ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ ಮತ್ತು ’ತಲಾಷ್’-ಭಾಗ 3

ಈ ವಾರವೂ ಎರಡು ಪ್ರಸ್ತುತಿಗಳು ಇವೆ. ಮೊದಲು ವತ್ಸಲಾ ರಾಮಮೂರ್ತಿಯವರು ಬರೆದ ಲೇಖನ ಅಪರೂಪದ ಪ್ರತಿಭೆ, ಅಪ್ರತಿಮ ಸಾಧಕಿಯೋರ್ವಳನ್ನು ಕುರಿತಾದ ನಾಟಕದ ವಿಮರ್ಶೆ ಮತ್ತು ಎರಡನೆಯದಾಗಿ ಶಿವ ಮೇಟಿಯವರ ಕತೂಹಲಕಾರಿ ಧಾರಾವಾಹಿ ಕಥೆಯ ಮುಕ್ತಾಯದ ಭಾಗವನ್ನು ಸಹ ಓದಿ ಅವಶ್ಯ ಪ್ರತಿಕ್ರಿಯೆಸಿರಿ. ನಾಗಾಭರಣ ಅವರು ಆಕೆಯ ಕಥೆಯನ್ನು ಹೇಳುವ ವಿಡಿಯೋ ಸಹ ಕೆಳಗೆ ಇದೆ. (ಸಂ)
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.Wishing you all Merry Christmas and a Happy New Year 2023
1) ವಿದ್ಯಾಸುಂದರಿ ‘ಬೆಂಗಳೂರು ನಾಗರತ್ನಮ್ಮ‘  - ವತ್ಸಲ ರಾಮಮೂರ್ತಿಯವರು ಬರೆದ ಲೇಖನ 

ಪೀಠಿಕೆ ನಾನು ಈ ಸಲದ ‘ಅನಿವಾಸಿ‘ಯ ದೀಪಾವಳಿ ಸಮಾರಂಭದ ಕಾರ್ಯಕ್ರಮಕ್ಕೆಅನಾನುಕೂಲತೆಗಳಿಂದ ನನ್ನಿಂದ ಬರಲಾಗಲಿಲ್ಲ.ಅದರಲ್ಲಿ ನಾಗಾಭರಣರ ನಾಟಕ ವಿದ್ಯಾಸುಂದರಿ ‘ಬೆಂಗಳೂರು ನಾಗರತ್ನಮ್ಮ‘ ಬಗ್ಗೆ ವಿಮರ್ಶೆ ಮಾಡಲು ಒಪ್ಪಿಕೊಂಡಿದ್ದೆ. ಅವರ ಜೀವನಚರಿತ್ರೆಯನ್ನು ನಾನಾ ಮೂಲಗಳಿಂದ ಸಂಗ್ರಹಿಸಿದ್ದೆ. ಅದರ ಸಾರಾಂಶ ಕೆಳಗಿದೆ.

ಪ್ರಸಿದ್ಧ ರಂಗಕರ್ಮಿ ಮತ್ತು ಸಿನಿಮಾ ಡೈರೆಕ್ಟರ್ ನಾಗಾಭರಣ ಅವರಿಗೆ ಬೆಂಗಳೂರು ನಾಗರತ್ನಮ್ಮನವರ ಬಗ್ಗೆ ಸಿನಿಮಾ (biopic) ಮಾಡಲು ಕರೆ ಬಂದಿತ್ತು.  ಸಿನಿಮಾ ತಯಾರಿಸಲು ಆಕೆಯ ಬಗ್ಗೆ ಸಂಶೋಧನೆ ನಡೆಸಿದ ಅವರು ಶ್ರೀರಾಮರವರ ಇಂಗ್ಲಿಷ್ ಪುಸ್ತಕ Devadasi and Saint -The Life and Times of Nagaratnamma ಮತ್ತು ಮೈಸೂರು ಗುರುಸ್ವಾಮಿಯವರ ಅದೇ ಹೆಸರಿನ ಕಾದಂಬರಿ ಓದಿ ಅವರ ವ್ಯಕ್ತಿತ್ವ ಮತ್ತು ಸಾಧನೆಗಳಿಗೆಮಾರು ಹೋದರು. ಬೈಯೋಪಿಕ್ ತಯಾರಿಸಲು ಕಷ್ಟವೆಂದು ತಿಳಿದು ಕರ್ನಾಟಕ ಸಂಗೀತದ(ಗಮಕ) ಮೂಲಕ ಕನ್ನಡದಲ್ಲಿ ಮ್ಯೂಸಿಕಲ್ ಮಾಡಿದರು. ಅವರು ಎಲ್ಲರೂ ನಾಗರತ್ನಮ್ಮ ಅವರ ಬಗ್ಗೆ  ತಿಳಿಯಬೇಕೆಂದಿದ್ದಾರೆ.

ಬೆಂಗಳೂರು ನಾಗರತ್ನಮ್ಮ ಅವರ ಕಿರು ಪರಿಚಯ.  

ಅವರು ಹುಟ್ಟಿದ್ದು 1878ರಲ್ಲಿ. ಅವರ ತಾಯಿ ಪುಟ್ಟಲಕ್ಷಮ್ಮ ದೇವದಾಸಿ ಪರಂಪರೆಯವರು. ಅವರತಂದೆ ವಕೀಲ ಸುಬ್ಬರಾಯರು ಅವರನ್ನು ತೊರೆದು ಹೋದ ನಂತರ ಪುಟ್ಟಲಕ್ಷಮ್ಮ ಮೈಸೂರುಆಸ್ಥಾನದಲ್ಲಿ ವಿದ್ವಾಂಸರಾಗಿದ್ಧ  ಶಾಸ್ತ್ರಿಯವರ  ಆಸರೆ  ಪಡೆದರು ಶಾಸ್ತ್ರಿಯವರು ನಾಗರತ್ನಮ್ಮನಿಗೆ ಸಂಸ್ಕೃತ, ನೃತ್ಯ, ಕರ್ನಾಟಕ ಸಂಗೀತ, ಇಂಗ್ಲಿಷ್, ತೆಲಗು ಭಾಷೆಗಳನ್ನೂ ಕಲಿಸಿದರು. ಅವರು ಸಹ ಪುಟ್ಟಲಕ್ಷ್ಮಮ್ಮನವರನ್ನು ಬಿಟ್ಟು ಹೋದರು. ಆಮೇಲೆ ಪುಟ್ಟಲಕ್ಷಮ್ಮ ಅವರು ಮೈಸೂರನ್ನು ಬಿಟ್ಟು ತಮ್ಮ ಸಂಬಂಧಿ ವಯೊಲಿನ್ ವಿದ್ವಾನ್ ವೆಂಕಟೇಶ್ವರಪ್ಪನವರ ಆಶ್ರಯ ಪಡೆದರು. ಅವರ ಆಶ್ರಯದಲ್ಲಿ ಗುರು-ಶಿಷ್ಯೆ ಪರಂಪರೆಯಲ್ಲಿ ಸಂಗೀತ ಮತ್ತು ನೃತ್ಯದಲ್ಲಿ ಪಾರಂಗತರಾದರು. ತಮ್ಮಹದಿನೈದನೆಯ ವಯಸ್ಸಿನಲ್ಲಿ ಸಂಗೀತ ವಿದುಷಿಯಾಗಿ ರಂಗಾರ್ಪಣೆ ಮಾಡಿದರು.
ಅವರು ಸಂಸ್ಕೃತ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ  ಹಾಡುತ್ತಿದ್ದರು. ಅವರ ವಿಶೇಷವಾದ ಕಲೆ ‘ಹರಿಕತೆ’. ಅವರು ಹರಿಕತೆಯನ್ನು ಜನ ಸಾಮಾನ್ಯರಿಗೆ ದೊರಕುವಂತೆಮಾಡಿದರು. ನಂತರ ಬೆಂಗಳೂರಿಗೆ ಬಂದು ಹೈ  ಕೋರ್ಟ್ ಜಜ್  ನರಹರಿ ರಾಯರ ಆಶ್ರಯದಲ್ಲಿಅವರ ಪ್ರತಿಭೆಯ ಬಗ್ಗೆ ತಿಳುವಳಿಕೆ ಪಸರಿಸಿತು. ಎಲ್ಲ ಜನರಿಗೂ ಅವರ ಬಗ್ಗೆ ಗೊತ್ತಾಯಿತು. ನರಹರಿರಾಯರು ಅವರ ಪ್ರತಿಭೆ ಮುಂದುವರಿಯಲು ಅವರನ್ನು ಮದರಾಸ್ನಲ್ಲಿ ಮೊದಲಿಯಾರ್ ಅವರ ಆಶ್ರಯಕ್ಕೆ ಕಳಿಸಿದಾಗಿನಿಂದ ಅವರ ಪ್ರತಿಭೆ ಮತ್ತು ಖ್ಯಾತಿ ಮುಗಿಲೆತ್ತರಕ್ಕೆ ಬೆಳೆಯಿತು. ಅನೇಕ ಪ್ರಶಸ್ತಿ, ಬಿರುದು ಬಾವಲಿಗಳು ಅವರನ್ನರಸಿ ಬಂದವು. ಅವರು ಹೇಳಿದ್ದೇನೆಂದರೆ ತ್ಯಾಗರಾಜರು ಅವರ ಕನಸಿನಲ್ಲಿ ಬಂದು ಅವರ ಸ್ಮಾರಕ ಮತ್ತು  ಕರ್ನಾಟಕ ಸಂಗೀತ ಪರಂಪರೆಯನ್ನು ಮುಂದುವರಿಸ-ಲು ಹೇಳಿದರಂತೆ. ನಾಗರತಮ್ಮ ಅವರು ತಮ್ಮ ಜೀವನವನ್ನುಕರ್ನಾಟಕ ಸಂಗೀತ ಮತ್ತು ತ್ಯಾಗರಾಜರಕೀರ್ತಗಳನ್ನು ಹೆಸರಿವಾಸಿಯಾಗಿ ಮಾಡಲು ಮುಡುಪಾಗಿಟ್ಟರು. ಪಾಳು ಬಿದ್ದಿದ್ದ ತ್ಯಾಗರಾಜರ ಸಮಾಧಿಯನ್ನು ಪುನರತ್ಥಾನಗೊಳಿಸಿದರು. ಶ್ರೀರಾಮ ಮಂದಿರವನ್ನು ಕಟ್ಟಿಸಿದರು. ಅದಕ್ಕಾಗಿ ತಮ್ಮ ಒಡವೆ ಮತ್ತು ಹಣವನ್ನು (ಆಗಿನ ಕಾಲದಲ್ಲಿ Rs 36,000) ದಾನ ಮಾಡಿದರು.


