- ರಾಮಶರಣ ಲಕ್ಷ್ಮೀನಾರಾಯಣ
ರೋಮ್ ಕ್ರಿ.ಪೂ ೨೫೦ ರಿಂದ ಇಲ್ಲಿಯವರೆಗೆ ಸತತವಾಗಿ ರಾಜಧಾನಿಯಾಗಿ ಮೆರೆದ ನಗರ. ಪ್ರಜಾಪ್ರಭುತ್ವ, ರಾಜಾಡಳಿತ, ಧರ್ಮಶಾಹಿ ಹೀಗೆ ಹಲವು ರೀತಿಯ ಪ್ರಭುತ್ವಗಳ ಕೇಂದ್ರವಾಗಿತ್ತು, ರೋಮ್ ನಗರ. ಇಲ್ಲಿ ಹೆಜ್ಜೆಯಿಟ್ಟಲ್ಲೆಲ್ಲ ಇತಿಹಾಸದ ಕುರುಹು. ಕಲ್ಲೆಸೆದಲ್ಲಿ ಪುರಾತನ ಕಟ್ಟಡ; ಕಿವಿಗೊಟ್ಟರೆ ಅವು ಹೇಳುವ ಕಥೆಗಳು; ಕಣ್ಣು ಹಾಯಿಸಿದಲ್ಲೆಲ್ಲ ಕಾಣುವ ಪ್ರತಿಮೆಗಳು, ಚರ್ಚುಗಳು, ಮಂದಿರಗಳು; ಆಘರಾಣಿಸಿದರೆ ಸವರುವ ಪುರಾತನ ಕಂಪು; ತಡವಿದರೆ ಉದುರುವ ನೆನಪುಗಳು. ಹೇಳುತ್ತಾ ಹೋದರೆ ಮುಗಿಯದ ದ್ರಶ್ಯಗಳು, ಮೊಗೆದಷ್ಟೂ ಮುಗಿಯದ ಅನುಭವಗಳು ಒಂದೇ ನಗರದಲ್ಲಿ ಸಿಗುವ ಅವಕಾಶ ಇನ್ನೊಂದೆಡೆ ಸಿಗುವುದು ಅಪರೂಪ. ಜನಪ್ರಿಯವಾದ ರೋಮ್ ನಗರದಲ್ಲಿ ಇನ್ಸ್ಟಾಗ್ರಾಮ್ ಕಣ್ಣಿಗೆ ಬೀಳದ, ಚಾಟ್ ಜಿಪಿಟಿ ಕೊಡುವ ಪ್ರಯಾಣ ಯೋಜನೆಯ ಹರವಿಗೆ ಸಿಗದ ಕುತೂಹಲಕಾರಿ ತಾಣಗಳಿವೆಯೇ?
ಯಾವುದೇ ಪ್ರವಾಸಿ ತಾಣವನ್ನು ಸಂದರ್ಶಿಸುವ ಮೊದಲು ಊರಿನ ವಿವರ, ವಸತಿ, ವಿಮಾನ ಯಾನಗಳನ್ನು ಅನ್ವೇಷಿಸಲು ಅಂತರ್ಜಾಲದ ಮೊರೆ ಹೋಗುವುದು ಸರ್ವೇ ಸಾಮಾನ್ಯ. ನಮ್ಮ ಫೋನ್, ಕಂಪ್ಯೂಟರ್, ಗೂಗಲ್ ಹೋಮ್, ಅಲೆಕ್ಸ್ ಇವುಗಳಲ್ಲೆಲ್ಲ ಹುದುಗಿ, ನಮ್ಮ ಬದುಕಿನ ಅಂತರಂಗದ ಶೋಧನೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ಗೂಗಲ್, ಮೆಟಾದಂತಹ ಕಂಪನಿಗಳು, ಮಾಂತ್ರಿಕ ದೀಪದ ಗುಲಾಮನಂತೆ, ಇನ್ಸ್ಟಾ, ಯೂ ಟ್ಯೂಬ್ ಇತರ ತಾಣಗಳ ಮೂಲಕ ಆ ಊರಿನಲ್ಲಿ ನೋಡಲು ಯೋಗ್ಯವಾದ ಸ್ಥಾನಗಳು ಯಾವುದು ಎಂಬ ವಿಡಿಯೋಗಳನ್ನು ನಿಮ್ಮ ಫೋನಿಗೋ, ಟ್ಯಾಬ್ಲೆಟ್ಟಿಗೋ ಕಳಿಸುತ್ತ ತಮ್ಮ ಕೈಲಾದ ಅಳಿಲು ಸೇವೆ ಸಲ್ಲಿಸುತ್ತಲೇ ಇರುತ್ತವೆ. ಜಾಲತಾಣಗಳು ಪ್ರಚಲಿತಗೊಳಿಸಿದ ಜಾಗೆಗಳನ್ನು ಕಂಡಾಗ ಇದರ ಥಳುಕು ಇಷ್ಟೇನೆ; ಅಂತಹ ಜಾಗೆಗಳನ್ನು ಮಾತ್ರ ನೋಡಿ ಮರಳಿದರೆ ನಮ್ಮ ಲೈಫು ಇಷ್ಟೇನೇ ಎಂಬ ಅನುಮಾನ ಬಂದೀತು. ಗಿಜಿಮಿಜಿಗುಡುವ ಜಾಗೆಗಳಲ್ಲಿ ಊರಿನ ವೈಶಿಷ್ಠ್ಯವನ್ನು ಕಾಣದೇ, ಅರಿಯದೇ ‘ನಾ ಬಂದೆ, ನಾ ಕಂಡೆ, ನಾ ಹೋದೆ’ ಎಂದು ಷರಾ ಹಾಕಿ ಹೋಗುವ ಭೇಟಿಗಳು ಮನದಾಳದಲ್ಲಿ ಮನೆ ಮಾಡಲು ಸಾಧ್ಯವೇ? ಜನ ಜಂಗುಳಿಯಿಂದ ದೂರವಾಗಿಯೋ, ಗದ್ದಲದ ನಡುವೆಯೇ ಕಂಬಳಿ ಹೊದ್ದು ಅಡಗಿರುವ ಅನುಭವಗಳನ್ನು ಕೆದಕಿದಾಗ ಅವು ಹೇಳುವ ಕಥೆಗಳು ಸೃಷ್ಟಿಸುವ ನೆನಪು, ಆಪ್ತವಾಗಿ, ಬಾಳಿನುದ್ದಕ್ಕೂ ಸವಿಯುವ ಬುತ್ತಿಯಾಗುವವು. ರೋಮ್ ನ ಟ್ರೆವಿ ಕಾರಂಜಿ, ಕೊಲೋಸಿಯಂ, ವ್ಯಾಟಿಕನ್, ಪ್ಯಾಂಥಿಯನ್ ಗಳ ಹೊಳಪಿನ ನಡುವೆ ಯುಗಗಳೇ ಕಳೆದರೂ ಬದಲಾಗದ ಮಾನವನ ವರ್ತನೆಗೆ ಒಂದು ಚರ್ಚ್ ಹಾಗೂ ಒಂದು ಪ್ರತಿಮೆ ದ್ಯೋತಕವಾಗಿವೆ. ಈ ಅನುಭವಗಳನ್ನು ಅನಾವರಣಗೊಳಿಸಿದವನು ‘ರೋಮ್ ನಗರದ ಅಡಗಿದ ರತ್ನಗಳು’ ಎಂಬ ಕಾಲ್ನಡಿಗೆ ಪ್ರಯಾಣದ ಮಾರ್ಗದರ್ಶಿ. ಆತನಿಗೆ ನಾನು ಋಣಿ.
