ಡಾ.ಉಮಾ ವೆಂಕಟೇಶ್ ಬರೆದ ಲೇಖನ, “ಐತಿಹಾಸಿಕ ವೈಭವ ನಗರಗಳು: ವಿಜಯನಗರ ರಾಜಧಾನಿ ಹಂಪೆ ಭಾಗ ೧ – ದರೋಜಿ ಕರಡಿಧಾಮ”

ಹಂಪೆ ಎಂದರೆ ಹಲವರಿಗೆ ಹಲವು ಭಾವ. ಇತಿಹಾಸವೋ, ಕೃಷ್ಣದೇವರಾಯನೋ, ನೆತ್ತಿ ಸುಡುವ ಬಳ್ಳಾರಿಯ ಬಿಸಿಲೋ, ಹಂಪೆ ಕನ್ನಡ ವಿಶ್ವವಿದ್ಯಾನಿಲಯವೋ, ಹೀಗೇ ಏನೆಲ್ಲಾ ಹೊಳೆಯುತ್ತದೆ. ಅಲ್ಲಿನ ಮಂಟಪಗಳು ಹೇಳುವ ಕಥೆಗಳು, ಶಿಲ್ಪ ಕಲೆ ಉಸುರುವ ಪಿಸುಮಾತುಗಳು, ಕಲ್ಲುಗಳು ಹಾಡುವ ಆಲಾಪನೆ, ಕೀರ್ತನೆಗಳು… ಅಲ್ಲಿರುವ ವಾನರಗಳು, ಕರಡಿಗಳು, ಇತರೆ ಮೃಗ ಪಕ್ಷಿಗಳು, ಪ್ರಕೃತಿ ಸೌಂದರ್ಯ ಕೂಡ ಅಷ್ಟೇ ಇಷ್ಟವಾಗುತ್ತವೆ. ಇತ್ತೀಚೆಗೆ ಅವನ್ನೆಲ್ಲಾ ನೋಡಿ, ಆನಂದಿಸಿ ಬಂದ ಡಾ. ಉಮಾ ವೆಂಕಟೇಶ್ ತಮ್ಮ ಅನುಭವ, ಪ್ರವಾಸೀ ಕಥನವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಕಥನದ ಮೊದಲ ಭಾಗ ಇಗೋ ನಿಮ್ಮ ಮುಂದೆ! -ಸಂ.

ಐತಿಹಾಸಿಕ ವೈಭವ ನಗರಗಳು: ವಿಜಯನಗರ ರಾಜಧಾನಿ ಹಂಪೆ

ಭಾಗ ದರೋಜಿ ಕರಡಿಧಾಮ

ಡಾ. ಉಮಾ ವೆಂಕಟೇಶ್

dsc_0180
ಕರಡಿಧಾಮ

“ವಿಜಯನಗರವನ್ನು ಕೃಷ್ಣದೇವರಾಯನು ಆಳುತ್ತಿದ್ದ ಕಾಲದಲ್ಲಿ, ಅಲ್ಲಿಯ ವೈಭವ ಎಷ್ಟಿತ್ತೆಂದರೆ, ಅಲ್ಲಿನ ರಸ್ತೆಯ ಬದಿಯಲ್ಲಿ ಮುತ್ತು, ರತ್ನ, ಹವಳ ಮತ್ತು ವಜ್ರ-ವೈಢೂರ್ಯಗಳನ್ನು ಬಳ್ಳದಲ್ಲಿ ಅಳೆದು ಮಾರುತ್ತಿದ್ದರು” ಎನ್ನುವ ಸಾಲುಗಳನ್ನು ನನ್ನ ಮಾಧ್ಯಮಿಕ ಶಾಲೆಯ ಚರಿತ್ರೆ ಮತ್ತು ಕನ್ನಡ ಪಠ್ಯಪುಸ್ತಕಗಳಲ್ಲಿ ಜೋರಾಗಿ ಓದಿ ಮನದಟ್ಟು ಮಾಡುಕೊಳ್ಳುತ್ತಿದ್ದ ದಿನಗಳು ಇನ್ನೂ ನನ್ನ ಮನದಲ್ಲಿ ಅಚ್ಚೊತ್ತಿದಂತಿದೆ. ೧೯೬೯ನೆಯ ಇಸವಿಯಲ್ಲಿ, ನನ್ನ ತಂದೆ ಬಳ್ಳಾರಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಭೂಗರ್ಭಶಾಸ್ತ್ರಜ್ಞರಾಗಿ ಅಲ್ಲಿನ ಮ್ಯಾಂಗನೀಸ್ ಗಣಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿನಗಳವು. ನನ್ನ ಚಿಕ್ಕಪ್ಪ ಮತ್ತು ಅವರ ಗೆಳೆಯ ನಮ್ಮ ಮನೆಗೆ ಬಳ್ಳಾರಿಗೆ ಬಂದಿದ್ದಾಗ, ನಾವೆಲ್ಲಾ ಹಂಪೆ ಮತ್ತು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟನ್ನು ನೋಡಿ ಬಂದಿದ್ದೆವು. ಆಗ ನಾನಿನ್ನೂ ೭ ವರ್ಷದವಳು. ಅಲ್ಲಿಗೆ ಹೋಗಿದ್ದ ನೆನಪು ಮಸುಕುಮಸುಕಾಗಿದ್ದರೂ, ಹಂಪೆಯ ವಿರೂಪಾಕ್ಷ ದೇವಾಲಯ, ಸಾಸಿವೆ ಮತ್ತು ಕಡಲೆ ಕಾಳು ಗಣಪತಿ, ಉಗ್ರನರಸಿಂಹ, ಕಲ್ಲಿನ ರಥದ ಚಿತ್ರಗಳು ಹಸಿರಾಗಿದ್ದವೆನ್ನಬಹುದು. ಜೊತೆಗೆ ೭೦ರ ದಶಕದಲ್ಲಿ ನೋಡಿದ್ದ ಪ್ರಸಿದ್ಧ ಕನ್ನಡ ಚಲನಚಿತ್ರ “ಕೃಷ್ಣದೇವರಾಯ”ದ ಹಲವಾರು ದೃಶ್ಯಗಳು ಮತ್ತು ಹಾಡುಗಳನ್ನು ಇನ್ನೂ ಮರೆತಿಲ್ಲ. ಹಾಗಾಗಿ ನಮ್ಮ ಮಕ್ಕಳೂ ಕೂಡಾ ಕರ್ನಾಟಕದ ಗತವೈಭವಗಳನ್ನು ಹೊತ್ತ, ನಮ್ಮ ಚರಿತ್ರೆಯನ್ನು ಹೇಳುವ ಹಂಪೆಯನ್ನು ಒಮ್ಮೆ ನೋಡಲೆಂದು ಬಹಳ ಆಸೆ ಇತ್ತು. ಈ ಬಾರಿ ಬೆಂಗಳೂರಿಗೆ ಹೋದಾಗ, ಹೊರಗೆ ಕರೆದುಕೊಂಡು ಹೋಗದಿದ್ದರೆ ನಾವು ಬರುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದದ್ದು ಒಳ್ಳೆಯದೇ ಆಯಿತು. ಸರಿ ನಾನು ಕಾರ್ಡಿಫ಼್ ನಗರದಲ್ಲಿ ನಮ್ಮ ಮನೆಯಲ್ಲೇ ಕುಳಿತು, ಗೂಗಲ್ ಕೃಪೆ ಮತ್ತು ನೆರವಿನಿಂದ ಅಲ್ಲಿನ ಎಲ್ಲಾ ವಿಷಯಗಳನ್ನು ಸಂಗ್ರಹಿಸಿ ಹೋಟೆಲ್ ಮತ್ತು ಪ್ರಯಾಣಗಳನ್ನು ೬ ತಿಂಗಳು ಮುಂಚಿತವಾಗಿ ಬುಕ್ ಮಾಡಿಬಿಟ್ಟೆ.

