ಸಾಗರ ತಡಿಯಿಂದ ನೀರ್ಗಲ್ಲ ನದಿಗೆ

ಬೇಸಿಗೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ . ಪರೀಕ್ಷೆ ಮುಗಿಸಿದ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವರ್ಷ ಶುರುವಾಗುವ ಮೊದಲು ತಮ್ಮ ಬ್ಯಾಟರಿಗಳನ್ನು ರೀಚಾರ್ಜ್ ಮಾಡುವ ಕಾಲ. ಗೆಳೆಯರೊಂದಿಗೆ ಸಮಯದ ಮಿತಿಯೆಲ್ಲದೇ ಕಲೆತು ಮೈಮರೆಯುವ ಸಂದರ್ಭ. ವರ್ಷವಿಡೀ ಕೆಲಸ , ಟ್ಯಾಕ್ಸಿ ಡ್ರೈವಿಂಗ್ (ಮಕ್ಕಳ) ಹೀಗೆ ನೂರೆಂಟು ಜವಾಬ್ದಾರಿಗಳನ್ನು ಹೊತ್ತ ತಂದೆ – ತಾಯಿಯರಿಗೂ ವಿರಮಿಸಿ ಮತ್ತೆ ಚೇತೋಹಾರಿಯಾಗುವ ಸಮಯ. ಎಲ್ಲ ರಜೆ – ಪ್ರವಾಸಗಳು ಈ ಗುರಿಯನ್ನು ಸಾಧಿಸಲು ಅವಕಾಶ ಮಾಡಿಕೊಡುವ ಖಾತರಿ ಇರುವುದಿಲ್ಲ . ಕಳೆದ ತಿಂಗಳು ನಾವು ಕೈಗೊಂಡ ನಾರ್ವೆ ದೇಶದ ಫ್ಯೋರ್ಡ್ ಗಳ ನೌಕಾ ಯಾನ ನಮಗೆ ವಿಭಿನ್ನ ಅನುಭವ ಕೊಟ್ಟಿದ್ದಲ್ಲದೇ, ಇವೆಲ್ಲ ಗುರಿಗಳನ್ನು ಸಾಧಿಸುವ ಅಪೂರ್ವ ಅವಕಾಶ ಮಾಡಿಕೊಟ್ಟಿತು . ಈ ಪ್ರವಾಸದ ಹೈಲೈಟ್ ಗಳಲ್ಲಿ ಒಂದು ಅನುಭವವನ್ನು ನಿಮ್ಮೊಂದಿಗೆ ಇಲ್ಲಿ ಚಿತ್ರಗಳೊಂದಿಗೆ ಹಂಚಿಕೊಂಡಿದ್ದೇನೆ .

ಪ್ರೇಮಿಕೆಯಾದ ಭೂಮಿಯನ್ನು ಮುಟ್ಟುವ ತವಕದಲ್ಲಿ ಪರ್ವತಗಳ ಸಾಲನ್ನು ಸರಿಸುತ್ತ ಅಲ್ಲಲ್ಲಿ ದ್ವೀಪಗಳನ್ನು ನಿರ್ಮಿಸಿ, ಒಳನುಗ್ಗುವ ಸಾಗರ, ಪ್ರಿಯಕರನಾದ ಸಾಗರವನ್ನು ಭೂಮಿ ತನ್ನ ಅಗಾಧ ಬಾಹುಗಳಿಂದ ಅಪ್ಪಿ ವಿರಮಿಸುವ ಜಾಗವೇ ನಾರ್ವೆ ದೇಶದ ಫ್ಯೋರ್ಡ್ (fjord) ಗಳು. ಇಲ್ಲಿ ಸಾಗರಕ್ಕೆ ರೋಷವಿಲ್ಲ, ಸಾಗರದೊಂದಿಗೆ ಗುದ್ದಾಡಲು ದಡದಲ್ಲಿ ಬಂಡೆಗಳಿಲ್ಲ. ಅಲೆಗಳ ಅಬ್ಬರವಿಲ್ಲದೆ, ಸಾಗರ ಭೂಮಿಗಳೆರಡೂ ಸಂತೃಪ್ತರಾಗಿ ಒಂದರ ತೋಳಲ್ಲೊಂದು ಒರಗಿ ವಿಶ್ರಮಿಸುತ್ತಿವೆಯೋ ಎಂಬ ಭಾವನೆ ಬರುವುದು ಸಹಜ. ಜೋಗುಳ ಹಾಡುವ ಗಾಳಿ, ಹೊದಿಕೆ ಹೊದಿಸಲು ಶ್ರಮಿಸುತ್ತಿರುವ ಮೋಡಗಳು ತಾವೂ ಈ ಸಮಾಗಮದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಕಣ್ಣು , ಕಿವಿಗಳಿಗೆ ವಿಶಿಷ್ಟ ಅನುಭವ (ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ). ಇಂತಹ ಸುಂದರ, ಶುಭ್ರ ನಸುಕಿನಲ್ಲಿ, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಹದಾರನೆ ಎರಡೂ ಕಡೆ ಮಲಗಿದ್ದ ಪರ್ವತ ಸಾಲುಗಳ ನಡುವೆ ಬೆರಳಿನಂತೆ ಚಾಚಿದ್ದ ಸಾಗರದಲ್ಲಿ ೧೯ ಅಂತಸ್ತುಗಳಿದ್ದರೂ ಅಲ್ಲಾಡದೇ ಹಂಸದಂತೆ ಗಂಭೀರವಾಗಿ ಭೂಮಿ – ಸಾಗರಗಳ ವಿರಾಮಕ್ಕೆ ಚ್ಯುತಿಯಾದೀತೇನೋ ಎಂಬಂತೆ ಮೆಲ್ಲನೆ ಮುಂದಡಿಯಿಡುತ್ತಿತ್ತು P&O ಸಂಸ್ಥೆಯ ಅಯೋನ ಎಂಬ ಹಡಗು. ಬೆಳಗ್ಗೆ ಎದ್ದಾಗ ನಿಮ್ಮ ಕಣ್ಮುಂದೆ ಈ ದೃಶ್ಯ ಅನಾವರಣಗೊಂಡಾಗ ಉಕ್ಕುವ ಭಾವನೆಗಳನ್ನು ವರ್ಣಿಸಲು ಸಾಧ್ಯವೇ !

