ಸ್ಕಾಚ್ ವಿಸ್ಕಿ – ಡಾ. ಜಿಎಸ್ ಶಿವಪ್ರಸಾದ್ ಬರೆದ ಕವನ

ಯು ಕೆ ಕನ್ನಡ ಬಳಗದ  2016 ಯುಗಾದಿ ಉತ್ಸವದ ಸಮಯದಲ್ಲಿ ನಡೆದ ಕಾವ್ಯ ಗೋಷ್ಠಿಯಲ್ಲಿ ಶಿವಪ್ರಸಾದ್ ಅವರು ತಾವೇ ಓದಿದ ಕವಿತೆ ಇದು.

ಸ್ಕಾಚ್ ವಿಸ್ಕಿ

ಸ್ಕಾಚ್ ವಿಸ್ಕಿ ಎಂದರೆ

ನನಗಿಲ್ಲ ತೊಂದರೆ

ಸ್ನೇಹಿತರು ಸೇರಿ ಒಂದಾದರೆ

ನಾವೆಲ್ಲಾ ವಿಸ್ಕಿಯಾಸೆರೆ whiskey glasses2

 

ಜಾನಿವಾಕರ್, ಗ್ಲೆನ್ ಫಿಡಿಕ್ ನನ್ನ ಒಲವು

ವಿಸ್ಕಿ ಒಂದೆ ನಾಮ ಹಲವು

ಎರಡು ಪೆಗ್ ಇಳಿಸಿದಾಗ

ಕಂಡದ್ದೆಲ್ಲಾ ಚೆಲುವು !

 

ಒಂದು ಪೆಗ್ ವಿಸ್ಕಿ

ಅದಕೊಂದಿಷ್ಟು ಸೋಡ

ಕುರುಕಲು ಬೇಕು

ಬಿಸಿ ಬಜ್ಜಿ ಪಕೋಡ

 

ವಿಸ್ಕಿ ಕುಡಿದಾಗ ನಾನೊಬ್ಬ ದಿಲ್ದಾರ್ ರಾಜ

ಹೇಗೆ ವಿವರಿಸಲಿ ಇದರ ಮಜ

ಮಿತಿ ಮೀರಿದರೆ  ಅನಾರೋಗ್ಯ ನಿಜ

ಮಲಗೆದ್ದ ಮೇಲೆ ಹ್ಯಾಂಗ್ ಓವರ್ ಸಹಜ!

 

ವಾರಾಂತ್ಯದಲಿ ವಿಸ್ಕಿಯ ಆರಾಧನೆ

ಇನ್ನಿಲ್ಲ ಬೇಸರ ಮನೋವೇದನೆ

ಮೈ ಮನಸ್ಸುಗಳಾಗಿವೆ ಹಗುರ

ಚಿಂತೆಗಳು ಸದ್ಯಕ್ಕೆ ದೂರ

ಡಾ. ಜಿಎಸ್ ಶಿವಪ್ರಸಾದ್  

ತಪ್ಪೇನಿಲ್ಲ ದೋಸ್ತ! – ಸುಹಾಸ ಕರ್ವೆ ಬರೆದ ಕವಿತೆ

ಹೇಳುವರು ಕೆಲವರು ಭಾಳ ಕೆಟ್ಟದ್ದಂತ ಈ ಚಟ
ಚಟದ ಮಹತ್ವ ಅವರಿಗೇನು ಗೊತ್ತೋ ದೋಸ್ತ?
ಚಟ ಮಾಡಲೇಬೇಕೆಂಬ ಚಟ ಬೆಳೆಸುವುದೂ ಒಂದು ಚಟ
ಚಟ ಮಾಡ್ತಾ ಇದ್ರೆ ಸಿಗುತ್ತೆ ಬದುಕು ದೋಸ್ತ

ಕುಡಿಯುವವ ದಿನವೂ ಮಾಯವಾದರೆ ತಪ್ಪೇನಿಲ್ಲ ದೋಸ್ತ
ಚಂದ್ರನಿಗಿಲ್ಲವೇ ತಿಂಗಳಿಗೊಮ್ಮೆ ಮಾಯವಾಗುವ ಚಟ?
ಸೇದುವವ ಹೊಗೆ ಹೊರಹಾಕಿದರೆ ತಪ್ಪೇನಿಲ್ಲ ದೋಸ್ತ
ಚಳಿಗಾಲಕ್ಕಿಲ್ಲವೇ ಮಂಜು ಹೊರಹಾಕುವ ಚಟ?

ತಂಬಾಕು ತಿಂದುಗುಳಿದರೆ ತಪ್ಪೇನಿಲ್ಲ ದೋಸ್ತ
ಮೋಡಕ್ಕಿಲ್ಲವೇ ಮಳೆ ಉಗುಳುವ ಚಟ?
ಗುಂಡು ಹಾಕಿದವನು ತೂರಾಡಿದರೆ ತಪ್ಪೇನಿಲ್ಲ ದೋಸ್ತ
ಮರಕ್ಕಿಲ್ಲವೇ ಗಾಳಿಯಲ್ಲಿ ತೂರಾಡುವ ಚಟ?

ಸೋತರೂ ಮತ್ತೆ ಮತ್ತೆ ಜೂಜಾಟ ಆಡಿದರೆ ತಪ್ಪೇನಿಲ್ಲ ದೋಸ್ತ
ಹಿಮಕ್ಕಿಲ್ಲವೇ ವರುಷ-ವರುಷ ಕರಗಿದರೂ ಮತ್ತೆ ಹುಟ್ಟುವ ಚಟ?
ಮೇಲಿನಿಂದ ಕೆಳಕ್ಕೆ ಬಿದ್ದರೂ ಷೇರು ಖರೀದಿಸಿದರೆ ತಪ್ಪೇನಿಲ್ಲ ದೋಸ್ತ
ನದಿಗಿಲ್ಲವೆ ಬೆಟ್ಟದಿಂದ ಧುಮುಕಿ ಜಲಪಾತವಾಗುವ ಚಟ?

ಹೇಳುವರು ಕೆಲವರು ಭಾಳ ಕೆಟ್ಟದ್ದಂತ ಈ ಚಟ
ಚಟದ ಮಹತ್ವ ಅವರಿಗೇನು ಗೊತ್ತೋ ದೋಸ್ತ?
ಚಟವಿಲ್ಲದೇ ಗ್ರಹತಾರೆಗಳಿಲ್ಲ ಮಳೆ ಬೆಳೆಗಳಿಲ್ಲ
ಚಟ ಮಾಡದೇ ಮತ್ತೆ ಬದುಕುವದ್ಯಾಕೋ ದೋಸ್ತ?