ಜುಲೈ ತಿಂಗಳ ೨೪ರ ರಾತ್ರಿ ೧೦ ಗಂಟೆಗೆ ಬೆಂಗಳೂರಿನ ಕಂಟೋನ್ಮೆಂಟ್ ಅಥವಾ ದಂಡು ನಿಲ್ದಾಣದಿಂದ ಹೊರಟ ಹಂಪೆ ಎಕ್ಸಪ್ರೆಸ್ ರೈಲಿನಲ್ಲಿ ಸಂಸಾರ ಸಮೇತ ಹೊಸಪೇಟೆಯತ್ತ ಪ್ರಯಾಣ ಬೆಳೆಸಿದೆವು. ರಾತ್ರಿ ಕಳೆದು ಬೆಳಗಿನ ೮ ಗಂಟೆಯ ಸಮಯಕ್ಕೆ ಹೊಸಪೇಟೆ ತಲುಪಿದ ನಾವು ಈ ಮೊದಲೆ ನಾನು ಬುಕ್ ಮಾಡಿದ್ದ ಅಲ್ಲಿನ ಉತ್ತಮ ದರ್ಜೆಯ ಹೋಟೆಲ್ ಎನಿಸಿದ “ಮಲ್ಲಿಗೆ”ಯತ್ತ ಆಟೋಗಳಲ್ಲಿ ನಡೆದೆವು. ೬೯ರ ಇಸವಿಯಲ್ಲಿ ಹೊಸಪೇಟೆ ಇದ್ದ ರೀತಿ ಮತ್ತು ಸ್ಥಿತಿ ನನಗೆ ಅಷ್ಟಾಗಿ ನೆನಪಿಲ್ಲ. ಹಾಗಾಗಿ ಈ ಬಾರಿ ನೋಡಿದ್ದೆ ಗೊತ್ತು. ನಗರದ ಪರಿಸ್ಥಿತಿ, ಶುಚಿತ್ವವೇನೂ ಅಷ್ಟು ಸರಿಯಿಲ್ಲ. ಕರ್ನಾಟಕದಲ್ಲಿ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದ ನನಗೆ, ನನ್ನ ಪತಿಗೆ ಇದೇನೂ ಹೊಸದಲ್ಲ. ನಮ್ಮ ಮಕ್ಕಳಿಗೆ ಸ್ವಲ್ಪ ಗಾಬರಿಯಾಯಿತು. ಆದರೆ ಒಮ್ಮೆ ಮಲ್ಲಿಗೆ ಹೋಟೆಲ್ ಬಳಿ ತಲುಪಿದಾಗ ಸ್ವಲ್ಪ ಆಶ್ಚರ್ಯವೇ ಆಯಿತು. ಹೋಟೆಲ್ ಆಸು-ಪಾಸು ಮತ್ತು ಆವರಣಗಳು ಬಹಳ ಚೆನ್ನಾಗಿದೆ. ಹೋಟೆಲಿನ ಹಲವಾರು ಭಾಗಗಳನ್ನು ಹೊಸದಾಗಿ ಕಟ್ಟಿ ಬಹಳ ಓರಣವಾಗಿ ಇಟ್ಟಿದ್ದಾರೆ. ನೋಡಿ ನಮಗೆಲ್ಲಾ ಸಮಾಧಾನವಾಯಿತು. ನಮ್ಮ ಕೋಣೆಗಳೂ ಕೂಡಾ ಅಚ್ಚುಕಟ್ಟಾಗಿದ್ದು, ಪಾಶ್ಚಿಮಾತ್ಯ ಹೋಟೆಲಿನಲ್ಲಿರುವಂತೆ ಎಲ್ಲಾ ಸೌಲಭ್ಯಗಳೂ ಇವೆ. ಹೋಟೆಲಿನ ರೆಸ್ಟೋರೆಂಟಿನಲ್ಲಿ ಉತ್ತಮ ಗುಣಮಟ್ಟದ ಊಟ-ತಿಂಡಿಗಳೂ ಲಭ್ಯವಿದ್ದು, ನಮ್ಮ ಮಕ್ಕಳು ಬಹಳ ಖುಷಿಯಾಗಿ ಎಲ್ಲವನ್ನೂ ತಿಂದು ತೃಪ್ತಿಪಟ್ಟರು ಎನ್ನಬಹುದು. ರಾತ್ರಿಯ ಪ್ರಯಾಣದ ಆಯಾಸವನ್ನು ಒಂದು ಸಣ್ಣ ನಿದ್ದೆ ತೆಗೆದು ಪರಿಹರಿಸಿಕೊಂಡನಂತರ, ಪುಷ್ಕಳವಾದ ಮದ್ಯಾನ್ಹದ ಭೋಜನವನ್ನು ಪೂರೈಸಿದ ನಾವು, ಹೋಟೆಲಿನ ಸ್ವಾಗತ ಡೆಸ್ಕಿನಲ್ಲಿದ್ದ ಅವರದೇ ಪ್ರವಾಸ ವಿಭಾಗದಲ್ಲಿ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ವ್ಯವಸ್ಥೆಯ ಬಗ್ಗೆ ವಿಚಾರಿಸಿದೆವು.

ಅದೃಷ್ಟವಶಾತ್ ಮಲ್ಲಿಗೆ ಹೋಟೆಲಿನೊಂದಿಗೆ ಸಹಭಾಗಿತ್ವದಲ್ಲಿ ಆ ಏರ್ಪಾಡೂ ಇದೆ ಎಂದು ತಿಳಿದ ನಾವು, ಆ ಮಧ್ಯಾನ್ಹ ಅಲ್ಲಿಯೇ ಹತ್ತಿರದಲ್ಲಿರುವ ದರೋಜಿ ಕರಡಿ ಧಾಮ ಮತ್ತು ತುಂಗಭಧ್ರಾ ಅಣೆಕಟ್ಟುಗಳನ್ನು ನೋಡಲು ನಿರ್ಧರಿಸಿದೆವು. ಉತ್ತಮ ಮಟ್ಟದ ಟೊಯೋಟಾ ಕ್ವಾಲಿಸ್ ಕಾರಿನಲ್ಲಿ ಕುಳಿತು ಹಂಪೆಯ ಪ್ರವಾಸವನ್ನು ಆರಂಭಿಸಿದ ನಮಗೆ, ಹೊಸಪೇಟೆಯಿಂದ ಹೊರಬಿದ್ದ ತಕ್ಷಣವೇ, ಸುತ್ತಲೂ ಹಸಿರಿನ ದರ್ಶನವಾಗಿ ನೆಮ್ಮದಿಯೆನಿಸಿತು.

dsc_0159
ತೆಂಗು, ಸೂರ್ಯಕಾಂತಿ ಬೆಳೆ

ತೆಂಗು, ಕಬ್ಬು, ಬಾಳೆ ಮತ್ತು ಸೂರ್ಯಕಾಂತಿ ಬೆಳೆಗಳಿಂದ ಮೈದುಂಬಿದ ಹೊಲ-ತೋಟಗಳು, ಬಣ್ಣಬಣ್ಣದ ಹಕ್ಕಿಗಳ ಚಿಲಿಪಿಲಿಗುಟ್ಟುವಿಕೆಯಿಂದ ತುಂಬಿದ ಹಸಿರಿನ ರಾಶಿ, ನೀಲಿ ಆಗಸಗಳು ನಮ್ಮ ಕ್ಯಾಮೆರಾದಲ್ಲಿ ಸೆರೆಯಾಗತೊಡಗಿದವು.