ಪರ್ವತಗಳ ತೆಕ್ಕೆಯಲ್ಲಿ ವಿರಮಿಸುತ್ತಿರುವ ನೊರ್ಡ್ ಫ್ಯೋರ್ಡ್

ನಮ್ಮ ನಾರ್ವೆ ಫ್ಯೋರ್ಡ್ ಯಾನದ ಒಂದು ವಿಶ್ರಾಮ ಸ್ಥಳ ಓಲ್ಡೆನ್ ಎಂಬ ಗ್ರಾಮ. ಓಲ್ಡೀಲ್ವ ನದಿ ಹಾಗೂ ನೋರ್ಡ್ ಫ್ಯೋರ್ಡ್ ಗಳ ಸಂಗಮ ಸ್ಥಳ ಇದು. ಕೆಲವೇ ನೂರು ಜನರಿರುವ ಈ ಗ್ರಾಮಕ್ಕೆ ಸುಮಾರು ೩ ಲಕ್ಷ ಜನ ಬೇಸಿಗೆಯಲ್ಲಿ ಅಡಿ ಇಡುತ್ತಾರೆ. ಇಲ್ಲಿನ ಮುಖ್ಯ ಆಕರ್ಷಣೆ ಹತ್ತಿರದ ಬರ್ಕ್ಸ್ಡಾಲ್ಸ್ ಬ್ರೀನ್ (Briksdalsbreen) ಎಂಬ ಹಿಮನದಿ. ಓಲ್ಡೆನ್ ಗ್ರಾಮದಿಂದ ಈ ಹಿಮನದಿಯ ತಪ್ಪಲು ಕೇವಲ ೨೫ ಕಿ.ಮೀ ದೂರದಲ್ಲಿದೆ. ಹಿಮನದಿಗೆ ಹೋಗಲು ಓಲ್ಡೆನ್ ಬಂದರಿನಿಂದ ಖಾಸಗಿ ಬಸ್ಸುಗಳ ವ್ಯವಸ್ಥೆಯಿದೆ. ಪರ್ವತಗಳ ನಡುವೆ ಹಾಸಿದ ಹಚ್ಚ ಹಸಿರಿನ ಶಾಲಿನ ನಡುವೆ ಹಾದಿ ಸುತ್ತು ಬಳಸುತ್ತ ಸಾಗುತ್ತದೆ. ಎಡಕ್ಕೊಮ್ಮೆ, ಬಲಕ್ಕೊಮ್ಮೆ ಕಾಡಿನ ಮಧ್ಯೆ ರಭಸದಿಂದ ಹರಿಯುವ ನೊರೆ ನೊರೆಯಾದ ಓಲ್ಡೀಲ್ವ ನದಿ ಕಣ್ಣ ಮುಚ್ಚಾಲೆ ಆಡುತ್ತ ಜೊತೆ ನೀಡುತ್ತದೆ. ಸಾಹಸ ಪ್ರಿಯರಿಗೆ ಈ ನದಿಯಲ್ಲಿ ರಾಫ್ಟಿಂಗ್ ಮಾಡಬಹುದು. ನಡು ದಾರಿಯಲ್ಲಿ ನೀಲ ಹಸಿರು (turquoise) ಬಣ್ಣದ ಕಣ್ಣಿಗೆ ಕಟ್ಟುವ ಓಲ್ಡೆವಾಟ್ನೆಟ್ ಎಂಬ ಸರೋವರ ಸಿಗುತ್ತದೆ. ಇದರ ಸೌಂದರ್ಯವನ್ನು ಕಟ್ಟಿಹಾಕಲು ನನ್ನ ಬತ್ತಳಿಕೆಯಲ್ಲಿ ಸೂಕ್ತ ಶಬ್ದಗಳಿಲ್ಲ, ಕ್ಯಾಮರಾ ಕೂಡ ಇದರ ಸೌಂದರ್ಯಕ್ಕೆ ನ್ಯಾಯ ದೊರಕಿಸಿಲ್ಲ. ಈ ಸರೋವರವನ್ನು ಬಳಸಿ ಬಸ್ಸು ಬರ್ಕ್ಸ್ಡಾಲ್ಸ್ ಬ್ರೀನ್ ತಪ್ಪಲಿಗೆ ಬಂದಿಳಿದಾಗ ಎದುರು ಧುತ್ತನೆ ಎದುರಾಗುವುದು ನೂರಾರು ಮೀಟರ್ ಎತ್ತರದ ಅನಾಮಧೇಯ ಜಲಪಾತ. ನಾರ್ವೆಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಜಲಪಾತಗಳು. ಪರ್ವತಗಳ ತುದಿಯಲ್ಲಿ ಮಡುಗಟ್ಟಿರುವ ಹಿಮಕ್ಕೆ ಮೇಲಿನಿಂದ ಹಾರುವುದನ್ನು ಬಿಟ್ಟರೆ ಬೇರೆ ಹಾದಿಯೇ ಇಲ್ಲವೇನೋ! ಮೊದಲೇ ಜನಸಂಖ್ಯೆ ವಿರಳ, ಕಾಣುವ ಜಲಪಾತಗಳಿಗೆಲ್ಲ ಹೆಸರಿಡುವಷ್ಟು ವ್ಯವಧಾನ ಯಾರಿಗಿದ್ದೀತು? ಈ ದೇಶದಲ್ಲಿ ಜನರಿಗಿಂತಲೂ ಜಲಪಾತಗಳ ಸಂಖ್ಯೆಯೇ ಜಾಸ್ತಿ ಇದೆಯೇನೋ ಎಂಬ ಅನುಮಾನ ನನಗಿದೆ.   

ಓಲ್ಡೆವಾಟ್ನೆಟ್ ಸರೋವರ

ತಪ್ಪಲಿನ ತಂಗುದಾಣದಿಂದ ಹಿಮನದಿಯ ಬುಡಕ್ಕೆ ಸುಮಾರು ೨೦೦ ಮೀಟರ್ ಏರನ್ನು ಏರಲು ೨.೫-೩ ಕಿ.ಮೀ ದೂರದ ದಾರಿ ಮಾಡಿದ್ದಾರೆ. ಹತ್ತಲು ತೊಂದರೆಯಿದ್ದವರಿಗೆ ವಿದ್ಯುಚ್ಚಾಲಿತ ಗಾಡಿಗಳ ವ್ಯವಸ್ಥೆಯಿದೆ. ದಾರಿಯುದ್ದಕ್ಕೂ ಬರ್ಚ್ ನಂತಹ ಮರಗಳ ಲಘು ಕಾಡು, ಬಣ್ಣಬಣ್ಣದ ಹೂವುಗಳನ್ನು ತೊಟ್ಟ ಗಿಡಗಳು ಮನಸ್ಸನ್ನು ಮುದಗೊಳಿಸುತ್ತ ಹಾದಿಯ ದೂರವನ್ನು ಕುಗ್ಗಿಸುತ್ತವೆ. ಸುಮಾರು ಅರ್ಧ ಕಿ.ಮೀ ದೂರ ಕ್ರಮಿಸಿದಾಗ ಎದುರಾಗುವುದು ಹಿಮನದಿಯಿಂದ ಕರಗಿ ಬರುವ ನದಿ ನಿರ್ಮಿಸಿದ ಕ್ಲೇಯ್ವಫಾಸ್ಸೇನ್ (Kleivafossen) ಎಂಬ ಭರ್ಜರಿ ಜಲಪಾತ. ಮೈತುಂಬಿ ಭೋರ್ಗರೆಯುತ್ತ ಧುಮುಕುವ ಜಲಪಾತ ಸೃಷ್ಟಿಸುವ ಆಹ್ಲಾದಕರ ತುಂತುರು ವೃಷ್ಟಿ ಬಿರು ಬಿಸಿಲಿದ್ದ ದಿನ ಮೈ-ಮನಗಳನ್ನು ತಂಪಾಗಿಸುತ್ತದೆ. ಅಲ್ಲಿ ಮೂಡಿ ಮರೆಯಾಗುವ ಕಾಮನಬಿಲ್ಲನ್ನು ನೋಡುತ್ತಾ ಇಡೀ ದಿನ ಕುಳಿತಿರಬಹುದು. 

ಕ್ಲೇಯ್ವಫಾಸ್ಸೇನ್ ಜಲಪಾತ (ಹಿನ್ನಲೆಯಲ್ಲಿ ಬರ್ಕ್ಸ್ಡಾಲ್ಸ್ ಬ್ರೀನ್)