ನಾಗರತ್ನಮ್ಮನವರ ವ್ಯಕ್ತಿತ್ವ

ಅವರೊಬ್ಬ ಕಲಾವಿದೆ ಮತ್ತು ಕಲಾಭಿಮಾನಿ ಸಹ. ಚಿಕ್ಕ ವಯಸ್ಸಿನಿಂದ ಸಂಗೀತ, ನೃತ್ಯ, ಹರಿಕತೆಗಳಿಗೆಜೀವನವನ್ನೇ ಮುಡುಪಾಗಿಯಿಟ್ಟಿದ್ದರು. ತ್ಯಾಗರಾಜರ ಸಂಗೀತ ಪರಂಪರೆಯನ್ನು ಆರಾಧನೆಯ ಮೂಲಕ ಅಮರವಾಗಿ ಮಾಡಿದರು. ಇವತ್ತಿಗೂ ಅದು ಸಂಗೀತಪ್ರಿಯರಿಗೆ ರಸದೌತಣ. ಅವರು ಕ್ರಿಯಾವಾದಿ (activist). ಅವರ ಕಾಲದಲ್ಲಿ ಹೆಂಗಸರಿಗೆ ಅಷ್ಟು ಮರ್ಯಾದೆ ಇರಲಿಲ್ಲ. ಸಮಾಜದಲ್ಲಿ ಕೀಳು ಸ್ಥಿತಿ. ಅದರಲ್ಲೂ ದೇವದಾಸಿಯರನ್ನು ಕಡೆಗಣಿಸುತ್ತಿದ್ದರು. ಪುರುಷ ಸಂಗೀತಗಾರರು ತ್ಯಾಗರಾಜರ ಆರಾಧನೆಯ ಸಮಯದಲ್ಲಿ ಅವರಿಗೆ ಗುಡಿಯೊಳಗೆ ಹಾಡಲು ಅವಕಾಶ ಕೊಡುತ್ತಿರಲಿಲ್ಲ. ಅದಕ್ಕೆ ಸವಾಲಾಗಿ ಎಂಬಂತೆ ನಾಗರತ್ನಮ್ಮನವರು ತಮ್ಮದೇ ಆದ ಒಂದು ”ಸಂಗೀತ ಸಭೆ”ಯನ್ನು ಗುಡಿಯ ಹಿಂಭಾಗದಲ್ಲಿ ಶುರುಮಾಡಿದರು. ಕಾಲಾನಂತರ ಮಹಿಳೆಯರಿಗೂ ಪುರುಷರ ಸಮನಾಗಿ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶವಾಯ್ತು. ಅವರು ಮೊಟ್ಟ ಮೊದಲ ’ದೇವದಾಸಿ ಸಂಘ’ ಕಟ್ಟಿದರು. ದೇವದಾಸಿಯರು ವೇಶ್ಯೆಯರಲ್ಲ, ಕಲಾಭಿಮಾನಿಗಳೆಂದು ಸಾರಿದರು. ಅವರು ಪ್ರಪ್ರಥಮ ರೆಕಾರ್ಡಿಂಗ್ ಆರ್ಟಿಸ್ಟ್ ಗಳಲ್ಲೊಬ್ಬರು. ಆಗಿನ ಇಡೀ ಮದರಾಸು ಪ್ರೆಸಿಡೆನ್ಸಿಯಲ್ಲೇ ಇನ್ಕಮ್ ಟ್ಯಾಕ್ಸ್ ಕಟ್ಟಿದ ಪ್ರಥಮ ಮಹಿಳೆ ಅವರಾಗಿದ್ದರು. ಅವರು ವಿದ್ವಾಂಸಿ. ಅನೇಕ ಪುಸ್ತಕಗಳನ್ನು ಪ್ರಕಟಿಸಿದ ಮಹಿಳೆಯೆಂಬ ಹೆಗ್ಗಳಿಕೆ ಅವರದು. ಬಹು ಭಾಷಾ ಪರಿಣತಿಯರಾದ ಅವರು ಕವಿತೆ,ಮತ್ತಿತರ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರು 1952ರಲ್ಲಿ ನಿಧನರಾದರು.
Photos: Creative Commons License
ನಾಟಕದ ಬಗ್ಗೆ ಒಂದು ಅನಿಸಿಕೆ:  
ನಾಟಕ ರೂಪವನ್ನು ಬರೆದವರು ಪ್ರತಿಭಾ ನಂದಕುಮಾರ್ ಮತ್ತು ಹೂಲಿ ಶೇಖರ್.  ಸಂಗೀತ ಸಂಯೋಜನೆ ಮತ್ತು ನಿರ್ಮಾಣ ಡಾ ಪಿ. ರಮಾ ಅವರದು. ಬೆನಕ ಮತ್ತು ಸಂಗೀತ ಸಂಭ್ರಮ ಅವರು ಅರ್ಪಣೆ. ಮೊದಲ ಬಾರಿಗೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಸರಿಯಾಗಿ ಮೂರು ವರ್ಷದ ಕೆಳಗೆ 27-12-2019ರಂದು ಪ್ರದರ್ಶನಗೊಂಡಿತು. ಮೊದಲನೆಯ ದೃಶ್ಯದಲ್ಲಿ  ಪಿರಿಯ ಕಚ್ಚಿ ಮತ್ತಿ ಚಿನ್ನ ಕಚ್ಚಿ ನಡುವೆ ಆರಾಧನೆಯ ಸಮಯದಲ್ಲಿ ಸುದೀರ್ಘ ವಿವಾದ ನಡೆಯುತ್ತದೆ. ಪುರುಷರ ಪೆರಿಯ ಕಚ್ಚಿ’ ಸ್ತ್ರೀಯರ ಸಂಗ ’ಚಿನ್ನ ಕಚ್ಚಿ’ಗೆ ಹಾಡಲು ಅವಕಾಶ ಕೊಡುತ್ತಿಲ್ಲ. ಆಗ ನಾಗರತ್ನಮ್ಮನವರು ತಮ್ಮ ಸಂಗೀತವನ್ನು ಪ್ರಾರಂಭಿಸುತ್ತಾರೆ. ಬೆಂಕಿಯ ಗಲಾಟೆಯಲ್ಲಿ ಸಮಾರಂಭ ನಿಲ್ಲಿಸಬೇಕಾಗುತ್ತದೆ. (ಬೆಂಕಿ ಹಚ್ಚಿದ್ದು ನಾಗರತ್ನಮ್ಮನವರ ಜಿದ್ದಿನಿಂದ!) ಹೀಗೆ ನಾಟಕ ನಾಗರತ್ನಮ್ಮನವರ ಜೀವನಕತೆ ಮೆಟ್ಟಲು ಮೆಟ್ಟಲಾಗಿ ಗಮಕ ಸಂಗೀತದಲ್ಲಿ ಸಾಗುತ್ತದೆ. ಅದರಲ್ಲಿ ’ನರಹರಿ ರಾಯರ ಮತ್ತು ಪತ್ನಿಯ ಸಂವಾದ,’ ನಾಗರತ್ನಮ್ಮನವರು ಒಡವೆ, ದುಡ್ಡು ಎಲ್ಲವನ್ನು ತ್ಯಾಗರಾಜರ ಆರಾಧನೆಗಾಗಿ ಕೊಡುವದು, ದೇವದಾಸಿಯರಿಗೆ ಸಹಾಯ ಮಾಡುವುದು, ಅವರ ಅಪಾರ ಕೊಡುಗೆಯನ್ನು ಮನಮುಟ್ಟುವಂತೆ ನಾಟಕದಲ್ಲಿ ಪ್ರದರ್ಶಿಸಿದ್ದಾರೆ. ನಾಟಕ ಬಹಳ ಗಂಭೀರವಾದ ವ್ಯಕ್ತಿ ಚಿತ್ರ. ಅದನ್ನು  ಐದಾರು ಜನ ಸಂಗೀತಗಾರರು ಪಕ್ಕವಾದ್ಯಗಳ ಜೊತೆಗೆ  ಒಂದೇ ರಾಗದಲ್ಲಿ ಅವರ ಜೀವನ ಚರಿತ್ರೆ ವಿವರಿಸುತ್ತಾರೆ.  ಕೇಳುಗರಿಗೆ ಗಮಕ ಶೈಲಿ ಅರ್ಥವಾಗದಲ್ಲಿಕಥೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು. ಲಘು ಹಾಸ್ಯ ಸೇರಿಸಿದ್ದರೆ ಹಗುರವಾಗುತ್ತಿತ್ತೇನೋ ಎನಿಸುತ್ತದೆ. ಮಧ್ಯೆ ನಾಗರತ್ನಮ್ಮನ ಹಾಡುಗಳ, ತುಣುಕುಗಳ ಾವರ ಸಂಗೀತ ತಿಳಿಯದಿದ್ದವರಿಗೆ ಕಷ್ಟವೆನಿಸಿತು. ನಟನಟಿಯರು ಭಾವ್ಪೂರ್ವಗಿ ನಟಿಸಿದ್ದಾರೆ. Screen set up ಆಗಿನ ಕಾಲಕ್ಕೆ ಸರಿಯಾಗಿ ಜೋಡಿಸಿದ್ದಾರೆ. ನಾಗರತನಮ್ಮನವರ ವ್ಯಕ್ತಿತ್ವ ಚೆನ್ನಾಗಿ ಮೂಡಿ ಬಂದಿದೆ. ಅವರ ಜೀವನ ಚರಿತ್ರೆ ತಿಳಿಯದವರಿಗೆ musical follow ಮಾಡೋದು ಸ್ವಲ್ಪ ಕಷ್ಟವಾದರೂ ಕನ್ನಡದಲ್ಲಿ ಈ ಮ್ಯೂಸಿಕಲ್ ಮಾಡಿದ ನಾಗಾಭರಣ ಅವರಿಗೆ ಅನಂತ ವಂದನೆಗಳು