ಕ್ರಿಸ್ತನ ದೇಹತ್ಯಾಗದ ನಂತರ ಆತನ ಪ್ರಮುಖ ಶಿಷ್ಯ ಪೀಟರ್ ಕ್ರಿ.ಶ ೪೦ ರ ಸುಮಾರಿಗೆ ರೋಮ್ ನಗರದ ಹೊರ ವಲಯಕ್ಕೆ ಬಂದ ಎಂಬ ಐತಿಹ್ಯವಿದೆ. ಹಿಂದೂ ಧರ್ಮದಂತೆ, ಹಲವಾರು ದೇವರುಗಳನ್ನು ಪೂಜಿಸುವ ವಾಡಿಕೆ ರೋಮನ್ನರ ಧರ್ಮದಲ್ಲೂ ಇತ್ತು. ಮೂರ್ತಿ ಪೂಜೆ, ಸಾಂಪ್ರದಾಯಿಕ ಆಚರಣೆಗಳು ಸಾಮಾನ್ಯವಾಗಿದ್ದ ಕಾಲವದು. ಜಗತ್ತಿಗೊಬ್ಬನೇ ದೇವ, ಆತನ ಪುತ್ರ ಕ್ರಿಸ್ತ ಎಂಬ ಕ್ರಿಶ್ಚಿಯನ್ ನಂಬಿಕೆ ಆಗ ಹೊಸದು. ಹೊಸದನ್ನು ನಂಬುವುದು, ವಿಚಾರಗಳಿಗೆ ತೆರೆದುಕೊಳ್ಳುವುದು ಸುಲಭವಲ್ಲ. ಈ ವೈಚಾರಿಕತೆಯ ಸಂಘರ್ಷದಲ್ಲಿ ರೋಮನ್ನರು ಕ್ರಿಸ್ತನ ಅನುಯಾಯಿಗಳನ್ನು ಸಹಿಸಲಿಲ್ಲ. ವ್ಯವಸ್ಥಿತವಾಗಿ ಕ್ರಿಶ್ಚಿಯನ್ನರನ್ನು ಹಿಂಸಿಸಿ, ಅಟ್ಟಿಸಿಕೊಂಡು ಹೋಗಿ ಹತ್ಯೆ ಮಾಡತೊಡಗಿದರು. ಸಂತ ಪೀಟರ್ ಕೂಡ ಚಕ್ರವರ್ತಿ ನೀರೋನ ಕಾಲದಲ್ಲಿ ಈ ಹಿಂಸಾಕಾಂಡಕ್ಕೆ ಶಿಲುಬೆಯೇರಿ ಬಲಿಯಾದ.

ರೋಮ್ ನ ಒಂದು ಶ್ರೀಮಂತ ಕುಟುಂಬದಲ್ಲಿ ಕ್ರಿ.ಶ ೧೮೦ರಲ್ಲಿ ಸಿಸಿಲಿಯ ಎಂಬ ಕನ್ಯೆ ಹುಟ್ಟಿದಳು. ಕ್ರಿಸ್ತನ ಸಂದೇಶಗಳಿಂದ ಆಕರ್ಷಿತಳಾದ ಸಿಸಿಲಿಯ, ಉತ್ತಮ ಹಾಡುಗಾರ್ತಿ. ಆಕೆ ಜೀವನವಿಡೀ ಕನ್ಯೆಯಾಗಿಯೇ ಇದ್ದು, ಕ್ರಿಸ್ತನ ಸಂದೇಶವನ್ನು ಹರಡುವ ತೀರ್ಮಾನ ಮಾಡಿದಳು. ಆಕೆಯ ಪೋಷಕರಿಗೆ ಅದೇ ಊರಿನ ವ್ಯಾಲೇರಿಯನ್ ಎಂಬ ಯುವಕನಿಗೆ ಅವಳನ್ನು ಕೊಟ್ಟು ಮದುವೆ ಮಾಡುವ ಇಚ್ಛೆ. ಆಕೆ ವ್ಯಾಲೇರಿಯನ್ ಗೆ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದರೆ ಮಾತ್ರ ಮದುವೆ ಆಗುವೆ ಎನ್ನುವ ಷರತ್ತನ್ನೊಡ್ಡುತ್ತಾಳೆ. ಅವಳ ಪ್ರೀತಿಗೆ ಸಿಕ್ಕಿದ ವ್ಯಾಲೆರಿಯನ್ ಒಪ್ಪಿ ಅವಳನ್ನು