ಗಡಿಬಿಡಿಯಲ್ಲಿ ಕೆಳಮುಖವಾಗಿ ಓಡುವ ನದಿಯ ಪಕ್ಕ ಊರ್ಧ್ವಮುಖವಾಗಿ ಸಾಗುವ ಕಾಲುಹಾದಿಯುದ್ದ ಅಲ್ಲಲ್ಲಿ ಹಿಮನದಿ ಹಾಗೂ ಅಲ್ಲಿನ ಭೂಭಾಗದ ಬಗ್ಗೆ ಉಪಯುಕ್ತ ಮಾಹಿತಿ ಕೊಡುವ ಫಲಕಗಳನ್ನು ನಿಲ್ಲಿಸಿದ್ದಾರೆ. ಬರ್ಕ್ಸ್ಡಾಲ್ಸ್ ಬ್ರೀನ್, ಯೂರೋಪಿನಲ್ಲೆ ಅತಿ ದೊಡ್ಡದಾದ ಜೋಸ್ಟೆಡಾಲ್ಸ್ ಬ್ರೀನ್ ಎಂಬ ಅಗಾಧ ಹಿಮನದಿಯ ೫೦ ಬಾಹುಗಳಲ್ಲೊಂದು. ಇತರ ಹಿಮನದಿಗಳಿಗಿಂತ ಅತಿ ಸುಲಭವಾಗಿ ಬರ್ಕ್ಸ್ಡಾಲ್ಸ್ ಬ್ರೀನ್ ನ್ನು ತಲುಪಬಹುದು ಎಂಬುದೇ ಇದರ ಮುಖ್ಯ ಆಕರ್ಷಣೆ. ಭೂಮಿಯ ಒಡಲಿನಿಂದ ಉಕ್ಕಿ, ಪದರ ಪದರವಾಗಿ ಹೆಪ್ಪುಗಟ್ಟಿರುವ ಪಾರದರ್ಶಕ ಬಿಳಿ-ನೀಲ ಬಣ್ಣದ ನೀರ್ಗಲ್ಲು, ಹನಿ-ಹನಿಯಾಗಿ ತೊಟ್ಟಿಕ್ಕುತ್ತ ಶಿಲೆಗಳನ್ನು ಕೊರೆದು ಹರಿದುಬರುವಾಗ ಖನಿಜಗಳ ಮಿಲನದಿಂದ ವಿಚಿತ್ರ ನೀಲಿ ಬಣ್ಣದ ಮಡುವಾಗಿ ಬುಡದಲ್ಲಿ ವಿಶ್ರಮಿಸಿದೆ. ಇದೇ ಕಾರಣಕ್ಕಾಗಿ ಈ ನೀರು ಕುಡಿಯಲು ಯೋಗ್ಯವಲ್ಲ!  ಕಳೆದ ಎರಡು ದಶಕಗಳಲ್ಲಿ ಬರ್ಕ್ಸ್ಡಾಲ್ಸ್ ಬ್ರೀನ್ ಸುಮಾರು ಅರ್ಧ ಕಿ.ಮೀ ನಷ್ಟು ಹಿಮ್ಮೆಟ್ಟಿದೆಯಂತೆ. ಚಳಿಗಾಲದ ಹಿಮಪಾತ ಇದರ ಗಾತ್ರವನ್ನು ನಿರ್ಧರಿಸಿದರೂ, ಹಿನ್ನಲೆಯಲ್ಲಿ ೨೦-೨೧ನೇ ಶತಮಾನದಲ್ಲಿ ಏರಿರುವ ಉಷ್ಣತೆ ಮುಖ್ಯ ಕಾರಣವೆಂಬುದುದು ಕಟು ಸತ್ಯ. ಇಂಗ್ಲೆಂಡಿನಿಂದ ಸಾವಿರಾರು ಕಿ.ಮೀ ದೂರವನ್ನು ಡೀಸೆಲ್ ಎಣ್ಣೆಯಿಂದ ಚಲಿಸುವ ಬ್ರಹತ್ ಹಡಗಿನಲ್ಲಿ ವಾಯು ಮಾಲಿನ್ಯ ಮಾಡುತ್ತ, ಜಗತ್ತಿನ ಉಷ್ಣತೆಯನ್ನು ಹೆಚ್ಚಿಸುತ್ತ ಅದರ ಪ್ರಭಾವವನ್ನು ನೋಡುತ್ತಾ ನಿಂತಿದ್ದೇನಲ್ಲ, ಇದೆಂತಹ ವಿಪರ್ಯಾಸ! ಅದರೊಟ್ಟಿಗೆ ಪ್ರಕೃತಿಯ ಅಗಾಧತೆ, ಅಲ್ಲಿ ಅಡಗಿರುವ ಅದಮ್ಯ ಚೈತನ್ಯ, ಬೆಡಗು ಇವನ್ನೆಲ್ಲ ಅನುಭವಿಸುತ್ತ ಉಕ್ಕಿದ ಭಾವನೆಗಳೂ ಬಣ್ಣಿಸಲಸದಳ. ಶತಮಾನಗಳಿಂದ ಉದುರಿದ ಹಿಮವನ್ನು ಒಡಲಲ್ಲಿ ಒತ್ತಿಟ್ಟುಕೊಂಡು, ಹನಿಹನಿಯಾಗಿ ತೊಟ್ಟಿಕ್ಕಿಸಿ ಬೆಳೆಸಿದ ಮಡುವಿನಿಂದ ಹೊಮ್ಮುವ ನದಿ, ಇನ್ನಿಲ್ಲದ ಗಡಿಬಿಡಿಯಿಂದ ಗುಡ್ಡವನ್ನು ಜಾರಿ ಅನತಿ ದೂರದಲ್ಲಿರುವ ಸಾಗರವನ್ನು ಸೇರುವ ಪ್ರಯಾಣಕ್ಕೆ ನನ್ನನ್ನು ಸಾಕ್ಷಿಯಾಗಿಸಿದ ಈ ಯಾನ ಮರೆಯಲಾಗದ್ದು.

ಬರ್ಕ್ಸ್ಡಾಲ್ಸ್ ಬ್ರೀನ್ ಹಿಮ ನದಿ ಹಾಗೂ ಜಲಾಶಯ
  • ರಾಂ

ಪ್ಯಾಕೇಜ ಪ್ರವಾಸದ ಮೂಲಪುರುಷ, ಥಾಮಸ್ ಕುಕ್ ಮತ್ತು ವಿಶ್ವ ಸಂಗೀತ ದಿನಾಚರಣೆ

1) ಕಳೆದ ತಿಂಗಳು ನಾನು ಬಹುಸಂಖ್ಯಾತ ಬ್ರಿಟಿಶ್ ಭಾರತೀಯ ಮೂಲದವರು ವಾಸಿಸುತ್ತಿರುವ ಲೆಸ್ಟರ್ ಶಹರಕ್ಕೆ ಹೋದಾಗ ಸ್ಟೇಶನ್ನಿನ ಹೊರಗಡೆಯಲ್ಲಿ ಕಟ್ಟೆಯ ಮೇಲೆ ನಿಂತ ಆರಡಿ ಎತ್ತರದ ಅರ್ಧ ಬೋಳು ತಲೆಯ ಈಗ ತಾನೆ ಪ್ರವಾಸಕ್ಕೆ ಹೊರಟವನಂತೆ ಕಾಣುತ್ತಿದ್ದವನ ಶಿಲ್ಪ ಕಣ್ಣಿಗೆ ಬಿತ್ತು. ಒಂದು ಕೈಯಲ್ಲಿ ಹಳೆಯ ಕಾಲದ (ಗಾಂಧಿ ತಾತನ ಹತ್ತಿರ ಇದ್ದಂಥ) ಪಾಕೆಟ್ ಗಡಿಯಾರ, ಇನ್ನೊಂದು ಕೈಯಲ್ಲಿ ಮಡಿಚಿಟ್ಟ ಕೊಡೆ, ಗ್ಲಾಡ್ಸ್ಟನ್ ಬ್ಯಾಗು, ಅದರಡಿ ಒಂದು ಚಿಕ್ಕ ಟೂರಿಂಗ್ ಸೂಟ್ ಕೇಸ್. ಅಪ್ಪಟ ಹಳೆಯಕಾಲದ ಇಂಗ್ಲಿಷ್ ’ಜಂಟಲ್ ಮನ್ ಟೂರಿಸ್ಟ್.’ ಯಾರೀತ? ಇವನೇ ಸುಮಾರು ಎರಡು ಶತಮಾನಗಳ ಹಿಂದೆ ತಾನು ನಿಂತಿದ್ದ ಜಾಗದ ಪಕ್ಕದಲ್ಲೇ ಇದ್ದ ಸ್ಟೇಶನ್ನಿನಿಂದ ೫೦೦ ಜನ ಯಾತ್ರಿಕರನ್ನು ಪ್ರವಾಸಕ್ಕೆ ಕರೆದೊಯ್ದು ಥಾಮಸ್ ಕುಕ್. ಇದೊಂದು ರೋಚಕ ಪ್ರವಾಸಿ ಕಥನ! ಇಂದು ಊರಿಂದೂರಿಗೆ ಮತ್ತು ದೇಶಾಂತರ ಪ್ರವಾಸಿಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಇಪ್ಪತ್ತನೆಯ ಶತಮಾನದ ಅರವತ್ತರ ಮತ್ತು ಎಪ್ಪತ್ತರ ದಶಕಗಳಲ್ಲಿ ಇಂಗ್ಲೆಂಡಿನಲ್ಲಿ ಸರ್ ಫ್ರೆಡ್ಡಿ ಲೇಕರ್ ಸ್ಲೈ ಟ್ರೇನ್ (Skytrain) ಎನ್ನುವ ಕಂಪನಿ ಶುರು ಮಾಡಿದ ನಂತರ ಪ್ಯಾಕೇಜ್ ಹಾಲಿಡೇಗಳು ಬೆಳೆಯುತ್ತ ಥಾಮಸ್ ಕುಕ್ ಕಂಪನಿ ೧೯೮೦ರ ದಶಕದಲ್ಲಿ ಅದನ್ನು ಉಚ್ಛ್ರಾಯ ಸ್ಥಿತಿಗೆ ಒಯ್ಯಿತು. ಆದರೆ ಅದು ಯಾವಾಗ ಪ್ರಾರಂಭವಾಯಿತು? ಇಲ್ಲಿಂದ ಶುರುವಾಗುತ್ತದೆ ಜರ್ನಿ!