        ---ವತ್ಸಲ ರಾಮಮೂರ್ತಿ
 2) ತಲಾಷ್ -3    - ಶಿವ ಮೇಟಿಯವರ ಕಥೆಯ ಕೊನೆಯ ಭಾಗ
(ಇಲ್ಲಿಯ ವರೆಗೆ: ಅಂಜಲಿ ಎನ್ನುವ ಶಾಲಾಬಾಲಕಿ ಇನ್ನೂ ಶಾಲೆಯಿಂದ ಮನೆಗೆ ಬಂದಿಲ್ಲ. ಆಲದ ಮರದ ಕೆಳಗೆ ಕುಳಿತ ಹುಚ್ಚಪ್ಪನ ಭವಿಷ್ಯವಾಣಿಯ ಜಾಡು ಹಿಡಿಯಬೇಕೆ? ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ ತಂದೆ ತಾಯಿಗಳು. ಮುಂದೆ ಓದಿ ...) 
ವಸುಂಧರೆಯ ಮನಸಿನಲ್ಲಿ ಹುಚ್ಚಪ್ಪನ ಮಾತುಗಳು ಪ್ರತಿಧ್ವನಿಸುತಿದ್ದವು . ಅವನಾಡುವ ಪದಗಳು ಒಗಟಿನಂತೆ ಕಂಡರೂ, ಒರೆ ಹಚ್ಚಿ ನೋಡಿದಾಗ ಒಂದೊಂದು ಪದಕ್ಕೂ ಅರ್ಥವಿರುತ್ತಿತ್ತು . ಉತ್ತರ ದಿಕ್ಕಿನ ಕಡೆ ಆರು ಮೈಲಿನ ಅಂತರದಲ್ಲಿ ಅಂತದೇನು ವಿಶೇಷವಿದೆ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಂಡಳು. ಅವಳ ತಲೆಗೆ ಹೊಳೆದಿದ್ದು ಪಕ್ಕದ  ಊರಿನ  ಕಾಡಿನ ಆದಿಯಲ್ಲಿ ಇರುವ 'ದುರ್ಗಿ'ಯ ಗುಡಿ. ಕುರಿ ಕೋಣಗಳ  ಬಲಿಗಳೊಂದಿಗೆ ಭರ್ಜರಿಯಾಗಿ ವರ್ಷಕ್ಕೊಮ್ಮೆ ನಡೆಯುತಿದ್ದ ದುರ್ಗಿಯ ಜಾತ್ರೆಗೆ ಅವಳೂ  ಸಹ ಕೆಲವು ಸಲ ಹೋಗಿದ್ದಳು. ಆದರೆ ಅಂಜಲಿಗೂ ದುರ್ಗಿಯ ಗುಡಿಗೂ ಏನು ಸಂಬಂಧ? 
ಅಷ್ಟರಲ್ಲಿಯೇ ರಾಮುನ ಫೋನು ಒದರತೊಡಗಿತ್ತು. 
ಪೊಲೀಸ್ ಸ್ಟೇಷನ್ ನಿಂದ ಕರೆ: " ಸರ್ ಅಂಜಲಿಯ ಟೀಚರ್ ಮತ್ತು ಅಸಿಸ್ಟಂಟ್ ಇಬ್ಬರು ಸವದತ್ತಿಯಲ್ಲಿ  ಸಿಕ್ಕಿದ್ದಾರೆ  ವಿಚಾರಣೆ ಮುಂದುವರೆದಿದೆ; ಇಷ್ಟರಲ್ಲಿಯೇ ಎಲ್ಲಾ ಗೊತ್ತಾಗಬಹುದು, ನಿಮಗೆ ಮತ್ತೆ ಕರೆ ಮಾಡುತ್ತೇವೆ."
  " ದಯವಿಟ್ಟು ಕರೆ ಮಾಡಿ " ಎಂದು ಹೇಳಿದ ರಾಮುವಿನ ಮುಖದಲ್ಲಿ ಸ್ವಲ್ಪ ಭರವಸೆಯ ಚಿನ್ಹೆ ಮೂಡಿತ್ತು. 
 " ವಸುಂಧರೆ ನಿನಗೇನು ಗೊತ್ತಾಗಿದೆ ಎಂದು ನನಗೂ ಸ್ವಲ್ಪ ಹೇಳಿಬಿಡೆ " ಎಂದು ಹೆಂಡತಿಯನ್ನು ಕೇಳಿದ.
   "ಇಷ್ಟರಲ್ಲಿಯೇ ಎಲ್ಲಾ ಗೊತ್ತಾಗುತ್ತೆ , ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ " ಎಂದು ಅನ್ನುವಷ್ಟರಲ್ಲಿಯೇ ಅವರಿಬ್ಬರೂ ಮನೆಯನ್ನು ಸೇರಿದ್ದರು.
 
