ಮಾಚು-ಪೀಕ್ಚೂ ಚಾರಣ – ಅನ್ನಪೂರ್ಣಾ ಆನಂದ್

ಇತಿಹಾಸ:

ದಕ್ಷಿಣ ಅಮೇರಿಕಾ ಖಂಡದ ಪೆರು ದೇಶದಲ್ಲಿರುವ ಕುಸ್ಕೋ ನಗರದ ಬಳಿ ಇರುವ ಮಾಚು-ಪೀಕ್ಚೂ (Machu-Picchu), ಇಂಕಾ (Inca) ಜನಾಂಗದ ಧಾರ್ಮಿಕ ಸ್ಥಳ. ಇಂಕಾ ನಾಗರೀಕತೆ ಸುಮಾರು ೧೩ನೇ ಶತಮಾನದಲ್ಲಿ ಹುಟ್ಟಿ, ಬೆಳದು, ಉತ್ತುಂಗಕ್ಕೇರಿ, ಸ್ಪೇನ್ ದೇಶದ ಧಾಳಿಯಿಂದ (೧೬ನೇ ಶತಮಾನ) ಪತನಗೊಂಡ ಬಹುಪ್ರಸಿದ್ಧ ನಾಗರೀಕತೆ ಮತ್ತು ಜನಾಂಗ. ೧೩ನೇ ಶತಮಾನದಲ್ಲಿ, ಪ್ರಪಂಚದ ಬೇರೆಡೆಗಳಲ್ಲಿ ನಾಗರೀಕತೆ ಬಹಳ ಮುಂದಿದ್ದರೂ, ಈ ಜನಾಂಗ, ಇದೆಲ್ಲದರಿಂದ ದೂರವಿದ್ದು, ತನ್ನದೇ ಆದ ರೀತಿಯಲ್ಲಿ ಬೆಳೆಯಿತು! ಬೆಟ್ಟಗುಡ್ಡಗಳಲ್ಲೇ ವಾಸಮಾಡುತ್ತಿದ್ದ ಈ ಜನಾಂಗ, ಕಡಿದಾದ ಜಾಗಗಳಲ್ಲಿ ಮನೆ, ಹಳ್ಳಿ, ಊರುಗಳನ್ನು ಕಟ್ಟಿ, ಈ ಗುಡ್ಡಗಳಲ್ಲಿ, ಮೆಟ್ಟಿಲುಗಳನ್ನು ಮಾಡಿ ವ್ಯವಸಾಯವನ್ನು ಮಾಡುತ್ತಿದ್ದರು. ಈ ವ್ಯವಸಾಯ ಕ್ಷೇತ್ರಗಳಿಗೆ ಮಳೆ ಮತ್ತು ಈ ಗುಡ್ಡದಳಿಂದ ಕರಗಿ, ಹರಿದು ಬರುವ ಮಂಜಿನ ನೀರನ್ನುಪಯೋಗಿಸಿ ದವಸ-ಧಾನ್ಯಗಳನ್ನು ಬೆಳೆಯುತ್ತಿದ್ದರು. ಇಂಟಿ (ಸೂರ್ಯ) ಇವರ ಮುಖ್ಯ ದೇವರು. ತಮ್ಮ ರಾಜನನ್ನು ಅವರು ಸೂರ್ಯನ ಮಗನೆಂದು ಭಾವಿಸುತ್ತಿದ್ದರು. “ಕ್ವೆಚುವಾ” (Quechua) ಇವರು ಬಳಸುತ್ತಿದ್ದ ಭಾಷೆ (ಈಗಲೂ ಈ ಭಾಷೆಯನ್ನು ಬಳಸುವ ಜನರು ಅಲ್ಪ ಸ್ವಲ್ಪ ಇದ್ದಾರೆ).

ಪ್ರಯಾಣ:

ಈ ಇಂಕಾ ಜನರ ಧಾರ್ಮಿಕ ಸ್ಥಳವಾದ ಮಾಚು – ಪೀಕ್ಚೂವನ್ನು ಕುಸ್ಕೋ ನಗರದಿಂದ ತಲುಪಲು ಇರುವ ದಾರಿಯೇ ಇಂಕಾ ಟ್ರೈಲ್ (Inca Trail).  ೩೯ ಕಿಲೋ ಮೀಟರ್ (೨೪ ಮೈಲಿ) ಉದ್ದದ ಈ ಹಾದಿಯನ್ನು ಸುಮಾರು ೩ ಅಥವಾ ೪ ದಿನಗಳಲ್ಲಿ ನಡೆಯಬಹುದು. ಸುಮಾರು ೩೦೦೦ ಮೀಟರ್ ಎತ್ತರದಿಂದ ಪ್ರಾರಂಭವಾಗುವ ಈ ಹಾದಿ, ೪೨೧೫ ಮೀಟರ್ (ಈ ಹಾದಿಯ ಉತ್ತುಂಗ) ತಲುಪಿ, ಮತ್ತೆ ೨೪೩೦ ಮೀಟರಿಗೆ ಇಳಿದರೆ ಸಿಗುವುದೀ ಜಗತ್ಪ್ರಸಿದ್ದ ಸ್ಥಳ. ಹಾದಿಯಲ್ಲಿ ಬಹಳಷ್ಟು ಇಂಕಾ ವಸಾಹತುಗಳು (settlements ) ಕಾಣಸಿಗುತ್ತವೆ. ಕ್ಲೌಡ್ ಫಾರೆಸ್ಟ್ ಮೂಲಕ ಹೋಗುವಾಗಲಂತೂ ವಿಶಿಷ್ಟವಾದ ಮರ, ಗಿಡ, ಹಕ್ಕಿಗಳು ಕಾಣಸಿಗುತ್ತವೆ. ಪ್ರತಿ ತಿರುವು ಮುರುವೂ ಅವರ್ಣನೀಯ ಪ್ರಕೃತಿ ಸೌಂದರ್ಯದಿಂದ ತುಂಬಿದೆ! ಆಂಡಿಸ್ (andes ) ಪರ್ವತ ಶ್ರೇಣಿಯನ್ನು ನೋಡುವಾಗ “ಹುಲುಮಾನವ” ಎಂಬ ಉಕ್ತಿಯ ಅರ್ಥ ಮನದಟ್ಟಾಗುತ್ತದೆ!

ಈ ಇಂಕಾ ಟ್ರೈಲ್-ಅನ್ನು ನಡೆಯುವ ಆಸೆ ಬಹಳ ವರ್ಷಗಳಿಂದ ಇತ್ತು. ಈ ವರ್ಷದ ಜನವರಿಯಲ್ಲಿ ಇದರ ಬಗ್ಗೆ ಬಹಳಷ್ಟು ವಿಷಯ ಸಂಗ್ರಹಿಸಿ, ನಾನು, ನನ್ನ ಪತಿ ಆನಂದ್, “Exodus ” ಎಂಬ ಯು.ಕೆ ಕಂಪನಿಯ ಮೂಲಕ ಈ ಪ್ರಯಾಣವನ್ನು ಕೈಗೊಳ್ಳುವ ನಿರ್ಧಾರ ಮಾಡಿದೆವು. ಈ ರೀತಿಯ ಪ್ರವಾಸಗಳಿಗೆ ಕಂಪನಿಗಳ ಮೂಲಕ ಹೋಗುವುದು ಅನುಕೂಲ. ಕ್ಯಾಂಪ್ ಸೈಟ್ಸ್, ಟೆಂಟ್ಸ್, ಟಾಲೆಟ್ಸ್, ಊಟ, ತಿಂಡಿ – ಹೀಗೆ ಎಲ್ಲದರ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡುವುದದಿಂದ ಪ್ರಯಾಣದಲ್ಲಿ ಈ ಅವಶ್ಯಕತೆಗಳ ಬಗ್ಗೆ ಯೋಚನೆ ಮಾಡುವ ತಲೆನೋವು ತಪ್ಪುತ್ತದೆ. ಮೊದಲೇ ಕಷ್ಟಕರವಾದ ಪ್ರಯಾಣ, ಇದರ ಮಧ್ಯೆ ಈ ತಲೆಬಿಸಿ ಬೇಕೇ!

