ಕನ್ನಡ ಕಾವ್ಯಲೋಕವನ್ನು ಅವಲೋಕಿಸಿದಾಗ ಅಲ್ಲಿ ಸೊಗಸು ಮತ್ತು ಸೌಂದರ್ಯಗಳ ಉಲ್ಲೇಖವನ್ನು ಯಥೇಚ್ಛವಾಗಿ ಕಾಣಬಹುದು. ಬದುಕಿನ ಸೊಗಸುಗಳನ್ನು ಇಂದ್ರಿಯಗಳ ಮೂಲಕ ಗ್ರಹಿಸಿ ಭಾವನೆಗಳ ಲೋಕದಲ್ಲಿ ಅದನ್ನು ಅನುಭವಿಸಿ ಕೊನೆಗೆ ಅದನ್ನು ಪದಗಳ ಮೂಲಕ ಕವನವಾಗಿ ಅಭಿವ್ಯಕ್ತಗೊಳಿಸುವುದು ಕವಿಯ ವಿಶೇಷ ಸಾಮರ್ಥ್ಯ. ಈ ಸೊಗಸನ್ನು ಅನುಭವಿಸಲು ಬದುಕಿನ ಬಗ್ಗೆ ಪ್ರೀತಿ ಇರಬೇಕು. ಇಲ್ಲದಿದ್ದಲ್ಲಿ ಅದು ನಮ್ಮ ದಿನನಿತ್ಯ ಬದುಕಿನ ಯಾಂತ್ರಿಕತೆಯಷ್ಟೇ ಆಗಿ ಉಳಿದುಬಿಡುತ್ತದೆ. ಕವಿತೆಯಲ್ಲಿಯ ರಸಿಕತೆ, ಬದುಕಿನ ಪ್ರೀತಿ ಎಂಬ ವಿಚಾರಗಳು ಯುರೋಪ್ ಸಾಹಿತ್ಯವಲಯಗಳಲ್ಲಿ ಸಂಭವಿಸಿದ ಸಾಹಿತ್ಯ ಕ್ರಾಂತಿಯಲ್ಲಿ ರೊಮ್ಯಾಂಟಿಕ್ ಪೊಯೆಟ್ರಿ ಎಂಬ ಹೆಸರಿನಲ್ಲಿ ಮೂಡಿಬಂದಿದೆ. ಈ ಸೊಗಸಿನ ಕ್ಷಣಗಳನ್ನು ಕುವೆಂಪು, ಬೇಂದ್ರೆ ಮತ್ತಿತರ ಕವಿಗಳ ಕವನಗಳಲ್ಲಿ ಕಾಣಬಹುದು. 'ಆನಂದಮಯ ಈ ಜಗ ಹೃದಯ' ಎಂಬ ಕುವೆಂಪು ಅವರ ಕವಿತೆ ಇದಕ್ಕೆ ಉತ್ತಮ ನಿದರ್ಶನ. ಇದೇ ಕವನದಲ್ಲಿ 'ಸೂರ್ಯೋದಯ, ಚಂದ್ರೋದಯ ದೇವರ ದಯೆಕಾಣೋ' ಎನ್ನುವ ಈ ಸಾಲಿನಲ್ಲಿ ಕವಿ ಬರಿ ನಿಸರ್ಗ ಸೌಂದರ್ಯವನ್ನಷ್ಟೇ ಅಲ್ಲ, ಅಲ್ಲಿ ಒಂದು ಆಧ್ಯಾತ್ಮಿಕ ಅನುಭಾವವನ್ನೂ ಪಡೆಯುತ್ತಾನೆ. ಕುವೆಂಪು ಹೇಳುವಂತೆ ‘ರವಿ ವದನವು ಶಿವವದನವೂ ಕೂಡ. ಶಿವನಿಲ್ಲದೆ ಸೌಂದರ್ಯವು ಇಲ್ಲ. ಶಿವ ಕಾವ್ಯದ ಕಣ್ಣೋ, ಶಿವ ಕಾಣದ (ಸೌಂದರ್ಯವನ್ನು ಕಾಣದ) ಕವಿ ಕುರುಡನೋ!’ ಈ ಒಂದು ಪರಿಕಲ್ಪನೆ "ಸತ್ಯಂ ಶಿವಂ ಸುಂದರಂ" ಎಂಬ ಸಾಲುಗಳಲ್ಲಿ ಕೂಡ ಅಭಿವ್ಯಕ್ತಗೊಂಡಿದೆ. ಕುವೆಂಪು ಅವರ ಇನ್ನೊಂದು ಕವನದಲ್ಲಿ ನಿಸರ್ಗದ ಸೊಗಸನ್ನು, ಬೆಳಕ್ಕಿಗಳು ನೀಲಾಕಾಶದಲ್ಲಿ ತೂಗುತ್ತ ಬರುವುದನ್ನು ನೋಡಿ ಭಾವ ಪರವಶರಾಗಿ 'ದೇವರು ರುಜು ಮಾಡಿದನು, ರಸವಶನಾಗುತ ಕವಿ ಅದ ನೋಡಿದನು'ಎಂದು ಬರೆಯುತ್ತಾರೆ. ಬೇಂದ್ರೆ ಅವರು 'ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ, ಬಾಗಿಲು ತೆರೆದು ಬೆಳಕು ಹರಿದೂ ದೇವನು ಜಗವೆಲ್ಲ ತೊಯ್ದ' ಎಂದು ಸೂರ್ಯೋದಯದ ಬಗ್ಗೆ ಬರೆಯುತ್ತಾರೆ. ‘ಶ್ರಾವಣ ಬಂತು ಶ್ರಾವಣ’ ಎಂದು ಸಂತಸಪಡುತ್ತಾರೆ. ಈ ರೀತಿಯ ಅನೇಕ ಸೊಗಸಿನ ಕ್ಷಣಗಳನ್ನು ಕುವೆಂಪು ಮತ್ತು ಬೇಂದ್ರೆ ಅವರ ಪದ್ಯ-ಗದ್ಯ ಕೃತಿಗಳಲ್ಲಿ ಕಾಣಬಹುದು.