' ಅರಿಷಿಣ ಕುಂಕುಮ ------- ಅರಿಷಿಣ ಕುಂಕುಮ' ಮತ್ತೆ ಹುಚ್ಚಪ್ಪನ ಮಾತುಗಳು ವಸುಂಧರೆಯ ಕಿವಿಯಲ್ಲಿ .  ನೇರವಾಗಿ ದೇವರ ಕೋಣೆಗೆ ಹೋದಳು. ದೊಡ್ಡ ಕುಂಕುಮ ಮತ್ತು ಅರಿಷಿಣದ ಭರಣಿಗಳು ಕೋಣೆಯಿಂದ ಮಾಯವಾಗಿದ್ದವು. ವಸುಂಧರೆಯ ಮನಸಿನಲ್ಲಿ ಇದ್ದ ಸಂಶಯ ಇನ್ನಷ್ಟು ಗಟ್ಟಿಯಾಯಿತು . ಅತ್ತೆಯ ಕೋಣೆಯ ಬಾಗಿಲನ್ನು ತೆರೆದಳು . ಮಂಚದ ಮೇಲೆ ತೆರೆದ ಪುಸ್ತಕಗಳು ಹರಡಿದ್ದವು. ಕೆಲವು ಪುಟಗಳಲ್ಲಿ ಪೆನ್ನಿನಿಂದ ಮಾಡಿದ ಗುರುತುಗಳಿದ್ದವು , ಪುಟಗಳ ಅಂಚಿನಲ್ಲಿ ಅದೇನೋ ಟಿಪ್ಪಣಿಗಳಿದ್ದವು. ಅತ್ತೆಯು ಅದಾವುದೋ ' ತಲಾಷ್' ನಲ್ಲಿ ತೊಡಗಿದ್ದಳು ಎಂಬುವದರಲ್ಲಿ ಸಂಶಯವಿರಲಿಲ್ಲ.
 
ಇತ್ತೀಚಿನ ದಿನಗಳಲ್ಲಿ ಅತ್ತೆಯಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ವಸುಂಧರೆ  ಸೂಕ್ಷ್ಮವಾಗಿ ನಿರೀಕ್ಷಿಸುತಿದ್ದಳು. ಕೋಣೆಯಿಂದ ಹೊರಗೆ ಬರುವದು ಕಡಿಮೆ ---- ಅದೇನೋ ಓದುತ್ತಿದ್ದಳು. ಕೆಲವು  ಸಲ ತನ್ನ ಮನಸ್ಸಿನಲ್ಲಿಯೇ ಅದಾವುದೋ ಮಂತ್ರವನ್ನು ಜಪಿಸುತಿದ್ದಳು
 --- ಕೆಲವು ಸಲ ಯಾರದೋ ಜೊತೆಗೆ ತಾಸುಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿದ್ದಳು. ರಾಮುನ ಜೊತೆಗೂ ಮಾತು ಕಡಿಮೆಯಾಗಿತ್ತು . ವಸುಂಧರೆ ಅಂದಿದ್ದಳು " ಅತ್ತೆ ಯಾಕೋ ಇತ್ತೀಚಲಾಗಿ  ಒಂದ  ಥರಾ ಇದ್ದಾಳ."
 "ವಯಸ್ಸಿಗೆ ತಕ್ಕ ಬದಲಾವಣೆ ಇರಬಹುದು ಬಿಡು " ಎಂದು ರಾಮು ಮಾತು ಮರೆಸಿದ್ದ.  
ಎರಡು ದಿನಗಳ ಮುಂಚೆ ಅತ್ತೆ ಧಾರವಾಡದಲ್ಲಿರುವ ತನ್ನ ತಮ್ಮನ ಮನೆಗೆ ಹೋಗಿದ್ದಳು  ವಸುಂಧರೆ ಕೋಣೆಯ ಹೊರಗೆ ಬಂದು ರಾಮುನಿಗೆ ಹೇಳುತ್ತಿದ್ದಳು:
 " ರೀ -- ಅತ್ತೆಗೆ ತಕ್ಷಣವೇ  ಫೋನು ಮಾಡಿರಿ " 
" ಅವಳಿಗೆ ಫೋನು ಮಾಡಿದರೆ ಏನು ಸಿಗುತ್ತೆ?" ಎಂದ  ರಾಮು.
 " ರೀ -- ನಿಮಗ ಗೊತ್ತಾಗುದಿಲ್ಲ , ಜಲ್ದಿ ಫೋನ್  ಮಾಡರಿ." 
ಹೆಂಡತಿಯ ಬಲವಂತಿಕೆಗೆ ರಾಮು ತಾಯಿಗೆ ಫೋನು ಮಾಡಿದ, ಆದರೆ ತಾಯಿ ಮಾತ್ರ ಫೋನು ಎತ್ತಲಿಲ್ಲ. ರಾಮುನಿಗೆ ಯಾಕೋ ಭಯವಾಯಿತು. 
ಧಾರವಾಡದ ಮಾವನಿಗೆ ಫೋನು ಮಾಡಿದ . ಉತ್ತರವನ್ನು ಕೇಳಿ ಇನ್ನೂ ಭಯವಾಯಿತು . ಮಾವ ಹೇಳಿದ್ದ - ಅವಳು ಧಾರವಾಡಕ್ಕೆ ಬಂದೆ ಇಲ್ಲವೆಂದು. 
"ವಸುಂಧರಾ! ಅವ್ವ ಧಾರವಾಡಕ್ಕೆ ಹೋಗೆ ಇಲ್ಲವಂತೆ , ನನಗ್ಯಾಕೊ ಭಯ ಆಗತಾ ಇದೆ , ಅದೆಲ್ಲಿ ಹೋದಳೇನೋ?"
" ರೀ -- ನಿಮಗಿಂತ ಜಾಸ್ತಿ ಭಯ  ನನಗ ಆಗೈತಿ. " 
'ಅರೆ ರಾತ್ರಿ, ಟೈಮ್ ಇಲ್ಲ ' ಹುಚ್ಚಪ್ಪನ  ಕೊನೆಯ ಮಾತುಗಳು  ವಸುಂಧರೆ ಟೈಮ್ ನೋಡಿದಳು, ಆಗಲೇ ರಾತ್ರಿ ಒಂಭತ್ತು  ಹತ್ತಿರವಾಗುತ್ತಿತ್ತು . 
"ರೀ -- ಟೈಮ್ ಜಾಸ್ತಿ ಇಲ್ಲ ಬೇಗನೆ  ನಡೀರಿ." 
"ಎಲ್ಲಿಗೆ ಹೋಗಬೇಕೆ ? ನನಗೆ ಸ್ವಲ್ಪನೂ ಅರ್ಥ  ಆಗತಾ ಇಲ್ಲ."
"ನಿಮ್ಮ ಬೈಕ್ ತೆಗಿರಿ , ದುರ್ಗಿ ಗುಡಿಗೆ ಹೋಗಬೇಕು." 
"ನಿನಗೇನು ತಲೆ ಕೆಟ್ಟಿದೆ ಏನೇ ? ಈ ರಾತ್ರಿಯಲ್ಲಿ ದುರ್ಗಿ ಗುಡಿಯಲ್ಲಿ ಏನು ಮಾಡಬೇಕು?"
"ನನಗೆ ತಲೆ ಕೆಟ್ಟಿಲ್ಲ , ನಿಮ್ಮ ತಾಯಿಗೆ ತಲೆ  ಕೆಟ್ಟಿದೆ, ಸಮಯ  ಜಾಸ್ತಿ ಇಲ್ಲ ಜಲ್ದಿ ನಡೀರಿ." 
ಉತ್ತರವಿಲ್ಲದೆ ರಾಮು ತನ್ನ  ಬೈಕ್ ಅನ್ನು ಹೊರಗೆ  ತೆಗೆದ.  ಗಾಬರಿಯಲ್ಲಿದ್ದ ವಸುಂಧರೆಯನ್ನು ಕುಳ್ಳರಿಸಿಕೊಂಡು ದುರ್ಗಿಯ ಗುಡಿಯತ್ತ ಸಾಗಿದ. 