dsc_0138
ಬಾಳೆ ಮೈದುಂಬಿದ ಹೊಲ-ತೋಟಗಳು

ಕಿಂಗ್-ಫ಼ಿಷರ್ (ಮೀಂಚುಳ್ಳಿ), ಬಾನಾಡಿಗಳು, ಬಿಳಿಕೊಕ್ಕರೆ, ನೀಲಿ ಮತ್ತು ಕಂದು ಹೆರಾನ್, ಪಚ್ಚೆವರ್ಣದ ಗಿಳಿಸಂಕುಲ ಹೀಗೆ ಹಲವು ಹತ್ತು ಬಗೆಯ ಪಕ್ಷಿಗಳು ನಮ್ಮ  ಮನವನ್ನು ತಣಿಸಿದೆವು. ತುಂಗಭದ್ರ ನಾಲೆಯ ಅಕ್ಕಪಕ್ಕದಲ್ಲಿ ಹಳ್ಳಿಯ ಜನ ಪಾತ್ರೆ-ಬಟ್ಟೆಗಳನ್ನು ಸ್ವಚ್ಛಗೊಳಿಸುತ್ತಿದ್ದನ್ನು ಕಂಡ ನನ್ನ ಮಕ್ಕಳಿಗೆ ತಾವೊಂದು ಬೇರೆಯ ಯುಗದಲ್ಲಿರುವಂತೆ ಭಾಸವಾಯಿತು. ಚಿಕ್ಕಂದಿನಿಂದ ಈ ಚಟುವಟಿಕೆಗಳನ್ನು ನೋಡಿ, ಮಾಡುತ್ತಾ ಬೆಳೆದ ನಮಗೆ ಇದು ಸಾಮಾನ್ಯ ದೃಶ್ಯ! ನಮ್ಮ ಕಾರಿನ ಡ್ರೈವರ್ ನಮ್ಮೊಡನೆ ಕನ್ನಡದಲ್ಲಿ ನಿರಾಳವಾಗಿ ಹರಟುತ್ತಾ ನಮಗೆ ಅಲ್ಲಿನ ಆಗುಹೋಗುಗಳ ಸಂಪೂರ್ಣ ಮಾಹಿತಿಯನ್ನು ಎಡೆಬಿಡದೆ ನೀಡುತ್ತಿದ್ದ. ಸುಮಾರು ೪೦ ನಿಮಿಷಗಳ ಪ್ರಯಾಣದ ನಂತರ, ಒಮ್ಮೆಗೆ ಕಲ್ಲು, ಬೆಟ್ಟಗುಡ್ಡಗಳಿಂದ ಆವೃತವಾದ, ನಿರ್ಜನವಾದ ಕರಡಿಧಾಮದೊಳಕ್ಕೆ ಆಗಮಿಸಿದೆವು. ರಾಜ್ಯ ಅರಣ್ಯ ಇಲಾಖೆಯ ಪ್ರವೇಶದ್ವಾರದಲ್ಲಿ ಸಹಿ ಮಾಡಿ, ಪ್ರವೇಶ-ದರದ ಹಣವನ್ನು ಪಾವತಿ ಮಾಡಿದ ನಂತರ ನಮ್ಮನ್ನು ಒಳಬಿಟ್ಟರು. ಇಲ್ಲಿ ಕಾಲುನಡಿಗೆಯಲ್ಲಿ ಹೋಗಲು ಅನುಮತಿಯಿಲ್ಲ. ಕಾಡುಪ್ರಾಣಿಗಳಿಗೆ ಮಾತ್ರಾ ಮೀಸಲಾದ ಪ್ರದೇಶ. ಹಾಗಾಗಿ ವಾಹನಗಳಲ್ಲಿ ಅಲ್ಲಿಯ ಉನ್ನತ ಪ್ರದೇಶವೊಂದರಲ್ಲಿ ಕಟ್ಟಿದ ವೀಕ್ಷಣ-ಗೋಪುರದವರೆಗೂ ಹೋಗಿ, ಅಲ್ಲಿ ನಿಂತು ಕರಡಿಗಳನ್ನು ದೂರದಿಂದ ನೋಡುವ ವ್ಯವಸ್ಥೆ ಮಾಡಿದ್ದಾರೆ.

ಪ್ರತಿದಿನ ಮದ್ಯಾನ್ಹ ೩-೫ ಗಂಟೆಗಳ ಸಮಯದಲ್ಲಿ, ಇಲ್ಲಿ ಅರಣ್ಯ ಇಲಾಖೆಯವರು ಇಡುವ ಬಾಳೆ, ಬೆಲ್ಲ, ಮೆಕ್ಕೆಜೋಳದ ಊಟವನ್ನು ಸವಿಯಲು ಬರುತ್ತವೆ. ಈ ಪ್ರಾಣಿಗಳು ಅದೃಷ್ಟವಿದ್ದರೆ ಕಾಣಸಿಗುತ್ತವೆ ಎಂದೂ ನಮ್ಮ ಡ್ರೈವರ್ ನಮ್ಮನ್ನು ಎಚ್ಚರಿಸಿದ್ದ. ಸರಿ ವಾಚ್-ಟವರಿನ ಮೇಲ್ಭಾಗದಲ್ಲಿ ನಿಂತು, ನಮ್ಮ ಕ್ಯಾಮೆರಾ ಮತ್ತು ದುರ್ಬೀನನ್ನು ಹಿಡಿದು ಕರಡಿ ದರ್ಶನಕ್ಕೆ ಕಾದು ನಿಂತೆವು. ಈ ಮಧ್ಯದಲ್ಲಿ ನಮ್ಮ ಸುತ್ತಲೂ ನವಿಲಿನ ಕೇಕೆಯ ಶಬ್ದ ನಮ್ಮ ಕಿವಿಗಳನ್ನು ತುಂಬಿಬಿಟ್ಟಿತ್ತು. ಆದರೆ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಮಕ್ಕಳು ನವಿಲುಗಳ ಒಂದೇ ಒಂದು ದರ್ಶನಕ್ಕೆ ತವಕಿಸುತ್ತಿದ್ದರು. ಒಮ್ಮೆಲೆ ಒಂದು ದೊಡ್ಡ ಗುಂಪು ತಮ್ಮ ಗಂಭೀರವಾದ ನಡಿಗೆಯಲ್ಲಿ ಓಲಾಡುತ್ತಾ, ತಮ್ಮ ಬಣ್ಣಬಣ್ಣದ ಗರಿಗಳನ್ನು ಬೀಸುತ್ತಾ ಅಲ್ಲಿದ್ದ ಬಂಡೆಗಳ ಮೇಲೆ ಪ್ರತ್ಯಕ್ಷವಾದಾಗ, ನಮ್ಮ ಮನಸ್ಸೂ ಕೂಡಾ ಆ ಗರಿಗಳಂತೆ ಕೆದರಿ, ಕುಣಿದು, ನಮ್ಮ ಕೈಯಲ್ಲಿದ್ದ ಕ್ಯಾಮೆರಾಗಳು ಸದ್ದಿಲ್ಲದೇ ನಿರಂತರವಾಗಿ ಕ್ಲಿಕ್ಕಿಸಿದವು. ಅಷ್ಟರಲ್ಲೇ ನನ್ನ ಮಗಳು ದುರ್ಬೀನಿಂದ ನಮಗಷ್ಟೇ ಕೇಳುವಂತೆ “ಅಮ್ಮ, ಎದುರಿನ ಬಂಡೆಯ ಕಡೆಗೆ ನೋಡಿ, ಮೂರು ಕರಡಿಗಳಿವೆ” ಎಂದು ಆದೇಶಿಸಿದಳು. ನಮ್ಮ ಉತ್ಸಾಹಕ್ಕೆ ಪಾರವೇ ಇಲ್ಲ. ಕೇವಲ ಮೃಗಾಲಯಗಳಲ್ಲಿ ಕರಡಿಗಳನ್ನು ನೋಡಿದ್ದ ನಮಗೆ ಅವನ್ನು ಈ ಸ್ವಾಭಾವಿಕ ಪರಿಸರದಲ್ಲಿ ಕಂಡಾಗ ಬಹಳ ಸಂತೋಷವೆನಿಸಿತು.