ಬಾಬ್ ಥೀಲ್ ಮತ್ತು ಜಾರ್ಜ ವೀಸ್ ರಚಿಸಿರುವ, ಖ್ಯಾತ ಗಾಯಕ ಲೂಯಿಸ್ ಆರ್ಮ್ ಸ್ಟ್ರಾಂಗ್ ಹಾಡಿರುವ ಈ ಗೀತೆಯ ಮೊದಲ ಪಂಕ್ತಿಯ ಸಾಲುಗಳು ಹೀಗಿವೆ;
I see trees of green, red roses too
I see them bloom for me and you
And think to myself
What a wonderful world!
ಈ ಒಂದು ಗೀತೆ ಬಹಳ ಜನಪ್ರೀಯವಾಗಿದೆ, ಇದು ಕೂಡ ಬದುಕಿನ ಪ್ರೀತಿಯ ಬಗ್ಗೆ ಬರೆದ ಕವನ ಎನ್ನಬಹುದು.
ಡಾ. ಸತ್ಯವತಿ ಅವರು ಬದುಕಿನ ಹಲವಾರು ದೈನಂದಿಕ ಆಗು ಹೋಗುಗಳಲ್ಲಿ ಮತ್ತು ಸಾಧಾರಣ ಸರಳ ವಿಚಾರಗಳಲ್ಲಿ ಸೊಗಸಿನ ಕ್ಷಣಗಳನ್ನು ಕಂಡಿದ್ದಾರೆ ಮತ್ತು ತಮ್ಮ ಕೆಳಗಿನ (ಸೊಗಸಾದ) ಕವಿತೆಯಲ್ಲಿ ನಮಗೂ ಕಾಣಿಸಿದ್ದಾರೆ.
*
ಬದುಕಿನ ಸೊಗಸಿನ ಕ್ಷಣದೊಂದಿಗೆ ಒಂದು ನಗುವನ್ನು ಸೇರಿಸಿ ನಕ್ಕು ಬಿಡೋಣ. ಉಮೇಶ್ ಅವರು ಬರೆದಿರುವ 'ಸ್ವಾಮಿ' ಎಂಬ ಕಿರು ಪ್ರಸಂಗ ಒಂದೇ ಹೆಸರಿನಲ್ಲಿ ಅಡಗಿರುವ ಮತ್ತೊಂದು ಅರ್ಥ ಹೇಗೆ ಗೊಂದಲಕ್ಕೆ ಕಾರಣವಾಗಬಹುದು ಎಂಬುದಕ್ಕೆ ನಿದರ್ಶನವಾಗಿ ಒಂದು ತಿಳಿ ಹಾಸ್ಯ ಪ್ರಸಂಗವಾಗಿ ಮೂಡಿಬಂದಿದೆ.
****
ಸೊಗಸಿನ ಕ್ಷಣಗಳು
ಮಾಗಿಯ ಚಳಿಯಲ್ಲಿ ಕುಳಿತು ಬಿಸಿ ಬಿಸಿ ಕಾಫಿಯನು
ಕೋಡುಬಳೆಯೊಂದಿಗೆ ಸವಿಯುವುದೊಂದು ಸೊಗಸು
ಬೆಳಗಾಗೆದ್ದು ಕಿಟಕಿಯಾಚೆಗೆ ಮುಖವನ್ನಿಟ್ಟು ಅಳಿದುಳಿದ
ಕಾಳುಗಳ ಹೆಕ್ಕುತಿರುವ ಹಕ್ಕಿಗಳ ನೋಡುವುದೊಂದು ಸೊಗಸು
ಮನೆಯ ಮುಂದಿನ ಅಂಗಳದಿ ನಿಂತು ರಸ್ತೆಯಲಿ ಒಡಾಡುವ
ಕಾರುಗಳ ಬಣ್ಣಗಳ ಗುರುತಿಸುವುದೊಂದು ಸೊಗಸು
ಮುಳುಗಿಹೋಗಿದೆ ಜಗವೆಂಬ ಗಾಬರಿಯಲಿ ಧಾವಿಸುವ
ಜನರ ಧಾವಂತಿಕೆ ನೋಡುವುದೊಂದು ಸೊಗಸು
ಲಲ್ಲೆ ಹೊಡೆಯುತ ಗೆಳೆಯರೊಡನೆ ಶಾಲೆಗೆ ನಿರ್ಯೋಚನೆಯಲಿ
ಕುಣಿಯುತ ನಡೆವ ಮಕ್ಕಳ ನೋಡುವುದೊಂದು ಸೊಗಸು
ಭೂಮಿಯಲಿ ನಡೆವ ವ್ಯಾಪಾರವನು ಮೌನದಲಿ
ನೋಡುವಾ ಆಗಸವ ನಿರುಕಿಸುವುದೊಂದು ಸೊಗಸು
ತನ್ನೆಲ್ಲ ಆಟದೀ ಗೊಂಬೆಗಳ ಆಟವನು ನೋಡುತ್ತ ತನ್ನಷ್ಟಕ್ಕೆ
ನಗುತಿರಬಹುದಾದ ಸೃಷ್ಟಿಕರ್ತನನು ನೆನೆಯುವುದೊಂದು ಸೊಗಸು
ಮತ್ತೆ ಬಾರದ ಜೀವನದ ಸೊಗಸಿನೀ ಕ್ಷಣಗಳನು
ಮೆಲುಕು ಹಾಕುತ ಬದುಕುವ ಸಂಭ್ರಮದ ಸೊಗಸು
ಡಾ.ಸತ್ಯವತಿ ಮೂರ್ತಿ
****
ನನ್ನ ಸ್ವಾಮಿ
ಈ ಕಥೆಯನ್ನು ನಾನು ಮ್ಯಾಂಚೆಸ್ಟರ ಹತ್ತಿರ ಕೆಲಸ ಮಾಡುವಾಗ ಭೆಟ್ಟಿಯಾದ ಕನ್ನಡಿಗ ಗೆಳೆಯರು ಹೇಳಿದರು.