ಆಗಸ್ಟ್ ೨೫ರಿಂದ ೩೧ರ ವರೆಗೆ ಈ ಪ್ರಯಾಣವನ್ನು ನಾನು, ಆನಂದ್ ಮತ್ತೆ ನಮ್ಮೆರಡೂ ಮಕ್ಕಳು, ಮಾಡುವುದೆಂದು ನಿರ್ಧರಿಸಿದೆವು. ನಿಶ್ವಯಿಸಿದ ಕೆಲ ದಿನಗಳಲ್ಲೇ ನಾನು ಮತ್ತು ಆನಂದ್ ನಮ್ಮ ತಯಾರಿ ಪ್ರಾರಂಭಿಸಿದೆವು. ೪ ದಿನಗಳ ಕಾಲ ಸುಮಾರು ೭ – ೮ ಘಂಟೆ ನಡೆಯುವುದು ಅಷ್ಟು ಸುಲಭವಲ್ಲ! ತಯಾರಿಯಿಲ್ಲದೆ ಹೋದರೆ ಬಹಳ ಕಷ್ಟ! ಹಾಗಾಗಿ ವಾರಾಂತ್ಯದ ರಜೆಗಳಲ್ಲಿ ನಡೆಯಲು ಶುರು ಮಾಡಿದೆವು. ೩ ಘಂಟೆಗಳ ನಡಿಗೆಯಿಂದ ಪ್ರಾರಂಭಿಸಿ ೯  – ೧೦  ಘಂಟೆಗಳ ಕಾಲ ನಡೆಯುವಷ್ಟು ನಮ್ಮ ಕಾಲುಗಳಿಗೆ ಶಕ್ತಿ ಬಂತು. ಆತ್ಮಬಲ ಹೆಚ್ಚಿತು. Altitude  sickness ನಮ್ಮ ಕೈಲಿಲ್ಲ, ಅದು ದೇಹಪ್ರಕೃತಿಗೆ ಬಿಟ್ಟದ್ದು. ಆದರೆ ೪ ದಿನದ ನಡಿಗೆಯನ್ನು ಸಂಭಾಳಿಸಬಹುದೆಂಬ ಧೈರ್ಯ ಬಂತು.

ಆಗಸ್ಟ್ ೨೫ ನಾವು ಕುಸ್ಕೋ ನಗರವನ್ನು ತಲುಪಿದೆವು. ೩೩೯೯ ಮೀಟರ್ ಎತ್ತರದಲ್ಲಿರುವ ಈ ನಗರಕ್ಕೆ ಬಂದಿಳಿದ ಸ್ವಲ್ಪ ಹೊತ್ತಿನ್ಲಲಿ altitude ಅನುಭವವಾಗತೊಡಗಿತು – ತಲೆನೋವು, ಓಕರಿಕೆ, ಹಸಿವಾಗದಿರುವುದು, ಇತ್ಯಾದಿ. Diamox ಎಂಬ ಮಾತ್ರೆ ಈ ಅನುಭವಗಳನ್ನು ಹತೋಟಿಯಲ್ಲಿಡಲು ಬಹಳ ಉಪಯುಕ್ತ. ನಾನು ಆನಂದ್ ಈ ಮಾತ್ರೆಯನ್ನು (ಅರ್ಧ ಮಾತ್ರೆ) ದಿನಾ ತೆಗೆದುಕೊಳ್ಳಲು ಪ್ರಾರಂಭಿಸಿದೆವು. ನನ್ನ ಮಕ್ಕಳು ವಯಸ್ಸಿನಲ್ಲಿ ಚಿಕ್ಕವರಾದ್ದರಿಂದ ಅವರಿಗೆ ಮಾತ್ರೆಯ ಆವಶ್ಯಕತೆ ಬರಲಿಲ್ಲ. ಬರೀ ವಯಸ್ಸಲ್ಲ, ದೇಹಪ್ರಕೃತಿಯೂ ಇದಕ್ಕೆ ಕಾರಣ. ಕೆಲವರಿಗೆ ಈ ಅನುಭವವಾಗುವುದೇ ಇಲ್ಲ, ಕೆಲವರಿಗೆ ಸ್ವಲ್ಪ ಗೊತ್ತಾಗತ್ತೆ, ಮತ್ತೆ ಕೆಲವರಿಗೆ ಬಹಳಷ್ಟು ಕಷ್ಟವಾಗುತ್ತದೆ.

೨೫ರ ಸಾಯಂಕಾಲ ನಮ್ಮ ಗೈಡ್ ಎದ್ವಿನ್ಡ್ ನಮ್ಮನ್ನು ೫ ಘಂಟೆಗೆ ನಾವಿಳಿದುಕೊಂಡಿದ್ದ ಹೋಟೆಲಿನ ಲಾಬಿಯಲ್ಲಿ ಸಿಗಲು ತಿಳಿಸಿದ್ದರು. ಅಲ್ಲಿಗೆ ಹೋದಾಗ ನಮ್ಮ ಜೊತೆ ಈ ಪ್ರಯಾಣವನ್ನು ಮಾಡುವ ಮಿಕ್ಕ ೧೨ ಜನರನ್ನು ಸಂಧಿಸಿದೆವು. ಇಂಗ್ಲೆಂಡಿನ ಹಲವಾರು ಭಾಗಗಳಿಂದ ಬಂದ ಎಲ್ಲರ ಪರಿಚಯವಾದ ಮೇಲೆ, ಎದ್ವಿನ್ಡ್ ನಮ್ಮ ಪ್ರವಾಸದ ವಿವರಗಳನ್ನು ಸವಿಸ್ತಾರವಾಗಿ ತಿಳಿಸಿದರು

ಮುಂಬರುವ ೪ ದಿನಗಳ ದಿನಚರಿ – ಪ್ರತಿ ದಿನ ೬ ಘಂಟೆಗೆ ಏಳುವುದು. ಒಂದು ಬೋಗಣಿ ನೀರಲ್ಲಿ ಹಲ್ಲು ಉಜ್ಜಿ ಮುಖ ತೊಳೆಯುವುದು, ನಂತರ ಬಿಸಿ ಬಿಸಿ ಕಾಫೀ ಅಥವಾ ಟೀ. ೭ ಘಂಟೆಗೆ ತಿಂಡಿ ತಿಂದು, ಪ್ರಯಾಣಕ್ಕೆ ಬೇಕಾಗುವ ನೀರು ಮತ್ತು ಕೆಲವು ಉಪಾಹಾರಗಳನ್ನು (ಸೀರಿಯಲ್ ಬಾರ್ಸ್, ಹಣ್ಣು, ಚಾಕಲೇಟ್ ಇತ್ಯಾದಿ) ತೆಗೆದುಕೊಂಡು ನಡಿಗೆ ಶುರು. ಮಧ್ಯಾಹ್ನ ೧ ರಿಂದ ೨ ರ ನಡುವೆ ಊಟ, ಮತ್ತೆ ನಡಿಗೆ, ಸಾಯಂಕಾಲ ೪ ರಿಂದ ೫ ರೊಳಗೆ ಮುಂದಿನ campsite ತಲುಪುವುದು. ಅಲ್ಲಿ ರಾತ್ರಿ ಊಟ ಮತ್ತು ನಿದ್ದೆ. 

ಎದ್ವಿನ್ಡ್ ನಮ್ಮ ಹಾದಿಯ ನಕ್ಷೆಯನ್ನು ತೋರಿಸಿ, ಪ್ರತಿದಿನ ಎಷ್ಟು ನಡೆಯಬೇಕು, ಎಲ್ಲಿ ಇಳಿದುಕೊಳ್ಳುವುದು, ಹೇಗೆ ಈ ಕಷ್ಟಕರವಾದ ಪ್ರಯಾಣವನ್ನು ಸವೆಸಬಹುದು ಎಂದು ಬಹಳಷ್ಟು ಮಾಹಿತಿಯನ್ನು ಕೊಟ್ಟು, ೨೭ರ ಬೆಳಿಗ್ಗೆ  ೭ ಘಂಟೆಗೆ ನಾವೆಲ್ಲಾ ತಯಾರಾಗಿರಬೇಕೆಂದು ತಿಳಿಸಿ ಹೊರಟರು.

