—————————————————————————————————————
ಹದಿ ಹರೆಯದ ಅವಳ ಮನಸಿನಲ್ಲಿ ಸಾವಿರಾರು ಕನಸುಗಳ ಬುಗ್ಗೆಯಿತ್ತು —– ಬದುಕಿನ ಪ್ರತಿ ಕ್ಷಣಗಳನ್ನು ಸವಿಯುವ ಆಸೆಯಿತ್ತು. ಹಾಗೆಯೇ, ಯಾರೋ ಇಟ್ಟ ಹೆಸರಿತ್ತು —– ಹಣೆಯ ಮೇಲೆ ಅನಾಥೆಯಂಬ ಪಟ್ಟವಿತ್ತು —- ಸಮಾಜ ಬೀಸಿದ ಕಟ್ಟಳೆಯ ಪರದೆಯಿತ್ತು. ಈ ವಾರದ ಸಂಚಿಕೆಯಲ್ಲಿ ನನ್ನದೊಂದು ಕಥೆ. ಸಾದ್ಯವಾದರೆ ಓದಿ, ತಮ್ಮ ಅಭಿಪ್ರಾಯ ತಿಳಿಸಿ
– ಇಂತಿ ಸಂಪಾದಕ
—————————————————————————————————————–
ಕಂಪ್ಯೂಟರ ಮಹಾಶಯನ ಉದರದಲ್ಲಿ ಅಡಗಿದ್ದ ಕಡತಗಳ ರಾಶಿಯನ್ನು, ಬೇಗನೆ ಮುಗಿಸಬೇಕೆಂದು ಊರ್ಮಿ ಹರಸಹಾಸವನ್ನು ಮಾಡುತ್ತಿದ್ದಳು. ಕೀ ಬೋರ್ಡಿನ ಕಟ ಕಟ ಶಬ್ದದ ನಡುವೆ, ಸ್ಥಬ್ಧ ಸ್ಥಿತಿಯಲ್ಲಿ ಇಟ್ಟಿದ್ದ ಮೊಬೈಲ್ ಫೋನು ಒಂದೇ ಸಮನೆ ಕಂಪನ ಮಾಡತೊಡಗಿತ್ತು. ತಂಗಮ್ಮನಿಂದ ಒಂದರ ಮೇಲೊಂದು
ಕರೆಗಳು. ʼಈ ತಂಗಮ್ಮನಿಗೆ ಯಾವಾಗ ಕರೆ ಮಾಡಬೇಕೆಂದು ಗೊತ್ತಿಲ್ಲʼ ಎಂದು ಮನಸ್ಸಿನಲ್ಲಿಯೇ ಕೋಪಿಸಿಕೊಂಡು ಮುಂದಿನ ಕಡತಕ್ಕೆ ಕೈ ಹಾಕಿದ್ದಳು. ಪಕ್ಕದ ಕುರ್ಚಿಯಲ್ಲಿದ್ದ ಸಹದ್ಯೋಗಿ ಶ್ರೀನಿವಾಸ ಕೊನೆಗೂ ಮೌನ ಮುರಿದ “ಊರ್ಮಿಳಾ, ಫೋನು ಎತ್ತಿ ಮಾತನಾಡಿ ಬಿಡಿ, ಆಮೇಲೆ ನೆಮ್ಮದಿಯಿಂದ ಕೆಲಸವನ್ನು ಮುಂದುವರೆಸಬಹುದಲ್ಲ?” ಅವನಿಗೆ ತೊಂದರೆಯಾಗುತ್ತಿದ್ದಿದ್ದನ್ನು ಪರೋಕ್ಷವಾಗಿ ತನಗೆ ಹೇಳಿರುವುದು ಊರ್ಮಿಗೆ ಅರ್ಥವಾಗದೆ ಇರಲಿಲ್ಲ. ಕೆಲಸದ ಕೋಣೆಯಿಂದ ಹೊರಗೆ ಬಂದು ತಂಗಮ್ಮನಿಗೊಂದು ಕರೆ ಮಾಡಿದಳು.
“ಏನು ತಂಗಮ್ಮ ಒಂದೇ ಸಮನ ಫೋನು ಮಾಡ್ತಾ ಇದ್ದಿ. ನಾನು ಕೆಲಸದ ಮ್ಯಾಲ ಇದ್ದೀನಿ ಅಂತ ಗೊತ್ತಲ್ಲ?”
“ಇರಲಿ ಬಿಡೆ! ಕೆಲಸ ಇದ್ದೆ ಇರತೈತಿ, ನಾಳೆ ನಿನ್ನ ಜನಮ ದಿನ ಎಲ್ಲಿ ಮರ್ತ ಹೋಗಿ ಅಂತ ಫೋನ್ ಮಾಡೀನಿ.”
ತಂಗಮ್ಮನಿಗೆ ತನ್ನ ಮೇಲಿರುವ ಪ್ರೀತಿ ಅಭಿಮಾನ ಕಂಡು, ಬಂದ ಸಿಟ್ಟು ಹಾಗೆಯೇ ಇಳಿದು ಹೋಯಿತು.
“ಅದೇನು ಮಹಾ ಬಿಡು ತಂಗಮ್ಮ! ಇನ್ನೊಂದು ವರ್ಷ ಮುದಿತನಕ ಹತ್ತಿರ ಆಗಿದೀನಿ, ಮತ್ತೊಂದು ವರ್ಷದ ಅನಾಥ ಜೀವನಾ ಕಳೆದಿದ್ದೀನಿ ಅನ್ನುವದಕ್ಕೆ ಇದೊಂದು ಗುರ್ತ್ ಹೌದಲ್ಲೋ? ಹುಟ್ಟಿಸಿದವರೇ ಗೊತ್ತಿಲ್ಲದಾಗ ಹುಟ್ಟಿದ ದಿನಾ ಎಲ್ಲಿಂದ ಬಂತು?”
“ಹುಚ್ಚು ಹುಡುಗಿ! ಏನೇನೆಲ್ಲಾ ಮಾತಾಡಬ್ಯಾಡ, ಡಾಕ್ಟರಮ್ಮನೂ ಬರಾಕತ್ತಾಳ, ಬೆಳಿಗ್ಗೆ ಬಂದು ಬಿಡು.”
“ಆಗಲಿ ಬಿಡಮ್ಮ ಬರ್ತೀನಿ” ಎಂದು ಹೇಳಿ ಕೋಣೆಯೊಳಗೆ ಬಂದು ಕೆಲಸದಲ್ಲಿ ಮಗ್ನವಾದವಳಿಗೆ, ಸಂಜೆ ಆರು ಗಂಟೆಯಾಗಿದ್ದು ಗೊತ್ತೇ ಆಗಿರಲಿಲ್ಲ. ಜವಾನನು ಆಫೀಸಿನ ಕೀಲಿ ಜಡೆಯಲು ತಯಾರಾಗಿದ್ದ.
ಬೆಳಿಗಿನಿಂದ ಉರಿದಿದ್ದ ಬಿಸಿಲು ಸಂಜೆಯ ಅಪ್ಪುಗಿಗೆ ತಯಾರಾಗಿದ್ದರಿಂದ ರಸ್ತೆಯ ಮೇಲೆ ಸ್ವಲ್ಪ ತಂಗಾಳಿಯ ಸೋಂಪು ಚೆಲ್ಲಿತ್ತು. ಮಹಡಿಯ ಮೆಟ್ಟಿಲಗಳನ್ನು ಇಳಿಯುವಾಗ, ಊರ್ಮಿಯ ಮನಸು ಹೇಳಿತು ʼಕೆಲಸ ಸೇರಿ ಸಂಪಾದಿಸಲು ಪ್ರಾರಂಭಿಸಿದ ಮೇಲೆ ಬಂದಿರುವ ಮೊದಲು ಜನುಮ ದಿನ, ಹಾಗೆಯೇ ಬರಿಗಯ್ಯಲ್ಲಿ ಹೋಗುವದು ಸರಿಯೇ?’ ಕೊಪ್ಪಿಕರ ರಸ್ತೆಯಲ್ಲಿದ್ದ ಅಂಗಡಿಗೆ ಹೋಗಿ ಡಾಕ್ಟರಮ್ಮನಿಗೊಂದು ಗಿಫ್ಟ್ ಕಾರ್ಡು, ತಂಗಮ್ಮನಿಗೊಂದು ಸೀರೆ ಮತ್ತು ಸ್ವಲ್ಪ ಸಿಹಿ ಕಟ್ಟಿಸಿಕೊಂಡು ಬಸ್ ನಿಲ್ದಾಣದತ್ತ ನಡೆದಳು.