ಒಂದು ಸಮ್ಮೇಳನದಲ್ಲಿ ಇಬ್ಬರು ಭಾರತೀಯ ಮೂಲದ ಮಹಿಳಾ ತಜ್ಞ ವೈದ್ಯೆಯರು ಭೆಟ್ಟಿಯಾದರು. ಮಧ್ಯಾಹ್ನ ಊಟದ ವೇಳೆ ಮಾತನಾಡುವಾಗ ಪರಸ್ಪರ ಇಬ್ಬರೂ ಕನ್ನಡಿಗರೆಂದು ಗೊತ್ತಾಗಿ ಸಂತೋಷವಾಗಿ ಮುಂದಿನ ಸಂಭಾಷಣೆ ಕನ್ನಡದಲ್ಲೇ ಮುಂದುವರೆಯಿತು. ಸಂಜೆ ಊಟಕ್ಕೆ ಕುಳಿತಾಗ ಒಬ್ಬ ಕನ್ನಡತಿ “ನನ್ನ ಸ್ವಾಮಿಗೆ ಈ ಪಲ್ಯ ಬಹಳ ಇಷ್ಟ, ನನ್ನ ಸ್ವಾಮಿ ಇವತ್ತು ಮಕ್ಕಳನ್ನು ಶಾಲೆಗೆ ಬಿಡಲು ಸ್ವಲ್ಪ ತಡವಾಯಿತು“ಎಂದೆಲ್ಲ ಹೇಳತೊಡಗಿದಳು.
ಆ ತಾಯಿ ಪ್ರತಿ ಸಲ ತನ್ನ ಗಂಡನಿಗೆ “ಸ್ವಾಮಿ“ಎಂದೇ ಸಂಭೋಧಿಸುತ್ತಿದ್ದಳು. ಇಬ್ಬರೂ ಒಂದೇ ಹೋಟೆಲಿನಲ್ಲಿ ಉಳಿದುಕೊಂಡಿದ್ದರಿಂದ ಇಬ್ಬರೂ ಒಂದೇ ಟ್ಯಾಕ್ಸಿಯಲ್ಲಿ ಹೊರಟರು. ಮಾರ್ಗದ ಮಧ್ಯೆಆ ತಾಯಿ ಗಂಡನಿಗೆ ಫೋನ್ ಮಾಡಿ “ಸ್ವಾಮಿ ಊಟ ಮಾಡಿದಿರಾ? “ಎಂದೆಲ್ಲಾ ವಿಚಾರಿಸಿದಳು. ಇನ್ನೊಬ್ಬ ಮಹಿಳೆ ಇದನ್ನೆಲ್ಲಾ ಗಮನಿಸುತ್ತಾ ಮನದಲ್ಲೇ “ಏನಪ್ಪಾ ಇವಳು ಬಹುಶಃ ಪಕ್ಕಾ ಪತಿ ಭಕ್ತೆ ಇದ್ದಾಳೆ, ಇಂಗ್ಲೆಂಡಿಗೆ ಬಂದರೂ ಏನೂ ಬದಲಾಗಿಲ್ಲ“ಎಂದುಕೊಂಡು ಸುಮ್ಮನಿದ್ದಳು .
ಇಬ್ಬರು ಮತ್ತೆ ಸುಮಾರು ಆರು ತಿಂಗಳ ನಂತರ ಇನ್ನೊಂದು ಸಮ್ಮೇಳನದಲ್ಲಿ ಭೆಟ್ಟಿಯಾದರು .
ಆಗ ಮತ್ತೆ ಆ ತಾಯಿ “ನನ್ನ ಸ್ವಾಮಿಗೆ ಪ್ರಮೋಷನ್(ಬಡ್ತಿ )ಆಯಿತು, ನನ್ನ ಸ್ವಾಮಿ ಹೊಸ ಟೆಸ್ಲಾ ಕಾರು ತೆಗೆದುಕೊಂಡ “ಎಂದೆಲ್ಲಾ ಹೇಳಿದಳು. ಈಗ ಈ ಮಹಿಳೆಗೆ ತಡೆಯಲಾಗಲಿಲ್ಲ. ಅವಳು ಕೇಳಿಯೇ ಬಿಟ್ಟಳು “ಅಲ್ಲಾ, ಇಂದಿನ ದಿನಗಳಲ್ಲಿ ಭಾರತದಲ್ಲಿಯೇ ಪತಿ ಭಕ್ತೆ ಸಿಗೋದಿಲ್ಲ, ಅಂತದರಲ್ಲಿ ಇಷ್ಟೊಂದು ಕಲಿತ ವೈದ್ಯೆಯಾದ ನೀವು ಇಂಗ್ಲೆಂಡಿನಲ್ಲಿ ಇದ್ದುಕೊಂಡು ಗಂಡನಿಗೆ ಎಷ್ಟೊಂದು ಮಾನ ಮರ್ಯಾದೆ ಕೊಡುತ್ತೀರಲ್ಲಾ”.
ಅದನ್ನು ಕೇಳಿ ಆ ತಾಯಿ ಬಿದ್ದು ಬಿದ್ದು ನಗುತ್ತ “ಅಯ್ಯೋ ನನ್ನ ಗಂಡನಿಗೇನೂ ನಾನು ಸ್ಪೇಶಿಯಲ್ ಮರ್ಯಾದೆ ಕೊಡ್ತಾ ಇಲ್ಲ, ಅವನ ಹೆಸರೇ ಸ್ವಾಮಿ!” ಎಂದಳು .