೨೬ ಆಗಸ್ಟ್ ನಾವು ಕುಸ್ಕೋ ನಗರದ ಇಂಕಾ ಸ್ಥಳಗಳಿಗೆ ಮತ್ತು ಸಂಗ್ರಹಾಲಯಕ್ಕೆ ಭೆಟ್ಟಿ ಕೊಟ್ಟೆವು. ಹಾಗೇ ಕುಸ್ಕೋ ನಗರದ ಮಾರುಕಟ್ಟೆ ಮತ್ತು ಇತರ ಪ್ರಮುಖ ಬೀದಿಗಳಲ್ಲಿ ಸುತ್ತಾಡಿ, ಮುಂದಿನ ದಿನದ ತಯಾರಿ ನಡೆಸಿ, ಊಟ ಮುಗಿಸಿ ಮಲಗಿದೆವು.

ಇಂಕಾ ಟ್ರೈಲ್ – ಡೇ ೧ (೩೩೯೯ – ೩೦೦೦ ಮೀಟರ್ ಎತ್ತರ, ೧೫ ಕಿಮಿ):

ಬೆಳಿಗ್ಗೆ ೬ ಘಂಟೆಗೆ ತಿಂಡಿ ಮುಗಿಸಿ, ೭ ಘಂಟೆಗೆ ನಾವು ೧೬ ಜನ, ನಮ್ಮ ಗೈಡ್ ಎದ್ವಿನ್ಡ್ ಜೊತೆಗೆ ಒಂದು ಬಸ್ ಹತ್ತಿದೆವು. ಸುಮಾರು ಒಂದು ಘಂಟೆಯ ಪ್ರಯಾಣವಾದಮೇಲೆ ಬಸ್ ನಿಲ್ಲಿಸಿ ನಮ್ಮೊಂದಿಗೆ ಬರುವ ಇನ್ನೊಬ್ಬ ಗೈಡ್ ಮತ್ತು ಸುಮಾರು ೨೦ ಜನ ಸಹಾಯಕರನ್ನು ಹತ್ತಿಸಿಕೊಂಡು, ಮತ್ತೆರಡು ಘಂಟೆ ಪ್ರಯಾಣದ ನಂತರ KM82 ತಲುಪಿದೆವು.

ಇಲ್ಲಿ ನಮ್ಮ ಸಹಾಯಕರ ಬಗ್ಗೆ ಕೆಲವು ಮಾಹಿತಿ ಕೊಡುವುದು ಅತ್ಯಗತ್ಯ.

ನಡೆಯುವ ೧೬ ಮಂದಿಗೆ, ೨ ಗೈಡ್ಸ್ ಮತ್ತೆ ಸುಮಾರು ೨೦ ಜನ ಸಹಾಯಕರು. ಇವರು ನಮ್ಮ ದಿನ ನಿತ್ಯದ ಆವಶ್ಯಕತೆಗಳನ್ನೆಲ್ಲಾ ಚಾಚೂ ತಪ್ಪದೆ ಪೂರೈಸಿದರು! ಅಡಿಗೆ ಮಾಡುವವರು, ಅವರಿಗೆ ಸಹಾಯ ಮಾಡುವವರು, ಟೆಂಟ್-ಗಳನ್ನು ಸಿದ್ಧಗೊಳಿಸುವವರು, ಪೋರ್ಟಬಲ್ ಟಾಯ್ಲೆಟ್ಟುಗಳನ್ನು ತೊಳೆದು ಶುಚಿಗೊಳಿಸುವುದು , ಊಟ ಬಡಿಸುವುದು,  ಹೀಗೆ ಹಲವು ಹತ್ತಾರು ಕೆಲಸಗಳನ್ನು ನಗುಮೊಗದಿಂದ ಮಾಡುವರು. ಇದಲ್ಲದೆ ಪ್ರತಿದಿನ ನಾವೆಲ್ಲಾ ಹೊರಟ ನಂತರ, ಟೆಂಟ್-ಗಳನ್ನೆಲ್ಲಾ ತೆಗೆದು, ಮಡಿಚಿ, ಅಡಿಗೆ ಸಾಮಗ್ರಿಗಳನ್ನೆಲ್ಲ ಒಟ್ಟುಗೂಡಿಸಿ, ನಮ್ಮ ೪ – ೫ ದಿನದ ಬಟ್ಟೆಗಳು ಮತ್ತು ಸ್ಲೀಪಿಂಗ್ ಬ್ಯಾಗ್-ಗಳಿದ್ದ (೭ ಕಿಲೋ) ಚೀಲಗಳನ್ನು ಹೊತ್ತು, ನಾವು ಹೋಗುವ ಹಾದಿಯೆಲ್ಲೇ, ನಮಗಿಂತ ಬೇಗ ಹೋಗಿ, ಮಧ್ಯಾಹ್ನದ ಕ್ಯಾಂಪ್ ಸೈಟ್-ನಲ್ಲಿ ಅಡಿಗೆಗೆ ಮತ್ತೆ ಎಲ್ಲ ಸಾಮಗ್ರಿಗಳನ್ನೂ ಅಣಿಮಾಡಿಕೊಂಡು, ನಮಗೆ ಅಡಿಗೆ ಮಾಡಿ, ಬಡಿಸಿ, ತಾವೂ ಊಟ ಮಾಡಿ, ಮತ್ತೆ ಎಲ್ಲವನ್ನೂ ಹೊತ್ತು ರಾತ್ರಿಯ campsite ತಲುಪಿ, ಎಲ್ಲರ ಟೆಂಟ್ ಹಾಕಿ, ನಮ್ಮ ಚೀಲಗಳನ್ನು ಇಟ್ಟು, ಮತ್ತೆ ರಾತ್ರಿಯ ಅಡಿಗೆ ಮಾಡುತ್ತಿದ್ದರು! ಅವರಿಲ್ಲದಿದ್ದರೆ ಈ ರೀತಿಯ ಪ್ರಯಾಣಮಾಡುವುದು ಅಸಾಧ್ಯವೆಂದೇ ಹೇಳಬಹುದು!

KM82 – ಇದು ನಮ್ಮ ಪ್ರಯಾಣದ ಮೊದಲ ಘಟ್ಟ. ೧೦.೩೦ ಹೊತ್ತಿಗೆ ನಾವೆಲ್ಲಾ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ಮುಂದೆ ಸಿಕ್ಕಿದ ಚೆಕ್-ಪೋಸ್ಟ್-ನಲ್ಲಿ ನಮ್ಮ ಪಾಸ್-ಪೋರ್ಟ್ ತಪಾಸಣೆಯಾಯಿತು. ಮೊದಲ ದಿನದ ಹಾದಿ ಸ್ವಲ್ಪ ಸುಲಭವಾಗಿತ್ತು. ಹಾಗೇ ನಮ್ಮಲ್ಲಿ ಬಹಳ ಹುರುಪೂ ಇತ್ತು. ೧೬ ಜನರೂ ಮಾತಾಡಿಕೊಂಡು, “ I Spy..”, “word building” ಆಟಗಳನ್ನು ಆಡಿಕೊಂಡು ಹೊರಟೆವು. ಪರಿಚಯ ಸ್ನೇಹವಾಗಲು ಈ ಹಾದಿ ಅನುವುಮಾಡಿಕೊಟ್ಟಿತು ಅಂತಲೂ ಹೇಳಬಹುದು. ತಗ್ಗು ದಿಣ್ಣೆಗಳಿದ್ದ ಈ ಹಾದಿಯನ್ನು ಎಲ್ಲರೂ ಕಷ್ಟಪಡದೆ ಮುಗಿಸಿದೆವು. ಸುಮಾರು ೬ ಘಂಟೆಯ ಹೊತ್ತಿಗೆ “ವೈಲಬಂಬ” ಕ್ಯಾಂಪ್-ಸೈಟ್ ತಲುಪಿದೆವು. ಬಿಸಿ ಕಾಫಿ ಟೀ ನಮ್ಮನ್ನು ಕಾದಿತ್ತು. ಮೊದಲೇ ಹೇಳಿದಂತೆ ನಮ್ಮ ಸಹಾಯಕರು ಆಗಲೇ ಕ್ಯಾಂಪ್-ಸೈಟ್ ತಲುಪಿ ಎಲ್ಲ ವ್ಯವಸ್ಥೆಮಾಡಿದ್ದರು.