ನಿಲ್ಲಲೂ ಜಾಗವಿಲ್ಲದಸ್ಟು ಕಿಕ್ಕಿರಿದು ತುಂಬಿದ್ದ ಬಸ್ಸು ಉಣಕಲ್ ಕೆರೆ ದಾಟಿ ವರ್ಕಿಂಗ್ ವಿಮೆನ್ ಹಾಸ್ಟೆಲಿನ ಹತ್ತಿರ ಬಂದು ನಿಂತಾಗ ರಾತ್ರಿ ಎಂಟು ಗಂಟೆಯಾಗಿತ್ತು. ಇನ್ನೇನು ಹಾಸ್ಟೆಲಿನ ಬಾಗಿಲು ಮುಚ್ಚಿತೆಂಬ ಭಯದಿಂದ ಬೇಗನೆ ನಡೆದು ಕೋಣೆಯನ್ನು ಸೇರಿಕೊಂಡಳು. ಯಾಕೋ ದಣಿದ ದೇಹಕ್ಕೆ ಊಟ ಬೇಡ ನಿದ್ರೆ ಬೇಕೆಂದೆನಿಸಿತು, ಹಾಗೆಯೆ ಹಾಸಿಗೆಯ ಮೇಲೆ ಒರಗಿದಳು. ಹೆದ್ದಾರಿಯ ಮೇಲೆ ಸುಯ್ಯೆಂದು ಓಡಾಡುತ್ತಿದ್ದ ವಾಹನಗಳು, ಪಕ್ಕದ ಕೊನೆಯಲ್ಲಿ
ನಡೆದಿದ್ದ ಜೋರಾದ ಸಂಭಾಷಣೆ, ದೂರದ ಕೋಣೆಯಿಂದ ಕೇಳಿಬರುತ್ತಿದ್ದ ಹಳೆಯ ಚಿತ್ರ ಗೀತೆಗಳ ಗದ್ದಲಗಳಲ್ಲಿ ಸರಿಯಾಗಿ ನಿದ್ರೆ ಬಾರದಾಯಿತು. ಎದ್ದು ಏನಾದರು ಹರಟೆ ಹೊಡೆಯಬೇಕೆಂದರೆ ವಿಜಿ ಕೂಡ ಇಲ್ಲ. ಹಾಸ್ಟೆಲ್ ಸೇರಿದ ಆರು ತಿಂಗಳಿನಿಂದ ಅವಳೇ ರೂಮ್ ಮೇಟ್. ವಾರದ ಕೊನೆಗೆ ಆಗಾಗ್ಯೆ ಅವಳು ಸಿಗುತ್ತಲೇ ಇರಲಿಲ್ಲ. ಪಕ್ಕದ ಹಳ್ಳಿಯಲ್ಲಿದ್ದ ತನ್ನ ಮನೆಗೆ ಹೋಗುವದು ವಾಡಿಕೆಯಾಗಿತ್ತು. ಅಷ್ಟರಲ್ಲಿಯೇ ಫೋನು ಗುಣ ಗುಣಿಸತೊಡಗಿತು. ಡಾಕ್ಟರಮ್ಮನಿಂದ ಕರೆ,
“ಊರ್ಮಿ ನಾಳೆ ಬೆಳಿಗ್ಗೆ ಜಲ್ದಿ ಬಂದ ಬಿಡು.”
ಹುಟ್ಟು ಹಬ್ಬದ ಹುರುಪು ನನಗಿಂತಲೂ ಇವರಿಗೇನೇ ಜಾಸ್ತಿಯಾಗಿದೆ ಎಂದುಕೊಂಡು,
“ಆಗ್ಲಿ ಬಿಡಮ್ಮಾ, ಬರ್ತೀನಿ” ಅಂತ ಫೋನಿಟ್ಟ ಅವಳ ಮನಸಿನಲ್ಲಿ ಹಳೆಯ ನೆನಪುಗಳ ಪುಟಗಳು ತೆರೆಯತೊಡಗಿದವು.
ಊರ ಹೊರಗಿನ ಪ್ರಶಾಂತತೆಯಲ್ಲಿದ್ದ ಆ ಚಿಕ್ಕ ಪ್ರೇರಣ ಅನಾಥಾಶ್ರಮ …. ಆಶ್ರಮದೊಳಗಿದ್ದ ಆರು ಕೋಣೆಗಳು …. ದಿನವೆಲ್ಲ ಕೋಣೆಯ ಮೂಲೆಯಲ್ಲಿ ವಿಶ್ರಾಮ ಪಡೆದು, ರಾತ್ರಿ ಹರಿಹಾಸುತ್ತಿದ್ದ ಬಣ್ಣ ಬಣ್ಣದ ಕಡ್ಡಿ ಚಾಪೆಗಳು …. ಪಕ್ಕದಲಿಯೇ ಇದ್ದ ಶಾಲೆ …. ಆಗಾಗ್ಯೆ ತಮ್ಮ ಹುಟ್ಟಬ್ಬವನ್ನು ಆಶ್ರಮದಲ್ಲಿ ಆಚರಿಸಿಕೊಂಡು, ಕನಿಕರದಿಂದ ಏನೋ ಹಂಚಿ ಹೋಗುತ್ತಿದ್ದ ಜನರು …. ಅವರು ಕೊಟ್ಟಿದ್ದನ್ನು ಸ್ವೀಕರಿಸಿ ಆನಂದದ ತೆರೆಯಲ್ಲಿ ತೇಲಿಹೋಗುತ್ತಿದ್ದ ಹುಡುಗಿಯರು …. ಎಲ್ಲಿಂದಲೋ ಬಂದು, ಕೆಲವು ದಿನ ಆಶ್ರಮದಲ್ಲಿದ್ದಾದ ಮೇಲೆ ಹೊಸ ತಂದೆ ತಾಯಿಯರನ್ನು ಪಡೆದು ಮಾಯವಾಗುತ್ತಿದ್ದ ಪುಟಾಣಿ ಕೂಸುಗಳು …. ಆಶ್ರಮದ ಹುಡುಗಿಯರ ಕೈ ಕೆಸರಿನ ಪ್ರತೀಕವಾದ ಹೊರಗಿನ ಹೂದೋಟ …. ಹೂದೋಟದಲ್ಲಿ ಅರಳುತ್ತಿದ್ದ ಬಣ್ಣ ಬಣ್ಣದ ಗುಲಾಬಿಗಳು …. ಆತ್ಮೀಯ ಸಂಗಾತಿಯರಾಗಿದ್ದ ವೇಣಿ , ರಾಜಿ , ರಾಣಿ …. ಕಷ್ಟದಲ್ಲಿದ್ದವರಿಗೆ ಕಣ್ಣೀರು ಸುರಿಸಿ, ಸಹಾಯದ ಬುಗ್ಗೆಯಾಗಿದ್ದ ಡಾಕ್ಟರಮ್ಮ …. ಗೆಳತಿ, ತಾಯಿ, ತಂದೆ ಎಲ್ಲ ಆಗಿದ್ದ ತಂಗಮ್ಮ …. ಒಂದೇ? ಎರಡೇ? ಆ ಕೋಣೆ ತುಂಬುವಷ್ಟು ನೆನಪುಗಳು ಉಕ್ಕಿಬರತೊಡಗಿದ್ದವು.