ಇದನ್ನು ಕೇಳಿದ ಇನ್ನೊಬ್ಬ ಕನ್ನಡತಿಗೆ ತಲೆ ಜಜ್ಜಿಕೊಳ್ಳುವುದೊಂದು ಬಾಕಿ ಇತ್ತು. 😀😀
ಡಾ. ಉಮೇಶ್ ನಾಗಲೋತಿಮಠ್
ನಲ್ಮೆಯ ಓದುಗರೇ ನಮಸ್ಕಾರ.
‘ಕೌಸಲ್ಯಾ ಸುಪ್ರಜಾ ರಾಮಾ’ ಎಂದು ಜಗದೊಡೆಯನನ್ನೂ ಕೌಸಲ್ಯೆಯ ಮಗನನ್ನಾಗಿ ಕಾಣುವ ಸಂಸ್ಕೃತಿಯಿಂದಲೇ ಅರ್ಥವಾಗುತ್ತದೆ ತಾಯ್ತನದ ಎತ್ತರ. ಜಗದೆಲ್ಲ ಬಂಧಗಳಿಂದ ಮುಕ್ತನಾದ ಸನ್ಯಾಸಿಯೂ ಮಾತೃಪಾದಗಳಿಗೆರಗುತ್ತಾನೆ. ಅದಕ್ಕೆಂದೇ ದೇವಕಿನಂದನ, ಯಶೋದಾಕಂದ, ಗೌರೀತನಯ, ಗಾಂಗೇಯ, ಕೌಂತೇಯ, ರಾಧೇಯ..ಇತ್ಯಾದಿ ಪುರಾಣೇತಿಹಾಸ ಪುರುಷರಿಂದ ಹಿಡಿದು ನಮ್ಮ ವರಕವಿ ಬೇಂದ್ರೆ ಸಹಿತ ತಮ್ಮನ್ನು ಗುರುತಿಸಿಕೊಂಡಿದ್ದು ‘ಅಂಬಿಕಾತನಯ'ರಾಗಿಯೇ.
‘ಪಾತಾಳ ಕಂಡರೇನು? ಆ ತಾಯಿ ಬಿಡುವಳೇನು? ಕಾಯವನು ಹೆತ್ತ ಕರುಳು, ಕಾಯುವಳು ಹಗಲು ಇರುಳು’ ಎಂದು ನಮ್ಮನ್ನು ಪೊರೆವ ಮಾತೃವಾತ್ಸಲ್ಯದ ಬಗ್ಗೆ ಭಾವುಕರಾಗಿ ಬರೆಯುತ್ತಾರೆ ಅಂಬಿಕಾತನಯದತ್ತರು.
‘ಹಸಿರು ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ..ಮರೆಯುವುದುಂಟೇ ಮರೆಯಲಿ ನಿಂತೇ ಕಾಯುವ ಕರುಣಾಮಯಿಯ’ ಎನ್ನುತ್ತಾರೆ ಎಚ್ಚೆಸ್ವಿ
‘ನನ್ನವ್ವ ಫಲವತ್ತಾದ ಕಪ್ಪು ನೆಲ.
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು,ನೊಂದಷ್ಟೂ ಹೂ ಹಣ್ಣು –
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ’..ಎಂಥ ಹೃದಯಸ್ಪರ್ಶಿ ಸಾಲುಗಳು ಲಂಕೇಶರ ‘ಅವ್ವ’ನದು!
‘ಮೋಡದಲ್ಲಿ ಬಿಸಿಲಿನಲಿ ನೋಯದಂತಡಗಿ,
ಮಾಯದಂತೆ ಕಾದು ಸ್ವಂತತನವ, ಕತ್ತಲಲ್ಲಿ ಹೊಳೆವ ಜೀವ.
‘ಅಮ್ಮ’ ಎನ್ನುವ ಸುಖದ ನಿಟ್ಟುಸಿರ ಕರೆದು
ಸವೆದೂ ಸವೆಯದ ಆ ಪದವ ನೆನೆದು ಆ ಪದವ ನೆನೆದು ..ಎಂದು ಹಲಬುತ್ತ ಅಮ್ಮನಿಗಾಗಿ ಹಂಬಲಿಸುತ್ತಾರೆ ವೈದೇಹಿಯವರು ‘ನನ್ನ ಅಮ್ಮನ ಸೀರೆ’ಯಲ್ಲಿ.
ಒಟ್ಟಿನಲ್ಲಿ ತನ್ನ ಗರ್ಭದಲ್ಲಿ ಹೊಸ ಚೈತನ್ಯವೊಂದಕ್ಕೆ ಜೀವ ನೀಡಿ ಪೊರೆವ ಶಕ್ತಿ ಬ್ರಹ್ಮನ ನಂತರ ಇರುವುದೆಂದಾದರೆ ಅದು ತಾಯಿಗಷ್ಟೇ.
ಜಗದೆಲ್ಲ ಅಮ್ಮಂದಿರಿಗೆ ಅಂತೆಯೇ ತಾಯ್ಮನದ,ಅಂತ:ಕರಣದ ಎಲ್ಲ ಜೀವಗಳಿಗೆ ಬರಲಿರುವ ‘ಮದರ್ಸ್ ಡೇ’ಯ ಹಾರ್ದಿಕ ಶುಭಾಶಯಗಳು.