ಕಾಲ್ನಡಿಗೆಯಲ್ಲಿ ಹೊರಟ ಪಾದ್ರಿ
ಥಾಮಸ್ ಕುಕ್ ಹುಟ್ಟಿದ್ದು ಡಾರ್ಬಿಶೈರಿನ ಮೆಲ್ ಬೋರ್ನ್ (ಆಸ್ಟ್ರೇಲಿಯದು ಅಲ್ಲ) ಎನ್ನುವ ಹಳ್ಳಿಯಲ್ಲಿ, ೧೮೦೮ರಲ್ಲಿ. ಹತ್ತು ವರ್ಷಕ್ಕೇ ಶಾಲೆ ಬಿಟ್ಟು ತನ್ನ ಸೋದರಮಾವನ ಕೆಳಗೆ ಬಡಿಗನಾಗಿ ಕೆಲಸಕ್ಕೆ ಸೇರಿಕೊಂಡ. ತಂದೆ ತಾಯಿಗಳ ಕಟ್ಟಾ ಬಾಪ್ಟಿಸ್ಟ್ ಕ್ರಿಶ್ಚಿಯನ್ ವಾತಾವರಣದಲ್ಲಿ ಬೆಳೆದವನು. ೧೮೨೮ರಲ್ಲಿ ಬೈಬಲ್ ರೀಡರ್ ಮತ್ತಿ ಮಿಷನರಿಯಾಗಿ ನೇಮಕಗೊಂಡನು. ಆ ಕೆಲಸಕ್ಕಾಗಿಯೇ ಮರುವರ್ಷ ೨೬೯೨ ಮೈಲಿಗಳ ಸಂಚಾರ; ಅದರಲ್ಲಿ ಎರಡುಸಾವಿರ ಮೈಲು ಬರೀ ಕಾಲ್ನಡಿಗೆಯಲ್ಲೇ ಸುತ್ತಾಡಿದ! ಮದ್ಯಪಾನವಿರೋಧಿ ಚಳುವಳಿಗಾಗಿ  ಮೀಟಿಂಗ್ ಮತ್ತು ಮೆರವಣಿಗೆಗಳನ್ನು ಯೋಜಿಸಿದ. ಇಸವಿ ಸನ್ ೧೮೪ರ ಜೂನ್ ೯ ರಂದು ಥಾಮಸ್ ತನ್ನ ಊರಾದ ಮಾರ್ಕೆಟ್ ಹಾರ್ಬರಾದಿಂದ ಕಾಲ್ನಡಿಗೆಯಲ್ಲಿ ೧೧ ಮೈಲು ದೂರದ ಲೆಸ್ಟರ್ ನಗರಕ್ಕೆ ಟೆಂಪರನ್ಸ್ (ಮದ್ಯಪಾನ ಸಂಯಮ ಸಂಘದ) ಮೀಟಿಂಗಿಗೆ ಹೊರಟಿದ್ದ. ಉದರ ನಿರ್ವಹಣೆಗಾಗಿ ಬಡಿಗನಾಗಿ ಕೆಲಸಮಾಡುತ್ತಿದ್ದರೂ ತನಗೆ ಅತೀವ ಶ್ರದ್ಧೆಯಿದ್ದ ಕ್ರಿಸ್ತಮತದ ಬಾಪ್ಟಿಸ್ಟ್ ಪ್ರವಾಚನಕಾರನೂ ಆಗಿದ್ದ ಆತನ ತಲೆಯಲ್ಲಿ ಫಕ್ಕನೆ ಸುಳಿಯಿತೊಂದು ವಿಚಾರ: ಇತ್ತೀಚಿಗೆ ಬೆಳೆಯುತ್ತಿರುವ ರೇಲ್ವೆಯ ಪ್ರಭಾವವನ್ನು ನಮ್ಮ ಬಡವರನ್ನು ಹೀನ ಸ್ಥಿತಿಗೆಳೆಯುತ್ತಿರುವ ಮದ್ಯಪಾನದಂಥ ದುರ್ವ್ಯಸನಗಳ ಸಂಯಮ ಚಳುವಳಿಗೇಕೆ  (Temperance Movement) ಉಪಯೋಗಿಸಿಕೊಳ್ಳಬಾರದು? ಅಂತ. ಈ ವಿಚಾರವನ್ನು ಅಂದು ಟೆಂಪರನ್ಸ್ ಸೊಸೈಟಿ ಸಭೆಯಲ್ಲಿ ಮಂಡಿಸಿ ಕಮಿಟಿಯಿಂದ ಆನುಮತಿ ಪಡೆದು ಕಾರ್ಯಪ್ರವೃತ್ತನಾದ. ಮುಂದಿನ ಜುಲೈ ೫, ೧೮೪೧ ಮಹತ್ವದ ದಿನ. ಮೊದಲ ಬಾರಿ ಇಂಗ್ಲೆಂಡಿನ ಲೆಸ್ಟರ್ ನಗರದಿಂದ ಲಫ್ ಬರಾ (Loughborough) ಎನ್ನುವ ಊರಿಗೆ ೪೮೫ ಜನರನ್ನು ಹದಿನೊಂದು ಮೈಲು ರೈಲು ಪ್ರವಾಸ ಮಾಡಿಸಿ ಥಾಮಸ್ ಕುಕ್  ಪಪ್ರಥಮ ದಾಖಲೆಯನ್ನೇ ಮಾಡಿದನು. ಆ ದಿನ ಅವರೆಲ್ಲ ಮರಳಿ ಲೆಸ್ಟರಿಗೆ ಬಂದಾಗ ರಾತ್ರಿ ೧೦ ೩೦ ಗಂಟೆ! ಅವರು ತೆತ್ತ ಶುಲ್ಕ ಬರೀ ಒಂದು ಶಿಲ್ಲಿಂಗ್. ಈಗಿನ ಲೆಕ್ಕದಲ್ಲಿ ಮೂರು ಪೌಂಡುಗಳು; ಅಂದು ಸಾಮಾನ್ಯ ಮನುಷ್ಯನ ಆಗಿನ ಕಾಲದ ಒಂದು ತಿಂಗಳ ಆದಾಯಕ್ಕೆ ಸಮವಾಗಿತ್ತು. ಅಂದೇ ಹುಟ್ಟಿತು ಪ್ಯಾಕೇಜ್ ಪ್ರವಾಸ. ಆತನೇ ಅದಕ್ಕೆ ಚಾಲನೆ ಕೊಟ್ಟವರಲ್ಲಿ ಮೊದಲಿಗನು. ಈ ಪ್ರವಾಸದ ಯಶಸ್ಸಿನಿಂದ ಪ್ರೇರಿತನಾಗಿ ೧೮೫೧ರ ಗ್ರೇಟ್ ಎಗ್ಸಿಬಿಷನ್ ಗೆ ಒಂದುಉವರೆ ಲಕ್ಷ ಜನರನ್ನು ಕೊಂಡೊಯ್ದ. ೧೮೫೫ ರ ಪ್ಯಾರಿಸ್ ಎಗ್ಸಿಬಿಷನ್ನಿಗೆ ಹೋಗಿಬಂದ ಲೆಸ್ಟರಿನ ಪ್ರಯಾನಿಕರು ತೆತ್ತ ಶುಲ್ಕ ಬರೀ ಒಂದೂ ವರೆ ಪೌಂಡುಗಳು! ಹೀಗೇ ’ಕುಕ್ ಟೂರಿಸ್ಟ್’ಗಳ ಸಂಖ್ಯೆ ಬೆಳೆದು ಪ್ರವಾಸಗಳು ಯೂರೋಪ್, ಅಮೇರಿಕಾ, ಸಿಂಗಾಪೂರ್, ಪ್ರಾಚ್ಯ ದೇಶಗಳಿಗೂ ವಿಸ್ತರರಿಸಿತು. ಅಲ್ಲಿ ವಾಸಕ್ಕೆಹೋಟೆಲ್ ಕೂಪನ್ನುಗಳು, ಹಣಕಾಸಿನ ವ್ಯವಸ್ಥೆಗೆ ಟ್ರಾವಲರ್ಸ್ ಚೆಕ್ ಹೀಗೇ ಬೆಳೆಯಿತು ಕುಕ್ ಎಂಪಾಯರ್! ಆತನ ನಂತರ ಆತನ ಮಗನು ಥಾಮಸ್ ಕುಕ್ ಕಂಪನಿಯನ್ನು ಮುನ್ನಡೆಸಿ ಇನ್ನಷ್ಟು ಬೆಳೆಸಿದನು. ಮುಂದೆ ಮೊಮ್ಮಕ್ಕಳೂ ಸೇರಿಕೊಂಡರು. ಅವರದೇ ಏರ್ ಲೈನ್ ಸಹ ಪ್ರಾರಂಭವಾಯಿತು
ಲಫ್ ಬರಾ ಸ್ಟೇಶನ್ನಿನಲ್ಲಿ ಆ ಪ್ರವಾಸದ ಸ್ಮಾರಕವಾಗಿ ಹಸಿರು ಫಲಕದ ಅನಾವರಣ (೨೦೨೩)
ಫ್ರೆಡ್ಡಿ ಲೇಕರ್ ಅವರ ಸ್ಕೈ ಟ್ರೇನ್ ಮತ್ತು ವಿದೇಶ ಪ್ರವಾಸದ ಬೆಳವಣಿಗೆ

ಮೋಡ, ಮಂಜು ಕವಿದ ಬ್ರಿಟಿಶ್ ಆಕಾಶಕ್ಕೆ ಹೊಂದಿಕೊಂಡವರು ಮತ್ತು ಇಡೀ ವರ್ಷ ಸತತವಾಗಿಯಲ್ಲದಿದ್ದರೂ ತಿಂಗಳಲ್ಲೊಂದು ಬಾರಿಯಾದರೂ ಮಳೆಯಾಗುವ ಈ ಚಳಿನಾಡಿನಲ್ಲಿ ವಾಸಿಸುವ ಆಂಗ್ಲರ ಹವ್ಯಾಸಗಳಲ್ಲಿ ಒಂದು ಬಹುತೇಕ ಎಲ್ಲ ಕುಟುಂಬದವರು ’ಬೇಸಗೆಯಲ್ಲಿ’ ಒಂದು ಅಥವಾ ಎರಡು ವಾರಗಳು ಸಮುದ್ರತಟದ ಮೇಲೆ ಕಳೆಯುವ ಬೀಚ್ ಹಾಲಿಡೇ! ಚಿಕ್ಕಂದಿನಲ್ಲಿ ಈ ದೇಶದ ನೈಋತ್ಯದ ಡೆವನ್ ಮತ್ತು ಕಾರ್ನ್ ವಾಲ್ ಪ್ರದೇಶಗಳಿಗೆ ತಂಡೋಪ ತಂಡವಾಗಿ ಹೋಗುವ ರಿಚುಅಲ್ ಅವರದು. ಅದು ತಪ್ಪಿದರೆ ಉತ್ತರದ ಬ್ಲಾಕ್ ಪೂಲ್, ಅಥವಾ ಅಗ್ನೇಯದ ಗ್ರೇಟ್ ಯಾರ್ಮೌತ್ ಅಥವಾ ಸ್ಕಾಟ್ಲಂಡಿಗೆ ಕಾರಿಗೆ ಕಾರವಾನ್ ಲಗತ್ತಿಸಿ ಪಯಣ. ಇದು ತಲೆ ತಲಾಂತರಗಳಿಂದ ಅವರು ಮಾಡುತ್ತಿದ್ದರೆಂದು ವಿಕ್ಟೋರಿಯನ್ ಆಂಗ್ಲ ಸಾಹಿತಿ ಚಾರ್ಲ್ಸ್ ಡಿಕೆನ್ಸ್ನ ಓದುಗರಿಗೂ ವಿದಿತ. ಆಗ ಮಧ್ಯಮ ವರ್ಗದ ಕುಟುಂಬಗಳಿಗೆ ಏರೋಪ್ಲೇನಿನಲ್ಲಿ ಪರದೇಶಗಳಿಗೆ ಹೋಗುವ ಸಾಮರ್ಥ್ಯ ಇರಲಿಲ್ಲ. ಅದನ್ನು ಮುರಿದವನು ೧೯೭೭ರಲ್ಲಿ ಬರೀ ೧೧೮ ಸ್ಟರ್ಲಿಂಗ್ ಪೌಂಡುಗಳಿಗೆ ಅಮೇರಿಕೆಗೆ ಕೊಂಡೊಯ್ಯುವ ಸ್ಕೈಟ್ರೇನ್ ಪ್ರಾರಂಭ ಮಾಡಿದವನೇ ಮುಂದೆ ಸರ್ ಬಿರುದು ಪಡೆದು ಸರ್ ಫ್ರೆಡ್ಡಿ ಲೇಕರ್ ಆದವನು. ಆ ತಿಕೀಟು ಉಳಿದ ದೊಡ್ಡ ಏರ್ಲೈನ್ಗಳಿಗಿಂತ ಶೇಕಡಾ ೬೬ ಕಡಿಮೆ ದರದ್ದು ಎಂದ ಮೇಲೆ ಶ್ರೀಸಾಮಾನ್ಯನ  ಪರದೇಶ ಪ್ರವಾಸದ ಕನಸು ನನಸಾಯಿತು. ಹಲವೇ ವರ್ಷಗಳ ನಂತರ ೧೯೮೦ರ ದಶಕದಲ್ಲಿ ಹಣಕಾಸಿನ ಕುಸಿತ (ರಿಸೆಷನ್) ಮತ್ತು ಆತನ ಪ್ರತಿಸ್ಫರ್ದಿ ಏರ್ಲೈನ್ ಗಳ ಷಡ್ಯಂತ್ರ ಇವೆರಡರ ಕಾರಣದಿಂದ ಆತನ ಕಂಪನಿ ಮುಳುಗಿದರೂ ಜನರಿಗೆ ಯೂರೋಪ್ ಮತ್ತು ದೂರ ದೇಶಗಳಿಗೆ ಬಿಸಿಲನ್ನು ಬೆನ್ನು ಹತ್ತಿ ಪ್ರವಾಸ ಮಾಡುವ ಚಟ ಆಗಲೇ ಹತ್ತಿತ್ತು. ಚಳಿ-ಮಳೆಯಿಂದ ಬೇಸತ್ತು ಯುಕೆಯನ್ನು ಬಿಟ್ಟು ಎರಡೇ ತಾಸುಗಳೊಳಗೆ ದಕ್ಷಿಣ ಫ್ರಾನ್ಸ್ ಅಥವಾ ಅಗ್ಗ ದರದಲ್ಲಿ ಬೇಸಗೆಯಲ್ಲಿ ಬೇಯುವ ಸ್ಪೇನಿನ ಕಾಸ್ಟಾ ಡೆಲ್ ಬೀಚುಗಳಿಗೆ ಹೋಗುವ ಸಾಧ್ಯತೆ ಅವರ ಮಡಿಯಲ್ಲಿ ಬಂದು ಬಿದ್ದಾಗ ಯಾರಿಗೆ ಬೇಡ? ಒಂದು ಅಥವಾ ಎರಡು ವಾರಗಳ ನಂತರ ವಿಮಾನದಲ್ಲಿ ಮರಳುವಾಗ ಬೀಚಿನಲ್ಲಿ ಬೆಂದ ಕಂದು ಬಣ್ಣದ ಸನ್ ಟ್ಯಾನ್ ಮೈ ಬಿಟ್ಟು ಕೊಂಡು ಮೆರೆದವರೇ ಟೀಚರ್-ಲಾಯರ್ನಿಂದ ಹಿಡಿದು ಗಣಿ ಕೆಲಸಗಾರರು ಸಹ. ಇದರ ಲಾಭ ಪಡೆದ ಥಾಮಸ್ ಕುಕ್ ಕಂಪೆನಿ ಒಮ್ಮೆಲೆ ನೂರು ಟ್ರಾವಲ್ ಏಜಂಟ್ ಅಂಗಡಿಗಳನ್ನು ಊರೂರಿಗೆ ಹೋಗಿ ತೆರೆಯಿತು. ಅದರ ಹೆಸರು ಪ್ಯಾಕೇಜ್ ಹಾಲಿಡೇಗೆ ಮನೆಮಾತಾಯಿತು. ಅವುಗಳೂ ಏರಿಳಿತಗಳನ್ನು ಕಂಡ ಕಥೆಯನ್ನು ನಂತರ ನೋಡುವಾ.