ತಂಗಮ್ಮನ ನೆನಪಿನೊಂದಿಗೆ ಥಟ್ಟನೆ ಎದ್ದು ಕುಳಿತಳು. ತಿರುಗುತ್ತಿದ್ದ ಫ್ಯಾನ್ ಸೆಖೆ ನೀಗುವದರಲ್ಲಿ ವಿಫಲವಾಗಿದ್ದರಿಂದ, ಮುಖಕ್ಕೆ ಸ್ವಲ್ಪ ತಣ್ಣೀರು ಚಿಮುಕಿಸಿಕೊಂಡು ಕಿಡಕಿಯನ್ನು ತೆರೆದಾಗ, ಹೊಸ ಗಾಳಿಯ ಸ್ಪರ್ಶದಿಂದ ಮೈಗೆ ಸ್ವಲ್ಪ ಹಿತವೆನಿಸಿತು. ತಾನೊಬ್ಬ ಅನಾಥೆಯಾಗಿ ಕೊಡಗಿನಿಂದ ಬಂದು, ತನ್ನ ಬದುಕನ್ನು ಆಶ್ರಮದಲ್ಲಿಯೇ ಕಟ್ಟಿಕೊಂಡು, ಕಳೆದ ಇಪ್ಪತ್ತೈದು ವರುಷಗಳಿಂದ ಅದೆಷ್ಟೋ ಅನಾಥ ಮಕ್ಕಳ ಬದುಕನ್ನು ಕಟ್ಟಿದವಳು ತಂಗಮ್ಮ. ಅದರಲ್ಲೂ ಇವಳನ್ನು ಕಂಡರೆ ಯಾಕೋ ವಿಪರೀತ ಪ್ರೀತಿ. ರಾತ್ರಿ ಹನ್ನೊಂದು ಗಂಟೆಯೆಂದು ಗಡಿಯಾರ ಶಬ್ದಮಾಡುತ್ತಿತ್ತು. ನಾಳೆ ಬೇಗನೆ ಎದ್ದೇಳಬೇಕು, ಈಗಲೇ ಎಲ್ಲವನ್ನು ತಯಾರಿ ಮಾಡಿ ಇಟ್ಟರೆ ಒಳ್ಳೆಯದೆಂದುಕೊಂಡು, ಡಾಕ್ಟರಮ್ಮನಿಗೊಂದು ಶುಭಾಶಯ ಪತ್ರವನ್ನು ಬರೆಯಲು ಕುಳಿತಳು. ಪ್ರೀತಿಯ ಡಾಕ್ಟರಮ್ಮ — ತನಗೆ ಗೊತ್ತಿದ್ದರೂ, ಆಶ್ರಮದಲ್ಲಿದ್ದವರಿಗ್ಯಾರಿಗೂ ಅವರ ಹೆಸರು ಗೊತ್ತಿಲ್ಲ ಎಂದು ಅನಿಸುತ್ತಿತ್ತು. ಅಲ್ಲಿದ್ದವರೆಲ್ಲರಿಗೂ ಅವರು ಬರೀ ಡಾಕ್ಟರಮ್ಮ ಮಾತ್ರ. ತಂಗಮ್ಮ ಅವರ ಬಗ್ಗೆ ಆಗಾಗ್ಯೆ ಹೇಳುತ್ತಿದ್ದದ್ದು ನೆನಪು. ರಾಜಕಾರಿಣಿಯಾಗಿದ್ದ ಡಾಕ್ಟರಮ್ಮನ ತಂದೆಯೇ ಈ ಆಶ್ರಮವನ್ನು ಸ್ಥಾಪಿಸಿದ್ದರಂತೆ, ಡಾಕ್ಟರಮ್ಮ ಬಹಳೇ ಶ್ರೀಮಂತರಂತೆ, ಆಶ್ರಮದ ಖರ್ಚು ವೆಚ್ಚವನ್ನೆಲ್ಲ ಅವರೇ ಭರಿಸುತ್ತಾರಂತೆ. ʼಅವರೆಂತ ಕರುಣಾಮಯಿ! ಯಾವುದೊ ಕಾರಣಗಳಿಂದ, ಯಾರೋ ಬೀಸಾಕಿ ಹೋದ ಜೀವಗಳನ್ನು ಕಂಡರೆ ಅವರಿಗೆಂಥ ಪ್ರೀತಿ. ಅವರನ್ನೆಲ್ಲ ಸಾಕಿ ಸಲುಹಿ, ವಿದ್ಯಾಭ್ಯಾಸ ಕೊಡಿಸಿ, ಬದುಕಿನ ದಡವನ್ನು ಸೇರಿಸಿ ಸಂತೋಷವನ್ನು ಪಡುವ ಅವರಿಗೆ ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದಲ್ಲವೇ? ಹುಟ್ಟಿದ ದಿನವೇ ಗೊತ್ತಿಲ್ಲದ ನಮ್ಮಂತ ಅನಾಥರಿಗೆ ತಾವು ಹುಟ್ಟಿದ ದಿನವನ್ನು ಕೊಟ್ಟು ಆಚರಿಸುವ ಸಂಭ್ರಮಕ್ಕೆ ಏನೆಂದು ಕರೆಯಬೇಕು? ಯಾವುದೊ ಜನ್ಮದಲ್ಲಿ ನಮಗೆಲ್ಲ ತಾಯಿಯಾಗಿರಬಹುದೇ?ʼ ಎಂದು ಊರ್ಮಿ ಅವರ ಬಗ್ಗೆ ಎಷ್ಟೋ ಸಲ ಮನಸ್ಸಿನಲ್ಲಿಯೇ ಅಂದುಕೊಂಡಿದ್ದಳು. ಆದರೆ ಅವರೇಕೆ ಹೀಗೆ ಮಾಡುತ್ತಾರೆ? ಎಂಬುವುದು ಮಾತ್ರ ಅವಳಿಗೆ ಇನ್ನೂ ಬಿಡಿಸದ ಒಗಟಾಗಿತ್ತು. ಅದೆಷ್ಟೋ ಸಲ ತಂಗಮ್ಮನನ್ನು ಕೇಳಿದರೂ ಉತ್ತರ ಸಿಕ್ಕಿರಲಿಲ್ಲ. ಮತ್ತೊಮ್ಮೆ ಉತ್ತರ ಹುಡುಕುವ ಪ್ರಯತ್ನದಲ್ಲಿ ನಿದ್ರೆ ಬಂದಾಗಿತ್ತು.
ಬೆಳಿಗ್ಗೆ ಆಶ್ರಮವನ್ನು ಸೇರಿದಾಗ ಎಂಟು ಗಂಟೆ. ಬಾಗಿಲಲ್ಲೇ ಕಾಯುತ್ತಿದ್ದಳು ತಂಗಮ್ಮ. “ಇದೇನೇ ಎಷ್ಟ ಸೊರಗಿ
ಹೋಗಿದಿಯಲ್ಲ” ಎಂಬ ಮಾತಿನಿಂದಲೇ ಸ್ವಾಗತ ಮಾಡಿಕೊಂಡಳು.
“ನಿನ್ನನ್ನು ನೋಡಿ ಬಹಳ ದಿನಗಳಾಯಿತಲ್ಲ ಅದಕ್ಕ ಸೊರಗಿದೀನಿ” ಎಂದು ನಕ್ಕಳು ಊರ್ಮಿ.
ಯಾಕೋ ಏನೋ ಆಶ್ರಮವೆಲ್ಲ ಬದಲಾದಂತೆ ಅನಿಸತೊಡಗಿತ್ತು. ವೇಣಿ ರಾಣಿ ಎತ್ತರವಾಗಿ ಬೆಳೆದಂತೆ, ತೋಟದ ಬಳ್ಳಿಗಳು ನೀರಿಲ್ಲದೇ ಬಾಡಿದಂತೆ, ತಂಗಮ್ಮ ಮುದುಕಿಯಾಗಿರುವಂತೆ, ಮೂಲೆಯಲ್ಲಿದ್ದ ಚಾಪೆಗಳ ಬಣ್ಣ ಮಾಸಿದಂತೆ ಎನಿಸಿತು. ತನ್ನ ಕಲ್ಪನೆ ಇರಬಹುದೆಂದು ಯೋಚಿಸುವಷ್ಟರಲ್ಲಿಯೇ ಡಾಕ್ಟರಮ್ಮ ಬಂದಾಗಿತ್ತು. ಯಥಾ ಪ್ರಕಾರವಾಗಿ ನಡೆದ ಆಚರಣೆಯಲ್ಲಿ, ಜನ್ಮ ದಿನದ ಶುಭಾಶಯದೊಂದಿಗೆ “ನಿನಗೊಬ್ಬ ಒಳ್ಳೆಯ ಬಾಳ ಸಂಗಾತಿ ಸಿಗಲಿ” ಎಂದು ಡಾಕ್ಟರಮ್ಮ ಆಶೀರ್ವದಿಸಿ ಹೋಗಿದ್ದರು. ಎಲ್ಲರೊಡನೆ ಮನ ಬಿಚ್ಚಿ ಹರಟೆ ಹೊಡೆದು ಹಾಸ್ಟೆಲಿಗೆ ಮರಳಿದಾಗ ಸಂಜೆಯಾಗತೊಡಗಿತ್ತು.
ತನಗೆ ತಿಳುವಳಿಕೆ ಬಂದಾಗಿನಿಂದಲೂ, ಅವಕಾಶ ಸಿಕ್ಕಾಗಲೆಲ್ಲ ಅದೆಷ್ಟೋ ಬಾರಿ ತಂಗಮ್ಮನನ್ನು ಕೇಳಿದ್ದಳು. “ನನ್ನ ಈ ಅನಾಥ ಬದುಕಿಗೆ ಕಾರಣ ಯಾರು?” ಎಂದು.
“ನೀನ್ಯಾಕೆ ಅನಾಥೆ! ನಾ ಇಲ್ಲ ಏನ್?” ಎಂದು ನಗು ನಗುತ್ತ ತಂಗಮ್ಮ ಮಾತು ಮುಗಿಸುತ್ತಿದ್ದಳು. ಅವಳ ಹುಟ್ಟಿನ ರಹಷ್ಯ ಮಾತ್ರ ನಿಗೂಢವಾಗಿಯೇ ಉಳಿದಿತ್ತು. ಕೆಲವು ಸಲ ಆಶ್ರಮಕ್ಕೆ ದತ್ತು ಪಡೆಯಲು ಬಂದವರನ್ನು ಕುರಿತು ತನ್ನಷ್ಟಕ್ಕೆ ತಾನೇ ಯೋಚಿಸುತ್ತಿದ್ದಳು ‘ಜೀವನ ಎಷ್ಟೊಂದು ವಿಚಿತ್ರ? ಬೇಕು ಎಂಬ ಜನರಿಗೆ ಮಕ್ಕಳಿಲ್ಲ, ಬೇಕು ಎಂಬ ಮಕ್ಕಳಿಗೆ ತಂದೆ ತಾಯಿಗಳಿಲ್ಲ.’ ಆಶೆಯ ಕಣ್ಣುಗಳಿಂದ ಎಷ್ಟೋ ಬಾರಿ ತಂಗಮ್ಮನನ್ನು ಕೇಳಿದ್ದಳು “ನನ್ನನ್ಯಾಕ ಯಾರೂ ಒಯ್ಯುತ್ತಿಲ್ಲ?” ಎಂದು.
“ನಿನ್ನ ಮ್ಯಾಲ ನನಗ ಬಾಳ ಪ್ರೀತಿ ಅಲ್ಲ, ಅದಕ್ಕ ಬ್ಯಾರೆಯವರಿಗೆ ಕೊಡಾಕ ಮನಸಿಲ್ಲ” ಅಂತ ಹಾರು ಉತ್ತರ ಕೊಡುತ್ತಿದ್ದಳು ತಂಗಮ್ಮ.