‘ಕಲ್ಲಾಗು, ಗುಂಡಾಗು, ಕರಕೀ ಬೇರಾಗು, ಅಗಸೀ ಮುಂದಿನ ಬೋರ್ಗಲ್ಲಾಗು’ಎಂದು ಹಗಲಿರುಳೂ ಶ್ರೀರಕ್ಷೆಯನ್ನೀಯುತ್ತ ಮಕ್ಕಳ ಕನಸು-ಆಸೆಗಳ ರೆಕ್ಕೆಗಳಿಗೆ ವೈನತೇಯ ಬಲ ತುಂಬುವ ಅಮ್ಮನನ್ನು ತಮ್ಮ ಕವನದ ಮೂಲಕ ಭಾವದುಂಬಿ ನೆನೆದಿದ್ದಾರೆ ರಮ್ಯಾ ಭಾದ್ರಿಯವರು. ಅದರೊಡನಿರುವ ಅವರೇ ಚಿತ್ರಿಸಿರುವ ಸುಂದರ ಸ್ಕೆಚ್ ಆ ಕವನಕ್ಕೆ ಕಳಸವಿಟ್ಟಂತಿದೆ.
ದುರದೃಷ್ಟಕರವಾಗಿ ತಮ್ಮ ನೆಲ-ಮನೆಗಳನ್ನು ಕಳೆದುಕೊಂಡು, ಮಗನಿಂದಲೂ ಬೇರ್ಪಟ್ಟ ನೈಜೀರಿಯನ್ ರೆಫ್ಯೂಜಿ ಅಮ್ಮನ ಮನಮಿಡಿಯುವ ಸತ್ಯ ಘಟನೆಯೊಂದನ್ನು ಕಥೆಯಾಗಿ ನೇಯ್ದು ತಂದಿದ್ದಾರೆ ವತ್ಸಲಾ ರಾಮಮೂರ್ತಿಯವರು ತಮ್ಮ ‘ಕರುಳಿನ ಕರೆ’ಯಲ್ಲಿ. ಓದಿ ನೋಡಿ ಕಣ್ಣಂಚು ತೇವವಾಗುತ್ತದೆ. ಯಾವ ಕಂದನೂ ಅಮ್ಮನಿಂದ ಅಗಲದಿರಲಿ ಎಂಬ ಹಾರೈಕೆ ಮೂಡುತ್ತದೆ.
‘ಅಮ್ಮ’ ಎನ್ನುವ ಭಾವ ಎಷ್ಟು ಸಾರ್ವತ್ರಿಕವೋ ಅಷ್ಟೇ ವೈಯಕ್ತಿಕವೂ ಕೂಡ. ಎಲ್ಲರ ಅನುಭೂತಿ,ಭಾವ ಬಂಧಗಳು ತೀರ ಭಿನ್ನ ಹಾಗೂ ಸ್ವಂತ. ತಮ್ಮ ಅಮ್ಮನ ಕುರಿತು ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ ಪ್ರಸನ್ನ ಅವರು. ಬನ್ನಿ..ಓದಿ..ಅಮ್ಮನಂತ:ಕರಣದಲ್ಲಿ ಮಿಂದೇಳಿ.
~ ಸಂಪಾದಕಿ
ಅಮ್ಮ
ಸುಂದರ ಘಳಿಗೆಯಲ್ಲಿ ಬೆಸೆದ ಕರುಳ ಬಂಧ
ಸಕಲ ಸಂಬಂಧಗಳಿಗೂ ಶ್ರೇಷ್ಠ ಈ ಅನುಬಂಧ
ಹಂಚಿದಷ್ಟು ಹೆಮ್ಮರವಾಗುವ ಪ್ರೀತಿಯ ಬಂಧ
ಅನಂತ, ಅಪೂರ್ವ ಈ ಋಣಾನುಬಂಧ
ಅಮ್ಮ, ನಿನಗೆ ನಾ ಚಿರಋಣಿಯಮ್ಮ
ಹೊತ್ತು, ಹೆತ್ತು ಜೊತೆಜೊತೆಗೆ ಹೆಜ್ಜೆ ಹಾಕಿದೆ
ಎಡವಿದಾಗ ಮೈದಡವಿ ಕೈ ಹಿಡಿದು ಬೆಳೆಸಿದೆ
ಮಮತೆಯ ಮಳೆಗರೆದು ಮಡಿಲಲ್ಲಿ ಆಡಿಸಿದೆ
ಹೊತ್ತು ಗೊತ್ತೆನ್ನದೆ ಅತ್ತಾಗ ಮುತ್ತಿಟ್ಟು ತುತ್ತುಣಿಸಿದೆ
ಅಮ್ಮ , ನೀನೊಂದು ಅನರ್ಘ್ಯ ಮುತ್ತಮ್ಮ
ಅಕ್ಕರೆಯ ಅಪ್ಪುಗೆಯಲಿ ಆಸರೆಯ ಶ್ರೀರಕ್ಷೆಯನ್ನಿತ್ತೆ
ಮಾತನ್ನು ಕಲಿಸಿದೆ , ಕನಸುಗಳನ್ನು ಬಿತ್ತೆ
ಹಾಲುಣಿಸಿ ಆಸೆಯ ರೆಕ್ಕೆಗಳಿಗೆ ಬಲವನ್ನೂ ಇತ್ತೆ
ಗುರುವಾಗಿ ಗುರುತರ ಮಾರ್ಗದ ಬೆಳಕಾಗಿ ನಿಂತೆ
ಅಮ್ಮ, ನಿನ್ನಿಂದಲೇ ಇಂದು ನಾನಮ್ಮ
