ಜನರೇಷನ್ ಗ್ಯಾಪ್ 

ಡಾ ಜಿ ಎಸ್ ಶಿವಪ್ರಸಾದ್

ನನ್ನ ಒಂದು ಲಘು ಕವನ ನಿಮ್ಮ ಗಮನಕ್ಕೆ

 -ಸಂ

ಹೇಳೇ ರಾಧಾ ಹೇಗಿದ್ದೀಯ 
ಫೋನಿನಲ್ಲಿ ಮಾತಾಡಿ ದಿನಗಳಾದವಲ್ಲ
ಮಾತನಾಡುವುದೇನಿದೆ ಅಮ್ಮ
ಮೆಸೇಜ್ ಮಾಡುತ್ತಿದ್ದೆನಲ್ಲಾ

ಸೀರೆ ಬ್ಲೌಸ್ ತರಲೇನೆ ರಾಧಾ
ಹಬ್ಬಕೆ ನಿನಗೇನೂ ಕೊಟ್ಟಿಲ್ಲ
ಸೀರೆಯ ನಾನು ಉಡುವುದೇ ಇಲ್ಲ
ಜೀನ್ಸ್ ಪ್ಯಾಂಟ್, ಮಿನಿಸ್ಕರ್ಟ್ ಇದೆಯಮ್ಮ

ಚಪಾತಿಯಮಾಡಿ ಕಳುಹಿಸಲೇ ರಾಧಾ
ಸೊರಗಿಹೋಗಿರುವೆಯಲ್ಲ
ಪಿಜ, ಪಾಸ್ಟಾ ತರಿಸಿಕೊಳ್ಳುವೆ ಅಮ್ಮ
ಸ್ವಿಗ್ಗಿ, ಡೆಲಿವರೂ ಇವೆಯಲ್ಲ

ಸಿನಿಮಾಗೆ ಹೋಗೋಣ ರಾಧಾ
ನಾಳೆ ಮನೆಗೇ ನೆಟ್ಟಗೆ ಬಾರಮ್ಮ
ಸಿನಿಮಾ ನೋಡಲು ಟೈಮಿಲ್ಲಮ್ಮ
ನೆಟ್ ಫ್ಲಿಕ್ಸ್ ಪ್ರೈಮ್ ಇದೆಯಮ್ಮ

ಒಂಟಿ ಬದುಕೇಕೆ ರಾಧಾ
ಬೇಗ ಮದುವೆಯಾಗಮ್ಮಾ
ಜೊತೆಯಲಿ ಬಾಯ್ ಫ್ರೆಂಡ್ ಇದ್ದಾನಲ್ಲಾ
ಮುದುವೆಗಿದುವೇ ಯಾಕಮ್ಮ

ಎರಡು ಕವನಗಳು

ಆತ್ಮೀಯ ಓದುಗರಿಗೆ ನಮಸ್ಕಾರ
ಈ ವಾರದ ಸಂಚಿಕೆಯಲ್ಲಿ ಪ್ರೇಯಸಿಯನ್ನು ಕುರಿತು ಬರೆದಿರುವ ಎರಡು ಕವಿತೆಗಳಿವೆ. ಎಲ್ಲರ ಹದಿ ಹರೆಯದಲ್ಲಿ ಒಮ್ಮೆಯಾದರೂ ಪ್ರೇಮ, ಮೋಹ ಅರಳುವದು ಸಹಜ. ನನ್ನ ಭಗ್ನ ಪ್ರೇಮಿ ಗೆಳೆಯನೊಬ್ಬ ಹೇಳುತ್ತಿದ್ದ – ಯೌವನದಲ್ಲಿ ಇಂತಹ ಅನುಭವಗಳು ಆಗದಿದ್ದರೆ ಅದು ಯೌವನವೇ ಅಲ್ಲವೆಂದು. ನನಗೂ ನಿಜವೆನಿಸುತ್ತದೆ, ನಿಮಗೂ ಅನಿಸಬಹುದೆಂದು ನಂಬಿರುವೆ. ಕೆಲವು ಅದೃಷ್ಟ ಜೀವಿಗಳು(?) ಪ್ರೀತಿಸಿದವರನ್ನು ಗಿಟ್ಟಿಸಿ, ಜೀವನದ ಸಂಗಾತಿಯನ್ನಾಗಿ ಮಾಡಿಕೊಂಡು ತುಂಬು ಜೀವನ ನಡೆಸಿದರೆ ಇನ್ನು ಕೆಲ ನತದೃಷ್ಟರು, ಇಷ್ಟಪಟ್ಟವರು ಸಿಗದೆ ಭಗ್ನ ಪ್ರೇಮಿಗಳಾಗಿ ಬದುಕು ಕಳೆಯುವುದು ಉಂಟು. ನಮ್ಮ ಹಳೆಯ ಚಲನ ಚಿತ್ರಗಳ ಜೀವಾಳವೇ
ಇದಾಗಿತ್ತು. ರಾಜ ಕಪೂರ್ ಇದರಲ್ಲಿ ಎತ್ತಿದ ಕೈ
“ಮುಝೆ ತುಮ್ ಸೆ ಕುಚ್ ಭೀ ನ ಚಾಹಿಯೇ
ಮುಝೆ ಮೇರೆ ಹಾಲ ಪೆ ಛೋಡ್ ದೋ”
ಎಂದು ಗೋಗರಿಯುತ್ತ ಅಲೆದಿದ್ದುಂಟು.
ಕೇಶವ ಅವರ ಕವನದಲ್ಲಿಯ ಪ್ರೇಮಿ ‘ಇರಲಿ ಬಿಡು’ ಎಂದು ನೋವಿನಿಂದ ಅವಳನ್ನು ಬಿಟ್ಟುಕೊಟ್ಟರೆ, ನನ್ನ ಕವನದಲ್ಲಿಯ ಪಾಗಲ್ ಪ್ರೇಮಿ ಅವಳ ‘ಬಾರದ ಬರುವಿನ ನಿರೀಕ್ಷೆಯಲ್ಲಿ’ ಮುಳುಗಿದ್ದಾನೆ. ಓದಿ ಸಾಧ್ಯವಾದರೆ ಅಭಿಪ್ರಾಯ ತಿಳಿಸಿ