ಹೊಸ ಕೆಲಸದೊಂದಿಗೆ ಊರ್ಮಿ ತನ್ನ ಬದುಕಿನ ಇನ್ನೊಂದು ಅಧ್ಯಾಯವನ್ನು ತೆರೆದಿದ್ದಳು. ಪರಿಚಯದಿಂದ ಸ್ನೇಹಿತನಾಗಿ ಮಾರ್ಪಟ್ಟ ಸಹದ್ಯೋಗಿ ಶ್ರೀನಿವಾಸ್ ತನ್ನ ಜೀವನದಲ್ಲಿ ಇನ್ನೂ ಹತ್ತಿರ ಬರುತ್ತಿದ್ದಾನೆಂದು ಅವಳಿಗೆ ಅನ್ನಿಸಿತ್ತು. ಹತ್ತಿರವಿದ್ದ ತಮ್ಮೂರಿಗೆ ಕರೆದೊಯ್ದು ತನ್ನ ಮನೆಯವರನ್ನು ಪರಿಚಯಿಸಿದ್ದ. ಆಗಾಗ್ಗೆ ಪಕ್ಕದಲ್ಲಿ ಇದ್ದ ಗುರುದತ್ತ ಭವನಕ್ಕೆ ಇಬ್ಬರೂ ಸೇರಿ ಊಟಕ್ಕೆ ಹೋಗುವದು ಸಹಜವಾಗಿತ್ತು. ಕಾತರದಿಂದದಿಂದ ಅದೆಷ್ಟೋ ಬಾರಿ ಕೇಳಿದ್ದ, “ನಿಮ್ಮ ಮನೆಗೆ ಕರೆದೊಯ್ಯುವದಿಲ್ಲವೇನು?” ಎಂದು. ಸತ್ಯವನ್ನು ಮರೆಸಿ ಸುಳ್ಳಿನ ಮುಖವಾಡದೊಂದಿಗೆ ಊರ್ಮಿ ಅಷ್ಟೇ ಸಹಜವಾಗಿ ಹೇಳುತ್ತಿದ್ದಳು, “ಸಮಯ ಬಂದಾಗ ಕರೆದೊಯ್ಯುವೆ” ಎಂದು. ಅವನಿಗೆ ನಿಜ ಹೇಳಿಬಿಟ್ಟರೆ ಒಳ್ಳೆಯದೆಂದು ಅನಿಸಿದರೂ, ಯಾಕೋ ಹೇಳುವ ಧೈರ್ಯ ಬಂದಿರಲಿಲ್ಲ.
ಇತ್ತಿತ್ತಲಾಗಿ ಸಕ್ಕರೆ ಖಾಯಿಲೆಯಿಂದ ತಂಗಮ್ಮನ ಅರೋಗ್ಯ ಹದಗೆಟ್ಟಿತ್ತು. ಉರ್ಮಿಯೂ ಭಾನುವಾರಕ್ಕೊಮ್ಮೆ ಭೇಟಿ ಕೊಟ್ಟು ಬರುತ್ತಿದ್ದಳು. ಅದೊಂದು ದಿನ ಮುಂಜಾನೆ ಆಶ್ರಮದಿಂದ ಫೋನು ಬಂದಿತು. “ಅಕ್ಕಾ! ತಂಗಮ್ಮನಿಗೆ ಸೀರಿಯಸ್ ಆಗಿದೆ, ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ” ವೇಣಿ ಫೋನಿನಲ್ಲಿ ಅಳುತ್ತ ಮಾತನಾಡುತ್ತಿದ್ದಳು. ಊರ್ಮಿಗೆ ಸಿಡಿಲು ಎರಗಿದಂತಾಯಿತು. ಧಾರವಾಡದ ಸಿವಿಲ್ ಆಸ್ಪತ್ರೆ ಸೇರಿದಾಗ ಹತ್ತು ಗಂಟೆಯಾಗಿತ್ತು. ಆಸ್ಪತ್ರೆಯ ಬಾಗಿಲಲ್ಲಿ ನಿಂತಿದ್ದ ವೇಣಿ ಅವಳನ್ನು ತಬ್ಬಿಕೊಂಡು ಜೋರಾಗಿ ಅಳತೊಡಗಿದಳು. ತಂಗಮ್ಮ ಎಂಬ ಬಡ ಜೀವ ತನ್ನ ಯಾತ್ರೆಯನ್ನು ಮುಗಿಸಿತ್ತು. ಮಾತು ಬರದೆ ಊರ್ಮಿ ಕಲ್ಲಿನಂತೆ ನಿಂತು ಬಿಟ್ಟಳು. ಸಾವು ಇಷ್ಟು ನಿಷ್ಠುರವೆಂದು ಅವಳು ಅಂದುಕೊಂಡಿರಲಿಲ್ಲ. ಊರ್ಮಿ ಜೀವನದಲ್ಲಿ ಎರಡನೆಯ ಬಾರಿಗೆ ಅನಾಥೆಯಾಗಿದ್ದಳು. ತಂಗಮ್ಮನಿಲ್ಲದೆ ನಲುಗಿದ ಆಶ್ರಮದಲ್ಲಿ ಒಂದೆರಡು ದಿನ ಇದ್ದು ಮರಳಿ ಬರುವಾಗ, “ತಂಗಮ್ಮ ನಿನಗೆ ಇದನ್ನು ತಲುಪಿಸು ಎಂದು ಎರಡು ದಿನಗಳ ಹಿಂದೆ ಕೊಟ್ಟಿದ್ದಳು” ಎಂದು ವೇಣಿ ಒಂದು ಲಕೋಟಿಯನ್ನು ಕೊಟ್ಟಳು. ಅದೇನಿರಬಹುದೆಂದು ಆತುರದಿಂದ ತೆಗೆದಾಗ, ಅದರಲ್ಲೊಂದು ಚೀಟಿ ಇತ್ತು. ತೆರೆದ ಚೀಟಿಯಲ್ಲಿ ತಂಗಮ್ಮನ ಹಸ್ತಾಕ್ಷರ ಸ್ಪಷ್ಟವಾಗಿತ್ತು. ‘ಊರ್ಮಿ, ನೀನು ಆಗಾಗ್ಗೆ ಕೇಳಿದ ನಿನ್ನ ಜನ್ಮ ರಹಸ್ಯವನ್ನು ಈಗ ಹೇಳಬೇಕೆನ್ನಿಸುತ್ತಿದೆ. ನನ್ನ ನಿಯಮವನ್ನು ದಾಟಿ ಮುಂದೆ ಹೋಗಿದ್ದೇನೆ. ಯಾಕೋ ನಿನ್ನನ್ನು ಕಂಡರೆ ನನಗೆ ಬಹಳೇ ಪ್ರೀತಿ. ಹುಡುಕುವ ಪ್ರಯತ್ನ ಮಾಡು. … ಸಂಕಲ್ಪ ಆಸ್ಪತ್ರೆ …ಡಾ ಸುನಿತಾ ರಾವ್… ಅವಳೇ ನಿನ್ನ ತಾಯಿ. ದೇವರು ನಿನ್ನನ್ನು ಎಂದೆಂದಿಗೂ ಚನ್ನಾಗಿ ಇಟ್ಟಿರಲಿ —ಇಂತಿ ತಂಗಮ್ಮಾʼ
ತಂಗಮ್ಮ ಹೋಗಿದ್ದ ಬೇಸರಿನಲ್ಲಿ ಯಾವುದಕ್ಕೂ ಮನಸ್ಸಿಲ್ಲದಿದ್ದರೂ, ಹಡೆದವರನ್ನು ನೋಡುವ ಕುತೂಹಲ ಮಾತ್ರ ಗಟ್ಟಿಯಾಗಿ ಬೆಳೆಯತೊಡಗಿತು.
ದಾಂಡೇಲಿಯೇನು ಹೊಸದಲ್ಲ, ಡಾಕ್ಟರಮ್ಮನ ಕಾರಿನಲ್ಲಿ ಎಷ್ಟೊಂದು ಸಲ ಹೋಗಿದ್ದ ನೆನಪು. ಸಂಕಲ್ಪ ಆಸ್ಪತ್ರೆ ಅವರಿಗೇನೇ ಸೇರಿದ್ದು ಎಂಬ ಅರಿವು, ಹಾಗೆಯೇ ಡಾಕ್ಟರಮ್ಮನ ಹೆಸರೂ ಸುನೀತಾ ರಾವ್ ಅಂತ ಇರುವುದೂ ಖಚಿತ. ಹಾಗಾದರೆ ಡಾಕ್ಟರಮ್ಮನೇ ನನ್ನ ತಾಯಿಯೇ? ಅದು ಸಾಧ್ಯವೇ? ಅಥವಾ ಅದೇ ಹೆಸರಿನವರು ಬೇರೆ ಯಾರಾದರೂ ಇರಬಹುದೇ? ತಂಗಮ್ಮ ಇದೆಂತ ಒಗಟನ್ನು ಚೀಟಿಯಲ್ಲಿ ಬಿಟ್ಟು ಹೋಗಿದ್ದಾಳಲ್ಲ ಎಂದು ಚಡಪಡಿಸತೊಡಗಿದಳು. ಬೆಳಿಗ್ಗೆ ಎದ್ದು ದಾಂಡೇಲಿಗೆ ಹೋಗಲೇ ಬೇಕೆಂದುಕೊಂಡ ಊರ್ಮಿಗೆ, ಅರೆ ರಾತ್ರಿಯ ನಿದ್ರೆಯಲ್ಲಿ ಕನಸೊಂದು ಆವರಿಸಿತ್ತು. ವಿಶಾಲವಾದ ರಸ್ತೆಯ ತುಂಬಾ ಬಣ್ಣ ಬಣ್ಣದ ಹೂವುಗಳನ್ನು ಹರಡಿ ನಿಂತಿದ್ದ ತಂಗಮ್ಮ ಹೇಳುತ್ತಲಿದ್ದಳು, ಉರ್ಮಿ ಹೊರಗೆ ಬಾ …. ಸತ್ಯವನ್ನು ತಿಳಿ …. ನಿನ್ನ ದಾರಿ ಸುಗಮ. ಅಷ್ಟರಲ್ಲಿಯೇ ಕರ್ಕಶ ಧ್ವನಿಯಲ್ಲಿ ಕೇಕೆ ಹಾಕುತ್ತ ಇನ್ನಾರೋ ಬರುತ್ತಿದ್ದರು. ಆತನ ಮೈತುಂಬ ಏನೇನೋ ಬರಹಗಳಿದ್ದವು. ಸಮಾಜ, ಕಟ್ಟಳೆ, ನೀತಿ, ನಿಯಮ ಅಂತ ಬರೆದುಕೊಂಡಿದ್ದ ಅವನು ಘಟ್ಟಿಯಾಗಿ ಅರಚುತ್ತಿದ್ದ “ನೀನು ನನ್ನನ್ನು ದಾಟಲಾರೆ …. ನೀನು ನನ್ನನ್ನು ಗೆಲ್ಲಲಾರೆ.” ಆಚೆಯ ತುದಿಯಲ್ಲಿ ಶ್ರೀನಿವಾಸ ನಿಂತು ಕಿರುಚುತ್ತಿದ್ದ, “ನೀನು ಸುಳ್ಳುಗಾರ್ತಿ …. ನೀನು ಮೋಸಗಾರ್ತಿ …. ಕುಲ ಗೋತ್ರವಿಲ್ಲದ ಅನಾಥೆ …. ಬೇಕಿಲ್ಲದವರು ಹುಟ್ಟಿಸಿ ಗಟಾರಿನಲ್ಲಿ ಬೀಸಾಕಿದ ಜಂತು.” ಗುಯ್ಯಿಗುಡುತ್ತಿದ್ದ ಅವರೆಲ್ಲರ ಆರ್ಭಟಕ್ಕೆ ಪಕ್ಕನೆ ಎಚ್ಚರವಾಯಿತು. ಊರ್ಮಿಯ ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು. ಅದು ನಿಜವಲ್ಲ ಕನಸು ಮಾತ್ರವೆಂದು ಸಾವರಿಸಿಕೊಂಡಳು. ಲಗು ಬಗೆಯಿಂದ ತಯಾರಾಗಿ ಬಸ್ ನಿಲ್ದಾಣದತ್ತ ಸಾಗಿದಳು. ದಾಂಡೇಲಿಗೆ ಹೋಗುವ ಬಸ್ಸಿನಲ್ಲಿ ಕುಳಿತ ಊರ್ಮಿಯ ತಲೆಯಲ್ಲಿ ಸಾವಿರಾರು ವಿಚಾರಗಳು ಸುತ್ತುತ್ತಿದ್ದವು. ಹುಟ್ಟಿಸಿದವರಿಗೆ ನನ್ನನ್ನು ಕಂಡು ಅದೆಷ್ಟು ಆಶ್ಚರ್ಯವಾಗಬಹುದು? ಸಂತೋಷದ ಭರದಲ್ಲಿ ಅವರು ನನ್ನನ್ನು ಅಪ್ಪಿ ಮುದ್ದಾಡಬಹುದೇ? ನೀನ್ಯಾರು ಗೊತ್ತಿಲ್ಲವೆಂದು ಸತ್ಯವನ್ನು ಮರೆಮಾಚಿ ಹಾಗೆಯೆ ನನ್ನನ್ನು ತಳ್ಳಿ ಹಾಕಬಹುದೇ? ಅಥವಾ, ಅವರನ್ನು ಕಂಡು ಉಕ್ಕುವ ನನ್ನ ಸಿಟ್ಟಿನ ರಭಸಕ್ಕೆ ಅವರೇ ಕೊಚ್ಚಿಹೋಗಬಹುದೇ? ಬಸ್ಸು ನಿಂತಂತಾಯಿತು ಕಂಡಕ್ಟರ್ ಕೂಗುತಿದ್ದ “ ದಾಂಡೇಲಿ …. ದಾಂಡೇಲಿ …. ಬೇಗ ಬೇಗ ಇಳಿದುಕೊಳ್ಳಿ”.
ಬಸ್ಸಿನಿಂದ ಕೆಳಗಿಳಿದು ಎದುರುಗಡೆ ನಿಂತಿದ್ದ ಆಟೋ ರಿಕ್ಷಾದಲ್ಲಿ ಕುಳಿತು ಆಸ್ಪತ್ರೆಗೆ ಹೋಗಲು ಹೇಳಿದ ಊರ್ವಿಯ ತಲೆಯಲ್ಲಿ ಮತ್ತೆ ಏನೇನೋ ವಿಚಾರಗಳು ತುಡುಕಾಡತೊಡಗಿದವು. ಕೆಲವೇ ನಿಮಿಷಗಳಲ್ಲಿ ರಿಕ್ಷಾ ಚಾಲಕ ಹೇಳಿದ, “ಮೇಡಂ ಸಂಕಲ್ಪ ಆಸ್ಪತ್ರೆ, ಮೀಟರ್ ಬಿಲ್ಲು ಇಪ್ಪತ್ತು ರೂಪಾಯಿ”
ದುಡ್ಡು ಕೊಟ್ಟು ಕೆಳಗಿಳಿದು ನಿಧಾನವಾಗಿ ಆಸ್ಪತ್ರೆಯ ಒಳಗೆ ನಡೆದಳು. ಎದುರುಗಡೆ ಕಾಣಿಸುತಿದ್ದ ಸ್ವಾಗತಕಾರರ ಕಟ ಕಟೆಯತ್ತ ನಡೆದ ಅವಳಿಗೆ ನಾಮಫಲಕವೊಂದು ಕಾಣಿಸಿತು. ಅದರಲ್ಲಿ ಮೊದಲನೆಯ ಹೆಸರಿದ್ದಿದ್ದು – ಡಾ. ಸುನಿತಾ ರಾವ್ (ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು). ಕಟ ಕಟೆಯಲ್ಲಿದ್ದ ಹುಡುಗಿಗೆ ಕೇಳಿದಳು “ಡಾ. ಸುನಿತಾ ಅವರನ್ನು ನೋಡಬೇಕಾಗಿತ್ತು”
“ತಮ್ಮ ಹೆಸರೇನು? ಚೀಟಿಯನ್ನು ಮಾಡಿಸಬೇಕು ಇನ್ನೂರು ರೂಪಾಯಿ ಕನ್ಸಲ್ಟೇಶನ್ ಫೀ”
“ನನ್ನ ಹೆಸರು ಊರ್ಮಿ, ನನಗ್ಯಾವ ಕಾಯಿಲೆಯಿಲ್ಲ, ಅವರ ಜೊತೆಗೆ ಸ್ವಲ್ಪ ಸ್ವಂತ ವಿಷಯವನ್ನು ಮಾತನಾಡಬೇಕಿತ್ತು, ಧಾರವಾಡದಿಂದ ಬಂದಿದ್ದೀನಿ, ಅವರಿಗೆ ನಾನು ಬಂದ ವಿಷಯ ತಿಳಿಸಿದರೆ ತುಂಬಾ ಉಪಕರವಾಗುತ್ತೆ”
“ಖಂಡಿತವಾಗಿಯೂ ತಿಳಿಸುತ್ತೇನೆ, ಇನ್ನೆರಡು ಪೇಷಂಟ್ ಗಳಿವೆ ಕುಳಿತುಕೊಳ್ಳಿ”
ಊರ್ಮಿ ಎದುರುಗಡೆ ಇದ್ದ ಕುರ್ಚಿಯಲ್ಲಿ ಕಾಯುತ್ತ ಕುಳಿತಳು. ಕಾಯುತ್ತಿರುವ ಒಂದೊಂದು ಕ್ಷಣಗಳು ಯುಗಗಳಂತೆ ಅನಿಸತೊಡಗಿದ್ದವು. ಕೊನೆಗೂ ರಿಸೆಪ್ಸನಿಸ್ಟ್ ಹುಡುಗಿ ಹೇಳಿದಳು.
“ನೀವು ಈಗ ಭೇಟಿಯಾಗಬಹುದು” ಎಂದು.
ಡಾಕ್ಟರರ ಕೋಣೆಯೊಳಗೆ ಹೋದಾಗ ಅವಳಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ , ಸುನಿತಾ ರಾವ್ ಬೇರೆ ಯಾರು ಅಲ್ಲ ತನ್ನ ಡಾಕ್ಟರಮ್ಮ. ಒಂದು ಕ್ಷಣ ತಲೆ ಸುತ್ತಿದಂತಾಗಿ ಎದುರಿಗಿದ್ದ ಕುರ್ಚಿಯಲ್ಲಿ ಕುಕ್ಕರಿಸಿದಳು.