ಕಾಫೀ ಟೀ ಮುಗಿಸಿ ನಮ್ಮ ಟೆಂಟು ಗಳಲ್ಲಿ ಸೇರಿಕೊಂಡೆವು. ಇಬ್ಬರು ಮಲಗಬಹುದಾದ ಈ ಟೆಂಟ್-ಗಳು ಅಷ್ಟೇನೂ ದೊಡ್ಡದಿರುವುದಿಲ್ಲ. ಸ್ಲೀಪಿಂಗ್ ಬ್ಯಾಗ್ ಹಾಕಿ, ನಮ್ಮ ಬ್ಯಾಗ್ ಗಳನ್ನೂ ಇಟ್ಟರೆ, ಮಗ್ಗುಲು ಬದಲಿಸಲು ಸ್ವಲ್ಪ ಜಾಗವಿರುತ್ತದೆ ಅಷ್ಟೇ! ಅಂತಹ ಒಂದು ಟೆಂಟ್-ನಲ್ಲಿ ನಮ್ಮ ಸಾಮಗ್ರಿಗಳನ್ನು ಅಣಿಮಾಡಿಕೊಂಡೆವು. ಇಂತಹ ಚಾರಣಗಳಲ್ಲಿ ಸ್ನಾನದ ವ್ಯವಸ್ಥೆ ಇರುವುದಿಲ್ಲ. ವೆಟ್ ವೈಪ್ಸ್ ಉಪಯೋಗಿಸಿ ಮೈ ಒರೆಸಿಕೊಳ್ಳಬೇಕು ಅಷ್ಟೇ. ಅಂತೂ ಸ್ನಾನ ಮಾಡಿ ಬಟ್ಟೆ ಬದಲಾಯಿಸುವ ಹೊತ್ತಿಗೆ ಊಟಕ್ಕೆ ಕರೆ ಬಂತು. ಬಿಸಿ ಬಿಸಿ ಸೂಪ್, ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟ ಮತ್ತು ಕಾಫಿ ಟೀ. ರುಚಿಕರವಾದ ಮತ್ತು ಪೌಷ್ಟಿಕವಾದ ಆಹಾರ. ವೀಗನ್ ಊಟ ಕೂಡ ಇತ್ತು (ಮೊದಲೇ ಹೇಳಿದ್ದರಿಂದ). ಊಟದ ನಂತರ ಸ್ಲೀಪಿಂಗ್ ಬ್ಯಾಗ್ ಒಳಗೆ ತೂರಿ ನಿದ್ದೆ!

ಇಂಕಾ ಟ್ರೈಲ್ – ಡೇ ೨ (೩೦೦೦ – ೪೨೧೩ – ೪೫೦೮ ಮೀಟರ್ ಎತ್ತರ, ೧೨ ಕಿಮಿ):

ಇಂಕಾ ಟ್ರೈಲ್ – ಡೇ ೨ – (೩೦೦೦ – ೪೨೧೩ – ೪೫೦೮ ಮೀಟರ್ಸ್) – ೧೨ ಕಿಲೋಮೀಟರ್ಸ್ – ಮತ್ತೆ ೬ಕ್ಕೆ ಎದ್ದು, ೭ಕ್ಕೆ ತಯಾರಾಗಿ ನಡೆಯಲು ಶುರು ಮಾಡಿದೆವು. ಇಂದು ಅತಿ ಕಷ್ಟದ ದಿನ ಎಂಬುದರ ಅರಿವು ಎಲ್ಲರಿಗೂ ಇತ್ತು. ಈ ದಿನ, ನಮ್ಮ ಚಾರಣದ ಉತ್ತುಂಗಕ್ಕೇರಿ (highest point – “ಡೆಡ್ ವಿಮೆನ್ ಪಾಸ್”), ಇಳಿಯುವ ದಿನ! ಸುಮಾರು ೬೦೦೦ ಮೆಟ್ಟಿಲುಗಳನ್ನು ಅಷ್ಟು ಎತ್ತರದಲ್ಲಿ (altitude) ಹತ್ತುವುದು ಸುಲಭವಾಗಿರಲಿಲ್ಲ! ಆಮ್ಲಜನಕದ ವಿರಳತೆಯಿಂದ ಉಸಿರಾಡಲೇ ಕಷ್ಟವಾಗುವ ವಾತಾವರಣದಲ್ಲಿ ಈ ಹಾದಿ ಸವೆಸಲು ಕಷ್ಟವಿತ್ತು. ಗುಂಪಿನಲ್ಲಿದ್ದ ಕೆಲವು ಸದೃಢರು ಸರಾಗವಾಗಿ ನಡೆದರೂ. ಮಿಕ್ಕವರೆಲ್ಲ ನಿಧಾನವಾಗಿ, ನಮಗೆ ಸರಿಹೋಗುವ ವೇಗದಲ್ಲಿ, ಅಲ್ಲಲ್ಲಿ ವಿರಮಿಸುತ್ತಾ ಉತ್ತುಂಗವನ್ನು ತಲುಪಿದೆವು. ವಿರಮಿಸಿದಾಗ ಸುತ್ತಲೂ ಕಣ್ಣಾಡಿಸಿದರೆ, ದೂರ ದೂರಕ್ಕೆ ಕಾಣುವ ಆಂಡಿಸ್ ಪರ್ವತ ಶ್ರೇಣಿ, ರುದ್ರ ರಮಣೀಯ! ಪ್ರತಿ ತಿರುವೂ ಹೊಸ ನೋಟ ಹೊಸ ವಿಸ್ಮಯ! ನಮ್ಮ ಗುರಿ ತಲುಪಿದಾಗ ಆದ ಆ ಅನುಭವ, ಅನಿಸಿಕೆ, ಭಾವೋದ್ವೇಗ ವರ್ಣಿಸಲಸಾಧ್ಯ! ಒಂದು ರೀತಿಯ ಸಾರ್ಥಕತೆ, ವಿನಮ್ರತೆ ಮನಸ್ಸನ್ನು ಮತ್ತು ಕಣ್ಣನ್ನು ತುಂಬಿಸಿತ್ತು. ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿ, ಪರ್ವತವನ್ನಿಳಿಯಲು ಪ್ರಾರಂಭಿಸಿದೆವು. “ಪಕಾಯ್ಮಯೋ” ಕ್ಯಾಂಪ್-ಸೈಟ್ ತಲಪುವ ಹೊತ್ತಿಗೆ ಎಲ್ಲರೂ ಸುಸ್ತಾಗಿದ್ದೆವು. ಆದರೆ ಬಹಳ ಕಠಿಣವಾದ ದಿನವನ್ನು ಮುಗಿಸಿದ ನಿರಾಳವಿತ್ತು ಎಲ್ಲರ ಮನದಲ್ಲಿ.

ಇಂಕಾ ಟ್ರೈಲ್ – ಡೇ ೩ – (೪೫೦೮ – ೩೫೮೦ ಮೀಟರ್ ಎತ್ತರ, ೧೨ ಕಿಮಿ):

ಈ ದಿನ ಹಾದಿ ಬಹಳ ಆಸಕ್ತಿದಾಯಕವಾಗಿತ್ತು. ಬಹಳಷ್ಟು ಇಂಕಾ ವಸಾಹತುಗಳನ್ನು ನೋಡಿದೆವು. ನಮ್ಮ ಗೈಡ್ ಎದ್ವಿನ್ಡ್, ಇಂಕಾ ಜನಾಂಗದ ರಾಜಕೀಯ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳನ್ನು ಬಹಳ ವಿವರವಾಗಿ, ಮನಮುಟ್ಟುವಂತೆ ವಿವರಿಸಿದರು. ಆಗಿನ ಕಾಲದಲ್ಲಿ ಕಲ್ಲಿನಿಂದ ಕಟ್ಟಿದ ಗೋಡೆಗಳು, ಮನೆಗಳು, ಬಹಳಷ್ಟು ಭೂಕಂಪಗಳನ್ನು ಎದುರಿಸಿಯೂ, ಇನ್ನೂ ಸ್ಥಿರವಾಗಿ ನಿಂತಿರುವುದು ಮಹದಾಶ್ಚರ್ಯ ಮತ್ತು ಇಂಕಾ ಜನಾಂಗದ ಕೌಶಲತೆಯನ್ನು ಎತ್ತಿ ತೋರಿಸುತ್ತದೆ. ಹಣದ ವಿನಿಮಯಕ್ಕಿಂತಾ ವಸ್ತುಗಳ ವಿನಿಮಯವೇ ಜಾಸ್ತಿ ಪ್ರಚಲಿತವಿತ್ತು. ಲಿಖಿತ ಭಾಷೆ ಇಲ್ಲದ್ದರಿಂದ, ದಾರದ ಗಂಟುಗಳಿಂದ ಲೆಖ್ಖವಿಡುತ್ತಿದ್ದರು ಮತ್ತು ಸಂದೇಶವನ್ನೂ ವಿನಿಮಯಿಸುತ್ತಿದ್ದರು ಎಂಬುದು ಕುತೂಹಲಹರ. ಈ ಐತಿಹಾಸಿಕ ಸ್ಥಳಗಳ ಮೂಲಕ ಹಾದು, ಸಂಜೆಯ ಹೊತ್ತಿಗೆ ಆ ದಿನದ ಕ್ಯಾಂಪ್-ಸೈಟ್ “ಪುಯುಪುಕಮಾರ್ಕ” ತಲುಪಿದೆವು.  

