀಗೊಂದು ವೀಕೆಂಡ್! -ಅಮಿತ್ ರಾಮ್ ಮಂಡಗದ್ದೆ ವಾಸುದೇವ
ದಿನಾಂಕ ೧೪/೦೩/೨೦೨೫ ಶುಕ್ರವಾರ ಸಂಜೆ ನನ್ನ ಸ್ನೇಹಿತ ಸೂರ್ಯನ ಮಗಳ ೭ನೇ ಹುಟ್ಟುಹಬ್ಬವನ್ನು ಆಚರಿಸಲು ಹೊರುಡುತ್ತಿದ್ದಾಗ ಅನು ಅವರು ಶಾರ್ವರಿಗೆ ಕರೆ ಮಾಡಿ ನಾಳೆ ವಸುಧೇಂದ್ರ ಅವರನ್ನು ಲಿಂಕನ್ನಲ್ಲಿ ಭೇಟಿ ಮಾಡುವ ಅವಕಾಶ ಇದೆ ಬರುತ್ತಿರಾ ಎಂದು ಕೇಳಿದರು. ಅಲ್ಲಿಯ ವರೆಗೆ ಮನೆಗೆ ಬೇಗ ಬಂದು ಮಲಗಿ ಮಾರನೇ ದಿವಸ ಕೊವೆಂಟ್ರಿಯಲ್ಲಿ ನಡೆಯುವ ಅನುಭಂದ ಕ್ರಿಕೆಟ್ ಕಪ್ಗೇ ಹೋಗುವ ತಯಾರಿಯಲ್ಲಿ ಇದ್ದ ಮನಸ್ಸು ಧ್ವಂದ್ವಕ್ಕೆ ಬಿತ್ತು. ನೆಚ್ಚಿನ ಬರಹಗಾರರನ್ನು ಭೇಟಿ ಆಗುವುದೋ ಇಲ್ಲ ಸ್ನೇಹಿತರ ಜೊತೆಗೂಡಿ ಆಟ ಆಡುವುದೋ ಎಂದು. ಕೊನೆಗೂ ಗೆದ್ದಿದು ವಸುಧೇಂದ್ರ ಅವರನ್ನು ಬೇಟಿಯಾಗುವ ಆಸೆ. ಆ ಆಸೆಗೆ ನನಗೇ ಸಾತ್ ಕೊಟ್ಟಿದ್ದು ಸಾಗರ್ ಮತ್ತು ಸುಬ್ರಮಣ್ಯ. ಶನಿವಾರ ಬೆಳಗ್ಗೆ ಕೊವೆಂಟ್ರಿಯಲ್ಲಿ ಸ್ನೇಹಿತರಿಗೆ ಮುಖ ತೋರಿಸುವ ಶಾಸ್ತ್ರ ಮಾಡಿ ಲಿಂಕನ್ ಕಡೆಗೆ ಹೊರೆಟೆವು ಮೂರು ಜನ. ರಸ್ತೆ ರೀಪೇರಿಯಿಂದ ಆದ ಟ್ರಾಫಿಕ್ ಜ್ಯಾಮ್ ಮತ್ತು ರೌಂಡ್ ಎಬ್ವ್ಟಾಗಳಲ್ಲಿ ಲೇನ್ ತಪ್ಪಿಸಿ ಬೇರೆ ಕಡೆ ಕರೆದು ಕೊಂಡು ಹೋಗುತ್ತಿದ್ದ ಸಾಗರ್ ಗೆ ಗೈಡ್ ಮಾಡಿಕೊಂಡು ಎಲ್ಲ ಅಡಚಣೆ ತಪ್ಪಿಸಿ ತಲುಪುವಾಗ ಮಧ್ಯಾಹ್ನ ಘಂಟೆ ೨:೨೦. ಅನು ಅವರ ಕಳುಹಿಸಿದ ಮೇಸೆಜ್ ಪ್ರಕಾರ ಕಾರ್ಯಕ್ರಮ ೧ ಘಂಟೆಗೇ ಸ್ಟಾರ್ಟ್ ಆಗುವುದಿತ್ತು. ನಾವುಗಳು ತಡವಾಗಿ ತಲುಪಿದೆವಲ್ಲ, ಅವರು ಒಳಗಡೆ ಸೇರಸ್ತಾರೋ ಇಲ್ವ ಎಂಬ ತಳಮಳ ಕಿಕ್ ಇನ್ ಆಯ್ತು. ಅನುಮಾನದಲ್ಲೆ ಬಾಗಿಲು ತಟ್ಟಿದ್ದೆ, ಬಾಗಿಲು