ಪ್ರಿಯ ಓದುಗರಿಗೆ,
ಈ ವಾರದ ಸಂಚಿಕೆಯಲ್ಲಿ, ತಾಯ್ನಾಡಿನ ಧೂಳನ್ನು ತಟ್ಟಿ, ಮರಳಿ ಬಂದು, ಭಾವುಕರಾಗಿ ಬರೆದಿರುವ ದೀಪಾ ಸಣ್ಣಕ್ಕಿಯವರ ಆತ್ಮೀಯ ಬರಹವಿದೆ ಹಾಗೆಯೇ ನನ್ನದೊಂದು ಸಣ್ಣ ಕವಿತೆಯಿದೆ. ಸಮಯ ಸಿಕ್ಕಾಗ ದಯವಿಟ್ಟು ಓದಿ. ಹಾಗೆಯೇ ತಮ್ಮ ಪ್ರತಿಕ್ರಿಯೆಯನ್ನು ಬರೆಯಲು ಮರೆಯದಿರಿ
– ಇಂತಿ ಸಂಪಾದಕ
——————————————————————————————————————————————————–
ಕನಸಾದ ಮೊಗ್ಗಿನ ಜಡೆ
ಹುಟ್ಟೂರನ್ನು ತೊರೆದು ಎರಡು ದಶಕಗಳೇ ಕಳೆದುಹೋಗಿವೆ. ಬದುಕಿನ sat-nav, ಪ್ರಯಾಣದ ಆರಂಭದಲ್ಲಿ ಆಯ್ದುಕೊಂಡ destination ನನ್ನು ಸಂಪೂರ್ಣವಾಗಿ ಅಲಕ್ಷಿಸಿ, ತನ್ನಿಚ್ಛೆಯಂತೆ ಎತ್ತೆತ್ತಲೋ reroute ಮಾಡಿ ಅನಿರ್ದಿಷ್ಟಸ್ತರದಲ್ಲಿ ಇಂದಿನವರೆಗೂ ಏಳೆದೊಯ್ಯುತ್ತಿದೆ. ಮೂವತ್ತರ ಮಿಂಚು ಕರಗಿ ನಲವತ್ತಕ್ಕೆ ಬಲಿಯುತ್ತಿರುವ ನಾನು, ಒಬ್ಬ ವಿಧೇಯಕ ಪಯಣಿಯಳಾಗಿ ತಿರುವುಗಳನ್ನು ತಿರುಗಿ ಏರಿಳಿವುಗಳನ್ನು ಏರಿ ಇಳಿಯುತ್ತಿದ್ದೇನೆ. ETA ಸಮಯದ ಅನಿಶ್ಚಿತತೆ ಮತ್ತು ಅನಿಯಂತ್ರಣದ ಕಾರಣದಿಂದ, ಆಸಕ್ತಿ ಅಭಿರುಚಿಗಳನ್ನೂ, ಸಮಯವನ್ನೂ, ಗಮನವನ್ನೂ ಸಾಧ್ಯವಾದಷ್ಟು ಹೆಚ್ಚುಹೆಚ್ಚಾಗಿ ಸಹಪ್ರಯಾಣಿಕರೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ಇಂದಿನ ಈ ಬರಹ, ಅತೀಸಾಮಾನ್ಯ ಜೀವನದ ಹತ್ತುಹಲವು ಮುಖಗಳನ್ನು ತೋರಿಸಿದ ಸಹಪ್ರಯಾಣಿಕರಿಗೆ ಮುಡಿಪು. ಹದಿಮೂರು ವರ್ಷಗಳ ಹಿಂದೆ ಮುಂಬೈ ಮರೀನ್ ಡ್ರೈವ್ ನಲ್ಲಿ ಜೂನ್ ತಿಂಗಳ ಮಳೆಯಲ್ಲಿ, ಆರು ದಿನ ಸತತವಾಗಿ ನೆನೆದು ಮಾಡಿದ ನಿರ್ಧಾರವೊಂದು ನನ್ನನ್ನು, ಉತ್ತರಭಾರತದ ಎಂದೂ ಕಂಡು