ಆಲದ ಕಟ್ಟೆಯ ಮೇಲೆ ಅರೆಬೆಳಕಿನಲ್ಲಿ ಕುಳಿತಿದ್ದ ಹುಚ್ಚಪ್ಪ ಇವರ ಬೈಕ್ ಅನ್ನು ಕಂಡು  ಒದರುತ್ತಿದ್ದ "ಸಿಗತಾಳ್  ---- ಸಿಗತಾಳ್ --- ಅಂಜಲಿ ಸಿಗತಾಳ್ " ಅರೆಬೆಳಕಿನ  ಅಡ್ಡ  ರೋಡಿನಲ್ಲಿ ಸರ್ಕಸ್ ಮಾಡುತ್ತ ಬೈಕು ಗುಡಿಯ ಹತ್ತಿರ ಬಂದಿತ್ತು  ವಸುಂಧರೆ ಬೈಕ್ ಅನ್ನು ದೂರವೇ ನಿಲ್ಲಿಸಲು ಹೇಳಿದಳು.

 ಸದ್ದಿಲ್ಲದೆ ನಿಧಾನವಾಗಿ ನಡೆಯುತ್ತಾ ಗುಡಿಯ ಕಡೆಗೆ ಸಾಗಿದರು. ಗುಡಿಯ ಮುಂದೆ ಬೆಂಕಿ ಉರಿಯುತ್ತಿತ್ತು, ಅದೇನೋ ಮಂತ್ರ ಪಠನೆ ಆಗುತಿತ್ತು, ನಡು ನಡುವೆ ಘಂಟೆಯ ಧ್ವನಿ ಕೇಳಿಸುತಿತ್ತು . ಇನ್ನೂ ಹತ್ತಿರ  ಬಂದಾಗ ಯಜ್ಞದ ಬೆಂಕಿಯ ಮುಂದೆ ಅತ್ತೆಯ ಮುಖ ಸ್ಪಷ್ಟವಾಗಿ ಕಾಣಿಸತೊಡಗಿತು. ಇನ್ನೊಂದು ಕಡೆ  ಒಬ್ಬ ವ್ಯಕ್ತಿ ಬೆಂಕಿಗೆ ತುಪ್ಪ ಸುರುವುತ್ತ ಮಂತ್ರ  ಪಠನೆ ಮಾಡುತಿದ್ದ  ಇಬ್ಬರ ನಡುವೆ ಅಂಜಲಿ ಕುಳಿತಿದ್ದಳು . ಆಕೆಯ ಮೈ ತುಂಬ ಅರಿಶಿಣ ಮತ್ತು ಕುಂಕುಮವನ್ನು ಸವರಿದ್ದರು . ಬಾಯಿಗೆ ಅರಿವೆಯನ್ನು ಕಟ್ಟಿದ್ದರು. 
ಇದೆಲ್ಲವನ್ನು ಕಂಡು ರೊಚ್ಚಿಗೆದ್ದ ವಸುಂಧರೆ  "ಸಾಕು ಮಾಡ್ರಿ-- ಸಾಕು ಮಾಡ್ರಿ -- ನಿಮ್ಮನ್ನು ಸುಮ್ಮನೆ ಬಿಡುಲ್ಲಾ" ಎಂದು ಅವರತ್ತ  ಧಾವಿಸಿದಳು.

ಹಠಾತನೆ ಇವರನ್ನು ಕಂಡು ಬೆಚ್ಚಿ ಬಿದ್ದ ಅವರಿಗೆ ಏನು ಮಾಡಬೇಕೆಂದು ತೋರಲಿಲ್ಲ. ಮಂತ್ರ ಪಠಿಸುತ್ತಿದ್ದ ವ್ಯಕ್ತಿ ಕತ್ತಲಲ್ಲಿ  ಓಡಲು ಪ್ರಾರಂಭಿಸಿದ, ರಾಮು ಅವನನ್ನು ಹಿಡಿಯಲು ಹಿಂಬಾಲಿಸಿದ್ದ. ಅಂಜಲಿ ಅಳುತ್ತ ಅಮ್ಮನನ್ನು ತಬ್ಬಿಕೊಂಡಳು. ಅತ್ತೆ ಹುಚ್ಚಿಯಂತೆ ಜೋಲಿ ಹೊಡಿಯುತಿದ್ದಳು, ಒಮ್ಮೆ ಗಟ್ಟಿಯಾಗಿ  ನಕ್ಕು ಮತ್ತೊಮ್ಮೆ ಜೋರಾಗಿ ಅಳುತೊಡಗಿದಳು. ಉರಿಯುವ ಜ್ವಾಲೆಯ ಮುಂದೆ ಕುಂಕುಮಿನಿಂದ ಅಲಂಕೃತವಾದ ಹರಿತವಾದ ಆಯುಧ ಥಳ ಥಳಿಸುತಿತ್ತು. ಅತ್ತೆಯ ಮೂಢ ನಂಬಿಕೆ ಮತ್ತು ಕಂದಾಚಾರದ ' ತಲಾಷ್ ' ವ್ಯರ್ಥವಾಗಿತ್ತು!
                       
  ( ಮುಗಿಯಿತು )
 ---ಶಿವ ಮೇಟಿ 

ಕಥೆ ಇಲ್ಲಿ ಮುಗಿದರು ಮಾತ್ರ ನಿಜ ಜೀವನದಲ್ಲಿ ನೀವು ಇಂಥ ಅಸಹ್ಯಯಕರ ಘಟನೆಯನ್ನು ಕೇಳುವದು ಮತ್ತು ಓದುವುದು ಎಂದೂ ಮುಗಿಯುವದಿಲ್ಲ!
ನಾಗಾಭರಣ ಅವರು ನವೆಂಬರ್ 2022ರಲ್ಲಿ ”YSKB ಯೊಡನೆ ಸಂವಾದ”ದಲ್ಲಿ ಬೆಂಗಳೂರು ನಾಗರತ್ನಮ್ಮನವರ ಹಾಡಿನ ತುಣುಕಿನ ನಂತರ ಅವರ ಕಥೆ ಹೇಳುತ್ತಿದ್ದಾರೆ …

ತಲಾಷ್ ( ಶೋಧ )