ಇಂಕಾ ಟ್ರೈಲ್ – ಡೇ ೪ (೩೫೮೦ – ೨೪೩೦ ಮೀಟರ್ ಎತ್ತರ, ೧೦ ಕಿಮಿ):

ಕಡೆಯ ದಿನ! ಸುಮಾರು ೫೦೦೦ ಮೆಟ್ಟಿಲುಗಳನ್ನು ಹತ್ತಿಳಿದೆವು. ಇಳಿಯುತ್ತಿದ್ದರಿಂದ ಉಸಿರಾಟ ಸ್ವಲ್ಪ ಸರಾಗವಾಗಿತ್ತು. ಆದರೆ ೩ ದಿನದ ಸತತ ನಡಿಗೆಯಿಂದ ಕಾಲುಗಳು ಸೋಲುತ್ತಿದ್ದವು! ಆದರೆ ಪ್ರಸಿದ್ಧ ಮಾಚು-ಪೀಕ್ಚುವನ್ನು ಕಣ್ಣಾರೆ ನೋಡುವ ಸಮಯ ಹತ್ತಿರವಾಗುತ್ತಿದೆಯೆಂಬ ಉತ್ಸಾಹ, ಸಂತೋಷ ಎಲ್ಲರಲ್ಲೂ. ಕೆಲವು ಘಂಟೆಗಳ ಕಾಲ ಕ್ಲೌಡ್ ಫಾರೆಸ್ಟ್ ಮೂಲಕ ನಡೆದಾಗ ಅಲ್ಲಿನ ವೈವಿಧ್ಯತೆಯನ್ನು ನೋಡುವ ಭಾಗ್ಯ ನಮ್ಮದಾಯಿತು. ಪಾಚಿ (moss) ಎಲ್ಲೆಲ್ಲೂ! ಅದೂ ಹಿಂದೆಂದೂ ನೋಡದ ಬಣ್ಣಗಳಲ್ಲಿ! ತಿಳಿ ಹಳದಿ ಇಂದ ಕಂದು ಬಣ್ಣದವರೆಗಿನ ಎಲ್ಲ ಬಣ್ಣಗಳೂ ಕಂಡವು! ಬಣ್ಣ ಬಣ್ಣದ ಆರ್ಕಿಡ್ ಗಳು ಕಣ್ಣು ಸೆಳೆದವು! ಹಾಗೆ ಥರಾವರೀ ಪಕ್ಷಿಗಳ ಚಿಲಿಪಿಲಿ ಮನಸ್ಸಿಗೆ ಆಹ್ಲಾದತಂದಿತು.  ಈ ದಿನಕ್ಕಾಗಿ ಕಾಯುತ್ತಿದ್ದ ನಾವೆಲ್ಲರೂ ಆನಂದದಿಂದ ಹೆಜ್ಜೆ ಹಾಕುತ್ತಾ “ಇಂಟಿ ಪುಂಕು” (sun gate ) ತಲುಪಿದೆವು. ಎದುರಿನ ಬೆಟ್ಟದಲ್ಲಿದ್ದ ಮಾಚು-ಪೀಕ್ಚು ರಮಣೀಯವಾಗಿ ಕಾಣಿಸುತ್ತಿತ್ತು. ಇಂಟರ್ನೆಟ್ ನಲ್ಲಿ ಸಿಗುವ ಮಾಚು-ಪೀಕ್ಚು ವಿನ ಬಹಳಷ್ಟು ಚಿತ್ರಗಳು ಈ ಜಾಗದಿಂದ ತೆಗೆದವೇ! ಮತ್ತೆ ಇಲ್ಲಿ ಬಹಳಷ್ಟು ಫೋಟೋಗಳನ್ನು ಕ್ಲಿಕ್ಕ್ಸಿದೆವು. ಈ ಅಸದಳ ದೃಶ್ಯವನ್ನು ಕಣ್ಣುತುಂಬಿಸಿಕೊಂಡು, ಮನಸ್ಸಿಲ್ಲದ ಮನಸ್ಸಿನಲ್ಲಿ ಆ ಜಾಗದಿಂದ ಹೊರಟೆವು, ಯಾಕಂದ್ರೆ, ಕೆಳಗೆ ೩ ಘಂಟೆಯ ಬಸ್ ಹತ್ತಬೇಕಿತ್ತು ಮತ್ತು ನಾವು ಇನ್ನೂ ಸುಮಾರು ೬ ಕಿಲೋಮೀಟರು ನಡೆಯಬೇಕಿತ್ತು! ಮತ್ತೆ ಸಾವಿರಾರು ಮೆಟ್ಟಿಲುಗಳನ್ನು ಇಳಿದು, ಅಂತೂ ಸರಿಯಾದ ಸಮಯಕ್ಕೆ ಬಸ್ ಹತ್ತಿ ಹೋಟೆಲ್ ತಲುಪಿದೆವು. ನಾಲ್ಕು ದಿನದ ನಂತರ  ಸ್ನಾನ  ಮಾಡಲು ಶವರ್, ಮಲಗಲು ಸರಿಯಾದ ಹಾಸಿಗೆ ಸಿಕ್ಕಿತು. ವಾಟ್ ಅ ಪ್ರಿವಿಲೇಜ್!

ಇಂಕಾ ಟ್ರೈಲ್ – ಡೇ ೫:

ಈ ದಿನ ಹೋಟೆಲಿನಿಂದ ಬಸ್ಸಿನಲ್ಲಿ ಮ್ಯಾಚು-ಪೀಕ್ಚು ತಲುಪಿದೆವು. ನಮ್ಮ ಗೈಡ್ ನಮಗಾಗಲೇ ನಮ್ಮ ಪ್ರವೇಶದ ಸಮಯವನ್ನು ಕಾದಿರಿಸಿದ್ದರು. ಒಳಗೆ ಹೋದರೆ ಇಂಕಾ ಜನಾಂಗದ ಅತಿ ದೊಡ್ಡ ವಸಾಹತು ನಮ್ಮ ಮುಂದೆ ವಿಜೃಂಭಿಸುತ್ತಿತ್ತು. ಗೈಡ್ ಎದ್ವಿನ್ಡ್ ಈ ಸ್ಥಳದ ವಿಷಯಗಳನ್ನು ಸವಿಸ್ತಾರವಾಗಿ ವಿವರಿಸಿ, ಆಗಿನ ರಾಜರ ಅರಮನೆ, ದೇವಸ್ಥಾನಗಳು, ಮನೆಗಳು, ಅವರಿದ್ದ ರೀತಿ, ನೀತಿಗಳನ್ನು ತಿಳಿಸಿದರು. ನಮ್ಮ ಪ್ರಶ್ನೆಗಳಿಗೆಲ್ಲ ಸಮರ್ಪಕವಾಗಿ ಉತ್ತರಿಸಿದರು. ಮಾಚು – ಪೀಕ್ಚೂವನ್ನು ಕಣ್ತುಂಬಿಸಿಕೊಂಡು ಅಲ್ಲಿಂದ ಹೊರಟೆವು. ಮಧ್ಯಾಹ್ನದ ಊಟವನ್ನು ಮಾಚು – ಪೀಕ್ಚೂ ಊರಿನಲ್ಲಿ ಮುಗಿಸಿ, ೩ ಘಂಟೆಗೆ ಟ್ರೈನ್ ಹತ್ತಿ “ಒಲಂಟಾಯ್ತೊಂಬಾ” ತಲುಪಿದೆವು. ಗಾಜಿನ ಛಾವಣಿ ಮತ್ತು ದೊಡ್ಡ ದೊಡ್ಡ ಗಾಜಿನ ಕಿಟಕಿಯ ಟ್ರೈನ್ ನಲ್ಲಿ ಹಿಂದಿರುಗುವಾಗ ಪ್ರಕೃತಿ ಸೌಂದರ್ಯ ಅತಿ ರಮಣೀಯ! ಟ್ರೈನ್ ಇಳಿದು ಬಸ್ ಹತ್ತಿ ೩ ಘಂಟೆ ಪ್ರಯಾಣ ಮಾಡಿ ಕುಸ್ಕೋ ನಗರವನ್ನು ತಲುಪಿದೆವು. ಚಾರಣ ಮುಗಿಸಿದ ಸಂತಸದೊಂದಿಗೆ, ಈ ೫ ದಿನ ಜೊತೆಯಾದ ಸ್ನೇಹಿತರನ್ನು ಬೀಳ್ಕೊಡುವ ಬೇಸರವೂ ಇತ್ತು! ಎಲ್ಲರಿಗೂ ವಿದಾಯ ಹೇಳಿ ಮನೆಗೆ ಮರಳಿದೆವು.