dsc_0190
ಸ್ಲಾತ್ ಕರಡಿ ದರ್ಶನ

ನಮ್ಮ ರಾಜ್ಯದಲ್ಲಿ ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ವಾಸಿಸುವ ಈ ಸ್ಲಾತ್ ಕರಡಿಗಳು ರಾತ್ರಿಯಲ್ಲಿ ಚಟುವಟಿಕೆಯಾಗಿರುವ ಕೀಟಭಕ್ಷಕಗಳಾಗಿವೆ. ರಾಮಾಯಣದಲ್ಲಿ ರಾಮ ಸೀತೆಯನ್ನು ಹುಡುಕುತ್ತಾ ಬಂಡಾಗ, ಇಲ್ಲಿಯೇ ಆನೆಗೊಂದಿಯಲ್ಲಿ ವಾನರ ಸೈನ್ಯದ ಜೊತೆಗೆ, ಕರಡಿವೀರ ಜಾಂಬವಂತನನ್ನೂ ಭೇಟಿಯಾದನೆಂದು ಹೇಳುತ್ತಾರೆ. ಹಾಗಾಗಿ ಇಲ್ಲಿ ಕರಡಿಗಳನ್ನು ಬಹಳ ಭಯಭಕ್ತಿಗಳಿಂದ ನೋಡುವ ಸಂಪ್ರದಾಯವಿದೆ. ಇಲ್ಲಿಯ ಗಣಿಗಳಲ್ಲಿ ನಡೆಯುವ ಆಕ್ರಮ ಗಣಿಗಾರಿಕೆಯ ಫಲವಾಗಿ, ಕರಡಿಗಳ ಸಂಖ್ಯೆಗೆ ಧಕ್ಕೆಯಾಗಿ ಈ ಕರಡಿಧಾಮವನ್ನು ೧೯೯೪ರಲ್ಲಿ ಪ್ರಾರಂಭಿಸಲಾಗಿದೆ. ಈ ಅರಣ್ಯಧಾಮದಲ್ಲಿ ಕರಡಿಗಳ ಜೊತೆಗೆ ಹುಲಿ, ಚಿರತೆ, ಚುಕ್ಕೆ-ಜಿಂಕೆ, ಮಾನಿಟರ್ ಹಲ್ಲಿ, ನಕ್ಷತ್ರ ಆಮೆ, ಮುಂಗುಸಿಗಳೂ ಕಾಣಸಿಗಬಹುದು. ಅಲ್ಲಲ್ಲೇ ಹಲವಾರು ಬಣ್ಣದ ಹಲ್ಲಿಗಳು, ಚಿಟ್ಟೆಗಳು ನಮ್ಮ ಕಣ್ಣಿಗೆ ಬಿದ್ದವು.

dsc_0197
ಬಣ್ಣಬಣ್ಣದ ಗರಿಗಳ ನವಿಲುಗಳ ಗುಂಪು
dsc_0235
ಬಣ್ಣದ ಹಲ್ಲಿ

ನಮ್ಮ ಮನಸ್ಸಿಗೆ ತೃಪ್ತಿಯಾದಷ್ಟು ನೋಡಿದ ನಂತರ, ಅಲ್ಲೇ ಕುಳಿತಿದ್ದ ಡ್ರೈವರ್ ಸಾರ್ ನೀವು ತುಂಗಭದ್ರ ಅಣೆಕಟ್ಟಿಗೆ ಹೋಗಬೇಕೆಂದರೆ ಈಗಲೇ ಹೊರಡಬೇಕು ಎಂದು ಎಚ್ಚರಿಸಿದಾಗ, ನಾವು ಅರೆಮನಸ್ಸಿನಿಂದಲೇ, ಕರಡಿಗಳ ದಿಕ್ಕಿನಿಂದ ನಮ್ಮ ದೃಷ್ಟಿಯನ್ನು ತೆಗೆದು ಕಾರಿನೆಡೆ ನಡೆದೆವು.

dsc_0177
ಬಣ್ಣದ ಚಿಟ್ಟೆಗಳು

ಮಾಧ್ಯಮಿಕ ಶಾಲೆಯಲ್ಲಿ ಕನ್ನಡದ ವರ-ಕವಿ ದ.ರಾ. ಬೇಂದ್ರೆ ಅವರ “ಕರಡಿ-ಕುಣಿತ” ಎಂಬ ಪದ್ಯವನ್ನು ಬಾಯಿಪಾಠ ಮಾಡಿ ಗುನುಗುತ್ತಿದ್ದ ನನ್ನ ಮನ ಆ ದಿನಗಳತ್ತ ಓಡಿತು.

ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ

ಪ್ರಾಣದ ಈ ಪ್ರಾಣಿ ಹಿಂದಾs

ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ

ಪರಮಾರ್ಥ ಎಂಬಂತೆ ಬಂದಾನ

“ಪ್ರಾಣಿ ಶಕ್ತಿಯನ್ನು, ತನ್ನ ಬುದ್ದಿಶಕ್ತಿಯಿಂದ ಪಳಗಿಸಿ ತನ್ನ ಹೊಟ್ಟೆಪಾಡಿಗೆ ಪರಮಾರ್ಥದ ವೇಶವನ್ನು ತೊಡಿಸಿದ್ದಾನೆ”.

ಕೇವಲ ಮಾನವ ತನ್ನ ಹೊಟ್ಟೆಪಾಡಿಗಾಗಿ ಈ ಪ್ರಾಣಿಯನ್ನು ಹಿಡಿದು ಪಳಗಿಸಿ, ಅದಕ್ಕೆ ಮೂಗುದಾರ ಹಾಕಿ, ಕುಣಿಸಿ ಜೀವನ ಸವೆಸುವ ರೀತಿ ನನಗೆ ಹೀನಾಯವೆನಿಸಿತು. ಸ್ವಚ್ಚಂದವಾಗಿ ಅರಣ್ಯದಲ್ಲಿ ಓಡಾಡಿಕೊಡಿರುವ ಈ ವನ್ಯಮೃಗ, ಸರಳುಗಳ ಹಿಂದೆ ಮೃಗಾಲಯದಲ್ಲಿ ಶತಪಥ ತಿರುಗುವ ರೀತಿಯೂ ಸರಿಯಲ್ಲ. ತಮ್ಮದೇ ಪರಿಸರದಲ್ಲಿ ಜೀವಿಸುವ ಈ ಮೃಗದ ಜನ್ಮಸಿದ್ಧ ಹಕ್ಕನ್ನು ಈ ದರೋಜಿ-ಕರಡಿಧಾಮದಲ್ಲಿ ಕಂಡು ಹಿಗ್ಗಿದ ನನ್ನ ಮನ, ರಾಜ್ಯ ಅರಣ್ಯ ಇಲಾಖೆಗೆ ಭೇಷ್ ಎಂದು ಬೆನ್ನುತಟ್ಟಿತು.