ಟ್ರಾವಲರ್ಸ್ ಚೆಕ್
  ಕುಕ್ ’ಸಾಮ್ರಾಜ್ಯ’  ಅವನತಿ ಮತ್ತು ಹೊಸ ಅವತಾರ 
೧೭೮ ವರ್ಷಗಳ ನಿರಂತರ (ಮಹಾಯುದ್ಧದ ಸಮಯದಲ್ಲಿ ಸ್ವಲ್ಪ ಕಾಲ ರಾಷ್ಟ್ರೀಕರಣವಾದದ್ದನ್ನು ಬಿಟ್ಟು) ಸೂರ್ಯೋದಯ ಸೂರ್ಯಾಸ್ತಗಳನ್ನರಸಿ ಬಂದ ಲಕ್ಷಾಂತರ ಪ್ರಯಾಣಿಕರನ್ನು ದೇಶವಿದೇಶಗಳಿಗೆ ಕರೆದುಕೊಂಡು ಹೋದನಂತರ ಸೆಪ್ಟೆಂಬರ್, ೨೦೧೯ರಲ್ಲಿ ಅದರ ನೇಸರ ಅಸ್ತಂಗತವಾಯಿತು. ಏಕೆ? ಕಾಲ ಬದಲಾದಂತೆ, ಮತ್ತು ಅಗ್ಗದರದ ವಿಮಾನಯಾನದ ಕಂಪನಿಗಳಾದ ಈಸಿ ಜೆಟ್, ರೈಯಾನ್ ಏರ್, ಜೆಟ್-2, Airbnbಗಳ ಪೈಪೋಟಿ, ಕೋವಿಡ್ ಮಹಾ ಮಾರಿ ಜನರ ಓಡಾಟವನ್ನಿ ನಿಲ್ಲಿಸಿದ್ದು ಇವೆಲ್ಲ ಕೂಡಿ ಅದರ ಬೇಡಿಕೆ ಕಡಿಮೆಯಾಗಲಾರಂಭಿಸಿತು. ಜೊತೆಗೆ ೨೦೧೬ರಲ್ಲಿ ಯೂರೋಪಿಯನ್ನರ ಪ್ರಮುಖ ಹಾಲಿಡೇ ದೇಶವಾಗಿದ್ದ ಟರ್ಕಿಯಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ, ೨೦೧೮ ರಲ್ಲಿ ಹೀಟ್ ವೇವ್, ಇಂದಿನ ಯುವ ಪ್ರವಾಸಿಕರು ಇಂಟರ್ನೆಟ್ ನಲ್ಲಿ ತಮ್ಮ ವಿಮಾನ, ಹೋಟೆಲ್ ಹುಡಿಕಿಕೊಳ್ಳುವದು ಇವೆಲ್ಲ ಸೇರಿ ಒಂದು ಪ್ರಸಿದ್ಧ ಆಂಗ್ಲ ಪದಗುಚ್ಛದಂತೆ (To cook one's goose) ಥಾಮಸ್ ಕುಕ್ಕನ ‘ಬಾತನ್ನು ಬೇಯಿಸಿದಂತಾಯಿತು!‘ ೨೩, ಸೆಪ್ಟೆಂಬರ್ ೨೦೧೯ ರಂದು ಕಂಪನಿ ಮುಳುಗಿತು. ಆದರೆ ಫೀನಿಕ್ಸ್ ಪಕ್ಷಿಯಂತೆ ಅದು ಬರೀ ಆನ್ ಲೈನ್ ಟ್ರಾವಲ್ ಏಜಂಟ್ ರೂಪದಲ್ಲಿ ಚೀನದ ಫೋಸನ್ ಟೂರಿಸ್ಮ್ ಗ್ರುಪ್ ಹೆಸರಿನಲ್ಲಿ ಸನ್ನಿ ಹಾರ್ಟ್ ಲಾಂಛನದೊಂದಿಗೆ ಮತ್ತೆ ತಲೆಯಿತ್ತಿದೆ. ವಿಪರ್ಯಾಸವೆಂದರೆ ಅದರ ಧ್ಯೇಯವಾಕ್ಯ:  ಡೋಂಟ್ ಜಸ್ತ್ ಬುಕ್ ಇಟ್, ಥಾಮಸ್ ಕುಕ್ ಇಟ್! (Don't just book it, Thomas Cook it.)

ಶ್ರೀವತ್ಸ ದೇಸಾಯಿ

(ಉದಯವಾಣಿಯಲ್ಲಿ ಅವರೇ ಬರೆದ ಲೇಖನದ ಪರಿಷ್ಕೃತ, ವಿಸ್ತೃತ ಆವೃತ್ತಿ)
2)  ನಮ್ಮ ಮನೆಯಲ್ಲಿ ಆಚರಿಸಿದ ವಿಶ್ವ ಸಂಗೀತ ದಿನಾಚರಣೆ -ಪ್ರಮೋದ ಲಕ್ಕುಂಡಿ