“ಹೇ! ಊರ್ಮಿ, ನೀ ಬರುತ್ತಿ ಅಂತ ತಿಳಿಸಿದರ ಕಾರು ಕಳಿಸುತ್ತಿದ್ದೇನಲ್ಲ”
“ಡಾಕ್ಟರಮ್ಮ! ನಿಮ್ಮನ್ನೇ ಹುಡುಕಿಕೊಂಡು ಬರ್ತಾ ಇದ್ದೀನಿ ಅಂತ ನನಗೂ ಗೊತ್ತಿರಲಿಲ್ಲ”
ಅವಳ ಮಾತಿನ ಅರ್ಥ ಡಾಕ್ಟರಮ್ಮನಿಗೆ ಅರಿವಾಗದಿದ್ದರೂ ಪುನಃ ಕೇಳುವ ಗೋಜಿಗೆ ಹೋಗಲಿಲ್ಲ.
“ಸರಿಯಾದ ಸಮಯಕ್ಕೆ ಬಂದಿದಿ, ಬಾ ಮನೆಗೆ ಊಟಕ್ಕೆ ಹೋಗೋಣ” ಎಂದರು.
“ಸಮಯ ನಮ್ಮ ಕೈಯಲ್ಲಿ ಎಲ್ಲಿದೆ ಡಾಕ್ಟರಮ್ಮ? …. ನಾವೆಲ್ಲಾ ಸಮಯದ ಗೊಂಬೆಗಳು ತಾನೆ?”
“ನಿಜ ಊರ್ಮಿ, ನಮ್ಮ ಕೈಯಲ್ಲೇನಿದೆ? ನಾವೆಲ್ಲ ಅವನು ಆಡಿಸಿದಂತೆ ಆಡುವ ಗೊಂಬೆಗಳು.”
ಡಾಕ್ಟರಮ್ಮನಿಗೆ ಊರ್ಮಿಯ ವರ್ತನೆ ಮತ್ತು ಮಾತುಗಳು ವಿಭಿನ್ನವೆನಿಸಿದವು. ತಂಗಮ್ಮನ ಅಗಲಿಕೆಯ ಮಾನಸಿಕ
ವೇದನೆಯಿಂದ ಹೀಗಾಗಿರಬಹುದೆಂದು ಅಂದುಕೊಂಡರು. ಆಸ್ಪತ್ರೆಯ ಪಕ್ಕದಲ್ಲಿಯೇ ಡಾಕ್ಟರಮ್ಮನ ಭವ್ಯವಾದ ಮನೆ. ಮನೆಯ ಎದುರಿನ ವಿಶಾಲವಾದ ತೋಟದಲ್ಲಿ ನಡೆಯುವಾಗ, ಅರಳಿದ ಬಗೆ ಬಗೆಯ ಹೂವಿನ ವಾಸನೆ ಘಮ್ಮೆನಿಸುತ್ತಿದ್ದರೂ, ಊರ್ಮಿಯ ಮೂಗಿಗೇನು ಅನಿಸಲೇ ಇಲ್ಲ. ಡಾಕ್ಟರಮ್ಮನ ಬಗ್ಗೆ ಅವಳಲ್ಲಿದ್ದ ಪ್ರೀತಿ, ಗೌರವ ಮತ್ತು ಅಭಿಮಾನಗಳು ಸುಟ್ಟು ಹೋಗಿ ತಿರಸ್ಕಾರ, ಅಸೂಹೆ ಮತ್ತು ಸಿಟ್ಟಿನ ಜ್ವಾಲಾಮುಖಿ ಎದೆಯಲ್ಲಿ
ಕುದಿಯತೊಡಗಿತ್ತು. ಅವಳು ತನ್ನತನವನ್ನೇ ಕಳೆದುಕೊಂಡು, ನಿರ್ವಿಕಾರವಾಗಿ ಡಾಕ್ಟರಮ್ಮನನ್ನು ಹಿಂಬಾಲಿಸುತ್ತಿದ್ದಳು. ಐದು ನಿಮಿಷಗಳಲ್ಲಿ ಮನೆಯನ್ನು ಸೇರಿದ್ದು ಗೊತ್ತಾಗಲೇ ಇಲ್ಲ.
“ಫ್ರೆಶ್ ಆಗು ಊಟ ಮಾಡೋಣ” ಎಂದು ಡಾಕ್ಟರಮ್ಮ ಬಾತ್ರೂಮಿನ ಬಾಗಿಲವನ್ನು ತೋರಿಸುತ್ತಿದ್ದರು. ಅದಾವದನ್ನು ಕಿವಿಗೆ ಹಾಕಿಕೊಳ್ಳದೆ ಊರ್ಮಿ ಅಂದಳು “ಡಾಕ್ಟರಮ್ಮ, ನಿಮ್ಮ ಜೊತೆಗೆ ತಕ್ಷಣವೇ ನಾನೊಂದು ಮುಖ್ಯ ವಿಷಯವನ್ನು ಮಾತಾಡಬೇಕಾಗಿದೆ”
“ಏನಾದರು ಸಹಾಯ ಬೇಕಿತ್ತೇನು?”ಎಂತೆಂದಳು ಡಾಕ್ಟರಮ್ಮ.
“ಈ ಜನ್ಮದಲ್ಲಿ ತೀರಿಸದಷ್ಟು ಸಹಾಯ ಮಾಡಿರುವಿರಿ …. ಸಹಾಯ ಬೇಕಿಲ್ಲ …. ನಿಗೂಢವಾದ ಸತ್ಯವನ್ನು ತಿಳಿಯಬೇಕಾಗಿತ್ತು …. ಅದಕ್ಕೆ ಬಂದಿರುವೆ”. ಯಾಕೋ ಅವಳ ಮಾತುಗಳನ್ನು ಕೇಳಿ ಡಾಕ್ಟರಮ್ಮನಿಗೆ ಕಸಿವಿಸಿಯಾಗತೊಡಗಿತು. ಎಲ್ಲಿ ತಂಗಮ್ಮ ಎಲ್ಲವನ್ನೂ ಹೇಳಿಬಿಟ್ಟಿರಬಹುದೇನೋ ಎಂಬ ಸಂಶಯ ಮೂಡಿತು.
“ಊಟ ಆದ ಮೇಲೆ ಮಾತನಾಡಬಹುದಲ್ಲ?”
“ಊಟಕ್ಕಿಂತ ಇದು ಮುಖ್ಯವಾದ ವಿಷಯ, ಈಗಲೇ ಮಾತನಾಡಬೇಕು” ಊರ್ಮಿಯ ಧ್ವನಿಯಲ್ಲಿದ್ದ ಹಠಮಾರಿತನವನ್ನು ಕಂಡು ಡಾಕ್ಟರಮ್ಮ ಅಂದಳು,
“ಆಯ್ತು ಬಾರಮ್ಮ ಇಲ್ಲೇ ಕುಳಿತುಕೊಳ್ಳೋಣ” ಎಂದು.
“ಡಾಕ್ಟರಮ್ಮ! ನನಗೆ ಸುತ್ತು ಬಳಸಿ ಮಾತನಾಡಿ ಅಭ್ಯಾಸವಿಲ್ಲ. ನೇರವಾಗಿ ನಿಮಗೊಂದು ಪ್ರಶ್ನೆ ಕೇಳುತಿದ್ದೇನೆ. ನಿಮ್ಮ ಮನಸು ಒಪ್ಪಿದರೆ ಉತ್ತರಿಸಿ ಇಲ್ಲವಾದರೆ ಬಿಡಿ. ನೀವು ನನ್ನ ಹೆತ್ತ ತಾಯಿಯಂತೆ …. ಇದು ನಿಜವಾ?”
ಡಾಕ್ಟರಮ್ಮನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ತಂಗಮ್ಮನಿಗಲ್ಲದೆ ಇನ್ನಾರಿಗೂ ಗೊತ್ತಿಲ್ಲದ ನಿಗೂಢ ಸತ್ಯ ಉರ್ಮಿಗೆ ಗೊತ್ತಾಗಿದ್ದು ಖಾತ್ರಿಯಾಯಿತು. ಆದ ಆಘಾತದಲ್ಲಿ ಮಾತು ಬರದೆ ಮೌನಕ್ಕೆ ಶರಣಾಗಿದ್ದಳು. ಊರ್ಮಿ ಅವಳ ಕಣ್ಣಲ್ಲಿ ಕಣ್ಣಿಟು ಕೇಳಿದಳು.
“ಮೌನವಾಗಿರುವದು ಸಮ್ಮತಿಯ ಲಕ್ಷಣವೆಂದು ತಿಳಿಯಲೆ?”