ತೆಗೆದವರು ನಗು ಮೊಗದ ಶಶಿಧರ್, ಬನ್ನಿ ಬನ್ನಿ ಈಗ ಶುರುವಾಗಿದೆ, ನೀವು ಏನು ಮಿಸ್ ಮಾಡಿಕೊಂಡಿಲ್ಲ ಎಂದು ಬರಮಾಡಿಕೊಂಡಾಗ ಸ್ವಲ್ಪ ನಿರಮ್ಮಳವಾಯ್ತು. ಒಳಗೆ ಹೋದಾಗ ಪರಿಚಯಸ್ತರಾದ ಅನು, ಹರ್ಷ, ಸ್ಮಿತ ಮತ್ತು ಗೋಪಾಲ್ ರನ್ನು ನೊಡಿದಾಗ ಮನಸ್ಸಿಗೆ ಇನ್ನು ಖುಷಿ ಆಯ್ತು. ವಸುಧೇಂದ್ರರವರು ಸತಿ ಸಹಗಮನದ ಬಗ್ಗೆ ಮಾತು ಶುರು ಮಾಡಿದ್ರು, ಆಮೇಲೆ ಅವರು ಪುಸ್ತಕಗಳನ್ನು ಹೇಗೆ ಬರಿತಾರೆ, ಹೇಗೆ ರಿಸರ್ಚ್ ಮಾಡ್ತಾರೆ ಅನ್ನುವುದರಿಂದ ಹಿಡಿದು ಚೀನದಲ್ಲಿ ಪೇಪರ್ ತಾಯಾರಿಕೆ ಹೇಗೆ ಶುರುವಾಯ್ತು, ಭಾರತಕ್ಕೆ ಮೆಣಸಿನಕಾಯಿ ಹೇಗೆ ಬಂತು, ಪೊರ್ಚುಗೀಸರು ಭಾರತಕ್ಕೆ ಹೇಗೆ ಬಂದರು ಮತ್ತು ಏನೇನು ಮಾಡಿದರು, ವಾಸ್ಕೋಡಿಗಾಮ, ಕೊಲಂಬಸ್, ಚೀನಿಯರು ಮತ್ತು ಸಂಸ್ಕೃತದಿಂದ ಎರವಲು ಪಡೆದ ೩೫,೦೦೦ ಪದಗಳು, ಮಲೆನಾಡಿನ ಒಕ್ಕಲಿಗರು ಮತ್ತು ಜೈನಧರ್ಮ, ಹೀಗೆ ಹಲವಾರು ವಿಷಯಗಳು ಬಗ್ಗೆ ನಿರರ್ಗಳವಾಗಿ ಮಾತಾನಾಡಿದರು. ಇವತ್ತಿಗೆ ಐದನೇ ದಿನ ಆದರೂ ಕಣ್ಣಿಗೇ ಕಟ್ಟಿದ ಹಾಗೇ ಇದೆ. ಇವರ ಮಾತಿಗೆ ಸರಿಯಾಗಿ ಅನು ಮತ್ತು ಹರ್ಷರವರ ತಾವು ಓದಿಕೊಂಡ ಇತಿಹಾಸದ ಬಗ್ಗೆ ಮಾತಾನಾಡುತ್ತಿದರೆ, ಆಕಡೆ ಗೋಪಾಲ್ ರವರು ಸೈನಿಕರನ್ನು ರಣಕಹಳೆ ಊದಿ ಪ್ರೋತ್ಸಾಹಿಸಿ ಯುದ್ದಕೆ ತಳ್ಳುತ್ತಿದ್ದ ವಿಷಯ ಬಂದಾಗ “ಮದುವೆ ಕೂಡ ಹಾಗೇ ಅಲ್ವ ಗಟ್ಟಿಮೇಳ ಊದಿ ತಾಳಿ ಕಟ್ಟಿಸಿ ಬಿಡ್ತಾರೆ” ಎಂದು ಹಾಸ್ಯ ಚಟಾಕಿ ಹಾರಿಸಿದರು ಶ್ರೀವತ್ಸ! (ವಿಡಿಯೋ ನೋಡಿರಿ - ಲೇಖನದ ಕೊನೆಯಲ್ಲಿ) ಅವರ ಜ್ಞಾನ ಮತ್ತು ಪ್ರೇಮಲತರವರ ಜೊತೆ ಊಟದ ಸಮಯದಲ್ಲಿ ಆದ ಶಶಿ ತರಿಕೆರೆ ಅವರು ಡುಮಿಂಗ ಪುಸ್ತಕದ ಚರ್ಚೆ ಕೂಡ ತುಂಬ ಚೆನ್ನಾಗಿತ್ತು. ಹಾಗು ಹೀಗು ಅನುರವರನ್ನ ಒಪ್ಪಿಸಿ ಅವರ ಪುಸ್ತಕದ ಮೇಲೆ ನನ್ನ ಹೆಸರು ಮತ್ತು ಲೇಖಕರ ಸಹಿ ಗಿಟ್ಟಿಸಿಕೊಂಡೆ. ಆ ಒಂದು ದಿವಸದ ಬಗ್ಗೆ ಬರೆಯಲಿಕ್ಕೆ ತುಂಬ ಇದೆ. ಆದರೆ ಪದಗಳು ಸಾಕಾಗ್ತ ಇಲ್ಲ. ನನ್ನ ನೆಚ್ಚಿನ ಲೇಖಕರನ್ನು ಭೇಟಿಯಾಗಲು ಚಾನ್ಸ್ ಕೊಡಿಸಿದ ಅನುರವರಿಗೂ ಮತ್ತು ಹಸಿದುಕೊಂಡಿದ್ದ ನಮಗೆ ಒಳ್ಳೆ ಊಟ ಉಣಬಡಿಸಿದ ಪ್ರೇಮಲತರವರಿಗೂ ನಾನು ಚಿರಋಣಿ.
ಲೇಖಕ: ಅಮಿತ್ ರಾಮ್ ಮಂಡಗದ್ದೆ ವಾಸುದೇವ ಹುಟ್ಟಿದ್ದು ಬೆಳೆದಿದ್ದು: ಶಿವಮ್ಮೊಗ ಈಗ ಇರುವುದು: ಲೆಮಿಂಗ್ಟನ್ ಸ್ಪಾ
ಹಸ್ತಾಕ್ಷರ ಗಿಟ್ಟಿಸಿದ ಅಮಿತ್ ರಾಮ್ (ಹಳದಿ ಟಾಪ್)
5 ವಸುಧೇಂದ್ರರೊಡನೆ ತಾಸೆರಡು ತಾಸು -ರಾಂಶರಣ್( ಡಾರ್ಬಿ )
ವಸುಧೇಂದ್ರ ಅವರೊಡನೆ ದೇಸಾಯಿ (ಎಡಕ್ಕೆ) ಮತ್ತು ರಾಂಶರಣ್
ಕಥೆ, ಪ್ರಬಂಧ, ಕಾದಂಬರಿಗಳಿಂದ ವಸುಧೇಂದ್ರ ಪರಿಚಯ ನಮಗೆಲ್ಲ. ಅವರು ಮಾರ್ಚ್ ನಲ್ಲಿ ಲಂಡನ್ನಿಗೆ ಬಂದಾಗ ಭೇಟಿಯಾಗುವ ಅವಕಾಶ ಸಿಗಬಹುದೆಂದಾಗ ಆಶೆ ನಮ್ಮಲ್ಲಿ ಮೊಳಕೆಯೊಡೆದಿತ್ತು. ಪ್ರೇಮಲತಾ ತಮ್ಮ ಮನೆಗೆ ಅವರನ್ನು ಆಮಂತ್ರಿಸುವ ಸಾಧ್ಯತೆಯಿದೆ ಎಂದಾಗ ಮೊಳಕೆ ಮೈಮುರಿದು ಎಲೆ ಮೂಡಿತ್ತು. ಇಂಗ್ಲೆಂಡಿನ ಶರದೃತುವಿನಲ್ಲಿ ಆ ಎಲೆಗಳು ಮೈಬಿಚ್ಚಿ ಸಸಿಯಾಗುವ ಯಾವ ಪ್ರಯತ್ನವನ್ನೂ ಮಾಡಡುವಂತೆ ಕಾಣುತ್ತಿರಲಿಲ್ಲ. ಆಮೇಲೆ ಒಂದು ದಿನ ಅವರು ತಮ್ಮ ಮನೆಗೆ ಮಾರ್ಚ್ ೧೫ರಂದು ಬರುತ್ತಾರೆ ಎಂಬ ಸಂದೇಶ ಅನಿವಾಸಿ ಅಂಗಳಕ್ಕೆ ಹಠಾತ್ತನೆ ಬಂತು ಪ್ರೇಮಲತಾ ಅವರಿಂದ. ಅದಾಗಲೇ ಹೆಚ್ಚಿನ ಕೆಲಸಕ್ಕೆ ಒಪ್ಪಿಕೊಂಡಿದ್ದರಿಂದ ಆ ಸುದ್ದಿ ಸಸಿಗೆ ಬೇಕಾದ ಬಿಸಿಲಿನ ಕೋಲಾಗದೇ, ಪೂರ್ವದಿಂದ ಅಮರಿಕೊಂಡ ಶೀತಲ ಗಾಳಿಯಾಗಿ ಚಿಗುರುಗಳೆಲ್ಲ ಕಮರತೊಡಗಿದವು; ಛೇ, ಬೆರುಳ್ತುದಿಗೆ ತಗಲಿದ್ದು ಕೈಗೆ ಸಿಗಲಿಲ್ಲವಲ್ಲ ಎಂಬ ಹತಾಶ ಭಾವನೆ. ಅವರು ರಾತ್ರೆ ತಮ್ಮ ಮನೆಯಲ್ಲೇ ತಂಗುವುದರಿಂದ, ಕೆಲಸ ಮುಗಿದ ಮೇಲೆಯೂ ಭೇಟಿಯಾಗುವ ಅವಕಾಶವಿದೆ ಎಂದು ಪ್ರೇಮಲತ ಆತ್ಮೀಯ ಆಮಂತ್ರಣವನ್ನು ವಿಸ್ತರಿಸಿದಾಗ ‘ಸಿಕ್ಕಿದಾಗ ಸೀರುಂಡೆ’ ಎಂದು ಗಬಕ್ಕನೆ ಅವಕಾಶವನ್ನು ಕಬಳಿಸಿದೆ.
ನಾನು ತಲುಪಿದಾಗ ಅದಾಗಲೇ ಸೂರ್ಯ ಪಾಶ್ಚಿಮದಾಚೆಯ ನಾಡು ಸೇರಿದ್ದ. ಆದರೆ, ಮನೆಯೊಳಗೇ ಕಾಲಿಟ್ಟಾಗ ಎದುರಾಗಿದ್ದು ಪ್ರಕಾಶಮಾನವಾದ ವಸುಧೇಂದ್ರರ ನಗುಮುಖ. ಮಧ್ಯಾಹ್ನ ೧ ರಿಂದ ಸತತವಾಗಿ ನೆರೆದವರೆಲ್ಲರೊಂದಿಗೆ ಮಾತಾಡುತ್ತ, ತಮ್ಮ ಜ್ಞಾನದ ಭಂಡಾರವನ್ನೇ ತೆಗೆದು, ಮೊಗೆದು ಕೊಟ್ಟಿದ್ದರೂ, ಒಂದಿನಿತೂ ಪ್ರಯಾಸವನ್ನು ತೋರದೇ, ಆತ್ಮೀಯವಾಗಿ ಬರಮಾಡಿಕೊಂಡರು. ಕನ್ನಡಕದಲ್ಲಿ ಫ್ರೆಮ್ ಹಾಕಿಟ್ಟ ಬೆರಗುಗಣ್ಣುಗಳು, ನುಣ್ಣನೆಯ ಮಸ್ತಕ, ಸದಾ ನಗೆ ಸೂಸುವ ಬಾಯಿ; ಮೈಕ್ರೋಸಾಫ್ಟ್ ನ ಸತ್ಯ ನಾಡೆಲ್ಲನ ಹೋಲುವ ರೂಪ (ನಾಡೆಲ್ಲನ ಆತ್ಮ ಚರಿತ್ರೆ ಬರೆದಾತನೇ ಇದನ್ನು ಉದ್ಗರಿಸಿದ್ದನಂತೆ ಲಂಡನ್ನಿನ ಪುಸ್ತಕ ಜಾತ್ರೆಯಲ್ಲಿ). ಅವರೊಂದಿಗೆ ಕಳೆದ ಕೆಲವು ಗಂಟೆಗಳು ಕ್ಷಣಗಳಾಗಿದ್ದವು ಎಂಬುದು ಕ್ಲೀಷೆಯಾದರೂ ಅದಕ್ಕೆ ಹೊರತಾದ ಶಬ್ದಗಳು ನನ್ನಲ್ಲಿಲ್ಲ ಅನುಭವ ವರ್ಣಿಸಲು. ಆ ಕ್ಷಿಪ್ರ ಅವಧಿಯಲ್ಲೇ ಅವರ ಅಗಾಧ ಜ್ಞಾನದ ಅರಿವು ಮೂಡಿಸಿದರು. ವಿಷಯ ದೇಸಾಯಿಯವರ ತಂದೆ ಡಾ. ಪಿ.