ಮಂಗಳ:

ಒಟ್ಟಿನಲ್ಲಿ ಒಂದು ಅವಿಸ್ಮರಣೀಯ ಅನುಭವ! ಸಮಯ ಮಾಡಿಕೊಂಡು ಖಂಡಿತ ಮಾಚು – ಪೀಕ್ಚೂವಿಗೆ ಭೆಟ್ಟಿಕೊಡಿ. ನಡೆಯುವ ಇಚ್ಛೆಯಿಲ್ಲದಿದ್ದರೆ ಟ್ರೈನ್ ನಲ್ಲಿ ಅನಾಯಾಸವಾಗಿ ಹೋಗಿ ಬರಬಹುದು. ಹಾಗೇ ಪೆರುವಿನಲ್ಲಿ ನೋಡಿವಂತಹ ಇನ್ನೂ ಬೇಕಾದಷ್ಟು ಜಾಗಗಳಿವೆ – ಲಿಮಾ (ರಾಜಧಾನಿ), ಅರಿಕ್ವಿಪ, ಕೊಲ್ಕಾ ಕಣಿವೆ, ಲೇಕ್ ಟಿಟಿಕಾಕಾ, ಎಲ್ಲಾ ನೋಡುವಂತಹ ಸ್ಥಳಗಳು. ೩ ಅಥವಾ ೪ ವಾರ ಆರಾಮಾಗಿ ಕಳಿಯಬಹುದು.  ಒಮ್ಮೆ ಹೋಗಿ ಬನ್ನಿ.   

ಇಂದಿನ ಶಿಕ್ಷಣಕ್ಷೇತ್ರ – ಶಿಕ್ಷಕಿಯ ದೃಷ್ಟಿಯಲ್ಲಿ.

ಕಳೆದ ವಾರಗಳ ಚಿಂತನ ಲೇಖನಗಳ ಹಾದಿಯಲ್ಲೇ ಈ ವಾರವೂ ಶಿಕ್ಷಣ ಕ್ಷೇತ್ರದ ಬಗ್ಗೆಯೇ ಮುಂದುವರೆದಿದೆ. ಬೆಂಗಳೂರಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಸೀತಾ ಗುಡೂರ ಅವರ ಸ್ವಂತ ಅನುಭವದ ಲೇಖನ. ಪದವಿಯವರೆಗೆ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಸೀತಾ ಗುಡೂರ್, ಮುಂದೆ ಕನ್ನಡದಲ್ಲಿ ಎಮ್ ಎ, ಎಂಫಿಲ್ ಮಾಡಿ ಕನ್ನಡದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಳೆಗನ್ನಡ, ದಾಸಸಾಹಿತ್ಯ, ವಚನಸಾಹಿತ್ಯ ಇತ್ಯಾದಿ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಸೀತಾ ಗುಡೂರ್ ಒಬ್ಬ ಉತ್ಸಾಹಿ ಶಿಕ್ಷಕಿ. ನಗರದ ಒಳ ಮತ್ತು ಹೊರವಲಯದ ಸಂಸ್ಥೆಗಳಲ್ಲಿ ಕೆಲಸಮಾಡಿರುವ ಅವರ ಅನುಭವ ಹೀಗಿದೆ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ. – ಸಂಪಾದಕ.

*****

ನಾವು ಕೆಲಸ ಮಾಡುತ್ತಿರುವ ಕ್ಷೇತ್ರ ಯಾವುದೇ ಆಗಿರಲಿ, ಮೊತ್ತಮೊದಲಿಗೆ ಅದು ನಮ್ಮ ಆಸಕ್ತಿಯ ಕ್ಷೇತ್ರವಾಗಿರಬೇಕು. ಏಕೆಂದರೆ, ಮೂಲಭೂತವಾಗಿ ಆಸಕ್ತಿಯೇ ಎಲ್ಲವನ್ನು ಕಲಿತುಕೊಳ್ಳಲು, ಕಲಿಸಲು ಪ್ರೇರೇಪಿಸುತ್ತದೆ. ರಾಷ್ಟ್ರಕವಿ ಶ್ರೀ ಜಿಎಸ್ ಶಿವರುದ್ರಪ್ಪ ಅವರು ಹೇಳುವಂತೆ "ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ….. ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?" ಈ ಕವನದ ಉದ್ದಕ್ಕೂ ಕಾಣುವ ’ಪ್ರೀತಿ’ ಆಸಕ್ತಿಯ ರೂಪವೇ ಆಗಿದೆ. ಕಲಿಯುವ, ಕೆಲಸ ಮಾಡುವ, ಕಲಿಸುವ ಬಗ್ಗೆ ಪ್ರೀತಿಯೇ ಇಲ್ಲದ ಮೇಲೆ ಶಿಕ್ಷಣದ ಉದ್ದೇಶವು ಸಾಧಿತವಾಗುವುದಿಲ್ಲ ಅಲ್ಲವೇ? 

ಶಿಕ್ಷಣ ರಂಗದ ಇಂದಿನ ಸಮಸ್ಯೆಗಳ ಕಡೆಗೆ ಗಮನಹರಿಸಿದಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರಲ್ಲೂ ಸಮಸ್ಯೆ ಇರುವುದು ಎದ್ದು ಕಾಣುವಂಥದ್ದು. ಮೊದಲಿಗೆ ಶಿಕ್ಷಕರನ್ನೇ ನಾವು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಏಕೆಂದರೆ, ಅರಿಯದ ವಿದ್ಯಾರ್ಥಿಗಳಿಗೆ ಎಲ್ಲವನ್ನೂ ಹಂತ ಹಂತವಾಗಿ ಕಲಿಸುವ ದೊಡ್ಡ ಹೊಣೆಗಾರಿಕೆ ಶಿಕ್ಷಕರದೇ. ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಭದ್ರಬುನಾದಿ ಬೀಳಬೇಕಾದದ್ದು ಅತ್ಯಗತ್ಯ. ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಾಥಮಿಕ ಹಂತದಲ್ಲಿ ಭಾಷಾ ವಿಷಯಗಳನ್ನು ಕಲಿಸುವಲ್ಲಿ ದಿವ್ಯನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಳೆಯ ವಯೋಮಾನದ ಚಂಚಲ ಮನಸ್ಥಿತಿಯ ಮಕ್ಕಳಿಗೆ ಕನ್ನಡ (ಅಥವಾ ಯಾವುದೇ) ಭಾಷೆಯನ್ನು ಹೇಳಿಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ವತಃ ಶಿಕ್ಷಕರು ಪಾಠ ಮಾಡುವಾಗ ಶುದ್ಧ ಗ್ರಾಂಥಿಕ ಭಾಷೆಯ ಬಳಕೆ, ಸ್ಪಷ್ಟ ಉಚ್ಚಾರಣೆ, ಶುದ್ಧ ಹಾಗೂ ಸ್ಪಷ್ಟ ಬರವಣಿಗೆಗಳನ್ನು ಮೈಗೂಡಿಸಿಕೊಂಡಿರಬೇಕಾಗುತ್ತದೆ. ಆದರೆ ಜೀವನೋಪಾಯಕ್ಕಾಗಿ ಯಾವುದೋ ಒಂದು ನೌಕರಿಯನ್ನು ಮಾಡಬೇಕಾಗಿ ಬಂದ ಅನಿವಾರ್ಯತೆಯಲ್ಲಿ ಎಲ್ಲಿಯೂ ಸಲ್ಲದವರು ಶಿಕ್ಷಣ ಕ್ಷೇತ್ರಕ್ಕೆ ಸಂದಾಗ, ಅವರಲ್ಲಿ ಅಧ್ಯಯನ-ಅಧ್ಯಾಪನಗಳ ಕಡೆಗೆ ಬದ್ಧತೆ ಕಡಿಮೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಇದಕ್ಕೆ ಅಪವಾದ ಎನಿಸುವವರು ಸಾಕಷ್ಟು ಜನ ಅಧ್ಯಾಪಕರು ಇದ್ದಾರೆ ಎನ್ನುವುದೇ ಸಂತೋಷದ ಸಂಗತಿ.