ಕಾಲ ಚಕ್ರ ಉರುಳಿ ಶತ ಶತಮಾನಗಳು ಗತಿಸಿದರೂ , ಆಧುನಿಕತೆಯ ಗಾಳಿಯು ಬೀಸಿದರೂ , ಸಮಾಜದಲ್ಲಿ ಹೆಣ್ಣಿನ ಶೋಷಣೆ ಮಾತ್ರ ಹಾಗೆಯೇ ಮುಂದುವರೆದಿರುವದು ಕಟು ಸತ್ಯ . ಜಗತ್ತಿನ ಮೂಲೆ ಮೂಲೆಗಳಲ್ಲಿ ಈ ಅನಿಷ್ಟ ಪದ್ಧತಿ ಇನ್ನೂ ಬೇರೂರಿರುವದು ದುಃಖಕರ ಸಂಗತಿ . ಬದಲಾವಣೆಯ ಅಲೆಯು ಭಾರತದ ಹಳ್ಳಿಗಳಲ್ಲಿ ಬಿಸುತ್ತಿದ್ದರೂ ಲಿಂಗ ಬೇಧ ಮಾತ್ರ ಕೊನೆ ಕಂಡಿಲ್ಲ . ಅಕ್ಷರವಂತರು , ಶ್ರೀಮಂತ ಕುಟುಂಬಗಳು ಇದಕ್ಕೇನು ಹೊರತಾಗಿಲ್ಲ .ಈ ದೇಶಕ್ಕೆ ಬರುವ ಮುನ್ನ ನಾನು ಕೆಲಸಮಾಡುತ್ತಿದ್ದ ಸ್ಥಳದಲ್ಲಿ ನಡೆದ ಒಂದು ಘಟನೆ ಇನ್ನೂ ಮನಸಿನಲ್ಲಿ ಹಾಗೆಯೇ ಉಳಿದಿದೆ . ಘಟನೆಗೆ ಅವಶ್ಯಕ ಬದಲಾವಣೆಗಳನ್ನು ಮಾಡಿ ಒಂದು ಕಥೆ ಬರೆಯಬೇಕು ಎಂದು ಅನಿಸಿತು ಅದಕ್ಕಾಗಿ ಬರೆದಿರುವೆ , ನಿಮ್ಮ ಮುಂದೆ ಇಟ್ಟಿರುವೆ. ದಯವಿಟ್ಟು ಸಮಯ ದೊರೆತಾಗ ಓದಿರಿ ಹಾಗೆಯೇ ಒಂದೆರಡು ಅಕ್ಷರದ ಅನಿಸಿಕೆಯನ್ನು ಗೀಚಲು ಮರೆಯದಿರಿ – (ಸಂಪಾದಕ)

ತಲಾಷ್ ( ಶೋಧ )