ಕೇಳರಿಯದ ಊರಿಗೆ “ಬಹುರಾಣಿ” ಯಾಗಿ ತಂದೆಸೆದಿತ್ತು. ಸೌಮ್ಯ ಸ್ವಭಾವದ ನನ್ನ ಹೆತ್ತವರು, ನನ್ನ ಭಂಡತನಕ್ಕೆ ಬೆದರಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು “ಹಠಾತ್ಕ ನ್ಯಾದಾನ” ಮಾಡಿ ತತ್ತರಿಸಿದ್ದರು. ಉತ್ತರಭಾರತದ ಆ ಹವಾಮಾನದ ವೈಪರೀತ್ಯ,ಆಗಾಗ ದಿನಪತ್ರಿಕೆಗಳಲ್ಲಿ ವರದಿಗೊಳ್ಳುವ honour killings, ಅಪರಿಚಿತ ಸಮುದಾಯದ ಸಂಸ್ಕೃತಿ, ಸದಾ ದಟ್ಟವಾಗಿ ಕವಿದಿರುವ ಆ ಅಸುರಕ್ಷತೆ, ಇಂದಿನ ಮದುವೆಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣುವ ಅಪನಂಬಿಕೆ ಅಪಕೀರ್ತಿಗಳು, ಈ ಎಲ್ಲವೂ ನನ್ನ ತಾಯ್ತಂದೆಯರನ್ನು ಆತಂಕಕ್ಕೀಡು ಮಾಡಿದ್ದವು. “ಹೇಗೆ ಸಂಸಾರ ಮಾಡುವೆ ಮಗಳೇ” ಎಂಬ ಪ್ರಶ್ನೆಯನ್ನು ಮಾತಿನಲ್ಲಿ ಕೇಳಲಾಗದೇ ದೈನ್ಯದಿಂದ ಕಣ್ಣಲ್ಲೇ ಕೇಳಿ ಹೃದಯದುಂಬಿ ಹರಸಿದ್ದರು,ಹರಸಿ ಕರುನಾಡಿಗೆ ಮರಳಿದ್ದರು.
ಪ್ರತಿಯೊಂದು ಹೆಣ್ಣುಮಗುವು ಬುದ್ಧಿಬಲಿತಾನಂತರ, ತನ್ನ ಮದುವೆಯ ಮತ್ತು ತನ್ನ ಸಂಸಾರದ ಬಗ್ಗೆ ಸುಂದರಲೋಕವೊಂದನ್ನು ಸೃಷ್ಟಿಸಿಕೊಂಡಿರುತ್ತದೆ. ಆ ಕಲ್ಪನಾಲಹರಿಯು ಯಾವುದೋ ಒಂದು ಅತ್ಯಂತ ಆಪ್ತವಾದ ವಸ್ತುವಿನೊಂದಿಗೆ ಬೆಸೆದಿರುತ್ತದೆ. ಅದು ಅಮ್ಮನ ಚಿನ್ನದ ಬಳೆಯೋ, ಚಿಕ್ಕಮ್ಮನ ಹಾರವೋ, ಅಕ್ಕನ ರೇಷ್ಮೆ ಸೀರೆಯೋ ಅಥವಾ ಮತ್ತೊಂದೇನೋ ಆಗಿರಬಹುದು. ನನ್ನ ವಿಷಯದಲ್ಲಿ ಆ ಅನನ್ಯ ವಸ್ತು ಮಲ್ಲಿಗೆ ಮೊಗ್ಗಿನ ಜಡೆಯಾಗಿತ್ತು! ಮೊಟಕುಜಡೆಶೋಭಿತ ನನಗೆ, ಘಮಘಮಿಸುವ ಆ ಮಲ್ಲಿಗೆಮೊಗ್ಗಿನ ನೀಳವೇಣಿ ಅತ್ಯದ್ಭುತ ಅಲಂಕಾರದ ವಸ್ತುವಾಗಿ ತೋರುತಿತ್ತು. ಅಕ್ಕನ ಸೀಮಂತದ ಸಮಾರಂಭದಲ್ಲಿ ಕದ್ದುಮುಚ್ಚಿ ಅದನ್ನು ಮುಡಿಗೇರಿಸಿ ಅಮ್ಮನ ಕೋಪಕ್ಕೆ ಗುರಿಯಾಗಿದ್ದೂ ನೆನಪಿದೆ.ಆದರೆ ವಾಸ್ತವದಲ್ಲಿ ಆ ಸೌಂದರ್ಯ ಭಾಗ್ಯ ನನ್ನ