’ಎತ್ತಣ ಥಾಮಸ್ ಕುಕ್, ಎತ್ತಣ ಸಂಗೀತ?’ ಅನ್ನಬಹುದು, ನೀವು. “We carried music with us, and music met us at Loughborough Station … and cheered us all along the line with the heartiest welcome … the whole affair being one which excited extraordinary interest, not only in the county of Leicester but throughout the whole country.” ಆ ದಿನ ಆತ ತನ್ನ ಡೈರಿಯಲ್ಲಿ ಬರೆದ ಮಾತುಗಳಿವು. ಸಂಗೀತಕ್ಕ ಕಾಲ, ದೇಶದ ಪರಿವೆಯಿಲ್ಲ. ೧೯೮೧ ರಲ್ಲಿ ಪ್ಯಾರಿಸ್ ನಲ್ಲಿ ಜಾಕ್ ಲ್ಯಾಂಗ್ ಮತ್ತು ಮೋರಿಸ್ ಫ್ಲೂರೆಟ್ ಎನ್ನುವ ಫ್ರೆಂಚ್ ಸಂಗೀತಗಾರ ಸೇರಿ ‘Fête de la Musique’ (“Make music.”) ಅಂತ ಕರೆ ಕೊಟ್ಟು ಈ ದಿನವನ್ನು ಸಂಗೀತಕ್ಕಾಗಿ ಮುಡುಪಿಡುವ ಯೋಜನೆ ಹಾಕಿ ಮರು ವರ್ಷ ಜೂನ್ ೨೧ರಂದು ಇದನ್ನು ವಿಶ್ವದಾದ್ಯಂತ ಆಚರಿಸುವ ಪ್ರಣಾಲಿ ಶುರುವಾಯಿತು (World Music Day). ಜಗತ್ತಿನಾದ್ಯಂತ ಜನರು ತಮ್ಮ ಮನೆಯಲ್ಲಿ, ಜಗುಲಿಯಲ್ಲೋ, ರಸ್ತೆಯಲ್ಲಿ, ಪಾರ್ಕ್, ಸಭೆಗಳಲ್ಲಿ ಸೇರಿ ಆಚರಿಸುತ್ತ ಈ ದಿನವನ್ನು ಸಂಗೀತಕ್ಕಾಗಿಯೇ ಮೀಸಲಿಟ್ಟಿರುತ್ತಾರೆ. ಅದರ ಪ್ರಕಾರ ತಮ್ಮ ಮನೆಯಲ್ಲಿ ಅದನ್ನು ಆಚರಿಸಿದ್ದನ್ನು ನಿಮ್ಮೊಡನೆ ಪ್ರಮೋದ ಅವರು ಹಂಚಿಕೊಂಡಿದ್ದಾರೆ. ಯುನೆಸ್ಕೋ ಅವರು ಅಕ್ಟೋಬರ್ ೧ ನ್ನು ಜಾಗತಿಕ ಸೌಹಾರ್ದತೆ ಮತ್ತು ಶಾಂತಿಗಾಗಿ ವಿಭಿನ್ನವಾಗಿ “ಇಂಟರ್ನ್ಯಾಷನಲ್ ಮ್ಯೂಸಿಕ್ ಡೇ“ ಅಂತ ಕರೆದರು. ಪ್ರಮೋದ ಅವರ ಮನೆಯಲ್ಲಿ ನಡೆದದ್ದು ಒಂದು ಸಿಂಫನಿಯೇ? ನೀವೇ ತೀರ್ಮಾನಿಸಿರಿ! (ಸಂ)
ಪ್ರಮೋದ ಬರೀತಾರೆ:
ಮುಂಜಾನಿ ದಿನಪತ್ರಿಕೆ ಹಿಡ್ಕೊಂಡು, ಚಹಾ ಕುಡ್ಕೋತ ಇಂದಿನ ಸಮಾಚಾರ ಓದೋಣ ಅಂತ ಆರಾಮ ಕುರ್ಚಿಯಲ್ಲಿ ಮೈ ಊರಿದೆ ... ಆರಾಮ ಕುರ್ಚಿಯಲ್ಲಿ ವಿರಮಿಸೋ ಮಜಾನೇ ಬೇರೆ

ಬಾನುಲಿಯಲ್ಲಿ ಸಣ್ಣಗೆ ಹೆಂಡ್ತಿ ಹಚ್ಚಿದ ಹಾಡು ಕೇಳಿಸ್ತಿತ್ತು...

ಹಾಡು ಹಳೆಯದಾದರೇನು ಭಾವ ನವನವೀನ

ಎದೆಯ ಭಾವ ಹೊಮ್ಮುಹುದಕೆ ಭಾಷೆ ಒರಟು ಯಾನ ||

ಡಾ. ಜಿ ಎಸ ಶಿವರುದ್ರಪ್ಪ ಅವರ ಸಾಹಿತ್ಯದ ಹಾಡು ಮನಸ್ಸಿಗೆ ಮುದ ಕೊಡುತ್ತದೆ. ಖುಷಿಯಲ್ಲಿ ಮೈಮರೆತಾಗ ಕೇಳಿಸಿತು ಗುಂಡನ ದನಿ. ಬಂದಪ ನಮ್ಮ ಹರಟೆ ಗುಂಡ ಅನ್ಕೋತ ಕರೆದೆ - "ಬಾರೋ ಗುಂಡಣ್ಣ, ಬಹಳ ದಿನ ಆಯಿತು ಭೇಟಿಯಾಗಿ"

ಗುಂಡ ಒಳಗೆ ಬಂದು ಕೂತು, ಸಮಾಚಾರ ಪತ್ರಿಕೆ ಪುರವಣಿ ಪತ್ರಿಕೆ ಓದುತ್ತ "ನನಗೂ ಚಾ ಕೊಡಿ ಅಕ್ಕ" ಅಂತ ಕೂಗಿದ. ಪತ್ರಿಕೆ ಓದುತ್ತ ಕೇಳಿದ "ಸತ್ಯಾ, ಏನೋ ಇದು ವಿಶ್ವ ಸಂಗೀತ ದಿನಾಚರಣೆ? ಸಂಗೀತ ಅಂದರೆ ಏನೂ ಅಂತ ಗೊತ್ತಿಲ್ಲದ ನನಗೆ ಬೇರೆ ಏನೂ ತಿಳಿಯೋದಿಲ್ಲ, ಸಂಗೀತ ಅಂದ್ರೆ ಖುಷಿ ಕೊಡೊ ಹಾಡು ಮಾತ್ರ"

ನನಗೂ ಖರೆ ಅನಿಸ್ತು, ಮನಸ್ನಾಗೆ ಅಂದ್ಕೊಂಡೆ ನನಗೆ ಸಂಗೀತ ಕಲ್ಲಿನ ಕಡಲೆ. ನಮ್ಮ ಅಮ್ಮ, ಅಜ್ಜಿ ಆಗಾಗ ಹಾಡುವದನ್ನು ಕೇಳಿದ್ದೇನೆ, ಅದನ್ನು ಬಿಟ್ಟರೆ ಶಾಲೆ ಸಮಯದಲ್ಲಿ ನಮ್ಮ ಫಿಲಿಪ್ಸ್ ಮ್ಯೂಸಿಕ್ ಸಿಸ್ಟಮ್ ಮತ್ತು ರಾಶಿ ಕ್ಯಾಸ್ಸೆಟ್ಸ್ ನಮ್ಮ ಸಂಗೀತ ಜಗತ್ತಾಗಿತ್ತು. ಹೈಸ್ಕೂಲ್ನಲ್ಲಿ ಇದ್ದಾಗ ಬಿಜಾಪುರ್ ತೀಟೆ ಸರ್ (ಇವರು ಬಿಜಾಪುರಿನ ಪ್ರಸಿದ್ಧ ಸಂಗೀತ ಗುರುಗಳು) ಹತ್ತಿರ ಒಂದು ಪ್ರಯತ್ನ ಸಂಗೀತ ಕಲಿಯೋದು ಆಗಿದೆ. ನಾನು, ನಮ್ಮಣ್ಣ ಮದುವೆಯಾದ ಮೇಲೆ ಹಾಡೋರೂ, ಬರೆಯೋರು ನಮ್ಮ ಮನೆಯ ಭಾಗ ಆದ್ರು.

ಸತ್ಯಾ: (ಸತ್ಯಪ್ರಮೋದ, ಲೇಖಕ) ಗುಂಡಾ... ಹಾಡು ಅಂದಕೂಡಲೇ ನಮ್ಮಣ್ಣನ ಒಂದು ಸಾಹಸ ನೆನಪಾಗ್ತದೆ, ಹೇಳ್ತಿನ್ ಕೇಳು,

ನಾವು ಹೈಸ್ಕೂಲ್ನಲ್ಲಿ ಇದ್ದಾಗ ಪ್ರತಿದಿನ ಸರಿಯಾಗಿ ಮಧ್ಯಾಹ್ನ ಬಿ ಆರ್ ಲಕ್ಷ್ಮಣರಾವ್ ಅವರ ಕೆಳಗಿನ ಹಾಡು ನಮಣ್ಣ ಜೋರಾಗಿ ಕೇಳಿಸ್ತಿದ್ದ

’"ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ

ಮಧುರವಾದ ವೇಣುನಾದ

ನನ್ನ ಪ್ರೇಯಸಿ..."