ಡಾಕ್ಟರಮ್ಮ ಊರ್ಮಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ಬಿಕ್ಕಳಿಸತೊಡಗಿದಳು. “ನಿಜ, ನಾನೇ ನಿನ್ನ ಪಾಪಿಷ್ಠ ತಾಯಿ …. ನನ್ನ ಬದುಕಿಗಾಗಿ ನಿನ್ನ ಭವಿಷ್ಯವನ್ನು ಬಲಿಕೊಟ್ಟ ಸ್ವಾರ್ಥಿ. ಜೀವನದಲ್ಲಿ ಆಕಸ್ಮಿಕವಾಗಿ ಎದುರಾದ ಪ್ರಶ್ನೆಗೆ ಉತ್ತರ ಸಿಗಲಾರದೆ ಶರಣಾದ ಹೇಡಿ …. ಒಮ್ಮೆ ಕ್ಷಮಿಸಿ ಬಿಡು …. ಊರ್ಮಿ ನನ್ನನ್ನೊಮ್ಮೆ ಕ್ಷಮಿಸಿ ಬಿಡು”
“ಡಾಕ್ಟರಮ್ಮ! ಮಹಾಭಾರತದ ಕುಂತಿಗೂ ಯಾವುದೇ ಉತ್ತರವಿರಲಿಲ್ಲ . ನೀವು ಕುಂತಿಯಾಗಬಹುದು ಆದರೆ ನಾನು
ಕರ್ಣನೆಂದೂ ಅಗಲಾರೆ.” ಅದೇಕೋ ಉರ್ಮಿಗೆ ಇನ್ನಷ್ಟು ಕೋಪ ನೆತ್ತಿಗೇರಿತ್ತು.
“ನನ್ನ ಜನ್ಮಕ್ಕೆ ಕಾರಣನಾದ ಆ ಘನಂಧಾರಿ ಪುರುಷ ಯಾರೆಂದು ಕೇಳಬಹುದೆ?”
“ಊರ್ಮಿ ನಿನಗೆ ಹೇಗೆ ಹೇಳಲಿ? ನಿನ್ನ ಜನುಮಕ್ಕೆ ಕಾರಣವಾದವನು ಈ ಲೋಕದಲ್ಲಿ ಇಲ್ಲ. ಹೆಚ್ಚಿನ
ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿಗೆ ಹೋಗಿದ್ದೆ. ಅಲ್ಲೊಬ್ಬ ಸಹಭಾರತೀಯನ ಜೊತೆ ಪ್ರೇಮವಾಗಿ, ಮದುವೆಯ ಮುಂಚೆನೇ ತಪ್ಪು ಮಾಡಿದ್ದೆ. ಹೊಟ್ಟೆಯಲ್ಲಿ ನೀನುರುವಾಗಲೇ ಆ ಹೇಡಿ ಆತ್ಮಹತ್ಯೆ ಮಾಡಿಕೊಂಡು ನನ್ನನ್ನು ನಡು ನೀರಲ್ಲಿ ಬಿಟ್ಟು ಹೋಗಿದ್ದ.”
ವಿಷಯ ತಿಳಿದು ಊರ್ಮಿಗೇನು ದುಃಖವಾಗಲಿಲ್ಲ.
“ತಮ್ಮ ಬದುಕಿಗಾಗಿ, ತಮ್ಮ ಸ್ವಂತ ಕರುಳಿನ ಕುಡಿಯ ಭವಿಷ್ಯವನ್ನೇ ಬಲಿ ಕೊಡುವವರಿಗೆ ಏನೆನ್ನಬೇಕು? ನನಗೆ ಅನಾಥೆ ಎಂಬ ಪಟ್ಟವನ್ನು ಕಟ್ಟಿ, ಅನಾಥಾಶ್ರಮದ ಬದುಕನ್ನು ಕೊಡುವುದಕ್ಕಿಂತಲೂ, ನೀವು ಗರ್ಭಪಾತ
ಮಾಡಿಸಿಕೊಂಡು ಪಾಪದ ಪಿಂಡವನ್ನು ಹೊರ ಹಾಕಿದ್ದಿದ್ದರೆ ಎಷ್ಟೋ ಚೆನ್ನಾಗಿರುತಿತ್ತು. ನಿಮಗೆ ಅಷ್ಟೊಂದು ಬುದ್ಧಿ ಏಕೆ ಬರಲಿಲ್ಲ?”
“ಊರ್ಮಿ …. ನನಗೆ ನಿನ್ನನ್ನು ಬಿಟ್ಟು ಬದುಕುವ ಆಶೆ ಇರಲಿಲ್ಲ. ನನ್ನ ಶ್ರೀಮಂತ ತಂದೆ ಬಲವಂತದಿಂದ ನನ್ನನ್ನು ಇಲ್ಲಿಗೆ ಮರುಕಳಿಸಿಕೊಂಡು, ಸಮಾಜದ ಕಟ್ಟಳೆಗೆ ತಲೆಬಾಗಿ, ನಿನ್ನನ್ನು ದೂರ ಮಾಡಿದರು. ದತ್ತು ಮಗಳೆಂದು ಸ್ವೀಕರಿಸಿ ನಿನಗೆ ತಾಯಿಯ ಮಮತೆಯನ್ನು ಎರೆಯಬೇಕೆಂದರೂ ಅವಕಾಶ ಕೊಡಲಿಲ್ಲ. ಕೊನೆಗೆ ಆಶ್ರಮದಲ್ಲಿ ನಿನ್ನನ್ನು ಬಿಟ್ಟು, ನನ್ನ ಅಸಹಾಯಕ ಕಣ್ಣುಗಳಿಂದ ನೀನು ಬೆಳೆಯುವುದನ್ನು ನೋಡಿ ಆನಂದಪಟ್ಟೆ. ಆಗಾಗ್ಗೆ ನಿನ್ನನ್ನು ಅಪ್ಪಿ ಮುದ್ದಿಸಿ ತಾಯ್ತನದ ಸವಿಯನ್ನು ಉಂಡೆ, ಮಾಡಿದ ಪಾಪಕ್ಕೆ ಪ್ರಾಯಶ್ಚಿತವೆಂಬಂತೆ ಅನಾಥ ಮಕ್ಕಳ ಬದುಕು ಕಟ್ಟಲು ಪ್ರಯತ್ನಿಸಿದೆ”
“ಹಾಗಾದರೆ ಈ ಕಟ್ಟಳೆಯ ಪರದೆಯನ್ನು ಸರಿಸಿ, ಸ್ವಾರ್ಥ ಸಮಾಜದ ಮುಂದೆ ನೀವು ನನ್ನನ್ನು ಸ್ವಂತ ಮಗಳೆಂದು
ಸ್ವೀಕರಿಸುತ್ತೀರಾ?”
ಡಾಕ್ಟರಮ್ಮನಿಂದ ಮಾತುಗಳೇ ಬರಲಿಲ್ಲ.
“ಪರದೇಶದಲ್ಲಿ ಓದಿದ ನಿಮ್ಮಂತ ಸುಶೀಕ್ಷಿತ ಶ್ರೀಮಂತರೇ ಈ ಕಟ್ಟಳೆಗಳನ್ನು ದಾಟಲಾಗದಿದ್ದರೆ ಇನ್ನು ಬೇರೆಯವರ ಗತಿ ಏನು? ಅನಾಥರನ್ನು ಕಂಡು, ಕನಿಕರವೆಂಬ ಮೊಸಳೆಯ ಕಣ್ಣೀರನ್ನು ಸುರಿಸುವ ಈ ಸಮಾಜದಲ್ಲಿ ಬದಲಾವಣೆಯಾಗಬೇಕಾದರೆ ಯಾರಾದರೂ ಹೊಸ ಮಾರ್ಗವನ್ನು ಹಿಡಿಯಲೇ ಬೇಕು. ನೀವು ಇಂಥ ಕಟ್ಟಳೆಗಳ ವಿರುದ್ಧ ದನಿಯೆತ್ತಿ ಬೇರೆಯವರಿಗೆ ಹೊಸ ದಾರಿಯನ್ನು ತೋರಿಸುತ್ತೀರಾ?” ಊರ್ಮಿಯ ದನಿಯಲ್ಲಿ ರೋಷದ ಅಳಲಿದ್ದದ್ದು ಡಾಕ್ಟರಮ್ಮನಿಗೆ ಅರಿವಾಗದೆ ಇರಲಿಲ್ಲ. ಗದ್ಗದಿತವಾದ ದನಿಯಲ್ಲಿ ಉತ್ತರಿಸಿದಳು,
“ನಾನು ಅಸಹಾಯಕಿ …. ನಾನು ಅಸಹಾಯಕಿ”
“ಅಲ್ಲಿ ನೋಡು ಡಾಕ್ಟರಮ್ಮ, ನಿಮ್ಮ ತೋಟದಲ್ಲಿ ಅರಳಿದ ಒಂದೊಂದು ಹೂವುಗಳಿಗೆ ತಮ್ಮದೇ ಆದ ಹೆಸರಿದೆ, ಪ್ರತಿಷ್ಠೆ ಇದೆ, ಆ ಹೂವುಗಳ ಅಂದ ಗಂಧವನ್ನು ಆನಂದಿಸಿ ಹೊಗಳುವ ಜನರಿದ್ದಾರೆ, ಆದರೆ ನಾವು ಅನಾಥರು ಬೆಟ್ಟದ ಹೂವುಗಳು …. ಎಷ್ಟೇ ಅಂದ ಗಂಧವಿದ್ದರೂ ಅಲ್ಲಿ ಅರಳುವ ಎಲ್ಲ ಹೂವುಗಳಿಗೆ ಒಂದೇ ಹೆಸರು ಬೆಟ್ಟದ ಹೂವು. ಹಾಗೆಯೇ ಅರಳಿ, ಅದೊಂದು ದಿನ ಕಮರಿ ಹೋಗುವ ಹೂವುಗಳು …. ನಾವು, ಅನಾಥರೆಲ್ಲರೂ ನಿಮ್ಮಂತವರು ಮಾಡಿದ ತಪ್ಪಿನ ಪ್ರತಿಫಲದ ಬೆಟ್ಟದ ಹೂವುಗಳು”
ಊರ್ಮಿಯು ಮಾತನಾಡುತ್ತಲೇ ಇದ್ದಳು, ಗರ ಬಡಿದಂತೆ ಕುಳಿತ ಡಾಕ್ಟರಮ್ಮ ಮೌನಿಯಾಗಿದ್ದಳು.