ಬಿ ದೇಸಾಯಿಯವರ ಐತಿಹಾಸಿಕ ಸಂಶೋಧನೆಗಳಿಂದ, ಜ್ಞಾನಪೀಠ ಪ್ರಶಸ್ತಿಯ ವಿಚಾರ, ಸಾಹಿತ್ಯ ಕ್ಷೇತ್ರದಲ್ಲಿ ಜಾತಿ-ಪಂಗಡಗಳ ಪ್ರಭಾವ, ಹೊಸ ತಲೆಮಾರಿನ ಕಥೆಗಾರರ ವಿಶಿಷ್ಟ ಕಥಾ ವಿಷಯಗಳು, ಕೃತಕ ಬುದ್ಧಿಮತ್ತೆಯ ವಿಶ್ಲೇಷಣೆ, ತನ್ನ ಇಂಜಿನಿಯರಿಂಗ್ ವೃತ್ತಿಯ ಕೆಲವು ಪ್ರಸಂಗಗಳು, ಬೌದ್ಧ ಧರ್ಮದ ಉನ್ನತಿ-ಅವನತಿ, ಪ್ರಾಚೀನ ಭಾರತದಲ್ಲಿ ಮೂರ್ತಿ ಪೂಜೆಯಿತ್ತೇ? ಗ್ರೀಕರ ಆಗಮನ ಮೂರ್ತಿ ಪೂಜೆಯನ್ನು ಹುಟ್ಟು ಹಾಕಿತೆ? ಆಂಗ್ಲ ಭಾಷೆಯ ನೈಪುಣ್ಯತೆ ಹೇಗೆ ಕನ್ನಡ ಲೇಖಕರ ಪ್ರಭಾವದ ಹರವಿಗೆ ನೆರವಾಗಬಹುದು? ಹೀಗೆ ಬಗೆ ಬಗೆಯ ವಿಷಯಗಳ ಚರ್ಚೆಯ ಬಫೆ, ಅಂದು ಪ್ರೇಮಲತಾ ಸಜ್ಜು ಮಾಡಿದ ಬಗೆ ಬಗೆಯ ಭಕ್ಷ್ಯಗಳ ಬಫೆಗೆ ಸಡ್ಡು ಹೊಡೆಯುವಂತಿತ್ತು.
ಮರುದಿನ ಅವರು ನಸುಕಿನಲ್ಲೇ ಹೊರಡುವವರಾಗಿದ್ದರು, ಹಿಂದಿನ ದಿನ ನಾಡು ರಾತ್ರಿಯವರೆಗೂ ಪ್ರಯಾಣ ಮಾಡಿ ಬಂದಿದ್ದರು. ಹಾಗಾಗಿ, ವಿಧಿಯಿಲ್ಲದೇ ಮನಸಿರದ ಮನಸಿನಿಂದ ಬಿಳ್ಕೊಟ್ಟು ಬಂದೆ. ಮೊದಲ ಬಾರಿ ನೋಡಿದ್ದರೂ, ಅವರು ತೋರಿದ ಆತ್ಮೀಯತೆ, ಸ್ನೇಹ ಪರತೆ, ಮಂದಹಾಸ ಮನದಲ್ಲಿ ಅಚ್ಚಾಗಿದೆ. ಯಾವುದೇ ಸಾಹಿತ್ಯಿಕ ಹಿನ್ನಲೆಯಿಲ್ಲದಿದ್ದರೂ, ಮನದಾಳದ ಸೆಳೆತಕ್ಕೆ ಒಳಗಾಗಿ, ವೃತ್ತಿಯನ್ನು ತೊರೆದು ಸಾಹಿತ್ಯ ಕೃಷಿಗೆ, ಸಾಹಿತ್ಯದ ಬೆಳವಣಿಗೆಗೆ ಸದಾ ಮುಡಿಪಾದ ವಸುಧೇಂದ್ರರನ್ನು ಭೇಟಿಯಾದಾಗ ನಾವು ಹತ್ತನೇ ತರಗತಿಯಲ್ಲಿ ಓದಿದ ಶಿಖರಗಾಮಿಗಳು ಪುಸ್ತಕದ ನೆನಪಾಗುತ್ತದೆ. ಅದರಲ್ಲಿ ತಮ್ಮ ವೃತ್ತಿಯನ್ನು ಬಿಟ್ಟು ಅಧ್ಯಾತ್ಮ ಶಿಖರವನ್ನೇರಿದ ಅರಬಿಂದೋ ಅವರಂತೆ ಇವರಲ್ಲವೇ?