ಅಪೇಕ್ಷಗಳನ್ನರಿಯದ ನಿನ್ನ ನಿಸ್ವಾರ್ಥದೊಲುಮೆ
ಕಂದನ ಆನಂದಕ್ಕಾಗಿಯೇ ನಿನ್ನೆಲ್ಲಾ ದುಡಿಮೆ
ನೊಂದ ಮನಕೆ ಮದ್ದಾಗುವ ವಾತ್ಸಲ್ಯದ ಮಹಿಮೆ
ಅಮ್ಮಾ .. ಎನ್ನಲು ಮನವರಳಿಸುವ ಉತ್ಸಾಹದ ಚಿಲುಮೆ
ಅಮ್ಮ, ನನಗೆ ನೀನೆ ದೈವವಮ್ಮ
ಹೇಳದೆಯೇ ಮನದಾಳದ ಭಾವವ ನೀ ಬಲ್ಲೆ
ಕಾಣದಿದ್ದರೂ ಕಣ್ಮುಚ್ಚಲು ಕಂಡೆ ಎನ್ನ ಮನದಲ್ಲೇ
ಕರೆದೊಡನೆ ಕರುಳರಿವ ನಿನ್ನ ಕಾರುಣ್ಯಕ್ಕಿಲ್ಲ ಎಲ್ಲೆ
ಸಕಲವೂ ನಿನ್ನ ಮಡಿಲಲ್ಲೇ ,ಸ್ವರ್ಗವೂ ನಿನ್ನ ಪಾದದಲ್ಲೇ
ಅಮ್ಮ, ನೀನೇ ಸೌಭಾಗ್ಯವಮ್ಮ
~ ರಮ್ಯ ಭಾದ್ರಿ
ಕರುಳಿನ ಕರೆ
ನಾನು ಪಿಂಚಿನಿಯಾದ ಮೇಲೆ RedCross Volunteer ಕೆಲಸ ಶುರುಮಾಡಿದೆ. ಏನಾದರು ಮಾಡಬೇಕಲ್ಲ ಇನ್ನು ಆರೋಗ್ಯ ಇದೆ ಮತ್ತು ತಲೆ ಓಡುತ್ತಿದೆ. ನನ್ನ ಮಗ “ಅಮ್ಮ ಏನಾದರೂ ವಾಲಿಂಟಿಯರ್ ಕೆಲಸ ಮಾಡು ಸುಮ್ಮನೆ ಟಿ.ವಿ. ನೋಡುತ್ತಾ ಕುಳಿತು ಕೊಳ್ಳಬೇಡ ಅಂತ ವರಾತ ಹಚ್ಚಿದ. ನಾನು “ಹೋಗೋ ವರ್ಷಗಟ್ಟಲೆ ಕೆಲಸ ಮಾಡಲಿಲ್ಲವೇ? ಈಗ ಖುಷಿಯಾಗಿ Story books ಓದಿಕೊಂಡು, ಮಸಾಲೆದೋಸೆ, ಜಾಮೂನು,ನಿಪ್ಪಟ್ಟು ತಿಂದುಕೊಂಡು ಮಜಮಾಡುತ್ತೇನೆ” ಎಂದೆ. ಅವನು ಅದುಮಾಡು ಮತ್ತು ಇದುಮಾಡೆಂದ. ನಿಜ ಹೇಳಬೇಕೆಂದರೆ ಮಸಾಲೆದೋಸೆ, ಜಾಮೂನು ಕನಸಿನಲ್ಲಿ ತಿನ್ನಬೇಕು ! ನಾನಿರುವ ಯು.ಕೆ.ಯ ಮೂಲೆಯಲ್ಲಿ ನಮ್ಮಊರಿನ ತಿಂಡಿ ಬೇಕಾದರೆ ರೈಲು ಹತ್ತಿ ಲಂಡನ್‌ಗೆ ಹೋಗಬೇಕು. ಅಲ್ಲಿಗೆ ಮಗಿಯಿತು ಆ ಕನಸು. RedCross ನಲ್ಲಿ ತಪಾಸಣೆಗಳಲ್ಲಾ ಮುಗಿದಮೇಲೆ Volunteer ಯಾಗಿ ನೋಂದಾಯಿಸಿದರು. ನನ್ನ ಕೆಲಸ Day centre ನಲ್ಲಿ. Refugeeಗಳಿಗೆ ಊಟ,ತಿಂಡಿ ಮನೆಸಾಮನುಗಳು ಮತ್ತು ಪ್ರಯಾಣದ ಖರ್ಚಿಗೆದುಡ್ಡು, GP Registrationಗೆ , ಒಟ್ಟಿನಲ್ಲಿ ಆರ್ಥಿಕ, ಮಾನಸಿಕ, ಸಾಮಾಜಿಕವಾಗಿ ಬೆಂಬಲ ನೀಡುವುದು.
RedCrossಗೆ ಸೇರಿದಮೇಲೆ ನನ್ನ ಜೀವನದ ದೃಷ್ಷಿಕೋನವೇ ಬದಲಾಯಿತು. Refugeeಗಳು ಅನುಭವಿಸಿದ ದಾರುಣ ಕತೆಗಳು, ದೈಹಿಕ, ಮಾನಸಿಕ, ಹಿಂಸೆಗಳನ್ನು ಬರೆಯಲು ಈ ಲೇಖನಿಗೆ ಶಕ್ಯವಿಲ್ಲ. ಕೆಲವರ ಬೆನ್ನಮೇಲೆ ಲಾಟಿಚಾರ್ಜ್ ಬೊಬ್ಬೆಗಳು ಇನ್ನೂ ಇವೆ.