ಇನ್ನು ಉಪನ್ಯಾಸಕರು ಕನ್ನಡ ಭಾಷಾ ಐಚ್ಛಿಕ ವಿಷಯವನ್ನು ಪಾಠ ಮಾಡಬೇಕೆಂದರೆ ಅವರ ಸಾಹಿತ್ಯದ ಅಧ್ಯಯನದ ವ್ಯಾಪ್ತಿ ದೊಡ್ಡದಿರಬೇಕಾಗುತ್ತದೆ. ಬರಿಯ ಕನ್ನಡವೊಂದೇ ಅಲ್ಲದೇ, ಅದರಲ್ಲಿ ಹಾಸುಹೊಕ್ಕಾಗಿರುವ ಇತರ ಭಾಷೆಗಳ ಕೊಡುಗೆಗಳ ಬಗ್ಗೆ ಸ್ವಲ್ಪವಾದರೂ ಅರಿವಿರಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಂಸ್ಕೃತ ಭಾಷೆಯ ಸ್ವಲ್ಪಮಟ್ಟಿಗಿನ ಅರಿವು ಮತ್ತು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕನ್ನಡ-ಸಂಸ್ಕೃತ ಭಾಷೆಗಳ ಅವಿನಾಭಾವ ಸಂಬಂಧದ ತಿಳಿವು ಇವು ಉಪನ್ಯಾಸಕರಲ್ಲಿ ಕಡಿಮೆಯಾಗುತ್ತಿರುವುದು ಖೇದಕರ. ಸಂಸ್ಕೃತವನ್ನು ದೂಷಿಸುವವರು ಕನ್ನಡದ ಆದಿಕವಿ ಪಂಪನಿಂದ ಹಿಡಿದು ಕುವೆಂಪು ಅವರ ತನಕ ಕಾವ್ಯವನ್ನು ಹೇಗೆ ತಾನೇ ಪಾಠ ಮಾಡಬಲ್ಲರು? ಕನ್ನಡ-ಸಂಸ್ಕೃತ ಭಾಷಾಸಮನ್ವಯದ ಕಾರಣದಿಂದ ಹುಟ್ಟಿ ಬಂದ ಈ ಅಮೂಲ್ಯ ಕೃತಿರತ್ನಗಳನ್ನು ನಿರಾಕರಿಸಲು ಸಾಧ್ಯವೇ? ಪಾಠ ಮಾಡುವ ನಾವು ಮೊದಲು ಸರಿಯಾಗಿ ಅಧ್ಯಯನ ಮಾಡಿದರೆ ಮಾತ್ರ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಹೇಳಬಹುದು ಅನ್ನುವುದರಲ್ಲಿ ಎರಡು ಮಾತಿಲ್ಲ.

ಭಾಷೆಯನ್ನು ಕಲಿಯುವಾಗ ಮಕ್ಕಳು ಮಾಡುವ ತಪ್ಪುಗಳನ್ನು ಆರಂಭದಲ್ಲೇ ತಿದ್ದದೇ ಹೋದಾಗ ಅವರು ಪ್ರೌಢ ಶಿಕ್ಷಣ ಮುಗಿಯುವವರೆಗೂ ಹಾಗೆ ಉಳಿದುಬಿಡುತ್ತಾರೆ. ಪ್ರಥಮ ಪಿಯುಸಿಗೆ ಸೇರುವಾಗ ಬಹಳಷ್ಟು ವಿದ್ಯಾರ್ಥಿಗಳಿಗೆ ತಮ್ಮ ಹೆಸರನ್ನು ಬರೆಯಲೂ ಬರುವುದಿಲ್ಲ ಎಂದು ನಾನು ಹೇಳಿದರೆ ನೀವು ನಂಬಲಿಕ್ಕಿಲ್ಲ. ಹೆಚ್ಚುಪಾಲು ಮಕ್ಕಳು ಹ್ರಸ್ವ-ದೀರ್ಘ, ಸ್ವರ-ವ್ಯಂಜನ, ಅಲ್ಪಪ್ರಾಣ-ಮಹಾಪ್ರಾಣ, ಅ – ಹಕಾರಗಳ ಬಳಕೆ ಇತ್ಯಾದಿಗಳ ವ್ಯತ್ಯಾಸವೇ ತಿಳಿಯದೇ, ಉಚ್ಚಾರಣೆ ಮತ್ತು ಬರವಣಿಗೆ ಎರಡರಲ್ಲೂ ಬಹಳ ಹಿಂದುಳಿದವರು ಆಗಿರುತ್ತಾರೆ. ಈ ಹಂತದಲ್ಲಿ ನಾವು ಏನನ್ನು ಮಾಡಲು ಸಾಧ್ಯ? ಕಾಲೇಜು ತರಗತಿಗಳು ಆರಂಭವಾದ ಮೊದಲ ಎರಡು ವಾರಗಳಲ್ಲಿ ವರ್ಣಮಾಲೆಯನ್ನು ಬರೆಸುವ, ಧ್ವನ್ಯಂಗಗಳ ಬಗ್ಗೆ ವಿವರಿಸಿ, ಉಚ್ಚಾರಣೆಯ ಬಗ್ಗೆ ಪರಿಚಯ ಮಾಡಿಕೊಡುವ ಕೆಲಸವೇ ಆಗುತ್ತದೆ. ಆದಾಗಿಯೂ ಈ ಮಕ್ಕಳಿಗೆ ಆಸಕ್ತಿಯಿಂದ ಕೇಳುವಷ್ಟು ತಾಳ್ಮೆ ಇರುವುದೇ ಇಲ್ಲ. ಕಾಲೇಜು ಜೀವನದಲ್ಲಿ ಕಲಿಯುವುದಕ್ಕಿಂತ ಹೆಚ್ಚು ಎಂಜಾಯ್ ಮಾಡಬೇಕು ಎಂಬ ಮನಸ್ಥಿತಿಯವರೇ ಈನಡುವೆ ಬಹಳ. ತರಗತಿಯ 90 ವಿದ್ಯಾರ್ಥಿಗಳಲ್ಲಿ 15-20 ವಿದ್ಯಾರ್ಥಿಗಳು ಉತ್ತಮ ಗ್ರಹಿಕೆಯ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಉಳಿದವರಲ್ಲಿ ಸುಮಾರು 40 ವಿದ್ಯಾರ್ಥಿಗಳಿಗೆ ಪದೇಪದೇ ಹೇಳಿ ಬರೆಸಿದಾಗ ಸ್ವಲ್ಪ ಸುಧಾರಿಸುತ್ತಾರೆ. ಮಿಕ್ಕವರು ನಾವೆಷ್ಟೇ ಪ್ರಯತ್ನಪಟ್ಟರೂ ಯಾವುದೇ ಪ್ರತಿಕ್ರಿಯೆ ತೋರದೆಯೇ ಇರುತ್ತಾರೆ.