  ಚಿತ್ರಗಳು: ಡಾ. ಉಮಾ ವೆಂಕಟೇಶ್

ಪ್ರವಾಸಿಗರ ಮನಸೆಳೆಯುವ ಮನೋಹರ ಮೆಡಿಟರೇನಿಯನ್ ಕರಾವಳಿ! ಡಾ ಉಮಾ ವೆಂಕಟೇಶ್

ಇಂದ್ರನೀಲ-ಪುಷ್ಯರಾಗಗಳ ಸಮ್ಮಿಶ್ರ ವರ್ಣದ ನೀರಿನಲೆಗಳಿಂದ ಕಂಗೊಳಿಸುವ ಮೆಡಿಟರೇನಿಯನ್ ಸಮುದ್ರದ ಬಗ್ಗೆ ಶಾಲಾದಿನಗಳಲ್ಲಿ ಪಠ್ಯಪುಸ್ತಕದಲ್ಲಿ ಓದಿದ್ದೆ. ಯೂರೋಪಿನ ನಕ್ಷೆಯನ್ನಷ್ಟೇ ನೋಡಿದ್ದ ನನಗೆ, ಒಂದು ದಿನ ಪ್ರತ್ಯಕ್ಷವಾಗಿ ಕಾಣುವ ಅವಕಾಶ ದೊರೆಯಬಹುದು ಎನ್ನುವ ಆಲೋಚನೆ ಕನಸು-ಮನಸಿನಲ್ಲೂ ಇರಲಿಲ್ಲ. ಮೊಟ್ಟಮೊದಲ ಬಾರಿ 2004ರಲ್ಲಿ, ದಕ್ಷಿಣ ಫ಼್ರಾನ್ಸಿನಲ್ಲಿರುವ, ನೀಸ್ ಪಟ್ಟಣದಲ್ಲಿ ಈ ಸಮುದ್ರವನ್ನು ಕಂಡಾಗ, ಅಲ್ಲಿನ ನೀಲಿವರ್ಣದ ಆಗಸ ಮತ್ತು ನೀರನ್ನು ಕಂಡು, ಮಂತ್ರಮುಗ್ಧಳಾಗಿದ್ದೆ. ಈಗ ಇಪ್ಪತ್ತು ವರ್ಷಗಳಿಂದ ಯು.ಕೆಯಲ್ಲಿ ವಾಸಿಸುತ್ತಿರುವ ನನಗೆ, ಮೆಡಿಟರೇನಿಯನ್ ಸಮುದ್ರವನ್ನು ಹಲವು ದೇಶಗಳಲ್ಲಿ ಕಾಣುವ ಸುವರ್ಣಾವಕಾಶಗಳು ದೊರೆಯುತ್ತಲೇ ಇವೆ. ಇಟಲಿ, ಗ್ರೀಸ್, ಸ್ಪೇನ್, ಫ಼್ರಾನ್ಸ್ ಮತ್ತು ಟರ್ಕಿ ದೇಶಗಳ ಕರಾವಳಿ ಪಟ್ಟಣಗಳಿಗೆ ಹೋದಾಗಲೆಲ್ಲಾ, ಇದರ ಅನುಪಮ ಸೌಂಧರ್ಯವನ್ನು ಕಂಡು ಬೆರಗಾಗಿದ್ದೇನೆ. ಪ್ರತಿ ಬಾರಿ ಕಂಡಾಗಲೂ, ಮೊದಲ ಬಾರಿ ನೋಡಿದಷ್ಟೇ ಬೆರಗಿನ ಭಾವನೆಗಳು ಮನದಲ್ಲಿ ಪುಟಿದೇಳುತ್ತವೆ.

ನೀಲಗಗನ-ನೀಲಿ ಸಾಗರ ಸಂಗಮ

ನೀಲಗಗನ-ನೀಲಿ ಸಾಗರ ಸಂಗಮ

 

ಭೌಗೋಳಿಕವಾಗಿ ಒಂದು ಒಳನಾಡಿನ ಸಮುದ್ರವಾಗಿರುವ ಮೆಡಿಟರೇನಿಯನ್, ಪಕ್ಕದಲ್ಲೇ ಇರುವ ಅಟ್ಲಾಂಟಿಕ್ ಸಾಗರದೊಂದಿಗೆ ಸಂಪರ್ಕ ಹೊಂದಿದೆ. ಈ ಸಂಪರ್ಕದ ಕೊಂಡಿಯೇ ಪ್ರಸಿದ್ಧ ಜಿಬ್ರಾಲ್ಟರ್ ಜಲಸಂಧಿ. ಇಡೀ ದಕ್ಷಿಣ ಯೂರೋಪ್ ಮತ್ತು ಉತ್ತರ ಆಫ಼್ರಿಕಾದ ಕರಾವಳಿಯಾಗಿ ಹಬ್ಬಿರುವ ಮೆಡಿಟರೇನಿಯನ್ ಸಮುದ್ರ ತೀರವು, ತನ್ನೊಳಗೆ ಸೇರಿಸಿಕೊಂಡಿರುವ ದೇಶಗಳ ಪಟ್ಟಿಯೇ ಇದೆ. ಅವುಗಳಲ್ಲಿ ಫ್ರಾನ್ಸ್, ಇಟಲಿ, ಸ್ಪೇನ್, ಪೋರ್ಚುಗಲ್, ಈಜಿಪ್ಟ್, ಗ್ರೀಸ್, ಅಲ್ಬೇನಿಯಾ, ಕ್ರೊಯೇಶಿಯಾ, ಬೋಸ್ನಿಯಾ, ಟರ್ಕಿ, ಸೈಪ್ರಸ್, ಮಾಲ್ಟಾ, ಲೆಬನಾನ್, ಇಸ್ರೇಲ್, ಮೊರಾಕೋ, ಮೊನಾಕೋ, ಟ್ಯುನೀಸಿಯಾ, ಸಿರಿಯಾ, ಲಿಬಿಯಾ ದೇಶಗಳು ಪ್ರಮುಖವಾದವು. ಪ್ರಾಚೀನಕಾಲದ ಪ್ರವಾಸಿಗರು ಮತ್ತು ವ್ಯಾಪಾರಿಗಳ ಒಂದು ಮುಖ್ಯ ಸಮುದ್ರ ಹೆದ್ದಾರಿಯೆನಿಸಿದ್ದ ಮೆಡಿಟರೇನಿಯನ್, ಅನೇಕ ಪ್ರಮುಖ ಪ್ರದೇಶಗಳ ಸಂಸ್ಕೃತಿ, ರಾಜಕೀಯ ಮತ್ತು ಆಧುನಿಕ ಸಾಮಾಜದ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ವಹಿಸಿದೆ. ‘ಮೆಡಿಟರೇನಿಯನ್’ ಪದದ ಮೂಲ ಲ್ಯಾಟಿನ್ ಭಾಷೆಯ “meditarreneus” ಪದವಾಗಿದ್ದು, ಇದರ ಅರ್ಥ ಭೂಮಿಯ ಮಧ್ಯೆ ಎಂದಾಗುತ್ತದೆ. ಏಶಿಯಾ, ಆಫ಼್ರಿಕಾ, ಯೂರೋಪ್ ಖಂಡಗಳ ನಡುವಿರುವ ಈ ವಿಶಾಲ ಸಮುದ್ರದ ಭೂವೈಜ್ಞಾನಿಕ ಇತಿಹಾಸವು ಬಹಳ ಆಸಕ್ತಿಪೂರ್ಣವಾದದ್ದು. ಸುಮಾರು 5.3 ಮಿಲಿಯನ್ ವರ್ಷಗಳ ಹಿಂದೆ, ಅಟ್ಲಾಂಟಿಕ್ ಸಾಗರದಿಂದ ಒಂದು ಬೃಹತ್ ಪ್ರವಾಹವು ಕೇವಲ ಎರಡು ವರ್ಷಗಳ ಅವಧಿಯಲ್ಲಿ ಒಂದು ಕಿರಿದಾದ ಸಂಧಿಯಾದ ಜಿಬ್ರಾಲ್ಟರ್ ಜಲಸಂಧಿಯ ಮೂಲಕ ಉಕ್ಕಿ ಹರಿದು ಈ ಒಳನಾಡಿನ ಸಮುದ್ರವನ್ನು ಸೃಷ್ಟಿಸಿತು. ಈ ಪ್ರವಾಹಕ್ಕೆ Zanclean flood ಎಂಬ ಹೆಸರಿದೆ. ಈ ಪ್ರವಾಹದ ರಭಸವು, ಇಂದು ಪ್ರಪಂಚದ ಅತ್ಯಂತ ದೊಡ್ಡ ನದಿಯೆನಿಸಿರುವ ಅಮೆಜ಼ಾನ್ ನದಿಯ ನೀರಿನ ಹರಿವಿಗಿಂತಲೂ, ಸುಮಾರು ೧೦೦೦ ಪಾಲು ಹೆಚ್ಚಿನ ಪ್ರಮಾಣದ್ದೆಂದು ಭೂಗರ್ಭಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