ಒಂದು ದಿನ ಒಬ್ಬ Nigerian ಮಹಿಳೆ ಹೊಸದಾಗಿ ನಮ್ಮ Day Centerಗೆ ಬಂದಳು. ಅವಳನ್ನು ನೋಡಿದರೆ ಸಂಬಾವಿತಳು, ವಿದ್ಯಾವಂತಳ ಹಾಗೆ ಕಾಣುತ್ತಿದ್ದಳು. ನಾವು ಕೊಡುವ ತಿಂಡಿ, ಸಾಮಾನುಗಳನ್ನು ತೆಗೆದುಕೊಳ್ಳಲು ಕುಗ್ಗಿಹೋಗುತ್ತಿದ್ದಳು. ಮುಖ ದುಗಡದಿಂದ ಮಂಕಾಗಿತ್ತು. ನಾನು ಆಕೆಯ ಪರಿಚಯ ಬೆಳೆಸಿ ಅವಳ ದಾರುಣ ಕತೆ ಕೇಳಿದೆ. ಎಲ್ಲ ವಿವರಣೆಗಳನ್ನು ಇಲ್ಲಿ ಬರಿಯಲು ಸಾದ್ಯವಿಲ್ಲ. ಮುಖ್ಯವಾಗಿ ಅವಳ ೧೫ ವರುಷದ ಮಗ ಕಾಣೆಯಾಗಿದ್ದಾನೆ. ಅವಳ ಮಗನ ಸಮಚಾರ ತಿಳಿಯದೆ ಒದ್ದಾಡುತ್ತಿದ್ದಾಳೆ.ಅವಳು ಲಾಯರ್ ಆಗಿ ಕೆಲಸ ಮಾಡುತ್ತಿದ್ದಳಂತೆ. ದುರಾದೃಷ್ಷದಿಂದ U.K.ಗೆ Refugee ಯಾಗಿ ಬರಬೇಕಾಯಿತು. ಮಗ Londonನಲ್ಲಿ ಕಾಣೆಯಾದ. ನಾವು RedCrossನಿಂದ ಕಾಣೆಯಾಗಿರುವರನ್ನು (missing person )ಹುಡುಕಿ ಅವರ ಸಂಸಾರದ ಜತೆ ಕೂಡಿಸುತ್ತೇವೆ. ಅವಳ ಮಗನ ಗುರುತಿನ ವಿವರಗಳನ್ನು ತಿಳಿದುಕೊಂಡೆವು. ಅವನ ಹಣೆಯಮೇಲೆ ಹುಲಿ ಮಚ್ಚೆಯಿದೆ ಮತ್ತು English ಮಾತಾನಾಡಲು ಬರುತ್ತದೆಯೆಂದು ತಿಳಿಯಿತು.
ಒಂದು ದಿನ ವಿರಾಮ ಸಮಯದಲ್ಲಿ ಮತಾನಾಡುತ್ತಾ ಕುಳಿತಿದ್ದೆವು.ಆಗ ನಮ್ಮSocialWorker ಒಬ್ಬ ಯುವಕನ ಜತೆಬಂದಳು. ೬ ಅಡಿಉದ್ದವಿದ್ದ ಆ ಯುವಕನ ನಡಿಗೆ ಮಾತುಕತೆ,ಅಗಾಧ ದುಃಖದ ಮುಖವಾಡ, ಸುಖವಾಗಿ ಬೆಳದ ಹುಡುಗ ಪಡಬಾರದ ಕಷ್ಷಕ್ಕೆ ಸಿಕ್ಕಿದ್ದಾನೆ ಅಂತ ನಾವೆಲ್ಲಾ ಮಾತನಾಡಿಕೊಂಡೆವು. ನಂಗೆ ಮಾತ್ರ ಯುವಕನ ಮುಖ, ನಡುವಳಿಕೆ ತುಂಬಾ ಪರಿಚಯೆನ್ನುವ ಬಾವನೆ. ನೆನಪು ಬರವಲ್ಲದು. ರಾತ್ರಿಯಿಲ್ಲಾ ನಿದ್ರೆಯಿಲ್ಲ. ಕಳವಳಿಸಿದೆ. ಒಂದು ವಾರದ ಮೇಲೆ ನೆನಪಿನ ಸುಳಿಬಿಚ್ಚಿತು. ಆ ಯವಕನಿಗೆ ಆ ಲಾಯರಿನ ಹೋಲಿಕೆಯಿದೆಂದು.ಅವಳ ಸಂಬಂಧಿ ಇರಬಹುದೆ? ಇತ್ತೀಚೆಗೆ ಆ ಹೆಂಗಸಿನ ಪತ್ತೆಯಿಲ್ಲ.ಸುಮಾರು ೩ ತಿಂಗಳಹಿಂದೆ localAuthourity ಅವಳನ್ನು ಬೇರೆ ಜಾಗಕ್ಕೆ ಕಳಿಸಿದ್ದಾರೆಯೆಂದು ತಿಳಿಯಿತು. ಅವಳ ನೆನಪು ಅಳಿಸಿ ಹೋಗಿದೆ. ನನ್ನ ಕಳವಳ ತಡಿಯಲಾರದೆ SocialWorkerನ ಮೂಲಕ ಮಾಹಿತಿ ದೊರೆಕಿಸಿಕೊಂಡೆ.ಆ ಯುವಕ ಸಹ ತಾಯಿಗಾಗಿ ಹಂಬಲಿಸಿ ಸೊರಗಿದ್ದಾನೆಂತ. ನಾನು SocialWorkerಗೆ ನನ್ನ ಅನಸಿಕೆ ವಿವರಿಸಿ ಹೇಳಿದೆ. ಆದರೆ ಆಕೆಗೆ ನನ್ನ ಮಾತಿನಲ್ಲಿ ನಂಬಿಕೆ ಬರಲಿಲ್ಲ. ಆ ವಿಷಯ ಮರೆತು ಹೋಯಿತು. ಸುಮಾರು 6 ತಿಂಗಳನಂತರ RedCrossಗೆ ಒಬ್ಬ ತಾಯಿಮಗ ಕೈ ಹಿಡಿದುಕೊಂಡು ಸಂತೋಷದಿಂದ ಬಂದರು. ನನಗೆ ನಂಬಲಾಗಲಿಲ್ಲ. ನಾನು ಕೊಟ್ಟ ಮಾಹಿತಿಯಿಂದ SocialWorker (Reluctantly looked for his mother ) .ಅಂತೂ ಪತ್ತೆಮಾಡಿ ಒಂದುಗೂಡಿಸಿದಳು. ಇವತ್ತು ತಾಯಿಗೆ Asylum status ದೊರಕಿದೆ. ಮಗ ಕಾಲೇಜ್ ಸೇರಿದ್ದಾನೆ. ಇದಲ್ಲವೇ ಕರುಳಿನ ಕರೆ!