ವಿದ್ಯಾರ್ಥಿಗಳ ಈ ವರ್ತನೆಗೆ ಕೇವಲ ಅವರ ಉಡಾಫೆಯ ಮನೋಭಾವವನ್ನಷ್ಟೇ ದೂಷಿಸಲಾಗದು, ಅವರವರ ಮನೆಯ ಹಾಗೂ ಬೆಳೆದು ಬಂದ ಪರಿಸರವೂ ಮುಖ್ಯ ಕಾರಣವೆಂಬುದು ವೇದ್ಯ. ನಗರಗಳಲ್ಲಿ ತಾಯಿ-ತಂದೆಯರು ವಿದ್ಯಾವಂತರಾದರೂ, ಇಬ್ಬರೂ ಕೆಲಸ ಮಾಡುತ್ತಿರುವ ಕಾರಣಕ್ಕಾಗಿ ಸಮಯದ ಅಭಾವದಿಂದ ಅವರಿಗೆ ಮಕ್ಕಳ ಕಡೆಗೆ ಗಮನ ಹರಿಸಲಾಗಿರುವುದಿಲ್ಲ. ಇನ್ನು ಗ್ರಾಮಾಂತರ ಮಕ್ಕಳ ತಂದೆತಾಯಿಯರೋ ಅನಕ್ಷರಸ್ಥರು, ಕೂಲಿ-ನಾಲಿಗಳಿಗೆ ಹೋಗುವವರು ಇರುತ್ತಾರೆ; ಎಷ್ಟೋ ಕುಟುಂಬಗಳಲ್ಲಿ ಕುಡಿತದ ವ್ಯಸನ, ಕೌಟುಂಬಿಕ ಕಲಹ, ಅನಾಥ ಮಕ್ಕಳು ಯಾರದೋ ಆಶ್ರಯದಲ್ಲಿದ್ದು ಓದುತ್ತಿರುವವರು, ಕೆಲಸದ ಮಧ್ಯೆ ಓದಲು ಸಮಯವೇ ಸಿಗದಿರುವುದು ಮುಂತಾದ ಕಾರಣಗಳೆಲ್ಲ ಗಮನಕ್ಕೆ ಬರುತ್ತಿರುತ್ತವೆ. ಈ ಎಲ್ಲಾ ಗಂಭೀರ ಸಮಸ್ಯೆಗಳ ಮಧ್ಯೆಯೂ ಜೀವನದಲ್ಲಿ ಸಾಧಿಸುವ ಗುರಿಯಿಟ್ಟುಕೊಂಡು ಓದುವ ಮಕ್ಕಳೇ ನಮಗೆ ನಿರಂತರ ಸ್ಫೂರ್ತಿ. ನಿಜ ಹೇಳಬೇಕೆಂದರೆ, ಒಂದು ತರಗತಿಯಲ್ಲಿ ಇಂಥವರು ಒಂದಿಬ್ಬರು ಇದ್ದರೂ ಪಾಠ ಮಾಡಲು ಉತ್ಸಾಹವಿರುತ್ತದೆ.

ಪಠ್ಯಕ್ಕೆ ಸಂಬಂಧಿಸಿದಂತೆ ಕಲಿಯುವ ಕುತೂಹಲ ಆಸಕ್ತಿ ಪ್ರಯತ್ನದಲ್ಲಿ ಇದ್ದಾಗ ನಮಗೂ ಸ್ವತಹ ಕಲಿಯುವ, ಆ ಮೂಲಕ ಕಲಿಸುವ ಲವಲವಿಕೆ ಇರುತ್ತದೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ಕನ್ನಡದ ಪ್ರಾಚೀನ ಕವಿಗಳು, ಅವರ ಕಾವ್ಯಗಳು ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ಉಪನ್ಯಾಸಕರಿಗೂ ಆಸಕ್ತಿ ತಿಳುವಳಿಕೆ ಇಲ್ಲದಿರುವುದು ನಿಜಕ್ಕೂ ಖೇದದ ಸಂಗತಿ. ಬಹುತೇಕ ವಿದ್ಯಾರ್ಥಿಗಳು ಮನೆಯಲ್ಲಿ ರಾಮಾಯಣ ಮಹಾಭಾರತ ಕಥೆಗಳನ್ನು ಕೇಳಿರುವುದಿಲ್ಲ; ಶಾಲೆಗೆ ಸೇರಿದಾಗ ಕಲಿತದ್ದಷ್ಟೋ ಅಷ್ಟೇ. ವಿಭಿನ್ನ ಯುಗದ ಪಾತ್ರಗಳನ್ನು ಘಟನೆಗಳನ್ನು ಸೇರಿಸಿ ಉತ್ತರ ಬರೆಯುವುದನ್ನು ನೋಡಿದಾಗ, ಆ ಕ್ಷಣಕ್ಕೆ ಅದು ನಗುತರಿಸಿದರೂ ಮನಸ್ಸಿಗೆ ದುಃಖವಾಗುತ್ತದೆ. ಪಾಠ ಮಾಡುವಾಗ ಕೇಳಿಸಿಕೊಳ್ಳದ, ಸ್ವಂತ ಅಧ್ಯಯನ ಮಾಡದ, ಉಚ್ಚಾರ-ಬರವಣಿಗೆಯ ತಪ್ಪನ್ನು ತಿದ್ದಿಕೊಳ್ಳದ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವೇ?

ನನ್ನ ಇಷ್ಟು ವರ್ಷಗಳ ವೃತ್ತಿ ಜೀವನದ ಅನುಭವದ ಪ್ರಕಾರ ಪ್ರಾಥಮಿಕ ಶಿಕ್ಷಣವು ಬಹಳ ಮುಖ್ಯ. ಅಲ್ಲಿ ಹಾಕಿದ ಬುನಾದಿ ಸರಿಯಾದರೆ, ಮುಂದೆ ಪ್ರೌಢಶಾಲೆಯ ಹಾಗೂ ಪದವೀಪೂರ್ವ ಹಂತದಲ್ಲಿ ಅವರನ್ನು ಸಾಧನೆ ಹಾದಿಯಲ್ಲಿ ಕರೆದೊಯ್ಯುವುದು ಸುಲಭ. ಇಲ್ಲವಾದರೆ ಎರಡು ವರ್ಷಗಳ ಪದವಿಪೂರ್ವ ಹಂತದ ಕಲಿಕೆ ಅವರ ಕಾಗುಣಿತವನ್ನು ತಿದ್ದಿ, ಉಚ್ಚಾರಣೆಯನ್ನು ಸ್ಪಷ್ಟಗೊಳಿಸಿ, ಸರಿಯಾದ ವಾಕ್ಯರಚನೆ ಮಾಡುವ ಸಾಮರ್ಥ್ಯವನ್ನು ಬೆಳೆಸುವ ಕೆಲಸಕ್ಕೆ ಮಾತ್ರ ಸೀಮಿತವಾದರೆ, ನಾವು ನಮ್ಮ ಪಠ್ಯದೊಳಗಿನ ಕಾವ್ಯದ ಸೌಂದರ್ಯವನ್ನು, ಗದ್ಯಪಾಠಗಳ ಮಹತ್ವವನ್ನು ಮನಸ್ಸಿಗೆ ತೃಪ್ತಿಯಾಗುವಂತೆ ಬೋಧಿಸುವುದು ಹೇಗೆ?

ನಾವು ಉಪನ್ಯಾಸಕರಾಗಿ ಎಷ್ಟೇ ಪ್ರಯತ್ನಪಟ್ಟರೂ, ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಉತ್ಸಾಹ ಆಸಕ್ತಿ ಬೆಳೆಸುವಲ್ಲಿ ಶ್ರಮವಹಿಸಿದರೂ, ಕೊನೆಗೆ ಸರಿಯಾಗಿ ಓದಬೇಕಾದ ಕರ್ತವ್ಯ ವಿದ್ಯಾರ್ಥಿಯದೇ ಆಗುತ್ತದೆ. ಕುದುರೆಯನ್ನು ನೀರಿನವರೆಗೆ ಕರೆದುಕೊಂಡು ಹೋಗಬಹುದು, ನೀರಿನ ಹತ್ತಿರ ಬಗ್ಗಿಸಬಹುದು, ಆದರೆ ನೀರು ಕುಡಿಯಬೇಕಾದದ್ದು ಕುದುರೆಯೇ ಅಲ್ಲವೇ?

ಒಟ್ಟಾರೆ ಹೇಳಬೇಕೆಂದರೆ, ಶಿಕ್ಷಣಕ್ಷೇತ್ರದ ಯಶಸ್ಸು ವಿದ್ಯಾರ್ಥಿ-ಶಿಕ್ಷಕ-ಪೋಷಕ ಈ ಮೂರು ಕಾಲುಗಳ ಮೇಲೆ ನಿಂತಿದೆ, ಮೂವರೂ ಮುಖ್ಯ. ಇವರೆಲ್ಲರ ಪ್ರಯತ್ನವು ಸೇರಿದಾಗಲೇ ಸಫಲತೆ ದಕ್ಕುವುದು.

- ಸೀತಾ ಗುಡೂರ್, ಬೆಂಗಳೂರು.

*********************************************