ಮದುವೆಯಾಗುತ್ತಾನೆ. ಅದಲ್ಲದೇ ಆತನ ಸಹೋದರ ಟಿಬರ್ಟಿಯಸ್ ಕೂಡ ಆತನೊಡನೆ ಧರ್ಮಾಂತರ ಮಾಡುತ್ತಾನೆ. ಸಿಸಿಲಿಯ ಇವರೊಂದಿಗೆ ಕ್ರಿಸ್ತನ ಸಂದೇಶಗಳನ್ನು ಹಾಡುತ್ತ ಧರ್ಮ ಪ್ರಚಾರ ಮುಂದುವರೆಸಿದಳು. ರೋಮನ್ನರ ಕೆಂಗಣ್ಣಿಗೆ ಬಿದ್ದ ಮೂವರಿಗೂ ಮರಣದಂಡನೆಯಾಗುತ್ತದೆ (ಕ್ರಿ.ಶ ೨೩೦). ಸಿಸಿಲಿಯಾಳ ಹತ್ಯೆಗೈಯ್ಯುವ ಮೊದಲ ಪ್ರಯತ್ನ ವಿಫಲವಾಗುತ್ತದೆ. ನಂತರ ಅವಳ ಶಿರಚ್ಛೇದನ ಮಾಡುವ ಪ್ರಯತ್ನಗಳೂ ವಿಫಲವಾಗುತ್ತವೆ. ಆಕೆ ಮತ್ತೆ ಮೂರು ದಿನಗಳ ಕಾಲ ಬದುಕಿದ್ದು, ಹಾಡುತ್ತ ಕ್ರಿಸ್ತನ ಸಂದೇಶವನ್ನು ಪಸರಿಸುತ್ತಾಳೆ. ಪವಾಡ ಸದೃಶವಾಗಿ ಮಾರಣಾಂತಿಕ ಪ್ರಯತ್ನಗಳನ್ನು ಮೀರಿ ಬದುಕಿದ ಸಿಸಿಲಿಯಾಳನ್ನು ತದನಂತರ ಕ್ಯಾಥೋಲಿಕ್ ಚರ್ಚ್ ಸಂತಳನ್ನಾಗಿಸಿತು. ಸಂತ ಸಿಸಿಲಿಯ ಇಂದು ಸಂಗೀತದ ಪೋಷಕ ಸಂತಳೆಂದು (patron saint) ಗುರುತಿಸಲ್ಪಡುತ್ತಾಳೆ. ಆಕೆಯ ಚರ್ಚ್ ರೋಮ್ ನಗರದ ಟ್ರಾಸ್ಟವೇರ್ ಎಂಬಲ್ಲಿ ಇದೆ. ರವಿವಾರದ ಪ್ರಾರ್ಥನೆ ಕಾಲದಲ್ಲಿ ಇಲ್ಲಿನ ಕಾನ್ವೆಂಟ್ ನ ಸಾಧ್ವಿಗಳು ಹಾಡುವ ಪ್ರಾರ್ಥನೆಗಳು ವಿಶೇಷವಂತೆ. ಸಿಸಿಲಿಯಾಳ ಗೌರವಾರ್ಥ ಹಲವಾರು ಪ್ರಸಿದ್ಧ ಸಂಗೀತಕಾರರು ಕೃತಿಗಳನ್ನು ರಚಿಸಿದ್ದಾರೆ. ನೀವು ಈ ಚರ್ಚಿಗೆ ಭೇಟಿಯಿತ್ತರೆ, ಅಮೃತ ಶಿಲೆಯಲ್ಲಿ ಕಟೆದ ಸಿಸಿಲಿಯಾಳ ಪುತ್ಥಳಿಯನ್ನು ಕಾಣಬಹುದು. ಸಿಸಿಲಿಯಾಳ ಕತ್ತಿನಲ್ಲಿ ಮಚ್ಚಿನ ಗುರುತೂ ಇದೆ. ನೆಲ ಮಾಳಿಗೆಯಲ್ಲಿ ರೋಮನ್ ಬಂಗಲೆಯ ಪಳೆಯುಳಿಕೆಗಳಿವೆ (ಇದು ಸಿಸಿಲಿಯಾಳ ಮನೆಯಾಗಿತ್ತೆನ್ನುವ ಐತಿಹ್ಯವಿದೆ), ಸುಂದರವಾದ ಹೊಳೆಯುವ ಮೊಸಾಯಿಕ್ ನಿಂದ ಅಲಂಕರಿಸಿದ ಪ್ರಾರ್ಥನಾ ಗೃಹವೂ ಇದೆ.
ಸಿಸಿಲಿಯಾಳ ಅವನತಿಯೊಂದಿಗೆ ಕ್ರಿಸ್ತನ ಬೋಧನೆಗಳು ಅಂದು ಮಣ್ಣಾಗಲಿಲ್ಲ. ತದನಂತರ ಸುಮಾರು ಕ್ರಿ.ಶ ೩೩೦ ರಲ್ಲಿ ಕಾನ್ಸ್ಟಂಟಿನ್ ಚಕ್ರವರ್ತಿ ಕ್ರೈಸ್ತ ಧರ್ಮವನ್ನು ಅಂಗೀಕರಿಸುತ್ತಾನೆ (ಆ ಕಥೆಗೆ ಈಗ ಸಮಯವಿಲ್ಲ), ರೋಮನ್ನರು ಕ್ರಮೇಣ ಕ್ರೈಸ್ತ ಧರ್ಮವನ್ನನುಸರಿಸುತ್ತಾರೆ .
ರೋಮ್ ನಗರದ ಮಧ್ಯದಲ್ಲಿ (ಪ್ಯಾಂಥೆಯಾನ್ ದೇವಾಲಯದ ಸಮೀಪ) ಕ್ಯಾಮ್ಪೋ ಡಿ ಫಿಯೋರಿ ಎಂಬ ಪುರಾತನ ಸಂತೆ ಮಾಳವಿದೆ. ಇಂದಿಗೂ ಅಲ್ಲಿ ಪ್ರತಿದಿನ ಸಂತೆ ಕೂರುತ್ತದೆ. ಆ ಮಾರುಕಟ್ಟೆಯ ನಡುವೆ ಭಿಕ್ಷುವಿನ ಮೆಲುವಂಗಿ ಧರಿಸಿ ತಲೆ ತಗ್ಗಿಸಿ ನಿಂತ ವ್ಯಕ್ತಿಯ ತಾಮ್ರದ ಪುತ್ಥಳಿಯನ್ನು ಕಾಣುತ್ತೀರಿ. ಈತನೇ ಜೋರ್ಡಾನೋ ಬ್ರೂನೋ. ಈತ ೧೫೪೮ರಲ್ಲಿ ನೇಪಲ್ಸ್ ಪ್ರಾಂತ್ಯದ ನೋಲ ಎಂಬಲ್ಲಿ ಹುಟ್ಟಿದ. ಅವನನ್ನು ವಿದ್ಯಾಭ್ಯಾಸಕ್ಕಾಗಿ ನೇಪಲ್ಸಿಗೆ ಕಳಿಸುತ್ತಾರೆ. ಆಗಿನ ಕಾಲದಲ್ಲಿ ಚರ್ಚುಗಳೇ ಜ್ಞಾನಾರ್ಜನೆಯ ಕೇಂದ್ರಗಳಾಗಿದ್ದವು. ಬ್ರೂನೋ ನೇಪಲ್ಸ್ ನಲ್ಲಿ ಧರ್ಮ ಮೀಮಾಂಸೆಯನ್ನು ಅಭ್ಯಾಸ ಮಾಡಿದ. ಆತನ ಸ್ಮರಣ ಶಕ್ತಿ ಅಗಾಧ. ಅದನ್ನು ಬೆಳೆಸಲು ಆತ ತನ್ನದೇ ಆದ ವಿಶೇಷ ತಂತ್ರಗಳನ್ನು ಬೆಳೆಸಿಕೊಂಡಿದ್ದ. ಹೆಚ್ಚಿನ ಅಭ್ಯಾಸಕ್ಕಾಗಿ ಬ್ರೂನೋ ರೋಮ್ ನಗರಕ್ಕೆ ಬಂದಾಗ, ಅಂದಿನ ಪೋಪ್ ಆತನ ಸ್ಮರಣ ಶಕ್ತಿಯ ಪ್ರತಿಭೆಗೆ ಆಕರ್ಷಿತನಾಗಿ, ಬ್ರುನೋನ ಅಧ್ಯಯನಕ್ಕೆ ವಿಶೇಷ ವ್ಯವಸ್ಥೆ ಮಾಡಿಸುತ್ತಾನೆ. ಕ್ರೈಸ್ತ ಧರ್ಮದ ಉಚ್ಛ್ಛ್ರಾಯ ಕಾಲವದು. ಪೋಪ್ ಧರ್ಮಾಧಿಕಾರಿಯಾಗಿದ್ದನಲ್ಲದೇ ಮಧ್ಯ ಇಟಲಿಯ ರಾಜನೂ ಆಗಿದ್ದ. ಅದರೊಟ್ಟಿಗೆ ತನ್ನ ಪ್ರಭಾವವನ್ನು ಯೂರೋಪಿನ ಸಾಕಷ್ಟು ದೇಶಗಳ ರಾಜಕೀಯದಲ್ಲೂ ಬೀರಿದ್ದ. ಕ್ರಿಸ್ತನ ಬೋಧನೆಗೆ ವಿರುದ್ಧವಾಗಿ, ಕ್ರೈಸ್ತ ಧರ್ಮದಲ್ಲಿ ಅಸಹಿಷ್ಣುತೆ, ಕಂದಾಚಾರ, ಅಧಿಕಾರ ಲೋಲುಪತೆ ಬೇರು ಬಿಟ್ಟಿದ್ದವು. ಬ್ರೂನೋ ಪಾದ್ರಿಯಾಗಿ ಚರ್ಚ್ ಸೇರಿದ್ದರೂ, ವ್ಯಾಟಿಕನ್ ನಗರದಲ್ಲಿನ ಗ್ರಂಥಾಲಯಗಳಲ್ಲಿ ಹೆಚ್ಚು ಕಾಲ ಕಳೆದನೇ ಹೊರತು ಚರ್ಚುಗಳಲ್ಲಲ್ಲ. ಅಂದಿನ ಕ್ರೈಸ್ತ ಧರ್ಮದ ನಂಬಿಕೆಗಳಿಗೆ ವ್ಯತಿರಿಕ್ತವಾದ ವಿಚಾರಗಳತ್ತ ಬ್ರೂನೋ ಆಕರ್ಷಿತನಾಗಿ, ಆ ವಿಷಯಗಳ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಾನೆ. ಎರಾಸ್ಮಸ್, ಕೋಪರ್ನಿಕಸ್ ರಂತಹ ದಾರ್ಶನಿಕರ ದೃಷ್ಟಿಕೋನವನ್ನು ತನ್ನದಾಗಿಸಿಕೊಂಡ ಬ್ರೂನೋ ಪೋಪ್ ನ ಅವಕೃಪೆಗೆ ಒಳಗಾಗಲು ತಡವಾಗಲಿಲ್ಲ.