DSC_0215
ಐಶೋರಾಮದ ಪಂಚ- ತಾರಾ ಹೋಟೆಲ್

 

ಇದರ ಜೊತೆಗೆ ಈ ಮೆಡಿಟರೇನಿಯನ್ ಕರಾವಳಿಯಲ್ಲಿ ಹಬ್ಬಿದ ದೇಶಗಳಲ್ಲಿ, ಪ್ರಪಂಚದಲ್ಲೇ ಅತ್ಯಂತ ಗಮನಾರ್ಹವೆನಿಸಿದ ಕೆಲವು ಪ್ರಾಚೀನ ನಾಗರೀಕತೆಗಳು ಹುಟ್ಟಿ ಬೆಳೆದಿವೆ. ಅವುಗಳಲ್ಲಿ ಮುಖ್ಯವಾದವು ಗ್ರೀಕ್, ಫಿನಿಸಿಯನ್ ಮತ್ತು ರೋಮನ್ ಸಾಮ್ರಾಜ್ಯಗಳನ್ನು ಹೊಂದಿದ್ದ ನಾಗರೀಕತೆಗಳು ಎನ್ನಬಹುದು. ಮುಂದೆ ಮಧ್ಯಯುಗದಲ್ಲಿ ಬೆಳೆದು ಪ್ರಗತಿಹೊಂದಿದ್ದ ಬೈಝಂಟೈನ್ ಸಾಮ್ರಾಜ್ಯ, ಅರಬ್ ಸಂಸ್ಕೃತಿಯ ನಾಗರೀಕತೆಗಳು, ಶೇಕಡಾ ೭೫% ಭಾಗದಷ್ಟು ಮೆಡಿಟರೇನಿಯನ್ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದವು. ಇಂದು ಟರ್ಕಿಯ ರಾಜಧಾನಿಯಾದ ಇಸ್ತಾನಬುಲ್ ಅಥವಾ ಕಾನಸ್ಟಾಂಟಿನೋಪಲ್ ನಗರವು, ಎಶಿಯಾ ಮತ್ತು ಯೂರೋಪ್ ಖಂಡವನ್ನು ಬೆಸೆದ ವ್ಯಾಪಾರ ಮತ್ತು ಸಂಸ್ಕೃತಿಯ ಕೇಂದ್ರವಾಗಿತ್ತು. ಉತ್ತರ ಆಫ಼್ರಿಕಾದಿಂದ ಗುಲಾಮರನ್ನು ಹೊತ್ತು-ತರುವ ಅಮಾನುಷ ಪದ್ಧತಿಗೂ, ಇದೇ ಮೆಡಿಟರೇನಿಯನ್ ಸಮುದ್ರವೇ ಹೆದ್ದಾರಿಯಾಗಿತ್ತು. ಇದರ ಜೊತೆಗೆ ಆಫ್ರಿಕಾದ ಬಾರ್ಬರಿ ಕಡಲ್ಗಳ್ಳರು, ಯೂರೋಪಿನ ಹಡಗುಗಳನ್ನು ಅಪಹರಿಸಿ ಮಿಲಿಯನ್ ಸಂಖ್ಯೆಯಲ್ಲಿ ಯೂರೋಪಿನ ಪ್ರಜೆಗಳನ್ನು ಸೆರೆಹಿಡಿಯುತ್ತಿದ್ದ ಸಮುದ್ರವೂ ಇದೇ ಆಗಿತ್ತು. ಹೀಗೆ ಹಲವು ಹತ್ತು ಐತಿಹಾಸಿಕ, ಸಾಂಸ್ಕೃತಿಕ, ವಾಣಿಜ್ಯ ಮತ್ತು ರಾಜಕೀಯದ ಮಹತ್ವ ಸಂಗತಿಗಳಿಗೆ ಬೀಡೆನಿಸಿದ ಮೆಡಿಟರೇನಿಯನ್ ಪ್ರದೇಶವು, ಇಂದಿಗೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡೇ ಬಂದಿದೆ.

ಬೀಸೋ ಗಾಳಿಯಲಿ ಹರಿವ ನೀರ ಅಲೆ

ಬೀಸೋ ಗಾಳಿಯಲಿ ಹರಿವ ನೀರ ಅಲೆ

ತನ್ನ ಗಾಢ ನೀಲವರ್ಣದಿಂದ ತಕ್ಷಣವೇ ಗುರ್ತಿಸಲ್ಪಡುವ ಈ ಸಮುದ್ರದಲ್ಲಿ ಅಲೆಯ ಏರಿಳಿತಗಳು ಕಡಿಮೆ. ಪೂರ್ವದಿಂದ ಪಶ್ಚಿಮಕ್ಕೆ ಹಬ್ಬಿರುವ ಈ ಸಮುದ್ರವನ್ನು, ಇದರ ಹರವಿನಲ್ಲಿರುವ ವಿವಿಧ ದೇಶಗಳಲ್ಲಿ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಇಟಲಿ, ಅಲ್ಬೇನಿಯಾ, ಕ್ರೊಯೇಶಿಯಾ, ಬೋಸ್ನಿಯಾ ಮತ್ತು ಸ್ಲೊವೇನಿಯಾ ನಡುವೆ ಇದನ್ನು ಏಡ್ರಿಯಾಟಿಕ್ ಸಮುದ್ರವೆನ್ನುತ್ತಾರೆ. ಗ್ರೀಸ್, ಅಲ್ಬೇನಿಯಾ ಮತ್ತು ಇಟಲಿಯ ನಡುವೆ ಇದನ್ನು ಅಯೋನಿಯನ್ ಸಮುದ್ರವೆಂತಲೂ, ಟರ್ಕಿ ಮತ್ತು ಗ್ರೀಸ್ ನಡುವೆ ಏಜಿಯನ್ ಸಮುದ್ರವೆಂದೂ, ಸಿಸಿಲಿ, ಸಾರ್ಡೀನಿಯಾ ಮತ್ತು ಇಟಲಿ ದ್ವೀಪಕಲ್ಪದ ನಡುವೆ ಇದೇ ಸಮುದ್ರವನ್ನು ಟೈರ್ಹೀನಿಯನ್ ಸಮುದ್ರವೆಂಬ ಹೆಸರಿನಿಂದಲೂ ಕರೆಯುತ್ತಾರೆ. ನೂರಾರು ದ್ವೀಪಗಳನ್ನೊಳಗೊಂಡ ಈ ಪ್ರದೇಶವು, ಬಿಸಿ ಮತ್ತು ಆರ್ದ್ರವಾದ ಬೇಸಿಗೆಯನ್ನೂ, ಮಳೆಯಿಂದ ಕೂಡಿದ ಸೌಮ್ಯ ಚಳಿಗಾಲದ ಹವಾಮಾನವನ್ನೂ ಹೊಂದಿದೆ. ಇದೇ ಕಾರಣಕ್ಕಾಗಿ ಈ ಪ್ರದೇಶವು ಮಿಲಿಯನ್ನುಗಳ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿದೆ. ಪ್ರತಿ ಚಳಿಗಾಲ, ವಸಂತ, ಮತ್ತು ಮಬ್ಬು ಬೇಸಿಗೆಯಲ್ಲಿ ಪ್ರಪಂಚದ ಎಲ್ಲೆಡೆಯಿಂದ ಬರುವ ಜನ ಇಲ್ಲಿಗೆ ಮುಗಿ ಬೀಳುತ್ತಾರೆ. ಆಲೀವ್ ಎಣ್ಣೆ, ದ್ರಾಕ್ಷಿ, ಕಿತ್ತಳೆ, ನಿಂಬೆಯಂತಹ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯುವ ಇಲ್ಲಿನ ಹಸಿರು ತುಂಬಿದ ಪರ್ವತಮಯ ಸ್ಥಳಗಳು ಕಣ್ಣಿಗೆ ಹಬ್ಬ ನೀಡುತ್ತವೆ. ಕಣಿಗೆಲೆ, ಮಲ್ಲಿಗೆ, ನಂದಿಬಟ್ಟಲು, ಬೋಗನ್-ವಿಲ್ಲಾ, ಗುಲಾಬಿ ಪುಷ್ಪಗಳು ಎಲ್ಲೆಡೆ ನಳನಳಿಸಿ, ಮನರಂಜನೀಯವಾಗಿರುತ್ತದೆ. ಪಕ್ಷಿ-ಪ್ರಾಣಿಗಳು, ಜಲಚರಗಳ ವೈವಿಧ್ಯತೆಯೂ ಮನಸೆಳೆಯುವ ಅಂಶವಾಗಿದೆ.