“ಅಮ್ಮ; ಅಂಜಲಿ ಇನ್ನೂ ಶಾಲೆಯಿಂದ ಮನೆಗೆ ಬಂದಿಲ್ಲ “
ಅಟ್ಟದ ಮೇಲಿದ್ದ ತಾಯಿಗೆ ದೊಡ್ಡ ಮಗಳು ಕೂಗಿ ಹೇಳುತ್ತಿದ್ದಳು. ಇಕ್ಕಿದ ಸಂಡಿಗೆಯನ್ನು ಆರು ಹಾಕುತ್ತಿದ್ದ ವಸುಂಧರೆ ಉತ್ತರಿಸಿದಳು ” ಇಷ್ಟರಲ್ಲಿಯೆ ಬರಬಹುದು ಬಿಡು …., ಆ ಬೀದಿಯ ನಾಯಿಯ ಜೊತೆಗೊ ಅಥವಾ ಹುಚ್ಚಪ್ಪನ ಜೊತೆಗೊ ಆಟವಾಡುತ್ತಿರಬಹುದು ” ಎಂದು. ಅಂಜಲಿ ಆರು ವರ್ಷದ ಮೂರನೆಯ ಮುದ್ದಿನ ಮಗಳು . ವಸುಂಧರೆಯ ಪಾಲಿಗಂತೂ ವಿಶೇಷ ಮಗಳು . ಮೊಮ್ಮಗ ಬೇಕೆಂದು ಹರ ಸಾಹಸ ಮಾಡುತ್ತಿರುವ ಅತ್ತೆಯ ನಿರೀಕ್ಷೆಗೆ ವಿರುದ್ಧವಾಗಿ ಹುಟ್ಟಿದವಳು . ಗಂಡನಿಗೂ ಮತ್ತೆ ‘ಹೆಣ್ಣಾಯಿತಲ್ಲ’ ಎಂಬ ನಿರಾಸೆಯಿದ್ದರೂ ಚಿಕ್ಕ ಮಗಳೆಂದು ಪ್ರೀತಿ ಜಾಸ್ತಿ . ಚೊಚ್ಚಲು ಮೊಮ್ಮಗು ಹೆಣ್ಣಾದಾಗ ಅತ್ತೆ, ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ . ‘ಇರಲಿ ಬಿಡು ಮುಂದಿನದಾದರೂ ಗಂಡಾದರೆ ಸಾಕು’ ಎಂದು ನಿಟ್ಟುಸಿರು ಬಿಟ್ಟಿದ್ದಳು . ಆದರೆ , ಎರಡನೆಯ ಮೊಮ್ಮಗೂ ಕೂಡ ಹೆಣ್ಣೆಂದು ಗೊತ್ತಾದಾಗ ಗರಬಡಿದವಳ ಹಾಗೆ ಕುಳಿತುಕೊಂಡಿದ್ದಳು . ಮಗನ ಮುಂದೆ ತನ್ನ ಮನದ ದುಗುಡನ್ನು ತೋರಿಕೊಂಡು;” ಏನಪ್ಪಾ ರಾಮು ! ಹೀಗೇಕಾಯಿತು …. ? ನನಗೆ ಇರುವವನು ನೀನೊಬ್ಬನೇ ಮಗ , ನಿನಗೆ ಗಂಡು ಮಗು ಆಗದಿದ್ದರೆ ಈಮನೆತನದ ವಂಶೋದ್ಧಾರನೆ ಹೇಗೆ ಸಾಧ್ಯ….. ? “ಎಂದು ಕಣ್ಣೀರು ಸುರಿಸಿದ್ದಳು . ರಾಮು ಅಷ್ಟೇ ಶಾಂತವಾಗಿಉತ್ತರಿಸಿದ್ದ ;” ಇರಲಿ ಬಿಡಮ್ಮ , ಅವರನ್ನೇ ಗಂಡು ಮಕ್ಕಳ ಹಾಗೆ ಬೆಳೆಸಿದರಾಯಿತು . ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳುಗಂಡಸರಿಗಿಂತ ಯಾವುದರಲ್ಲಿ ಕಡಿಮೆ ಇದ್ದಾರೆ…? . ತಂದೆ ತಾಯಿಗಳ ಮೇಲೆ ಅವರಿಗಿರುವಷ್ಟು ಪ್ರೀತಿ ಗಂಡುಮಕ್ಕಳಿಗೆ ಎಲ್ಲಿದೆ? ಯಾಕೆ ಹೀಗೆ ಮಕ್ಕಳಲ್ಲಿ ಭೇಧ ಭಾವ ಮಾಡ್ತಿಯಾ ?” ಎಂದು ಸಮಾಧಾನ ಹೇಳಿದ್ದ
” ನನ್ನ ಸಂಕಟ ನಿನಗೆ ಹೇಗೆ ಗೊತ್ತಾಗುತ್ತದೆ . ಪುರಾಣ , ವೇದಗಳಲ್ಲಿ ಹೇಳಿಲ್ಲವೇನೋ….’ ಗಂಡು ಮಗು ಇಲ್ಲದಿದ್ದರೆ
ಮೋಕ್ಷ ಸಾಧ್ಯವಿಲ್ಲವೆಂದು …’ . ಹೆಣ್ಣು ಎಂದಾದರು ಪರರ ಆಸ್ತಿ . ಇಷ್ಟೊಂದು ಪಿತ್ರಾರ್ಜಿತ ಆಸ್ತಿಯನ್ನು ಬೇರೆಯವರ
ಪಾಲು ಮಾಡಲು ನನಗೆ ಎಳ್ಳಷ್ಟೂ ಇಷ್ಟವಿಲ್ಲ “ ಎಂದು ಬೇಸರದಿಂದ ನುಡಿದಿದ್ದಳು.
” ಅಮ್ಮಾ, ಪುರಾಣ ವೇದಗಳಲ್ಲಿ ಹೆಣ್ಣು ಮಕ್ಕಳ ಕುರಿತು ಒಳ್ಳೆಯದನ್ನೂ ಹೇಳಿದ್ದಾರೆ . ಒಳ್ಳೆಯದನ್ನು ಆರಿಸಿಕೊಂಡು ಕೆಟ್ಟದ್ದನ್ನು ಬಿಟ್ಟರಾಯಿತು . ಸತ್ತ ಮೇಲೆ ಸ್ವರ್ಗ ನರಕ ಯಾರಿಗೆ ತಿಳಿದಿದೆ …?” ಎಂದು ತಾಯಿಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದ . ಆದರೆ ತಾಯಿಯು ತಾನೂ ಒಂದು ಹೆಣ್ಣು ಎಂಬುವದನ್ನು ಮರೆತು ಇದಕ್ಕೆ ಯಾವುದಕ್ಕೂ ಜಗ್ಗಿದಂತೆ ಕಾಣಿಸಿರಲಿಲ್ಲ. ಅದೊಂದು ದಿನ ಮನೆ ಕೆಲಸದ ಸುಬ್ಬಿ ವಸುಂಧರೆಗೆ ಹೇಳುತ್ತಿದ್ದಳು ” ನೋಡಮ್ಮ ನಮ್ಮ ಪಕ್ಕದ ಮನೆ ಅನುಸುಯಿಗೆ ಮಕ್ಕಳಾಗಲಿಲ್ಲ ಅಂತ ಅವಳ ಗಂಡ ಇನ್ನೊಂದು ಹೆಣ್ಣನ್ನ ಕಟ್ಟಿಕೊಂಡಾನ್ ….ಆದರ ಆರು ತಿಂಗಳಾದರೂ ಅದಕ್ಕೂ ಗರ್ಭ ತುಂಬಿಲ್ಲ …..ಅವಳ ಅತ್ತಿ ಇನ್ನ ಮುಂದ ಏನ್ ಮಾಡ್ತಾಳಂತ ಗೊತ್ತಿಲ್ಲ”
“ಅದೇನ್ ಹೊಸಾದ ಬಿಡ ಸುಬ್ಬಿ ….ರಾಮಾಯಣದ ಸೀತವ್ವನ ಹಿಡಕೊಂಡು ಇಲ್ಲಿವರೆಗೂ ಹೆಣ್ಣಿನ ಮ್ಯಾಲ ದಬ್ಬಾಳಿಕಿ
ನಡದ ಐತಿ … ಮಕ್ಕಳಾಗದಿದ್ದರೆ ‘ಬಂಜಿ ‘ ಎಂಬ ಪಟ್ಟಾ ಕಟ್ಟತಾರ , ಹೆಣ್ಣು ಹೆತ್ತರ ಗಂಡು ಹಡಿಯಲಿಲ್ಲ ಎಂದು
ಶಪಿಸತಾರ್ … ಗಂಡಸರು ಮಾತ್ರ ಏನೂ ತಪ್ಪಿಲ್ಲ ಎಂದು ಮೌನವಾಗಿರತಾರ್ ….ನಮ್ಮ ಅತ್ತಿಗೂ ಸ್ವಲ್ಪ ಹೇಳಿಬಿಡು “
ಅಂತ ಸುಬ್ಬಿಗೆ ಹೇಳಿದ್ದಳು . ಅತ್ತೆ ಮಾತು ಕೇಳಿಸಿಕೊಂಡರು ಏನು ಮಾತನಾಡಿರಲಿಲ್ಲ
ಮನೆಯಲ್ಲಿ ಅತ್ತೆಯ ವಿರುದ್ಧವಾಗಿ ಹೋಗುವ ಶಕ್ತಿ ಯಾರಿಗೂ ಇರಲಿಲ್ಲ . ರಾಮು , ಹೆಂಡತಿಯ ಮೇಲಿದ್ದ ಪ್ರೀತಿಯನ್ನ ಕಡೆಗಣಿಸಲಾಗದೆ , ತಾಯಿಯ ವಿರುದ್ಧ ಮಾತನಾಡುವ ಶಕ್ತಿಯಿಲ್ಲದೆ ತ್ರಿಶಂಕು ನರಕದಲ್ಲಿ ಸಿಕ್ಕಿಹಾಕಿಕೊಂಡಿದ್ದನು . ವಸುಂಧರೆ ಮತ್ತೆ ಗರ್ಭವತಿ ಎಂದು ಗೊತ್ತಾದಾಗ ಅತ್ತೆಗೆ ಸಂತೋಷವೂ ಆಗಿತ್ತು ಹಾಗೆಯೆ ಚಿಂತೆಯೂ ಮೂಡಿತ್ತು.
‘ದೇವರೆ ! ಈ ಸಾರಿಯಾದರೂ ನನ್ನ ಆಸೆಯನ್ನು ಪೂರೈಸು ಎಂದು ದೊಡ್ಡ ನಮಸ್ಕಾರವನ್ನು ಹಾಕಿದ್ದಳು’ , ತಕ್ಷಣವೇ
ಅವಳನ್ನು ತನಗೆ ಗೊತ್ತಿದ್ದ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದ್ದಳು . ಅಡ್ಡದಾರಿಯಲ್ಲಿ
ವೈದ್ಯರಿಂದ ಲಿಂಗ ಪರೀಕ್ಷೆಯೂ ಆಗಿತ್ತು . ಗಂಡು ಮಗು ಎಂಬ ಆಶ್ವಾಸನೆಯು ದೊರಕಿದಾಗ ಅವಳ ಆನಂದಕ್ಕೆ
ಪಾರವೇ ಇರಲಿಲ್ಲ . ಸೊಸೆಯನ್ನು ಅಪ್ಪಿ ಮುದ್ದಾಡಿದ್ದಳು, ‘ದೇವರು ಕೊನೆಗೂ ತನ್ನ ಮೇಲೆ ಕರುಣೆ ತೋರಿದನಲ್ಲಾ’