ನಾನು ಮತ್ತು ಅಮ್ಮ ಪ್ರತಿದಿನ ವಿಚಾರ ಮಾಡುತ್ತಿದ್ದೆವು, ಇದೆ ಹಾಡು ಪ್ರತಿದಿನ ಇದೆ ಸಮಯಕ್ಕೆ ಯಾಕೆ ಕೇಳಿಸ್ತಾನೆ? ಆಮೇಲೆ ಗೊತ್ತಾಯಿತು ನಮ್ಮ ಮನೆಯ ಎದರು ಒಂದು ಸುಂದರ ಕೆಂಗುಲಾಬಿ ಹುಡುಗಿ ಶಾಲೆಯಿಂದ ಮನೆಗೆ ಹೋಗುತ್ತಿದ್ದಳು, ಅವ್ಳು ಈ ಹಾಡು ಕೇಳಿ ಏನಾದ್ರು ಅವನ ಕಡೆ ನೋಡ್ತಾಳೇನು ಎಂದು ಹರಸಾಹಸ ಪ್ರಯತ್ನ ಮಾಡ್ತಿದ್ದ"

ಗುಂಡಾ: ನಗುತ್ತ "ಜಾಲಿ ಬಾರಿನಲ್ಲಿ ಪೋಲಿ ಹುಡುಗರು ಹಾಡನ್ನು ಪ್ರಯತ್ನ ಮಾಡಿಲ್ಲ ತಾನೇ?"

ಚಾ ಕೈಯಲ್ಲಿ ಹಿಡ್ಕೊಂಡು ಬಂದ ನನ್ನ ಹೆಂಡ್ತಿ "ಉಡಾಳ್ತನ ಬಿಟ್ಟು ಬೇರೆ ಯೇನಾದ್ರು ಮಾಡಿರೇನು ನೀವ್ ಅಣ್ಣ, ತಮ್ಮ?"

ಸತ್ಯಾ: "ಹಾಡು ಕಾಡತೈತಿ, ಕಾಡು ಹಾಡಿತೈತಿ (ಇಲ್ಲಿ ಕಾಡು - ಕಾಡುವ ಮನ ಎನ್ನುವದರ ಸಂಕ್ಷಿಪ್ತ).

ಕೆಲವು ಹಾಡು ನಮಗೆ ಬಹಳ ಕಾಡ್ತವಾ, ನನ್ನ ಪ್ರಕಾರ ಎಲ್ಲರಿಗೂ ಕೆಲವು ಅವರದೇ ಪ್ರೀತಿಯ ಹಾಡುಗಳು ಇರ್ತಾವ, ಅವರ ಮನಸ್ಸಿನ ಭಾವದ ಪ್ರಕಾರ ಅವರ ಮನದಲ್ಲಿ ಅವು ಮೂಡ್ತಾವ... ನಂಗಂತ್ತೂ ಇದು ಖರೆ ನೋಡಪ್ಪ"

"ಗುಂಡಣ್ಣ ನಿಮಗೆ ಇವರ ಒಂದು ಗುಟ್ಟು ಹೇಳ್ತಿನಿ ಕೇಳ್ರಿ...

ಇವರು ಅವರ ಅಣ್ಣ ನೌಕ್ರಿಗೆ ಊರ ಬಿಟ್ಟು ಬೇರೆ ಕಡೆ ಹೋದಾಗ ಇವರು ಕೇಳ್ತಿದಿದ್ದು ಹಾಡು ಯಾವ್ದು ಗೊತ್ತಾ?

ನಾಮ್ ಸಿನೆಮಾದ "ತೂ ಕಲ್ ಚಲಜಾಯೆಗಾ ತೋ ಮೈ  ಕ್ಯಾ ಕರೂಂಗ, ತೂ ಯಾದ್ ಬಹುತ್ ಆಯೇಗಾ ತೋ ಮೈ ಕ್ಯಾ ಕರೂಂಗsss"

ಉಡಾಳ್ತನ ಅಷ್ಟೇ ಅಲ್ಲ ಭಾವುಕ ಕೂಡ ಇದ್ರು ಇವರಿಬ್ಬರು"

ನಾನು ಸಣ್ಣಗೆ ಇಬ್ಬರಿಗೂ ಕೇಳಿಸೋ ಹಂಗೆ ಹಾಡಿದೆ (ಒಂದು ಸಾಲು ಹೆಚ್ಚಿಗೆ ಸೇರಿಸಿ)

"ನನ್ನ ಹಾಡು ನನ್ನದು,

ನನ್ನ ಭಾವ ನನ್ನದು,

ನನ್ನ ರಾಗ ನನ್ನದು

ನನ್ನ ತಾಳ ನನ್ನದು

ನನ್ನ ಹಾಡು ನನ್ನದು"

ಗುಂಡ: ಈ ಮಾತಿಗೆ ನನಗೆ ಒಂದ್ ಹಾಡು ನೆನಪಾಯಿತು

"ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ,

ಕರೆಯುವೆ ಕೈ ಬೀಸಿ,

ಬತ್ತಿದೆದೆಯಲ್ಲಿ ಬೆಳಿಯಿರಿ ಹಸಿರನು,

ಪ್ರೀತಿಯ ಮಳೆ ಸುರಿಸಿ"

ಭಟ್ಟರು ಈ ಹಾಡಿನಲ್ಲಿ ಎಷ್ಟು ಚೆನ್ನಾಗಿ ಭಾವನೆಗಳ ಮಳೆ ಸುರಿಸಿದ್ದಾರೆ, ಅರ್ಥಕ್ಕೆ ಒತ್ತು ಕೊಡಬ್ಯಾಡ್ರಿ, ನೀವು ಹಾಡಿನ ಭಾವ ಕೇಳಿ ಆನಂದ್ ಪಡೀರಿ.

ಸತ್ಯಾ: ಹಾಡಿನ ಅರ್ಥ ಅಂದ ಕೂಡ್ಲೇ ಒಂದ್ ಸಾಲು ನೆನಪಾಯ್ತು ನೋಡಪ್ಪ...

"ಮಾತು ಮಾತು ಮಥಿಸಿ ಬಂದ ನಾದದ ನವನೀತಾ

ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ

ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ"

ಬೇಂದ್ರೆ ಅಜ್ಜಾ ಹೇಳುವಂಗೆ ಮಾತು ಮಾತು ಮಥಿಸಿ ಹುಟ್ಟುವ ನಾದದ ನವನೀತವೇ ಕಾವ್ಯ, ಅದರಲ್ಲಿ ಅರ್ಥ ಅನ್ನೂದು ಗೌಣ... ಮತ್ತ ಗೌಣ ಅಂತ ಅದನ್ನ ಕಡೆಗಾಣಿಸೋದಲ್ಲ... ಅದು ಭಾವಕ್ಕೆ ಬಿಟ್ಟದ್ದು

ಮಾತು ಹಿಂಗಾ ಓಡ್ತಿತ್ತು, ಮಗರಾಯ ಒಳಗೆ ಬಂದ

ಮಗ: ಅಪ್ಪಾ... ಬಾಜೂ ಮನೆ ಮಾಳಗಿ ಸೋರಕತ್ತಾದ, ಅದಕ್ಕೆ ನಾವೆಲ್ಲ ಹುಡುಗರು "ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ" ಅಂತ ಕೂಗಿ ಹಾಡಿದೆವು

ಸತ್ಯಾ: ಕೇಳ್ರಪ್ಪ, ಇವ ಹಾಡಿನ ಭಾವನೆ ಬಿಟ್ಟು ಅರ್ಥ ಹುಡುಕ್ಯಾನ...

ಮಗನೆ sss ಕೇಳಪ್ಪ.  "ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ" ಅಂದರೆ ಬಾಜೂಕಿನ ಮನಿಯವರ ಅಜ್ಞಾನದಿಂದ ಮನಿ ಸೋರುದು ಅಲ್ಲ... ಮನಗಂಡ ಮಳಿ ಕಾರಣ ಸೋರಕತ್ತಾದ.

ಗುಂಡಣ್ಣ ಬಾರಪ್ಪ... ನಾವು ಹೋಗಿ ಸಹಾಯ ಮಾಡೋಣ...

ಬಾನುಲಿ ಹಾಡತೊಡಗಿತು

ಬಾ ಮಳೆಯೇ ಬಾ

ಬಾ ಮಳೆಯೇ ಬಾ

ಅಷ್ಟು ಬಿರುಸಾಗಿ ಬಾರದಿರು...

ಸತ್ಯಪ್ರಮೋದ ಲಕ್ಕುಂಡಿ, ಸ್ಲೌ,,  ಯು ಕೆ