…. ನನ್ನೆದೆಯಲ್ಲಿ ರೋಷದ ಜ್ವಾಲೆ ಉರಿಯುತ್ತಿದೆ …. ಆದರೂ ಎಲ್ಲೋ ಒಂದು ಮೂಲೆಯಲ್ಲಿ ಸಂತೋಸದ ತಂಪಿದೆ …. ತೆರೆಯ ಮರೆಯಲ್ಲಾದರೂ ನನಗೊಬ್ಬಳು ತಾಯಿಯಿದ್ದಾಳೆಂದು. ನಿಮ್ಮ ದಾರಿಯಲ್ಲಿ ನಾನು ಅಡ್ಡಬರಲಾರೆ …. ಅಡ್ಡಬರಲಾರೆ”
ಅಷ್ಟರಲ್ಲಿಯೇ ಡಾಕ್ಟರಮ್ಮನ ಸ್ವಂತ ಮಗಳು ತಂದೆಯೊಂದಿಗೆ ಕಾರಿನಲ್ಲಿಂದ ಇಳಿದು ಒಳಗೆ ಬರುತ್ತಿದ್ದಳು. ಊರ್ಮಿ ಡಾಕ್ಟರಮ್ಮನ ಮುಖವನ್ನೂ ನೋಡದೆ ಸರ ಸರನೆ ಹೊರಗೆ ನಡದೇ ಬಿಟ್ಟಿದ್ದಳು. ಡಾಕ್ಟರಮ್ಮ ಬತ್ತಿ ಹೋದ ದನಿಯಲ್ಲಿ ಕೂಗುತ್ತಿದ್ದಳು “ಊರ್ಮಿ …. ಊರ್ಮಿ …. ಊರ್ಮಿ” ಎಂದು.
ದಾಂಡೇಲಿಯಿಂದ್ ಹುಬ್ಬಳ್ಳಿಗೆ ಮರಳುವ ಬಸ್ಸಿನಲ್ಲಿ ಊರ್ಮಿ ನಿಷ್ಕರವಾಗಿ ಕುಳಿತಿದ್ದಳು. ಹೊಸದಾಗಿ ಆವರಿಸಿದ ವಿಶಾಲವಾದ ರಸ್ತೆಯಲ್ಲಿ ಬಸ್ಸು ಜೋರಾಗಿ ಓಡುತ್ತಲಿತ್ತು. ಒಂದೊಂದಾಗಿ ಸರಿದು ಹೋಗುತ್ತಿದ್ದ ಊರುಗಳಲ್ಲಿ ಬದಲಾವಣೆಯ ಬೆಳಕು ಸಹಜವಾಗಿ ಕಾಣುತ್ತಿತ್ತು . ಹೊಸ ಮನೆಗಳು, ಹೊಸ ರಸ್ತೆಗಳು ಎಲ್ಲವೂ ಹೊಸತು ಎನಿಸಿತು. ಊರ್ಮಿ ತನ್ನಷ್ಟಕ್ಕೆ ತಾನೆ ಗೊಣಗಿಕೊಂಡಳು – ʼಎಲ್ಲದರಲ್ಲೂ ಹೊಸತನ್ನು ಬಯಸುವ ಈ ಜನರು ಸಾಮಾಜಿಕ ಕಟ್ಟಳೆಗಳಲ್ಲಿ ಹೊಸತನ್ನು ಯಾಕೆ ಬಯಸುವದಿಲ್ಲ? ವಿಭಿನ್ನ ಹೆಸರುಗಳಲ್ಲಿ ಸಾಮಾಜಿಕ ಸಂಘಟನೆಗಳನ್ನು ಕಟ್ಟುವ ಜನ ಇಂತಹ ಬದಲಾವಣೆಗಳಿಗೆ ಕರೆಯನ್ನ್ಯಾಕೆ ಕೊಡುತ್ತಿಲ್ಲ? ಪಾಶ್ಚಿಮಾತ್ಯ ದೇಶದ ಉಡುಗೆ ತೊಡಿಗೆ, ಊಟೋಪಚಾರಕ್ಕೆ ಹಾತೊರೆಯುತ್ತಿರುವ ಸಮಾಜ ಇಂತಹ ಬದಲಾವಣೆಗಳನ್ನು ಏಕೆ ಬಯಸುತ್ತಿಲ್ಲ? ಉತ್ತರ ಸಹಜವಾಗಿ ಸಿಗಲಿಲ್ಲ. ಆಡಿಸುವಾತನು ತನಗೆ ʼಅನಾಥೆʼ ಎಂಬ ಪಟ್ಟ ಕಟ್ಟಿ ಕಳುಹಿಸಿದಾಗ ಅದನ್ನು ಕಿತ್ತೊಗೆಯಲು ಸಾಧ್ಯವೆ? ಹೊಯ್ದಾಟದಲ್ಲಿದ್ದ ಅವಳ ಮನಸಿನಲ್ಲಿ ಏನೇನೋ ಚಿತ್ರಣಗಳು ಓಡಾಡತೊಡಗಿದವು. ಹೊಸ ಕೆಲಸ, ಹೊಸ ಬದುಕು ಮತ್ತು ಶ್ರೀನಿವಾಸ ಒಂದೆಡೆ ಕೂಗುತ್ತಿದ್ದರೆ, ಆಶ್ರಮದಲ್ಲಿ ಖಾಲಿಯಾಗಿದ್ದ ತಂಗಮ್ಮನ ಕಟ್ಟಿಗೆಯ ಕುರ್ಚಿ ಇನ್ನೊಂದೆಡೆ ಕೈ ಬೀಸಿ ಕರೆಯುತ್ತಲಿತ್ತು. ಡಾಕ್ಟರಮ್ಮನ ಹಾಗೆ ಸತ್ಯವನ್ನು ಮರೆಮಾಚಿ ನನ್ನ ಬದುಕನ್ನು ಕಟ್ಟಿಕೊಳ್ಳಲೇ? ಅಥವಾ ತಂಗಮ್ಮನ ಹಾಗೆ ಜೀವ ತೇಯ್ದು ಬೇರೆಯವರ ಬದುಕು ಕಟ್ಟಲೆ? ಅನಾಥ ಮಕ್ಕಳ ಧ್ವನಿಯಾಗಿ ಬದಲಾವಣೆಯ ಕಹಳೆ ಮೊಳಗಿಸಲೇ? ಎಂದು ಅವಳ ಮನಸು ತುಮುಲದಲ್ಲಿ ಹೊಯ್ದಾಡುತ್ತಿದ್ದಾಗಲೇ ಧಾರವಾಡ ಬಂದೇ ಬಿಟ್ಟಿತ್ತು. ಬಸ್ಸಿನಿಂದ ಕೆಳಗಿಳಿದು ಆಟೋ ರಿಕ್ಷಾದಲ್ಲಿ ಕುಳಿತು, ಚಾಲಕನಿಗೆ ಹೇಳಿದಳು “ಪ್ರೇರಣ ಅನಾಥಾಶ್ರಮ” ಎಂದು. ರಿಕ್ಷಾ ಜೋರಾಗಿ ಆಶ್ರಮದ ಕಡೆಗೆ ಓಡತೊಡಗಿತು. ಊರ್ಮಿಯು ಕಂಡ ಹಳೆಯ ಕನಸುಗಳು ನಿಧಾನವಾಗಿ ಹಿಂದೆ ಸರಿಯುತ್ತಲಿದ್ದವು, ರಸ್ತೆಯ ಬದಿಯ ಗಿಡಗಳಂತೆ. ಹಾಗೆಯೇ ರಸ್ತೆಯ ಅಕ್ಕ ಪಕ್ಕದಲ್ಲಿ ಹುಲುಸಾಗಿ ಬೆಳೆದಿದ್ದ ಅನಾಥ ಹೂವುಗಳು, ಯಾರೋ ಅನಾಮಿಕರು ಬಿಡಿಸಿದ ಚಿತ್ರಗಳಂತೆ ಕಂಡು ನಿಧಾನವಾಗಿ ಮಾಯವಾಗುತ್ತಲಿದ್ದವು. ಊರ್ಮಿಯು ಆ ಅನಾಥ ಹೂವುಗಳ ಹೆಸರು ಯೋಚಿಸುವ ಗೋಜಿಗೆ ಹೋಗದೆ ತದೇಕ ಚಿತ್ತದಿಂದ ಅವುಗಳನ್ನೇ ನೋಡುತ್ತಲಿದ್ದಳು.
– ಶಿವಶಂಕರ್ ಮೇಟಿ