—– ಇಂತಿ ಸಂಪಾದಕ

——————————————————————————————————————–

ಇರಲಿ ಬಿಡು – ಕೇಶವ ಕುಲಕರ್ಣಿ

ನನ್ನ ಬಟ್ಟಲು ಮತ್ತೆ ಖಾಲಿಯಾಗುತ್ತಲಿದೆ, ತುಂಬಿಸಿ ಬಿಡು
ನೀ ತೊರೆವ ಗಾಯ ಬಹಳ ನೋಯುತ್ತಲಿದೆ , ಕುಡಿಯಲು ಬಿಡು

ಎಲ್ಲ ಮರೆತು ಮುಂದೆ ಸಾಗೆಂದು ಹೇಳಬಂದಿರುವೆ ನೀನು
ನಾವು ಬಂದ ದಾರಿಯಲಿ ಗುರುತುಗಳು ಕಾಯುತ್ತಲಿವೆ, ಹೆಕ್ಕಲು ಬಿಡು

ನೀ ನೀರುಣಿಸಿದ ಬಳ್ಳಿಯ ತುಳಿದು ಸಾಗಿಹೆ ನೀನು
ಅಲ್ಲೊಂದು ಅರಳಿದ ಹೂ ಅಳುತ್ತಲಿದೆ, ನನಗೆ ಬಿಡು

ನನ್ನ ಪ್ರೇಮ ನಿನಗಷ್ಟು ಬೇಗ ಸಾಕಾಯಿತೆ?
ಹಣೆಯಲಿ ಬರೆದಿದ್ದೇ ಇಷ್ಟು ಅನ್ನುತ್ತಲಿದೆ, ಇರಲಿ ಬಿಡು

ಪ್ರೇಮವಿರದ ಬದುಕು ಮದಿರೆಯಿರದ ಬಟ್ಟಲು
ಬದುಕಲು ನಿನ್ನ ನೆನಪನು ಕುಡಿಯುತ್ತಲಿದೆ, ಬಿಟ್ಟು ಬಿಡು

ಪ್ರೇಮದ ನಿರಂತರ ಹುಡುಕಾಟವಂತೆ ಬದುಕು
ಈ ಹುಡುಕಾಟ ಕವನವಾಗುತ್ತಲಿದೆ, ಬರೆಯಲು ಬಿಡು

——————————————————————————————————————–

2) ನಿರೀಕ್ಷೆ
ಏಳೇಳು ಜನುಮದಿ ನಿನಗೆ ತೆರೆದಿಹುದು
ನನ್ನಿ ಹೃದಯ
ಎನ್ನಾಸೆ ಅರಮನೆಯೊಳಗೆ ಇನ್ನಾದರು
ಬರುವೆಯಾ ಸನಿಹ
ನೀ ಬರುವ ಹಾದಿಯ ತುಂಬಾ ಕನಸುಗಳ
ನಾ ಹಾಸಿರುವೆ
ಒಂದೊಂದು ಹೆಜ್ಜೆಯ ನಡೆಗೂ ಚಿತ್ತಾರ
ಲೇಪಿಸಿರುವೆ
ಈ ಹೃದಯದ ಅಂಗಳದಲ್ಲಿ ರಂಗೋಲಿಯ
ಸಾಲುಗಳಿವೆ
ನಿನ್ನ ಹೆಸರಿನ ದೀಪವ ಹಚ್ಚಿ ಹಗಲಿರುಳು
ಕಾಯುತಿರುವೆ
ಹಾರಾಡುವ ಹಕ್ಕಿಯ ಗುಂಪು ಶುಭ ನುಡಿಯ
ಸೂಸುತಿಹವು
ತೂಗಾಡುವ ಹಸಿರೆಲೆಯಲ್ಲ ಚಾಮರವ
ಬೀಸುತಿಹವು
ಈ ಮನದ ಮಂಟಪದಲ್ಲಿ ಅಂಬಾರಿಯ
ಸಾಲುಗಳಿವೆ
ಭರವಸೆಯ ಹಾರವ ಹಿಡಿದು ಹಗಲಿರುಳು
ಕಾಯುತಿರುವೆ
ಏಳೇಳು ಜನುಮದಿ ನಿನಗೆ ತೆರೆದಿಹುದು
ನನ್ನೀ ಹೃದಯ

– ಶಿವಶಂಕರ ಮೇಟಿ

ಶಿವಶಂಕರ ಮೇಟಿಯವರೇ ಹಾಡಿದ ಮೇಲಿನ ಅವರ ಕವನವನ್ನು ಕೇಳಿರಿ