ಇಷ್ಟೆಲ್ಲಾ ರಂಜನೀಯ ಸಂಗತಿಗಳ ಜೊತೆಗೆ, ಮೆಡಿಟರೇನಿಯನ್ ಪ್ರದೇಶವು ಯೂರೋಪಿನಲ್ಲೇ ಹೆಚ್ಚಿನ ಸಂಖ್ಯೆಯ ಅಗ್ನಿಪರ್ವತಗಳಿಗೂ ಆಶ್ರಯವಾಗಿದೆ. ಜಗದ್ವಿಖ್ಯಾತವಾದ ವೆಸೂವಿಯಸ್, ಮೌಂಟ್ ಎತ್ನಾ, ಸ್ಟ್ರಾಂಬೋಲಿಯ ಜ್ವಾಲಾಮುಖಿಗಳಿಂದಾದ ಅನಾಹುತಗಳು ಚರಿತ್ರೆಯಲ್ಲಿ ಗಮನಾರ್ಹವಾದ ಸಂಗತಿಗಳು. ಗ್ರೀಸಿನ ಕ್ರೀಟ್ ದ್ವೀಪದಲ್ಲೆದ್ದ ಸುನಾಮಿಯಿಂದ ಮೀನೋವನ್ ನಾಗರೀಕತೆಯು ಸಂಪೂರ್ಣವಾಗಿ ನಾಶವಾದ ಸಂಗತಿಯೂ ಪರಿಚಿತವಾದದ್ದೇ! ಇಂದಿಗೂ ಇಟಲಿ ಮತ್ತು ಟರ್ಕಿಯಲ್ಲಿ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ಇದೆಲ್ಲಾ ಏನೇ ಇರಲಿ, ತನ್ನ ಸೌಮ್ಯ ಹವಾಮಾನ, ಸುಂದರ ಕರಾವಳಿ, ನೀಲಿವರ್ಣದ ನೀರು, ಸ್ವಚ್ಛ ಆಗಸ, ಶ್ರೀಮಂತವಾದ ಚರಿತ್ರೆ, ಸಂಸ್ಕೃತಿಗಳಿಂದ ಜಗತ್ತಿನ ಪ್ರವಾಸಿಗಳನ್ನು ಸೆಳೆಯುವ ಈ ಮೆಡಿಟರೇನಿಯನ್ ಪ್ರದೇಶದ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುಸು ಕಷ್ಟ. ಇಟಲಿ, ಗ್ರೀಸ್, ದಕ್ಷಿಣ ಫ಼್ರಾನ್ಸ್, ಸ್ಪೇನ್ ಮತ್ತು ಟರ್ಕಿ ದೇಶಗಳಲ್ಲಿ ಈ ಕರಾವಳಿಗೆ ಭೇಟಿಯಿತ್ತಿರುವ ನಾನು ಪ್ರತೀ ಬಾರಿಯೂ ಇದರ ಅಂದಕ್ಕೆ ಮಾರುಹೋಗಿದ್ದೇನೆ. ಇಲ್ಲಿನ ಕೊಡೆಯಾಕಾರದ ಪೈನ್ ವೃಕ್ಷಗಳು ಸಸ್ಯಶಾಸ್ತ್ರ ವಿದ್ಯಾರ್ಥಿಯಾದ ನನ್ನ ಮನಸ್ಸನ್ನು ಸದಾಕಾಲ ಆಶ್ಚರ್ಯಗೊಳಿಸುತ್ತಲೇ ಇರುತ್ತದೆ. ಕಳೆದ ವಾರ ಇಟಲಿಯ ದ್ವೀಪಕಲ್ಪದಲ್ಲಿರುವ ಎಲ್ಬಾ ದ್ವೀಪಕ್ಕೆ ಹೋದಾಗ, ಇಲ್ಲಿನ ಓಕ್, ಕಾರ್ಕ್ ಮತ್ತು ಪೈನ್ ಮರಗಳ ಚಿತ್ರಗಳು ನನ್ನ ಕ್ಯಾಮೆರಾದಲ್ಲಿ ಬಂಧಿಯಾದವು. ಇವೆಲ್ಲದರ ಜೊತೆಗೆ ಪ್ರವಾಸಿಗರನ್ನು ಆಕರ್ಷಿಸುವ ಮತ್ತೊಂದು ಉತ್ತಮ ಅಂಶವೆಂದರೆ, ಇಲ್ಲಿನ ವೈವಿಧ್ಯಮಯ ಆಹಾರ. ಸಮೃದ್ಧವಾದ ತರಕಾರಿ ಹಣ್ಣುಹಂಪಲು, ಆಲೀವ್ ಎಣ್ಣೆ, ಬೇಳೆಕಾಳು, ದ್ರಾಕ್ಷಾರಸದ ಮದ್ಯ ವೈನ್ ಮತ್ತು ಹಲವು ಬಗೆಯ ಮೀನುಗಳನ್ನೊಳಗೊಂಡ ಇಲ್ಲಿನ ತಿಂಡಿತಿನಿಸುಗಳು, ಆರೋಗ್ಯಕ್ಕೆ ಉತ್ತಮವೆಂದು ವಿಜ್ಞಾನಿಗಳು ಮತ್ತು ವೈದ್ಯರ ಅಭಿಪ್ರಾಯ!