ಪಾಲಿಗಿರಲಿಲ್ಲ. ಉತ್ತರಭಾರತದ ಶೈಲಿಯಲ್ಲಿಯೇ ಮದುವೆ ಸಾಂಗವಾಗಬೇಕೆಂಬ ಅಘೋಷಿತ ಆಜ್ಞೆಯನ್ನು ಭಾವಿ ಅತ್ತೆಯವರು ಮಾಡಿಯಾಗಿತ್ತು. ಅಂತೂ ಚಿನ್ನದ ಬಣ್ಣದ ರೇಷ್ಮೆಸೀರೆಯ ಬದಲು ಕಣ್ಣಿಗೆ ರಾಚುವ ಕೆಂಪು “ಲೆಹೆಂಗಾ” ತೊಟ್ಟು, ಮುಡಿತುಂಬ ಮಲ್ಲಿಗೆಯ ಬದಲು “ಗುಂಘಟ್” ಆಕ್ರಮಿಸಿ, ಸಪ್ತಪದಿ ತುಳಿಯೋ ಬದಲಿಗೆ ಅಪರಿಚಿತರ ನಟ್ಟನಡುವೆ ನಾಲ್ಕು”ಫೇರೇ” ಸುತ್ತಿ “ಷಾದಿ ಕಾ ರಸಮ್” ಪೂರೈಸಿ ಹೋಗಿತ್ತು.
ಮೊಗ್ಗಿನ ಜಡೆ ಜೊತೆಗೆ ಕನ್ನಡದ ಇತರ ನೂರೆಂಟು ಕನಸುಗಳು, ದಿಲ್ಲಿಯೆಡೆಗೆ ಓಡುತ್ತಿದ್ದ “ಸಂಪರ್ಕ ಕ್ರಾಂತಿ” ರೈಲಿನ ಕೆಳಗೆ ಘಾಸಿಯಾಗಿ ನುಜ್ಜುಗುಜ್ಜಾಗುತ್ತಿದ್ದನ್ನು ನನ್ನ ಮನಸು ಮತ್ತೇ ಮತ್ತೇ ಕಲ್ಪಿಸಿಕೊಳ್ಳುತ್ತಿತ್ತು.
ಮದುವೆ ಆನಂತರದ ಪ್ರಾರಂಭಿಕ ದಿನಗಳಲ್ಲಿ ನಡೆಯುವ “ಅಡುಗೆ ಮನೆ”ಯೊಳಗಿನ dynamics ವಿವರಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಬೇಕಿಲ್ಲ. ಎಲ್ಲರ ಮನೆಯ ದೋಸೆಯಲ್ಲಿ ತೂತು ಇರುವುದು,ಎಲ್ಲರ ಮನೆಯ ಸಮೋಸಾದಲ್ಲಿ ಆಲೂ ಇರುವಷ್ಟೇ ಸರ್ವವಿದಿತವಾದ ಮಾತು. ಆದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ನನ್ನ ವ್ಯಕ್ತಿತ್ವದ ನಿಲುವಿಗೂ, ಸ್ವಾಭಿಮಾನದ ಚೌಕಟ್ಟಿಗೂ, ಪ್ರಾಮಾಣಿಕತೆಗೂ, ನಿಷ್ಠೆನಿಯತ್ತಿಗೂ ಕೊಡಲಿಯೇಟು ಬೀಳುತಿತ್ತು. ನಾನು ಬೆಳೆದುಬಂದ ತಳಹದಿಯನ್ನು, ಸಂಸ್ಕೃತಿಯ ಚಾರಿತ್ರ್ಯವನ್ನೇ ಶಂಕಿಸುವ ಪ್ರಶ್ನೆಗಳು ಆಗಾಗ ಕಿವಿಗೆ ಬೀಳುತ್ತಿದ್ದವು. ಹಲವಾರು ಸಲ, ಒಬ್ಬ ಮನುಷ್ಯ ಪೂರ್ವಾಪರ ಅನಿಸಿಕೆಗಳಿಂದ ಪೂರ್ವಗ್ರಹ ಪೀಡಿತನಾಗಿ, ವಿಷಮಬುದ್ಧಿಗೆ ಬಲಿಯಾಗಿ, ತಾನು ತನ್ನದು ಮಾತ್ರ ಶ್ರೇಷ್ಠ, ಇನ್ನುಳಿದ ಎಲ್ಲವೂ ಕನಿಷ್ಠ ಎಂಬ ಭ್ರಮೆಯಲ್ಲಿ ತೇಲುತ್ತಾನೆ. ಇತರರ ಅವಹೇಳನವೇ ತನ್ನದೆಂಬುದರ ಗರಿಮೆಯ ಪ್ರತೀಕವೆಂಬ ಕೀಳು ವಿಚಾರದಲ್ಲಿ
ತೊಡಗುತ್ತಾನೆ. ಇಂತಹ ಕಲುಷಿತ ವಾತಾವರಣದಲ್ಲಿ ಪಕ್ಕಾದ ನನ್ನ ಜೀವನದಲ್ಲಿ ನನ್ನ ನೆಲ ಜಲಭಾಷೆಯ ಬಗೆಗೆ, ನನ್ನ ಜನರ ಔದಾರ್ಯಭರಿತ ಜೀವನದ ಬಗೆಗೆ ವಿಶೇಷ ಒಲವು, ವಿಶಿಷ್ಟವಾದ ಅಭಿಮಾನ ಮೂಡಲು ಆರಂಭಿಸಿತ್ತು. ಕೆಸರಿನಲ್ಲಿ ಕಮಲವರಳಿದಂತೆ! ನೀರಿನಿಂದ ಬೇರ್ಪಟ್ಟ ಮೀನು ನೀರಿಗಾಗಿ ಹಾತೊರೆಯುವಂತೆ!
ಅಂತೂ ಕೆಲವು ವರ್ಷಗಳು ಸಂದಮೇಲೆ “ಹರಿಯಾಣಾ” ದ ಜೀತತ್ವವು ಕಳೆದು ಬದುಕಿಗೊಂದು ಬಹುದೊಡ್ಡ ವಿನಾಯಿತಿ ದೊರೆಯಿತು. ಆದರೆ ಜೀರ್ಣವಾದ, ಜರ್ಜರಿತವಾದ ವ್ಯಕ್ತಿತ್ವವನ್ನು ಮರುವಿಕಸನಗೊಳಿಸಲು ಇಂದಿಗೂ ಹೆಣಗುತ್ತೇನೆ. ಬಾಡಿದ ಬವಳಿದ ಮೊಗ್ಗಿನ ಜಡೆ ಮತ್ತೇ ಸುಘಮಿಸಿ ಅರಳಲೂಂಟೇ? ಮೊದಲು ಹೇಳಿದಂತೆ, ಬದುಕಿನ sat-nav ಯಾವುದೋ ಅಗೋಚರ ಹಸ್ತಕ್ಕೆ ಬದ್ಧವಾಗಿ reroute ಆಗುತ್ತಲೇ ಇಂದು ನನ್ನನ್ನು
ಇಂಗ್ಲಿಷ್ ದೇಶಕ್ಕೆ ತಂದು ನಿಲ್ಲಿಸಿದೆ.
ಉತ್ತರ ಭಾರತದಂತೆ ಇಲ್ಲಿಯೂ ದೊರೆತ ಹವಾಮಾನ ವೈಪರೀತ್ಯವಾಗಲಿ ಅಥವಾ ಅಪರಿಚಿತ ಸಮುದಾಯದ ಸಂಸ್ಕೃತಿಯಾಗಲಿ ಜೀವನದ ಪ್ರಖರತೆಯನ್ನು ಎಂದೂ ಕುಗ್ಗಿಸಿಲ್ಲ. ಸ್ವತಂತ್ರ ವಿಚಾರಮಂಡನೆಗಾಗಲಿ,