~ ವತ್ಸಲಾ ರಾಮಮೂರ್ತಿ
ನಮ್ಮಮ್ಮ
ಸೂರ್ಯ , ಚಂದ್ರ, ಮುಂಜಾವು, ಮುಸ್ಸಂಜೆ , ಜಗಕೆಲ್ಲಾ ಒಂದೇ ಆದರೂ, ಅವುಗಳ ಬಗೆಗಿನ ನಮ್ಮ ನಮ್ಮ ಅನುಭವ ತೀರ ನಮ್ಮದೇ. ಹಾಗೆಯೇ ಅಮ್ಮ. ಅಮ್ಮ ದಿನ ನಿತ್ಯದ ಸಂಬಂಧ ಆಗಬಹುದು, ಮಧುರ ಭಾವನೆ ಆಗಬಹುದು, ಪ್ರೇರಣೆ ಆಗಬಹುದು , ಜಾಗತಿಕವೂ ಆಗಬಹುದು Mother Teresa ರಂತೆ.
ನನ್ನ ಅಮ್ಮ ಕೂಡ , ಜಗದೆಲ್ಲಾ ಅಮ್ಮಂದಿರಂತೆ Best mother in the world. ನನ್ನ ಮೊಟ್ಟ ಮೊದಲ ಅಚ್ಚರಿ ಅವಳನ್ನು ಕುರಿತಾಗಿದ್ದು , ಅವಳ ಹಣಕಾಸಿನ management skills. ಅಪ್ಪನ ೨೦೦ ತಿಂಗಳ ಸಂಬಳದಲ್ಲೂ, ೨೦೦೦೦ ದಲ್ಲೂ, ಅಂದೂ, ಇಂದೂ, ಮನೆ ಸಂತೃಪ್ತ , ಸಂತಸ , ನಗುವದು ಅವಳಿಂದಲೇ. ಹತ್ತನೇ ತರಗತಿ ಮುಗಿಸದ ಅಮ್ಮ, ನಮಗೆ ಯಾವ ಅಮರ್ತ್ಯ ಸೇನ, ಮನಮೋಹನರಿಗಿಂತ ಎಂದೂ ಕಡಿಮೆ ಅನ್ನಿಸಲಿಲ್ಲ.
ನನ್ನ ಒಂದು ಪ್ರಾಥಮಿಕ ಶಾಲಾ ವರ್ಷದ ನೆನಪು. ಅಂತಿಮ ಪರೀಕ್ಷಾ ಸಮಯ. ಅಮ್ಮ ನನ್ನನ್ನು ಕರೆದು ಹೇಳಿದಳು -ಈ ಬಾರಿ ಚನ್ನಾಗಿ ಓದಿಕೊಂಡು , ಪರೀಕ್ಷೆ ಬರೆದರೆ , ನನಗೆ ಏನೊ ಒಂದು ಬಹುಮಾನ ಕಾಯ್ದಿದೆ ಎಂದು. ಅಲ್ಲಿಯ ತನಕ ನನಗೆ ಎಂದೂ ಈ ರೀತಿಯ ಪ್ರಲೋಭನೆಯ ಪರಿಚಯವೇ ಇರಲಿಲ್ಲ. ನನಗೋ ಕಾತರ, ಸಂಭ್ರಮ, ಕೂತೂಹಲ. ಪರೀಕ್ಷೆಯ ನಂತರ ಸಿಕ್ಕ ಅಮರ ಚಿತ್ರ ಕಥಾ ಅವರ ದಶಾವತರ bumper comic book ಇಂದಿಗೂ ನನ್ನ ನೆನಪಿನಂಗಳದಲ್ಲಿ ನೆನ್ನೆಯೆ ನಡೆದಂತಿದೆ. ನನ್ನ ಅಮ್ಮ ನನಗೆ ಯಾವುದೇ motivational guru’s ಗಳಿಗಿಂತ ಕಡಿಮೆ ಏನಿಲ್ಲ.
ಅಮ್ಮನ ಬದುಕು ಅವಳ ಹುಮ್ಮಸ್ಸು , ಹೊಸತನ್ನು ಕಲಿಯುವ ಹುರುಪು ನನಗೆ ಸೋಜುಗ. ಇಂದಿಗೂ ಏನೋ ಒಂದು ಕಲಿಯುತ್ತಿರುತ್ತಾಳೆ ಅವಳು. Alternative healing Reiki ಆಗಲಿ, ವಿಪಶ್ಯನ ಧ್ಯಾನ ಪದ್ಧತಿಯಾಗಲಿ , ಇಂದಿನ social media aap ಆಗಲಿ, ತಾನೂ ಕಲಿತು , ಅಪ್ಪನಿಗೂ ಕಲಿಸಿ, ನಮಗೂ ತನ್ನ ಕಲಿಕೆಯ ಪ್ರಯೋಗಗಳನ್ನು ಕಲಿಸುವ ಹುಮ್ಮಸ್ಸು ಆಕೆಯದು. ನನಗೆ ಯಾವ Abdul Kalam, ಶಾರದಾ ಮಾತೆಗೂ ಕಡಿಮೆಯಲ್ಲ ಆಕೆ..
ನನ್ನ ಅಮ್ಮ ನನ್ನ ಜಗತ್ತು. ಆಕೆಯ ಪ್ರತಿಬಿಂಬ ನಾನು. ಮನುಷ್ಯನನ್ನು ರೂಪಿಸಿದ ಮಾತೃಶಕ್ತಿಗೆ ನಿತ್ಯ ನಮನ.
~ ಪ್ರಸನ್ನ