೧೫೭೬ ರಲ್ಲಿ ರೋಮ್ ನಿಂದ ತಪ್ಪಿಸಿಕೊಂಡು ಓಡಿದ ಬ್ರೂನೋ, ಸ್ವಿಟ್ಝರ್ಲ್ಯಾನ್ಡ್, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್ ದೇಶಗಳನ್ನೆಲ್ಲ ಸುತ್ತಿ, ಪ್ರಾಚಾರ್ಯನಾಗಿ, ಹೆಚ್ಚಿನ ಅಭ್ಯಾಸ ಮಾಡಿ, ೧೫೯೧ ರಲ್ಲಿ ವೆನಿಸ್ ನಗರಕ್ಕೆ ಮರಳಿದ. ಆಗ ವೆನಿಸ್, ವ್ಯಾಟಿಕನ್ನಿನ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ಬ್ರೂನೋ ಹಾಗಾಗೇ ತಾನು ಅಲ್ಲಿ ಸುರಕ್ಷಿತವೆಂಬ ಭಾವನೆಯಲ್ಲಿ ಹಿಂದಿರುಗಿರಬಹುದು. ‘ಕ್ರಿಸ್ತ ದೇವನ ಸೃಷ್ಟಿ – ಮಗನಲ್ಲ, ಮೇರಿ ಕನ್ಯೆಯಾಗಿರಲಿಲ್ಲ, ಪವಿತ್ರ ಟ್ರಿನಿಟಿಗೆ ಅರ್ಥವಿಲ್ಲ, ಭೂಮಿ ಸೂರ್ಯನ ಸುತ್ತು ಸುತ್ತುತ್ತಿದೆ, ಬ್ರಹ್ಮಾಂಡದಲ್ಲಿ ಹಲವಾರು ಸೌರ ಮಂಡಲಗಳಿವೆ, ಹಾಗೆಯೇ ದೇವರೂ ಹಲವಾರು ಇರಬಹುದು’ ಇವೆಲ್ಲ ಬ್ರೂನೋನ ಬೋಧನೆಗಳಾಗಿದ್ದವು. ಪೋಪ್ ಹಾಗೂ ಆತನ ಸಹಚರರರು ಇದನ್ನು ಸಹಿಸಿಯಾರೇ? ಯಾವುದೋ ತಂತ್ರ ಹೂಡಿ, ವೆನಿಸ್ ನಗರದಲ್ಲಿ ಬ್ರುನೋನನ್ನು ಬಂಧಿಸಿದರು. ಸತತವಾಗಿ ಏಳು ವರ್ಷಗಳ ಕಾಲ ವ್ಯಾಟಿಕನ್ನಿನ ಜೈಲಿನಲ್ಲಿ ಚಿತ್ರಹಿಂಸೆ ಕೊಟ್ಟರೂ ಬ್ರೂನೋ ತನ್ನ ಆತನ ವಿಚಾರಧಾರೆಯನ್ನು ಬದಲಿಸಲು, ತಾನು ಪಡೆದ ಜ್ಞಾನವನ್ನು ಅಸತ್ಯ, ಪಾಪ ಎಂದು ಒಪ್ಪಿಕೊಳ್ಳಲಿಲ್ಲ. ಬ್ರುನೋನನ್ನು ಬಗ್ಗಿಸಲಾಗದೆ ಹತಾಶೆಯಿಂದ ಪೋಪ್ ಕ್ರಿ.ಶ ೧೬೦೦ ರಲ್ಲಿ ಆತನಿಗೆ ಮರಣದಂಡನೆ ವಿಧಿಸುತ್ತಾನೆ. ಆತನನ್ನು ಕ್ಯಾಮ್ಪೋ ಡಿ ಫಿಯೋರಿಗೆ ಕರೆದೊಯ್ಯುವಾಗ, ದಾರಿಯಲ್ಲಿ ತನ್ನ ವಿಚಾರಗಳಿಂದ ಬ್ರೂನೋ ಜನರ ಮೇಲೆ ಪ್ರಭಾವ ಬೀರದಿರಲಿ ಎಂದು ಆತನ ಬಾಯಿಯನ್ನು ಹೊಲಿಯುತ್ತಾರೆ. ಮಾರುಕಟ್ಟೆಯ ಮಧ್ಯದಲ್ಲಿ ಆತನ ಸಜೀವ ದಹನವಾಗುತ್ತದೆ, ಆದರೆ ಬ್ರುನೋನ ವಿಚಾರಗಳು ಅಲ್ಲಿ ದಹನವಾಗಲಿಲ್ಲ .