ನಿಷ್ಕಲ್ಮಶ ಗಾಳಿಗಾಗಲಿ,ಸುರಕ್ಷತೆಯ ಖಚಿತತೆಗಾಗಲಿ ಎಂದೂ ಕೊರತೆ ಇರದಿದ್ದರೂ, ಸುನಿಶ್ಚಿತತೆಯ ಮರೀಚಿಕೆಯಲ್ಲಿ ಪ್ರತಿದಿನವೂ ಮೀಯುತ್ತಿದ್ದರೂ, ಇಲ್ಲಿ ಅಮೂಲ್ಯವಾದ ಅನ್ಯೋನ್ಯವಾದ ಭಾವಕ್ಕೊಂದು ಕೊರತೆ ಇದೆ. ಪ್ರತಿದಿನ ಹತ್ತುಹಲವಾರು ಜನ ಇಂಗ್ಲೀಷರು ನಗುಮೊಗದಿಂದಲೇ ಸ್ವಾಗತಿಸಿದರೂ ಅವರ ಕಂಗಳು ನನ್ನ ನೆಲದ ಜನರ ಅಪ್ಯಾಯಮಾನವನ್ನು ಎಂದಿಗೂ ತುಂಬಲಾರರು. ಅವರು ಹಾವಭಾವಲಾಸ್ಯಗಳು ನೈಜತೆಯ ಸಾಲುಗಳನ್ನು ಸೂಚಿಸಿದರೂ ನನ್ನ ಕಣ್ಣು ಕೃತ್ರಿಮತೆಯನ್ನೇ ಓದುತ್ತದೆ. ನೋವು ನಲಿವಿಗೆ ಅವರು ಮನಸಾರೆ ಸ್ಪಂದಿಸಿದರೂ ಆತ್ಮೀಯತೆ ಬೆಸೆಯುವ ಒಂದು ಕೊಂಡಿಯ ಅಭಾವವನ್ನು ನಾನು ಕಾಣುತ್ತೇನೆ. ಮರಣಿಸಿದ ನನ್ನ ಅಜ್ಜನನ್ನೇ ಹೋಲುವ ಮತ್ತೊಂದು ಮುದಿಜೀವದ ಹಾರೈಕೆಯಲ್ಲಿರುವ ಆರ್ದ್ರತೆ, “bless you” ಯೆಂಬ ಉಕ್ತಿಯಲ್ಲಿ ನನಗೆ ಕೇಳಿಸುವುದಿಲ್ಲ. ಈ ಎಲ್ಲ ಅನುಭವಗಳು , ನನ್ನೊಳಗಿನ ತವರುಮನೆಯ ಮಮಕಾರದ ಫಲವೇ ಹೊರತು ಇಂಗ್ಲೀಷರ ಸೌಜನ್ಯತೆಯ ನ್ಯೂನತೆ ಖಂಡಿತವಾಗಿಯೂ ಅಲ್ಲ. “ಎಲ್ಲರೊಳಗೊಂದಾಗು ಮಂಕು ತಿಮ್ಮ” ಎಂದೋ
ಅಥವಾ “ಮನುಜಮತ ವಿಶ್ವಪಥ” ಎಂದು ಮತ್ತೇ ಮತ್ತೇ ಮನವು ಮನವರಿಸಿಕೊಂಡರೂ, ಯಾಕೋ ತಾಯ್ನೆಲದ ಮೋಹ,ಮಮತೆ, ಮಾಯೆ ಬಿಡಲೊಲ್ಲದು. ಸರ್ವಮತ ಸಹಿಷ್ಣುತೆಯ ಮಂತ್ರವನ್ನು ಸಾರಿ “ಅವರು”ಮಹಾತ್ಮರಾದರೆ ನಾನು ಇಲ್ಲಿ ಅಲ್ಪತರದ ಜೀವನದಲ್ಲಿ ಪೇಚಾಡುತ್ತಿರುವೆನು. ನನ್ನ ಶರೀರದ ಪಂಚಭೂತಗಳು ಉದಯಿಸಿದ ನೆಲದಲ್ಲೇ ಅಸ್ತವಾಗಬೇಕೆಂಬ ಆಸೆಯನ್ನು ಆ ದೇವನು ಪೂರೈಸಿಯಾನು ಎಂದು
ದೃಢವಾಗಿ ನಂಬಿರುವೆನು. ಇನ್ನು, ಇಂಗ್ಲೆಂಡಿನಲ್ಲಿ ಮಲ್ಲಿಗೆ ಮೊಗ್ಗು ಅರಳಲು ಇರುವ ನಾನಾ ತರಹದ ಪ್ರತಿಕೂಲದಿಂದಾಗಿ, ನನ್ನ ಮೊಗ್ಗಿನ ಜಡೆ ಇಂದಿಗೂ ಕನಸಾಗಿಯೇ ಉಳಿದಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
– ದೀವಿ ( ದೀಪಾ ಸಣ್ಣಕ್ಕಿ)
——————————————————————————————————————-
ಮರೆಯಾದವಳು ಮತ್ತೆ ಕಂಡಾಗ
ಮತ್ತೊಮ್ಮೆ ಕಾಣಿಸಿದವು ಆ ಎರಡು ಕಣ್ಣುಗಳು
ಬಾಳ ಹಾದಿಯಲೊಮ್ಮೆ ಮಿನುಗಿದ್ದ ದೀಪಗಳು
ಮರಳಿ ಮರುಕಳಿಸಿದವು ತುಕ್ಕಿಡಿದ ನೆನಪುಗಳು
ಕೇಳದೆಯೇ ಹೊಮ್ಮಿದವು ಅರ್ಥವಿಲ್ಲದ ಭಾವಗಳು
ಯೌವನದ ರಸ ಧೂತಗಳಿಗೆ ನೀ ಚಾಲನೆ ಕೊಟ್ಟು
ಮನದಂಗಳದಲ್ಲಿ ಸಾವಿರ ಆಸೆಯ ಸಸಿಗಳನ್ನೆಟ್ಟು
ಹೆಮ್ಮರವಾಗುವ ಮುನ್ನವೇ ಕೊಡಲಿಗೆ ಔತಣವಿಟ್ಟು
ಮರೆಯಾಗಿದ್ದೆ, ಬಾಳ ಪುಟದಲ್ಲೊಂದು ಚುಕ್ಕೆಯನ್ನಿಟ್ಟು
ಏನೆನ್ನಲೇ ನಿನಗೆ ಏನೇನೇನ್ನಲೇ?
ಮೋಹವೆನ್ನಲೆ ಪ್ರೇಮವೆನ್ನಲೆ ಕಾಮವೆನ್ನಲೆ?
ಹೃದಯವನ್ನೇ ನಲುಗಿಸಿದ್ದ ಬಿರುಗಾಳಿಯೆನ್ನಲೆ?
ಪದಗಳೇ ಸಿಗದೆ ನಾ ಸೋತೆನೆಂದು ಮೌನವಾಗಲೇ?
ಹೇಳಿ ಹೋಗಿದ್ದೆ ಅಂದು ಮರೆತು ಬಿಡು ಎಂದು
ನನ್ನ ಸಾವಿರ ಪ್ರಶ್ನೆಗಳಿಗೆ ಉತ್ತರ ಶೂನ್ಯವೆಂದು
ಕಣ್ಣ ನೋಟದಲ್ಲಿಯೇ ನೀ ಕೇಳಿರುವೆ ಇಂದು
ಒಡೆದ ಹೃದಯದಿ ‘ನಾನು ಸೌಖ್ಯವೇ?’ ಎಂದು
ನಾನರಿಯೆ ನೀನಿಂದು ನನಗೆ ಪರಕೀಯಳೆಂದು
ಇನ್ನಾರೋ ರಸಿಕನ ಹೃದಯ ಸಾಮ್ರಾಟಿನಿಯೆಂದು
ಸುಮ್ಮನೆ, ಹುಚ್ಚು ಮನ ಬಯಸಿತ್ತು ‘ನೀ ನುಡಿವೆ’ಯೆಂದು
ಅರಿತರೂ, ಈ ಕಟ್ಟಳೆಗಳಲ್ಲಿ ಅದಕೆ ಸ್ಥಳವಿಲ್ಲವೆಂದು
ನೀ ಬರೆದ ಓಲೆಗಳನ್ನೆಲ್ಲ ಹರಿದು ಬೀಗಿದ್ದೆ, ಗೆದ್ದೆನೆಂದು
ಹೃದಯದಲ್ಲಿಯ ನಿನ್ನ ಚಿತ್ರವನ್ನಳಿಸದೆ ಬಳಲಿರುವೆ ಸೋತೆನೆಂದು
ನೋವಿದೆ, ಈ ಮರ್ಕಟ ಮನಸ್ಸನ್ನು ಸಂಭಾಳಿಸಲಿಲ್ಲವೆಂದು
ಇರಲಿ ಬಿಡು, ನಿರ್ಧರಿಸಿರುವೆ ಹೀಗೆಯೇ ಬದುಕುವೆನೆಂದು
—- ಶಿವಶಂಕರ್ ಮೇಟಿ