ಸೂರ್ಯಾಸ್ತಮಾನ ವೈಭವ

ಸೂರ್ಯಾಸ್ತಮಾನ ವೈಭವ

ಇಂದು ಮೆಡಿಟರೇನಿಯನ್ ಕರಾವಳಿಯಲ್ಲಿ ಪ್ರವಾಸಿಗರನ್ನು ರಂಜಿಸಲು ಇರುವ ಸಾಧನಗಳು ಹಲವು ಹತ್ತು ರೀತಿಯವು. ಈ ಪುಶ್ಯರಾಗವರ್ಣದ ನೀರಿನ ಒಳಗೆ ಇಣುಕಿ, ಒಳಗಿರುವ ಮನಮೋಹಕ ಜಲಚರಗಳ ಪ್ರಪಂಚವನ್ನು ನೋಡಿ ಆನಂದಿಸಲು ಸ್ಕೂಬಾ ಡೈವಿಂಗ್, ಸ್ನಾರ್ಕಲಿಂಗ್ ಚಟುವಟಿಕೆಗಳು. ಮೆಡಿಟರೇನಿಯನ್ ಸಮುದ್ರದಲೆಗಳ ಮೇಲೆ ಜಾರುವ ಆಟ ಸರ್ಫಿಂಗ್, ಕಯಾಕಿಂಗ್, ಯಾಟಿಂಗ್, ಒಂದೇ ಎರಡೇ. ರಜೆಯ ಸಂಪೂರ್ಣ ಮಜಾ ಪಡೆಯಲು ಇರುವ ಉತ್ತಮ ದಂಡೆಗಳು, ಅವುಗಳ ತೀರದ ಐಷೋರಾಮದ ಹೋಟೆಲುಗಳು, ಅಲ್ಲಿ ದೊರೆಯುವ ಸ್ವಾದಿಷ್ಟ ಭೋಜನ! ದುಡ್ಡು ಚೆಲ್ಲಲು ಸಮರ್ಥರಾದ ಜನರಿಗೆ ದೊರಕುವ ಸೌಲಭ್ಯಗಳು ಅನೇಕ. ಇದರಿಂದ ಈ ದೇಶಗಳ ಪ್ರವಾಸೋದ್ಯಮ ವ್ಯಾಪಾರಗಳು ಪುಷ್ಕಳವಾಗಿ ಬೆಳೆಯುತ್ತಿವೆ.

ಅಲೆಕ್ಸಾಂಡ್ರಿಯಾ, ಮಾರ್ಸೇ, ನೀಸ್, ಅಥೆನ್ಸ್, ಥೆಸ್ಸಲೋನಿಕಿ, ನೇಪಲ್ಸ್, ರೋಮ್, ಜಿನೋವಾ, ವೆನಿಸ್, ಬಾರ್ಸಿಲೋನಾ, ಆಂಟಲ್ಯಾ, ಬೈರೂತ್, ಟ್ರಿಪೋಲಿ ಹೀಗೆ ಹಲವು ಹತ್ತು ಚಾರಿತ್ರಿಕವಾಗಿ ಪ್ರಮುಖ ಪಟ್ಟಣಗಳನ್ನು ತನ್ನ ತೀರದಲ್ಲಿ ಹೊಂದಿ ರಾರಾಜಿಸುವ ಮೆಡಿಟರೇನಿಯನ್ ಕರಾವಳಿಯಲ್ಲಿ ವಾಸಿಸುತ್ತಿರುವ ಜನಸಂಖ್ಯೆ ಇಂದು 120 ಮಿಲಿಯನ್ನುಗಳಿಂತಲೂ ಹೆಚ್ಚಿದೆ. ಇತ್ತೀಚೆಗೆ ಈ ಪ್ರದೇಶಗಳಲ್ಲಿ ತಲೆದೋರಿರುವ ನಿರಾಶ್ರಿತರ ವಲಸೆಯ ಸಮಸ್ಯೆಯಂತೂ, ಯೂರೋಪಿನ ರಾಜಕೀಯ ಮುಖಂಡರಿಗೆ ಒಂದೆ ದೊಡ್ಡ ತಲೆನೋವಾಗಿದೆ. ಮದ್ಯಪ್ರಾಚ್ಯ ವಲಯದಲ್ಲಿ ತಲೆಯೆತ್ತಿರುವ ಅಶಾಂತಿ, ರಾಜಕೀಯ ಅಸ್ಥಿರತೆ ಮತ್ತು ಇವುಗಳ ಮಧ್ಯೆ ಎದ್ದುನಿಂತ ಉಗ್ರರ ದಬ್ಬಾಳಿಕೆ, ಅಟ್ಟಹಾಸಗಳು ಮೆಡಿಟರೇನಿಯನ್ ಸ್ವರ್ಗಸಮಾನ ವಾತಾವರಣದಲ್ಲಿ ಪ್ರಕ್ಷುಬ್ಧತೆಯನ್ನು ತಂದೊಡ್ಡಿದೆ. ಆದರೇನು, ಪ್ರವಾಸಿಗಳು ಇಲ್ಲಿಗೆ ಬರುವುದನ್ನಂತೂ ನಿಲ್ಲಿಸಿಲ್ಲ. ಈ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ವ್ಯಾಪಾರ, ಪ್ರವಾಸ ಮತ್ತಿತರ ಚಟುವಟಿಕೆಗಳು ಇಲ್ಲಿನ ವಾತಾವರಣವನ್ನು ಕಲುಶಿತಗೊಳಿಸುತ್ತಿದೆ. ಹಡಗುಗಳ ಸಾಗಾಣಿಕೆಯ ಪ್ರವಾಹವಂತೂ, ಈ ಸಮುದ್ರದ ಜೀವಿಗಳ ಅಸ್ತಿತ್ವಕ್ಕೆ ಅಪಾಯವನ್ನು ತಂದೊಡ್ಡಿದೆ. ಅತಿಯಾದ ಮೀನುಗಾರಿಕೆ ಈ ಮೋಹಕ ಜಲರಾಶಿಯಲ್ಲಿರುವ ಜಲಚರಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ಕಡಿಮೆಗೊಳಿಸಿದೆ.

 

ಹೂವು ಚೆಲುವೆಲ್ಲಾ ನಂದೆಂದಿತು

ಹೂವು ಚೆಲುವೆಲ್ಲಾ ನಂದೆಂದಿತು 

 ನಳನಳಿಸುವ ಬಾಟಲ್ ಬ್ರಶ್

 

ಮೆಡಿಟರೇನಿಯನ್ ಸಂಧ್ಯೆ

ಮೆಡಿಟರೇನಿಯನ್ ಸಂಧ್ಯೆ

DSC_0343

 

ಆದರೇನು, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಂತೂ ಹೆಚ್ಚುತ್ತಲೇ ಇದೆ. ಕಳೆದ ವಾರ ಎಲ್ಬಾ ದ್ವೀಪದ ಮೋಹಕ ದಂಡೆಯಲ್ಲಿ ನಿಂತು, ಸಂಜೆಯ ಸೂರ್ಯಾಸ್ತಮಾನವನ್ನು ವೀಕ್ಷಿಸುತ್ತಿದ್ದಾಗ ನನಗೆ ಈ ಯಾವ ಸಮಸ್ಯೆಗಳೂ ಅಲ್ಲಿರುವಂತೆ ತೋರಲೇ ಇಲ್ಲಾ! ಆ ಮೋಹಕ ಜಲರಾಶಿ, ಸುತ್ತಲಿನ ಸಸ್ಯಸಂಪತ್ತು, ಅಲ್ಲಿ ಸುಳಿಯುತ್ತಿದ್ದ ತಂಪಾದ ಗಾಳಿ, ಸುತ್ತಲೂ ಚಿಲಿಪಿಲಿಗುಟ್ಟುತ್ತಿದ್ದ ಪಕ್ಷಿಗಳ ಕಲರವಗಳು ನನ್ನ ಪಾಲಿಗಂತೂ ಸ್ವರ್ಗವೇ ಧರೆಗಿಳಿದಂತಿತ್ತು. ಈ ಸುಂದರತೆಯನ್ನು ಕಾಪಾಡಿ, ನಮ್ಮ ಮುಂದಿನ ಪೀಳಿಗೆಯೂ ಇದನ್ನು ಅಸ್ವಾದಿಸಲು ಸಾಧ್ಯವಾಗುವುದೇ! ಇದನ್ನು ಕಾಲವೇ ನಿರ್ಧರಿಸಬಲ್ಲದು!