೧೮೮೯ರಲ್ಲಿ ರೋಮ್ ನಗರದ ಸ್ವತಂತ್ರ ಚಿಂತಕರ ಸಂಘ; ಜಡ್ಡು ಗಟ್ಟಿದ ಚರ್ಚಿನ ಸಂಪ್ರದಾಯಗಳಿಗೆ ಸೆಡ್ಡು ಹೊಡೆದು, ವೈಚಾರಿಕತೆಯ ಪ್ರತಿಪಾದನೆಗೆ ಜೀವನವನ್ನು ಮುಡಿಪಾಗಿಸಿದ ಬ್ರುನೋನ ಪುತ್ಥಳಿಯನ್ನು ಆತನನ್ನು ಬಲಿಕೊಟ್ಟ ಜಾಗದಲ್ಲಿ ಪ್ರತಿಷ್ಠಾಪಿತು. ಬ್ರುನೋನ ಪುತ್ಥಳಿ ವ್ಯಾಟಿಕನ್ ನಗರದತ್ತ ನೋಡುವಂತೆ ನಿಲ್ಲಿಸಿದ್ದನ್ನು ಅಂದಿನ ಪೋಪ್ ಸಹಿಸಲಿಲ್ಲವಂತೆ. ಅವನ ದೃಷ್ಟಿಯನ್ನು ಕಟ್ಟಿಹಾಕಲು ಮೂರ್ತಿಯ ಎದುರು ವ್ಯಾಟಿಕನ್ ಕಾಣದಂತೆ ಒಂದು ಅಪಾರ್ಟ್ಮೆಂಟ್ ಸಂಕೀರ್ಣವನ್ನು ಕಟ್ಟಿಸಿದ ಎನ್ನುತ್ತಾರೆ. ಈ ಕಥೆಯ ಸತ್ಯಾಸತ್ಯತೆಯನ್ನು ನಾನು ಒರೆಗಿಟ್ಟಿಲ್ಲ.
ರೋಮ್ ನಗರ ಇಂತಹ ಅದ್ಭುತ ಕಥೆಗಳ ತಳವಿಲ್ಲದ ಗುಡಾಣ. ಇವನ್ನು ನೋಡಲು, ಅನುಭವಿಸಲು ಒಂದೆರಡು ದಿನಗಳು ಸಾಲವು. ಸಿಸಿಲಿಯ ಹಾಗೂ ಬ್ರೂನೋ ಅವರ ನಡುವಿನ ಅಂತರ ಸರಿ ಸುಮಾರು ಒಂದೂವರೆ ಸಾವಿರ ವರ್ಷಗಳು . ಸಮಕಾಲೀನ ವಿಚಾರಗಳಿಗೆ ವ್ಯತಿರಿಕ್ತವಾದ ವಿಚಾರಗಳನ್ನು ಸಮಾಜದ ಒಳಿತಿಗಾಗಿ ಪಸರಿಸಲು ಇಬ್ಬರೂ ತಮ್ಮ ಜೀವನವನ್ನು ಬಲಿಗೊಟ್ಟರು. ಹಳತು – ಹೊಸತುಗಳ ನಡುವಿನ ಘರ್ಷಣೆ ಕೊನೆಗೊಂಡಿಲ್ಲ. ಸಿಸಿಲಿಯ ಹಾಗೂ ಬ್ರೂನೋ ಬದಲಾಗದ ಮಾನವನ ವರ್ತನೆಗೆ ಹಿಡಿದ ಕನ್ನಡಿಗಳಾಗಿದ್ದಾರೆ, ಇಂದಿಗೂ ಪ್ರಸ್ತುತವಾಗಿದ್ದಾರೆ.
(ಎಲ್ಲ ಚಿತ್ರಗಳು ಲೇಖಕ ಸೆರೆ ಹಿಡಿದದ್ದು )