ಎಂದು ಸಂತೋಷದ ಉಸಿರನ್ನು ಬಿಟ್ಟಿದ್ದಳು. ಆದರೆ ಅತ್ತೆಗೆ ಗೊತ್ತಾಗಿರಲಿಲ್ಲ ‘ ತಾನೊಂದು ಬಗೆದರೆ,ದೈವ
ಇನ್ನೊಂದು ಬಗೆಯುವದೆಂದು’. ಅದೊಂದು ದಿನ ವಸುಂಧರೆಗೆ ಹೆರಿಗೆ ಆಯಿತು ಆದರೆ ಅವರೆಂದುಕೊಂಡಂತೆ ಗಂಡು ಮಗವಾಗಿರಲಿಲ್ಲ ಮತ್ತೆ ಇನ್ನೊಂದು ಹೆಣ್ಣು ಮಗುವಿನ ಆಗಮನವಾಗಿತ್ತು . ವೈಧ್ಯರ ಪರೀಕ್ಷೆ ಸುಳ್ಳಾಗಿತ್ತು. ಅತ್ತೆಯ ಪೂಜೆಗೆ ಯಾವ ದೇವರೂ ವರ ಕೊಟ್ಟಿರಲಿಲ್ಲ ಅದಷ್ಟೇ ಅಲ್ಲದೆ ಮಗು ‘ಮೂಲಾ ‘ ನಕ್ಷತ್ರದಲ್ಲಿ ಹುಟ್ಟಿತ್ತು . ಒಂದರಮೇಲೊಂದು ಆಘಾತವನ್ನು ಅನುಭವಿಸಿದ ಅತ್ತೆಯ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಿತ್ತು . ಮೂಲಾ ನಕ್ಷತ್ರದಲ್ಲಿ ಮಗು ಹುಟ್ಟಿದರೆ ತಂದೆಯ ಪ್ರಾಣಕ್ಕೆ ಅಪಾಯ ಎಂಬುದು ಬಹು ಜನರ ನಂಬಿಕೆ . ಅತ್ತೆಯೂ ಅದಕ್ಕೇನು
ಹೊರತಾಗಿರಲಿಲ್ಲ . ಈ ಅನಿಷ್ಟ ಮಗು ಏಕೆ ಈ ಮನೆಯಲ್ಲಿ ಹುಟ್ಟಿತೆಂದು ಪರಿತಪಿಸಿದ್ದಳು. ಮಗನ ಜೊತೆಗೆ ವಿಷಯವನ್ನು ಎತ್ತಿದಾಗ ಅವನೇನು ತಲೆಕೆಡಿಸಿಕೊಳ್ಳಲಿಲ್ಲ . ” ಮಗು ಮುದ್ದಾಗಿದೆಯಮ್ಮ! ಎತ್ತಿ ಮುದ್ದಾಡಿಬಿಡು. ಮೂಢನಂಬಿಕೆಗಳಿಗೆಲ್ಲ ಸುಮ್ಮನೆ ತಲೆ ಕೆಡಿಸಿಕೊಂಡು ಯಾಕೆ ನಿನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿ ಮತ್ತು ಮನೆಯ ನೆಮ್ಮದಿಯನ್ನೂ ಕೂಡಾ ಕೆಡಿಸುತ್ತಿ” ಅಂತ ಅವಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದನು . ಅಮ್ಮನ ಮನಸು ಅಷ್ಟು ಸುಲಭವಾಗಿ ಒಪ್ಪುವದಿಲ್ಲವೆಂದು ಅವನಿಗೆ ಗೊತ್ತಿತ್ತು. ಅತ್ತೆಯ ವರ್ತನೆಯಿಂದ ವಸುಂಧರೆಗೆ ರೋಷಿ ಹೋಗಿತ್ತು. ಇವಳೂ ಒಬ್ಬಳು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಭಾವನೆಗಳನ್ನು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರಮಾಡಿಕೊಂಡಿದ್ದಳು. ಅತ್ತೆಗೆ ಎದುರಾಗಿ ಎಂದೂ ಮಾತನಾಡದವಳು ಅದೊಂದು ದಿನ ಘಟ್ಟಿ ಮನಸಿನಿಂದ ಹೇಳಿಬಿಟ್ಟಿದ್ದಳು . ” ನೋಡು ಅತ್ತೆಮ್ಮ…..ನಿಮ್ಮ ಗಂಡು ಮೊಮ್ಮಗನ ಆಸೆಯಿಂದ ನನಗೆ ಮತ್ತೆ ಮಕ್ಕಳನ್ನು ಹೆರಲು ಹೇಳಬೇಡಿ . ನಾನೇನು ಮಕ್ಕಳನ್ನು ಹೆರುವ ಫ್ಯಾಕ್ಟರಿ ಅಲ್ಲ . ಇದ್ದ ಮೂವರು ಮಕ್ಕಳನ್ನು ಚನ್ನಾಗಿ ಬೆಳೆಸುವ ಜವಾಬ್ಧಾರಿ ನನಗೆ ಸಾಕು. ಗರ್ಭದಲ್ಲಿ ಜೀವ ಮೂಡುವದಕ್ಕೆ ಗಂಡ ಹೆಂಡತಿ ಹೇಗೆ ಕಾರಣರೊ……ಹಾಗೆಯೇ ಮೂಡಿದ ಜೀವ ಹೆಣ್ಣು ಅಥವಾ ಗಂಡು ಎಂದು ಮಾರ್ಪಡಲು ಅವರಿಬ್ಬರೂ ಅಷ್ಟೆ ಸಮಪಾಲರು ಎಂಬುವದನ್ನು ಮರೆಯಬೇಡಿರಿ“ ಎಂದಿದ್ದಳು . ಸೊಸೆಯ ಈ ಮಾತಿನಿಂದ ಆಘಾತವಾಗಿದ್ದರು ಏನನ್ನು ತಿರುಗಿ ಮಾತನಾಡದೆ ಸುಮ್ಮನಾಗಿದ್ದಳು .
ತನ್ನ ಮನಸಿನ ವೇದನೆಯನ್ನು , ವಸುಂಧರೆ ಗಂಡನಿಗೂ ಮುಟ್ಟಿಸಿದ್ದಳು” ನನಗೆ ಇನ್ನು ಮುಂದೆ ಮಕ್ಕಳು ಬೇಡ
….ನಿಮಗೇನಾದರೂ ನಿಮ್ಮ ತಾಯಿಯ ಹಾಗೆ ಗಂಡುಮಗುವಿನ ಆಸೆಯಿದ್ದರೆ ……? ಇನ್ನೊಂದು ಮದುವೆಯನ್ನು
ಮಾಡಿಕೊಳ್ಳಿ …ನನಗೇನೂ ತೊಂದರೆ ಇಲ್ಲ . ನನ್ನನ್ನು ನನ್ನ ಪಾಲಿಗೆ ಬಿಟ್ಟುಬಿಡಿ ” ಎಂದು . ವಸುಂಧರೆಯನ್ನು
ಸಮಾಧಾನಪಡಿಸಿ ಅವನು ಹೇಳಿದ್ದ ” ಇದಕ್ಕೆಲ್ಲ ಯಾಕೆ ತಲೆಕೆಡಿಸಿಕೊಳ್ಳುತ್ತೀಯ ಸ್ವಲ್ಪ ಸಮಯದ ನಂತರ ಎಲ್ಲ
ಸರಿಯಾಗುತ್ತದೆ ಬಿಡು ” ಎಂದು .
ಕಾಲಚಕ್ರ ತಿರುಗುತ್ತಿತ್ತು , ಅಂಜಲಿ ಅಷ್ಟರಲ್ಲಿಯೇ ಆರು ವಸಂತಗಳನ್ನು ಕಳೆದಿದ್ದಳು . ತಂದೆ ತಾಯಿಯರ ಇಚ್ಛೆಯಂತೆ
ಮನೆಯಿಂದ ಸುಮಾರು ಮೂರು ಮೈಲು ದೂರವಿದ್ದ ಇಂಗ್ಲಿಷ್ ಶಾಲೆಗೆ ಪಾದಾರ್ಪಣೆ ಮಾಡಿದ್ದಳು . ಮನೆಯಿಂದ
ನೂರು ಮೀಟರ್ ನಡೆದರೆ ಆಲದ ಮರದ ಕಟ್ಟೆ . ಅಲ್ಲಿಗೆ ಶಾಲೆಯ ವಾಹನ ಬಂದು ಮಕ್ಕಳನ್ನು ಕರೆದೊಯ್ಯುತ್ತಿತ್ತು .
ಅಂಜಲಿಗೆ ಪ್ರಾಣಿಗಳನ್ನು ಕಂಡರೆ ತುಂಬಾ ಅನುಕಂಪ , ಮನೆಯ ಮುಂದೆ ಮಲಗುತ್ತಿದ್ದ ಬೀದಿಯ ನಾಯಿಗೆ ದಿನಾಲೂಊಟವನ್ನು ಹಾಕಿ ಸ್ನೇಹವನ್ನು ಗಿಟ್ಟಿಸಿದ್ದಳು. ತಿಂದ ಅನ್ನದ ಋಣ ಎಂಬುವಂತೆ ದಿನಾಲೂ ಮನೆಯಿಂದ ಆಲದ ಕಟ್ಟೆಯವರೆಗೂ ಅದು ಅವಳನ್ನು ಹಿಂಬಾಲಿಸುತ್ತಿತ್ತು ಮತ್ತು ಸಾಯಂಕಾಲ ಅವಳ ಬರುವಿಕೆಗಾಗಿ ಕಟ್ಟೆಯ ಹತ್ತಿರ ಕಾಯುತ್ತಿತ್ತು .
ಸಾಯಂಕಾಲ ಐದು ಘಂಟೆಯಾದರೂ ಅಂಜಲಿ ಮನೆ ಸೇರದಿದ್ದಾಗ ವಸುಂಧರೆಗೆ ಚಿಂತೆಯಾಗತೊಡಗಿತು….. ಆಲದ
ಕಟ್ಟೆಯವರೆಗೂ ಹೋಗಿನೋಡೊಣವೆಂದು ಮನೆಯ ಹೊರಗೆ ಬಂದಳು . ಬಾಗಿಲಿನ ಎದುರು ಬೀದಿ ನಾಯಿ
ಒಂಟಿಯಾಗಿ ಜೋರಾಗಿ ಬೊಗಳುತ್ತ ನಿಂತಿತ್ತು ಆದರೆ ಅಂಜಲಿ ಇರಲಿಲ್ಲ . ನಾಯಿಯು ಏನೋ ಸಂದೇಶವನ್ನು
ಹೇಳಲು ಪ್ರಯತ್ನಿಸುತಿತ್ತು
ವಸುಂಧರೆಗೆ ಯಾಕೋ ಭಯವಾಗತೊಡಗಿತು . ಗಂಡನಿಗೆ ಫೋನು ಮಾಡಿ ತಕ್ಷಣವೇ ಮನೆಗೆ ಬರಲು ಹೇಳಿ ,
ನಾಯಿಯ ಜೊತೆಗೆ ಆಲದ ಮರದ ಕಟ್ಟೆಯಕಡೆಗೆ ನಡೆದಳು .
( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು )